ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪವಿತ್ರಾತ್ಮಕ್ಕೆ ಅನುಸಾರವಾಗಿ ನಡೆದು ಜೀವ ಹಾಗೂ ಶಾಂತಿ ಪಡೆಯಿರಿ

ಪವಿತ್ರಾತ್ಮಕ್ಕೆ ಅನುಸಾರವಾಗಿ ನಡೆದು ಜೀವ ಹಾಗೂ ಶಾಂತಿ ಪಡೆಯಿರಿ

ಪವಿತ್ರಾತ್ಮಕ್ಕೆ ಅನುಸಾರವಾಗಿ ನಡೆದು ಜೀವ ಹಾಗೂ ಶಾಂತಿ ಪಡೆಯಿರಿ

‘ಶರೀರಭಾವಕ್ಕೆ ಅನುಸಾರವಾಗಿ ಅಲ್ಲ, ಪವಿತ್ರಾತ್ಮಕ್ಕೆ ಅನುಸಾರವಾಗಿ ನಡೆಯಿರಿ.’—ರೋಮ. 8:4.

1, 2. (ಎ) ವಾಹನ ಚಲಾಯಿಸುವಾಗ ಏಕಾಗ್ರತೆ ಕಳಕೊಂಡರೆ ಯಾವ ದುರಂತ ಸಂಭವಿಸಬಹುದು? (ಬಿ) ಆಧ್ಯಾತ್ಮಿಕ ವಿಷಯಗಳ ಮೇಲಿನ ನಮ್ಮ ಗಮನ ಬೇರೆಡೆಗೆ ತಿರುಗಿದರೆ ಏನಾಗಸಾಧ್ಯವಿದೆ?

“ವಾಹನ ಚಲಾಯಿಸುವಾಗ ಏಕಾಗ್ರತೆ ಕಳೆದುಕೊಳ್ಳುವ ಸಮಸ್ಯೆ ಒಂದು ಪಿಡುಗಿನಂತೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ.” ಇದು ಅಮೆರಿಕದ ಸಾರಿಗೆ ಅಧಿಕಾರಿಯೊಬ್ಬರ ಆತಂಕ. ಚಾಲಕನ ಗಮನಭಂಗಪಡಿಸುವ ಹೆಗ್ಗಳಿಕೆ ಮೊಬೈಲ್‌ ಫೋನ್‌ಗಿದೆ. ಸಮೀಕ್ಷೆಯೊಂದು ಇದನ್ನು ತೋರಿಸುತ್ತದೆ. ಇಂಟರ್‌ವ್ಯೂ ಮಾಡಲಾದವರಲ್ಲಿ ಮೂರರಲ್ಲಿ ಒಂದು ಭಾಗ ಜನರು ತಾವು ಅಪಘಾತಕ್ಕೆ ಈಡಾಗಲು ಕಾರಣ ಬೇರೆಯವರು ಮೊಬೈಲಿನಲ್ಲಿ ಮಾತಾಡುತ್ತಾ ಗಾಡಿ ಓಡಿಸಿದ್ದರಿಂದ ಎಂದು ಹೇಳಿಕೊಂಡರು. ವಾಹನ ಚಲಾಯಿಸುವುದರೊಂದಿಗೆ ಬೇರೆ ಕೆಲಸಗಳನ್ನು ಸಹ ಮಾಡಿದರೆ ಸಮಯ ಉಳಿಯುತ್ತದೆಂದು ಜನರು ನೆನಸುತ್ತಾರೆ. ಆದರೆ ಅದು ಭೀಕರ ಅಪಘಾತಕ್ಕೆ ನಡೆಸಬಹುದು.

2 ಒಬ್ಬ ಚಾಲಕ ಬೇರೆಡೆಗೆ ಗಮನಕೊಡುತ್ತಾ ವಾಹನ ಓಡಿಸುವಲ್ಲಿ ಅಪಾಯದ ಸೂಚನೆಗಳು ಲಕ್ಷ್ಯಕ್ಕೆ ಬರದೇ ಹೋಗಬಹುದು. ಆಧ್ಯಾತ್ಮಿಕ ವಿಷಯದಲ್ಲೂ ಇದು ನಿಜ. ನಮ್ಮ ಗಮನ ಆಧ್ಯಾತ್ಮಿಕ ವಿಷಯಗಳಿಂದ ಬೇರತ್ತ ಸರಿದರೆ ಅಪಾಯ ಖಂಡಿತ. ಕ್ರೈಸ್ತ ಚಟುವಟಿಕೆಗಳಿಂದ ಹಾಗೂ ಕ್ರೈಸ್ತ ಪಥದಿಂದ ಗಮನ ಬದಿಗೆ ಸರಿಯುವಲ್ಲಿ ನಮ್ಮ ನಂಬಿಕೆ ಒಡೆದುಹೋದ ಹಡಗಿನಂತಾಗುವುದು. (1 ತಿಮೊ. 1:18, 19) ಈ ಅಪಾಯದ ಕುರಿತು ಅಪೊಸ್ತಲ ಪೌಲ ಎಚ್ಚರಿಸಿದನು: “ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಮರಣದ ಅರ್ಥದಲ್ಲಿದೆ; ಆದರೆ ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಜೀವ ಮತ್ತು ಶಾಂತಿಯ ಅರ್ಥದಲ್ಲಿದೆ.” (ರೋಮ. 8:6) ಪೌಲನ ಈ ಮಾತಿನ ಅರ್ಥವೇನು? “ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ” ಮನಸ್ಸಿಡದೆ “ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ” ಮನಸ್ಸಿಡುವುದು ಹೇಗೆ?

ಅವರಿಗೆ “ಖಂಡನೆ ಎಂಬುದಿಲ್ಲ”

3, 4. (ಎ) ತನ್ನಲ್ಲಿ ಯಾವ ಹೋರಾಟ ಇದೆಯೆಂದು ಪೌಲ ಹೇಳಿದನು? (ಬಿ) ಆ ಹೋರಾಟದ ಕುರಿತು ನಾವೇಕೆ ತಿಳಿದುಕೊಳ್ಳಬೇಕು?

3 ಪೌಲ ತನ್ನ ಶರೀರ ಹಾಗೂ ಮನಸ್ಸಿನ ನಡುವೆ ನಡೆಯುತ್ತಿದ್ದ ಹೋರಾಟದ ಕುರಿತು ರೋಮನ್ನರಿಗೆ ಬರೆದ ಪತ್ರದಲ್ಲಿ ತಿಳಿಸಿದನು. (ರೋಮನ್ನರಿಗೆ 7:21-23 ಓದಿ.) ಇಲ್ಲಿ ಪೌಲ ತಾನೇನು ತಪ್ಪು ಮಾಡಿದರೂ ಅದಕ್ಕೆ ತಾನು ಹೊಣೆಯಾಗುವುದಿಲ್ಲ ಎಂದು ಹೇಳುತ್ತಿಲ್ಲ ಅಥವಾ ಪಾಪದ ಹಿಡಿತದಲ್ಲಿ ಸಿಕ್ಕಿರುವುದರಿಂದ ಸರಿಯಾದದ್ದನ್ನು ಮಾಡಲು ತನ್ನಿಂದ ಸಾಧ್ಯವೇ ಇಲ್ಲ ಎಂದು ಹೇಳುತ್ತಿಲ್ಲ. ಏಕೆಂದರೆ ಅವನೊಬ್ಬ ಪ್ರೌಢ ಕ್ರೈಸ್ತನಾಗಿದ್ದನು, ಅಭಿಷಿಕ್ತ ಸಹೋದರನಾಗಿದ್ದನು. “ಅನ್ಯಜನಾಂಗಗಳವರಿಗೆ ಅಪೊಸ್ತಲನಾಗಿ” ಆಯ್ಕೆಯಾಗಿದ್ದನು. (ರೋಮ. 1:1; 11:13) ಹಾಗಾದರೆ, ತನ್ನಲ್ಲಿ ಹೋರಾಟ ನಡೆಯುತ್ತಿದೆ ಎಂದು ಪೌಲ ಬರೆದದ್ದೇಕೆ?

4 ದೇವರ ಚಿತ್ತವನ್ನು ತಾನು ಬಯಸಿದಷ್ಟು ಮಾಡಲು ತನ್ನ ಸ್ವಂತ ಬಲದಿಂದ ಸಾಧ್ಯವಾಗುತ್ತಿಲ್ಲ ಎಂದು ಪೌಲ ಹೇಳುತ್ತಿದ್ದನು. ಅವನಿಗೇಕೆ ಸಾಧ್ಯವಾಗಲಿಲ್ಲ? “ಎಲ್ಲರೂ ಪಾಪಮಾಡಿದ್ದಾರೆ ಮತ್ತು ದೇವರ ಮಹಿಮೆಯನ್ನು ಹೊಂದಲು ತಪ್ಪಿಹೋಗಿದ್ದಾರೆ” ಎಂದು ಅವನು ತಿಳಿಸಿದನು. (ರೋಮ. 3:23) ಹೌದು, ಆದಾಮನಿಂದ ಬಂದ ಪಾಪ ಪೌಲನ ಶರೀರದಲ್ಲೂ ನೆಲೆಸಿತ್ತು. ಪೌಲನ ಹೋರಾಟವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಏಕೆಂದರೆ ನಾವು ಸಹ ಪ್ರತಿದಿನ ಅಪರಿಪೂರ್ಣತೆಯೊಂದಿಗೆ ಹೋರಾಡುತ್ತೇವೆ. ಮಾತ್ರವಲ್ಲ ಲೋಕದಲ್ಲಿರುವ ಅನೇಕ ವಿಷಯಗಳು ನಮ್ಮ ಗಮನವನ್ನು ಬೇರೆಡೆ ತಿರುಗಿಸಿ ‘ಜೀವಕ್ಕೆ ನಡಿಸುವ ಇಕ್ಕಟ್ಟಾದ ದಾರಿಯಲ್ಲಿ’ ಸಾಗದಂತೆ ಮಾಡಬಲ್ಲವು. (ಮತ್ತಾ. 7:14) ಹಾಗಿದ್ದರೂ ಪೌಲನಿಗೆ ಸಹಾಯ ಮಾಡಲು ಯಾರೂ ಇರಲಿಲ್ಲ ಅಂತಲ್ಲ. ನಮಗೂ ಅಷ್ಟೆ.

5. ಹೋರಾಟದಲ್ಲಿ ಜಯಶಾಲಿಯಾಗಲು ಪೌಲನಿಗೆ ಯಾವ ಸಹಾಯ ಸಿಕ್ಕಿತು?

5 ತನ್ನೊಳಗೆ ನಡೆಯುತ್ತಿರುವ ಹೋರಾಟದಿಂದ ಯಾರು ತನ್ನನ್ನು ರಕ್ಷಿಸುವರು ಎಂದು ಪೌಲ ಕೇಳಿದನು. ಅನಂತರ ಅವನೇ ಉತ್ತರಿಸುತ್ತಾ, “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೇ!” ಎಂದು ಹೇಳಿದನು. (ರೋಮ. 7:24, 25) ಅನಂತರ “ಕ್ರಿಸ್ತ ಯೇಸುವಿನೊಂದಿಗೆ ಐಕ್ಯರಾಗಿರುವ” ಅಭಿಷಿಕ್ತ ಕ್ರೈಸ್ತರನ್ನು ಸೂಚಿಸಿ ಮಾತಾಡಿದನು. (ರೋಮನ್ನರಿಗೆ 8:1, 2 ಓದಿ.) ಈ ಅಭಿಷಿಕ್ತರನ್ನು ದೇವರು ತನ್ನ ಪವಿತ್ರಾತ್ಮದ ಮೂಲಕ ಪುತ್ರರನ್ನಾಗಿ ದತ್ತು ತೆಗೆದುಕೊಳ್ಳುತ್ತಾನೆ ಮತ್ತು ಅವರು “ಕ್ರಿಸ್ತನೊಂದಿಗೆ ಜೊತೆ ಬಾಧ್ಯರೂ” ಆಗುತ್ತಾರೆ. (ರೋಮ. 8:14-17) ದೇವರ ಪವಿತ್ರಾತ್ಮ ಹಾಗೂ ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದಲ್ಲಿ ಅವರು ಇಡುವ ನಂಬಿಕೆಯು ಅಪರಿಪೂರ್ಣತೆಯ ವಿರುದ್ಧದ ಹೋರಾಟದಲ್ಲಿ ಜಯಗಳಿಸಲು ಅವರಿಗೆ ಸಹಾಯಮಾಡುವುದು. ಆದ್ದರಿಂದ ದೇವರು ಅವರ ಅಪರಿಪೂರ್ಣತೆಗಾಗಿ ಅವರನ್ನು ಖಂಡಿಸುವುದಿಲ್ಲ. “ಪಾಪ ಮತ್ತು ಮರಣದ ನಿಯಮದಿಂದ” ಅವರು ವಿಮುಕ್ತರು.

6. ದೇವರ ಸೇವಕರೆಲ್ಲರು ಪೌಲನ ಮಾತುಗಳಿಗೆ ಏಕೆ ಗಮನಕೊಡಬೇಕು?

6 ಪೌಲ ಅಭಿಷಿಕ್ತ ಕ್ರೈಸ್ತರನ್ನು ಉದ್ದೇಶಿಸಿ ಪತ್ರ ಬರೆದನಾದರೂ ಪವಿತ್ರಾತ್ಮ ಹಾಗೂ ವಿಮೋಚನಾ ಮೌಲ್ಯ ಯಜ್ಞದ ಕುರಿತು ಅವನು ಬರೆದ ವಿಷಯಗಳಿಂದ ದೇವರ ಎಲ್ಲ ಸೇವಕರು ಪ್ರಯೋಜನ ಪಡೆಯಬಹುದು. ಪೌಲನು ದೇವರಿಂದ ಪ್ರೇರಿತನಾಗಿ ಬರೆದ ಆ ವಿಷಯಗಳ ಅರ್ಥವನ್ನು ನಾವೆಲ್ಲರು ತಿಳಿದುಕೊಂಡು ಪಾಲಿಸಲು ಪ್ರಯತ್ನಿಸುವುದು ತುಂಬ ಪ್ರಾಮುಖ್ಯ.

ದೇವರು ನಮ್ಮ “ಶರೀರದಲ್ಲಿರುವ ಪಾಪವನ್ನು” ಖಂಡಿಸಿದ ವಿಧ

7, 8. (ಎ) ಧರ್ಮಶಾಸ್ತ್ರ “ಶರೀರಭಾವದಿಂದ ಬಲಹೀನ” ಆಗಿತ್ತು ಹೇಗೆ? (ಬಿ) ಪವಿತ್ರಾತ್ಮ ಹಾಗೂ ವಿಮೋಚನಾ ಮೌಲ್ಯ ಯಜ್ಞದ ಮೂಲಕ ದೇವರು ಏನನ್ನು ಪೂರೈಸಿದ್ದಾನೆ?

7 ರೋಮನ್ನರಿಗೆ ಬರೆದ ಪತ್ರದ 7ನೇ ಅಧ್ಯಾಯದಲ್ಲಿ ಪೌಲ ಅಪರಿಪೂರ್ಣ ಶರೀರದ ಮೇಲೆ ಪಾಪಕ್ಕಿರುವ ಶಕ್ತಿಯ ಕುರಿತು ವಿವರಿಸಿದನು. 8ನೇ ಅಧ್ಯಾಯದಲ್ಲಿ ದೇವರ ಪವಿತ್ರಾತ್ಮಕ್ಕಿರುವ ಪ್ರಬಲ ಶಕ್ತಿಯ ಕುರಿತು ಹೇಳಿದನು. ಕ್ರೈಸ್ತರು ಪವಿತ್ರಾತ್ಮದ ಸಹಾಯದಿಂದ ಪಾಪದ ವಿರುದ್ಧ ಹೋರಾಡಿ ಜಯ ಸಾಧಿಸಬಹುದೆಂದೂ ಹೀಗೆ ದೇವರ ಚಿತ್ತಾನುಸಾರ ಜೀವಿಸಿ ಆತನ ಅನುಗ್ರಹ ಪಡೆಯಬಹುದೆಂದೂ ತಿಳಿಸಿದನು. ಅಲ್ಲದೆ, ಧರ್ಮಶಾಸ್ತ್ರಕ್ಕೆ ಯಾವುದು ಅಸಾಧ್ಯವಾಗಿತ್ತೊ ಅದನ್ನು ದೇವರು ಪವಿತ್ರಾತ್ಮ ಶಕ್ತಿ ಹಾಗೂ ವಿಮೋಚನಾ ಮೌಲ್ಯ ಯಜ್ಞದ ಮೂಲಕ ಸಾಧ್ಯವನ್ನಾಗಿ ಮಾಡಿದ್ದಾನೆಂದು ಪೌಲ ಹೇಳಿದನು.

8 ಅನೇಕ ನಿಯಮಗಳನ್ನು ಹೊಂದಿದ್ದ ಧರ್ಮಶಾಸ್ತ್ರ ಪಾಪಿಗಳನ್ನು ಖಂಡಿಸಿತು. ಧರ್ಮಶಾಸ್ತ್ರದಡಿಯಲ್ಲಿ ಇಸ್ರಾಯೇಲ್ಯರ ಮಹಾ ಯಾಜಕರಾಗಿ ಸೇವೆಸಲ್ಲಿಸುತ್ತಿದ್ದವರು ಅಪರಿಪೂರ್ಣರಾಗಿದ್ದ ಕಾರಣ ಪಾಪಗಳಿಗೆ ಸಮರ್ಪಕವಾದ ಯಜ್ಞವನ್ನು ಅರ್ಪಿಸಲು ಅವರಿಂದ ಅಸಾಧ್ಯವಾಗಿತ್ತು. ಈ ಅರ್ಥದಲ್ಲಿ ಧರ್ಮಶಾಸ್ತ್ರವು “ಶರೀರಭಾವದಿಂದ ಬಲಹೀನ” ಆಗಿತ್ತು. ಆದ್ದರಿಂದ ದೇವರು “ತನ್ನ ಸ್ವಂತ ಮಗನನ್ನು ಪಾಪಾಧೀನ ಶರೀರದ ರೂಪದಲ್ಲಿ ಕಳುಹಿಸಿ” ವಿಮೋಚನಾ ಮೌಲ್ಯವನ್ನು ಒದಗಿಸುವ ಮೂಲಕ “ಶರೀರದಲ್ಲಿರುವ ಪಾಪವನ್ನು ಖಂಡಿಸಿದನು.” ಹೀಗೆ ಧರ್ಮಶಾಸ್ತ್ರಕ್ಕೆ “ಯಾವುದನ್ನು ಮಾಡಲು ಸಾಧ್ಯವಾಗಲಿಲ್ಲವೋ ಅದನ್ನು ದೇವರು ಮಾಡಿದನು.” ಅಂದರೆ ಜನರನ್ನು ಪಾಪದಿಂದ ವಿಮೋಚಿಸಲು ಯೇಸುವಿನ ಯಜ್ಞದಿಂದ ಸಾಧ್ಯವಾಯಿತು. ಈ ವಿಮೋಚನಾ ಮೌಲ್ಯ ಯಜ್ಞದಲ್ಲಿ ಅಭಿಷಿಕ್ತ ಕ್ರೈಸ್ತರು ನಂಬಿಕೆ ಇಡುವುದರಿಂದ ದೇವರು ಅವರನ್ನು ನೀತಿವಂತರೆಂದು ವೀಕ್ಷಿಸುತ್ತಾನೆ. ಆ ನಿಲುವನ್ನು ಸದಾ ಕಾಪಾಡಿಕೊಳ್ಳಬೇಕಾದರೆ ಅವರು “ಶರೀರಭಾವಕ್ಕೆ ಅನುಸಾರವಾಗಿ ಅಲ್ಲ, ಪವಿತ್ರಾತ್ಮಕ್ಕೆ ಅನುಸಾರವಾಗಿ” ನಡೆಯಬೇಕೆಂದು ಪೌಲ ಪ್ರೋತ್ಸಾಹಿಸಿದನು. (ರೋಮನ್ನರಿಗೆ 8:3, 4 ಓದಿ.) ಅವರು ತಮ್ಮ ಭೂಜೀವಿತದ ಕೊನೆಯ ವರೆಗೂ ಹೀಗೆ ನಿಷ್ಠೆಯಿಂದ ನಡೆಯಬೇಕು. ಆಗ ಮಾತ್ರ “ಜೀವದ ಕಿರೀಟವನ್ನು” ಪಡೆಯುವರು.—ಪ್ರಕ. 2:10.

9. ರೋಮನ್ನರಿಗೆ 8:2ರಲ್ಲಿರುವ “ನಿಯಮ” ಎಂಬ ಪದದ ಅರ್ಥವೇನು?

9 ಪೌಲ “ಪವಿತ್ರಾತ್ಮದ ನಿಯಮ” ಹಾಗೂ “ಪಾಪ ಮತ್ತು ಮರಣದ ನಿಯಮ” ಎಂಬ ಎರಡು ನಿಯಮಗಳ ಕುರಿತು ಸಹ ತಿಳಿಸಿದನು. (ರೋಮ. 8:2) ಇವು ಏನಾಗಿವೆ? ಮೋಶೆಯ ಧರ್ಮಶಾಸ್ತ್ರದಲ್ಲಿ ನೀಡಲಾಗಿರುವಂಥ ನಿಯಮಗಳ ಕುರಿತು ಪೌಲ ಇಲ್ಲಿ ಮಾತಾಡುತ್ತಿರಲಿಲ್ಲ. ಈ ಪದದ ಕುರಿತು ಒಂದು ಗ್ರಂಥ ಏನನ್ನುತ್ತದೆಂದು ಗಮನಿಸಿ: “ನಿಯಮ” ಎಂದು ತರ್ಜುಮೆ ಮಾಡಿರುವ ಗ್ರೀಕ್‌ ಪದ, ಒಳ್ಳೇದನ್ನೋ ಕೆಟ್ಟದ್ದನ್ನೋ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಪ್ರೇರಿಸುವ ಪ್ರೇರಕಶಕ್ತಿಯಾಗಿದ್ದು ನಿಯಮದಂತೆ ಕಾರ್ಯನಡಿಸುತ್ತದೆ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ರೂಪಿಸಿಕೊಂಡಿರುವ ಮಟ್ಟವನ್ನೂ ಅದು ಸೂಚಿಸುತ್ತದೆ.

10. ಪಾಪ ಮತ್ತು ಮರಣದ ನಿಯಮ ನಮ್ಮೆಲ್ಲರನ್ನು ಯಾವ ರೀತಿಯಲ್ಲಿ ನಿಯಂತ್ರಿಸುತ್ತದೆ?

10 “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು” ಎಂದು ಅಪೊಸ್ತಲ ಪೌಲ ಬರೆದನು. (ರೋಮ. 5:12) ನಾವೆಲ್ಲರೂ ಆದಾಮನ ಮಕ್ಕಳಾಗಿರುವ ಕಾರಣ ಪಾಪ ಮತ್ತು ಮರಣದ ನಿಯಮ ನಮ್ಮೆಲ್ಲರನ್ನು ನಿಯಂತ್ರಿಸುತ್ತದೆ. ದೇವರಿಗೆ ಮೆಚ್ಚಿಕೆಯಾಗದ ಕೆಲಸಗಳನ್ನು ಮಾಡುವಂತೆ ನಮ್ಮ ಪಾಪಯುಕ್ತ ಶರೀರ ಸದಾ ಪ್ರಚೋದಿಸುತ್ತದೆ. ಇಂಥ ಕೆಲಸಗಳಿಗೆ ಸಿಗುವ ಫಲ ಮರಣ. ಗಲಾತ್ಯದವರಿಗೆ ಬರೆದ ಪತ್ರದಲ್ಲಿ ಈ ಪಾಪಪೂರ್ಣ ಪ್ರವೃತ್ತಿಗಳನ್ನು ಪೌಲ “ಶರೀರಭಾವದ ಕಾರ್ಯಗಳು” ಎಂದು ಕರೆದನು. ಮಾತ್ರವಲ್ಲ, “ಇಂಥ ವಿಷಯಗಳನ್ನು ನಡೆಸುತ್ತಿರುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ” ಎಂದೂ ಹೇಳಿದನು. (ಗಲಾ. 5:19-21) ಆ ರೀತಿಯ ಜನರು “ಶರೀರಭಾವಕ್ಕೆ ಅನುಸಾರವಾಗಿ” ನಡೆಯುತ್ತಾರೆ. (ರೋಮ. 8:4) ಅವರ ಪ್ರೇರಕಶಕ್ತಿ ಹಾಗೂ ಬದುಕಿನ ಮಟ್ಟ ಸಂಪೂರ್ಣವಾಗಿ ಶರೀರಭಾವಕ್ಕೆ ಅನುಸಾರವಾಗಿರುತ್ತದೆ. ಆದರೆ, “ಶರೀರಭಾವಕ್ಕೆ ಅನುಸಾರವಾಗಿ” ನಡೆಯುವವರು ಜಾರತ್ವ, ವಿಗ್ರಹಾರಾಧನೆ, ಮಾಟಮಂತ್ರ ಇನ್ನಿತರ ಘೋರ ಪಾಪಗಳನ್ನು ಮಾಡುವ ಜನರು ಮಾತ್ರನಾ? ಇಲ್ಲ. ಕೇವಲ ಬಲಹೀನತೆಯೆಂದು ಕೆಲವರು ನೆನಸುವ ಹೊಟ್ಟೆಕಿಚ್ಚು, ಕೋಪದ ಕೆರಳುವಿಕೆಗಳು, ಕಲಹ, ಮತ್ಸರ ಮುಂತಾದ ಗುಣಗಳು ಸಹ ಶರೀರಭಾವದ ಕಾರ್ಯಗಳಾಗಿವೆ. ಈಗ ಹೇಳಿ, ಶರೀರಭಾವಕ್ಕೆ ಅನುಸಾರವಾಗಿ ನಡೆಯದಿರಲು ನಮಲ್ಲಿ ಪ್ರತಿಯೊಬ್ಬರೂ ಹೋರಾಟ ಮಾಡಲೇಬೇಕಲ್ಲವೇ?

11, 12. ನಮ್ಮನ್ನು ಪಾಪ ಮತ್ತು ಮರಣದ ನಿಯಮದಿಂದ ಬಿಡಿಸಲು ಯೆಹೋವ ದೇವರು ಯಾವ ಏರ್ಪಾಡು ಮಾಡಿದ್ದಾರೆ? ದೇವರ ಅನುಗ್ರಹ ಪಡೆಯಬೇಕಾದರೆ ನಾವೇನು ಮಾಡಬೇಕು?

11 ಯೆಹೋವ ದೇವರು ನಮ್ಮನ್ನು ಪಾಪ ಮತ್ತು ಮರಣದ ನಿಯಮದಿಂದ ಬಿಡುಗಡೆ ಮಾಡಲು ಏರ್ಪಾಡು ಮಾಡಿರುವುದಕ್ಕಾಗಿ ನಾವು ನಿಜಕ್ಕೂ ಕೃತಜ್ಞರು! “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” ಯೆಹೋವ ದೇವರು ತೋರಿಸಿರುವ ಈ ಪ್ರೀತಿಗೆ ನಾವು ಸ್ಪಂದಿಸುತ್ತಾ ಯೇಸು ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದಲ್ಲಿ ನಂಬಿಕೆಯಿಡುವಲ್ಲಿ ಪಾಪದಿಂದ ಉಂಟಾಗುವ ಶಿಕ್ಷೆ ಅಂದರೆ ಖಂಡನೆಯಿಂದ ಬಿಡುಗಡೆ ಹೊಂದುವೆವು. (ಯೋಹಾ. 3:16-18) ಹಾಗಾದರೆ ನಾವು ಸಹ ಪೌಲನಂತೆ ಹರ್ಷಿಸೋಣ. ನಮ್ಮನ್ನು ರಕ್ಷಿಸುವುದು “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೇ!” ಎಂದು ಉದ್ಗಾರವೆತ್ತೋಣ.

12 ನಮ್ಮ ಸ್ಥಿತಿ ದೊಡ್ಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ಪರಿಸ್ಥಿತಿಯಂತಿದೆ. ಸಂಪೂರ್ಣವಾಗಿ ಗುಣಮುಖರಾಗಲು ಬಯಸುವಲ್ಲಿ ವೈದ್ಯನು ಹೇಳಿದಂತೆ ಮಾಡಬೇಕು. ವಿಮೋಚನಾ ಮೌಲ್ಯ ಯಜ್ಞದಲ್ಲಿ ನಂಬಿಕೆಯಿಡುವ ಮೂಲಕ ಪಾಪ ಮತ್ತು ಮರಣದ ನಿಯಮದಿಂದ ನಾವು ಬಿಡುಗಡೆ ಹೊಂದುತ್ತೇವಾದರೂ ನಾವಿನ್ನೂ ಅಪರಿಪೂರ್ಣರೂ ಪಾಪಿಗಳೂ ಆಗಿದ್ದೇವೆ. ಆಧ್ಯಾತ್ಮಿಕವಾಗಿ ಸುದೃಢ ಆರೋಗ್ಯ ಪಡೆಯಬೇಕಾದರೆ ಹಾಗೂ ದೇವರ ಅನುಗ್ರಹ, ಆಶೀರ್ವಾದವನ್ನು ಹೊಂದಬೇಕಾದರೆ ನಾವೊಂದು ವಿಷಯ ಮಾಡಬೇಕು. ಪೌಲ ಹೇಳಿದಂತೆ ನಾವು “ಪವಿತ್ರಾತ್ಮಕ್ಕೆ ಅನುಸಾರವಾಗಿ” ನಡೆಯಬೇಕು.

“ಪವಿತ್ರಾತ್ಮಕ್ಕೆ ಅನುಸಾರವಾಗಿ” ನಡೆಯುವುದು ಹೇಗೆ?

13. “ಪವಿತ್ರಾತ್ಮಕ್ಕೆ ಅನುಸಾರವಾಗಿ” ನಡೆಯುವುದು ಎಂದರೇನು?

13 ನಡೆಯುವಾಗ ನಾವು ಮುಂದೆ ಸಾಗುತ್ತೇವಲ್ಲವೆ. ಅದೇ ರೀತಿ ಪವಿತ್ರಾತ್ಮಕ್ಕೆ ಅನುಸಾರವಾಗಿ ನಡೆಯಲು ನಾವು ಆಧ್ಯಾತ್ಮಿಕವಾಗಿ ಪ್ರಗತಿ ಮಾಡುತ್ತಿರಬೇಕು. (1 ತಿಮೊ. 4:15) ಇದಕ್ಕಾಗಿ ನಾವು ಪರಿಪೂರ್ಣರು ಆಗಿರಬೇಕೆಂದಿಲ್ಲ. ದಿನ ದಿನವೂ ಪವಿತ್ರಾತ್ಮದ ಮಾರ್ಗದರ್ಶನಕ್ಕೆ ಅನುಸಾರ ಜೀವಿಸುತ್ತಾ ಮುನ್ನಡೆಯಲು ಆದಷ್ಟು ಶ್ರಮಿಸಬೇಕಷ್ಟೆ. “ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತಾ” ಇರುವುದಾದರೆ ದೇವರು ನಮ್ಮನ್ನು ಮೆಚ್ಚುವನು.—ಗಲಾ. 5:16.

14. “ಶರೀರಭಾವವನ್ನು ಅನುಸರಿಸುವವರು” ಯಾವ ರೀತಿಯ ಮನೋವೃತ್ತಿ ಹೊಂದಿರುತ್ತಾರೆ?

14 ಪೌಲನು ರೋಮನ್ನರಿಗೆ ಬರೆದ ಪತ್ರದಲ್ಲಿ ಭಿನ್ನ ಮನೋವೃತ್ತಿ ಇರುವ ಎರಡು ವರ್ಗದ ಜನರ ಕುರಿತು ತಿಳಿಸಿದನು. (ರೋಮನ್ನರಿಗೆ 8:5 ಓದಿ.) ಇಲ್ಲಿ “ಶರೀರ” ಎಂಬುದು ನಮ್ಮ ದೇಹಕ್ಕೆ ಸೂಚಿಸುತ್ತಿಲ್ಲ. ಈ ಪದವನ್ನು ಬೈಬಲ್‌ನಲ್ಲಿ ಕೆಲವೊಮ್ಮೆ, ನಮ್ಮ ಶರೀರದಲ್ಲಿರುವ ಅಪರಿಪೂರ್ಣ ಪ್ರವೃತ್ತಿಯನ್ನು ಸೂಚಿಸಲು ಬಳಸಲಾಗಿದೆ. ಈ ಮುಂಚೆ ಪೌಲ ಹೇಳಿದಂಥ ಹೋರಾಟಕ್ಕೆ ಅಂದರೆ ಶರೀರ ಹಾಗೂ ಮನಸ್ಸಿನ ನಡುವಿನ ಹೋರಾಟಕ್ಕೆ ಈ ಪ್ರವೃತ್ತಿಯೇ ಕಾರಣ. ಪೌಲ ತನ್ನ ಶರೀರ ಅಂದರೆ ಅಪರಿಪೂರ್ಣತೆಯ ವಿರುದ್ಧ ಹೋರಾಡಿದನು. ಆದರೆ “ಶರೀರಭಾವವನ್ನು ಅನುಸರಿಸುವವರು” ಇಂಥ ಹೋರಾಟ ಮಾಡುವ ಗೋಜಿಗೇ ಹೋಗುವುದಿಲ್ಲ. ಏಕೆಂದರೆ ಅವರು “ತಮ್ಮ ಮನಸ್ಸುಗಳನ್ನು ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಾರೆ.” ದೇವರು ಅಪೇಕ್ಷಿಸುವ ವಿಷಯಗಳಲ್ಲಿ ಅವರಿಗೆ ಆಸಕ್ತಿಯಿಲ್ಲ. ತಮಗಾಗಿ ಆತನು ಮಾಡಿರುವ ಏರ್ಪಾಡಿನಿಂದ ಪ್ರಯೋಜನ ಹೊಂದಲು ಇಷ್ಟವೂ ಇಲ್ಲ. ಸುಖಭೋಗಗಳನ್ನು ಪಡೆಯಲು ಮತ್ತು ತಮ್ಮ ಶಾರೀರಿಕ ಆಶೆಯನ್ನು ತಣಿಸಲು ನೋಡುತ್ತಾರಷ್ಟೆ. ಆದರೆ “ಪವಿತ್ರಾತ್ಮವನ್ನು ಅನುಸರಿಸುವವರು ತಮ್ಮ ಮನಸ್ಸುಗಳನ್ನು ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ” ಅಂದರೆ ಆಧ್ಯಾತ್ಮಿಕ ಏರ್ಪಾಡು ಹಾಗೂ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತಾರೆ.

15, 16. (ಎ) ನಾವು ಒಂದು ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ನಮ್ಮ ಯೋಚನೆಯನ್ನು ಹೇಗೆ ಪ್ರಭಾವಿಸುತ್ತದೆ? (ಬಿ) ಇಂದು ಹೆಚ್ಚಿನ ಜನರು ಯಾವ ವಿಷಯದ ಮೇಲೆ ಮನಸ್ಸಿಟ್ಟಿದ್ದಾರೆ?

15ರೋಮನ್ನರಿಗೆ 8:6 ಓದಿ. ಒಬ್ಬ ವ್ಯಕ್ತಿ ಒಳ್ಳೇ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದರೆ ಒಳ್ಳೇದನ್ನು, ಕೆಟ್ಟದ್ದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದರೆ ಕೆಟ್ಟದ್ದನ್ನು ಮಾಡುತ್ತಾನೆ. ಅಂದರೆ ಒಂದು ಕಾರ್ಯ ಮಾಡುವ ಮೊದಲು ಅವನು ಅದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿರುತ್ತಾನೆ. ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಸದಾ ಮನಸ್ಸನ್ನು ಕೇಂದ್ರೀಕರಿಸುವ ಜನರು ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳನ್ನೇ ಮಾಡಲು ಬಯಸುತ್ತಾರೆ. ಅವರ ಯೋಚನೆ, ಒಲವು, ಆಸಕ್ತಿ ಎಲ್ಲವೂ ಅಂಥ ವಿಷಯಗಳ ಮೇಲೆ ನೆಟ್ಟಿರುತ್ತವೆ.

16 ಇಂದು ಹೆಚ್ಚಿನ ಜನರು ಯಾವ ವಿಷಯದ ಮೇಲೆ ಮನಸ್ಸಿಟ್ಟಿದ್ದಾರೆ? ಅಪೊಸ್ತಲ ಯೋಹಾನ ಹೀಗೆ ಬರೆದನು: “ಲೋಕದಲ್ಲಿರುವ ಸರ್ವವೂ—ಶರೀರದಾಶೆ, ಕಣ್ಣಿನಾಶೆ ಮತ್ತು ಜೀವನೈಶ್ವರ್ಯದ ಆಡಂಬರ ಪ್ರದರ್ಶನ—ಇವು ತಂದೆಯಿಂದ ಉಂಟಾಗದೆ ಲೋಕದಿಂದ ಉಂಟಾದವುಗಳಾಗಿವೆ.” (1 ಯೋಹಾ. 2:16) ಈ ಆಶೆಗಳಲ್ಲಿ ಲೈಂಗಿಕ ಅನೈತಿಕತೆ, ಪ್ರಖ್ಯಾತಿ ಗಳಿಸುವುದು, ಸುಖಸವಲತ್ತನ್ನು ಆಶಿಸುವುದು ಇತ್ಯಾದಿ ಸೇರಿವೆ. ಹೆಚ್ಚಿನ ಜನರ ಮನಸ್ಸು ಇಂಥ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಅವರು ಅಂಥವುಗಳನ್ನೇ ಬಯಸುವುದರಿಂದ ಪುಸ್ತಕಗಳು, ವಾರ್ತಾಪತ್ರಿಕೆ, ಚಲನಚಿತ್ರ, ಟೀವಿ ಕಾರ್ಯಕ್ರಮ, ಇಂಟರ್‌ನೆಟ್‌ ಹೀಗೆ ಎಲ್ಲದರಲ್ಲೂ ಅವೇ ತುಂಬಿಕೊಂಡಿವೆ. “ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಮರಣದ ಅರ್ಥದಲ್ಲಿದೆ.” ಅಂದರೆ ಈಗ ದೇವರೊಂದಿಗಿನ ಸುಸಂಬಂಧವನ್ನು ಕಳಕೊಳ್ಳುತ್ತೇವೆ, ಮುಂದೆ ನಿತ್ಯಜೀವವನ್ನು ಕಳಕೊಳ್ಳುತ್ತೇವೆ. ಏಕೆ? “ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ದೇವರೊಂದಿಗೆ ವೈರತ್ವದ ಅರ್ಥದಲ್ಲಿದೆ; ಅದು ದೇವರ ನಿಯಮಕ್ಕೆ ಅಧೀನದಲ್ಲಿಲ್ಲ ಅಥವಾ ಅಧೀನದಲ್ಲಿರಲು ಸಾಧ್ಯವೂ ಇಲ್ಲ. ಆದುದರಿಂದ ಶರೀರಭಾವಕ್ಕೆ ಹೊಂದಿಕೆಯಲ್ಲಿರುವವರು ದೇವರನ್ನು ಮೆಚ್ಚಿಸಲಾರರು.”— ರೋಮ. 8:7, 8.

17, 18. ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ನಾವು ಹೇಗೆ ಮನಸ್ಸಿಡಬಲ್ಲೆವು? ಹಾಗೆ ಮಾಡಿದರೆ ಯಾವ ಆಶೀರ್ವಾದ ಲಭಿಸುವುದು?

17 ಆದರೆ “ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಜೀವ ಮತ್ತು ಶಾಂತಿಯ ಅರ್ಥದಲ್ಲಿದೆ.” ಅಂದರೆ ನಮಗೀಗ ಮನಶ್ಶಾಂತಿ ಇರುತ್ತದಲ್ಲದೆ ದೇವರೊಂದಿಗೂ ಶಾಂತಿಸಂಬಂಧ ಇರುತ್ತದೆ. ಮಾತ್ರವಲ್ಲ ಭವಿಷ್ಯತ್ತಿನಲ್ಲಿ ಶಾಶ್ವತ ಜೀವನ ಸಿಗುತ್ತದೆ. “ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು” ಹೇಗೆ? ದೇವರ ಮತ್ತು ಪವಿತ್ರಾತ್ಮದ ಮಾರ್ಗದರ್ಶನಕ್ಕೆ ಅನುಸಾರವಾಗಿ ಸದಾ ನಡೆಯುವ ಮೂಲಕ. ಆಗ ನಮ್ಮ ಆಲೋಚನೆಗಳು ದೇವರು ಮೆಚ್ಚುವಂಥ ರೀತಿಯಲ್ಲಿರುತ್ತವೆ. ಆ ರೀತಿಯ ನಮ್ಮ ಆಲೋಚನೆ “ದೇವರ ನಿಯಮಕ್ಕೆ” ಅಧೀನದಲ್ಲಿರುತ್ತದೆ ಹಾಗೂ ಆತನ ಆಲೋಚನೆಗಳೊಂದಿಗೆ “ಹೊಂದಿಕೆಯಲ್ಲಿ” ಇರುತ್ತದೆ. ಪ್ರಲೋಭನೆ ಎದುರಾದಾಗ ಯಾವ ಮಾರ್ಗದಲ್ಲಿ ನಡೆಯಬೇಕು ಎಂಬ ಗೊಂದಲ ನಮಗಿರುವುದಿಲ್ಲ. ನಾವು ಸರಿಯಾದ ಮಾರ್ಗವನ್ನೇ ಆರಿಸಿಕೊಳ್ಳುವೆವು ಅಂದರೆ ಪವಿತ್ರಾತ್ಮವನ್ನು ಅನುಸರಿಸುವೆವು.

18 ನಾವೆಲ್ಲರೂ ನಮ್ಮ “ಮನಸ್ಸುಗಳನ್ನು ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ” ಕೇಂದ್ರೀಕರಿಸಬೇಕು. ಕ್ರೈಸ್ತ ‘ಚಟುವಟಿಕೆಗಾಗಿ ಮನಸ್ಸನ್ನು ದೃಢವಾಗಿಸಿಕೊಳ್ಳುವ’ ಮೂಲಕ ನಾವಿದನ್ನು ಮಾಡಸಾಧ್ಯ. ಪ್ರಾರ್ಥನೆ, ಬೈಬಲ್‌ ವಾಚನ, ಅಧ್ಯಯನವನ್ನು ತಪ್ಪದೆ ಮಾಡುವುದು, ನಿಯತವಾಗಿ ಕೂಟಗಳಿಗೆ ಹಾಜರಾಗುವುದು ಮತ್ತು ಶುಶ್ರೂಷೆಯಲ್ಲಿ ಭಾಗವಹಿಸುವುದು ಮುಂತಾದ ಆಧ್ಯಾತ್ಮಿಕ ಚಟುವಟಿಕೆಗಳನ್ನು ಜೀವನದಲ್ಲಿ ಮೊದಲ ಸ್ಥಾನದಲ್ಲಿಡಬೇಕು. (1 ಪೇತ್ರ 1:13) ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳು ನಮ್ಮ ಮನಸ್ಸನ್ನು ಸೆಳೆಯದಂತೆ ಜಾಗ್ರತೆವಹಿಸಿ ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡೋಣ. ಆಗ ಸದಾ ಪವಿತ್ರಾತ್ಮವನ್ನು ಅನುಸರಿಸುವವರಾಗಿ ಇರುವೆವು. ಇದರಿಂದ ಸಿಗುವ ಆಶೀರ್ವಾದಗಳೋ ಅಪಾರ. ಏಕೆಂದರೆ ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಜೀವ ಮತ್ತು ಶಾಂತಿಯನ್ನು ಕೊಡುತ್ತದೆ.—ಗಲಾ. 6:7, 8.

ವಿವರಿಸುವಿರಾ?

• ಧರ್ಮಶಾಸ್ತ್ರಕ್ಕೆ ಯಾವುದನ್ನು ಮಾಡಲು ಸಾಧ್ಯವಾಗಲಿಲ್ಲ? ಆದರೆ ದೇವರು ಏನು ಮಾಡಿದನು?

• “ಪಾಪ ಮತ್ತು ಮರಣದ ನಿಯಮ” ಎಂದರೇನು? ಅದರಿಂದ ನಾವು ಹೇಗೆ ಬಿಡುಗಡೆ ಹೊಂದಬಹುದು?

• “ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ” ಮನಸ್ಸಿಡಲು ನಾವೇನು ಮಾಡಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರ]

ನೀವು ಯಾವ ರೀತಿಯ ವ್ಯಕ್ತಿ—ಶರೀರಭಾವವನ್ನು ಅನುಸರಿಸುವವರಾ? ಪವಿತ್ರಾತ್ಮವನ್ನು ಅನುಸರಿಸುವವರಾ?