ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಸ್ವಸ್ಥತೆ ಆನಂದವ ಅಪಹರಿಸದಿರಲಿ

ಅಸ್ವಸ್ಥತೆ ಆನಂದವ ಅಪಹರಿಸದಿರಲಿ

ಅಸ್ವಸ್ಥತೆ ಆನಂದವ ಅಪಹರಿಸದಿರಲಿ

ಬೆಳಗಿನ ಜಾವ. ಏಳುವಾಗಲೇ ಜೀವನ ಜಿಗುಪ್ಸೆ ಎಂಬ ಅನಿಸಿಕೆ. ಮತ್ತೊಂದು ದಿನ ನಿಮ್ಮ ಮುಂದೆ ನಿಂತಿದೆ. ಶರೀರದ ನೋವನ್ನೂ ಮನಸ್ಸಿನ ಭಾರವನ್ನೂ ಸಹಿಸಿಕೊಳ್ಳದೇ ಬೇರೆ ದಾರಿಯಿಲ್ಲ. ಯೋಬನಂತೆ ನಿಮಗೂ “ಸಾಯುವದೇ ಲೇಸೆಂದು” ಅನಿಸಬಹುದು. (ಯೋಬ 7:15) ನಿಮ್ಮ ಈ ಪರಿಸ್ಥಿತಿ ಸುಧಾರಿಸದಿದ್ದರೆ? ಅದರಲ್ಲೂ ವರ್ಷಾನುಗಟ್ಟಲೆ ನೋವನ್ನು ಅನುಭವಿಸುತ್ತಲೇ ಇರಬೇಕಾದರೆ?

ಮೆಫೀಬೋಶೆತನ ಪರಿಸ್ಥಿತಿಯೂ ಹೀಗೆ ಇತ್ತು. ರಾಜ ದಾವೀದನ ಪ್ರಾಣಸ್ನೇಹಿತ ಯೋನಾತಾನನ ಮಗನಾದ ಇವನು ಐದು ವರ್ಷದವನಾಗಿದ್ದಾಗ “ಬಿದ್ದು ಕುಂಟನಾದನು.” (2 ಸಮು. 4:4) ವಿಕಲಾಂಗನಾಗಿದ್ದ ಅವನ ಮೇಲೆ ರಾಜದ್ರೋಹದ ಸುಳ್ಳಾರೋಪ ಹೊರಿಸಿ ಆಸ್ತಿಯನ್ನು ಕಬಳಿಸಲಾಯಿತು. ಇದು ಅವನಿಗೆ ಗಾಯದ ಮೇಲೆ ಬರೆ ಎಳೆದಂತಿತ್ತು. ಒಂದೆಡೆ ದೇಹದೌರ್ಬಲ್ಯ, ಇನ್ನೊಂದೆಡೆ ಭಾವನಾತ್ಮಕ ನೋವು ಎರಡೂ ಅವನ ಬೇಗುದಿಯನ್ನು ಇಮ್ಮಡಿಗೊಳಿಸಿದ್ದಿರಬೇಕು. ಹಾಗಿದ್ದರೂ ಅಂಗವೈಕಲ್ಯ, ಸುಳ್ಳಾರೋಪ, ಹತಾಶೆಯು ತನ್ನ ಆನಂದವನ್ನು ಅಪಹರಿಸುವಂತೆ ಅವನು ಬಿಡಲಿಲ್ಲ. ನಮಗೆ ಅವನು ಒಳ್ಳೇ ಮಾದರಿ.—2 ಸಮು. 9:6-10; 16:1-4; 19:24-30.

ಅಪೊಸ್ತಲ ಪೌಲ ಕೂಡ ಒಳ್ಳೇ ಮಾದರಿ ಇಟ್ಟಿದ್ದಾನೆ. ‘ಶರೀರದಲ್ಲಿ ಮುಳ್ಳಿನಂತೆ’ ಇರುವ ಒಂದು ಸಮಸ್ಯೆಯೊಂದಿಗೆ ಹೋರಾಡುತ್ತಿದ್ದೇನೆಂದು ಅವನೊಮ್ಮೆ ಬರೆದನು. (2 ಕೊರಿಂ. 12:7) ಆ “ಮುಳ್ಳು” ಪ್ರಾಯಶಃ ದೀರ್ಘಸಮಯದಿಂದ ಅವನಿಗಿದ್ದ ಅಸೌಖ್ಯವಾಗಿದ್ದಿರಬಹುದು ಅಥವಾ ಅದು ಅವನ ಅಪೊಸ್ತಲತನಕ್ಕೆ ಸೆಡ್ಡುಹೊಡೆದಿದ್ದ ಜನರಿಗೆ ಸೂಚಿಸಿದ್ದಿರಬಹುದು. ಹೇಗೂ ಇರಲಿ, ಒಟ್ಟಿನಲ್ಲಿ ಆ ಸಮಸ್ಯೆ ತುಂಬ ಸಮಯ ಇತ್ತು. ದೈಹಿಕವಾಗಿ ಅಥವಾ ಮಾನಸಿಕವಾಗಿ ಅವನು ನೋವನ್ನು ಸಹಿಸಿಕೊಳ್ಳಬೇಕಿತ್ತು.—2 ಕೊರಿಂ. 12:9, 10.

ದೇವರ ಸೇವಕರು ಇಂದು ಸಹ ಕಾಯಿಲೆಗಳಿಂದ ಮುಕ್ತರಾಗಿಲ್ಲ. ಕೆಲವರು ಮಾನಸಿಕ ಒತ್ತಡ ಅಥವಾ ದೀರ್ಘಕಾಲದ ಶಕ್ತಿಗುಂದಿಸುವ ಕಾಯಿಲೆಯಿಂದ ಬಳಲಿಹೋಗಿದ್ದಾರೆ. ಮ್ಯಾಗ್ದಲೀನಳಿಗೆ 18ರ ಹರೆಯದಲ್ಲಿ ಗಂಭೀರ ಕಾಯಿಲೆ (ಸಿಸ್ಟೆಮಿಕ್‌ ಲೂಪಸ್‌ ಎರಿಥಿಮಟೋಸಸ್‌) ಇದೆಯೆಂದು ಪತ್ತೆಹಚ್ಚಲಾಯಿತು. ಅವಳ ದೇಹದ ರೋಗರಕ್ಷಕ ವ್ಯವಸ್ಥೆಯು ಅವಳ ದೇಹದ ಅಂಗಾಂಗಗಳನ್ನೇ ಶತ್ರುವೆಂದು ಭಾವಿಸಿ ಆಕ್ರಮಣ ಮಾಡುತ್ತದೆ. ಅವಳು ತನ್ನ ನೋವನ್ನು ಹೀಗೆ ತೋಡಿಕೊಳ್ಳುತ್ತಾಳೆ: “ವಿಷಯ ತಿಳಿದಾಗ ನಿಂತ ನೆಲವೇ ಕುಸಿದಂತಾಯಿತು. ದಿನ ಕಳೆದಂತೆ ನನ್ನ ದೇಹಾರೋಗ್ಯ ಹದಗೆಟ್ಟಿತು. ನಾನಾ ತರದ ಸಮಸ್ಯೆಗಳು ಉಲ್ಬಣಿಸಿದವು. ಜೀರ್ಣಕ್ರಿಯೆಯಲ್ಲಿ ತೊಂದರೆ, ಬಾಯಿ ಹುಣ್ಣು, ಥೈರಾಯ್ಡ್‌ ಸಮಸ್ಯೆ ಜಾಸ್ತಿಯಾಯಿತು.” ಈಜಬೆಲಾ ಎಂಬ ಇನ್ನೊಬ್ಬ ಸ್ತ್ರೀಗೆ ಇರುವ ಕಾಯಿಲೆ ಬೇರೆಯವರಿಗೆ ಕಾಣುವಂಥದ್ದಲ್ಲ. “ಚಿಕ್ಕ ವಯಸ್ಸಿನಿಂದಲೇ ಖಿನ್ನತೆ ಎಂಬ ಮಹಾ ಮಾರಿಯ ಬಿಗಿಮುಷ್ಟಿಗೆ ಸಿಕ್ಕಿಬಿದ್ದೆ. ಇದ್ದಕ್ಕಿದ್ದ ಹಾಗೆ ಎಲ್ಲಿಲ್ಲದ ಭಯವಾಗುತ್ತದೆ. ಉಸಿರಾಟ ತೊಂದರೆ, ಜೊತೆಗೆ ಹೊಟ್ಟೆನುಲಿತ. ನನ್ನ ಶಕ್ತಿಯೆಲ್ಲ ಇಂಗಿ ಹೋಗಿ ನಿತ್ರಾಣಳಾಗುತ್ತೇನೆ.”

ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೊಳ್ಳಿ

ಕಾಯಿಲೆ, ದೇಹದೌರ್ಬಲ್ಯದಿಂದ ನಿಮ್ಮ ಬದುಕು ಅಸ್ತವ್ಯಸ್ತಗೊಂಡಿರಬಹುದು. ಹಾಗಾಗಿ ಸಾವಧಾನದಿಂದ ನಿಮ್ಮ ಈಗಿನ ಪರಿಸ್ಥಿತಿಯನ್ನು ಪ್ರಾಮಾಣಿಕವಾಗಿ ಪರೀಕ್ಷಿಸಿ. ನಿಮ್ಮಿಂದ ಮಾಡಲಾಗುವ ವಿಷಯಗಳಿಗೆ ಇತಿಮಿತಿಗಳುಂಟು. ಈ ನಿಜಾಂಶವನ್ನು ಸ್ವೀಕರಿಸಿ. ಆದರೆ ಅದು ಹೇಳಿದಷ್ಟು ಸುಲಭವಲ್ಲ. ಮ್ಯಾಗ್ದಲೀನಗೆ ಇದೆಷ್ಟು ಕಷ್ಟವೆಂದು ಗಮನಿಸಿ: “ನನ್ನ ರೋಗ ದಿನದಿಂದ ದಿನಕ್ಕೆ ಒಂದೇಸಮನೆ ಹೆಚ್ಚುತ್ತಿದೆ. ಅನೇಕವೇಳೆ ಹಾಸಿಗೆಯಿಂದ ಏಳಲಿಕ್ಕೂ ನನ್ನಿಂದಾಗುವುದಿಲ್ಲ. ಇವತ್ತಿದ್ದ ಹಾಗೆ ನಾಳೆಯಿರಲ್ಲ. ಹಾಗಾಗಿ ಯಾವುದೇ ಕೆಲಸವನ್ನು ಮುಂಚಿತವಾಗಿ ಯೋಜಿಸುವುದು ಅಸಾಧ್ಯ. ಯೆಹೋವನ ಸೇವೆಯನ್ನು ಮೊದಲಿನಷ್ಟು ಮಾಡಲಾಗುತ್ತಿಲ್ಲವಲ್ಲಾ ಎಂಬ ನೋವು ನನ್ನನ್ನು ಕಿತ್ತು ತಿನ್ನುತ್ತಿದೆ.”

ಸ್ಬೀಗ್‌ನ್ಯೂ ಎಂಬಾತನ ಅಳಲು ಹೀಗಿದೆ: “ವರ್ಷಗಳು ಉರುಳಿದಂತೆ ಸಂಧಿವಾತವು ನನ್ನ ಬಲವನ್ನು ಉಡುಗಿಸಿ ಬಿಡುತ್ತಿದೆ. ಒಂದರ ನಂತರ ಇನ್ನೊಂದು ಕೀಲನ್ನು ಹಾನಿ ಮಾಡುತ್ತಿದೆ. ಕೆಲವೊಮ್ಮೆ ಉರಿಯೂತ ಎಷ್ಟು ತೀವ್ರವಾಗಿರುತ್ತದೆಂದರೆ ಒಂದು ಚಿಕ್ಕ ಕೆಲಸ ಮಾಡಲಿಕ್ಕೂ ಅಸಾಧ್ಯ. ಆಗ ಖಿನ್ನನಾಗಿ ಬಿಡುತ್ತೇನೆ.”

ಕೆಲವು ವರ್ಷಗಳ ಹಿಂದೆ ಬಾರ್ಬರಾ ಎಂಬಾಕೆಗೆ ಮಿದುಳಿನಲ್ಲಿ ಗೆಡ್ಡೆ ಬೆಳೆಯುತ್ತಿದೆಯೆಂದು (ಬ್ರೇನ್‌ ಟ್ಯೂಮರ್‌) ಪತ್ತೆಹಚ್ಚಲಾಯಿತು. ತನ್ನ ವ್ಯಥೆಯನ್ನು ಹೀಗೆ ವಿವರಿಸುತ್ತಾಳೆ: “ನನ್ನ ದೇಹದಲ್ಲಿ ಥಟ್ಟನೆ ಅನೇಕ ಬದಲಾವಣೆಗಳಾದವು. ನನ್ನ ಶಕ್ತಿ ಬಸಿದು ಬರಿದಾಗಿದೆ. ಒಂಚೂರೂ ಬಲವಿಲ್ಲ. ಆಗಾಗ್ಗೆ ತೀವ್ರ ತಲೆನೋವು. ಏಕಾಗ್ರತೆ ಕಷ್ಟ. ಮುಂಚಿನಂತೆ ಚುರುಕಿನಿಂದ ಕೆಲಸ ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅನೇಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಯಿತು.”

ಮೇಲೆ ತಿಳಿಸಲಾದ ಎಲ್ಲ ವ್ಯಕ್ತಿಗಳು ಯೆಹೋವನ ಸಮರ್ಪಿತ ಸೇವಕರು. ಆತನ ಸೇವೆ ಮಾಡುವುದೇ ಅವರ ಆದ್ಯ ಚಿಂತೆ. ಅವರು ದೇವರಲ್ಲಿ ಪೂರ್ಣ ಭರವಸೆಯಿಟ್ಟಿದ್ದಾರೆ. ಆತನ ಬೆಂಬಲ ಅವರಿಗಿದೆ.—ಜ್ಞಾನೋ. 3:5, 6.

ಯೆಹೋವನ ಆಧಾರ ಹಸ್ತ

ನಮ್ಮ ಸಂಕಷ್ಟಗಳು ದೇವರು ನಮ್ಮ ಮೇಲೆ ಕೋಪಗೊಂಡಿದ್ದಾನೆ ಎಂಬುದರ ಸೂಚನೆಯೆಂದು ನಾವು ನೆನಸಬಾರದು. (ಪ್ರಲಾ. 3:33) “ನಿರ್ದೋಷಿಯೂ ಯಥಾರ್ಥಚಿತ್ತನೂ” ಆಗಿದ್ದ ಯೋಬನಿಗೂ ಎಷ್ಟೋ ಕಷ್ಟನೋವುಗಳು ಬಂತಲ್ಲವೆ? (ಯೋಬ 1:8) ದೇವರು ಯಾರನ್ನೂ ಕೆಟ್ಟ ಸಂಗತಿಗಳಿಂದ ಪರೀಕ್ಷಿಸುವುದಿಲ್ಲ. (ಯಾಕೋ. 1:13) ದೀರ್ಘಕಾಲಿಕ ಕಾಯಿಲೆ, ಭಾವನಾತ್ಮಕ ನೋವನ್ನು ಸೇರಿಸಿ ಎಲ್ಲ ಅಸ್ವಸ್ಥತೆಗಳು ನಮಗೆ ಪ್ರಥಮ ಹೆತ್ತವರಾದ ಆದಾಮಹವ್ವರು ಕೊಟ್ಟಿರುವ ಬಳುವಳಿಯಾಗಿದೆ.—ರೋಮ. 5:12.

ಹಾಗಿದ್ದರೂ ಯೆಹೋವ ದೇವರು ಮತ್ತು ಯೇಸು ನೀತಿವಂತರನ್ನು ಎಂದಿಗೂ ತೊರೆದುಬಿಡುವುದಿಲ್ಲ. (ಕೀರ್ತ. 34:15) ಸಂಕಷ್ಟದಲ್ಲಿ ಇರುವಾಗಲಂತೂ ದೇವರು ನಿಮ್ಮ “ಆಶ್ರಯವೂ . . . ಕೋಟೆಯೂ” ಆಗಿದ್ದಾನೆ ಎನ್ನುವುದು ಅನುಭವಕ್ಕೆ ಬರುತ್ತದೆ. (ಕೀರ್ತ. 91:2, NIBV) ಪರಿಹರಿಸಲು ಸಾಧ್ಯವಾಗದಂಥ ಪರಿಸ್ಥಿತಿಯಲ್ಲೂ ಆನಂದದಿಂದ ಇರಲು ನಿಮಗೆ ಯಾವುದು ಸಹಾಯ ಮಾಡುತ್ತದೆ?

ಪ್ರಾರ್ಥನೆ: ಪ್ರಾಚೀನ ಕಾಲದಲ್ಲಿದ್ದ ದೇವರ ನಿಷ್ಠಾವಂತ ಸೇವಕರು ಮಾಡಿದಂತೆ ನೀವು ಪ್ರಾರ್ಥನೆಯಲ್ಲಿ ಮನಸ್ಸಿನ ಭಾರವನ್ನು ನಿಮ್ಮ ತಂದೆಯಾದ ದೇವರ ಮೇಲೆ ಹಾಕಿ. (ಕೀರ್ತ. 55:22) “ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ”ಯನ್ನು ನೀವು ಅನುಭವಿಸುವಿರಿ. ಆ ಆಂತರಿಕ ಶಾಂತಿಯು “ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ . . . ಕಾಯುವುದು.” (ಫಿಲಿ. 4:6, 7) ಮೇಲೆ ತಿಳಿಸಲಾದ ಮ್ಯಾಗ್ದಲೀನ ಪ್ರಾರ್ಥನೆಯ ಮೂಲಕ ದೇವರ ಮೇಲೆ ಹೊಂದಿಕೊಳ್ಳುತ್ತಾಳೆ. ಇದು ಶಕ್ತಿಗುಂದಿಸುವ ಕಾಯಿಲೆಯನ್ನು ಸಹಿಸಿಕೊಳ್ಳಲು ಆಕೆಗೆ ಬಲಕೊಟ್ಟಿದೆ. “ನನ್ನ ಮನಸ್ಸಿನ ಬೇಗುದಿಯನ್ನು ಯೆಹೋವ ದೇವರ ಬಳಿ ತೋಡಿಕೊಂಡಾಗ ನನಗೆ ಎಷ್ಟೋ ನೆಮ್ಮದಿ ಆಗುತ್ತದೆ. ಕಳೆದುಹೋದ ಆನಂದವನ್ನು ಮರಳಿ ಪಡೆಯುತ್ತೇನೆ. ಪ್ರತಿ ಕ್ಷಣ ದೇವರ ಮೇಲೆ ಹೊಂದಿಕೊಳ್ಳುವುದು ಎಷ್ಟು ಪ್ರಾಮುಖ್ಯ ಎನ್ನುವುದು ನನಗೀಗ ತಿಳಿದಿದೆ.”—2 ಕೊರಿಂ. 1:3, 4.

ನಿಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ ಯೆಹೋವ ದೇವರು ತನ್ನ ಪವಿತ್ರಾತ್ಮ, ತನ್ನ ವಾಕ್ಯ, ಕ್ರೈಸ್ತ ಸಹೋದರ ಬಳಗದ ಮೂಲಕ ನಿಮ್ಮನ್ನು ಬಲಗೊಳಿಸುತ್ತಾನೆ. ನಿಮ್ಮ ಅಸ್ವಸ್ಥತೆಯನ್ನು ಅದ್ಭುತಕರವಾಗಿ ಆತನು ತೆಗೆದು ಹಾಕದಿದ್ದರೂ ಅದನ್ನು ನಿಭಾಯಿಸಲು ಬೇಕಾದ ವಿವೇಕ, ಬಲವನ್ನು ಖಂಡಿತ ಕೊಡುತ್ತಾನೆ. (ಜ್ಞಾನೋ. 2:7) “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ”ಯನ್ನು ಕೊಟ್ಟು ನಿಮ್ಮನ್ನು ಬಲಪಡಿಸುತ್ತಾನೆ.—2 ಕೊರಿಂ. 4:7.

ಕುಟುಂಬ: ಪ್ರೀತಿ, ಕರುಣೆಯಿಂದ ಕೂಡಿದ ಮನೆಯ ವಾತಾವರಣ ನೀವು ನಿಮ್ಮ ಕಾಯಿಲೆಯನ್ನು ಮರೆತುಬಿಡುವಂತೆ ಮಾಡಬಲ್ಲದು. ನಿಮ್ಮಂತೆ ನಿಮ್ಮ ನೆಚ್ಚಿನವರಿಗೂ ನೋವಾಗುತ್ತದೆ ಎನ್ನುವುದನ್ನು ಮರೆಯಬೇಡಿ. ಅವರಿಗೂ ನಿಸ್ಸಹಾಯಕ ಭಾವನೆ ಕಾಡುತ್ತಿರುತ್ತದೆ. ತಮ್ಮ ಕಷ್ಟದ ಮಧ್ಯದಲ್ಲೂ ನಿಮಗೆ ಸಹಾಯ ಮಾಡಲು ಅವರಿದ್ದಾರೆ. ಅವರೊಂದಿಗೆ ಕೂಡಿ ಪ್ರಾರ್ಥಿಸಿ. ಇದು ನಿಮ್ಮ ಮನಸ್ಸನ್ನು ಪ್ರಶಾಂತವಾಗಿಡುವುದು.—ಜ್ಞಾನೋ. 14:30.

ಬಾರ್ಬರಾ ತನ್ನ ಪುತ್ರಿ ಹಾಗೂ ಸಭೆಯ ಇತರ ಯುವ ಸಹೋದರಿಯರ ಸಹಕಾರವನ್ನು ಹೀಗೆ ವಿವರಿಸುತ್ತಾರೆ: “ಅವರು ನನಗೆ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ಸಹಾಯ ಮಾಡುತ್ತಾರೆ. ದೇವರ ಸೇವೆಯಲ್ಲಿ ಅವರಿಗಿರುವ ಹುರುಪನ್ನು ನೋಡುವಾಗ ನನ್ನ ಹೃದಯಕ್ಕೆ ತಂಪೆರೆದಂತೆ ಆಗುತ್ತದೆ.” ಸ್ಬೀಗ್‌ನ್ಯೂ ತನ್ನ ಸಹಕಾರಿಣಿಯ ಸಹಕಾರಕ್ಕೆ ತುಂಬ ಕೃತಜ್ಞರು. “ಹೆಚ್ಚಾಗಿ ಎಲ್ಲ ಮನೆಕೆಲಸಗಳನ್ನು ಮಾಡುವುದು ಅವಳೇ. ಬಟ್ಟೆ ಧರಿಸಲು ನನಗೆ ಸಹಾಯ ಮಾಡುತ್ತಾಳೆ. ಕೂಟಗಳಿಗೆ ಕ್ಷೇತ್ರ ಸೇವೆಗೆ ಹೋಗುವಾಗ ನನ್ನ ಬ್ಯಾಗನ್ನು ಸಹ ತಕ್ಕೊಳ್ಳುತ್ತಾಳೆ.”

ಜೊತೆ ವಿಶ್ವಾಸಿಗಳು: ಜೊತೆ ವಿಶ್ವಾಸಿಗಳೊಂದಿಗೆ ಇರುವಾಗ ನಾವು ನೋವನ್ನು ಮರೆತು ಹೆಚ್ಚು ಉತ್ಸಾಹಿಗಳಾಗುತ್ತೇವೆ. ಆದರೆ ಅಸ್ವಸ್ಥತೆಯಿಂದಾಗಿ ಕೂಟಗಳಿಗೆ ಹೋಗಲು ನಿಮಗೆ ಆಗದಿದ್ದಲ್ಲಿ? ಮ್ಯಾಗ್ದಲೀನಗೆ ಕೂಡ ಇದೇ ಸಮಸ್ಯೆ. ಆಕೆ ಹೀಗನ್ನುತ್ತಾಳೆ: “ಕೂಟಗಳಿಗೆ ಹಾಜರಾಗಲು ಆಗದಿದ್ದಾಗ ಕೂಟದ ಆಡಿಯೋ ರೆಕಾರ್ಡಿಂಗ್‌ ಅನ್ನು ಒದಗಿಸುತ್ತಾರೆ. ಹೀಗೆ ಕೂಟಗಳಿಂದ ಪ್ರಯೋಜನ ಪಡೆಯುವಂತೆ ಸಭೆ ನನಗೆ ನೆರೆವು ನೀಡುತ್ತದೆ. ಮಾತ್ರವಲ್ಲ ಸಹೋದರ ಸಹೋದರಿಯರು ಫೋನ್‌ ಮಾಡಿ ಏನಾದರೂ ಸಹಾಯ ಬೇಕೋ ಎಂದು ಕಳಕಳಿಯಿಂದ ವಿಚಾರಿಸುತ್ತಾರೆ. ಆಗಾಗ್ಗೆ ಪತ್ರ ಬರೆಯುತ್ತಾರೆ. ಇದು ನನ್ನ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಅವರು ನನ್ನನ್ನು ನೆನಪಿಸಿಕೊಳ್ಳುತ್ತಾರೆ, ನನ್ನ ಬಗ್ಗೆ ಚಿಂತಿಸುತ್ತಾರೆ. ಇದು ನನಗೆ ಸಹಿಸಿಕೊಳ್ಳಲು ಶಕ್ತಿ ಕೊಡುತ್ತದೆ.”

ಖಿನ್ನತೆಯಿಂದ ಬಳಲುತ್ತಿರುವ ಈಜಬೆಲಾ ಏನನ್ನುತ್ತಾಳೆ ಕೇಳಿ: “ಸಭೆಯಲ್ಲಿ ನನಗೆ ಅಪ್ಪ ಅಮ್ಮನಂತೆ ಪ್ರೀತಿ ತೋರಿಸುವ ಅನೇಕರಿದ್ದಾರೆ. ನಾನು ಮಾತಾಡುವಾಗ ಅವರು ಆಲಿಸುತ್ತಾರೆ. ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಸಭೆಯೇ ನನ್ನ ಕುಟುಂಬ. ನನ್ನ ಮನಸ್ಸಿಗೆ ಶಾಂತಿ, ನೆಮ್ಮದಿ, ಸಂತೋಷ ಸಿಗುವುದು ಅಲ್ಲೇ.”

ನೀವು ದೀರ್ಘಕಾಲಿಕ ಅಸ್ವಸ್ಥತೆಯನ್ನು ಅನುಭವಿಸುತ್ತಿರುವಲ್ಲಿ ‘ಜನರಲ್ಲಿ ಸೇರದೆ’ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಡಿ. ಸಂತೋಷದಿಂದ ಸಭೆಯೊಂದಿಗೆ ಸಹವಾಸಿಸಿರಿ. (ಜ್ಞಾನೋ. 18:1) ಆಗ ನಿಮ್ಮಿಂದ ಸಭೆಯಲ್ಲಿರುವ ಇತರರಿಗೆ ತುಂಬ ಉತ್ತೇಜನ ಸಿಗುತ್ತದೆ. ನಿಮ್ಮ ಅಗತ್ಯಗಳನ್ನು ಇತರರಿಗೆ ಹೇಳಲು ನಿಮಗೆ ಮುಜುಗರವಾಗಬಹುದು. ಆದರೆ ನೀವು ಮುಚ್ಚುಮರೆಯಿಲ್ಲದೆ ಹೇಳುವಲ್ಲಿ ಸಹೋದರ ಸಹೋದರಿಯರು ಅದನ್ನು ಗಣ್ಯಮಾಡುವರು. ಇದು “ನಿಷ್ಕಪಟವಾದ ಸಹೋದರ ಮಮತೆಯನ್ನು” ತೋರಿಸಲು ಅವರಿಗೆ ಸದವಕಾಶ ಕೊಡುತ್ತದೆ. (1 ಪೇತ್ರ 1:22) ಕೂಟಕ್ಕೆ ಹೋಗಲು ವಾಹನ ಸೌಕರ್ಯ ಬೇಕಾದಾಗ, ಶುಶ್ರೂಷೆಯಲ್ಲಿ ಅವರೊಂದಿಗೆ ಭಾಗವಹಿಸಬೇಕೆಂದು ಅನಿಸಿದಾಗ, ಮನಬಿಚ್ಚಿ ಮಾತಾಡಬೇಕು ಎಂದನಿಸಿದಾಗ ಅವರಿಗೆ ಹೇಳಿ. ಆದರೆ ಒತ್ತಾಯ ಹೇರಬೇಡಿ. ಅವರ ಸಹಾಯವನ್ನು ಗಣ್ಯಮಾಡಿ.

ಸಕಾರಾತ್ಮಕ ಯೋಚನೆ: ಅಸ್ವಸ್ಥತೆ ಆನಂದವನ್ನು ಅಪಹರಿಸದಂತೆ ನೋಡಿಕೊಳ್ಳುವುದು ಹೆಚ್ಚಾಗಿ ನಿಮ್ಮ ಕೈಯಲ್ಲೇ ಇದೆ. ಮಂಕಾಗಿ ಕುಳಿತುಕೊಳ್ಳುವಲ್ಲಿ ನಿರಾಶೆಯಲ್ಲಿ ಮುಳುಗಿ ಹೋಗುವಲ್ಲಿ ಸದಾ ಮನದಲ್ಲಿ ನಕಾರಾತ್ಮಕ ಯೋಚನೆಗಳೇ ಸುಳಿದಾಡುತ್ತಿರುತ್ತವೆ. ಬೈಬಲ್‌ ಹೇಳುವಂತೆ “ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು, ಆತ್ಮವೇ ನೊಂದರೆ ಸಹಿಸುವವರು ಯಾರು?”—ಜ್ಞಾನೋ. 18:14.

ಮ್ಯಾಗ್ದಲೀನ ಏನು ಮಾಡುತ್ತಾರೆ ಕೇಳಿ: “ನನ್ನ ಸಮಸ್ಯೆಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸದಿರಲು ಶತಪ್ರಯತ್ನ ಮಾಡುತ್ತೇನೆ. ದೀರ್ಘಕಾಲಿಕ ಅಸ್ವಸ್ಥತೆಯಿದ್ದೂ ಯೆಹೋವನಿಗೆ ನಿಷ್ಠೆಯಿಂದ ಸೇವೆಸಲ್ಲಿಸಿದವರ ಜೀವನ ಕಥೆಗಳನ್ನು ಓದುತ್ತೇನೆ. ಅದರಿಂದ ನನಗೆ ಉತ್ತೇಜನ ಸಿಗುತ್ತದೆ.” ಈಜಬೆಲಾಳ ಕುರಿತೇನು? ಯೆಹೋವನು ತನ್ನನ್ನು ಪ್ರೀತಿಸುತ್ತಾನೆ, ತಾನು ಆತನಿಗೆ ಅಮೂಲ್ಯಳು ಎಂಬ ವಿಚಾರ ಅವಳಿಗೆ ನವಬಲ ಕೊಡುತ್ತದೆ. “ನಾನು ಬದುಕಬೇಕೆಂದು ಯೆಹೋವನು ಬಯಸಿದ್ದಾನೆ. ಆತನಿಗಾಗಿ ನಾನು ಬದುಕಬೇಕು ಎನ್ನುವುದು ಜೀವನದಲ್ಲಿ ಆಸಕ್ತಿ ಮೂಡಿಸುತ್ತದೆ. ಮಾತ್ರವಲ್ಲ ಆತನು ನನಗಾಗಿ ಒಂದು ಸುಂದರ ಜೀವನವನ್ನು ಕಾಯ್ದಿರಿಸಿದ್ದಾನೆ.”

ಸ್ಬೀಗ್‌ನ್ಯೂ ಹೇಳುವಂತೆ “ನನ್ನ ಅಸ್ವಸ್ಥತೆಯಿಂದ ನಾನು ಕಷ್ಟದ ಸಮಯದಲ್ಲೂ ದೀನತೆ ಮತ್ತು ವಿಧೇಯತೆ ತೋರಿಸಲು ಕಲಿತಿದ್ದೇನೆ. ಒಳನೋಟ ಹಾಗೂ ವಿವೇಚನೆ ತೋರಿಸುವ, ಬೇರೆಯವರನ್ನು ಮನಸಾರೆ ಕ್ಷಮಿಸುವ ಮಹತ್ವವನ್ನೂ ಅರಿತಿದ್ದೇನೆ. ನನ್ನ ಬಗ್ಗೆ ಯೋಚಿಸುತ್ತಾ ಸ್ವಾನುಕಂಪ ಪಡುವ ಬದಲು ಯೆಹೋವ ದೇವರ ಸೇವೆಯನ್ನು ಸಂತೋಷದಿಂದ ಮಾಡಲು ಕಲಿತಿದ್ದೇನೆ. ಇನ್ನೂ ಹೆಚ್ಚು ಆಧ್ಯಾತ್ಮಿಕ ಪ್ರಗತಿ ಮಾಡಬೇಕೆನ್ನುವುದು ನನ್ನ ಮನದಾಸೆ.”

ನೀವು ನೋವು ನುಂಗುತ್ತಾ ಮುಂದಡಿ ಇಡುತ್ತಿರುವುದು ಯೆಹೋವನಿಗೆ ಗೊತ್ತಿದೆ. ನಿಮಗಾಗುವ ನೋವಿನಿಂದ ಆತನ ಮನಸ್ಸಿಗೂ ನೋವಾಗುತ್ತದೆ. ನಿಮ್ಮ ಬಗ್ಗೆ ಆತನಿಗೆ ಚಿಂತೆಯಿದೆ. “ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ” ಆತನು ಎಂದಿಗೂ ಮರೆಯನು. (ಇಬ್ರಿ. 6:10) ಆತನು ತನ್ನ ಎಲ್ಲ ಭಕ್ತರಿಗೆ ಹೇಳುವ ಈ ಮಾತನ್ನು ಎಂದೂ ಮರೆಯಬೇಡಿ: “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ.”—ಇಬ್ರಿ. 13:5.

ಕೆಲವೊಮ್ಮೆ ನೀವು ಎದೆಗುಂದಬಹುದು. ಆಗ ಹೊಸ ಲೋಕದಲ್ಲಿ ಜೀವಿಸುವುದರ ಕುರಿತು ಆಲೋಚಿಸಿ. ಇನ್ನು ಸ್ವಲ್ಪ ಸಮಯ. ದೇವರ ರಾಜ್ಯವು ಭೂಮಿಯ ಮೇಲೆ ತರಲಿರುವ ಆಶೀರ್ವಾದಗಳನ್ನು ನೀವು ಕಣ್ಣಾರೆ ಕಾಣುವಿರಿ!

[ಪುಟ 28ರಲ್ಲಿರುವ ಚಿತ್ರ]

ದೀರ್ಘಕಾಲಿಕ ಅಸ್ವಸ್ಥತೆ ಸಾರುವುದಕ್ಕೆ ತಡೆಯಾಗಲಿಲ್ಲ

“ಇನ್ನೊಬ್ಬರ ಸಹಾಯವಿಲ್ಲದೆ ನನಗೆ ಆಚೀಚೆ ಹೋಗಲು ಸಾಧ್ಯವಿಲ್ಲ. ಸೇವೆಗೆ ಹೋಗುವಾಗ ನನ್ನ ಪತ್ನಿ ಅಥವಾ ಸಹೋದರ ಸಹೋದರಿಯರು ನನ್ನೊಂದಿಗೆ ಬರುತ್ತಾರೆ. ನಾನು ನಿರೂಪಣೆಗಳನ್ನು ಬೈಬಲ್‌ ವಚನಗಳನ್ನು ಬಾಯಿಪಾಠ ಮಾಡಿಕೊಂಡು ಹೇಳುತ್ತೇನೆ.” —ಯೆಝಿ, ದೃಷ್ಟಿಹೀನ ಸಹೋದರ.

“ಫೋನ್‌ ಅಲ್ಲದೆ ಪತ್ರದ ಮೂಲಕ ಸಹ ಸಾಕ್ಷಿಕಾರ್ಯ ಮಾಡುತ್ತೇನೆ. ಕೆಲವು ಆಸಕ್ತ ವ್ಯಕ್ತಿಗಳಿಗೆ ಪತ್ರ ಬರೆಯುತ್ತಿರುತ್ತೇನೆ. ಆಸ್ಪತ್ರೆಯಲ್ಲಿರುವಾಗ ನನ್ನ ಬೆಡ್‌ ಪಕ್ಕದಲ್ಲಿ ಬೈಬಲ್‌ ಹಾಗೂ ಸಾಹಿತ್ಯಗಳನ್ನು ಇಡುತ್ತೇನೆ. ಇದರಿಂದ ಅನೇಕವೇಳೆ ಆಸಕ್ತಿಕರ ಸಂಭಾಷಣೆ ಆರಂಭಿಸಲು ಸಾಧ್ಯವಾಗಿದೆ.”—ಸಿಸ್ಟೆಮಿಕ್‌ ಲೂಪಸ್‌ ಎರಿಥಿಮಟೋಸಸ್‌ ಇರುವ ಮ್ಯಾಗ್ದಲೀನ.

“ಮನೆಮನೆ ಸೇವೆ ನನಗೆ ಇಷ್ಟ. ಆದರೆ ಅದನ್ನು ಮಾಡಲು ಸಾಧ್ಯವಿಲ್ಲದಿದ್ದಾಗ ಟೆಲಿಫೋನ್‌ ಸಾಕ್ಷಿಕಾರ್ಯ ಮಾಡುತ್ತೇನೆ.” —ಖಿನ್ನತೆಯಿಂದ ಬಳಲುತ್ತಿರುವ ಈಜಬೆಲಾ.

“ಪುನರ್ಭೇಟಿ, ಬೈಬಲ್‌ ಅಧ್ಯಯನಗಳನ್ನು ಮಾಡುವುದು ನನಗೆ ಖುಷಿ ತರುತ್ತದೆ. ನಾನು ಚೆನ್ನಾಗಿರುವ ದಿನಗಳಂದು ಮನೆಮನೆ ಸೇವೆಯಲ್ಲಿ ಭಾಗವಹಿಸುತ್ತೇನೆ.” —ಬ್ರೇನ್‌ ಟ್ಯೂಮರ್‌ ಇರುವ ಬಾರ್ಬರಾ.

“ಚಿಕ್ಕ ಬ್ಯಾಗ್‌ ತಕ್ಕೊಂಡು ಸೇವೆಗೆ ಹೋಗುತ್ತೇನೆ. ಕೀಲಿನ ನೋವನ್ನು ಇನ್ನು ಸಹಿಸಲು ಆಗುವುದಿಲ್ಲ ಎನ್ನುವಾಗ ಮನೆಗೆ ಹಿಂದಿರುಗುತ್ತೇನೆ.”—ಸಂಧಿವಾತ ಇರುವ ಸ್ಬೀಗ್‌ನ್ಯೂ.

[ಪುಟ 30ರಲ್ಲಿರುವ ಚಿತ್ರ]

ಮಕ್ಕಳೂ ದೊಡ್ಡವರೂ ಉತ್ತೇಜನದ ಚಿಲುಮೆ ಆಗಿರಬಲ್ಲರು!