ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದುಃಖಿತರೆಲ್ಲರನ್ನು ಸಂತೈಸಿರಿ

ದುಃಖಿತರೆಲ್ಲರನ್ನು ಸಂತೈಸಿರಿ

ದುಃಖಿತರೆಲ್ಲರನ್ನು ಸಂತೈಸಿರಿ

‘ಯೆಹೋವನು ನನ್ನನ್ನು ಅಭಿಷೇಕಿಸಿದನು; . . . ದುಃಖಿತರೆಲ್ಲರನ್ನು ಸಂತೈಸಲು.’—ಯೆಶಾ. 61:1, 2.

1. ದುಃಖಿತರಿಗೆ ಯೇಸು ಹೇಗೆ ಸಹಾಯಮಾಡಿದನು? ಮತ್ತು ಏಕೆ?

“ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರ” ಎಂದು ಯೇಸು ಕ್ರಿಸ್ತ ಹೇಳಿದನು. (ಯೋಹಾ. 4:34) ತನ್ನ ತಂದೆ ಕೊಟ್ಟ ನೇಮಕವನ್ನು ಪೂರೈಸುವಾಗ ಆತನ ಸೊಗಸಾದ ಗುಣಗಳನ್ನು ಯೇಸು ಕನ್ನಡಿಯಷ್ಟೇ ನಿಚ್ಚಳವಾಗಿ ಪ್ರತಿಬಿಂಬಿಸಿದನು. ಆ ಗುಣಗಳಲ್ಲಿ ಒಂದು, ಜನರ ಮೇಲೆ ಯೆಹೋವನಿಗಿರುವ ಅಪಾರ ಪ್ರೀತಿ. (1 ಯೋಹಾ. 4:7-10) ಯೆಹೋವನು ಆ ಪ್ರೀತಿಯನ್ನು ತೋರಿಸುವ ಒಂದು ವಿಧ ಸಾಂತ್ವನ ಕೊಡುವ ಮೂಲಕವೇ. ‘ಸಕಲ ಸಾಂತ್ವನದ ದೇವರು’ ಎಂದು ಅಪೊಸ್ತಲ ಪೌಲನು ಹೇಳಿದಾಗ ಪ್ರೀತಿಯ ಈ ಅಂಶಕ್ಕೆ ಗಮನ ಸೆಳೆದನು. (2 ಕೊರಿಂ. 1:3) ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ ಜನರಿಗೆ ಸಾಂತ್ವನ ನೀಡುವ ಮೂಲಕ ಪ್ರೀತಿ ತೋರಿಸಿದನು. ಅವನು ಹೀಗೆ ಮಾಡುವನೆಂದು ಯೆಶಾಯ ಮೊದಲೇ ಪ್ರವಾದಿಸಿದ್ದನು. (ಯೆಶಾಯ 61:1, 2 ಓದಿ.) ಆ ಪ್ರವಾದನೆಯನ್ನು ಯೇಸು ನಜರೇತಿನ ಸಭಾಮಂದಿರದಲ್ಲಿ ಓದಿ ತನಗೆ ಅನ್ವಯಿಸಿದನು. (ಲೂಕ 4:16-21) ಶುಶ್ರೂಷೆ ಸಮಯದಲ್ಲೆಲ್ಲಾ ದುಃಖದುಮ್ಮಾನದಿಂದ ತೊಳಲಿಹೋದವರನ್ನು ಯೇಸು ಪ್ರೀತಿಯಿಂದ ಸಂತೈಸುತ್ತಾ ಮಾನಸಿಕ ಸ್ಥೈರ್ಯ ನೀಡಿದನು. ಅವರಿಗೆ ನೆಮ್ಮದಿ ತಂದನು.

2, 3. ಸಾಂತ್ವನ ಕೊಡುವ ವಿಚಾರದಲ್ಲಿ ಕ್ರೈಸ್ತರು ಯೇಸು ಕ್ರಿಸ್ತನನ್ನು ಏಕೆ ಅನುಕರಿಸಬೇಕು?

2 ಯೇಸುವಿನ ಹಿಂಬಾಲಕರೆಲ್ಲರೂ ಅವನ ಮಾದರಿಯನ್ನು ಅನುಕರಿಸಿ ನೊಂದವರಿಗೆ ಸಾಂತ್ವನ ನೀಡಬೇಕು. (1 ಕೊರಿಂ. 11:1) ಪೌಲ ಸಹ ಅದೇ ಉತ್ತೇಜನ ನೀಡಿದನು: “ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ ಇರಿ.” (1 ಥೆಸ. 5:11) ಹೌದು “ನಿಭಾಯಿಸಲು ಕಷ್ಟಕರವಾದ ಕಠಿನಕಾಲ” ಇದಾಗಿರುವುದರಿಂದ ನಾವು ಜನರಿಗೆ ಸಾಂತ್ವನ ಕೊಡುವುದು ಅತ್ಯಗತ್ಯ. (2 ತಿಮೊ. 3:1) ಬೇರೆಯವರ ಇರಿಯುವ ಮಾತು-ವರ್ತನೆಯಿಂದಾಗಿ ನೋವನ್ನು ನುಂಗುತ್ತಾ, ದುಃಖ, ಮನೋವ್ಯಥೆಯ ಕೂಪದಲ್ಲಿ ಬೇಯುತ್ತಾ ಬದುಕು ದೂಡುವ ಸಹೃದಯದ ಜನರು ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಇದ್ದಾರೆ.

3 ಬೈಬಲ್‌ ಪ್ರವಾದನೆ ತಿಳಿಸಿದಂತೆ ಈ ದುಷ್ಟ ಲೋಕದ ಕಡೇ ದಿವಸಗಳಲ್ಲಿ ಅನೇಕರು “ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ನಿಷ್ಠೆಯಿಲ್ಲದವರೂ ಸ್ವಾಭಾವಿಕ ಮಮತೆಯಿಲ್ಲದವರೂ ಯಾವುದೇ ಒಪ್ಪಂದಕ್ಕೆ ಸಿದ್ಧರಿಲ್ಲದವರೂ ಮಿಥ್ಯಾಪವಾದಿಗಳೂ ಸ್ವನಿಯಂತ್ರಣವಿಲ್ಲದವರೂ ಉಗ್ರರೂ ಒಳ್ಳೇತನವನ್ನು ಪ್ರೀತಿಸದವರೂ ದ್ರೋಹಿಗಳೂ ಹಟಮಾರಿಗಳೂ ಹೆಮ್ಮೆಯಿಂದ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವ ಬದಲು ಭೋಗವನ್ನು ಪ್ರೀತಿಸುವವರೂ” ಆಗಿದ್ದಾರೆ. ಇಂಥ ಮನೋಭಾವ ಹಿಂದೆಂದಿಗಿಂತಲೂ ಇಂದು ಜನರಲ್ಲಿ ಹೆಚ್ಚೆಚ್ಚಾಗಿದೆ. ಏಕೆಂದರೆ “ದುಷ್ಟರೂ ವಂಚಕರೂ . . . ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ” ಹೋಗಿದ್ದಾರೆ.—2 ತಿಮೊ. 3:2-4, 13.

4. ನಮ್ಮೀ ಸಮಯದಲ್ಲಿ ಲೋಕದ ಪರಿಸ್ಥಿತಿ ಹೇಗಿದೆ?

4 ಇದು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಕಾರಣ, “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ದೇವರ ವಾಕ್ಯವು ನೇರವಾಗಿ ತಿಳಿಸುತ್ತದೆ. (1 ಯೋಹಾ. 5:19) “ಇಡೀ ಲೋಕ” ಎಂದು ಹೇಳುವಾಗ ಅದರಲ್ಲಿ ರಾಜಕೀಯ, ಧಾರ್ಮಿಕ, ವಾಣಿಜ್ಯ ಕ್ಷೇತ್ರದ ಜೊತೆಗೆ, ಸೈತಾನನು ತನ್ನ ಆಲೋಚನೆಯನ್ನು ಬಿತ್ತರಿಸಲು ಬಳಸುವ ಸಕಲ ಮಾರ್ಗವಿಧಾನಗಳು ಸೇರಿವೆ. ಪಿಶಾಚನಾದ ಸೈತಾನನನ್ನು “ಈ ಲೋಕದ ಅಧಿಪತಿ,” “ಈ ವಿಷಯಗಳ ವ್ಯವಸ್ಥೆಯ ದೇವ” ಎಂದು ಕರೆದಿರುವುದು ತಕ್ಕದ್ದಾಗಿದೆ. (ಯೋಹಾ. 14:30; 2 ಕೊರಿಂ. 4:4) ತನ್ನನ್ನು ಯೆಹೋವನು ನಾಶಗೊಳಿಸಲು ಕೊಂಚವೇ ಸಮಯ ಉಳಿದಿದೆಯೆಂದು ತಿಳಿದಿರುವ ಸೈತಾನನು ಕೆಂಡಾಮಂಡಲವಾಗಿ ಇರುವುದರಿಂದ ಜಗತ್ತಿನೆಲ್ಲೆಡೆ ಪರಿಸ್ಥಿತಿ ಅಧೋಗತಿಗೆ ಇಳಿಯುತ್ತಿದೆ. (ಪ್ರಕ. 12:12) ಸೈತಾನನನ್ನೂ ಅವನ ಈ ದುಷ್ಟ ಲೋಕವನ್ನೂ ಹೀಗೆಯೇ ಮುಂದುವರಿಯಲು ದೇವರು ಇನ್ನು ಬಿಡನು ಎಂಬುದು ನಿಜಕ್ಕೂ ಸಾಂತ್ವನ ತರುವ ವಿಷಯವಾಗಿದೆ! ಯೆಹೋವನ ಪರಮಾಧಿಕಾರದ ವಿಷಯದಲ್ಲಿ ಸೈತಾನನು ಎಬ್ಬಿಸಿದ ವಿವಾದಾಂಶವೂ ಇತ್ಯರ್ಥವಾಗಲಿದೆ ಎಂಬುದು ಸಹ ನಮಗೆ ನೆಮ್ಮದಿ ತರುತ್ತದೆ.—ಆದಿಕಾಂಡ ಅಧ್ಯಾಯ 3; ಯೋಬ ಅಧ್ಯಾಯ 2.

ಭೂಸುತ್ತಲು ಸುವಾರ್ತೆ ಸಾರಲಾಗುತ್ತಿದೆ

5. ಸಾರುವ ಕೆಲಸದ ಕುರಿತ ಪ್ರವಾದನೆ ಈ ಕಡೇ ದಿವಸಗಳಲ್ಲಿ ಹೇಗೆ ನೆರವೇರುತ್ತಿದೆ?

5 ಮಾನವ ಇತಿಹಾಸದ ಅತಿ ಕಷ್ಟಕರ ಸಮಯವಾಗಿರುವ ಇಂದು ಯೇಸು ತಿಳಿಸಿದ ಈ ಪ್ರವಾದನೆ ನೆರವೇರುತ್ತಿದೆ: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” (ಮತ್ತಾ. 24:14) ದೇವರ ರಾಜ್ಯದ ಕುರಿತು ಸಾಕ್ಷಿ ನೀಡುವ ಈ ಕೆಲಸ ಭೂಸುತ್ತಲು ಮಿಂಚಿನ ವೇಗದಲ್ಲಿ ಮುಂದೆ ಸಾಗುತ್ತಿದೆ. ಇಂದು ಒಂದು ಲಕ್ಷದ ಏಳು ಸಾವಿರಕ್ಕಿಂತಲೂ ಹೆಚ್ಚು ಸಭೆಗಳಲ್ಲಿರುವ ಎಪ್ಪತ್ತೈದು ಲಕ್ಷಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಕುರಿತು ಭೂಸುತ್ತಲೂ ಸಾರುತ್ತಿದ್ದಾರೆ. ಯೇಸು ಸಾರಿದ ಮತ್ತು ಬೋಧಿಸಿದ ಮುಖ್ಯವಿಷಯ ಸಹ ದೇವರ ರಾಜ್ಯವಾಗಿತ್ತು. (ಮತ್ತಾ. 4:17) ಬಾಳಿನ ದುರಿತಗಳಿಂದ ಬೆಂದುನೊಂದವರಿಗೆ ಇಂದು ಈ ಸಾರುವ ಕೆಲಸದ ಮೂಲಕವಾಗಿ ಸಾಂತ್ವನ ಕೊಡಲಾಗುತ್ತಿದೆ. ಕಳೆದ ಎರಡೇ ವರ್ಷಗಳಲ್ಲಿ ಒಟ್ಟು ಐದು ಲಕ್ಷದ ಎಪ್ಪತ್ತು ಸಾವಿರದ ಆರುನೂರ ಒಂದು ಮಂದಿ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಾಗಿರುವುದು ಇದಕ್ಕೊಂದು ಪುರಾವೆ!

6. ಸಾರುವ ಚಟುವಟಿಕೆಯ ವ್ಯಾಪ್ತಿಯ ಕುರಿತು ನಿಮ್ಮ ಅಭಿಪ್ರಾಯವೇನು?

6 ಇಂದು ಯೆಹೋವನ ಸಾಕ್ಷಿಗಳು ಭಾಷಾಂತರಿಸುವ ಮತ್ತು ವಿತರಿಸುವ ಬೈಬಲ್‌ ಸಾಹಿತ್ಯ 500ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿವೆ. ಸಾರುವ ಕೆಲಸದ ವ್ಯಾಪ್ತಿಯನ್ನು ಇದರಿಂದ ನಾವು ಅಳೆಯಬಹುದು. ಇದು ಮಾನವ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ! ಯೆಹೋವನ ಸಂಘಟನೆಯ ಅಸ್ತಿತ್ವ, ಕಾರ್ಯನಿರ್ವಹಣೆ, ಮತ್ತು ಅಭಿವೃದ್ಧಿ ನಿಜಕ್ಕೂ ಅಸಾಧಾರಣ. ಇವೆಲ್ಲಾ ದೇವರ ಬಲಾಢ್ಯ ಪವಿತ್ರಾತ್ಮದ ಸಹಾಯ ಮತ್ತು ಮಾರ್ಗದರ್ಶನದಿಂದಲೇ ಆಗುತ್ತಿದೆ ಎಂಬುದಂತೂ ಸ್ಫಟಿಕ ಸ್ಪಷ್ಟ. ಪವಿತ್ರಾತ್ಮದ ನೆರವು ಇರದಿದ್ದಲ್ಲಿ ಸೈತಾನನ ಕೈಕೆಳಗಿರುವ ಈ ಲೋಕದಲ್ಲಿ ಇಷ್ಟನ್ನು ಸಾಧಿಸುವುದು ಅಸಾಧ್ಯ ಸಂಗತಿಯಾಗುತ್ತಿತ್ತು. ಸುವಾರ್ತೆ ಭೂಮಿಯ ಕಟ್ಟಕಡೆಯಲ್ಲೂ ಸಾರಲಾಗುತ್ತಿರುವ ಕಾರಣ ದೇವರ ರಾಜ್ಯದ ಸಂದೇಶಕ್ಕೆ ಕಿವಿಗೊಡುವ ಜನರು ಸಹ ಯೆಹೋವನ ಜನರಂತೆ ನೆಮ್ಮದಿ, ಸಾಂತ್ವನ ಪಡೆಯುತ್ತಿದ್ದಾರೆ.

ಜೊತೆ ಕ್ರೈಸ್ತರನ್ನು ಸಂತೈಸಿರಿ

7. (ಎ) ಇಂದಿರುವ ಸಂಕಷ್ಟಗಳನ್ನು ಯೆಹೋವನು ಈಗಲೇ ತೆಗೆದುಹಾಕಬೇಕೆಂದು ನಾವು ನಿರೀಕ್ಷಿಸಸಾಧ್ಯವಿಲ್ಲ ಏಕೆ? (ಬಿ) ನಾವು ಹಿಂಸೆ, ಸಂಕಟಗಳನ್ನು ತಾಳಿಕೊಳ್ಳಲು ಸಾಧ್ಯವೆಂದು ಏಕೆ ಹೇಳಬಲ್ಲೆವು?

7 ದುಷ್ಟತನ, ಸಂಕಷ್ಟಗಳೇ ತುಂಬಿತುಳುಕುತ್ತಿರುವ ಈ ಜಗತ್ತಿನಲ್ಲಿ ಒಂದಲ್ಲಾ ಒಂದು ವಿಷಯ ನಮ್ಮನ್ನು ದುಃಖದಲ್ಲಿ ಮುಳುಗಿಸಿ ಬಿಡಬಲ್ಲದು. ನಮ್ಮ ಕಷ್ಟನೋವುಗಳನ್ನು ದೇವರು ಈಗಲೇ ಸಂಪೂರ್ಣವಾಗಿ ನಿವಾರಿಸಬೇಕೆಂದು ನಾವು ನಿರೀಕ್ಷಿಸಸಾಧ್ಯವಿಲ್ಲ. ಅದಕ್ಕಾಗಿ ಆತನು ಈ ದುಷ್ಟ ಲೋಕವನ್ನು ನಾಶಗೊಳಿಸುವ ತನಕ ಕಾಯಬೇಕು. ಅಷ್ಟರ ವರೆಗೆ ಸಂಕಷ್ಟಗಳು ನಾವು ಯೆಹೋವನಿಗೆ ತೋರಿಸುವ ನಿಷ್ಠೆಯನ್ನು ಮತ್ತು ಆತನ ವಿಶ್ವ ಪರಮಾಧಿಕಾರಕ್ಕೆ ಕೊಡುವ ಬೆಂಬಲವನ್ನು ಪರೀಕ್ಷೆಗೊಡ್ಡುವವು. (2 ತಿಮೊ. 3:12) ಆದರೆ ಸ್ವರ್ಗದಲ್ಲಿರುವ ನಮ್ಮ ತಂದೆಯಾದ ದೇವರು ಕೊಡುವ ಸಹಾಯ ಮತ್ತು ಸಾಂತ್ವನದಿಂದ ನಾವು ಅವುಗಳನ್ನು ಪ್ರಾಚೀನ ಥೆಸಲೊನೀಕದ ಅಭಿಷಿಕ್ತ ಕ್ರೈಸ್ತರಂತೆ ತಾಳ್ಮೆ ಮತ್ತು ನಂಬಿಕೆಯಿಂದ ಸಹಿಸಿಕೊಳ್ಳಬಲ್ಲೆವು.2 ಥೆಸಲೊನೀಕ 1:3-5 ಓದಿ.

8. ಯೆಹೋವನು ತನ್ನ ಸೇವಕರನ್ನು ಸಂತೈಸುತ್ತಾನೆ ಎಂಬುದಕ್ಕೆ ಯಾವ ಶಾಸ್ತ್ರಾಧಾರವಿದೆ?

8 ಯೆಹೋವನು ತನ್ನ ಸೇವಕರಿಗೆ ಅಗತ್ಯವಿರುವ ಸಾಂತ್ವನವನ್ನು ಕೊಟ್ಟೇ ಕೊಡುತ್ತಾನೆ. ಪ್ರವಾದಿ ಎಲೀಯನ ಉದಾಹರಣೆ ಪರಿಗಣಿಸಿ. ದುಷ್ಟ ರಾಣಿ ಈಜೆಬೆಲ್‌ ಅವನಿಗೆ ಜೀವ ಬೆದರಿಕೆ ಹಾಕಿದಾಗ ಅವನ ಧೈರ್ಯವೆಲ್ಲ ಉಡುಗಿಹೋಯಿತು. ಊರನ್ನೇ ಬಿಟ್ಟು ಓಡಿಹೋದನು. ತನಗೆ ಸಾವಾದರೂ ಬರಬಾರದೇ ಎಂದು ಅಂಗಲಾಚಿದನು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಯೆಹೋವನು ಎಲೀಯನನ್ನು ಗದರಿಸಲಿಲ್ಲ. ಬದಲಿಗೆ ಅವನನ್ನು ಸಂತೈಸಿ ಪ್ರವಾದಿಯಾಗಿ ಮುಂದುವರಿಯಲು ಧೈರ್ಯಪಡಿಸಿದನು. (1 ಅರ. 19:1-21) ಯೆಹೋವನು ತನ್ನ ಜನರನ್ನು ಸಂತೈಸುತ್ತಾನೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಒಂದನೇ ಶತಮಾನದ ಕ್ರೈಸ್ತರು. ಅವರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತದೆ: “ಯೂದಾಯ ಗಲಿಲಾಯ ಸಮಾರ್ಯದಾದ್ಯಂತ ಇದ್ದ ಸಭೆಯು ಬಲಹೊಂದಿ ಅಲ್ಲಿ ಶಾಂತಿ ನೆಲೆಸಿತು.” ಮಾತ್ರವಲ್ಲ “ಅದು ಯೆಹೋವನ ಭಯದಲ್ಲಿ ನಡೆಯುತ್ತಾ ಪವಿತ್ರಾತ್ಮದಿಂದ ಸಾಂತ್ವನವನ್ನು ಹೊಂದುತ್ತಾ ಇದ್ದುದರಿಂದ ಅಭಿವೃದ್ಧಿಗೊಳ್ಳುತ್ತಾ ಹೋಯಿತು.” (ಅ. ಕಾ. 9:31) ನಮಗೆ ಕೂಡ “ಪವಿತ್ರಾತ್ಮದಿಂದ ಸಾಂತ್ವನ” ಸಿಗುತ್ತದೆ. ಅದಕ್ಕಾಗಿ ನಾವು ಹೃದಯದಾಳದಿಂದ ಕೃತಜ್ಞರಾಗಿರಬೇಕು!

9. ಯೇಸುವಿನ ಕುರಿತು ಕಲಿಯುವುದು ನಮಗೆ ಸಾಂತ್ವನ ತರಬಲ್ಲದೇಕೆ?

9 ಕ್ರೈಸ್ತರಾದ ನಾವು ಯೇಸು ಕ್ರಿಸ್ತನ ಕುರಿತು ಕಲಿಯುವ ಮತ್ತು ಅವನ ಹೆಜ್ಜೆಜಾಡಿನಲ್ಲಿ ನಡೆಯುವ ಮೂಲಕ ಸಾಂತ್ವನ ಪಡೆಯುತ್ತೇವೆ. “ಎಲೈ ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು. ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿಯಿರಿ; ಆಗ ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ. ಏಕೆಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ” ಎಂದು ಯೇಸು ಹೇಳಿದನು. (ಮತ್ತಾ. 11:28-30) ಜನರನ್ನು ಯೇಸು ಪ್ರೀತಿ, ಕನಿಕರದಿಂದ ಉಪಚರಿಸಿದ ವಿಧವನ್ನು ಕಲಿಯುವಾಗ ಹಾಗೂ ಅವನ ಆ ಉತ್ತಮ ಮಾದರಿಯನ್ನು ಅನುಸರಿಸುವಾಗ ಮಾನಸಿಕ ಒತ್ತಡದಿಂದ ಹೊರಬರಲು ಸಾಧ್ಯ.

10, 11. ಸಭೆಯಲ್ಲಿ ಯಾರು ನಮಗೆ ಸಾಂತ್ವನ ನೀಡಬಲ್ಲರು?

10 ಜೊತೆ ಕ್ರೈಸ್ತರಿಂದ ಸಹ ನಾವು ಸಾಂತ್ವನ ಪಡೆಯಸಾಧ್ಯ. ಉದಾಹರಣೆಗೆ, ಹಿರಿಯರು ಸಂಕಷ್ಟದಲ್ಲಿರುವವರನ್ನು ಹೇಗೆ ಸಂತೈಸುತ್ತಾರೆಂದು ಗಮನಿಸಿ. ಯಾಕೋಬನು ಹೀಗೆ ಬರೆದನು: “ನಿಮ್ಮಲ್ಲಿ [ಆಧ್ಯಾತ್ಮಿಕವಾಗಿ] ಅಸ್ವಸ್ಥನು ಯಾವನಾದರೂ ಇದ್ದಾನೊ? ಅವನು ಸಭೆಯ ಹಿರೀಪುರುಷರನ್ನು ತನ್ನ ಬಳಿಗೆ ಕರೆಸಿಕೊಳ್ಳಲಿ ಮತ್ತು ಅವರು . . . ಅವನಿಗೋಸ್ಕರ ಪ್ರಾರ್ಥಿಸಲಿ.” ಫಲಿತಾಂಶ? “ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಅಸ್ವಸ್ಥನನ್ನು ಗುಣಪಡಿಸುವುದು ಮತ್ತು ಯೆಹೋವನು ಅವನನ್ನು ಎಬ್ಬಿಸುವನು. ಇದಲ್ಲದೆ ಅವನು ಪಾಪಗಳನ್ನು ಮಾಡಿರುವುದಾದರೆ ಅವು ಅವನಿಗೆ ಕ್ಷಮಿಸಲ್ಪಡುವವು.” (ಯಾಕೋ. 5:14, 15) ಇತರ ಸಹೋದರ ಸಹೋದರಿಯರು ಸಹ ನಮಗೆ ಸಾಂತ್ವನ ಕೊಡುತ್ತಾರೆ.

11 ಮಹಿಳೆಯು ತನ್ನ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಇನ್ನೋರ್ವ ಮಹಿಳೆಯೊಂದಿಗೆ ಮಾತಾಡಲು ಇಷ್ಟಪಡುತ್ತಾಳೆ. ಹಿರಿ ವಯಸ್ಸಿನ ಅನುಭವಸ್ಥ ಸಹೋದರಿಯರು ಯುವ ಸಹೋದರಿಯರಿಗೆ ಉತ್ತಮ ಸಲಹೆ ಕೊಡುವುದು ಪರಿಣಾಮಕಾರಿ. ಯುವ ಸಹೋದರಿಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೆಚ್ಚಾಗಿ ಪ್ರೌಢರಾದ ಹಿರಿಯ ಸಹೋದರಿಯರು ಈಗಾಗಲೇ ಜಯಿಸಿ ಬಂದವರಾಗಿರುತ್ತಾರೆ. ಆದ್ದರಿಂದ ಅನುಕಂಪ, ಅಕ್ಕರೆಯಂಥ ಗುಣಗಳನ್ನು ಅವರು ತೋರಿಸುವಾಗ ಕಿರಿವಯಸ್ಸಿನ ಸ್ತ್ರೀಯರು ತಮ್ಮ ಮನಸ್ಸಿನ ಭಾರವನ್ನು ಇಳಿಸಿ ಮುಂದೆ ಸಾಗಲು ನೆರವಾಗುವುದು. (ತೀತ 2:3-5 ಓದಿ.) ಇತರರು ಸಹಾಯ ಮಾಡಲು ಸಾಧ್ಯವಿಲ್ಲವೆಂದಲ್ಲ. ಮನಗುಂದಿದ ಸಹೋದರಿಯರಿಗೆ ಹಿರಿಯರೂ ಇತರರೂ ಸಹ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಬೇಕು. (1 ಥೆಸ. 5:14, 15) ನಾವೆಂದೂ ಒಂದು ವಿಷಯವನ್ನು ಮರೆಯದಿರೋಣ. ಏನೆಂದರೆ, “ನಮ್ಮ ಎಲ್ಲ ಸಂಕಟಗಳಲ್ಲಿ [ದೇವರು] ನಮ್ಮನ್ನು ಸಾಂತ್ವನಗೊಳಿಸುತ್ತಾನೆ; ಹೀಗೆ . . . ಯಾವುದೇ ರೀತಿಯ ಸಂಕಟದಲ್ಲಿರುವವರನ್ನು ನಾವು ಸಾಂತ್ವನಗೊಳಿಸಲು ಶಕ್ತರಾಗುತ್ತೇವೆ.”—2 ಕೊರಿಂ. 1:4.

12. ನಾವು ಕ್ರೈಸ್ತ ಕೂಟಗಳಿಗೆ ಹಾಜರಾಗಲೇಬೇಕು ಏಕೆ?

12 ನಾವು ಸಾಂತ್ವನ ಪಡೆಯುವ ಮತ್ತೊಂದು ಪ್ರಮುಖ ವಿಧ ಕ್ರೈಸ್ತ ಕೂಟಗಳು. ಕೂಟಗಳಿಗೆ ಹಾಜರಿರುವಾಗ ಅಲ್ಲಿ ನಡೆಯುವ ಬೈಬಲಾಧರಿತ ಚರ್ಚೆಗಳು ಕುಗ್ಗಿದ ಮನಸ್ಸಿನಲ್ಲಿ ನವಚೈತನ್ಯ ತುಂಬುತ್ತವೆ. ಯೂದ ಮತ್ತು ಸೀಲರು “ಅನೇಕ ಮಾತುಗಳಿಂದ ಸಹೋದರರನ್ನು ಉತ್ತೇಜಿಸಿ ಅವರನ್ನು ಬಲಪಡಿಸಿದರು” ಎಂದು ಬೈಬಲ್‌ ಹೇಳುತ್ತದೆ. (ಅ. ಕಾ. 15:32) ಕೂಟಗಳಿಗೆ ಮುಂಚೆ ಮತ್ತು ನಂತರ ಸಹೋದರ ಸಹೋದರಿಯರೊಂದಿಗೆ ಮಾತಾಡುವುದರಿಂದ ನಮಗೆ ಹಾಯೆನಿಸುತ್ತದೆ. ಆದ್ದರಿಂದ ನೀವು ದುಃಖದಿಂದ ಕುಗ್ಗಿಹೋಗಿರುವಾಗಲೂ ಸಹೋದರ ಸಹೋದರಿಯರೊಂದಿಗೆ ಬೆರೆಯಿರಿ. ಅವರಿಂದ ನಿಮ್ಮನ್ನು ಬೇರ್ಪಡಿಸಿಕೊಳ್ಳಬೇಡಿ. ಅದು ಸಮಸ್ಯೆಯನ್ನು ಪರಿಹರಿಸದು. (ಜ್ಞಾನೋ. 18:1) ಹಾಗಾಗಿ, ದೇವಪ್ರೇರಣೆಯಿಂದ ಅಪೊಸ್ತಲ ಪೌಲನು ಕೊಟ್ಟ ಈ ಸಲಹೆಯನ್ನು ನಾವೆಲ್ಲರೂ ಪಾಲಿಸೋಣ: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ; ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡಿರಿ.”—ಇಬ್ರಿ. 10:24, 25.

ದೇವರ ವಾಕ್ಯದಿಂದ ಸಾಂತ್ವನ

13, 14. ಬೈಬಲ್‌ ನಮ್ಮನ್ನು ಹೇಗೆ ಸಂತೈಸಬಲ್ಲದು?

13 ನಾವು ದೀಕ್ಷಾಸ್ನಾನ ಪಡೆದಿರುವ ಸಾಕ್ಷಿಗಳಾಗಿರಲಿ ಅಥವಾ ದೇವರ ಹಾಗೂ ಆತನ ಉದ್ದೇಶಗಳ ಕುರಿತು ಈಗಷ್ಟೇ ಕಲಿಯಲು ಆರಂಭಿಸಿರಲಿ ನಮ್ಮೆಲ್ಲರಿಗೂ ದೇವರ ವಾಕ್ಯವಾದ ಬೈಬಲ್‌ ಸಾಂತ್ವನದ ಮೂಲ ಆಗಿರಬಲ್ಲದು. “ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು; ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವಂತೆ ಅವು ಬರೆಯಲ್ಪಟ್ಟವು” ಎಂದು ಪೌಲ ಹೇಳಿದನು. (ರೋಮ. 15:4) ಈ ಪವಿತ್ರ ಶಾಸ್ತ್ರಗ್ರಂಥದಲ್ಲಿರುವ ಮಾತುಗಳು ನಮ್ಮನ್ನು ಸಂತೈಸಿ ‘ಪೂರ್ಣ ಸಮರ್ಥರನ್ನಾಗಿ ಮಾಡಿ ಸಕಲ ಸತ್ಕಾರ್ಯಗಳಿಗೆ ಸಂಪೂರ್ಣ ಸನ್ನದ್ಧರನ್ನಾಗಿ’ ಮಾಡುವವು. (2 ತಿಮೊ. 3:16, 17) ಮಾತ್ರವಲ್ಲ ದೇವರ ಉದ್ದೇಶಗಳೇನೆಂದು ತಿಳಿಯುವುದು ಮತ್ತು ಭವಿಷ್ಯತ್ತಿಗಾಗಿ ದೃಢ ನಿರೀಕ್ಷೆ ಹೊಂದಿರುವುದು ನಮ್ಮನ್ನು ಸಾಂತ್ವನಗೊಳಿಸುತ್ತದೆ. ಹಾಗಾಗಿ ನಮ್ಮನ್ನು ಸಂತೈಸಿ ಹೃದಯದ ಭಾರವನ್ನು ಹಗುರ ಮಾಡುವ ಹಾಗೂ ಇನ್ನಿತರ ಪ್ರಯೋಜನಗಳನ್ನು ತರುವ ದೇವರ ವಾಕ್ಯವನ್ನೂ ಬೈಬಲಾಧರಿತ ಪ್ರಕಾಶನಗಳನ್ನೂ ಓದಿ ಅಧ್ಯಯನ ಮಾಡೋಣ.

14 ಯೇಸು ಇತರರಿಗೆ ಬೋಧಿಸಲು ಹಾಗೂ ಸಂತೈಸಲು ದೇವರ ವಾಕ್ಯವನ್ನು ಉಪಯೋಗಿಸಿದನು. ಪುನರುತ್ಥಾನದ ನಂತರ ಅವನೊಮ್ಮೆ ಇಬ್ಬರು ಶಿಷ್ಯರಿಗೆ “ಶಾಸ್ತ್ರಗ್ರಂಥವನ್ನು ಸಂಪೂರ್ಣವಾಗಿ ವಿವರಿಸಿ” ಹೇಳಿದನು. ಇದು ಆ ಶಿಷ್ಯರನ್ನು ಸಂತೈಸಿತು. (ಲೂಕ 24:32) ಯೇಸುವಿನ ಈ ಉತ್ತಮ ಮಾದರಿಯನ್ನು ಅನುಕರಿಸಿದ ಅಪೊಸ್ತಲ ಪೌಲನು ಜನರೊಂದಿಗೆ “ಶಾಸ್ತ್ರಗ್ರಂಥದಿಂದ” ತರ್ಕಿಸಿದನು. ಬೆರೋಯದಲ್ಲಿ ಅವನಿಗೆ ಕಿವಿಗೊಟ್ಟವರು “ದೇವರ ವಾಕ್ಯವನ್ನು ಅತಿ ಸಿದ್ಧಮನಸ್ಸಿನಿಂದ ಸ್ವೀಕರಿಸಿ . . . ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು.” (ಅ. ಕಾ. 17:2, 10, 11) ಹಾಗೆಯೇ ನಾವು ಸಹ ಬೈಬಲನ್ನು ಪ್ರತಿದಿನವೂ ಓದುವುದು ಬಹಳ ಉತ್ತಮ! ಜೊತೆಯಲ್ಲಿ ಕ್ರೈಸ್ತ ಪ್ರಕಾಶನಗಳಿಂದಲೂ ಪ್ರಯೋಜನ ಪಡೆಯುತ್ತಿರೋಣ. ಅವು ನಮ್ಮ ಹಾಗೂ ಇತರರ ಹೃದಯಗಳನ್ನು ಸಂತೈಸಿ ಈ ಸಂಕಟಮಯ ಸಮಯದಲ್ಲಿ ನಿರೀಕ್ಷೆ ಕೊಡಲಿಕ್ಕೆಂದೇ ಇವೆ.

ಸಂತೈಸುವ ಇತರ ವಿಧಗಳು

15, 16. ಜೊತೆ ಕ್ರೈಸ್ತರಿಗೆ ಸಹಾಯಮಾಡುವ ಹಾಗೂ ಸಂತೈಸುವ ಹಲವು ವಿಧಗಳಾವುವು?

15 ನಮ್ಮ ಜೊತೆ ಕ್ರೈಸ್ತರಿಗೆ ಸಹಾಯಮಾಡುವ ಮೂಲಕ ನಾವವರನ್ನು ಸಂತೈಸಬಹುದು. ಉದಾಹರಣೆಗೆ, ವಯಸ್ಸಾದ ಜೊತೆಕ್ರೈಸ್ತರೊಬ್ಬರು ಅಸ್ವಸ್ಥರಾಗಿರುವಲ್ಲಿ ಅವರಿಗೆ ಮಾರ್ಕೆಟಿನಿಂದ ಬೇಕಾದ ವಸ್ತುಗಳನ್ನು ತಂದುಕೊಡಬಹುದು. ಮನೆಕೆಲಸಗಳನ್ನು ಮಾಡಿಕೊಡುವ ಮೂಲಕವೂ ಕಾಳಜಿ ತೋರಿಸಬಹುದು. (ಫಿಲಿ. 2:4) ಇತರರ ಒಳ್ಳೇ ಗುಣಗಳನ್ನು ಅಂದರೆ ಅವರಲ್ಲಿರುವ ಪ್ರೀತಿ, ಪ್ರತಿಭೆ, ಧೈರ್ಯ, ನಂಬಿಕೆಯನ್ನು ಪ್ರಶಂಸಿಸುವುದು ಸಹ ನೊಂದ ಹೃದಯವನ್ನು ಸಾಂತ್ವನಗೊಳಿಸಿ ಪ್ರಫುಲ್ಲಗೊಳಿಸುವುದು.

16 ವೃದ್ಧ ಕ್ರೈಸ್ತರನ್ನು ಸಾಂತ್ವನಗೊಳಿಸಲು ಅವರನ್ನು ಭೇಟಿಮಾಡಿ ಅವರ ಅನುಭವ, ಯೆಹೋವನ ಸೇವೆಯಲ್ಲಿ ಅವರು ಪಡೆದ ಆಶೀರ್ವಾದಗಳ ಕುರಿತು ಕೇಳಬಹುದು. ಇದರಿಂದ ಎಷ್ಟೋ ಸಾರಿ ನಮಗೂ ಉತ್ತೇಜನ ಸಾಂತ್ವನ ಸಿಗುತ್ತದೆ! ಬೈಬಲನ್ನೋ ಬೈಬಲಾಧರಿತ ಪ್ರಕಾಶನಗಳನ್ನೋ ಅವರೊಂದಿಗೆ ಓದಬಹುದು. ಆ ವಾರದ ಕಾವಲಿನಬುರುಜು ಅಧ್ಯಯನದಲ್ಲಿ ಪರಿಗಣಿಸಲಿರುವ ಲೇಖನವನ್ನು ಅಥವಾ ಸಭಾ ಬೈಬಲ್‌ ಅಧ್ಯಯನದಲ್ಲಿ ಪರಿಗಣಿಸಲಿರುವ ವಿಷಯವನ್ನು ಅವರೊಂದಿಗೆ ಓದಬಹುದು. ಬೈಬಲಾಧರಿತ ಡಿವಿಡಿಗಳನ್ನು ವೀಕ್ಷಿಸಬಹುದು. ನಮ್ಮ ಸಾಹಿತ್ಯದಲ್ಲಿರುವ ಉತ್ತೇಜನಕಾರಿ ಅನುಭವಗಳನ್ನೂ ಅವರೊಂದಿಗೆ ಹಂಚಿಕೊಳ್ಳಬಹುದು ಅಥವಾ ಓದಿ ಹೇಳಬಹುದು.

17, 18. ಯೆಹೋವನು ತನ್ನ ನಿಷ್ಠಾವಂತ ಸೇವಕರನ್ನು ಬೆಂಬಲಿಸಿ ಸಂತೈಸುವನೆಂದು ನಾವೇಕೆ ಭರವಸೆಯಿಂದ ಇರಬಲ್ಲೆವು?

17 ಒಬ್ಬ ಸಹೋದರನಿಗೋ ಸಹೋದರಿಗೋ ಸಾಂತ್ವನದ ಅಗತ್ಯವಿದೆ ಎಂದು ನಮಗೆ ತಿಳಿದುಬಂದರೆ ಅವರಿಗಾಗಿ ನಾವು ಪ್ರಾರ್ಥಿಸಬಹುದು. (ರೋಮ. 15:30; ಕೊಲೊ. 4:12) ನಿಮ್ಮ ಸಮಸ್ಯೆಗಳನ್ನು ನಿಭಾಯಿಸಿಕೊಂಡು ಹೋಗಲು ಪ್ರಯತ್ನಿಸುತ್ತಾ ಹಾಗೆಯೇ ಇತರರನ್ನೂ ಸಂತೈಸಲು ಶ್ರಮಿಸುವಾಗ ಕೀರ್ತನೆಗಾರನ ನಂಬಿಕೆ ಹಾಗೂ ದೃಢಚಿತ್ತ ನಿಮ್ಮಲ್ಲಿರಲಿ. ಅವನು ಹಾಡಿದ್ದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತ. 55:22) ತನ್ನ ನಿಷ್ಠಾವಂತ ಸೇವಕರನ್ನು ಯೆಹೋವನು ಯಾವಾಗಲೂ ಸಂತೈಸಿ ಬಲಪಡಿಸುತ್ತಾನೆಂಬ ಭರವಸೆ ನಿಮಗಿರಲಿ.

18 ದೇವರು ತನ್ನ ಪ್ರಾಚೀನ ಸೇವಕರಿಗೆ ಹೀಗಂದನು: “ನಾನೇ, ನಾನೇ ನಿನ್ನನ್ನು ಸಂತೈಸುವವ.” (ಯೆಶಾ. 51:12) ಯೆಹೋವನು ನಮ್ಮನ್ನು ಕೂಡ ಹಾಗೆ ಸಂತೈಸುವನು. ಮನನೊಂದವರನ್ನು ನಾವು ನಡೆನುಡಿಯ ಮೂಲಕ ಸಂತೈಸುವಲ್ಲಿ ನಮ್ಮನ್ನು ಆಶೀರ್ವದಿಸುವನು. ನಮಗೆ ಸ್ವರ್ಗಕ್ಕೆ ಹೋಗುವ ನಿರೀಕ್ಷೆಯಿರಲಿ ಭೂನಿರೀಕ್ಷೆಯಿರಲಿ ಪೌಲನು ತನ್ನ ಆತ್ಮಾಭಿಷಿಕ್ತ ಸಹೋದರರಿಗೆ ಹೇಳಿದ ಈ ಮಾತುಗಳಿಂದ ಸಾಂತ್ವನ ಪಡೆಯುವೆವು: “ನಮ್ಮ ಕರ್ತನಾದ ಯೇಸು ಕ್ರಿಸ್ತನೂ ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಸಾಂತ್ವನವನ್ನೂ ಒಳ್ಳೇ ನಿರೀಕ್ಷೆಯನ್ನೂ ಅಪಾತ್ರ ದಯೆಯಿಂದ ನೀಡಿದಂಥ ತಂದೆಯಾದ ದೇವರೂ ನಿಮ್ಮ ಹೃದಯಗಳನ್ನು ಸಾಂತ್ವನಗೊಳಿಸಿ, ಪ್ರತಿಯೊಂದು ಸತ್ಕಾರ್ಯದಲ್ಲಿಯೂ ಮಾತಿನಲ್ಲಿಯೂ ನಿಮ್ಮನ್ನು ದೃಢಪಡಿಸಲಿ.”—2 ಥೆಸ. 2:16, 17.

ನೆನಪಿದೆಯಾ?

• ದುಃಖಿತರನ್ನು ಸಂತೈಸುವ ನಮ್ಮ ಕೆಲಸ ಎಷ್ಟು ವ್ಯಾಪಕವಾಗಿ ನಡೆಯುತ್ತಿದೆ?

• ದುಃಖಿತರನ್ನು ಸಾಂತ್ವನಗೊಳಿಸಲು ನಾವು ಏನೆಲ್ಲ ಮಾಡಬಹುದು?

• ಯೆಹೋವನು ತನ್ನ ಜನರನ್ನು ಸಂತೈಸುತ್ತಾನೆ ಎಂಬುದಕ್ಕೆ ಬೈಬಲಿನಲ್ಲಿ ಯಾವ ಆಧಾರವಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 28ರಲ್ಲಿರುವ ಚಿತ್ರ]

ದುಃಖದಲ್ಲಿರುವ ಜನರನ್ನು ಸಂತೈಸುವಿರಾ?

[ಪುಟ 30ರಲ್ಲಿರುವ ಚಿತ್ರ]

ಹಿರಿಕಿರಿಯರೆಲ್ಲರು ಉತ್ತೇಜನದ ಚಿಲುಮೆ ಆಗಿರಬಲ್ಲರು