ಜೊತೆಗೂಡಿ ಹರ್ಷಿಸೋಣ!
ಜೊತೆಗೂಡಿ ಹರ್ಷಿಸೋಣ!
ಸಂತೋಷ ಎನ್ನುವುದು ಇಂದು ಕೈಗೆಟುಕದ ವಿಷಯ. ಸುಖಸಂತೋಷ ಇದ್ದರೂ ಇತರರೊಂದಿಗೆ ಹಂಚಿಕೊಳ್ಳಲಾಗದ ಪರಿಸ್ಥಿತಿ ಅನೇಕರಿಗೆ. ದೊಡ್ಡ ದೊಡ್ಡ ನಗರಗಳಲ್ಲಂತೂ ಆಧುನಿಕ ಜೀವನ ಶೈಲಿ ಜನರ ನಡುವೆ ಅಂತರ ತಂದಿಟ್ಟಿದೆ. ಹೆಚ್ಚಿನವರು ತಾವಾಯ್ತು ತಮ್ಮ ಪಾಡಾಯ್ತು ಎಂದು ಗೂಡು ಸೇರಿಕೊಳ್ಳಲು ಬಯಸುತ್ತಾರೆ.
ಸೈಕೋಬಯಾಲಜಿ ಪ್ರೊಫೆಸರ್ ಆಲ್ಬರ್ಟ್ ಓಲಿವೇರ್ಯೋ ಅವರ ಮಾತನ್ನು ಗಮನಿಸಿ: “ಒಂಟಿತನ ಇಂದು ಸರ್ವೇಸಾಮಾನ್ಯ. ಕಾಂಕ್ರಿಟ್ ಕಾಡಾಗಿರುವ ನಗರಗಳಲ್ಲಿನ ಜೀವನ ಒಂಟಿತನಕ್ಕೆ ಎಡೆಮಾಡಿದೆ. ಸಹೋದ್ಯೋಗಿಗಳು, ಪಕ್ಕದ ಮನೆಯವರು ಅಥವಾ ಸೂಪರ್ಮಾರ್ಕೆಟ್ನ ಕೆಲಸಗಾರರು ಇವರನ್ನೆಲ್ಲಾ ನಾವು ನಿತ್ಯ ನೋಡುತ್ತಿದ್ದರೂ ಅವರ ಬಗ್ಗೆ ತಿಳಿದುಕೊಳ್ಳಲಾಗದಂಥ ಪರಿಸ್ಥಿತಿ ಏರ್ಪಟ್ಟಿದೆ.” ತಾವಾಯ್ತು ತಮ್ಮದಾಯ್ತು ಎಂಬ ಜೀವನಪಾಡು ಅನೇಕರನ್ನು ಖಿನ್ನತೆಗೆ ದೂಡಿದೆ.
ಆದರೆ ಕ್ರೈಸ್ತರಾದ ನಮ್ಮ ಸನ್ನಿವೇಶ, ಮನೋಭಾವವೇ ಬೇರೆ. “ಯಾವಾಗಲೂ ಹರ್ಷಿಸುತ್ತಾ ಇರಿ” ಎಂದು ಅಪೊಸ್ತಲ ಪೌಲ ಹಿತವಚನ ಬರೆದನು. (1 ಥೆಸ. 5:16) ಉಲ್ಲಾಸದಿಂದಿರಲು ಮತ್ತು ಇತರರ ಜೊತೆಗೂಡಿ ಹರ್ಷಿಸಲು ನಮಗೆ ಒಂದಲ್ಲ ಎರಡಲ್ಲ ಅನೇಕ ಕಾರಣಗಳಿವೆ. ನಾವು ಮಹೋನ್ನತ ದೇವರಾದ ಯೆಹೋವನನ್ನು ಆರಾಧಿಸುತ್ತೇವೆ, ಬೈಬಲ್ ಸತ್ಯ ನಮಗೆ ತಿಳಿದಿದೆ, ರಕ್ಷಣೆ ಹೊಂದುವ ಮತ್ತು ಶಾಶ್ವತ ಜೀವನ ಪಡೆಯುವ ನಿರೀಕ್ಷೆ ನಮಗಿದೆ, ಈ ನಿರೀಕ್ಷೆಯನ್ನು ಇತರರಿಗೂ ತಿಳಿಸುವ ಭಾಗ್ಯಶಾಲಿಗಳೂ ನಾವಾಗಿದ್ದೇವೆ.—ಕೀರ್ತ. 106:4, 5; ಯೆರೆ. 15:16; ರೋಮ. 12:12.
ಹರ್ಷದಿಂದಿರುವುದು ಮತ್ತು ಸಂತೋಷವನ್ನು ಹಂಚಿಕೊಳ್ಳುವುದು ನಿಜ ಕ್ರೈಸ್ತರ ಲಕ್ಷಣ. ಹಾಗಾಗಿ ಪೌಲ ಫಿಲಿಪ್ಪಿಯವರಿಗೆ ಹೀಗೆ ಬರೆದದ್ದು ಆಶ್ಚರ್ಯವಲ್ಲ: “ನಾನು . . . ಸಂತೋಷಪಡುತ್ತೇನೆ ಮತ್ತು ನಿಮ್ಮೆಲ್ಲರೊಂದಿಗೆ ಹರ್ಷಿಸುತ್ತೇನೆ. ಇದೇ ರೀತಿಯಲ್ಲಿ ನೀವು ಸಹ ಸಂತೋಷಪಡಿರಿ ಮತ್ತು ನನ್ನೊಂದಿಗೆ ಹರ್ಷಿಸಿರಿ.” (ಫಿಲಿ. 2:17, 18) ಗಮನಿಸಿದಿರಾ? ಚಿಕ್ಕ ವಾಕ್ಯವಾದರೂ ಎರಡು ಬಾರಿ ಪೌಲ ತಾನು ಸಂತೋಷದಿಂದಿರುವ ಮತ್ತು ಇತರರೊಂದಿಗೆ ಹರ್ಷಿಸುವ ಕುರಿತು ತಿಳಿಸಿದ್ದಾನೆ.
ಕ್ರೈಸ್ತರು ಜೊತೆವಿಶ್ವಾಸಿಗಳಿಂದ ತಮ್ಮನ್ನು ಬೇರ್ಪಡಿಸಿಕೊಳ್ಳದಂತೆ ಜಾಗ್ರತೆ ವಹಿಸಬೇಕು. ಹಾಗೆ ಸಹವಾಸ ಕಡಿದುಕೊಳ್ಳುವ ಯಾರೂ ಹರ್ಷದಿಂದಿರಲಾರರು. ಆದ್ದರಿಂದ ಸಹೋದರರೊಂದಿಗೆ ಜೊತೆಗೂಡಿ “ಕರ್ತನಲ್ಲಿ ಹರ್ಷಿಸುತ್ತಾ ಇರಿ” ಎಂದು ಪೌಲ ಕೊಟ್ಟ ಬುದ್ಧಿವಾದವನ್ನು ನಾವು ಹೇಗೆ ಪಾಲಿಸಬಲ್ಲೆವು?—ಫಿಲಿ. 3:1.
ಜೊತೆವಿಶ್ವಾಸಿಗಳೊಂದಿಗೆ ಹರ್ಷಿಸಿರಿ
ಫಿಲಿಪ್ಪಿಯವರಿಗೆ ಪತ್ರ ಬರೆದಾಗ ಪೌಲ ಸುವಾರ್ತೆಯ ನಿಮಿತ್ತ ರೋಮ್ನಲ್ಲಿ ಸೆರೆಯಲ್ಲಿದ್ದಿರಬೇಕು. (ಫಿಲಿ. 1:7; 4:22) ಹಾಗಿದ್ದರೂ ಶುಶ್ರೂಷೆಗಾಗಿ ಅವನಲ್ಲಿ ಜ್ವಲಿಸುತ್ತಿದ್ದ ಹುಮ್ಮಸ್ಸು ನಂದಿಹೋಗಿರಲಿಲ್ಲ. ಯೆಹೋವನ ಸೇವೆಯನ್ನು ಸಾಧ್ಯವಾದಷ್ಟು ಪೂರ್ಣವಾಗಿ ಮಾಡಿ ತನ್ನನ್ನೇ “ಪಾನದ್ರವ್ಯವಾಗಿ” ಅರ್ಪಿಸಲು ಅವನು ಹರ್ಷಿಸಿದನು. (ಫಿಲಿ. 2:17) ಪೌಲನ ಈ ಮನೋಭಾವದಿಂದ ನಾವೇನು ಕಲಿಯುತ್ತೇವೆ? ನಮ್ಮ ಸಂತೋಷ ನಾವಿರುವ ಪರಿಸ್ಥಿತಿಯ ಮೇಲೆ ಹೊಂದಿಕೊಂಡಿಲ್ಲ ಎಂಬದನ್ನೇ. “ಹರ್ಷಪಡುತ್ತಾ ಇರುವೆನು” ಎಂದು ಅವನು ಸೆರೆವಾಸದಲ್ಲಿದ್ದಾಗಲೂ ಹೇಳಿದನು.—ಫಿಲಿ. 1:18.
ಫಿಲಿಪ್ಪಿ ಸಭೆಯನ್ನು ಸ್ಥಾಪಿಸಿದ್ದ ಅವನಿಗೆ ಅಲ್ಲಿನ ಸಹೋದರರೆಂದರೆ ಅಪಾರ ಪ್ರೀತಿಮಮತೆ. ಯೆಹೋವನ ಸೇವೆಯಲ್ಲಿ ತನಗೆ ಸಿಕ್ಕಿದ ಆನಂದವನ್ನು ಹಂಚಿಕೊಳ್ಳುವುದು ಅವರಲ್ಲಿ ಪ್ರೋತ್ಸಾಹ ತುಂಬುವುದೆಂದು ಅವನು ಮನಗಂಡನು. ಹಾಗಾಗಿ ಹೀಗೆ ಬರೆದನು: “ಸಹೋದರರೇ, ನನಗೆ ಸಂಭವಿಸಿರುವ ಸಂಗತಿಗಳಿಂದ ಸುವಾರ್ತೆಯು ಅಭಿವೃದ್ಧಿ ಹೊಂದಿದೆಯೇ ಹೊರತು ಅದು ಅವನತಿ ಹೊಂದಲಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಇದರಿಂದ ನನ್ನ ಬೇಡಿಗಳು ಕ್ರಿಸ್ತನಿಗೆ ಸಂಬಂಧಿಸಿದವುಗಳಾಗಿವೆ ಎಂಬುದು ಅರಮನೆಯ ಅಂಗರಕ್ಷಕ ದಳದವರೆಲ್ಲರಿಗೂ ಉಳಿದವರೆಲ್ಲರಿಗೂ ಬಹಿರಂಗವಾಗಿ ಪ್ರಸಿದ್ಧವಾಗಿವೆ.” (ಫಿಲಿ. 1:12, 13) ಪೌಲ ಹೀಗೆ ಪ್ರೋತ್ಸಾಹದಾಯಕ ಅನುಭವಗಳನ್ನು ತಿಳಿಸಿದ್ದು ಸಂತೋಷದಿಂದಿರಲು ಮತ್ತು ತನ್ನ ಸಹೋದರರೊಂದಿಗೆ ಹರ್ಷಿಸಲು ಸಾಧ್ಯಮಾಡಿತು. ಫಿಲಿಪ್ಪಿಯವರು ಕೂಡ ಇದರಿಂದ ಹರ್ಷಿಸಿದ್ದಿರಬೇಕು. ಹಾಗೆ ಹರ್ಷಿಸಬೇಕಾದರೆ ಪೌಲ ಸೆರೆಯಲ್ಲಿರುವುದನ್ನು ನೆನಸಿ ಅವರು ದುಃಖಿಸಬಾರದಿತ್ತು. ಬದಲಿಗೆ, ಕಷ್ಟದಲ್ಲಿಯೂ ಉಲ್ಲಾಸಿಸುತ್ತಿದ್ದ ಪೌಲನ ಮಾದರಿಯನ್ನು ಅನುಕರಿಸಬೇಕಿತ್ತು. (ಫಿಲಿ. 1:14; 3:17) ಫಿಲಿಪ್ಪಿಯರು ಅವನಿಗಾಗಿ ಪ್ರಾರ್ಥಿಸಿದರು ಕೂಡ. ಅಗತ್ಯವಿದ್ದ ಸಹಾಯ, ಬೆಂಬಲ ನೀಡಿದರು.—ಫಿಲಿ. 1:19; 4:14-16.
ಪೌಲನಂತೆ ನಾವು ಕೂಡ ಹರ್ಷಾನಂದದಿಂದ ಇರುತ್ತೇವೋ? ನಮ್ಮ ಸನ್ನಿವೇಶದ ಮತ್ತು ಕ್ರೈಸ್ತ ಶುಶ್ರೂಷೆಯ ಒಳ್ಳೇ ಅಂಶಗಳನ್ನು
ಮನಗಾಣುತ್ತೇವೋ? ಸಹೋದರ ಸಹೋದರಿಯರೊಂದಿಗೆ ಸಂಭಾಷಣೆ ಮಾಡುವಾಗ ಸಾಕ್ಷಿಕಾರ್ಯದಲ್ಲಿ ಸಿಕ್ಕಿದ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಹರ್ಷಿಸಿರಿ. ಅದಕ್ಕೆಂದು ಇತರರನ್ನು ಬೆರಗುಗೊಳಿಸುವಂಥ ಅನುಭವಕ್ಕಾಗಿ ಕಾಯಬೇಕಾಗಿಲ್ಲ. ನಾವು ಪರಿಣಾಮಕಾರಿ ನಿರೂಪಣೆ ಉಪಯೋಗಿಸಿರಬಹುದು, ಅಥವಾ ತರ್ಕಬದ್ಧವಾಗಿ ಮಾತಾಡಿ ದೇವರ ರಾಜ್ಯದ ಸಂದೇಶದ ಕುರಿತು ಮನೆಯವರಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿರಬಹುದು. ನಿರ್ದಿಷ್ಟ ಬೈಬಲ್ ವಚನದ ಸಂಬಂಧದಲ್ಲಿ ಮನೆಯವರೊಂದಿಗೆ ಒಳ್ಳೇ ಸಂಭಾಷಣೆ ನಡೆಸಿರಬಹುದು. ಇಲ್ಲವೆ ಯೆಹೋವನ ಸಾಕ್ಷಿಗಳೆಂದು ಗುರುತಿಸಿಕೊಂಡ ಸಲುವಾಗಿ ಉತ್ತಮ ಸಾಕ್ಷಿ ನೀಡಲು ಸದವಕಾಶ ಪಡೆದುಕೊಂಡಿರಬಹುದು. ಇಂಥ ಅನುಭವಗಳನ್ನು ಹಂಚಿಕೊಳ್ಳುವುದು ಜೊತೆಗೂಡಿ ಹರ್ಷಿಸಲು ದಾರಿ ತೆರೆಯುತ್ತದೆ.ಯೆಹೋವನ ಜನರಲ್ಲಿ ಅನೇಕರು ಸಾರುವ ಕೆಲಸಕ್ಕಾಗಿ ನಾನಾ ತ್ಯಾಗಗಳನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ ಕೂಡ. ಪಯನೀಯರರು, ಸಂಚರಣ ಮೇಲ್ವಿಚಾರಕರು, ಬೆತೆಲಿಗರು, ಮಿಷನೆರಿಗಳು, ಅಂತಾರಾಷ್ಟ್ರೀಯ ಸೇವಕರು ತಮ್ಮನ್ನು ಪೂರ್ಣ ಸಮಯದ ಸೇವೆಯಲ್ಲಿ ತೊಡಗಿಸಿಕೊಂಡು ಹರ್ಷಿಸುತ್ತಿದ್ದಾರೆ. ಇದು ನಮಗೆ ಖುಷಿ ತರುತ್ತದಾ? ಅವರೊಂದಿಗೆ ಸೇರಿ ನಾವೂ ಹರ್ಷಿಸುತ್ತೇವಾ? “ಜೊತೆಕೆಲಸಗಾರರಾಗಿ” ನಮ್ಮೊಂದಿಗೆ “ದೇವರ ರಾಜ್ಯಕ್ಕಾಗಿ” ದುಡಿಯುತ್ತಿರುವ ಈ ಪ್ರಿಯರಿಗೆ ಕೃತಜ್ಞತೆ ತೋರಿಸೋಣ. (ಕೊಲೊ. 4:11) ಸಭಾ ಕೂಟಗಳಲ್ಲಿ ಅಥವಾ ಕ್ರೈಸ್ತ ಸಮ್ಮೇಳನಗಳಲ್ಲಿ ಅವರೊಂದಿಗಿರುವಾಗ ಅವರನ್ನು ಪ್ರೋತ್ಸಾಹಿಸೋಣ. ಅವರ ಹುರುಪಿನ ಮಾದರಿಯನ್ನು ಅನುಕರಿಸೋಣ. ಅತಿಥಿಸತ್ಕಾರ ಮಾಡುವ ಮೂಲಕ ಅವರ ಅನುಭವಗಳನ್ನೂ ಭಕ್ತಿವರ್ಧಕ ಮಾತುಗಳನ್ನೂ ಕೇಳಲು “ಅವಕಾಶ” ಕಲ್ಪಿಸಬಹುದು. ಪ್ರಾಯಶಃ ಒಂದು ಊಟಕ್ಕೆ ಜೊತೆಗೂಡುವಂತೆ ಏರ್ಪಡಿಸಬಹುದು.—ಫಿಲಿ. 4:10.
ನಂಬಿಕೆಯ ಪರೀಕ್ಷೆಗಳನ್ನು ಎದುರಿಸುತ್ತಿರುವವರ ಜೊತೆ ಹರ್ಷಿಸಿರಿ
ಪೌಲನು ಹಿಂಸೆಯನ್ನು ತಾಳಿಕೊಂಡನು ಮತ್ತು ನಂಬಿಕೆಯ ಪರೀಕ್ಷೆಗಳನ್ನು ಜಯಿಸಿದನು. ಇದು ಯೆಹೋವನಿಗೆ ನಂಬಿಗಸ್ತನಾಗಿ ಉಳಿಯುವ ಅವನ ಸಂಕಲ್ಪವನ್ನು ಇನ್ನಷ್ಟು ಬಲಪಡಿಸಿತು. (ಕೊಲೊ. 1:24; ಯಾಕೋ. 1:2, 3) ಫಿಲಿಪ್ಪಿ ಸಭೆಯವರು ಸಹ ಇಂಥದ್ದೆ ಪರೀಕ್ಷೆಗಳನ್ನು ಎದುರಿಸಲಿದ್ದರು ಎಂದು ಅವನಿಗೆ ತಿಳಿದಿತ್ತು. ತನ್ನ ನಂಬಿಗಸ್ತಿಕೆಯ ಮಾದರಿ ಅವರಿಗೆ ಪ್ರೋತ್ಸಾಹಕರವಾಗಿ ಇರುವುದೆಂದೂ ಅವನಿಗೆ ಗೊತ್ತಿತ್ತು. ಸಂತೋಷದಿಂದಿರಲು ಮತ್ತು ಅವರೊಂದಿಗೆ ಸೇರಿ ಹರ್ಷಿಸಲು ಅದು ಪೌಲನಿಗೆ ಇನ್ನೊಂದು ಕಾರಣ ನೀಡಿತು. ಆದ್ದರಿಂದ ಹೀಗೆ ಬರೆದನು: “ಕ್ರಿಸ್ತನಲ್ಲಿ ನಂಬಿಕೆಯನ್ನಿಡುವುದು ಮಾತ್ರವಲ್ಲ, ಅವನಿಗಾಗಿ ಬಾಧೆಯನ್ನೂ ಅನುಭವಿಸುವ ಸದವಕಾಶವು ನಿಮಗೆ ಕೊಡಲ್ಪಟ್ಟಿತು. ನನ್ನ ವಿಷಯದಲ್ಲಿ ನೀವು ನೋಡಿದ ಮತ್ತು ನನ್ನ ವಿಷಯದಲ್ಲಿ ಈಗ ಕೇಳಿಸಿಕೊಳ್ಳುತ್ತಿರುವ ಅದೇ ಹೋರಾಟವು ನಿಮಗೂ ಇದೆ.”—ಫಿಲಿ. 1:29, 30.
ಸಾಕ್ಷಿಕಾರ್ಯದ ನಿಮಿತ್ತ ಇಂದು ಕೂಡ ಕ್ರೈಸ್ತರು ವಿರೋಧಕ್ಕೆ ಗುರಿಯಾಗುತ್ತಾರೆ. ಕೆಲವೊಮ್ಮೆ ಅವರು ಹಿಂಸೆಗೊಳಗಾಗುತ್ತಾರೆ. ಆದರೆ ಇಂಥ ವಿರೋಧ ಬೇರೆ ರೂಪದಲ್ಲೂ ಬರುತ್ತದೆ. ಧರ್ಮಭ್ರಷ್ಟರು ಸುಳ್ಳಾರೋಪ ಹೊರಿಸಬಹುದು, ಕುಟುಂಬದವರು ವಿರೋಧಿಸಬಹುದು, ಸಹೋದ್ಯೋಗಿಗಳು ಅಥವಾ ಸಹಪಾಠಿಗಳು ಗೇಲಿಮಾಡಬಹುದು. ಇಂಥ ವಿಷಯಗಳಿಗೆ ನಾವು ಆಶ್ಚರ್ಯವಾಗಲಿ ನಿರುತ್ಸಾಹವಾಗಲಿ ಪಡಬಾರದು. ಏಕೆಂದರೆ ಇವು ಹರ್ಷಿಸಲು ಕಾರಣಗಳಾಗಿವೆ ಎಂದು ಯೇಸು ಹೇಳಿದನು: “ನನ್ನ ನಿಮಿತ್ತ ಜನರು ನಿಮ್ಮನ್ನು ದೂಷಿಸಿ ಹಿಂಸೆಪಡಿಸಿ ನಿಮ್ಮ ವಿರುದ್ಧ ಪ್ರತಿಯೊಂದು ರೀತಿಯ ಕೆಟ್ಟ ವಿಷಯವನ್ನು ಸುಳ್ಳಾಗಿ ಹೇಳುವಾಗ ನೀವು ಸಂತೋಷಿತರು. ಉಲ್ಲಾಸಪಡಿರಿ, ಅತ್ಯಾನಂದಪಡಿರಿ; ಸ್ವರ್ಗದಲ್ಲಿ ನಿಮಗೆ ಬಹಳ ಪ್ರತಿಫಲವಿದೆ.”—ಮತ್ತಾ. 5:11, 12.
ಬೇರೆ ದೇಶಗಳಲ್ಲಿ ನಮ್ಮ ಸಹೋದರರು ತೀವ್ರ ಹಿಂಸೆಯನ್ನು ಎದುರಿಸುತ್ತಿದ್ದಾರೆಂಬ ವರದಿ ಕೇಳುವಾಗ ನಾವು ಭಯದಿಂದ ಮುದುರಿಕೊಳ್ಳಬಾರದು. ಬದಲಾಗಿ ಅವರ ನಂಬಿಗಸ್ತಿಕೆಗಾಗಿ ನಾವು ಹರ್ಷಿಸಬೇಕು. ಅವರ ನಂಬಿಕೆಯನ್ನು ಬಲಪಡಿಸುವಂತೆ ಮತ್ತು ತಾಳಿಕೊಳ್ಳಲು ಸಹಾಯ ನೀಡುವಂತೆ ಯೆಹೋವನ ಬಳಿ ಪ್ರಾರ್ಥಿಸಬೇಕು. (ಫಿಲಿ. 1:3, 4) ದೂರದಲ್ಲಿರುವ ಆ ಪ್ರಿಯ ಸಹೋದರರಿಗೆ ನಮ್ಮಿಂದೇನೂ ಮಾಡಲಾಗದಿರಬಹುದು ನಿಜ. ಆದರೆ ನಮ್ಮ ಸಭೆಯಲ್ಲೇ ನಂಬಿಕೆಯ ಪರೀಕ್ಷೆಗಳನ್ನು ಎದುರಿಸುವವರಿಗೆ ನಾವು ಸಹಾಯ ಹಸ್ತ ಚಾಚಬಹುದಲ್ಲವೇ? ಕಳಕಳಿಯಿಂದ ಅವರಿಗೆ ಬೇಕಾದ ಬೆಂಬಲ ನೀಡಬಹುದು. ನಮ್ಮೊಂದಿಗೆ ಕುಟುಂಬ ಆರಾಧನೆಯಲ್ಲಿ ಜೊತೆಗೂಡುವಂತೆ ಅವರನ್ನು ಕರೆಯಬಹುದು. ಅಥವಾ ಸಾರುವ ಕೆಲಸದಲ್ಲಿ ಅವರಿಗೆ ಜೊತೆ ನೀಡಬಹುದು. ಇಲ್ಲವೆ ಕೆಲವೊಮ್ಮೆ ಮನೋರಂಜನೆಯಲ್ಲಿ ಒಟ್ಟಾಗಿ ಸಮಯ ಕಳೆಯಬಹುದು. ಹೀಗೆ ಅವರೊಂದಿಗೆ ಸೇರಿ ಹರ್ಷಿಸಲು ನಾವು ಅವಕಾಶಗಳನ್ನು ಕಲ್ಪಿಸಬಹುದು.
ಜೊತೆಗೂಡಿ ಹರ್ಷಿಸಲು ನಮಗೆ ವಿಪುಲ ಕಾರಣಗಳಿವೆ ಅಲ್ಲವೇ? ಆದ್ದರಿಂದ ತಾವಾಯ್ತು, ತಮ್ಮ ಪಾಡಾಯ್ತು ಎನ್ನುವ ಲೋಕದ ಪ್ರವೃತ್ತಿ ನಮಗೆ ಸೋಂಕದಂತೆ ನೋಡಿಕೊಳ್ಳೋಣ. ನಮ್ಮ ಆನಂದವನ್ನು ಸಹೋದರರಲ್ಲಿ ಪಸರಿಸೋಣ. ಹೀಗೆ ಮಾಡುವಾಗ ಸಭೆಯ ಪ್ರೀತಿ ಐಕ್ಯತೆಯನ್ನು ಹೆಚ್ಚಿಸುತ್ತೇವೆ. ಮಾತ್ರವಲ್ಲ ಕ್ರೈಸ್ತ ಸಹೋದರ ಬಳಗದಲ್ಲಿ ಪೂರ್ಣವಾಗಿ ಆನಂದಿಸುತ್ತೇವೆ. (ಫಿಲಿ. 2:1, 2) ಹೌದು “ಯಾವಾಗಲೂ ಕರ್ತನಲ್ಲಿ ಹರ್ಷಿಸಿರಿ.” ಪೌಲನು ಹೀಗೆ ಉತ್ತೇಜನ ನೀಡುತ್ತಾನೆ: “ಹರ್ಷಿಸಿರಿ ಎಂದು ಮತ್ತೊಮ್ಮೆ ಹೇಳುತ್ತೇನೆ.”—ಫಿಲಿ. 4:4.
[ಪುಟ 6ರಲ್ಲಿರುವ ಚಿತ್ರ]
Globe: Courtesy of Replogle Globes