ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಓಟದಲ್ಲಿ ತಾಳಿಕೊಳ್ಳಿರಿ

ಕ್ರೈಸ್ತ ಓಟದಲ್ಲಿ ತಾಳಿಕೊಳ್ಳಿರಿ

ಕ್ರೈಸ್ತ ಓಟದಲ್ಲಿ ತಾಳಿಕೊಳ್ಳಿರಿ

“ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ.” —ಇಬ್ರಿ. 12:2.

1, 2. ಕ್ರೈಸ್ತ ಜೀವನವನ್ನು ಅಪೊಸ್ತಲ ಪೌಲನು ಯಾವುದಕ್ಕೆ ಹೋಲಿಸಿದನು?

ಅನೇಕ ಕಡೆಗಳಲ್ಲಿ ಪ್ರತಿ ವರ್ಷ ಮ್ಯಾರತನ್‌ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಶ್ರೇಷ್ಠ ಓಟಗಾರರು ಜಯಗಳಿಸಬೇಕೆಂಬ ಒಂದೇ ಗುರಿಯೊಂದಿಗೆ ಸ್ಪರ್ಧೆಗಿಳಿಯುತ್ತಾರೆ. ಆದರೆ ಇತರ ಅನೇಕ ಸ್ಪರ್ಧಾಳುಗಳಿಗೆ ಆ ಗುರಿ ಇರುವುದಿಲ್ಲ. ಆ ಓಟವನ್ನು ಪೂರ್ಣವಾಗಿ ಓಡಿ ಮುಗಿಸುವುದೇ ಅವರಿಗೆ ಹೆಮ್ಮೆಯ ಸಂಗತಿ.

2 ಬೈಬಲ್‌ ಕ್ರೈಸ್ತ ಜೀವನವನ್ನು ಓಟಕ್ಕೆ ಹೋಲಿಸುತ್ತದೆ. ಅಪೊಸ್ತಲ ಪೌಲನು ಕೊರಿಂಥದ ಕ್ರೈಸ್ತರಿಗೆ ಬರೆದ ಮೊದಲ ಪತ್ರದಲ್ಲಿ ಹೀಗೆ ಗಮನ ಸೆಳೆದನು: “ಒಂದು ಓಟದ ಪಂದ್ಯದಲ್ಲಿ ಎಲ್ಲರೂ ಓಡುತ್ತಾರಾದರೂ ಒಬ್ಬನಿಗೆ ಮಾತ್ರ ಬಹುಮಾನ ದೊರಕುತ್ತದೆ ಎಂಬುದು ನಿಮಗೆ ತಿಳಿಯದೊ? ನೀವು ಬಹುಮಾನವನ್ನು ಪಡೆದುಕೊಳ್ಳುವಂಥ ರೀತಿಯಲ್ಲಿ ಓಡಿರಿ.”—1 ಕೊರಿಂ. 9:24.

3. ಒಬ್ಬನು ಮಾತ್ರ ಬಹುಮಾನ ಪಡೆಯುವನೆಂದು ಪೌಲನು ಹೇಳಿದ್ದು ಯಾವ ಅರ್ಥದಲ್ಲಿ?

3 ಜೀವದ ಬಹುಮಾನ ಕೇವಲ ಒಬ್ಬ ಕ್ರೈಸ್ತನಿಗೆ ಮಾತ್ರ ಸಿಗುವುದು, ಇತರರ ಪ್ರಯತ್ನ ವ್ಯರ್ಥ ಎಂದು ಪೌಲನು ಹೇಳುತ್ತಿದ್ದಾನಾ? ಖಂಡಿತ ಇಲ್ಲ. ಸ್ಪರ್ಧಾಳುಗಳು ಹೇಗೆ ಕಠಿನ ತರಬೇತಿ ಪಡೆದುಕೊಂಡು ವಿಜೇತರಾಗಲು ಪರಿಶ್ರಮ ಹಾಕುತ್ತಾರೋ ಹಾಗೆಯೇ ಕ್ರೈಸ್ತರು ಸಹ ನಿತ್ಯಜೀವ ಪಡೆಯಲಿಕ್ಕಾಗಿ ಪರಿಶ್ರಮ ಪಡಬೇಕೆಂದು ಪೌಲನು ಹೇಳುತ್ತಿದ್ದಾನೆ. ಹಾಗೆ ಶ್ರಮಪಡುವ ಕ್ರೈಸ್ತರು ಜೀವವೆಂಬ ಬಹುಮಾನ ಪಡೆಯುವರು. ಹೌದು, ಕ್ರೈಸ್ತ ಓಟದ ವಿಶೇಷತೆಯೇ ಅದಾಗಿದೆ. ಯಾರೆಲ್ಲ ಓಟವನ್ನು ಪೂರ್ಣವಾಗಿ ಓಡಿ ಮುಗಿಸುತ್ತಾರೋ ಅವರೆಲ್ಲರೂ ಬಹುಮಾನ ಪಡೆಯುವರು!

4. ಕ್ರೈಸ್ತ ಓಟದ ಕುರಿತು ನಾವೇನನ್ನು ತಿಳಿದಿರಬೇಕು?

4 ಪೌಲನ ಆ ಮಾತುಗಳು, ಗೆಲುವಿಗಾಗಿ ಓಡುತ್ತಿರುವ ಎಲ್ಲರನ್ನು ಪ್ರೋತ್ಸಾಹಿಸುವುದಲ್ಲದೆ ತಮ್ಮ ಜೀವನರೀತಿಯ ಕುರಿತು ಗಂಭೀರವಾಗಿ ಯೋಚಿಸುವಂತೆಯೂ ಮಾಡುತ್ತವೆ. ಏಕೆಂದರೆ ಸಿಗುವ ಬಹುಮಾನ ಅಂಥಿಂಥದ್ದಲ್ಲ. ಸ್ವರ್ಗದ ಜೀವನ ಅಥವಾ ಭೂಪರದೈಸಿನ ಜೀವನ! ಇದಕ್ಕೆ ಯಾವುದನ್ನು ತಾನೇ ಹೋಲಿಸಸಾಧ್ಯ! ನಮ್ಮೀ ಓಟ ಬಹಳ ದೀರ್ಘವಾಗಿದೆ, ಪರಿಶ್ರಮದಾಯಕವೂ ಹೌದು. ದಾರಿಯುದ್ದಕ್ಕೂ ಅಡೆತಡೆ, ಅಪಾಯಗಳಿವೆ. ಗಮನಭಂಗ ವಿಷಯಗಳೂ ಎದುರಾಗುತ್ತವೆ. (ಮತ್ತಾ. 7:13, 14) ಇವುಗಳಿಂದಾಗಿ ಕೆಲವರು ವೇಗವನ್ನು ಕಡಿಮೆಗೊಳಿಸಿದ್ದಾರೆ. ಕೆಲವರು ಓಡುವುದನ್ನು ನಿಲ್ಲಿಸಿದ್ದಾರೆ. ಇನ್ನು ಕೆಲವರು ಅರ್ಧದಲ್ಲೇ ಸೋತು ಕುಸಿದಿದ್ದಾರೆ. ಓಟದಲ್ಲಿ ಎದುರಾಗುವ ಅಡೆತಡೆ, ಅಪಾಯಗಳು ಯಾವುವು? ಅವುಗಳಿಗೆ ಸಿಕ್ಕಿಕೊಳ್ಳದೆ ಗುರಿಯತ್ತ ಓಡುವುದು ಹೇಗೆ? ಕೊನೆತನಕ ಓಡಿ ಹೇಗೆ ಜಯಗಳಿಸಬಲ್ಲೆವು?

ಜಯಿಸಬೇಕಾದರೆ ತಾಳಿಕೊಳ್ಳಬೇಕು

5. ಪೌಲನು ಇಬ್ರಿಯ 12:1, 2ರಲ್ಲಿ ಓಟದ ಕುರಿತು ಏನು ಮಾತಾಡಿದನು?

5 ಪೌಲನು ಯೆರೂಸಲೇಮ್‌ ಮತ್ತು ಯೂದಾಯದಲ್ಲಿದ್ದ ಇಬ್ರಿಯ ಕ್ರೈಸ್ತರಿಗೆ ಬರೆದ ಪತ್ರದಲ್ಲೂ ಕ್ರೈಸ್ತ ಜೀವನವನ್ನು ಓಟಕ್ಕೆ ಹೋಲಿಸುತ್ತಾ ಮಾತಾಡಿದನು. (ಇಬ್ರಿಯ 12:1, 2 ಓದಿ.) ಕ್ರೈಸ್ತರು ಈ ಓಟದಲ್ಲಿ ಏಕೆ ಭಾಗವಹಿಸಬೇಕೆಂದು ಪೌಲನು ಕಾರಣ ಕೊಟ್ಟದ್ದಲ್ಲದೆ ಜಯಗಳಿಸಲು ಏನು ಮಾಡಬೇಕೆಂದೂ ಬರೆದನು. ಅವನು ಇಬ್ರಿಯರಿಗೆ ಈ ಪತ್ರ ಬರೆಯಲು ಕಾರಣವೇನು? ಏನನ್ನು ಮಾಡುವಂತೆ ಅವರನ್ನು ಉತ್ತೇಜಿಸಿದನು? ನಾವೀಗ ಇದನ್ನು ನೋಡೋಣ. ಅನಂತರ ಇಬ್ರಿಯರಿಗೆ ಸಿಕ್ಕಿದ ಸಲಹೆಯಿಂದ ನಾವೇನು ಕಲಿಯಸಾಧ್ಯವಿದೆ ಎಂದು ನೋಡೋಣ.

6. ಧಾರ್ಮಿಕ ಮುಖಂಡರು ಕ್ರೈಸ್ತರಿಗೆ ಏನು ಮಾಡತೊಡಗಿದರು?

6 ಒಂದನೇ ಶತಮಾನದ ಕ್ರೈಸ್ತರ ಜೀವನ ಸಲೀಸಾಗಿರಲಿಲ್ಲ. ಯೆರೂಸಲೇಮ್‌ ಮತ್ತು ಯೂದಾಯದಲ್ಲಿದ್ದ ಕ್ರೈಸ್ತರಿಗಂತೂ ಅನೇಕ ಕಷ್ಟ ತೊಂದರೆಗಳು ಇದ್ದವು. ಜನರನ್ನು ತಮ್ಮ ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದ್ದ ಧಾರ್ಮಿಕ ಮುಖಂಡರು ಆ ಕ್ರೈಸ್ತರಿಗೆ ತೊಂದರೆ ಕೊಡುತ್ತಿದ್ದರು. ಈ ಹಿಂದೆ ಇದೇ ಧಾರ್ಮಿಕ ಮುಖಂಡರು ಯೇಸು ಕ್ರಿಸ್ತನಿಗೆ ದೇಶದ್ರೋಹಿ ಎಂಬ ಹಣೆಪಟ್ಟಿ ಹಚ್ಚಿ ಅವನನ್ನು ಕೊಂದಿದ್ದರು. ಅಲ್ಲಿಗೆ ನಿಲ್ಲಿಸದೆ ಕ್ರೈಸ್ತರ ವಿರುದ್ಧ ದ್ವೇಷಕಾರುತ್ತಲೇ ಇದ್ದರು. ಅವರು ಒಂದರ ನಂತರ ಒಂದರಂತೆ ತಂದ ಆಕ್ರಮಣ, ಬೆದರಿಕೆಗಳ ಕುರಿತು ನಾವು ಅಪೊಸ್ತಲರ ಕಾರ್ಯಗಳು ಪುಸ್ತಕದಲ್ಲಿ ಓದಬಹುದು. ಕ್ರಿ.ಶ. 33ರ ಪಂಚಾಶತ್ತಮದಂದು ಅದ್ಭುತಕರ ಘಟನೆ ನಡೆದ ಬಳಿಕ ಈ ರೀತಿಯ ವಿರೋಧಗಳು ಭುಗಿಲೆದ್ದವು. ಅವು ಕ್ರೈಸ್ತರ ಜೀವನವನ್ನು ದುಸ್ತರಗೊಳಿಸಿದವು.—ಅ. ಕಾ. 4:1-3; 5:17, 18; 6:8-12; 7:59; 8:1, 3.

7. ಕ್ರೈಸ್ತರ ಜೀವನ ಕಷ್ಟಕರವಾಗಿರಲು ಮತ್ತೊಂದು ಕಾರಣ ಏನಾಗಿತ್ತು?

7 ಆ ಕ್ರೈಸ್ತರ ಜೀವನ ಕಷ್ಟವಾಗಿರಲು ಇನ್ನೊಂದು ಕಾರಣ ಅವರು ಜೀವಿಸುತ್ತಿದ್ದ ಸಮಯವಾಗಿತ್ತು. ಅಂದರೆ ಯೆರೂಸಲೇಮ್‌ ನಾಶನ ಬಲು ಹತ್ತಿರದಲ್ಲಿತ್ತು. ದೇವರಿಗೆ ಅಪನಂಬಿಗಸ್ತರಾಗಿದ್ದ ಯೆಹೂದಿ ಜನಾಂಗ ನಾಶವಾಗುವುದೆಂದು ಯೇಸು ಮುಂಚೆಯೇ ಕ್ರೈಸ್ತರಿಗೆ ಹೇಳಿದ್ದನು. ಮಾತ್ರವಲ್ಲ ನಾಶನದ ಮುಂಚೆ ಯಾವ ಘಟನೆಗಳು ಸಂಭವಿಸುವವು, ಕ್ರೈಸ್ತರು ಪಾರಾಗಲು ಏನು ಮಾಡಬೇಕು ಎಂಬ ವಿಷಯವನ್ನೂ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದನು. (ಲೂಕ 21:20-22 ಓದಿ.) ಹಾಗಾದರೆ ಅವರೀಗ ಏನು ಮಾಡಬೇಕಿತ್ತು? ಯೇಸುವಿನ ಈ ಎಚ್ಚರಿಕೆಗೆ ಕಿವಿಗೊಡಬೇಕಿತ್ತು: “ನಿಮ್ಮ ಹೃದಯಗಳು ಎಂದಿಗೂ ಅತಿಯಾದ ಭೋಜನ, ವಿಪರೀತವಾದ ಕುಡಿತ ಮತ್ತು ಜೀವನದ ಚಿಂತೆಗಳ ಭಾರದಿಂದ ಕುಗ್ಗಿಹೋಗದಂತೆ ಮತ್ತು ಆ ದಿನವು ಥಟ್ಟನೆ ಉರ್ಲಿನಂತೆ ನಿಮ್ಮ ಮೇಲೆ ಎರಗಿ ಬರದಿರುವಂತೆ ನಿಮಗೆ ಗಮನಕೊಟ್ಟುಕೊಳ್ಳಿರಿ.”—ಲೂಕ 21:34, 35.

8. ಕ್ರೈಸ್ತ ಓಟದಲ್ಲಿ ಕೆಲವರು ನಿಧಾನಗೊಳ್ಳಲು ಅಥವಾ ಓಟವನ್ನೇ ನಿಲ್ಲಿಸಿಬಿಡಲು ಕಾರಣವೇನು?

8 ಯೇಸು ಈ ಎಚ್ಚರಿಕೆ ಕೊಟ್ಟ 30 ವರ್ಷಗಳ ನಂತರವಷ್ಟೇ ಪೌಲನು ಇಬ್ರಿಯರಿಗೆ ಪತ್ರ ಬರೆದಿದ್ದನು. ಆ ಮೂವತ್ತು ವರ್ಷಗಳಲ್ಲಿ ಕ್ರೈಸ್ತರ ಪರಿಸ್ಥಿತಿ ಹೇಗಿತ್ತು? ಕೆಲವರು ಆಧ್ಯಾತ್ಮಿಕವಾಗಿ ಬಲಹೊಂದುವ ಬದಲು, ಜೀವನದ ಒತ್ತಡ ಚಿಂತೆಗಳಿಗೆ ಬಲಿಯಾಗಿ ಪ್ರಗತಿ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದರು. (ಇಬ್ರಿ. 5:11-14) ಮತ್ತೆ ಕೆಲವರು ‘ನೀರು ಹರಿಯುವ ದಿಕ್ಕಿನಲ್ಲಿ ಈಜುವುದೇ ಸುಲಭ’ ಎಂಬ ಮನೋಭಾವ ಉಳ್ಳವರಾಗಿ ಹೆಚ್ಚಿನ ಯೆಹೂದ್ಯರು ಏನು ಮಾಡುತ್ತಿದ್ದರೋ ಅದನ್ನೇ ಮಾಡತೊಡಗಿದರು. ಅವರೇನು ದೇವರನ್ನು ಸಂಪೂರ್ಣ ತೊರೆದಿರಲಿಲ್ಲ, ಧರ್ಮಶಾಸ್ತ್ರವನ್ನು ಸ್ವಲ್ಪಮಟ್ಟಿಗೆ ಪಾಲಿಸುತ್ತಿದ್ದರು. ಸಭೆಯಲ್ಲಿ ಮೋಶೆಯ ಧರ್ಮಶಾಸ್ತ್ರ ಹಾಗೂ ಯೆಹೂದಿ ಸಂಪ್ರದಾಯಗಳನ್ನು ಪಾಲಿಸಲು ಒತ್ತಡಹಾಕುತ್ತಿದ್ದವರ ತರ್ಕಗಳಿಗೆ ಮಣಿದಿದ್ದ ಕ್ರೈಸ್ತರು ಕೂಡ ಇದ್ದರು. ಇವರೆಲ್ಲರೂ ಆಧ್ಯಾತ್ಮಿಕವಾಗಿ ಎಚ್ಚೆತ್ತು ತಮ್ಮ ಕ್ರೈಸ್ತ ಓಟದಲ್ಲಿ ತಾಳ್ಮೆಯಿಂದ ಮುಂದೊತ್ತುವಂತೆ ಪೌಲನು ಯಾವ ಪ್ರೋತ್ಸಾಹ ನೀಡಿದನು?

9, 10. (ಎ) ಇಬ್ರಿಯ 10ನೇ ಅಧ್ಯಾಯದ ಕೊನೆಯಲ್ಲಿ ಪೌಲನು ಕ್ರೈಸ್ತರನ್ನು ಹೇಗೆ ಹುರಿದುಂಬಿಸಿದ್ದಾನೆ? (ಬಿ) ಪೌಲನು ಇಬ್ರಿಯರಿಗೆ ಬರೆದ ಪತ್ರದಲ್ಲಿ ಪ್ರಾಚೀನ ಕಾಲದ ಸಾಕ್ಷಿಗಳ ನಂಬಿಕೆಯ ಕ್ರಿಯೆಗಳ ಕುರಿತು ಬರೆದದ್ದೇಕೆ?

9 ದೇವರಿಂದ ಪ್ರೇರಣೆಗೊಂಡು ಪೌಲನು ನೀಡಿದ ಪ್ರೋತ್ಸಾಹ ತುಂಬಾ ಆಸಕ್ತಿಕರವಾಗಿದೆ. ಇಬ್ರಿಯರಿಗೆ ಬರೆದ ಪತ್ರದ 10ನೇ ಅಧ್ಯಾಯದಲ್ಲಿ ಪೌಲನು ಧರ್ಮಶಾಸ್ತ್ರ ಕೇವಲ “ಬರಲಿರುವ ಒಳ್ಳೆಯ ವಿಷಯಗಳ ಛಾಯೆಯಾಗಿದೆ” ಎಂದು ತಿಳಿಸಿದನು. ಅಲ್ಲದೆ, ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದ ಮಹತ್ವವನ್ನು ಸ್ಪಷ್ಟಪಡಿಸಿದನು. ಆ ಅಧ್ಯಾಯದ ಕೊನೆಭಾಗದಲ್ಲಿ ಕ್ರೈಸ್ತರಿಗೆ ಬುದ್ಧಿವಾದ ನೀಡುತ್ತಾ, “ನೀವು ದೇವರ ಚಿತ್ತವನ್ನು ಮಾಡಿದ ಬಳಿಕ ವಾಗ್ದಾನದ ನೆರವೇರಿಕೆಯನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಯ ಅಗತ್ಯವಿದೆ. ಏಕೆಂದರೆ ಇನ್ನು ‘ಸ್ವಲ್ಪ ಸಮಯದಲ್ಲಿಯೇ’ ‘ಬರಲಿರುವಾತನು ಬರುವನು, ತಡಮಾಡುವುದಿಲ್ಲ’” ಎಂದು ಹೇಳಿದನು.—ಇಬ್ರಿ. 10:1, 36, 37.

10 ಇಬ್ರಿಯ 11ನೇ ಅಧ್ಯಾಯದಲ್ಲಿ ಪೌಲನು ನಿಜವಾದ ನಂಬಿಕೆ ಅಂದರೇನು ಎಂದು ವಿವರಿಸಿದನು. ಅದಕ್ಕಾಗಿ ಪ್ರಾಚೀನ ಕಾಲದ ನಂಬಿಗಸ್ತ ಸ್ತ್ರೀಪುರುಷರ ಉದಾಹರಣೆಗಳನ್ನೂ ಕೊಟ್ಟನು. ಅವೇನೂ ಅನಗತ್ಯ ವಿಷಯಗಳಾಗಿರಲಿಲ್ಲ. ಏಕೆಂದರೆ, ದೇವರಲ್ಲಿ ನಂಬಿಕೆ ಇದೆಯೆಂದು ತೋರಿಸಲು ಧೈರ್ಯ ಹಾಗೂ ತಾಳ್ಮೆ ಅತ್ಯಾವಶ್ಯಕ ಎನ್ನುವುದನ್ನು ಆ ಕ್ರೈಸ್ತರು ಅರಿಯಬೇಕಿತ್ತು. ದೇವರಿಗೆ ನಂಬಿಗಸ್ತರಾಗಿದ್ದವರ ಮಾದರಿಗಳು ಕ್ರೈಸ್ತರಿಗೆ ಕಷ್ಟ ತೊಂದರೆಗಳನ್ನು ಸಹಿಸಿಕೊಂಡು ಹೋಗಲು ಬಲಕೊಡುತ್ತಿದ್ದವು. ಆದ್ದರಿಂದಲೇ ಪೌಲನು ಪ್ರಾಚೀನ ಕಾಲದ ಆ ನಿಷ್ಠಾವಂತರ ನಂಬಿಕೆಯ ಕ್ರಿಯೆಗಳನ್ನು ಪಟ್ಟಿಮಾಡಿದ ನಂತರ ಹೀಗೆ ಹೇಳಿದನು: “ಸಾಕ್ಷಿಗಳ ಇಷ್ಟೊಂದು ದೊಡ್ಡ ಮೇಘವು ನಮ್ಮ ಸುತ್ತಲೂ ಇರುವುದರಿಂದ ನಾವು ಸಹ ಎಲ್ಲ ಭಾರವನ್ನೂ ಸುಲಭವಾಗಿ ಸುತ್ತಿಕೊಳ್ಳುವ ಪಾಪವನ್ನೂ ತೆಗೆದುಹಾಕಿ . . . ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ.”—ಇಬ್ರಿ. 12:1, 2.

ಸಾಕ್ಷಿಗಳ ದೊಡ್ಡ ಮೇಘ

11. ದೊಡ್ಡ ಮೇಘದಂತಿರುವ “ಸಾಕ್ಷಿಗಳ” ಕುರಿತು ಯೋಚಿಸುವುದರಿಂದ ನಮಗೆ ಯಾವ ಪ್ರಯೋಜನವಿದೆ?

11 ಪೌಲ ತಿಳಿಸಿದ ಮೇಘದಂಥ ಸಾಕ್ಷಿಗಳು ಕೇವಲ ಓಟದ ಪಂದ್ಯವನ್ನು ವೀಕ್ಷಿಸಲು ಆಗಮಿಸುವ ಅಥವಾ ತಮ್ಮ ಅಚ್ಚುಮೆಚ್ಚಿನ ಕ್ರೀಡಾಪಟುವಾಗಲಿ ತಂಡವಾಗಲಿ ಗೆಲ್ಲುವುದನ್ನು ನೋಡಿ ಸಂತೋಷಪಡುವ ಪ್ರೇಕ್ಷಕರಂತಿರಲಿಲ್ಲ. ಅವರು ಓಟದಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳಾಗಿದ್ದರು. ತಮ್ಮ ಓಟವನ್ನು ಪೂರ್ಣವಾಗಿ ಓಡಿ ಕೊನೆಗೊಳಿಸಿದ್ದರು. ಹೊಸ ಓಟಗಾರರಿಗೆ ಪ್ರೋತ್ಸಾಹ ನೀಡುವ ಅನುಭವಿ ಓಟಗಾರರಂತೆ ಅವರಿದ್ದಾರೆ. ಸ್ವಲ್ಪ ಯೋಚಿಸಿ, ಪಂದ್ಯದಲ್ಲಿ ಓಡುತ್ತಿರುವ ಒಬ್ಬ ಓಟಗಾರನಿಗೆ, ತನ್ನನ್ನು ತುಂಬ ಸಾಧನೆ ಮಾಡಿರುವ ಹಿರಿಯ ಓಟಗಾರರು ಗಮನಿಸುತ್ತಿದ್ದಾರೆ ಎಂದು ತಿಳಿದರೆ ಹೇಗನಿಸುತ್ತದೆ? ಅವನಿನ್ನೂ ಉತ್ಸಾಹದಿಂದ ಶಕ್ತಿಮೀರಿ ಓಡಲು ಪ್ರಯತ್ನಿಸುತ್ತಾನಲ್ಲವೇ? ಕ್ರೈಸ್ತ ಓಟದಲ್ಲಿ ಎಷ್ಟೇ ಕಷ್ಟಬಂದರೂ ಜಯಗಳಿಸಲು ಸಾಧ್ಯ ಎಂದು ಆ ಮೇಘದಂಥ ಸಾಕ್ಷಿಗಳು ತೋರಿಸಿಕೊಟ್ಟಿದ್ದರು. ಹೊಸ ಓಟಗಾರರಂತಿದ್ದ ಒಂದನೇ ಶತಮಾನದ ಇಬ್ರಿಯ ಕ್ರೈಸ್ತರಿಗೆ ಆ “ಸಾಕ್ಷಿಗಳ” ಮಾದರಿಯನ್ನು ಮನಸ್ಸಿನಲ್ಲಿಡುವುದು “ಓಟವನ್ನು ತಾಳ್ಮೆಯಿಂದ” ಓಡಲು ಧೈರ್ಯ ತುಂಬುತ್ತಿತ್ತು. ಇಂದು ನಾವು ಸಹ ಧೈರ್ಯ ಪಡೆದುಕೊಳ್ಳಸಾಧ್ಯವಿದೆ.

12. ಪೌಲನು ತಿಳಿಸಿರುವ ವ್ಯಕ್ತಿಗಳ ಉದಾಹರಣೆಗಳು ನಮಗಿಂದು ಹೇಗೆ ಪ್ರಯೋಜನಕಾರಿ?

12 ಪೌಲ ಉಲ್ಲೇಖಿಸಿದ್ದ ಅನೇಕ ನಂಬಿಗಸ್ತರ ಸನ್ನಿವೇಶ ನಮ್ಮ ಸನ್ನಿವೇಶದಂತೆಯೇ ಇತ್ತು. ಉದಾಹರಣೆಗೆ, ದೇವರು ಲೋಕವನ್ನು ಜಲಪ್ರಳಯದಿಂದ ನಾಶಮಾಡಿದ್ದ ಸಮಯದಲ್ಲಿ ನೋಹ ಜೀವಿಸಿದ್ದನು. ನಾವು ಕೂಡ ಈ ದುಷ್ಟ ಲೋಕ ನಾಶವಾಗಲಿರುವ ಸಮಯದಲ್ಲಿ ಜೀವಿಸುತ್ತಿದ್ದೇವೆ. ಸತ್ಯಾರಾಧನೆಗಾಗಿ ಸ್ವದೇಶ ಬಿಟ್ಟುಬರುವಂತೆ ಹಾಗೂ ತನ್ನ ವಾಗ್ದಾನಗಳ ನೆರವೇರಿಕೆಯನ್ನು ಎದುರುನೋಡುವಂತೆ ದೇವರು ಅಬ್ರಹಾಮ ಮತ್ತು ಸಾರಳಿಗೆ ಹೇಳಿದನು. ದೇವರು ನಮಗೂ ನಮ್ಮ ಆಶೆ ಆಕಾಂಕ್ಷೆಗಳನ್ನು ತೊರೆಯುವಂತೆ ಹಾಗೂ ಆತನ ಮೆಚ್ಚಿಗೆ ಆಶೀರ್ವಾದಗಳನ್ನು ಪಡೆಯುವಂತೆ ಹೇಳಿದ್ದಾನೆ. ಮೋಶೆ ವಾಗ್ದತ್ತ ದೇಶದೆಡೆಗೆ ಪ್ರಯಾಣಿಸುತ್ತಿದ್ದಾಗ ಅಪಾಯಕಾರಿ ಪ್ರದೇಶವನ್ನು ದಾಟಬೇಕಾಯಿತು. ನಾವು ಸಹ ಅವಸಾನದ ಅಂಚಿನಲ್ಲಿರುವ ಈ ಜರ್ಜರಿತ ಲೋಕವನ್ನು ಹಾದು ಹೊಸ ಲೋಕದೆಡೆಗೆ ಸಾಗುತ್ತಿದ್ದೇವೆ. ಆದ್ದರಿಂದ ದೇವರ ಆ ನಂಬಿಗಸ್ತ ಸೇವಕರು ಏನನ್ನೆಲ್ಲ ಅನುಭವಿಸಿದರು, ಏನನ್ನು ಸಾಧಿಸಿದರು, ಎಲ್ಲಿ ವಿಫಲರಾದರು, ಅವರ ಸತ್ವ-ಸಾಮರ್ಥ್ಯಗಳೇನು, ಬಲಹೀನತೆಗಳೇನು ಎಂಬುದನ್ನು ಕಲಿಯುವುದರಿಂದ ನಮಗೆ ತುಂಬ ಪ್ರಯೋಜನಗಳಿವೆ.—ರೋಮ. 15:4; 1 ಕೊರಿಂ. 10:11.

ಅವರು ಜಯಗಳಿಸಿದರು—ಹೇಗೆ?

13. ನೋಹನ ಮುಂದೆ ಯಾವೆಲ್ಲ ಸವಾಲುಗಳಿದ್ದವು? ಅವುಗಳನ್ನು ಜಯಿಸಿ ಯಶಸ್ವಿಯಾಗಲು ಯಾವುದು ಸಹಾಯಮಾಡಿತು?

13 ಓಟದಲ್ಲಿ ತಾಳಿಕೊಳ್ಳಲು ಹಾಗೂ ಜಯಗಳಿಸಲು ದೇವರ ಈ ಸೇವಕರಿಗೆ ಹೇಗೆ ಸಾಧ್ಯವಾಯಿತು? ನೋಹನ ವಿಷಯದಲ್ಲಿ ಪೌಲನು ಏನು ಹೇಳಿದ್ದಾನೆಂದು ನೋಡಿ. (ಇಬ್ರಿಯ 11:7 ಓದಿ.) ಭೂಮಿಯ ಮೇಲೆ ಬರಲಿದ್ದ ಜಲಪ್ರಳಯವು ನೋಹ “ಅದುವರೆಗೆ ಕಾಣದಿದ್ದ ವಿಷಯ” ಆಗಿತ್ತು. (ಆದಿ. 6:17) ಏಕೆಂದರೆ ಜಲಪ್ರಳಯ ಈ ಮುಂಚೆ ಬಂದೇ ಇರಲಿಲ್ಲ. ಆದರೂ ಜಲಪ್ರಳಯ ಬರುವುದೆಂದು ಯೆಹೋವ ದೇವರು ಹೇಳಿದ ಮಾತನ್ನು ನೋಹ ಅಲಕ್ಷಿಸಲಿಲ್ಲ. ದೇವರು ನುಡಿದದ್ದನ್ನು ಮಾಡಿಯೇ ತೀರುವನು ಎಂಬ ಅಚಲ ನಂಬಿಕೆ ಅವನಿಗಿತ್ತು. ಹಾಗಾಗಿ ದೇವರು ಕೊಟ್ಟಿರುವ ಕೆಲಸ ತುಂಬ ಕಷ್ಟ, ತನ್ನಿಂದಾಗದು ಎಂದು ಅವನು ಕೈಚೆಲ್ಲಿ ಕುಳಿತುಕೊಳ್ಳಲಿಲ್ಲ. “ದೇವರು ಅಪ್ಪಣೆಕೊಟ್ಟ ಪ್ರಕಾರವೇ” ಮಾಡಿದನು. (ಆದಿ. 6:22) ಏನೆಲ್ಲ ಮಾಡಬೇಕಿತ್ತೆಂದು ಗಮನಿಸಿ. ನಾವೆ ಕಟ್ಟಬೇಕಿತ್ತು, ಪ್ರಾಣಿಪಕ್ಷಿಗಳನ್ನು ಅದರಲ್ಲಿ ಸೇರಿಸಬೇಕಿತ್ತು, ಆಹಾರಪದಾರ್ಥಗಳನ್ನು ಶೇಖರಿಸಬೇಕಿತ್ತು. ಅಷ್ಟೇ ಅಲ್ಲ ಜನರಿಗೆ ಎಚ್ಚರಿಕೆಯ ಸಂದೇಶ ಸಾರಬೇಕಿತ್ತು, ತನ್ನ ಕುಟುಂಬದವರ ನಂಬಿಕೆ ಬಲವಾಗಿರುವಂತೆ ನೋಡಿಕೊಳ್ಳಬೇಕಿತ್ತು. “ಅಪ್ಪಣೆಕೊಟ್ಟ ಪ್ರಕಾರವೇ” ಇವನ್ನೆಲ್ಲ ಮಾಡಿ ಮುಗಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೂ ನೋಹ ನಂಬಿಕೆ ಹಾಗೂ ತಾಳ್ಮೆ ತೋರಿಸಿದನು. ಅದು ಅವನ ಹಾಗೂ ಅವನ ಕುಟುಂಬದ ಜೀವ ಉಳಿಸಿತು. ದೇವರ ಹೇರಳ ಆಶೀರ್ವಾದವನ್ನೂ ತಂದಿತು.

14. ಯಾವೆಲ್ಲ ಸನ್ನಿವೇಶಗಳಲ್ಲಿ ಅಬ್ರಹಾಮ ಸಾರ ದೇವರಲ್ಲಿ ನಂಬಿಕೆ ತೋರಿಸಿದರು? ಇದರಿಂದ ನಾವು ಯಾವ ಪಾಠ ಕಲಿಯಬಹುದು?

14 ಮೇಘದಂತಿರುವ ಸಾಕ್ಷಿಗಳ ಪಟ್ಟಿಯಲ್ಲಿ ಪೌಲ ನಂತರ ತಿಳಿಸುವುದು ಅಬ್ರಹಾಮ ಮತ್ತು ಸಾರಳ ಕುರಿತು. ಸ್ವದೇಶವಾದ ಊರ್‌ ಪಟ್ಟಣವನ್ನು ಬಿಟ್ಟುಬರುವಂತೆ ದೇವರು ಹೇಳಿದಾಗ ಅವರ ಬದುಕಿನ ದೆಸೆಯೇ ಬದಲಾಯಿತು. ನಾಳೆ ಏನು ಎತ್ತ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಆದರೂ ದೇವರಲ್ಲಿ ಅವರ ನಂಬಿಕೆ ಸ್ಥಿರವಾಗಿತ್ತು. ಕಷ್ಟದ ಪರಿಸ್ಥಿತಿಯಲ್ಲೂ ಆತನ ಮಾತನ್ನು ಪಾಲಿಸಿದರು. ಸತ್ಯಾರಾಧನೆಗಾಗಿ ಅಬ್ರಹಾಮ ಮನಸಾರೆ ಬಹಳಷ್ಟು ತ್ಯಾಗ ಮಾಡಿದನು! ಬೈಬಲ್‌ ಅವನನ್ನು “ನಂಬಿಕೆಯಿರುವ ಎಲ್ಲರಿಗೆ . . . ತಂದೆ” ಎಂದು ಕರೆದಿರುವುದು ತಕ್ಕದಾಗಿದೆ. (ರೋಮ. 4:11) ಇಬ್ರಿಯ ಕ್ರೈಸ್ತರಿಗೆ ಅಬ್ರಹಾಮ ಸಾರಳ ಕುರಿತು ಈಗಾಗಲೇ ಚೆನ್ನಾಗಿ ತಿಳಿದಿದ್ದರಿಂದ ಪೌಲನು ಅವರ ಜೀವನದ ಕೆಲವು ಪ್ರಮುಖ ಘಟನೆಗಳನ್ನಷ್ಟೇ ತಿಳಿಸಿದನು. ಅವರಿಗೆ ದೇವರಲ್ಲಿ ಗಾಢ ನಂಬಿಕೆಯಿತ್ತೆಂದು ತಿಳಿಯಲು ಈ ಘಟನೆಗಳು ಸಾಕಷ್ಟೆ. ಅವರ ಕುರಿತು ಪೌಲನು ಹೀಗೆ ಬರೆದನು: “ಇವರೆಲ್ಲರೂ ವಾಗ್ದಾನದ ನೆರವೇರಿಕೆಯನ್ನು ಹೊಂದಲಿಲ್ಲವಾದರೂ ಅವುಗಳನ್ನು ದೂರದಿಂದಲೇ ನೋಡಿ ಸ್ವಾಗತಿಸಿದರು ಮತ್ತು ತಾವು ದೇಶದಲ್ಲಿ ಅಪರಿಚಿತರೂ ತಾತ್ಕಾಲಿಕ ನಿವಾಸಿಗಳೂ ಆಗಿದ್ದೇವೆಂದು ಬಹಿರಂಗವಾಗಿ ಪ್ರಕಟಪಡಿಸುತ್ತಾ ನಂಬಿಕೆಯುಳ್ಳವರಾಗಿ ಮೃತರಾದರು.” (ಇಬ್ರಿ. 11:13) ಹೌದು, ದೇವರಲ್ಲಿದ್ದ ನಂಬಿಕೆ ಮತ್ತು ಆತನೊಂದಿಗಿದ್ದ ಆಪ್ತ ಸ್ನೇಹವು ಓಟವನ್ನು ತಾಳ್ಮೆಯಿಂದ ಓಡುವಂತೆ ಅವರಿಗೆ ಸಹಾಯಮಾಡಿತು.

15. ಮೋಶೆ ಐಷಾರಾಮಿ ಜೀವನವನ್ನು ಆಯ್ಕೆ ಮಾಡದಿರಲು ಕಾರಣವೇನು?

15 ಮೇಘದಂತಿರುವ ಸಾಕ್ಷಿಗಳ ಪಟ್ಟಿಯಲ್ಲಿ ಮುಂದೆ ಮೋಶೆಯ ಹೆಸರಿದೆ. ಅವನು ಐಷಾರಾಮಿ ಜೀವನವನ್ನು ಬಿಟ್ಟು “ದೇವರ ಜನರೊಂದಿಗೆ ದುರುಪಚಾರವನ್ನು ಅನುಭವಿಸುವ ಆಯ್ಕೆಯನ್ನು ಮಾಡಿದನು.” ಏಕೆ? ಪೌಲ ಉತ್ತರಿಸುತ್ತಾನೆ: “ಅವನು ತೀವ್ರಾಸಕ್ತಿಯಿಂದ ಬಹುಮಾನದ ನೀಡುವಿಕೆಯ ಕಡೆಗೆ ದೃಷ್ಟಿನೆಟ್ಟವನಾಗಿದ್ದನು. . . . ಅದೃಶ್ಯನಾಗಿರುವಾತನನ್ನು ನೋಡುವವನೋ ಎಂಬಂತೆ ಅವನು ಸ್ಥಿರಚಿತ್ತನಾಗಿ ಮುಂದುವರಿದನು.” (ಇಬ್ರಿಯ 11:24-27 ಓದಿ.) ಅವನ ದೃಷ್ಟಿ ‘ಪಾಪದ ತಾತ್ಕಾಲಿಕ ಸುಖಾನುಭವದ’ ಕಡೆಗೆ ವಾಲಲಿಲ್ಲ. ದೇವರಲ್ಲಿ ಹಾಗೂ ಆತನ ವಾಗ್ದಾನಗಳಲ್ಲಿ ಎಂಥ ಸ್ಥಿರ ಭರವಸೆ ಇತ್ತೆಂದರೆ ಅಸಾಧಾರಣ ಧೈರ್ಯ ಹಾಗೂ ತಾಳ್ಮೆ ತೋರಿಸಿದನು. ಇಸ್ರಾಯೇಲ್ಯರನ್ನು ಈಜಿಪ್ಟ್‌ನಿಂದ ವಾಗ್ದತ್ತ ದೇಶಕ್ಕೆ ಕರೆದೊಯ್ಯಲು ಅವಿರತವಾಗಿ ಶ್ರಮಿಸಿದನು.

16. ವಾಗ್ದತ್ತ ದೇಶವನ್ನು ಪ್ರವೇಶಿಸಲು ದೇವರು ಅನುಮತಿ ನೀಡದಿದ್ದಾಗ ಮೋಶೆ ಕಹಿಭಾವ ತಾಳಲಿಲ್ಲ ಎಂದು ಹೇಗೆ ಗೊತ್ತು?

16 ಅಬ್ರಹಾಮನಂತೆಯೇ ಮೋಶೆ ಸಹ ತನ್ನ ಜೀವಮಾನದಲ್ಲಿ ವಾಗ್ದತ್ತ ದೇಶದ ಕುರಿತ ವಾಗ್ದಾನ ನೆರವೇರುವುದನ್ನು ಕಣ್ಣಾರೆ ಕಾಣಲಿಲ್ಲ. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವ ಮುಂಚೆ ದೇವರು ಅವನಿಗೆ ಹೀಗಂದನು: “ನಾನು ಇಸ್ರಾಯೇಲ್ಯರಿಗೆ ಕೊಡುವ ದೇಶವನ್ನು ನೀನು ದೂರದಿಂದ ನೋಡಬಹುದೇ ಹೊರತು ಅದರಲ್ಲಿ ಪ್ರವೇಶಿಸಕೂಡದು”!! ಏಕೆ? ಹಿಂದೊಮ್ಮೆ ಮೋಶೆ ಮತ್ತು ಆರೋನ ಇಸ್ರಾಯೇಲ್ಯರ ಪ್ರತಿಭಟನೆಯಿಂದ ಹತಾಶರಾಗಿ “ಚಿನ್‌ ಅರಣ್ಯದಲ್ಲಿನ ಮೆರೀಬಾ ಕಾದೇಶಿನಲ್ಲಿ ನೀರು ಹೊರಟ ಸ್ಥಳದ ಬಳಿಯಲ್ಲಿ ಇಸ್ರಾಯೇಲ್ಯರ ಮಧ್ಯದಲ್ಲಿ [ದೇವರ] ವಿರೋಧವಾಗಿ ದ್ರೋಹ” ಮಾಡಿದ್ದರು. (ಧರ್ಮೋ. 32:51, 52) ವಾಗ್ದತ್ತ ದೇಶ ಪ್ರವೇಶಿಸಲು ಅನುಮತಿ ದೊರೆಯಲಿಲ್ಲವೆಂದು ಮೋಶೆ ದೇವರ ಬಗ್ಗೆ ಕಹಿಭಾವ ತಾಳಿದನೋ? ಇಲ್ಲ, ಜನರನ್ನು ಹರಸಿ ಕೊನೆಗೆ ಈ ಮಾತುಗಳನ್ನು ನುಡಿದನು: “ಇಸ್ರಾಯೇಲ್ಯರೇ, ನೀವು ಎಷ್ಟೋ ಧನ್ಯರು; ನಿಮ್ಮಷ್ಟು ಭಾಗ್ಯವಂತರು ಯಾರಿದ್ದಾರೆ? ನೀವು ಯೆಹೋವನ ಅನುಗ್ರಹದಿಂದ ಜಯವನ್ನು ಹೊಂದಿದವರು. ಆತನೇ ನಿಮ್ಮನ್ನು ಕಾಯುವ [ಗುರಾಣಿಯೂ] ನಿಮ್ಮ ಗೌರವವನ್ನು ಕಾಪಾಡುವ ಕತ್ತಿಯೂ ಆಗಿದ್ದಾನೆ.”—ಧರ್ಮೋ. 33:29.

ನಮಗಿರುವ ಪಾಠ

17, 18. (ಎ) ಕ್ರೈಸ್ತ ಓಟದ ಕುರಿತು ಮೇಘದಂತಿರುವ ಸಾಕ್ಷಿಗಳಿಂದ ಏನು ಕಲಿಯಬಹುದು? (ಬಿ) ಮುಂದಿನ ಲೇಖನದಲ್ಲಿ ಏನನ್ನು ನೋಡುವೆವು?

17 ಮೇಘದಂತಿರುವ ಸಾಕ್ಷಿಗಳಲ್ಲಿ ಕೆಲವರ ಜೀವನದ ಕುರಿತು ಚರ್ಚಿಸಿದ್ದರಿಂದ ಏನು ತಿಳಿದುಕೊಂಡೆವು? ಕ್ರೈಸ್ತ ಓಟದ ಕೊನೆಮುಟ್ಟಬೇಕಾದರೆ ನಾವು ದೇವರಲ್ಲಿ ಮತ್ತು ಆತನು ಮಾಡಿರುವ ವಾಗ್ದಾನಗಳಲ್ಲಿ ಅಚಲ ನಂಬಿಕೆ ಇಡಲೇಬೇಕು. (ಇಬ್ರಿ. 11:6) ನಂಬಿಕೆ ಅನ್ನುವುದು ನಮ್ಮ ಜೀವನದಲ್ಲಿ ಎಲ್ಲೋ ಮೂಲೆಯಲ್ಲಿರಬೇಕಾದ ವಿಷಯವಲ್ಲ, ಅದು ನಮ್ಮ ಜೀವನದಲ್ಲಿ ಎದ್ದುತೋರಬೇಕು. ನಂಬಿಕೆಯಿಲ್ಲದ ಜನರು ಭವಿಷ್ಯವನ್ನು ಗ್ರಹಿಸಲಾರರು. ಆದರೆ ಯೆಹೋವನ ಸೇವಕರು ನಂಬಿಕೆಯ ಕಣ್ಣುಗಳಿಂದ ಭವಿಷ್ಯತ್ತನ್ನು ಸ್ಪಷ್ಟವಾಗಿ ನೋಡಬಲ್ಲರು. ಹೌದು, ನಾವು “ಅದೃಶ್ಯನಾಗಿರುವಾತನನ್ನು” ನೋಡಬಲ್ಲೆವು. ಹಾಗಾಗಿ ನಮ್ಮ ಓಟದಲ್ಲಿ ತಾಳಿಕೊಳ್ಳಬಲ್ಲೆವು!—2 ಕೊರಿಂ. 5:7.

18 ಕ್ರೈಸ್ತ ಓಟ ಸುಲಭವಲ್ಲ. ಆದರೂ ನಾವು ಕೊನೇತನಕ ಓಡಿ ಯಶಸ್ವಿಯಾಗಬಲ್ಲೆವು! ಅದಕ್ಕಾಗಿ ಇನ್ಯಾವ ಸಹಾಯ ನಮಗೆ ದೊರೆಯುತ್ತದೆ? ಮುಂದಿನ ಲೇಖನದಲ್ಲಿ ನೋಡೋಣ.

ವಿವರಿಸುವಿರಾ?

• ಪ್ರಾಚೀನ ಕಾಲದ ನಂಬಿಗಸ್ತ ಸಾಕ್ಷಿಗಳ ಬಗ್ಗೆ ಪೌಲನು ಒತ್ತುನೀಡಿ ವಿವರಿಸಿದ್ದೇಕೆ?

• ನಮ್ಮ ಸುತ್ತಲೂ ಮೇಘದಂತಿರುವ ಸಾಕ್ಷಿಗಳಿದ್ದಾರೆ ಎಂದು ಯೋಚಿಸುವುದು ತಾಳಿಕೊಂಡು ಓಟವನ್ನು ಮುಗಿಸಲು ಹೇಗೆ ಉತ್ತೇಜನ ನೀಡುವುದು?

• ನಂಬಿಗಸ್ತ ಸಾಕ್ಷಿಗಳಾದ ನೋಹ, ಅಬ್ರಹಾಮ, ಸಾರ ಮತ್ತು ಮೋಶೆಯ ಕುರಿತು ಚರ್ಚಿಸಿದ್ದರಿಂದ ನೀವು ಯಾವ ಪಾಠ ಕಲಿತಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 19ರಲ್ಲಿರುವ ಚಿತ್ರ]

ಊರ್‌ ಪಟ್ಟಣದಲ್ಲಿದ್ದ ಸುಖಸವಲತ್ತನ್ನು ಬಿಟ್ಟುಬರಲು ಅಬ್ರಹಾಮ ಸಾರ ಸಿದ್ಧರಾದರು