ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪೊಸ್ತಲರಂತೆ ಎಚ್ಚರವಾಗಿರಲು ಕಲಿಯಿರಿ

ಅಪೊಸ್ತಲರಂತೆ ಎಚ್ಚರವಾಗಿರಲು ಕಲಿಯಿರಿ

ಅಪೊಸ್ತಲರಂತೆ ಎಚ್ಚರವಾಗಿರಲು ಕಲಿಯಿರಿ

“ನನ್ನೊಂದಿಗೆ ಎಚ್ಚರವಾಗಿರಿ.”—ಮತ್ತಾ. 26:38.

ಏನನ್ನು ಕಲಿಯುವಿರಿ...

ಎಲ್ಲಿ ಸಾರಬೇಕೆಂಬ ಮಾರ್ಗದರ್ಶನೆ ಪಡೆಯಲು ಎಚ್ಚರವಾಗಿರುವ ಕುರಿತು

ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರುವ ಕುರಿತು

ಅಡೆತಡೆಗಳಿದ್ದರೂ ಕೂಲಕಂಷ ಸಾಕ್ಷಿನೀಡುವ ಕುರಿತು

1-3. ಯೇಸುವಿನ ಭೂಜೀವಿತದ ಕೊನೆಯ ರಾತ್ರಿಯಂದು ಅಪೊಸ್ತಲರು ಯಾವ ತಪ್ಪನ್ನು ಮಾಡಿದರು? ತಮ್ಮ ತಪ್ಪಿನಿಂದ ಪಾಠ ಕಲಿತರೆಂದು ಯಾವುದು ತೋರಿಸುತ್ತದೆ?

ಯೇಸುವಿನ ಭೂಜೀವಿತದ ಕೊನೆಯ ರಾತ್ರಿಯಂದು ನಡೆದ ಘಟನೆಯನ್ನು ಚಿತ್ರಿಸಿಕೊಳ್ಳಿ. ಯೇಸು ಯೆರೂಸಲೇಮಿನ ಪೂರ್ವಕ್ಕಿದ್ದ ಅಚ್ಚುಮೆಚ್ಚಿನ ಗೆತ್ಸೇಮನೆ ತೋಟಕ್ಕೆ ಬಂದಿದ್ದನು. ನಿಷ್ಠಾವಂತ ಅಪೊಸ್ತಲರು ಅವನೊಂದಿಗಿದ್ದರು. ಹಲವಾರು ಚಿಂತೆಗಳು ಹೃದಯದಲ್ಲಿ ಮಡುಗಟ್ಟಿದ್ದರಿಂದ ಪ್ರಾರ್ಥಿಸಲಿಕ್ಕಾಗಿ ಒಂದು ಏಕಾಂತ ಸ್ಥಳ ಯೇಸುವಿಗೆ ಬೇಕಿತ್ತು.—ಮತ್ತಾ. 26:36; ಯೋಹಾ. 18:1, 2.

2 ಯೇಸು ತನ್ನ ಮೂವರು ಅಪೊಸ್ತಲರಾದ ಪೇತ್ರ, ಯಾಕೋಬ, ಯೋಹಾನರೊಂದಿಗೆ ಆ ತೋಟದೊಳಗೆ ಹೋಗುತ್ತಾನೆ. “ಇಲ್ಲೇ ಇದ್ದು ನನ್ನೊಂದಿಗೆ ಎಚ್ಚರವಾಗಿರಿ” ಎಂದು ಹೇಳಿ ಒಬ್ಬನೇ ಪ್ರಾರ್ಥಿಸಲು ಸ್ವಲ್ಪ ಮುಂದೆ ಹೋಗುತ್ತಾನೆ. ಹಿಂದೆ ಬಂದಾಗ ಅವನ ಸ್ನೇಹಿತರು ಗಾಢ ನಿದ್ರೆಯಲ್ಲಿರುತ್ತಾರೆ. ಅವನು ಪುನಃ “ಎಚ್ಚರವಾಗಿರಿ” ಎಂದು ವಿನಂತಿಸಿಕೊಳ್ಳುತ್ತಾನೆ. ಆಗಲೂ ಅವರು ನಿದ್ರೆ ಮಾಡುತ್ತಾರೆ. ಮೂರನೇ ಬಾರಿಯೂ ಇದೇ ರೀತಿ ಆಗುತ್ತದೆ! ವಿಷಾದಕರವಾಗಿ ಅದೇ ರಾತ್ರಿ ಎಲ್ಲ ಅಪೊಸ್ತಲರು ಆಧ್ಯಾತ್ಮಿಕವಾಗಿ ಎಚ್ಚರವಾಗಿ ಉಳಿಯಲು ವಿಫಲರಾಗುತ್ತಾರೆ. ಯೇಸುವನ್ನು ಬಿಟ್ಟು ಓಡಿಹೋಗುತ್ತಾರೆ!—ಮತ್ತಾ. 26:38, 41, 56.

3 ಆ ರಾತ್ರಿ ಎಚ್ಚರವಾಗಿರಲು ತಪ್ಪಿದ್ದಕ್ಕಾಗಿ ಅಪೊಸ್ತಲರು ಆಮೇಲೆ ವಿಷಾದಿಸಿದರು. ಆ ನಂಬಿಗಸ್ತ ಅಪೊಸ್ತಲರು ತಮ್ಮ ತಪ್ಪಿನಿಂದ ಪಾಠ ಕಲಿತರು. ಅದು ನಮಗೆ ಹೇಗೆ ಗೊತ್ತು? ಆಧ್ಯಾತ್ಮಿಕವಾಗಿ ಸದಾ ಎಚ್ಚರವಾಗಿರುವ ವಿಷಯದಲ್ಲಿ ಅವರಿಟ್ಟ ಮಾದರಿಯನ್ನು ಅಪೊಸ್ತಲರ ಕಾರ್ಯಗಳು ಪುಸ್ತಕದಲ್ಲಿ ನಾವು ಕಾಣುತ್ತೇವೆ. ಅವರ ಉತ್ತಮ ಮಾದರಿ ಅಂದಿನ ಇತರ ಕ್ರೈಸ್ತರಿಗೂ ಸ್ಫೂರ್ತಿ ನೀಡಿದ್ದಿರಲೇಬೇಕು. ನಮ್ಮ ಕುರಿತು ನೋಡುವುದಾದರೆ ನಾವು ಹಿಂದೆಂದಿಗಿಂತಲೂ ಹೆಚ್ಚು ಎಚ್ಚರದಿಂದಿರುವ ಅಗತ್ಯವಿದೆ. (ಮತ್ತಾ. 24:42) ಹಾಗಾಗಿ, ಎಚ್ಚರವಾಗಿರುವುದರ ಕುರಿತು ಅಪೊಸ್ತಲರ ಕಾರ್ಯಗಳು ಪುಸ್ತಕದಿಂದ ಮೂರು ಪಾಠಗಳನ್ನು ನೋಡೋಣ.

ಎಲ್ಲಿ ಸಾರಬೇಕೆಂಬ ಮಾರ್ಗದರ್ಶನೆ ಪಡೆಯಲು ಎಚ್ಚರವಾಗಿದ್ದರು

4, 5. ಪೌಲ ಮತ್ತವನ ಸಂಗಡಿಗರನ್ನು ಪವಿತ್ರಾತ್ಮ ಹೇಗೆ ಮಾರ್ಗದರ್ಶಿಸಿತು?

4 ಮೊದಲನೇ ಪಾಠವೆಂದರೆ ಆ ಅಪೊಸ್ತಲರು ಎಲ್ಲಿ ಸಾರಬೇಕೆಂಬ ಮಾರ್ಗದರ್ಶನೆ ಪಡೆಯಲು ಎಚ್ಚರದಿಂದಿದ್ದರು. ಒಮ್ಮೆ ಪೌಲ ಹಾಗೂ ಅವನ ಸಂಗಡಿಗರು ಸಾರುವ ಪ್ರಯಾಣ ಕೈಗೊಂಡಾಗ ಯೇಸು ಪವಿತ್ರಾತ್ಮದ ಮೂಲಕ ಅವರನ್ನು ಮಾರ್ಗದರ್ಶಿಸಿದನು. (ಅ. ಕಾ. 2:33) ಆ ಪ್ರಯಾಣದ ಮಾರ್ಗವನ್ನು ನಾವೀಗ ಪರಿಶೀಲಿಸೋಣ.—ಅಪೊಸ್ತಲರ ಕಾರ್ಯಗಳು 16:6-10 ಓದಿ.

5 ಪೌಲ, ಸೀಲ ಹಾಗೂ ತಿಮೊಥೆಯ ದಕ್ಷಿಣ ಗಲಾತ್ಯದ ಲುಸ್ತ್ರ ಪಟ್ಟಣದಿಂದ ಪ್ರಯಾಣ ಕೈಗೊಂಡರು. ಸ್ವಲ್ಪ ದಿನಗಳ ನಂತರ ಅವರು ಪಶ್ಚಿಮಕ್ಕೆ ಅಂದರೆ ಏಷ್ಯಾ ಪ್ರಾಂತದ ಜನನಿಬಿಡ ಪ್ರದೇಶಕ್ಕೆ ಹೋಗುವ ರೋಮನ್‌ ಹೆದ್ದಾರಿಯನ್ನು ತಲುಪಿದರು. ಅವರು ಅದೇ ಹೆದ್ದಾರಿಯಲ್ಲಿ ಮುಂದೆ ಹೋಗಲು ಬಯಸಿದರು. ಏಕೆಂದರೆ ಸಾವಿರಾರು ಜನರಿರುವ ನಗರಗಳಿಗೆ ಹೋಗಿ ಕ್ರಿಸ್ತನ ಕುರಿತಾಗಿ ಸಾರಬಹುದೆಂದು ನೆನಸಿದರು. ಆದರೆ ಅವರಿಗೆ ತಡೆಯುಂಟಾಯಿತು. ಯಾವುದು ಅವರನ್ನು ತಡೆಯಿತು? ವಚನ 6 ತಿಳಿಸುತ್ತದೆ: “ಏಷ್ಯಾ ಪ್ರಾಂತದಲ್ಲಿ ವಾಕ್ಯವನ್ನು ಸಾರುವುದನ್ನು ಪವಿತ್ರಾತ್ಮವು ನಿಷೇಧಿಸಿದ್ದರಿಂದ ಅವರು ಫ್ರುಗ್ಯ ಮತ್ತು ಗಲಾತ್ಯ ಸೀಮೆಯ ಮಾರ್ಗವಾಗಿ ಪ್ರಯಾಣಿಸಿದರು.” ಆ ಮೂವರನ್ನು ಏಷ್ಯಾ ಪ್ರಾಂತದಲ್ಲಿ ಸಾರದಂತೆ ಪವಿತ್ರಾತ್ಮ ತಡೆಯಿತು. ಯಾವ ರೀತಿಯಲ್ಲಿ ತಡೆಯಿತೆಂದು ಬೈಬಲ್‌ ಹೇಳುವುದಿಲ್ಲ. ಆದರೆ ಪೌಲ ಮತ್ತವನ ಸಂಗಡಿಗರನ್ನು ಯೇಸು ಪವಿತ್ರಾತ್ಮ ಶಕ್ತಿಯ ಮೂಲಕ ಬೇರೊಂದು ಕಡೆಗೆ ನಿರ್ದೇಶಿಸಲು ಬಯಸಿದ್ದನೆಂಬುದು ಸ್ಪಷ್ಟ.

6, 7. (ಎ) ಪೌಲ ಮತ್ತವನ ಸಂಗಡಿಗರು ಬಿಥೂನ್ಯದ ಬಳಿ ಬಂದಾಗ ಏನಾಯಿತು? (ಬಿ) ಆ ಶಿಷ್ಯರು ಯಾವ ನಿರ್ಣಯ ಮಾಡಿದರು? ಫಲಿತಾಂಶವೇನು?

6 ಸಾರಬೇಕೆಂಬ ಹುಮ್ಮಸ್ಸಿದ್ದ ಪೌಲನೂ ಅವನ ಸಂಗಡಿಗರೂ ಮುಂದೆ ಎಲ್ಲಿಗೆ ಪ್ರಯಾಣಿಸಿದರು? ವಚನ 7 ವಿವರಿಸುತ್ತದೆ: “ಅವರು ಮೂಸ್ಯದ ಹತ್ತಿರ ಬಂದಾಗ ಬಿಥೂನ್ಯಕ್ಕೆ ಹೋಗಲು ಪ್ರಯತ್ನಿಸಿದರು. ಆದರೆ ಯೇಸು ಪವಿತ್ರಾತ್ಮದ ಮೂಲಕ ಅವರನ್ನು ಅನುಮತಿಸಲಿಲ್ಲ.” ಏಷ್ಯಾ ಪ್ರಾಂತದಲ್ಲಿ ಸಾರುವುದನ್ನು ಪವಿತ್ರಾತ್ಮ ತಡೆದದ್ದರಿಂದ ಪೌಲ ಮತ್ತು ಅವನ ಸಂಗಡಿಗರು ಈಗ ಉತ್ತರದ ಕಡೆಗೆ ಅಂದರೆ ಬಿಥೂನ್ಯದ ಪಟ್ಟಣಗಳ ಕಡೆಗೆ ಹೋದರು. ಆದರೆ ಬಿಥೂನ್ಯದ ಸಮೀಪಕ್ಕೆ ಬಂದಾಗ ಯೇಸು ಪುನಃ ಪವಿತ್ರಾತ್ಮ ಶಕ್ತಿಯ ಮೂಲಕ ತಡೆದನು. ಇದು ಅವರಲ್ಲಿ ಖಂಡಿತ ಗೊಂದಲ ಮೂಡಿಸಿರಬೇಕು. ಏನನ್ನು ಸಾರಬೇಕು, ಹೇಗೆ ಸಾರಬೇಕು ಎಂದು ಅವರಿಗೆ ತಿಳಿದಿತ್ತು. ಆದರೆ ಎಲ್ಲಿ ಸಾರಬೇಕೆಂದು ತಿಳಿದಿರಲಿಲ್ಲ. ಅವರ ಸನ್ನಿವೇಶವನ್ನು ಹೀಗೆ ವಿವರಿಸಬಹುದು: ಏಷ್ಯಾದ ಕಡೆಗೆ ಹೋಗುವ ಬಾಗಿಲನ್ನು ತಟ್ಟಿದರು—ತೆರೆಯಲಿಲ್ಲ. ಬಿಥೂನ್ಯಕ್ಕೆ ಹೋಗುವ ಬಾಗಿಲನ್ನು ತಟ್ಟಿದರು—ಅದೂ ತೆರೆಯಲಿಲ್ಲ. ಅಷ್ಟಕ್ಕೆ ತಟ್ಟುವುದನ್ನು ನಿಲ್ಲಿಸಿ ಬಿಟ್ಟರಾ? ಇಲ್ಲ. ಅವರು ಹುರುಪಿನ ಸೌವಾರ್ತಿಕರಾಗಿದ್ದರು!

7 ಈಗ ಅವರೊಂದು ನಿರ್ಣಯ ತೆಗೆದುಕೊಂಡರು. ವಚನ 8 ಹೀಗೆ ಹೇಳುತ್ತದೆ: “ಅವರು ಮೂಸ್ಯವನ್ನು ದಾಟಿ ತ್ರೋವಕ್ಕೆ ಬಂದರು.” ಇದು ನಮಗೆ ವಿಚಿತ್ರವೆಂದು ಅನಿಸಬಹುದು. ಏಕೆಂದರೆ ಬಿಥೂನ್ಯದಿಂದ ಪಶ್ಚಿಮದ ಕಡೆಗೆ ಸುಮಾರು 550 ಕಿ.ಮೀ.ಗಳಷ್ಟು ದೂರ ನಡೆದು ತ್ರೋವದ ಬಂದರನ್ನು ತಲುಪಿದರು. ಅದೂ ಬೇರೆ ಬೇರೆ ನಗರಗಳನ್ನು ದಾಟಿ ಬಂದಿದ್ದರು. ಜನರು ಸಾಮಾನ್ಯವಾಗಿ ತ್ರೋವದ ಈ ‘ನಿಸರ್ಗದತ್ತ’ ಬಂದರಿನಿಂದಲೇ ಮಕೆದೋನ್ಯಕ್ಕೆ ಪ್ರಯಾಣಿಸುತ್ತಿದ್ದರು. ಈಗ ಪೌಲ ಮತ್ತವನ ಸಂಗಡಿಗರು ಮೂರನೇ ಬಾರಿ ಬಾಗಿಲು ತಟ್ಟುತ್ತಾರೆ. ಅದು ಅಗಲವಾಗಿ ತೆರೆದುಕೊಳ್ಳುತ್ತದೆ!! ಹೇಗೆ ಎಂಬುದನ್ನು 9ನೇ ವಚನ ತಿಳಿಸುತ್ತದೆ: “ರಾತ್ರಿವೇಳೆಯಲ್ಲಿ ಪೌಲನು ಒಂದು ದರ್ಶನವನ್ನು ಕಂಡನು. ಆ ದರ್ಶನದಲ್ಲಿ ಮಕೆದೋನ್ಯದವನಾದ ಒಬ್ಬ ಮನುಷ್ಯನು ನಿಂತುಕೊಂಡು, ‘ಮಕೆದೋನ್ಯಕ್ಕೆ ಬಂದು ನಮಗೆ ಸಹಾಯಮಾಡು’ ಎಂದು ಅವನನ್ನು ಬೇಡಿಕೊಳ್ಳುತ್ತಿದ್ದನು.” ಕೊನೆಗೂ ಎಲ್ಲಿ ಸಾರಬೇಕೆಂದು ಪೌಲನಿಗೆ ತಿಳಿಯಿತು. ಸ್ವಲ್ಪವೂ ತಡಮಾಡದೆ ಅವರು ಮಕೆದೋನ್ಯಕ್ಕೆ ಪ್ರಯಾಣ ಬೆಳೆಸಿದರು.

8, 9. ಪೌಲನು ಕೈಗೊಂಡ ಪ್ರಯಾಣದಿಂದ ನಾವೇನು ಕಲಿಯುತ್ತೇವೆ?

8 ಈ ಘಟನೆಯಿಂದ ನಮಗೇನು ಪಾಠ? ನಾವು ಗಮನಿಸಬೇಕಾದ ವಿಷಯವೇನೆಂದರೆ, ಪೌಲನು ಏಷ್ಯಾಕ್ಕೆ ಹೊರಟ ನಂತರವೇ ಪವಿತ್ರಾತ್ಮ ಅವನನ್ನು ಮಾರ್ಗದರ್ಶಿಸಿತು. ಅದೇ ರೀತಿ ಬಿಥೂನ್ಯವನ್ನು ಸಮೀಪಿಸಿದ ನಂತರವಷ್ಟೇ ಯೇಸು ಮಾರ್ಗದರ್ಶನೆ ನೀಡಿದನು. ಹಾಗೆಯೇ ಪೌಲನು ತ್ರೋವಕ್ಕೆ ಬಂದು ತಲುಪಿದ ಬಳಿಕವೇ ಯೇಸು ಅವನನ್ನು ಮಕೆದೋನ್ಯಕ್ಕೆ ಹೋಗುವಂತೆ ಮಾರ್ಗದರ್ಶಿಸಿದನು. ಸಭೆಯ ಶಿರಸ್ಸಾಗಿರುವ ಯೇಸು ನಮ್ಮನ್ನೂ ಅದೇ ರೀತಿಯಲ್ಲಿ ಮಾರ್ಗದರ್ಶಿಸಬಹುದು. (ಕೊಲೊ. 1:18) ಉದಾಹರಣೆಗೆ, ಪಯನೀಯರ್‌ ಸೇವೆ ಮಾಡುವ ಯೋಚನೆ ನಿಮಗಿರಬಹುದು ಅಥವಾ ಹೆಚ್ಚು ಪ್ರಚಾರಕರ ಅಗತ್ಯವಿರುವ ಕ್ಷೇತ್ರಕ್ಕೆ ಸ್ಥಳಾಂತರಿಸಲು ಇಷ್ಟಪಡಬಹುದು. ಆದರೆ ನೀವು ಆ ಗುರಿ ಮುಟ್ಟಲು ಖಚಿತ ಹೆಜ್ಜೆ ತೆಗೆದುಕೊಂಡ ಬಳಿಕವೇ ಯೇಸು ದೇವರಾತ್ಮದ ಮೂಲಕ ನಿಮ್ಮನ್ನು ಮಾರ್ಗದರ್ಶಿಸುವನು. ಉದಾಹರಣೆಗೆ, ಕಾರು ಚಲಿಸುತ್ತಿದ್ದರೆ ಮಾತ್ರ ಡ್ರೈವರ್‌ ಅದನ್ನು ಬಲಕ್ಕೋ ಎಡಕ್ಕೋ ತಿರುಗಿಸಬಹುದು. ತದ್ರೀತಿ, ನಾವು ಮುಂದಕ್ಕೆ ಸಾಗುತ್ತಿದ್ದರೆ ಅಂದರೆ ನಮ್ಮ ಗುರಿ ಮುಟ್ಟಲು ಪ್ರಯತ್ನಪಡುತ್ತಿದ್ದರೆ ಮಾತ್ರ ಶುಶ್ರೂಷೆಯನ್ನು ವಿಸ್ತರಿಸಲು ಯೇಸು ನಮಗೆ ಬೇಕಾದ ಮಾರ್ಗದರ್ಶನೆ ಕೊಡುವನು.

9 ನೀವು ಹಾಕುವ ಪ್ರಯತ್ನಗಳಿಗೆ ತತ್‌ಕ್ಷಣವೇ ಫಲ ಸಿಗುತ್ತಿಲ್ಲವಾದರೆ ಆಗೇನು? ಪವಿತ್ರಾತ್ಮ ಮಾರ್ಗದರ್ಶಿಸುತ್ತಿಲ್ಲ ಎಂದು ಯೋಚಿಸಿ ಪ್ರಯತ್ನವನ್ನು ಬಿಟ್ಟುಬಿಡಬೇಕಾ? ಪೌಲನಿಗೆ ಸಹ ಅಡೆತಡೆಗಳು ಬಂದವು ಎಂಬುದನ್ನು ಮರೆಯಬೇಡಿ. ಆದರೆ ಅವನು ಹುಡುಕುವುದನ್ನು ನಿಲ್ಲಿಸಲಿಲ್ಲ. ಬಾಗಿಲು ತೆರೆಯುವ ವರೆಗೆ ತಟ್ಟುತ್ತಾ ಇದ್ದನು. ನೀವು ಸಹ “ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರ” ತೆರೆಯುವ ವರೆಗೆ ತಟ್ಟುವುದನ್ನು ಮುಂದುವರಿಸಿದರೆ ಪ್ರತಿಫಲ ಖಂಡಿತ.—1 ಕೊರಿಂ. 16:9.

ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ” ಇದ್ದರು

10. ಸದಾ ಎಚ್ಚರವಾಗಿರಲು ಎಡೆಬಿಡದೆ ಪ್ರಾರ್ಥಿಸುವುದು ಅಗತ್ಯವೆಂದು ಯಾವುದು ತೋರಿಸುತ್ತದೆ?

10 ಎಚ್ಚರವಾಗಿರುವ ಕುರಿತು ಒಂದನೇ ಶತಮಾನದ ಕ್ರೈಸ್ತರಿಂದ ಕಲಿಯುವ ಎರಡನೇ ಪಾಠ: ಪ್ರಾರ್ಥನೆ ಮಾಡುವ ವಿಷಯದಲ್ಲಿ ಅವರು ಎಚ್ಚರವಾಗಿದ್ದರು. (1 ಪೇತ್ರ 4:7) ಸದಾ ಎಚ್ಚರವಾಗಿರಲು ಪಟ್ಟುಹಿಡಿದು ಪ್ರಾರ್ಥಿಸುವುದು ಅಗತ್ಯ. ಯೇಸುವನ್ನು ಗೆತ್ಸೇಮನೆ ತೋಟದಲ್ಲಿ ಬಂಧಿಸುವ ಸ್ವಲ್ಪ ಮುಂಚೆ ಅವನು ತನ್ನ ಮೂವರು ಅಪೊಸ್ತಲರಿಗೆ “ಎಚ್ಚರವಾಗಿದ್ದು ಪ್ರಾರ್ಥಿಸುತ್ತಾ ಇರಿ” ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಿ.—ಮತ್ತಾ. 26:41.

11, 12. ಪೇತ್ರನನ್ನೂ ಇತರ ಕ್ರೈಸ್ತರನ್ನೂ ಹೆರೋದನು ಏಕೆ ದುರುಪಚರಿಸಿದನು? ಹೇಗೆ ದುರುಪಚರಿಸಿದನು?

11 ಯೇಸುವಿನ ಈ ಮಾತನ್ನು ಕಿವಿಯಾರೆ ಕೇಳಿದ್ದ ಪೇತ್ರನು ಪಟ್ಟುಹಿಡಿದು ಮಾಡುವ ಪ್ರಾರ್ಥನೆಗಳಿಗೆ ಎಷ್ಟು ಬಲವಿದೆ ಎನ್ನುವುದನ್ನು ಸ್ವತಃ ಅನುಭವಿಸಿದನು. (ಅಪೊಸ್ತಲರ ಕಾರ್ಯಗಳು 12:1-6 ಓದಿ.) 12ನೇ ಅಧ್ಯಾಯದ ಆರಂಭದ ವಚನಗಳು ತೋರಿಸುವಂತೆ ಯೆಹೂದ್ಯರ ಮೆಚ್ಚುಗೆ ಗಳಿಸಲಿಕ್ಕಾಗಿ ಹೆರೋದನು ಕ್ರೈಸ್ತರನ್ನು ದುರುಪಚರಿಸುವುದಕ್ಕೆ ಕೈಹಾಕಿದನು. ಅವನಿಗೆ ಯಾಕೋಬನು ಅಪೊಸ್ತಲನಾಗಿದ್ದ ಮತ್ತು ಯೇಸುವಿಗೆ ಆಪ್ತನಾಗಿದ್ದ ವಿಚಾರ ಗೊತ್ತಿತ್ತೆಂದು ಕಾಣುತ್ತದೆ. ಆದುದರಿಂದಲೇ “ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು.” (ವಚನ 2) ಸಭೆಯು ಒಬ್ಬ ನೆಚ್ಚಿನ ಅಪೊಸ್ತಲನನ್ನು ಕಳಕೊಂಡಿತು. ಸಹೋದರರಿಗೆ ಎಂಥ ದೊಡ್ಡ ಪರೀಕ್ಷೆ!

12 ಹೆರೋದನು ಮುಂದೇನು ಮಾಡಿದನೆಂದು 3ನೇ ವಚನ ವಿವರಿಸುತ್ತದೆ: “ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂಬುದನ್ನು [ಅವನು] ಕಂಡು ಪೇತ್ರನನ್ನು ಸಹ ಬಂಧಿಸಲು ಮುಂದಾದನು.” ಮೊದಲೊಮ್ಮೆ ಸೆರೆಮನೆಯಲ್ಲಿ ಹಾಕಿದಾಗ ಅದ್ಭುತ ನಡೆದು ಪೇತ್ರ ಮುಂತಾದ ಅಪೊಸ್ತಲರು ಬಿಡುಗಡೆ ಹೊಂದಿದ್ದರು. (ಅ. ಕಾ. 5:17-20) ಹೆರೋದನಿಗೆ ಈ ವಿಷಯ ಚೆನ್ನಾಗಿ ಗೊತ್ತಿದ್ದಿರಬೇಕು. ಆದ್ದರಿಂದಲೇ ಆ ಚಾಣಾಕ್ಷ ರಾಜಕಾರಣಿ ಮುಂಜಾಗ್ರತೆ ವಹಿಸಿ ಪೇತ್ರನು ತಪ್ಪಿಸಿಕೊಂಡು ಹೋಗದಂತೆ ಬಿಗಿ ಕಾವಲಿಟ್ಟನು. “ಪಸ್ಕಹಬ್ಬದ ಬಳಿಕ [ಪೇತ್ರನನ್ನು] ಜನರ ಮುಂದೆ ಹಾಜರುಪಡಿಸಬೇಕೆಂಬ ಉದ್ದೇಶದಿಂದ ಅವನನ್ನು ಹಿಡಿದು ಸೆರೆಮನೆಯಲ್ಲಿ ಹಾಕಿಸಿ ನಾಲ್ಕು ಮಂದಿ ಸಿಪಾಯಿಗಳಿದ್ದ ನಾಲ್ಕು ಗುಂಪುಗಳನ್ನು ಪಾಳಿಗನುಸಾರ ಕಾಯಲು ನೇಮಿಸಿದನು.” (ವಚನ 4) ಸ್ವಲ್ಪ ಯೋಚಿಸಿ! ಪೇತ್ರನನ್ನು ಎರಡು ಸರಪಣಿಗಳಿಂದ ಕಟ್ಟಿ ಇಬ್ಬರು ಸಿಪಾಯಿಗಳ ಮಧ್ಯೆ ಇಟ್ಟಿದ್ದನು. ಒಟ್ಟು 16 ಕಾವಲುಗಾರರು ಪಾಳಿಗನುಸಾರ ಹಗಲು ರಾತ್ರಿ ಪೇತ್ರನನ್ನು ಕಾಯುತ್ತಿದ್ದರು. ಇಷ್ಟೆಲ್ಲ ಬಂದೋಬಸ್ತು ಮಾಡಿದ್ದು ಪೇತ್ರನು ತಪ್ಪಿಸಿಕೊಳ್ಳದಿರಲಿಕ್ಕಾಗಿ. ಪಸ್ಕಹಬ್ಬ ಮುಗಿದ ಮೇಲೆ ಪೇತ್ರನನ್ನು ಜನರ ಮುಂದೆ ಹಾಜರುಪಡಿಸಿ ಮರಣದಂಡನೆ ನೀಡುವ ಮೂಲಕ ಜನಮನ ಗೆಲ್ಲಬೇಕೆನ್ನುವುದು ಹೆರೋದನ ಉದ್ದೇಶ. ಪೇತ್ರನು ಇಂಥ ಭೀಕರ ಸನ್ನಿವೇಶದಲ್ಲಿದ್ದಾಗ ಸಭೆಯ ಸಹೋದರರು ಏನು ಮಾಡಸಾಧ್ಯವಿತ್ತು?

13, 14. (ಎ) ಪೇತ್ರ ಸೆರೆಯಲ್ಲಿದ್ದಾಗ ಸಭೆಯವರು ಏನು ಮಾಡಿದರು? (ಬಿ) ಪ್ರಾರ್ಥನೆಯ ವಿಷಯದಲ್ಲಿ ಅವರಿಂದ ನಾವೇನು ಕಲಿಯುತ್ತೇವೆ?

13 ಏನು ಮಾಡಬೇಕೆಂದು ಸಭೆಯವರಿಗೆ ಚೆನ್ನಾಗಿ ಗೊತ್ತಿತ್ತು. ವಚನ 5 ಹೀಗನ್ನುತ್ತದೆ: “ಪೇತ್ರನನ್ನು ಸೆರೆಮನೆಯಲ್ಲಿ ಇಡಲಾಯಿತಾದರೂ ಸಭೆಯವರು ಅವನ ಪರವಾಗಿ ತೀವ್ರಾಸಕ್ತಿಯಿಂದ ದೇವರಿಗೆ ಪ್ರಾರ್ಥಿಸುತ್ತಾ ಇದ್ದರು.” ಹೌದು, ಅವರು ತಮ್ಮ ಪ್ರೀತಿಯ ಸಹೋದರನಿಗಾಗಿ ಮಾಡಿದ ಪ್ರಾರ್ಥನೆ ತೀವ್ರಾಸಕ್ತಿಯದ್ದಾಗಿತ್ತು, ಹೃದಯಾಳದಿಂದ ಹೊಮ್ಮಿತು. ಯಾಕೋಬನ ಮರಣ ಅವರನ್ನು ಹತಾಶೆಯಲ್ಲಿ ಮುಳುಗಿಸಲಿಲ್ಲ. ತಮ್ಮ ಪ್ರಾರ್ಥನೆಗಳಿಗೆ ಫಲಸಿಗದು ಎಂದು ಅವರು ಭಾವಿಸಲೂ ಇಲ್ಲ. ನಿಷ್ಠಾವಂತ ಆರಾಧಕರ ಪ್ರಾರ್ಥನೆಗಳು ಯೆಹೋವನಿಗೆ ಅತ್ಯಮೂಲ್ಯವಾಗಿವೆ ಎಂದು ಅವರು ತಿಳಿದಿದ್ದರು. ದೇವರ ಚಿತ್ತಕ್ಕೆ ಅನುಗುಣವಾಗಿರುವ ಪ್ರಾರ್ಥನೆಗಳಿಗೆ ಆತನು ಸದುತ್ತರ ಕೊಡುವನು ಎನ್ನುವ ನಿಶ್ಚಯ ಅವರಿಗಿತ್ತು.—ಇಬ್ರಿ. 13:18, 19; ಯಾಕೋ. 5:16.

14 ಅವರಿಂದ ನಾವು ಯಾವ ಪಾಠ ಕಲಿಯುತ್ತೇವೆ? ಸದಾ ಎಚ್ಚರವಾಗಿರಲು ನಮಗಾಗಿ ಮಾತ್ರವಲ್ಲ, ನಮ್ಮ ಸಹೋದರರಿಗಾಗಿಯೂ ಪ್ರಾರ್ಥಿಸಬೇಕು. (ಎಫೆ. 6:18) ಸಹೋದರ ಸಹೋದರಿಯರು ಯಾರಾದರೂ ಸಂಕಷ್ಟದಲ್ಲಿರುವುದು ನಿಮಗೆ ತಿಳಿದು ಬಂದಿದೆಯೇ? ಕೆಲವರು ಹಿಂಸೆಯನ್ನು ಎದುರಿಸುತ್ತಿರಬಹುದು. ನೈಸರ್ಗಿಕ ವಿಪತ್ತಿಗೆ ಒಳಗಾಗಿರಬಹುದು. ಸರಕಾರದ ನಿಷೇಧದಿಂದ ತೊಂದರೆಗಳಿಗೆ ತುತ್ತಾಗಿರಬಹುದು. ನಾವು ಕೂಡ ಅವರಿಗಾಗಿ ಹೃತ್ಪೂರ್ವಕವಾಗಿ ಪ್ರಾರ್ಥಿಸಬೇಕು. ನಮಗೆ ತಿಳಿದಿರುವ ಕೆಲವರಿಗೆ ಇತರರ ಗಮನಕ್ಕೆ ಅಷ್ಟಾಗಿ ಬಾರದ ಸಮಸ್ಯೆಗಳು ಇರಬಹುದು. ಕುಟುಂಬ ತಾಪತ್ರಯ ಇರಬಹುದು, ನಿರಾಶೆ ಕಾಡುತ್ತಿರಬಹುದು ಅಥವಾ ಕಾಯಿಲೆಗೆ ತುತ್ತಾಗಿರಬಹುದು. ಸ್ವಲ್ಪ ಯೋಚಿಸುವುದಾದರೆ ನಿಮಗೆ ಇಂಥ ವ್ಯಕ್ತಿಗಳ ನೆನಪಾಗುವುದು ಖಂಡಿತ. ‘ಪ್ರಾರ್ಥನೆಯನ್ನು ಕೇಳುವ’ ಯೆಹೋವನ ಬಳಿ ಅವರ ಹೆಸರನ್ನು ಹೇಳಿ ಬೇಡಿಕೊಳ್ಳಬಾರದೇಕೆ?—ಕೀರ್ತ. 65:2.

15, 16. (ಎ) ಯೆಹೋವನ ದೂತನು ಪೇತ್ರನನ್ನು ಸೆರೆಯಿಂದ ಹೇಗೆ ಬಿಡಿಸಿದನೆಂದು ವಿವರಿಸಿ. (ಕೆಳಗಿರುವ ಚಿತ್ರ ನೋಡಿ.) (ಬಿ) ಯೆಹೋವನು ಪೇತ್ರನನ್ನು ಬಿಡುಗಡೆ ಮಾಡಿದ ವಿಷಯವನ್ನು ಧ್ಯಾನಿಸುವುದು ಬಲವರ್ಧಕವೇಕೆ?

15 ಸೆರೆಯಲ್ಲಿದ್ದ ಪೇತ್ರನಿಗೆ ಏನಾಯಿತೆಂದು ನೋಡೋಣ. ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿವಸದ ಹಿಂದಿನ ರಾತ್ರಿಯದು! ಕಾವಲು ನಿಂತಿದ್ದ ಇಬ್ಬರು ಸಿಪಾಯಿಗಳ ನಡುವೆ ಪೇತ್ರ ನಿದ್ರಿಸುತ್ತಿದ್ದಾನೆ. (ಅಪೊಸ್ತಲರ ಕಾರ್ಯಗಳು 12:7-11 ಓದಿ.) ಇದ್ದಕ್ಕಿದ್ದಂತೆ ಅಲ್ಲಿ ಪ್ರಕಾಶಮಾನ ಬೆಳಕು ಪ್ರಜ್ವಲಿಸಿತು. ಒಬ್ಬ ದೇವದೂತನು ಅಲ್ಲಿ ಪ್ರತ್ಯಕ್ಷನಾದನು. ಅವನು ಕಾವಲುಗಾರರ ಕಣ್ಣಿಗೆ ಕಾಣಿಸಲಿಲ್ಲ. ಆ ದೇವದೂತನು ಪೇತ್ರನನ್ನು ಅವಸರ ಅವಸರದಿಂದ ಎಬ್ಬಿಸಿದನು. ಪೇತ್ರನ ಕೈಗಳಿಗೆ ತೊಡಿಸಲಾಗಿದ್ದ ಸರಪಣಿಗಳು ತನ್ನಷ್ಟಕ್ಕೆ ಕಳಚಿ ಬಿದ್ದವು! ಹೊರಗೆ ಕಾವಲು ನಿಂತಿದ್ದ ಸಿಪಾಯಿಗಳ ಕಣ್ಣೆದುರೇ ದೇವದೂತನು ಮತ್ತು ಪೇತ್ರನು ಹೊರಬಂದರು. ಹೊರಬರುತ್ತಿರುವಾಗಲೆ ಸೆರೆಮನೆಯ ಬೃಹತ್ತಾದ ಕಬ್ಬಿಣದ ದ್ವಾರ “ತನ್ನಷ್ಟಕ್ಕೆ ತಾನೇ ತೆರೆಯಿತು.” ಅವರು ನಡೆದು ಬೀದಿಗೆ ಬಂದಾಗ ದೇವದೂತನು ಅದೃಶ್ಯನಾದನು. ಪೇತ್ರ ಬಂಧಮುಕ್ತನಾಗಿದ್ದನು!

16 ತನ್ನ ಸೇವಕರನ್ನು ರಕ್ಷಿಸಲು ಯೆಹೋವನಿಗಿರುವ ಅಪರಿಮಿತ ಶಕ್ತಿಯ ಕುರಿತು ಯೋಚಿಸುವುದು ನಮ್ಮ ನಂಬಿಕೆಯನ್ನು ಬಲಪಡಿಸುತ್ತದಲ್ಲವೇ? ಇಂದು ಯೆಹೋವನು ತನ್ನ ಸೇವಕರನ್ನು ಪವಾಡ ರೀತಿಯಲ್ಲಿ ರಕ್ಷಿಸುವನೆಂದು ನಾವು ಎದುರುನೋಡುವುದಿಲ್ಲ. ಆದರೆ ತನ್ನ ಸೇವಕರಿಗೆ ಸಹಾಯ ಮಾಡಲು ತನ್ನ ಶಕ್ತಿಯನ್ನು ಉಪಯೋಗಿಸುವನೆಂಬ ಸಂಪೂರ್ಣ ಭರವಸೆ ನಮಗಿದೆ. (2 ಪೂರ್ವ. 16:9) ಯಾವುದೇ ರೀತಿಯ ಸಂಕಷ್ಟ ಬರಲಿ ಅದನ್ನು ತಾಳಿಕೊಳ್ಳಲು ತನ್ನ ಪವಿತ್ರಾತ್ಮದಿಂದ ಆತನು ನಮ್ಮನ್ನು ಬಲಗೊಳಿಸುವನು. (2 ಕೊರಿಂ. 4:7; 2 ಪೇತ್ರ 2:9) ಮಾತ್ರವಲ್ಲ ಬಿಡಿಸಿಕೊಳ್ಳಲು ಅಸಾಧ್ಯವಾದ ಮರಣದ ಸೆರೆಯಿಂದ ಯೆಹೋವನು ಶೀಘ್ರದಲ್ಲೇ ಲಕ್ಷಾಂತರ ಜನರನ್ನು ತನ್ನ ಪುತ್ರನ ಮೂಲಕ ಬಂಧಮುಕ್ತಗೊಳಿಸುವನು. (ಯೋಹಾ. 5:28, 29) ದೇವರು ಮಾಡಿರುವ ಇಂಥ ವಾಗ್ದಾನಗಳಲ್ಲಿ ನಾವಿಡುವ ಭರವಸೆ ಸಂಕಷ್ಟಗಳನ್ನು ಎದುರಿಸಲು ಧೈರ್ಯ ಕೊಡುವುದು.

ಅಡೆತಡೆಗಳಿದ್ದರೂ ಕೂಲಂಕಷ ಸಾಕ್ಷಿ ನೀಡಿದರು

17. ಹುರುಪು ಮತ್ತು ತುರ್ತುಪ್ರಜ್ಞೆಯಿಂದ ಸಾರುವ ವಿಷಯದಲ್ಲಿ ಪೌಲ ಹೇಗೆ ಉತ್ತಮ ಮಾದರಿ?

17 ಎಚ್ಚರವಾಗಿರುವುದರ ಕುರಿತು ಅಪೊಸ್ತಲರಿಂದ ಕಲಿಯುವ ಮೂರನೇ ಪಾಠ: ಅಡೆತಡೆಗಳಿದ್ದಾಗಲೂ ಅವರು ಕೂಲಂಕಷ ಸಾಕ್ಷಿ ನೀಡುವುದನ್ನು ಮುಂದುವರಿಸಿದರು. ನಾವು ಸದಾ ಎಚ್ಚರವಾಗಿರಬೇಕಾದರೆ ಹುರುಪಿನಿಂದ ಸಾರಬೇಕು ಮತ್ತು ಅದು ತುಂಬ ತುರ್ತಿನದ್ದೆಂದು ಮನಸ್ಸಿನಲ್ಲಿಡಬೇಕು. ಈ ವಿಷಯದಲ್ಲಿ ಅಪೊಸ್ತಲ ಪೌಲ ಉತ್ತಮ ಮಾದರಿ. ಅವನು ಹುರುಪಿನಿಂದ ಸಾರಿದನು. ಸಾರಲಿಕ್ಕಾಗಿ ದೂರದೂರಕ್ಕೆ ಪ್ರಯಾಣಿಸಿದನು ಹಾಗೂ ಅನೇಕ ಸಭೆಗಳನ್ನು ಸ್ಥಾಪಿಸಿದನು. ಸಾರುವಾಗ ತುಂಬ ಕಷ್ಟಗಳನ್ನು ಅನುಭವಿಸಿದನಾದರೂ ತನ್ನ ಹುರುಪು ಮತ್ತು ತುರ್ತುಪ್ರಜ್ಞೆಯನ್ನು ಕಳೆದುಕೊಳ್ಳಲಿಲ್ಲ.—2 ಕೊರಿಂ. 11:23-29.

18. ರೋಮ್‌ನಲ್ಲಿ ಬಂದಿಯಾಗಿದ್ದ ಪೌಲ ಸಾರುವುದನ್ನು ಹೇಗೆ ಮುಂದುವರಿಸಿದನು?

18 ಪೌಲನ ಕುರಿತು ದಾಖಲಾಗಿರುವ ಕೊನೆ ಮಾಹಿತಿ ಅಪೊಸ್ತಲರ ಕಾರ್ಯಗಳು 28ನೇ ಅಧ್ಯಾಯದಲ್ಲಿದೆ. ಪೌಲನನ್ನು ಚಕ್ರವರ್ತಿ ನೀರೋ ಮುಂದೆ ಹಾಜರುಪಡಿಸಲು ರೋಮ್‌ಗೆ ಕರೆತರಲಾಯಿತು. ಅಲ್ಲಿ ಅವನನ್ನು ಬಂಧನದಲ್ಲಿ ಇಡಲಾಯಿತು. ತಪ್ಪಿಸಿಕೊಳ್ಳದಿರಲಿಕ್ಕಾಗಿ ಪೌಲನ ಕೈಗಳಿಗೆ ತೊಡಿಸಲಾಗಿದ್ದ ಬೇಡಿಯ ಇನ್ನೊಂದು ಕೊನೆಯನ್ನು ಕಾವಲು ಸಿಪಾಯಿಯ ಕೈಗೆ ಭದ್ರವಾಗಿ ತೊಡಿಸಿದ್ದಿರಬೇಕು. ಆದರೆ ಬೇಡಿ ಸಂಕೋಲೆಗಳು ಈ ಹುರುಪಿನ ಅಪೊಸ್ತಲನನ್ನು ತಡೆಯಲು ವಿಫಲವಾದವು! ಸಾಕ್ಷಿ ನೀಡಲಿಕ್ಕಾಗಿ ಅವನು ಅನೇಕ ವಿಧಾನಗಳನ್ನು ಕಂಡುಕೊಂಡನು. (ಅಪೊಸ್ತಲರ ಕಾರ್ಯಗಳು 28:17, 23, 24 ಓದಿ.) ಮೂರು ದಿನಗಳ ನಂತರ ಪೌಲನು ಯೆಹೂದ್ಯರ ಪ್ರಮುಖ ಪುರುಷರನ್ನು ಕರೆಸಿ ಸಾಕ್ಷಿಕೊಟ್ಟನು. ನಿಗದಿಪಡಿಸಲಾದ ಇನ್ನೊಂದು ದಿನದಂದು ಪೌಲ ಮಹತ್ತಾದ ರೀತಿಯಲ್ಲಿ ಸಾಕ್ಷಿ ಕೊಟ್ಟನು. ಆ ಕುರಿತು 23ನೇ ವಚನ ತಿಳಿಸುವುದನ್ನು ಗಮನಿಸಿ: “ಅವರು [ಅಲ್ಲಿನ ಯೆಹೂದ್ಯರು] ಅವನೊಂದಿಗೆ ಒಂದು ದಿವಸವನ್ನು ನಿಗದಿಪಡಿಸಿ ಬಹು ಸಂಖ್ಯೆಯಲ್ಲಿ ಅವನು ಉಳುಕೊಂಡಿದ್ದ ಸ್ಥಳಕ್ಕೆ ಬಂದರು. ಅವನು ಬೆಳಗಿನಿಂದ ಸಾಯಂಕಾಲದ ವರೆಗೆ ದೇವರ ರಾಜ್ಯದ ಕುರಿತು ಕೂಲಂಕಷವಾಗಿ ಸಾಕ್ಷಿನೀಡುವ ಮೂಲಕ ಮತ್ತು ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಉಪಯೋಗಿಸಿ ಯೇಸುವಿನ ಕುರಿತಾಗಿ ಅವರನ್ನು ಒಡಂಬಡಿಸುವ ಮೂಲಕ ವಿಷಯವನ್ನು ವಿವರಿಸಿ ಹೇಳಿದನು.”

19, 20. (ಎ) ಪೌಲನ ಸಾಕ್ಷಿಕಾರ್ಯ ಏಕೆ ತುಂಬ ಪರಿಣಾಮಕಾರಿ ಆಗಿತ್ತು? (ಬಿ) ಕೆಲವರು ಸುವಾರ್ತೆ ಸ್ವೀಕರಿಸದಿದ್ದಾಗ ಪೌಲ ಹೇಗೆ ಪ್ರತಿಕ್ರಿಯಿಸಿದನು?

19 ಪೌಲನ ಸಾಕ್ಷಿಕಾರ್ಯ ಪರಿಣಾಮಕಾರಿ ಆಗಿತ್ತು. ಇದಕ್ಕಿರುವ ಕಾರಣಗಳನ್ನು 23ನೇ ವಚನ ತಿಳಿಸುತ್ತದೆ. (1) ಅವನು ದೇವರ ರಾಜ್ಯ ಮತ್ತು ಯೇಸು ಕ್ರಿಸ್ತನ ಕಡೆಗೆ ಗಮನ ಸೆಳೆದನು. (2) “ಒಡಂಬಡಿಸುವ ಮೂಲಕ” ಜನರ ಹೃದಯವನ್ನು ತಲಪಲು ಪ್ರಯತ್ನಿಸಿದನು. (3) ಶಾಸ್ತ್ರವಚನಗಳನ್ನು ಉಪಯೋಗಿಸಿ ತರ್ಕಿಸಿದನು. (4) ನಿಸ್ವಾರ್ಥಿಯಾಗಿದ್ದು “ಬೆಳಗಿನಿಂದ ಸಾಯಂಕಾಲದ ವರೆಗೆ” ಸಾಕ್ಷಿನೀಡಿದನು. ಪೌಲನು ಪ್ರಬಲವಾದ ಸಾಕ್ಷಿ ನೀಡಿದನಾದರೂ ಅದನ್ನು ಎಲ್ಲರೂ ಸ್ವೀಕರಿಸಲಿಲ್ಲ. 24ನೇ ವಚನ ಹೇಳುವಂತೆ, “ಅವನು ಹೇಳಿದ ವಿಷಯಗಳನ್ನು ಕೆಲವರು ನಂಬಲಾರಂಭಿಸಿದರು; ಇತರರು ನಂಬದೆ ಹೋದರು.” ಹೀಗೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಜನರು ಅಲ್ಲಿಂದ ಹೊರಟುಹೋದರು.

20 ಕೆಲವರು ಸುವಾರ್ತೆ ಸ್ವೀಕರಿಸಲಿಲ್ಲವೆಂದು ಪೌಲ ನಿರಾಶೆಗೊಂಡನಾ? ಖಂಡಿತ ಇಲ್ಲ! ಅಪೊಸ್ತಲರ ಕಾರ್ಯಗಳು 28:30, 31 ಹೀಗೆ ಹೇಳುತ್ತದೆ: “ಅವನು ತಾನೇ ಬಾಡಿಗೆಗೆ ತೆಗೆದುಕೊಂಡ ಮನೆಯಲ್ಲಿ ಇಡೀ ಎರಡು ವರ್ಷವಿದ್ದು ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದನು; ಯಾವ ಅಡ್ಡಿಯೂ ಇಲ್ಲದೆ ತುಂಬ ವಾಕ್ಸರಳತೆಯಿಂದ ಅವರಿಗೆ ದೇವರ ರಾಜ್ಯದ ಕುರಿತು ಸಾರುತ್ತಿದ್ದನು ಮತ್ತು ಕರ್ತನಾದ ಯೇಸು ಕ್ರಿಸ್ತನ ಕುರಿತು ಬೋಧಿಸುತ್ತಿದ್ದನು.” ಈ ಹೃದಯೋತ್ತೇಜಕ ಮಾತುಗಳೊಂದಿಗೆ ಅಪೊಸ್ತಲರ ಕಾರ್ಯಗಳು ಪುಸ್ತಕ ಕೊನೆಗೊಳ್ಳುತ್ತದೆ.

21. ಗೃಹಬಂಧನದಲ್ಲಿದ್ದಾಗ ಪೌಲ ಮಾಡಿದ ಸಾಕ್ಷಿಕಾರ್ಯದಿಂದ ನಾವೇನು ಕಲಿಯುತ್ತೇವೆ?

21 ಪೌಲನ ಮಾದರಿಯಿಂದ ನಾವೇನು ಕಲಿಯುತ್ತೇವೆ? ಗೃಹಬಂಧನದಲ್ಲಿದ್ದಾಗ ಅವನು ಮನೆಮನೆ ಸಾಕ್ಷಿಕಾರ್ಯ ಮಾಡಲು ಸಾಧ್ಯವಿರಲಿಲ್ಲ. ಆದರೂ ಸಕಾರಾತ್ಮಕ ಮನೋಭಾವ ಇಟ್ಟುಕೊಂಡು ತನ್ನ ಬಳಿ ಬಂದವರಿಗೆಲ್ಲ ಸಾಕ್ಷಿನೀಡಿದನು. ಅದೇ ರೀತಿ ಇಂದು ತಮ್ಮ ನಂಬಿಕೆಗಾಗಿ ಜೈಲಿನಲ್ಲಿರುವ ಅನೇಕ ದೇವಜನರು ಹತಾಶರಾಗದೆ ಆನಂದದಿಂದ ಸಾರುವುದನ್ನು ಮುಂದುವರಿಸಿದ್ದಾರೆ. ಇನ್ನು ಕೆಲವರು ಮನೆಯಿಂದ ಹೊರಬರಲಾರದ ಪರಿಸ್ಥಿತಿಯಲ್ಲಿದ್ದಾರೆ. ವೃದ್ಧಾಪ್ಯ ಅಥವಾ ಅಸ್ವಸ್ಥತೆಯ ಕಾರಣದಿಂದಾಗಿ ‘ಶುಶ್ರೂಷಾ ಗೃಹ’ಗಳಲ್ಲಿದ್ದಾರೆ. ಅವರು ತಮ್ಮಿಂದಾದ ರೀತಿಯಲ್ಲಿ ವೈದ್ಯರಿಗೆ, ಸಿಬ್ಬಂದಿಗೆ, ತಮ್ಮನ್ನು ಭೇಟಿ ನೀಡುವವರಿಗೆ ಸಾರುತ್ತಾರೆ. ದೇವರ ರಾಜ್ಯದ ಕುರಿತು ಕೂಲಂಕಷ ಸಾಕ್ಷಿ ನೀಡುವುದೇ ಅವರ ಹೃದಯಾಳದ ಇಚ್ಛೆ. ಅವರ ಮಾದರಿ ಬೆಲೆಕಟ್ಟಲಾಗದ್ದು!

22. (ಎ) ಅಪೊಸ್ತಲರ ಕಾರ್ಯಗಳು ಪುಸ್ತಕದಿಂದ ಪ್ರಯೋಜನ ಪಡೆಯಲು ಯಾವ ಪ್ರಕಾಶನ ನಮಗೆ ನೆರವಾಗುವುದು? (ಮೇಲಿರುವ ಚೌಕ ನೋಡಿ.) (ಬಿ) ಈ ಲೋಕದ ಅಂತ್ಯಕ್ಕಾಗಿ ಕಾಯುತ್ತಿರುವ ನೀವು ಏನು ಮಾಡಲು ನಿಶ್ಚಯಿಸಿದ್ದೀರಾ?

22 ಒಂದನೇ ಶತಮಾನದ ಅಪೊಸ್ತಲರ ಮತ್ತು ಇತರ ಕ್ರೈಸ್ತರ ಬಗ್ಗೆ ಅಪೊಸ್ತಲರ ಕಾರ್ಯಗಳು ಪುಸ್ತಕದಲ್ಲಿ ನಾವು ಓದುವಾಗ ಎಚ್ಚರವಾಗಿರುವ ಕುರಿತು ಬಹಳ ವಿವರಗಳನ್ನು ಪಡೆಯುತ್ತೇವೆ. ಈ ಲೋಕದ ಅಂತ್ಯಕ್ಕಾಗಿ ಕಾಯುತ್ತಿರುವ ನಾವು ಅವರ ಮಾದರಿಯನ್ನು ಅನುಕರಿಸುತ್ತಾ ಧೈರ್ಯದಿಂದಲೂ ಹುರುಪಿನಿಂದಲೂ ಸಾರೋಣ. ದೇವರ ರಾಜ್ಯದ ಕುರಿತು “ಕೂಲಂಕಷವಾಗಿ ಸಾಕ್ಷಿನೀಡುವ” ಸುಯೋಗಕ್ಕಿಂತ ದೊಡ್ಡ ಸುಯೋಗ ಬೇರೊಂದಿಲ್ಲ!—ಅ. ಕಾ. 28:23.

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚೌಕ]

“ಈಗ ತುಂಬ ಚೆನ್ನಾಗಿ ಅರ್ಥವಾಗುತ್ತಿದೆ”

‘ದೇವರ ರಾಜ್ಯದ ಕುರಿತು ಕೂಲಂಕಷ ಸಾಕ್ಷಿನೀಡಿ’ * ಪುಸ್ತಕವನ್ನು ಓದಿದ ಸಂಚರಣ ಮೇಲ್ವಿಚಾರಕರೊಬ್ಬರು ತಮ್ಮ ಅನಿಸಿಕೆಯನ್ನು ಹೀಗೆ ಹೇಳಿದರು: “ಅಪೊಸ್ತಲರ ಕಾರ್ಯ ಪುಸ್ತಕ ಈಗ ತುಂಬ ಚೆನ್ನಾಗಿ ಅರ್ಥವಾಗುತ್ತಿದೆ. ಈ ಮುಂಚೆ ನಾನದನ್ನು ತುಂಬ ಸಾರಿ ಓದಿದ್ದೀನಿ. ಆದರೆ ಮೊಬ್ಬಾದ ಕನ್ನಡಕ ಧರಿಸಿ ಮೊಂಬತ್ತಿಯ ಮಂದ ಬೆಳಕಿನಲ್ಲಿ ಓದಿದಂತಿತ್ತು. ಈಗ ಸೂರ್ಯನ ಪ್ರಖರ ಬೆಳಕಿನಲ್ಲಿ ಅದರ ವೈಭವವನ್ನು ಕಾಣುವ ಸೌಭಾಗ್ಯ ನನ್ನದಾಗಿದೆ.”

[ಪಾದಟಿಪ್ಪಣಿ]

^ ಪ್ಯಾರ. 48 ಕನ್ನಡದಲ್ಲಿ ಲಭ್ಯವಿಲ್ಲ.

[ಪುಟ 12ರಲ್ಲಿರುವ ಚಿತ್ರ]

ಪೇತ್ರನನ್ನು ಕಬ್ಬಿಣದ ಬೃಹತ್‌ ದ್ವಾರದ ಹೊರಗೆ ಕರೆದೊಯ್ಯುತ್ತಿರುವ ದೇವದೂತ