ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ಕ್ರೈಸ್ತರು ದೇವರ ವಾಕ್ಯವನ್ನು ಗೌರವಿಸುತ್ತಾರೆ

ನಿಜ ಕ್ರೈಸ್ತರು ದೇವರ ವಾಕ್ಯವನ್ನು ಗೌರವಿಸುತ್ತಾರೆ

ನಿಜ ಕ್ರೈಸ್ತರು ದೇವರ ವಾಕ್ಯವನ್ನು ಗೌರವಿಸುತ್ತಾರೆ

“ನಿನ್ನ ವಾಕ್ಯವೇ ಸತ್ಯ.”—ಯೋಹಾ. 17:17.

ಈ ಅಂಶಗಳಿಗೆ ಗಮನಕೊಡಿ

ಕ್ರಿ.ಶ. 49ರಲ್ಲಿ ಯೆರೂಸಲೇಮಿನಲ್ಲಿ ನಡೆದ ಕೂಟವು ಚರ್ಚ್‌ ಕೌನ್ಸಿಲ್‌ಗಳಿಗಿಂತ ಹೇಗೆ ಭಿನ್ನವಾಗಿತ್ತು?

ಅಪೊಸ್ತಲರ ಸಮಯಾನಂತರ ದೇವರ ವಾಕ್ಯವನ್ನು ಧೈರ್ಯದಿಂದ ಸಮರ್ಥಿಸಿದ ಕೆಲವು ವ್ಯಕ್ತಿಗಳು ಯಾರು?

19ನೇ ಶತಮಾನದ ಬೈಬಲ್‌ ವಿದ್ಯಾರ್ಥಿಗಳ ಅಧ್ಯಯನ ರೀತಿ ಹೇಗಿತ್ತು? ಅದು ಪರಿಣಾಮಕಾರಿಯಾಗಿತ್ತು ಏಕೆ?

1. ಯೆಹೋವನ ಸಾಕ್ಷಿಗಳಿಗೂ ಬೇರೆ ಧಾರ್ಮಿಕ ಪಂಗಡದವರಿಗೂ ಇರುವ ಯಾವ ಒಂದು ಪ್ರಮುಖ ವ್ಯತ್ಯಾಸವನ್ನು ನೀವು ಗಮನಿಸಿರುವಿರಿ?

ಮೊತ್ತಮೊದಲ ಸಲ ಯೆಹೋವನ ಸಾಕ್ಷಿಯೊಂದಿಗೆ ಸಂಭಾಷಣೆ ನಡೆಸಿದ ಸಂದರ್ಭವನ್ನು ಸ್ವಲ್ಪ ಜ್ಞಾಪಿಸಿಕೊಳ್ಳಿ. ನಿಮ್ಮ ಮನಸ್ಸಿಗೆ ಹಿಡಿಸಿದ ವಿಷಯ ಯಾವುದು? ‘ನಾನು ಕೇಳಿದ ಪ್ರಶ್ನೆಗಳಿಗೆಲ್ಲಾ ಸಾಕ್ಷಿಗಳು ಬೈಬಲಿನಲ್ಲಿ ಉತ್ತರ ತೋರಿಸಿಕೊಟ್ಟರು’ ಎಂದು ಅನೇಕರು ಹೇಳುತ್ತಾರೆ. ದೇವರು ಭೂಮಿಯನ್ನು ಸೃಷ್ಟಿಸಿದ್ದರ ಉದ್ದೇಶವೇನು, ಸತ್ತ ಮೇಲೆ ಏನಾಗುತ್ತದೆ, ನಮ್ಮನ್ನು ಅಗಲಿದ ಪ್ರಿಯರಿಗೆ ಯಾವ ನಿರೀಕ್ಷೆಯಿದೆ ಎಂದೆಲ್ಲ ತಿಳಿದಾಗ ನೀವು ಹರ್ಷಿಸಿರುವುದು ಖಂಡಿತ.

2. ನೀವು ಬೈಬಲನ್ನು ಗೌರವಿಸಲು ಕೆಲವು ಕಾರಣಗಳೇನು?

2 ಹೆಚ್ಚು ಕಲಿಯುತ್ತಾ ಹೋದಂತೆ ಜೀವನ, ಮರಣ ಮತ್ತು ಭವಿಷ್ಯದ ಕುರಿತ ಪ್ರಶ್ನೆಗಳಿಗೆ ಬೈಬಲ್‌ ಉತ್ತರ ಕೊಡುತ್ತದಲ್ಲದೆ ಇನ್ನೂ ಬಹಳ ವಿಷಯಗಳನ್ನು ಕಲಿಸುತ್ತದೆಂದು ನಾವು ತಿಳಿದೆವು. ಹಾಗಾಗಿ ಅದು ಜಗತ್ತಿನಲ್ಲೇ ಅತಿ ಉಪಯುಕ್ತ ಪುಸ್ತಕ ಎಂಬ ಗೌರವ ನಮ್ಮಲ್ಲಿ ಹುಟ್ಟಿತು. ಅದರಲ್ಲಿರುವ ಸಲಹೆಗಳಿಗೆ ಕಾಲಘಟ್ಟದ ಗಡಿರೇಖೆಗಳಿಲ್ಲ. ಅವನ್ನು ಜಾಗ್ರತೆಯಿಂದ ಪಾಲಿಸಿದರೆ ಬಾಳಿನಲ್ಲಿ ಯಶಸ್ಸು, ಸಂತೋಷ ನಿಶ್ಚಯ. (ಕೀರ್ತನೆ 1:1-3 ಓದಿ.) ಹೌದು, ಸತ್ಯ ಕ್ರೈಸ್ತರು ಬೈಬಲನ್ನು “ಮನುಷ್ಯರ ವಾಕ್ಯವೆಂದು ಎಣಿಸದೆ, ಅದು ನಿಜವಾಗಿಯೂ ಆಗಿರುವಂತೆ, ದೇವರ ವಾಕ್ಯವೆಂದು” ಯಾವಾಗಲೂ ಅಂಗೀಕರಿಸಿದ್ದಾರೆ. (1 ಥೆಸ. 2:13) ಇತಿಹಾಸವನ್ನು ಒಮ್ಮೆ ಕೆದಕುವಲ್ಲಿ ಬೈಬಲನ್ನು ಗೌರವಿಸುವ ಮತ್ತು ಗೌರವಿಸದವರ ಮಧ್ಯೆಯಿರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಯುತ್ತೇವೆ.

ಕಷ್ಟಕರ ವಿವಾದ ಇತ್ಯರ್ಥವಾಯಿತು

3. ಯಾವ ವಿವಾದ ಒಂದನೇ ಶತಮಾನದ ಕ್ರೈಸ್ತ ಸಭೆಯ ಐಕ್ಯವನ್ನು ಅಪಾಯಕ್ಕೊಡ್ಡಿತು? ಅದನ್ನು ಬಗೆಹರಿಸುವುದು ಏಕೆ ಕಷ್ಟವಾಗಿತ್ತು?

3 ಸುನ್ನತಿ ಹೊಂದದ ಅನ್ಯನಾದ ಕೊರ್ನೇಲ್ಯನು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟು 13 ವರ್ಷಗಳು ಕಳೆದಿದ್ದವು. ಈ ಮಧ್ಯೆ ಅನೇಕ ಅನ್ಯ ಜನರು ಕ್ರೈಸ್ತ ನಂಬಿಕೆಯನ್ನು ಸ್ವೀಕರಿಸಿದ್ದರು. ಆ ಸಮಯಾವಧಿಯಲ್ಲಿ ಎದ್ದ ಒಂದು ಪ್ರಶ್ನೆ ಕ್ರೈಸ್ತ ಸಭೆಯ ಐಕ್ಯಕ್ಕೆ ಮುಳ್ಳಾಗಿತ್ತು. ಅದೇನೆಂದರೆ ಅನ್ಯ ಜನಾಂಗದಿಂದ ಬಂದ ಪುರುಷರು ದೀಕ್ಷಾಸ್ನಾನಕ್ಕೆ ಮುಂಚೆ ಯೆಹೂದಿ ಪದ್ಧತಿಯ ಪ್ರಕಾರ ಸುನ್ನತಿ ಮಾಡಿಸಿಕೊಳ್ಳಬೇಕಾ? ಯೆಹೂದಿ ಹಿನ್ನೆಲೆ ಇರುವ ಒಬ್ಬನಿಗೆ ಈ ಪ್ರಶ್ನೆಯನ್ನು ಉತ್ತರಿಸುವುದು ತೀರ ಕಷ್ಟವಾಗಿತ್ತು. ಏಕೆಂದರೆ ಧರ್ಮಶಾಸ್ತ್ರದ ನೇಮನಿಷ್ಠೆಗಳಿಗೆ ಅಂಟಿಕೊಂಡಿದ್ದ ಯೆಹೂದ್ಯರು ಅನ್ಯಜನರ ಮನೆಗೆ ಕಾಲಿಡುತ್ತಿರಲಿಲ್ಲ. ಹೀಗಿರುವಾಗ ಅವರೊಂದಿಗೆ ಸ್ನೇಹಭಾವದಿಂದ ಮಾತಾಡುವುದು ದೂರದ ಸಂಗತಿಯಾಗಿತ್ತು. ಮಾತ್ರವಲ್ಲ ಯೆಹೂದಿ ಧರ್ಮವನ್ನು ಬಿಟ್ಟು ಕ್ರೈಸ್ತರಾದವರು ಈಗಾಗಲೇ ತೀವ್ರ ಹಿಂಸೆಯನ್ನು ಎದುರಿಸುತ್ತಿದ್ದರು. ಇಂಥದರಲ್ಲಿ ಸುನ್ನತಿ ಮಾಡಿಕೊಳ್ಳದ ಅನ್ಯರನ್ನು ಸಹೋದರರಂತೆ ಸೇರಿಸಿಕೊಂಡರೆ ಕ್ರೈಸ್ತರ ಸನ್ನಿವೇಶ ಇನ್ನೂ ಬಿಗಡಾಯಿಸುತ್ತಿತ್ತು. ಇದು ಯೆಹೂದಿ ಧರ್ಮದವರ ಮತ್ತು ಕ್ರೈಸ್ತರ ಮಧ್ಯೆ ಅಂತರವನ್ನು ಇನ್ನಷ್ಟು ಹೆಚ್ಚಿಸಿ, ಕ್ರೈಸ್ತರನ್ನು ಮತ್ತಷ್ಟು ನಿಂದೆಗೆ ಗುರಿಮಾಡುತ್ತಿತ್ತು.—ಗಲಾ. 2:11-14.

4. ವಿವಾದವನ್ನು ಇತ್ಯರ್ಥಗೊಳಿಸಲು ಯಾರು ಕೂಡಿಬಂದರು? ಈ ಸಂಬಂಧದಲ್ಲಿ ಯಾವ ಪ್ರಶ್ನೆಗಳು ಎದ್ದಿರಸಾಧ್ಯವಿತ್ತು?

4 ಸುನ್ನತಿಯ “ವಿಷಯದ ಕುರಿತು ಚರ್ಚಿಸಲಿಕ್ಕಾಗಿ” ಕ್ರಿ.ಶ. 49ರಲ್ಲಿ ಅಪೊಸ್ತಲರೂ ಹಿರೀಪುರುಷರೂ ಯೆರೂಸಲೇಮಿನಲ್ಲಿ ಕೂಡಿಬಂದರು. ಸ್ವತಃ ಇವರು ಸುನ್ನತಿಯಾಗಿದ್ದ ಯೆಹೂದ್ಯರಾಗಿದ್ದರು. (ಅ. ಕಾ. 15:6) ಆ ಕೂಟದಲ್ಲಿ ಹುರುಳಿಲ್ಲದ ವ್ಯರ್ಥ ವಾಗ್ವಾದ ನಡೆಯಲಿಲ್ಲ. ಶಾಸ್ತ್ರಗ್ರಂಥ ಏನು ಹೇಳುತ್ತದೆ ಎಂಬುದರ ಕುರಿತು ಆಸಕ್ತಿಕರ ಚರ್ಚೆ ನಡೆಯಿತು. ಕೂಡಿ ಬಂದಿದ್ದ ಜವಾಬ್ದಾರಿಯುತ ಪುರುಷರೆಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಂದಿಟ್ಟರು. ಅಲ್ಲಿ ವೈಯಕ್ತಿಕ ಅಭಿಪ್ರಾಯ ಅಥವಾ ಪೂರ್ವಗ್ರಹ ಮೇಲುಗೈ ಸಾಧಿಸಿತಾ? ಅಥವಾ ಕ್ರೈಸ್ತರ ವಿರುದ್ಧ ಎದ್ದಿದ್ದ ಧಾರ್ಮಿಕ ಉದ್ವಿಗ್ನ ಪರಿಸ್ಥಿತಿ ತಣ್ಣಗಾಗುವ ವರೆಗೆ ಅಂತಿಮ ತೀರ್ಮಾನವನ್ನು ಮುಂದೂಡಲಾಯಿತಾ? ಅಥವಾ ಸರಿ ಎಂದು ಅನಿಸದಿದ್ದರೂ ವಿವಾದವನ್ನು ಇತ್ಯರ್ಥ ಮಾಡಲಿಕ್ಕಾಗಿ ಹೇಗೋ ಏನೋ ಒಂದು ಒಪ್ಪಂದಕ್ಕೆ ಬಂದುಬಿಡಲಾಯಿತಾ?

5. ಕ್ರಿ.ಶ. 49ರಲ್ಲಿ ಯೆರೂಸಲೇಮಿನಲ್ಲಿ ನಡೆದ ಕೂಟವು ಯಾವ ಪ್ರಾಮುಖ್ಯ ವಿಧಗಳಲ್ಲಿ ಚರ್ಚ್‌ ಕೌನ್ಸಿಲ್‌ಗಳಿಗಿಂತ ಭಿನ್ನವಾಗಿತ್ತು?

5 ಚರ್ಚ್‌ ಕೌನ್ಸಿಲ್‌ಗಳಲ್ಲಿ (ಸಮಾಲೋಚನಾ ಸಭೆಗಳಲ್ಲಿ) ಮುಖಂಡರು ತಮಗೆ ಇಷ್ಟವಿಲ್ಲದಿದ್ದರೂ ಸಭೆ ಮುಗಿಸಿಬಿಡುವ ಸಲುವಾಗಿ ಇತರರ ಅಭಿಪ್ರಾಯಕ್ಕೆ ತಲೆಯಾಡಿಸುವುದು ಅಥವಾ ಬಹುಮತ ಪಡೆಯಲು ಕುಯುಕ್ತಿಯ ಯತ್ನ ಮಾಡುವುದು ಸರ್ವೇಸಾಮಾನ್ಯ. ಆದರೆ ಯೆರೂಸಲೇಮಿನ ಕೂಟದಲ್ಲಿ ಇಂಥ ಯಾವುದೇ ರಾಜಿಸಂಧಾನವಾಗಲಿ ಬಹುಮತ ಪಡೆಯುವ ಯತ್ನವಾಗಲಿ ಇರಲಿಲ್ಲ. ಬದಲಾಗಿ ಕೂಡಿಬಂದವರೆಲ್ಲರೂ ಒಮ್ಮತದ ನಿರ್ಣಯಕ್ಕೆ ಬಂದರು. ಇದು ಹೇಗೆ ಸಾಧ್ಯವಾಯಿತು? ಪ್ರತಿಯೊಬ್ಬರಿಗೆ ಬೇರೆ ಬೇರೆ ಅಭಿಪ್ರಾಯವಿತ್ತಾದರೂ ಅವರೆಲ್ಲರೂ ದೇವರ ವಾಕ್ಯವನ್ನು ಗೌರವಿಸುತ್ತಿದ್ದರು. ಆದುದರಿಂದ ಅದನ್ನು ಉಪಯೋಗಿಸಿ ಅವರು ಒಮ್ಮತದ ನಿರ್ಣಯಕ್ಕೆ ಬಂದರು.—ಕೀರ್ತನೆ 119:97-101 ಓದಿ.

6, 7. ಸುನ್ನತಿಯ ವಿಷಯದಲ್ಲೆದ್ದ ವಿವಾದವನ್ನು ಬಗೆಹರಿಸಲು ಶಾಸ್ತ್ರಗ್ರಂಥವನ್ನು ಹೇಗೆ ಬಳಸಲಾಯಿತು?

6 ಆ ನಿರ್ಣಯ ಮಾಡಲು ಅವರಿಗೆ ಸಹಾಯ ಮಾಡಿದ್ದು ಆಮೋಸ 9:11, 12ರ ಮಾತುಗಳು. ಅಪೊಸ್ತಲರ ಕಾರ್ಯಗಳು 15:16, 17ರಲ್ಲಿ ಉಲ್ಲೇಖಿಸಿರುವ ಆ ಮಾತುಗಳು ಹೀಗಿವೆ: “ನಾನು ಹಿಂದಿರುಗಿ ಬಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಪುನಃ ಕಟ್ಟುವೆನು; ಅದರಲ್ಲಿ ಹಾಳಾಗಿರುವುದನ್ನು ಕಟ್ಟಿ ಅದನ್ನು ಪುನಃ ನೆಟ್ಟಗೆ ನಿಲ್ಲಿಸುವೆನು. ಹೀಗೆ ಈ ಮನುಷ್ಯರಲ್ಲಿ ಉಳಿದವರು ನನ್ನ ಹೆಸರಿನಿಂದ ಕರೆಯಲ್ಪಡುವ ಜನರೊಂದಿಗೆ ಅಂದರೆ ಎಲ್ಲ ಜನಾಂಗಗಳ ಜನರೊಂದಿಗೆ ಸೇರಿ ಯೆಹೋವನನ್ನು ಅತ್ಯಾಸಕ್ತಿಯಿಂದ ಹುಡುಕುವರು ಎಂದು ಇದನ್ನೆಲ್ಲ ನಡಿಸುತ್ತಿರುವ ಯೆಹೋವನು ನುಡಿಯುತ್ತಾನೆ.”

7 ‘ಈ ವಚನದಲ್ಲಿ ಕ್ರೈಸ್ತರಾಗುವ ಅನ್ಯಜನರು ಸುನ್ನತಿ ಮಾಡಿಕೊಳ್ಳುವ ಅಗತ್ಯವಿಲ್ಲವೆಂದು ಹೇಳಲಿಲ್ಲ’ ಎಂಬುದಾಗಿ ಕೆಲವರು ಆಕ್ಷೇಪವೆತ್ತಬಹುದು. ಅದು ನಿಜ, ಹಾಗೆ ಹೇಳಲಾಗಿಲ್ಲ. ಆದರೆ ಯೆಹೂದಿ ಕ್ರೈಸ್ತರು ಆ ವಚನದಿಂದ ಅನ್ಯಜನರು ಸುನ್ನತಿ ಮಾಡಿಕೊಳ್ಳುವ ಅಗತ್ಯವಿಲ್ಲವೆಂದು ಅರ್ಥಮಾಡಿಕೊಂಡರು. ಏಕೆಂದರೆ ಸುನ್ನತಿ ಹೊಂದಿದ್ದ ಅನ್ಯರನ್ನು ಈಗಾಗಲೇ ಯೆಹೂದಿ ಕ್ರೈಸ್ತರು ಜನಾಂಗಗಳ ಜನರೆಂದಲ್ಲ’ ಸಹೋದರರೆಂದು ಪರಿಗಣಿಸುತ್ತಿದ್ದರು. (ವಿಮೋ. 12:48, 49) ಉದಾಹರಣೆಗೆ ಸೆಪ್ಟ್ಯುಅಜಿಂಟ್‌ನ ಬ್ಯಾಗ್ಸ್ಟರ್ಸ್‌ ಭಾಷಾಂತರವು ಎಸ್ತೇರಳು 8:17ರಲ್ಲಿ, “ಅನೇಕ ಮಂದಿ ಅನ್ಯಜನರು ಸುನ್ನತಿ ಮಾಡಿಸಿಕೊಂಡು ಯೆಹೂದ್ಯರಾದರು” ಎಂದು ಹೇಳುತ್ತದೆ. ಆದ್ದರಿಂದ ಶಾಸ್ತ್ರವಚನವು ಮನುಷ್ಯರಲ್ಲಿ ಉಳಿದವರು (ಯೆಹೂದ್ಯರು ಮತ್ತು ಸುನ್ನತಿಯಾದ ಯೆಹೂದಿ ಮತಾವಲಂಬಿಗಳು) “ಎಲ್ಲ ಜನಾಂಗಗಳ ಜನರೊಂದಿಗೆ” (ಸುನ್ನತಿಯಾಗದ ಅನ್ಯಜನರೊಂದಿಗೆ) ಸೇರಿ ದೇವರ ಹೆಸರಿಗಾಗಿರುವ ಒಂದೇ ಜನಾಂಗವಾಗುವರು ಎಂದು ಹೇಳುವಾಗ ಕ್ರೈಸ್ತರಾಗಲು ಬಯಸುವ ಅನ್ಯಜನಾಂಗದವರು ಸುನ್ನತಿಯಾಗುವ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಯಿತು.

8. ಸುನ್ನತಿಯ ವಿಷಯದಲ್ಲಿ ನಿರ್ಣಯಕ್ಕೆ ಬರಲು ಮತ್ತು ಅದನ್ನು ಬೆಂಬಲಿಸಲು ಯೆಹೂದಿ ಕ್ರೈಸ್ತರಿಗೆ ಏಕೆ ಧೈರ್ಯ ಬೇಕಿತ್ತು?

8 ಸುನ್ನತಿಯ ವಿಷಯದಲ್ಲಿ ‘ಒಮ್ಮತದ’ ತೀರ್ಮಾನಕ್ಕೆ ಬರಲು ಅಪೊಸ್ತಲರಿಗೂ ಹಿರೀಪುರುಷರಿಗೂ ದೇವರ ವಾಕ್ಯ ಮತ್ತು ಪವಿತ್ರಾತ್ಮ ಸಹಾಯಮಾಡಿತು. (ಅ. ಕಾ. 15:25) ಈ ಬೈಬಲಾಧರಿತ ನಿರ್ಣಯವು ಯೆಹೂದಿ ಕ್ರೈಸ್ತರಿಗೆ ಮತ್ತಷ್ಟು ಹಿಂಸೆಯನ್ನು ತರಸಾಧ್ಯವಿತ್ತಾದರೂ ನಂಬಿಗಸ್ತ ಕ್ರೈಸ್ತರೆಲ್ಲರೂ ಅದನ್ನು ಧೈರ್ಯದಿಂದ ಬೆಂಬಲಿಸಿದರು.—ಅ. ಕಾ. 16:4, 5.

ವ್ಯತ್ಯಾಸ ಬೆಳಕಿಗೆ ಬಂತು

9. ಸತ್ಯಾರಾಧನೆ ಕಲುಷಿತಗೊಳ್ಳಲು ಒಂದು ಮುಖ್ಯ ಕಾರಣವೇನು? ಕ್ರೈಸ್ತ ಬೋಧನೆಯ ಯಾವ ಪ್ರಮುಖ ನಂಬಿಕೆ ತಿರುಚಲ್ಪಟ್ಟಿತು?

9 ಅಪೊಸ್ತಲರ ಮರಣಾನಂತರ ಸುಳ್ಳು ಬೋಧನೆಗಳು ಕ್ರೈಸ್ತ ನಂಬಿಕೆಯನ್ನು ಕಲುಷಿತಗೊಳಿಸುವವು ಎಂದು ಅಪೊಸ್ತಲ ಪೌಲ ಮುಂತಿಳಿಸಿದ್ದನು. (2 ಥೆಸಲೊನೀಕ 2:3, 7 ಓದಿ.) ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವರು ಸಹ “ಸ್ವಸ್ಥಬೋಧನೆಯನ್ನು” ತಿರಸ್ಕರಿಸಲಿದ್ದರು. (2 ತಿಮೊ. 4:3) ಪೌಲ ತನ್ನ ದಿನದಲ್ಲಿದ್ದ ಹಿರಿಯರಿಗೆ ಈ ಎಚ್ಚರಿಕೆ ನೀಡಿದ್ದನು: “ನಿಮ್ಮೊಳಗಿಂದಲೇ ಕೆಲವರು ಎದ್ದು ವಕ್ರವಾದ ವಿಷಯಗಳನ್ನು ಮಾತಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವರು.” (ಅ. ಕಾ. 20:30) ಸುಳ್ಳು ಬೋಧನೆಗಳು ಒಳನುಸುಳಲು ಒಂದು ಮುಖ್ಯ ಕಾರಣವನ್ನು ದ ನ್ಯೂ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ ವಿವರಿಸುತ್ತದೆ: “ಗ್ರೀಕ್‌ ತತ್ವಜ್ಞಾನವನ್ನು ಕಲಿತ ಕ್ರೈಸ್ತರು ಆ ತತ್ವಜ್ಞಾನವನ್ನು ಉಪಯೋಗಿಸಿ ಕ್ರೈಸ್ತ ನಂಬಿಕೆಯನ್ನು ವಿವರಿಸತೊಡಗಿದರು. ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುವ ಬಯಕೆ ಅವರಿಗಿತ್ತು. ಮಾತ್ರವಲ್ಲ ಅನ್ಯಜಾತಿಯ ವಿದ್ಯಾವಂತರನ್ನು ಕ್ರೈಸ್ತರನ್ನಾಗಿ ಮತಾಂತರಿಸಲು ಇದು ಸಹಾಯ ಮಾಡುವುದೆಂದು ಅವರು ನೆನಸಿದರು.” ಸುಳ್ಳು ಬೋಧನೆಯ ಮೂಲಕ ಅವರು ಒಂದು ಪ್ರಮುಖ ಕ್ರೈಸ್ತ ಬೋಧನೆಯನ್ನೇ ತಿರುಚಿದರು. ಅದು ಯಾವುದೆಂದರೆ ‘ಯೇಸು ಕ್ರಿಸ್ತನು ಯಾರು’ ಎಂಬ ವಿಚಾರವಾಗಿತ್ತು. ಬೈಬಲ್‌ ಯೇಸುವನ್ನು ದೇವರ ಮಗನೆಂದು ಹೇಳುತ್ತದೆ. ಆದರೆ ಗ್ರೀಕ್‌ ತತ್ವಜ್ಞಾನ ಪ್ರೇಮಿಗಳು ಯೇಸುವೇ ದೇವರೆಂದು ವಾದಿಸಿದರು.

10. ಯೇಸು ಕ್ರಿಸ್ತನು ಯಾರು ಎಂಬ ಪ್ರಶ್ನೆಯನ್ನು ಯಾವುದರ ಸಹಾಯದಿಂದ ಬಗೆಹರಿಸಬಹುದಿತ್ತು?

10 ಅನಂತರ ಆ ಪ್ರಶ್ನೆ ಅನೇಕ ಚರ್ಚ್‌ ಕೌನ್ಸಿಲ್‌ಗಳಲ್ಲಿ ಚರ್ಚಾ ವಿಷಯವಾಯಿತು. ಸಮಾಲೋಚನೆಗೆ ಕೂಡಿಬಂದವರು ದೇವರ ವಾಕ್ಯಕ್ಕೆ ಮಹತ್ವ ಕೊಡುತ್ತಿದ್ದಲ್ಲಿ ಉತ್ತರ ಪಡೆಯುವುದು ಸುಲಭವಾಗುತ್ತಿತ್ತು. ಆದರೆ ಅವರಲ್ಲಿ ಹೆಚ್ಚಿನವರು ಬೈಬಲನ್ನು ಮೂಲೆಗೊತ್ತಿದರು. ಅಧಿಕಾಂಶ ಮಂದಿ ಸಮಾಲೋಚನೆಗೆ ಬರುವ ಮುನ್ನವೇ ತೀರ್ಮಾನ ತಳೆದಿದ್ದರು. ಹಾಗಾಗಿ ತಮ್ಮ ನಿಲುವನ್ನು ಬದಲಾಯಿಸುವ ಮನಸ್ಸು ಅವರಿಗಿರಲಿಲ್ಲ. ಅವರ ಅಂತಿಮ ತೀರ್ಮಾನದಲ್ಲಿ ದೇವರ ವಾಕ್ಯವಾದ ಬೈಬಲ್‌ ಬಗ್ಗೆ ಪ್ರಸ್ತಾಪವೇ ಇರಲಿಲ್ಲ.

11. ಚರ್ಚ್‌ ಮುಖಂಡರು ಯಾವುದಕ್ಕೆ ಹೆಚ್ಚು ಮನ್ನಣೆ ನೀಡಿದರು? ಏಕೆ?

11 ಚರ್ಚ್‌ ಮುಖಂಡರು ದೇವರ ವಾಕ್ಯವನ್ನು ಏಕೆ ಅಮೂಲಾಗ್ರವಾಗಿ ಪರಿಶೀಲಿಸಲಿಲ್ಲ? ಉತ್ತರವು ಸಾಹಿತಿ ಚಾಲ್ಸ್‌ ಫ್ರಿಮನ್‌ರ ಮಾತುಗಳಲ್ಲಿದೆ. ಯೇಸುವನ್ನು ದೇವರೆಂದು ನಂಬಿದವರಿಗೆ “ತಂದೆ ನನಗಿಂತ ದೊಡ್ಡವನು ಎಂದು ಯೇಸು ಹೇಳಿದ ಮಾತುಗಳನ್ನು ಅಲ್ಲಗಳೆಯಲು ಆಗಲಿಲ್ಲ.” ಹಾಗಾಗಿ ಸುವಾರ್ತಾ ಪುಸ್ತಕಗಳಿಗೆ ಮನ್ನಣೆ ಕೊಡಲು ಹೋಗದೆ ಚರ್ಚ್‌ ಸಂಪ್ರದಾಯಕ್ಕೂ ಚರ್ಚ್‌ ಅಧಿಕಾರಿಗಳ ಅಭಿಪ್ರಾಯಗಳಿಗೂ ಹೆಚ್ಚು ಮನ್ನಣೆ ನೀಡಿದರು. ಇಂದು ಸಹ ಚರ್ಚ್‌ ಮುಖಂಡರಿಗೆ ಮೇಲಿನ ಸ್ಥಾನದಲ್ಲಿರುವ ಚರ್ಚ್‌ ಪಾದ್ರಿಗಳ ಮಾತೇ ವೇದವಾಕ್ಯ. ದೇವರ ವಾಕ್ಯಕ್ಕಿಂತ ಅದು ಹೆಚ್ಚು ಪ್ರಾಮುಖ್ಯವೆಂದು ನೆನಸುತ್ತಾರೆ! ನೀವೆಂದಾದರೂ ತ್ರಯೈಕ್ಯದ ಕುರಿತು ಚರ್ಚ್‌ ಸೆಮಿನೆರಿಗಳಿಗೆ ಹೋಗಿಬಂದವರ ಬಳಿ ಮಾತಾಡಿರುವಲ್ಲಿ ಅದು ನಿಮ್ಮ ಗಮನಕ್ಕೂ ಬಂದಿರಬಹುದು.

12. ಚರ್ಚಿನ ಮೇಲೆ ಚಕ್ರವರ್ತಿ ಯಾವ ಪ್ರಭಾವ ಬೀರಿದನು?

12 ಚರ್ಚ್‌ ಕೌನ್ಸಿಲ್‌ಗಳಲ್ಲಿ ರೋಮ್‌ನ ಚಕ್ರವರ್ತಿಗಳ ಪ್ರಭಾವವೂ ಬಹಳಷ್ಟಿತ್ತು. ನೈಸೀಯ ನಗರದಲ್ಲಿ ನಡೆದ ಚರ್ಚ್‌ ಕೌನ್ಸಿಲ್‌ನ ಬಗ್ಗೆ ಪ್ರೊಫೆಸರ್‌ ರಿಚರ್ಡ್‌ ಇ ರೂಬನ್‌ಸ್ಟೈನ್‌ರವರು ಬರೆದದ್ದೇನೆಂದರೆ, “[ಚರ್ಚ್‌ ಬಿಷಪ್ಪರುಗಳು] ಕನಸುಮನಸ್ಸಲ್ಲೂ ನೆನಸಿರದಷ್ಟು ಸ್ಥಾನಮಾನ, ಧನೈಶ್ವರ್ಯಗಳನ್ನು ಹೊಸ ಚರ್ಕವರ್ತಿಯಾದ ಕಾನ್‌ಸ್ಟೆಂಟೀನ್‌ ಅವರಿಗೆ ಕೊಟ್ಟನು. ಅವರಿಂದ ವಶಪಡಿಸಿಕೊಳ್ಳಲಾಗಿದ್ದ ಚರ್ಚ್‌ಗಳನ್ನು ಅವನು ವರ್ಷದೊಳಗೆ ಹಿಂದಿರುಗಿಸಿ ಹಾಳಾದದ್ದನ್ನು ಪುನಃ ಕಟ್ಟಿಸಿಕೊಟ್ಟನು. ಅವರ ನೌಕರಿಗಳನ್ನು ಹಿಂದೆ ಕೊಟ್ಟು ಮತ್ತೆ ಗೌರವಾನ್ವಿತ ಸ್ಥಾನಕ್ಕೇರಿಸಿದನು. . . . ಈ ಮುಂಚೆ ವಿಧರ್ಮಿ ಅರ್ಚಕರಿಗಿದ್ದ ವಿಶೇಷ ಸ್ಥಾನಮಾನ, ಸೌಲಭ್ಯಗಳನ್ನು ಈಗ ಪಾದ್ರಿಗಳಿಗೆ ಒದಗಿಸಿ ಕೊಟ್ಟನು.” ಹೀಗೆಲ್ಲಾ ಮಾಡಿದ್ದರಿಂದ “ನೈಸೀಯದ ಕೌನ್ಸಿಲ್‌ ತೆಗೆದುಕೊಂಡ ನಿರ್ಣಯಗಳ ಮೇಲೆ ಕಾನ್‌ಸ್ಟೆಂಟೀನ್‌ ತುಂಬ ಪ್ರಭಾವ ಬೀರಶಕ್ತನಾದನು. ಎಷ್ಟೆಂದರೆ ಅಂತಿಮ ತೀರ್ಮಾನ ತನ್ನ ಇಚ್ಛೆಯ ಪ್ರಕಾರವೇ ಇರುವಂತೆ ಮಾಡಶಕ್ತನಾಗಿದ್ದನು.” ಈ ಮಾತುಗಳನ್ನು ಚಾಲ್ಸ್‌ ಫ್ರಿಮನ್‌ರ ಹೇಳಿಕೆ ಪುಷ್ಟೀಕರಿಸುತ್ತದೆ: “ಚರ್ಚ್‌ ಹೆಚ್ಚೆಚ್ಚು ಅಧಿಕಾರಗಳನ್ನು ಚಕ್ರವರ್ತಿಯಿಂದ ಪಡೆದುಕೊಂಡಂತೆ ಅದು ಅವನ ಕೈಗೊಂಬೆಯಾಯಿತು. ಹೀಗೆ ಅದರ ಬೋಧನೆಗಳ ಮೇಲೂ ಅವನು ತನ್ನ ಪ್ರಭಾವ ಬೀರಿದನು.”—ಯಾಕೋಬ 4:4 ಓದಿ.

13. ಚರ್ಚ್‌ ಮುಖಂಡರು ಬೈಬಲಿನಲ್ಲಿ ಸ್ಪಷ್ಟವಾಗಿದ್ದ ಸತ್ಯಗಳನ್ನು ಏಕೆ ಅಂಗೀಕರಿಸಲಿಲ್ಲ?

13 ಯೇಸು ಕ್ರಿಸ್ತನನ್ನು ದೇವರ ಮಗನೆಂದು ಅಂಗೀಕರಿಸಲು ಚರ್ಚ್‌ ಮುಖಂಡರಿಗೆ ಕಷ್ಟವಾಗಿತ್ತಾದರೂ ಬಹುಪಾಲು ಜನಸಾಮಾನ್ಯರಿಗೆ ಕಷ್ಟವಾಗಿರಲಿಲ್ಲ. ಏಕೆಂದರೆ ಚಕ್ರವರ್ತಿಯ ಹಣದಿಂದ ಜೇಬು ತುಂಬಿಸಿಕೊಳ್ಳುವ ಚಪಲವಾಗಲಿ ಚರ್ಚ್‌ಗಳಲ್ಲಿ ದೊಡ್ಡ ಹುದ್ದೆ ಗಿಟ್ಟಿಸಿಕೊಳ್ಳುವ ಆಕಾಂಕ್ಷೆಯಾಗಲಿ ಅವರಿಗೆ ಇರಲಿಲ್ಲ. ಬೈಬಲ್‌ ತಿಳಿಸುವ ಸತ್ಯವನ್ನು ಅವರು ಅರ್ಥಮಾಡಿಕೊಂಡು ಅಂಗೀಕರಿಸಿದರು. ಆದರೆ ಇದು ಚರ್ಚ್‌ ಮುಖಂಡರಿಗೆ ಹಿಡಿಸಲಿಲ್ಲ. ಹಾಗಾಗಿ ಆ ಸಮಯದಲ್ಲಿದ್ದ ನೈಸಾದ ಗ್ರೆಗರಿ ಎಂಬ ದೇವತಾಶಾಸ್ತ್ರಜ್ಞ ಜನಸಾಮಾನ್ಯರ ಬಗ್ಗೆ ವ್ಯಂಗ್ಯವಾಗಿ ಹೀಗಂದನು: “ಜವಳಿ ಮಾರಾಟಗಾರರು, ಹಣವಿನಿಮಯಗಾರರು, ಕಿರಾಣಿ ವ್ಯಾಪಾರಿಗಳು ಇವರೆಲ್ಲರೂ ದೇವತಾಶಾಸ್ತ್ರಜ್ಞರಾಗಿ ಬಿಟ್ಟಿದ್ದಾರೆ. ನೀವೇನಾದರೂ ಹಣದ ಮೌಲ್ಯ ಕೇಳಿದರೆ ತತ್ವಜ್ಞಾನಿಗಳಂತೆ ತಂದೆ ಮಗ ಬೇರೆ ಬೇರೆ ಎಂದು ವಿವರಿಸುತ್ತಾರೆ. ರೊಟ್ಟಿಯ ಬೆಲೆ ಕೇಳಿದರೆ ತಂದೆ ಮಗನಿಗಿಂತ ದೊಡ್ಡವನು ಎಂದು ಉತ್ತರಿಸುತ್ತಾರೆ. ಸ್ನಾನಕ್ಕೆ ನೀರು ಸಿದ್ಧವಾಗಿದೆಯಾ ಎಂದು ಕೆಲಸದವನಿಗೆ ಕೇಳಿದರೆ ದೇವರು ಮಗನನ್ನು ಸೃಷ್ಟಿಸಿದ್ದಾನೆ ಎನ್ನುತ್ತಾನೆ.” ಹೌದು, ಸಾಮಾನ್ಯ ಜನರು ದೇವರ ವಾಕ್ಯದಿಂದ ಸತ್ಯವನ್ನು ವಿವರಿಸಲು ಶಕ್ತರಾಗಿದ್ದರು. ಆದರೆ ದೇವತಾಶಾಸ್ತ್ರಜ್ಞನಾದ ಗ್ರೆಗರಿಯಾಗಲಿ ಚರ್ಚ್‌ ಮುಖಂಡರಾಗಲಿ ಅದನ್ನು ಮಾಡಲಿಲ್ಲ. ಅವರು ಜನಸಾಮಾನ್ಯರು ಹೇಳುವುದನ್ನಾದರೂ ಸ್ವಲ್ಪ ಕೇಳಿದ್ದರೆ ಒಳ್ಳೇದಿತ್ತು!

“ಗೋದಿ” ಮತ್ತು “ಕಳೆ” ಒಟ್ಟಿಗೆ ಬೆಳೆಯಿತು

14. ಒಂದನೇ ಶತಮಾನದಿಂದ ಭೂಮಿ ಮೇಲೆ ಅಭಿಷಿಕ್ತ ಕ್ರೈಸ್ತರು ಯಾವಾಗಲೂ ಇದ್ದರೆಂದು ಹೇಳಲು ಕಾರಣವೇನು?

14 ಒಂದನೇ ಶತಮಾನದಿಂದ ಭೂಮಿ ಮೇಲೆ ಅಭಿಷಿಕ್ತ ಕ್ರೈಸ್ತರು ಇದ್ದೇ ಇರುತ್ತಾರೆ ಎಂದು ಯೇಸು ಒಂದು ದೃಷ್ಟಾಂತದಲ್ಲಿ ಸೂಚಿಸಿದನು. ಯೇಸು ಆ ಅಭಿಷಿಕ್ತರನ್ನು ‘ಕಳೆಗಳ’ ಮಧ್ಯೆ ಬೆಳೆಯುವ ‘ಗೋದಿಗೆ’ ಹೋಲಿಸಿದನು. (ಮತ್ತಾ. 13:30) ಯಾರು ಅಥವಾ ಯಾವ ಗುಂಪು ಅಭಿಷಿಕ್ತ ವರ್ಗಕ್ಕೆ ಸೇರಿತ್ತು ಎಂದು ಖಚಿತವಾಗಿ ಹೇಳಸಾಧ್ಯವಿಲ್ಲ. ಹಾಗಿದ್ದರೂ ದೇವರ ವಾಕ್ಯವನ್ನು ಧೈರ್ಯದಿಂದ ಸಮರ್ಥಿಸಿದ, ಚರ್ಚಿನ ಸುಳ್ಳು ಬೋಧನೆಗಳನ್ನು ಬಯಲಿಗೆಳೆದ ವ್ಯಕ್ತಿಗಳು ಯಾವಾಗಲೂ ಇದ್ದರು. ಕೆಲವರ ಉದಾಹರಣೆಗಳನ್ನು ನೋಡೋಣ.

15, 16. ದೇವರ ವಾಕ್ಯಕ್ಕೆ ಗೌರವ ತೋರಿಸಿದ ಕೆಲವರನ್ನು ಹೆಸರಿಸಿ.

15 ಫ್ರಾನ್ಸ್‌ನ ಲೀಯಾನ್‌ ನಗರದ ಆರ್ಚ್‌ಬಿಷಪ್‌ ಎಗೊಬಾರ್ಡ್‌ (ಕ್ರಿ.ಶ. 779-840) ವಿಗ್ರಹಾರಾಧನೆ, ಸಂತರಿಗಾಗಿ ಚರ್ಚ್‌ಗಳನ್ನು ಕಟ್ಟುವುದು, ಚರ್ಚ್‌ಗಳ ಅಶಾಸ್ತ್ರೀಯ ವಿಧಿಸೂತ್ರ ಮತ್ತು ಪದ್ಧತಿಗಳು ತಪ್ಪೆಂದು ಧೈರ್ಯದಿಂದ ಹೇಳಿದರು. ಅವರ ಸಮಯದಲ್ಲಿ ಜೀವಿಸಿದ್ದ ಬಿಷಪ್‌ ಕ್ಲೌಡಿಯಸ್‌ ಚರ್ಚ್‌ಗಳ ಸಂಪ್ರದಾಯ ಪದ್ಧತಿಗಳನ್ನು ತಿರಸ್ಕರಿಸಿದರು ಮತ್ತು ಸಂತರಿಗೆ ಪ್ರಾರ್ಥಿಸುವುದನ್ನು, ಮೃತ ದೇಹವನ್ನು ಸಂರಕ್ಷಿಸಿಟ್ಟು ಪೂಜಿಸುವುದನ್ನು ಆಕ್ಷೇಪಿಸಿದರು. 11ನೇ ಶತಮಾನದಲ್ಲಿ ಫ್ರಾನ್ಸ್‌ನ ಟೂರ್ಸ್‌ ನಗರದಲ್ಲಿ ಆರ್ಚ್‌ಡೀಕನ್‌ರಾಗಿದ್ದ ಬ್ರೆಗನ್‌ಗಾರಿಯಸ್‌ ಸತ್ವಪರಿವರ್ತನ ವಾದವನ್ನು (ಪ್ರಭುಭೋಜನ ಸಂಸ್ಕಾರದಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ನಿಜವಾಗಿ ಕ್ರಿಸ್ತನ ದೇಹ ಮತ್ತು ರಕ್ತವಾಗಿ ಪರಿವರ್ತನೆ ಹೊಂದುತ್ತವೆಂಬ ವಾದ) ನಿರಾಕರಿಸಿದ್ದಕ್ಕಾಗಿ ಚರ್ಚ್‌ನಿಂದ ಬಹಿಷ್ಕರಿಸಲ್ಪಟ್ಟರು. ಅವರು ಚರ್ಚ್‌ನ ಸಂಪ್ರದಾಯಗಳಿಗಿಂತ ಬೈಬಲ್‌ ಬೋಧನೆ ಮಹತ್ವವೆಂದು ಒತ್ತಿಹೇಳಿದರು.

16 ಹನ್ನೆರಡನೆ ಶತಮಾನದಲ್ಲಿ ಇನ್ನಿಬ್ಬರು ಬೈಬಲ್‌ ಪ್ರೇಮಿಗಳ ಆಗಮನವಾಯಿತು. ಒಬ್ಬರು ಬ್ರವೀ ನಗರದ ಪೀಟರ್‌, ಇನ್ನೊಬ್ಬರು ಲೊಸ್ಯಾನ್‌ ನಗರದ ಹೆನ್ರಿ. ಕ್ಯಾಥೊಲಿಕ್‌ ಬೋಧನೆಗಳಾದ ಬಾಲ್ಯಸ್ನಾನ, ಸತ್ವಪರಿವರ್ತನ ವಾದ, ಸತ್ತವರಿಗೆ ಪ್ರಾರ್ಥನೆ, ಶಿಲುಬೆ ಆರಾಧನೆ ಈ ಎಲ್ಲವು ಬೈಬಲ್‌ಗೆ ಹೊಂದಿಕೆಯಲ್ಲಿಲ್ಲ ಎಂದು ತಿಳಿದು ಪೀಟರ್‌ ತಮ್ಮ ಪಾದ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅವರನ್ನು ಕ್ರಿ.ಶ. 1140ರಲ್ಲಿ ಜೀವಂತವಾಗಿ ಸುಡಲಾಯಿತು. ಕ್ರೈಸ್ತ ಸನ್ಯಾಸಿಯಾಗಿದ್ದ ಹೆನ್ರಿ ಚರ್ಚ್‌ನಲ್ಲಿ ನಡೆಯುತ್ತಿದ್ದ ಭ್ರಷ್ಟ ಪದ್ಧತಿ ಮತ್ತು ಅಶಾಸ್ತ್ರೀಯ ಆರಾಧನಾವಿಧಿಗಳ ವಿರುದ್ಧ ಸ್ವರವೆತ್ತಿ ಖಂಡಿಸಿದರು. ಕ್ರಿ.ಶ. 1148ರಲ್ಲಿ ಅವರನ್ನು ಬಂಧಿಸಿ ಜೀವನಪರ್ಯಂತ ಸೆರೆಮನೆಯಲ್ಲಿ ಇಡಲಾಯಿತು.

17. ವಾಲ್ಡೊ ಮತ್ತವರ ಅನುಯಾಯಿಗಳು ಯಾವ ದಿಟ್ಟ ಹೆಜ್ಜೆಗಳನ್ನು ತಕ್ಕೊಂಡರು?

17 ಪೀಟರ್‌ರವರ ಕೊಲೆಯಾದ ಸರಿಸುಮಾರು ಸಮಯದಷ್ಟಕ್ಕೆ ಹುಟ್ಟಿದ ಇನ್ನೊಬ್ಬ ವ್ಯಕ್ತಿ ಬೈಬಲ್‌ ಸತ್ಯವನ್ನು ಹರಡಿಸುವುದರಲ್ಲಿ ತುಂಬ ಶ್ರಮಿಸಿದರು. ಅವರ ಉಪನಾಮ ವಾಲ್ಡಿಸ್‌ ಅಥವಾ ವಾಲ್ಡೊ. * ಇವರು ಪೀಟರ್‌ ಮತ್ತು ಹೆನ್ರಿಯಂತೆ ಧಾರ್ಮಿಕ ತರಬೇತಿಯನ್ನು ಪಡೆದಿರಲಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರು. ಆದರೂ ದೇವರ ವಾಕ್ಯದೆಡೆಗೆ ಆಳವಾದ ಗಣ್ಯತೆ ಇತ್ತು. ಎಷ್ಟೆಂದರೆ ಆಗ್ನೇಯ ಫ್ರಾನ್ಸ್‌ನ ಜನಸಾಮಾನ್ಯರ ಆಡು ಭಾಷೆಯಲ್ಲಿ ಬೈಬಲಿನ ಕೆಲವು ಭಾಗಗಳನ್ನು ಭಾಷಾಂತರಿಸಲು ತಮ್ಮ ಸ್ವತ್ತನ್ನು ಉಪಯೋಗಿಸಿದರು. ಬೈಬಲಿನ ಸಂದೇಶವನ್ನು ಮಾತೃಭಾಷೆಯಲ್ಲಿ ಕೇಳಿ ಕೆಲವರು ಎಷ್ಟು ಪುಳಕಿತರಾದರೆಂದರೆ ಅವರು ಸಹ ತಮ್ಮ ಸ್ವತ್ತನ್ನು ತ್ಯಾಗಮಾಡಿ ಬೈಬಲ್‌ ಸತ್ಯವನ್ನು ಸಾರಲು ಜೀವನವನ್ನು ಮುಡುಪಾಗಿಟ್ಟರು. ಇದು ಚರ್ಚ್‌ ಮುಖಂಡರಿಗೆ ನುಂಗಲಾರದ ತುತ್ತಾಯಿತು. ವಾಲ್ಡೆನ್‌ಸಿಸ್‌ ಎಂದು ಕರೆಯಲಾದ ಈ ಹುರುಪಿನ ಸ್ತ್ರೀಪುರುಷರ ಗುಂಪನ್ನು 1184ರಲ್ಲಿ ಪೋಪ್‌ ಬಹಿಷ್ಕರಿಸಿದರೆ ಬಿಷಪ್‌ ಊರಿನಿಂದಲೇ ಗಡಿಪಾರು ಮಾಡಿದರು. ಆದರೆ ಇದು ತಿರುಗುಬಾಣವಾಯಿತು. ಬೈಬಲ್‌ ಸಂದೇಶ ಇನ್ನಿತರ ಸ್ಥಳಗಳಲ್ಲೂ ಪಸರಿಸಲು ಸಹಾಯವಾಯಿತು. ವಾಲ್ಡೊ, ಪೀಟರ್‌, ಹೆನ್ರಿಯ ಅನುಯಾಯಿಗಳು ಹಾಗೂ ಚರ್ಚ್‌ನಿಂದ ಪ್ರತ್ಯೇಕಿಸಿಕೊಂಡ ಇನ್ನಿತರರು ಯೂರೋಪಿನಾದ್ಯಂತ ಹಬ್ಬಿಕೊಂಡರು. ಅನಂತರದ ಶತಮಾನಗಳಲ್ಲಿ ಬೈಬಲ್‌ ಸತ್ಯವನ್ನು ಧೈರ್ಯದಿಂದ ಸಮರ್ಥಿಸಿದವರೆಂದರೆ ಜಾನ್‌ ವಿಕ್ಲಿಫ್‌ (ಸುಮಾರು 1330-1384), ವಿಲ್ಯಮ್‌ ಟಿಂಡೆಲ್‌ (ಸುಮಾರು 1494-1536), ಹೆನ್ರಿ ಗ್ರೂ (1781-1862) ಮತ್ತು ಜಾರ್ಜ್‌ ಸ್ಟೋರ್ಸ್‌ (1796-1879).

ದೇವರ ವಾಕ್ಯಕ್ಕೆ ಬಂಧನವಿಲ್ಲ

18. ಹತ್ತೊಂಭತ್ತನೇ ಶತಮಾನದ ಬೈಬಲ್‌ ವಿದ್ಯಾರ್ಥಿಗಳ ಅಧ್ಯಯನ ರೀತಿ ಹೇಗಿತ್ತು? ಅದು ಪರಿಣಾಮಕಾರಿಯಾಗಿತ್ತು ಏಕೆ?

18 ಬೈಬಲ್‌ ವಿರೋಧಿಗಳು ಎಷ್ಟೇ ಪ್ರಯತ್ನಿಸಿದರೂ ಬೈಬಲ್‌ ಸತ್ಯದ ಹರಡುವಿಕೆಯನ್ನು ತಡೆಯಶಕ್ತರಾಗಲಿಲ್ಲ. ಏಕೆಂದರೆ “ದೇವರ ವಾಕ್ಯವು ಬಂಧನದಲ್ಲಿಲ್ಲ” ಎಂದು 2 ತಿಮೊಥೆಯ 2:9 ಹೇಳುತ್ತದೆ. 1870ರಲ್ಲಿ ಬೈಬಲ್‌ ವಿದ್ಯಾರ್ಥಿಗಳ ಒಂದು ಗುಂಪು ಶ್ರದ್ಧೆಯಿಂದ ಸತ್ಯಾನ್ವೇಷಣೆ ಮಾಡಲಾರಂಭಿಸಿತು. ಅವರ ಅಧ್ಯಯನ ರೀತಿ ಹೇಗಿತ್ತು? ಎಲ್ಲರೂ ಒಂದೆಡೆ ಕೂಡಿಬರುತ್ತಿದ್ದರು. ಒಬ್ಬರು ಒಂದು ಪ್ರಶ್ನೆ ಕೇಳುತ್ತಿದ್ದರು. ಆಗ ಎಲ್ಲರು ಆ ವಿಷಯಕ್ಕೆ ಸಂಬಂಧಪಟ್ಟ ಎಲ್ಲ ವಚನಗಳನ್ನು ತೆರೆದುನೋಡಿ ಚರ್ಚಿಸುತ್ತಿದ್ದರು. ಆ ಎಲ್ಲ ವಚನಗಳು ಒಂದೇ ಉತ್ತರದ ಕಡೆಗೆ ಕೈತೋರಿಸುತ್ತಿವೆ ಎಂದು ಅವರಿಗೆ ತೃಪ್ತಿಯಾದಾಗ ಆ ಉತ್ತರವನ್ನು ಬರೆದಿಡುತ್ತಿದ್ದರು. 19ನೇ ಶತಮಾನದ ನಮ್ಮ ಈ “ಆಧ್ಯಾತ್ಮಿಕ ಪಿತೃಗಳ” ಅಧ್ಯಯನ ರೀತಿ ಗಮನಿಸಿದಿರಾ? ಅವರು ಒಂದನೇ ಶತಮಾನದಲ್ಲಿದ್ದ ಅಪೊಸ್ತಲರು ಮತ್ತು ಹಿರೀಪುರುಷರ ಮಾದರಿಯನ್ನೇ ಅನುಸರಿಸಿದರು. ತಮ್ಮ ನಂಬಿಕೆ ಸಂಪೂರ್ಣವಾಗಿ ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿದೆ ಎಂದು ಖಚಿತಪಡಿಸಿಕೊಂಡರು. ಇದು ನಿಮ್ಮಲ್ಲಿ ಭರವಸೆ ತುಂಬಿಸುವುದಿಲ್ಲವೇ?

19. ಇಸವಿ 2012ರ ವರ್ಷವಚನ ಯಾವುದು? ಅದು ಸೂಕ್ತವೇಕೆ?

19 ನಮ್ಮ ನಂಬಿಕೆಗೆ ಸಹ ದೇವರ ವಾಕ್ಯವಾದ ಬೈಬಲ್‌ ಆಧಾರವಾಗಿದೆ. ಇದನ್ನು ಮನಸ್ಸಿನಲ್ಲಿಟ್ಟೇ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ಯೋಹಾನ 17:17ರಲ್ಲಿರುವ “ನಿನ್ನ ವಾಕ್ಯವೇ ಸತ್ಯ” ಎಂಬ ಯೇಸುವಿನ ದೃಢ ಭರವಸೆಯ ಮಾತುಗಳನ್ನು 2012ರ ವರ್ಷವಚನವಾಗಿ ಆರಿಸಿಕೊಂಡಿದೆ. ದೇವರ ಅನುಗ್ರಹ ಪಡೆಯಲಿಚ್ಛಿಸುವ ಪ್ರತಿಯೊಬ್ಬರು ದೇವರ ವಾಕ್ಯದ ಸತ್ಯಕ್ಕನುಸಾರ ಜೀವಿಸಬೇಕು. ಆದ್ದರಿಂದ ದೇವರ ವಾಕ್ಯಕ್ಕೆ ಅನುಸಾರವಾಗಿ ನಡೆಯಲು ನಾವೆಲ್ಲರೂ ಶ್ರಮಿಸೋಣ.

[ಪಾದಟಿಪ್ಪಣಿ]

^ ಪ್ಯಾರ. 17 ವಾಲ್ಡಿಸ್‌ ಅವರ ಹೆಸರು ಕೆಲವೆಡೆ ಪಿಯೆರ್‌ ವಾಲ್ಡಿಸ್‌ ಎಂದೂ ಇನ್ನು ಕೆಲವೆಡೆ ಪೀಟರ್‌ ವಾಲ್ಡೊ ಎಂದೂ ಇದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

2012ರ ವರ್ಷವಚನ: “ನಿನ್ನ ವಾಕ್ಯವೇ ಸತ್ಯ.”—ಯೋಹಾನ 17:17

[ಪುಟ 7ರಲ್ಲಿರುವ ಚಿತ್ರ]

ವಾಲ್ಡೊ

[ಪುಟ 7ರಲ್ಲಿರುವ ಚಿತ್ರ]

ವಿಕ್ಲಿಫ್‌

[ಪುಟ 7ರಲ್ಲಿರುವ ಚಿತ್ರ]

ಟಿಂಡೆಲ್‌

[ಪುಟ 7ರಲ್ಲಿರುವ ಚಿತ್ರ]

ಗ್ರೂ

[ಪುಟ 7ರಲ್ಲಿರುವ ಚಿತ್ರ]

ಸ್ಟೋರ್ಸ್‌