ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವಾ ಸುಯೋಗಗಳಿಗೆ ಅರ್ಹರಾಗಲು ತರಬೇತಿ ನೀಡಿ

ಸೇವಾ ಸುಯೋಗಗಳಿಗೆ ಅರ್ಹರಾಗಲು ತರಬೇತಿ ನೀಡಿ

ಸೇವಾ ಸುಯೋಗಗಳಿಗೆ ಅರ್ಹರಾಗಲು ತರಬೇತಿ ನೀಡಿ

“ಪೂರ್ಣವಾಗಿ ಉಪದೇಶಿಸಲ್ಪಟ್ಟ ಪ್ರತಿಯೊಬ್ಬನು ತನ್ನ ಬೋಧಕನಂತಿರುವನು.”—ಲೂಕ 6:40.

1. ಭೂಮಿಯಲ್ಲಿದ್ದಾಗ ಯೇಸು ಕ್ರೈಸ್ತ ಸಭೆಯ ಸ್ಥಾಪನೆಗೆ ಹೇಗೆ ಭದ್ರ ತಳಪಾಯ ಹಾಕಿದನು?

ಅಪೊಸ್ತಲ ಯೋಹಾನನ ಸುವಾರ್ತಾ ವೃತ್ತಾಂತ ಈ ಮಾತುಗಳಿಂದ ಕೊನೆಗೊಳ್ಳುತ್ತದೆ: “ವಾಸ್ತವದಲ್ಲಿ, ಯೇಸು ಮಾಡಿದ ಇನ್ನೂ ಅನೇಕ ಸಂಗತಿಗಳಿವೆ; ಒಂದುವೇಳೆ ಅವುಗಳನ್ನು ಸವಿವರವಾಗಿ ಬರೆಯುವುದಾದರೆ ಬರೆಯಲ್ಪಟ್ಟ ಸುರುಳಿಗಳನ್ನು ಶೇಖರಿಸಿಡಲು ಲೋಕವೇ ಸಾಕಾಗದು ಎಂದು ನಾನು ನೆನಸುತ್ತೇನೆ.” (ಯೋಹಾ. 21:25) ಹೌದು, ಯೇಸುವಿನ ಶುಶ್ರೂಷೆಯ ಅವಧಿ ಕೊಂಚವಾಗಿದ್ದರೂ ಸಾಧನೆ ಅಪಾರವಾಗಿತ್ತು. ಅವನು ಮಾಡಿದ ಅನೇಕ ಸಂಗತಿಗಳಲ್ಲಿ ಒಂದು, ಸಾರುವ ಕೆಲಸದ ಮೇಲ್ವಿಚಾರಣೆ ವಹಿಸಿಕೊಳ್ಳುವಂತೆ ಪುರುಷರಿಗೆ ತರಬೇತು ನೀಡಿದ್ದಾಗಿತ್ತು. ಸ್ವರ್ಗಕ್ಕೆ ಹೋಗುವ ಮುಂಚೆ ಅವನು ತರಬೇತುಗೊಳಿಸಿದ ಶಿಷ್ಯರ ಗುಂಪು ಕ್ರಿ.ಶ. 33ರಲ್ಲಿ ಚಿಕ್ಕದಾಗಿತ್ತಾದರೂ ಸ್ವಲ್ಪದರಲ್ಲೇ ಅದು ಅನೇಕಾನೇಕ ಸಭೆಗಳಾಗಿ ರೂಪುಗೊಂಡು ಶಿಷ್ಯರ ಸಂಖ್ಯೆ ಸಾವಿರಗಟ್ಟಲೆಗೆ ಏರಿತು!—ಅ. ಕಾ. 2:41, 42; 4:4; 6:7.

2, 3. (ಎ) ಸಹೋದರರು ಮುಂದಾಳತ್ವ ವಹಿಸಲು ಅರ್ಹರಾಗುವುದು ಇಂದು ಜರೂರಿಯಾಗಿದೆ ಏಕೆ? (ಬಿ) ಈ ಲೇಖನದಲ್ಲಿ ಏನನ್ನು ಕಲಿಯಲಿದ್ದೇವೆ?

2 ಆ ಬೆಳವಣಿಗೆ ಇಂದಿಗೂ ಮುನ್ನಡೆಯುತ್ತಿದೆ. ಇಂದು ಜಗತ್ತಿನಾದ್ಯಂತ ಒಂದು ಲಕ್ಷಕ್ಕೂ ಅಧಿಕ ಸಭೆಗಳಿವೆ. 70 ಲಕ್ಷಕ್ಕಿಂತಲೂ ಹೆಚ್ಚು ಮಂದಿ ರಾಜ್ಯ ಘೋಷಕರು ಶುಶ್ರೂಷೆಯಲ್ಲಿ ನಿರತರಾಗಿದ್ದಾರೆ. ರಾಜ್ಯ ಘೋಷಕರ ಸಂಖ್ಯೆ ದ್ವಿಗುಣಗೊಂಡಂತೆ ಮುಂದಾಳತ್ವ ವಹಿಸುವ ಪುರುಷರ ಬೇಡಿಕೆಯೂ ಹೆಚ್ಚುತ್ತಿದೆ. ಉದಾಹರಣೆಗೆ, ಸಭೆಯನ್ನು ನೋಡಿಕೊಳ್ಳಲಿಕ್ಕಾಗಿ ಅನೇಕಾನೇಕ ಕ್ರೈಸ್ತ ಹಿರಿಯರ ಅಗತ್ಯವಿದೆ. ಅದನ್ನು ಮನಗಂಡು ಸೇವಾ ಸುಯೋಗವನ್ನು ಪಡೆದುಕೊಳ್ಳಲು ಪ್ರಗತಿ ಮಾಡುತ್ತಿರುವ ಸಹೋದರರನ್ನು ಮನಸಾರೆ ಶ್ಲಾಘಿಸಬೇಕು. ಏಕೆಂದರೆ ಅವರು “ಒಳ್ಳೇ ಕಾರ್ಯವನ್ನು” ಅಪೇಕ್ಷಿಸುವವರಾಗಿದ್ದಾರೆ.—1 ತಿಮೊ. 3:1.

3 ಆದರೆ ಒಬ್ಬ ಸಹೋದರನಲ್ಲಿ ಕೆಲವೊಂದು ಅರ್ಹತೆಗಳು ಇರುವಲ್ಲಿ ಮಾತ್ರ ಸೇವಾ ಸುಯೋಗವನ್ನು ಪಡೆದುಕೊಳ್ಳಲು ಸಾಧ್ಯ. ಒಬ್ಬನು ತನ್ನ ವಿದ್ಯಾಭ್ಯಾಸದಿಂದ ಅಥವಾ ಅನುಭವದಿಂದ ಆ ಅರ್ಹತೆಯನ್ನು ಪಡೆದುಕೊಳ್ಳಲಾರನು. ಬದಲಿಗೆ ಸೇವಾ ಸುಯೋಗಗಳನ್ನು ಪಡೆದುಕೊಳ್ಳಲು ಬೈಬಲ್‌ ತಿಳಿಸುವ ಅರ್ಹತೆಗಳನ್ನು ಅವನು ತಲಪಿರಬೇಕು. ಕೌಶಲ್ಯ ಸಾಮರ್ಥ್ಯಕ್ಕಿಂತ ಆಧ್ಯಾತ್ಮಿಕ ಗುಣಗಳು ಅವನಲ್ಲಿರುವುದು ತುಂಬಾ ಪ್ರಾಮುಖ್ಯ. ಇಂಥ ಅರ್ಹತೆಗಳನ್ನು ಪಡೆದುಕೊಳ್ಳುವಂತೆ ಸಭೆಯಲ್ಲಿರುವ ಪುರುಷರಿಗೆ ಯಾವುದು ನೆರವಾಗುತ್ತದೆ? ಯೇಸುವಿನ ಮಾತನ್ನು ಗಮನಿಸಿ. “ಪೂರ್ಣವಾಗಿ ಉಪದೇಶಿಸಲ್ಪಟ್ಟ ಪ್ರತಿಯೊಬ್ಬನು ತನ್ನ ಬೋಧಕನಂತಿರುವನು” ಎಂದು ಅವನು ಹೇಳಿದನು. (ಲೂಕ 6:40) ಹೌದು, ಅತ್ಯುತ್ತಮ ಬೋಧಕನಾಗಿದ್ದ ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಪೂರ್ಣ ತರಬೇತಿ ನೀಡಿ ಭಾರಿ ಜವಾಬ್ದಾರಿ ಹೊತ್ತುಕೊಳ್ಳಲು ಸಮರ್ಥರಾಗುವಂತೆ ನೆರವು ನೀಡಿದನು. ಅವನು ಬಳಸಿದ ವಿಧಾನಗಳನ್ನು ನಾವು ಈ ಲೇಖನದಲ್ಲಿ ಚರ್ಚಿಸಿ ನಮಗಿರುವ ಪಾಠವನ್ನು ಪರಿಗಣಿಸಲಿದ್ದೇವೆ.

“ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ”

4. ಯೇಸು ಶಿಷ್ಯರೊಂದಿಗೆ ಯಾವ ರೀತಿಯಲ್ಲಿ ಆಪ್ತ ಮಿತ್ರತ್ವ ಬೆಸೆದಿದ್ದನು?

4 ಶಿಷ್ಯರಿಗಿಂತಲೂ ತಾನು ಶ್ರೇಷ್ಠ ಎಂಬ ಭಾವನೆ ಯೇಸುವಿಗೆ ಇರಲಿಲ್ಲ. ಅವನು ಅವರಿಗೆ ಆಪ್ತ ಸ್ನೇಹಿತನಾಗಿದ್ದನು. ಅವರ ಜೊತೆ ಸಮಯ ಕಳೆಯಲು ಇಷ್ಟಪಡುತ್ತಿದ್ದನು, ಅವರಲ್ಲಿ ವಿಶ್ವಾಸ ಇಟ್ಟಿದ್ದನು. ತಂದೆಯಿಂದ ಕಲಿತ ಎಲ್ಲಾ ವಿಷಯಗಳನ್ನು ಅವರಿಗೆ ತಿಳಿಸುತ್ತಿದ್ದನು. (ಯೋಹಾನ 15:15 ಓದಿ.) ಒಮ್ಮೆ ಶಿಷ್ಯರು, “ಈ ಸಂಗತಿಗಳು ಯಾವಾಗ ಸಂಭವಿಸುವವು ಮತ್ತು ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು?” ಎಂದು ಯೇಸುವನ್ನು ಕೇಳಿದರು. ಅವನು ಉತ್ತರ ನೀಡಿದಾಗ ಶಿಷ್ಯರೆಷ್ಟು ಪುಳಕಗೊಂಡಿರಬೇಕೆಂದು ಯೋಚಿಸಿ. (ಮತ್ತಾ. 24:3, 4) ಯೇಸು ತನ್ನ ಭಾವನೆ, ವಿಚಾರ ಎಲ್ಲವನ್ನೂ ಮನಬಿಚ್ಚಿ ಹಂಚಿಕೊಳ್ಳುತ್ತಿದ್ದನು. ಆತನನ್ನು ಸೆರೆಹಿಡಿದ ರಾತ್ರಿಯಲ್ಲಿ ನಡೆದ ಘಟನೆಯನ್ನೇ ತೆಗೆದುಕೊಳ್ಳಿ. ಅವನು ಗೆತ್ಸೇಮನೆ ತೋಟಕ್ಕೆ ಪೇತ್ರ, ಯಾಕೋಬ ಮತ್ತು ಯೋಹಾನನನ್ನು ಕರೆದುಕೊಂಡು ಹೋದನು. ಅಲ್ಲಿ ತಲ್ಲಣದಿಂದ ಮನದ ಬೇಗುದಿಯನ್ನು ದೇವರಲ್ಲಿ ತೋಡಿಕೊಂಡನು. ಪ್ರಾರ್ಥನೆಯಲ್ಲಿ ಅವನು ಹೇಳಿದ ವಿಷಯವನ್ನು ಆ ಮೂವರು ಅಪೊಸ್ತಲರು ಕೇಳಿಸಿಕೊಂಡಿರಲಾರರು ನಿಜ. ಆದರೆ ಅವನು ಅನುಭವಿಸಿದ ಭಾವನಾತ್ಮಕ ಕ್ಷೋಭೆಯನ್ನು ಖಂಡಿತ ಅರ್ಥ ಮಾಡಿಕೊಂಡಿರಬೇಕು. (ಮಾರ್ಕ 14:33-38) ಮತ್ತೊಂದು ಸನ್ನಿವೇಶದಲ್ಲಿ ಯೇಸುವಿನ ರೂಪಾಂತರವನ್ನು ಪ್ರತ್ಯಕ್ಷ ನೋಡುವ ಅವಕಾಶ ಈ ಮೂವರು ಶಿಷ್ಯರಿಗೆ ಸಿಕ್ಕಿತು. ಅದು ಅವರ ಮೇಲೆ ಬೀರಿದ ಗಾಢ ಪ್ರಭಾವದ ಕುರಿತು ಸಹ ಯೋಚಿಸಿ. (ಮಾರ್ಕ 9:2-8; 2 ಪೇತ್ರ 1:16-18) ಯೇಸು ಮತ್ತು ಶಿಷ್ಯರ ನಡುವೆ ಇದ್ದ ಈ ಬೆಸುಗೆಯೇ ಮುಂದೆ ಅವರು ಮಹತ್ವದ ಜವಾಬ್ದಾರಿ ಹೊತ್ತುಕೊಳ್ಳಲು ಸ್ಫೂರ್ತಿಯಾಯಿತು.

5. ಹಿರಿಯರು ಜೊತೆ ವಿಶ್ವಾಸಿಗಳಿಗೆ ಯಾವ ವಿಧಗಳಲ್ಲಿ ನೆರವು ನೀಡಬಹುದು?

5 ಯೇಸುವಿನಂತೆ ಇಂದು ಹಿರಿಯರು ಸಹ ಜೊತೆ ವಿಶ್ವಾಸಿಗಳೊಂದಿಗೆ ಸ್ನೇಹ ಸೌಹಾರ್ದತೆ ಬೆಳೆಸಿ ಅವರಿಗೆ ನೆರವು ನೀಡುತ್ತಾರೆ. ಅವರಲ್ಲಿ ವ್ಯಕ್ತಿಗತ ಕಾಳಜಿ ವಹಿಸಿ ಆಪ್ತರಾಗಿರುತ್ತಾರೆ. ಕೆಲವೊಂದು ವಿಷಯಗಳನ್ನು ಅವರು ಗೋಪ್ಯವಾಗಿ ಇಡಬೇಕು ನಿಜ. ಆದರೆ ಗುಟ್ಟುಗುಟ್ಟಾಗಿ ವರ್ತಿಸುವ ಸ್ವಭಾವದವರಾಗಿ ಇರುವುದಿಲ್ಲ. ಯೇಸುವಿನಂತೆ ಇತರರಲ್ಲಿ ವಿಶ್ವಾಸ ಇಡುತ್ತಾರೆ. ತಾವು ಕಲಿತ ಬೈಬಲ್‌ ಸತ್ಯಗಳನ್ನು ಎಲ್ಲರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಸಭೆಯಲ್ಲಿರುವ ಶುಶ್ರೂಷಾ ಸೇವಕರನ್ನು, ವಯಸ್ಸಿನಲ್ಲಿ ಚಿಕ್ಕವರಾಗಿರಲಿ ಅನುಭವ ಕಡಿಮೆ ಇರಲಿ ಕೀಳಾಗಿ ಕಾಣುವುದಿಲ್ಲ. ಅವರು ಸಹ ಆಧ್ಯಾತ್ಮಿಕ ಪುರುಷರಾಗಿದ್ದಾರೆ, ಸಮರ್ಥರಾಗಿದ್ದಾರೆ, ಸಭೆಯಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ಹಿರಿಯರು ಸದಾ ಮನಸ್ಸಿನಲ್ಲಿಡುತ್ತಾರೆ.

“ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ”

6, 7. ಯಾವ ರೀತಿಯಲ್ಲಿ ಯೇಸು ಶಿಷ್ಯರಿಗೆ ಒಳ್ಳೇ ಮಾದರಿ ಆಗಿದ್ದನು? ಅದು ಅವರ ಮೇಲೆ ಯಾವ ಪ್ರಭಾವ ಬೀರಿತು?

6 ಯೇಸುವಿನ ಶಿಷ್ಯರು ಆಧ್ಯಾತ್ಮಿಕ ವಿಷಯಗಳನ್ನು ಬಹಳವಾಗಿ ಗಣ್ಯ ಮಾಡಿದರಾದರೂ ಅವರು ಬೆಳೆದುಬಂದ ಪರಿಸರ, ಸಂಸ್ಕೃತಿ ಕೆಲವೊಮ್ಮೆ ಅವರ ಯೋಚನೆಯನ್ನು ಗಾಢವಾಗಿ ಪ್ರಭಾವಿಸಿತು. (ಮತ್ತಾ. 19:9, 10; ಲೂಕ 9:46-48; ಯೋಹಾ. 4:27) ಅದಕ್ಕೆಂದು ಯೇಸು ಅವರನ್ನು ಬೆದರಿಸಿ ಹೆದರಿಸಿ ಟೀಕಿಸಲಿಲ್ಲ. ಆಗದ ಒಂದು ವಿಷಯವನ್ನು ಮಾಡುವಂತೆ ಒತ್ತಾಯ ಹೇರಲಿಲ್ಲ. ಹೀಗೆ ಮಾಡಿ ಹಾಗೆ ಮಾಡಿ ಅಂತ ಅವರಿಗೆ ಉಪದೇಶ ನೀಡಿ ತಾನು ಬೇರೆ ಇನ್ನೇನೋ ಮಾಡಲಿಲ್ಲ. ಎಲ್ಲಾ ವಿಷಯಗಳಲ್ಲಿ ತಾನೇ ಅವರಿಗೆ ಒಳ್ಳೇ ಮಾದರಿ ಆಗಿದ್ದನು.ಯೋಹಾನ 13:15 ಓದಿ.

7 ಯಾವೆಲ್ಲಾ ವಿಷಯಗಳಲ್ಲಿ ಮಾದರಿ ಇಟ್ಟನು? (1 ಪೇತ್ರ 2:21) ಇತರರ ಸೇವೆ ಮಾಡಲಿಕ್ಕಾಗಿ ಸರಳ ಜೀವನ ನಡೆಸಿದನು. (ಲೂಕ 9:58) ವಿನೀತನಾಗಿ ತನ್ನ ಬೋಧನೆಯನ್ನು ಶಾಸ್ತ್ರವಚನಗಳ ಮೇಲೆ ಆಧರಿಸಿದನು. (ಯೋಹಾ. 5:19; 17:14, 17) ಸ್ನೇಹಪರನೂ ದಯಾಪರನೂ ಆಗಿದ್ದನು. ಅವನ ಪ್ರತಿಯೊಂದು ಕಾರ್ಯದಲ್ಲೂ ಪ್ರೀತಿ ಒಲವು ಎದ್ದು ಕಾಣುತ್ತಿತ್ತು. (ಮತ್ತಾ. 19:13-15; ಯೋಹಾ. 15:12) ಯೇಸು ಇಟ್ಟ ಈ ಮಾದರಿ ಆತನ ಅಪೊಸ್ತಲರ ಮೇಲೆ ಗಾಢ ಪ್ರಭಾವ ಬೀರಿತು. ಉದಾಹರಣೆಗೆ, ಯಾಕೋಬ ಮರಣಕ್ಕೆ ಅಂಜದೆ ಧೈರ್ಯದಿಂದ ದೇವರ ಸೇವೆ ಮಾಡಿ ಸಾವಿನೆದುರಲ್ಲೂ ನಿಷ್ಠಾವಂತನಾಗಿದ್ದನು. (ಅ. ಕಾ. 12:1, 2) ಯೋಹಾನನು 60ಕ್ಕಿಂತಲೂ ಹೆಚ್ಚು ವರ್ಷ ಕಾಲ ಯೇಸುವಿನ ಹೆಜ್ಜೆಜಾಡನ್ನು ನಂಬಿಗಸ್ತಿಕೆಯಿಂದ ಅನುಸರಿಸಿದನು.—ಪ್ರಕ. 1:1, 2, 9.

8. ಕಿರಿವಯಸ್ಸಿನ ಪುರುಷರಿಗೂ ಇತರರಿಗೂ ಹಿರಿಯರು ಹೇಗೆ ಆದರ್ಶರಾಗಿರಬಲ್ಲರು?

8 ಪ್ರೀತಿ, ದೀನಭಾವ, ಸ್ವತ್ಯಾಗದ ಮನೋಭಾವ ಇರುವ ಹಿರಿಯರು ಕಿರಿವಯಸ್ಸಿನ ಪುರುಷರಿಗೆ ಆದರ್ಶರಾಗಿರುತ್ತಾರೆ. (1 ಪೇತ್ರ 5:2, 3) ಅಷ್ಟೇ ಅಲ್ಲ ನಂಬಿಕೆ, ಬೋಧನೆ, ಕ್ರೈಸ್ತ ಜೀವನ ಹಾಗೂ ಶುಶ್ರೂಷೆಯಲ್ಲಿ ಹಿರಿಯರು ಒಳ್ಳೇ ಮಾದರಿಗಳಾಗಿರುವಾಗ ಇತರರು ಅವರ ನಂಬಿಕೆಯನ್ನು ಅನುಕರಿಸುತ್ತಾರೆ. ಇದು ಆ ಹಿರಿಯರ ಸಂತೋಷವನ್ನು ಹೆಚ್ಚಿಸುತ್ತದೆ.—ಇಬ್ರಿ. 13:7.

“ಆಜ್ಞೆಗಳನ್ನು ಕೊಟ್ಟು ಕಳುಹಿಸಿದನು”

9. ಸುವಾರ್ತೆ ಸಾರಲು ಯೇಸು ತನ್ನ ಶಿಷ್ಯರಿಗೆ ತರಬೇತು ನೀಡಿದನು ಎಂದು ನಾವು ಹೇಗೆ ಹೇಳಬಲ್ಲೆವು?

9 ಯೇಸು ಸುಮಾರು ಎರಡು ವರ್ಷಗಳ ಕಾಲ ಹುರುಪಿನಿಂದ ಶುಶ್ರೂಷೆಯನ್ನು ಮಾಡಿದ ಮೇಲೆ ಹೆಚ್ಚೆಚ್ಚು ಜನರಿಗೆ ಸಂದೇಶ ಸಾರುವ ಉದ್ದೇಶದಿಂದ ತನ್ನ 12 ಮಂದಿ ಅಪೊಸ್ತಲರನ್ನು ಕಳುಹಿಸಿದನು. ಹಾಗೆ ಕಳುಹಿಸುವ ಮುಂಚೆ ಸ್ಪಷ್ಟ ನಿರ್ದೇಶನಗಳನ್ನು ನೀಡಿ ಅವರನ್ನು ಅಣಿಗೊಳಿಸಿದನು. (ಮತ್ತಾ. 10:5-14) ಅದ್ಭುತ ಮಾಡಿ ಸಾವಿರಾರು ಜನರಿಗೆ ಉಣಬಡಿಸಿದಾಗಲೂ ಅಷ್ಟೇ, ಜನರನ್ನು ಹೇಗೆ ಪಂಕ್ತಿಯಲ್ಲಿ ಕುಳ್ಳಿರಿಸಬೇಕು, ಯಾವ ರೀತಿಯಲ್ಲಿ ಆಹಾರವನ್ನು ಹಂಚಬೇಕು ಎಂಬ ಸೂಚನೆಗಳನ್ನು ನೀಡಿದನು. (ಲೂಕ 9:12-17) ಯೇಸು ತನ್ನ ಶಿಷ್ಯರನ್ನು ತರಬೇತುಗೊಳಿಸಲು ಸ್ಫಟಿಕ ಸ್ಪಷ್ಟ ನಿರ್ದೇಶನಗಳನ್ನು ನೀಡಿದನೆಂದು ಇದರಿಂದ ರುಜುವಾಗುತ್ತದೆ. ಈ ರೀತಿಯ ತರಬೇತಿ ಹಾಗೂ ಪವಿತ್ರಾತ್ಮ ಶಕ್ತಿಯ ನೆರವಿನಿಂದಾಗಿ ಮುಂದೆ ಶಿಷ್ಯರು ಕ್ರಿ.ಶ. 33ರಲ್ಲಿ ಅಷ್ಟೊಂದು ದೊಡ್ಡ ರೀತಿಯಲ್ಲಿ ಸಾರುವ ಕೆಲಸವನ್ನು ಏರ್ಪಡಿಸಿ ಮುನ್ನಡೆಸಲು ಸಾಧ್ಯವಾಯಿತು.

10, 11. ಹೊಸಬರನ್ನು ಹಂತ ಹಂತವಾಗಿ ತರಬೇತುಗೊಳಿಸುವ ರೀತಿಯನ್ನು ವಿವರಿಸಿ.

10 ಒಬ್ಬ ಪುರುಷನೊಂದಿಗೆ ನಾವು ಬೈಬಲ್‌ ಅಧ್ಯಯನ ಶುರು ಮಾಡಿದ ಸಮಯದಿಂದಲೇ ತರಬೇತಿ ಆರಂಭವಾಗುತ್ತದೆ. ಅರ್ಥಭರಿತವಾಗಿ ಓದುವುದು ಹೇಗೆಂದು ನಾವು ತೋರಿಸಿ ಕೊಡಬೇಕಾಗುತ್ತದೆ. ಬೈಬಲ್‌ ಅಧ್ಯಯನ ಮುಂದುವರಿದಂತೆ ಇತರ ರೀತಿಯ ತರಬೇತಿ ನೀಡಬೇಕಾಗುತ್ತದೆ. ಕೂಟಗಳಿಗೆ ಹಾಜರಾಗಲು ತೊಡಗಿದಾಗ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಷಣಗಳನ್ನು ನೀಡಲು, ಪ್ರಚಾರಕನಾಗಲು ಅವನಿಗೆ ನೆರವು ಬೇಕಾಗುತ್ತದೆ. ಅವನು ದೀಕ್ಷಾಸ್ನಾನ ಹೊಂದಿದ ಬಳಿಕ ಸಹೋದರರು ರಾಜ್ಯ ಸಭಾಗೃಹ ಸುಸ್ಥಿತಿಯಲ್ಲಿಡುವಂಥ ಇನ್ನಿತರ ಕೆಲಸಗಳಲ್ಲಿ ಅವನಿಗೆ ತರಬೇತಿ ನೀಡುತ್ತಾರೆ. ಮಾತ್ರವಲ್ಲ, ಶುಶ್ರೂಷಾ ಸೇವಕನಾಗಲು ಏನೆಲ್ಲಾ ಅರ್ಹತೆಗಳನ್ನು ಪಡೆದುಕೊಳ್ಳಬೇಕು ಎಂದು ಹಿರಿಯರು ಅವನಿಗೆ ಮಂದಟ್ಟು ಮಾಡಿಸುತ್ತಾರೆ.

11 ದೀಕ್ಷಾಸ್ನಾನ ಪಡೆದ ಒಬ್ಬ ಸಹೋದರನಿಗೆ ನೇಮಕಗಳನ್ನು ವಹಿಸಿಕೊಡುವಾಗ ಹಿರಿಯರು ಸಂಘಟನೆಯ ಕಾರ್ಯವಿಧಾನವನ್ನು ವಿವರಿಸಿ ಬೇಕಾದ ಎಲ್ಲಾ ನಿರ್ದೇಶನಗಳನ್ನು ನೀಡಬೇಕು. ತರಬೇತಿ ಪಡೆದುಕೊಳ್ಳುತ್ತಿರುವ ಸಹೋದರನಿಗೆ ತಾನು ಏನು ಮಾಡಬೇಕು ಎನ್ನುವುದು ಸ್ಪಷ್ಟವಾಗಿ ಮನದಟ್ಟಾಗಿರಬೇಕು. ಅವನು ಏನನ್ನಾದರೂ ಮಾಡಲು ತಪ್ಪುವಲ್ಲಿ ಅಸಮರ್ಥ ಎಂದು ಹಿರಿಯರು ದುಡುಕಿ ತೀರ್ಮಾನಿಸಬಾರದು. ಹೇಗೆ ಮಾಡುವುದೆಂದು ಮತ್ತೆ ಪ್ರೀತಿಯಿಂದ ವಿವರಿಸಿ ತೋರಿಸಿಕೊಡಬೇಕು. ಅದನ್ನು ಅನುಸರಿಸಲು ಅವನು ಪ್ರಯತ್ನಿಸುವಾಗ ಹಿರಿಯರಿಗೆ ಸಂತೋಷವಾಗುತ್ತದೆ. ಏಕೆಂದರೆ ಸಭೆಯಲ್ಲಿ ಇತರರ ಸೇವೆ ಮಾಡುವುದು ಆ ಸಹೋದರನಿಗೂ ಉಲ್ಲಾಸ ತರುವುದೆಂದು ಅವರು ಚೆನ್ನಾಗಿ ಬಲ್ಲರು.—ಅ. ಕಾ. 20:35.

ಸಲಹೆಯನ್ನು ಪಾಲಿಸುವವನು “ಜ್ಞಾನಿ”

12. ಯೇಸು ನೀಡಿದ ಸಲಹೆ ಪರಿಣಾಮಕಾರಿಯಾಗಿತ್ತು ಏಕೆ?

12 ಯೇಸು ತನ್ನ ಶಿಷ್ಯರಿಗೆ ತರಬೇತು ನೀಡಲು ಇನ್ನೊಂದು ವಿಧಾನವನ್ನೂ ಬಳಸಿದನು. ಅವರಿಗೆ ತಕ್ಕ ಸಲಹೆಗಳನ್ನು ನೀಡಿದನು. ಉದಾಹರಣೆಗೆ, ಯೇಸುವನ್ನು ಬರಮಾಡಿಕೊಳ್ಳದ ಸಮಾರ್ಯದವರ ಮೇಲೆ ಆಕಾಶದಿಂದ ಬೆಂಕಿ ಬೀಳಬೇಕೆಂದು ಯಾಕೋಬ ಯೋಹಾನರು ಆಶಿಸಿದಾಗ ಅವರನ್ನು ತಿದ್ದಿದನು. (ಲೂಕ 9:52-55) ಮತ್ತೊಂದು ಸಂದರ್ಭದಲ್ಲಿ, ಯಾಕೋಬ ಯೋಹಾನರ ತಾಯಿ ಯೇಸುವಿನ ಬಳಿ ಬಂದು ತನ್ನ ಗಂಡುಮಕ್ಕಳಿಗೆ ದೇವರ ರಾಜ್ಯದಲ್ಲಿ ಉನ್ನತ ಸ್ಥಾನ ಕೊಡಬೇಕೆಂದು ಬಿನ್ನವಿಸಿಕೊಂಡಳು. ಆಗ ನೇರವಾಗಿ ಅವರಿಬ್ಬರಿಗೆ ಯೇಸು, “ನನ್ನ ಬಲಗಡೆಯಲ್ಲಿ ಅಥವಾ ಎಡಗಡೆಯಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ; ಅದು ನನ್ನ ತಂದೆಯಿಂದ ಯಾರಿಗಾಗಿ ಸಿದ್ಧಪಡಿಸಲ್ಪಟ್ಟಿದೆಯೋ ಅವರಿಗೇ ಸೇರಿದ್ದಾಗಿದೆ” ಎಂದು ಹೇಳಿದನು. (ಮತ್ತಾ. 20:20-23) ಯೇಸು ನೀಡಿದ ಸಲಹೆ, ಬುದ್ಧಿವಾದಗಳು ಯಾವಾಗಲೂ ಸ್ಪಷ್ಟವಾಗಿದ್ದವು, ಅನ್ವಯಿಸಿಕೊಳ್ಳಲು ಸುಲಭವಾಗಿದ್ದವು, ಮೇಲಾಗಿ ಅವು ದೇವರ ವಾಕ್ಯದಲ್ಲಿದ್ದ ಮೂಲತತ್ವಗಳ ಮೇಲೆ ಆಧರಿತವಾಗಿದ್ದವು. ತನ್ನ ಶಿಷ್ಯರು ಅಂಥ ಮೂಲತತ್ವಗಳ ಬಗ್ಗೆ ಆಲೋಚಿಸಿ ಜೀವನದಲ್ಲಿ ಅಳವಡಿಸಿಕೊಳ್ಳಲು ಕಲಿಸಿದನು. (ಮತ್ತಾ. 17:24-27) ತನ್ನ ಹಿಂಬಾಲಕರ ಕುಂದುಕೊರತೆಗಳನ್ನು ಗಣನೆಗೆ ತೆಗೆದುಕೊಂಡನು. ಅವರಿಂದ ಪರಿಪೂರ್ಣತೆಯನ್ನು ಎದುರುನೋಡಲಿಲ್ಲ. ಅವನ ಸಲಹೆಯ ಹಿಂದೆ ಅಪ್ಪಟ ಪ್ರೀತಿ ಅಡಗಿತ್ತು.—ಯೋಹಾ. 13:1.

13, 14. (ಎ) ಯಾರಿಗೆ ಸಲಹೆಯ ಅಗತ್ಯವಿರುತ್ತದೆ? (ಬಿ) ಆಧ್ಯಾತ್ಮಿಕವಾಗಿ ಪ್ರಗತಿ ಆಗದಿರುವ ಒಬ್ಬರಿಗೆ ಹಿರಿಯರು ಯಾವ ರೀತಿಯಲ್ಲಿ ಸಲಹೆ ನೀಡಬಹುದು ಎನ್ನುವುದಕ್ಕೆ ಕೆಲವು ಉದಾಹರಣೆ ತಿಳಿಸಿ.

13 ಸೇವಾ ಸುಯೋಗಗಳಿಗೆ ಅರ್ಹತೆ ಪಡೆಯಲು ಪ್ರಯತ್ನಿಸುವ ಪ್ರತಿಯೊಬ್ಬ ಸಹೋದರನಿಗೂ ಒಂದಲ್ಲ ಒಂದು ಸಮಯದಲ್ಲಿ ಬೈಬಲ್‌ ಸಲಹೆ ಬೇಕೇಬೇಕಾಗುತ್ತದೆ. “ಜ್ಞಾನಿಯು ಉಚಿತಾಲೋಚನೆಯನ್ನು ಗಮನಿಸುವನು” ಎಂದು ಜ್ಞಾನೋಕ್ತಿ 12:15 ತಿಳಿಸುತ್ತದೆ. ಒಬ್ಬ ಯುವ ಪ್ರಾಯದ ಸಹೋದರನು ತನಗೆ ದೊರೆತ ಸಲಹೆಯ ಕುರಿತು ಹೀಗೆ ಹೇಳುತ್ತಾನೆ: ‘ಸೇವಾ ಸುಯೋಗ ಪಡೆದುಕೊಳ್ಳಲು ಅನರ್ಹ ಎಂಬ ಭಾವನೆ ನನ್ನಲ್ಲಿತ್ತು. ಹಿರಿಯರೊಬ್ಬರು ಸಲಹೆ ನೀಡಿ ನನ್ನನ್ನು ತಿದ್ದಿದರು. ಸೇವಾ ಸುಯೋಗಕ್ಕೆ ಪರಿಪೂರ್ಣತೆ ಬೇಕಿಲ್ಲವೆಂದು ಮನದಟ್ಟು ಮಾಡಿಸಿದರು.’

14 ಸಹೋದರನೊಬ್ಬನ ಆಧ್ಯಾತ್ಮಿಕ ಪ್ರಗತಿಗೆ ಅವನ ನಡತೆ ಅಡ್ಡಿಯಾಗುತ್ತಿದೆ ಎಂದು ಹಿರಿಯರು ಗಮನಿಸುವಲ್ಲಿ ಕೂಡಲೇ ಸೌಮ್ಯಭಾವದಿಂದ ತಿದ್ದಲು ಮುಂದಾಗಬೇಕು. (ಗಲಾ. 6:1) ಕೆಲವೊಮ್ಮೆ ಮನೋಭಾವವನ್ನು ಬದಲಾಯಿಸಿಕೊಳ್ಳುವಂತೆ ಸಲಹೆ ನೀಡಬೇಕಾಗುತ್ತದೆ. ಉದಾಹರಣೆಗೆ, ಸಹೋದರನೊಬ್ಬನು ತನ್ನಿಂದ ಸಾಧ್ಯವಿದ್ದರೂ ಶುಶ್ರೂಷೆಗೆ ಹೆಚ್ಚು ಶ್ರಮ ಹಾಕದಿರಬಹುದು. ಆಗ ಯೇಸುವಿನ ಮಾದರಿಯನ್ನು ಪರಿಗಣಿಸಲು ಹಿರಿಯರು ನೆರವು ನೀಡಬಹುದು. ಯೇಸು ಜನರಿಗೆ ಸುವಾರ್ತೆ ತಲಪಿಸಲಿಕ್ಕಾಗಿ ಬಹಳಷ್ಟು ಶ್ರಮ ವಹಿಸಿದನು. ಆ ಹುರುಪನ್ನು ಅವನ ಹಿಂಬಾಲಕರಾದ ನಾವು ಅನುಕರಿಸಬೇಕೆಂದು ಅವನಿಗೆ ಮಂದಟ್ಟು ಮಾಡಿಸಬಹುದು. (ಮತ್ತಾ. 28:19, 20; ಲೂಕ 8:1) ತಾನು ಇತರರಿಗಿಂತ ಶ್ರೇಷ್ಠನು ಎಂಬ ಭಾವನೆ ಒಬ್ಬ ಸಹೋದರನಲ್ಲಿ ಕಂಡುಬರುವಲ್ಲಿ ಅಂಥ ಭಾವನೆ ಇಟ್ಟುಕೊಳ್ಳಬಾರದು ಎಂದು ಯೇಸು ತನ್ನ ಶಿಷ್ಯರಿಗೆ ಕಲಿಸಿದ್ದಾನೆಂದು ಹಿರಿಯರು ವಿವರಿಸಬಹುದು. (ಲೂಕ 22:24-27) ಸಹೋದರನಲ್ಲಿ ಕ್ಷಮಾಭಾವ ಇಲ್ಲದಿದ್ದರೆ? ಸಾಲವನ್ನು ರದ್ದುಮಾಡಲು ಇಚ್ಛಿಸದ ಕೆಟ್ಟ ಆಳಿನ ದೃಷ್ಟಾಂತದ ಮೂಲಕ ಕ್ಷಮಾಭಾವದ ಪ್ರಾಮುಖ್ಯವನ್ನು ಅರ್ಥಮಾಡಿಸಬಹುದು. (ಮತ್ತಾ. 18:21-35) ಸಲಹೆ ನೀಡಬೇಕಾದ ಪ್ರಮೇಯ ಬಂದಲ್ಲಿ ಹಿರಿಯರು ಸ್ನೇಹಭಾವದಿಂದ ವಿಳಂಬಿಸದೆ ತಕ್ಷಣ ನೀಡಬೇಕು.ಜ್ಞಾನೋಕ್ತಿ 27:9 ಓದಿ.

‘ನಿಮ್ಮನ್ನು ತರಬೇತುಗೊಳಿಸಿಕೊಳ್ಳಿ’

15. ಸಭೆಗೆ ಸೇವೆ ಮಾಡಲು ಒಬ್ಬ ಸಹೋದರನಿಗೆ ಅವನ ಮನೆಮಂದಿ ಹೇಗೆ ಬೆಂಬಲ ನೀಡಬಲ್ಲರು?

15 ಸೇವಾ ಸುಯೋಗಗಳನ್ನು ಪಡೆದುಕೊಳ್ಳಲು ಸಹೋದರರಿಗೆ ನೆರವು ನೀಡುವುದರಲ್ಲಿ ಹಿರಿಯರದ್ದು ದೊಡ್ಡ ಪಾತ್ರವಾದರೂ ಇತರರು ಸಹ ನೆರವಾಗಬೇಕು. ಉದಾಹರಣೆಗೆ, ಸಹೋದರನ ಮನೆಮಂದಿ ಅವನ ಪ್ರಗತಿಗೆ ನೆರವಾಗಬೇಕು. ಅವನು ಈಗಾಗಲೇ ಹಿರಿಯನಾಗಿ ಸೇವೆ ಸಲ್ಲಿಸುತ್ತಿರುವಲ್ಲಿ ಅವನ ಪತ್ನಿ ಮಕ್ಕಳು ನಿಸ್ವಾರ್ಥದಿಂದ ನೀಡುವ ಪ್ರೀತಿಯ ಬೆಂಬಲ ಅಪಾರ ಪ್ರಯೋಜನ ಉಂಟುಮಾಡಬಲ್ಲದು. ಆತನು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಸಭೆಗಾಗಿಯೂ ಸ್ವಲ್ಪ ಸಮಯ ಮೀಸಲಿಡಬೇಕಾಗುತ್ತದೆ ಮತ್ತು ಆ ವಿಷಯದಲ್ಲಿ ಮನೆಮಂದಿ ನೀಡುವ ಸಹಕಾರ ದೊಡ್ಡದು. ಅವರ ತ್ಯಾಗ, ಸಿದ್ಧಮನಸ್ಸು ಸಂತೋಷದಿಂದ ಸೇವೆಸಲ್ಲಿಸುವಂತೆ ಅವನಿಗೆ ಸ್ಫೂರ್ತಿಯಾಗಿರಬಲ್ಲದು. ಮಾತ್ರವಲ್ಲ, ಇತರರು ಅದನ್ನು ಬಹಳ ಗಣ್ಯಮಾಡುವರು.—ಜ್ಞಾನೋ. 15:20; 31:10, 23.

16. (ಎ) ಸೇವಾ ಸುಯೋಗ ಪಡೆದುಕೊಳ್ಳಲು ಬೇಕಾದ ಅರ್ಹತೆ ಗಳಿಸುವುದು ಮುಖ್ಯವಾಗಿ ಯಾರ ಜವಾಬ್ದಾರಿ? (ಬಿ) ಒಬ್ಬನು ಸಭೆಯಲ್ಲಿ ಸೇವಾ ಸುಯೋಗಗಳನ್ನು ಪಡೆದುಕೊಳ್ಳಬೇಕಾದರೆ ಏನು ಮಾಡಬೇಕು?

16 ಇತರರು ನೆರವು ಬೆಂಬಲ ನೀಡುತ್ತಾರಾದರೂ ಸೇವಾ ಸುಯೋಗಕ್ಕಾಗಿ ಅರ್ಹನಾಗಲು ಸ್ವತಃ ಅವನೇ ಪ್ರಯತ್ನಿಸಬೇಕು. (ಗಲಾತ್ಯ 6:5 ಓದಿ.) ಇತರರ ಸೇವೆ ಮಾಡಲು ಮತ್ತು ಶುಶ್ರೂಷೆಯಲ್ಲಿ ಪೂರ್ಣವಾಗಿ ಭಾಗವಹಿಸಲು ಸಹೋದರನೊಬ್ಬನು ಶುಶ್ರೂಷಾ ಸೇವಕನೋ ಹಿರಿಯನೋ ಆಗಿರಬೇಕೆಂದಿಲ್ಲ ನಿಜ. ಹಾಗಿದ್ದರೂ ಆ ಸುಯೋಗವನ್ನು ಪಡೆದು ಸೇವೆ ಸಲ್ಲಿಸಲು ಅವನು ಇಷ್ಟಪಡುವುದಾದರೆ ಬೈಬಲ್‌ ತಿಳಿಸುವ ಅರ್ಹತೆಗಳನ್ನು ಮುಟ್ಟಬೇಕು. (1 ತಿಮೊ. 3:1-13; ತೀತ 1:5-9; 1 ಪೇತ್ರ 5:1-3) ಹಾಗಾಗಿ ಸೇವಾ ಸುಯೋಗಗಳಲ್ಲಿ ಆನಂದಿಸಲು ಇಷ್ಟಪಡುವ ಒಬ್ಬನು ಇಷ್ಟರವರೆಗೆ ಆ ನೇಮಕ ಪಡೆದುಕೊಂಡಿಲ್ಲವಾದರೆ ತಾನು ಯಾವ ವಿಷಯದಲ್ಲಿ ಪ್ರಗತಿ ಮಾಡಬೇಕೆಂದು ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ಬೈಬಲ್‌ ವಾಚನ, ವೈಯಕ್ತಿಕ ಅಧ್ಯಯನ, ಧ್ಯಾನ, ಹೃತ್ಪೂರ್ವಕ ಪ್ರಾರ್ಥನೆಯನ್ನು ತಪ್ಪದೆ ಮಾಡುವುದು ಮತ್ತು ಶುಶ್ರೂಷೆಯಲ್ಲಿ ಸದಾ ಹುರುಪಿನಿಂದ ಭಾಗವಹಿಸುವುದು ಅವನಿಗೆ ನೆರವಾಗುತ್ತದೆ. ಇವೆಲ್ಲವನ್ನೂ ಅವನು ಮಾಡುವಲ್ಲಿ ಪೌಲನ ಈ ಸಲಹೆಯನ್ನು ಪಾಲಿಸುತ್ತಿದ್ದಾನೆಂದು ಅರ್ಥ: “ದೇವಭಕ್ತಿಯನ್ನು ನಿನ್ನ ಗುರಿಯನ್ನಾಗಿ ಮಾಡಿಕೊಂಡು ನಿನ್ನನ್ನು ತರಬೇತುಗೊಳಿಸಿಕೊ.”—1 ತಿಮೊ. 4:7.

17, 18. ಅಸಮರ್ಥ ಭಾವನೆ ಇದ್ದಲ್ಲಿ ಅಥವಾ ಜವಾಬ್ದಾರಿ ವಹಿಸಿಕೊಳ್ಳುವ ವಾಂಛೆ ಇಲ್ಲದಿದ್ದಲ್ಲಿ ಸಹೋದರನೊಬ್ಬನು ಏನು ಮಾಡಬೇಕು?

17 ಅಸಮರ್ಥ ಭಾವನೆಯಿಂದ ಸಹೋದರನೊಬ್ಬನು ಶುಶ್ರೂಷಾ ಸೇವಕನೋ ಹಿರಿಯನೋ ಆಗಲು ಹಿಂದೇಟು ಹಾಕುವುದಾದರೆ ಆಗೇನು? ಯೆಹೋವ ದೇವರು ಹಾಗೂ ಯೇಸು ಕ್ರಿಸ್ತನು ನಮಗೆ ಎಷ್ಟೊಂದು ನೆರವು ನೀಡುತ್ತಾರೆ ಎಂಬುದರ ಕುರಿತು ಆತ ಆಲೋಚಿಸಬೇಕು. ಯೆಹೋವ ದೇವರು “ಅನುದಿನವೂ ನಮ್ಮ ಭಾರವನ್ನು ಹೊರು”ವುದಾಗಿ ವಚನವಿತ್ತಿದ್ದಾನೆ. (ಕೀರ್ತ. 68:19) ಹೌದು, ಸಭೆಯಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಸಹೋದರರಿಗೆ ದೇವರು ನೆರವಾಗುತ್ತಾನೆ. ಅದೇ ಸಮಯದಲ್ಲಿ ಸಭೆಯಲ್ಲಿ ಇನ್ನೂ ಶುಶ್ರೂಷಾ ಸೇವಕನೋ ಹಿರಿಯನೋ ಆಗಿರದ ಸಹೋದರನು ದೇವರ ಸಂಘಟನೆಯಲ್ಲಿ ಮುಂದಾಳತ್ವ ವಹಿಸಿಕೊಳ್ಳಲು ಹೆಚ್ಚಿನ ಸಹೋದರರ ಆವಶ್ಯಕತೆ ಇದೆ ಎನ್ನುವುದನ್ನು ಮನಸ್ಸಿನಲ್ಲಿಡಬೇಕು. ಮೇಲಿನ ವಿಷಯಗಳ ಕುರಿತು ಮನನ ಮಾಡುವುದು ಅರ್ಹತೆ ಗಳಿಸಲು ಪ್ರಯತ್ನಿಸುವಂತೆಯೂ ನಕಾರಾತ್ಮಕ ಭಾವನೆಗಳನ್ನು ಮೆಟ್ಟಿನಿಲ್ಲುವಂತೆಯೂ ಪ್ರೋತ್ಸಾಹಿಸುವುದು. ತನಗೆ ಪವಿತ್ರಾತ್ಮ ನೀಡುವಂತೆ ಸಹ ಆ ಸಹೋದರನು ದೇವರಲ್ಲಿ ಪ್ರಾರ್ಥಿಸಬೇಕು. ಅದು ಶಾಂತಿ ಮತ್ತು ಸ್ವನಿಯಂತ್ರಣದಂಥ ಗುಣಗಳನ್ನು ಬೆಳೆಸಿಕೊಳ್ಳಲು ಅವನಿಗೆ ನೆರವಾಗುವುದಲ್ಲದೇ ಅನರ್ಹ ಭಾವನೆಯನ್ನು ಹೊಡೆದೋಡಿಸುವುದು. (ಲೂಕ 11:13; ಗಲಾ. 5:22, 23) ಒಳ್ಳೇ ಇರಾದೆಯಿಂದ ಅರ್ಹತೆಗಳನ್ನು ತಲಪಲು ಶ್ರಮಿಸುತ್ತಿರುವವರ ಪ್ರಯತ್ನಗಳನ್ನು ಯೆಹೋವನು ಖಂಡಿತ ಆಶೀರ್ವದಿಸುವನು.

18 ಸಭೆಯಲ್ಲಿ ಜವಾಬ್ದಾರಿ ವಹಿಸಿಕೊಳ್ಳುವ ವಾಂಛೆ ಕೆಲವು ಸಹೋದರರಲ್ಲಿ ಇಲ್ಲದಿರಬಹುದು. ಅವರಿಗೆ ಯಾವುದು ನೆರವಾಗುತ್ತದೆ? “ಸುಸಂತೋಷದಿಂದ ನೀವು ಉದ್ದೇಶಿಸಿ ಕ್ರಿಯೆಗೈಯುವಂತೆ ನಿಮ್ಮಲ್ಲಿ ಕಾರ್ಯನಡಿಸುವಾತನು ದೇವರೇ ಆಗಿದ್ದಾನೆ” ಎಂದು ಪೌಲ ಹೇಳಿದ್ದಾನೆ. (ಫಿಲಿ. 2:13) ಹೌದು, ಜವಾಬ್ದಾರಿ ವಹಿಸಿಕೊಂಡು ಸೇವೆ ಸಲ್ಲಿಸಬೇಕು ಎನ್ನುವ ಇಚ್ಛೆಯನ್ನು ಬೆಳೆಸಿಕೊಳ್ಳಲು ದೇವರೇ ನೆರವಾಗುತ್ತಾನೆ. ಮಾತ್ರವಲ್ಲ, ಆ ಜವಾಬ್ದಾರಿಯನ್ನು ಸುಸೂತ್ರವಾಗಿ ಪೂರೈಸಲು ಬೇಕಾದ ಬಲವನ್ನೂ ಕೊಡುತ್ತಾನೆ. (ಫಿಲಿ. 4:13) ಹಾಗಾಗಿ ಸರಿಯಾದದ್ದನ್ನು ಮಾಡಲು ನೆರವಾಗುವಂತೆ ಅವರು ದೇವರಲ್ಲಿ ಬೇಡಿಕೊಳ್ಳಬೇಕು.—ಕೀರ್ತ. 25:4, 5.

19. ಯೆಹೋವ ದೇವರು “ಏಳು ಮಂದಿ ಪಾಲಕರನ್ನು, ಹೌದು, ಎಂಟು ಮಂದಿ ಪುರುಷಶ್ರೇಷ್ಠರನ್ನು” ಏರ್ಪಡಿಸುವುದರ ಅರ್ಥವೇನು?

19 ಇತರರನ್ನು ತರಬೇತುಗೊಳಿಸಲು ಹಿರೀಪುರುಷರು ತೆಗೆದುಕೊಳ್ಳುವ ಶ್ರಮವನ್ನು ಯೆಹೋವನು ಖಂಡಿತ ಹರಸುವನು. ಆ ತರಬೇತಿಯನ್ನು ಸ್ವೀಕರಿಸಿ ಸೇವಾ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮುಂದೆ ಬರುವವರು ಸಹ ದೇವರ ಆಶೀರ್ವಾದಗಳನ್ನು ಸವಿಯುವರು. ದೇವಜನರ ನಡುವೆ ಮುಂದಾಳತ್ವ ವಹಿಸಿಕೊಳ್ಳಲು ಸಾಕಷ್ಟು ಸಮರ್ಥ ಸಹೋದರರು ಇರುವರೆಂಬ ಖಾತ್ರಿಯನ್ನು ಬೈಬಲ್‌ ಕೊಡುತ್ತದೆ. “ಏಳು ಮಂದಿ ಪಾಲಕರನ್ನು, ಹೌದು, ಎಂಟು ಮಂದಿ ಪುರುಷಶ್ರೇಷ್ಠರನ್ನು” ಯೆಹೋವನು ಒದಗಿಸುವನೆಂದು ಅದು ನುಡಿಯುತ್ತದೆ. (ಮೀಕ 5:5) ಅದಕ್ಕೆ ತಕ್ಕಂತೆ ಇಂದು ಅನೇಕಾನೇಕ ಸಹೋದರರು ತರಬೇತು ಪಡೆದುಕೊಂಡು ಸೇವಾ ಸುಯೋಗಗಳನ್ನು ವಹಿಸಿಕೊಳ್ಳಲು ಅರ್ಹರಾಗುತ್ತಿದ್ದಾರೆ. ಅದು ಯೆಹೋವನನ್ನು ಮಹಿಮೆ ಪಡಿಸುತ್ತದೆ. ನಮಗೂ ಆಶೀರ್ವಾದ ತರುತ್ತದೆ!

ಉತ್ತರಿಸುವಿರಾ?

• ಭಾರಿ ಜವಾಬ್ದಾರಿ ಹೊತ್ತುಕೊಳ್ಳಲು ಸಮರ್ಥರಾಗುವಂತೆ ಯೇಸು ತನ್ನ ಶಿಷ್ಯರಿಗೆ ಹೇಗೆ ನೆರವು ನೀಡಿದನು?

• ಯೇಸುವನ್ನು ಅನುಕರಿಸುತ್ತಾ ಹಿರಿಯರು ಹೇಗೆ ಸಹೋದರರಿಗೆ ತರಬೇತು ನೀಡಿ ಮುಂದಾಳತ್ವ ವಹಿಸಿಕೊಳ್ಳಲು ನೆರವಾಗಬೇಕು?

• ಸೇವಾ ಸುಯೋಗಗಳನ್ನು ಪಡೆದುಕೊಳ್ಳಲು ಒಬ್ಬನಿಗೆ ಮನೆಮಂದಿ ಯಾವ ನೆರವು ನೀಡಬೇಕು?

• ಸೇವಾ ಸುಯೋಗಕ್ಕಾಗಿ ಅರ್ಹನಾಗಲು ಸಹೋದರನೊಬ್ಬನು ಯಾವ ಪ್ರಯತ್ನ ಹಾಕಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 31ರಲ್ಲಿರುವ ಚಿತ್ರ]

ಬೈಬಲ್‌ ವಿದ್ಯಾರ್ಥಿ ಪ್ರಗತಿ ಮಾಡಲು ಯಾವ ರೀತಿಯಲ್ಲಿ ತರಬೇತಿ ನೀಡುವಿರಿ?

[ಪುಟ 32ರಲ್ಲಿರುವ ಚಿತ್ರ]

ಸೇವಾ ಸುಯೋಗಕ್ಕಾಗಿರುವ ಅರ್ಹತೆಗಳನ್ನು ತಲಪುತ್ತಿದ್ದೀರಿ ಎಂದು ಹೇಗೆ ತೋರಿಸಬಲ್ಲಿರಿ?