ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾಚೀನ ಕಾಲದ ದೇವಜನರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು

ಪ್ರಾಚೀನ ಕಾಲದ ದೇವಜನರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು

ಪ್ರಾಚೀನ ಕಾಲದ ದೇವಜನರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟರು

“ಯೆಹೋವನೆಂಬ ದೇವರು ತನ್ನ ಆತ್ಮದೊಡನೆ ನನ್ನನ್ನು ಕಳುಹಿಸಿದ್ದಾನೆ.”—ಯೆಶಾ. 48:16.

1, 2. ನಂಬಿಕೆಯನ್ನು ಬೆಳೆಸಿಕೊಳ್ಳಲು ನಮಗೆ ಯಾವ ಸಹಾಯ ಅಗತ್ಯ? ದೇವರ ಪ್ರಾಚೀನ ಸೇವಕರ ಉದಾಹರಣೆಗಳನ್ನು ಕಲಿಯುವುದು ನಮಗೆ ಹೇಗೆ ಸ್ಫೂರ್ತಿ ನೀಡುತ್ತದೆ?

“ನಂಬಿಕೆಯು ಎಲ್ಲರ ಸೊತ್ತಾಗಿರುವುದಿಲ್ಲ” ಎನ್ನುವುದು ಹೇಬೆಲನ ಸಮಯದಿಂದ ಸ್ಪಷ್ಟವಾಗಿದೆ. (2 ಥೆಸ. 3:2) ಹಾಗಿದ್ದರೂ ಅನೇಕರು ದೇವರಲ್ಲಿ ನಂಬಿಕೆ ಇಡಸಾಧ್ಯವಾಗಿದೆ. ಹೇಗೆ? ದೇವರ ವಾಕ್ಯದಿಂದ ಕೇಳಿಸಿಕೊಂಡ ವಿಷಯದಿಂದ ನಂಬಿಕೆ ಉಂಟಾಗುತ್ತದೆ. (ರೋಮ. 10:17) ನಂಬಿಕೆಯು ದೇವರ ಪವಿತ್ರಾತ್ಮದ ಫಲದ ಭಾಗವಾಗಿದೆ. (ಗಲಾ. 5:22, 23) ಹಾಗಾಗಿ ನಂಬಿಕೆಯನ್ನು ಬೆಳೆಸಿಕೊಳ್ಳಲು ಮತ್ತು ಅದನ್ನು ಕ್ರಿಯೆಗಳಲ್ಲಿ ತೋರಿಸಲು ನಮಗೆ ಪವಿತ್ರಾತ್ಮದ ಸಹಾಯ ಬೇಕೇಬೇಕು.

2 ನಂಬಿಕೆ ಅನ್ನೋದು ಹುಟ್ಟಿನಿಂದಲೇ ಸ್ವಭಾವತಃ ಬರುವುದಿಲ್ಲ. ದೇವರ ಪ್ರಾಚೀನ ಸೇವಕರಲ್ಲೂ ಅದು ಹುಟ್ಟಿನಿಂದಲೇ ಬಂದಿರಲಿಲ್ಲ, ಅವರು “ನಮ್ಮಂಥ ಭಾವನೆಗಳಿದ್ದ” ವ್ಯಕ್ತಿಗಳಾಗಿದ್ದರು. (ಯಾಕೋ. 5:17) ನಮ್ಮಂತೆ ಅವರಲ್ಲೂ ಸಂದೇಹಗಳಿದ್ದವು. ಅಭದ್ರತೆಯ ಅನಿಸಿಕೆ ಇತ್ತು. ಬಲಹೀನರೂ ಆಗಿದ್ದರು. ಆದರೂ ಸವಾಲುಗಳನ್ನು ಎದುರಿಸಲು ಪವಿತ್ರಾತ್ಮದ ಸಹಾಯದಿಂದ “ಬಲಿಷ್ಠರಾಗಿ ಮಾಡಲ್ಪಟ್ಟರು.” (ಇಬ್ರಿ. 11:34) ಈ ಸೇವಕರಿಗೆ ಪವಿತ್ರಾತ್ಮ ಹೇಗೆ ಸಹಾಯ ಮಾಡಿತೆಂದು ನಾವೀಗ ಕಲಿಯೋಣ. ಇದು, ಕೊನೆ ವರೆಗೆ ದೇವರಿಗೆ ನಂಬಿಗಸ್ತರಾಗಿ ಉಳಿಯಲು ನಮಗೆ ಸ್ಫೂರ್ತಿ ನೀಡುವುದು. ಏಕೆಂದರೆ ನಮ್ಮ ನಂಬಿಕೆಯನ್ನು ಶಿಥಿಲಗೊಳಿಸುವ ಅನೇಕ ವಿಷಯಗಳು ಇಂದು ನಮ್ಮ ಸುತ್ತಮುತ್ತಲಿವೆ.

ಪವಿತ್ರಾತ್ಮ ಮೋಶೆಯನ್ನು ಬಲಪಡಿಸಿತು

3-5. (ಎ) ಮೋಶೆ ತನ್ನ ಜವಾಬ್ದಾರಿಗಳನ್ನು ಪವಿತ್ರಾತ್ಮದ ಸಹಾಯದಿಂದ ನಿರ್ವಹಿಸಿದನೆಂದು ಹೇಗೆ ಹೇಳಬಹುದು? (ಬಿ) ದೇವರು ನಮಗೆ ಪವಿತ್ರಾತ್ಮ ಕೊಡುವ ಬಗ್ಗೆ ಮೋಶೆಯ ಉದಾಹರಣೆಯಿಂದ ಏನನ್ನು ಕಲಿಯುತ್ತೇವೆ?

3 ನಾವು ಕ್ರಿ.ಪೂ. 1513ಕ್ಕೆ ಹಿಂದೆ ಹೋಗೋಣ. ಆ ಸಮಯದಲ್ಲಿ ಜೀವಿಸಿದ್ದ ಜನರಲ್ಲಿ ಮೋಶೆ “ಬಹುಸಾತ್ವಿಕ” ವ್ಯಕ್ತಿಯಾಗಿದ್ದನು. (ಅರ. 12:3) ಈ ಸೌಮ್ಯಭಾವದ ವ್ಯಕ್ತಿಗೆ ಯೆಹೋವನು ಇಸ್ರಾಯೇಲ್‌ ಜನಾಂಗವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ವಹಿಸಿದ್ದನು. ಈ ಜವಾಬ್ದಾರಿಯನ್ನು ನಿರ್ವಹಿಸಲು ಪವಿತ್ರಾತ್ಮವನ್ನೂ ನೀಡಿದನು. ಅದರ ಸಹಾಯದಿಂದ ಮೋಶೆ ಪ್ರವಾದಿಸಿದನು, ನ್ಯಾಯನಿರ್ಣಯಗಳನ್ನು ಮಾಡಿದನು, ಬೈಬಲ್‌ ಪುಸ್ತಕಗಳನ್ನು ಬರೆದನು, ಇಸ್ರಾಯೇಲ್‌ ಜನಾಂಗದ ನಾಯಕತ್ವ ವಹಿಸಿದನು ಹಾಗೂ ಅದ್ಭುತಗಳನ್ನು ಮಾಡಿದನು. (ಯೆಶಾಯ 63:11-14 ಓದಿ.) ಆದರೂ ಒಮ್ಮೆ ಅವನು ತನ್ನ ಜವಾಬ್ದಾರಿಯ ಭಾರ ಹೊರಲು ಅಸಾಧ್ಯ ಎಂದು ದೇವರಿಗೆ ಗೋಳಿಟ್ಟನು. (ಅರ. 11:14, 15) ಆಗ ದೇವರು ಮೋಶೆಗೆ ಕೊಟ್ಟಿದ್ದ “ಆತ್ಮೀಯ ವರಗಳಲ್ಲಿ ಕೆಲವನ್ನು” ಅಂದರೆ ಪವಿತ್ರಾತ್ಮ ಶಕ್ತಿಯಲ್ಲಿ ಸ್ವಲ್ಪವನ್ನು ಬೇರೆ 70 ಮಂದಿಗೆ ಕೊಟ್ಟು ಅವರು ಮೋಶೆಯ ಜವಾಬ್ದಾರಿಗಳಿಗೆ ಹೆಗಲು ಕೊಡುವಂತೆ ಏರ್ಪಡಿಸಿದನು. (ಅರ. 11:16, 17) ಜವಾಬ್ದಾರಿ ತುಂಬಾ ಭಾರ ಎಂದು ಮೋಶೆಗೆ ಅನಿಸಿತ್ತಾದರೂ ಅವನಾಗಲಿ ಉಳಿದ 70 ಮಂದಿಯಾಗಲಿ ಅದನ್ನು ತಮ್ಮ ಸ್ವಂತ ಶಕ್ತಿಯಿಂದ ನಿರ್ವಹಿಸುತ್ತಿರಲಿಲ್ಲ. ದೇವರ ನೆರವು ಅವರಿಗಿತ್ತು.

4 ನೇಮಕವನ್ನು ನಿರ್ವಹಿಸಲು ಬೇಕಾದಷ್ಟು ಪವಿತ್ರಾತ್ಮ ಶಕ್ತಿಯನ್ನು ಯೆಹೋವ ದೇವರು ಮೋಶೆಗೆ ಕೊಟ್ಟಿದ್ದನು. 70 ಮಂದಿ ನೇಮಿಸಲ್ಪಟ್ಟ ನಂತರವೂ ಅಗತ್ಯವಿದ್ದಷ್ಟು ಪವಿತ್ರಾತ್ಮದ ನೆರವು ಮೋಶೆಗಿತ್ತು. ಅವನಿಗೆ ಪವಿತ್ರಾತ್ಮ ಶಕ್ತಿಯ ಕೊರತೆ ಆಗಲಿಲ್ಲ. ಅದೇ ರೀತಿಯಲ್ಲಿ, ಆ 70 ಮಂದಿಗೆ ಸಿಕ್ಕಿದ ಪವಿತ್ರಾತ್ಮವು ಅಗತ್ಯಕ್ಕಿಂತ ಹೆಚ್ಚಾಗಿರಲಿಲ್ಲ. ಯೆಹೋವನು ಪ್ರತಿಯೊಬ್ಬರಿಗೆ ಅವರವರ ಸನ್ನಿವೇಶಕ್ಕೆ ತಕ್ಕಂತೆ ಶಕ್ತಿಯನ್ನು ಕೊಡುತ್ತಾನೆ. “ದೇವರು ಪವಿತ್ರಾತ್ಮವನ್ನು ಅಳತೆಮಾಡಿ” ನೀಡದೆ ಹೇರಳವಾಗಿ ನೀಡುತ್ತಾನೆ.—ಯೋಹಾ. 3:34.

5 ನೀವೀಗ ನಂಬಿಕೆಯ ಪರೀಕ್ಷೆಗಳನ್ನು ಎದುರಿಸುತ್ತಿದ್ದೀರಾ? ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜವಾಬ್ದಾರಿಗಳು ನಿಮ್ಮ ಹೆಗಲೇರುತ್ತಿವೆಯಾ? ಒಂದೆಡೆ ಖರ್ಚುವೆಚ್ಚಗಳು ಹೆಚ್ಚುತ್ತಾ, ಆರೋಗ್ಯ ಹದಗೆಡುತ್ತಾ ಇರುವಾಗ ಇನ್ನೊಂದೆಡೆ ಕುಟುಂಬವನ್ನು ಭೌತಿಕವಾಗಿ, ಆಧ್ಯಾತ್ಮಿಕವಾಗಿ ನೋಡಿಕೊಳ್ಳಲು ಹೆಣಗಾಡುತ್ತಿದ್ದೀರಾ? ಸಭೆಯಲ್ಲಿ ನಿಮಗೆ ತುಂಬ ಜವಾಬ್ದಾರಿ ಇದೆಯಾ? ನಿಮ್ಮ ಸನ್ನಿವೇಶ ಯಾವುದೇ ಆಗಿರಲಿ ಅದನ್ನು ನಿಭಾಯಿಸಲು ಯೆಹೋವನು ಪವಿತ್ರಾತ್ಮದ ಮೂಲಕ ಬಲವನ್ನು ಕೊಟ್ಟೇ ಕೊಡುವನು!—ರೋಮ. 15:13.

ಬೆಚಲೇಲನಿಗೆ ಪವಿತ್ರಾತ್ಮದ ಸಹಾಯ

6-8. (ಎ) ಬೆಚಲೇಲ ಹಾಗೂ ಒಹೊಲೀಯಾಬರಿಗೆ ಪವಿತ್ರಾತ್ಮ ಹೇಗೆ ಸಹಾಯ ಮಾಡಿತು? (ಬಿ) ಅವರಿಗೆ ಪವಿತ್ರಾತ್ಮ ಸಹಾಯ ಮಾಡಿತು ಎಂದು ಯಾವುದು ರುಜುಪಡಿಸುತ್ತದೆ? (ಸಿ) ಬೆಚಲೇಲನ ಉದಾಹರಣೆಯಿಂದ ನಮಗೆ ಯಾವ ಉತ್ತೇಜನ ಸಿಗುತ್ತದೆ?

6 ಮೋಶೆಯ ಸಮಯದಲ್ಲಿ ಪವಿತ್ರಾತ್ಮದ ಸಹಾಯ ಪಡೆದುಕೊಂಡ ಇನ್ನೊಬ್ಬ ವ್ಯಕ್ತಿ ಬೆಚಲೇಲ. ಪವಿತ್ರಾತ್ಮ ಯಾವ ರೀತಿಯಲ್ಲೆಲ್ಲ ಸಹಾಯ ಮಾಡುತ್ತದೆ ಎನ್ನುವುದನ್ನು ಅವನ ಅನುಭವದಿಂದ ತಿಳಿಯಬಹುದು. (ವಿಮೋಚನಕಾಂಡ 35:30-35 ಓದಿ.) ದೇವದರ್ಶನದ ಗುಡಾರದ ನಿರ್ಮಾಣಕ್ಕಾಗಿ ಬೇಕಾದ ವಸ್ತುಗಳನ್ನು ಮಾಡಲು ಯೆಹೋವನು ಬೆಚಲೇಲನನ್ನು ನೇಮಿಸಿದನು. ಆದರೆ ಕರಕುಶಲ ಕೆಲಸ ಅವನಿಗೆ ಗೊತ್ತಿತ್ತಾ? ಒಂದು ವೇಳೆ ಗೊತ್ತಿದ್ದರೂ ಅವನು ಈ ಮುಂಚೆ ಈಜಿಪ್ಟ್‌ನಲ್ಲಿ ಮಾಡುತ್ತಿದ್ದದ್ದು ಇಟ್ಟಿಗೆ ತಯಾರಿ ಮಾಡುವ ಕೆಲಸವಷ್ಟೆ. (ವಿಮೋ. 1:13, 14) ಹಾಗಾದರೆ ಇಷ್ಟೊಂದು ನಾಜೂಕಾದ ಕೆಲಸವನ್ನು ಬೆಚಲೇಲನು ಮಾಡಿದ್ದಾದರೂ ಹೇಗೆ? ಯೆಹೋವನು ಅವನಿಗೆ “ಕೆತ್ತನೇ ಕೆಲಸವನ್ನು ಮಾಡುವದಕ್ಕೂ ಬೇರೆ ಸಕಲವಿಧವಾದ ಶೃಂಗಾರವಾದ ಕೆಲಸವನ್ನು ಮಾಡುವದಕ್ಕೂ . . . ದಿವ್ಯಾತ್ಮನನ್ನು ಕೊಟ್ಟು ಬೇಕಾದ ಜ್ಞಾನವಿದ್ಯಾವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ” ಅನುಗ್ರಹಿಸಿದನು. ಹೀಗೆ ಬೆಚಲೇಲನಲ್ಲಿ ಇದ್ದಿರಬಹುದಾದ ಪ್ರತಿಭೆಯನ್ನು ಪವಿತ್ರಾತ್ಮವು ಇನ್ನಷ್ಟು ಉತ್ತಮಗೊಳಿಸಿತು. ಅಂತೆಯೇ ಒಹೊಲೀಯಾಬನಿಗೂ ಪವಿತ್ರಾತ್ಮ ಸಹಾಯ ಮಾಡಿತು. ಇವರಿಬ್ಬರೂ ಕೆಲಸವನ್ನು ಎಷ್ಟು ಚೆನ್ನಾಗಿ ಕಲಿತರೆಂದರೆ ತಮಗೆ ವಹಿಸಿದ ಕೆಲಸವನ್ನು ಮಾಡುವುದರ ಜೊತೆಗೆ ಇತರರಿಗೂ ಕಲಿಸಲು ಸಮರ್ಥರಾದರು. ಈ ಸಾಮರ್ಥ್ಯವನ್ನು ಅವರಿಗೆ ಕೊಟ್ಟವನು ದೇವರೇ.

7 ಬೆಚಲೇಲ ಮತ್ತು ಒಹೊಲೀಯಾಬರಿಗೆ ಪವಿತ್ರಾತ್ಮದ ಸಹಾಯವಿತ್ತು ಎನ್ನುವುದಕ್ಕೆ ಇನ್ನೊಂದು ರುಜುವಾತು ಅವರ ಕೆಲಸದ ಗುಣಮಟ್ಟ. ಅವರು ತಯಾರಿಸಿದ ವಸ್ತುಗಳನ್ನು 500 ವರ್ಷಗಳ ನಂತರವೂ ಉಪಯೋಗಿಸಲಾಗುತ್ತಿತ್ತು. (2 ಪೂರ್ವ. 1:2-6) ಇಂದು ಅನೇಕ ಕೆಲಸಗಾರರು ತಾವೇನೇ ನಿರ್ಮಿಸಿದರೂ ಅದರ ಮೇಲೆ ತಮ್ಮ ಹಸ್ತಾಕ್ಷರ ಅಥವಾ ಗುರುತನ್ನು ಹಾಕುತ್ತಾರೆ. ಬೆಚಲೇಲ, ಒಹೊಲೀಯಾಬರು ಹಾಗೆ ಮಾಡಲಿಲ್ಲ. ಅವರ ಆ ಉತ್ಕೃಷ್ಟ ಕೆಲಸದ ಕೀರ್ತಿ ಯೆಹೋವನಿಗೆ ಸಂದಿತು.—ವಿಮೋ. 36:1, 2.

8 ಇಂದು ಯೆಹೋವನ ಸೇವೆಯಲ್ಲಿ ನಮಗೂ ಅನೇಕ ಕೆಲಸಗಳನ್ನು ಮಾಡುವ ಅವಕಾಶ ಸಿಗಬಹುದು. ಕಟ್ಟಡ ನಿರ್ಮಾಣ, ಮುದ್ರಣ, ಅಧಿವೇಶನಗಳನ್ನು ಸಂಘಟಿಸುವುದು, ವಿಪತ್ತು ಪರಿಹಾರ ಯೋಜನೆಯ ಮೇಲ್ವಿಚಾರಣೆ, ರಕ್ತದ ಕುರಿತ ನಮ್ಮ ಬೈಬಲಾಧರಿತ ನಿಲುವಿನ ಬಗ್ಗೆ ವೈದ್ಯರೊಂದಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಮಾತಾಡುವುದು ಅವುಗಳಲ್ಲಿ ಕೆಲವು. ಇಂಥ ಕೆಲಸಗಳನ್ನು ಕೆಲವೊಮ್ಮೆ ಕೌಶಲವಿರುವ ಸಹೋದರರು ಮಾಡುತ್ತಾರಾದರೂ ಹೆಚ್ಚಾಗಿ ಅದನ್ನು ಮಾಡುವವರು ಆ ಕೆಲಸದಲ್ಲಿ ಅನುಭವವಿಲ್ಲದ ಸ್ವಯಂಸೇವಕರು. ಆದರೂ ಪವಿತ್ರಾತ್ಮದ ಸಹಾಯದಿಂದ ಅವರ ಪ್ರಯತ್ನಗಳು ಸಫಲಗೊಳ್ಳುತ್ತವೆ. ನಿಮಗೆ ಒಂದು ನೇಮಕ ಸಿಕ್ಕಿದಾಗ ಅದನ್ನು ಮಾಡಲು ಇತರರು ಹೆಚ್ಚು ಯೋಗ್ಯರೆಂದೆಣಿಸಿ ನೀವದನ್ನು ಕೈಗೆತ್ತಿಕೊಳ್ಳಲು ಹಿಂಜರಿದಿದ್ದೀರಾ? ಹಾಗಾದರೆ ನೆನಪಿಡಿ, ಯೆಹೋವನು ಕೊಡುವ ಯಾವುದೇ ನೇಮಕವನ್ನು ಪೂರೈಸಲಾಗುವಂತೆ ಪವಿತ್ರಾತ್ಮವು ನಿಮ್ಮನ್ನು ಸಮರ್ಥರನ್ನಾಗಿ ಮಾಡುವುದು. ನಿಮಗಿರುವ ಜ್ಞಾನ ಹಾಗೂ ಸಾಮರ್ಥ್ಯವನ್ನು ಪವಿತ್ರಾತ್ಮವು ಉತ್ತಮಗೊಳಿಸುವುದು.

ಪವಿತ್ರಾತ್ಮದ ಸಹಾಯದಿಂದ ವಿಜಯ ಸಾಧಿಸಿದ ಯೆಹೋಶುವ

9. ಈಜಿಪ್ಟಿನಿಂದ ಬಿಡುಗಡೆಯಾಗಿ ಬಂದ ಇಸ್ರಾಯೇಲ್ಯರಿಗೆ ಯಾವ ಸನ್ನಿವೇಶ ಬಂದೊದಗಿತು? ಯಾವ ಪ್ರಶ್ನೆಯೆದ್ದಿತು?

9 ಮೋಶೆ ಮತ್ತು ಬೆಚಲೇಲನ ಸಮಯದಲ್ಲಿ ಪವಿತ್ರಾತ್ಮದ ಸಹಾಯ ಪಡೆದ ಇನ್ನೊಬ್ಬ ವ್ಯಕ್ತಿ ಯೆಹೋಶುವ. ಇಸ್ರಾಯೇಲ್ಯರು ಈಜಿಪ್ಟಿನಿಂದ ಬಿಡುಗಡೆಯಾಗಿ ಬಂದು ಸ್ವಲ್ಪ ಸಮಯ ಕಳೆದಿತ್ತಷ್ಟೆ. ಅಮಾಲೇಕ್ಯರು ಕಾರಣವಿಲ್ಲದೆ ಇಸ್ರಾಯೇಲ್ಯರ ವಿರುದ್ಧ ಯುದ್ಧಕ್ಕೆ ಬಂದರು. ಅವರನ್ನು ಹಿಮ್ಮೆಟ್ಟಿಸದೇ ಬೇರೆ ದಾರಿಯಿರಲಿಲ್ಲ. ಯುದ್ಧದ ಅನುಭವವೇ ಇಲ್ಲದ ಇಸ್ರಾಯೇಲ್ಯರು ಸೈನ್ಯಕಟ್ಟಿ ಅಮಾಲೇಕ್ಯರೊಂದಿಗೆ ಹೋರಾಡಬೇಕಾದ ಸಂದರ್ಭ ಏರ್ಪಟ್ಟಿತು. (ವಿಮೋ. 13:17; 17:8) ಸೈನ್ಯಕ್ಕೆ ಒಬ್ಬ ನಾಯಕನೂ ಬೇಕಿತ್ತು. ಯಾರು ನಾಯಕನಾಗುವನು?

10. ಯೆಹೋಶುವನ ನೇತೃತ್ವದಲ್ಲಿ ಇಸ್ರಾಯೇಲ್ಯರು ಯುದ್ಧದಲ್ಲಿ ಜಯಗಳಿಸಲು ಕಾರಣವೇನು?

10 ಯೆಹೋಶುವನನ್ನು ನಾಯಕನಾಗಿ ನೇಮಿಸಲಾಯಿತು. ಯುದ್ಧದ ಅನುಭವ ಅವನಿಗೆ ಇತ್ತಾ? ಕೆಲಸದ ಅನುಭವ ಕೇಳಿದರೆ ಏನೆಂದು ಉತ್ತರಿಸುತ್ತಿದ್ದನು? ಬಿಟ್ಟಿಯಾಳಾಗಿ ದುಡಿದದ್ದು, ಮಣ್ಣು ಮತ್ತು ಹುಲ್ಲು ಕಲಸಿ ಇಟ್ಟಿಗೆ ತಯಾರಿಸಿದ್ದು, ಮನ್ನಾ ಸಂಗ್ರಹಿಸಿದ್ದು ಅಷ್ಟೆಯಲ್ಲವೇ? ಅವನ ಅಜ್ಜ ಎಲೀಷಾಮನು ಎಫ್ರಾಯೀಮ್‌ ಕುಲದ ದಂಡಿನ ಸೇನಾನಾಯಕನಾಗಿದ್ದನು. ಬಹುಶಃ ಇಸ್ರಾಯೇಲಿನ ಮೂರು ಕುಲಗಳ 1,08,100 ಸೈನಿಕರ ನಾಯಕ ಆಗಿದ್ದಿರಬೇಕು. (ಅರ. 2:18, 24; 1 ಪೂರ್ವ. 7:26, 27) ಆದರೆ ಯೆಹೋವ ದೇವರು ಎಲೀಷಾಮನನ್ನಾಗಲಿ ಅವನ ಮಗ ನೂನನನ್ನಾಗಲಿ ಆರಿಸಿಕೊಳ್ಳದೆ ಯೆಹೋಶುವನನ್ನು ಆಯ್ಕೆ ಮಾಡುವಂತೆ ಮೋಶೆಗೆ ಹೇಳಿದನು. ಯೆಹೋಶುವನು ಇಸ್ರಾಯೇಲ್ಯರ ಸೇನಾಧಿಪತಿಯಾಗಿ ವೈರಿಗಳನ್ನು ನಾಶಮಾಡಬೇಕಿತ್ತು. ದಿನವಿಡೀ ಯುದ್ಧ ನಡೆಯಿತು. ಇಸ್ರಾಯೇಲ್ಯರಿಗೆ ಜಯ ದೊರೆಯಿತು! ಯೆಹೋಶುವನು ಯೆಹೋವನಿಗೆ ವಿಧೇಯತೆ ತೋರಿಸಿ ಪವಿತ್ರಾತ್ಮದ ಮಾರ್ಗದರ್ಶನವನ್ನು ಅನುಸರಿಸಿದ್ದೇ ಈ ವಿಜಯಕ್ಕೆ ಕಾರಣ.—ವಿಮೋ. 17:9-13.

11. ನಾವು ಹೇಗೆ ಯೆಹೋಶುವನಂತೆ ದೇವರ ಸೇವೆಯಲ್ಲಿ ಯಶಸ್ವಿಯಾಗಬಲ್ಲೆವು?

11 ಪವಿತ್ರಾತ್ಮದಿಂದ “ಜ್ಞಾನವರಸಂಪನ್ನನಾದ” ಯೆಹೋಶುವನು ಮೋಶೆಯ ನಂತರ ಇಸ್ರಾಯೇಲ್ಯರ ನಾಯಕನಾದನು. (ಧರ್ಮೋ. 34:9) ಮೋಶೆಯಂತೆ ಪ್ರವಾದಿಸುವ ಹಾಗೂ ಅದ್ಭುತಗಳನ್ನು ಮಾಡುವ ಸಾಮರ್ಥ್ಯವನ್ನು ಪವಿತ್ರಾತ್ಮ ಅವನಿಗೆ ಕೊಡಲಿಲ್ಲ. ಆದರೆ ಬೇರೊಂದು ವಿಧದಲ್ಲಿ ಸಹಾಯನೀಡಿತು. ಇಸ್ರಾಯೇಲ್ಯರ ಸೈನ್ಯದ ನಾಯಕತ್ವ ವಹಿಸಿ ಕಾನಾನ್‌ ದೇಶವನ್ನು ವಶಪಡಿಸಿಕೊಳ್ಳುವುದರಲ್ಲಿ ಸಫಲನಾಗುವಂತೆ ಮಾಡಿತು. ಇಂದು ಯೆಹೋವನ ಸೇವೆಯಲ್ಲಿ ನಮಗೆ ಕೆಲವು ಸುಯೋಗಗಳು ಸಿಗುವಾಗ ನಾವದಕ್ಕೆ ಅನರ್ಹರು ಎಂಬ ಭಾವನೆ ಬರಬಹುದು. ಆದರೆ ದೇವರ ಪವಿತ್ರಾತ್ಮದ ಮಾರ್ಗದರ್ಶನವನ್ನು ಅನುಸರಿಸುವುದಾದರೆ ಯೆಹೋಶುವನಂತೆ ನಾವೂ ಯಶಸ್ವಿಯಾಗುವೆವು!—ಯೆಹೋ. 1:7-9.

“ಯೆಹೋವನ ಆತ್ಮನ ಆವೇಶವುಳ್ಳವನಾಗಿ” ಕ್ರಿಯೆಗೈದ ಗಿದ್ಯೋನ

12-14. (ಎ) ಕೇವಲ 300 ಸೈನಿಕರು ಮಿದ್ಯಾನ್ಯರ ಮಹಾ ಸೈನ್ಯವನ್ನು ಸೋಲಿಸಿದ ವಿಷಯದಿಂದ ನಮಗೇನು ತಿಳಿಯುತ್ತದೆ? (ಬಿ) ಯೆಹೋವನು ಗಿದ್ಯೋನನಿಗೆ ಯಾವ ರೀತಿಯಲ್ಲಿ ಆಶ್ವಾಸನೆ ಕೊಟ್ಟನು? (ಸಿ) ಇಂದು ನಮಗೆ ಯಾವ ಆಶ್ವಾಸನೆಯಿದೆ?

12 ಯೆಹೋಶುವನ ಮರಣದ ನಂತರವೂ ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಪವಿತ್ರಾತ್ಮದ ಮೂಲಕ ಬಲಪಡಿಸಿದನು. ಹೀಗೆ “ನಿರ್ಬಲ ಸ್ಥಿತಿಯಿಂದ ಬಲಿಷ್ಠರಾಗಿ ಮಾಡಲ್ಪಟ್ಟ” ವ್ಯಕ್ತಿಗಳ ಎಷ್ಟೋ ಉದಾಹರಣೆಗಳು ನ್ಯಾಯಸ್ಥಾಪಕರು ಪುಸ್ತಕದಲ್ಲಿವೆ. (ಇಬ್ರಿ. 11:34) ಅವರಲ್ಲಿ ಗಿದ್ಯೋನ ಒಬ್ಬನು. ತನ್ನ ಜನರ ಪರವಾಗಿ ಹೋರಾಡುವಂತೆ ದೇವರು ಪವಿತ್ರಾತ್ಮದ ಮೂಲಕ ಅವನನ್ನು ಬಲಪಡಿಸಿದನು. (ನ್ಯಾಯ. 6:34) ಒಮ್ಮೆ ಅವನು ಮಿದ್ಯಾನ್ಯರ ವಿರುದ್ಧವಾಗಿ ಹೋರಾಡಬೇಕಾಗಿತ್ತು. ಮಿದ್ಯಾನ್ಯರ ಮಹಾಸೈನ್ಯವು ಗಿದ್ಯೋನನ ಸೈನ್ಯದ ನಾಲ್ಕು ಪಟ್ಟು ದೊಡ್ಡದಾಗಿತ್ತು! ಗಿದ್ಯೋನನ ಸೈನ್ಯ ಅಷ್ಟು ಚಿಕ್ಕದಾಗಿದ್ದರೂ ಯೆಹೋವನಿಗೆ ಅದು ದೊಡ್ಡದೆಂದು ಕಂಡಿತು. ಆದ್ದರಿಂದ ಎರಡು ಸಾರಿ ಸೈನಿಕರನ್ನು ಕಡಿಮೆ ಮಾಡುವಂತೆ ಗಿದ್ಯೋನನಿಗೆ ಹೇಳಿದನು. ಕೊನೆಗೆ 300 ಮಂದಿ ಸೈನಿಕರು ಮಾತ್ರ ಉಳಿದರು. ಅಂದರೆ ಮಿದ್ಯಾನ್ಯರ ತಲಾ 450 ಸೈನಿಕರಿಗೆ ಒಬ್ಬ ಇಸ್ರಾಯೇಲ್ಯ ಸೈನಿಕ! (ನ್ಯಾಯ. 7:2-8; 8:10) ಅಷ್ಟು ಸೈನಿಕರು ಯುದ್ಧಕ್ಕೆ ಹೋದರೆ ಸಾಕೆಂದು ಯೆಹೋವನು ಒಪ್ಪಿಗೆ ಕೊಟ್ಟನು. ತಮಗೆ ದೊರೆಯುವ ವಿಜಯವು ತಮ್ಮ ಸ್ವಂತ ಪ್ರಯತ್ನ ಹಾಗೂ ವಿವೇಕದಿಂದಲೇ ಎಂದು ಕೊಚ್ಚಿಕೊಳ್ಳಲು ಅವರಿಗೆ ಅವಕಾಶವಿರಲಿಲ್ಲ.

13 ಗಿದ್ಯೋನನ ಆ 300 ಮಂದಿ ಸೈನ್ಯದಲ್ಲಿ ನೀವಿದ್ದಿದ್ದರೆ ಹೇಗನಿಸುತ್ತಿತ್ತು? ಪುಕ್ಕಲ, ಅಜಾಗರೂಕ ಸೈನಿಕರು ಸೈನ್ಯದಲ್ಲಿಲ್ಲವೆಂದು ತಿಳಿದು ಸುಭದ್ರ ಅನಿಸಿಕೆಯಾಗುತ್ತಿತ್ತಾ? ಅಥವಾ ಇಷ್ಟು ಸ್ವಲ್ಪ ಮಂದಿಯಿಂದ ಹೋರಾಡಲು ಆಗುತ್ತದಾ ಎಂದು ಒಳಗೊಳಗೇ ಭಯಪಡುತ್ತಿದ್ದಿರಾ? ಗಿದ್ಯೋನ ಭಯಪಡಲಿಲ್ಲ. ಯೆಹೋವನಲ್ಲಿ ಭರವಸೆಯಿಟ್ಟು ಆತನು ಹೇಳಿದಂತೆಯೇ ಮಾಡಿದನು! (ನ್ಯಾಯಸ್ಥಾಪಕರು 7:9-14 ಓದಿ.) ದೇವರು ಖಂಡಿತ ಸಹಾಯ ಮಾಡುವನು ಎಂಬುದರ ರುಜುವಾತಿಗಾಗಿ ಗಿದ್ಯೋನನು ಆತನಿಂದ ಸೂಚನೆ ಕೇಳಿಕೊಂಡಿದ್ದಾಗ ದೇವರು ಅವನನ್ನು ಗದರಿಸಿರಲಿಲ್ಲ. (ನ್ಯಾಯ. 6:36-40) ಬದಲಿಗೆ ಅವನ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದ್ದನು.

14 ತನ್ನ ಜನರನ್ನು ರಕ್ಷಿಸಲು ಯೆಹೋವನಿಗಿರುವ ಶಕ್ತಿ ಅಪರಿಮಿತ. ಅವರು ಎಂಥ ಸಂಕಷ್ಟದಲ್ಲಿದ್ದರೂ ಆತನು ಪಾರುಮಾಡಶಕ್ತನು. ಬಲಹೀನರು, ನಿಸ್ಸಹಾಯಕರು ಎಂದು ತೋರುವ ವ್ಯಕ್ತಿಗಳ ಮೂಲಕವೂ ಸಂರಕ್ಷಣೆ ಒದಗಿಸಬಲ್ಲನು. ಕೆಲವೊಮ್ಮೆ ವಿರೋಧಿಗಳು ನಮಗಿಂತ ಹೆಚ್ಚಿದ್ದಾರೆ ಎಂದು ತಿಳಿದು ನಮಗೆ ಭಯವಾಗಬಹುದು. ಅಥವಾ ನಾವು ತೀರ ದಿಕ್ಕೆಟ್ಟ ಸ್ಥಿತಿಯಲ್ಲಿರಬಹುದು. ಅಂಥ ಸಮಯದಲ್ಲಿ ದೇವರು ನಮಗೆ ಸಹಾಯ ಮಾಡುತ್ತಾನಾದರೂ ಅದನ್ನು ದೃಢೀಕರಿಸಲಿಕ್ಕೆ ಗಿದ್ಯೋನನಂತೆ ನಾವು ಸೂಚನೆಯನ್ನು ಕೇಳಿಕೊಳ್ಳಸಾಧ್ಯವಿಲ್ಲ. ಆದರೆ ಬೈಬಲ್‌ ಹಾಗೂ ಆತ್ಮನಿರ್ದೇಶಿತ ಸಭೆಯಿಂದ ಆಶ್ವಾಸನೆ ಹಾಗೂ ಮಾರ್ಗದರ್ಶನೆಯನ್ನು ಪಡೆದುಕೊಳ್ಳಬಲ್ಲೆವು. (ರೋಮ. 8:31, 32) ದೇವರ ಆ ಪ್ರೀತಿಪರ ಆಶ್ವಾಸನೆಗಳು ಆತನಲ್ಲಿ ನಮ್ಮ ನಂಬಿಕೆಯನ್ನು ಪುಷ್ಟೀಕರಿಸುತ್ತವೆ ಹಾಗೂ ಆತನು ನಮ್ಮ ಸಹಾಯಕನಾಗಿರುವನು ಎಂಬ ಭರವಸೆಯನ್ನು ಕೊಡುತ್ತವೆ!

“ಯೆಹೋವನ ಆತ್ಮವು ಯೆಪ್ತಾಹನ ಮೇಲೆ ಬಂದಿತು”

15, 16. ಯೆಪ್ತಾಹನ ಮಗಳಲ್ಲಿ ಸ್ವತ್ಯಾಗದ ಮನೋಭಾವವಿರಲು ಕಾರಣವೇನು? ಹೆತ್ತವರಿಗೆ ಇದು ಯಾವ ಪ್ರೇರೇಪಣೆ ನೀಡುತ್ತದೆ?

15 ಇನ್ನೊಂದು ಉದಾಹರಣೆ ಗಮನಿಸಿ. ಇಸ್ರಾಯೇಲ್ಯರು ಅಮ್ಮೋನಿಯರೊಡನೆ ಯುದ್ಧ ಮಾಡಬೇಕಾದ ಸಂದರ್ಭದಲ್ಲಿ “ಯೆಹೋವನ ಆತ್ಮವು ಯೆಪ್ತಾಹನ ಮೇಲೆ ಬಂದಿತು.” ವೈರಿಗಳನ್ನು ಸದೆಬಡಿದು ಯೆಹೋವನಿಗೆ ಸ್ತುತಿ ತರುವ ತೀವ್ರ ಅಪೇಕ್ಷೆಯಿದ್ದ ಯೆಪ್ತಾಹ ದೇವರಿಗೆ ಪ್ರತಿಜ್ಞೆ ಮಾಡಿದನು. ಅಮ್ಮೋನಿಯರನ್ನು ತನ್ನ ಕೈಗೆ ಒಪ್ಪಿಸುವುದಾದರೆ ಮನೆಗೆ ಹಿಂತೆರಳುವಾಗ ತನ್ನನ್ನು ಎದುರುಗೊಳ್ಳಲು ಮನೆಯ ಬಾಗಲಿನಿಂದ ಯಾರು ಮೊದಲು ಹೊರಬರುತ್ತಾರೋ ಅವರನ್ನು ಸಮರ್ಪಿಸುವೆನು ಎಂದು ದೇವರಿಗೆ ಮಾತು ಕೊಟ್ಟನು. ಈ ಪ್ರತಿಜ್ಞೆಯನ್ನು ನೆರವೇರಿಸಲು ಅವನು ದೊಡ್ಡ ತ್ಯಾಗವನ್ನು ಮಾಡಬೇಕಾಯಿತು. ಏಕೆಂದರೆ ಯೆಪ್ತಾಹನು ಅಮ್ಮೋನಿಯರನ್ನು ಸೋಲಿಸಿ ಹಿಂತೆರಳಿದಾಗ ಮನೆಯಿಂದ ಮೊದಲು ಹೊರಬಂದದ್ದು ಬೇರೆ ಯಾರೂ ಅಲ್ಲ, ಅವನ ಒಬ್ಬಳೇ ಮಗಳು! (ನ್ಯಾಯ. 11:29-31, 34) ಮಗಳು ಬರಬಹುದೆಂದು ಯೆಪ್ತಾಹನಿಗೆ ಗೊತ್ತಿರಲಿಲ್ಲವೇ? ಮಗಳು ತನ್ನನ್ನು ಎದುರುಗೊಳ್ಳಲು ಬರಬಹುದೆಂದು ಅವನಿಗೆ ಖಂಡಿತ ಗೊತ್ತಿದ್ದಿರಬೇಕು. ಆದರೂ ತನ್ನ ಮಗಳನ್ನು ಜೀವಮಾನವಿಡೀ ಶೀಲೋವಿನಲ್ಲಿ ಯೆಹೋವನ ಸೇವೆಮಾಡಲು ಕಳುಹಿಸುವ ಮೂಲಕ ಯೆಪ್ತಾಹ ತನ್ನ ಪ್ರತಿಜ್ಞೆಯನ್ನು ನೆರವೇರಿಸಿದನು. ದೇವರ ನಂಬಿಗಸ್ತ ಸೇವಕಿಯಾಗಿದ್ದ ಯೆಪ್ತಾಹನ ಮಗಳು ತಂದೆಯ ಪ್ರತಿಜ್ಞೆಗೆ ಬದ್ಧಳಾದಳು. (ನ್ಯಾಯಸ್ಥಾಪಕರು 11:36 ಓದಿ.) ಇದನ್ನು ಮಾಡಲು ಯೆಹೋವನ ಪವಿತ್ರಾತ್ಮ ಅವರಿಬ್ಬರಿಗೆ ಬೇಕಾದ ಬಲವನ್ನು ಕೊಟ್ಟಿತು.

16 ಯೆಪ್ತಾಹನ ಮಗಳಲ್ಲಿ ಇಂಥ ಸ್ವತ್ಯಾಗದ ಮನೋಭಾವವಿರಲು ಕಾರಣವೇನು? ಅವಳು ತನ್ನ ತಂದೆಯಲ್ಲಿದ್ದ ಹುರುಪು ಹಾಗೂ ದೇವಭಕ್ತಿಯನ್ನು ನೋಡಿದ್ದಳು. ಅದು ಆಕೆಯ ನಂಬಿಕೆಯನ್ನು ಹೆಚ್ಚಿಸಿತು. ಹೆತ್ತವರೇ, ನಿಮ್ಮ ಮಕ್ಕಳು ಸಹ ನಿಮ್ಮ ಮಾದರಿಯನ್ನು ನೋಡುತ್ತಾರೆ. ನೀವೇನನ್ನು ಹೇಳುತ್ತೀರೋ ಅದನ್ನು ನಂಬುತ್ತೀರಿ ಎನ್ನುವುದನ್ನು ನೀವು ತಕ್ಕೊಳ್ಳುವ ನಿರ್ಣಯಗಳು ಅವರಿಗೆ ಮನಗಾಣಿಸುತ್ತವೆ. ಅವರು ನಿಮ್ಮ ಹೃತ್ಪೂರ್ವಕ ಪ್ರಾರ್ಥನೆಗಳನ್ನು ಆಲಿಸುತ್ತಾರೆ. ನೀವು ನೀಡುವ ಉತ್ತಮ ತರಬೇತಿಯನ್ನು ಗಮನಿಸುತ್ತಾರೆ. ಪೂರ್ಣ ಹೃದಯದಿಂದ ಯೆಹೋವನ ಸೇವೆಮಾಡಲು ನೀವು ಪಡುವ ಪ್ರಯಾಸವನ್ನು ಮನಸ್ಸಿಗೆ ತಕ್ಕೊಳ್ಳುತ್ತಾರೆ. ಇದೆಲ್ಲವು ಅವರ ಹೃದಯದಲ್ಲಿ ಯೆಹೋವನ ಸೇವೆ ಮಾಡುವ ಬಲವಾದ ಆಸೆಯನ್ನು ಹುಟ್ಟಿಸಿ ಬೆಳೆಸುತ್ತದೆ. ಇದು ನೀವು ಆನಂದದಿಂದ ಬೀಗುವಂತೆ ಮಾಡುತ್ತದಲ್ಲವೆ!

“ಯೆಹೋವನ ಆತ್ಮ” ಸಂಸೋನನ ಮೇಲೆ ಬಂತು

17. ಪವಿತ್ರಾತ್ಮದ ಸಹಾಯದಿಂದ ಸಂಸೋನನು ಏನೆಲ್ಲ ಮಾಡಿದನು?

17 ಪವಿತ್ರಾತ್ಮದ ಸಹಾಯ ಪಡೆದ ಇನ್ನೊಬ್ಬ ವ್ಯಕ್ತಿ ಸಂಸೋನ. ಇಸ್ರಾಯೇಲ್ಯರನ್ನು ಫಿಲಿಷ್ಟಿಯರಿಂದ ಬಿಡಿಸುವಂತೆ “ಯೆಹೋವನ ಆತ್ಮವು ಅವನನ್ನು ಪ್ರೇರೇಪಿಸಹತ್ತಿತು.” (ನ್ಯಾಯ. 13:24, 25) ಪವಿತ್ರಾತ್ಮದ ಶಕ್ತಿಯಿಂದ ಅವನು ಸಾಮಾನ್ಯ ಮನುಷ್ಯನಿಂದ ಮಾಡಲಾಗದ, ನಿಬ್ಬೆರಗಾಗಿಸುವ ಕೆಲಸಗಳನ್ನು ಮಾಡಿದನು. ಫಿಲಿಷ್ಟಿಯರ ಪ್ರಭಾವದಿಂದಾಗಿ ಕೆಲವು ಇಸ್ರಾಯೇಲ್ಯರು ಸಂಸೋನನನ್ನು ಬಂಧಿಸಿದಾಗ ಏನಾಯಿತು ಗೊತ್ತಾ? “ಯೆಹೋವನ ಆತ್ಮವು ಅವನ ಮೇಲೆ ಬಂದದರಿಂದ ಅವನ ರಟ್ಟೆಗಳಿಗೆ ಸುತ್ತಲೂ ಕಟ್ಟಿದ ಹಗ್ಗಗಳು ಸುಟ್ಟ ಸೆಣಬಿನ ಹಾಗಾದವು; ಕೈಗೆ ಹಾಕಿದ ಬೇಡಿಗಳು ಕಳಚಿ ಬಿದ್ದವು.” (ನ್ಯಾಯ. 15:14) ಸಮಯಾನಂತರ ಸಂಸೋನನು ಒಂದು ತಪ್ಪು ನಿರ್ಣಯ ಮಾಡಿದ್ದರ ಫಲವಾಗಿ ತನ್ನ ಶಕ್ತಿಯನ್ನೆಲ್ಲ ಕಳಕೊಂಡು ಬಲಹೀನನಾದನು. ಆದರೆ ಆಗಲೂ ಕೊನೆಯ ಬಾರಿಗೆ ಅವನು “ನಂಬಿಕೆಯ ಮೂಲಕ” ಬಲಗೊಳಿಸಲ್ಪಟ್ಟನು. (ಇಬ್ರಿ. 11:32-34; ನ್ಯಾಯ. 16:18-21, 28-30) ಇಸ್ರಾಯೇಲ್ಯರ ಅಂದಿನ ಪರಿಸ್ಥಿತಿಯ ಕಾರಣ ಪವಿತ್ರಾತ್ಮವು ಸಂಸೋನನಲ್ಲಿ ಅಪೂರ್ವ ರೀತಿಯಲ್ಲಿ ಕೆಲಸಮಾಡಿತು. ಇಂದು ಆ ರೀತಿಯಲ್ಲಿ ಶಕ್ತಿ ಸಿಗದಿದ್ದರೂ ಸಂಸೋನನ ಈ ಉದಾಹರಣೆಯಿಂದ ನಮಗೆ ಉತ್ತೇಜನ ಸಿಗುತ್ತದೆ. ಹೇಗೆ?

18, 19. (ಎ) ಸಂಸೋನನ ಉದಾಹರಣೆಯಿಂದ ನಮಗೆ ಯಾವ ಆಶ್ವಾಸನೆ ಸಿಗುತ್ತದೆ? (ಬಿ) ಈ ಲೇಖನದಲ್ಲಿ ಚರ್ಚಿಸಲಾದ ದೇವಸೇವಕರ ಉದಾಹರಣೆಗಳಿಂದ ನೀವು ಯಾವ ಪ್ರಯೋಜನ ಪಡೆದಿರಿ?

18 ಸಂಸೋನನಂತೆ ನಮಗೂ ಪವಿತ್ರಾತ್ಮದ ಸಹಾಯ ಬೇಕು. ರಾಜ್ಯ ಸಂದೇಶವನ್ನು “ಜನರಿಗೆ ಸಾರಿಹೇಳುವಂತೆ ಮತ್ತು ಕೂಲಂಕಷವಾದ ಸಾಕ್ಷಿಯನ್ನು ನೀಡುವಂತೆ” ಯೇಸು ಕೊಟ್ಟ ನೇಮಕವನ್ನು ಪೂರೈಸುವಾಗ ನಾವು ಪವಿತ್ರಾತ್ಮದ ಮೇಲೆ ಅವಲಂಬಿಸುತ್ತೇವೆ. (ಅ. ಕಾ. 10:42) ಏಕೆಂದರೆ ಅದನ್ನು ಪೂರೈಸಲು ನಮಗೆ ಕೌಶಲಗಳು ಅವಶ್ಯ. ಆ ಕೌಶಲಗಳನ್ನು ನಾವು ಹುಟ್ಟಿನಿಂದ ಪಡೆದಿಲ್ಲ. ಆದ್ದರಿಂದ ನೇಮಿತ ಕೆಲಸಗಳನ್ನೆಲ್ಲ ಪೂರ್ಣವಾಗಿ ಮಾಡಿಮುಗಿಸಲು ದೇವರು ನಮಗೆ ಪವಿತ್ರಾತ್ಮದ ಸಹಾಯ ಕೊಡುತ್ತಿರುವುದಕ್ಕಾಗಿ ನಾವು ನಿಜಕ್ಕೂ ಕೃತಜ್ಞರು! ಹೀಗೆ ನಮ್ಮ ನೇಮಕವನ್ನು ಪೂರೈಸುತ್ತಾ ಹೋಗುವಾಗ ಯೆಶಾಯನಂತೆ ನಾವು ಸಹ “ಯೆಹೋವನೆಂಬ ದೇವರು ತನ್ನ ಆತ್ಮದೊಡನೆ ನನ್ನನ್ನು ಕಳುಹಿಸಿದ್ದಾನೆ” ಎಂದು ಹೇಳುವೆವು! (ಯೆಶಾ. 48:16) ಮೋಶೆ, ಬೆಚಲೇಲ ಹಾಗೂ ಯೆಹೋಶುವರಿಗೆ ಮಾಡಿದಂತೆ ಯೆಹೋವನು ನಮ್ಮ ಕೌಶಲಗಳನ್ನೂ ಉತ್ತಮಗೊಳಿಸುವನು ಎಂಬ ತುಂಬು ಭರವಸೆಯಿಂದ ಈ ನೇಮಿತ ಕೆಲಸದಲ್ಲಿ ಮುಂದೊತ್ತೋಣ. ಗಿದ್ಯೋನ, ಯೆಪ್ತಾಹ ಹಾಗೂ ಸಂಸೋನರನ್ನು ಬಲಗೊಳಿಸಿದಂತೆ ನಮ್ಮನ್ನೂ ಬಲಪಡಿಸುವನು ಎಂಬ ವಿಶ್ವಾಸದೊಂದಿಗೆ “ಪವಿತ್ರಾತ್ಮದ ಕತ್ತಿಯನ್ನು ಅಂದರೆ ದೇವರ ವಾಕ್ಯವನ್ನು” ಉಪಯೋಗಿಸೋಣ. (ಎಫೆ. 6:17, 18) ಅಡ್ಡಿತಡೆಗಳು ಬಂದಾಗ ಯೆಹೋವನ ಮೇಲೆ ಆತುಕೊಳ್ಳಿ. ಸಂಸೋನನನ್ನು ಶಾರೀರಿಕವಾಗಿ ಬಲಶಾಲಿಯನ್ನಾಗಿ ಮಾಡಿದಂತೆ ನಿಮ್ಮನ್ನು ಆಧ್ಯಾತ್ಮಿಕವಾಗಿ ಬಲಶಾಲಿಯನ್ನಾಗಿ ಮಾಡುವನು.

19 ಸತ್ಯಾರಾಧನೆಯನ್ನು ಧೈರ್ಯದಿಂದ ಬೆಂಬಲಿಸುವವರನ್ನು ಯೆಹೋವನು ಆಶೀರ್ವದಿಸುವನು. ಪವಿತ್ರಾತ್ಮದ ಮಾರ್ಗದರ್ಶನವನ್ನು ಅನುಸರಿಸುತ್ತಾ ಹೋಗುವಾಗ ನಮ್ಮ ನಂಬಿಕೆ ವರ್ಧಿಸುವುದು. ಆದ್ದರಿಂದ ಒಂದನೇ ಶತಮಾನದಲ್ಲಿದ್ದ ದೇವಸೇವಕರಿಗೆ ಪವಿತ್ರಾತ್ಮ ಹೇಗೆ ಸಹಾಯ ಮಾಡಿತೆಂದು ನೋಡುವುದು ಪ್ರಯೋಜನಕರ. ಕ್ರಿ.ಶ. 33ರ ಪಂಚಾಶತ್ತಮದ ಮೊದಲು ಹಾಗೂ ನಂತರ ನಡೆದ ರೋಮಾಂಚಕ ಘಟನೆಗಳನ್ನು ನಾವು ಮುಂದಿನ ಲೇಖನದಲ್ಲಿ ಚರ್ಚಿಸುವೆವು.

ಈ ದೇವಸೇವಕರಿಗೆ ಪವಿತ್ರಾತ್ಮ ಸಹಾಯ ನೀಡಿದ ಕುರಿತು ಕಲಿತದ್ದು ನಿಮಗೇಕೆ ಉತ್ತೇಜನ ನೀಡಿತು?

• ಮೋಶೆ

• ಬೆಚಲೇಲ

• ಯೆಹೋಶುವ

• ಗಿದ್ಯೋನ

• ಯೆಪ್ತಾಹ

• ಸಂಸೋನ

[ಅಧ್ಯಯನ ಪ್ರಶ್ನೆಗಳು]

[ಪುಟ 22ರಲ್ಲಿರುವ ಚಿತ್ರ]

ಪವಿತ್ರಾತ್ಮ ಸಂಸೋನನನ್ನು ಶಾರೀರಿಕವಾಗಿ ಬಲಶಾಲಿಯನ್ನಾಗಿ ಮಾಡಿದಂತೆ ನಮ್ಮನ್ನು ಆಧ್ಯಾತ್ಮಿಕವಾಗಿ ಬಲಶಾಲಿಯನ್ನಾಗಿ ಮಾಡುವುದು

[ಪುಟ 21ರಲ್ಲಿರುವ ಚಿತ್ರ]

ಹೆತ್ತವರೇ, ನಿಮ್ಮ ಹುರುಪಿನ ಮಾದರಿ ನಿಮ್ಮ ಮಕ್ಕಳಿಗೆ ಸ್ಫೂರ್ತಿ