ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ದುಷ್ಟ ಲೋಕದಲ್ಲಿ ನಾವು ‘ತಾತ್ಕಾಲಿಕ ನಿವಾಸಿಗಳು’

ಈ ದುಷ್ಟ ಲೋಕದಲ್ಲಿ ನಾವು ‘ತಾತ್ಕಾಲಿಕ ನಿವಾಸಿಗಳು’

ಈ ದುಷ್ಟ ಲೋಕದಲ್ಲಿ ನಾವು ‘ತಾತ್ಕಾಲಿಕ ನಿವಾಸಿಗಳು’

“ಇವರೆಲ್ಲರೂ . . . ತಾವು ದೇಶದಲ್ಲಿ ಅಪರಿಚಿತರೂ ತಾತ್ಕಾಲಿಕ ನಿವಾಸಿಗಳೂ ಆಗಿದ್ದೇವೆಂದು ಬಹಿರಂಗವಾಗಿ ಪ್ರಕಟಪಡಿಸುತ್ತಾ ನಂಬಿಕೆಯುಳ್ಳವರಾಗಿ [ಇದ್ದರು].”—ಇಬ್ರಿ. 11:13.

1. ಈ ಲೋಕದ ಕಡೆಗೆ ತನ್ನ ಶಿಷ್ಯರಿಗೆ ಇರಬೇಕಾದ ನೋಟದ ಕುರಿತು ಯೇಸು ಏನು ಹೇಳಿದನು?

ಯೇಸು ತನ್ನ ಶಿಷ್ಯರ ಕುರಿತು “ಇವರು ಲೋಕದಲ್ಲಿ ಇರುತ್ತಾರೆ” ಎಂದು ಹೇಳಿದನು. ಆದರೆ ನಂತರ ಹೀಗೆ ವಿವರಿಸಿದನು: “ನಾನು ಲೋಕದ ಭಾಗವಾಗಿಲ್ಲದ ಪ್ರಕಾರ ಇವರೂ ಲೋಕದ ಭಾಗವಾಗಿಲ್ಲ.” (ಯೋಹಾ. 17:11, 14) ಯೇಸುವಿನ ಈ ಮಾತುಗಳು, ಸೈತಾನನು ದೇವರಾಗಿರುವ ಈ ಲೋಕವನ್ನು ಅವನ ನಿಜ ಹಿಂಬಾಲಕರು ಹೇಗೆ ವೀಕ್ಷಿಸಬೇಕು ಎನ್ನುವುದನ್ನು ಸ್ಪಷ್ಟಪಡಿಸುತ್ತವೆ. (2 ಕೊರಿಂ. 4:4) ಅವರು ಈ ದುಷ್ಟ ಲೋಕದಲ್ಲಿ ಇರುವುದಾದರೂ ಅದರ ಭಾಗವಾಗಿಲ್ಲ, “ಪರದೇಶೀಯರೂ ತಾತ್ಕಾಲಿಕ ನಿವಾಸಿಗಳೂ” ಆಗಿ ಜೀವಿಸುತ್ತಾರೆ.—1 ಪೇತ್ರ 2:11.

‘ತಾತ್ಕಾಲಿಕ ನಿವಾಸಿಗಳಾಗಿ’ ಜೀವಿಸಿದವರು

2, 3. ಹನೋಕ, ನೋಹ, ಅಬ್ರಹಾಮ, ಸಾರ ಇವರೆಲ್ಲರು “ಅಪರಿಚಿತರೂ ತಾತ್ಕಾಲಿಕ ನಿವಾಸಿಗಳೂ” ಆಗಿ ಜೀವಿಸಿದರೆಂದು ಹೇಗೆ ಹೇಳಸಾಧ್ಯ?

2 ಮಾನವ ಇತಿಹಾಸದ ಆರಂಭದಿಂದಲೂ ಯೆಹೋವನ ನಂಬಿಗಸ್ತ ಸೇವಕರು ಭಕ್ತಿಹೀನ ಲೋಕದ ಜನರಿಗಿಂತ ಪೂರಾ ಭಿನ್ನರಾಗಿ ಜೀವಿಸಿದರು. ಉದಾಹರಣೆಗೆ ಜಲಪ್ರಳಯಕ್ಕೆ ಮುಂಚೆ ಜೀವಿಸಿದ ಹನೋಕ ಮತ್ತು ನೋಹನನ್ನು ಗಮನಿಸಿ. ಇಬ್ಬರೂ ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆದರೆಂದು’ ಬೈಬಲ್‌ ಹೇಳುತ್ತದೆ. (ಆದಿ. 5:22-24; 6:9) ಸೈತಾನನ ದುಷ್ಟ ಲೋಕವನ್ನು ಯೆಹೋವನು ನಾಶಮಾಡುವನೆಂದು ಅವರಿಬ್ಬರು ಧೈರ್ಯದಿಂದ ಸಾರಿಹೇಳಿದರು. (2 ಪೇತ್ರ 2:5; ಯೂದ 14, 15 ಓದಿ.) ಭಕ್ತಿಹೀನ ಲೋಕದಲ್ಲಿ ಜೀವಿಸುತ್ತಿದ್ದರೂ ಅವರು ಪ್ರತ್ಯೇಕರಾಗಿದ್ದು ದೇವರೊಂದಿಗೆ ನಡೆದರು. ಆ ಕಾರಣ ಹನೋಕನು ‘ದೇವರನ್ನು ಮೆಚ್ಚಿಸಿದನು’ ಮತ್ತು ನೋಹನು ‘ತನ್ನ ಕಾಲದವರಲ್ಲಿ ತಪ್ಪಿಲ್ಲದವನು ಆಗಿದ್ದನು.’—ಇಬ್ರಿ. 11:5; ಆದಿ. 6:9.

3 ಇನ್ನೊಂದು ಉದಾಹರಣೆ ಅಬ್ರಹಾಮ ಮತ್ತು ಸಾರಳದ್ದು. ಕಲ್ದೀಯರ ಊರ್‌ ಎಂಬ ಪಟ್ಟಣದಲ್ಲಿದ್ದ ಸಕಲ ಸವಲತ್ತುಗಳಿಂದ ತುಂಬಿದ ಮನೆಯನ್ನು ಬಿಟ್ಟು ಬೇರೊಂದು ದೇಶಕ್ಕೆ ಹೋಗುವಂತೆ ದೇವರು ಹೇಳಿದಾಗ ಅವರು ಕೂಡಲೆ ವಿಧೇಯರಾದರು. ಎಷ್ಟೋ ವರ್ಷ ಪರದೇಶದಲ್ಲಿ ಅಲೆಮಾರಿಗಳಾಗಿ ಜೀವಿಸಿದರು. (ಆದಿ. 11:27, 28; 12:1) ಈ ಕುರಿತು ಅಪೊಸ್ತಲ ಪೌಲ ಹೀಗೆ ಬರೆದನು: “ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟಾಗ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೋಗುವುದರಲ್ಲಿ ವಿಧೇಯತೆಯನ್ನು ತೋರಿಸಿದನು; ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದು ಅವನಿಗೆ ತಿಳಿದಿರಲಿಲ್ಲವಾದರೂ ಅವನು ಹೊರಟುಹೋದನು. ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶದಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಪರದೇಶಿಯಾಗಿ ಬದುಕಿದನು; ಮತ್ತು ತನ್ನೊಂದಿಗೆ ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರೊಂದಿಗೆ ಡೇರೆಗಳಲ್ಲಿ ವಾಸಿಸಿದನು.” (ಇಬ್ರಿ. 11:8, 9) ಇಂಥ ಎಲ್ಲ ನಂಬಿಗಸ್ತ ಸೇವಕರ ಕುರಿತು ಪೌಲ ಹೇಳುವುದನ್ನು ಗಮನಿಸಿ: “ಇವರೆಲ್ಲರೂ ವಾಗ್ದಾನದ ನೆರವೇರಿಕೆಯನ್ನು ಹೊಂದಲಿಲ್ಲವಾದರೂ ಅವುಗಳನ್ನು ದೂರದಿಂದಲೇ ನೋಡಿ ಸ್ವಾಗತಿಸಿದರು ಮತ್ತು ತಾವು ದೇಶದಲ್ಲಿ ಅಪರಿಚಿತರೂ ತಾತ್ಕಾಲಿಕ ನಿವಾಸಿಗಳೂ ಆಗಿದ್ದೇವೆಂದು ಬಹಿರಂಗವಾಗಿ ಪ್ರಕಟಪಡಿಸುತ್ತಾ ನಂಬಿಕೆಯುಳ್ಳವರಾಗಿ ಮೃತರಾದರು.”—ಇಬ್ರಿ. 11:13.

ಇಸ್ರಾಯೇಲ್ಯರಿಗೆ ಒಂದು ಎಚ್ಚರಿಕೆ!

4. ಇಸ್ರಾಯೇಲ್ಯರು ವಾಗ್ದತ್ತ ದೇಶದಲ್ಲಿ ನೆಲೆಸುವುದಕ್ಕೆ ಮುಂಚೆ ಯೆಹೋವನು ಅವರಿಗೆ ಯಾವ ಎಚ್ಚರಿಕೆ ಕೊಟ್ಟನು?

4 ಅಬ್ರಹಾಮನ ವಂಶ ದೊಡ್ಡದಾಗಿ ಬೆಳೆದಂತೆ ದೇವರು ಅವರನ್ನು ಇಸ್ರಾಯೇಲ್‌ ಜನಾಂಗವಾಗಿ ಸಂಘಟಿಸಿ ವಿಧಿನಿಯಮಗಳನ್ನೂ ವಾಸಕ್ಕಾಗಿ ಪ್ರದೇಶವನ್ನೂ ಕೊಟ್ಟನು. (ಆದಿ. 48:4; ಧರ್ಮೋ. 6:1) ಆ ಪ್ರದೇಶದ ಒಡೆಯನು ಯೆಹೋವನೇ ಎಂಬುದನ್ನು ಇಸ್ರಾಯೇಲ್‌ ಜನರು ಮರೆಯಬಾರದಿತ್ತು. (ಯಾಜ. 25:23) ಬಾಡಿಗೆದಾರರಂತಿದ್ದ ಅವರು ಒಡೆಯನಾದ ಯೆಹೋವನ ಇಚ್ಛೆಗನುಸಾರ ನಡೆಯಬೇಕಿತ್ತು. ಮಾತ್ರವಲ್ಲ “ಮನುಷ್ಯರು ಆಹಾರಮಾತ್ರದಿಂದ” ಬದುಕುವುದಿಲ್ಲ ಎಂಬುದನ್ನು ಯಾವಾಗಲೂ ಮನಸ್ಸಿನಲ್ಲಿಡಬೇಕಿತ್ತು. ತಮಗೆ ಸಿಕ್ಕಿದ ಸುಖಸಮೃದ್ಧಿಯಿಂದ ಉಬ್ಬಿ ಯೆಹೋವನನ್ನು ಮರೆಯಬಾರದಿತ್ತು. (ಧರ್ಮೋ. 8:1-3) ಹಾಗಾಗಿ ಅವರು ಆ ಪ್ರದೇಶಕ್ಕೆ ಕಾಲಿಡುವ ಮುಂಚೆ ಯೆಹೋವನು ಹೀಗೆ ಎಚ್ಚರಿಸಿದ್ದನು: “ನಿಮ್ಮ ದೇವರಾದ ಯೆಹೋವನು ನಿಮ್ಮ ಪಿತೃಗಳಾದ ಅಬ್ರಹಾಮ್‌ ಇಸಾಕ್‌ ಯಾಕೋಬರಿಗೆ ಪ್ರಮಾಣಮಾಡಿ ಕೊಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದಾಗ ನೀವು ಕಟ್ಟದ ಒಳ್ಳೆಯ ದೊಡ್ಡ ಪಟ್ಟಣಗಳನ್ನೂ ನೀವು ಕೂಡಿಸದ ಉತ್ತಮವಸ್ತುಗಳಿಂದ ತುಂಬಿದ ಮನೆಗಳನ್ನೂ ನೀವು ಅಗಿಯದ ನೀರಗುಂಡಿಗಳನ್ನೂ ನೀವು ಬೆಳಸದ ದ್ರಾಕ್ಷೇತೋಟಗಳನ್ನೂ ಎಣ್ಣೆಮರಗಳನ್ನೂ ಅನುಭವಿಸುತ್ತಾ ತೃಪ್ತರಾಗಿರುವಾಗ ಐಗುಪ್ತದೇಶದಲ್ಲಿ ದಾಸರಾಗಿದ್ದ ನಿಮ್ಮನ್ನು ಬಿಡುಗಡೆಮಾಡಿದ ಯೆಹೋವನನ್ನು ಮರೆಯಬಾರದು, ನೋಡಿರಿ.”—ಧರ್ಮೋ. 6:10-12.

5. ಇಸ್ರಾಯೇಲ್‌ ಜನಾಂಗವನ್ನು ಯೆಹೋವನು ಏಕೆ ತೊರೆದುಬಿಟ್ಟನು? ಯಾವ ಹೊಸ ಜನಾಂಗವನ್ನು ಆರಿಸಿಕೊಂಡನು?

5 ಆದರೆ ಮಾಡಬಾರದೆಂದು ಹೇಳಿದ್ದನ್ನೇ ಇಸ್ರಾಯೇಲ್ಯರು ಮಾಡಿದರು. ವಾಗ್ದತ್ತ ದೇಶಕ್ಕೆ ಬಂದಾಗ ಏನು ಮಾಡಿದರೆಂದು ನೆಹೆಮೀಯನ ಸಮಯದಲ್ಲಿ ಕೆಲವು ಲೇವಿಯರು ವ್ಯಥೆಯಿಂದ ನೆನಪಿಸಿಕೊಂಡರು. ವಾಗ್ದತ್ತ ಪ್ರದೇಶದಲ್ಲಿ ವಾಸಿಸಲು ದೊಡ್ಡ ದೊಡ್ಡ ಮನೆ, ಹೇರಳ ಆಹಾರ ಸಿಕ್ಕಿದಾಗ ಇಸ್ರಾಯೇಲ್ಯರು “ಚೆನ್ನಾಗಿ ತಿಂದು ತೃಪ್ತರಾಗಿ ಕೊಬ್ಬಿ” ಯೆಹೋವನನ್ನೇ ಮರೆತುಬಿಟ್ಟರು. ಅನ್ನವಿತ್ತ ಕೈಯನ್ನೇ ಕಚ್ಚುವಂತೆ ಸಕಲವನ್ನು ಕೊಟ್ಟ ದೇವರಿಗೆ ತಿರುಗಿಬಿದ್ದು ತಮ್ಮನ್ನು ಎಚ್ಚರಿಸಲು ಆತನು ಕಳುಹಿಸಿದ ಪ್ರವಾದಿಗಳನ್ನು ಕೊಂದು ಹಾಕಿದರು. ಪರಿಣಾಮ ಯೆಹೋವನು ಅವರನ್ನು ವೈರಿಗಳ ಕೈಗೆ ಒಪ್ಪಿಸಬೇಕಾಯಿತು. (ನೆಹೆಮೀಯ 9:25-27 ಓದಿ; ಹೋಶೇ. 13:6-9) ಸಮಯಾನಂತರ ರೋಮ್‌ನ ಆಳ್ವಿಕೆಯಡಿಯಲ್ಲಿದ್ದಾಗ ಅಪನಂಬಿಗಸ್ತ ಯೆಹೂದ್ಯರು ತಮಗಾಗಿ ದೇವರು ಕಳುಹಿಸಿದ ಮೆಸ್ಸೀಯನನ್ನು ಕೊಲ್ಲುವುದಕ್ಕೂ ಹೇಸಲಿಲ್ಲ. ಆದಕಾರಣ ಯೆಹೋವನು ಆ ಜನಾಂಗವನ್ನು ತೊರೆದುಬಿಟ್ಟನು ಮತ್ತು ಒಂದು ಹೊಸ ಜನಾಂಗವನ್ನು ಅಂದರೆ ಆಧ್ಯಾತ್ಮಿಕ ಇಸ್ರಾಯೇಲ್ಯರನ್ನು ಆರಿಸಿಕೊಂಡನು.—ಮತ್ತಾ. 21:43; ಅ. ಕಾ. 7:51, 52; ಗಲಾ. 6:16.

ಕ್ರೈಸ್ತರು ‘ಲೋಕದ ಭಾಗವಾಗಿಲ್ಲ’

6, 7. (ಎ) ಈ ಲೋಕದಲ್ಲಿ ತನ್ನ ಶಿಷ್ಯರು ಹೇಗೆ ಜೀವಿಸಬೇಕು ಎನ್ನುವ ಕುರಿತು ಯೇಸು ಹೇಳಿದ ವಿಷಯವನ್ನು ನೀವು ಹೇಗೆ ವಿವರಿಸುವಿರಿ? (ಬಿ) ನಿಜ ಕ್ರೈಸ್ತರು ಸೈತಾನನ ಲೋಕದ ಭಾಗವಾಗಿ ಇರಬಾರದಿತ್ತು ಏಕೆ?

6 ತನ್ನ ಶಿಷ್ಯರು ಸೈತಾನನ ದುಷ್ಟ ಲೋಕದ ಭಾಗವಾಗಿರುವುದಿಲ್ಲ ಎಂದು ಕ್ರೈಸ್ತ ಸಭೆಯ ಶಿರಸ್ಸಾಗಿರುವ ಯೇಸು ಹೇಳಿದನೆಂದು ನಾವು ಈ ಲೇಖನದ ಆರಂಭದಲ್ಲಿ ಕಲಿತೆವು. ತನ್ನ ಮರಣಕ್ಕೆ ಮುಂಚೆ ಆತನು ಶಿಷ್ಯರಿಗೆ ಹೀಗಂದನು: “ನೀವು ಲೋಕದ ಭಾಗವಾಗಿರುತ್ತಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ಆದರೆ ನೀವು ಲೋಕದ ಭಾಗವಾಗಿರದ ಕಾರಣ ಮತ್ತು ನಾನು ನಿಮ್ಮನ್ನು ಈ ಲೋಕದಿಂದ ಆರಿಸಿಕೊಂಡಿರುವ ಕಾರಣ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.”—ಯೋಹಾ. 15:19.

7 ಕ್ರೈಸ್ತತ್ವವು ಲೋಕದೆಲ್ಲೆಡೆ ಹಬ್ಬಿದಂತೆ ನಾನಾ ಕಡೆಗಳಲ್ಲಿ ಜೀವಿಸುತ್ತಿದ್ದ ಕ್ರೈಸ್ತರು ಲೋಕದ ರೀತಿನೀತಿಗನುಸಾರ ನಡೆದು ಲೋಕದ ಭಾಗವಾಗಬಹುದಿತ್ತಾ? ಖಂಡಿತ ಇಲ್ಲ. ಎಲ್ಲೇ ಜೀವಿಸಲಿ ಸೈತಾನನ ಈ ಲೋಕದಿಂದ ಪ್ರತ್ಯೇಕರಾಗಿ ಉಳಿಯಲೇಬೇಕಿತ್ತು. ಕ್ರಿಸ್ತನ ಮರಣದ ಸುಮಾರು 30 ವರ್ಷಗಳ ತರುವಾಯ ಅಪೊಸ್ತಲ ಪೇತ್ರನು ರೋಮ್‌ ಸಾಮ್ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿದ್ದ ಕ್ರೈಸ್ತರಿಗೆ ಏನು ಬರೆದನೆಂದು ಗಮನಿಸಿ: “ಪ್ರಿಯರೇ, ಪರದೇಶೀಯರೂ ತಾತ್ಕಾಲಿಕ ನಿವಾಸಿಗಳೂ ಆಗಿರುವ ನೀವು ನಿಮ್ಮ ಜೀವಕ್ಕೆ ವಿರುದ್ಧವಾಗಿ ಹೋರಾಡುತ್ತಿರುವ ಶಾರೀರಿಕ ಬಯಕೆಗಳಿಂದ ದೂರವಾಗಿರಬೇಕೆಂದು ನಿಮಗೆ ಬುದ್ಧಿ ಹೇಳುತ್ತೇನೆ. ಅನ್ಯಜನಾಂಗಗಳ ಮಧ್ಯೆ ನಿಮ್ಮ ನಡತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳಿರಿ.”—1 ಪೇತ್ರ 1:1; 2:11, 12.

8. ಆರಂಭದ ಕ್ರೈಸ್ತರು ಲೋಕದ ಭಾಗವಾಗಿರಲಿಲ್ಲ ಎಂಬುದರ ಬಗ್ಗೆ ಒಬ್ಬ ಇತಿಹಾಸಕಾರ ಏನು ಹೇಳಿದರು?

8 ಆರಂಭದ ಕ್ರೈಸ್ತರು ರೋಮ್‌ ಸಾಮ್ರಾಜ್ಯದಡಿ “ಪರದೇಶೀಯರೂ ತಾತ್ಕಾಲಿಕ ನಿವಾಸಿಗಳೂ ಆಗಿ” ಜೀವಿಸಿದರು ಎಂಬುದನ್ನು ಇತಿಹಾಸಕಾರ ಕೆನೆತ್‌ ಸ್ಕಾಟ್‌ ಲಾಟೊರೆಟ್‌ ಅವರ ಈ ಮಾತುಗಳು ಪುಷ್ಟೀಕರಿಸುತ್ತವೆ: “ಕ್ರೈಸ್ತತ್ವ ಆರಂಭಗೊಂಡ ಮೊದಲ ಮೂರು ಶತಮಾನಗಳಲ್ಲಿ ಕ್ರೈಸ್ತರು ಸತತವಾಗಿ ಹಿಂಸೆಗೆ, ಕೆಲವೊಮ್ಮೆ ಕ್ರೂರ ಹಿಂಸೆಗೆ ಬಲಿಯಾಗುತ್ತಿದ್ದ ಸಂಗತಿ ಸರ್ವೇಸಾಮಾನ್ಯ . . . ನಾನಾ ರೀತಿಯ ಆರೋಪಗಳನ್ನು ಅವರ ಮೇಲೆ ಹೊರಿಸಲಾಗುತ್ತಿತ್ತು. ವಿಧರ್ಮಿ ಆಚರಣೆಗಳಲ್ಲಿ ಒಳಗೂಡದಿದ್ದ ಕಾರಣ ಅವರಿಗೆ ನಾಸ್ತಿಕರೆಂಬ ಹಣೆಪಟ್ಟಿ ಹಚ್ಚಲಾಗಿತ್ತು. ಜೊತೆಗೆ ಅವರನ್ನು ಮನುಷ್ಯ ದ್ವೇಷಿಗಳೆಂದು ಕರೆಯಲಾಗುತ್ತಿತ್ತು. ಏಕೆಂದರೆ ಸಮಾಜದಲ್ಲಿದ್ದ ವಿಧರ್ಮಿ ಹಬ್ಬಗಳನ್ನು ಅವರು ಆಚರಿಸುತ್ತಿರಲಿಲ್ಲ, ಸಾರ್ವಜನಿಕ ವಿನೋದಾವಳಿಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಅವುಗಳಲ್ಲಿ ಸುಳ್ಳು ನಂಬಿಕೆ, ಸುಳ್ಳು ಪದ್ಧತಿ, ಅನೈತಿಕತೆ ಒಳಗೂಡಿದೆಯೆಂದು ಮನಗಂಡಿದ್ದರು.”

ಲೋಕವನ್ನು ಪೂರ್ಣವಾಗಿ ಅನುಭೋಗಿಸಬೇಡಿ

9. ಸತ್ಯ ಕ್ರೈಸ್ತರಾದ ನಾವು “ಮನುಷ್ಯ ದ್ವೇಷಿ”ಗಳಲ್ಲ ಎಂದು ಹೇಗೆ ತೋರಿಸುತ್ತೇವೆ?

9 ನಮ್ಮ ಕುರಿತೇನು? ಆರಂಭದ ಕ್ರೈಸ್ತರಂತೆ ನಾವು ಕೂಡ ‘ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ’ ಭಾಗವಾಗಿಲ್ಲ. (ಗಲಾ. 1:4) ಇದರಿಂದಾಗಿ ಅನೇಕರು ನಮ್ಮನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ಕೆಲವರು ದ್ವೇಷಿಸುತ್ತಾರೆ. ಆದರೆ ಖಂಡಿತ ನಾವು “ಮನುಷ್ಯ ದ್ವೇಷಿ”ಗಳಲ್ಲ. ಜೊತೆ ಮಾನವರನ್ನು ಪ್ರೀತಿಸುತ್ತೇವೆ. ಆದ್ದರಿಂದಲೇ ಮನೆ ಮನೆಗೆ ಹೋಗಿ ದೇವರ ‘ರಾಜ್ಯದ ಸುವಾರ್ತೆಯನ್ನು’ ಪ್ರತಿಯೊಬ್ಬರಿಗೆ ಮುಟ್ಟಿಸಲು ಶ್ರಮಿಸುತ್ತೇವೆ. (ಮತ್ತಾ. 22:39; 24:14) ಹಾಗೆ ಮಾಡಲು ಇನ್ನೊಂದು ಕಾರಣವೂ ಇದೆ. ಬಲು ಶೀಘ್ರದಲ್ಲೇ ಯೆಹೋವನ ರಾಜ್ಯವು ಕ್ರಿಸ್ತನ ಮೂಲಕ ಅಪರಿಪೂರ್ಣ ಮಾನವ ಆಳ್ವಿಕೆಯನ್ನು ಕೊನೆಗೊಳಿಸಿ ನೀತಿಯ ಹೊಸ ಲೋಕವನ್ನು ಸ್ಥಾಪಿಸಲಿದೆ ಎಂಬ ದೃಢಭರವಸೆ ನಮಗಿದೆ.—ದಾನಿ. 2:44; 2 ಪೇತ್ರ 3:13.

10, 11. (ಎ) ನಾವು ಲೋಕವನ್ನು ಹೇಗೆ ಮಿತವಾಗಿ ಅನುಭೋಗಿಸುತ್ತೇವೆ? (ಬಿ) ಕ್ರೈಸ್ತರು ಯಾವ ವಿಧಗಳಲ್ಲಿ ಲೋಕವನ್ನು ಪೂರ್ಣವಾಗಿ ಅನುಭೋಗಿಸುವುದಿಲ್ಲ?

10 ಸೈತಾನನ ಲೋಕದ ಅಂತ್ಯ ಅತ್ಯಂತ ಹತ್ತಿರವಿದೆ. ಆದ್ದರಿಂದ ಯೆಹೋವನ ಸೇವಕರಾದ ನಾವು ನಾಶವಾಗಲಿರುವ ಈ ಲೋಕದಲ್ಲಿ ಆರಾಮದಾಯಕ ಜೀವನ ಕಂಡುಕೊಂಡು ನೆಲೆಯೂರುವ ಸಮಯ ಇದಲ್ಲ. ನಾವು ಅಪೊಸ್ತಲ ಪೌಲನ ಈ ಮಾತುಗಳನ್ನು ಪಾಲಿಸುತ್ತೇವೆ: “ಸಹೋದರರೇ, ಉಳಿದಿರುವ ಸಮಯವು ಕೊಂಚವೇ ಆಗಿದೆ . . . ಆದುದರಿಂದ . . . ಕೊಂಡುಕೊಳ್ಳುವವರು ಒಡೆತನವಿಲ್ಲದವರಂತೆಯೂ ಲೋಕವನ್ನು ಅನುಭೋಗಿಸುವವರು ಅದನ್ನು ಪೂರ್ಣವಾಗಿ ಅನುಭೋಗಿಸದವರಂತೆಯೂ ಇರಲಿ; ಏಕೆಂದರೆ ಈ ಲೋಕದ ದೃಶ್ಯವು ಮಾರ್ಪಡುತ್ತಾ ಇದೆ.” (1 ಕೊರಿಂ. 7:29-31) ಇಂದು ಕ್ರೈಸ್ತರು ಲೋಕವನ್ನು ಅನುಭೋಗಿಸುವುದು ಯಾವ ಅರ್ಥದಲ್ಲಿ? ಲೋಕವ್ಯಾಪಕವಾಗಿ ನೂರಾರು ಭಾಷೆಗಳಲ್ಲಿ ಬೈಬಲ್‌ ಜ್ಞಾನವನ್ನು ಪಸರಿಸಲು ಅವರು ಆಧುನಿಕ ತಂತ್ರಜ್ಞಾನ ಮತ್ತು ಸಂಪರ್ಕ ಮಾಧ್ಯಮಗಳನ್ನು ಉಪಯೋಗಿಸುತ್ತಾರೆ. ಜೀವನ ಸಾಗಿಸಲು ಮಿತವಾಗಿ ಸಂಪಾದಿಸುತ್ತಾರೆ. ಲೋಕ ಉತ್ಪಾದಿಸುವ ವಸ್ತುಗಳಲ್ಲಿ ಅಗತ್ಯವಾದವುಗಳನ್ನು ಕೊಂಡುಕೊಳ್ಳುತ್ತಾರೆ. ಸೇವಾಸೌಲಭ್ಯಗಳನ್ನು ಬಳಸಿಕೊಳ್ಳುತ್ತಾರೆ. ಈ ಅರ್ಥದಲ್ಲಿ ಲೋಕವನ್ನು ಮಿತವಾಗಿ ಅನುಭೋಗಿಸುತ್ತಾರೆ. ಹಾಗಿದ್ದರೂ, ಲೋಕದ ಸ್ವತ್ತೇ ಸರ್ವಸ್ವ, ಉದ್ಯೋಗವೇ ಬದುಕು ಎನ್ನದೆ ಅವುಗಳನ್ನು ಸೂಕ್ತ ಸ್ಥಾನದಲ್ಲಿಡುತ್ತಾರೆ. ಹೀಗೆ ಲೋಕವನ್ನು ಪೂರ್ಣವಾಗಿ ಅನುಭೋಗಿಸುವುದಿಲ್ಲ.1 ತಿಮೊಥೆಯ 6:9, 10 ಓದಿ.

11 ಉನ್ನತ ಶಿಕ್ಷಣದ ವಿಷಯದಲ್ಲೂ ಕ್ರೈಸ್ತರು ಲೋಕವನ್ನು ಪೂರ್ಣವಾಗಿ ಅನುಭೋಗಿಸುವುದಿಲ್ಲ. ಉನ್ನತ ಶಿಕ್ಷಣ ಎಂಬುದು ಪ್ರಸಿದ್ಧಿ, ಸಿರಿಸಂಪತ್ತಿನ ಶಿಖರವನ್ನೇರುವ ಏಣಿ ಎನ್ನುವುದು ಅನೇಕ ಜನರ ಅಂಬೋಣ. ಆದರೆ ಕ್ರೈಸ್ತರಾದ ನಾವು ಹಾಗೆ ನೆನಸುವುದಿಲ್ಲ. ತಾತ್ಕಾಲಿಕ ನಿವಾಸಿಗಳಾಗಿದ್ದು ಅಂಥ ‘ದೊಡ್ಡಸ್ತಿಕೆಯ ಮೇಲೆ ಮನಸ್ಸಿಡುವುದಿಲ್ಲ.’ (ರೋಮ. 12:16, BSI ; ಯೆರೆ. 45:5) ಯೇಸುವಿನ ಹಿಂಬಾಲಕರಾದ ನಾವು ಅವನ ಈ ಎಚ್ಚರಿಕೆಗೆ ಗಮನಕೊಡುತ್ತೇವೆ: “ನಿಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಂಡು ಪ್ರತಿಯೊಂದು ರೀತಿಯ ದುರಾಶೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ; ಏಕೆಂದರೆ ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು.” (ಲೂಕ 12:15) ಆದ್ದರಿಂದ ಮಕ್ಕಳೇ, ಆಧ್ಯಾತ್ಮಿಕ ಗುರಿಗಳನ್ನಿಟ್ಟು ಅವನ್ನು ಮುಟ್ಟಲು ಪ್ರಯತ್ನಿಸಿ. ಮೂಲ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೇಕಾಗುವಷ್ಟು ಶಿಕ್ಷಣ ಮಾತ್ರ ಪಡೆಯಿರಿ. ‘ಪೂರ್ಣ ಹೃದಯ, ಪೂರ್ಣ ಪ್ರಾಣ, ಪೂರ್ಣ ಬಲ, ಪೂರ್ಣ ಮನಸ್ಸಿನಿಂದ’ ಯೆಹೋವನ ಸೇವೆಮಾಡಲು ನೈಪುಣ್ಯ ಪಡೆಯುವುದೇ ನಿಮ್ಮ ಗುರಿಯಾಗಿರಲಿ. (ಲೂಕ 10:27) ಹೀಗೆ ಮಾಡುವಾಗ ನೀವು ‘ದೇವರ ವಿಷಯದಲ್ಲಿ ಐಶ್ವರ್ಯವಂತರಾಗುವಿರಿ.’—ಲೂಕ 12:21; ಮತ್ತಾಯ 6:19-21 ಓದಿ.

ಜೀವನದ ಚಿಂತೆಗಳಲ್ಲಿ ಮುಳುಗಿ ಹೋಗಬೇಡಿ

12, 13. ಮತ್ತಾಯ 6:31-33ರಲ್ಲಿರುವ ಯೇಸುವಿನ ಮಾತುಗಳನ್ನು ಪಾಲಿಸುವುದು ಹೇಗೆ ನಮ್ಮನ್ನು ಲೋಕದ ಜನರಿಗಿಂತ ಭಿನ್ನರನ್ನಾಗಿ ಮಾಡುತ್ತದೆ?

12 ದೈನಂದಿನ ಅಗತ್ಯತೆಗಳ ಕಡೆಗೆ ಲೋಕದ ಜನರಿಗೂ ಯೆಹೋವನ ಸೇವಕರಿಗೂ ಇರುವ ಮನೋಭಾವದಲ್ಲಿ ಅಜಗಜಾಂತರವಿದೆ. ಯೇಸು ತನ್ನ ಹಿಂಬಾಲಕರಿಗೆ ಈ ಎಚ್ಚರಿಕೆ ಕೊಟ್ಟನು: “ಏನು ಊಟಮಾಡಬೇಕು ಏನು ಕುಡಿಯಬೇಕು ಏನು ಧರಿಸಬೇಕೆಂದು ಎಂದಿಗೂ ಚಿಂತೆಮಾಡಬೇಡಿ. ಏಕೆಂದರೆ ಅನ್ಯಜನಾಂಗಗಳವರು ಇವುಗಳನ್ನು ತವಕದಿಂದ ಬೆನ್ನಟ್ಟುತ್ತಾರೆ. ಇವು ನಿಮಗೆ ಬೇಕಾಗಿವೆ ಎಂಬುದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. ‘ಆದುದರಿಂದ ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ; ಆಗ ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು.’” (ಮತ್ತಾ. 6:31-33) ಹೌದು ನಮ್ಮ ತಂದೆಯಾಗಿರುವ ಯೆಹೋವನು ನಮಗೆ ಅಗತ್ಯವಿರುವುದನ್ನು ಕೊಟ್ಟೇ ಕೊಡುತ್ತಾನೆ. ಇದನ್ನು ನಮ್ಮ ಸಹೋದರರಲ್ಲಿ ಅನೇಕರು ಸ್ವತಃ ಸವಿದುನೋಡಿದ್ದಾರೆ.

13 “ಸ್ವಸಂತೃಪ್ತಿಸಹಿತವಾದ ದೇವಭಕ್ತಿಯು ದೊಡ್ಡ ಲಾಭ.” (1 ತಿಮೊ. 6:6) ಇಂಥ ಮನೋಭಾವ ಇಂದು ಲೋಕದ ಜನರಲ್ಲಿ ಕಾಣಸಿಗುವುದಿಲ್ಲ. ಉದಾಹರಣೆಗೆ ತರುಣ ತರುಣಿಯರು ಮದುವೆಯಾದ ಕೂಡಲೆ ಒಮ್ಮೆಲೆ ಎಲ್ಲವನ್ನೂ ಕೂಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸ್ವಂತ ಮನೆ, ಸುಂದರ ಪೀಠೋಪಕರಣ, ಹೊಸ ಮಾಡಲ್‌ ಕಾರು, ವಿನೂತನ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕೊಳ್ಳುವ ಕಾತರ ಅವರಿಗೆ. ಆದರೆ ತಾತ್ಕಾಲಿಕ ನಿವಾಸಿಗಳಾಗಿ ಜೀವಿಸುತ್ತಿರುವ ಕ್ರೈಸ್ತರು ತಮ್ಮ ಆಸೆ ಆಕಾಂಕ್ಷೆಗಳಿಗೆ ಮೇರೆ ಇಡುತ್ತಾರೆ. ಚಾಪೆ ಇದ್ದಷ್ಟೇ ಕಾಲು ಚಾಚುತ್ತಾರೆ, ಶಕ್ತಿ ಮೀರಿ ಕೊಂಡುಕೊಳ್ಳಲು ಪ್ರಯತ್ನಿಸುವುದಿಲ್ಲ. ತಮ್ಮ ಸಮಯ ಸಾಮರ್ಥ್ಯವನ್ನು ಯೆಹೋವನ ಸೇವೆಗಾಗಿ ಮುಡುಪಾಗಿಡಲು ಅನೇಕರು ಸುಖಸವಲತ್ತುಗಳನ್ನು ತ್ಯಾಗ ಮಾಡುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಇನ್ನಿತರರು ಪಯನೀಯರ್‌ ಸೇವೆ, ಬೆತೆಲ್‌ ಸೇವೆ, ಸಂಚರಣ ಕೆಲಸ ಅಥವಾ ಮಿಷನೆರಿ ಸೇವೆಯಲ್ಲಿ ತಮ್ಮನ್ನು ನೀಡಿಕೊಂಡಿದ್ದಾರೆ. ನಮ್ಮ ಈ ಸಹೋದರ ಸಹೋದರಿಯರು ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡುತ್ತಿರುವುದನ್ನು ನಾವೆಲ್ಲರೂ ಬಹಳ ಗಣ್ಯಮಾಡುತ್ತೇವೆ.

14. ಯೇಸು ತಿಳಿಸಿದ ಬಿತ್ತುವವನ ದೃಷ್ಟಾಂತದಿಂದ ಯಾವ ಪಾಠ ಕಲಿಯುತ್ತೇವೆ?

14 “ಈ ವಿಷಯಗಳ ವ್ಯವಸ್ಥೆಯ ಚಿಂತೆಯೂ ಐಶ್ವರ್ಯದ ಮೋಸಕರವಾದ ಪ್ರಭಾವವೂ” ನಮ್ಮ ಹೃದಯದಲ್ಲಿ ದೇವರ ವಾಕ್ಯವನ್ನು ಅದುಮಿಬಿಟ್ಟು ಫಲ ಕೊಡದಂತೆ ಮಾಡುತ್ತದೆಂದು ಯೇಸು ಬಿತ್ತುವವನ ದೃಷ್ಟಾಂತದಲ್ಲಿ ತಿಳಿಸಿದನು. (ಮತ್ತಾ. 13:22) ನಾವೀ ಲೋಕದಲ್ಲಿ ತಾತ್ಕಾಲಿಕ ನಿವಾಸಿಗಳಾಗಿ ಜೀವಿಸುವುದರಲ್ಲಿ ತೃಪ್ತಿ ಹೊಂದುವಲ್ಲಿ ಈ ಪಾಶಕ್ಕೆ ಬಲಿಯಾಗುವುದಿಲ್ಲ. ನಮ್ಮ ಕಣ್ಣನ್ನು “ಸರಳವಾಗಿ” ಇಡುವೆವು. ಅಂದರೆ ದೇವರ ರಾಜ್ಯವನ್ನು ನಮ್ಮ ಜೀವನದಲ್ಲಿ ಪ್ರಥಮವಾಗಿಟ್ಟು ಆತನ ಸೇವೆ ಮಾಡುವ ಗುರಿಯ ಮೇಲೆಯೇ ದೃಷ್ಟಿ ನೆಡುವೆವು.—ಮತ್ತಾ. 6:22.

ಲೋಕ “ಗತಿಸಿಹೋಗುತ್ತಿದೆ”

15. ಈ ಲೋಕದ ಕಡೆಗೆ ನಿಜ ಕ್ರೈಸ್ತರಿಗೆ ಯಾವ ಮನೋಭಾವ ಇರಬೇಕೆಂದು ಅಪೊಸ್ತಲ ಯೋಹಾನನು ಹೇಳಿದನು?

15 ನಿಜ ಕ್ರೈಸ್ತರಾದ ನಾವು ಲೋಕದಲ್ಲಿ “ಅಪರಿಚಿತರೂ ತಾತ್ಕಾಲಿಕ ನಿವಾಸಿಗಳೂ” ಆಗಿ ಜೀವಿಸಲು ಮುಖ್ಯ ಕಾರಣ ಸೈತಾನನ ಲೋಕದ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಮನಗಂಡಿರುವುದೇ. (1 ಪೇತ್ರ 2:11; 2 ಪೇತ್ರ 3:7) ನಾವಿದನ್ನು ಗಂಭೀರವಾಗಿ ತಕ್ಕೊಂಡಿದ್ದೇವೆ ಎನ್ನುವುದನ್ನು ನಮ್ಮ ಆಯ್ಕೆ, ಆಸೆ ಆಕಾಂಕ್ಷೆಗಳು ತೋರಿಸಿಕೊಡುತ್ತವೆ. ಅಪೊಸ್ತಲ ಯೋಹಾನನು ಜೊತೆ ಕ್ರೈಸ್ತರಿಗೆ ಲೋಕವನ್ನಾಗಲಿ ಲೋಕದಲ್ಲಿ ಇರುವವುಗಳನ್ನಾಗಲಿ ಪ್ರೀತಿಸಬಾರದೆಂದು ಬುದ್ಧಿಹೇಳಿದನು. ಏಕೆಂದರೆ “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿದೆ, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು.”—1 ಯೋಹಾ. 2:15-17.

16. ಯೆಹೋವನು ಲೋಕದಿಂದ ಪ್ರತ್ಯೇಕಿಸಿರುವ ‘ವಿಶಿಷ್ಟ ಜನರಲ್ಲಿ’ ನಾವು ಒಬ್ಬರಾಗಿದ್ದೇವೆಂದು ಹೇಗೆ ತೋರಿಸಬಲ್ಲೆವು?

16 ಇಸ್ರಾಯೇಲ್ಯರು ತನಗೆ ವಿಧೇಯರಾಗುವಲ್ಲಿ, ಎಲ್ಲಾ ಜನಾಂಗಗಳಿಂದ ಬೇರ್ಪಟ್ಟು ತನ್ನ ‘ಸ್ವಕೀಯಜನರಾಗಿ’ ಇರುವರು ಎಂದು ಯೆಹೋವನು ಹೇಳಿದ್ದನು. (ವಿಮೋ. 19:5) ಎಲ್ಲಿಯ ವರೆಗೆ ದೇವರಿಗೆ ನಂಬಿಗಸ್ತರಾಗಿ ಉಳಿದರೋ ಅಲ್ಲಿಯ ವರೆಗೆ ಅವರ ಆರಾಧನೆ ಮತ್ತು ಜೀವನಶೈಲಿ ಬೇರೆಲ್ಲ ಜನಾಂಗಕ್ಕಿಂತ ಭಿನ್ನವಾಗಿತ್ತು. ಅದೇ ರೀತಿಯಲ್ಲಿ ಇಂದು ಯೆಹೋವನು ತನಗಾಗಿ ಜನರನ್ನು ಪ್ರತ್ಯೇಕಿಸಿದ್ದಾನೆ. ಅವರು ಸೈತಾನನ ಲೋಕದಲ್ಲಿರುವ ಜನರಿಗಿಂತ ಭಿನ್ನರಾಗಿದ್ದಾರೆ. ಬೈಬಲ್‌ ನಮಗೆ, “ನಾವು ಭಕ್ತಿಹೀನತೆಯನ್ನೂ ಲೌಕಿಕ ಆಶೆಗಳನ್ನೂ ವಿಸರ್ಜಿಸಿ ಈ ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಸ್ವಸ್ಥಬುದ್ಧಿಯಿಂದಲೂ ನೀತಿಯಿಂದಲೂ ದೇವಭಕ್ತಿಯಿಂದಲೂ ಜೀವಿಸುವಂತೆ, ಸಂತೋಷಕರವಾದ ನಿರೀಕ್ಷೆಯನ್ನೂ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಮಹಿಮಾಯುತ ಪ್ರತ್ಯಕ್ಷತೆಯನ್ನೂ ಕಾಯುತ್ತಿರುವಾಗ ಹೀಗೆ ಮಾಡುವಂತೆ . . . ಉಪದೇಶಿಸಿದೆ. ಕ್ರಿಸ್ತನು ನಮ್ಮನ್ನು ಎಲ್ಲ ರೀತಿಯ ಅಧರ್ಮದಿಂದ ಬಿಡಿಸುವುದಕ್ಕೂ ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾದ ತನ್ನ ಸ್ವಂತ ವಿಶಿಷ್ಟ ಜನರನ್ನು ತನಗಾಗಿ ಶುದ್ಧೀಕರಿಸುವುದಕ್ಕೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.” (ತೀತ 2:11-14) ಇಲ್ಲಿ, “ವಿಶಿಷ್ಟ ಜನರನ್ನು” ಎಂದು ಸೂಚಿಸಿರುವವರಲ್ಲಿ ಅಭಿಷಿಕ್ತ ಕ್ರೈಸ್ತರು ಹಾಗೂ ಅವರಿಗೆ ಸಹಾಯ, ಬೆಂಬಲ ನೀಡುವ “ಬೇರೆ ಕುರಿಗಳ” ವರ್ಗಕ್ಕೆ ಸೇರಿರುವ ಲಕ್ಷಾಂತರ ಮಂದಿ ಸೇರಿದ್ದಾರೆ.—ಯೋಹಾ. 10:16.

17. ದುಷ್ಟ ಲೋಕದಲ್ಲಿ ತಾತ್ಕಾಲಿಕ ನಿವಾಸಿಗಳಾಗಿ ಜೀವಿಸಿದ್ದಕ್ಕಾಗಿ ಅಭಿಷಿಕ್ತರು ಮತ್ತು ಅವರ ಸಂಗಡಿಗರು ಎಂದೂ ವಿಷಾದಿಸುವುದಿಲ್ಲ ಏಕೆ?

17 ಅಭಿಷಿಕ್ತರ “ಸಂತೋಷಕರವಾದ ನಿರೀಕ್ಷೆ” ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಆಳುವುದಾಗಿದೆ. (ಪ್ರಕ. 5:10) ಬೇರೆ ಕುರಿಗಳ ನಿರೀಕ್ಷೆ ಇದೇ ಭೂಮಿಯ ಮೇಲೆ ಶಾಶ್ವತವಾಗಿ ಜೀವಿಸುವುದಾಗಿದೆ. ಈ ನಿರೀಕ್ಷೆಯು ಸತ್ಯವಾಗುವಾಗ ಅವರೆಂದೂ ದುಷ್ಟ ಲೋಕದಲ್ಲಿ ಜೀವಿಸುವ ತಾತ್ಕಾಲಿಕ ನಿವಾಸಿಗಳಾಗಿ ಇರುವುದಿಲ್ಲ. ಸೊಗಸಾದ ಮನೆ, ಯಥೇಚ್ಛ ಆಹಾರ ಅವರಿಗಿರುವುದು. (ಕೀರ್ತ. 37:10, 11; ಯೆಶಾ. 25:6; 65:21, 22) ಇಸ್ರಾಯೇಲ್ಯರು ಯೆಹೋವನನ್ನು ಮರೆತಂತೆ ಅವರೆಂದೂ ಮರೆತುಬಿಡುವುದಿಲ್ಲ. ಇವೆಲ್ಲವೂ ‘ಸರ್ವಲೋಕದ ದೇವರಾದ’ ಯೆಹೋವನ ಒದಗಿಸುವಿಕೆ ಎಂದು ಗಣ್ಯಮಾಡುವರು. (ಯೆಶಾ. 54:5) ಅಭಿಷಿಕ್ತರಾಗಲಿ ಬೇರೆ ಕುರಿಗಳಾಗಲಿ ದುಷ್ಟ ಲೋಕದಲ್ಲಿ ತಾತ್ಕಾಲಿಕ ನಿವಾಸಿಗಳಾಗಿ ಜೀವಿಸಿದ್ದಕ್ಕಾಗಿ ಎಂದೂ ವಿಷಾದಿಸುವುದಿಲ್ಲ.

ಉತ್ತರಿಸುವಿರಾ?

• ಪ್ರಾಚೀನ ನಂಬಿಗಸ್ತ ಸ್ತ್ರೀಪುರುಷರು ಯಾವ ರೀತಿಯಲ್ಲಿ ತಾತ್ಕಾಲಿಕ ನಿವಾಸಿಗಳಾಗಿ ಜೀವಿಸಿದರು?

• ಆರಂಭದ ಕ್ರೈಸ್ತರಿಗೆ ಲೋಕದ ಕಡೆಗೆ ಯಾವ ನೋಟವಿತ್ತು?

• ನಿಜ ಕ್ರೈಸ್ತರು ಲೋಕವನ್ನು ಯಾವ ರೀತಿಯಲ್ಲಿ ಪೂರ್ಣವಾಗಿ ಅನುಭೋಗಿಸುವುದಿಲ್ಲ?

• ದುಷ್ಟ ಲೋಕದಲ್ಲಿ ತಾತ್ಕಾಲಿಕ ನಿವಾಸಿಗಳಾಗಿ ಜೀವಿಸಿರುವುದಕ್ಕೆ ನಾವೇಕೆ ವಿಷಾದಿಸುವುದಿಲ್ಲ?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚಿತ್ರ]

ಆರಂಭದ ಕ್ರೈಸ್ತರು ಹಿಂಸಾಕೃತ್ಯ, ಅನೈತಿಕತೆ ಇದ್ದ ವಿನೋದಾವಳಿಗಳಿಂದ ದೂರವಿದ್ದರು