ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳಬೇಡಿ

ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳಬೇಡಿ

ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳಬೇಡಿ

“ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.” —ಜ್ಞಾನೋ. 3:5.

1, 2. (ಎ) ಯಾವ ಪರಿಸ್ಥಿತಿಗಳು ನಮಗೆ ಎದುರಾಗಬಹುದು? (ಬಿ) ಸಂಕಷ್ಟದಲ್ಲಿರುವಾಗ, ನಿರ್ಣಯ ಮಾಡಲಿಕ್ಕಿರುವಾಗ ಅಥವಾ ಪ್ರಲೋಭನೆ ನಿಗ್ರಹಿಸುವಾಗ ನಾವು ಯಾರ ಮೇಲೆ ಹೊಂದಿಕೊಳ್ಳಬೇಕು? ಏಕೆ?

ಸಿಂತಿಯಾ ಕೆಲಸಮಾಡುತ್ತಿದ್ದ ಆಫೀಸಿನ ಧಣಿ ತನ್ನ ಕಂಪನಿಯ ಬಹುಭಾಗವನ್ನು ಮುಚ್ಚಿದ್ದರು. * ಅನೇಕರನ್ನು ಕೆಲಸದಿಂದ ತೆಗೆದುಹಾಕಿದ್ದರು. ಈಗ ಸರದಿ ತನ್ನದೇನೋ ಎಂಬ ಭಯ ಸಿಂತಿಯಾಳಿಗೆ. ‘ಕೆಲಸ ಹೋದರೆ ಮುಂದೇನು ಗತಿ? ಮನೆ ಖರ್ಚಿಗೆ ಏನು ಮಾಡುವುದು?’ ಎಂಬೆಲ್ಲಾ ಚಿಂತೆಗಳ ಅಲೆ ಸಿಂತಿಯಾಳ ಮನದಲ್ಲಿ. ಪ್ಯಾಮಲ ಎಂಬ ಕ್ರೈಸ್ತ ಸಹೋದರಿಗೆ ರಾಜ್ಯ ಪ್ರಚಾರಕರ ಹೆಚ್ಚು ಅಗತ್ಯವಿರುವ ಸ್ಥಳಕ್ಕೆ ಹೋಗಿ ಸೇವೆ ಮಾಡಬೇಕೆಂಬುದು ಬಹು ದಿನಗಳ ಕನಸು. ಈಗ ಅವಕಾಶ ಮುಂದಿದೆ, ನಿರ್ಣಯ ತಕ್ಕೊಳ್ಳಬೇಕು. ಸ್ಯಾಮ್ವೆಲ್‌ ಎಂಬ ತರುಣನದು ಬೇರೊಂದು ಸಮಸ್ಯೆ. ಚಿಕ್ಕ ವಯಸ್ಸಿನಲ್ಲೇ ಕಾಮಪ್ರಚೋದಕ ಚಿತ್ರಗಳನ್ನು ನೋಡುವ ಚಾಳಿಗೆ ಬಲಿಯಾಗಿದ್ದ. 20ರ ಪ್ರಾಯವನ್ನು ದಾಟಿದ ಅವನಿಗೆ ಈಗ ಮತ್ತೆ ಅವುಗಳ ಕಡೆಗೆ ಬಲವಾದ ಸೆಳೆತ. ಆ ಪ್ರಲೋಭನೆಯನ್ನು ಅವನು ನಿಗ್ರಹಿಸುವುದು ಹೇಗೆ?

2 ಕಷ್ಟಮಯ ಸನ್ನಿವೇಶದಲ್ಲಿರುವಾಗ, ಪ್ರಾಮುಖ್ಯ ನಿರ್ಣಯಗಳನ್ನು ಮಾಡಬೇಕಿರುವಾಗ ಇಲ್ಲವೆ ಪ್ರಲೋಭನೆಗಳನ್ನು ನಿಗ್ರಹಿಸುವಾಗ ಯಾರ ಮೇಲೆ ನೀವು ಹೊಂದಿಕೊಳ್ಳುವಿರಿ? ಸ್ವತಃ ನಿಮ್ಮ ಮೇಲೆ ಪೂರ್ಣವಾಗಿ ಹೊಂದಿಕೊಳ್ಳುವಿರಾ? ಅಥವಾ “ಚಿಂತಾಭಾರವನ್ನು ಯೆಹೋವನ ಮೇಲೆ” ಹಾಕುವಿರಾ? (ಕೀರ್ತ. 55:22) “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ” ಎಂದು ಬೈಬಲ್‌ ಹೇಳುತ್ತದೆ. (ಕೀರ್ತ. 34:15) ಆದ್ದರಿಂದ ನಾವು ಸ್ವಬುದ್ಧಿಯನ್ನು ಆಧಾರ ಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡುವುದು ಅತ್ಯಗತ್ಯ.—ಜ್ಞಾನೋ. 3:5.

3. (ಎ) ಯೆಹೋವನಲ್ಲಿ ಭರವಸೆಯಿಡುವುದರ ಅರ್ಥವೇನು? (ಬಿ) ಕೆಲವರು ಸ್ವಬುದ್ಧಿಯನ್ನು ಆಧಾರ ಮಾಡಿಕೊಳ್ಳಲು ಕಾರಣ ಏನಿರಬಹುದು?

3 ಯೆಹೋವನಲ್ಲಿ ಪೂರ್ಣ ಭರವಸೆ ಇಡುವುದರ ಅರ್ಥವೇನು? ನಾವು ಏನೇ ಮಾಡಿದರೂ ಆತನು ಹೇಳುವಂತೆ, ಆತನ ಇಚ್ಛೆಗನುಸಾರ ಮಾಡುತ್ತೇವೆ ಎನ್ನುವುದೇ ಅರ್ಥ. ನಾವು ಹಾಗೆ ಮಾಡಲು ಆತನ ಬಳಿ ಸತತವಾಗಿ ಪ್ರಾರ್ಥಿಸುವುದು ಮತ್ತು ಹೃದಯಾಳದಿಂದ ಆತನ ಮಾರ್ಗದರ್ಶನೆಯನ್ನು ಕೋರುವುದು ಅಗತ್ಯ. ಕೆಲವರಿಗೆ ಯೆಹೋವನ ಮೇಲೆ ಸಂಪೂರ್ಣವಾಗಿ ಭರವಸೆಯಿಡುವುದು ಸುಲಭವಾಗಿರುವುದಿಲ್ಲ. ಇದಕ್ಕೊಂದು ಉದಾಹರಣೆ ಲಿನ್‌ ಎಂಬ ಕ್ರೈಸ್ತ ಸಹೋದರಿ. “ಯೆಹೋವನಲ್ಲಿ ಸಂಪೂರ್ಣ ಭರವಸೆಯಿಡುವುದು ಹೆಜ್ಜೆ ಹೆಜ್ಜೆಗೂ ನನಗೆ ಸವಾಲಾಗಿದೆ” ಎನ್ನುವುದು ಅವಳ ಅಳಲು. ಹೀಗೇಕೆ? “ಅಪ್ಪನ ಪ್ರೀತಿ ನನಗೆ ಸಿಗಲಿಲ್ಲ, ಅಮ್ಮ ಕೂಡ ನನ್ನನ್ನು ಮಮತೆಯ ಸುಧೆಯಲ್ಲಿ ಬೆಳೆಸಲಿಲ್ಲ. ನನ್ನ ಬೇಕುಬೇಡಗಳನ್ನು ಅಕ್ಕರೆಯಿಂದ ನೋಡಿಕೊಳ್ಳಲಿಲ್ಲ. ಚಿಕ್ಕ ವಯಸ್ಸಿನಲ್ಲೇ ಸ್ವಾವಲಂಬಿಯಾಗಿ ಬೆಳೆದೆ” ಎನ್ನುವುದು ಆಕೆಯ ಉತ್ತರ. ಹಿಂದಿನ ಕಹಿ ಅನುಭವದಿಂದಾಗಿ ಬೇರೆಯವರನ್ನು ಪೂರ್ಣವಾಗಿ ನಂಬುವುದು ಅವಳಿಗೆ ಕಷ್ಟವಾಗುತ್ತಿತ್ತು. ಒಬ್ಬ ವ್ಯಕ್ತಿಯಲ್ಲಿರುವ ಸಾಮರ್ಥ್ಯ ಹಾಗೂ ಅವನು ಹಿಂದೆ ಗಳಿಸಿದ ಯಶಸ್ಸು ಸಹ ಸ್ವಬುದ್ಧಿಯನ್ನು ನೆಚ್ಚಿಕೊಳ್ಳುವಂತೆ ಮಾಡೀತು. ಒಬ್ಬ ಹಿರಿಯನು ತನಗಿರುವ ಅನುಭವವನ್ನು ಮಾತ್ರವೇ ನೆಚ್ಚಿಕೊಂಡರೆ ಸಭೆಗೆ ಸಂಬಂಧಿಸಿದ ವಿಚಾರಗಳನ್ನು ನಿರ್ವಹಿಸುವಾಗ ಪ್ರಾರ್ಥನೆಯ ಮೂಲಕ ದೇವರ ಸಹಾಯ ಕೋರದೆ ತನಗೆ ಸರಿತೋಚಿದಂತೆ ಮಾಡಿಬಿಡಬಹುದು.

4. ಈ ಲೇಖನದಲ್ಲಿ ಏನನ್ನು ಚರ್ಚಿಸುವೆವು?

4 ಯೆಹೋವ ದೇವರ ಅಪೇಕ್ಷೆ ಏನೆಂದರೆ ನಾವು ನಮ್ಮ ಪ್ರಾರ್ಥನೆಗೆ ಹೊಂದಿಕೆಯಲ್ಲಿ ನಡೆಯಲು ಮತ್ತು ಆತನ ಚಿತ್ತಾನುಸಾರ ಕಾರ್ಯವೆಸಗಲು ಯಥಾರ್ಥವಾಗಿ ಪ್ರಯತ್ನಿಸಬೇಕು ಎಂದಾಗಿದೆ. ನಾವು ಸಂಕಷ್ಟದಲ್ಲಿರುವಾಗ ನಮ್ಮ ಭಾರವನ್ನು ಯೆಹೋವನ ಮೇಲೆ ಹಾಕಿ ಅದೇ ಸಮಯದಲ್ಲಿ ಅದನ್ನು ನಿಭಾಯಿಸಲು ಹೇಗೆ ಹೆಜ್ಜೆ ತಕ್ಕೊಳ್ಳಬಹುದು? ನಿರ್ಣಯಗಳನ್ನು ಮಾಡಬೇಕಾದಾಗ ಯಾವ ಎಚ್ಚರಿಕೆ ವಹಿಸಬೇಕು? ಪ್ರಲೋಭನೆಗಳನ್ನು ನಿಗ್ರಹಿಸುವಾಗ ಪ್ರಾರ್ಥನೆ ತುಂಬ ಪ್ರಾಮುಖ್ಯವೇಕೆ? ಈ ಪ್ರಶ್ನೆಗಳಿಗೆ ಉತ್ತರವನ್ನು ಬೈಬಲ್‌ ಉದಾಹರಣೆಗಳ ಮೂಲಕ ತಿಳಿಯೋಣ.

ಸಂಕಷ್ಟದಲ್ಲಿ ಸಿಲುಕಿರುವಾಗ . . .

5, 6. ಅಶ್ಶೂರದ ರಾಜನು ಬೆದರಿಕೆ ಒಡ್ಡಿದಾಗ ಹಿಜ್ಕೀಯನು ಏನು ಮಾಡಿದನು?

5 ಯೆಹೂದದ ಅರಸ ಹಿಜ್ಕೀಯನ ಕುರಿತು ಬೈಬಲ್‌ ಹೀಗನ್ನುತ್ತದೆ: “ಇವನು ಯೆಹೋವನನ್ನೇ ಹೊಂದಿಕೊಂಡು ಆತನನ್ನು ಬಿಡದೆ ಹಿಂಬಾಲಿಸಿ ಆತನು ಮೋಶೆಯ ಮುಖಾಂತರವಾಗಿ ಅನುಗ್ರಹಿಸಿದ ಆಜ್ಞೆಗಳನ್ನು ಕೈಕೊಂಡನು.” ಹೌದು ಹಿಜ್ಕೀಯನು “ಇಸ್ರಾಯೇಲ್‌ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದನು.” (2 ಅರ. 18:5, 6) ಒಮ್ಮೆ ಏನಾಯಿತೆಂದು ಗಮನಿಸಿ. ಅಶ್ಶೂರದ ಅರಸ ಸನ್ಹೇರೀಬನು ರಬ್ಷಾಕೆಯೊಂದಿಗೆ ತನ್ನ ಇತರ ಪ್ರತಿನಿಧಿಗಳನ್ನು ಮತ್ತು ದೊಡ್ಡ ಮಿಲಿಟರಿ ಪಡೆಯನ್ನು ಯೆರೂಸಲೇಮಿನ ಮೇಲೆ ಆಕ್ರಮಣ ಮಾಡಲು ಕಳುಹಿಸಿದನು. ಅದು ಸಾಧಾರಣ ಸೈನ್ಯವಾಗಿರಲಿಲ್ಲ. ಈಗಾಗಲೇ ಯೆಹೂದದ ಅನೇಕ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ವಶಪಡಿಸಿಕೊಂಡು ವಿಜೃಂಭಿಸುತ್ತಾ ಇತ್ತು. ಸಂಕಷ್ಟದಲ್ಲಿ ಸಿಲುಕಿದ ಹಿಜ್ಕೀಯನು ಹೇಗೆ ಪ್ರತಿಕ್ರಿಯಿಸಿದನು? ದೇವಾಲಯಕ್ಕೆ ಹೋಗಿ ಯೆಹೋವನಿಗೆ ಮೊರೆಯಿಟ್ಟನು. “ಯೆಹೋವನೇ, ನಮ್ಮ ದೇವರೇ, ನೀನೊಬ್ಬನೇ ದೇವರೆಂಬದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು ಎಂದು ಪ್ರಾರ್ಥಿಸಿದನು.”—2 ಅರ. 19:14-19.

6 ಹಿಜ್ಕೀಯನು ಪ್ರಾರ್ಥಿಸಿದ್ದಲ್ಲದೆ ಅದಕ್ಕೆ ಹೊಂದಿಕೆಯಲ್ಲಿ ಕಾರ್ಯವೆಸಗಿದನು. ದೇವಾಲಯಕ್ಕೆ ಹೋಗುವ ಮುನ್ನವೇ ಅವನು ರಬ್ಷಾಕೆಯ ಮೂದಲಿಸುವಿಕೆಗೆ ಎದುರುತ್ತರ ಕೊಡಬಾರದೆಂದು ಜನರಿಗೆ ಆಜ್ಞಾಪಿಸಿದ್ದನು. ಮಾತ್ರವಲ್ಲ ಪ್ರವಾದಿ ಯೆಶಾಯನಿಂದ ಮಾರ್ಗದರ್ಶನ ಪಡೆದುಕೊಳ್ಳಲಿಕ್ಕಾಗಿ ಕೆಲವರನ್ನು ಕಳುಹಿಸಿದ್ದನು. (2 ಅರ. 18:36; 19:1, 2) ಹಿಜ್ಕೀಯನು ಸರಿಯಾದ ಹೆಜ್ಜೆಗಳನ್ನೇ ತಕ್ಕೊಂಡನು. ಸಮಸ್ಯೆಯನ್ನು ಬಗೆಹರಿಸಲು ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ಹೋಗಿ ಈಜಿಪ್ಟ್‌ ಅಥವಾ ನೆರೆರಾಷ್ಟ್ರಗಳ ಸಹಾಯ ಕೋರಲಿಲ್ಲ. ಅವನು ಸ್ವಬುದ್ಧಿಯನ್ನು ಆಧಾರಮಾಡಿಕೊಳ್ಳದೆ ಯೆಹೋವನಲ್ಲಿ ಪೂರ್ಣ ಭರವಸೆಯಿಟ್ಟನು. ಪರಿಣಾಮವಾಗಿ ಯೆಹೋವನ ದೂತನು ಸನ್ಹೇರೀಬನ 1,85,000 ಸೈನಿಕರನ್ನು ಹತಿಸಿದನು. ಸನ್ಹೇರೀಬನು ನಿನೆವೆ ಪಟ್ಟಣಕ್ಕೆ “ಹಿಂದಿರುಗಿ” ಹೋಗದೆ ಬೇರೆ ದಾರಿಯಿರಲಿಲ್ಲ.—2 ಅರ. 19:35, 36.

7. ಹನ್ನ ಮತ್ತು ಯೋನನ ಪ್ರಾರ್ಥನೆಯಿಂದ ನಾವು ಯಾವ ಸಾಂತ್ವನ ಪಡೆಯಸಾಧ್ಯವಿದೆ?

7 ಲೇವಿಯನಾದ ಎಲ್ಕಾನನ ಪತ್ನಿ ಹನ್ನ ತನ್ನ ಬಂಜೆತನದ ಸ್ಥಿತಿಯಿಂದಾಗಿ ಅತೀವ ದುಃಖದಲ್ಲಿ ಮುಳುಗಿದ್ದ ಸಮಯದಲ್ಲಿ ಯೆಹೋವನ ಮೇಲೆ ಬಹಳವಾಗಿ ಹೊಂದಿಕೊಂಡಳು. (1 ಸಮು. 1:9-11, 18) ಪ್ರವಾದಿ ಯೋನ ಮೀನಿನ ಹೊಟ್ಟೆಯಲ್ಲಿದ್ದಾಗ ತುಂಬು ಭರವಸೆಯಿಂದ ಪ್ರಾರ್ಥಿಸಿದ್ದನು: “ಇಕ್ಕಟ್ಟಿನಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ಆತನು ನನಗೆ ಸದುತ್ತರವನ್ನು ದಯಪಾಲಿಸಿದನು; ಪಾತಾಳದ ಗರ್ಭದೊಳಗಿಂದ ಕೂಗಿಕೊಂಡೆನು, ಆಹಾ, ನನ್ನ ಧ್ವನಿಯನ್ನು ಲಾಲಿಸಿದಿ.” ಹೌದು ಯೆಹೋವನು ಅವನನ್ನು ರಕ್ಷಿಸಿದನು. (ಯೋನ 2:1, 2, 10) ಯಾವುದೇ ಅಸಾಧ್ಯ ಸನ್ನಿವೇಶದಲ್ಲಿ ನಾವಿದ್ದರೂ ಸಹಾಯಕ್ಕಾಗಿ ಯೆಹೋವನಿಗೆ “ವಿಜ್ಞಾಪನೆ” ಮಾಡಸಾಧ್ಯವಿದೆ.ಕೀರ್ತನೆ 55:1, 16 ಓದಿ.

8, 9. ಹಿಜ್ಕೀಯ, ಹನ್ನ, ಯೋನರ ಪ್ರಾರ್ಥನೆ ತೋರಿಸುವಂತೆ ಯಾವುದು ಅವರ ಪ್ರಧಾನ ಚಿಂತೆಯಾಗಿತ್ತು? ಇದರಿಂದ ನಾವು ಯಾವ ಪಾಠ ಕಲಿಯುತ್ತೇವೆ?

8 ಹಿಜ್ಕೀಯ, ಹನ್ನ, ಯೋನರ ಪ್ರಾರ್ಥನೆಗಳಿಂದ ನಾವೊಂದು ಪ್ರಾಮುಖ್ಯ ಪಾಠವನ್ನು ಕಲಿಯುತ್ತೇವೆ. ಕಷ್ಟಸಂಕಟದಿಂದ ಜರ್ಜರಿತರಾಗಿ ಪ್ರಾರ್ಥಿಸುವಾಗ ಏನನ್ನು ಮರೆತುಬಿಡಬಾರದು ಎಂದು ಅವು ತೋರಿಸುತ್ತವೆ. ಈ ಮೂವರು ತೀವ್ರ ಸಂಕಷ್ಟದ ಸಮಯದಲ್ಲಿ ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದರು ನಿಜ. ಆದರೆ ಅವರಿಗೆ ಕೇವಲ ತಮ್ಮ ಬಗ್ಗೆ ಮತ್ತು ತಮ್ಮ ಸಮಸ್ಯೆಯ ನಿವಾರಣೆಯ ಬಗ್ಗೆ ಮಾತ್ರವೇ ಚಿಂತೆಯಿರಲಿಲ್ಲ. ದೇವರ ನಾಮದ ಬಗ್ಗೆ, ಆತನ ಆರಾಧನೆ ಹಾಗೂ ಚಿತ್ತವನ್ನು ಮಾಡುವುದರ ಬಗ್ಗೆಯೂ ಕಾಳಜಿಯಿತ್ತು. ಇವು ಅವರಿಗೆ ಪ್ರಧಾನ ವಿಷಯಗಳಾಗಿದ್ದವು. ಹಿಜ್ಕೀಯನು ಯೆಹೋವನ ನಾಮಕ್ಕೆ ಆದ ನಿಂದೆಯ ವಿಷಯದಲ್ಲಿ ನೊಂದನು. ಹನ್ನಳು ಯಾವುದಕ್ಕಾಗಿ ಹಂಬಲಿಸಿದ್ದಳೋ ಆ ತನ್ನ ಕರುಳಿನ ಕುಡಿಯನ್ನೇ ಶಿಲೋವಿನಲ್ಲಿದ್ದ ದೇವದರ್ಶನ ಗುಡಾರದಲ್ಲಿ ಸೇವೆಮಾಡಲು ಅರ್ಪಿಸುವುದಾಗಿ ದೇವರಿಗೆ ವಚನಕೊಟ್ಟಳು. ಯೋನನು, “[ನಾನಾದರೋ] ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು” ಎಂದು ದೇವರಿಗೆ ಪ್ರಾರ್ಥಿಸಿದನು.—ಯೋನ 2:9.

9 ಸಂಕಷ್ಟವನ್ನು ನಿವಾರಿಸುವಂತೆ ನಾವು ದೇವರಲ್ಲಿ ಪ್ರಾರ್ಥಿಸುವ ಮುನ್ನ ನಮ್ಮನ್ನು ನಾವೇ ಪರಿಶೀಲಿಸಿಕೊಳ್ಳುವುದು ಉತ್ತಮ. ಸಮಸ್ಯೆಯಿಂದ ಮುಕ್ತರಾಗುವುದೊಂದೇ ನಮ್ಮ ಚಿಂತೆಯಾಗಿದೆಯಾ? ಅಥವಾ ಯೆಹೋವನನ್ನು ಮತ್ತು ಆತನ ಉದ್ದೇಶವನ್ನು ನಾವು ಮನಸ್ಸಿನಲ್ಲಿಟ್ಟಿದ್ದೇವಾ? ನಮಗಿರುವ ಸಂಕಷ್ಟಗಳು ನಮಗೊದಗಿ ಬಂದ ಪರಿಸ್ಥಿತಿಯ ಬಗ್ಗೆಯೇ ಅತಿಯಾಗಿ ಚಿಂತಿಸುವಂತೆ ಮಾಡಬಲ್ಲವು. ಮಾತ್ರವಲ್ಲ ಆಧ್ಯಾತ್ಮಿಕ ವಿಚಾರಗಳು ನಮ್ಮ ಮನಸ್ಸಿನಲ್ಲಿ ಮೇಲೇಳದಂತೆ ಅದುಮಿಬಿಡಬಲ್ಲವು. ಆದ್ದರಿಂದ ಸಹಾಯಕ್ಕಾಗಿ ಯೆಹೋವನಲ್ಲಿ ಮೊರೆಯಿಡುವಾಗ ಆತನ ಕುರಿತು, ಆತನ ನಾಮದ ಪವಿತ್ರೀಕರಣ ಹಾಗೂ ಪರಮಾಧಿಕಾರದ ನಿರ್ದೋಷೀಕರಣದ ಕುರಿತು ನಮಗಿರುವ ಕಾಳಜಿಯನ್ನು ವ್ಯಕ್ತಪಡಿಸಲು ಮರೆಯದಿರೋಣ. ಹಾತೊರೆಯುವ ವಿಷಯವು ಕೈಗೂಡದೆ ಹೋದರೂ ನಾವು ಧೃತಿಗೆಡದಿರಲು ಇದು ಸಹಾಯ ಮಾಡುತ್ತದೆ. ಕೆಲವೊಮ್ಮೆ ನಮ್ಮ ಪ್ರಾರ್ಥನೆಗೆ ಉತ್ತರವು, ದೇವರ ಸಹಾಯದಿಂದ ಆ ಕಷ್ಟವನ್ನು ನಾವು ಸಹಿಸಿಕೊಳ್ಳಬೇಕು ಎಂದಾಗಿರುತ್ತದೆ ಎಂಬದನ್ನು ನೆನಪಿನಲ್ಲಿಡಿ.ಯೆಶಾಯ 40:29; ಫಿಲಿಪ್ಪಿ 4:13 ಓದಿ.

ನಿರ್ಣಯ ತೆಗೆದುಕೊಳ್ಳುವಾಗ . . .

10, 11. ಏನು ಮಾಡುವುದೆಂದು ತೋಚದ ಪರಿಸ್ಥಿತಿಯಲ್ಲಿ ಯೆಹೋಷಾಫಾಟನು ಯಾವ ಹೆಜ್ಜೆ ತೆಗೆದುಕೊಂಡನು?

10 ಗಂಭೀರ ನಿರ್ಣಯಗಳನ್ನು ಮಾಡುವಾಗ ನೀವು ಯಾವ ಹೆಜ್ಜೆ ತೆಗೆದುಕೊಳ್ಳುತ್ತೀರಿ? ಮೊದಲೇ ನಿರ್ಣಯ ತೆಗೆದುಕೊಂಡು ನಂತರ ಅದನ್ನು ಆಶೀರ್ವದಿಸುವಂತೆ ಯೆಹೋವನಲ್ಲಿ ಪ್ರಾರ್ಥಿಸುತ್ತೀರಾ? ಯೆಹೂದ ರಾಜ ಯೆಹೋಷಾಫಾಟನ ಉದಾಹರಣೆ ಗಮನಿಸಿ. ಒಮ್ಮೆ ಅವನ ವಿರುದ್ಧ ಮೋವಾಬ್ಯರೂ ಅಮ್ಮೋನ್ಯರೂ ಜೊತೆಯಾಗಿ ದಂಡೆತ್ತಿ ಬಂದರು. ಆ ದೊಡ್ಡ ಸೈನ್ಯವನ್ನು ಎದುರಿಸುವ ಶಕ್ತಿ ಯೆಹೂದಕ್ಕೆ ಇರಲಿಲ್ಲ. ಆಗ ಅರಸ ಯೆಹೋಷಾಫಾಟನು ಏನು ಮಾಡಿದನು?

11 “ಯೆಹೋಷಾಫಾಟನು ಹೆದರಿ ಯೆಹೋವನನ್ನೇ ಆಶ್ರಯಿಸಿಕೊಳ್ಳಬೇಕೆಂದು ನಿರ್ಣಯಿಸಿ”ಕೊಂಡನು ಎಂದು ಬೈಬಲ್‌ ಉತ್ತರಿಸುತ್ತದೆ. ಅವನು ಉಪವಾಸ ಮಾಡುವಂತೆ ಯೆಹೂದ್ಯರೆಲ್ಲರಿಗೆ ಪ್ರಕಟಿಸಿದ್ದಲ್ಲದೆ “ಯೆಹೋವನ ಸಹಾಯವನ್ನು ಕೇಳಿಕೊಳ್ಳುವದಕ್ಕಾಗಿ” ಜನರೆಲ್ಲರನ್ನೂ ಒಟ್ಟುಸೇರಿಸಿದನು. ಯೆಹೂದದವರೂ ಯೆರೂಸಲೇಮಿನವರೂ ಸಭೆಯಾಗಿ ನೆರೆದುಬಂದಾಗ ಅವನು ಎದ್ದು ನಿಂತು ಪ್ರಾರ್ಥಿಸಿದನು: “ನಮ್ಮ ದೇವರೇ, ಅವರನ್ನು ದಂಡಿಸದೆ ಬಿಡುವಿಯೋ? ನಮ್ಮ ಮೇಲೆ ಬಂದ ಈ ಮಹಾಸಮೂಹದ ಮುಂದೆ ನಿಲ್ಲುವದಕ್ಕೆ ನಮ್ಮಲ್ಲಿ ಬಲವಿಲ್ಲ, ಏನು ಮಾಡಬೇಕೆಂಬದೂ ತಿಳಿಯದು; ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತವೆ.” ಸತ್ಯ ದೇವರು ಯೆಹೋಷಾಫಾಟನ ಮೊರೆಯನ್ನು ಲಾಲಿಸಿ ಅದ್ಭುತಕರವಾಗಿ ಶತ್ರುಗಳಿಗೆ ತುತ್ತಾಗದಂತೆ ರಕ್ಷಿಸಿದನು. (2 ಪೂರ್ವ. 20:3-12, 17) ನಾವು ಕೂಡ ನಿರ್ಣಯಗಳನ್ನು ಮಾಡುವಾಗ, ಅದರಲ್ಲೂ ನಮ್ಮ ಆಧ್ಯಾತ್ಮಿಕತೆಯ ಮೇಲೆ ಪರಿಣಾಮ ಬೀರುವಂಥ ನಿರ್ಣಯ ಮಾಡುವಾಗ ಸ್ವಬುದ್ಧಿಯನ್ನು ಆಧಾರಮಾಡಿಕೊಳ್ಳದೆ ಯೆಹೋವನ ಮೇಲೆ ಆತುಕೊಳ್ಳಬೇಕು.

12, 13. ನಿರ್ಣಯಗಳನ್ನು ಮಾಡುವ ವಿಷಯದಲ್ಲಿ ರಾಜ ದಾವೀದ ಯಾವ ಮಾದರಿ ಇಟ್ಟಿದ್ದಾನೆ?

12 ಕೆಲವೊಮ್ಮೆ ಸಮಸ್ಯೆಯೊಂದನ್ನು ಸುಲಭವಾಗಿ ನಿರ್ವಹಿಸಸಾಧ್ಯವೆಂದು ತೋರಬಹುದು. ಹಿಂದೆ ಗಳಿಸಿದ ಅನುಭವದಿಂದಾಗಿ ಕ್ಷಣಾರ್ಧದಲ್ಲೇ ಪರಿಹಾರ ಕಂಡುಕೊಳ್ಳಸಾಧ್ಯವೆಂದು ನಮಗನಿಸಬಹುದು. ಅಂಥ ಸಂದರ್ಭದಲ್ಲಿ ನಾವು ಯಾವ ಹೆಜ್ಜೆ ತೆಗೆದುಕೊಳ್ಳಬೇಕು? ರಾಜ ದಾವೀದನ ಕುರಿತ ವೃತ್ತಾಂತವೊಂದು ಈ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. ಒಮ್ಮೆ ಅಮಾಲೇಕ್ಯರು ಚಿಕ್ಲಗ್‌ ಊರಿನ ಮೇಲೆ ಆಕ್ರಮಣ ಮಾಡಿ ದಾವೀದನ ಮತ್ತು ಅವನ ಸೇವಕರ ಹೆಂಡತಿಯರನ್ನೂ ಮಕ್ಕಳನ್ನೂ ಸೆರೆ ಒಯ್ದರು. ದಾವೀದ ಏನು ಮಾಡಿದನು? “ನಾನು ಆ ಗುಂಪನ್ನು ಹಿಂದಟ್ಟಬಹುದೋ?” ಎಂದು ಯೆಹೋವನಲ್ಲಿ ವಿಚಾರಿಸಿದನು. ಅದಕ್ಕೆ “ಹಿಂದಟ್ಟು, ಅದು ನಿನಗೆ ಸಿಕ್ಕುವದು; ನೀನು ಎಲ್ಲರನ್ನೂ ಬಿಡಿಸಿಕೊಂಡು ಬರುವಿ” ಎಂದು ಉತ್ತರ ದೊರೆಯಿತು. ಅದರಂತೆಯೇ ದಾವೀದ “ಅಮಾಲೇಕ್ಯರು ಒಯ್ದಿದ್ದ ಎಲ್ಲಾ ಕೊಳ್ಳೆಯನ್ನೂ ಬಿಡಿಸಿ” ತಂದನು.—1 ಸಮು. 30:7-9, 18-20.

13 ಅಮಾಲೇಕ್ಯರ ಆಕ್ರಮಣದ ಸ್ವಲ್ಪ ಕಾಲದ ಬಳಿಕ ಫಿಲಿಷ್ಟಿಯರು ಇಸ್ರಾಯೇಲ್ಯರ ವಿರುದ್ಧ ಯುದ್ಧಕ್ಕೆ ಬಂದರು. ಆಗಲೂ ದಾವೀದ ಯೆಹೋವನನ್ನು ವಿಚಾರಿಸಿದನು. ಸಿಕ್ಕಿದ ಉತ್ತರ ಸ್ಪಷ್ಟವಾಗಿತ್ತು: “ಹೋಗು, ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸುವೆನು.” (2 ಸಮು. 5:18, 19) ಇದಾಗಿ ಸ್ವಲ್ಪ ಸಮಯದ ಬಳಿಕ ಮತ್ತೊಮ್ಮೆ ಫಿಲಿಷ್ಟಿಯರು ದಾವೀದನಿಗೆ ವಿರುದ್ಧವಾಗಿ ಎದ್ದರು. ದಾವೀದ ಏನು ಮಾಡಿದನು? ‘ಇದೇನು ಮಹಾ, ಎರಡು ಬಾರಿ ಶತ್ರುಗಳನ್ನು ಮಣ್ಣುಮುಕ್ಕಿಸಿದ್ದೀನಿ. ಅದೇ ರೀತಿ ಈಗಲೂ ಮಾಡ್ತೀನಿ’ ಎಂದು ಯೋಚಿಸಬಹುದಿತ್ತು. ಆದರೆ ಹಾಗೆ ನೆನಸಲಿಲ್ಲ. ಹಿಂದೆ ಗಳಿಸಿದ ಅನುಭವದ ಮೇಲೆ ಹೊಂದಿಕೊಳ್ಳಲಿಲ್ಲ. ಮಾರ್ಗದರ್ಶನಕ್ಕಾಗಿ ಯೆಹೋವನಲ್ಲಿ ಪುನಃ ಪ್ರಾರ್ಥಿಸಿದನು. ಅವನು ತೆಗೆದುಕೊಂಡ ಆ ಹೆಜ್ಜೆ ಸರಿಯಾಗಿತ್ತು. ಏಕೆಂದರೆ ಈ ಸಲ ಅವನಿಗೆ ಸಿಕ್ಕಿದ ನಿರ್ದೇಶನ ಪೂರಾ ಬೇರೆಯೇ ಆಗಿತ್ತು! (2 ಸಮು. 5:22, 23) ನಾವು ಕೂಡ ಹೊಸದಲ್ಲದ ಸಮಸ್ಯೆಯನ್ನೋ ಸನ್ನಿವೇಶವನ್ನೋ ಎದುರಿಸುವಾಗ ನಮ್ಮ ಹಿಂದಣ ಅನುಭವದ ಮೇಲೆ ಆತುಕೊಳ್ಳಬಾರದು.ಯೆರೆಮೀಯ 10:23 ಓದಿ.

14. ಯೆಹೋಶುವ ಮತ್ತು ಇಸ್ರಾಯೇಲಿನ ಹಿರೀಪುರುಷರು ಗಿಬ್ಯೋನ್ಯರೊಂದಿಗೆ ವ್ಯವಹರಿಸಿದ ರೀತಿಯಿಂದ ಯಾವ ಪಾಠ ಕಲಿಯುತ್ತೇವೆ?

14 ಅಪರಿಪೂರ್ಣರಾಗಿರುವ ಕಾರಣ ಅನುಭವಸ್ಥ ಹಿರಿಯರು ಸೇರಿದಂತೆ ನಾವೆಲ್ಲರೂ ನಿರ್ಣಯಗಳನ್ನು ಮಾಡುವಾಗ ಮಾರ್ಗದರ್ಶನೆಗಾಗಿ ಯೆಹೋವನೆಡೆಗೆ ನೋಡಲು ತಪ್ಪಬಾರದು. ಮೋಶೆಯ ಉತ್ತರಾಧಿಕಾರಿ ಯೆಹೋಶುವ ಮತ್ತು ಇಸ್ರಾಯೇಲಿನ ಹಿರೀಪುರುಷರ ಉದಾಹರಣೆ ಗಮನಿಸಿ. ಗಿಬ್ಯೋನ್ಯರು ಸಂಧಾನದ ಉದ್ದೇಶದಿಂದ ಅವರ ಬಳಿಗೆ ವೇಷ ಮರೆಸಿ ಬಂದರು. ದೂರ ದೇಶದಿಂದ ಬಂದವರೋ ಎಂಬಂತೆ ನಟಿಸಿದರು. ಯೆಹೋಶುವ ಮತ್ತು ಇತರ ಹಿರೀಪುರುಷರು ಆಗ ಯೆಹೋವನನ್ನು ವಿಚಾರಿಸುವ ಬದಲು ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಆ ಒಡಂಬಡಿಕೆಯನ್ನೇನೋ ಯೆಹೋವನು ಬೆಂಬಲಿಸಿದನು ನಿಜ. ಹಾಗಿದ್ದರೂ ತನ್ನ ಮಾರ್ಗದರ್ಶನವನ್ನು ಕೋರದೆ ಹೋದ ಅವರ ಆ ವಿಷಯವನ್ನು ಬೈಬಲಿನಲ್ಲಿ ದಾಖಲಿಸಿದನು. ಏಕೆ? ನಾವು ಪಾಠ ಕಲಿಯಬೇಕೆಂದಲ್ಲವೇ?—ಯೆಹೋ. 9:3-6, 14, 15.

ಪ್ರಲೋಭನೆ ನಿಗ್ರಹಿಸಲು ಹೆಣಗಾಡುತ್ತಿರುವಾಗ . . .

15. ಪ್ರಲೋಭನೆಗಳನ್ನು ನಿಗ್ರಹಿಸಲು ಪ್ರಾರ್ಥನೆ ಏಕೆ ಅತ್ಯಾವಶ್ಯಕವೆಂದು ವಿವರಿಸಿ.

15 “ಪಾಪದ ನಿಯಮ” ನಮ್ಮ ಅಂಗ ಅಂಗಗಳಲ್ಲೂ ಬೀಡು ಬಿಟ್ಟಿರುವುದರಿಂದ ಪಾಪಪೂರ್ಣ ಪ್ರವೃತ್ತಿಗಳ ವಿರುದ್ಧ ನಾವು ಕಠಿಣ ಹೋರಾಟ ಮಾಡಬೇಕಿದೆ. (ರೋಮ. 7:21-25) ಆದರೆ ಜಯ ಸಾಧ್ಯ. ಹೇಗೆ? ಪ್ರಲೋಭನೆಗಳನ್ನು ನಿಗ್ರಹಿಸಲು ಪ್ರಾರ್ಥನೆ ಅತ್ಯಾವಶ್ಯ ಎಂದು ಯೇಸು ತನ್ನ ಹಿಂಬಾಲಕರಿಗೆ ಒತ್ತಿಹೇಳಿದನು. (ಲೂಕ 22:40 ಓದಿ.) ಪ್ರಾರ್ಥಿಸಿದ ಬಳಿಕವೂ ಕೆಟ್ಟ ಆಶೆ, ಕೆಟ್ಟ ಆಲೋಚನೆ ನಮ್ಮ ಮನಸ್ಸಿಗೆ ಪದೇ ಪದೇ ದಾಳಿಯಿಡುವುದಾದರೆ ವಿವೇಕಕ್ಕಾಗಿ “ದೇವರನ್ನು ಕೇಳಿಕೊಳ್ಳುತ್ತಾ” ಇರಬೇಕು. ಆತನು “ಎಲ್ಲರಿಗೆ ಉದಾರವಾಗಿಯೂ ಹಂಗಿಸದೆಯೂ” ಕೊಡುವನು ಎಂಬ ಆಶ್ವಾಸನೆ ಬೈಬಲ್‌ ಕೊಡುತ್ತದೆ. (ಯಾಕೋ. 1:5) ಯಾಕೋಬನು ಬರೆದ ಈ ಸಲಹೆಯನ್ನೂ ಗಮನಿಸಿ: “ನಿಮ್ಮಲ್ಲಿ [ಆಧ್ಯಾತ್ಮಿಕವಾಗಿ] ಅಸ್ವಸ್ಥನು ಯಾವನಾದರೂ ಇದ್ದಾನೊ? ಅವನು ಸಭೆಯ ಹಿರೀಪುರುಷರನ್ನು ತನ್ನ ಬಳಿಗೆ ಕರೆಸಿಕೊಳ್ಳಲಿ ಮತ್ತು ಅವರು ಯೆಹೋವನ ಹೆಸರಿನಲ್ಲಿ ಅವನಿಗೆ ಎಣ್ಣೆಯನ್ನು ಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಅಸ್ವಸ್ಥನನ್ನು ಗುಣಪಡಿಸುವುದು.”—ಯಾಕೋ. 5:14, 15.

16, 17. ಪ್ರಲೋಭನೆಯನ್ನು ನಿಗ್ರಹಿಸಲು ಯಾವ ಸಮಯದಲ್ಲಿ ಪ್ರಾರ್ಥಿಸುವುದು ಬಹುಮುಖ್ಯ?

16 ಪ್ರಲೋಭನೆಗಳನ್ನು ನಿಗ್ರಹಿಸಲು ಪ್ರಾರ್ಥನೆ ಅತ್ಯಾವಶ್ಯವಾದರೂ ಅದನ್ನು ಸರಿಯಾದ ಸಮಯದಲ್ಲಿ ಮಾಡಬೇಕು. ಇದರ ಮಹತ್ವ ಅರಿಯಲು ಜ್ಞಾನೋಕ್ತಿ 7:6-23ರಲ್ಲಿ ತಿಳಿಸಲಾಗಿರುವ ಯೌವನಸ್ಥನ ಬಗ್ಗೆ ಸ್ವಲ್ಪ ನೋಡೋಣ. ಸಂಜೆಯ ನಸುಕಿನಲ್ಲಿ ಅವನು ಜಾರಸ್ತ್ರೀ ಇರುವ ಬೀದಿಯತ್ತ ಹೆಜ್ಜೆ ಇಟ್ಟನು. ಅವಳ ವೈಯಾರ, ಸವಿಮಾತುಗಳಿಗೆ ಮರುಳಾಗಿ ವಧ್ಯಸ್ಥಾನಕ್ಕೆ ಹೋಗುವ ಹೋರಿಯೋ ಎಂಬಂತೆ ಅವಳ ಹಿಂದೆ ಹೋದನು. ಈ ಯೌವನಸ್ಥ ಆ ಕಡೆ ಕಾಲಿಡಲು ಕಾರಣ? “ಜ್ಞಾನಹೀನ” ಅಂದರೆ ಅನುಭವವಿಲ್ಲದ ಅವನ ಮನಸ್ಸಿನಲ್ಲಿ ಕೆಟ್ಟ ಆಶೆಗಳ ಸಂಘರ್ಷ ನಡೆಯುತ್ತಿದ್ದಿರಬೇಕು. (ಜ್ಞಾನೋ. 7:7, 8) ಇಂಥ ಸನ್ನಿವೇಶದಲ್ಲಿ ಯಾವಾಗ ಪ್ರಾರ್ಥನೆ ಮಾಡಿದರೆ ಅವನಿಗೆ ಪ್ರಯೋಜನವಾಗುತ್ತಿತ್ತು? ಪ್ರಲೋಭನೆಯನ್ನು ನೇರವಾಗಿ ಎದುರಿಸುವಾಗ ಯಾವುದೇ ಸಮಯದಲ್ಲಿ ಪ್ರಾರ್ಥನೆ ಮಾಡುವುದು ಬಹು ಮುಖ್ಯವಾಗಿತ್ತಾದರೂ ಅದಕ್ಕೆ ಸರಿಯಾದ ಸಮಯ ಆ ಬೀದಿಯತ್ತ ಹೆಜ್ಜೆಯಿಡುವ ಆಲೋಚನೆ ಅವನ ಮನಸ್ಸಿನಲ್ಲಿ ಬಂದ ಕ್ಷಣವೇ ಆಗಿತ್ತು.

17 ಕಾಮಪ್ರಚೋದಕ ಚಿತ್ರಗಳನ್ನು ನೋಡುವ ಪ್ರಲೋಭನೆಯನ್ನು ನಿಗ್ರಹಿಸಲು ಪುರುಷನೊಬ್ಬನು ಕಠಿಣವಾಗಿ ಪ್ರಯತ್ನಿಸುತ್ತಿರಬಹುದು. ಅದೇ ಸಮಯದಲ್ಲಿ ಅಂಥ ಚಿತ್ರಗಳು ಮತ್ತು ವಿಡಿಯೋಗಳು ಇವೆಯೆಂದು ತಿಳಿದಿರುವ ವೆಬ್‌ ಸೈಟ್‌ನಲ್ಲಿ ಜಾಲಾಡುವಲ್ಲಿ? ಅಪಾಯಕಾರಿ ಎಂದು ತಿಳಿದೂ ಆ ಮಾರ್ಗದತ್ತ ಹೆಜ್ಜೆ ಇಡುವುದಾದರೆ? ಅವನ ಸನ್ನಿವೇಶ ಸಹ ಜ್ಞಾನೋಕ್ತಿ 7ನೇ ಅಧ್ಯಾಯದಲ್ಲಿರುವ ಯೌವನಸ್ಥನ ಸನ್ನಿವೇಶವನ್ನೇ ಹೋಲುತ್ತದಲ್ಲವೆ? ಅವನು ಅಶ್ಲೀಲ ಚಿತ್ರಗಳನ್ನು ನೋಡುವ ಪ್ರಲೋಭನೆಯನ್ನು ನಿಗ್ರಹಿಸಬೇಕಾದರೆ ಇಂಟರ್‌ನೆಟ್‌ನಲ್ಲಿ ಅಂಥ ಚಿತ್ರಗಳಿರುವ ‘ಬೀದಿಯತ್ತ’ ಹೆಜ್ಜೆಯಿಡುವ ಮೊದಲೇ ಪ್ರಾರ್ಥಿಸಬೇಕು. ಅಂದರೆ ಅಂಥ ಯೋಚನೆ ಬಂದ ಕ್ಷಣವೇ ಸಹಾಯಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸಬೇಕು.

18, 19. (ಎ) ಪ್ರಲೋಭನೆಯನ್ನು ನಿಗ್ರಹಿಸುವುದು ಸವಾಲಾಗಿದೆ ಏಕೆ? ಆ ಸವಾಲನ್ನು ನೀವು ಹೇಗೆ ಮೆಟ್ಟಿನಿಲ್ಲಬಲ್ಲಿರಿ? (ಬಿ) ನೀವು ಯಾವ ದೃಢಸಂಕಲ್ಪ ಮಾಡಿದ್ದೀರಿ?

18 ಪ್ರಲೋಭನೆ ನಿಗ್ರಹಿಸುವುದು, ದುಶ್ಚಟಗಳನ್ನು ಬಿಡುವುದು ಅಷ್ಟು ಸುಲಭವಲ್ಲ. ಕಾರಣ ತಿಳಿಸುತ್ತಾ ಪೌಲನು ಹೀಗೆ ಬರೆದನು: “ಶರೀರಭಾವವು ಪವಿತ್ರಾತ್ಮಕ್ಕೆ ವಿರುದ್ಧವಾದದ್ದನ್ನು ಬಯಸುತ್ತದೆ ಮತ್ತು ಪವಿತ್ರಾತ್ಮವು ಶರೀರಭಾವಕ್ಕೆ ವಿರುದ್ಧವಾದದ್ದನ್ನು ಬಯಸುತ್ತದೆ.” ಹಾಗಾಗಿ ಸರಿಯಾದುದ್ದನ್ನು ಮಾಡಲು ಇಷ್ಟವಿದ್ದರೂ ನಮ್ಮಿಂದ ಅದನ್ನು ಮಾಡಲು ಆಗುವುದಿಲ್ಲ. (ಗಲಾ. 5:17) ಈ ಸವಾಲನ್ನು ಮೆಟ್ಟಿನಿಲ್ಲಬೇಕಾದರೆ ಕೆಟ್ಟ ಆಲೋಚನೆ ಅಥವಾ ಪ್ರಲೋಭನೆ ನಮ್ಮ ಮನಸ್ಸಿಗೆ ಬಂದ ಕೂಡಲೆ ಕಟ್ಟಾಸಕ್ತಿಯಿಂದ ಪ್ರಾರ್ಥಿಸಬೇಕು. ಅದಕ್ಕನುಸಾರವಾಗಿ ಕಾರ್ಯವೆಸಗಬೇಕು. “ಮನುಷ್ಯರಿಗೆ ಸಹಜವಾಗಿರುವ ಪ್ರಲೋಭನೆಯೇ ಹೊರತು ಬೇರಾವುದೂ” ನಮಗೆ ಸಂಭವಿಸುವುದಿಲ್ಲ. ಯೆಹೋವನ ಸಹಾಯದಿಂದ ನಾವು ನಂಬಿಗಸ್ತರಾಗಿ ಉಳಿಯಬಲ್ಲೆವು.—1 ಕೊರಿಂ. 10:13.

19 ಸಂಕಷ್ಟದಲ್ಲಿ ಸಿಲುಕಿರಲಿ, ಗಂಭೀರ ನಿರ್ಣಯ ಮಾಡಲಿಕ್ಕಿರಲಿ, ಪ್ರಲೋಭನೆಯನ್ನು ಎದುರಿಸಲಿ ಎಲ್ಲ ಸಮಯದಲ್ಲೂ ಪ್ರಾರ್ಥನೆ ಮಾಡುವ ಅವಕಾಶವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ಪ್ರಾರ್ಥನೆ ಯೆಹೋವ ದೇವರ ಅಮೂಲ್ಯ ಉಡುಗೊರೆ. ಪ್ರಾರ್ಥನೆ ಮಾಡುವಾಗ ಆತನ ಮೇಲೆ ನಾವು ಹೊಂದಿಕೊಂಡಿದ್ದೇವೆ ಎಂಬುದು ವ್ಯಕ್ತವಾಗುತ್ತದೆ. ಆತನ ಪವಿತ್ರಾತ್ಮಕ್ಕಾಗಿಯೂ ನಾವು ಕೇಳಿಕೊಳ್ಳಬೇಕು. ಅದು ನಮ್ಮನ್ನು ಮಾರ್ಗದರ್ಶಿಸುತ್ತದೆ, ಬಲಪಡಿಸುತ್ತದೆ. (ಲೂಕ 11:9-13) ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣ ಮನಸ್ಸಿನಿಂದ ಯೆಹೋವನ ಮೇಲೆ ಭರವಸೆಯಿಡೋಣ.

[ಪಾದಟಿಪ್ಪಣಿ]

^ ಪ್ಯಾರ. 1 ಹೆಸರುಗಳನ್ನು ಬದಲಾಯಿಸಲಾಗಿದೆ.

ನೆನಪಿದೆಯೇ?

• ಯೆಹೋವನಲ್ಲಿ ಭರವಸೆಯಿಡುವ ವಿಷಯದಲ್ಲಿ ಹಿಜ್ಕೀಯ, ಹನ್ನ, ಯೋನರಿಂದ ಯಾವ ಪಾಠ ಕಲಿತಿರಿ?

• ನಿರ್ಣಯಗಳನ್ನು ಮಾಡುವ ವಿಷಯದಲ್ಲಿ ದಾವೀದ ಮತ್ತು ಯೆಹೋಶುವನ ಉದಾಹರಣೆಗಳು ಏನು ಕಲಿಸುತ್ತವೆ?

• ಪ್ರಲೋಭನೆಗಳನ್ನು ನಿಗ್ರಹಿಸಲು ಮುಖ್ಯವಾಗಿ ನಾವು ಯಾವಾಗ ಪ್ರಾರ್ಥಿಸಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ಪ್ರಲೋಭನೆಯನ್ನು ನಿಗ್ರಹಿಸಬೇಕಾದರೆ ಯಾವಾಗ ಪ್ರಾರ್ಥನೆ ಮಾಡುವುದು ಪ್ರಯೋಜನಕರ?