ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧ್ಯಾತ್ಮಿಕ ಪ್ರಗತಿ ಮಾಡುವಂತೆ ಪುರುಷರಿಗೆ ನೆರವಾಗಿ

ಆಧ್ಯಾತ್ಮಿಕ ಪ್ರಗತಿ ಮಾಡುವಂತೆ ಪುರುಷರಿಗೆ ನೆರವಾಗಿ

ಆಧ್ಯಾತ್ಮಿಕ ಪ್ರಗತಿ ಮಾಡುವಂತೆ ಪುರುಷರಿಗೆ ನೆರವಾಗಿ

“ಇಂದಿನಿಂದ ನೀನು ಮನುಷ್ಯರನ್ನು ಸಜೀವವಾಗಿ ಹಿಡಿಯುವವನಾಗುವಿ.”—ಲೂಕ 5:10.

1, 2. (ಎ) ಯೇಸು ಸಾರಿದಾಗ ಪುರುಷರು ಹೇಗೆ ಪ್ರತಿಕ್ರಿಯಿಸಿದರು? (ಬಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?

ಯೇಸು ಮತ್ತು ಶಿಷ್ಯರು ಗಲಿಲಾಯದಲ್ಲಿ ಸುವಾರ್ತೆ ಸಾರುತ್ತಾ ಇದ್ದಾಗ ಒಮ್ಮೆ ದೋಣಿಯನ್ನು ಹತ್ತಿ ಏಕಾಂತ ಸ್ಥಳಕ್ಕೆ ಹೊರಟರು. ಅವರು ಅಲ್ಲಿ ತಲಪುವಷ್ಟರಲ್ಲಿ ಕಾಲುನಡಿಗೆಯಿಂದ ಹಿಂಬಾಲಿಸಿ ಬಂದ ಜನರ ಗುಂಪುಗಳು ಅಲ್ಲಿ ನೆರೆದಿದ್ದವು. ಆ ಗುಂಪುಗಳಲ್ಲಿ “ಹೆಂಗಸರು ಮತ್ತು ಮಕ್ಕಳಲ್ಲದೆ ಗಂಡಸರೇ ಸುಮಾರು ಐದು ಸಾವಿರ ಮಂದಿ ಇದ್ದರು.” (ಮತ್ತಾ. 14:21) ಇನ್ನೊಂದು ಸಂದರ್ಭದಲ್ಲಿ ಜನರ ಗುಂಪೊಂದು ಯೇಸುವಿನ ಬೋಧನೆಯನ್ನು ಕೇಳಲು ಮತ್ತು ಕಾಯಿಲೆಗಳನ್ನು ಗುಣಪಡಿಸಿಕೊಳ್ಳಲು ಅವನ ಬಳಿ ಬಂತು. ಅವರಲ್ಲಿ “ಹೆಂಗಸರು ಮತ್ತು ಮಕ್ಕಳಲ್ಲದೆ ಗಂಡಸರೇ ನಾಲ್ಕು ಸಾವಿರ ಮಂದಿ ಇದ್ದರು.” (ಮತ್ತಾ. 15:38) ಈ ವಚನಗಳು ತೋರಿಸುವಂತೆ, ಯೇಸುವಿನ ಬೋಧನೆಯನ್ನು ಇಷ್ಟಪಟ್ಟು ಆತನ ಬಳಿ ಬಂದ ಜನರಲ್ಲಿ ಅನೇಕಾನೇಕ ಪುರುಷರೂ ಇದ್ದರು. ಇನ್ನಷ್ಟು ಜನರು ತನ್ನ ಬಳಿಗೆ ಬರುವರೆಂದು ಮತ್ತು ಸತ್ಯ ಸ್ವೀಕರಿಸುವರೆಂದು ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ, ಪವಾಡದಿಂದ ರಾಶಿ ರಾಶಿ ಮೀನುಗಳು ಶಿಷ್ಯರಿಗೆ ಸಿಕ್ಕಿದ ಸಂದರ್ಭದಲ್ಲಿ ಯೇಸು ಸೀಮೋನನಿಗೆ ಹೀಗೆ ಹೇಳಿದನು: “ಇಂದಿನಿಂದ ನೀನು ಮನುಷ್ಯರನ್ನು ಸಜೀವವಾಗಿ ಹಿಡಿಯುವವನಾಗುವಿ.” (ಲೂಕ 5:10) ಇದರರ್ಥ ಯೇಸುವಿನ ಶಿಷ್ಯರು ಮಾನವಕುಲವೆಂಬ ಸಮುದ್ರದಲ್ಲಿ ಬಲೆ ಹಾಕಿ ಪುರುಷರ ಸಮೇತ ಎಲ್ಲಾ ರೀತಿಯ ಮನುಷ್ಯರನ್ನು ಹಿಡಿಯಬೇಕಿತ್ತು.

2 ಇಂದು ಸಹ ಅನೇಕ ಪುರುಷರು ನಾವು ಸಾರುವ ಬೈಬಲ್‌ ಸಂದೇಶವನ್ನು ಇಷ್ಟಪಡುತ್ತಾರೆ. (ಮತ್ತಾ. 5:3) ಆದರೆ ಕೆಲವರು ಆಧ್ಯಾತ್ಮಿಕವಾಗಿ ಪ್ರಗತಿ ಮಾಡಲು ಹಿಂದೇಟು ಹಾಕುತ್ತಾರೆ. ಅವರಿಗೆ ನಾವು ಹೇಗೆ ಸಹಾಯ ನೀಡಬಹುದು? ಪುರುಷರಿಗೆ ಸಾರಲೆಂದೇ ವಿಶೇಷವಾದ ಒಂದು ವಿಧಾನವನ್ನು ಯೇಸು ಬಳಸಲಿಲ್ಲ ನಿಜ. ಆದರೂ ಅವರ ಪ್ರಗತಿಗೆ ಅಡ್ಡಿಯಾಗುವ ವಿಷಯಗಳನ್ನು ಮನಗಂಡು ತಕ್ಕ ನೆರವನ್ನು ನೀಡಿದನು. ಅವನ ಆ ಮಾದರಿಯನ್ನು ಅನುಸರಿಸುತ್ತಾ ನಾವು ಹೇಗೆ ಪುರುಷರಿಗೆ ನೆರವು ನೀಡಬಹುದೆಂದು ಚರ್ಚಿಸೋಣ. ಸಾಮಾನ್ಯವಾಗಿ ಅವರಿಗೆ ಅಡ್ಡಿಯಾಗುವ ವಿಷಯಗಳೆಂದರೆ: (1) ಹಣಕಾಸಿನ ಚಿಂತೆ (2) ಬೇರೆಯವರು ಏನು ನೆನಸುವರೋ ಎಂಬ ಭಯ (3) ಅಸಮರ್ಥ ಎಂಬ ಕೀಳರಿಮೆ.

ಹಣಕಾಸಿನ ಚಿಂತೆ

3, 4. (ಎ) ಹೆಚ್ಚಿನ ಪುರುಷರಿಗೆ ಬದುಕಿನಲ್ಲಿ ಯಾವುದು ಮುಖ್ಯ? (ಬಿ) ಕೆಲವು ಪುರುಷರು ಬೈಬಲನ್ನು ಕಲಿಯುವುದಕ್ಕಿಂತಲೂ ಹಣ ಹಾಗೂ ಉದ್ಯೋಗಕ್ಕೆ ಹೆಚ್ಚು ಮಹತ್ವ ನೀಡುವುದೇಕೆ?

3 ಒಮ್ಮೆ ಶಾಸ್ತ್ರಿಯೊಬ್ಬ ಯೇಸುವಿನ ಬಳಿ, “ಬೋಧಕನೇ, ನೀನು ಎಲ್ಲಿಗೆ ಹೋಗಲಿರುವುದಾದರೂ ನಾನು ನಿನ್ನನ್ನು ಹಿಂಬಾಲಿಸುವೆ” ಎಂದನು. “ಮನುಷ್ಯಕುಮಾರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ” ಎಂದು ಯೇಸು ತಿಳಿಸಿದನು. ಅದನ್ನು ಕೇಳಿ ಶಾಸ್ತ್ರಿ ತನ್ನ ಮನಸ್ಸನ್ನು ಬದಲಾಯಿಸಿದನೆಂದು ಕಾಣುತ್ತದೆ. ಅವನು ಯೇಸುವಿನ ಹಿಂಬಾಲಕನಾದ ಸುಳಿವು ಬೈಬಲ್‌ನಲ್ಲಿ ಎಲ್ಲೂ ಇಲ್ಲ. ಊಟಕ್ಕೇನು ಮಾಡುವುದು ಎಲ್ಲಿ ತಂಗುವುದು ಎಂಬೆಲ್ಲ ಚಿಂತೆಗಳು ಅವನನ್ನು ಕಾಡಿರಬೇಕು.—ಮತ್ತಾ. 8:19, 20.

4 ಹೆಚ್ಚಾಗಿ ಪುರುಷರಿಗೆ ಆಧ್ಯಾತ್ಮಿಕ ವಿಷಯಗಳನ್ನು ಕಲಿಯುವುದಕ್ಕಿಂತಲೂ ಜೀವನೋಪಾಯ ಅಥವಾ ಹಣ ಮುಖ್ಯವಾಗಿರುತ್ತದೆ. ಹಾಗಾಗಿ ಉನ್ನತ ಶಿಕ್ಷಣ, ಹೆಚ್ಚು ವೇತನ ಸಿಗುವ ಉದ್ಯೋಗ ಇತ್ಯಾದಿಗಳಿಗೆ ಬಹಳ ಮಹತ್ವ ನೀಡುತ್ತಾರೆ. ಬದುಕಲು ಸಂಪಾದನೆ ಅವಶ್ಯವೆಂದು ಮನಗಂಡಿರುವ ಅವರು ಬೈಬಲನ್ನು ಕಲಿಯುವುದಕ್ಕಿಂತಲೂ ದೇವರೊಂದಿಗೆ ಗೆಳೆತನ ಬೆಳೆಸಿಕೊಳ್ಳುವುದಕ್ಕಿಂತಲೂ ಹಣ ಮತ್ತು ಉದ್ಯೋಗಕ್ಕೆ ಅಗ್ರ ಸ್ಥಾನ ನೀಡುತ್ತಾರೆ. ಪುರುಷರು ಬೈಬಲ್‌ ಬೋಧನೆಗಳನ್ನು ಇಷ್ಟಪಟ್ಟರೂ ಅವರ ಆ ಆಸಕ್ತಿಯನ್ನು “ಈ ವಿಷಯಗಳ ವ್ಯವಸ್ಥೆಯ ಚಿಂತೆಗಳು, ಐಶ್ವರ್ಯದ ಮೋಸಕರವಾದ ಪ್ರಭಾವ” ಅದುಮಿಬಿಡುತ್ತದೆ. (ಮಾರ್ಕ 4:18, 19) ಯೇಸು ಹೇಗೆ ತನ್ನ ಶಿಷ್ಯರಿಗೆ ಬದುಕಿನಲ್ಲಿ ಸರಿಯಾದ ಆದ್ಯತೆ ಇಡಲು ನೆರವಾದನು ಎಂದು ನೋಡೋಣ.

5, 6. ಅಂದ್ರೆಯ, ಪೇತ್ರ, ಯಾಕೋಬ, ಯೋಹಾನ ಇವರೆಲ್ಲರೂ ತಮ್ಮ ಜೀವನ ವೃತ್ತಿಗಿಂತ ಸಾರುವ ಕೆಲಸಕ್ಕೆ ಆದ್ಯತೆ ನೀಡಲು ಯಾವುದು ನೆರವಾಯಿತು?

5 ಅಂದ್ರೆಯ ಹಾಗೂ ಅವನ ಅಣ್ಣನಾದ ಸೀಮೋನ ಬೆಸ್ತರಾಗಿದ್ದರು. ಹಾಗೆಯೇ ಯೋಹಾನ, ಅವನ ಅಣ್ಣ ಯಾಕೋಬ ಮತ್ತು ತಂದೆ ಜೆಬೆದಾಯ ಸಹ ಮೀನು ಹಿಡಿಯುವ ವೃತ್ತಿ ಮಾಡುತ್ತಿದ್ದರು. ಕೂಲಿಯಾಳುಗಳನ್ನು ಇಟ್ಟುಕೊಳ್ಳುವಷ್ಟು ಚೆನ್ನಾಗಿ ವ್ಯಾಪಾರ ನಡೆಯುತ್ತಿತ್ತು. (ಮಾರ್ಕ 1:16-20) ಅಂದ್ರೆಯ ಹಾಗೂ ಯೋಹಾನ ಯೇಸುವಿನ ಬಗ್ಗೆ ಮೊದಮೊದಲು ಸ್ನಾನಿಕ ಯೋಹಾನನಿಂದ ತಿಳಿದುಕೊಂಡರು ಹಾಗೂ ಯೇಸು ಮೆಸ್ಸೀಯನೆಂದು ದೃಢವಾಗಿ ನಂಬಿದರು. ಹಾಗಾಗಿ ಅಂದ್ರೆಯ ಅಣ್ಣನಾದ ಸೀಮೋನ ಪೇತ್ರನಿಗೆ ವಿಷಯ ಮುಟ್ಟಿಸಿದನು. ಅಂತೆಯೇ ಯೋಹಾನ ತನ್ನ ಅಣ್ಣನಾದ ಯಾಕೋಬನಿಗೆ ವಿಷಯ ತಿಳಿಸಿರಬೇಕು. (ಯೋಹಾ. 1:29, 35-42) ಅನಂತರ ಆ ನಾಲ್ವರು ಹಲವಾರು ತಿಂಗಳು ಯೇಸುವಿನೊಂದಿಗೆ ಗಲಿಲಾಯ, ಯೂದಾಯ, ಸಮಾರ್ಯ ಎಂಬ ಪ್ರದೇಶಗಳಲ್ಲೆಲ್ಲ ಸಾರುವ ಕೆಲಸದಲ್ಲಿ ಭಾಗವಹಿಸಿದರು. ಅದಾದ ಬಳಿಕ ತಮ್ಮ ಮೀನುಗಾರಿಕೆಯ ವೃತ್ತಿಗೆ ಹಿಂತಿರುಗಿದರು. ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಇತ್ತಾದರೂ ಶುಶ್ರೂಷೆ ಅವರ ಆದ್ಯ ವಿಷಯವಾಗಿರಲಿಲ್ಲ.

6 ಸ್ವಲ್ಪ ದಿವಸಗಳ ನಂತರ ಪೇತ್ರ ಹಾಗೂ ಅಂದ್ರೆಯನಿಗೆ ಯೇಸು, “ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು” ಎಂದು ಆಹ್ವಾನವಿತ್ತನು. ಅವರ ಪ್ರತಿಕ್ರಿಯೆ? “ಆ ಕೂಡಲೆ ಅವರು ಬಲೆಗಳನ್ನು ಬಿಟ್ಟು ಅವನನ್ನು ಹಿಂಬಾಲಿಸಿದರು.” ಅದೇ ರೀತಿ ಯಾಕೋಬ ಮತ್ತು ಯೋಹಾನನನ್ನು ಕರೆದಾಗ “ತಕ್ಷಣವೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಅವನನ್ನು ಹಿಂಬಾಲಿಸಿದರು.” (ಮತ್ತಾ. 4:18-22) ಪೂರ್ಣ-ಸಮಯದ ಸೇವೆಯನ್ನು ಆರಿಸಿಕೊಳ್ಳುವಂತೆ ಈ ಪುರುಷರಿಗೆ ಯಾವುದು ನೆರವಾಯಿತು? ಅವರೇನು ಭಾವೋದ್ವೇಗಕ್ಕೆ ಒಳಗಾಗಿ ಹಿಂದೆ ಮುಂದೆ ಯೋಚಿಸದೆ ಈ ನಿರ್ಧಾರ ತೆಗೆದುಕೊಂಡಿರಲಿಲ್ಲ. ಕಳೆದ ಹಲವಾರು ತಿಂಗಳುಗಳಲ್ಲಿ ಅವರು ಯೇಸುವಿನ ಬೋಧನೆಯನ್ನು ಕೇಳಿದ್ದರು, ಅದ್ಭುತಗಳನ್ನು ನೋಡಿ ಬೆರಗುಗೊಂಡಿದ್ದರು, ನೀತಿಗಾಗಿರುವ ಅವನ ಹುರುಪನ್ನು ಗಮನಿಸಿದ್ದರು ಹಾಗೂ ಅವನ ಸಂದೇಶಕ್ಕೆ ಜನರು ತೋರಿಸಿದ ಅಪೂರ್ವ ಪ್ರತಿಕ್ರಿಯೆಯನ್ನು ಸಾಕ್ಷಾತ್‌ ಕಂಡಿದ್ದರು. ಇದರಿಂದ ಯೆಹೋವ ದೇವರಲ್ಲಿನ ಅವರ ನಂಬಿಕೆ ಭರವಸೆ ಇನ್ನೂ ಹೆಚ್ಚಿತು.

7. ಯೆಹೋವನ ಮೇಲೆ ಭರವಸೆ ಇಡುವಂತೆ ನಾವು ಹೇಗೆ ನಮ್ಮ ವಿದ್ಯಾರ್ಥಿಗಳಿಗೆ ಸಹಾಯ ಮಾಡಬಹುದು?

7 ಯೇಸುವನ್ನು ಅನುಕರಿಸುತ್ತಾ ನಾವು ಸಹ ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ಯೆಹೋವನ ಮೇಲೆ ಭರವಸೆ ಇಡುವಂತೆ ನೆರವಾಗಬಹುದು. ಹೇಗೆ? (ಜ್ಞಾನೋ. 3:5, 6) ನಾವವರಿಗೆ ಬೈಬಲನ್ನು ಕಲಿಸುವ ರೀತಿಯ ಮೇಲೆ ಇದು ಹೆಚ್ಚು ಹೊಂದಿಕೊಳ್ಳುತ್ತದೆ. ಕಲಿಸುವಾಗ, ದೇವರು ಮಾಡಿರುವ ವಾಗ್ದಾನಗಳಿಗೆ ಹೆಚ್ಚು ಒತ್ತುನೀಡಬೇಕು. ದೇವರ ರಾಜ್ಯಕ್ಕೆ ಪ್ರಥಮ ಸ್ಥಾನ ನೀಡುವಾಗ ಆತನು ನಮ್ಮನ್ನು ಹೇರಳವಾಗಿ ಆಶೀರ್ವದಿಸುವನು ಎಂಬ ವಿಶ್ವಾಸವನ್ನು ಅವರಲ್ಲಿ ತುಂಬಿಸಬೇಕು. (ಮಲಾಕಿಯ 3:10; ಮತ್ತಾಯ 6:33 ಓದಿ.) ಅದಕ್ಕಾಗಿ ನಾವು ಬೈಬಲಿನಿಂದ ಹಲವಾರು ವಚನಗಳನ್ನು ತೋರಿಸಬಹುದು. ಹಾಗಿದ್ದರೂ, ಯೆಹೋವನು ತನ್ನ ಜನರನ್ನು ನೋಡಿಕೊಳ್ಳುವನು ಎಂಬ ವಿಷಯವನ್ನು ನಮ್ಮ ಸ್ವಂತ ಮಾದರಿ ಸಹ ಅವರಿಗೆ ಮನದಟ್ಟು ಮಾಡಿಸುತ್ತದೆ ಎನ್ನುವುದನ್ನು ನಾವು ಮರೆಯಬಾರದು. ನಮ್ಮ ಬದುಕಿನ ಅನುಭವಗಳನ್ನು ಹಂಚಿಕೊಳ್ಳುವುದು ಯೆಹೋವನ ಮೇಲೆ ಭರವಸೆ ಇಡಲು ವಿದ್ಯಾರ್ಥಿಗೆ ಸ್ಫೂರ್ತಿ ಆಗಿರುತ್ತದೆ. ನಮ್ಮ ಪ್ರಕಾಶನಗಳಲ್ಲಿ ಕಂಡುಬರುವ ಅನುಭವಗಳನ್ನೂ ನಾವು ಹಂಚಿಕೊಳ್ಳಬಹುದು. *

8. (ಎ) “ಯೆಹೋವನು ಸರ್ವೋತ್ತಮನೆಂದು” ವಿದ್ಯಾರ್ಥಿಗಳು ಅನುಭವ ಸವಿದು ನೋಡುವುದು ಪ್ರಾಮುಖ್ಯವೇಕೆ? (ಬಿ) ವ್ಯಕ್ತಿಗತವಾಗಿ ಈ ರೀತಿಯ ಅನುಭವ ಸವಿಯಲು ನಾವು ಹೇಗೆ ನೆರವು ನೀಡಬಹುದು?

8 ಅಚಲ ನಂಬಿಕೆ ಬೆಳೆಸಿಕೊಳ್ಳಬೇಕಾದರೆ, ಇತರರನ್ನು ಯೆಹೋವನು ಹೇಗೆ ಆಶೀರ್ವದಿಸಿದ್ದಾನೆ ಎಂಬ ಅನುಭವಗಳನ್ನು ವಿದ್ಯಾರ್ಥಿಗಳು ಕೇವಲ ಓದಿದರಷ್ಟೇ ಇಲ್ಲವೇ ಕೇಳಿದರಷ್ಟೇ ಸಾಲದು. ಅವರು ಸ್ವತಃ ಯೆಹೋವನ ಒಳ್ಳೇತನವನ್ನು ಸವಿದು ನೋಡುವುದು ಪ್ರಾಮುಖ್ಯ. ಕೀರ್ತನೆಗಾರ ಹೇಳಿದ್ದನ್ನು ಗಮನಿಸಿ: “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು.” (ಕೀರ್ತ. 34:8) ಯೆಹೋವನು ಸರ್ವ ರೀತಿಯಲ್ಲಿ ಉತ್ತಮನು ಎಂದು ಮನಗಾಣಲು ನಾವು ವಿದ್ಯಾರ್ಥಿಗೆ ಯಾವ ರೀತಿಯ ನೆರವನ್ನು ನೀಡಬಹುದು? ಉದಾಹರಣೆಗೆ, ವಿದ್ಯಾರ್ಥಿಯೊಬ್ಬರು ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿದ್ದಾರೆ, ಮಾತ್ರವಲ್ಲ ಧೂಮಪಾನ, ಜೂಜು, ಕುಡಿಕತನ ಮುಂತಾದ ದುಶ್ಚಟಗಳನ್ನು ಬಿಟ್ಟುಬಿಡಲು ಪ್ರಯತ್ನಿಸುತ್ತಿದ್ದಾರೆ ಎಂದಿಟ್ಟುಕೊಳ್ಳಿ. (ಜ್ಞಾನೋ. 23:20, 21; 2 ಕೊರಿಂ. 7:1; 1 ತಿಮೊ. 6:10) ದುಶ್ಚಟವನ್ನು ತೊರೆಯಲು ಬಲಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸುವಂತೆ ನಾವು ಅವರಿಗೆ ಕಲಿಸಬೇಕು. ತಮ್ಮ ಪ್ರಯತ್ನಗಳು ಸಫಲಗೊಂಡು ಜೀವನ ಸುಧಾರಣೆಯಾದಂತೆ ಯೆಹೋವನು ಸರ್ವೋತ್ತಮನೆಂದು ಅವರು ಸವಿದಿರುತ್ತಾರೆ. ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ನೀಡುವಂತೆ ಸಹ ನಾವು ಅವರನ್ನು ಪ್ರೋತ್ಸಾಹಿಸಬೇಕು. ಬೈಬಲನ್ನು ಕಲಿಯಲು ಪ್ರತಿವಾರ ಸಮಯ ಬದಿಗಿರಿಸುವಂತೆ, ಕೂಟಗಳಿಗೆ ಚೆನ್ನಾಗಿ ತಯಾರಿ ಮಾಡಿ ಹಾಜರಾಗುವಂತೆಯೂ ಕಲಿಸಬೇಕು. ಈ ನಿಟ್ಟಿನಲ್ಲಿ ಅವರು ಮಾಡುವ ಪ್ರಯತ್ನಗಳನ್ನು ದೇವರು ಆಶೀರ್ವದಿಸುತ್ತಿದ್ದಾನೆ ಎಂಬುದನ್ನು ಸ್ವತಃ ಅನುಭವಿಸುವಾಗ ಅವರಿಗೆ ಆತನಲ್ಲಿ ನಂಬಿಕೆ ಹೆಚ್ಚುತ್ತದೆ. ಹಣಕಾಸಿನಂಥ ಚಿಂತೆಗಳು ದೂರವಾಗುತ್ತವೆ.

ಬೇರೆಯವರು ಏನು ನೆನಸುವರೋ ಎಂಬ ಭಯ

9, 10. (ಎ) ನಿಕೊದೇಮ ಮತ್ತು ಅರಿಮಥಾಯದ ಯೋಸೇಫ ತಾವು ಯೇಸುವಿನ ಹಿಂಬಾಲಕರು ಎಂದು ಸಾರ್ವಜನಿಕವಾಗಿ ಗುರುತಿಸಿಕೊಳ್ಳದಿರಲು ಕಾರಣವೇನು? (ಬಿ) ಕೆಲವು ಪುರುಷರು ಇಂದು ಯೇಸುವಿನ ಹಿಂಬಾಲಕರಾಗಲು ಹಿಂದೇಟು ಹಾಕುವುದೇಕೆ?

9 ಬೇರೆಯವರು ಏನು ನೆನಸುವರೋ ಎಂಬ ಭಯದಿಂದ ಕೆಲವು ಪುರುಷರು ಯೇಸುವಿನ ಹಿಂಬಾಲಕರಾಗಲು ಹಿಂದೇಟು ಹಾಕಬಹುದು. ಉದಾಹರಣೆಗೆ, ನಿಕೊದೇಮ ಮತ್ತು ಅರಿಮಥಾಯದ ಯೋಸೇಫ ಎಂಬವರು ಇತರ ಯೆಹೂದ್ಯರಿಗೆ ಭಯಪಟ್ಟು ತಾವು ಯೇಸುವಿನ ಹಿಂಬಾಲಕರು ಎಂದು ಸಾರ್ವಜನಿಕವಾಗಿ ಗುರುತಿಸಿಕೊಳ್ಳುತ್ತಿರಲಿಲ್ಲ. (ಯೋಹಾ. 3:1, 2; 19:38) ಅವರ ಹೆದರಿಕೆಗೆ ಕಾರಣವೂ ಇತ್ತು. ಧಾರ್ಮಿಕ ಮುಖಂಡರು ಯೇಸುವನ್ನು ಹಗೆ ಮಾಡುತ್ತಿದ್ದರು ಮತ್ತು ಅವನಲ್ಲಿ ನಂಬಿಕೆ ಇಡುವವರನ್ನು ಸಭಾಮಂದಿರದಿಂದ ಬಹಿಷ್ಕರಿಸುತ್ತಿದ್ದರು.—ಯೋಹಾ. 9:22.

10 ಇಂದು ಕೆಲವು ಸ್ಥಳಗಳಲ್ಲಿ ಪುರುಷರು ಬೈಬಲ್‌, ಧರ್ಮ, ದೇವರು ಎಂದು ಬಹಳ ಆಸಕ್ತಿ ತೋರಿಸಿದರೆ ಸಹಕಾರ್ಮಿಕರಿಂದ ಅಥವಾ ಬಂಧುಮಿತ್ರರಿಂದ ತೊಂದರೆ ಎದುರಿಸಬೇಕಾಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಧರ್ಮವನ್ನು ಬದಲಾಯಿಸುವ ಕುರಿತ ಪ್ರಸ್ತಾಪ ಎತ್ತುವುದು ಕೂಡ ಅಪಾಯಕಾರಿ. ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ, ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಅಥವಾ ಸಮುದಾಯದಲ್ಲಿ ಗಣ್ಯವ್ಯಕ್ತಿಯಾಗಿರುವ ಪುರುಷರಂತೂ ಬೇರೆಯವರ ಒತ್ತಡಕ್ಕೆ ಗುರಿಯಾಗುವುದು ಜಾಸ್ತಿ. ಜರ್ಮನಿ ದೇಶದ ಒಬ್ಬರ ಮಾತನ್ನು ಕೇಳಿ: “ನೀವು ಸಾರುತ್ತಿರುವುದು ಸತ್ಯ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಆದರೆ ನಾನು ಯೆಹೋವನ ಸಾಕ್ಷಿಯಾದರೆ ದಿನ ಬೆಳಗಾಗುವಷ್ಟರಲ್ಲಿ ಎಲ್ಲರಿಗೆ ಗೊತ್ತಾಗಿಬಿಡುತ್ತದೆ. ಜನರು ನನ್ನ ಬಗ್ಗೆ ಏನು ಹೇಳ್ತಾರೆ, ಅಕ್ಕಪಕ್ಕದವರಿಗೆ ಏನೂಂತ ಹೇಳಲಿ, ಆಫೀಸ್‌ನಲ್ಲಿ ಕ್ಲಬ್‌ನಲ್ಲಿ ಕೇಳುವವರಿಗೆ ಹೇಗೆ ಉತ್ತರಿಸಲಿ? ನನ್ನಿಂದ ಅದೆಲ್ಲಾ ಸಾಧ್ಯವಿಲ್ಲ.”

11. ಮನುಷ್ಯರ ಭಯವನ್ನು ಮೆಟ್ಟಿನಿಲ್ಲಲು ಯೇಸು ತನ್ನ ಶಿಷ್ಯರಿಗೆ ಹೇಗೆ ನೆರವು ನೀಡಿದನು?

11 ಯೇಸುವಿನ ಅಪೊಸ್ತಲರು ಧೈರ್ಯವಂತರಾಗಿದ್ದರೂ ಕೆಲವೊಮ್ಮೆ ಮನುಷ್ಯರ ಭಯ ಅವರೆಲ್ಲರನ್ನು ಕಾಡಿತು. (ಮಾರ್ಕ 14:50, 66-72) ಆ ಭಯವನ್ನು ಮೆಟ್ಟಿನಿಂತು ಆಧ್ಯಾತ್ಮಿಕ ಪ್ರಗತಿ ಮಾಡಲು ಯೇಸು ಅವರಿಗೆ ಹೇಗೆ ಸಹಾಯ ಮಾಡಿದನು? ಅಂಥ ಒತ್ತಡ ವಿರೋಧಗಳನ್ನು ಎದುರಿಸಲು ಅವರನ್ನು ಮುಂಚಿತವಾಗಿಯೇ ಸಿದ್ಧಗೊಳಿಸಿದನು. ಅವರಿಗೆ ಹೇಳಿದ ಮಾತನ್ನು ಗಮನಿಸಿ: “ಮನುಷ್ಯಕುಮಾರನ ನಿಮಿತ್ತ ಜನರು ನಿಮ್ಮನ್ನು ದ್ವೇಷಿಸಿ ನಿಮ್ಮನ್ನು ಬಹಿಷ್ಕರಿಸಿ, ನಿಂದಿಸಿ, ನಿಮ್ಮ ಹೆಸರನ್ನು ಕೆಟ್ಟದ್ದೆಂದು ತೆಗೆದುಹಾಕುವುದಾದರೆ ನೀವು ಸಂತೋಷಿತರು.” (ಲೂಕ 6:22) ಹೌದು, ಜನರಿಂದ ನಿಂದೆ, ಅವಮಾನವನ್ನು ಎದುರಿಸಬೇಕಾಗುತ್ತದೆ ಎಂದು ಯೇಸು ತನ್ನ ಹಿಂಬಾಲಕರಿಗೆ ಮುಂಚೆಯೇ ತಿಳಿಸಿದ್ದನು. “ಮನುಷ್ಯಕುಮಾರನ ನಿಮಿತ್ತ” ಅವರದನ್ನು ತಾಳಿಕೊಳ್ಳಬೇಕಿತ್ತು. ಆದರೆ ದೇವರ ಮೇಲೆ ಭರವಸೆ ಇಟ್ಟರೆ ಆತನು ಅವರನ್ನು ಕಾಪಾಡುತ್ತಾನೆ ಎಂಬ ಖಾತ್ರಿಯನ್ನು ಸಹ ಯೇಸು ಕೊಟ್ಟನು. (ಲೂಕ 12:4-12) ಇನ್ನೊಂದು ರೀತಿಯ ನೆರವು ಸಹ ಶಿಷ್ಯರಿಗೆ ದೊರೆಯಿತು. ಸತ್ಯವನ್ನು ಇಷ್ಟಪಟ್ಟ ಹೊಸಬರಿಗೆ ಯೇಸು ಆಹ್ವಾನ ನೀಡಿ ಶಿಷ್ಯರೊಡನೆ ಮುಕ್ತವಾಗಿ ಬೆರೆಯುವಂತೆ ಹಾಗೂ ಗೆಳೆತನ ಬೆಳೆಸಿಕೊಳ್ಳುವಂತೆ ಅವಕಾಶ ನೀಡಿದನು.—ಮಾರ್ಕ 10:29, 30.

12. ಮನುಷ್ಯರ ಭಯವನ್ನು ಹೋಗಲಾಡಿಸಲು ನಾವು ಹೊಸಬರಿಗೆ ಯಾವ ವಿಧಗಳಲ್ಲಿ ನೆರವು ನೀಡಬಹುದು?

12 ಬೇರೆಯವರು ಏನು ನೆನಸುವರೋ ಎಂಬ ಭಯವನ್ನು ಹೋಗಲಾಡಿಸಲು ನಾವು ಸಹ ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ನೆರವಾಗಬೇಕು. ಒಂದು ವಿಧ ಅವರನ್ನು ಮುಂಚಿತವಾಗಿ ಸಿದ್ಧಗೊಳಿಸುವುದಾಗಿದೆ. ಆ ರೀತಿಯ ಸನ್ನಿವೇಶದಲ್ಲಿ ಏನು ಹೇಳಬೇಕು, ಏನು ಮಾಡಬೇಕು ಎಂದು ನಾವು ಅವರಿಗೆ ಮೊದಲೇ ತಿಳಿಸಬೇಕು. (ಯೋಹಾ. 15:19) ಉದಾಹರಣೆಗೆ, ಸಹಕರ್ಮಿಗಳಾಗಲಿ ಬೇರೆಯವರಾಗಲಿ ಕೇಳುವ ಪ್ರಶ್ನೆ, ಆಕ್ಷೇಪಣೆಗಳಿಗೆ ಬೈಬಲ್‌ ವಚನಗಳನ್ನು ಉಪಯೋಗಿಸಿ ತರ್ಕಬದ್ಧವಾಗಿ ಮತ್ತು ಸರಳವಾಗಿ ಹೇಗೆ ಉತ್ತರ ನೀಡುವುದೆಂದು ತೋರಿಸಿಕೊಡಬಹುದು. ನಾವು ಅವರ ಆಪ್ತ ಸ್ನೇಹಿತರಾಗುವ ಜೊತೆಗೆ ಸಭೆಯ ಇತರ ಸದಸ್ಯರ ಪರಿಚಯ ಮಾಡಿಕೊಡಬಹುದು. ಸಮಾನ ಅಭಿರುಚಿ, ಸನ್ನಿವೇಶ ಉಳ್ಳವರನ್ನು ಪರಿಚಯಿಸುವುದು ಉತ್ತಮ. ಅಷ್ಟೇ ಅಲ್ಲ, ನಿಯತವಾಗಿ ಹೃದಯಾಳದಿಂದ ದೇವರಲ್ಲಿ ಪ್ರಾರ್ಥಿಸುವಂತೆ ತಿಳಿಸಬೇಕು. ಇದು ಅವರನ್ನು ಯೆಹೋವ ದೇವರಿಗೆ ಆಪ್ತರನ್ನಾಗಿ ಮಾಡುವುದಲ್ಲದೆ ಆತನನ್ನು ತಮ್ಮ ದುರ್ಗವನ್ನಾಗಿಯೂ ಆಶ್ರಯಗಿರಿಯನ್ನಾಗಿಯೂ ಮಾಡಿಕೊಳ್ಳುವಂತೆ ನೆರವಾಗುವುದು.ಕೀರ್ತನೆ 94:21-23; ಯಾಕೋಬ 4:8 ಓದಿ.

ಅಸಮರ್ಥ ಎಂಬ ಕೀಳರಿಮೆ

13. ಕೆಲವು ಪುರುಷರು ಸತ್ಯ ಕಲಿಯದಿರಲು ಕಾರಣಗಳೇನು?

13 ಕೆಲವು ಪುರುಷರು ಬೈಬಲನ್ನು ಕಲಿಯಲು ಹಿಂದೇಟು ಹಾಕಲು ಇನ್ನಿತರ ಕಾರಣಗಳು ಇರಬಹುದು. ಚೆನ್ನಾಗಿ ಓದಲು ಬರದಿರಬಹುದು. ನಾಚಿಕೆ ಸ್ವಭಾವ ಉಳ್ಳವರಾಗಿರಬಹುದು. ಇತರರ ಮುಂದೆ ಮನಬಿಚ್ಚಿ ಮಾತಾಡುವ ಅಭ್ಯಾಸ ಇಲ್ಲದಿರಬಹುದು. ಸಾರ್ವಜನಿಕವಾಗಿ ಬೆರೆಯಲು ಮುಜುಗರವಿರಬಹುದು. ಬೈಬಲ್‌ ಅಧ್ಯಯನಕ್ಕೆ ಕುಳಿತುಕೊಳ್ಳುವುದು, ಕೂಟಗಳಲ್ಲಿ ಉತ್ತರ ನೀಡುವುದು ಅಥವಾ ತಮ್ಮ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ಯೋಚನೆಯೇ ಅವರಿಗೆ ದಿಗಿಲು ಹುಟ್ಟಿಸುತ್ತದೆ. ಇಂಥ ಸ್ವಭಾವವಿದ್ದ ಒಬ್ಬ ಸಹೋದರನ ಅನುಭವ ಕೇಳಿ: “ಮನೆ ಮನೆ ಸೇವೆ ಮಾಡೋದನ್ನ ನೆನಸಿಕೊಂಡರೂ ನನಗೆ ಚಳಿಜ್ವರ ಬಂದ್ಹಾಗೆ ಆಗುತ್ತಿತ್ತು. ಚಿಕ್ಕವನಿದ್ದಾಗ ನಾನು ಸರಸರನೆ ಮನೆಯ ಬಾಗಿಲೆಡೆಗೆ ಹೋಗುತ್ತಿದ್ದೆ. ಕಾಲಿಂಗ್‌ ಬೆಲ್‌ ಒತ್ತುವಂತೆ ನಟಿಸಿ ಯಾರ ಕಣ್ಣಿಗೂ ಬೀಳದೆ, ಒಂಚೂರೂ ಶಬ್ದ ಮಾಡದೆ ಜಾಗ ಖಾಲಿ ಮಾಡುತ್ತಿದ್ದೆ.”

14. ದೆವ್ವ ಹಿಡಿದ ಹುಡುಗನನ್ನು ವಾಸಿಮಾಡಲು ಶಿಷ್ಯರಿಗೆ ಏಕೆ ಸಾಧ್ಯವಾಗಲಿಲ್ಲ?

14 ಯೇಸುವಿನ ಶಿಷ್ಯರಲ್ಲೂ ಅಸಮರ್ಥ ಭಾವನೆಯಿತ್ತು. ದೆವ್ವ ಹಿಡಿದ ಹುಡುಗನನ್ನು ಗುಣಪಡಿಸಲು ಅವರಿಂದ ಆಗದೇ ಹೋದ ಸಂದರ್ಭವನ್ನು ನೆನಪಿಸಿಕೊಳ್ಳಿ. ಯೇಸು ಕೊಟ್ಟ ಕೆಲಸ ಮಾಡಲು ತಾವು ಅಸಮರ್ಥರು ಎಂಬ ಕೀಳರಿಮೆ ಅವರಲ್ಲಿ ಮೂಡಿರಬೇಕು. ಆ ಹುಡುಗನ ತಂದೆ ಯೇಸುವಿನ ಹತ್ತಿರ ಬಂದು, “[ನನ್ನ ಮಗನು] ಮೂರ್ಛೆರೋಗದಿಂದ ನರಳುತ್ತಿದ್ದಾನೆ; ಅವನು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಬೀಳುತ್ತಾನೆ; ಅವನನ್ನು ನಿನ್ನ ಶಿಷ್ಯರ ಬಳಿಗೆ ಕರೆದುಕೊಂಡು ಬಂದೆ, ಆದರೆ ಅವರಿಂದ ವಾಸಿಮಾಡಲು ಸಾಧ್ಯವಾಗಲಿಲ್ಲ” ಎಂದು ಹೇಳಿದನು. ಆಗ ಯೇಸು ದೆವ್ವ ಬಿಡಿಸಿ ಹುಡುಗನನ್ನು ವಾಸಿಮಾಡಿದನು. ಇದನ್ನು ನೋಡಿದ ಶಿಷ್ಯರು, “ನಮ್ಮಿಂದ ಯಾಕೆ ಅದನ್ನು ಬಿಡಿಸಲು ಆಗಲಿಲ್ಲ?” ಎಂದು ಯೇಸುವನ್ನು ಕೇಳಿದರು. “ನಿಮ್ಮ ನಂಬಿಕೆಯ ಕೊರತೆಯಿಂದಲೇ. ನಿಮಗೆ ಸಾಸಿವೆ ಕಾಳಿನ ಗಾತ್ರದಷ್ಟು ನಂಬಿಕೆಯಿರುವುದಾದರೆ ನೀವು ಈ ಬೆಟ್ಟಕ್ಕೆ ‘ಇಲ್ಲಿಂದ ಅಲ್ಲಿಗೆ ಸ್ಥಳಾಂತರಿಸು’ ಎಂದು ಹೇಳಿದರೆ ಅದು ಹೋಗುವುದು ಮತ್ತು ಯಾವುದೂ ನಿಮಗೆ ಅಸಾಧ್ಯವಾದದ್ದಾಗಿರುವುದಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಎಂದು ಯೇಸು ಉತ್ತರಕೊಟ್ಟನು. (ಮತ್ತಾ. 17:14-20) ಹೌದು, ಯೆಹೋವನಲ್ಲಿ ನಂಬಿಕೆ ಇಟ್ಟರೆ ಬೆಟ್ಟದಂಥ ದೊಡ್ಡ ತಡೆಯನ್ನು ಸಹ ಜಯಿಸಸಾಧ್ಯ. ಸ್ವಂತ ಸಾಮರ್ಥ್ಯದ ಮೇಲೆ ಆತುಕೊಳ್ಳುವಲ್ಲಿ ಸಾಫಲ್ಯ ಕೈಗೆಟುಕದು. ಆಗ ಆತ್ಮವಿಶ್ವಾಸವು ಕುಂದಿಹೋಗುವುದು.

15, 16. ಅಸಮರ್ಥ ಭಾವನೆಯಿಂದ ಹೊರಬರಲು ನಾವು ಬೈಬಲ್‌ ವಿದ್ಯಾರ್ಥಿಗೆ ಹೇಗೆ ಸಹಾಯ ಮಾಡಬಹುದು?

15 ಅಸಮರ್ಥ ಭಾವನೆಯಿರುವ ವಿದ್ಯಾರ್ಥಿಗೆ ನಾವು ಹೇಗೆ ಸಹಾಯ ಮಾಡಬಹುದು? ಅವನು ತನ್ನ ಮೇಲಲ್ಲ ಯೆಹೋವನ ಮೇಲೆ ಗಮನ ಕೇಂದ್ರೀಕರಿಸುವಂತೆ ಪ್ರೋತ್ಸಾಹಿಸಬೇಕು. ಪೇತ್ರನ ಹಿತವಚನ ಹೀಗಿದೆ: “ದೇವರ ಪ್ರಬಲವಾದ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗ ತಕ್ಕ ಸಮಯದಲ್ಲಿ ಆತನು ನಿಮ್ಮನ್ನು ಮೇಲಕ್ಕೇರಿಸುವನು. ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ.” (1 ಪೇತ್ರ 5:6, 7) ವಿದ್ಯಾರ್ಥಿ ಈ ಸಲಹೆಯನ್ನು ಅನ್ವಯಿಸಿಕೊಳ್ಳಬೇಕಾದರೆ ಅವನು ಆಧ್ಯಾತ್ಮಿಕ ವ್ಯಕ್ತಿಯಾಗಬೇಕು. ಹಾಗಾಗಿ ಆಧ್ಯಾತ್ಮಿಕವಾಗಿ ಪ್ರಗತಿ ಹೊಂದುವಂತೆ ನಾವು ಅವನಿಗೆ ನೆರವಾಗಬೇಕು. ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಆಧ್ಯಾತ್ಮಿಕ ವಿಷಯಗಳನ್ನು ಹೆಚ್ಚು ಗಣ್ಯ ಮಾಡುತ್ತಾನೆ. ದೇವರ ವಾಕ್ಯವನ್ನು ಪ್ರೀತಿಸುತ್ತಾನೆ. “ಪವಿತ್ರಾತ್ಮದಿಂದ ಉಂಟಾಗುವ ಫಲ”ವನ್ನು ತನ್ನ ಜೀವನದಲ್ಲಿ ಪ್ರತಿಫಲಿಸುತ್ತಾನೆ. (ಗಲಾ. 5:22, 23) ಪ್ರತಿಯೊಂದು ಸನ್ನಿವೇಶದಲ್ಲಿ ಯೆಹೋವನಿಗೆ ಪ್ರಾರ್ಥಿಸಿ ಆತನ ಮೇಲೆ ಹೊಂದಿಕೊಳ್ಳುತ್ತಾನೆ. (ಫಿಲಿ. 4:6, 7) ಅಷ್ಟು ಮಾತ್ರವಲ್ಲ, ಯೆಹೋವನು ಅಪೇಕ್ಷಿಸುವುದನ್ನು ಮಾಡಲು ಬೇಕಾದ ಧೈರ್ಯ, ಬಲವನ್ನು ಆತನು ಕೊಟ್ಟೇ ಕೊಡುತ್ತಾನೆಂಬ ಭರವಸೆ ಅವನಿಗಿರುತ್ತದೆ.2 ತಿಮೊಥೆಯ 1:7, 8 ಓದಿ.

16 ಕೆಲವು ವಿದ್ಯಾರ್ಥಿಗಳಿಗೆ ಓದುವ ಸಾಮರ್ಥ್ಯವನ್ನು ಉತ್ತಮಗೊಳಿಸಲು, ಅಂಜಿಕೆಯಿಲ್ಲದೆ ಮಾತಾಡಲು ನೆರವು ಬೇಕಾಗಬಹುದು. ಇನ್ನೂ ಕೆಲವರಲ್ಲಿ ಯೆಹೋವನ ಸೇವೆ ಮಾಡಲು ತಾವು ಅನರ್ಹರು ಎಂಬ ಭಾವನೆ ಇರಬಹುದು. ಯೆಹೋವನ ಕುರಿತು ಕಲಿಯುವ ಮುಂಚೆ ಮಾಡಿದಂಥ ತಪ್ಪುಗಳಿಂದ ಅವರಿಗೆ ಹಾಗನಿಸಬಹುದು. ವಿಷಯ ಏನೇ ಇರಲಿ ಅಸಮರ್ಥ ಭಾವನೆಗಳನ್ನು ಜಯಿಸಲು ವಿದ್ಯಾರ್ಥಿಗಳಿಗೆ ನಮ್ಮ ಪ್ರೀತಿಯ ಹಾಗೂ ತಾಳ್ಮೆಯ ನೆರವು ಅತ್ಯಗತ್ಯ. “ಆರೋಗ್ಯವಂತರಿಗೆ ವೈದ್ಯನ ಆವಶ್ಯಕತೆ ಇಲ್ಲ, ಆದರೆ ರೋಗಿಗಳಿಗೆ ಇದೆ” ಎಂದು ಯೇಸು ಸಹ ಹೇಳಿದ್ದಾನೆ.—ಮತ್ತಾ. 9:12.

ಯೆಹೋವನನ್ನು ತಿಳಿದುಕೊಳ್ಳುವಂತೆ ಹೆಚ್ಚೆಚ್ಚು ಪುರುಷರಿಗೆ ನೆರವಾಗಿ

17, 18. (ಎ) ಹೆಚ್ಚೆಚ್ಚು ಪುರುಷರಿಗೆ ಬೈಬಲ್‌ ಸಂದೇಶವನ್ನು ಸಾರಲು ನಾವು ಏನು ಮಾಡಬೇಕು? (ಬಿ) ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಚರ್ಚಿಸಲಿದ್ದೇವೆ?

17 ಜನರಿಗೆ ನೆಮ್ಮದಿ ಸಂತೋಷ ನೀಡುವ ಸಂದೇಶ ಬೈಬಲಿನಲ್ಲಿ ಮಾತ್ರ ಇದೆ. ಅದನ್ನು ತಿಳಿದುಕೊಳ್ಳುವಂತೆ ಹೆಚ್ಚೆಚ್ಚು ಪುರುಷರಿಗೆ ನೆರವಾಗುವುದು ನಮ್ಮ ಆಶೆ. (2 ತಿಮೊ. 3:16, 17) ಹಾಗಾಗಿ ಕ್ಷೇತ್ರ ಸೇವೆಯಲ್ಲಿ ಹೆಚ್ಚು ಪುರುಷರನ್ನು ಭೇಟಿಯಾಗಲು ನಾವು ಏನು ಮಾಡಬಹುದು? ಪುರುಷರು ಮನೆಯಲ್ಲಿರುವ ಸಮಯವನ್ನು ನೋಡಿ ನಾವು ಸಾರಬೇಕು. ಉದಾಹರಣೆಗೆ, ಸಾಯಂಕಾಲದ ಸಮಯ, ಶನಿವಾರ/ಭಾನುವಾರ ಮಧ್ಯಾಹ್ನದ ನಂತರ ಅಥವಾ ರಜಾದಿನಗಳಲ್ಲಿ ನಾವು ಹೆಚ್ಚು ಸಮಯ ವ್ಯಯಿಸಬಹುದು. ಕುಟುಂಬದ ಯಜಮಾನನ ಹತ್ತಿರ ಮಾತಾಡಲು ಬಯಸುತ್ತೇವೆಂದು ಸಂದರ್ಭ ನೋಡಿ ವಿನಂತಿಸಬಹುದು. ಮಾತ್ರವಲ್ಲ, ಸಾಧ್ಯವಿರುವಾಗೆಲ್ಲ ಉದ್ಯೋಗದ ಸ್ಥಳದಲ್ಲಿ ಗಂಡಸರಿಗೆ ಅನೌಪಚಾರಿಕ ಸಾಕ್ಷಿ ನೀಡಬಹುದು ಮತ್ತು ನಮ್ಮ ಸಹೋದರಿಯರ ಅವಿಶ್ವಾಸಿ ಗಂಡಂದಿರನ್ನು ಭೇಟಿಯಾಗಬಹುದು.

18 ಹೀಗೆ ಪ್ರತಿಯೊಬ್ಬರಿಗೆ ಸಾರಲು ಪ್ರಯತ್ನಿಸುವಾಗ ಆಸಕ್ತ ಹೃದಯದ ಜನರು ಉತ್ತಮ ಪ್ರತಿಕ್ರಿಯೆ ನೀಡಿಯೇ ನೀಡುತ್ತಾರೆ. ಸತ್ಯದೆಡೆಗೆ ನಿಜವಾದ ಆಸಕ್ತಿ ತೋರಿಸುವವರಿಗೆ ಬೇಕಾದ ಎಲ್ಲಾ ರೀತಿಯ ನೆರವು ನೀಡೋಣ. ದೀಕ್ಷಾಸ್ನಾನ ಪಡೆದಿರುವ ಅನೇಕಾನೇಕ ಪುರುಷರು ಸಭೆಯಲ್ಲಿದ್ದಾರೆ. ಅವರು ಸಭೆಯಲ್ಲಿ ಜವಾಬ್ದಾರಿ ವಹಿಸಿಕೊಳ್ಳುವಂತೆ ನಾವು ಹೇಗೆ ಸಹಾಯ ಮಾಡಬಲ್ಲೆವು? ಮುಂದಿನ ಲೇಖನದಲ್ಲಿ ಚರ್ಚಿಸೋಣ.

[ಪಾದಟಿಪ್ಪಣಿ]

^ ಪ್ಯಾರ. 7 ಯಿಯರ್‌ಬುಕ್‌ ಮತ್ತು ಕಾವಲಿನಬುರುಜು, ಎಚ್ಚರ! ಪತ್ರಿಕೆಗಳಲ್ಲಿರುವ ಜೀವನ ಕಥೆಗಳನ್ನು ನೋಡಿ.

ಉತ್ತರಿಸುವಿರಾ?

• ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ನೀಡುವಂತೆ ಪುರುಷರಿಗೆ ಯಾವ ರೀತಿಯಲ್ಲಿ ನೆರವು ನೀಡುವಿರಿ?

• ಬೇರೆಯವರು ಏನು ನೆನಸುವರೋ ಎಂಬ ಭಯವನ್ನು ಮೆಟ್ಟಿನಿಲ್ಲಲು ಹೊಸಬರಿಗೆ ಹೇಗೆ ನೆರವಾಗುವಿರಿ?

• ಅಸಮರ್ಥ ಭಾವನೆಯನ್ನು ಹೋಗಲಾಡಿಸಲು ಕೆಲವರಿಗೆ ಯಾವ ನೆರವು ಬೇಕಾಗುವುದು?

[ಅಧ್ಯಯನ ಪ್ರಶ್ನೆಗಳು]

[ಪುಟ 25ರಲ್ಲಿರುವ ಚಿತ್ರ]

ಪುರುಷರಿಗೆ ಸಾರಲು ಅವಕಾಶ ಕಲ್ಪಿಸಿಕೊಳ್ಳುವಿರಾ?

[ಪುಟ 26ರಲ್ಲಿರುವ ಚಿತ್ರ]

ವಿರೋಧವನ್ನು ಎದುರಿಸಲು ಬೈಬಲ್‌ ವಿದ್ಯಾರ್ಥಿಯನ್ನು ಹೇಗೆ ಸಜ್ಜುಗೊಳಿಸುವಿರಿ?