ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದನೇ ಶತಮಾನದಲ್ಲಿ ಮತ್ತು ಇಂದು ಪವಿತ್ರಾತ್ಮದ ಮಾರ್ಗದರ್ಶನೆ

ಒಂದನೇ ಶತಮಾನದಲ್ಲಿ ಮತ್ತು ಇಂದು ಪವಿತ್ರಾತ್ಮದ ಮಾರ್ಗದರ್ಶನೆ

ಒಂದನೇ ಶತಮಾನದಲ್ಲಿ ಮತ್ತು ಇಂದು ಪವಿತ್ರಾತ್ಮದ ಮಾರ್ಗದರ್ಶನೆ

“ಈ ಎಲ್ಲ ವರಗಳನ್ನು ಆ ಒಂದೇ ಪವಿತ್ರಾತ್ಮವು ತನ್ನ ಚಿತ್ತಕ್ಕನುಸಾರ ಪ್ರತಿಯೊಬ್ಬನಿಗೆ ಹಂಚಿಕೊಡುತ್ತದೆ.”—1 ಕೊರಿಂ. 12:11.

1. ಈ ಲೇಖನದಲ್ಲಿ ನಾವು ಯಾವ ವಿಷಯವನ್ನು ತಿಳಿಯುವೆವು?

ಪಂಚಾಶತ್ತಮ! ಈ ಪದ ಕೇಳಿದ ಕೂಡಲೆ ಪುಳಕಗೊಳಿಸುವ ಅನೇಕ ಘಟನೆಗಳು ನಮ್ಮ ಮನಪಟಲದಲ್ಲಿ ಮೂಡುತ್ತವೆ! (ಅ. ಕಾ. 2:1-4) ಆ ದಿನದಂದು ದೇವರು ತನ್ನ ಸೇವಕರ ಮೇಲೆ ಪವಿತ್ರಾತ್ಮ ಸುರಿಸಿದನು! ಅಂದಿನಿಂದ ದೇವರು ಒಂದು ಹೊಸ ವಿಧಾನದಲ್ಲಿ ತನ್ನ ಸೇವಕರನ್ನು ಮಾರ್ಗದರ್ಶಿಸಲು ತೊಡಗಿದನು. ಕಷ್ಟಕರ ಹಾಗೂ ದೊಡ್ಡ ನೇಮಕಗಳನ್ನು ಪೂರೈಸುವಂತೆ ಪ್ರಾಚೀನ ಕಾಲದ ದೇವಸೇವಕರಿಗೆ ಪವಿತ್ರಾತ್ಮವು ಹೇಗೆ ಸಹಾಯಮಾಡಿತು ಎಂದು ಹಿಂದಿನ ಲೇಖನದಲ್ಲಿ ಚರ್ಚಿಸಿದೆವು. ಪ್ರಾಚೀನಕಾಲದ ದೇವಸೇವಕರಿಗೂ ಒಂದನೇ ಶತಮಾನದ ಸೇವಕರಿಗೂ ಪವಿತ್ರಾತ್ಮ ಸಹಾಯಮಾಡಿದ ವಿಧದಲ್ಲಿ ಏನು ವ್ಯತ್ಯಾಸವಿದೆ? ಇಂದಿರುವ ಕ್ರೈಸ್ತರು ಹೇಗೆ ಪವಿತ್ರಾತ್ಮದಿಂದ ಸಹಾಯ ಪಡೆಯುತ್ತಾರೆ? ಇದನ್ನು ಈ ಲೇಖನದಲ್ಲಿ ಚರ್ಚಿಸೋಣ.

“ಇಗೋ, ನಾನು ಯೆಹೋವನ ದಾಸಿ!”

2. ಪವಿತ್ರಾತ್ಮಕ್ಕಿರುವ ಶಕ್ತಿಯನ್ನು ಮರಿಯಳು ಹೇಗೆ ಕಂಡಿದ್ದಳು?

2 ಯೆರೂಸಲೇಮಿನ ಒಂದು ಮೇಲಂತಸ್ತಿನ ಕೋಣೆಯಲ್ಲಿ ಸೇರಿಬಂದಿದ್ದವರ ಮೇಲೆ ಪವಿತ್ರಾತ್ಮ ಸುರಿಸಲ್ಪಟ್ಟಾಗ ಅವರಲ್ಲಿ ಮರಿಯಳೂ ಒಬ್ಬಳಾಗಿದ್ದಳು. (ಅ. ಕಾ. 1: 13, 14) ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಮಹತ್ತಾದ ಕಾರ್ಯಗಳನ್ನು ಮಾಡಬಲ್ಲನು ಎಂದು ಆಕೆಗೆ ಈ ಮುಂಚೆಯೇ ಗೊತ್ತಿತ್ತು. ಏಕೆಂದರೆ 30ಕ್ಕೂ ಹೆಚ್ಚು ವರ್ಷಗಳ ಹಿಂದೆ ದೇವರು ಯೇಸುವಿನ ಜೀವವನ್ನು ಕನ್ಯೆಯಾಗಿದ್ದ ಆಕೆಯ ಗರ್ಭಕ್ಕೆ ವರ್ಗಾಯಿಸಿದ್ದನು. ಹೀಗೆ “ಪವಿತ್ರಾತ್ಮ” ಶಕ್ತಿಯಿಂದ ಆಕೆ ಗರ್ಭಧರಿಸಿದ್ದಳು.—ಮತ್ತಾ. 1:20.

3, 4. ಮರಿಯಳಲ್ಲಿ ಯಾವ ಒಳ್ಳೇ ಗುಣವಿತ್ತು? ನಾವು ಹೇಗೆ ಆ ಗುಣವನ್ನು ತೋರಿಸಬಹುದು?

3 ಈ ಅಭೂತಪೂರ್ವ ಸುಯೋಗವನ್ನು ದೇವರು ಮರಿಯಳಿಗೆ ಕೊಡಲು ಕಾರಣವೇನು? ಮರಿಯಳು ದೇವಪುತ್ರನಿಗೆ ಜನ್ಮನೀಡುವಳೆಂದು ದೇವದೂತನು ಹೇಳಿದಾಗ ಆಕೆ ಹೇಗೆ ಪ್ರತಿಕ್ರಿಯಿಸಿದಳೆಂದು ಗಮನಿಸಿ. “ಇಗೋ, ನಾನು ಯೆಹೋವನ ದಾಸಿ! ನೀನು ಹೇಳಿದಂತೆಯೇ ನನಗೆ ಸಂಭವಿಸಲಿ.” (ಲೂಕ 1:38) ಹೀಗೆ ಹೇಳುವ ಮೂಲಕ ದೇವರ ಚಿತ್ತಕ್ಕೆ ತಾನು ಬದ್ಧಳು ಎಂದು ತೋರಿಸಿಕೊಟ್ಟಳು. ತಾನು ಮದುವೆಗೆ ಮುಂಚೆ ಗರ್ಭವತಿಯಾದರೆ ಜನರು ಏನನ್ನುವರು? ತನಗೆ ಈಗಾಗಲೇ ವಿವಾಹ ನಿಶ್ಚಿತಾರ್ಥ ಆಗಿರುವದರಿಂದ ತಾನು ಕೈಹಿಡಿಯಲಿರುವ ಪುರುಷ ಏನನ್ನುವನು? ತನ್ನ ಗತಿ ಏನಾಗುವುದು? ಎಂದು ಆಕೆ ದೇವರಿಗೆ ಪ್ರಶ್ನಿಸಲಿಲ್ಲ. ಅತಿ ಕೆಳದರ್ಜೆಯ ಸೇವಕಿಯ ಸ್ಥಾನದಲ್ಲಿ ತನ್ನನ್ನಿಡುತ್ತಾ ಆಕೆ ತಾನು ದೇವರ “ದಾಸಿ” ಎಂದು ಹೇಳಿದಳು. ಹೀಗೆ ತನ್ನ ಯಜಮಾನನಾದ ಯೆಹೋವ ದೇವರಲ್ಲಿ ತನಗೆ ಪೂರ್ಣ ಭರವಸೆಯಿದೆ ಎಂದು ತೋರಿಸಿಕೊಟ್ಟಳು.

4 ನಿಮ್ಮ ಕುರಿತೇನು? ದೇವರ ಸೇವೆಯಲ್ಲಿ ಕಷ್ಟಕರ ನೇಮಕ ಅಥವಾ ಜವಾಬ್ದಾರಿ ನಿಮಗೆ ಸಿಗುವಾಗ ‘ಇದು ನನ್ನಿಂದಾಗದು’ ಎಂದು ನೆನಸಿದ್ದುಂಟಾ? ಹೀಗೆ ಕೇಳಿಕೊಳ್ಳಿ: ‘ಯೆಹೋವನು ಎಲ್ಲ ವಿಷಯಗಳನ್ನು ತನ್ನ ಚಿತ್ತಕ್ಕನುಸಾರ ಸರಿಯಾಗಿ ನಿರ್ವಹಿಸುತ್ತಾನೆ ಎಂಬ ಭರವಸೆ ನನಗಿದೆಯಾ? ದೇವರು ಕೊಡುವ ಯಾವುದೇ ಕೆಲಸವನ್ನು ಮಾಡಲು ನನ್ನಲ್ಲಿ ಸಿದ್ಧಮನಸ್ಸಿದೆಯಾ?’ ಯಾರು ಪೂರ್ಣ ಹೃದಯದಿಂದ ತನ್ನಲ್ಲಿ ಭರವಸೆಯಿಡುತ್ತಾರೋ ಹಾಗೂ ತನ್ನನ್ನು ಪರಮಾಧಿಕಾರಿಯೆಂದು ಅಂಗೀಕರಿಸಿ ವಿಧೇಯತೆ ತೋರಿಸುತ್ತಾರೋ ಅಂಥವರಿಗೆ ದೇವರು ಪವಿತ್ರಾತ್ಮದ ಸಹಾಯವನ್ನು ಯಾವಾಗಲೂ ಕೊಡುವನು ಎಂಬ ಭರವಸೆ ನಿಮಗಿರಲಿ.—ಅ. ಕಾ. 5:32.

ಪೇತ್ರನಿಗೆ ಪವಿತ್ರಾತ್ಮದ ಸಹಾಯ

5. ಕ್ರಿ.ಶ. 33ರ ಪಂಚಾಶತ್ತಮಕ್ಕೆ ಮುಂಚೆ ಪವಿತ್ರಾತ್ಮವು ಪೇತ್ರನಿಗೆ ಹೇಗೆ ಸಹಾಯಮಾಡಿತು?

5 ಪವಿತ್ರಾತ್ಮಕ್ಕಿರುವ ಬಲಾಢ್ಯ ಶಕ್ತಿಯನ್ನು ಕ್ರಿ.ಶ. 33ರ ಪಂಚಾಶತ್ತಮಕ್ಕೆ ಮುಂಚೆಯೇ ತನ್ನ ಸ್ವಂತ ಅನುಭವದಿಂದ ತಿಳಿದಿದ್ದ ಇನ್ನೊಬ್ಬ ವ್ಯಕ್ತಿ ಅಪೊಸ್ತಲ ಪೇತ್ರ. ಪೇತ್ರನಿಗೂ ಇತರ ಅಪೊಸ್ತಲರಿಗೂ ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ಯೇಸು ಕೊಟ್ಟಿದ್ದನು. (ಮಾರ್ಕ 3:14-16) ಈ ಅಧಿಕಾರವನ್ನು ಅವರು ಹೇಗೆ, ಯಾವಾಗ ಉಪಯೋಗಿಸಿದರು ಎಂಬ ಎಲ್ಲ ವಿವರ ಬೈಬಲಿನಲ್ಲಿ ಇಲ್ಲ. ಆದರೂ ಪೇತ್ರನು ಈ ಅಧಿಕಾರವನ್ನು ಉಪಯೋಗಿಸಿದನು ಎಂಬುದು ವೃತ್ತಾಂತಗಳಿಂದ ತಿಳಿಯುತ್ತದೆ. ಒಮ್ಮೆ ಯೇಸು ಸಮುದ್ರದ ಮೇಲೆ ನಡೆದು ಬರುವಂತೆ ಪೇತ್ರನಿಗೆ ಹೇಳಿದಾಗ ಅವನು ಪವಿತ್ರಾತ್ಮದ ಸಹಾಯದಿಂದ ನಡೆದು ಬಂದನು! (ಮತ್ತಾಯ 14:25-29 ಓದಿ.) ಪವಿತ್ರಾತ್ಮ ಶಕ್ತಿಯಲ್ಲಿ ಭರವಸೆಯಿಟ್ಟ ಪೇತ್ರನು ಅದರ ಸಹಾಯದಿಂದ ಅನೇಕ ಅದ್ಭುತಕಾರ್ಯಗಳನ್ನು ಮಾಡಿದನು. ಆದರೆ ಇನ್ನು ಮುಂದೆ ಅದೇ ಪವಿತ್ರಾತ್ಮ ಪೇತ್ರ ಹಾಗೂ ಇತರ ಶಿಷ್ಯರಿಗೆ ಬೇರೆ ವಿಧಗಳಲ್ಲಿ ಸಹಾಯಮಾಡಲಿತ್ತು!

6. ಪೇತ್ರನು ಕ್ರಿ.ಶ. 33ರ ಪಂಚಾಶತ್ತಮದಂದು ಮತ್ತು ನಂತರದ ದಿನಗಳಲ್ಲಿ ಪವಿತ್ರಾತ್ಮದ ಸಹಾಯದಿಂದ ಏನು ಮಾಡಲು ಶಕ್ತನಾದನು?

6 ಕ್ರಿ.ಶ. 33ರ ಪಂಚಾಶತ್ತಮ ಹಬ್ಬಕ್ಕಾಗಿ ದೇಶ ವಿದೇಶಗಳಿಂದ ಬಂದ ಜನಸಮೂಹ ಯೆರೂಸಲೇಮಿನಲ್ಲಿ ನೆರೆದಿತ್ತು. ಆ ವಿದೇಶೀ ಜನರ ಭಾಷೆಗಳನ್ನು ಮಾತಾಡುವಂತೆ ಪವಿತ್ರಾತ್ಮವು ಪೇತ್ರನಿಗೂ ಇತರ ಶಿಷ್ಯರಿಗೂ ಸಾಮರ್ಥ್ಯವನ್ನು ಕೊಟ್ಟಿತು. ಪೇತ್ರನು ಅಲ್ಲಿ ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತಾಡಿದನು. (ಅ. ಕಾ. 2:14-36) ಮುಂಚೆ ಕೆಲವೊಮ್ಮೆ ಪೇತ್ರನು ಹೆದರಿ ಹಿಂಜರಿದದ್ದುಂಟು, ಹಿಂದೆ ಮುಂದೆ ಯೋಚಿಸದೆ ದುಡುಕಿದ್ದೂ ಉಂಟು. ಆದರೆ ಪವಿತ್ರಾತ್ಮವನ್ನು ಪಡೆದುಕೊಂಡ ಬಳಿಕ ಅವನು ಬೆದರಿಕೆ ಹಿಂಸೆಯ ಎದುರಲ್ಲೂ ಧೈರ್ಯದಿಂದ ಸಾಕ್ಷಿಕೊಟ್ಟನು. (ಅ. ಕಾ. 4:18-20, 31) ಅವನು ದಿವ್ಯಜ್ಞಾನವನ್ನು ಸಹ ಪಡೆದುಕೊಳ್ಳುತ್ತಿದ್ದನು. (ಅ. ಕಾ. 5:8, 9) ಪುನರುತ್ಥಾನ ಮಾಡುವ ಶಕ್ತಿಯನ್ನೂ ಪವಿತ್ರಾತ್ಮ ಅವನಿಗೆ ಕೊಟ್ಟಿತು.—ಅ. ಕಾ. 9:40.

7. ಪೇತ್ರನು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟ ನಂತರ ಯೇಸುವಿನ ಯಾವ ಬೋಧನೆಗಳನ್ನು ಅರ್ಥಮಾಡಿಕೊಂಡನು?

7 ಪಂಚಾಶತ್ತಮದ ಮೊದಲೇ ಪೇತ್ರನು ಯೇಸುವಿನ ಅನೇಕ ಬೋಧನೆಗಳನ್ನು ಅರ್ಥಮಾಡಿಕೊಂಡಿದ್ದನು. (ಮತ್ತಾ. 16:16, 17; ಯೋಹಾ. 6:68) ಆದರೆ ಕೆಲವು ಬೋಧನೆಗಳನ್ನು ಪೇತ್ರನು ಸ್ಪಷ್ಟವಾಗಿ ಅರ್ಥಮಾಡಿಕೊಂಡದ್ದು ಪಂಚಾಶತ್ತಮದ ನಂತರವೇ. ಉದಾಹರಣೆಗೆ, ಯೇಸು ಸತ್ತು ಮೂರನೇ ದಿನದಲ್ಲಿ ಅದೃಶ್ಯ ದೇಹದೊಂದಿಗೆ ಪುನರುತ್ಥಾನಗೊಳ್ಳುತ್ತಾನೆ ಹಾಗೂ ಆತನ ರಾಜ್ಯ ಸ್ವರ್ಗದಲ್ಲಿರುವುದು ಎಂಬ ವಿಷಯಗಳು ಅವನಿಗೆ ಅರ್ಥವಾಗಿರಲಿಲ್ಲ. (ಯೋಹಾ. 20:6-10; ಅ. ಕಾ. 1:6) ಮನುಷ್ಯರು ಸ್ವರ್ಗಕ್ಕೆ ಹೋಗುವ ಮತ್ತು ಅಲ್ಲಿ ರಾಜರಾಗಿ ಆಳುವ ವಿಷಯವನ್ನು ಪೇತ್ರ ಗ್ರಹಿಸಿರಲಿಲ್ಲ. ಆದರೆ ಸ್ವತಃ ಪೇತ್ರನೇ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟು ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಪಡೆದಾಗ ಅವು ಅವನಿಗೆ ಸ್ಪಷ್ಟವಾಗಿ ಅರ್ಥವಾದವು.

8. ಅಭಿಷಿಕ್ತರಿಗೂ ‘ಬೇರೆ ಕುರಿಗಳಿಗೂ’ ಇಂದು ಯಾವ ಜ್ಞಾನ ಸಿಗುತ್ತಿದೆ?

8 ಪವಿತ್ರಾತ್ಮ ಸುರಿಸಲ್ಪಟ್ಟ ನಂತರ ಯೇಸುವಿನ ಶಿಷ್ಯರು ಈ ಮುಂಚೆ ಅರ್ಥಮಾಡಿಕೊಳ್ಳದ ಬೋಧನೆಗಳನ್ನು ಗ್ರಹಿಸಶಕ್ತರಾದರು. ಪವಿತ್ರಾತ್ಮದ ಪ್ರೇರಣೆಯಿಂದ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ಬರಹಗಾರರು ಯೆಹೋವ ದೇವರ ಉದ್ದೇಶದ ಕುರಿತಾದ ಅನೇಕ ಸತ್ಯಗಳನ್ನು ತೆರೆದಿಟ್ಟರು. (ಎಫೆ. 3:8-11, 18) ಇಂದು ಅಭಿಷಿಕ್ತರೂ “ಬೇರೆ ಕುರಿಗಳೂ” ಒಟ್ಟಾಗಿ ಆ ಆಧ್ಯಾತ್ಮಿಕ ಸತ್ಯಗಳನ್ನು ಕಲಿತು ಅರ್ಥಮಾಡಿಕೊಳ್ಳುತ್ತಿದ್ದಾರೆ. (ಯೋಹಾ. 10:16) ಪವಿತ್ರಾತ್ಮದ ಸಹಾಯದಿಂದ ನೀವು ಬೈಬಲ್‌ ಜ್ಞಾನವನ್ನೂ ತಿಳಿವಳಿಕೆಯನ್ನೂ ಪಡೆಯುತ್ತಿರುವುದಕ್ಕಾಗಿ ಕೃತಜ್ಞರಾಗಿದ್ದೀರೋ?

ಪೌಲ ‘ಪವಿತ್ರಾತ್ಮಭರಿತನಾದನು’

9. ಪವಿತ್ರಾತ್ಮದ ಸಹಾಯದಿಂದ ಪೌಲ ಏನೆಲ್ಲ ಮಾಡಶಕ್ತನಾದನು?

9 ಕ್ರಿ.ಶ. 33ರ ಪಂಚಾಶತ್ತಮದ ಸುಮಾರು ಒಂದು ವರ್ಷದ ನಂತರ ಇನ್ನೊಬ್ಬ ವ್ಯಕ್ತಿ ದೇವರಿಂದ ಪವಿತ್ರಾತ್ಮ ವರವನ್ನು ಪಡೆದುಕೊಂಡನು. ಅವನೇ ಸೌಲ. ತರುವಾಯ ಪೌಲನೆಂದು ಪ್ರಸಿದ್ಧನಾದನು. ಪೌಲನು ಪವಿತ್ರಾತ್ಮದಿಂದ ಪ್ರೇರಿತನಾಗಿ ಬೈಬಲಿನ 14 ಪುಸ್ತಕಗಳನ್ನು ಬರೆದನು. ಅವುಗಳಿಂದ ನಾವು ಇಂದು ಕೂಡ ಪ್ರಯೋಜನ ಪಡೆಯುತ್ತಿದ್ದೇವೆ. ಪವಿತ್ರಾತ್ಮ ಪೇತ್ರನಿಗೆ ಸಹಾಯ ಮಾಡಿದಂತೆ ಪೌಲನಿಗೂ ಸಹಾಯಮಾಡಿತು. ಸ್ವರ್ಗದಲ್ಲಿ ಅಮರತ್ವ ಹಾಗೂ ನಿರ್ಲಯಾವಸ್ಥೆ ಪಡೆಯುವ ನಿರೀಕ್ಷೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಅದರ ಕುರಿತು ಬರೆಯಲು ಅದು ಅವನಿಗೆ ಸಹಾಯಮಾಡಿತು. ಪವಿತ್ರಾತ್ಮ ಸಹಾಯದಿಂದ ಅವನು ರೋಗಿಗಳನ್ನು ವಾಸಿಮಾಡಿದನು. ದೆವ್ವಗಳನ್ನು ಬಿಡಿಸಿದನು. ಸತ್ತ ವ್ಯಕ್ತಿಯನ್ನು ಪುನರುತ್ಥಾನಗೊಳಿಸಿದನು ಕೂಡ! ಇದಕ್ಕಿಂತ ಮುಖ್ಯವಾದ ಒಂದು ಕೆಲಸವನ್ನು ಮಾಡಲು ಪೌಲನಿಗೆ ಪವಿತ್ರಾತ್ಮ ಸಹಾಯಮಾಡಿತು. ನಾವಿಂದು ಅದೇ ಕೆಲಸವನ್ನು ಮಾಡಲು ಪವಿತ್ರಾತ್ಮವನ್ನು ಪಡೆದುಕೊಳ್ಳುತ್ತೇವೆ. ಅದ್ಭುತಕರವಾಗಿ ಅಲ್ಲದಿದ್ದರೂ ಪವಿತ್ರಾತ್ಮದ ಸಹಾಯ ಆ ಕೆಲಸದಲ್ಲಿ ನಮಗಿದೆ.

10. ಸತ್ಯದ ಕುರಿತು ಮಾತಾಡಲು ಪವಿತ್ರಾತ್ಮ ಪೌಲನಿಗೆ ಹೇಗೆ ಸಹಾಯಮಾಡಿತು?

10 “ಪವಿತ್ರಾತ್ಮಭರಿತನಾಗಿ” ಪೌಲ ಒಮ್ಮೆ ಒಬ್ಬ ಮಂತ್ರವಾದಿಯನ್ನು ಧೈರ್ಯದಿಂದ ಖಂಡಿಸಿದನು. ಆ ಘಟನೆಯನ್ನು ಕಣ್ಣಾರೆ ಕಂಡ ಸೈಪ್ರಸ್‌ನ ಮುಖ್ಯ ಅಧಿಕಾರಿ ಬಹಳ ಪ್ರಭಾವಿತನಾದನು. ಎಷ್ಟೆಂದರೆ “ಯೆಹೋವನ ಬೋಧನೆಗೆ ಅತ್ಯಾಶ್ಚರ್ಯಪಟ್ಟು” ಸತ್ಯ ಸ್ವೀಕರಿಸಿದನು. (ಅ. ಕಾ. 13:8-12) ಸತ್ಯದ ಕುರಿತು ಮಾತಾಡಲು ಪವಿತ್ರಾತ್ಮ ಅಗತ್ಯವಾಗಿ ಬೇಕೆಂದು ಪೌಲನಿಗೆ ಗೊತ್ತಿತ್ತು. (ಮತ್ತಾ. 10:20) ಆದ್ದರಿಂದಲೇ ತನಗೆ “ವಾಕ್ಸರಳತೆ” ದಯಪಾಲಿಸುವಂತೆ ದೇವರಲ್ಲಿ ಪ್ರಾರ್ಥಿಸಿರಿ ಎಂದು ಅವನು ಎಫೆಸ ಸಭೆಯವರನ್ನು ವಿನಂತಿಸಿಕೊಂಡನು.—ಎಫೆ. 6:18-20.

11. ಪವಿತ್ರಾತ್ಮವು ಪೌಲನನ್ನು ಹೇಗೆ ಮಾರ್ಗದರ್ಶಿಸಿತು?

11 ಪವಿತ್ರಾತ್ಮವು ಪೌಲನಿಗೆ ಧೈರ್ಯದಿಂದ ಮಾತಾಡುವಂತೆ ಸಹಾಯಮಾಡಿದ್ದಲ್ಲದೆ, ಕೆಲವೊಂದು ಸ್ಥಳಗಳಲ್ಲಿ ಮಾತಾಡದಂತೆಯೂ ತಡೆಯಿತು. ಮಿಷನೆರಿ ಪ್ರಯಾಣಗಳಲ್ಲೂ ಪವಿತ್ರಾತ್ಮ ಅವನನ್ನು ಮಾರ್ಗದರ್ಶಿಸಿತು. (ಅ. ಕಾ. 13:2; ಅಪೊಸ್ತಲರ ಕಾರ್ಯಗಳು 16:6-10 ಓದಿ.) ಇಂದು ಸಹ ಯೆಹೋವ ದೇವರು ಪವಿತ್ರಾತ್ಮದ ಮೂಲಕ ಸಾರುವ ಕೆಲಸವನ್ನು ಮಾರ್ಗದರ್ಶಿಸುತ್ತಿದ್ದಾನೆ. ಪೌಲನಂತೆ ದೇವಜನರು ಪವಿತ್ರಾತ್ಮದ ಸಹಾಯದಿಂದ ಸತ್ಯವನ್ನು ಧೈರ್ಯದಿಂದಲೂ ಹುರುಪಿನಿಂದಲೂ ಸಾರುತ್ತಿದ್ದಾರೆ. ಪೌಲನ ಸಮಯದಲ್ಲಿ ಉಪಯೋಗಿಸಿದಂತೆ ಇಂದು ಯೆಹೋವನು ಪವಿತ್ರಾತ್ಮವನ್ನು ಅದ್ಭುತಕರವಾಗಿ ಉಪಯೋಗಿಸುವುದಿಲ್ಲ. ಆದರೆ ಪವಿತ್ರಾತ್ಮದ ಮೂಲಕ ಸಹೃದಯಿಗಳನ್ನು ತನ್ನ ಕಡೆಗೆ ‘ಸೆಳೆಯುತ್ತಿದ್ದಾನೆ.’—ಯೋಹಾ. 6:44.

ಪವಿತ್ರಾತ್ಮದ ‘ಬೇರೆ ಬೇರೆ ರೀತಿಯ ಕಾರ್ಯಗಳು’

12-14. ಪವಿತ್ರಾತ್ಮ ದೇವಸೇವಕರೆಲ್ಲರ ಮೇಲೆ ಒಂದೇ ರೀತಿಯಲ್ಲಿ ಕೆಲಸಮಾಡುತ್ತದೋ? ವಿವರಿಸಿ.

12 ಒಂದನೇ ಶತಮಾನದ ಅಭಿಷಿಕ್ತ ಕ್ರೈಸ್ತರಿಗೆ ಯೆಹೋವನು ಪವಿತ್ರಾತ್ಮದ ಸಹಾಯ ಕೊಟ್ಟ ವಿಷಯ ಇಂದಿರುವ ದೇವರ ಸಮರ್ಪಿತ ಸೇವಕರಿಗೆ ಉತ್ತೇಜನದ ಮೂಲವಾಗಿದೆ ಎನ್ನುವುದರಲ್ಲಿ ಕಿಂಚಿತ್ತೂ ಸಂದೇಹವಿಲ್ಲ. ಪವಿತ್ರಾತ್ಮದ ಬೇರೆ ಬೇರೆ ವರಗಳ ಕುರಿತು ಕೊರಿಂಥದವರಿಗೆ ಪೌಲ ಏನು ಬರೆದನೆಂದು ಗಮನಿಸಿ: “ಬೇರೆ ಬೇರೆ ರೀತಿಯ ವರಗಳಿವೆಯಾದರೂ ಪವಿತ್ರಾತ್ಮವು ಒಂದೇ; ಬೇರೆ ಬೇರೆ ರೀತಿಯ ಶುಶ್ರೂಷೆಗಳಿವೆಯಾದರೂ ಕರ್ತನು ಒಬ್ಬನೇ; ಬೇರೆ ಬೇರೆ ರೀತಿಯ ಕಾರ್ಯಗಳಿವೆಯಾದರೂ ಎಲ್ಲರಲ್ಲಿಯೂ ಎಲ್ಲ ಕಾರ್ಯಗಳನ್ನು ನಡೆಸುವ ದೇವರು ಒಬ್ಬನೇ.” (1 ಕೊರಿಂ. 12:4-6, 11) ಹೌದು, ಒಂದು ಉದ್ದೇಶವನ್ನು ಪೂರೈಸಲಿಕ್ಕಾಗಿ ಪವಿತ್ರಾತ್ಮವು ಒಬ್ಬೊಬ್ಬ ದೇವಸೇವಕನ ಮೇಲೆ ಭಿನ್ನ ರೀತಿಗಳಲ್ಲಿ ಕೆಲಸಮಾಡಬಲ್ಲದು. ಇಂದು ‘ಚಿಕ್ಕ ಹಿಂಡೂ’ “ಬೇರೆ ಕುರಿಗಳೂ” ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಡುತ್ತಿದ್ದಾರೆ. (ಲೂಕ 12:32; ಯೋಹಾ. 10:16) ಆದರೆ ಸಭೆಯಲ್ಲಿರುವ ಪ್ರತಿಯೊಬ್ಬ ಸದಸ್ಯನ ಮೇಲೆ ಪವಿತ್ರಾತ್ಮ ಯಾವಾಗಲೂ ಒಂದೇ ತೆರನಾಗಿ ಕೆಲಸಮಾಡುವುದಿಲ್ಲ.

13 ಉದಾಹರಣೆಗೆ, ಹಿರಿಯರು ಪವಿತ್ರಾತ್ಮದ ಮೂಲಕ ನೇಮಿಸಲ್ಪಡುತ್ತಾರೆ. (ಅ. ಕಾ. 20:28) ಹಾಗಂತ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟವರೆಲ್ಲರು ಅಂದರೆ ಅಭಿಷಿಕ್ತ ಕ್ರೈಸ್ತರೆಲ್ಲರು ಹಿರಿಯರಾಗಿ ಸೇವೆಸಲ್ಲಿಸುತ್ತಿಲ್ಲ. ಇದರಿಂದ ನಮಗೇನು ತಿಳಿಯುತ್ತದೆ? ಸಭೆಯ ಸದಸ್ಯರ ಮೇಲೆ ಪವಿತ್ರಾತ್ಮ ಬೇರೆ ಬೇರೆ ವಿಧಗಳಲ್ಲಿ ಕೆಲಸಮಾಡುತ್ತದೆ.

14 ಅಭಿಷಿಕ್ತರಲ್ಲಿ ತಾವು ದೇವರ ದತ್ತು ಪುತ್ರರು ಎಂಬ ಭಾವನೆಯನ್ನು ಅಚ್ಚೊತ್ತಿಸುವ ಪವಿತ್ರಾತ್ಮವೇ ಯೇಸು ಕ್ರಿಸ್ತನನ್ನು ಪುನರುತ್ಥಾನಗೊಳಿಸಿತ್ತು. (ರೋಮನ್ನರಿಗೆ 8:11, 15 ಓದಿ.) ಪವಿತ್ರಾತ್ಮವನ್ನು ಉಪಯೋಗಿಸಿ ಯೆಹೋವ ದೇವರು ಇಡೀ ವಿಶ್ವವನ್ನು ಸೃಷ್ಟಿಸಿದನು. (ಆದಿ. 1:1-3) ದೇವದರ್ಶನ ಗುಡಾರದ ಕೆಲಸವನ್ನು ಮಾಡುವಂತೆ ಅದೇ ಪವಿತ್ರಾತ್ಮ ಬೆಚಲೇಲನನ್ನು ಸಮರ್ಥನನ್ನಾಗಿ ಮಾಡಿತು. ಅಸಾಧಾರಣ ಕೆಲಸಗಳನ್ನು ಮಾಡುವಂತೆ ಸಂಸೋನನನ್ನು ಬಲಗೊಳಿಸಿತು. ಪೇತ್ರನು ನೀರಿನ ಮೇಲೆ ನಡೆಯುವಂತೆ ಮಾಡಿತು. ಆದರೆ ಒಂದು ವಿಷಯವನ್ನು ನಾವು ನೆನಪಿನಲ್ಲಿಡಬೇಕು. ಅದೇನೆಂದರೆ ಪವಿತ್ರಾತ್ಮದಿಂದ ಸಹಾಯ ಪಡೆಯುವುದು ಹಾಗೂ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಡುವುದು ಎರಡೂ ಭಿನ್ನವಾಗಿವೆ. ಪವಿತ್ರಾತ್ಮದ ಅಭಿಷೇಕವು ಪವಿತ್ರಾತ್ಮ ಕೆಲಸಮಾಡುವ ಒಂದು ವಿಶೇಷ ವಿಧವಾಗಿದೆ. ದೇವರು ಆಯ್ಕೆ ಮಾಡುವ ಕೆಲವರು ಮಾತ್ರ ಹೀಗೆ ಅಭಿಷೇಕಿಸಲ್ಪಡುತ್ತಾರೆ. ಆದರೆ ಪವಿತ್ರಾತ್ಮ ಸಹಾಯವು ದೇವರ ಎಲ್ಲ ಸೇವಕರಿಗೆ ದೊರೆಯುತ್ತದೆ.

15. ಪವಿತ್ರಾತ್ಮದಿಂದ ಅಭಿಷೇಕಿಸಲ್ಪಡುವ ಕೆಲಸ ನಿರಂತರವಾಗಿ ಮುಂದುವರಿಯುತ್ತದೋ? ವಿವರಿಸಿ.

15 ಪ್ರಾಚೀನ ಕಾಲದಿಂದಲೂ ಪವಿತ್ರಾತ್ಮ ದೇವರ ನಂಬಿಗಸ್ತ ಸೇವಕರ ಮೇಲೆ ಅನೇಕ ವಿಧಗಳಲ್ಲಿ ಕೆಲಸ ಮಾಡುತ್ತಿದೆ. ಹೌದು, ಆತ್ಮಾಭಿಷಿಕ್ತರ ಆಯ್ಕೆ ಆರಂಭವಾಗುವ ಸಾವಿರಾರು ವರ್ಷಗಳ ಮುಂಚಿನಿಂದಲೂ ಪವಿತ್ರಾತ್ಮ ದೇವಸೇವಕರಿಗೆ ಸಹಾಯಮಾಡುತ್ತಿದೆ. ಪವಿತ್ರಾತ್ಮದಿಂದ ಅಭಿಷೇಕಿಸಲ್ಪಡುವ ಕೆಲಸ ಕ್ರಿ.ಶ. 33ರ ಪಂಚಾಶತ್ತಮದಂದು ಆರಂಭವಾಯಿತು. ಇದು ಬೇಗನೆ ಕೊನೆಗೊಳ್ಳಲಿದೆ. ಆದರೆ ದೇವರ ಚಿತ್ತವನ್ನು ಮಾಡುವಂತೆ ಆತನ ಜನರೆಲ್ಲರನ್ನು ಬಲಪಡಿಸುವ ಕೆಲಸವನ್ನು ಪವಿತ್ರಾತ್ಮವು ನಿತ್ಯನಿರಂತರಕ್ಕೂ ಮುಂದುವರಿಸುವುದು.

16. ಪವಿತ್ರಾತ್ಮದ ಸಹಾಯದಿಂದ ದೇವರ ಸೇವಕರು ಏನು ಮಾಡುತ್ತಿದ್ದಾರೆ?

16 ಪವಿತ್ರಾತ್ಮದ ಸಹಾಯದಿಂದ ಇಂದು ಭೂಮಿಯಲ್ಲಿ ಯಾವ ಕೆಲಸ ಮಾಡಲಾಗುತ್ತಿದೆ? ಅದನ್ನು ಪ್ರಕಟನೆ 22:17 ಹೇಳುತ್ತದೆ: “ಪವಿತ್ರಾತ್ಮವೂ ವಧುವೂ, ‘ಬಾ!’ ಎಂದು ಹೇಳುತ್ತಾ ಇರುತ್ತಾರೆ. ಕೇಳಿಸಿಕೊಳ್ಳುತ್ತಿರುವ ಪ್ರತಿಯೊಬ್ಬನು ‘ಬಾ!’ ಎನ್ನಲಿ. ಬಾಯಾರುತ್ತಿರುವ ಪ್ರತಿಯೊಬ್ಬನು ಬರಲಿ! ಇಷ್ಟವುಳ್ಳ ಪ್ರತಿಯೊಬ್ಬನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.” ಹೌದು, ಪವಿತ್ರಾತ್ಮದ ಸಹಾಯದಿಂದ ಇಂದು ಕ್ರೈಸ್ತರು “ಇಷ್ಟವುಳ್ಳ ಪ್ರತಿಯೊಬ್ಬನು” ಬಂದು ಜೀವಜಲವನ್ನು ಪಡೆದುಕೊಳ್ಳುವಂತೆ ಆಮಂತ್ರಿಸುತ್ತಿದ್ದಾರೆ. ಅಭಿಷಿಕ್ತ ಕ್ರೈಸ್ತರು ಈ ಕೆಲಸದಲ್ಲಿ ಮುಂದಾಳತ್ವ ವಹಿಸುತ್ತಿರುವಾಗ ಬೇರೆ ಕುರಿಗಳು ಅವರೊಂದಿಗೆ ಕೈಜೋಡಿಸಿದ್ದಾರೆ. ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡು “ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ” ಪಡೆದಿರುವ ಈ ಎರಡೂ ವರ್ಗದವರು ಪವಿತ್ರಾತ್ಮದ ಮಾರ್ಗದರ್ಶನದ ಕೆಳಗೆ ಈ ಕೆಲಸದಲ್ಲಿ ಮುಂದೊತ್ತುತ್ತಿದ್ದಾರೆ. (ಮತ್ತಾ. 28:19) ತಮ್ಮ ಜೀವನದಲ್ಲಿ ಪವಿತ್ರಾತ್ಮದ ಫಲವನ್ನು ತೋರ್ಪಡಿಸುತ್ತಿದ್ದಾರೆ. (ಗಲಾ. 5:22, 23) ಪವಿತ್ರಾತ್ಮದ ಸಹಾಯ ಪಡೆಯುತ್ತಾ ಯೆಹೋವನ ಮಟ್ಟಗಳಿಗನುಸಾರ ಶುದ್ಧ ಜೀವನ ನಡೆಸಲು ತಮ್ಮಿಂದಾಗುವುದೆಲ್ಲವನ್ನು ಮಾಡುತ್ತಿದ್ದಾರೆ.—2 ಕೊರಿಂ. 7:1; ಪ್ರಕ. 7:9, 14.

ಪವಿತ್ರಾತ್ಮಕ್ಕಾಗಿ ಕೇಳುತ್ತಾ ಇರಿ

17. ನಮ್ಮಲ್ಲಿ ಪವಿತ್ರಾತ್ಮ ಕೆಲಸಮಾಡುತ್ತಿದೆ ಎಂದು ತೋರಿಸಿಕೊಡುವುದು ಹೇಗೆ?

17 ನಿಮಗೆ ಸ್ವರ್ಗೀಯ ನಿರೀಕ್ಷೆಯಿರಲಿ ಭೂನಿರೀಕ್ಷೆಯಿರಲಿ ಕೊನೆಯ ವರೆಗೆ ಸಮಗ್ರತೆ ಕಾಪಾಡಿಕೊಳ್ಳಲು ‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು’ ಯೆಹೋವ ದೇವರು ಕೊಡುವನು. (2 ಕೊರಿಂ. 4:7) ನೀವು ಸುವಾರ್ತೆ ಸಾರುತ್ತಾ ಮುಂದುವರಿಯುವಾಗ ಜನರು ಅಪಹಾಸ್ಯ ಮಾಡಬಹುದು. ಆದರೆ ಇದನ್ನು ನೆನಪಿನಲ್ಲಿಡಿ: “ಕ್ರಿಸ್ತನ ಹೆಸರಿನ ನಿಮಿತ್ತ ನೀವು ನಿಂದಿಸಲ್ಪಡುತ್ತಿರುವುದಾದರೆ ಸಂತೋಷಿತರು; ಏಕೆಂದರೆ ಮಹಿಮೆಯ ಆತ್ಮವು, ದೇವರ ಪವಿತ್ರಾತ್ಮವು ಸಹ ನಿಮ್ಮಲ್ಲಿ ನೆಲೆಗೊಂಡಿದೆ.”—1 ಪೇತ್ರ 4:14.

18, 19. ಯೆಹೋವನು ಪವಿತ್ರಾತ್ಮದ ಮೂಲಕ ನಿಮಗೆ ಹೇಗೆ ಸಹಾಯಮಾಡುವನು? ನೀವೇನು ಮಾಡಲು ನಿಶ್ಚಯಿಸಿದ್ದೀರಿ?

18 ಯಾರು ಶ್ರದ್ಧೆಯಿಂದ ಬೇಡಿಕೊಳ್ಳುತ್ತಾರೋ ಅವರಿಗೆ ದೇವರು ಪವಿತ್ರಾತ್ಮವನ್ನು ಉದಾರವಾಗಿ ಕೊಡುವನು. ಪವಿತ್ರಾತ್ಮ ನಿಮ್ಮ ಕೌಶಲಗಳನ್ನು ಹರಿತಗೊಳಿಸುವುದು ಮಾತ್ರವಲ್ಲ ದೇವರ ಸೇವೆಯನ್ನು ಅತ್ಯುತ್ತಮವಾಗಿ ಮಾಡುವ ಬಯಕೆಯನ್ನು ಹೆಚ್ಚಿಸುವುದು. “ಆತನಿಗೆ ಮೆಚ್ಚಿಕೆಕರವಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ಆತನೇ ನಿಮ್ಮಲ್ಲಿ ಹುಟ್ಟಿಸುತ್ತಾನೆ. ಮತ್ತು ಅವುಗಳನ್ನು ಮಾಡಲು ಆತನೇ ನಿಮಗೆ ಶಕ್ತಿಯನ್ನು ಕೊಡುತ್ತಾನೆ.” (ಪರಿಶುದ್ಧ ಬೈಬಲ್‌) * ಪವಿತ್ರಾತ್ಮದ ಅತ್ಯಮೂಲ್ಯ ಸಹಾಯದ ಜೊತೆಗೆ ‘ಜೀವದ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಲು’ ನಾವು ಶ್ರಮಪಡಬೇಕು. ಹೀಗೆ ಮಾಡುವಾಗ ‘ನಮ್ಮ ಸ್ವಂತ ರಕ್ಷಣೆಯನ್ನು ಭಯದಿಂದಲೂ ನಡುಕದಿಂದಲೂ ಸಾಧಿಸಿಕೊಳ್ಳುತ್ತಾ ಇರಲು’ ಶಕ್ತರಾಗುವೆವು.—ಫಿಲಿ. 2:12, 13, 16.

19 ಆದ್ದರಿಂದ ನಿಮಗೆ ಸಿಗುವ ಪ್ರತಿಯೊಂದು ನೇಮಕವನ್ನು ತೀವ್ರಾಪೇಕ್ಷೆಯಿಂದಲೂ ಪೂರ್ಣಶಕ್ತಿಯಿಂದಲೂ ಮಾಡಿ. ನಿಮ್ಮ ಕೆಲಸದಲ್ಲಿ ಆದಷ್ಟು ನೈಪುಣ್ಯತೆ ಪಡೆಯಿರಿ. ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳಿ. (ಯಾಕೋ. 1:5) ಆತನು ನಿಮಗೆ ತನ್ನ ವಾಕ್ಯವನ್ನು ಅರ್ಥಮಾಡಿಕೊಳ್ಳಲು ತಿಳಿವಳಿಕೆಯನ್ನು, ಜೀವನದ ಸಮಸ್ಯೆಗಳನ್ನು ಎದುರಿಸಲು ಮತ್ತು ಸುವಾರ್ತೆ ಸಾರಲು ಬಲವನ್ನು ಒದಗಿಸುವನು. “ಕೇಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು.” ನೀವು ಪವಿತ್ರಾತ್ಮಕ್ಕಾಗಿ ಕೇಳಿಕೊಳ್ಳುತ್ತಾ ಇರುವಲ್ಲಿ ಅದು ನಿಮಗೆ ದೊರಕುವುದು. (ಲೂಕ 11:9, 13) ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟ ಪ್ರಾಚೀನ ಕಾಲದ ಹಾಗೂ ಆಧುನಿಕ ದಿನದ ಸೇವಕರಂತೆ ನೀವು ಸಹ ನಂಬಿಗಸ್ತರಾಗಿ ಉಳಿಯಲು ದೇವರಿಗೆ ಬಿನ್ನಹಿಸುತ್ತಾ ಇರಿ.

[ಪಾದಟಿಪ್ಪಣಿ]

^ ಪ್ಯಾರ. 18 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ವಿವರಿಸುವಿರಾ?

• ಮರಿಯಳಂತೆ ನಮ್ಮಲ್ಲಿ ಯಾವ ಗುಣವಿರಬೇಕು? ಇದರಿಂದ ನಮಗೆ ಯಾವ ಆಶೀರ್ವಾದ ಸಿಗುತ್ತದೆ?

• ಪೌಲನು ಯಾವ ರೀತಿಯಲ್ಲಿ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟನು?

• ಇಂದಿರುವ ದೇವಜನರು ಹೇಗೆ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಡುತ್ತಿದ್ದಾರೆ?

[ಅಧ್ಯಯನ ಪ್ರಶ್ನೆಗಳು]

[ಪುಟ 24ರಲ್ಲಿರುವ ಚಿತ್ರ]

ಪವಿತ್ರಾತ್ಮದ ಸಹಾಯದಿಂದ ಪೌಲ ದುಷ್ಟಾತ್ಮಗಳ ಪ್ರಭಾವವನ್ನು ಧೈರ್ಯದಿಂದ ಎದುರಿಸಿದನು

[ಪುಟ 26ರಲ್ಲಿರುವ ಚಿತ್ರ]

ಅಭಿಷಿಕ್ತರಿಗೂ ಬೇರೆಕುರಿಗಳಿಗೂ ಪವಿತ್ರಾತ್ಮ ಸಹಾಯಮಾಡುತ್ತಿದೆ