ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೇಸು ಕ್ರಿಸ್ತನನ್ನು ಶೂಲಕ್ಕೇರಿಸಿದ ಸಮಯವನ್ನು ನಿಖರವಾಗಿ ಹೇಳಲು ಸಾಧ್ಯವೇ?

ಯೇಸುವಿನ ಮರಣದ ಕುರಿತು ಮಾರ್ಕ ಹಾಗೂ ಅಪೊಸ್ತಲ ಯೋಹಾನ ಬರೆದ ದಾಖಲೆಗಳಲ್ಲಿ ವ್ಯತ್ಯಾಸವಿರುವಂತೆ ಕಾಣುವುದೇ ಈ ಪ್ರಶ್ನೆಗೆ ಕಾರಣ. ಸೈನಿಕರು “ಬೆಳಗ್ಗೆ ಸುಮಾರು ಒಂಬತ್ತು ಗಂಟೆಗೆ ಅವನನ್ನು [ಯೇಸುವನ್ನು] ಶೂಲಕ್ಕೇರಿಸಿದರು” ಎಂದು ಮಾರ್ಕ ತಿಳಿಸುತ್ತಾನೆ. (ಮಾರ್ಕ 15:25) ಆದರೆ ಯೋಹಾನ ಹೇಳುವ ಪ್ರಕಾರ ಪಿಲಾತನು ಯೇಸುವನ್ನು ಶೂಲಕ್ಕೇರಿಸುವಂತೆ ಯೆಹೂದ್ಯರಿಗೆ ಒಪ್ಪಿಸುವಾಗ “ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆಯಾಗಿತ್ತು.” (ಯೋಹಾ. 19:14-16) ಈ ವ್ಯತ್ಯಾಸ ಏಕೆಂದು ಸ್ಪಷ್ಟೀಕರಿಸಲು ಬೈಬಲ್‌ ವ್ಯಾಖ್ಯಾನಕಾರರು ಅನೇಕ ವಿವರಣೆಗಳನ್ನು ಕೊಟ್ಟಿದ್ದಾರೆ. ಆದರೆ ಬೈಬಲ್‌ ಆ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವುದಿಲ್ಲ. ಹಾಗಿದ್ದರೂ, ಆ ಕಾಲದಲ್ಲಿ ಜನರು ಸಮಯವನ್ನು ಹೇಗೆ ಲೆಕ್ಕಿಸುತ್ತಿದ್ದರೆಂದು ತಿಳಿಯುವುದು ನಮಗೆ ಸಹಾಯಮಾಡುತ್ತದೆ.

ಒಂದನೇ ಶತಮಾನದಲ್ಲಿ ಸಮಯವನ್ನು ನಿಖರವಾಗಿ ತಿಳಿಸಲು ಈಗಿರುವಂತೆ ಗಡಿಯಾರಗಳು ಇರಲಿಲ್ಲ. ಹಗಲು ಹೊತ್ತಿನಲ್ಲಿ ಆಕಾಶದಲ್ಲಿ ಸೂರ್ಯನ ಸ್ಥಾನವನ್ನು ನೋಡಿ ಸಮಯ ನಿರ್ಧರಿಸಲಾಗುತ್ತಿತ್ತು. ಆದರೆ ಆ ಸಮಯ ಈಗಿನಂತೆ ನಿಖರವಾಗಿರಲಿಲ್ಲ. ಏಕೆಂದರೆ ಸೂರ್ಯೋದಯ ಮತ್ತು ಸೂರ್ಯಸ್ತಮಾನದ ಸಮಯ ವರ್ಷದಾದ್ಯಂತ ಬದಲಾಗುತ್ತಿರುತ್ತದೆ. ಹಾಗಾಗಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ಅನೇಕ ಕಡೆಗಳಲ್ಲಿ ಸಮಯದ ಬಗ್ಗೆ ತಿಳಿಸುವಾಗ “ಸುಮಾರು” ಎಂದು ಹೇಳಲಾಗಿದೆ. ಉದಾಹರಣೆಗೆ, ಸುಮಾರು ಒಂಬತ್ತು ಗಂಟೆ, ಸುಮಾರು ಹನ್ನೆರಡು ಗಂಟೆ, ಸುಮಾರು ಮೂರು ಗಂಟೆ ಎಂದು ಹೇಳಲಾಗಿದೆ.—ಮತ್ತಾ. 20:3, 5; ಅ. ಕಾ. 10:3, 9, 30.

ಯೇಸುವಿನ ಭೂಜೀವಿತದ ಕೊನೆಯ ದಿನದಲ್ಲಿ ನಡೆದ ಬೇರೆ ಘಟನೆಗಳ ಸಮಯದ ಕುರಿತು ಹೇಳುವಾಗ ಎಲ್ಲ ಸುವಾರ್ತಾ ವೃತ್ತಾಂತಗಳು ಪರಸ್ಪರ ಹೊಂದಿಕೆಯಲ್ಲಿವೆ. ಆ ದಿನ ಮುಖ್ಯ ಯಾಜಕರೂ ಹಿರೀಪುರುಷರೂ ಒಟ್ಟುಗೂಡಿ ಸಮಾಲೋಚನೆ ಮಾಡಿ ಯೇಸುವನ್ನು ರೋಮನ್‌ ರಾಜ್ಯಪಾಲ ಪೊಂತ್ಯ ಪಿಲಾತನ ಬಳಿ ಒಯ್ದದ್ದು ಮುಂಜಾನೆಯ ಸಮಯದಲ್ಲಿ ಎಂದು ನಾಲ್ಕೂ ಸುವಾರ್ತಾ ವೃತ್ತಾಂತಗಳು ಹೇಳುತ್ತವೆ. (ಮತ್ತಾ. 27:1; ಮಾರ್ಕ 15:1; ಲೂಕ 22:66; ಯೋಹಾ. 18:28) ಯೇಸುವನ್ನು ಯಾತನಾಕಂಬದಲ್ಲಿ ಹಾಕಿದಾಗ ಮಧ್ಯಾಹ್ನ ಹನ್ನೆರಡು ಗಂಟೆಯಿಂದ “ಮೂರು ಗಂಟೆಯ ವರೆಗೆ” ದೇಶದಲ್ಲೆಲ್ಲಾ ಕತ್ತಲೆ ಕವಿಯಿತು ಎಂದು ಮತ್ತಾಯ, ಮಾರ್ಕ, ಲೂಕ ವರದಿಸಿದ್ದಾರೆ.—ಮತ್ತಾ. 27:45, 46; ಮಾರ್ಕ 15:33, 34; ಲೂಕ 23:44.

ಯೇಸುವನ್ನು ಶೂಲಕ್ಕೇರಿಸಿದ ಸಮಯದ ದಾಖಲೆಯಲ್ಲಿ ವ್ಯತ್ಯಾಸವಿರುವಂತೆ ಕಾಣಲು ಒಂದು ಕಾರಣ: ಅಪರಾಧಿಗೆ ಕೊರಡೆಯೇಟು ನೀಡುವುದನ್ನು ಸಹ ಶೂಲಕ್ಕೇರಿಸುವ ಶಿಕ್ಷೆಯ ಭಾಗವಾಗಿ ಪರಿಗಣಿಸಲಾಗುತ್ತಿತ್ತು. ಕೆಲವೊಮ್ಮೆ ಎಷ್ಟು ಭಯಂಕರವಾಗಿ ಹೊಡೆಯುತ್ತಿದ್ದರೆಂದರೆ ಅಪರಾಧಿ ಅಲ್ಲೇ ಪ್ರಾಣ ಬಿಡುತ್ತಿದ್ದನು. ಯೇಸುವಿಗೂ ಕ್ರೂರವಾಗಿ ಹೊಡೆದಿರಬೇಕು. ಏಕೆಂದರೆ ತನ್ನ ಯಾತನಾಕಂಬವನ್ನು ತುಂಬ ದೂರ ಹೊತ್ತುಕೊಂಡು ನಡೆಯಲು ಅವನಿಗೆ ಸಾಧ್ಯವಾಗದೆ ಬೇರೊಬ್ಬನು ಹೊತ್ತುಕೊಳ್ಳಬೇಕಾಯಿತು. (ಲೂಕ 23:26; ಯೋಹಾ. 19:17) ಶೂಲಕ್ಕೇರಿಸುವ ಶಿಕ್ಷೆ ಕೊರಡೆಯೇಟು ನೀಡಿದಲ್ಲಿಂದ ಆರಂಭವಾಯಿತೆಂದು ಪರಿಗಣಿಸಿದ್ದಲ್ಲಿ ಯೇಸುವನ್ನು ಯಾತನಾಕಂಬಕ್ಕೆ ಜಡಿಯುವಷ್ಟಕ್ಕೆ ಸಾಕಷ್ಟು ಸಮಯ ಕಳೆದಿರಬೇಕಲ್ಲವೆ? ಹಾಗಾಗಿ ಶಿಕ್ಷೆಯ ಯಾವ ಹಂತದ ಕುರಿತು ಬೇರೆ ಬೇರೆ ಲೇಖಕರು ಮಾತಾಡಿದರು ಎನ್ನುವುದರ ಮೇಲೆ ಆಧರಿಸಿ ಸಮಯ ಕೂಡ ಭಿನ್ನವಾಗಿರುತ್ತದೆ.

ಅಪೊಸ್ತಲ ಯೋಹಾನ ಸುವಾರ್ತಾ ವೃತ್ತಾಂತ ಬರೆಯಲು ಆರಂಭಿಸುವಷ್ಟಕ್ಕೆ ಉಳಿದ ಮೂವರು ಲೇಖಕರು ಬರೆದು ದಶಕಗಳು ಕಳೆದಿದ್ದವು. ಹಾಗಾಗಿ ಅವರು ಏನು ಬರೆದಿದ್ದರು ಎಂದು ಯೋಹಾನ ಸುಲಭವಾಗಿ ತಿಳಿದುಕೊಳ್ಳಸಾಧ್ಯವಿತ್ತು. ಆದರೆ ಅವನು ಮಾರ್ಕನು ಸೂಚಿಸಿದ ಸಮಯವನ್ನೇ ಸೂಚಿಸದೆ ಭಿನ್ನ ಸಮಯವನ್ನು ದಾಖಲಿಸಿದ್ದಾನೆ. ಅಂದರೆ ಯೋಹಾನನು ಮಾರ್ಕನ ದಾಖಲೆಯನ್ನು ನಕಲು ಮಾಡುತ್ತಾ ಹೋಗಲಿಲ್ಲ ಎಂದು ಇದು ತೋರಿಸುತ್ತದೆ. ಬದಲಿಗೆ ಇಬ್ಬರೂ ದೇವರಿಂದ ಪ್ರೇರಿತರಾಗಿ ಬರೆದರು. ಇವರಿಬ್ಬರ ವರದಿಯಲ್ಲಿನ ವ್ಯತ್ಯಾಸಕ್ಕೆ ಕಾರಣವನ್ನು ವಿವರಿಸಲು ಬೇಕಾದ ಎಲ್ಲ ಮಾಹಿತಿ ಬೈಬಲ್‌ನಲ್ಲಿ ಇಲ್ಲದಿರುವುದಾದರೂ ನಾವು ಸುವಾರ್ತಾ ಪುಸ್ತಕಗಳನ್ನು ಸತ್ಯವೆಂದು ನಂಬಸಾಧ್ಯವಿದೆ.