ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸೇವೆ ಆಹ್ಲಾದಕರ

ಯೆಹೋವನ ಸೇವೆ ಆಹ್ಲಾದಕರ

ಯೆಹೋವನ ಸೇವೆ ಆಹ್ಲಾದಕರ

ಫ್ರೆಡ್‌ ರಸ್ಕ್‌ ಹೇಳಿದಂತೆ

“ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” ಕೀರ್ತನೆ 27:10ರಲ್ಲಿರುವ ದಾವೀದನ ಈ ಮಾತುಗಳು ನನ್ನ ಬಾಲ್ಯದಲ್ಲೇ ಸತ್ಯವಾದವು. ಹೇಗೆಂದು ಹೇಳುತ್ತೇನೆ . . .

ನಾನು ಬೆಳೆದದ್ದು ಅಜ್ಜನ ಮನೆಯಲ್ಲಿ. ಅಮೆರಿಕದ ಜಾರ್ಜಿಯದಲ್ಲಿದ್ದ ಅಜ್ಜನ ಮನೆಯು ಹತ್ತಿ ಬೆಳೆಯುವ ಫಾರ್ಮ್‌ನಲ್ಲಿತ್ತು. ಅದು 1930ರ ದಶಕ. ಅಮೆರಿಕ ಆರ್ಥಿಕ ಕುಸಿತದಿಂದ ತತ್ತರಿಸುತ್ತಿತ್ತು. ಅಮ್ಮನ ಹಾಗೂ ಆಗ ತಾನೇ ಹುಟ್ಟಿದ ನನ್ನ ಪುಟ್ಟ ತಮ್ಮನ ಅಗಲುವಿಕೆ ಅಪ್ಪನನ್ನು ತೀವ್ರ ದುಃಖದಲ್ಲಿ ಮುಳುಗಿಸಿತು. ಅವರು ನನ್ನನ್ನು ಅಜ್ಜನ ಮನೆಯಲ್ಲಿ ಬಿಟ್ಟು ನೌಕರಿ ಹುಡುಕುತ್ತಾ ದೂರದ ಪಟ್ಟಣಕ್ಕೆ ಹೋದರು. ಸ್ವಲ್ಪ ಕಾಲದ ನಂತರ ನನ್ನನ್ನು ಕರೆಸಿಕೊಳ್ಳಲು ತುಂಬ ಪ್ರಯತ್ನಿಸಿದರೂ ಅದು ಕೈಗೂಡಲಿಲ್ಲ.

ಅಜ್ಜಿ ತೀರಿಹೋಗಿದ್ದ ಕಾರಣ ನನ್ನ ಅತ್ತೆಯಂದಿರೇ ಮನೆ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಅಜ್ಜ ಧಾರ್ಮಿಕ ವ್ಯಕ್ತಿ ಆಗಿರಲಿಲ್ಲ. ಆದರೆ ಅವರ ಹೆಣ್ಣುಮಕ್ಕಳು ಅಂದರೆ ನನ್ನ ಅತ್ತೆಯಂದಿರು ಪಕ್ಕಾ ಬ್ಯಾಪ್ಟೀಸ್ಟರಾಗಿದ್ದರು. ನಾನು ಪ್ರತಿ ಭಾನುವಾರ ಚರ್ಚಿಗೆ ಹೋಗದಿದ್ದರೆ ಅವರು ಹೊಡೆಯುತ್ತಿದ್ದರು. ಹಾಗಾಗಿ ಧರ್ಮದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಅಭಿಮಾನ ಇರಲಿಲ್ಲ. ಆದರೆ ಆಟಪಾಠ ಅಂದರೆ ಬಹಳ ಆಸಕ್ತಿ.

ಅಂಕಲ್‌ ಭೇಟಿ ಬದುಕನ್ನು ಬದಲಾಯಿಸಿತು

1941ರ ಒಂದು ಮಧ್ಯಾಹ್ನದಂದು ವೃದ್ಧರೊಬ್ಬರು ಪತ್ನಿಯೊಂದಿಗೆ ನಮ್ಮ ಮನೆಗೆ ಬಂದರು. ನನಗಾಗ 15 ವಯಸ್ಸು. “ಇವರು ನಿನ್ನ ಅಂಕಲ್‌ ಟಾಲ್‌ಮಾಡ್ಜ್‌ ರಸ್ಕ್‌” ಎಂದು ಪರಿಚಯಿಸಲಾಯಿತು. ಅವರ ಬಗ್ಗೆ ನಾನೆಂದೂ ಕೇಳಿರಲಿಲ್ಲ. ಅವರು ಯೆಹೋವನ ಸಾಕ್ಷಿಗಳೆಂದು ಆಮೇಲೆ ಗೊತ್ತಾಯಿತು. ದೇವರ ಉದ್ದೇಶದ ಕುರಿತು ಅವರು ಮಾತಾಡುತ್ತಾ ಮಾನವರು ಶಾಶ್ವತವಾಗಿ ಈ ಭೂಮಿ ಮೇಲೆ ಬದುಕುವರೆಂದು ತಿಳಿಸಿದರು. ಚರ್ಚ್‌ನಲ್ಲಿ ಕಲಿಸುತ್ತಿದ್ದ ವಿಷಯಕ್ಕೂ ಇವರು ಹೇಳಿದ ವಿಷಯಕ್ಕೂ ಅಜಗಂಜಾಂತರವನ್ನು ಗಮನಿಸಿದೆ. ಅವರು ಹೇಳಿದ ವಿಷಯ ಮನೆಯಲ್ಲಿ ಯಾರಿಗೂ ಹಿಡಿಸಲಿಲ್ಲ. ಬೈದು ಸಾಗಹಾಕಿದ ಅವರನ್ನು ಮತ್ತೆಂದೂ ಮನೆಗೆ ಸೇರಿಸಲಿಲ್ಲ. ಆದರೆ ನನಗಿಂತ ಮೂರು ವರ್ಷ ದೊಡ್ಡವರಾಗಿದ್ದ ಮೇರಿ ಅತ್ತೆ ಮಾತ್ರ ಅವರಿಂದ ಬೈಬಲನ್ನೂ ಅದನ್ನು ತಿಳಿಯಲು ಸಹಾಯ ಮಾಡುವ ಕೆಲವು ಪ್ರಕಾಶನಗಳನ್ನೂ ತಕ್ಕೊಂಡರು.

ಅವನ್ನು ಓದಿದ ಕೂಡಲೆ ಅದು ಸತ್ಯವೆಂದು ಅವರಿಗೆ ಮನದಟ್ಟಾಯಿತು. ಅವರು 1942ರಲ್ಲಿ ದೀಕ್ಷಾಸ್ನಾನ ಹೊಂದಿ ಯೆಹೋವನ ಸಾಕ್ಷಿಯಾದರು. “ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವುದು ನಿಶ್ಚಯ” ಎಂಬ ಯೇಸುವಿನ ಮಾತು ಅವರ ಪಾಲಿಗೆ ಸತ್ಯವಾಯಿತು. (ಮತ್ತಾ. 10:34-36) ಕುಟುಂಬದವರ ವಿರೋಧ ತೀವ್ರವಾಯಿತು. ರಾಜಕೀಯ ವರ್ಚಸ್ಸಿದ್ದ ದೊಡ್ಡ ಅತ್ತೆ ನಗರಾಧ್ಯಕ್ಷರೊಂದಿಗೆ ಪಿತೂರಿ ನಡೆಸಿ ಅಂಕಲ್‌ ಟಾಲ್‌ಮಾಡ್ಜ್‌ರನ್ನು ಜೈಲಿಗೆ ಹಾಕಿಸಿದರು. ಅವರು ಮನೆಮನೆಗೆ ಹೋಗಿ ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಾರೆ ಎಂಬ ಆರೋಪ ಹೊರಿಸಿದರು.

ಆ ಕುರಿತು ನಮ್ಮೂರಿನ ವಾರ್ತಾಪತ್ರಿಕೆ ವರದಿಸುತ್ತಾ ನಗರಾಧ್ಯಕ್ಷರ ಹೇಳಿಕೆಯನ್ನು ಬಿತ್ತರಿಸಿತು. “ಈ ಮನುಷ್ಯ ವಿತರಿಸುವ ಪುಸ್ತಕಗಳು ವಿಷದಷ್ಟೇ ಅಪಾಯಕಾರಿ” ಎಂದು ಅವರು ನಗರ ನ್ಯಾಯಾಲಯದಲ್ಲಿ ಹೇಳಿದ್ದನ್ನು ತಿಳಿಸಿತು. ಈ ನಗರಾಧ್ಯಕ್ಷರು ನ್ಯಾಯಾಧೀಶರೂ ಆಗಿದ್ದರು. ಆದರೆ ಅಂಕಲ್‌ ಮೇಲ್ಮನವಿ ಸಲ್ಲಿಸಿ ಕೇಸಲ್ಲಿ ಗೆದ್ದರು. ಅಷ್ಟರೊಳಗೆ 10 ದಿನಗಳನ್ನು ಜೈಲಲ್ಲಿ ಕಳೆಯಬೇಕಾಗಿ ಬಂತು.

ಅತ್ತೆಯ ಅಕ್ಕರೆ

ಮೇರಿ ಅತ್ತೆ ತಮ್ಮ ಹೊಸ ನಂಬಿಕೆಯ ಕುರಿತು ನನ್ನೊಂದಿಗೆ ಮಾತ್ರವಲ್ಲ ನೆರೆಯವರೊಂದಿಗೂ ಮಾತಾಡುತ್ತಿದ್ದರು. ಅವರು ಒಬ್ಬ ವ್ಯಕ್ತಿಗೆ ದ ನ್ಯೂ ವರ್ಲ್ಡ್‌ * ಎಂಬ ಪುಸ್ತಕವನ್ನು ಕೊಟ್ಟಿದ್ದರು. ಅತ್ತೆ ಆ ವ್ಯಕ್ತಿಗೆ ಬೈಬಲ್‌ ಅಧ್ಯಯನ ನಡೆಸಲು ಹೋದಾಗ ನಾನೂ ಒಮ್ಮೆ ಜೊತೆಗೂಡಿದೆ. ಆ ವ್ಯಕ್ತಿ ಪುಸ್ತಕವನ್ನು ರಾತ್ರಿಯೆಲ್ಲಾ ನಿದ್ರೆ ಬಿಟ್ಟು ಓದಿದ್ದಾಗಿ ಅವನ ಪತ್ನಿ ಹೇಳಿದಳು. ಧರ್ಮದ ವಿಷಯದಲ್ಲಿ ದುಡುಕಿ ಮುಂದೆ ಹೋಗಲು ನನಗೆ ಇಷ್ಟವಿರಲಿಲ್ಲವಾದರೂ ಕಲಿತ ವಿಷಯಗಳು ನನ್ನ ಮನಸ್ಸಿಗೆ ಹಿಡಿಸಿದವು. ನಿಜ ಹೇಳಬೇಕೆಂದರೆ, ಯೆಹೋವನ ಸಾಕ್ಷಿಗಳು ದೇವಜನರೆಂದು ನನಗೆ ಹೆಚ್ಚಾಗಿ ಮನದಟ್ಟು ಮಾಡಿದ್ದು ಬೈಬಲ್‌ ಬೋಧನೆಗಳಲ್ಲ, ಬದಲಾಗಿ ಅವರಿಗೆ ಬರುತ್ತಿದ್ದ ವಿರೋಧ!

ಉದಾಹರಣೆಗೆ ಒಂದು ದಿನ ಮೇರಿ ಅತ್ತೆ ಮತ್ತು ನಾನು ಮನೆಗೆ ವಾಪಸಾದಾಗ ಇತರ ಅತ್ತೆಯಂದಿರೆಲ್ಲಾ ಸೇರಿ ಪ್ರಕಾಶನಗಳನ್ನು, ಫೋನೋಗ್ರಾಫ್‌ ಮತ್ತು ಬೈಬಲ್‌ ಸಂದೇಶವಿದ್ದ ಅದರ ರೆಕಾರ್ಡ್‌ಗಳನ್ನು ಸುಟ್ಟುಹಾಕಿದ್ದರು. ಸಿಟ್ಟು ತಡೆಯದೆ ಅವರ ಮೇಲೆ ರೇಗಾಡಿದೆ. “ನಾವು ಮಾಡಿದ್ದೇ ಸರಿ ಅಂತ ನಿನಗೆ ಒಂದಲ್ಲಾ ಒಂದಿನ ಗೊತ್ತಾಗುತ್ತೆ” ಎಂಬ ಕೊಂಕು ಉತ್ತರ ಸಿಕ್ಕಿತಷ್ಟೆ.

ಮೇರಿ ಅತ್ತೆ ತನ್ನ ಹೊಸ ನಂಬಿಕೆಯನ್ನು ಬಿಟ್ಟುಕೊಡಲು ಮತ್ತು ಸುವಾರ್ತೆ ಸಾರುವುದನ್ನು ನಿಲ್ಲಿಸಲು ಸುತರಾಂ ತಯಾರಿರಲಿಲ್ಲ. ಹಾಗಾಗಿ 1943ರಲ್ಲಿ ಆಕೆ ಮನೆ ಬಿಟ್ಟು ಹೋಗಬೇಕಾಯಿತು. ನಾನಷ್ಟರಲ್ಲಿ ದೇವರ ಹೆಸರು ಯೆಹೋವ, ಆತನು ಪ್ರೀತಿಯ ದೇವರು, ಕರುಣಾಸಾಗರನು, ಜನರನ್ನು ನರಕವೆಂಬ ಅಗ್ನಿ ಕುಂಡಕ್ಕೆ ಹಾಕುವುದಿಲ್ಲ ಎಂದು ಕಲಿತೆ. ಈ ವಿಷಯ ಮನಸ್ಸಿಗೆ ಸಾಕಷ್ಟು ನೆಮ್ಮದಿಕೊಟ್ಟಿತು. ನಾನು ಕೂಟಕ್ಕೆ ಹಾಜರಾಗದಿದ್ದರೂ ಯೆಹೋವನಿಗೆ ಸಂಘಟನೆಯೊಂದಿದೆ ಎನ್ನುವುದು ನನಗೆ ತಿಳಿದಿತ್ತು.

ಒಮ್ಮೆ ನಾನು ಹುಲ್ಲುಹಾಸನ್ನು ಕತ್ತರಿಸುತ್ತಿದ್ದಾಗ ನಿಧಾನವಾಗಿ ಬಂದ ಕಾರ್‌ ನನ್ನ ಪಕ್ಕ ನಿಂತಿತು. ಒಳಗೆ ಇಬ್ಬರು ಕೂತಿದ್ದರು. ‘ಫ್ರೆಡ್‌ ಅನ್ನೋರು ನೀವೇನಾ’ ಎಂದು ಕೇಳಿದರು. ಅವರು ಸಾಕ್ಷಿಗಳೆಂದು ಗೊತ್ತಾದ ಕೂಡಲೆ ‘ಇಲ್ಲಿ ಬೇಡ, ಸ್ವಲ್ಪ ದೂರಹೋಗಿ ಮಾತಾಡೋಣ’ ಎಂದು ಕಾರ್‌ ಹತ್ತಿದೆ. ಅವರನ್ನು ಮೇರಿ ಅತ್ತೆ ಕಳುಹಿಸಿದ್ದರು. ಆ ಇಬ್ಬರಲ್ಲಿ ಒಬ್ಬರು ಸಂಚರಣ ಮೇಲ್ವಿಚಾರಕರಾಗಿದ್ದ ಶೀಲ್ಡ್‌ ಟೂಟ್ಜನ್‌ ಆಗಿದ್ದರು. ಸರಿಯಾದ ಸಮಯಕ್ಕೆ ಬಂದು ಅವರು ನನಗೆ ಪ್ರೋತ್ಸಾಹ, ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದರು. ಆಮೇಲೆ ನಾನು ಯೆಹೋವನ ಸಾಕ್ಷಿಗಳ ನಂಬಿಕೆಗಳ ಪರ ಮಾತಾಡಲು ಆರಂಭಿಸಿದಾಗ ಅತ್ತೆಯಂದಿರ ಕೆಂಗಣ್ಣಿಗೆ ಗುರಿಯಾದೆ.

ಮೇರಿ ಅತ್ತೆ ವರ್ಜಿನ್ಯದಲ್ಲಿ ನೆಲಸಿದ್ದರು. ಅಲ್ಲಿಂದ ನನಗೊಂದು ಪತ್ರ ಬರೆದರು. ಯೆಹೋವನ ಸೇವೆ ಮಾಡುವ ದೃಢಮನಸ್ಸಿದ್ದರೆ ತಾನಿರುವಲ್ಲಿಗೆ ಬಂದುಬಿಡುವಂತೆ ತಿಳಿಸಿದ್ದರು. ತತ್‌ಕ್ಷಣ ಹೊರಡಲು ಸಿದ್ಧನಾದೆ. 1943ರ ಅಕ್ಟೋಬರ್‌ನ ಒಂದು ಶುಕ್ರವಾರ ಸಂಜೆ ಪೆಟ್ಟಿಗೆಯೊಂದರಲ್ಲಿ ಬೇಕಾದ ವಸ್ತುಗಳನ್ನೆಲ್ಲ ತುರುಕಿ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಮರದಲ್ಲಿ ಬಚ್ಚಿಟ್ಟೆ. ಮರುದಿನ ಶನಿವಾರ ಆ ಪೆಟ್ಟಿಗೆ ತೆಗೆದುಕೊಂಡು ಹಿತ್ತಲ ಕಡೆಯಿಂದ ಯಾರಿಗೂ ತಿಳಿಯದಂತೆ ಹೋಗಿ ಅತ್ತೆ ಬಳಿಗೆ ಪ್ರಯಾಣ ಬೆಳೆಸಿದೆ. ಅವರು ವರ್ಜಿನ್ಯದ ರಾನಕ್‌ ನಗರದಲ್ಲಿ ಎಡ್ನ ಫೌಲ್ಸ್‌ ಎಂಬ ಸಹೋದರಿಯ ಮನೆಯಲ್ಲಿ ಉಳುಕೊಂಡಿದ್ದರು.

ಆಧ್ಯಾತ್ಮಿಕ ಪ್ರಗತಿ, ದೀಕ್ಷಾಸ್ನಾನ, ಬೆತೆಲ್‌ ಸೇವೆ

ಅಭಿಷಿಕ್ತ ಸಹೋದರಿಯಾಗಿದ್ದ ಎಡ್ನ ತುಂಬ ಕರುಣಾಮಯಿ. ಆಧುನಿಕ ಲುದ್ಯಳೆಂದೇ ಹೇಳಬಹುದು. ಅವರು ಬಾಡಿಗೆಗಾಗಿ ದೊಡ್ಡ ಮನೆಯನ್ನು ತಕ್ಕೊಂಡು ನನ್ನ ಅತ್ತೆ ಮಾತ್ರವಲ್ಲ ಎಡ್ನರವರ ತಮ್ಮನ ಹೆಂಡತಿ ಮತ್ತು ತಮ್ಮನ ಇಬ್ಬರು ಹೆಣ್ಣು ಮಕ್ಕಳಿಗೂ ಆಸರೆ ನೀಡಿದ್ದರು. ಆ ಮಕ್ಕಳ ಹೆಸರು ಗ್ಲ್ಯಾಡಿಸ್‌ ಗ್ರೆಗರಿ ಮತ್ತು ಗ್ರೇಸ್‌ ಗ್ರೆಗರಿ. ಇವರಿಬ್ಬರು ಮುಂದೆ ಮಿಷನೆರಿಗಳಾದರು. ಈಗ 90ರ ಗಡಿ ದಾಟಿರುವ ಗ್ಲ್ಯಾಡಿಸ್‌ ಜಪಾನ್‌ ಬ್ರಾಂಚ್‌ನಲ್ಲಿ ನಿಷ್ಠೆಯಿಂದ ಸೇವೆ ಮಾಡುತ್ತಿದ್ದಾರೆ.

ಎಡ್ನರವರ ಮನೆಯಲ್ಲಿದ್ದಾಗ ನಾನು ಕೂಟಗಳಿಗೆ ತಪ್ಪದೆ ಹಾಜರಾಗುತ್ತಾ ಶುಶ್ರೂಷೆಯಲ್ಲಿ ಒಳ್ಳೇ ತರಬೇತಿ ಪಡೆದುಕೊಂಡೆ. ದೇವರ ವಾಕ್ಯವನ್ನು ಅಧ್ಯಯನ ಮಾಡಲು ಮತ್ತು ಕೂಟಗಳಿಗೆ ಹಾಜರಾಗಲು ನನಗೀಗ ವಿರೋಧ ಇಲ್ಲದ್ದರಿಂದ ಆಧ್ಯಾತ್ಮಿಕ ಹಸಿವು ನೀಗಿತು. 1944, ಜೂನ್‌ 14ರಂದು ನಾನು ದೀಕ್ಷಾಸ್ನಾನ ಪಡೆದೆ. ಮೇರಿ ಅತ್ತೆ, ಗ್ಲ್ಯಾಡಿಸ್‌ ಮತ್ತು ಗ್ರೇಸ್‌ ಪಯನೀಯರ್‌ ಸೇವೆ ಆರಂಭಿಸಿದರು. ಬಳಿಕ ಅವರಿಗೆ ಉತ್ತರ ವರ್ಜಿನ್ಯಕ್ಕೆ ನೇಮಕ ಸಿಕ್ಕಿತು. ಅವರ ಸೇವೆಯ ಫಲವಾಗಿ ಲೀಸ್‌ಬರ್ಗ್‌ನಲ್ಲಿ ಸಭೆ ಸ್ಥಾಪನೆಯಾಯಿತು. 1946ರ ಆರಂಭದಲ್ಲಿ ನಾನು ಕೂಡ ಅವರಿದ್ದ ಪ್ರದೇಶದ ಸಮೀಪದಲ್ಲಿ ಪಯನೀಯರ್‌ ಸೇವೆ ಆರಂಭಿಸಿದೆ. ಆ ವರ್ಷದ ಬೇಸಿಗೆಯಲ್ಲಿ ನಾವು ಒಟ್ಟಿಗೆ ಪ್ರಯಾಣಿಸಿ ಒಹಾಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ಆಗಸ್ಟ್‌ 4 ರಿಂದ 11ರಂದು ನಡೆದ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾದೆವು. ಮರೆಯಲಾಗದ ಅಧಿವೇಶನ!

ಆ ಸಮಯದಲ್ಲಿ ಸಂಘಟನೆಯ ಮುಂದಾಳತ್ವ ವಹಿಸಿದ್ದ ನೇತನ್‌ ನಾರ್‌ರವರು ಬ್ರೂಕ್ಲಿನ್‌ ಬೆತೆಲನ್ನು ವಿಸ್ತರಿಸುವ ಯೋಜನೆಯ ಕುರಿತು ಅಧಿವೇಶನದಲ್ಲಿ ವಿವರಿಸಿದರು. ವಾಸ್ತವ್ಯಕ್ಕಾಗಿ ಹೊಸ ಕಟ್ಟಡ ನಿರ್ಮಿಸುವ ಮತ್ತು ಮುದ್ರಣಾಲಯವನ್ನು ವಿಸ್ತರಿಸುವ ಬಗ್ಗೆ ಅವರು ತಿಳಿಸಿದರು. ಅನೇಕ ಯುವ ಸಹೋದರರ ಅಗತ್ಯವಿತ್ತು. ಅಲ್ಲಿ ಹೋಗಿ ಯೆಹೋವನ ಸೇವೆ ಮಾಡಲು ನಿರ್ಧರಿಸಿ ತಕ್ಷಣ ಅರ್ಜಿ ತುಂಬಿಸಿದೆ. ಕೆಲವೇ ತಿಂಗಳಲ್ಲಿ ಅಂದರೆ 1946, ಡಿಸೆಂಬರ್‌ 1ರಂದು ಬೆತೆಲ್‌ ಸೇವೆ ಆರಂಭಿಸಿದೆ.

ಒಂದು ವರ್ಷದ ಬಳಿಕ ಒಮ್ಮೆ ನಾನು ಮೇಲಿಂಗ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಿಂಟರಿಯ ಮೇಲ್ವಿಚಾರಕರಾಗಿದ್ದ ಮಾಕ್ಸ್‌ ಲಾರ್ಸನ್‌ ನನ್ನ ಡೆಸ್ಕ್‌ ಬಳಿ ಬಂದರು. ನನ್ನನ್ನು ಸರ್ವಿಸ್‌ ಡಿಪಾರ್ಟ್‌ಮೆಂಟ್‌ಗೆ ನೇಮಿಸಿರುವುದಾಗಿ ತಿಳಿಸಿದರು. ಅಲ್ಲಿ ಕೆಲಸಮಾಡುವಾಗ ಬೈಬಲ್‌ ಮೂಲತತ್ವಗಳ ಅನ್ವಯ ಮತ್ತು ದೇವರ ಸಂಘಟನೆ ಕಾರ್ಯನಿರ್ವಹಿಸುವ ವಿಧದ ಕುರಿತು ಹೆಚ್ಚನ್ನು ಕಲಿಯಲು ನನಗೆ ಸದವಕಾಶ ಸಿಕ್ಕಿತು. ಅದರಲ್ಲೂ ಮೆಲ್ವಿಚಾರಕರಾಗಿದ್ದ ಟಿ. ಜೆ. (ಬಡ್‌) ಸಲಿವನ್‌ರೊಂದಿಗೆ ಕೆಲಸ ಮಾಡಿದ್ದು ತುಂಬ ಸಹಾಯವಾಯಿತು.

ಅಪ್ಪ ಅನೇಕ ಬಾರಿ ಬೆತೆಲ್‌ಗೆ ಬಂದು ನನ್ನನ್ನು ಭೇಟಿಮಾಡಿದರು. ವೃದ್ಧಾಪ್ಯದಲ್ಲಿ ಅವರಿಗೆ ಧರ್ಮದಲ್ಲಿ ಆಸಕ್ತಿ ಬಂದಿತ್ತು. 1965ರಲ್ಲಿ ಅವರು ಕೊನೆ ಸಲ ಭೇಟಿ ನೀಡಿದಾಗ “ನಿನ್ನನ್ನು ನೋಡಲು ನಾನಿಲ್ಲಿ ಮತ್ತೆ ಬರಲ್ಲ. ನೀನೇ ಬಾ” ಎಂದು ಹೇಳಿದರು. ಅಪ್ಪ ಸಾಯುವುದಕ್ಕೆ ಮುಂಚೆ ಕೆಲವು ಸಲ ನಾನವರನ್ನು ಹೋಗಿ ನೋಡಿದೆ. ಸ್ವರ್ಗಕ್ಕೆ ಹೋಗುವರೆಂಬ ಅಚಲ ನಂಬಿಕೆ ಅವರಿಗಿತ್ತು. ಆದರೆ ನನ್ನೆಣಿಕೆಯಲ್ಲಿ, ಅಪ್ಪ ಯೆಹೋವ ದೇವರ ನೆನಪಿನಲ್ಲಿದ್ದಾರೆ. ಅದು ನಿಜವಾದರೆ ಪುನರುತ್ಥಾನವಾಗಿ ಬರುವರು. ಅವರು ನೆನಸಿದ ಹಾಗೆ ಸ್ವರ್ಗದಲ್ಲಿ ಅಲ್ಲ, ಪರದೈಸ್‌ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯೊಂದಿಗೆ.

ಅಧಿವೇಶನಗಳ ಹಾಗೂ ನಿರ್ಮಾಣಕಾರ್ಯಗಳ ಸವಿನೆನಪು

ಅಧಿವೇಶನಗಳು ಯಾವಾಗಲೂ ನನ್ನ ಆಧ್ಯಾತ್ಮಿಕ ಪ್ರಗತಿಗೆ ಮೈಲುಗಲ್ಲುಗಳಾಗಿದ್ದವು. ಅದರಲ್ಲೂ 1950ನೇ ದಶಕದಲ್ಲಿ ನ್ಯೂಯಾರ್ಕ್‌ನ ಯಾಂಕೀ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನಗಳು ಅವಿಸ್ಮರಣೀಯ. 1958ರಲ್ಲಿ ನಡೆದ ಅಧಿವೇಶನದ ಒಂದು ಸೆಷನ್‌ಗೆ ಯಾಂಕೀ ಸ್ಟೇಡಿಯಂ ಮತ್ತು ಪೋಲೋ ಗ್ರೌಂಡ್ಸ್‌ 2,53,922 ಮಂದಿಯಿಂದ ಕಿಕ್ಕಿರಿದಿತ್ತು. ಅವರು 123 ದೇಶಗಳಿಂದ ಆಗಮಿಸಿದ್ದರು. ಅಲ್ಲಾದ ಒಂದು ಘಟನೆ ನಾನೆಂದೂ ಮರೆಯಲಾರೆ. ಅಧಿವೇಶನದ ಆಫೀಸಿನಲ್ಲಿ ನಾನು ಕೆಲಸಮಾಡುತ್ತಿದ್ದೆ. ಸಹೋದರ ನಾರ್‌ ಏದುಸಿರು ಬಿಡುತ್ತಾ ಬಂದರು. “ಫ್ರೆಡ್‌, ಹತ್ತಿರದ ಭೋಜನಶಾಲೆಯಲ್ಲಿ ಪಯನೀಯರರೆಲ್ಲಾ ಒಟ್ಟುಸೇರಿದ್ದಾರೆ. ಅವರಿಗೆ ಭಾಷಣ ಕೊಡಲು ಒಬ್ಬ ಸಹೋದರರನ್ನು ನಾನು ನೇಮಿಸಬೇಕಿತ್ತು. ಹೇಗೋ ಮರೆತುಬಿಟ್ಟೆ. ನೀನು ಕೂಡಲೇ ಹೋಗಿ ಭಾಷಣ ಕೊಡು. ದಾರಿಯಲ್ಲಿ ಯಾವ ವಿಷಯ ನಿನ್ನ ಮನಸ್ಸಿಗೆ ಬರುತ್ತದೋ ಅದರ ಬಗ್ಗೆಯೇ ಮಾತಾಡು” ಎಂದುಬಿಟ್ಟರು. ಏನು ಮಾಡುವುದೆಂದು ತೋಚಲಿಲ್ಲ. ಕ್ಷಣಕ್ಷಣವೂ ಪ್ರಾರ್ಥನೆ ಮಾಡುತ್ತಾ ಅಲ್ಲಿಗೆ ಧಾವಿಸಿದೆ.

1950 ಮತ್ತು 1960ನೇ ದಶಕಗಳಲ್ಲಿ ನ್ಯೂಯಾರ್ಕ್‌ ನಗರದಲ್ಲಿ ಸಭೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಾ ಬಂತು. ಕೂಟಗಳನ್ನು ನಡೆಸಲು ಬಾಡಿಗೆಗೆ ಪಡಕೊಂಡಿದ್ದ ಕಟ್ಟಡಗಳಲ್ಲಿ ಸ್ಥಳ ಸಾಲದೆ ಹೋಯಿತು. ಹಾಗಾಗಿ 1970ರಿಂದ 1990ರ ಸಮಯದೊಳಗೆ ಮ್ಯಾನ್‌ಹ್ಯಾಟನ್‌ನಲ್ಲಿ ಮೂರು ಕಟ್ಟಡಗಳನ್ನು ಖರೀದಿಸಿ ನವೀಕರಿಸಲಾಯಿತು. ಈ ಕಾರ್ಯಯೋಜನೆಗಾಗಿದ್ದ ಬಿಲ್ಡಿಂಗ್‌ ಕಮಿಟಿಗಳಲ್ಲಿ ನಾನು ಅಧ್ಯಕ್ಷನಾಗಿ ಸೇವೆ ಮಾಡಿದೆ. ಕೊಂಡುಕೊಂಡ ಕಟ್ಟಡಗಳನ್ನು ಸತ್ಯಾರಾಧನೆಯ ಕೇಂದ್ರ ಸ್ಥಳಗಳಾಗಿ ಪರಿವರ್ತಿಸಲು ಹಣಸಹಾಯ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಸಭೆಗಳು ಜೊತೆಯಾಗಿ ಕೆಲಸಮಾಡಿದ್ದನ್ನು ಯೆಹೋವನು ಹೇರಳವಾಗಿ ಆಶೀರ್ವದಿಸಿದ ಸವಿನೆನಪುಗಳು ನನಗಿನ್ನೂ ಇವೆ.

ಬದುಕಿನ ಹೊಸ ತಿರುವುಗಳು

1957ರ ಒಂದು ದಿನ. ನಾನು ಬೆತೆಲ್‌ ಗೃಹದಿಂದ ಪ್ರಿಂಟರಿ ಕಡೆ ನಡೆಯುತ್ತಾ ಮಧ್ಯೆಯಿದ್ದ ಪಾರ್ಕ್‌ನಲ್ಲಿ ಹೆಜ್ಜೆ ಹಾಕುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಮಳೆ ಹನಿಯತೊಡಗಿತು. ನನ್ನ ಮುಂದೆ ಸ್ವಲ್ಪ ಅಂತರದಲ್ಲಿ ಹೊಂಬಣ್ಣದ ಕೂದಲಿನ ಸುಂದರ ತರುಣಿ ಹೋಗುತ್ತಿದ್ದಳು. ಬೆತೆಲಿಗೆ ಹೊಸದಾಗಿ ಸೇರಿದ್ದ ಅವಳ ಹತ್ತಿರ ಛತ್ರಿ ಇರಲಿಲ್ಲ. ಹಾಗಾಗಿ ನನ್ನ ಛತ್ರಿಯಡಿ ಆಸರೆ ನೀಡಲು ಮುಂದಾದೆ. ನನ್ನ ಬಾಳಸಂಗಾತಿ ಮಾರ್ಜ್‌ರಿಯ ಮೊದಲ ಭೇಟಿ ಹೀಗಾಯಿತು. 1960ರಲ್ಲಿ ನಾವು ಮದುವೆಯಾದೆವು. ಅಲ್ಲಿಂದ ಬಾಳಹಾದಿಯಲ್ಲಿ ಮಳೆಬಿಸಿಲೆನ್ನದೆ ಜೊತೆಜೊತೆಯಾಗಿ ಹೆಜ್ಜೆಯಿಡುತ್ತಾ ಯೆಹೋವನ ಸೇವೆಯಲ್ಲಿ ಉಲ್ಲಾಸಿಸುತ್ತಿದ್ದೇವೆ. 2010ರ ಸೆಪ್ಟೆಂಬರ್‌ನಲ್ಲಿ ನಮ್ಮ ವಿವಾಹದ 50ನೇ ವಾರ್ಷಿಕೋತ್ಸವ ಆಚರಿಸಿದೆವು.

ಮದುವೆಯಾಗಿ ಹನಿಮೂನ್‌ನಿಂದ ಬಂದದ್ದೇ ತಡ ಸಹೋದರ ನಾರ್‌ ನನ್ನ ಬಳಿ ಬಂದು ನಿನ್ನನ್ನು ಗಿಲ್ಯಡ್‌ ಶಾಲೆಯ ಶಿಕ್ಷಕನಾಗಿ ನೇಮಿಸಲಾಗಿದೆ ಎಂದರು. ಅಬ್ಬಾ, ಅದೊಂದು ವಿಶೇಷ ಸುಯೋಗ! 1961 ರಿಂದ 1965ರ ವರೆಗೆ ದೀರ್ಘಾವಧಿಯ ಐದು ಕ್ಲಾಸ್‌ಗಳನ್ನು ಬ್ರಾಂಚ್‌ನ ಕಾರ್ಯನಿರ್ವಹಣೆ ಮಾಡುವವರಿಗೆ ವಿಶೇಷ ತರಬೇತಿ ನೀಡಲಿಕ್ಕಾಗಿ ನಡೆಸಲಾಯಿತು. 1965ರ ಕೊನೆಯಲ್ಲಿ ಮತ್ತೆ ಈ ಕ್ಲಾಸ್‌ಗಳನ್ನು ಐದು ತಿಂಗಳ ಅವಧಿಗೆ ಇಳಿಸಿ ಮಿಷನೆರಿಗಳ ತರಬೇತಿಗೆ ಮೀಸಲಿಡಲಾಯಿತು.

1972ರಲ್ಲಿ ನನ್ನ ನೇಮಕ ಬದಲಾಯಿತು. ರೈಟಿಂಗ್‌ ಕರೆಸ್ಪಾಂಡೆನ್ಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಮೇಲ್ವಿಚಾರಕನಾಗಿ ಸೇವೆ ಮಾಡಿದೆ. ಅಲ್ಲಿ ಇತರರ ನಾನಾ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಶೋಧನೆಗಳನ್ನು ಮಾಡಲಿಕ್ಕಿತ್ತು. ಇದು ದೇವರ ವಾಕ್ಯದ ಬೋಧನೆಗಳನ್ನು ಹಾಗೂ ದೇವರ ಉನ್ನತ ಮಟ್ಟಗಳ ಅನ್ವಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡಿತು.

1987ರಲ್ಲಿ ನನ್ನನ್ನು ಹಾಸ್ಪಿಟಲ್‌ ಇನ್‌ಫರ್‌ಮೇಷನ್‌ ಸರ್ವಿಸಸ್‌ ಎಂಬ ಹೊಸ ಡಿಪಾರ್ಟ್‌ಮೆಂಟ್‌ಗೆ ನೇಮಿಸಲಾಯಿತು. ವೈದ್ಯರು, ನ್ಯಾಯಾಧೀಶರು ಮತ್ತು ಸಮಾಜ ಕಾರ್ಯಕರ್ತರ ಬಳಿ ರಕ್ತದ ವಿಷಯದಲ್ಲಿ ನಮ್ಮ ನಿಲುವಿನ ಕುರಿತು ಮಾತಾಡಲು ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಯಲ್ಲಿ ಸೇವೆಮಾಡುವ ಹಿರಿಯರಿಗೆ ತರಬೇತು ಕೊಡಲಿಕ್ಕಾಗಿ ಹಲವಾರು ಸೆಮಿನಾರ್‌ಗಳನ್ನು ಏರ್ಪಡಿಸಲಾಯಿತು. ವೈದ್ಯರು ಹೆತ್ತವರ ಅನುಮತಿ ಪಡೆಯದೆ ನಮ್ಮ ಮಕ್ಕಳಿಗೆ ರಕ್ತಪೂರಣ ನೀಡುತ್ತಿದ್ದದ್ದು ನಮ್ಮ ಮುಂದಿದ್ದ ದೊಡ್ಡ ಸಮಸ್ಯೆಯಾಗಿತ್ತು. ಅನೇಕವೇಳೆ ಅವರು ರಕ್ತ ನೀಡಲು ಕೋರ್ಟ್‌ ಅನುಮತಿ ಗಿಟ್ಟಿಸಿಕೊಳ್ಳುತ್ತಿದ್ದರು.

ರಕ್ತರಹಿತ ಚಿಕಿತ್ಸೆ ಮಾಡುವಂತೆ ವೈದ್ಯರನ್ನು ವಿನಂತಿಸಿದಾಗೆಲ್ಲಾ ಅದು ಲಭ್ಯವಿಲ್ಲವೆಂದೋ ತುಂಬ ದುಬಾರಿಯೆಂದೋ ಹೇಳಿ ಜಾರಿಕೊಳ್ಳುತ್ತಿದ್ದರು. ಸರ್ಜನ್‌ಗಳು ಈ ರೀತಿ ಪ್ರತಿಕ್ರಿಯಿಸಿದಾಗ ನಾನವರಿಗೆ ಕೈ ತೋರಿಸುವಂತೆ ಹೇಳಿ “ನಿಮ್ಮ ಈ ಕೈಯಿಂದ ರಕ್ತ ಇಲ್ಲದೆಯೇ ಚಿಕಿತ್ಸೆ ನೀಡಲು ಸಾಧ್ಯ” ಎಂದು ಭರವಸೆಯಿಂದ ಹೇಳುತ್ತಿದ್ದೆ. ಈ ಪ್ರಶಂಸೆಯ ಮಾತುಗಳ ಮರ್ಮವನ್ನು ಅವರು ಕೂಡಲೇ ಗ್ರಹಿಸುತ್ತಿದ್ದರು. ಚಿಕಿತ್ಸೆಯ ಸಮಯದಲ್ಲಿ ರಕ್ತ ನಷ್ಟವಾಗದಂತೆ ಶಸ್ತ್ರಚಿಕಿತ್ಸೆಯ ಉಪಕರಣವನ್ನು ಬಲು ಜಾಗ್ರತೆಯಿಂದ ಬಳಸಬೇಕೆನ್ನುವುದು ಹೆಚ್ಚಿನ ವೈದ್ಯರಿಗೆ ಗೊತ್ತಿದ್ದ ವಿಚಾರವಾಗಿತ್ತು.

ವೈದ್ಯರಿಗೂ ನ್ಯಾಯಾಧೀಶರಿಗೂ ಮನದಟ್ಟು ಮಾಡಿಸುವ ನಮ್ಮ ಪ್ರಯತ್ನಗಳನ್ನು ಕಳೆದ ಇಪ್ಪತ್ತು ವರ್ಷಗಳಲ್ಲಿ ಯೆಹೋವ ದೇವರು ಹೇರಳವಾಗಿ ಆಶೀರ್ವದಿಸಿದ್ದಾರೆ. ನಾವೇಕೆ ರಕ್ತಪೂರಣ ಸ್ವೀಕರಿಸುವುದಿಲ್ಲ ಎನ್ನುವುದನ್ನು ತಿಳಿದ ಮೇಲೆ ಅವರ ಮನೋಭಾವ ಬಹುಮಟ್ಟಿಗೆ ಬದಲಾಗಿದೆ. ರಕ್ತರಹಿತ ಚಿಕಿತ್ಸೆ ಹೆಚ್ಚು ಫಲಕಾರಿ ಎಂದು ವೈದ್ಯಕೀಯ ಸಂಶೋಧನೆಗಳು ಸಹ ಸಾಬೀತುಪಡಿಸುವುದನ್ನು ಅವರು ಮನಗಂಡಿದ್ದಾರೆ. ಇಂದು ನಮಗೆ ಸಹಕರಿಸುವ ವೈದ್ಯರು ಮತ್ತು ಆಸ್ಪತ್ರೆಗಳು ಅನೇಕ ಇವೆ.

1996ರಿಂದ ಮಾರ್ಜ್‌ರಿ ಮತ್ತು ನಾನು ನ್ಯೂಯಾರ್ಕ್‌ನ ಪ್ಯಾಟರ್‌ಸನ್‌ನಲ್ಲಿರುವ ವಾಚ್‌ಟವರ್‌ ಎಜ್ಯುಕೇಷನಲ್‌ ಸೆಂಟರ್‌ನಲ್ಲಿ ಸೇವೆ ಮಾಡುತ್ತಿದ್ದೇವೆ. ಇದು ಬ್ರೂಕ್ಲಿನ್‌ನಿಂದ ಉತ್ತರಕ್ಕೆ ಸುಮಾರು 110 ಕಿ.ಮೀ. ದೂರದಲ್ಲಿದೆ. ನಾನಿಲ್ಲಿ ಸ್ವಲ್ಪ ಸಮಯ ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಮಾಡಿದೆ. ಅನಂತರ ಬ್ರಾಂಚ್‌ಗಳ ಕಾರ್ಯನಿರ್ವಾಹಕರಿಗೆ ಹಾಗೂ ಸಂಚರಣ ಮೇಲ್ವಿಚಾರಕರಿಗೆ ಬೋಧಿಸುವ ನೇಮಕವನ್ನು ನಿರ್ವಹಿಸಿದೆ. ಕಳೆದ 12 ವರ್ಷಗಳಿಂದ ಮತ್ತೆ ರೈಟಿಂಗ್‌ ಕರೆಸ್ಪಾಂಡೆನ್ಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ನಾನು ಮೇಲ್ವಿಚಾರಕನಾಗಿ ಸೇವೆಮಾಡುತ್ತಿದ್ದೇನೆ. ಆ ಡಿಪಾರ್ಟ್‌ಮೆಂಟ್‌ ಬ್ರೂಕ್ಲಿನ್‌ನಿಂದ ಪ್ಯಾಟರ್‌ಸನ್‌ಗೆ ಸ್ಥಳಾಂತರವಾಗಿದೆ.

ಬಾಳ ಮುಸ್ಸಂಜೆಯ ಸವಾಲುಗಳು

85 ವರ್ಷ ಪ್ರಾಯವನ್ನು ತಲುಪುತ್ತಿರುವ ನನಗೀಗ ಬೆತೆಲ್‌ ಸೇವಾಸುಯೋಗಗಳನ್ನು ನಿರ್ವಹಿಸುವುದು ಹೆಚ್ಚು ಕಷ್ಟವಾಗುತ್ತಿದೆ. 10ಕ್ಕಿಂತ ಹೆಚ್ಚು ವರ್ಷ ನಾನು ಕ್ಯಾನ್ಸರ್‌ ರೋಗದೊಂದಿಗೆ ಹೋರಾಡಿದೆ. ಯೆಹೋವ ದೇವರು ಹಿಜ್ಕೀಯನ ಆಯುಷ್ಯವನ್ನು ಹೆಚ್ಚಿಸಿದಂತೆ ನನ್ನ ಆಯುಷ್ಯವನ್ನು ಹೆಚ್ಚಿಸಿದ್ದಾರೋ ಎಂಬಂತೆ ನನಗನಿಸುತ್ತದೆ. (ಯೆಶಾ. 38:5) ನನ್ನೊಲುಮೆಯ ಮಡದಿಯ ಆರೋಗ್ಯ ಕೂಡ ಸರಿಯಿಲ್ಲ. ಅಲ್ಜೈಮರ್ಸ್‌ ಕಾಯಿಲೆಯನ್ನು ನಿಭಾಯಿಸಲು ಆಕೆಯೊಂದಿಗೆ ನಾನೂ ಕೈಜೋಡಿಸುತ್ತೇನೆ. ಯೆಹೋವನ ಸೇವೆಯಲ್ಲಿ ತುಂಬ ಶ್ರಮಿಸಿದ ಆಕೆ ಯುವ ಮಕ್ಕಳಿಗೆ ಪ್ರಗತಿ ಮಾಡಲು ನೆರವು ನೀಡಿದ್ದಾಳೆ. ನನ್ನ ನೆಚ್ಚಿನ, ನಿಷ್ಠೆಯ ಜೊತೆಗಾರ್ತಿ ಅವಳು. ಬೈಬಲಿನ ಒಳ್ಳೇ ವಿದ್ಯಾರ್ಥಿ ಮತ್ತು ಉತ್ತಮ ಶಿಕ್ಷಕಿ. ನಮಗೆ ಅನೇಕ ಆಧ್ಯಾತ್ಮಿಕ ಮಕ್ಕಳಿದ್ದಾರೆ. ಅವರು ನಮ್ಮೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ.

ಮೇರಿ ಅತ್ತೆ ಕೂಡ ದೇವರ ವಾಕ್ಯದ ಉತ್ತಮ ಶಿಕ್ಷಕಿಯಾಗಿದ್ದರು ಮತ್ತು ಸತ್ಯಾರಾಧನೆಯನ್ನು ಸ್ವೀಕರಿಸುವಂತೆ ಇತರರಿಗೆ ಸಹಾಯಮಾಡಿದರು. ಅನೇಕ ವರ್ಷಗಳ ವರೆಗೆ ಪೂರ್ಣ ಸಮಯದ ಸೇವೆ ಮಾಡಿದರು. ದೇವರ ವಾಕ್ಯದ ಸತ್ಯವನ್ನು ಕಲಿಯುವಂತೆ ಅವರು ನನಗೆ ನೆರವಾಗಿದ್ದರು. ಮಾತ್ರವಲ್ಲ ಆಕೆಯ ಹಾಗೆ ನಮ್ಮ ಪ್ರೀತಿಯ ದೇವರ ಸೇವೆಮಾಡುವಂತೆ ಪ್ರೋತ್ಸಾಹ ನೀಡಿದ್ದರು. ಆಕೆಗೆ ನಾನು ಚಿರಋಣಿ. 2010ರ ಮಾರ್ಚ್‌ನಲ್ಲಿ 87ರ ಪ್ರಾಯದಲ್ಲಿ ಮೇರಿ ಅತ್ತೆ ತೀರಿಕೊಂಡರು. ಆಕೆಯ ಗಂಡನ ಸಮಾಧಿಯ ಪಕ್ಕದಲ್ಲೇ ಆಕೆಯನ್ನು ಹೂಣಲಾಯಿತು. ಅವರ ಗಂಡ ಇಸ್ರೇಲ್‌ನಲ್ಲಿ ಮಿಷನೆರಿಯಾಗಿದ್ದರು. ಅವರಿಬ್ಬರ ಸೇವೆಯನ್ನು ಯೆಹೋವ ದೇವರು ಎಂದೂ ಮರೆಯಲ್ಲ, ಅವರನ್ನು ಪುನರುತ್ಥಾನ ಮಾಡುವರೆಂಬ ಭರವಸೆ ನನಗಿದೆ.

ದೇವರ ಸೇವೆಯಲ್ಲಿ ಕಳೆದ 67 ವರ್ಷಗಳ ಕಡೆಗೆ ಕಣ್ಣೆತ್ತಿ ನೋಡುವಾಗ ನನಗೆ ಸಿಕ್ಕಿದ ಹೇರಳ ಆಶೀರ್ವಾದಗಳನ್ನು ನೆನೆದು ಮನ ಕೃತಜ್ಞತೆಯಿಂದ ಪುಳಕಗೊಳ್ಳುತ್ತದೆ. ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಸಿಕ್ಕಿದ ಅತ್ಯಾನಂದವನ್ನು ವರ್ಣಿಸಲು ಪದಗಳೇ ಸಾಲವು! ಆತನ ಅಪಾತ್ರ ದಯೆಯಲ್ಲಿ ನನಗೆ ಭರವಸೆಯಿದೆ, ಆತನ ಪುತ್ರ ನುಡಿದ ವಾಗ್ದಾನ ನೆರವೇರುವಾಗ ಅದನ್ನು ಆನಂದಿಸಲು ಮನ ತುಡಿಯುತ್ತಿದೆ: “ನನ್ನ ಹೆಸರಿನ ನಿಮಿತ್ತವಾಗಿ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಹೊಲಗಳನ್ನಾಗಲಿ ಬಿಟ್ಟುಬಂದ ಪ್ರತಿಯೊಬ್ಬನಿಗೂ ಅನೇಕ ಪಾಲು ಹೆಚ್ಚಾಗಿ ಸಿಗುವುದು ಮತ್ತು ಅವನು ನಿತ್ಯಜೀವಕ್ಕೆ ಬಾಧ್ಯನಾಗುವನು.”ಮತ್ತಾ. 19:29.

[ಪಾದಟಿಪ್ಪಣಿ]

^ ಪ್ಯಾರ. 11 1942ರಲ್ಲಿ ಪ್ರಕಾಶಿತ. ಈಗ ಮುದ್ರಣದಲ್ಲಿಲ್ಲ.

[ಪುಟ 19ರಲ್ಲಿರುವ ಚಿತ್ರ]

ಜಾರ್ಜಿಯದಲ್ಲಿ 1928ರಲ್ಲಿ ನಾನು ಅಜ್ಜನ ಫಾರ್ಮ್‌ನಲ್ಲಿ

[ಪುಟ 19ರಲ್ಲಿರುವ ಚಿತ್ರ]

ಮೇರಿ ಅತ್ತೆ ಮತ್ತು ಅಂಕಲ್‌ ಟಾಲ್‌ಮಾಡ್ಜ್‌

[ಪುಟ 20ರಲ್ಲಿರುವ ಚಿತ್ರ]

ಮೇರಿ ಅತ್ತೆ, ಗ್ಲ್ಯಾಡಿಸ್‌, ಗ್ರೇಸ್‌

[ಪುಟ 20ರಲ್ಲಿರುವ ಚಿತ್ರ]

ನನ್ನ ದೀಕ್ಷಾಸ್ನಾನ, 1944, ಜೂನ್‌ 14

[ಪುಟ 20ರಲ್ಲಿರುವ ಚಿತ್ರ]

ಬೆತೆಲಿನ ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ

[ಪುಟ 21ರಲ್ಲಿರುವ ಚಿತ್ರ]

ಯಾಂಕೀ ಸ್ಟೇಡಿಯಂನಲ್ಲಿ 1958ರ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಮೇರಿ ಅತ್ತೆಯೊಂದಿಗೆ

[ಪುಟ 21ರಲ್ಲಿರುವ ಚಿತ್ರ]

ಮಾರ್ಜ್‌ರಿ ಮತ್ತು ನಾನು ಮದುವೆಯ ದಿನ

[ಪುಟ 21ರಲ್ಲಿರುವ ಚಿತ್ರ]

2008ರಲ್ಲಿ ನಾವಿಬ್ಬರು