ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನೇ ನಿಮ್ಮ ಪಾಲೆಂದು ತೋರಿಸುತ್ತೀರೋ?

ಯೆಹೋವನೇ ನಿಮ್ಮ ಪಾಲೆಂದು ತೋರಿಸುತ್ತೀರೋ?

ಯೆಹೋವನೇ ನಿಮ್ಮ ಪಾಲೆಂದು ತೋರಿಸುತ್ತೀರೋ?

“ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ; ಆಗ ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು.”—ಮತ್ತಾ. 6:33.

1, 2. (ಎ) ಗಲಾತ್ಯ 6:16ರಲ್ಲಿ ತಿಳಿಸಲಾಗಿರುವ ‘ದೇವರ ಇಸ್ರಾಯೇಲ್ಯರು’ ಯಾರು? (ಬಿ) ಮತ್ತಾಯ 19:28 ತಿಳಿಸುವ ‘ಇಸ್ರಾಯೇಲಿನ ಹನ್ನೆರಡು ಕುಲದವರು’ ಯಾರು?

ಬೈಬಲ್‌ನಲ್ಲಿ ಇಸ್ರಾಯೇಲ್‌ ಎಂಬ ಹೆಸರನ್ನು ಓದಿದಾಗ ನಿಮಗೆ ಯಾರ ನೆನಪಾಗುತ್ತದೆ? ಇಸ್ರಾಯೇಲ್‌ ಎಂದು ದೇವರಿಂದ ಹೆಸರು ಪಡೆದುಕೊಂಡ ಯಾಕೋಬನ ನೆನಪಾಗುತ್ತಾ? ಅಥವಾ ಆತನ ಸಂತತಿಯವರಾದ ಇಸ್ರಾಯೇಲ್‌ ಜನಾಂಗ ಮನಸ್ಸಿಗೆ ಬರುತ್ತಾ? ಬೈಬಲ್‌ ಆಧ್ಯಾತ್ಮಿಕ ಇಸ್ರಾಯೇಲ್ಯರ ಅಥವಾ “ದೇವರ ಇಸ್ರಾಯೇಲ್ಯರ” ಕುರಿತು ಸಹ ಮಾತಾಡುತ್ತದೆ. ಅವರ ಸಂಖ್ಯೆ 1,44,000 ಆಗಿದ್ದು, ಸ್ವರ್ಗದಲ್ಲಿ ರಾಜರಾಗಲು ಮತ್ತು ಯಾಜಕರಾಗಲು ಪವಿತ್ರಾತ್ಮದಿಂದ ಅಭಿಷೇಕಗೊಂಡಿದ್ದಾರೆ. (ಗಲಾ. 6:16; ಪ್ರಕ. 7:4; 21:12) ಆದರೆ ಇಸ್ರಾಯೇಲ್‌ ಎಂಬ ಹೆಸರನ್ನು ಇನ್ನೊಂದು ವಿಶೇಷಾರ್ಥದಲ್ಲೂ ಬಳಸಲಾಗಿದೆ. ಆ ಕುರಿತು ಮತ್ತಾಯ 19:28ರಲ್ಲಿ ನಾವು ಓದುತ್ತೇವೆ.

2 ಅಲ್ಲಿ ಯೇಸು ಹೀಗೆ ಹೇಳಿದನು: “ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.” ಈ ವಚನದಲ್ಲಿ ತಿಳಿಸಲಾಗಿರುವ “ಇಸ್ರಾಯೇಲಿನ ಹನ್ನೆರಡು ಕುಲ” ಯಾರನ್ನು ಸೂಚಿಸುತ್ತದೆ? ಭೂಪರದೈಸಿನಲ್ಲಿ ಶಾಶ್ವತವಾಗಿ ಜೀವಿಸಲಿರುವ ಜನರನ್ನೇ. ಅವರಿಗೆ 1,44,000 ಅಭಿಷಿಕ್ತರು ನ್ಯಾಯತೀರಿಸುವರು ಮಾತ್ರವಲ್ಲ ಯಾಜಕರಾಗಿ ಸೇವೆ ಮಾಡುವರು.

3, 4. ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು ಯಾವ ಉತ್ತಮ ಮಾದರಿ ಇಟ್ಟಿದ್ದಾರೆ?

3 ಈ ಅಭಿಷಿಕ್ತರು ಸಹ ಇಸ್ರಾಯೇಲ್‌ ಕಾಲದಲ್ಲಿದ್ದ ಯಾಜಕರಂತೆ ಹಾಗೂ ಲೇವಿಯರಂತೆ ದೇವರ ಸೇವೆಯನ್ನು ಮಹಾ ಸುಯೋಗವಾಗಿ ಪರಿಗಣಿಸುತ್ತಾರೆ. (ಅರ. 18:20) ಅಭಿಷಿಕ್ತರು ಸಹ ಈ ಭೂಮಿಯಲ್ಲಿ ಯಾವುದೇ ಪ್ರದೇಶವನ್ನು ಸ್ವಾಸ್ತ್ಯವಾಗಿ ಪಡೆದುಕೊಳ್ಳುವುದಿಲ್ಲ. ಬದಲಿಗೆ ಯೇಸು ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ರಾಜರಾಗಿಯೂ ಯಾಜಕರಾಗಿಯೂ ಸೇವೆ ಮಾಡುವರು. ಪ್ರಕಟನೆ 4:10, 11ರಲ್ಲಿ ತಿಳಿಸಲಾಗಿರುವಂತೆ ಅವರು ತಮ್ಮ ಆ ಸೇವೆಯಲ್ಲೇ ಮುಂದುವರಿಯುತ್ತಾರೆ.—ಯೆಹೆ. 44:28.

4 ಅಭಿಷಿಕ್ತರು ಭೂಮಿಯಲ್ಲಿರುವಾಗ ಯೆಹೋವನೇ ತಮ್ಮ ಪಾಲೆಂದು ತಮ್ಮ ಜೀವನ ರೀತಿಯಿಂದ ತೋರಿಸಿಕೊಡುವರು. ಅವರ ಜೀವನದಲ್ಲಿ ದೇವರ ಸೇವೆಗೆ ಅತಿ ಮಹತ್ವ ನೀಡುತ್ತಾರೆ. ಅವರು ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದಲ್ಲಿ ನಂಬಿಕೆಯಿಟ್ಟು ಅವನನ್ನು ಸದಾ ಅನುಕರಿಸುತ್ತಾರೆ. ಹೀಗೆ “ಕರೆಯುವಿಕೆಯನ್ನು ಮತ್ತು ಆರಿಸಿಕೊಳ್ಳುವಿಕೆಯನ್ನು ಖಚಿತ” ಮಾಡಿಕೊಳ್ಳುತ್ತಾರೆ. (2 ಪೇತ್ರ 1:10) ಅವರ ಸನ್ನಿವೇಶ ಸಾಮರ್ಥ್ಯ ಭಿನ್ನವಾಗಿದ್ದರೂ ಅವನ್ನೇ ನೆವ ಮಾಡಿಕೊಂಡು ದೇವರಿಗೆ ಅಲ್ಪ ಸೇವೆ ಮಾಡುವುದಿಲ್ಲ. ದೇವರ ಸೇವೆಗೆ ಹೆಚ್ಚು ಮಹತ್ವ ನೀಡುವ ಅವರು ತಮ್ಮಿಂದಾದಷ್ಟು ಮಾಡಲು ಶ್ರಮಿಸುತ್ತಾರೆ. ಈ ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆ ಹೊಂದಿರುವವರಿಗೂ ಉತ್ತಮ ಮಾದರಿಯಿಡುತ್ತಾರೆ.

5. ಯೆಹೋವನೇ ತಮ್ಮ ಪಾಲೆಂದು ಕ್ರೈಸ್ತರೆಲ್ಲರೂ ಹೇಗೆ ತೋರಿಸಿಕೊಡಬಲ್ಲರು? ಅದೇಕೆ ಈ ಪ್ರಪಂಚದಲ್ಲಿ ಕಷ್ಟ?

5 ಸ್ವರ್ಗದ ನಿರೀಕ್ಷೆಯಿರಲಿ ಭೂನಿರೀಕ್ಷೆಯಿರಲಿ ನಾವೆಲ್ಲರೂ ‘ನಮ್ಮನ್ನು ನಿರಾಕರಿಸಿ ನಮ್ಮ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ಕ್ರಿಸ್ತನನ್ನು ಹಿಂಬಾಲಿಸಲೇಬೇಕು.’ (ಮತ್ತಾ. 16:24) ಭೂಪರದೈಸಿನ ಜೀವನವನ್ನು ಮುನ್ನೋಡುತ್ತಿರುವ ಲಕ್ಷಾಂತರ ಜನರು ಆ ರೀತಿಯಲ್ಲೇ ಕ್ರಿಸ್ತನನ್ನು ಹಿಂಬಾಲಿಸಿ ದೇವರನ್ನು ಆರಾಧಿಸುತ್ತಿದ್ದಾರೆ. ಹೆಚ್ಚು ಸೇವೆ ಮಾಡಲು ತಮ್ಮಿಂದ ಸಾಧ್ಯವೆಂದು ಗೊತ್ತಿರುವಾಗ ಅಲ್ಪಸ್ವಲ್ಪ ಸೇವೆ ಮಾಡಿ ತೃಪ್ತಿಪಟ್ಟುಕೊಳ್ಳುವುದಿಲ್ಲ. ಅನೇಕರು ಜೀವನವನ್ನು ಸರಳೀಕರಿಸಿ ಪಯನೀಯರ್‌ ಸೇವೆ ಆರಂಭಿಸಿದ್ದಾರೆ. ಇನ್ನಿತರರು ವರ್ಷಕ್ಕೆ ಕೆಲವು ತಿಂಗಳಾದರೂ ಪಯನೀಯರ್‌ ಸೇವೆ ಮಾಡಲು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪಯನೀಯರ್‌ ಸೇವೆ ಮಾಡಲಾಗದವರು ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲು ಪ್ರಯತ್ನಿಸಿದ್ದಾರೆ. ಅವರೆಲ್ಲರನ್ನು ನಾವು ಯೇಸುವಿನ ಮೇಲೆ ಸುಗಂಧದ್ರವ್ಯ ಹೊಯ್ದ ದೇವಭಕ್ತೆ ಮರಿಯಳಿಗೆ ಹೋಲಿಸಬಹುದು. “ಅವಳು ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. . . . ತನ್ನಿಂದಾದುದನ್ನು ಮಾಡಿದ್ದಾಳೆ” ಎಂದು ಯೇಸು ಮೆಚ್ಚಿದನು. (ಮಾರ್ಕ 14:6-8) ಸೈತಾನನ ಕೈಕೆಳಗಿರುವ ಈ ಪ್ರಪಂಚದಲ್ಲಿ ನಮ್ಮಿಂದಾದಷ್ಟು ಸೇವೆಯನ್ನು ಮಾಡುವುದು ಅಷ್ಟೊಂದು ಸುಲಭವಲ್ಲ. ಆದರೂ ನಾವು ಯೆಹೋವನಲ್ಲಿ ಭರವಸೆಯಿಟ್ಟು ಹುಮ್ಮಸ್ಸಿನಿಂದ ಶ್ರಮಿಸುತ್ತೇವೆ. ನಾವಿದನ್ನು ನಾಲ್ಕು ಕ್ಷೇತ್ರಗಳಲ್ಲಿ ಹೇಗೆ ಮಾಡುವುದೆಂದು ನೋಡೋಣ.

ಮೊದಲು ದೇವರ ರಾಜ್ಯವನ್ನು ಹುಡುಕಿರಿ

6. (ಎ) ಇಹಲೋಕವೇ ತಮ್ಮ ಪಾಲೆಂದು ಹೆಚ್ಚಿನ ಜನರು ತೋರಿಸಿರುವುದು ಹೇಗೆ? (ಬಿ) ದಾವೀದನಂಥ ಮನೋಭಾವ ಹೊಂದಿರುವುದು ಉತ್ತಮವೇಕೆ?

6 ಮೊದಲು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುವಂತೆ ಯೇಸು ತನ್ನ ಹಿಂಬಾಲಕರಿಗೆ ಬೋಧಿಸಿದನು. ಸಾಮಾನ್ಯವಾಗಿ ಜನರು ಮೊದಲು ತಮ್ಮ ಆಶೆಆಕಾಂಕ್ಷೆಗಳನ್ನು ಸಾಧಿಸಲು ನೋಡುತ್ತಾರೆ. ಬೈಬಲ್‌ ಅಂಥವರನ್ನು “ಇಹಲೋಕವೇ ತಮ್ಮ ಪಾಲೆಂದು ನಂಬಿದ” ನರರೆಂದು ಹೇಳುತ್ತದೆ. (ಕೀರ್ತನೆ 17:1, 13-15 ಓದಿ.) ಆ ರೀತಿಯ ಜನರು ಸೃಷ್ಟಿಕರ್ತನನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಸುಖಭೋಗ, ಮಕ್ಕಳನ್ನು ಬೆಳೆಸುವುದು, ಮಕ್ಕಳಿಗಾಗಿ ಸಂಪತ್ತು ಕೂಡಿಸಿಡುವುದು ಇತ್ಯಾದಿಗಳಿಗೆ ಜೀವನ ಮುಡುಪಾಗಿಡುತ್ತಾರೆ. ಇಹಲೋಕವೇ ಅವರ ಪಾಲು. ಆದರೆ ದಾವೀದ ಇವರಿಗಿಂತ ಭಿನ್ನನಾಗಿದ್ದನು. ಯೆಹೋವನಿಂದ “ಒಳ್ಳೆಯ ಹೆಸರು” ಪಡೆದುಕೊಳ್ಳಲು ಪ್ರಯತ್ನಿಸಿದನು. ನಾವೆಲ್ಲರೂ ಹಾಗೇ ಮಾಡುವಂತೆ ಅವನ ಪುತ್ರ ಸೊಲೊಮೋನ ಪ್ರೋತ್ಸಾಹಿಸಿದನು. (ಪ್ರಸಂ. 7:1) ಆಸಾಫನಂತೆ ದಾವೀದ ಸಹ ಯೆಹೋವನ ಸ್ನೇಹವೇ ಶ್ರೇಷ್ಠವೆಂದು ಪರಿಗಣಿಸಿದನು. ಜೀವನದಲ್ಲಿ ತನ್ನ ಇಚ್ಛೆಗಳಿಗೆ ಹೆಚ್ಚು ಮಹತ್ವ ನೀಡದೆ ದೇವರೊಂದಿಗೆ ನಡೆಯುವುದರಲ್ಲಿ ಸಂಭ್ರಮಿಸಿದನು. ನಮ್ಮ ದಿನಗಳಲ್ಲೂ ಅನೇಕ ಕ್ರೈಸ್ತರು ನೌಕರಿಗಿಂತ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ನೀಡಿದ್ದಾರೆ.

7. ಮೊದಲು ದೇವರ ರಾಜ್ಯವನ್ನು ಹುಡುಕಿದ್ದರಿಂದ ಸಹೋದರರೊಬ್ಬರು ಯಾವ ಆಶೀರ್ವಾದ ಪಡೆದುಕೊಂಡರು?

7 ಉದಾಹರಣೆಗೆ ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ ದೇಶದಲ್ಲಿರುವ ಜೇನ್‌ ಕ್ಲಾಡ್‌ ಎಂಬವರನ್ನು ಗಮನಿಸಿ. ಸಭಾ ಹಿರಿಯರಾಗಿರುವ ಅವರಿಗೆ ಮೂವರು ಮಕ್ಕಳಿದ್ದಾರೆ. ಆ ದೇಶದಲ್ಲಿ ನೌಕರಿ ಸಿಗುವುದು ತುಂಬಾ ಕಷ್ಟ. ಸಿಕ್ಕಿರುವ ಕೆಲಸವನ್ನು ಉಳಿಸಿಕೊಳ್ಳಲು ಜನರು ಏನೂ ಮಾಡಲು ಸಿದ್ಧರಿರುತ್ತಾರೆ. ಒಂದು ದಿನ ಜೇನ್‌ ಕ್ಲಾಡ್‌ರನ್ನು ಕಂಪನಿಯ ಪ್ರೊಡಕ್ಷನ್‌ ಮ್ಯಾನೆಜರ್‌ ಕರೆದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತೆ ತಿಳಿಸಿದನು. ಸಾಯಂಕಾಲ 6:30ಕ್ಕೆ ಕೆಲಸ ಆರಂಭಿಸಬೇಕಿತ್ತು. ವಾರದ ಏಳು ದಿನವೂ ಮಾಡಬೇಕಿತ್ತು. ಆದರೆ ತಮಗೆ ಕುಟುಂಬಕ್ಕೆ ಭೌತಿಕವಾಗಿ ಒದಗಿಸುವುದರೊಂದಿಗೆ ಆಧ್ಯಾತ್ಮಿಕವಾಗಿಯೂ ಒದಗಿಸುವ ಜವಾಬ್ದಾರಿ ಇದೆಯೆಂದು ಜೇನ್‌ ಕ್ಲಾಡ್‌ ಮ್ಯಾನೆಜರನಿಗೆ ವಿವರಿಸಿದರು. ಮಾತ್ರವಲ್ಲ, ಸಭೆಯಲ್ಲಿರುವ ಜವಾಬ್ದಾರಿಯ ಕುರಿತೂ ತಿಳಿಸಿದರು. ಮ್ಯಾನೆಜರನ ಪ್ರತಿಕ್ರಿಯೆ ಹೇಗಿತ್ತು? “ನಿನಗೆ ಕೆಲಸ ಬೇಕಿದ್ದರೆ ಬೇರೆ ಎಲ್ಲವನ್ನೂ ಮರೆತುಬಿಡು. ಹೆಂಡತಿ, ಮಕ್ಕಳು, ಅದೂ ಇದೂ ಅಂತೆಲ್ಲಾ ಹೇಳಬೇಡ. ಕೆಲಸ ಮುಖ್ಯ! ಕೆಲಸವೇ ಬದುಕು ಉಸಿರು ಎಲ್ಲಾ ಆಗಿರಬೇಕು. ಕೆಲಸ ಬೇಕಾ? ನಿನ್ನ ಧರ್ಮ ಬೇಕಾ? ನೀನೇ ತೀರ್ಮಾನಿಸು” ಎಂದು ಮುಖದೆದುರಿಗೆ ಹೇಳಿಬಿಟ್ಟ. ನೀವಾಗಿದ್ದರೆ ಏನು ಮಾಡುತ್ತಿದ್ದಿರಿ? ಜೇನ್‌ ಕ್ಲಾಡ್‌ ದೇವರ ಮೇಲೆ ಭರವಸೆಯಿಟ್ಟರು. ಕೆಲಸ ಹೋದರೂ ದೇವರು ಕಾಪಾಡುವನೆಂಬ ನಂಬಿಕೆಯಿತ್ತು. ದೇವರ ಸೇವೆಯಲ್ಲಿ ಬಹಳಷ್ಟು ಮಾಡಲಿದೆ ಮತ್ತು ತನ್ನ ಕುಟುಂಬದ ಅಗತ್ಯಗಳನ್ನು ನೋಡಿಕೊಳ್ಳಲು ಆತನು ನೆರವಾಗುವನೆಂಬ ಅಚಲ ಭರವಸೆ ಅವರಿಗಿತ್ತು. ಹಾಗಾಗಿ ವಾರದ ಮಧ್ಯದ ಕೂಟಕ್ಕೆ ನಡೆದೇಬಿಟ್ಟರು. ಅನಂತರ ನೌಕರಿ ಇರುತ್ತೋ ಎಂಬ ಸಂದೇಹದಿಂದಲೇ ಕೆಲಸಕ್ಕೆ ಹೋಗಲು ಸಿದ್ಧರಾದರು. ಆಗ ಫೋನ್‌ಕರೆ ಬಂತು. ಆ ಮ್ಯಾನೆಜರನನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು. ನಮ್ಮ ಸಹೋದರನ ನೌಕರಿ ಉಳಿದಿತ್ತು!

8, 9. ಲೇವಿಯರಂತೆ ಹಾಗೂ ಯಾಜಕರಂತೆ ನಾವು ಯಾವ ರೀತಿಯಲ್ಲಿ ಯೆಹೋವನೇ ನಮ್ಮ ಪಾಲೆಂದು ತೋರಿಸಿಕೊಡಬಲ್ಲೆವು?

8 ಇಂಥ ಸನ್ನಿವೇಶ ಎದುರಿಸಿದ ಕೆಲವರು ‘ಕೆಲಸ ಹೋದರೆ ಕುಟುಂಬವನ್ನು ಹೇಗಪ್ಪ ನೋಡಿಕೊಳ್ಳುವುದು’ ಎಂದು ಕಳವಳಪಡಬಹುದು. (1 ತಿಮೊ. 5:8) ಇಂಥ ಸನ್ನಿವೇಶವನ್ನು ನೀವು ಎದುರಿಸಿರಲಿ ಇಲ್ಲದಿರಲಿ, ದೇವರೇ ತಮ್ಮ ಪಾಲೆಂದು ಭರವಸೆಯಿಟ್ಟು ಆತನ ಸೇವೆಗೆ ಪ್ರಪ್ರಥಮ ಸ್ಥಾನ ಕೊಡುವವರನ್ನು ಆತನೆಂದೂ ನಿರಾಶೆಪಡಿಸನು ಎನ್ನುವುದನ್ನು ನೀವು ಸ್ವಂತ ಅನುಭವದಿಂದ ತಿಳಿದಿರಬಹುದು. “ಮೊದಲು ರಾಜ್ಯವನ್ನೂ . . . ಹುಡುಕುತ್ತಾ ಇರಿ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದ್ದಲ್ಲದೆ ಅವರು ಹಾಗೆ ಮಾಡುವಾಗ “ಎಲ್ಲ ಇತರ ವಸ್ತುಗಳು” ಅಂದರೆ ಆಹಾರ, ಬಟ್ಟೆಬರೆ ಇತ್ಯಾದಿ “ಕೂಡಿಸಲ್ಪಡುವವು” ಎಂಬ ಆಶ್ವಾಸನೆಯನ್ನೂ ನೀಡಿದ್ದನು.—ಮತ್ತಾ. 6:33.

9 ಲೇವಿಯ ಕುಲದವರ ಕುರಿತು ಯೋಚಿಸಿ. ವಾಗ್ದತ್ತ ದೇಶದಲ್ಲಿ ಯಾವುದೇ ಭೂಸ್ವಾಸ್ತ್ಯ ಅವರಿಗೆ ಸಿಗಲಿಲ್ಲ. ಅವರ ಕೆಲಸವೇ ಇಡೀ ಜನಾಂಗವನ್ನು ಸತ್ಯಾರಾಧನೆಯೆಡೆಗೆ ನಡೆಸುವುದಾಗಿತ್ತು. ಹಾಗಾಗಿ ಅವರು ಪೋಷಣೆಗಾಗಿ ಯೆಹೋವನ ಮೇಲೆ ಭರವಸೆ ಇಡಬೇಕಾಗಿತ್ತು. ಯೆಹೋವನೇ ಅವರ ಪಾಲು ಆಗಿದ್ದನು. (ಅರ. 18:20) ಲೇವಿಯರಂತೆ ಹಾಗೂ ಯಾಜಕರಂತೆ ನಾವಿಂದು ದೇವಾಲಯದಲ್ಲಿ ಸೇವೆ ಮಾಡುತ್ತಿಲ್ಲ ನಿಜ. ಹಾಗಿದ್ದರೂ ಅವರ ಹುರುಪು ಭರವಸೆಯನ್ನು ನಾವು ಬೆಳೆಸಿಕೊಳ್ಳಬಹುದು. ಕಡೇ ದಿವಸಗಳ ಅಂತಿಮ ಕ್ಷಣಗಳು ಧಾವಿಸಿ ಬರುತ್ತಿರುವ ಈ ಸಮಯದಲ್ಲಿ ಲೋಕದ ಭಾಗವಾಗಿಲ್ಲದ ನಮ್ಮನ್ನು ದೇವರು ಪೋಷಿಸಿ ಕಾಪಾಡುವನೆಂದು ನಂಬುವುದು ಅತೀ ಪ್ರಾಮುಖ್ಯ.—ಪ್ರಕ. 13:17.

ಮೊದಲು ದೇವರ ನೀತಿಯನ್ನು ಹುಡುಕಿರಿ

10, 11. ನೌಕರಿಯ ವಿಚಾರದಲ್ಲಿ ಕೆಲವರು ತಮಗೆ ಯೆಹೋವನಲ್ಲಿ ಭರವಸೆ ಇದೆಯೆಂದು ಹೇಗೆ ತೋರಿಸಿದ್ದಾರೆ? ಉದಾಹರಣೆ ಕೊಡಿ.

10 ದೇವರ ನೀತಿಯನ್ನೂ ಮೊದಲು ಹುಡುಕುವಂತೆ ಯೇಸು ಶಿಷ್ಯರಿಗೆ ಹೇಳಿದನು. (ಮತ್ತಾ. 6:33) ಅದರರ್ಥ ನಾವು ತಪ್ಪು ಯಾವುದು ಸರಿ ಯಾವುದು ಎಂಬ ವಿಷಯದಲ್ಲಿ ಮಾನವರದ್ದಲ್ಲ ಬದಲಿಗೆ ಯೆಹೋವ ದೇವರ ಆಲೋಚನೆಗಳನ್ನು ಪಾಲಿಸಬೇಕು ಎಂದಾಗಿದೆ. (ಯೆಶಾಯ 55:8, 9 ಓದಿ.) ಎಷ್ಟೋ ಜನರು ತಂಬಾಕು ಬೆಳೆಸುತ್ತಿದ್ದರು-ಮಾರುತ್ತಿದ್ದರು, ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದರು, ಯುದ್ಧ ತರಬೇತಿ ನೀಡುತ್ತಿದ್ದರು. ಆದರೆ ಅವರಲ್ಲಿ ಹೆಚ್ಚಿನವರು ಸತ್ಯದ ಜ್ಞಾನ ಪಡೆದ ಬಳಿಕ ತಮ್ಮ ಉದ್ಯೋಗವನ್ನು ಬದಲಾಯಿಸಿ ದೀಕ್ಷಾಸ್ನಾನ ಹೊಂದಲು ಅರ್ಹರಾದರು.—ಯೆಶಾ. 2:4; 2 ಕೊರಿಂ. 7:1; ಗಲಾ. 5:14.

11 ಇದಕ್ಕೊಂದು ಉದಾಹರಣೆ ಆ್ಯಂಡ್ರು ಆಗಿದ್ದಾರೆ. ಯೆಹೋವ ದೇವರ ಕುರಿತು ಕಲಿತಾಗ ಆ್ಯಂಡ್ರು ಹಾಗೂ ಅವರ ಪತ್ನಿ ಆತನ ಸೇವೆಮಾಡುವ ನಿರ್ಧಾರ ಮಾಡಿದರು. ಆ್ಯಂಡ್ರುಗೆ ತಮ್ಮ ಉದ್ಯೋಗ ಪಂಚಪ್ರಾಣವಾಗಿತ್ತಾದರೂ ಅದನ್ನು ಬಿಟ್ಟರು. ಯಾಕಂದರೆ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ ಯುದ್ಧವಿಚಾರಗಳಲ್ಲಿ ಒಳಗೂಡಿತ್ತು ಮತ್ತು ಆ್ಯಂಡ್ರು ದೇವರ ದೃಷ್ಟಿಯಲ್ಲಿ ಯಾವುದು ಸರಿಯೋ ಅದನ್ನು ಮಾಡಲು ಇಷ್ಟಪಟ್ಟರು. ಇಬ್ಬರು ಮಕ್ಕಳಿದ್ದ ಅವರಿಗೆ ಬೇರೆ ಯಾವುದೇ ಆದಾಯ ಇರಲಿಲ್ಲ. ಕೆಲವೇ ತಿಂಗಳ ಜೀವನಕ್ಕೆ ಸಾಕಾಗುವಷ್ಟು ಹಣ ಮಾತ್ರ ಕೈಯಲ್ಲಿತ್ತು. ಮಾನವ ದೃಷ್ಟಿಯಲ್ಲಿ ನೋಡುವುದಾದರೆ, ಅವರ ಜೀವನೋಪಾಯಕ್ಕೆ ‘ಸ್ವಾಸ್ತ್ಯ’ ಎನ್ನುವುದು ಇರಲಿಲ್ಲ. ಆದರೂ ಅವರು ದೇವರ ಮೇಲೆ ಭಾರ ಹಾಕಿ ಬೇರೆ ಕೆಲಸ ಹುಡುಕಿದರು. ಆ ಸಂದರ್ಭವನ್ನು ನೆನಸಿಕೊಳ್ಳುವಾಗ ಈಗಲೂ ಆ ಕುಟುಂಬ ಯೆಹೋವನ ಹಸ್ತ ಮೋಟುಗೈಯಲ್ಲ ಎಂದು ಹೇಳುತ್ತಾರೆ. (ಯೆಶಾ. 59:1) ತಮ್ಮ ಜೀವನವನ್ನು ಸರಳವಾಗಿಟ್ಟ ಆ ಪತಿಪತ್ನಿ ಪೂರ್ಣಸಮಯದ ಸೇವೆಯಲ್ಲೂ ತೊಡಗಿದರು. “ಹಣಕಾಸು, ವಸತಿ, ಆರೋಗ್ಯ, ವೃದ್ಧಾಪ್ಯ ಇವೆಲ್ಲ ಕೆಲವೊಮ್ಮೆ ನಮ್ಮನ್ನು ಚಿಂತೆಗೆ ದೂಡಿದ ದಿನಗಳಿದ್ದವು” ಎನ್ನುತ್ತಾರೆ ಆ್ಯಂಡ್ರು. “ಆದರೆ ಯೆಹೋವನು ಯಾವಾಗಲೂ ನಮ್ಮ ಜೊತೆಯಲ್ಲಿದ್ದನು . . . ಯೆಹೋವನ ಸೇವೆ ಅತ್ಯುತ್ತಮ ಎನ್ನುವುದರಲ್ಲಿ ನಮಗೆ ಎಳ್ಳಷ್ಟೂ ಸಂಶಯವಿಲ್ಲ. ಮಾನವರಿಗೆ ಅದಕ್ಕಿಂತ ದೊಡ್ಡ ಸುಯೋಗ ಬೇರೊಂದಿಲ್ಲ. ಸಿಗುವ ಆಶೀರ್ವಾದವೂ ಅಪಾರ.” *ಪ್ರಸಂ. 12:13.

12. ದೇವರ ನೀತಿಯನ್ನು ಮೊದಲು ಹುಡುಕಲು ಯಾವ ಗುಣ ನಮ್ಮಲ್ಲಿರಬೇಕು? ಸ್ಥಳೀಯ ಉದಾಹರಣೆಗಳನ್ನು ತಿಳಿಸಿ.

12 “ನಿಮಗೆ ಸಾಸಿವೆ ಕಾಳಿನ ಗಾತ್ರದಷ್ಟು ನಂಬಿಕೆಯಿರುವುದಾದರೆ ನೀವು ಈ ಬೆಟ್ಟಕ್ಕೆ ‘ಇಲ್ಲಿಂದ ಅಲ್ಲಿಗೆ ಸ್ಥಳಾಂತರಿಸು’ ಎಂದು ಹೇಳಿದರೆ ಅದು ಹೋಗುವುದು ಮತ್ತು ಯಾವುದೂ ನಿಮಗೆ ಅಸಾಧ್ಯವಾದದ್ದಾಗಿರುವುದಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾ. 17:20) ದೇವರ ನೀತಿಯ ಮಟ್ಟಗಳನ್ನು ನೀವು ಪಾಲಿಸುವಿರಾ? ಅದರಲ್ಲೂ ಹಾಗೆ ಮಾಡುವಾಗ ಕಷ್ಟಗಳು ಎದುರಾಗುವುದೆಂದು ತಿಳಿದಾಗ್ಯೂ ಪಾಲಿಸಲು ಮುಂದಾಗುವಿರಾ? ನಿಮಗೇನಾದರೂ ಹಿಂಜರಿಕೆ ಇರುವಲ್ಲಿ ಸಭೆಯಲ್ಲಿರುವ ಇತರರೊಂದಿಗೆ ಮಾತಾಡಿ. ಯೆಹೋವನು ಅವರಿಗೆ ಸಹಾಯಮಾಡಿದ ವಿಧ, ಅವರ ಅನುಭವ, ಇವುಗಳನ್ನೆಲ್ಲಾ ಕೇಳುವಾಗ ಖಂಡಿತ ನಿಮ್ಮ ನಂಬಿಕೆ ಇಮ್ಮಡಿಯಾಗುವುದು.

ಯೆಹೋವನ ಆಧ್ಯಾತ್ಮಿಕ ಒದಗಿಸುವಿಕೆಗಳಿಗೆ ಕೃತಜ್ಞರಾಗಿರಿ

13. ನಾವು ಯೆಹೋವನ ಸೇವೆ ಮಾಡಲು ಶ್ರಮಿಸುವಲ್ಲಿ ನಮಗೆ ಯಾವ ಭರವಸೆ ಇರುವುದು?

13 ಯೆಹೋವನ ಸೇವೆ ಮಾಡುವ ನಿಮ್ಮ ಸುಯೋಗವನ್ನು ನೀವು ಅಮೂಲ್ಯವೆಂದು ಎಣಿಸುವಲ್ಲಿ, ಆತನು ಲೇವಿಯರಿಗೆ ಒದಗಿಸಿದಂತೆ ನಿಮಗೂ ಎಲ್ಲಾ ಅಗತ್ಯಗಳನ್ನು ಖಂಡಿತ ಒದಗಿಸುವನು. ದಾವೀದನನ್ನೇ ತೆಗೆದುಕೊಳ್ಳಿ. ಗವಿಯಲ್ಲಿ ಅವಿತುಕೊಂಡಿದ್ದ ಪರಿಸ್ಥಿತಿಯಲ್ಲೂ ದೇವರು ತನ್ನ ಕೈಬಿಡನು ಎಂಬ ಅಚಲ ವಿಶ್ವಾಸ ಅವನಿಗಿತ್ತು. ದೇವರಲ್ಲಿ ನಾವು ಕೂಡ ಅದೇ ಭರವಸೆ ಇಡಬಹುದು. ಒಬ್ಬಂಟಿ, ಸಹಾಯಕ್ಕೆ ಯಾರೂ ಇಲ್ಲ ಎಂದು ತೋರುವ ಪರಿಸ್ಥಿತಿಯಲ್ಲೂ ಆತನು ನಮಗೆ ಆಶ್ರಯವಾಗಿರುವನು. ಆಸಾಫನ ಸಂಗತಿ ನೆನಪು ಮಾಡಿಕೊಳ್ಳಿ. ವ್ಯಥೆಯಿಂದ ಮನಸ್ಸು ಕುಗ್ಗಿಹೋಗಿದ್ದಾಗ “ದೇವಾಲಯಕ್ಕೆ” ಹೋದನು. ಅಲ್ಲಿ ಅವನ ಮನಸ್ಸು ಹಗುರವಾಯಿತು. (ಕೀರ್ತ. 73:17) ಅವನಂತೆ ನಾವು ಕೂಡ ಆಧ್ಯಾತ್ಮಿಕ ಚೈತನ್ಯದ ಮೂಲನಾದ ಯೆಹೋವನೆಡೆಗೆ ಭರವಸೆಯಿಂದ ನೋಡಬೇಕು. ಹೀಗೆ ಮಾಡುವಾಗ ನಮಗೆ ಎಂಥ ಸನ್ನಿವೇಶ ಬಂದರೆಗಿದರೂ ಯೆಹೋವನ ಸೇವೆಯೇ ಅತ್ಯಮೂಲ್ಯವೆಂದು ತೋರಿಸಿಕೊಡುವೆವು. ಆತನೇ ನಮ್ಮ ಪಾಲೆಂದು ನಿರೂಪಿಸುವೆವು.

14, 15. ಕೆಲವು ಬೈಬಲ್‌ ವಚನಗಳ ಅರ್ಥವಿವರಣೆಯಲ್ಲಿ ಹೊಂದಾಣಿಕೆ ಮಾಡಲ್ಪಟ್ಟಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು? ಮತ್ತು ಯಾಕೆ?

14 ಬೈಬಲಿನಲ್ಲಿರುವ “ಅಗಾಧವಾದ ವಿಷಯಗಳ” ಕುರಿತು ಯೆಹೋವನು ಹೆಚ್ಚೆಚ್ಚು ಬೆಳಕು ಬೀರುವಾಗ ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? (1 ಕೊರಿಂ. 2:10-13) ಈ ವಿಷಯದಲ್ಲಿ ನಮಗೆ ಅಪೊಸ್ತಲ ಪೇತ್ರನ ಅತ್ಯುತ್ತಮ ಮಾದರಿ ಇದೆ. ಒಮ್ಮೆ ಯೇಸು, “ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಅವನ ರಕ್ತವನ್ನು ಕುಡಿದ ಹೊರತು ನಿಮ್ಮಲ್ಲಿ ಜೀವವಿರುವುದಿಲ್ಲ” ಎಂದು ಶಿಷ್ಯರಿಗೆ ಹೇಳಿದನು. ಅನೇಕ ಶಿಷ್ಯರು ಆ ಮಾತುಗಳಲ್ಲಿ ಅಡಗಿದ ಸೂಚಿತಾರ್ಥವನ್ನು ಗ್ರಹಿಸದೆ “ಇದು ಅಸಹನೀಯವಾದ ಮಾತು; ಇದನ್ನು ಯಾರು ತಾನೇ ಕೇಳಿಸಿಕೊಳ್ಳುವರು?” ಎಂದು ಗೊಣಗಿದರು. ಮಾತ್ರವಲ್ಲ “ತಾವು ಬಿಟ್ಟುಬಂದಿದ್ದ ಕಾರ್ಯಗಳಿಗೆ ಹಿಂದಿರುಗಿ ಅವನೊಂದಿಗೆ ಸಂಚಾರಮಾಡುವುದನ್ನು ನಿಲ್ಲಿಸಿದರು.” ಆದರೆ ಪೇತ್ರ, “ಕರ್ತನೇ, ನಾವು ಯಾರ ಬಳಿಗೆ ಹೋಗುವುದು? ನಿತ್ಯಜೀವದ ಮಾತುಗಳು ನಿನ್ನಲ್ಲಿವೆ” ಎಂದು ಪ್ರತಿಕ್ರಿಯಿಸಿದನು.—ಯೋಹಾ. 6:53, 60, 66, 68.

15 ಯೇಸುವಿನ ಮಾತುಗಳ ಸೂಚಿತಾರ್ಥ ಪೇತ್ರನಿಗೂ ಪೂರ್ತಿಯಾಗಿ ಅರ್ಥವಾಗಿರಲಿಲ್ಲ. ಆದರೆ ಸತ್ಯದ ಅರ್ಥವನ್ನು ದೇವರು ತಿಳಿಸಿಕೊಡುವನು ಎಂದು ಅವನು ನಂಬಿದ್ದನು. ಕೆಲವೊಂದು ಬೈಬಲ್‌ ಸತ್ಯಗಳ ಮೇಲೆ ಹೆಚ್ಚೆಚ್ಚು ಬೆಳಕು ಚೆಲ್ಲಿ ಅರ್ಥವಿವರಣೆಯಲ್ಲಿ ಹೊಂದಾಣಿಕೆ ಮಾಡಲ್ಪಟ್ಟಾಗ ಅದರ ಹಿಂದಿರುವ ಕಾರಣವನ್ನು ನೀವು ಗ್ರಹಿಸುತ್ತೀರೋ? (ಜ್ಞಾನೋ. 4:18) ಮೊದಲ ಶತಮಾನದ ಬೆರೋಯ ಊರಿನವರು “ದೇವರ ವಾಕ್ಯವನ್ನು ಅತಿ ಸಿದ್ಧಮನಸ್ಸಿನಿಂದ ಸ್ವೀಕರಿಸಿ . . . ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು.” (ಅ. ಕಾ. 17:11) ಅವರ ಆ ಮಾದರಿಯನ್ನು ಅನುಕರಿಸುವುದು ಯೆಹೋವನ ಸೇವೆಗಾಗಿರುವ ನಿಮ್ಮ ಕೃತಜ್ಞತೆಯನ್ನು ಗಾಢವಾಗಿಸುವುದು. ಅಲ್ಲದೆ, ಯೆಹೋವನು ನಿಮ್ಮ ಪಾಲು ಆಗಿರುವುದಕ್ಕೆ ಧನ್ಯರಾಗಿರುವಿರಿ.

ಕರ್ತನಲ್ಲಿರುವವರನ್ನು ಮಾತ್ರ ವಿವಾಹವಾಗಿರಿ

16. ಒಂದನೇ ಕೊರಿಂಥ 7:39ರಲ್ಲಿರುವ ಆಜ್ಞೆಯನ್ನು ಪಾಲಿಸುವ ಅವಿವಾಹಿತರು ದೇವರೇ ತಮ್ಮ ಪಾಲೆಂದು ಹೇಗೆ ತೋರಿಸಬಹುದು?

16 ಯೆಹೋವನಲ್ಲಿ ಕ್ರೈಸ್ತರು ಭರವಸೆ ಇಡಬೇಕಾದ ಇನ್ನೊಂದು ಕ್ಷೇತ್ರ, “ಕರ್ತನಲ್ಲಿರುವವನನ್ನು ಮಾತ್ರ” ವಿವಾಹವಾಗಬೇಕೆಂಬ ಬೈಬಲ್‌ ನಿರ್ದೇಶನವನ್ನು ಪಾಲಿಸುವುದಾಗಿದೆ. (1 ಕೊರಿಂ. 7:39) ದೇವರ ಈ ಆಜ್ಞೆಯನ್ನು ಮೀರಲು ಇಷ್ಟಪಡದೆ ಅನೇಕರು ಇಂದು ಅವಿವಾಹಿತರಾಗಿಯೇ ಉಳಿದಿದ್ದಾರೆ. ಅವರನ್ನು ದೇವರು ಎಂದಿಗೂ ಕೈಬಿಡನು. ದಾವೀದನಿಗೆ ತಾನು ಒಂಟಿಯಾಗಿದ್ದೇನೆ, ಸಹಾಯ ಮಾಡುವವರೇ ಇಲ್ಲ ಎಂದು ಅನಿಸಿದಾಗ ಏನು ಮಾಡಿದನು? ದೇವರಿಗೆ ಮೊರೆಯಿಟ್ಟನು. “ನನ್ನ ಚಿಂತೆಗಳನ್ನು ಆತನ ಮುಂದೆ ಬಿಚ್ಚುವೆನು; ನನ್ನ ಕಷ್ಟವನ್ನು ಆತನಿಗೆ ಅರಿಕೆಮಾಡುವೆನು” ಎಂದು ತನ್ನ ಭರವಸೆಯನ್ನು ದೇವರಲ್ಲಿಟ್ಟನು. (ಕೀರ್ತ. 142:1-3) ದಾವೀದನಂತೆ ಯೆರೆಮೀಯನಿಗೂ ಒಬ್ಬಂಟಿಗನೆಂಬ ಭಾವನೆ ಕಾಡಿರಬಹುದು. ಅವಿವಾಹಿತನಾಗಿದ್ದ ಅವನು ಅನೇಕ ವರ್ಷಗಳ ವರೆಗೆ ದೇವರ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡಿದನು. ಅವನಿಟ್ಟ ಮಾದರಿಯ ಕುರಿತು ತಿಳಿಯಲು ಇಷ್ಟವಿದೆಯೇ? ಯೆರೆಮೀಯನ ಮೂಲಕ ದೇವರು ನೀಡುವ ಸಂದೇಶ ಎಂಬ ಪುಸ್ತಕದ 8ನೇ ಅಧ್ಯಾಯವನ್ನು ಓದಿರಿ. (ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯ).

17. ಒಬ್ಬಾಕೆ ಅವಿವಾಹಿತ ಸಹೋದರಿ ಒಂಟಿತನವನ್ನು ಹೇಗೆ ನಿಭಾಯಿಸುತ್ತಾಳೆ?

17 ಅಮೆರಿಕದಲ್ಲಿರುವ ಒಬ್ಬಾಕೆ ಅವಿವಾಹಿತ ಸಹೋದರಿಯ ಉದಾಹರಣೆ ಗಮನಿಸಿ. “ನಾನೇನು ಮದುವೆಯೇ ಆಗಲ್ಲ ಅಂತ ನಿರ್ಧಾರ ಮಾಡಿಲ್ಲ. ಸರಿಯಾದ ವ್ಯಕ್ತಿ ಸಿಕ್ಕರೆ ಖಂಡಿತ ಮದುವೆಯಾಗುವೆ. ಯಾವ ವರ ಸಿಕ್ಕರೂ ಮದುವೆಯಾಗಿಬಿಡು ಎಂದು ಯೆಹೋವನ ಸಾಕ್ಷಿಯಲ್ಲದ ನನ್ನ ಅಮ್ಮ ಒತ್ತಾಯಿಸುತ್ತಾರೆ. ‘ನನ್ನ ವಿವಾಹ ಮುರಿದುಬಿದ್ದರೆ ಅದಕ್ಕೆ ನೀವು ಹೊಣೆಯಾಗುತ್ತೀರಾ?’ ಅಂತ ಅಮ್ಮನಿಗೆ ಕೇಳಿದೆ. ಈಗೀಗ ಅಮ್ಮ ಹಾಗೆ ಒತ್ತಾಯಿಸುತ್ತಿಲ್ಲ. ಏಕೆಂದರೆ ನನಗೊಂದು ಒಳ್ಳೇ ಕೆಲಸವಿದ್ದು ನಾನು ನನ್ನ ಸ್ವಂತ ಕಾಲ ಮೇಲೆ ನಿಂತಿರುವುದನ್ನು, ಖುಷಿಯಾಗಿರುವುದನ್ನು ನೋಡಿ ಮದುವೆಯ ಮಾತೆತ್ತುವುದಿಲ್ಲ.” ಈ ಸಹೋದರಿಗೆ ಒಂಟಿತನದ ಭಾವನೆ ಇಲ್ಲವೇನೆಂದಲ್ಲ. “ಅಂಥ ಸಂದರ್ಭಗಳಲ್ಲಿ ನಾನು ಯೆಹೋವನನ್ನು ಆಶ್ರಯಿಸುತ್ತೇನೆ. ಆತನೆಂದೂ ನನ್ನ ಕೈಬಿಟ್ಟಿಲ್ಲ” ಎಂದು ಹೇಳುತ್ತಾಳೆ ಆಕೆ. ಯೆಹೋವನಲ್ಲಿ ಭರವಸವಿಡಲು ಆಕೆಗೆ ಯಾವುದು ಸಹಾಯಮಾಡಿತು? “ಪ್ರಾರ್ಥನೆ” ಎನ್ನುತ್ತಾಳೆ ಆಕೆ. “ಪ್ರಾರ್ಥನೆ ಯೆಹೋವನನ್ನು ನೈಜ ವ್ಯಕ್ತಿಯಾಗಿ ಕಾಣುವಂತೆ ಮಾಡಿದೆ. ನಾನು ಒಬ್ಬಂಟಿ ಎಂದು ಹೇಗೆ ಹೇಳಸಾಧ್ಯ? ವಿಶ್ವದಲ್ಲೇ ಮಹೋನ್ನತನು ನನ್ನ ಪ್ರಾರ್ಥನೆಯನ್ನು ಆಲಿಸುತ್ತಾನೆ. ನನಗೆ ಹೆಮ್ಮೆ ಅನಿಸುತ್ತದೆ ಜೊತೆಗೆ ತುಂಬ ಸಂತೋಷವೂ ಆಗುತ್ತದೆ.” ಆಕೆಗೆ, “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷ” ಎಂಬ ಬೈಬಲ್‌ ಮಾತಿನಲ್ಲಿ ಪೂರ್ಣ ಭರವಸೆ. “ಹಾಗಾಗಿ ಇತರರಿಗೆ ಸಹಾಯಮಾಡಲು ನಾನು ನನ್ನನ್ನೇ ನೀಡಿಕೊಳ್ಳುತ್ತೇನೆ. ಪ್ರತಿಯಾಗಿ ಏನನ್ನೂ ನಿರೀಕ್ಷಿಸುವುದಿಲ್ಲ. ನಾನು ಇತರರಿಗೆ ವೈಯಕ್ತಿಕವಾಗಿ ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸುವಾಗ ನನ್ನೊಳಗೆ ಒಂದು ರೀತಿಯ ಸಂತೋಷ ಪುಟಿದೇಳುತ್ತದೆ.” (ಅ. ಕಾ. 20:35) ಹೌದು ಆಕೆಗೆ ಯೆಹೋವನು ಪಾಲು ಆಗಿದ್ದಾನೆ. ಆತನ ಸೇವೆಯಲ್ಲಿ ತುಂಬ ಆನಂದಿಸುತ್ತಾಳೆ.

18. ನೀವು ಯೆಹೋವನ ಪಾಲು ಆಗಿರಬೇಕಾದರೆ ಏನು ಮಾಡಬೇಕು?

18 ನಿಮ್ಮ ಸನ್ನಿವೇಶ ಏನೇ ಆಗಿರಲಿ ಯೆಹೋವನೇ ನಿಮ್ಮ ಪಾಲೆಂದು ತೋರಿಸಸಾಧ್ಯ. ಹಾಗೆ ತೋರಿಸುವಲ್ಲಿ ಆತನ ಸಂತೋಷಿತ ಜನರಲ್ಲಿ ನೀವೂ ಒಬ್ಬರಾಗಿರುವಿರಿ. (2 ಕೊರಿಂ. 6:16, 17) ಅದಕ್ಕೂ ಮಿಗಿಲಾಗಿ, ಪ್ರಾಚೀನ ಸಮಯದ ದೇವಸೇವಕರಂತೆ ನೀವೂ ಯೆಹೋವನ ಸ್ವಂತ ಜನರಾಗಿರುವಿರಿ ಅಂದರೆ ಯೆಹೋವನ ಪಾಲು ನೀವೇ ಆಗಿರುವಿರಿ. (ಧರ್ಮೋಪದೇಶಕಾಂಡ 32:9, 10 ಓದಿ.) ಸಕಲ ಜನಾಂಗಗಳಲ್ಲಿ ಇಸ್ರಾಯೇಲ್ಯರು ಮಾತ್ರ ಹೇಗೆ ಯೆಹೋವನ ಸ್ವಂತ ಜನರಾಗಿದ್ದರೋ ಅಂದರೆ ಆತನ ಪಾಲು ಆಗಿದ್ದರೋ ಹಾಗೆಯೇ ನೀವೂ ಆತನ ಪಾಲು ಆಗಿರುವಿರಿ. ಆತನು ನಿಮ್ಮನ್ನು ಪ್ರೀತಿಯಿಂದ ಆರೈಕೆ ಮಾಡುವನು.—ಕೀರ್ತ. 17:9.

[ಪಾದಟಿಪ್ಪಣಿ]

^ ಪ್ಯಾರ. 11 2009, ನವೆಂಬರ್‌ ತಿಂಗಳ ಇಂಗ್ಲಿಷ್‌ ಭಾಷೆಯ ಎಚ್ಚರ! ಪತ್ರಿಕೆಯಲ್ಲಿ ಪುಟ 12ರಿಂದ 14 ನೋಡಿ.

ನಿಮ್ಮ ಉತ್ತರವೇನು?

ಯೆಹೋವನೇ ನಿಮ್ಮ ಪಾಲೆಂದು . . .

• ಮೊದಲು ದೇವರ ರಾಜ್ಯವನ್ನೂ ನೀತಿಯನ್ನೂ ಹುಡುಕುವ ಮೂಲಕ ಹೇಗೆ ತೋರಿಸುವಿರಿ?

• ಆಧ್ಯಾತ್ಮಿಕ ಒದಗಿಸುವಿಕೆಗಳಿಗೆ ಕೃತಜ್ಞರಾಗಿರುವ ಮೂಲಕ ಹೇಗೆ ತೋರಿಸುವಿರಿ?

• ಕರ್ತನಲ್ಲಿರುವವರನ್ನು ಮಾತ್ರ ವಿವಾಹವಾಗಿರಿ ಎಂಬ ದೇವರ ಆಜ್ಞೆಯನ್ನು ಪಾಲಿಸುವ ಮೂಲಕ ಹೇಗೆ ತೋರಿಸುವಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]

ಜೀವನದಲ್ಲಿ ಯೆಹೋವನ ಸೇವೆಗೆ ಪ್ರಪ್ರಥಮ ಸ್ಥಾನ ಕೊಡುವಲ್ಲಿ ಆತನು ನಮ್ಮ ಪಾಲು ಆಗಿರುವನು

[ಪುಟ 15ರಲ್ಲಿರುವ ಚಿತ್ರ]

ಯೆರೆಮೀಯನ ಮಾದರಿ ಹೃದಯೋತ್ತೇಜಕ