ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ವಾಚನ ಬದುಕಿನುದ್ದಕ್ಕೂ ಬಲವರ್ಧಕ

ಬೈಬಲ್‌ ವಾಚನ ಬದುಕಿನುದ್ದಕ್ಕೂ ಬಲವರ್ಧಕ

ಬೈಬಲ್‌ ವಾಚನ ಬದುಕಿನುದ್ದಕ್ಕೂ ಬಲವರ್ಧಕ

ಮಾರ್ಸೋ ಲರ್ವೆ ಹೇಳಿದಂತೆ

“ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು . . .” ಎಂದು ಓದಲಾರಂಭಿಸಿದೆ ನಾನು. ನನ್ನ ಕೋಣೆಯಲ್ಲಿ ಯಾರಿಗೂ ಗೊತ್ತಾಗದಂತೆ ಕದ್ದುಮುಚ್ಚಿ ಓದುತ್ತಿದ್ದೆ. ಯಾಕೆ ಅಂತ ಯೋಚಿಸ್ತೀರಾ? ನನ್ನ ಅಪ್ಪ ಪಕ್ಕಾ ನಾಸ್ತಿಕರಾಗಿದ್ದರು. ನನ್ನ ಕೈಯಲ್ಲಿದ್ದ ಪುಸ್ತಕ ನೋಡಿದರೆ ನನ್ನ ಕಥೆ ಏನಾಗುತ್ತದೆಂದು ನನಗೆ ಗೊತ್ತಿತ್ತು. ನಾನು ಓದುತ್ತಿದ್ದ ಪುಸ್ತಕ ಬೈಬಲ್‌.

ಈ ಮೊದಲು ನಾನು ಬೈಬಲನ್ನು ಓದಿರಲೇ ಇಲ್ಲ. ಆದಿಕಾಂಡದ ಆ ಆರಂಭದ ಮಾತುಗಳನ್ನು ಓದಿದಾಗ ನನ್ನಲ್ಲಿ ವಿದ್ಯುತ್‌ ಸಂಚಾರವಾದಂತೆ ಅನಿಸಿತು. ನಾನು ಭೌತ ನಿಯಮಗಳಲ್ಲಿನ ಹೊಂದಾಣಿಕೆಯನ್ನು ಕಂಡು ಯಾವಾಗಲೂ ಬೆಕ್ಕಸಬೆರಗಾಗುತ್ತಿದ್ದೆ. ಆ ಕುರಿತ ವಿವರ ಈಗ ನನ್ನ ಕಣ್ಣಮುಂದೇ ಇತ್ತು. ಪರವಶನಾಗಿ ನಾನು ರಾತ್ರಿ 8ರಿಂದ ಮುಂಜಾನೆ 4ರ ತನಕ ನಿಲ್ಲಿಸದೆ ಓದಿದೆ. ಅಲ್ಲಿಂದ ಪ್ರಾರಂಭವಾಯಿತು ದೇವರ ವಾಕ್ಯವನ್ನು ಓದುವ ನನ್ನ ರೂಢಿ. ಬೈಬಲ್‌ ವಾಚನದ ಈ ರೂಢಿ ಬದುಕಿನುದ್ದಕ್ಕೂ ನನಗೆ ಹೇಗೆ ಬಲವನ್ನು ಕೊಟ್ಟಿತು ಎಂದು ಈಗ ವಿವರಿಸುತ್ತೇನೆ.

“ಹುಷಾರು . . . ಪ್ರತಿದಿನ ಓದಬೇಕಾಗುತ್ತದೆ”

ನಾನು ಹುಟ್ಟಿದ್ದು 1926ರಲ್ಲಿ. ಫ್ರಾನ್ಸ್‌ನ ಉತ್ತರದ ವೆರ್ಮೆಲೆಸ್‌ ನನ್ನ ಹುಟ್ಟೂರು. ಅದು ಕಲ್ಲಿದ್ದಲಿನ ಗಣಿಗಾರಿಕೆಯ ಪಟ್ಟಣವಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಕಲ್ಲಿದ್ದಲು ರಾಷ್ಟ್ರದ ಭದ್ರತೆಗೆ ಅಗತ್ಯವಾಗಿದ್ದ ಸ್ವತ್ತಾಗಿತ್ತು. ಹಾಗಾಗಿ ಗಣಿ ಕೆಲಸದವನಾಗಿದ್ದ ನನಗೆ ಮಿಲಿಟರಿ ಸೇವೆಯಿಂದ ವಿನಾಯಿತಿ ಇತ್ತು. ಗಣಿ ಕೆಲಸಮಾಡುತ್ತಿದ್ದ ನಾನು ನನ್ನ ಜೀವನವನ್ನು ಉತ್ತಮಗೊಳಿಸುವ ಸಲುವಾಗಿ ರೇಡಿಯೋ ಮತ್ತು ಎಲೆಕ್ಟ್ರಿಸಿಟಿಯ ಕೋರ್ಸ್‌ ಕಲಿಯಲಾರಂಭಿಸಿದೆ. ಭೌತ ನಿಯಮಗಳು ಎಷ್ಟೊಂದು ಹೊಂದಾಣಿಕೆಯಲ್ಲಿವೆ ಎಂದು ನನಗೆ ಅರಿವಾದದ್ದು ಆಗಲೇ. ನಾನು 21 ವರ್ಷದವನಾಗಿದ್ದಾಗ ಸಹಪಾಠಿಯೊಬ್ಬನು ನನ್ನ ಕೈಯಲ್ಲಿ ಬೈಬಲನ್ನು ಇಟ್ಟು “ಇದನ್ನು ನೀನು ಓದಲೇಬೇಕು” ಎಂದು ಹೇಳಿದ. ಅದು ನನಗೆ ದೊರೆತ ಮೊದಲ ಬೈಬಲಾಗಿತ್ತು. ಅದನ್ನು ಓದಿಮುಗಿಸುವಷ್ಟರಲ್ಲಿ ಬೈಬಲ್‌ ನಿಜಕ್ಕೂ ದೇವರ ವಾಕ್ಯ ಹಾಗೂ ಮಾನವರಿಗಾಗಿ ಒದಗಿಸಲ್ಪಟ್ಟಿದೆ ಎಂದು ಪೂರ್ತಿಯಾಗಿ ಮನವರಿಕೆಯಾಗಿತ್ತು.

ನನ್ನ ನೆರೆಹೊರೆಯವರು ಸಹ ಬೈಬಲನ್ನು ಇಷ್ಟಪಟ್ಟು ಓದುವರೆಂದು ನಾನಂದುಕೊಂಡೆ. ಹಾಗಾಗಿ ಒಮ್ಮೆಗೆ ಎಂಟು ಬೈಬಲ್‌ಗಳನ್ನು ಪಡೆದುಕೊಂಡೆ. ನನ್ನ ಆಶೆ ನಿರಾಶೆ ಆಯಿತು. ನಾನು ಗೇಲಿಗೊಳಗಾದೆ. ವಿರೋಧವನ್ನೂ ಎದುರಿಸಬೇಕಾಯಿತು. ಮೂಢನಂಬಿಕೆಗೆ ಒತ್ತುನೀಡುತ್ತಿದ್ದ ನನ್ನ ಸಂಬಂಧಿಕರು “ಹುಷಾರು, ನೀನಿದನ್ನು ಒಮ್ಮೆ ಓದಲು ಆರಂಭಿಸಿದರೆ ಪ್ರತಿದಿನ ಓದಬೇಕಾಗುತ್ತದೆ” ಎಂದು ಎಚ್ಚರಿಕೆಕೊಟ್ಟರು. ಅದು ನಿಜವಾಯಿತು. ನಾನು ಪ್ರತಿದಿನ ಓದಿದೆ. ಅದಕ್ಕಾಗಿ ಸ್ವಲ್ಪವೂ ವಿಷಾದವಿಲ್ಲ. ಬೈಬಲ್‌ ವಾಚನ ನನ್ನ ಬದುಕಿನ ಅಂಗವಾಗಿಬಿಟ್ಟಿತು.

ನನಗೆ ಬೈಬಲಿನಲ್ಲಿ ಆಸಕ್ತಿಯಿರುವುದನ್ನು ಗಮನಿಸಿದ ಕೆಲವು ನೆರೆಹೊರೆಯವರು ತಮ್ಮ ಬಳಿಯಿದ್ದ ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ನನಗೆ ಕೊಟ್ಟರು. ಒಂದೇ ಲೋಕ, ಒಂದೇ ಸರಕಾರ * (ಮೇಲಿನ ಚಿತ್ರದಲ್ಲಿರುವುದು ಫ್ರೆಂಚ್‌ ಭಾಷೆಯ ಪುಸ್ತಿಕೆ) ಎಂಬ ಪುಸ್ತಿಕೆ ಹಾಗೂ ಇನ್ನಿತರ ಪುಸ್ತಿಕೆಗಳು ದೇವರ ರಾಜ್ಯವೊಂದೇ ಮಾನವಕುಲದ ಸಮಸ್ಯೆಗಳಿಗೆ ಪರಿಹಾರ ಎಂದು ಬೈಬಲ್‌ ಹೇಳುವುದೇಕೆ ಎನ್ನುವುದನ್ನು ವಿವರಿಸಿದವು. (ಮತ್ತಾ. 6:10) ಅವುಗಳನ್ನು ಓದಿದ ನಂತರ ಈ ನಿರೀಕ್ಷೆಯನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂಬ ನನ್ನ ಹುಮ್ಮಸ್ಸು ಹೆಚ್ಚಿತು.

ನನ್ನಿಂದ ಮೊಟ್ಟಮೊದಲ ಬಾರಿಗೆ ಬೈಬಲನ್ನು ಪಡೆದುಕೊಂಡವನು ನೊಯೆಲ್‌. ಆತ ನನ್ನ ಬಾಲ್ಯ ಸ್ನೇಹಿತ. ಕ್ಯಾಥೊಲಿಕ್‌ ಆಗಿದ್ದ ಅವನು ಇನ್ನೊಬ್ಬ ವ್ಯಕ್ತಿಯೊಂದಿಗೆ ಭೇಟಿ ಏರ್ಪಡಿಸಿದ. ಆ ವ್ಯಕ್ತಿ ಪಾದ್ರಿಯಾಗಲು ಕಲಿಯುತ್ತಿದ್ದ ಕಾರಣ ಮೊದಲಿಗೆ ನಾನು ಸ್ವಲ್ಪ ಅಂಜಿದೆ. ಆದರೆ ವಿಗ್ರಹಾರಾಧನೆಯನ್ನು ಹಾಗೂ ಪಾದ್ರಿಗಳೆಂಬ ಬಿರುದಿನಿಂದ ವ್ಯಕ್ತಿಗಳನ್ನು ಸಂಬೋಧಿಸುವುದನ್ನು ದೇವರು ಇಷ್ಟಪಡುವುದಿಲ್ಲ ಎಂದು ಮತ್ತಾಯ 23:9, 10 ಹಾಗೂ ಕೀರ್ತನೆ 115:4-8ರಲ್ಲಿ ಓದಿದ್ದು ನನಗೆ ನೆನಪಿತ್ತು. ಅದು ನನ್ನ ಹೊಸ ನಂಬಿಕೆಯನ್ನು ಸಮರ್ಥಿಸಲು ಧೈರ್ಯ ಕೊಟ್ಟಿತು. ಫಲಿತಾಂಶ, ನೊಯೆಲ್‌ ಸತ್ಯ ಸ್ವೀಕರಿಸಿದ. ಅವನು ಇಂದಿನ ವರೆಗೂ ನಂಬಿಗಸ್ತ ಸಾಕ್ಷಿಯಾಗಿದ್ದಾನೆ.

ನಾನು ನನ್ನ ಅಕ್ಕನನ್ನು ಸಹ ಭೇಟಿಯಾದೆ. ನನ್ನ ಭಾವ ಮಾಂತ್ರಿಕ ಪುಸ್ತಕಗಳನ್ನು ಇಟ್ಟುಕೊಂಡಿದ್ದರು ಹಾಗೂ ದೆವ್ವಗಳ ಕಾಟಕ್ಕೆ ತುತ್ತಾಗಿದ್ದರು. ಆರಂಭದಲ್ಲಿ ನನ್ನ ಶಕ್ತಿಯೆಲ್ಲ ಇಂಗಿಹೋದಂತೆ ಅನಿಸಿತು. ಆದರೆ ಇಬ್ರಿಯ 1:14ರಂಥ ವಚನಗಳು ದೇವದೂತರು ನನಗೆ ಬೆಂಬಲ ನೀಡುವರೆಂಬ ವಿಶ್ವಾಸ ಮೂಡಿಸಿದವು. ನನ್ನ ಭಾವ ಬೈಬಲ್‌ ಸಲಹೆಗಳನ್ನು ಅನ್ವಯಿಸಿ ಮಂತ್ರತಂತ್ರಗಳಿಂದ ಸಂಪೂರ್ಣ ಸಂಬಂಧ ಕಡಿದುಕೊಂಡಾಗ ದೆವ್ವದ ಕಾಟದಿಂದ ಮುಕ್ತಿ ಪಡೆದರು. ಅಕ್ಕ-ಭಾವ ಇಬ್ಬರು ಹುರುಪಿನ ಸಾಕ್ಷಿಗಳಾದರು.

1947ನೇ ಇಸವಿಯಲ್ಲಿ ಅಮೆರಿಕದ ಆರ್ಥರ್‌ ಎಮ್ಯಾಟ್‌ ಎಂಬ ಸಾಕ್ಷಿಯೊಬ್ಬರು ನಮ್ಮ ಮನೆಗೆ ಭೇಟಿಯಿತ್ತರು. ನನಗಾದ ಆನಂದಕ್ಕೆ ಪಾರವೇ ಇರಲಿಲ್ಲ. ನಾನು ಕೂಟದ ಸ್ಥಳದ ಬಗ್ಗೆ ಅವರನ್ನು ವಿಚಾರಿಸಿದೆ. ಸುಮಾರು 10 ಕಿ.ಮೀ. ದೂರದ ಲ್ಯೇವನ್‌ ಎಂಬಲ್ಲಿ ಒಂದು ಗುಂಪು ಕೂಟವಾಗಿ ಕೂಡಿಬರುತ್ತಿರುವ ಕುರಿತು ಅವರು ತಿಳಿಸಿದರು. ಸೈಕಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರದಿದ್ದ ಆ ಸಮಯದಲ್ಲಿ, ಹಲವಾರು ತಿಂಗಳು ನಾನು ಕಾಲ್ನಡಿಗೆಯಲ್ಲೇ ಕೂಟಗಳಿಗೆ ಹೋಗಿಬರುತ್ತಿದ್ದೆ. ಫ್ರಾನ್ಸ್‌ನಲ್ಲಿ ಯೆಹೋವನ ಸಾಕ್ಷಿಗಳ ಕೆಲಸಕ್ಕೆ 8 ವರ್ಷಗಳಿಂದ ನಿಷೇಧ ಹೇರಲಾಗಿತ್ತು. ಆಗ ಇಡೀ ದೇಶದಲ್ಲಿ ಕೇವಲ 2,380 ಸಾಕ್ಷಿಗಳು ಮಾತ್ರ ಇದ್ದರು. ಹೆಚ್ಚಿನವರು ಪೋಲೆಂಡಿನ ವಲಸೆಗಾರರಾಗಿದ್ದರು. ಇಸವಿ 1947ರ ಸೆಪ್ಟೆಂಬರ್‌ 1ರಂದು ನಮ್ಮ ಕೆಲಸದ ಮೇಲಿನ ನಿಷೇಧವನ್ನು ಹಿಂಪಡೆಯಲಾಯಿತು. ಕೂಡಲೆ ಪ್ಯಾರಿಸಿನ ವೀಲಾ ಗೀಬರ್‌ ಎಂಬಲ್ಲಿ ಬ್ರಾಂಚ್‌ ಆಫೀಸ್‌ ಮರುಸ್ಥಾಪನೆಗೊಂಡಿತು. ಇಡೀ ಫ್ರಾನ್ಸ್‌ನಲ್ಲಿ ಒಬ್ಬರೇ ಒಬ್ಬರು ಪಯನೀಯರ್‌ ಇಲ್ಲದ ಕಾರಣ 1947ರ ಡಿಸೆಂಬರ್‌ ತಿಂಗಳ ಇನ್‌ಫಾರ್ಮಂಟ್‌ (ಈಗ ನಮ್ಮ ರಾಜ್ಯ ಸೇವೆ) ಆವೃತ್ತಿಯಲ್ಲಿ ರೆಗ್ಯುಲರ್‌ ಪಯನೀಯರ್‌ ಸೇವೆಗೆ ಕರೆ ನೀಡಲಾಯಿತು. ಆವಾಗ ಪಯನೀಯರರು ತಿಂಗಳಿಗೆ 150 ತಾಸುಗಳನ್ನು ಮಾಡಬೇಕಿತ್ತು. (1949ರಲ್ಲಿ ಅದನ್ನು 100 ತಾಸುಗಳಿಗೆ ಇಳಿಸಲಾಯಿತು.) “[ದೇವರ] ವಾಕ್ಯವೇ ಸತ್ಯವು” ಎಂದು ಯೋಹಾನ 17:17ರಲ್ಲಿ ದಾಖಲಾಗಿರುವ ಯೇಸುವಿನ ಮಾತುಗಳಿಗೆ ಸಂಪೂರ್ಣ ಸಮ್ಮತ್ತಿ ಸೂಚಿಸುತ್ತಾ ನಾನು 1948ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ. 1949ರ ಡಿಸೆಂಬರ್‌ನಲ್ಲಿ ಪಯನೀಯರ್‌ ಸೇವೆ ಆರಂಭಿಸಿದೆ.

ಜೈಲಿನಿಂದ ಮರಳಿ ಡನ್‌ಕಿರ್ಕ್‌ ಪಟ್ಟಣಕ್ಕೆ

ನನಗೆ ಸಿಕ್ಕಿದ ಮೊದಲ ನೇಮಕ ದಕ್ಷಿಣ ಫ್ರಾನ್ಸ್‌ನ ಆಸೇ ಎಂಬಲ್ಲಿಗೆ. ಅಲ್ಲಿ ನಾನು ಬಹಳ ದಿನ ಸೇವೆ ಮುಂದುವರಿಸಲಾಗಲಿಲ್ಲ. ನಾನು ಗಣಿ ಕೆಲಸವನ್ನು ಬಿಟ್ಟದ್ದರಿಂದ ಮಿಲಿಟರಿ ಸೇವೆಗೆ ಸೇರುವುದು ಕಡ್ಡಾಯವಾಗಿತ್ತು. ಅದಕ್ಕೆ ಒಪ್ಪದ ಕಾರಣ ನನ್ನನ್ನು ಜೈಲಿಗೆ ಹಾಕಲಾಯಿತು. ಅಲ್ಲಿ ಬೈಬಲನ್ನು ಇಟ್ಟುಕೊಳ್ಳಲು ಅನುಮತಿ ಇಲ್ಲದಿದ್ದರೂ ಹೇಗೋ ಕೀರ್ತನೆ ಪುಸ್ತಕದ ಕೆಲವು ಪುಟಗಳನ್ನು ನಾನು ಪಡೆದುಕೊಂಡಿದ್ದೆ. ಅವನ್ನು ಓದುವುದು ನನ್ನಲ್ಲಿ ನವಚೈತನ್ಯ ತುಂಬುತ್ತಿತ್ತು. ಜೈಲಿನಿಂದ ಬಿಡುಗಡೆಯಾದಾಗ ನಾನೊಂದು ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಏಕೆಂದರೆ ಜೀವನದಲ್ಲಿ ನಾನೀಗ ನೆಲೆಯೂರಬೇಕಾದರೆ ಪೂರ್ಣಸಮಯದ ಸೇವೆಯನ್ನು ನಿಲ್ಲಿಸಬೇಕಿತ್ತು. ಈ ಬಾರಿಯೂ ಬೈಬಲ್‌ ವಚನ ನನ್ನ ಸಹಾಯಕ್ಕೆ ಬಂತು. ಫಿಲಿಪ್ಪಿ 4:11-13ರಲ್ಲಿ ಪೌಲನು “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ” ಎಂದು ಹೇಳಿದ ಮಾತಿನ ಕುರಿತು ನಾನು ಮನನಮಾಡಿದೆ. ಪಯನೀಯರ್‌ ಸೇವೆ ಮುಂದುವರಿಸುವ ನಿರ್ಣಯ ತೆಗೆದುಕೊಳ್ಳಲು ಇದು ನನಗೆ ಸಹಾಯಮಾಡಿತು. 1950ರಲ್ಲಿ ಡನ್‌ಕಿರ್ಕ್‌ ಪಟ್ಟಣದಲ್ಲಿ ಸೇವೆ ಮಾಡುವ ಹೊಸ ನೇಮಕ ಸಿಕ್ಕಿತು. ಈ ಮೊದಲು ನಾನಲ್ಲಿ ಸುವಾರ್ತೆ ಸಾರಿದ್ದೆ.

ನಾನಲ್ಲಿ ಬಂದಿಳಿದಾಗ ನನ್ನ ಬಳಿ ಏನೂ ಇರಲಿಲ್ಲ. 2ನೇ ಮಹಾಯುದ್ಧದ ಹಾನಿಯಿಂದ ಆ ಪಟ್ಟಣ ಇನ್ನೂ ಚೇತರಿಸಿಕೊಂಡಿರಲಿಲ್ಲ. ವಸತಿ ಕಂಡುಕೊಳ್ಳುವುದು ದುಸ್ತರವಾಗಿತ್ತು. ಈ ಹಿಂದೆ ನಾನು ಸುವಾರ್ತೆ ಸಾರುತ್ತಿದ್ದಾಗ ಎಷ್ಟೋ ಸಾರಿ ಭೇಟಿಯಾದ ಒಂದು ಕುಟುಂಬ ಅಲ್ಲಿತ್ತು. ಅವರನ್ನು ಭೇಟಿಯಾಗಲು ನಾನು ನಿರ್ಧರಿಸಿದೆ. ಮನೆಯೊಡತಿ ನನ್ನನ್ನು ಸಂತೋಷದಿಂದ ಬರಮಾಡಿಕೊಂಡರು. “ಓ, ಮಿಸ್ಟರ್‌ ಲರ್ವೆ, ನಿಮಗೆ ಬಿಡುಗಡೆಯಾಯಿತೆಂದು ಕೇಳಿ ಸಂತೋಷವಾಯ್ತು. ನಿಮ್ಮಂಥ ಜನರೇ ಈ ಪ್ರಪಂಚದಲ್ಲಿ ಇರುತ್ತಿದ್ದರೆ ಯುದ್ಧ ನಡೀತಾನೇ ಇರಲಿಲ್ಲ ಅಂತ ನಮ್ಮ ಯಜಮಾನ್ರು ಯಾವಾಗಲೂ ಹೇಳ್ತಾರೆ” ಎಂದು ಉತ್ಸಾಹದಿಂದ ನುಡಿದರು. ಅವರಿಗೆ ಒಂದು ಗೆಸ್ಟ್‌ಹೌಸ್‌ ಇತ್ತು. ಟೂರಿಸ್ಟ್‌ ಸೀಸನ್‌ ಪ್ರಾರಂಭವಾಗುವ ವರೆಗೆ ಅಲ್ಲಿ ತಂಗಬಹುದೆಂದು ಹೇಳಿದರು. ಅದೇ ದಿನ ಆರ್ಥರ್‌ ಎಮ್ಯಾಟ್‌ರ ಅಣ್ಣ ಏವನ್ಸ್‌ ನನಗೆ ಕೆಲಸ ಕೊಡಿಸಿದರು. * ಬಂದರಿನಲ್ಲಿ ಅನುವಾದಕರಾಗಿದ್ದ ಅವರು ಹಡಗೊಂದನ್ನು ರಾತ್ರಿ ಕಾಯಲು ವಾಚ್‌ಮನ್‌ಗಾಗಿ ಹುಡುಕುತ್ತಿದ್ದರು. ನನ್ನನ್ನು ಅವರು ಹಡಗಿನ ಅಧಿಕಾರಿಯೊಬ್ಬರ ಬಳಿ ಕರೆದುಕೊಂಡು ಹೋದರು. ಜೈಲಿನಿಂದ ಈಗಷ್ಟೇ ಬಿಡುಗಡೆ ಹೊಂದಿದ್ದ ನಾನು ಸಣಕಲು ಕಡ್ಡಿಯಾಗಿಬಿಟ್ಟಿದ್ದೆ. ಅದಕ್ಕೆ ಕಾರಣವನ್ನು ಏವನ್ಸ್‌ ಆ ಅಧಿಕಾರಿಗೆ ವಿವರಿಸಿದಾಗ ತಮ್ಮ ಫ್ರಿಡ್ಜ್‌ನಿಂದ ಆಹಾರ ತೆಗೆದುಕೊಳ್ಳುವಂತೆ ಆ ಅಧಿಕಾರಿ ಹೇಳಿದರು. ಒಂದೇ ದಿನದಲ್ಲಿ ವಸತಿ, ನೌಕರಿ, ಆಹಾರ ಸಿಕ್ಕಿತು! ಮತ್ತಾಯ 6:25ರಿಂದ 33ರಲ್ಲಿನ ಯೇಸುವಿನ ಮಾತುಗಳಲ್ಲಿ ನನ್ನ ಭರವಸೆ ಇಮ್ಮಡಿಯಾಯಿತು.

ಟೂರಿಸ್ಟ್‌ ಸೀಸನ್‌ ಪ್ರಾರಂಭವಾದಾಗ ನಾನು ಮತ್ತು ನನ್ನ ಪಯನೀಯರ್‌ ಜೊತೆಗಾರ ಸೀಮಾನ್‌ ಅಪಾಲೀನಾಸ್ಕೀ ಬೇರೆ ವಸತಿ ಹುಡುಕಬೇಕಾಯಿತು. ಏನೇ ಆದರೂ ನಮ್ಮ ನೇಮಕವನ್ನು ಕೈಬಿಡದಿರುವ ದೃಢತೀರ್ಮಾನ ನಮ್ಮದಾಗಿತ್ತು. ಕುದುರೆಲಾಯವೊಂದರಲ್ಲಿ ತಂಗಲು ನಮಗೆ ಅನುಮತಿ ಸಿಕ್ಕಿತು. ನಾವು ಹುಲ್ಲು ಹಾಸಿಗೆಯಲ್ಲಿ ಮಲಗುತ್ತಿದ್ದೆವು. ಹಗಲು ಮೂಡಿದ ಕೂಡಲೆ ಸೇವೆಯಲ್ಲಿ ತಲ್ಲೀನರಾಗುತ್ತಿದ್ದೆವು. ಕುದುರೆಲಾಯದ ಮಾಲೀಕನಿಗೆ ಸಾಕ್ಷಿ ನೀಡಿದೆವು. ಸತ್ಯವನ್ನು ಸ್ವೀಕರಿಸಿದ ಅನೇಕರಲ್ಲಿ ಅವರೂ ಒಬ್ಬರು. ಸ್ವಲ್ಪದರಲ್ಲೇ ಸ್ಥಳೀಯ ವಾರ್ತಾಪತ್ರಿಕೆಯೊಂದು ಡನ್‌ಕಿರ್ಕ್‌ ಪಟ್ಟಣದವರನ್ನು ಎಚ್ಚರಿಸುವ ಒಂದು ಲೇಖನ ಛಾಪಿಸಿತು. ಯೆಹೋವನ ಸಾಕ್ಷಿಗಳ ಕಾರ್ಯಚಟುವಟಿಕೆಗಳ ಬಗ್ಗೆ ತಪ್ಪಾಗಿ ಬರೆಯಲಾಗಿತ್ತು. ಆ ಸಮಯದಲ್ಲಿ ನಾನು, ಸೀಮಾನ್‌ ಹಾಗೂ ಬೆರಳೆಣಿಕೆಯಷ್ಟು ಪ್ರಚಾರಕರು ಇದ್ದೆವಷ್ಟೆ! ಸಂಕಷ್ಟಗಳು ಎದುರಾದಾಗೆಲ್ಲ ನಮ್ಮ ಕ್ರೈಸ್ತ ನಿರೀಕ್ಷೆಯ ಕುರಿತು ಹಾಗೂ ಯೆಹೋವ ದೇವರು ನಮ್ಮನ್ನು ನೋಡಿಕೊಂಡ ರೀತಿಯ ಕುರಿತು ಮನನ ಮಾಡುತ್ತಿದ್ದೆವು. ಅದು ನಮ್ಮಲ್ಲಿ ಸ್ಫೂರ್ತಿ ತುಂಬುತ್ತಿತ್ತು. 1952ರಲ್ಲಿ ನನ್ನ ನೇಮಕ ಬದಲಾಗುವಷ್ಟಕ್ಕೆ ಡನ್‌ಕಿರ್ಕ್‌ನಲ್ಲಿ ಸುಮಾರು 30 ಪ್ರಚಾರಕರು ಇದ್ದರು.

ಹೊಸ ಜವಾಬ್ದಾರಿಗಳನ್ನು ಹೊರಲು ಬಲ ಸಿಕ್ಕಿತು

ಅಮೆಯನ್ಸ್‌ ನಗರದಲ್ಲಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದ ನಂತರ ಪ್ಯಾರಿಸಿನ ಹೊರವಲಯದ ಬೂಲಾನ್‌ ಬಿಯಾಂಕೂ ಎಂಬಲ್ಲಿಗೆ ವಿಶೇಷ ಪಯನೀಯರನಾಗಿ ನೇಮಕಗೊಂಡೆ. ಅಲ್ಲಿ ಅನೇಕರೊಂದಿಗೆ ಬೈಬಲ್‌ ಅಧ್ಯಯನ ಮಾಡಿದೆ. ಅವರಲ್ಲಿ ಕೆಲವರು ನಂತರ ಪೂರ್ಣಸಮಯ ಹಾಗೂ ಮಿಷನೆರಿ ಸೇವೆಯನ್ನು ಕೈಗೆತ್ತಿಕೊಂಡರು. ಗೀ ಮೇಬಲಾ ಎಂಬ ತರುಣ ಸತ್ಯ ಸ್ವೀಕರಿಸಿ ಸರ್ಕಿಟ್‌ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸಿ ನಂತರ ಜಿಲ್ಲಾ ಮೇಲ್ವಿಚಾರಕನಾದ. ತರುವಾಯ ಪ್ಯಾರಿಸಿನಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಲೂವ್ಯೇ ಎಂಬಲ್ಲಿರುವ ಈಗಿನ ಬೆತೆಲ್‌ ಸೌಕರ್ಯದಲ್ಲಿ ಪ್ರಿಂಟರಿ ಕಟ್ಟಡ ನಿರ್ಮಾಣದ ಯೋಜನೆಯ ಮೇಲುಸ್ತುವಾರಿ ವಹಿಸಿದ. ಸೇವೆಯಲ್ಲಿ ಮೇಲಿಂದ ಮೇಲೆ ಬೈಬಲನ್ನು ಉಪಯೋಗಿಸಿದ್ದು ದೇವರ ವಾಕ್ಯವನ್ನು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಸಿತು. ಅಲ್ಲದೆ, ಕಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿ ಆನಂದ ನೀಡಿತು.

1953ರಲ್ಲಿ ಅಲ್ಸಾಸ್‌ ಲೆರೈನ್‌ ಎಂಬ ಪ್ರದೇಶದಲ್ಲಿ ಸರ್ಕಿಟ್‌ ಮೇಲ್ವಿಚಾರಕನಾಗಿ ನೇಮಕಗೊಂಡೆ. ಅದೊಂದು ಅನಿರೀಕ್ಷಿತ ನೇಮಕ. ಆ ಪ್ರದೇಶ 1871ರಿಂದ 1945ರೊಳಗೆ ಎರಡು ಬಾರಿ ಜರ್ಮನಿಯ ಆಕ್ರಮಣಕ್ಕೆ ತುತ್ತಾಗಿತ್ತು. ಹಾಗಾಗಿ ನಾನು ಜರ್ಮನ್‌ ಭಾಷೆ ಕಲಿಯುವುದು ಅನಿವಾರ್ಯವಾಗಿತ್ತು. ನಾನು ಸರ್ಕಿಟ್‌ ಕೆಲಸ ಆರಂಭಿಸಿದಾಗ ಆ ಪ್ರದೇಶದಲ್ಲಿ ಕಾರು, ಟಿವಿ ಹಾಗೂ ಟೈಪ್‌ರೈಟರ್‌ಗಳು ವಿರಳವಾಗಿದ್ದವು. ರೇಡಿಯೋ, ಕಂಪ್ಯೂಟರ್‌ ಇರಲೇ ಇಲ್ಲ. ಆದರೆ ನನ್ನ ಜೀವನ ನೀರಸವಾಗಿರಲಿಲ್ಲ, ತೃಪ್ತಿಯಿತ್ತು. ನಿಜ ಹೇಳಬೇಕೆಂದರೆ ತುಂಬಾನೇ ಸಂತೋಷವಿತ್ತು. ಇಂದಿನಷ್ಟು ಅಪಕರ್ಷಣೆಗಳು ಅಂದಿರಲಿಲ್ಲ. ಕಣ್ಣನ್ನು “ಸರಳವಾಗಿ” ಇಟ್ಟುಕೊಳ್ಳಬೇಕೆಂಬ ಬೈಬಲ್‌ ಸಲಹೆಯನ್ನು ಪಾಲಿಸುವುದು ಅಂದು ಸುಲಭವಾಗಿತ್ತು.—ಮತ್ತಾ. 6:19-22.

1955ರಲ್ಲಿ ಪ್ಯಾರೀಸ್‌ನಲ್ಲಿ ನಡೆದ “ವಿಜಯಿ ರಾಜ್ಯ” ಎಂಬ ಸಮ್ಮೇಳನ ನನ್ನ ಮನದಲ್ಲಿ ಮಾಸದೆ ಉಳಿದಿದೆ. ನನ್ನ ಭಾವೀ ಸಂಗಾತಿಯನ್ನು ಭೇಟಿಯಾದದ್ದು ಸಹ ಆ ಸಂದರ್ಭದಲ್ಲೇ. ಆಕೆಯ ಹೆಸರು ಈರೆನ್‌ ಕೋಲಾನ್‌ಸ್ಕೀ. ಆಕೆ ನನಗಿಂತ ಒಂದು ವರ್ಷದ ಮುಂಚೆ ಪೂರ್ಣಸಮಯದ ಸೇವೆ ಪ್ರಾರಂಭಿಸಿದ್ದಳು. ಪೋಲೆಂಡ್‌ನವರಾಗಿದ್ದ ಆಕೆಯ ಹೆತ್ತವರು ಹುರುಪಿನ ಸಾಕ್ಷಿಗಳಾಗಿದ್ದರು. ಅನೇಕ ವರ್ಷಕಾಲ ಸೇವೆಸಲ್ಲಿಸಿದ್ದರು. ಅವರಿಗೆ ಸತ್ಯ ಸಿಕ್ಕಿದ್ದು ಫ್ರಾನ್ಸಿನಲ್ಲಿ ಅಡಾಲ್ಫ್‌ ವೇಬರ್‌ರವರ ಮೂಲಕ. ಸಹೋದರ ರಸಲ್‌ರ ತೋಟಗಾರರಾಗಿದ್ದ ವೇಬರ್‌ ಸುವಾರ್ತೆ ಸಾರಲು ಯೂರೋಪ್‌ಗೆ ಬಂದಿದ್ದರು. ನಾನು ಈರೆನ್‌ಳನ್ನು 1956ರಲ್ಲಿ ವಿವಾಹವಾದೆ. ಆಕೆ ಸರ್ಕಿಟ್‌ ಕೆಲಸದಲ್ಲಿ ನನ್ನೊಂದಿಗೆ ಜೊತೆಗೂಡಿದಳು. ಬಾಳಸಂಗಾತಿಯಾಗಿ ಆಕೆ ನನಗೆ ಕೊಡುತ್ತಿರುವ ಬೆಂಬಲಕ್ಕೆ ನಾನು ಚಿರಋಣಿ.

ಎರಡು ವರ್ಷಗಳ ನಂತರ ನನಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಜಿಲ್ಲಾ ಮೇಲ್ವಿಚಾರಕನಾಗಿ ನೇಮಕಗೊಂಡೆ. ಅರ್ಹತೆಯುಳ್ಳ ಸಹೋದರರ ಕೊರತೆಯಿದ್ದ ಕಾರಣ ನಾನು ಸ್ವಲ್ಪ ಸಮಯದ ವರೆಗೆ ಸರ್ಕಿಟ್‌ ಕೆಲಸವನ್ನೂ ನೋಡಿಕೊಳ್ಳಬೇಕಾಯಿತು. ಆ ಸಮಯ ತುಂಬಾನೇ ಬ್ಯುಸಿ ಆಗಿತ್ತು. ತಿಂಗಳಿಗೆ 100 ತಾಸು ಮಾಡಬೇಕಾಗಿತ್ತಲ್ಲದೆ ಪ್ರತಿವಾರ ಭಾಷಣಗಳನ್ನು ಕೊಡಬೇಕಾಗಿತ್ತು. ಮೂರು ಮೂರು ಪುಸ್ತಕ ಅಧ್ಯಯನ ಗುಂಪುಗಳನ್ನು ಭೇಟಿಮಾಡಬೇಕಿತ್ತು. ದಾಖಲೆಗಳನ್ನು ಪರಿಶೀಲಿಸಬೇಕಿತ್ತು. ವರದಿಗಳನ್ನು ಸಿದ್ಧಪಡಿಸಬೇಕಿತ್ತು. ಇವೆಲ್ಲದರ ಮಧ್ಯೆ ದೇವರ ವಾಕ್ಯವನ್ನು ಓದಲು ಹೇಗೆ ಸಮಯ ಮಾಡಿಕೊಂಡೆ ಗೊತ್ತೆ? ಇದ್ದದ್ದು ಒಂದೇ ಉಪಾಯ. ನನ್ನ ಹಳೆಯ ಬೈಬಲಿನಿಂದ ಕೆಲವು ಪುಟಗಳನ್ನು ಕತ್ತರಿಸಿ ಇಟ್ಟುಕೊಳ್ಳುತ್ತಿದ್ದೆ. ಇತರರಿಗಾಗಿ ಕಾಯುವಾಗ ಆ ಪುಟಗಳನ್ನು ತೆಗೆದು ಓದುತ್ತಿದ್ದೆ. ಕೆಲವೇ ಕ್ಷಣವಾದರೂ ಅಂಥ ಸಂದರ್ಭದಲ್ಲಿ ದೊರೆಯುತ್ತಿದ್ದ ಆಧ್ಯಾತ್ಮಿಕ ಚೈತನ್ಯ ನನ್ನ ನೇಮಕವನ್ನು ಮುಂದುವರಿಸುವ ನನ್ನ ದೃಢತೀರ್ಮಾನವನ್ನು ಬಲಪಡಿಸಿತು.

1967ರಲ್ಲಿ ಬೂಲಾನ್‌ ಬಿಯಾಂಕೂನಲ್ಲಿರುವ ಬೆತೆಲ್‌ ಕುಟುಂಬದ ಖಾಯಂ ಸದಸ್ಯರಾಗುವ ಆಹ್ವಾನ ನಮಗೆ ಸಿಕ್ಕಿತು. ನಾನು ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಸೇವೆ ಮಾಡಲಾರಂಭಿಸಿದೆ. ನಲ್ವತ್ತಕ್ಕಿಂತಲು ಹೆಚ್ಚು ವರ್ಷಗಳು ಸಂದಿವೆಯಾದರೂ ಅದೇ ಸುಯೋಗದಲ್ಲಿ ಮುಂದುವರಿಯುತ್ತಿದ್ದೇನೆ. ನನ್ನ ಈ ಕೆಲಸದಲ್ಲಿ ನಾನು ತುಂಬಾ ಇಷ್ಟಪಡುವ ಒಂದು ವಿಷಯವಿದೆ. ಬೈಬಲ್‌ ಸಂಬಂಧವಾಗಿ ಅನೇಕರು ಬರೆದು ಕಳುಹಿಸುವ ಪ್ರಶ್ನೆಗಳಿಗೆ ಉತ್ತರ ನೀಡುವುದು. ದೇವರ ವಾಕ್ಯವನ್ನು ಆಳವಾಗಿ ಅಗೆದು “ಸುವಾರ್ತೆಯನ್ನು ಸಮರ್ಥಿಸಿ” ತುಂಬಾ ತೃಪ್ತಿಪಡುತ್ತೇನೆ. (ಫಿಲಿ. 1:7) ಬೆತೆಲಿನಲ್ಲಿ ಬೆಳಿಗ್ಗೆ ದಿನವಚನ ಪರಿಗಣಿಸುವ ಸಮಯದಲ್ಲಿ ಬೈಬಲಾಧರಿತ ಚರ್ಚೆ ನಡೆಸುವ ಸುಯೋಗದಲ್ಲೂ ಸಂತೋಷಿಸುತ್ತೇನೆ. 1976ರಲ್ಲಿ ಫ್ರಾನ್ಸ್‌ನ ಬ್ರಾಂಚ್‌ ಕಮಿಟಿ ಸದಸ್ಯನಾಗಿ ನೇಮಕಗೊಂಡೆ.

ಉತ್ಕೃಷ್ಟ ಜೀವನ ಮಾರ್ಗ

ಈ ಹಿಂದೆ ಅನೇಕ ಕಷ್ಟಪರೀಕ್ಷೆಗಳನ್ನು ಎದುರಿಸಿರುವುದಾದರೂ ಎಲ್ಲದಕ್ಕಿಂತ ಅತಿದೊಡ್ಡ ಸವಾಲೆಂದರೆ ವೃದ್ಧಾಪ್ಯ ಹಾಗೂ ಆರೋಗ್ಯ ಸಮಸ್ಯೆ. ಏಕೆಂದರೆ ನಮಗೆ ಈಗ ಮುಂಚಿನಷ್ಟು ಸೇವೆ ಮಾಡಲಾಗುತ್ತಿಲ್ಲ. ಹಾಗಿದ್ದರೂ, ದೇವರ ವಾಕ್ಯವನ್ನು ಒಟ್ಟಿಗೆ ಓದಿ ಅಧ್ಯಯನ ಮಾಡುವುದು ನಮ್ಮ ನಿರೀಕ್ಷೆಯನ್ನು ಸಜೀವವಾಗಿಟ್ಟಿದೆ. ಈ ನಿರೀಕ್ಷೆಯನ್ನು ಹಂಚಿಕೊಳ್ಳಲಿಕ್ಕಾಗಿ ನಾವು ಬಸ್ಸಿನಲ್ಲಿ ಪ್ರಯಾಣಿಸಿ ಟೆರಿಟೊರಿಯನ್ನು ತಲುಪುತ್ತೇವೆ. ಅದರಲ್ಲೂ ಆನಂದವಿದೆ. ನಾವಿಬ್ಬರೂ ಸೇರಿ ಪೂರ್ಣಸಮಯದ ಸೇವೆಯಲ್ಲಿ ಒಟ್ಟು 120 ವರ್ಷ ಕಳೆದಿದ್ದೇವೆ. ಈ ಅನುಭವ ಅವಿಸ್ಮರಣೀಯ. ಬದುಕು ಆನಂದಮಯ, ಉಪಯುಕ್ತ, ಸುಂದರ ಆಗಿರಬೇಕಾದರೆ ಪೂರ್ಣಸಮಯದ ಸೇವೆಯನ್ನೇ ಆರಿಸಿಕೊಳ್ಳಬೇಕು. ಕೀರ್ತನೆ 37:25ರ ಮಾತುಗಳನ್ನು ಬರೆದಾಗ ರಾಜ ದಾವೀದನು ‘ವೃದ್ಧನಾಗಿದ್ದನು.’ ಅವನಂತೆ ನಾನೂ “ನೀತಿವಂತನು ದಿಕ್ಕಿಲ್ಲದೆ” ಬಿದ್ದಿರುವುದನ್ನು ನೋಡಿಲ್ಲ.

ಜೀವನಪರ್ಯಂತ ಯೆಹೋವನು ತನ್ನ ವಾಕ್ಯದ ಮೂಲಕ ನನ್ನನ್ನು ಬಲಪಡಿಸಿದ್ದಾನೆ. ನಾನು ಬೈಬಲನ್ನು ಬದುಕಿನುದ್ದಕ್ಕೂ ಓದಬೇಕಾಗುತ್ತದೆ ಎಂದು ನನ್ನ ಸಂಬಂಧಿಕರು 60 ವರ್ಷಗಳ ಹಿಂದೆ ನುಡಿದಿದ್ದರು. ಅದು ನಿಜ. ಬೈಬಲ್‌ ವಾಚನ ನನ್ನ ದಿನನಿತ್ಯದ ರೂಢಿಯಾಗಿದೆ. ಅದಕ್ಕಾಗಿ ಒಮ್ಮೆಯೂ ವಿಷಾದಿಸಿಲ್ಲ!

[ಪಾದಟಿಪ್ಪಣಿಗಳು]

^ ಪ್ಯಾರ. 8 1944ರಲ್ಲಿ ಪ್ರಕಾಶಿಸಲಾಗಿತ್ತು, ಈಗ ಮುದ್ರಣ ಇಲ್ಲ.

^ ಪ್ಯಾರ. 14 ಏವನ್ಸ್‌ ಎಮ್ಯಾಟ್‌ರ ಕುರಿತು ಹೆಚ್ಚು ಮಾಹಿತಿ ತಿಳಿದುಕೊಳ್ಳಲು 1999, ಜನವರಿ 1ರ ಕಾವಲಿನಬುರುಜು ಪುಟ 22 ಮತ್ತು 23 ನೋಡಿ.

[ಪುಟ 5ರಲ್ಲಿರುವ ಚಿತ್ರ]

ಸೀಮಾನ್‌ ಜೊತೆ ನಾನು

[ಪುಟ 5ರಲ್ಲಿರುವ ಚಿತ್ರ]

ಜಿಲ್ಲಾ ಮೇಲ್ವಿಚಾರಕನಾಗಿ ಸೇವೆ ಮಾಡುತ್ತಿದ್ದಾಗ

[ಪುಟ 5ರಲ್ಲಿರುವ ಚಿತ್ರ]

ನನ್ನ ಮೊದಲ ಬೈಬಲ್‌ ಈ ಬೈಬಲಿನಂತೆ ಇತ್ತು

[ಪುಟ 6ರಲ್ಲಿರುವ ಚಿತ್ರ]

ನಮ್ಮ ಮದುವೆ ಫೋಟೋ

[ಪುಟ 6ರಲ್ಲಿರುವ ಚಿತ್ರ]

ಈರೆನ್‌ ನಾನೂ ದೇವರ ವಾಕ್ಯದ ಅಧ್ಯಯನದಲ್ಲಿ ಹರ್ಷಿಸುತ್ತೇವೆ