ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೊಲೊಮೋನನಿಂದ ಒಳ್ಳೆಯ ಹಾಗೂ ಎಚ್ಚರಿಕೆಯ ಪಾಠ

ಸೊಲೊಮೋನನಿಂದ ಒಳ್ಳೆಯ ಹಾಗೂ ಎಚ್ಚರಿಕೆಯ ಪಾಠ

ಸೊಲೊಮೋನನಿಂದ ಒಳ್ಳೆಯ ಹಾಗೂ ಎಚ್ಚರಿಕೆಯ ಪಾಠ

“[ಯಾಕೋಬ್ಯರ ದೇವರು] ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.”—ಯೆಶಾ. 2:3.

1, 2. ಬೈಬಲಿನಲ್ಲಿರುವ ವ್ಯಕ್ತಿಗಳ ಮಾದರಿಗಳಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?

ಬೈಬಲಿನಲ್ಲಿರುವ ವಿಷಯಗಳನ್ನು ನಮ್ಮ ಪ್ರಯೋಜನಕ್ಕಾಗಿ ಬರೆಯಲಾಗಿದೆ. ಇದು ಈಗಾಗಲೇ ನಿಮಗೆ ಮನದಟ್ಟಾಗಿರಬಹುದು. ಬೈಬಲಿನಲ್ಲಿ ಅನುಕರಣೆಗೆ ಯೋಗ್ಯರಾದ ಅನೇಕಾನೇಕ ನಂಬಿಗಸ್ತ ಸ್ತ್ರೀಪುರುಷರ ಉದಾಹರಣೆಗಳು ಇವೆ. (ಇಬ್ರಿ. 11:32-34) ಮಾತ್ರವಲ್ಲ, ಕೆಟ್ಟ ಉದಾಹರಣೆಗಳೂ ಇವೆ. ಅಂಥವರ ಕುರಿತು ಓದುವಾಗ ಯಾವ ರೀತಿಯ ಯೋಚನೆ, ನಡತೆಯನ್ನು ಅನುಸರಿಸಬಾರದು ಎಂಬುದನ್ನು ತಿಳಿಯುವಿರಿ. ಹೌದು, ಅವರ ಉದಾಹರಣೆಗಳಲ್ಲಿ ನಮಗೆ ಎಚ್ಚರಿಕೆಯ ಪಾಠಗಳಿವೆ.

2 ಬೈಬಲಿನಲ್ಲಿ ತಿಳಿಸಲಾಗಿರುವ ಕೆಲವು ವ್ಯಕ್ತಿಗಳ ಉದಾಹರಣೆಗಳು ನಮಗೆ ಇಬ್ಬಗೆಯ ಪಾಠ ಕಲಿಸುತ್ತವೆ. ಏನನ್ನು ಅನುಕರಿಸಬೇಕು, ಏನನ್ನು ಅನುಕರಿಸಬಾರದು ಎಂದು ಅವು ತಿಳಿಸುತ್ತವೆ. ದಾವೀದನು ಇದಕ್ಕೊಂದು ಒಳ್ಳೇ ಉದಾಹರಣೆ. ಸಾಮಾನ್ಯ ಕುರುಬನಾಗಿದ್ದ ಅವನು ದೊಡ್ಡ ರಾಜನಾದನು. ಸತ್ಯಕ್ಕಾಗಿ ಪ್ರೀತಿ ತೋರಿಸಿದ್ದರಲ್ಲಿ, ಯೆಹೋವನಲ್ಲಿ ಪೂರ್ಣ ಭರವಸೆ ಇಟ್ಟದ್ದರಲ್ಲಿ ಅವನು ಒಳ್ಳೇ ಮಾದರಿ. ಆದರೆ ಅದೇ ದಾವೀದನು ಘೋರ ಪಾಪಗಳನ್ನು ಮಾಡಿದನು. ಬತ್ಷೆಬೆಯೊಂದಿಗೆ ವ್ಯಭಿಚಾರಗೈದನು. ಊರೀಯನ ಕೊಲೆ ಮಾಡಿಸಿದನು. ದೇವರ ಅಪ್ಪಣೆ ಮೀರಿ ಜನಗಣತಿ ಮಾಡಿದನು. ಹೀಗೆ ಅವನಿಂದ ನಾವು ಒಳ್ಳೆಯ ಹಾಗೂ ಎಚ್ಚರಿಕೆಯ ಪಾಠಗಳನ್ನು ಕಲಿಯುತ್ತೇವೆ. ನಾವೀಗ ಅವನ ಮಗ ಸೊಲೊಮೋನನ ಕುರಿತು ಚರ್ಚಿಸೋಣ. ಒಬ್ಬ ರಾಜನಾಗಿದ್ದ ಅವನು ಬೈಬಲ್‌ ಬರಹಗಾರನೂ ಹೌದು. ಅವನಿಂದ ಯಾವ ಎರಡು ಒಳ್ಳೇ ವಿಷಯಗಳನ್ನು ಕಲಿಯಬಹುದೆಂದು ಮೊದಲು ಗಮನಿಸೋಣ.

“ಸೊಲೊಮೋನನ ವಿವೇಕ”

3. ಸೊಲೊಮೋನನು ನಮಗೆ ಒಳ್ಳೇ ಮಾದರಿ ಎಂದು ಏಕೆ ಹೇಳಬಹುದು?

3 ರಾಜ ಸೊಲೊಮೋನನ ಒಳ್ಳೇ ಮಾದರಿಯ ಕುರಿತು ಮಹಾ ಸೊಲೊಮೋನನಾದ ಯೇಸು ಕ್ರಿಸ್ತನು ಮೆಚ್ಚುಗೆಯ ಮಾತುಗಳನ್ನಾಡಿದನು. ತನ್ನನ್ನು ನಂಬದ ಕೆಲವು ಯೆಹೂದ್ಯರಿಗೆ ಯೇಸು ಹೀಗಂದನು: “ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಯೊಂದಿಗೆ ಎದ್ದುನಿಂತು ಇದನ್ನು ಖಂಡಿಸುವಳು; ಏಕೆಂದರೆ ಅವಳು ಸೊಲೊಮೋನನ ವಿವೇಕದ ಕುರಿತು ಕೇಳಿಸಿಕೊಳ್ಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು, ಆದರೆ ಸೊಲೊಮೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ.” (ಮತ್ತಾ. 12:42) ಹೌದು, ಸೊಲೊಮೋನನಲ್ಲಿ ಅಪಾರ ವಿವೇಕವಿತ್ತು. ಜ್ಞಾನಿಯೆಂದು ಸುಪ್ರಸಿದ್ಧನಾಗಿದ್ದ ಅವನು ವಿವೇಕವನ್ನು ಗಳಿಸುವಂತೆ ನಮ್ಮನ್ನು ಪ್ರೋತ್ಸಾಹಿಸಿದ್ದಾನೆ.

4, 5. ಸೊಲೊಮೋನನಿಗೆ ವಿವೇಕ ಹೇಗೆ ಸಿಕ್ಕಿತು? ನಮಗೆ ಸಿಗಬೇಕಾದರೆ ಏನು ಮಾಡಬೇಕು?

4 ಸೊಲೊಮೋನನು ಅರಸನಾದಾಗ ದೇವರು ಕನಸಿನಲ್ಲಿ ಕಾಣಿಸಿಕೊಂಡು ಯಾವ ವರ ಬೇಕು ಕೇಳಿಕೋ ಎಂದು ಹೇಳಿದನು. ರಾಜ್ಯಭಾರದ ಅನುಭವವಿಲ್ಲದ ಸೊಲೊಮೋನ ವಿವೇಕವನ್ನು ಅನುಗ್ರಹಿಸುವಂತೆ ಕೇಳಿಕೊಂಡನು. (1 ಅರಸುಗಳು 3:5-9 ಓದಿ.) ಆಸ್ತಿ ಅಂತಸ್ತು ಐಶ್ವರ್ಯವನ್ನು ಕೇಳಿಕೊಳ್ಳದೆ ವಿವೇಕ ದಯಪಾಲಿಸುವಂತೆ ಮಾಡಿದ ಬಿನ್ನಹವನ್ನು ಯೆಹೋವನು ಮೆಚ್ಚಿ “ಜ್ಞಾನವನ್ನೂ ವಿವೇಕವನ್ನೂ” ಅನುಗ್ರಹಿಸಿದನು. ಜೊತೆಗೆ ಸಿರಿಸಂಪತ್ತನ್ನು ಕೊಟ್ಟನು. (1 ಅರ. 3:10-14) ಯೇಸು ತಿಳಿಸಿದಂತೆ ಸೊಲೊಮೋನನ ವಿವೇಕ ಎಷ್ಟು ಅಪಾರವಾಗಿತ್ತೆಂದರೆ ಬಹುದೂರದ ಶೆಬ ದೇಶದ ರಾಣಿಯು ಅವನಿಂದ ವಿವೇಕದ ನುಡಿಗಳನ್ನು ಕೇಳಿಸಿಕೊಳ್ಳಲು ಆಗಮಿಸಿದಳು.—1 ಅರ. 10:1, 4-9.

5 ನಾವಿಂದು ಸೊಲೊಮೋನನಂತೆ ಅದ್ಭುತಕರ ರೀತಿಯಲ್ಲಿ ವಿವೇಕವನ್ನು ಪಡೆಯಸಾಧ್ಯವಿಲ್ಲ. “ಯೆಹೋವನೇ ಜ್ಞಾನವನ್ನು ಕೊಡುವಾತನು” ಎಂದು ಹೇಳಿದ ಸೊಲೊಮೋನನು ನಾವದನ್ನು ಪಡೆಯಲು ಶ್ರಮ ಹಾಕಬೇಕು ಎಂದೂ ಬರೆದಿದ್ದಾನೆ. “ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು” ಎಂದು ಹೇಳಿದ್ದಾನೆ. ವಿವೇಕಕ್ಕಾಗಿ ‘ಮೊರೆಯಿಡು,’ “ಹುಡುಕು” ಎಂದು ಹೇಳುವ ಮೂಲಕ ನಮ್ಮಿಂದ ಪ್ರಯತ್ನ ಅಗತ್ಯವೆಂದು ಸೂಚಿಸಿದ್ದಾನೆ. (ಜ್ಞಾನೋ. 2:1-6) ಅಂದ ಮೇಲೆ ಶ್ರಮಪಟ್ಟರೆ ನಾವು ವಿವೇಕವನ್ನು ಪಡೆಯಸಾಧ್ಯ!

6. ಸೊಲೊಮೋನನ ಒಳ್ಳೇ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು?

6 ಸ್ವಪರೀಕ್ಷೆ ಮಾಡಲು ಹೀಗೆ ಕೇಳಿಕೊಳ್ಳಿ: ‘ಸೊಲೊಮೋನನಂತೆ ನಾನು ಸಹ ಬೇರೆಲ್ಲದಕ್ಕಿಂತ ದೈವಿಕ ವಿವೇಕವನ್ನು ಅಮೂಲ್ಯವೆಂದು ನೆನಸುತ್ತೇನಾ?’ ಆರ್ಥಿಕ ಸಮಸ್ಯೆ ಅನೇಕರನ್ನು ಹಣ ಮತ್ತು ಉದ್ಯೋಗದ ಹಿಂದೆ ಬೀಳುವಂತೆ ಮಾಡಿದೆ. ಮುಂದಕ್ಕೆ ದುಪ್ಪಟ್ಟು ಸಂಪಾದನೆ ತರುವ ಶಿಕ್ಷಣವನ್ನೇ ಹೆಚ್ಚಿನವರು ಆರಿಸಿಕೊಳ್ಳುತ್ತಾರೆ. ಶಿಕ್ಷಣಕ್ಕಾಗಿ ವರ್ಷಾನುಗಟ್ಟಲೆ ಸಮಯ ವ್ಯಯಿಸಲು ಸಿದ್ಧರಿರುತ್ತಾರೆ. ನೀವು ಮತ್ತು ನಿಮ್ಮ ಕುಟುಂಬ ಕೂಡ ಹಾಗೆ ಯೋಚಿಸುತ್ತಿದೆಯಾ? ನಿಮ್ಮ ಆಯ್ಕೆಗಳು ಏನನ್ನು ತೋರಿಸಿಕೊಡುತ್ತವೆ, ದೈವಿಕ ವಿವೇಕವನ್ನು ನಿಧಿಯಂತೆ ಹುಡುಕುತ್ತಿದ್ದೀರಿ ಎಂದಾ? ದೈವಿಕ ವಿವೇಕವನ್ನು ಇನ್ನಷ್ಟು ಪಡೆಯಲಿಕ್ಕಾಗಿ ನೀವು ಹಣ ಮತ್ತು ಶಿಕ್ಷಣದ ಕುರಿತ ನಿಮ್ಮ ನೋಟವನ್ನು ಬದಲಾಯಿಸಬೇಕಿದೆಯಾ? ದೈವಿಕ ವಿವೇಕವನ್ನು ಪಡೆದುಕೊಳ್ಳುವುದು ನಿಮಗೆ ನಿತ್ಯನಿರಂತರಕ್ಕೂ ಪ್ರಯೋಜನ ತರುತ್ತದೆ. ಸೊಲೊಮೋನನು ಹೇಳಿದಂತೆ, ನೀವು “ನೀತಿನ್ಯಾಯಗಳನ್ನೂ ಧರ್ಮವನ್ನೂ ಅಂದರೆ ಸಕಲ ಸನ್ಮಾರ್ಗಗಳನ್ನು” ತಿಳಿದುಕೊಳ್ಳುವಿರಿ.—ಜ್ಞಾನೋ. 2:9.

ಸತ್ಯಾರಾಧನೆಗೆ ಆದ್ಯತೆ—ಶಾಂತಿ ಭದ್ರತೆ

7. ದೇವಾರಾಧನೆಗಾಗಿ ಭವ್ಯ ಆಲಯ ನಿರ್ಮಾಣಗೊಂಡದ್ದು ಹೇಗೆ?

7 ಇಸ್ರಾಯೇಲ್ಯರು ಮೋಶೆಯ ಕಾಲದಿಂದ ಸಾಕ್ಷಿಗುಡಾರವನ್ನು ದೇವಾರಾಧನೆಗಾಗಿ ಉಪಯೋಗಿಸುತ್ತಿದ್ದರು. ಸೊಲೊಮೋನನು ಪಟ್ಟಕ್ಕೇರಿದ ಸ್ವಲ್ಪ ಸಮಯದ ನಂತರ ದೇವಾರಾಧನೆಗಾಗಿ ಭವ್ಯ ಆಲಯ ಕಟ್ಟಲು ಶುರುಮಾಡಿದನು. (1 ಅರ. 6:1) ಅದನ್ನು ಸೊಲೊಮೋನನ ಆಲಯ ಎಂದು ಕರೆಯುತ್ತಾರಾದರೂ ತನ್ನ ಹೆಸರಿನ ಪ್ರಸಿದ್ಧಿಗಾಗಿ ಅವನದನ್ನು ಕಟ್ಟಲಿಲ್ಲ. ಅಷ್ಟೇಕೆ ದೇವಾಲಯ ಕಟ್ಟಬೇಕೆಂಬ ಆಲೋಚನೆ ಬಂದದ್ದೇ ಅವನಿಗಲ್ಲ. ಅದು ದಾವೀದನ ಮನದಾಸೆಯಾಗಿತ್ತು. ನಿರ್ಮಾಣ ಯೋಜನೆಯ ಸವಿವರಗಳನ್ನು ದೇವರು ಕೊಟ್ಟದ್ದು ಸಹ ದಾವೀದನಿಗೆ. ಅವನೇ ಯೋಜನೆಗಾಗಿ ದೊಡ್ಡ ಮೊತ್ತದ ಕಾಣಿಕೆಯನ್ನು ಕೊಟ್ಟನು. (2 ಸಮು. 7:2, 12, 13; 1 ಪೂರ್ವ. 22:14-16) ಹಾಗಿದ್ದರೂ ನಿರ್ಮಾಣ ಕಾರ್ಯವನ್ನು ದೇವರು ಸೊಲೊಮೋನನಿಗೆ ವಹಿಸಿಕೊಟ್ಟನು. ಆಲಯವನ್ನು ಕಟ್ಟಿಮುಗಿಸಲು ಏಳೂವರೆ ವರ್ಷಗಳು ಹಿಡಿದವು.—1 ಅರ. 6:37, 38; 7:51.

8, 9. (ಎ) ಪ್ರಯತ್ನ ಬಿಡದೆ ಒಳ್ಳೇ ಕಾರ್ಯಗಳನ್ನು ಮಾಡುವ ವಿಷಯದಲ್ಲಿ ಸೊಲೊಮೋನ ಯಾವ ಉತ್ತಮ ಮಾದರಿಯನ್ನಿಟ್ಟನು? (ಬಿ) ಸೊಲೊಮೋನ ಸತ್ಯಾರಾಧನೆಗೆ ಆದ್ಯತೆ ನೀಡಿದ್ದರ ಫಲಿತಾಂಶವೇನು?

8 ಕೈಗೆತ್ತಿಕೊಂಡ ಅಷ್ಟು ದೊಡ್ಡ ಯೋಜನೆಯನ್ನು ಸೊಲೊಮೋನನು ಮನಸ್ಸಿಟ್ಟು ಪೂರ್ತಿಗೊಳಿಸಿದನು. ಹೀಗೆ ಸತ್ಯಾರಾಧನೆಗೆ ಆದ್ಯತೆ ಕೊಡುವುದರಲ್ಲಿ ಹಾಗೂ ಪ್ರಯತ್ನ ಬಿಡದೆ ಒಳ್ಳೇ ಕಾರ್ಯಗಳನ್ನು ಮಾಡಿಮುಗಿಸುವುದರಲ್ಲಿ ಅವನು ನಮಗೆ ಉತ್ತಮ ಮಾದರಿ ಇಟ್ಟಿದ್ದಾನೆ. ನಿರ್ಮಾಣ ಕಾರ್ಯ ಪೂರ್ಣಗೊಂಡು ಒಡಂಬಡಿಕೆಯ ಮಂಜೂಷವನ್ನು ಆಲಯದೊಳಗೆ ಇಟ್ಟ ಬಳಿಕ ಸೊಲೊಮೋನನು ಜನಸಮೂಹದ ಮುಂದೆ ಯೆಹೋವನಿಗೆ ಪ್ರಾರ್ಥಿಸಿದನು: “ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವದು ಎಂದು ಹೇಳಿದವನೇ, ನಿನ್ನ ಕಟಾಕ್ಷವು ಹಗಲಿರುಳು ಈ ಮಂದಿರದ ಮೇಲಿರಲಿ; ಇಲ್ಲಿ ನಿನ್ನ ಸೇವಕನು ನಿನ್ನನ್ನು ಪ್ರಾರ್ಥಿಸುವಾಗೆಲ್ಲಾ ಅವನಿಗೆ ಸದುತ್ತರವನ್ನು ದಯಪಾಲಿಸು.” (1 ಅರ. 8:6, 29) ಇಸ್ರಾಯೇಲ್ಯರಲ್ಲದೆ ಅನ್ಯಜನರು ಸಹ ಯೆಹೋವನ ನಾಮ ಘನತೆಗಾಗಿ ನಿರ್ಮಾಣವಾಗಿದ್ದ ಈ ಆಲಯದ ಕಡೆಗೆ ತಿರುಗಿಕೊಂಡು ಪ್ರಾರ್ಥಿಸಬಹುದಿತ್ತು.—1 ಅರ. 8:30, 41-43, 60.

9 ಸೊಲೊಮೋನ ಸತ್ಯಾರಾಧನೆಗೆ ಆದ್ಯತೆ ನೀಡಿದ್ದರ ಫಲಿತಾಂಶವೇನು? ದೇವಾಲಯ ಪ್ರತಿಷ್ಠಾಪನೆಯ ಬಳಿಕ ಜನರೆಲ್ಲರೂ “ಯೆಹೋವನು ತನ್ನ ಸೇವಕನಾದ ದಾವೀದನಿಗೂ ತನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೂ ಮಾಡಿದ ಸರ್ವೋಪಕಾರಗಳನ್ನು ನೆನಸಿ ಆನಂದಚಿತ್ತರಾಗಿ ಹರ್ಷಿಸುತ್ತಾ” ಇದ್ದರು. (1 ಅರ. 8:65, 66) ಸೊಲೊಮೋನನ ನಲ್ವತ್ತು ವರ್ಷಗಳ ಆಳ್ವಿಕೆಯಲ್ಲಿ ಎಲ್ಲೆಡೆಯೂ ಸುಖ, ಶಾಂತಿ, ಸಂಪತ್ತು ಸಮೃದ್ಧವಾಗಿತ್ತು. (1 ಅರಸುಗಳು 4:20, 21, 25 ಓದಿ.) ಆ ಕುರಿತ ವಿವರಣೆಯನ್ನು 72ನೇ ಕೀರ್ತನೆಯಲ್ಲಿ ನಾವು ನೋಡುತ್ತೇವೆ. ಮಹಾ ಸೊಲೊಮೋನನಾದ ಯೇಸು ಕ್ರಿಸ್ತನ ಆಳ್ವಿಕೆಯಲ್ಲಿ ನಮಗೆ ಸಿಗಲಿರುವ ಆಶೀರ್ವಾದಗಳ ಒಳನೋಟವನ್ನು ಸಹ ಆ ಕೀರ್ತನೆ ಕೊಡುತ್ತದೆ.—ಕೀರ್ತ. 72:6-8, 16.

ಸೊಲೊಮೋನನಿಂದ ನಮಗಿರುವ ಎಚ್ಚರಿಕೆಯ ಪಾಠಗಳು

10. ಸೊಲೊಮೋನ ಯಾವ ತಪ್ಪನ್ನು ಮಾಡಿದನು?

10 ಸೊಲೊಮೋನನಿಂದ ನಾವು ಎಚ್ಚರಿಕೆಯ ಪಾಠಗಳನ್ನು ಕೂಡ ಕಲಿಯುತ್ತೇವೆ. ಎಚ್ಚರಿಕೆಯ ಪಾಠ ಅಂದ ಕೂಡಲೆ ನಿಮ್ಮ ಮನಸ್ಸಿಗೆ ಮೊದಲು ಬರುವುದು ಅವನ ಅನೇಕಾನೇಕ ವಿದೇಶಿ ಪತ್ನಿ ಉಪಪತ್ನಿಯರ ಸಂಗತಿ ಆಗಿರಬಹುದು. ನಿಜ, “ಅವನು ವೃದ್ಧನಾದಾಗ ಇವರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಯಥಾರ್ಥಭಕ್ತಿಯನ್ನು ಕಳೆದುಕೊಂಡನು.” (1 ಅರ. 11:1-6) ಅವನ ಆ ಮೂರ್ಖತನದ ಕಾರ್ಯವನ್ನು ನೀವಂತೂ ಮಾಡಲಿಚ್ಛಿಸುವುದಿಲ್ಲ. ಆದರೆ ಎಚ್ಚರಿಕೆಯ ಪಾಠ ಅದೊಂದೇನಾ? ಅಷ್ಟಾಗಿ ನಮ್ಮ ಗಮನಕ್ಕೆ ಬಾರದ ಅವನ ಜೀವನದ ಕೆಲವೊಂದು ಸೂಕ್ಷ್ಮ ಸಂಗತಿಗಳ ಒಳಹೊಕ್ಕು ನೋಡೋಣ.

11. ಸೊಲೊಮೋನನ ಮೊದಲನೇ ಮದುವೆಯಿಂದ ನಮಗೇನು ತಿಳಿಯುತ್ತದೆ?

11 ಸೊಲೊಮೋನ ಒಟ್ಟು ನಲ್ವತ್ತು ವರ್ಷ ಆಳಿದನು. (2 ಪೂರ್ವ. 9:30) ಅದನ್ನು ಮನಸ್ಸಿನಲ್ಲಿಟ್ಟು 1 ಅರಸುಗಳು 14:21 ಏನು ಹೇಳುತ್ತದೆಂದು ಗಮನಿಸಿ. (ಓದಿ.) ಈ ವಚನ, ಸೊಲೊಮೋನನ ಮರಣದ ನಂತರ ಅವನ ಮಗ ರೆಹಬ್ಬಾಮ ಪಟ್ಟಕ್ಕೆ ಬಂದನೆಂದೂ ಅವನಿಗಾಗ 41 ವರ್ಷ ಆಗಿತ್ತೆಂದೂ ತಿಳಿಸುತ್ತದೆ. ಮಾತ್ರವಲ್ಲ ರೆಹಬ್ಬಾಮನ ತಾಯಿ “ಅಮ್ಮೋನಿಯಳಾದ ನಯಮಾ” ಎಂದು ಸಹ ವಿವರ ನೀಡುತ್ತದೆ. ಇದರಿಂದ ಏನು ತಿಳಿಯುತ್ತದೆ? ಸೊಲೊಮೋನನು ಅರಸನಾಗುವುದಕ್ಕೆ ಮುಂಚೆಯೇ ಅನ್ಯ ಸ್ತ್ರೀಯನ್ನು ಮದುವೆಯಾಗಿದ್ದನು. ಅದು ಸಹ ವಿಗ್ರಹಾರಾಧನೆ ಮಾಡುತ್ತಿದ್ದ ಶತ್ರು ಜನಾಂಗದವರಾದ ಅಮ್ಮೋನಿಯರಿಂದ ಹೆಣ್ಣು ತೆಗೆದುಕೊಂಡಿದ್ದನು. (ನ್ಯಾಯ. 10:6; 2 ಸಮು. 10:6) ಹಿಂದೊಮ್ಮೆ ವಿಗ್ರಹಾರಾಧನೆ ಮಾಡುತ್ತಿದ್ದ ಆಕೆ ರಾಹಾಬ್‌, ರೂತಳಂತೆ ಸತ್ಯಾರಾಧನೆಯನ್ನು ಸ್ವೀಕರಿಸಿದ್ದಿರಲೂಬಹುದು. (ರೂತ. 1:16; 4:13-17; ಮತ್ತಾ. 1:5, 6) ಆದರೆ ಸೊಲೊಮೋನನು ಯೆಹೋವನನ್ನು ಆರಾಧಿಸದ ಅತ್ತೆಮಾವ, ಸಂಬಂಧಿಕರೊಂದಿಗೆ ಒಡನಾಟ ಇಡಬೇಕಾಗಿ ಬಂದಿರಬಹುದಲ್ಲವೇ?

12, 13. ಸೊಲೊಮೋನ ತನ್ನ ಆಳ್ವಿಕೆಯ ಆರಂಭದಲ್ಲಿ ಯಾವ ಗಂಭೀರ ತಪ್ಪನ್ನು ಮಾಡಿದನು? ಯಾವ ರೀತಿಯ ಯೋಚನೆ ತಪ್ಪುಗೈಯುವಂತೆ ಮಾಡಿರಬಹುದು?

12 ಅವನು ಅರಸನಾದ ಬಳಿಕವೂ ಅನ್ಯಜನರಿಂದ ಹೆಣ್ಣು ತಕ್ಕೊಳ್ಳುವ ಚಾಳಿ ಮುಂದುವರಿಯಿತು. “ಸೊಲೊಮೋನನು ಐಗುಪ್ತದ ಅರಸನಾದ ಫರೋಹನ ಅಳಿಯನಾದನು. ಅವನು ಫರೋಹನ ಮಗಳನ್ನು ಮದುವೆಮಾಡಿಕೊಂಡು . . . ಆಕೆಯನ್ನು ದಾವೀದನಗರದಲ್ಲಿ ಇರಿಸಿದನು.” (1 ಅರ. 3:1) ಈ ಈಜಿಪ್ಟಿನ ಸ್ತ್ರೀ ರೂತಳಂತೆ ಯೆಹೋವನ ಆರಾಧಕಿಯಾದಳಾ? ಆ ಬಗ್ಗೆ ಒಂದಿನಿತೂ ಸೂಚನೆ ಇಲ್ಲ. ಆದರೆ ಸಮಯಾನಂತರ ಆಕೆಗಾಗಿ ಮತ್ತು ಪ್ರಾಯಶಃ ಆಕೆಯ ಸಖಿಯರಿಗಾಗಿ ದಾವೀದನಗರದ ಹೊರಗೆ ಅರಮನೆಯನ್ನು ಕಟ್ಟಿಸಿದನು. ಏಕೆ? ಏಕೆಂದರೆ ಸುಳ್ಳು ಆರಾಧಕರು ಒಡಂಬಡಿಕೆಯ ಮಂಜೂಷದ ಸಮೀಪದಲ್ಲಿ ವಾಸಿಸಬಾರದು ಎಂಬ ಕಾರಣಕ್ಕಾಗಿ ಅವನು ಹಾಗೆ ಮಾಡಿದನೆಂದು ಬೈಬಲ್‌ ತಿಳಿಸುತ್ತದೆ.—2 ಪೂರ್ವ. 8:11.

13 ಈಜಿಪ್ಟಿನ ರಾಜಕುಮಾರಿಯನ್ನು ಮದುವೆಯಾದರೆ ಇಸ್ರಾಯೇಲ್‌ ಮತ್ತು ಈಜಿಪ್ಟಿನ ಮಧ್ಯೆ ಸ್ನೇಹಸಂಬಂಧ ಇರುತ್ತದೆಂದು ಸೊಲೊಮೋನ ನೆನಸಿದ್ದಿರಬಹುದು. ಆದರೆ ಎಷ್ಟೋ ವರ್ಷಗಳ ಮುಂಚೆಯೇ ಕಾನಾನ್ಯರನ್ನು ಮದುವೆ ಆಗಬಾರದೆಂದು ಯೆಹೋವನು ಕಟ್ಟಪ್ಪಣೆ ಕೊಟ್ಟಿದ್ದನು. ಕಾನಾನ್‌ನ ಕೆಲವು ಜನಾಂಗದವರ ಪಟ್ಟಿಯನ್ನೂ ಕೊಟ್ಟಿದ್ದನು. (ವಿಮೋ. 34:11-16) ಆ ಪಟ್ಟಿಯಲ್ಲಿ ಐಗುಪ್ತದ ಹೆಸರಿಲ್ಲವೆಂದು ಸೊಲೊಮೋನನು ಯೋಚಿಸಿದ್ದಿರಬಹುದಾ? ಒಂದುವೇಳೆ ಯೋಚಿಸಿದ್ದರೂ ಅವನು ಮಾಡಿದ್ದು ದೇವರ ದೃಷ್ಟಿಯಲ್ಲಿ ಸರಿಯಾಗಿತ್ತಾ? ನಿಜ ಹೇಳುವುದಾದರೆ ಅನ್ಯ ಜನರೊಂದಿಗಿನ ನೆಂಟಸ್ತಿಕೆ ಸುಳ್ಳು ದೇವರುಗಳ ಆರಾಧನೆಗೆ ನಡೆಸುತ್ತದೆಂದು ಯೆಹೋವನು ಮೊದಲೇ ಎಚ್ಚರಿಸಿದ್ದನು. ಈ ಸ್ಪಷ್ಟ ಎಚ್ಚರಿಕೆಯನ್ನು ಸೊಲೊಮೋನ ಗಾಳಿಗೆ ತೂರಿದನು.ಧರ್ಮೋಪದೇಶಕಾಂಡ 7:1-4 ಓದಿ.

14. ಸೊಲೊಮೋನನಿಂದ ಎಚ್ಚರಿಕೆಯ ಪಾಠವನ್ನು ಕಲಿಯುವುದು ಹೇಗೆ ಪ್ರಯೋಜನಕರ?

14 ಸೊಲೊಮೋನನಿಂದ ನಾವು ಎಚ್ಚರಿಕೆಯ ಪಾಠವನ್ನು ಕಲಿಯುತ್ತೇವಾ? ಉದಾಹರಣೆಗೆ ಸಹೋದರಿಯೊಬ್ಬಳು ‘ಕರ್ತನಲ್ಲಿರುವವರನ್ನು ಮಾತ್ರ’ ಮದುವೆಯಾಗಬೇಕೆಂಬ ದೇವರ ಆಜ್ಞೆಯನ್ನು ಕಡೆಗಣಿಸಿ ಹೊರಗಿನ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ನೆನಸಿ. ಅನಂತರ ತನ್ನ ಈ ಕೃತ್ಯಕ್ಕೆ ನೆವಗಳನ್ನು ಕೊಡುವಲ್ಲಿ? (1 ಕೊರಿಂ. 7:39) ಅಥವಾ ಆದಾಯವನ್ನು ಕಡಿಮೆಯೆಂದು ತೋರಿಸಿ ತೆರಿಗೆ ಕಟ್ಟದಿರಲು, ಮಾಡಿದ ತಪ್ಪಿಗೆ ಅವಮಾನವಾಗುತ್ತದೆಂಬ ಭಯದಿಂದ ಸುಳ್ಳು ಹೇಳಲು, ಶಾಲಾಕಾಲೇಜುಗಳ ಕ್ರೀಡೆ-ಕ್ಲಬ್‌ಗಳಲ್ಲಿ ಭಾಗವಹಿಸಲು ಒಬ್ಬನು ನೆವಗಳನ್ನು ಕೊಟ್ಟಲ್ಲಿ? ಆಗ ಸೊಲೊಮೋನನಂತೆ ದೇವರಿಗೆ ಅವಿಧೇಯತೆ ತೋರಿಸಿ ನೆವಗಳನ್ನು ಕೊಟ್ಟಂತೆ ಆಗುವುದಿಲ್ಲವೆ? ಇದು ತುಂಬ ಅಪಾಯಕರ.

15. ಸೊಲೊಮೋನನಿಗೆ ಯೆಹೋವನು ಹೇಗೆ ಕರುಣೆ ತೋರಿಸಿದನು? ನಾವು ಏನನ್ನು ಮರೆಯಬಾರದು?

15 ಆಸಕ್ತಿಕರ ವಿಷಯವೇನೆಂದರೆ ಸೊಲೊಮೋನನು ವಿದೇಶಿ ರಾಜಕುಮಾರಿಯನ್ನು ಮದುವೆಯಾದದ್ದನ್ನು ಬೈಬಲ್‌ ತಿಳಿಸಿದ ಬಳಿಕ ಅವನ ಬಿನ್ನಹದಂತೆ ದೇವರು ಅಪಾರ ವಿವೇಕ ಮತ್ತು ಐಶ್ವರ್ಯವನ್ನು ದಯಪಾಲಿಸಿದ್ದನ್ನು ಹೇಳುತ್ತದೆ. (1 ಅರ. 3:10-13) ಅಂದರೆ ಸೊಲೊಮೋನನು ತನ್ನ ನಿರ್ದೇಶನಗಳನ್ನು ಕಡೆಗಣಿಸಿದ್ದರೂ ಯೆಹೋವನು ಅವನನ್ನು ಕೂಡಲೆ ತಳ್ಳಿಬಿಡಲಿಲ್ಲ ಇಲ್ಲವೆ ಕಠಿಣ ಶಿಕ್ಷೆ ವಿಧಿಸಲಿಲ್ಲ. ಏಕೆಂದರೆ ಧೂಳಿನಿಂದ ಮಾಡಲ್ಪಟ್ಟ ನಾವು ಅಪರಿಪೂರ್ಣರೆಂದು ಆತನು ಅರಿತಿದ್ದಾನೆ. (ಕೀರ್ತ. 103:10, 13, 14) ಆದರೆ ಒಂದನ್ನು ನಾವು ಮರೆಯಬಾರದು, ನಾವೇನೇ ಮಾಡಿದರೂ ಅದು ಇಂದಿಲ್ಲದಿದ್ದರೆ ನಾಳೆ ನಮ್ಮನ್ನು ಖಂಡಿತ ಬಾಧಿಸುತ್ತದೆ.

ಅನೇಕಾನೇಕ ಹೆಂಡತಿಯರು!

16. ಅನೇಕಾನೇಕ ಸ್ತ್ರೀಯರನ್ನು ಮದುವೆ ಮಾಡಿಕೊಳ್ಳುವ ಮೂಲಕ ಸೊಲೊಮೋನನು ದೇವರ ಯಾವ ಆಜ್ಞೆಗೆ ಅವಿಧೇಯನಾದನು?

16 ಪರಮಗೀತ ಪುಸ್ತಕದಲ್ಲಿ ಅರಸನು ಕನ್ಯೆಯೊಬ್ಬಳ ಬಗ್ಗೆ ಹಾಡಿಹೊಗಳುತ್ತಾ ಆಕೆಯ ಸೌಂದರ್ಯ ತನ್ನ ಅರುವತ್ತು ಮಂದಿ ರಾಣಿಯರನ್ನೂ ಎಂಭತ್ತು ಮಂದಿ ಉಪಪತ್ನಿಯರನ್ನೂ ಮೀರಿಸುವಂಥದ್ದು ಎಂದು ಹೇಳಿದನು. (ಪರಮ. 6:1, 8-10) ಇದು ಸೊಲೊಮೋನನಿಗೆ ಸೂಚಿಸುತ್ತಿದ್ದಲ್ಲಿ, ಆ ಸಮಯದಷ್ಟಕ್ಕೆ ಅವನಿಗೆ ಅಷ್ಟೊಂದು ಪತ್ನಿಯರು ಉಪಪತ್ನಿಯರು ಇದ್ದರು. ಅವರಲ್ಲಿ ಹೆಚ್ಚಿನವರು ಅಥವಾ ಎಲ್ಲರೂ ಸತ್ಯಾರಾಧಕರಾಗಿದ್ದರು ಎಂದಿಟ್ಟುಕೊಂಡರೂ ಸೊಲೊಮೋನನು ದೇವರಿಗೆ ಅವಿಧೇಯನಾದನೆಂದೇ ಹೇಳಬಹುದು. ಏಕೆಂದರೆ ಮೋಶೆಯ ಮೂಲಕ ದೇವರು ಇಸ್ರಾಯೇಲ್ಯ ಅರಸನಿಗೆ ಹೀಗೆ ಆಜ್ಞಾಪಿಸಿದ್ದನು: “ಅವನು ಅನೇಕ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಯೆಹೋವನ ಕಡೆಯಿಂದ ತಿರುಗುವದಕ್ಕೆ ಅವಕಾಶವಾಗುವದು.” (ಧರ್ಮೋ. 17:17) ಹಾಗಿದ್ದರೂ ಯೆಹೋವನು ಸೊಲೊಮೋನನನ್ನು ತಳ್ಳಿಬಿಡಲಿಲ್ಲ. ನಿಜ ಹೇಳಬೇಕಾದರೆ ಪರಮಗೀತ ಪುಸ್ತಕವನ್ನು ಬರೆಯಲು ಅವನನ್ನು ಉಪಯೋಗಿಸುವ ಮೂಲಕ ಅವನನ್ನು ಆಶೀರ್ವದಿಸಿದನು.

17. ಯಾವ ಸತ್ಯಾಂಶವನ್ನು ನಾವೆಂದೂ ಮರೆಯಬಾರದು?

17 ಹಾಗಾದರೆ ಸೊಲೊಮೋನನು ದೇವರ ಆಜ್ಞೆಗಳನ್ನು ಮೀರಿದರೂ ಶಿಕ್ಷೆಯಿಂದ ತಪ್ಪಿಸಿಕೊಂಡನಾ? ನಾವು ಕೂಡ ಹಾಗೆ ಮಾಡಬಹುದೆಂದಾ? ಖಂಡಿತ ಇಲ್ಲ. ಬದಲಾಗಿ ಇದು ದೇವರು ತುಂಬ ಸಹನೆಯುಳ್ಳವನೆಂದು ತೋರಿಸುತ್ತದೆ. ದೇವರ ಸೇವಕನೊಬ್ಬನು ಆತನ ನಿಯಮವನ್ನು ಉಲ್ಲಂಘಿಸಿ ಕೂಡಲೆ ಶಿಕ್ಷೆಯನ್ನು ಹೊಂದದಿರುವಲ್ಲಿ ಅವನು ದುಷ್ಪರಿಣಾಮವನ್ನು ಅನುಭವಿಸುವುದೇ ಇಲ್ಲ ಎಂದರ್ಥವಲ್ಲ. ಸೊಲೊಮೋನನು ಬರೆದ ಈ ಮಾತನ್ನು ನೆನಪಿಸಿಕೊಳ್ಳಿ: “ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೆ ನಡೆಯದಿರುವ ಕಾರಣ ಅಪರಾಧಮಾಡಬೇಕೆಂಬ ಯೋಚನೆಯು ನರಜನ್ಮದವರ ಹೃದಯದಲ್ಲಿ ತುಂಬಿ ತುಳುಕುವದು.” ಅವನು ಮತ್ತೂ ಹೇಳಿದ್ದು: “ಪಾಪಿಯು ನೂರು ಸಲ ಅಧರ್ಮಮಾಡಿ ಬಹುಕಾಲ ಬದುಕಿದರೂ ದೇವರ ಮುಂದೆ ಹೆದರಿ ಆತನಲ್ಲಿ ಭಯಭಕ್ತಿಯುಳ್ಳವರಿಗೆ ಮೇಲೇ ಆಗುವದೆಂದು ಬಲ್ಲೆನು.”—ಪ್ರಸಂ. 8:11, 12.

18. ಸೊಲೊಮೋನನ ಉದಾಹರಣೆ ಗಲಾತ್ಯ 6:7ರಲ್ಲಿರುವ ಮಾತುಗಳ ಸತ್ಯವನ್ನು ಹೇಗೆ ತೋರಿಸುತ್ತದೆ?

18 ಸೊಲೊಮೋನ ತಾನು ಹೇಳಿದಂತೆ ನಡೆದಿದ್ದರೆ ಎಷ್ಟೊಂದು ಒಳ್ಳೇದಿತ್ತು! ಅವನು ಅನೇಕ ಒಳ್ಳೇ ಕಾರ್ಯಗಳನ್ನು ಮಾಡಿದ್ದನು. ಯೆಹೋವನ ಆಶೀರ್ವಾದಗಳನ್ನು ಪಡೆದಿದ್ದನು. ಆದರೆ ಕಾಲಸಂದಂತೆ ಒಂದರ ನಂತರ ಇನ್ನೊಂದು ತಪ್ಪು ಹೆಜ್ಜೆ ತಕ್ಕೊಂಡನು. ಯೆಹೋವನ ನಿಯಮಗಳಿಗೆ ಅವಿಧೇಯನಾಗುವುದು ಅವನ ರೂಢಿಯಾಯಿತು. ಸಮಯಾನಂತರ ಅಪೊಸ್ತಲ ಪೌಲನು ದೇವಪ್ರೇರಣೆಯಿಂದ ಬರೆದ ಈ ಮಾತುಗಳು ಎಷ್ಟೊಂದು ಸತ್ಯ: “ಮೋಸಹೋಗಬೇಡಿರಿ; ದೇವರು ಅಪಹಾಸ್ಯವನ್ನು ಸಹಿಸುವಂಥವನಲ್ಲ. ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು.” (ಗಲಾ. 6:7) ಸೊಲೊಮೋನನು ಕೂಡ ದುಃಖಕರ ಫಲಿತಾಂಶವನ್ನು ಅನುಭವಿಸಿದನು. “ಅರಸನಾದ ಸೊಲೊಮೋನನು ಫರೋಹನ ಮಗಳಲ್ಲದೆ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೀದೋನ್ಯರು, ಹಿತ್ತಿಯರು ಎಂಬೀ ಜನಾಂಗಗಳ ಸ್ತ್ರೀಯರನ್ನೂ ಮೋಹಿಸಿದನು.” (1 ಅರ. 11:1) ಅವರಲ್ಲಿ ಹೆಚ್ಚಿನವರು ಸುಳ್ಳು ದೇವರುಗಳನ್ನು ಆರಾಧಿಸುವುದನ್ನು ಬಿಟ್ಟಿರಲಿಲ್ಲ. ಸೊಲೊಮೋನನ ಮೇಲೂ ಪ್ರಭಾವಬೀರಿದರು. ಅವನು ಯೆಹೋವನಿಂದ ದೂರ ಸರಿದನು. ದೀರ್ಘ ಸಹನೆ ತೋರಿಸಿದ ಯೆಹೋವನ ಅನುಗ್ರಹವನ್ನು ಕಳಕೊಂಡನು.1 ಅರಸುಗಳು 11:4-8 ಓದಿ.

ಅವನ ಒಳ್ಳೇ ಮತ್ತು ಕೆಟ್ಟ ಮಾದರಿಯಿಂದ ಕಲಿಯಿರಿ

19. ಬೈಬಲಿನಲ್ಲಿ ಯಾವ ಒಳ್ಳೇ ಮಾದರಿಗಳಿವೆ?

19 ಯೆಹೋವನು ಪೌಲನನ್ನು ಹೀಗೆ ಬರೆಯುವಂತೆ ಪ್ರೇರಿಸಿದನು: “ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು; ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವಂತೆ ಅವು ಬರೆಯಲ್ಪಟ್ಟವು.” (ರೋಮ. 15:4) ಪೂರ್ವದಲ್ಲಿ ಬರೆಯಲಾದ ಆ ಮಾತುಗಳಲ್ಲಿ ನಂಬಿಗಸ್ತ ಸ್ತ್ರೀಪುರುಷರ ಅನೇಕ ಒಳ್ಳೇ ಮಾದರಿಗಳೂ ಸೇರಿವೆ. ಅವರ ಕುರಿತು ಪೌಲನು ಹೀಗೆ ಹೇಳಿದನು: “ನಾನು ಇನ್ನೂ ಏನು ಹೇಳಲಿ? ಗಿದ್ಯೋನ್‌, ಬಾರಾಕ್‌, ಸಂಸೋನ್‌, ಯೆಫ್ತಾಹ, ದಾವೀದ್‌ ಮತ್ತು ಸಮುವೇಲ್‌ ಹಾಗೂ ಇತರ ಪ್ರವಾದಿಗಳ ಕುರಿತು ನಾನು ವಿವರವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು. ನಂಬಿಕೆಯ ಮೂಲಕ ಅವರು ಹೋರಾಟದಲ್ಲಿ ರಾಜ್ಯಗಳನ್ನು ಸೋಲಿಸಿದರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, . . . ನಿರ್ಬಲ ಸ್ಥಿತಿಯಿಂದ ಬಲಿಷ್ಠರಾಗಿ ಮಾಡಲ್ಪಟ್ಟರು.” (ಇಬ್ರಿ. 11:32-34) ಬೈಬಲಿನಲ್ಲಿರುವ ಇಂಥ ಒಳ್ಳೇ ಮಾದರಿಗಳನ್ನು ನಾವು ಅನುಕರಿಸಸಾಧ್ಯವಿದೆ, ಅನುಕರಿಸಬೇಕು ಸಹ.

20, 21. ದೇವರ ವಾಕ್ಯದಲ್ಲಿರುವ ಎಚ್ಚರಿಕೆಯ ಉದಾಹರಣೆಗಳಿಂದ ನೀವೇಕೆ ಪಾಠಗಳನ್ನು ಕಲಿಯಲಿಚ್ಛಿಸುತ್ತೀರಿ?

20 ಬೈಬಲಿನಲ್ಲಿ ಎಚ್ಚರಿಕೆಯ ಉದಾಹರಣೆಗಳನ್ನೂ ನಾವು ಕಾಣುತ್ತೇವೆ. ಕೆಲವು ಸ್ತ್ರೀಪುರುಷರು ಒಂದೊಮ್ಮೆ ಯೆಹೋವನನ್ನು ಆರಾಧಿಸುತ್ತಾ ಆತನ ಅನುಗ್ರಹ ಪಡೆದವರಾಗಿದ್ದರು. ಅವರು ಎಲ್ಲಿ, ಹೇಗೆ ತಪ್ಪಿಬಿದ್ದರು ಎಂಬುದನ್ನು ಬೈಬಲಿನಲ್ಲಿ ಓದುವಾಗ ನಾವು ಅದೇ ತಪ್ಪನ್ನು ಮಾಡಬಾರದೆಂಬ ಪಾಠವನ್ನು ಕಲಿಯುತ್ತೇವೆ. ಕೆಲವರು ಕೆಟ್ಟ ಯೋಚನೆ ಅಥವಾ ಪ್ರವೃತ್ತಿಯನ್ನು ಮೆಲ್ಲ ಮೆಲ್ಲನೆ ಬೆಳೆಸಿಕೊಂಡರು. ಪರಿಣಾಮ ಕೆಟ್ಟದಾಯಿತು. ಅವರಿಂದ ನಾವು ಹೇಗೆ ಪಾಠಗಳನ್ನು ಕಲಿಯಬಹುದು? ಹೀಗೆ ಕೇಳಿಕೊಳ್ಳೋಣ: ‘ಕೆಟ್ಟ ಆಲೋಚನೆ ಅವರಲ್ಲಿ ಹೇಗೆ ಆರಂಭವಾಯಿತು? ನನ್ನಲ್ಲೂ ಆ ಗುಣ ಬೆಳೆಯಬಲ್ಲದಾ? ಆ ಗುಣ ನನ್ನಲ್ಲಿ ಬೆಳೆಯದಂತೆ ನೋಡಿಕೊಳ್ಳಲು ಈ ಉದಾಹರಣೆ ಹೇಗೆ ಸಹಾಯಮಾಡುತ್ತದೆ?’

21 ಬೈಬಲಿನಲ್ಲಿರುವ ಎಲ್ಲ ಉದಾಹರಣೆಗಳನ್ನು ಜಾಗ್ರತೆಯಿಂದ ಅಧ್ಯಯನ ಮಾಡಬೇಕು. ಏಕೆಂದರೆ ಪೌಲನು ದೇವಪ್ರೇರಣೆಯಿಂದ ಬರೆದಂತೆ “ಈ ವಿಷಯಗಳು ಅವರಿಗೆ ಉದಾಹರಣೆಗಳಾಗಿ ಸಂಭವಿಸುತ್ತಾ ಹೋದವು ಮತ್ತು ವಿಷಯಗಳ ವ್ಯವಸ್ಥೆಗಳ ಅಂತ್ಯವನ್ನು ಸಮೀಪಿಸಿರುವ ನಮಗೆ ಇವು ಎಚ್ಚರಿಕೆ ನೀಡಲಿಕ್ಕಾಗಿ ಬರೆಯಲ್ಪಟ್ಟವು.”—1 ಕೊರಿಂ. 10:11.

ನಿವೇನು ಕಲಿತಿರಿ?

• ಬೈಬಲಿನಲ್ಲಿ ಒಳ್ಳೇ ಮಾದರಿಗಳು ಮತ್ತು ಕೆಟ್ಟ ಉದಾಹರಣೆಗಳು ದಾಖಲಾಗಿರಲು ಕಾರಣವೇನು?

• ಸೊಲೊಮೋನ ತಪ್ಪುಮಾಡುವ ರೂಢಿಯನ್ನು ಹೇಗೆ ಬೆಳೆಸಿಕೊಂಡನು?

• ಸೊಲೊಮೋನನಿಂದ ನೀವು ಯಾವ ಎಚ್ಚರಿಕೆಯ ಪಾಠವನ್ನು ಕಲಿಯುತ್ತೀರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ದೇವರು ಅನುಗ್ರಹಿಸಿದ ವಿವೇಕವನ್ನು ಸೊಲೊಮೋನ ಬಳಸಿದನು

[ಪುಟ 12ರಲ್ಲಿರುವ ಚಿತ್ರ]

ಸೊಲೊಮೋನನಿಂದ ನೀವು ಎಚ್ಚರಿಕೆಯ ಪಾಠ ಕಲಿಯುತ್ತಿದ್ದೀರಾ?