ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಈ ಅಂಗವೈಕಲ್ಯ ಮುಂದೆಂದೂ ಇರದು!”

“ಈ ಅಂಗವೈಕಲ್ಯ ಮುಂದೆಂದೂ ಇರದು!”

“ಈ ಅಂಗವೈಕಲ್ಯ ಮುಂದೆಂದೂ ಇರದು!”

ಸಾರ ವ್ಯಾನ್‌ ಡೆರ್‌ ಮೋಂಡ್‌ ಹೇಳಿದಂತೆ

“ಸಾರ, ಎಂಥ ಸುಂದರ ನಗುಮುಖ ನಿನ್ನದು! ಅದ್ಹೇಗೆ ಯಾವಾಗಲೂ ಖುಷಿಖುಷಿಯಿಂದ ಇರ್ತೀಯಾ?” ಎಂದು ಜನರು ಪದೇಪದೇ ಕೇಳುತ್ತಾರೆ. ನಾನಾಗ, “ಈ ಅಂಗವೈಕಲ್ಯ ಮುಂದೆಂದೂ ಇರದು!” ಎಂದು ನನಗಿರುವ ಭವ್ಯ ನಿರೀಕ್ಷೆಯ ಬಗ್ಗೆ ಹೇಳುತ್ತೇನೆ.

ನಾನು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ 1974ರಲ್ಲಿ ಹುಟ್ಟಿದೆ. ಹೆರಿಗೆಯ ಸಮಯದಲ್ಲಿ ಅಮ್ಮನಿಗೆ ತುಂಬ ತೊಡಕಾಗಿತ್ತು. ನನಗೆ ಮಿದುಳಿನ ಲಕ್ವ ಇರುವುದನ್ನು ಸಮಯಾನಂತರ ವೈದ್ಯರು ಪತ್ತೆಹಚ್ಚಿದರು. ಕೈಕಾಲು ಅಲುಗಾಡಿಸಲು ಕಷ್ಟವಾಗುತ್ತಿತ್ತು. ಮಾತು ಅಸ್ಪಷ್ಟವಾಗಿತ್ತು. ಮೂರ್ಛೆರೋಗ ಸಹ ಬಂತು. ತುಂಬ ದುರ್ಬಲಳಾಗಿದ್ದರಿಂದ ಬೇಗನೆ ಸೋಂಕು ತಗಲುತ್ತಿತ್ತು.

ಎರಡು ವರ್ಷದವಳಿದ್ದಾಗ ನಮ್ಮ ಕುಟುಂಬ ಆಸ್ಟ್ರೇಲಿಯದ ಮೆಲ್ಬರ್ನ್‌ಗೆ ವಾಸ ಬದಲಾಯಿಸಿತು. ಅಲ್ಲಿ ಎರಡು ವರ್ಷ ಕಳೆದಿತ್ತಷ್ಟೆ, ಅಪ್ಪ ಮನೆಬಿಟ್ಟು ಹೋದರು. ಅವರು ನಮ್ಮನ್ನು ಕೈಬಿಟ್ಟಾಗ, ನನಗೆ ಮೊತ್ತಮೊದಲ ಬಾರಿ ಯೆಹೋವನು ತುಂಬ ಆಪ್ತನೆಂದು ಅನಿಸಿತು. ಯೆಹೋವನ ಸಾಕ್ಷಿಯಾಗಿದ್ದ ಅಮ್ಮ ನನ್ನನ್ನು ಯಾವಾಗಲೂ ಕೂಟಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ದೇವರು ನನ್ನನ್ನು ತುಂಬ ಪ್ರೀತಿಸುತ್ತಾನೆ, ನನಗೆ ಅಕ್ಕರೆ ತೋರಿಸುತ್ತಿದ್ದಾನೆ ಎಂದು ಅಲ್ಲಿ ಕಲಿತೆ. ಅದು ಮತ್ತು ಅಮ್ಮನ ಪ್ರೀತಿ, ಆಕೆಯ ಭರವಸೆಯ ಮಾತುಗಳು ನನ್ನಲ್ಲಿ ಧೈರ್ಯ ತುಂಬಿದವು. ವಿಷಮ ಪರಿಸ್ಥಿತಿಯಲ್ಲೂ ಸುರಕ್ಷಿತಳು ಎಂಬ ಅನಿಸಿಕೆ ನನಗಾಯಿತು.

ನನ್ನ ಅಮ್ಮ ಪ್ರಾರ್ಥಿಸುವುದು ಹೇಗೆಂದು ಹೇಳಿಕೊಟ್ಟರು. ಮಾತನಾಡುವುದಕ್ಕಿಂತ ಪ್ರಾರ್ಥಿಸುವುದೇ ತುಂಬ ಸುಲಭವಾಗಿತ್ತು. ಪ್ರಾರ್ಥಿಸುವಾಗ ಪದಗಳನ್ನು ಉಚ್ಚರಿಸಲು ಕಷ್ಟಪಡಬೇಕಾಗಿರಲಿಲ್ಲ. ಮನದಲ್ಲಿ ಪದಗಳು ಸ್ಪಷ್ಟವಾಗಿ ಮೂಡಿಬರುತ್ತಿದ್ದವು. ನಾನು ಮಾತಾಡುವುದು ಜನರಿಗೆ ಅರ್ಥ ಆಗುವುದಿಲ್ಲ ನಿಜ. ಆದರೆ ಯೆಹೋವ ದೇವರಿಗೆ ಅರ್ಥವಾಗುತ್ತದೆ. ಇದು ನನ್ನಲ್ಲಿ ಭರವಸೆ ಮೂಡಿಸುತ್ತದೆ. ಮೌನವಾಗಿ ಪ್ರಾರ್ಥಿಸಲಿ, ನನ್ನ ಮಾತುಗಳು ಅಸ್ಪಷ್ಟವಾಗಿರಲಿ ಯೆಹೋವನಿಗೆ ಎಲ್ಲವೂ ಅರ್ಥವಾಗುತ್ತದೆ.—ಕೀರ್ತ. 65:2.

ದೌರ್ಬಲ್ಯಗಳನ್ನು ಮೆಟ್ಟಿನಿಂತೆ

ಐದು ವರ್ಷ ಪ್ರಾಯದಷ್ಟಕ್ಕೆ ಮಿದುಳಿನ ರೋಗ ಉಲ್ಬಣಿಸಿ ನಡೆದಾಡುವುದು ಕಷ್ಟವಾಯಿತು. ಕಾಲಿಗೆ ಲೋಹದ ಆಸರೆಯನ್ನು ಕಟ್ಟಿಕೊಂಡು ನಡೆಯಬೇಕಾಯಿತು. ಆಗಲೂ ಸರಿಯಾಗಿ ಹೆಜ್ಜೆ ಇಡಲಾಗದೆ ಅತ್ತಿತ್ತ ಓಲಾಡುತ್ತಿದ್ದೆ. 11 ವರ್ಷದಷ್ಟಕ್ಕೆ ಅದೂ ನನ್ನಿಂದಾಗಲಿಲ್ಲ. ಅತ್ತಿತ್ತ ಹೋಗಲು ಬ್ಯಾಟರಿ ಚಾಲಿತ ಗಾಲಿಕುರ್ಚಿ ಬಳಸತೊಡಗಿದೆ. ಒಂದು ಹ್ಯಾಂಡ್‌ ಲಿವರ್‌ ಸಹಾಯದಿಂದ ಬೇಕಾದೆಡೆಗೆ ಗಾಲಿಕುರ್ಚಿಯನ್ನು ಚಲಾಯಿಸುತ್ತಿದ್ದೆ. ಆದರೆ ಮಂಚದಿಂದ ಗಾಲಿಕುರ್ಚಿ ಏರಲು ಮತ್ತೆ ಗಾಲಿಕುರ್ಚಿಯಿಂದ ಮಂಚದಲ್ಲಿ ಮಲಗಲು ನನಗೆ ಎಲೆಕ್ಟ್ರಿಕ್‌ ಯಂತ್ರವೊಂದು ನೆರವಾಗುತ್ತಿತ್ತು.

ನನ್ನ ಸ್ಥಿತಿಯನ್ನು ನೆನಸಿ ಕೆಲವೊಮ್ಮೆ ತುಂಬ ಕುಗ್ಗಿಹೋಗುತ್ತೀನಿ. ಅಂಥ ಸಮಯದಲ್ಲಿ, ಮನೆಯಲ್ಲಿ ನಾವು ಆಗಾಗ ಪುನರುಚ್ಚರಿಸುವ ಈ ಮಾತನ್ನು ನೆನಪಿಸಿಕೊಳ್ಳುತ್ತೀನಿ: “ಮಾಡಲು ಆಗದ ವಿಷಯದ ಬಗ್ಗೆ ಕೊರಗಬಾರದು, ಏನು ಮಾಡಲು ಆಗುತ್ತದೋ ಅದನ್ನು ಚೆನ್ನಾಗಿ ಮಾಡಬೇಕು.” ಇದು ಅನೇಕ ವಿಷಯಗಳನ್ನು ಕಲಿತುಕೊಳ್ಳುವಂತೆ ನನಗೆ ಸ್ಫೂರ್ತಿ ನೀಡಿತು. ನಾನೀಗ ಕುದುರೆ ಸವಾರಿ ಮಾಡಬಲ್ಲೆ. ಹಾಯಿಹಡಗು, ದೋಣಿ ನಡೆಸಬಲ್ಲೆ. ಕ್ಯಾಂಪಿಂಗ್‌ ಹೋಗಲೂ ರೆಡಿ. ಅಷ್ಟೇ ಅಲ್ಲ ದಟ್ಟ ವಾಹನ ಸಂಚಾರವಿಲ್ಲದ ಸ್ಥಳದಲ್ಲಿ ಕಾರನ್ನೂ ಓಡಿಸಬಲ್ಲೆ! ಚಿತ್ರಕಲೆ, ಹೊಲಿಗೆ, ಕವುದಿ ಹೊಲಿಯುವುದು, ಕಸೂತಿ ಕೆಲಸ, ಕುಂಭಕಲೆ (ಸಿರಾಮಿಕ್ಸ್‌) ಮುಂತಾದ ಹವ್ಯಾಸಗಳಲ್ಲೂ ತೊಡಗಿಸಿಕೊಂಡಿದ್ದೀನಿ.

ಗಂಭೀರ ವೈಕಲ್ಯಗಳಿರುವ ಕಾರಣ ದೇವರನ್ನು ಆರಾಧಿಸುವ ವಿಷಯದಲ್ಲಿ ನಿರ್ಣಯ ತಕ್ಕೊಳ್ಳುವಷ್ಟು ಬುದ್ಧಿಸಾಮರ್ಥ್ಯ ನನಗಿಲ್ಲವೆಂದು ಅನೇಕರು ಹೇಳುತ್ತಿದ್ದರು. ನಾನು 18 ವರ್ಷದವಳಿದ್ದಾಗ ನನ್ನ ಶಾಲಾ ಶಿಕ್ಷಕಿಯೊಬ್ಬರು ಮನೆಯನ್ನು ತೊರೆಯುವಂತೆ ಆ ಮೂಲಕ ಅಮ್ಮನ ಧರ್ಮವನ್ನು ಪಾಲಿಸುವ ಕಾಟದಿಂದ ತಪ್ಪಿಸಿಕೊಳ್ಳುವಂತೆ ಉತ್ತೇಜಿಸಿದರು. ವಾಸಕ್ಕಾಗಿ ಬೇರೆ ಮನೆ ಹುಡುಕಿಕೊಡಲೂ ಸಿದ್ಧರಿದ್ದರು. ಆದರೆ, ಯೆಹೋವ ದೇವರಲ್ಲಿನ ನಂಬಿಕೆಯನ್ನು ತೊರೆಯುವುದಿಲ್ಲ ಎಂದು ನಾನು ಹೇಳಿದೆ. ಒಬ್ಬಳೇ ಜೀವಿಸಲು ಶಕ್ತಳಾಗುವ ವರೆಗೆ ಮನೆ ಬಿಟ್ಟು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಇದಾಗಿ ಕೊಂಚದರಲ್ಲೇ ದೀಕ್ಷಾಸ್ನಾನ ಪಡೆದುಕೊಂಡೆ. ಎರಡು ವರ್ಷದ ನಂತರ ಒಂದು ಚಿಕ್ಕ ಮನೆಗೆ ವಾಸ ಬದಲಾಯಿಸಿದೆ. ನಾನಿಲ್ಲಿ ಸಂತೋಷವಾಗಿದ್ದೀನಿ. ನನಗೆ ಬೇಕಾದ ಸಹಾಯ, ತಕ್ಕಮಟ್ಟಿಗಿನ ಸ್ವಾತಂತ್ರ್ಯ ಇಲ್ಲಿ ಸಿಕ್ಕಿದೆ.

ಅನಿರೀಕ್ಷಿತ ಮದುವೆ ಪ್ರಸ್ತಾಪ

ಬದುಕಿನಲ್ಲಿ ನಂಬಿಕೆಯ ಅನೇಕ ಪರೀಕ್ಷೆಗಳನ್ನು ಎದುರಿಸಿದ್ದೀನಿ. ಒಂದು ದಿನ ಸಹಪಾಠಿಯೊಬ್ಬ ಮದುವೆ ಪ್ರಸ್ತಾಪ ನನ್ನ ಮುಂದಿಟ್ಟ. ಅವನೂ ನನ್ನಂತೆ ವಿಕಲಾಂಗ. ಈ ಪ್ರಸ್ತಾಪ ಕೇಳಿ ನಾನು ಮೊದಲು ಪುಳಕಗೊಂಡೆ. ಬಾಳನೌಕೆಯಲ್ಲಿ ಜೀವನ ಸಂಗಾತಿಯೊಂದಿಗೆ ಪಯಣಿಸುವ ಮನದಾಸೆ ಎಲ್ಲಾ ಹುಡುಗಿಯರಂತೆ ನನಗೂ ಇತ್ತು. ಆದರೆ ಗಂಭೀರವಾಗಿ ಯೋಚಿಸಿದೆ. ಇಬ್ಬರೂ ವಿಕಲಾಂಗರು ಎಂದ ಮಾತ್ರಕ್ಕೆ ದಾಂಪತ್ಯದಲ್ಲಿ ಸಂತೋಷ ಇರುತ್ತೆ ಎಂದು ಹೇಗೆ ಹೇಳಸಾಧ್ಯ? ಆ ಹುಡುಗ ಯೆಹೋವನ ಸಾಕ್ಷಿಯಲ್ಲ. ನಮ್ಮಿಬ್ಬರ ನಂಬಿಕೆ, ಚಟುವಟಿಕೆ, ಗುರಿಗಳು ಪೂರ್ಣ ಭಿನ್ನವಾಗಿರುವಾಗ ಹೇಗೆ ತಾನೆ ಒಟ್ಟಿಗೆ ಹೊಂದಿಕೊಂಡು ಜೀವಿಸಲು ಸಾಧ್ಯ ಎಂದು ನನ್ನಲ್ಲೇ ತರ್ಕಿಸಿದೆ. ಜೊತೆ ವಿಶ್ವಾಸಿಯನ್ನು ಮಾತ್ರ ಮದುವೆಯಾಗಬೇಕೆಂಬ ದೇವರ ಆಜ್ಞೆಗೆ ವಿಧೇಯಳಾಗುವ ದೃಢಸಂಕಲ್ಪ ನನ್ನದು. (1 ಕೊರಿಂ. 7:39) ಆ ಯುವಕನ ಪ್ರಸ್ತಾಪವನ್ನು ವಿನಯದಿಂದ ನಿರಾಕರಿಸಿದೆ.

ನಾನು ಮಾಡಿದ ಆ ನಿರ್ಧಾರಕ್ಕಾಗಿ ಎಂದೂ ವಿಷಾದಪಟ್ಟಿಲ್ಲ. ದೇವರ ಮೇಲೆ ನನಗೆ ಸಂಪೂರ್ಣ ಭರವಸೆಯಿದೆ. ಆತನು ತರುವ ಹೊಸ ಲೋಕದಲ್ಲಿ ನಾನು ನವೋಲ್ಲಾಸದಿಂದ ಇರುವೆ. (ಕೀರ್ತ. 145:16; 2 ಪೇತ್ರ 3:13) ಅಷ್ಟರ ವರೆಗೆ ನಾನಿರುವ ಪರಿಸ್ಥಿತಿಯಲ್ಲೇ ಸಂತೃಪ್ತಳಾಗಿದ್ದು ಯೆಹೋವ ದೇವರಿಗೆ ನಿಷ್ಠಳಾಗಿ ಉಳಿಯುವುದೊಂದೇ ನನ್ನ ಗುರಿ.

ಮುಂದೊಂದು ದಿನ ನಾನು ಗಾಲಿಕುರ್ಚಿಯಿಂದ ಚಂಗನೆ ಹಾರಿ ಬಿರುಗಾಳಿಯ ವೇಗದಲ್ಲಿ ಓಡಿ ನಲಿದಾಡುವೆ! ಆ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದೇನೆ. ಆಗ ನಾನು, “ಅಂಗವೈಕಲ್ಯ ಹೋಯಿತು. ಇಂದಿನಿಂದ ನಿತ್ಯ ನಿರಂತರಕ್ಕೂ ಪರಿಪೂರ್ಣ ಆರೋಗ್ಯದಲ್ಲಿ ಆನಂದಿಸುವೆ” ಎಂದು ಕೂಗಿಹೇಳುವೆ!