ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಹು ಸತ್ಯಾರಾಧನೆ ಸಮರ್ಥಿಸಿದ ಧೀರ

ಯೇಹು ಸತ್ಯಾರಾಧನೆ ಸಮರ್ಥಿಸಿದ ಧೀರ

ಯೇಹು ಸತ್ಯಾರಾಧನೆ ಸಮರ್ಥಿಸಿದ ಧೀರ

ಯೇಹು ಸತ್ಯಾರಾಧನೆ ಸಮರ್ಥಿಸಿದ ಧೀರ. ದೇವರು ಕೊಟ್ಟ ನೇಮಕವನ್ನು ತತ್‌ಕ್ಷಣ ಪೂರೈಸಲು ಚುರುಕಿನಿಂದ ಪಟ್ಟುಬಿಡದೆ ಕಾರ್ಯವೆಸಗಿದ ಹುಮ್ಮಸ್ಸಿನ ವೀರ. ಅವನ ಆ ಸದ್ಗುಣಗಳು ಅನುಕರಣಾಯೋಗ್ಯ.

ಇಸ್ರಾಯೇಲ್‌ ಜನಾಂಗ ದುಸ್ತರ ಪರಿಸ್ಥಿತಿ ಎದುರಿಸುತ್ತಿದ್ದ ಸಮಯ. ದೇಶದೆಲ್ಲೆಡೆ ಈಜೆಬೆಲಳ ದುಷ್ಟ ಪ್ರಭಾವ ತುಂಬಿತ್ತು. ಗಂಡ ಅಹಾಬ ತೀರಿಹೋಗಿ ಮಗ ಯೋರಾಮ ರಾಜನಾಗಿ ಆಳ್ವಿಕೆ ನಡೆಸುತ್ತಿದ್ದ. ಯೆಹೋವನನ್ನು ಬಿಟ್ಟು ಬಾಳನನ್ನೇ ಆರಾಧಿಸುವಂತೆ ಈಜೆಬೆಲ್‌ ಜನರಿಗೆ ಭಾರೀ ಪ್ರಚೋದನೆ ಒಡ್ಡಿದ್ದಳು. ದೇವರ ಪ್ರವಾದಿಗಳನ್ನು ಕೊಲೆಗೈದಿದ್ದಳು. ತನ್ನ “ದೇವದ್ರೋಹ” ಮತ್ತು ‘ಮಂತ್ರತಂತ್ರಗಳ’ ಮೂಲಕ ಜನರನ್ನು ಭ್ರಷ್ಟಗೊಳಿಸಿದ್ದಳು. (2 ಅರ. 9:22; 1 ಅರ. 18:4, 13) ಇಂಥ ಕರಾಳಮಯ ಪರಿಸ್ಥಿತಿಯಲ್ಲಿ ಯೇಹುವಿಗೆ ಒಂದು ನೇಮಕ ಸಿಕ್ಕಿತು. ಯೋರಾಮ ಮತ್ತು ಈಜೆಬೆಲ್‌ ಸೇರಿದಂತೆ ಅಹಾಬನ ಮನೆಯವರೆಲ್ಲರನ್ನೂ ನಿರ್ನಾಮ ಮಾಡಲು ಯೆಹೋವನು ಆಜ್ಞೆಕೊಟ್ಟನು. ಈ ಮಿಂಚಿನ ಕಾರ್ಯಯೋಜನೆಯ ನೇತೃತ್ವ ಯೇಹುವಿನದ್ದಾಗಿತ್ತು.

ಯೇಹುವನ್ನು ಬೈಬಲ್‌ ಮೊದಲ ಬಾರಿ ಪರಿಚಯಿಸುವಾಗ, ರಾಮೋತ್‌ಗಿಲ್ಯಾದಿನಲ್ಲಿ ಅರಾಮ್ಯರೊಂದಿಗೆ ಯುದ್ಧಮಾಡುತ್ತಿದ್ದ ಇಸ್ರಾಯೇಲ್ಯ ಸೈನ್ಯದ ಸೈನ್ಯಾಧಿಪತಿಗಳ ಜೊತೆ ಅವನು ಇದ್ದನೆಂದು ಹೇಳುತ್ತದೆ. ಉನ್ನತ ದರ್ಜೆಯ ಅಧಿಕಾರಿಯಾಗಿದ್ದ ಅವನು ಪ್ರಾಯಶಃ ಇಡೀ ಇಸ್ರಾಯೇಲ್‌ ಸೇನಾಪಡೆಯ ಅಧಿಪತಿಯಾಗಿದ್ದನು. ಅವನನ್ನು ರಾಜನಾಗಿ ಅಭಿಷೇಕಿಸುವಂತೆ ಪ್ರವಾದಿ ಎಲೀಷನು ಪ್ರವಾದಿಮಂಡಲಿಯವರಲ್ಲಿ ಒಬ್ಬನಿಗೆ ಹೇಳಿ ಕಳುಹಿಸಿದನು. ಮಾತ್ರವಲ್ಲ ಅಹಾಬನ ಧರ್ಮಭ್ರಷ್ಟ ಕುಟುಂಬದ ಗಂಡಸರನ್ನೆಲ್ಲ ಸಂಹರಿಸುವಂತೆ ಅವನ ಮೂಲಕ ಯೇಹುವಿಗೆ ಆಜ್ಞೆಕೊಟ್ಟನು.—2 ಅರ. 8:28; 9:1-10.

ಪ್ರವಾದಿಮಂಡಲಿಯವನು ಬಂದುಹೋದ ವಿಷಯವೇನೆಂದು ಯೇಹುವಿನೊಂದಿಗಿದ್ದ ಅಧಿಕಾರಿಗಳು ಕೇಳಲಾಗಿ ಯೇಹು ಮೊದಲು ಬಾಯಿಬಿಡಲಿಲ್ಲ. ಆದರೆ ನಂತರ ಒತ್ತಾಯಕ್ಕೆ ಮಣಿದು ಇದ್ದ ಎಲ್ಲ ವಿಷಯವನ್ನು ಹೇಳಿಬಿಟ್ಟನು. ಕೂಡಲೆ ಅವರೆಲ್ಲರೂ ಜೊತೆಸೇರಿ ಯೋರಾಮನ ವಿರುದ್ಧ ಒಳಸಂಚು ಮಾಡತೊಡಗಿದರು. (2 ಅರ. 9:11-14) ಆ ಅಧಿಕಾರಿಗಳಿಗೂ ಅರಸನ ನಿಯಮಾವಳಿಗಳ ಕುರಿತು ಹಾಗೂ ಈಜೆಬೆಲಳ ಉಪಟಳದ ಬಗ್ಗೆ ಒಳಗೊಳಗೇ ಕ್ರೋಧವಿತ್ತೆಂದು ಕಾಣುತ್ತದೆ. ಅದೇನೇ ಇರಲಿ ಯೇಹು ಮಾತ್ರ ತನಗೆ ಕೊಡಲಾದ ನೇಮಕವನ್ನು ಸಂಪೂರ್ಣವಾಗಿ ಮಾಡಿಮುಗಿಸಲು ತಕ್ಕ ಯೋಜನೆ ರೂಪಿಸತೊಡಗಿದನು.

ರಾಜ ಯೋರಾಮ ಅಲ್ಲಿರಲಿಲ್ಲ. ಯುದ್ಧದಲ್ಲಿ ಗಾಯಗೊಂಡ ಅವನು ಗುಣಮುಖನಾಗಲು ಇಜ್ರೇಲಿಗೆ ಹೋಗಿದ್ದನು. ಯೇಹುವಿನ ಕಾರ್ಯಯೋಜನೆ ಸಫಲವಾಗಬೇಕಾದರೆ ಆ ಕುರಿತ ಯಾವೊಂದು ಸುದ್ದಿಯೂ ಇಜ್ರೇಲನ್ನು ಮುಟ್ಟಬಾರದಿತ್ತು. ಹಾಗಾಗಿ “ಈ ಸುದ್ದಿಯು ಇಜ್ರೇಲನ್ನು ಮುಟ್ಟದಂತೆ ಒಬ್ಬನನ್ನೂ ಈ ಪಟ್ಟಣದಿಂದ [ರಾಮೋತ್‌ಗಿಲ್ಯಾದಿನಿಂದ] ಹೊರಗೆ ಬಿಡಬೇಡಿರಿ” ಎಂದು ಕಟ್ಟಾಜ್ಞೆ ಕೊಟ್ಟನು. (2 ಅರ. 9:14, 15) ಬಹುಶಃ ಯೋರಾಮನ ಬೆಂಬಲಿಗರು ತನಗೆ ವಿರೋಧ ಒಡ್ಡುವರೆಂಬ ಸಂದೇಹ ಅವನಿಗಿದ್ದಿರಬೇಕು. ಅಂಥ ಯಾವುದೇ ಅಡೆತಡೆಗೆ ಅವಕಾಶ ಕೊಡಲು ಯೇಹು ಸಿದ್ಧನಿರಲಿಲ್ಲ.

ಬಿರುಸಿನ ಸವಾರಿ!

ರಾಮೋತ್‌ಗಿಲ್ಯಾದಿನಿಂದ ಇಜ್ರೇಲಿಗೆ 72 ಕಿ.ಮೀ. ತನ್ನ ಆಗಮನದ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಯೇಹು ಅಲ್ಲಿಗೆ ಅತಿ ರಭಸದಿಂದ ರಥದಲ್ಲಿ ಧಾವಿಸಿದ. ಅವನು ಇಜ್ರೇಲಿಗೆ ಹತ್ತಿರವಾದಂತೆ ಅವನೊಂದಿಗೆ “ಜನರ ಒಂದು ಗುಂಪು” ಇರುವುದು ಬುರುಜಿನಲ್ಲಿದ್ದ ಕಾವಲುಗಾರನಿಗೆ ಕಾಣಿಸಿತು. (2 ಅರ. 9:17) ಹೇಗಾದರೂ ತನ್ನ ಉದ್ದೇಶ ಪೂರೈಸಬೇಕೆಂಬ ಛಲದಿಂದ ಯೇಹು ಸೈನ್ಯದ ದೊಡ್ಡ ಗುಂಪಿನೊಂದಿಗೆ ಸಿದ್ಧನಾಗಿಯೇ ಬಂದಿರಬೇಕು.

ರಥದ ವೇಗವನ್ನು ನೋಡಿಯೇ ಓಡಿಸುತ್ತಿರುವವನು ಯಾರೆಂದು ಕಾವಲುಗಾರ ಊಹಿಸಿದ. “ಕುದುರೆಗಳನ್ನು ಹುಚ್ಚುಹಿಡಿದವನಂತೆ ಓಡಿಸುವದನ್ನು ನೋಡಿದರೆ ಅವನು . . . ಯೇಹುವಾಗಿರಬೇಕು” ಎಂಬ ಉದ್ಗಾರ ಅವನಿಂದ ಹೊರಟಿತು! (2 ಅರ. 9:20) ರಥವನ್ನು ಅತಿ ವೇಗವಾಗಿ ಓಡಿಸುವ ಅಭ್ಯಾಸ ಯೇಹುವಿಗಿತ್ತೆಂದು ಇದರಿಂದ ಗೊತ್ತಾಗುತ್ತದೆ. ಮುಖ್ಯ ಕಾರ್ಯಾಚರಣೆ ಪೂರೈಸುವ ಗುರಿಯೊಂದಿಗೆ ಮುನ್ನುಗ್ಗುತ್ತಿದ್ದ ಈ ಸಂದರ್ಭದಲ್ಲಿ ಅವನ ಬಿರುಸಿನ ವೇಗ ಇನ್ನೆಷ್ಟು ಇದ್ದಿರಬೇಕೆಂದು ಊಹಿಸಿ!

ಯೇಹುವಿನ ಆಗಮನವನ್ನು ವಿಚಾರಿಸಲು ಒಬ್ಬರ ನಂತರ ಒಬ್ಬರಂತೆ ಇಬ್ಬರು ಸಂದೇಶವಾಹಕರು ಬಂದರು. ಯೇಹು ಅವರಿಗೆ ಯಾವ ಉತ್ತರವನ್ನೂ ಕೊಡಲಿಲ್ಲ. ಯೇಹುವನ್ನು ಸಂಧಿಸಲು ರಾಜ ಯೋರಾಮ ಮತ್ತು ಅವನ ಮಿತ್ರನಾಗಿದ್ದ ಯೆಹೂದದ ರಾಜ ಅಹಜ್ಯ ತಮ್ಮ ತಮ್ಮ ರಥವೇರಿ ಬಂದರು. “ಯೇಹುವೇ, ಶುಭವೋ” ಎಂದು ಯೋರಾಮ ಹಾಕಿದ ಪ್ರಶ್ನೆಗೆ, “ನಿನ್ನ ತಾಯಿಯ ದೇವದ್ರೋಹವೂ ಮಂತ್ರತಂತ್ರವೂ ಪ್ರಬಲವಾಗಿರುವಲ್ಲಿ ಶುಭವೆಲ್ಲಿಂದ ಬರುವದು” ಎಂಬ ತೀಕ್ಷ್ಣ ಉತ್ತರ ಸಿಕ್ಕಿತು. ಅಪಾಯವನ್ನರಿತ ಯೋರಾಮ ಅಲ್ಲಿಂದ ಕಾಲುಕೀಳಲು ಪ್ರಯತ್ನಿಸಿದ. ಆದರೆ ಯೇಹುವಿನ ವೇಗದ ಮುಂದೆ ಅವನ ಪ್ರಯತ್ನ ಸಾಗಲಿಲ್ಲ. ಬಿಲ್ಲನ್ನು ಬೊಗ್ಗಿಸಿ ಹೊಡೆದ ಬಾಣ ಯೋರಾಮನ ಹೃದಯವನ್ನು ತೂರಿ ಹೊರಬಂತು. ಯೋರಾಮನು ರಥದಲ್ಲೇ ಸತ್ತನು. ಅಹಜ್ಯ ಅಲ್ಲಿಂದ ತಪ್ಪಿಸಿಕೊಂಡನಾದರೂ ನಂತರ ಯೇಹು ಅವನನ್ನು ಪತ್ತೆಹಚ್ಚಿ ಕೊಂದನು.—2 ಅರ. 9:22-24, 27.

ಅಹಾಬನ ಮನೆಯವರಲ್ಲಿ ಮುಂದೆ ಯೇಹುವಿನಿಂದ ಹತಳಾದವಳು ದುಷ್ಟ ರಾಣಿ ಈಜೆಬೆಲ್‌. ಯೇಹು ಆಕೆಯನ್ನು “ಶಾಪಗ್ರಸ್ತ ಸ್ತ್ರೀ” ಎಂದು ಹೇಳಿದ್ದು ತಕ್ಕದಾಗಿತ್ತು. ಯೇಹು ಇಜ್ರೇಲನ್ನು ಮುಟ್ಟಿದಾಗ ಅರಮನೆಯ ಕಿಟಕಿಯಿಂದ ತನ್ನನ್ನು ಇಣುಕಿ ನೋಡುತ್ತಿದ್ದ ಈಜೆಬೆಲಳನ್ನು ನೋಡಿದನು. ತಕ್ಷಣ ಆಸ್ಥಾನಿಕರನ್ನು ಕೂಗಿ ಕರೆದು ಅವಳನ್ನು ಕೆಳಗೆ ದೊಬ್ಬುವಂತೆ ಆಜ್ಞಾಪಿಸಿದನು. ನಂತರ ಆಕೆಯ ಶವವನ್ನು ತನ್ನ ಕುದುರೆಗಳಿಂದ ತುಳಿಸಿಬಿಟ್ಟನು. ಅಲ್ಲಿಂದ ಹೊರಟು ಅವನು ಅಹಾಬನ ಕುಟುಂಬದ ಅನೇಕರನ್ನು ಸಂಹರಿಸಿದನು.—2 ಅರ. 9:30-34; 10:1-14.

ಈ ಹಿಂಸೆ ನಮಗೆ ಸಂತೋಷ ತರುವುದಿಲ್ಲ ನಿಜ. ಆದರೆ ಹಿಂದಿನ ಕಾಲದಲ್ಲಿ ಯೆಹೋವ ದೇವರು ತನ್ನ ನ್ಯಾಯತೀರ್ಪನ್ನು ವಿಧಿಸಲು ತನ್ನ ಸೇವಕರನ್ನು ಉಪಯೋಗಿಸುತ್ತಿದ್ದನು ಎನ್ನುವುದನ್ನು ನಾವೆಂದೂ ಮರೆಯಬಾರದು. ಯೇಹುವಿನ ಕುರಿತು ಬೈಬಲ್‌ ಹೇಳುವುದನ್ನು ಗಮನಿಸಿ: “ಅಹಜ್ಯನು ಯೋರಾಮನ ಬಳಿಗೆ ಹೋಗಿ ನಾಶವಾದದ್ದು ದೈವಯೋಗದಿಂದಲೇ. ಅವನು ಅಲ್ಲಿ ಮುಟ್ಟಿದ ಕೂಡಲೆ ಯೋರಾಮನ ಜೊತೆಯಲ್ಲಿ ನಿಂಷಿಯ ಮಗನಾದ ಯೇಹುವನ್ನು ಎದುರುಗೊಳ್ಳುವದಕ್ಕೆ ಹೋದನು. ಯೆಹೋವನು ಅಹಾಬನ ಮನೆಯನ್ನು ನಿರ್ನಾಮಮಾಡುವದಕ್ಕೋಸ್ಕರ ಯೇಹುವಿಗೆ ರಾಜ್ಯಾಭಿಷೇಕ ಮಾಡಿಸಿದ್ದನು.” (2 ಪೂರ್ವ. 22:7) ಯೇಹು ಯೋರಾಮನನ್ನು ಕೊಂದ ನಂತರ ಅವನ ಶವವನ್ನು ರಥದಿಂದ ಕೆಳಕ್ಕೆ ಬಿಸಾಡುವಂತೆ ಆಜ್ಞಾಪಿಸಿದನು. ತನ್ನ ಈ ಕಾರ್ಯ, ಯೆಹೋವನ ಪ್ರವಾದನೆಯ ನೆರವೇರಿಕೆಯಾಗಿತ್ತೆಂದು ಯೇಹು ಗ್ರಹಿಸಿದನು. ಅಹಾಬನು ನಾಬೋತನನ್ನು ಕೊಲೆಮಾಡಿದ್ದಕ್ಕಾಗಿ ಶಿಕ್ಷೆ ವಿಧಿಸುವೆನೆಂದು ಯೆಹೋವನು ಈ ಮೊದಲೇ ಹೇಳಿದ್ದನು. ಮಾತ್ರವಲ್ಲ ತನ್ನ “ಭಕ್ತರ ರಕ್ತವನ್ನು ಸುರಿಸಿದ್ದಕ್ಕಾಗಿ” ಈಜೆಬೆಲಳಿಗೆ ಮುಯ್ಯಿತೀರಿಸುವಂತೆ ಯೆಹೋವನು ಯೇಹುವಿಗೆ ಆಜ್ಞಾಪಿಸಿದ್ದನು.—2 ಅರ. 9:7, 25, 26; 1 ಅರ. 21:17-19.

ಇಂದು ದೇವರ ಸೇವಕರು ತಮ್ಮ ವಿರೋಧಿಗಳ ವಿರುದ್ಧ ಆಕ್ರಮಣ ಮಾಡುವುದಿಲ್ಲ. ಏಕೆಂದರೆ “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ” ಎಂದು ದೇವರು ಹೇಳಿದ್ದಾನೆ. (ಇಬ್ರಿ. 10:30) ಆದರೆ ಸಭೆಯ ಮೇಲೆ ದುಷ್ಪ್ರಭಾವ ಬರದಂತೆ ತಡೆಯಲು ಹಿರಿಯರು ಯೇಹುವಿನಂತೆ ಧೈರ್ಯದಿಂದ ಕ್ರಿಯೆಗೈಯಬೇಕಾಗುತ್ತದೆ. (1 ಕೊರಿಂ. 5:9-13) ಸಭಾ ಸದಸ್ಯರು ಬಹಿಷ್ಕೃತ ವ್ಯಕ್ತಿಗಳೊಂದಿಗೆ ಸಹವಾಸ ಮಾಡದಿರುವ ದೃಢನಿರ್ಧಾರ ತೆಗೆದುಕೊಳ್ಳುವುದು ಸಹ ಧೈರ್ಯದ ಹೆಜ್ಜೆಯಾಗಿದೆ.—2 ಯೋಹಾ. 9-11.

ಯೆಹೋವನಲ್ಲಿ ಯೇಹುವಿಗಿದ್ದ ಆಸಕ್ತಿ

ಯೇಹು ತನ್ನ ನೇಮಕವನ್ನು ಚಾಚೂತಪ್ಪದೆ ಪೂರೈಸಿದ್ದರ ಹಿಂದಿದ್ದ ಹೇತುವೇನಾಗಿತ್ತು? ಅವನು ಯೆಹೋನಾದಾಬನಿಗೆ ಹೇಳಿದ ಮಾತುಗಳಿಂದ ಅದು ಸ್ಪಷ್ಟವಾಗುತ್ತದೆ. “ನನ್ನ ಜೊತೆಯಲ್ಲಿ ಬಂದು ಯೆಹೋವನಲ್ಲಿ ನನಗಿರುವ ಆಸಕ್ತಿಯನ್ನು ನೋಡು.” ಈ ಆಮಂತ್ರಣವನ್ನು ಸ್ವೀಕರಿಸಿದ ಯೆಹೋನಾದಾಬನು ಯೇಹುವಿನ ರಥವನ್ನೇರಿ ಅವನೊಂದಿಗೆ ಸಮಾರ್ಯಕ್ಕೆ ಹೋದನು. ಅಲ್ಲಿ ಯೇಹು “ಬಾಳನ ಭಕ್ತರನ್ನು ಸಂಹರಿಸಬೇಕೆಂದು . . . ಯುಕ್ತಿಯನ್ನು ಮಾಡಿದನು.”—2 ಅರ. 10:15-17, 19.

ಬಾಳನಿಗೋಸ್ಕರ “ಮಹಾಯಜ್ಞವನ್ನು” ಸಮರ್ಪಿಸಬೇಕೆಂದಿರುತ್ತೇನೆ ಎಂದು ಅವನು ಜನರಿಗೆ ಪ್ರಕಟಿಸಿದನು. (2 ಅರ. 10:18, 19) “ಇಲ್ಲಿ ಯೇಹು ಪದಗಳನ್ನು ತುಂಬ ಚಾಣಾಕ್ಷತನದಿಂದ ಬಳಸಿದನು” ಎಂದು ಒಬ್ಬ ವಿದ್ವಾಂಸರು ಹೇಳುತ್ತಾರೆ. ಯೇಹು ಉಪಯೋಗಿಸಿದ ಪದದ “ಸಾಮಾನ್ಯ ಅರ್ಥ ‘ಯಜ್ಞ’ ಎಂದಾಗಿದೆಯಾದರೂ ಅದಕ್ಕೆ ಧರ್ಮಭ್ರಷ್ಟರ ‘ಸಂಹಾರ’ ಎಂಬ ಅರ್ಥವೂ ಇದೆ” ಎಂದು ಅವರು ತಿಳಿಸುತ್ತಾರೆ. ಬಾಳನ ಆರಾಧಕರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಬಾರದೆಂದು ಯೇಹು ಅವರನ್ನೆಲ್ಲ ಬಾಳನ ದೇವಸ್ಥಾನದಲ್ಲಿ ಒಟ್ಟುಸೇರಿಸಿದನು. ಮಾತ್ರವಲ್ಲ ಅವರನ್ನು ಪ್ರತ್ಯೇಕವಾಗಿ ಗುರುತಿಸುವ ಸಲುವಾಗಿ ವಿಶಿಷ್ಟ ಬಟ್ಟೆಯನ್ನು ಧರಿಸುವಂತೆಯೂ ಮಾಡಿದನು. “ಸರ್ವಾಂಗಹೋಮವನ್ನು ಅರ್ಪಿಸಿದ ಕೂಡಲೆ” ಸುಸಜ್ಜಿತರಾಗಿದ್ದ 80 ಮಂದಿ ಪುರುಷರು ಬಾಳನ ಭಕ್ತರನ್ನೆಲ್ಲ ಸಂಹರಿಸಿದರು. ನಂತರ ಅವನು ಬಾಳನ ದೇವಾಲಯವನ್ನು ಕೆಡವಿ ಆ ಸ್ಥಳವನ್ನು ಶೌಚಕ್ಕಾಗಿ ಬಳಸುವಂತೆ ಮಾಡಿದನು. ಹೀಗೆ ಅದು ಆರಾಧನೆಗೆ ಅಯೋಗ್ಯವಾಯಿತು.—2 ಅರ. 10:20-27.

ಯೇಹುವಿನಿಂದ ರಕ್ತದ ಕೋಡಿ ಹರಿಯಿತು ನಿಜ. ಆದರೂ ಬೈಬಲ್‌ ಅವನನ್ನು ಈಜೆಬೆಲ್‌ ಮತ್ತು ಆಕೆಯ ಕುಟುಂಬದವರ ಕ್ರೂರ ದಬ್ಬಾಳಿಕೆಯಿಂದ ಇಸ್ರಾಯೇಲ್ಯರನ್ನು ಬಿಡುಗಡೆಗೊಳಿಸಿದ ಕೆಚ್ಚೆದೆಯ ವೀರನೆಂದು ಚಿತ್ರಿಸುತ್ತದೆ. ಇಸ್ರಾಯೇಲಿನ ಯಾವ ನಾಯಕನೂ ಧೈರ್ಯ, ದೃಢಸಂಕಲ್ಪ, ಹುಮ್ಮಸ್ಸು ಇಲ್ಲದಿದ್ದರೆ ಈ ಕೆಲಸ ಮಾಡಲು ಆಗುತ್ತಿರಲಿಲ್ಲ. “ಅದು ಬಹುಕಷ್ಟದ ಕೆಲಸವಾಗಿತ್ತು. ಆದರೂ ಅದನ್ನು ಸಂಪೂರ್ಣವಾಗಿ ಮಾಡಿಮುಗಿಸಲಾಯಿತು. ಸ್ವಲ್ವ ಉದಾಸೀನ ತೋರಿಸಿದ್ದರೂ ಬಾಳನ ಆರಾಧನೆಯನ್ನು ಇಸ್ರಾಯೇಲಿನಿಂದ ನಿರ್ಮೂಲಮಾಡಲು ಆಗುತ್ತಿರಲಿಲ್ಲ” ಎನ್ನುತ್ತದೆ ಒಂದು ಬೈಬಲ್‌ ನಿಘಂಟು.

ಯೇಹುವಿಗಿದ್ದಂಥ ಗುಣಗಳನ್ನು ಇಂದು ಕ್ರೈಸ್ತರು ಸಹ ಕೆಲವು ಸನ್ನಿವೇಶಗಳಲ್ಲಿ ತೋರಿಸಬೇಕಾಗುತ್ತದೆ. ಉದಾಹರಣೆಗೆ ಯೆಹೋವನು ಇಷ್ಟಪಡದ ಒಂದು ಕೃತ್ಯದಲ್ಲಿ ಒಳಗೂಡುವಂತೆ ಪ್ರಲೋಭನೆ ಬರುವಲ್ಲಿ ನೀವೇನು ಮಾಡುವಿರಿ? ತಕ್ಷಣ ಧೈರ್ಯದಿಂದ ಬಲವಾಗಿ ನಿರಾಕರಿಸುವ ಹುರುಪು ನಮ್ಮಲ್ಲಿರಬೇಕು. ದೇವಭಕ್ತಿಯ ವಿಷಯ ಬಂದಾಗ ಯೆಹೋವನಲ್ಲಿನ ನಮ್ಮ ಆಸಕ್ತಿ ಜ್ವಲಿಸಬೇಕು.

ಯೆಹೋವನ ವಾಕ್ಯವನ್ನು ಕೈಗೊಂಡು ನಡೆಯಿರಿ

ಯೇಹುವಿನ ವೃತ್ತಾಂತ ಸಮಾಪ್ತಿಯಲ್ಲಿ ನಮಗೊಂದು ಎಚ್ಚರಿಕೆ ಕೊಡುತ್ತದೆ. ಅವನು ‘ಬೇತೇಲ್‌, ದಾನ್‌ ಎಂಬ ಊರುಗಳಲ್ಲಿದ್ದ ಚಿನ್ನದ ಬಸವಗಳನ್ನು ಪೂಜಿಸುವುದನ್ನು’ ಬಿಟ್ಟುಬಿಡಲಿಲ್ಲ. (2 ಅರ. 10:29) ಸತ್ಯಾರಾಧನೆಗಾಗಿ ಹುರುಪಿನಿಂದ ಕ್ಷಿಪ್ರವಾಗಿ ಕ್ರಿಯೆಗೈದಿದ್ದ ಒಬ್ಬ ವ್ಯಕ್ತಿ ಹೇಗೆ ತಾನೆ ತನ್ನ ರಾಜ್ಯದಲ್ಲಿ ವಿಗ್ರಹಾರಾಧನೆಯನ್ನು ಅನುಮತಿಸಿದ?

ತನ್ನ ಇಸ್ರಾಯೇಲ್‌ ರಾಜ್ಯವು ಯೆಹೂದ ರಾಜ್ಯದಿಂದ ಪ್ರತ್ಯೇಕವಾಗಿ ಉಳಿಯಬೇಕಾದರೆ ಆ ರಾಜ್ಯಕ್ಕಿಂತ ಭಿನ್ನವಾದ ಧಾರ್ಮಿಕ ನಂಬಿಕೆ ಇರಬೇಕೆಂದು ಯೇಹು ನೆನಸಿದ್ದಿರಬೇಕು. ಹಾಗಾಗಿ ತನಗಿಂತ ಮುಂಚೆ ಆಳಿದ ರಾಜರಂತೆ ಅವನು ಸಹ ಬಸವನ ಆರಾಧನೆ ಮುಂದುವರಿಯಲು ಬಿಟ್ಟನು. ತನ್ನನ್ನು ರಾಜನ ಸ್ಥಾನಕ್ಕೆ ತಂದ ಯೆಹೋವ ದೇವರಲ್ಲಿ ಅವನು ಅಚಲ ನಂಬಿಕೆ ಇಡದೆಹೋದನು.

‘ಯೆಹೋವನ ದೃಷ್ಟಿಗೆ ಸರಿಯಾದದ್ದನ್ನು ನಡಿಸಿದ’ ಯೇಹು ಯೆಹೋವನಿಂದ ಮೆಚ್ಚಿಕೆ ಪ್ರಶಂಸೆ ಪಡೆದಿದ್ದನು. ಆದರೆ ಅವನು “ಇಸ್ರಾಯೇಲ್‌ದೇವರಾದ ಯೆಹೋವನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಳ್ಳುವದಕ್ಕೆ ಪ್ರಯತ್ನಿಸಲಿಲ್ಲ.” (2 ಅರ. 10:30, 31) ಸತ್ಯಾರಾಧನೆ ಪರವಾಗಿ ಒಳ್ಳೇ ಕಾರ್ಯಗಳನ್ನು ಮಾಡಿದ ಯೇಹು ಕೊನೆಯಲ್ಲಿ ಹೀಗ್ಯಾಕೆ ಮಾಡಿದನು ಎಂದು ನಿಮಗೆ ಅಚ್ಚರಿಯ ಜೊತೆ ದುಃಖವೂ ಆಗಬಹುದು. ಆದರೆ ಇದು ನಮಗೆ ಪಾಠವಾಗಿದೆ. ಯೆಹೋವನೊಂದಿಗಿನ ಸುಸಂಬಂಧವನ್ನು ನಾವೆಂದೂ ಮಾಮೂಲಿಯದ್ದಾಗಿ ಪರಿಗಣಿಸಬಾರದು. ಪ್ರತಿದಿನವೂ ಬೈಬಲನ್ನು ಅಧ್ಯಯನ ಮಾಡಿ ಧ್ಯಾನಿಸುವ ಮೂಲಕ ಹಾಗೂ ನಮ್ಮ ತಂದೆಯಾದ ದೇವರಿಗೆ ಹೃದಯಾಳದಿಂದ ಪ್ರಾರ್ಥಿಸುವ ಮೂಲಕ ಆತನ ಕಡೆಗಿನ ನಿಷ್ಠೆಯನ್ನು ಹೆಚ್ಚೆಚ್ಚು ಬಲಗೊಳಿಸುತ್ತಿರಬೇಕು. ಹೀಗೆ ಯೆಹೋವನ ವಾಕ್ಯವನ್ನು ಪೂರ್ಣಮನಸ್ಸಿನಿಂದ ಕೈಕೊಳ್ಳುತ್ತಾ ಇರಲು ನಮ್ಮಿಂದಾಗುವ ಎಲ್ಲವನ್ನು ಮಾಡುತ್ತಿರೋಣ.—1 ಕೊರಿಂ. 10:12.

[ಪುಟ 4ರಲ್ಲಿರುವ ಚೌಕ]

ಯೇಹು ಚಾರಿತ್ರಿಕ ವ್ಯಕ್ತಿ

ಬೈಬಲ್‌ನಲ್ಲಿ ತಿಳಿಸಲಾಗಿರುವ ಜನರು ನಿಜವಾಗಿ ಬದುಕಿದ್ದರಾ ಎಂಬುದು ವಿಮರ್ಶಕರಿಂದ ಆಗಾಗ ಕೇಳಿಬರುವ ಪ್ರಶ್ನೆ. ಯೇಹು ನಿಜವಾಗಿ ಬದುಕಿದ್ದನು ಎನ್ನುವುದಕ್ಕೆ ಬೈಬಲನ್ನು ಬಿಟ್ಟು ಬೇರೆ ಯಾವುದಾದರೂ ಪುರಾವೆ ಇದೆಯಾ?

ಪ್ರಾಚೀನ ಅಶ್ಶೂರದಲ್ಲಿ ದೊರೆತ ಕಡಿಮೆಪಕ್ಷ ಮೂರು ದಾಖಲೆಗಳಲ್ಲಿ ಇಸ್ರಾಯೇಲಿನ ಈ ಅರಸನ ಹೆಸರು ಕಂಡುಬರುತ್ತದೆ. ಅವುಗಳಲ್ಲಿ ಒಂದು ದಾಖಲೆಯು ಯೇಹು ಅಥವಾ ಅವನ ಪ್ರತಿನಿಧಿಯೊಬ್ಬನು ಸಾಮ್ರಾಟ 3ನೇ ಶಲ್ಮನೆಸರನಿಗೆ ತಲೆಬಾಗಿ ಕಪ್ಪ ಒಪ್ಪಿಸಿದನು ಎಂದು ಸೂಚಿಸುತ್ತದೆ. ಆ ದಾಖಲೆಯಲ್ಲಿರುವ ಕೆತ್ತನೆಯಲ್ಲಿ ಹೀಗೆ ಬರೆದಿದೆ: “ಒಮ್ರಿಯ (Hu-um-ri) ಪುತ್ರ ಯೇಹು (Ia-ú-a) ಒಪ್ಪಿಸಿದ ಕಪ್ಪಕಾಣಿಕೆ; ಬೆಳ್ಳಿ, ಚಿನ್ನ, ಒಂದು ಚಿನ್ನದ ಸಾಪುಲು-ಬೋಗುಣಿ, ಚೂಪಾದ ತಳವುಳ್ಳ ಒಂದು ಚಿನ್ನದ ಹೂದಾನಿ, ಚಿನ್ನದ ಲೋಟಗಳು, ಚಿನ್ನದ ಬಕೆಟ್‌ಗಳು, ಡಬ್ಬಿ, ರಾಜದಂಡ, ಮರದ ಪುರುಹ್ಟು [ಈ ಪದದ ಅರ್ಥ ತಿಳಿದಿಲ್ಲ] ಇವುಗಳನ್ನು ಅವನು ನನಗೆ ಕೊಟ್ಟಿದ್ದಾನೆ.” ಯೇಹು “ಒಮ್ರಿಯ ಪುತ್ರ”ನಾಗಿರಲಿಲ್ಲ. ಇಸ್ರಾಯೇಲಿನ ರಾಜಧಾನಿಯಾಗಿದ್ದ ಸಮಾರ್ಯವನ್ನು ಕಟ್ಟಿದ ರಾಜ ಒಮ್ರಿ ಹೆಸರುವಾಸಿಯಾಗಿದ್ದ ಕಾರಣ ಅವನ ಕಾಲಾನಂತರ ಬಂದ ಇಸ್ರಾಯೇಲ್ಯರ ರಾಜರನ್ನು ಸೂಚಿಸಲು ಈ ಪದವನ್ನು ಬಳಸಲಾಗುತ್ತಿತ್ತು.

ಮೇಲೆ ತಿಳಿಸಿದ ದಾಖಲೆಯಲ್ಲದೆ ಶಲ್ಮನೆಸರನ ಪ್ರತಿಮೆ ಮತ್ತು ಅಶ್ಶೂರದ ರಾಜಪರಂಪರೆಯ ಚರಿತ್ರೆಯಲ್ಲೂ ಯೇಹುವಿನ ಹೆಸರು ಕಾಣಬರುತ್ತದೆ. ಹೀಗೆ ಒಟ್ಟು ಮೂರು ಕಡೆಗಳಲ್ಲಿ ಯೇಹುವಿನ ಹೆಸರಿನ ಉಲ್ಲೇಖ ಇದೆಯಾದರೂ ಅವನು ಸಾಮ್ರಾಟ ಶಲ್ಮನೆಸರನಿಗೆ ಕಪ್ಪ ಒಪ್ಪಿಸಿದ್ದನ್ನು ದೃಢೀಕರಿಸಲು ಸಾಧ್ಯವಿಲ್ಲ. ಆದರೆ ಈ ಉಲ್ಲೇಖಗಳು ಬೈಬಲ್‌ ತಿಳಿಸುವ ಯೇಹು ಚರಿತ್ರೆಯಲ್ಲಿ ನಿಜವಾಗಿ ಬದುಕಿದ್ದ ಒಬ್ಬ ವ್ಯಕ್ತಿಯೆಂದು ಸಾಬೀತುಪಡಿಸುತ್ತವೆ.