ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊಂದಾಣಿಕೆ ಮಾಡಿಕೊಂಡೆವು ಆಶೀರ್ವಾದ ಪಡೆದೆವು

ಹೊಂದಾಣಿಕೆ ಮಾಡಿಕೊಂಡೆವು ಆಶೀರ್ವಾದ ಪಡೆದೆವು

ಹೊಂದಾಣಿಕೆ ಮಾಡಿಕೊಂಡೆವು ಆಶೀರ್ವಾದ ಪಡೆದೆವು

ಜೇಮ್ಸ್‌ ಎ. ಥಾಂಪ್ಸನ್‌ ಹೇಳಿದಂತೆ

ನನ್ನ ಜನನ ಇಸವಿ 1928ರಲ್ಲಾಯಿತು. ದಕ್ಷಿಣ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಕರಿ ಮತ್ತು ಬಿಳಿ ಜನರ ತಾರತಮ್ಯದ ಬಿರುಗಾಳಿ ಎದ್ದಿದ್ದ ಸಮಯ ಅದು. ವರ್ಣಭೇದ ನೀತಿ ಕಟ್ಟುನಿಟ್ಟಾಗಿ ಜಾರಿಯಲ್ಲಿತ್ತು. ಅದನ್ನು ಉಲ್ಲಂಘಿಸಿದರೆ ಒಂದೊ ಸೆರೆಮನೆಯಲ್ಲಿ ಕೊಳೆಯಬೇಕಿತ್ತು ಇಲ್ಲವೆ ಉಗ್ರ ಶಿಕ್ಷೆಗೆ ಗುರಿಯಾಗಬೇಕಿತ್ತು.

ಆಕಾಲದಲ್ಲಿ ಯುನೈಟೆಡ್‌ ಸ್ಟೇಟ್ಸ್‌ನ ಅನೇಕ ಕಡೆಗಳಲ್ಲಿ ಯೆಹೋವನ ಸಾಕ್ಷಿಗಳ ಸಭೆಗಳು, ಸರ್ಕಿಟ್‌ಗಳು, ಡಿಸ್ಟ್ರಿಕ್ಟ್‌ಗಳು ಕಪ್ಪು ಸಹೋದರರಿಗೆ ಪ್ರತ್ಯೇಕವಾಗಿ, ಬಿಳಿ ಸಹೋದರರಿಗೆ ಪ್ರತ್ಯೇಕವಾಗಿ ಇದ್ದವು. 1937ರಲ್ಲಿ ನನ್ನ ಅಪ್ಪ, ಟೆನೆಸೀ ರಾಜ್ಯದ ಚಾಟನೂಗ ನಗರದಲ್ಲಿ ಸಭೆಯ ಕಂಪನಿ ಸರ್ವೆಂಟ್‌ (ಈಗ ಹಿರಿಯರ ಮಂಡಲಿಯ ಸಂಯೋಜಕ) ಆಗಿದ್ದರು. ಅದು ಕಪ್ಪು ಸಹೋದರರಿದ್ದ ಸಭೆ. ಬಿಳಿ ಸಹೋದರರಿದ್ದ ಸಭೆಯಲ್ಲಿ ಹೆನ್ರಿ ನಿಕಲಾಸ್‌ ಕಂಪನಿ ಸರ್ವೆಂಟ್‌ ಆಗಿದ್ದರು.

ನಾನಾಗ ಚಿಕ್ಕವನಾಗಿದ್ದರೂ ಅಂದಿನ ಸವಿ ನೆನಪುಗಳು ಇನ್ನೂ ಹಚ್ಚಹಸುರಾಗಿವೆ. ಅಪ್ಪ ಮತ್ತು ಸಹೋದರ ನಿಕಲಾಸ್‌ ರಾತ್ರಿಯಲ್ಲಿ ಮನೆಯ ಹಿತ್ತಲಿನ ವರಾಂಡದಲ್ಲಿ ಕೂತು ಮುಕ್ತವಾಗಿ ಮಾತಾಡುತ್ತಿದ್ದ ದೃಶ್ಯ ಇನ್ನೂ ಕಣ್ಮುಂದೆ ಇದೆ. ಚರ್ಚೆ ವಿಷಯ ಪೂರ್ತಿ ಅರ್ಥವಾಗದಿದ್ದರೂ ಅಪ್ಪನ ಪಕ್ಕ ಕೂತು ಕೇಳಿಸಿಕೊಳ್ಳಲು ಖುಷಿಯಾಗುತ್ತಿತ್ತು. ಸಾರುವ ಕೆಲಸವನ್ನು ಮುಂದುವರಿಸುವುದು ಹೇಗೆಂದು ಅವರಿಬ್ಬರು ಸಮಾಲೋಚಿಸುತ್ತಿದ್ದರು.

ಇಸವಿ 1930ರಲ್ಲಿ ನಮ್ಮ ಕುಟುಂಬ ಆಘಾತಕ್ಕೊಳಗಾಗಿತ್ತು. ಅಮ್ಮ ದಿಢೀರೆಂದು ತೀರಿಕೊಂಡರು. ಅವರಿಗೆ ಕೇವಲ 20 ವರ್ಷವಾಗಿತ್ತಷ್ಟೆ. ನಾನಾಗ 2 ವರ್ಷದ ಮಗು. ಅಕ್ಕ ಡೋರಿಸ್‌ಗೆ 4 ವರ್ಷ. ನಮ್ಮ ಆರೈಕೆಯ ಹೊಣೆ ಪೂರ್ತಿಯಾಗಿ ಅಪ್ಪನ ಹೆಗಲ ಮೇಲೆ ಬಿತ್ತು. ಅವರು ದೀಕ್ಷಾಸ್ನಾನ ಹೊಂದಿ ಹೆಚ್ಚು ಸಮಯವಾಗಿರದಿದ್ದರೂ ಆಧ್ಯಾತ್ಮಿಕವಾಗಿ ಒಳ್ಳೇ ಪ್ರಗತಿ ಮಾಡಿದ್ದರು.

ಬದುಕಿಗೆ ರೂಪುಕೊಟ್ಟವರು

1933ರಲ್ಲಿ ಅಪ್ಪಗೆ ಲಿಲೀ ಮಾ ಗ್ವೆಂಡಲನ್‌ ಥಾಮಸ್‌ ಎಂಬ ಕ್ರೈಸ್ತ ಸಹೋದರಿಯ ಪರಿಚಯವಾಯಿತು. ಗುಣವಂತೆಯಾದ ಆಕೆಯನ್ನು ಅಪ್ಪ ವರಿಸಿದರು. ಯೆಹೋವನಿಗೆ ನಿಷ್ಠೆಯಿಂದ ಸೇವೆಸಲ್ಲಿಸುವ ವಿಷಯದಲ್ಲಿ ಅಪ್ಪಅಮ್ಮ ಇಬ್ಬರೂ ಅಕ್ಕ ಮತ್ತು ನನಗೆ ಒಳ್ಳೇ ಮಾದರಿ ಇಟ್ಟರು.

ಆ ಸಮಯದಲ್ಲಿ ಸಭಾ ಹಿರಿಯರನ್ನು ಸ್ಥಳೀಯವಾಗಿ ಚುನಾಯಿಸಿ ಆರಿಸಲಾಗುತ್ತಿತ್ತು. ಆದರೆ 1938ರಲ್ಲಿ ಒಂದು ಹೊಂದಾಣಿಕೆ ಮಾಡಲಾಯಿತು. ಇನ್ನು ಮುಂದೆ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಮುಖ್ಯ ಕಾರ್ಯಾಲಯದಿಂದ ಹಿರಿಯರನ್ನು ನೇಮಿಸಲಾಗುವುದು ಎಂಬ ಠರಾವನ್ನು ಮಂಡಿಸಲಾಯಿತು. ಕೆಲವರು ಅದನ್ನು ಬೆಂಬಲಿಸಲು ಹಿಂಜರಿದರು. ಅಪ್ಪ ಹಾಗೆ ಮಾಡಲಿಲ್ಲ. ಸಂಘಟನೆ ಮಾಡಿದ ಹೊಂದಾಣಿಕೆಗೆ ಪೂರ್ಣ ಬೆಂಬಲವಿತ್ತರು. ಅವರ ಆ ನಿಷ್ಠೆಯ ಮಾದರಿ, ಅಪ್ಪನಿಗೆ ಅಮ್ಮ ಕೊಟ್ಟ ಹೃತ್ಪೂರ್ವಕ ಸಹಕಾರ, ಇವು ನನ್ನ ಬದುಕನ್ನು ಒಳ್ಳೇ ರೀತಿಯಲ್ಲಿ ರೂಪಿಸಿ ಇಂದಿನ ವರೆಗೂ ನನಗೆ ಸಹಾಯಮಾಡಿದೆ.

ದೀಕ್ಷಾಸ್ನಾನ ಮತ್ತು ಪೂರ್ಣ ಸಮಯ ಸೇವೆ

1940ರಲ್ಲಿ ಮಿಶಿಗನ್‌ನ ಡೆಟ್ರಾಟ್‌ನಲ್ಲಿ ನಡೆದ ಅಧಿವೇಶನಕ್ಕೆ ನಮ್ಮ ಸಭೆಯ ಹೆಚ್ಚಿನವರು ಒಟ್ಟಾಗಿ ಬಾಡಿಗೆಗೆ ಬಸ್‌ ಮಾಡಿಕೊಂಡು ಹೋದೆವು. ನಮ್ಮ ಗುಂಪಿನಲ್ಲಿದ್ದ ಕೆಲವರು ಅಧಿವೇಶನದಲ್ಲಿ ದೀಕ್ಷಾಸ್ನಾನ ಪಡೆದರು. ನಾನೇಕೆ ಪಡೆಯಲಿಲ್ಲ ಎಂದು ಕೆಲವರು ಪ್ರಶ್ನಾರ್ಥಕವಾಗಿ ನೋಡಿದರು. ಐದು ವರ್ಷದವನಾಗಿದ್ದಾಗಲೇ ಸಾರಲು ತೊಡಗಿ ಸೇವೆಯಲ್ಲಿ ತುಂಬ ಕ್ರಿಯಾಶೀಲನಾಗಿದ್ದ ನಾನು ದೀಕ್ಷಾಸ್ನಾನ ಪಡೆದುಕೊಳ್ಳದೆ ಇದ್ದದ್ದು ಅವರಲ್ಲಿ ಅಚ್ಚರಿ ಮೂಡಿಸಿತು.

ಅವರ ಪ್ರಶ್ನೆಗೆ, “ದೀಕ್ಷಾಸ್ನಾನ ಏಕೆ ಪಡೆಯಬೇಕೆನ್ನುವುದು ನನಗೆ ಅರ್ಥವಾಗುತ್ತಿಲ್ಲ” ಎಂದುತ್ತರಿಸಿದೆ. ಇದನ್ನು ಕೇಳಿಸಿಕೊಂಡ ಅಪ್ಪ ಆಶ್ಚರ್ಯಪಟ್ಟರು. ದೀಕ್ಷಾಸ್ನಾನ ತಕ್ಕೊಳ್ಳುವುದು ಏಕೆ ಮಹತ್ವದ್ದಾಗಿದೆ, ಅದರ ಅರ್ಥವೇನು ಎಂದು ನನಗೆ ಮನಗಾಣಿಸಲು ಅಂದಿನಿಂದ ಹೆಚ್ಚು ಪ್ರಯತ್ನ ಮಾಡಿದರು. ನಾಲ್ಕು ತಿಂಗಳ ಬಳಿಕ, 1940ರ ಅಕ್ಟೋಬರ್‌ 1ರಂದು ಚಾಟನೂಗದ ಹತ್ತಿರದ ಕೊಳವೊಂದರಲ್ಲಿ ನಡುಗುವ ಚಳಿಯಲ್ಲೂ ದೀಕ್ಷಾಸ್ನಾನ ಪಡೆದೆ.

14ನೇ ವಯಸ್ಸಿನಿಂದ ಬೇಸಿಗೆ ರಜೆ ಸಿಗುವಾಗೆಲ್ಲಾ ಪಯನೀಯರ್‌ ಸೇವೆ ಮಾಡುತ್ತಿದ್ದೆ. ಸೇವೆಗೆಂದು ಟೆನೆಸೀ ಮತ್ತು ನೆರೆ ರಾಜ್ಯವಾದ ಜಾರ್ಜಿಯದ ಚಿಕ್ಕ ಚಿಕ್ಕ ಊರುಗಳಿಗೆ ಹೋಗುತ್ತಿದ್ದೆ. ಬೆಳಗ್ಗೆ ಬೇಗ ಎದ್ದು ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿಕೊಂಡು 6 ಗಂಟೆಯಷ್ಟರಲ್ಲಿ ಟ್ರೈನ್‌ ಅಥವಾ ಬಸ್‌ ಹಿಡಿಯುತ್ತಿದ್ದೆ. ಸಂಜೆ ಮನೆಗೆ ಬರುವಾಗ 6 ಗಂಟೆಯಾಗುತ್ತಿತ್ತು. ಮಧ್ಯಾಹ್ನಕ್ಕೆಂದು ಕೊಂಡು ಹೋದ ಬುತ್ತಿ ಎಷ್ಟೋ ಸಾರಿ ಬೆಳಗ್ಗೆಯೇ ಖಾಲಿಯಾಗುತ್ತಿತ್ತು. ಹಣವಿದ್ದರೂ ಹಸಿವು ನೀಗಿಸಲಾಗದ ಪರಿಸ್ಥಿತಿ. ಕಪ್ಪು ವರ್ಗಕ್ಕೆ ಸೇರಿದ ನಾನು ಅಂಗಡಿಗೆ ಹೋಗುವಂತಿರಲಿಲ್ಲ. ಒಮ್ಮೆ ಏನಾಯಿತೆಂದು ಈಗಲೂ ನೆನಪಿದೆ. ಐಸ್‌ಕ್ರೀಮ್‌ ತಿನ್ನಲು ಆಸೆಯಾಗಿ ಒಂದು ಅಂಗಡಿಗೆ ಕಾಲಿಟ್ಟೆ. ಆದರೆ ಅಲ್ಲಿಂದ ಅಟ್ಟಿಬಿಟ್ಟರು. ಆಗ ಬಿಳಿಯ ವರ್ಗಕ್ಕೆ ಸೇರಿದ ಒಬ್ಬಾಕೆ ಮರುಕಪಟ್ಟು ನನಗೊಂದು ಐಸ್‌ಕ್ರೀಮ್‌ ತಂದುಕೊಟ್ಟರು.

ನಾನು ಹೈಸ್ಕೂಲ್‌ನ ಮೆಟ್ಟಿಲೇರಿದಾಗ ನಾವಿದ್ದ ದಕ್ಷಿಣ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಸಮಾನತಾ ಹಕ್ಕುಗಳಿಗಾಗಿ ಚಳುವಳಿ ಶುರುವಾಯಿತು. ಆ ಹೋರಾಟಕ್ಕೆ ಪೂರ್ತಿ ಬೆಂಬಲ ಕೊಡುವಂತೆ ವಿದ್ಯಾರ್ಥಿಗಳನ್ನು NAACP (ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ದಿ ಅಡ್ವಾನ್ಸ್‌ಮಂಟ್‌ ಆಫ್‌ ಕಲರ್ಡ್‌ ಪೀಪಲ್‌) ಮತ್ತಿತರ ಸಂಸ್ಥೆಗಳು ಪ್ರೋತ್ಸಾಹಿಸಿದವು. ಆ ಸಂಸ್ಥೆಯಲ್ಲಿ ಸದಸ್ಯತ್ವ ಪಡೆಯುವಂತೆ ನನಗೂ ಹೇಳಲಾಯಿತು. ನನ್ನ ಶಾಲೆಯನ್ನು ಸೇರಿಸಿ ಕಪ್ಪು ವರ್ಣದವರ ಅನೇಕಾನೇಕ ಶಾಲೆಗಳು 100ಕ್ಕೆ 100 ವಿದ್ಯಾರ್ಥಿಗಳ ಸದಸ್ಯತ್ವ ಹೊಂದುವ ಗುರಿಯನ್ನಿಟ್ಟಿದ್ದವು. ಸ್ವಜನಪ್ರೇಮ ತೋರಿಸುವಂತೆ ನನ್ನ ಮೇಲೆ ಒತ್ತಡ ಹೇರಲಾಯಿತು. ನಾನು ನಿರಾಕರಿಸಿದೆ. ದೇವರು ಪಕ್ಷಪಾತಿಯಲ್ಲ, ಒಂದು ಬಣ್ಣದ ಜನರನ್ನು ಇನ್ನೊಂದು ಬಣ್ಣದ ಜನರಿಗಿಂತ ಮೇಲಾಗಿ ನೋಡುವುದಿಲ್ಲ, ಹಾಗಾಗಿ ದೇವರೇ ಈ ಅನ್ಯಾಯಗಳನ್ನು ಸರಿಪಡಿಸುವನೆಂದು ವಿವರಿಸಿದೆ.—ಯೋಹಾ. 17:14; ಅ. ಕಾ. 10:34, 35.

ಹೈಸ್ಕೂಲ್‌ ಮುಗಿಸಿದ ಕೂಡಲೆ ನ್ಯೂ ಯಾರ್ಕ್‌ ನಗರಕ್ಕೆ ವಾಸ ಬದಲಾಯಿಸಲು ನಿಶ್ಚಯಿಸಿ ಹೊರಟೆ. ಮಾರ್ಗ ಮಧ್ಯೆ ಈ ಮೊದಲು ಅಧಿವೇಶನದಲ್ಲಿ ಪರಿಚಯವಾಗಿದ್ದ ಸ್ನೇಹಿತರನ್ನು ನೋಡಲೆಂದು ಪೆನ್ಸಿಲ್ವೇನಿಯದ ಫಿಲಡೆಲ್ಫಿಯದಲ್ಲಿ ಉಳುಕೊಂಡೆ. ಕರಿಬಿಳಿ ಎಂಬ ವರ್ಣಭೇದವಿಲ್ಲದೆ ಎಲ್ಲರೂ ಐಕ್ಯದಿಂದ ಬೆರೆತಿದ್ದ ಸಭೆಯನ್ನು ನಾನು ಹಾಜರಾದದ್ದು ಇದೇ ಮೊದಲ ಬಾರಿ. ಆ ಸಭೆಗೆ ಸಂಚರಣ ಮೇಲ್ವಿಚಾರಕರ ಭೇಟಿಯಿತ್ತು. ಒಂದು ಕೂಟದಲ್ಲಿ ಅವರು ನನ್ನನ್ನು ಪಕ್ಕಕ್ಕೆ ಕರೆದು ಮುಂದಿನ ಕೂಟದಲ್ಲಿ ಒಂದು ನೇಮಕ ನಿರ್ವಹಿಸುವಂತೆ ಹೇಳಿದರು. ನಾನು ಅಲ್ಲೇ ಉಳುಕೊಳ್ಳುವ ನಿರ್ಣಯ ತೆಗೆದುಕೊಳ್ಳಲು ಇದು ಪ್ರೋತ್ಸಾಹ ನೀಡಿತು.

ಫಿಲಡೆಲ್ಫಿಯದ ನನ್ನ ಸ್ನೇಹಿತರ ಬಳಗದಲ್ಲಿ ಒಬ್ಬಾಕೆ ಯುವ ಸಹೋದರಿ ಕೂಡ ಇದ್ದಳು. ಹೆಸರು ಜೆರಲ್ಡೀನ್‌ ವೈಟ್‌. ನಾನವಳನ್ನು ‘ಜೆರಿ’ ಎಂದು ಕರೆಯುತ್ತಿದ್ದೆ. ಬೈಬಲ್‌ ವಚನಗಳು ಅವಳ ನಾಲಿಗೆಯ ತುದಿಯಲ್ಲೇ ಇದ್ದವು. ಕ್ಷೇತ್ರ ಸೇವೆಯಲ್ಲಿ ಮನೆಯವರಿಗೆ ತಕ್ಕಂತೆ ಮಾತನ್ನು ಪೋಣಿಸಿ ಹೊಂದಿಸಿಕೊಳ್ಳುವುದರಲ್ಲಿ ಚತುರೆ. ವಿಶೇಷ ಏನೆಂದರೆ ನನ್ನಂತೆ ಅವಳೂ ಪಯನೀಯರ್‌ ಸೇವೆ ಮಾಡುವ ಗುರಿ ಇಟ್ಟಿದ್ದಳು. ನಾವು 1949, ಏಪ್ರಿಲ್‌ 23ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟೆವು.

ಗಿಲ್ಯಡ್‌ಗೆ ಆಮಂತ್ರಣ

ಆರಂಭದಿಂದಲೂ ನಮ್ಮ ಗುರಿ ಗಿಲ್ಯಡ್‌ ಶಾಲೆಗೆ ಹಾಜರಾಗಿ ವಿದೇಶದಲ್ಲಿ ಸೇವೆ ಮಾಡುವುದಾಗಿತ್ತು. ಗಿಲ್ಯಡ್‌ಗೆ ಅರ್ಹರಾಗಲಿಕ್ಕಾಗಿ ನಮ್ಮ ಸನ್ನಿವೇಶಗಳನ್ನು ಹೊಂದಿಸಿಕೊಳ್ಳಲು ಸಿದ್ಧರಿದ್ದೆವು. ಸ್ವಲ್ಪ ಸಮಯದಲ್ಲೆ ನಮಗೆ ನ್ಯೂ ಜೆರ್ಸಿಯ ಲಾನ್‌ಸೈಡೆ ಎಂಬಲ್ಲಿಗೆ ಸ್ಥಳಾಂತರಿಸುವಂತೆ ಹೇಳಲಾಯಿತು. ಅನಂತರ ಪೆನ್ಸಿಲ್ವೇನಿಯದ ಚೆಸ್ಟರ್‌ ನಗರಕ್ಕೆ, ಬಳಿಕ ನ್ಯೂ ಜೆರ್ಸಿಯ ಅಟ್ಲಾಂಟಿಕ್‌ ನಗರಕ್ಕೆ ಕಳುಹಿಸಲಾಯಿತು. ಅಟ್ಲಾಂಟಿಕ್‌ ನಗರಕ್ಕೆ ಬಂದಾಗ ಮದುವೆಯಾಗಿ ಎರಡು ವರ್ಷವಾಗಿತ್ತು ಮತ್ತು ನಾವು ಗಿಲ್ಯಡ್‌ಗೆ ಅರ್ಜಿ ಸಲ್ಲಿಸಲು ಅರ್ಹರಾದೆವು. ಆಮಂತ್ರಣ ಸಿಕ್ಕಿತಾದರೂ ಆ ಕೂಡಲೆ ಹೋಗಲು ನಮಗೆ ಆಗಲಿಲ್ಲ.

ಏಕೆಂದರೆ 1950ನೇ ದಶಕದ ಆರಂಭದಲ್ಲಿ ಯುವಕರು ಮಿಲಿಟರಿಗೆ ಸೇರಬೇಕೆನ್ನುವುದು ಕಡ್ಡಾಯವಾಗಿತ್ತು. ಕೊರಿಯಾದಲ್ಲಿ ನಡೆಯುತ್ತಿದ್ದ ಯುದ್ಧ ಅದಕ್ಕೆ ಕಾರಣವಾಗಿತ್ತು. ಯೆಹೋವನ ಸಾಕ್ಷಿಗಳ ತಟಸ್ಥ ನಿಲುವಿನ ಕುರಿತು ಅಧಿಕಾರಿಗಳು ತಪ್ಪಭಿಪ್ರಾಯ ಹೊಂದಿದ್ದರು. FBI ಗುಪ್ತಚಾರರು ನನ್ನ ಚಲನವಲನಗಳ ಮೇಲೆ ಕಣ್ಣಿಟ್ಟು ತನಿಖೆ ಮಾಡಿದ್ದರು. ಅವರ ವರದಿ ನನ್ನ ಪರವಾಗಿತ್ತು. ನನ್ನ ತಟಸ್ಥ ನಿಲುವಿಗೆ ನಿಜ ಕಾರಣವೇನು ಎಂಬುದು ಸಾಕ್ಷ್ಯಾಧಾರಗಳಿಂದ ರುಜುವಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು. ಹಾಗಾಗಿ 1952, ಜನವರಿ 11ರಂದು ಅಪೀಲ್‌ ಬೋರ್ಡ್‌ ನನ್ನನ್ನು ಸೌವಾರ್ತಿಕ ಎಂದು ಗುರುತಿಸಿ ಮಿಲಿಟರಿ ಸೇವೆಯಿಂದ ವಿನಾಯಿತಿ ನೀಡಿತು.

ಅದೇ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ನಮ್ಮಿಬ್ಬರ ಬಹು ದಿನದ ಆಸೆ ಈಡೇರಿತು. 20ನೇ ಗಿಲ್ಯಡ್‌ ಶಾಲೆಗೆ ಆಮಂತ್ರಣ ಸಿಕ್ಕಿತು. ಸೆಪ್ಟೆಂಬರ್‌ನಲ್ಲಿ ಶಾಲೆ ಆರಂಭಗೊಂಡಿತು. ತರಬೇತಿ ಪಡೆದುಕೊಳ್ಳುತ್ತಿದ್ದ ಸಮಯದುದ್ದಕ್ಕೂ ವಿದೇಶದಲ್ಲಿ ಸೇವೆ ಮಾಡುವ ಬಗ್ಗೆ ನೆನಸುತ್ತಾ ಪುಳಕಗೊಳ್ಳುತ್ತಿದ್ದೆವು. ಅಕ್ಕ ಡೋರಿಸ್‌ ಗಿಲ್ಯಡ್‌ನ 13ನೇ ತರಗತಿಯಲ್ಲಿ ಪದವೀಧರಳಾಗಿ ಬ್ರಸೀಲ್‌ನಲ್ಲಿ ಸೇವೆ ಮಾಡುತ್ತಿದ್ದಳು. ನಮಗೂ ಅದೇ ರೀತಿ ವಿದೇಶದಲ್ಲಿ ಸೇವೆ ಮಾಡುವ ಕನಸಿತ್ತು. ಆದರೆ ನಮಗೆ ಸಂಚರಣ ಕೆಲಸ ಮಾಡುವ ನೇಮಕ ಸಿಕ್ಕಿತು. ಅದೂ ನಮ್ಮ ದೇಶದ ದಕ್ಷಿಣ ಅಲಬಾಮದಲ್ಲಿ! ಸ್ವಲ್ಪ ನಿರಾಶೆ ಆಯಿತಾದರೂ ಹೊಂದಿಸಿಕೊಂಡೆವು.

ನಾವು ಮೊದಲು ಭೇಟಿ ಇತ್ತದ್ದು ಹಂಟ್ಸ್‌ವಿಲ್‌ ಸಭೆ. ಸಹೋದರಿಯೊಬ್ಬರ ಮನೆಯಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿತ್ತು. ನಾವಲ್ಲಿಗೆ ಹೋಗಿ ಸಾಮಾನುಗಳನ್ನು ಒಳಗೆ ತಕ್ಕೊಂಡು ಹೋಗುತ್ತಿದ್ದಾಗ ಆ ಸಹೋದರಿ ಫೋನ್‌ನಲ್ಲಿ ನಮ್ಮ ಕುರಿತು ಮಾತಾಡುತ್ತಿದ್ದದ್ದು ಕೇಳಿಸಿತು. “ಮಕ್ಕಳು ಈಗ ತಾನೇ ಬಂದು ತಲಪಿದರು” ಎಂದು ಉಲಿಯುತ್ತಿದ್ದರು. ಹೌದು ನಮಗಿನ್ನೂ 24 ವರ್ಷವಾಗಿತ್ತಷ್ಟೆ. ನೋಡಲು ತುಂಬಾ ಚಿಕ್ಕ ವಯಸ್ಸಿನವರಂತೆ ಕಾಣುತ್ತಿದ್ದೆವು. ಆ ಸರ್ಕಿಟ್‌ನಲ್ಲಿ ನಮಗೆ “ಮಕ್ಕಳು” ಎಂಬ ಅಡ್ಡಹೆಸರು ಅಂಟಿಕೊಂಡುಬಿಟ್ಟಿತು.

ದಕ್ಷಿಣ ಯುನೈಟೆಡ್‌ ಸ್ಟೇಟ್ಸ್‌ನ ಹೆಚ್ಚಿನ ನಿವಾಸಿಗಳಿಗೆ ಬೈಬಲ್‌ ಮೇಲೆ ಆಳವಾದ ಗೌರವವಿತ್ತು. ಆ ಸ್ಥಳ ‘ಬೈಬಲ್‌ ಬೆಲ್ಟ್‌’ (ಬೈಬಲ್‌ ಪ್ರಾಂತ) ಎಂದೇ ಹೆಸರುವಾಸಿಯಾಗಿತ್ತು. ಹಾಗಾಗಿ ನಮ್ಮ ನಿರೂಪಣೆ ಹೆಚ್ಚಾಗಿ ಈ ಮೂರು ಅಂಶಗಳ ಮೇಲೆ ಆಧರಿಸಿತ್ತು:

(1) ಲೋಕ ಪರಿಸ್ಥಿತಿಗಳ ಬಗ್ಗೆ ಚುಟುಕಾದ ವಿವರಣೆ

(2) ಪರಿಹಾರ ಬೈಬಲ್‌ನಲ್ಲಿದೆ ಎಂದು ಸೂಚಿಸುವುದು

(3) ನಾವೇನು ಮಾಡಬೇಕೆಂದು ಬೈಬಲ್‌ ತಿಳಿಸುವುದನ್ನು ವಿವರಿಸುವುದು

ಬಳಿಕ ಬೈಬಲ್‌ ಅಧ್ಯಯನಕ್ಕೆ ಸೂಕ್ತ ಪ್ರಕಾಶನ ಕೊಡುತ್ತಿದ್ದೆವು. ಈ ನಿರೂಪಣೆ ತುಂಬ ಪರಿಣಾಮಕಾರಿಯಾಗಿತ್ತು. ಎಷ್ಟೆಂದರೆ ಅನೇಕ ಬೈಬಲ್‌ ಅಧ್ಯಯನ ಸಿಕ್ಕಿತಲ್ಲದೆ 1953ರಲ್ಲಿ ನ್ಯೂ ಯಾರ್ಕ್‌ನಲ್ಲಿ ನಡೆದ ನ್ಯೂ ವರ್ಲ್ಡ್‌ ಸೊಸೈಟಿ ಅಸೆಂಬ್ಲಿಯಲ್ಲಿ ಆ ಮೂರು ಅಂಶಗಳನ್ನು ಪ್ರತ್ಯಕ್ಷಾಭಿನಯಿಸಿ ತೋರಿಸುವ ಅವಕಾಶ ಕೂಡ ಸಿಕ್ಕಿತು.

ಕೆಲವೇ ತಿಂಗಳಲ್ಲಿ ಅಂದರೆ 1953ರ ಬೇಸಿಗೆಯಲ್ಲಿ ನನ್ನನ್ನು ಕಪ್ಪು ವರ್ಣದ ಸಹೋದರರ ಸರ್ಕಿಟ್‌ಗಳಿಗೆ ಡಿಸ್ಟ್ರಿಕ್ಟ್‌ ಮೇಲ್ವಿಚಾರಕನಾಗಿ ನೇಮಿಸಲಾಯಿತು. ವರ್ಜಿನಿಯದಿಂದ ಹಿಡಿದು ಫ್ಲಾರಿಡ ವರೆಗೆ ಮತ್ತು ಅಲಬಾಮದಿಂದ ಹಿಡಿದು ಟೆನೆಸೀ ವರೆಗೆ ಎಲ್ಲ ಕ್ಷೇತ್ರವನ್ನು ಆವರಿಸಬೇಕಿತ್ತು. ಇದು ಅಷ್ಟೇನು ಸುಲಭವಾಗಿರಲಿಲ್ಲ. ಸನ್ನಿವೇಶ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕಿತ್ತು. ಉದಾಹರಣೆಗೆ ನಾವು ಉಳುಕೊಳ್ಳುತ್ತಿದ್ದ ಹೆಚ್ಚಿನ ಮನೆಗಳಲ್ಲಿ ಕೊಳಾಯಿ ವ್ಯವಸ್ಥೆ ಇರಲಿಲ್ಲ ಮತ್ತು ಇಡೀ ಮನೆಯಲ್ಲಿ ಬೆಚ್ಚಗಿನ ಸ್ಥಳವೆಂದರೆ ಅಡುಗೆಮನೆ ಮಾತ್ರ. ಆ ಅಲ್ಪಸ್ವಲ್ಪ ಬೆಚ್ಚಗಿನ ವಾತಾವರಣದಲ್ಲೇ ಸ್ನಾನ ಮುಗಿಸುತ್ತಿದ್ದೆವು.

ವರ್ಣಭೇದದಿಂದ ಎದುರಾದ ಸವಾಲುಗಳು

ದಕ್ಷಿಣದಲ್ಲಿ ಸೇವೆಸಲ್ಲಿಸುವಾಗ ಮುಂಜಾಗ್ರತೆ, ಜಾಣ್ಮೆ ತುಂಬ ಅಗತ್ಯವಾಗಿತ್ತು. ಕರಿಯರು ದೋಬಿಖಾನೆ (ಹಣಪಾವತಿಸಿ ಬಟ್ಟೆ ಒಗೆಯುವ ಸೌಲಭ್ಯ) ಬಳಸುವಂತಿರಲಿಲ್ಲ. ಹಾಗಾಗಿ ಜೆರಿ, “ಇದು ಮಿಸಸ್‌ ಥಾಂಪ್ಸನ್‌ ಅವರ ಬಟ್ಟೆ” ಎಂದು ಹೇಳಿ ಯುಕ್ತಿಯಿಂದ ಕೆಲಸ ಮುಗಿಸಿ ಬರುತ್ತಿದ್ದಳು. ತನ್ನ ಹೆಸರನ್ನೇ ಬಳಸುತ್ತಿದ್ದಾಳೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ, ಥಾಂಪ್ಸನ್‌ರ ಮನೆಕೆಲಸದವಳಿರಬೇಕು ಎಂದು ಭಾವಿಸುತ್ತಿದ್ದರು. ಎಲ್ಲ ಡಿಸ್ಟ್ರಿಕ್ಟ್‌ ಮೇಲ್ವಿಚಾರಕರು ದ ನ್ಯೂ ವರ್ಲ್ಡ್‌ ಸೊಸೈಟಿ ಇನ್‌ ಆ್ಯಕ್ಷನ್‌ ಚಲನಚಿತ್ರವನ್ನು ತೋರಿಸಬೇಕಿದ್ದಾಗ ನಾನು ಸಹ ಅಂಥದ್ದೆ ತಂತ್ರ ಬಳಸಿದೆ. “ಮಿಸ್ಟರ್‌ ಥಾಂಪ್ಸನ್‌” ಅವರ ಹೆಸರಿನಲ್ಲಿ ಬಾಡಿಗೆಗೆ ದೊಡ್ಡ ಸ್ಕ್ರೀನ್‌ ಬುಕ್‌ ಮಾಡಿ ಎಂದು ಅಂಗಡಿಯವರಿಗೆ ಫೋನ್‌ನಲ್ಲಿ ಹೇಳುತ್ತಿದ್ದೆ. ಬಳಿಕ ನಾನೇ ಹೋಗಿ ಅಲ್ಲಿಂದ ತರುತ್ತಿದ್ದೆ. ನಾವು ಜನರೊಂದಿಗೆ ಯಾವಾಗಲೂ ಸೌಜನ್ಯದಿಂದ ನಡಕೊಳ್ಳುತ್ತಿದ್ದೆವು. ಹಾಗಾಗಿ ತೊಂದರೆಯಿಲ್ಲದೆ ಸೇವೆ ಮುಂದುವರಿಸಲು ಸಾಧ್ಯವಾಗುತ್ತಿತ್ತು.

ಇನ್ನೊಂದು ಸಮಸ್ಯೆ ಕೂಡ ಇತ್ತು. ದಕ್ಷಿಣದವರಿಗೆ ಉತ್ತರದವರನ್ನು ಕಂಡರೆ ಆಗುತ್ತಿರಲಿಲ್ಲ. ಒಮ್ಮೆ ಸರ್ಕಿಟ್‌ ಸಮ್ಮೇಳನಕ್ಕೆ ಸ್ವಲ್ಪ ಮುಂಚೆ ಸ್ಥಳೀಯ ವಾರ್ತಾಪತ್ರಿಕೆ ಸುದ್ದಿಯೊಂದನ್ನು ಹೊರಹಾಕಿತು. ಆ ಸಮ್ಮೇಳನದಲ್ಲಿ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರಾಕ್ಟ್‌ ಸೊಸೈಟಿ ಆಫ್‌ ನ್ಯೂ ಯಾರ್ಕ್‌ನಿಂದ ಬಂದಿರುವ ಜೇಮ್ಸ್‌ ಎ. ಥಾಂಪ್ಸನ್‌ ಮಾತಾಡಲಿದ್ದಾರೆಂದು ವರದಿಮಾಡಿತು. ಕೆಲವರು ಅದನ್ನು ಓದಿ ನಾನು ನ್ಯೂ ಯಾರ್ಕ್‌ನವನೆಂದು ಭಾವಿಸಿದರು. ಅದು ಅಲ್ಲಿಗೆ ನಿಲ್ಲದೆ ಸಮ್ಮೇಳನಕ್ಕಾಗಿ ನಾವು ಕಾಯ್ದಿರಿಸಿದ್ದ ಶಾಲಾ ಸಭಾಂಗಣದ ಕರಾರನ್ನು ರದ್ದುಮಾಡಿಸಿದರು. ಆಗ ನಾನು ಆ ಶಾಲಾ ಕಛೇರಿಗೆ ಹೋಗಿ ನಾನು ಓದಿದ್ದು ದಕ್ಷಿಣದ ಚಾಟನೂಗ ನಗರದಲ್ಲೆಂದು ವಿವರಣೆ ನೀಡಿದೆ. ಸಮ್ಮೇಳನ ನಡೆಸಲು ಅನುಮತಿ ಸಿಕ್ಕಿತು.

1950ನೇ ದಶಕದ ಮಧ್ಯ ಭಾಗದಲ್ಲಿ ಕೋಮುಗಲಭೆಯ ಕಾವೇರಿತು. ಕೆಲವೊಮ್ಮೆ ಹಿಂಸಾಕೃತ್ಯಗಳೂ ನಡೆಯುತ್ತಿದ್ದವು. ಈ ಕಾರಣದಿಂದ 1954ರಲ್ಲಿ ನಡೆದ ಅನೇಕ ಜಿಲ್ಲಾ ಸಮ್ಮೇಳನಗಳಲ್ಲಿ ಕಪ್ಪು ವರ್ಣದ ಸಹೋದರರು ಭಾಷಣ ಕೊಡಲು ಸಾಧ್ಯವಿರಲಿಲ್ಲ. ಹೀಗಾಗಿ ಕಪ್ಪು ವರ್ಣದ ಕೆಲವು ಸಹೋದರರಿಗೆ ಅಸಮಾಧಾನವಾಯಿತು. ತಾಳ್ಮೆಗೆಡದೆ ಇರಲು ನಾವವರಿಗೆ ಸಲಹೆಯಿತ್ತೆವು. ಮುಂದಿನ ಸಮ್ಮೇಳನದಲ್ಲಿ ಭಾಷಣ ನೀಡುವ ನೇಮಕ ನನಗೆ ಸಿಕ್ಕಿತು. ಬಳಿಕ ಇತರ ಅನೇಕ ಕಪ್ಪು ಸಹೋದರರಿಗೂ ಕಾರ್ಯಕ್ರಮಗಳಲ್ಲಿ ಪಾಲು ಸಿಕ್ಕಿತು.

ಕ್ರಮೇಣ ಕೋಮು ಗಲಭೆ ತಣ್ಣಗಾಯಿತು, ಹಿಂಸಾಕೃತ್ಯಗಳು ಕಡಿಮೆ ಆದವು. ಸಭೆಗಳಲ್ಲಿ ಕಪ್ಪು ಮತ್ತು ಬಿಳಿಯ ಸಹೋದರರು ಒಟ್ಟಾಗಿ ಕೂಡಿಬರಲು ಏರ್ಪಾಡು ಮಾಡಲಾಯಿತು. ಪ್ರಚಾರಕರನ್ನು, ಮುಂದಾಳತ್ವ ವಹಿಸುವ ಸಹೋದರರನ್ನು ಬೇರೆ ಬೇರೆ ಸಭೆಗಳಿಗೆ ನೇಮಿಸಲಾಯಿತು. ಟೆರಿಟೊರಿಗಳಲ್ಲಿ ತಕ್ಕ ಬದಲಾವಣೆ ಮಾಡಲಾಯಿತು. ಈ ಹೊಸ ಏರ್ಪಾಡು ಕೆಲವು ಕಪ್ಪು ಮತ್ತು ಬಿಳಿಯ ಸಹೋದರರಿಗೆ ಇಷ್ಟವಾಗಲಿಲ್ಲ. ಆದರೆ ಹೆಚ್ಚಿನವರು ದೇವರನ್ನು ಅನುಕರಿಸುತ್ತಾ ಭೇದಭಾವ ತೋರಿಸಲಿಲ್ಲ. ಬಣ್ಣ ಭೇದವಿಲ್ಲದೆ ಆಪ್ತಸ್ನೇಹಿತರಾಗಿದ್ದರು. 1930ರ ಮತ್ತು 1940ರ ದಶಕದಲ್ಲಿ ನಾನು ಚಿಕ್ಕವನಿದ್ದಾಗ ನಮ್ಮ ಕುಟುಂಬ ಕೂಡ ಅದೇ ರೀತಿ ಆಪ್ತ ಕ್ರೈಸ್ತ ಸಾಹಚರ್ಯದಲ್ಲಿ ಆನಂದಿಸಿತ್ತು.

ಹೊಸ ನೇಮಕ

1969ರ ಜನವರಿಯಲ್ಲಿ ನಮಗೆ ದಕ್ಷಿಣ ಅಮೆರಿಕದ ಗಯಾನಕ್ಕೆ ಹೋಗುವ ಹೊಸ ನೇಮಕ ಸಿಕ್ಕಿತು. ಖುಷಿಯಿಂದ ಸ್ವೀಕರಿಸಿದೆವು. ಮೊದಲು ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ಗೆ ಹೋದೆವು. ಗಯಾನದಲ್ಲಿ ಸಾರುವ ಕೆಲಸದ ಮೇಲ್ವಿಚಾರಣೆ ಮಾಡಲಿಕ್ಕಾಗಿ ಅಲ್ಲಿ ನಾನು ತರಬೇತಿ ಪಡೆದುಕೊಂಡೆ. 1969ರ ಜುಲೈನಲ್ಲಿ ಗಯಾನಕ್ಕೆ ಬಂದಿಳಿದೆವು. 16 ವರ್ಷ ಸಂಚರಣ ಕೆಲಸ ಮಾಡಿದ್ದ ನಮಗೆ ಈಗ ಒಂದೆಡೆ ನೆಲೆಸುವುದು ಸವಾಲಾಗಿತ್ತು. ಅನೇಕ ಹೊಂದಾಣಿಕೆಗಳನ್ನು ಮಾಡಬೇಕಾಯಿತು. ನಾನು ಬ್ರಾಂಚ್‌ ಆಫೀಸಿನಲ್ಲಿ ಕೆಲಸಮಾಡುತ್ತಿದ್ದೆ. ಜೆರಿ ಹೆಚ್ಚಿನ ದಿವಸಗಳನ್ನು ಮಿಷನೆರಿಯಾಗಿ ಶುಶ್ರೂಷೆಯಲ್ಲಿ ಕಳೆಯುತ್ತಿದ್ದಳು.

ಹುಲ್ಲುಹಾಸನ್ನು ಕತ್ತರಿಸುವ ಹಾಗೂ 28 ಸಭೆಗಳಿಗೆ ಬೇಕಾದ ಸಾಹಿತ್ಯ ರವಾನೆ ಮಾಡುವ ಕೆಲಸದಿಂದ ಹಿಡಿದು ಬ್ರೂಕ್ಲಿನ್‌ನಲ್ಲಿರುವ ಮುಖ್ಯ ಕಾರ್ಯಾಲಯದೊಂದಿಗಿನ ಸಂಪರ್ಕದ ವರೆಗಿನ ಎಲ್ಲ ಕೆಲಸಗಳನ್ನು ನಾನು ಮಾಡುತ್ತಿದ್ದೆ. ದಿನಾಲೂ 14 ರಿಂದ 15 ತಾಸುಗಳ ವರೆಗೆ ಕೆಲಸ ಮಾಡುತ್ತಿದ್ದೆ. ನಮ್ಮಿಬ್ಬರದು ತ್ರಾಸದಾಯಕ ಕೆಲಸವಾಗಿತ್ತಾದರೂ ತುಂಬಾನೇ ಹರ್ಷಿಸುತ್ತಿದ್ದೆವು. ಗಯಾನಕ್ಕೆ ನಾವು ಬಂದಾಗ 950 ಪ್ರಚಾರಕರಿದ್ದರು. ಇಂದು 2,500ಕ್ಕಿಂತ ಅಧಿಕವಾಗಿದ್ದಾರೆ.

ಗಯಾನದ ಹವಾಮಾನ ಆಹ್ಲಾದಕರ. ತರಹೇವಾರಿ ತರಕಾರಿ, ರುಚಿರುಚಿ ಹಣ್ಣು ಇವೆಲ್ಲ ಆನಂದ ತಂದಿತು. ಆದರೆ ನಮ್ಮ ಹರ್ಷವನ್ನು ಇಮ್ಮಡಿಗೊಳಿಸಿದ್ದು ಬೈಬಲ್‌ ಸತ್ಯಕ್ಕಾಗಿ ಹಸಿದಿದ್ದ ದೀನ ಜನರು ದೇವರ ರಾಜ್ಯದ ಕುರಿತು ಕಲಿಯುತ್ತಿದ್ದದ್ದೇ. ಜೆರಿ ವಾರಕ್ಕೆ ಸುಮಾರು 20 ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದಳು. ನಾವು ಅಧ್ಯಯನ ಮಾಡಿದ ಹೆಚ್ಚಿನವರು ಪ್ರಗತಿ ಮಾಡಿ ದೀಕ್ಷಾಸ್ನಾನ ಪಡೆದುಕೊಂಡರು. ಅವರಲ್ಲಿ ಕೆಲವರು ಪಯನೀಯರರಾದರು, ಸಭಾ ಹಿರಿಯರಾದರು, ನಮ್ಮಂತೆ ಗಿಲ್ಯಡ್‌ಗೆ ಹೋಗಿ ಮಿಷನೆರಿಗಳಾದರು.

ಇನ್ನಿತರ ಸವಾಲುಗಳು

1983ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿದ್ದ ನನ್ನ ಅಪ್ಪಅಮ್ಮಗೆ ನೆರವು ಬೇಕಾಯಿತು. ಅಕ್ಕ ಡೋರಿಸ್‌, ಜೆರಿ ಮತ್ತು ನಾನು ಕುಟುಂಬವಾಗಿ ಕೂಡಿ ಈ ಬಗ್ಗೆ ಮಾತಾಡಿದೆವು. ಬ್ರಸೀಲ್‌ನಲ್ಲಿ 35 ವರ್ಷ ಮಿಷನೆರಿಯಾಗಿ ಸೇವೆ ಮಾಡಿದ್ದ ಅಕ್ಕ ತಾನೇ ಅಪ್ಪಅಮ್ಮನನ್ನು ನೋಡಿಕೊಳ್ಳುವುದಾಗಿ ಹೇಳಿದಳು. ಅಪ್ಪಅಮ್ಮನ ಆರೈಕೆಗಾಗಿ ಜೆರಿ ಮತ್ತು ನಾನು ಇಬ್ಬರೂ ಮಿಷನೆರಿ ಸೇವೆ ನಿಲ್ಲಿಸಬೇಕಾಗಿಲ್ಲ, ತಾನೊಬ್ಬಳೇ ನಿಭಾಯಿಸುತ್ತೇನೆ ಎನ್ನುವುದು ಅವಳ ಅಭಿಪ್ರಾಯವಾಗಿತ್ತು. ಅಪ್ಪಅಮ್ಮ ತೀರಿಹೋದ ಬಳಿಕ ಅಕ್ಕ ಚಾಟನೂಗ ನಗರದಲ್ಲಿ ವಿಶೇಷ ಪಯನೀಯರಳಾಗಿ ಸೇವೆಮಾಡುತ್ತಿದ್ದಾಳೆ.

1995ರಲ್ಲಿ ನನಗೆ ಶುಕ್ಲಗ್ರಂಥಿಯ (ಪ್ರಾಸ್ಟೇಟ್‌) ಕ್ಯಾನ್ಸರ್‌ ಇದೆಯೆಂದು ತಿಳಿದುಬಂತು. ಹಾಗಾಗಿ ಯುನೈಟೆಡ್‌ ಸ್ಟೇಟ್ಸ್‌ಗೆ ತೆರಳಬೇಕಾಯಿತು. ಉತ್ತರ ಕ್ಯಾರೊಲಿನದ ಗೋಲ್ಡ್ಸ್‌ಬೊರೊ ಎಂಬಲ್ಲಿ ನೆಲೆಸಲು ನಿರ್ಣಯಿಸಿದೆವು. ಏಕೆಂದರೆ ಇದು ನನ್ನ ಕುಟುಂಬ ಇರುವ ಟೆನೆಸೀ ರಾಜ್ಯಕ್ಕೂ ಜೆರಿಯ ಕುಟುಂಬ ಇರುವ ಪೆನ್ಸಿಲ್ವೇನಿಯಕ್ಕೂ ಮಧ್ಯೆ ಇದೆ. ಈಗ ನನ್ನ ಕ್ಯಾನ್ಸರ್‌ ನಿಯಂತ್ರಣದಲ್ಲಿದೆ. ಆರೋಗ್ಯ ಅಷ್ಟು ಚೆನ್ನಾಗಿಲ್ಲದಿದ್ದರೂ ಗೋಲ್ಡ್ಸ್‌ಬೊರೊ ಸಭೆಯಲ್ಲಿ ವಿಶೇಷ ಪಯನೀಯರರಾಗಿ ಮುಂದುವರಿಯುವ ಅವಕಾಶ ನಮಗೆ ಸಿಕ್ಕಿದೆ.

65 ವರ್ಷಗಳ ಪೂರ್ಣ ಸಮಯದ ಸೇವೆಯ ನೆನಪಿನ ಪುಟಗಳನ್ನು ಹೊಕ್ಕಿನೋಡುವಾಗೆಲ್ಲಾ ನನ್ನ ಮನ ಯೆಹೋವ ದೇವರನ್ನು ನೆನದು ಕೃತಜ್ಞತೆಯಿಂದ ಉಬ್ಬುತ್ತದೆ. ಆತನ ಸೇವೆಗಾಗಿ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದಕ್ಕಾಗಿ ಆತನು ನಮ್ಮಿಬ್ಬರನ್ನು ಹೇರಳವಾಗಿ ಆಶೀರ್ವದಿಸಿದ್ದಾನೆ. “[ಯೆಹೋವನು] ನಂಬಿಗಸ್ತನಿಗೆ ನಂಬಿಗಸ್ತ” ಎಂಬ ದಾವೀದನ ಮಾತುಗಳನ್ನು ನಾವು ಅನುಭವಿಸಿ ಸವಿದಿದ್ದೇವೆ.—2 ಸಮು. 22:26, NIBV.

[ಪುಟ 3ರಲ್ಲಿರುವ ಚಿತ್ರ]

ನನಗೆ ಆದರ್ಶರಾಗಿದ್ದ ಅಪ್ಪ ಮತ್ತು ಸಹೋದರ ನಿಕಲಾಸ್‌

[ಪುಟ 4ರಲ್ಲಿರುವ ಚಿತ್ರ]

ಜೆರಿ ಮತ್ತು ನಾನು 1952ರಲ್ಲಿ ಗಿಲ್ಯಡ್‌ಗೆ ಹೋಗುವ ಮುನ್ನ

[ಪುಟ 5ರಲ್ಲಿರುವ ಚಿತ್ರ]

ಗಿಲ್ಯಡ್‌ ನಂತರ ಸಂಚರಣ ಕೆಲಸದಲ್ಲಿ

[ಪುಟ 6ರಲ್ಲಿರುವ ಚಿತ್ರ]

ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು, ಇಸವಿ 1966 (ಕಪ್ಪು-ಬಿಳಿ ಸಹೋದರರು ಜೊತೆಯಾಗಿ ಸೇರಿಬರುವಂತೆ ಅಧಿವೇಶನವನ್ನು ಏರ್ಪಡಿಸುವ ಸಮಯದಲ್ಲಿ ಕ್ಲಿಕ್ಕಿಸಿದ್ದು)

[ಪುಟ 7ರಲ್ಲಿರುವ ಚಿತ್ರ]

ಗಯಾನದಲ್ಲಿ ಮಿಷನೆರಿ ಸೇವೆಯ ಸವಿನೆನಪು