ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾಜಕರಾಜರ ಏರ್ಪಾಡು ಮಾನವಕುಲಕ್ಕೆ ದೇವರ ಅನುಗ್ರಹ

ಯಾಜಕರಾಜರ ಏರ್ಪಾಡು ಮಾನವಕುಲಕ್ಕೆ ದೇವರ ಅನುಗ್ರಹ

ಯಾಜಕರಾಜರ ಏರ್ಪಾಡು ಮಾನವಕುಲಕ್ಕೆ ದೇವರ ಅನುಗ್ರಹ

“[ನೀವು] ಆರಿಸಿಕೊಳ್ಳಲ್ಪಟ್ಟಿರುವ ಕುಲವೂ ರಾಜವಂಶಸ್ಥರಾದ ಯಾಜಕರೂ ಪವಿತ್ರ ಜನಾಂಗವೂ ವಿಶೇಷ ಒಡೆತನಕ್ಕಾಗಿರುವ ಜನರೂ ಆಗಿದ್ದೀರಿ.”—1 ಪೇತ್ರ 2:9.

ವಿವರಿಸಬಲ್ಲಿರಾ?

ಯಾಜಕರಾಜ್ಯದ ವಾಗ್ದಾನವನ್ನು ಮೊದಲ ಬಾರಿ ಮಾಡಿದ್ದು ಯಾವಾಗ?

ಹೊಸ ಒಡಂಬಡಿಕೆ ಯಾಜಕರಾಜ್ಯವನ್ನು ಹೇಗೆ ಒದಗಿಸಿತು?

ಯಾಜಕರಾಜರು ಮಾನವಕುಲಕ್ಕೆ ಯಾವ ಪ್ರಯೋಜನಗಳನ್ನು ತರುವರು?

1. “ಕರ್ತನ ಸಂಧ್ಯಾ ಭೋಜನ”ವನ್ನು ಯೇಸುವಿನ ಮರಣದ ಸ್ಮರಣೆ ಎಂದು ಏಕೆ ಕರೆಯಲಾಗುತ್ತದೆ? ಅದನ್ನು ಆಚರಿಸುವ ಉದ್ದೇಶವೇನು?

ಕ್ರಿಸ್ತ ಶಕ 33, ನೈಸಾನ್‌ ತಿಂಗಳ 14ನೇ ದಿನ. ಸಾಯಂಕಾಲದ ಸಮಯದಲ್ಲಿ ಯೇಸು ಕ್ರಿಸ್ತ ಹಾಗೂ 12 ಅಪೊಸ್ತಲರು ಯೆಹೂದ್ಯರ ಪಸ್ಕ ಹಬ್ಬವನ್ನು ಆಚರಿಸುತ್ತಿದ್ದಾರೆ. ವಿಶ್ವಾಸಘಾತುಕನಾದ ಇಸ್ಕರಿಯೋತ ಯೂದನನ್ನು ಹೊರಗೆ ಕಳುಹಿಸಿದ ಬಳಿಕ ಯೇಸು ಒಂದು ಹೊಸ ಆಚರಣೆಯನ್ನು ಪರಿಚಯಿಸುತ್ತಾನೆ. ಅದಕ್ಕೆ “ಕರ್ತನ ಸಂಧ್ಯಾ ಭೋಜನ” ಎಂಬ ಹೆಸರು ಬಂತು. (1 ಕೊರಿಂ. 11:20) ಯೇಸು ಅಪೊಸ್ತಲರಿಗೆ, “ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ” ಎಂದು ಎರಡು ಬಾರಿ ಹೇಳಿದನು. ಕರ್ತನ ಸಂಧ್ಯಾ ಭೋಜನವನ್ನು ಯೇಸುವಿನ ಮರಣದ ಸ್ಮರಣೆ ಎಂದು ಸಹ ಕರೆಯಲಾಗುತ್ತದೆ. (1 ಕೊರಿಂ. 11:24, 25) ಯೇಸುವಿನ ಆಜ್ಞೆಯನ್ನು ಪಾಲಿಸುತ್ತಾ ಪ್ರಪಂಚದಾದ್ಯಂತ ಇರುವ ಯೆಹೋವನ ಸಾಕ್ಷಿಗಳು ಅವನ ಮರಣವನ್ನು ಜ್ಞಾಪಿಸಿಕೊಳ್ಳಲಿಕ್ಕಾಗಿ ಪ್ರತಿವರ್ಷವೂ ಸ್ಮರಣ ದಿನವನ್ನು ಆಚರಿಸುತ್ತಾರೆ. ಇಸವಿ 2012ರಲ್ಲಿ ಯೆಹೂದಿ ಕ್ಯಾಲೆಂಡರಿನ ನೈಸಾನ್‌ 14ನೇ ದಿನವು ನಮ್ಮ ಕ್ಯಾಲೆಂಡರಿನ ಏಪ್ರಿಲ್‌ 15ರ ಗುರುವಾರ ಸೂರ್ಯಾಸ್ತಮಾನದ ನಂತರ ಆರಂಭವಾಗುತ್ತದೆ.

2. ರೊಟ್ಟಿ ಮತ್ತು ದ್ರಾಕ್ಷಾಮದ್ಯ ಏನನ್ನು ಸೂಚಿಸುತ್ತದೆಂದು ಯೇಸು ಹೇಳಿದನು?

2 ಆ ಹೊಸ ಆಚರಣೆಯನ್ನು ಪರಿಚಯಿಸಿದಾಗ ಯೇಸು ಹೇಳಿದ, ಮಾಡಿದ ವಿಷಯಗಳನ್ನು ಲೂಕನು ಎರಡೇ ವಚನಗಳಲ್ಲಿ ವಿವರಿಸುತ್ತಾನೆ. “ಅವನು ರೊಟ್ಟಿಯನ್ನು ತೆಗೆದುಕೊಂಡು ಕೃತಜ್ಞತೆ ಸಲ್ಲಿಸಿ ಮುರಿದು ಅವರಿಗೆ ನೀಡಿ, ‘ಇದು ನಿಮಗೋಸ್ಕರ ಕೊಡಲ್ಪಡಲಿರುವ ನನ್ನ ದೇಹವನ್ನು ಸೂಚಿಸುತ್ತದೆ. ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ’ ಎಂದು ಹೇಳಿದನು. ಅವರು ಸಂಜೆಯ ಊಟವನ್ನು ಮಾಡಿ ಮುಗಿಸಿದ ಬಳಿಕ ಅವನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು, ‘ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡಲಿರುವ ನನ್ನ ರಕ್ತದ ಆಧಾರದ ಮೇಲೆ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ’ [ಎಂದನು].” (ಲೂಕ 22:19, 20) ಯೇಸುವಿನ ಈ ಮಾತುಗಳನ್ನು ಅಪೊಸ್ತಲರು ಹೇಗೆ ಅರ್ಥಮಾಡಿಕೊಂಡರು?

3. ಯೇಸುವಿನ ಮಾತುಗಳನ್ನು ಅಪೊಸ್ತಲರು ಹೇಗೆ ಅರ್ಥಮಾಡಿಕೊಂಡರು?

3 ಯೆಹೂದಿ ಜನರಾಗಿದ್ದ ಆ ಅಪೊಸ್ತಲರಿಗೆ ಯೆರೂಸಲೇಮಿನ ಆಲಯದಲ್ಲಿ ಯಾಜಕರು ಪ್ರಾಣಿಗಳ ಯಜ್ಞಗಳನ್ನು ಅರ್ಪಿಸುತ್ತಿದ್ದ ವಿಷಯ ಚೆನ್ನಾಗಿ ಗೊತ್ತಿತ್ತು. ಜನರು ಯೆಹೋವನ ಅನುಗ್ರಹ ಪಡೆಯಲಿಕ್ಕಾಗಿ ಮತ್ತು ಪಾಪಗಳ ಕ್ಷಮಾಪಣೆಗಾಗಿ ಯಜ್ಞಗಳನ್ನು ಕೊಡುತ್ತಿದ್ದರು. (ಯಾಜ. 1:4; 22:17-29) ಹಾಗಾಗಿ, ಯೇಸುವಿನ ಮಾತುಗಳನ್ನು ಅರ್ಥಮಾಡಿಕೊಳ್ಳುವುದು ಅಪೊಸ್ತಲರಿಗೆ ಕಷ್ಟವಾಗಲಿಲ್ಲ. ಅವರಿಗಾಗಿ ತನ್ನ ದೇಹವನ್ನು ಕೊಡುತ್ತೇನೆ, ರಕ್ತವನ್ನು ಸುರಿಸುತ್ತೇನೆ ಎಂದು ಅವನು ಹೇಳಿದಾಗ, ತನ್ನ ಪರಿಪೂರ್ಣ ಜೀವವನ್ನೇ ಯಜ್ಞವಾಗಿ ಅರ್ಪಿಸಲಿದ್ದಾನೆ ಎಂದು ಅವರು ತಿಳಿದುಕೊಂಡರು. ಅವನ ಪರಿಪೂರ್ಣ ಯಜ್ಞ ಪ್ರಾಣಿಯಜ್ಞಕ್ಕಿಂತ ಎಷ್ಟೋ ಶ್ರೇಷ್ಠವಾಗಿರಲಿತ್ತು.

4. “ಈ ಪಾತ್ರೆಯು . . . ನನ್ನ ರಕ್ತದ ಆಧಾರದ ಮೇಲೆ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ” ಎಂದು ಯೇಸು ಹೇಳಿದ್ದರ ಅರ್ಥವೇನು?

4 “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡಲಿರುವ ನನ್ನ ರಕ್ತದ ಆಧಾರದ ಮೇಲೆ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ” ಎಂದು ಯೇಸು ಹೇಳಿದ್ದರ ಅರ್ಥವೇನು? ಹೊಸ ಒಡಂಬಡಿಕೆಯ ಕುರಿತು ಯೆರೆಮೀಯ 31:31-33 ತಿಳಿಸುವ ಪ್ರವಾದನೆ ಅಪೊಸ್ತಲರಿಗೆ ಗೊತ್ತಿತ್ತು. (ಓದಿ.) ಆ ಹೊಸ ಒಡಂಬಡಿಕೆಯನ್ನು ಯೇಸು ಈಗ ಅನುಷ್ಠಾನಕ್ಕೆ ತರುತ್ತಿದ್ದಾನೆ ಎಂದು ಆತನ ಮಾತುಗಳು ಸೂಚಿಸುತ್ತಿದ್ದವು. ಈ ಹೊಸ ಒಡಂಬಡಿಕೆಯು ಯೆಹೋವನು ಮೋಶೆಯ ಮುಖಾಂತರ ಇಸ್ರಾಯೇಲ್ಯರೊಂದಿಗೆ ಮಾಡಿಕೊಂಡಿದ್ದ ಧರ್ಮಶಾಸ್ತ್ರದ ಒಡಂಬಡಿಕೆಯನ್ನು ರದ್ದುಪಡಿಸಿತು. ಈ ಎರಡು ಒಡಂಬಡಿಕೆಗಳಿಗೆ ಪರಸ್ಪರ ಸಂಬಂಧವಿತ್ತಾ?

5. ಧರ್ಮಶಾಸ್ತ್ರದ ಒಡಂಬಡಿಕೆ ಇಸ್ರಾಯೇಲ್ಯರ ಮುಂದೆ ಯಾವ ಅವಕಾಶ ಇಟ್ಟಿತು?

5 ಹೌದು, ಅವುಗಳ ಉದ್ದೇಶದಲ್ಲಿ ಪರಸ್ಪರ ಸಂಬಂಧ ಇತ್ತು. ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಮಾಡಿದ ಸಮಯದಲ್ಲಿ ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದ್ದನ್ನು ಗಮನಿಸಿ: “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ; ಸಮಸ್ತ ಭೂಮಿಯೂ ನನ್ನದಷ್ಟೆ. ನೀವು ನನಗೆ ಯಾಜಕರಾಜ್ಯವೂ ಪರಿಶುದ್ಧಜನವೂ ಆಗಿರುವಿರಿ.” (ವಿಮೋ. 19:5, 6) ಇಸ್ರಾಯೇಲ್ಯರು ಈ ಮಾತುಗಳನ್ನು ಹೇಗೆ ಅರ್ಥಮಾಡಿಕೊಂಡರು?

ಯಾಜಕರಾಜರ ಏರ್ಪಾಡಿನ ಕುರಿತ ವಾಗ್ದಾನ

6. ಧರ್ಮಶಾಸ್ತ್ರದ ಒಡಂಬಡಿಕೆಯು ಯಾವ ವಾಗ್ದಾನದ ನೆರವೇರಿಕೆಗೆ ಸಹಾಯಮಾಡಿತು?

6 ಒಡಂಬಡಿಕೆ ಎಂದರೆ ನಿಬಂಧನೆ ಮಾಡಿಕೊಳ್ಳುವುದು ಅಥವಾ ಕರಾರು ಎಂದು ಇಸ್ರಾಯೇಲ್ಯರಿಗೆ ಗೊತ್ತಿತ್ತು. ಏಕೆಂದರೆ ಯೆಹೋವನು ಅವರ ಪೂರ್ವಿಕರಾದ ನೋಹ ಮತ್ತು ಅಬ್ರಹಾಮನೊಂದಿಗೆ ನಿಬಂಧನೆಗಳನ್ನು ಮಾಡಿದ್ದನು. (ಆದಿ. 6:18; 9:8-17; 15:18; 17:1-9) ಅಬ್ರಹಾಮನೊಂದಿಗೆ ಮಾಡಿದ್ದ ಒಡಂಬಡಿಕೆಯಲ್ಲಿ ಯೆಹೋವನು ಹೀಗೆ ಹೇಳಿದ್ದನು: “ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿ. 22:18) ಈ ವಾಗ್ದಾನವನ್ನು ನೆರವೇರಿಸುವ ಸಲುವಾಗಿ ಯೆಹೋವನು ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಮಾಡಿದನು. ಈ ಒಡಂಬಡಿಕೆಯ ಆಧಾರದ ಮೇರೆಗೆ ಇಸ್ರಾಯೇಲ್ಯರು “ಎಲ್ಲಾ ಜನಾಂಗಗಳಲ್ಲಿ [ಯೆಹೋವನಿಗೆ] ಸ್ವಕೀಯಜನ” ಆಗಸಾಧ್ಯವಿತ್ತು. ಯಾವ ಕಾರಣಕ್ಕಾಗಿ ಅವರು ದೇವರ ಸ್ವಕೀಯಜನರಾಗಬೇಕಿತ್ತು ಗೊತ್ತೆ? ಯೆಹೋವನಿಗೆ “ಯಾಜಕರಾಜ್ಯ” ಆಗಲಿಕ್ಕಾಗಿಯೇ!

7. “ಯಾಜಕರಾಜ್ಯ” ಎಂಬ ಪದ ಏನನ್ನು ಸೂಚಿಸಿತು?

7 ಇಸ್ರಾಯೇಲ್ಯರಿಗೆ ರಾಜರ, ಯಾಜಕರ ಬಗ್ಗೆ ಗೊತ್ತಿತ್ತು. ಈ ಎರಡು ಸ್ಥಾನಗಳಲ್ಲಿ ಸೇವೆಮಾಡಿದ ಒಬ್ಬನೇ ವ್ಯಕ್ತಿಯೆಂದರೆ ಪ್ರಾಚೀನ ಕಾಲದಲ್ಲಿದ್ದ ಮೆಲ್ಕಿಜೆದೇಕ. ಅವನೊಬ್ಬನೇ ಯೆಹೋವ ದೇವರ ಅನುಮತಿಯೊಂದಿಗೆ ರಾಜನಾಗಿಯೂ ಅದೇ ಸಮಯದಲ್ಲಿ ಯಾಜಕನಾಗಿಯೂ ಕಾರ್ಯ ನಿರ್ವಹಿಸಿದ್ದನು. (ಆದಿ. 14:18) ಈಗ ದೇವರು ಇಸ್ರಾಯೇಲ್ಯರಿಗೆ ಯಾಜಕರಾಜ್ಯವನ್ನು ಉತ್ಪಾದಿಸುವ ಸದವಕಾಶವನ್ನು ಧರ್ಮಶಾಸ್ತ್ರದ ಒಡಂಬಡಿಕೆಯ ಮೂಲಕ ಕೊಟ್ಟನು. ಯಾಜಕರಾಜ್ಯವಾಗಿ ಆಯ್ಕೆ ಆಗುವವರನ್ನು ಬೈಬಲ್‌ ವಚನವು ರಾಜವಂಶಸ್ಥರಾದ ಯಾಜಕರು ಎಂದು ಸೂಚಿಸುತ್ತದೆ. ಅವರು ರಾಜರಲ್ಲದೆ ಯಾಜಕರಾಗಿಯೂ ಸೇವೆಸಲ್ಲಿಸಲಿದ್ದರು.—1 ಪೇತ್ರ 2:9.

8. ದೇವರಿಂದ ನೇಮಿಸಲ್ಪಟ್ಟ ಯಾಜಕನೊಬ್ಬನ ಕೆಲಸವೇನು?

8 ರಾಜನ ಕೆಲಸ ರಾಜ್ಯಭಾರ ಮಾಡುವುದು. ಆದರೆ ಯಾಜಕನ ಕೆಲಸ? ಅದನ್ನು ಇಬ್ರಿಯ 5:1 ತಿಳಿಸುತ್ತದೆ: “ಮನುಷ್ಯರೊಳಗಿಂದ ಆರಿಸಲ್ಪಟ್ಟಿರುವ ಪ್ರತಿಯೊಬ್ಬ ಮಹಾ ಯಾಜಕನು ಕಾಣಿಕೆಗಳನ್ನೂ ಪಾಪಗಳಿಗಾಗಿ ಯಜ್ಞಗಳನ್ನೂ ಅರ್ಪಿಸುವಂತೆ ಮನುಷ್ಯರಿಗೋಸ್ಕರ ದೇವರಿಗೆ ಸಂಬಂಧಿಸಿದ ಕಾರ್ಯಗಳ ಮೇಲೆ ನೇಮಿಸಲ್ಪಟ್ಟಿದ್ದಾನೆ.” ಇಲ್ಲಿ ತಿಳಿಸಲಾಗಿರುವಂತೆ, ಯೆಹೋವನಿಂದ ನೇಮಿಸಲ್ಪಟ ಯಾಜಕನೊಬ್ಬನು ದೇವರ ಮುಂದೆ ಮನುಷ್ಯರ ಪ್ರತಿನಿಧಿ ಆಗಿರುತ್ತಾನೆ. ಜನರ ಪರವಾಗಿ ಯಜ್ಞಗಳನ್ನು ಅರ್ಪಿಸಿ ಅವರ ಪಾಪಗಳನ್ನು ಕ್ಷಮಿಸುವಂತೆ ಯೆಹೋವನಲ್ಲಿ ಯಾಚಿಸುತ್ತಾನೆ. ಅದೇ ಸಮಯದಲ್ಲಿ ಅವನು ಜನರ ಮುಂದೆ ದೇವರ ಪ್ರತಿನಿಧಿಯಾಗಿಯೂ ಕೆಲಸ ಮಾಡುತ್ತಾನೆ. ಅವರಿಗೆ ದೇವರ ಧರ್ಮಶಾಸ್ತ್ರವನ್ನು ಬೋಧಿಸುತ್ತಾನೆ. (ಯಾಜ. 10:8-11; ಮಲಾ. 2:7) ಹೀಗೆ ಮನುಷ್ಯರು ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರುವಂತೆ ತನ್ನ ಯಾಜಕೋದ್ಯೋಗವನ್ನು ನಡೆಸುತ್ತಾನೆ.

9. (ಎ) ಯಾಜಕರಾಜರಾಗಿ ಸೇವೆಸಲ್ಲಿಸುವ ಸುಯೋಗ ಪಡೆಯಲು ಇಸ್ರಾಯೇಲ್ಯರು ಯಾವ ಷರತ್ತಿಗೆ ಬದ್ಧರಾಗಬೇಕಿತ್ತು? (ಬಿ) ಯೆಹೋವನು ಇಸ್ರಾಯೇಲ್ಯರ ಮಧ್ಯದಿಂದ ಯಾಜಕರನ್ನು ಆರಿಸಿಕೊಳ್ಳಲು ಕಾರಣವೇನು? (ಸಿ) ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗೆ ಇಸ್ರಾಯೇಲ್ಯರು ಎಲ್ಲಾ ಜನಾಂಗಗಳ ಪರವಾಗಿ ಯಾಜಕರಾಜರಾಗಿ ಸೇವೆಸಲ್ಲಿಸಲು ಸಾಧ್ಯವಿರಲಿಲ್ಲ ಏಕೆ?

9 ‘ಎಲ್ಲಾ ಜನಾಂಗಗಳಿಗೆ’ ಪ್ರಯೋಜನ ತರಲು ಯಾಜಕರಾಗಿಯೂ ರಾಜರಾಗಿಯೂ ಸೇವೆಸಲ್ಲಿಸುವ ಅವಕಾಶವನ್ನು ಧರ್ಮಶಾಸ್ತ್ರದ ಒಡಂಬಡಿಕೆಯು ಇಸ್ರಾಯೇಲ್ಯರ ಮುಂದಿಟ್ಟಿತ್ತು ನಿಜ. ಆದರೆ ಆ ಭವ್ಯ ಅವಕಾಶದೊಂದಿಗೆ “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ . . . ” ಎಂಬ ಷರತ್ತನ್ನೂ ದೇವರು ಹಾಕಿದ್ದನು. ದೇವರ ಮಾತಿಗೆ “ಶ್ರದ್ಧೆಯಿಂದ” ವಿಧೇಯತೆ ತೋರಿಸಲು ಅವರಿಂದ ಸಾಧ್ಯವಿತ್ತಾ? ಖಂಡಿತ, ಆದರೆ ಪರಿಪೂರ್ಣವಾಗಿ ಅಲ್ಲ! (ರೋಮ. 3:19, 20) ಆ ಕಾರಣದಿಂದಲೇ ಯೆಹೋವನು ಇಸ್ರಾಯೇಲ್ಯರಿಗೋಸ್ಕರ ಯಾಜಕ ಸೇವೆ ಮಾಡುವಂತೆ ಅವರ ಮಧ್ಯದಿಂದಲೇ ಕೆಲವರನ್ನು ಆರಿಸಿಕೊಂಡಿದ್ದನು. ಅವರು ರಾಜರಾಗಿ ಆಳ್ವಿಕೆ ನಡೆಸಲಿಲ್ಲ. ಜನರ ಪಾಪಗಳಿಗಾಗಿ ಪ್ರಾಣಿಯಜ್ಞಗಳನ್ನು ಅರ್ಪಿಸುವ ಸೇವೆಯನ್ನಷ್ಟೆ ಮಾಡುತ್ತಿದ್ದರು. (ಯಾಜ. 4:1–6:7) ತಮ್ಮ ಪಾಪಗಳಿಗಾಗಿಯೂ ಅವರು ಯಜ್ಞಗಳನ್ನು ಅರ್ಪಿಸಬೇಕಿತ್ತು. (ಇಬ್ರಿ. 5:1-3; 8:3) ಯಜ್ಞಗಳನ್ನು ದೇವರು ಸ್ವೀಕರಿಸಿದನಾದರೂ ಅವು ಜನರ ಪಾಪಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲಿಲ್ಲ. ಅಷ್ಟೇಕೆ, ನಿಷ್ಠಾವಂತರಾಗಿದ್ದ ಇಸ್ರಾಯೇಲ್ಯರನ್ನು ಸಹ ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಪೂರ್ಣವಾಗಿ ತರಲು ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗಿದ್ದ ಯಾಜಕರಿಗೆ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಅಪೊಸ್ತಲ ಪೌಲ ಹೇಳಿದಂತೆ “ಹೋರಿಗಳ ಮತ್ತು ಆಡುಗಳ ರಕ್ತದಿಂದ ಪಾಪಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ.” (ಇಬ್ರಿ. 10:1-4) ಇಸ್ರಾಯೇಲ್ಯರು ಧರ್ಮಶಾಸ್ತ್ರದ ಎಲ್ಲಾ ವಿಷಯಗಳನ್ನು ಪಾಲಿಸದ ಕಾರಣ ಶಾಪಕ್ಕೆ ಗುರಿಯಾದರು. (ಗಲಾ. 3:10) ಇಂಥ ಸ್ಥಿತಿಯಲ್ಲಿದ್ದ ಇಸ್ರಾಯೇಲ್ಯರು ಎಲ್ಲಾ ಜನಾಂಗಗಳ ಪರವಾಗಿ ಯಾಜಕರಾಜರಾಗಿ ಸೇವೆಸಲ್ಲಿಸಲು ಸಾಧ್ಯವಿರಲಿಲ್ಲ.

10. ಧರ್ಮಶಾಸ್ತ್ರದ ಉದ್ದೇಶವೇನಾಗಿತ್ತು?

10 ಹಾಗಾದರೆ ಯೆಹೋವ ದೇವರ “ಯಾಜಕರಾಜ್ಯ” ವಾಗ್ದಾನವು ಪೊಳ್ಳಾಗಿತ್ತೆ? ಖಂಡಿತ ಇಲ್ಲ. ಇಸ್ರಾಯೇಲ್ಯರು ಶ್ರದ್ಧೆಯಿಂದ ಆತನ ಮಾತಿಗೆ ವಿಧೇಯರಾಗಿ ನಡೆದರೆ ಆ ಅವಕಾಶ ಸಿಗುತ್ತಿತ್ತು, ಆದರೆ ಧರ್ಮಶಾಸ್ತ್ರದ ಕೆಳಗಿರುವಾಗ ಅಲ್ಲ. ಯಾಕೆ? (ಗಲಾತ್ಯ 3:19-25 ಓದಿ.) ಅದನ್ನು ಅರ್ಥಮಾಡಿಕೊಳ್ಳಲು ನಾವು ಧರ್ಮಶಾಸ್ತ್ರದ ಉದ್ದೇಶ ಏನಾಗಿತ್ತು ಎನ್ನುವುದನ್ನು ತಿಳಿದುಕೊಳ್ಳಬೇಕು. ದೇವರಿಗೆ ವಿಧೇಯರಾಗಿದ್ದ ಜನರನ್ನು ಅದು ಸುಳ್ಳು ಧರ್ಮದ ಆಚಾರಗಳಿಂದ ಪ್ರತ್ಯೇಕಿಸಿ ಕಾಪಾಡಿತು. ತಮ್ಮ ಪಾಪಗಳನ್ನು ಪೂರ್ಣವಾಗಿ ತೊಡೆದುಹಾಕಲು ಮಹಾ ಯಾಜಕ ಅರ್ಪಿಸುವ ಯಜ್ಞಕ್ಕಿಂತ ಶ್ರೇಷ್ಠವಾದ ಒಂದು ಯಜ್ಞದ ಆವಶ್ಯಕತೆ ಇದೆ ಎಂದು ಮನದಟ್ಟು ಮಾಡಿಸಿತು. ಅವರನ್ನು ಕ್ರಿಸ್ತನ ಅಥವಾ ಮೆಸ್ಸೀಯನ (ಈ ಬಿರುದುಗಳ ಅರ್ಥ “ಅಭಿಷಿಕ್ತ”) “ಬಳಿಗೆ ನಡಿಸುವ ಪಾಲಕನಾಗಿ” ಕೆಲಸಮಾಡಿತು. ಮೆಸ್ಸೀಯನು ಆಗಮಿಸುವಾಗ ಯೆರೆಮೀಯನು ಪ್ರವಾದಿಸಿದ ಹೊಸ ಒಡಂಬಡಿಕೆಯನ್ನು ಅನುಷ್ಠಾನಕ್ಕೆ ತರಲಿದ್ದನು. ಕ್ರಿಸ್ತನನ್ನು ಅಂಗೀಕರಿಸಿದವರಿಗೆ ಈ ಹೊಸ ಒಡಂಬಡಿಕೆಯಲ್ಲಿ ಸಹಭಾಗಿಗಳಾಗುವ ಅವಕಾಶ ಇತ್ತು. ಅವರು “ಯಾಜಕರಾಜ್ಯ” ಆಗಲಿದ್ದರು. ಅದು ಹೇಗೆಂದು ನೋಡೋಣ.

ಹೊಸ ಒಡಂಬಡಿಕೆ ಯಾಜಕರಾಜರನ್ನು ಒದಗಿಸಿತು

11. ಯೇಸು ಯಾಜಕರಾಜ್ಯದ ನಿಜವಾದ ಅಸ್ತಿವಾರವಾದದ್ದು ಹೇಗೆ?

11 ಕ್ರಿ.ಶ. 29ರಲ್ಲಿ ನಜರೇತಿನ ಯೇಸು ಮೆಸ್ಸೀಯನಾದನು. ಹೇಗಂದರೆ, 30ನೇ ವಯಸ್ಸಿನಲ್ಲಿ ಅವನು ಯೆಹೋವ ದೇವರ ಚಿತ್ತವನ್ನು ಮಾಡಲು ಅಂದರೆ ತನಗೆ ವಹಿಸಲಾದ ವಿಶೇಷ ಕೆಲಸವನ್ನು ಪೂರೈಸಲು ತನ್ನನ್ನು ಸಮರ್ಪಿಸಿಕೊಂಡು ನೀರಿನ ದೀಕ್ಷಾಸ್ನಾನ ಹೊಂದಿದನು. ಆಗ ಯೆಹೋವನು, “ಇವನು ಪ್ರಿಯನಾಗಿರುವ ನನ್ನ ಮಗನು” ಎಂದು ಮೆಚ್ಚುಗೆ ಸೂಚಿಸಿ ಅವನನ್ನು ಅಭಿಷೇಕಿಸಿದನು. ಎಣ್ಣೆಯಿಂದ ಅಲ್ಲ ಪವಿತ್ರಾತ್ಮ ಶಕ್ತಿಯಿಂದ. (ಮತ್ತಾ. 3:13-17; ಅ. ಕಾ. 10:38) ಹೀಗೆ ಅವನನ್ನು ದೇವಭಕ್ತಿಯುಳ್ಳ ಪ್ರತಿಯೊಬ್ಬ ಮಾನವನ ಮೇಲೆ ಮಹಾ ಯಾಜಕನಾಗಿಯೂ ಭಾವೀ ಅರಸನಾಗಿಯೂ ನೇಮಿಸಿದನು. (ಇಬ್ರಿ. 1:8, 9; 5:5, 6) ಯೇಸು ಯಾಜಕರಾಜ್ಯದ ನಿಜವಾದ ಅಸ್ತಿವಾರವಾಗಲಿದ್ದನು.

12. ಯೇಸು ಅರ್ಪಿಸಿದ ಯಜ್ಞದಿಂದ ಯಾವುದು ಸಾಧ್ಯವಾಯಿತು?

12 ಮಹಾ ಯಾಜಕನಾಗಿ ಯೇಸು, ದೇವಭಕ್ತಿಯುಳ್ಳ ಜನರ ಪಿತ್ರಾರ್ಜಿತ ಪಾಪವನ್ನು ಪೂರ್ಣವಾಗಿ ತೊಡೆದುಹಾಕಲು ಯಾವ ಯಜ್ಞವನ್ನು ಅರ್ಪಿಸಸಾಧ್ಯವಿತ್ತು? ತನ್ನ ಮರಣವನ್ನು ಸ್ಮರಿಸುವಂತೆ ಶಿಷ್ಯರಿಗೆ ಆಜ್ಞಾಪಿಸಿದಾಗ ಅವನು ತಿಳಿಸಿದಂತೆ ತನ್ನ ಪರಿಪೂರ್ಣ ಜೀವವನ್ನೇ ಯಜ್ಞವಾಗಿ ಅರ್ಪಿಸಲಿದ್ದನು. (ಇಬ್ರಿಯ 9:11, 12 ಓದಿ.) ಕ್ರಿ.ಶ. 29ರಲ್ಲಿ ಮಹಾ ಯಾಜಕನಾಗಿ ಅಭಿಷೇಕವಾದ ಸಮಯದಿಂದ ಅವನು ಕಠಿಣ ಪರೀಕ್ಷೆಗಳನ್ನು ಸಹಿಸಿಕೊಂಡು ಮರಣದ ವರೆಗೆ ತರಬೇತು ಹೊಂದಿದನು. (ಇಬ್ರಿ. 4:15; 5:7-10) ಪುನರುತ್ಥಾನವಾದ ಬಳಿಕ ಸ್ವರ್ಗಕ್ಕೆ ಏರಿಹೋಗಿ ತನ್ನ ಯಜ್ಞದ ಮೌಲ್ಯವನ್ನು ಯೆಹೋವ ದೇವರಿಗೆ ಒಪ್ಪಿಸಿದನು. (ಇಬ್ರಿ. 9:24) ಆ ಸಮಯದಿಂದ ತನ್ನ ಯಜ್ಞದ ಮೇಲೆ ನಂಬಿಕೆಯಿಟ್ಟು ನಡೆಯುವವರ ಪರವಾಗಿ ಅವನು ದೇವರನ್ನು “ಬೇಡಿಕೊಳ್ಳಲು” ಸಾಧ್ಯವಾಯಿತು. ನಿತ್ಯಜೀವದ ಪ್ರತೀಕ್ಷೆಯೊಂದಿಗೆ ದೇವರನ್ನು ಆರಾಧಿಸುವಂತೆ ಅವರಿಗೆ ಸಹಾಯ ಮಾಡಲು ಶಕ್ತನಾದನು. (ಇಬ್ರಿ. 7:25) ಅವನು ಅರ್ಪಿಸಿದ ಯಜ್ಞ ಹೊಸ ಒಡಂಬಡಿಕೆಯನ್ನು ಮತ್ತಷ್ಟು ಸ್ಥಿರೀಕರಿಸಿತು.—ಇಬ್ರಿ. 8:6; 9:15.

13. ಹೊಸ ಒಡಂಬಡಿಕೆಯ ಭಾಗಿಗಳಿಗೆ ಯಾವ ಪ್ರತೀಕ್ಷೆಗಳಿವೆ?

13 ಹೊಸ ಒಡಂಬಡಿಕೆಯಲ್ಲಿ ಸಹಭಾಗಿಗಳಾಗುವಂತೆ ಕರೆಯಲ್ಪಟ್ಟವರು ಸಹ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಡಬೇಕು. (2 ಕೊರಿಂ. 1:21) ಹೊಸ ಒಡಂಬಡಿಕೆಯಲ್ಲಿ ಸಹಭಾಗಿಗಳಾಗುವ ಅವಕಾಶವನ್ನು ಮೊದಲು ದೇವಭಕ್ತ ಯೆಹೂದಿಗಳಿಗೆ ನಂತರ ಅನ್ಯ ಜನಾಂಗದವರಿಗೆ ಕೊಡಲಾಯಿತು. (ಎಫೆ. 3:5, 6) ಅವರಿಗೆ ಯಾವ ಪ್ರತೀಕ್ಷೆಗಳು ಇವೆ? ಅವರ ಪಾಪಗಳಿಗೆ ಸಂಪೂರ್ಣ ಕ್ಷಮಾಪಣೆ ಸಿಗುವುದು. “ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ” ಎಂದು ಯೆಹೋವನು ಮಾತು ಕೊಟ್ಟಿದ್ದಾನೆ. (ಯೆರೆ. 31:34) ಆತನು ಅವರ ಪಾಪಗಳನ್ನು ಕ್ಷಮಿಸಿರುವ ಕಾರಣ “ಯಾಜಕರಾಜ್ಯ” ಆಗುವರು. ಅಭಿಷಿಕ್ತ ಕ್ರೈಸ್ತರ ಕುರಿತು ಪೇತ್ರ ಬರೆದಿರುವುದನ್ನು ಗಮನಿಸಿ: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ‘ಗುಣಲಕ್ಷಣಗಳನ್ನು ಎಲ್ಲ ಕಡೆಗಳಲ್ಲೂ ಪ್ರಕಟಿಸುವುದಕ್ಕಾಗಿ ಆರಿಸಿಕೊಳ್ಳಲ್ಪಟ್ಟಿರುವ ಕುಲವೂ ರಾಜವಂಶಸ್ಥರಾದ ಯಾಜಕರೂ ಪವಿತ್ರ ಜನಾಂಗವೂ ವಿಶೇಷ ಒಡೆತನಕ್ಕಾಗಿರುವ ಜನರೂ’ ಆಗಿದ್ದೀರಿ.” (1 ಪೇತ್ರ 2:9) ಇದು ಯೆಹೋವನು ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಮಾಡಿದಾಗ ಇಸ್ರಾಯೇಲ್ಯರಿಗೆ ಹೇಳಿದ್ದ ಮಾತುಗಳ ಉಲ್ಲೇಖವಾಗಿದೆ. ಪೇತ್ರ ಅದನ್ನು ಹೊಸ ಒಡಂಬಡಿಕೆಯಲ್ಲಿರುವ ಕ್ರೈಸ್ತರಿಗೆ ಅನ್ವಯಿಸಿದನು.—ವಿಮೋ. 19:5, 6.

ಯಾಜಕರಾಜರು ಮಾನವಕುಲಕ್ಕೆ ತರುವ ಆಶೀರ್ವಾದಗಳು

14. ಯಾಜಕರಾಜರು ಎಲ್ಲಿ ಸೇವೆಸಲ್ಲಿಸುವರು?

14 ಹೊಸ ಒಡಂಬಡಿಕೆಯ ಭಾಗಿಗಳು ಎಲ್ಲಿ ಸೇವೆಸಲ್ಲಿಸುವರು? ಅವರು ಗುಂಪಾಗಿ ಭೂಮಿಯಲ್ಲಿ ಯಾಜಕ ಸೇವೆಸಲ್ಲಿಸುವರು. ಯೆಹೋವನ “ಗುಣಲಕ್ಷಣಗಳನ್ನು ಎಲ್ಲ ಕಡೆಗಳಲ್ಲೂ” ಪ್ರಕಟಿಸುವ ಮೂಲಕ ಹಾಗೂ ಆಧ್ಯಾತ್ಮಿಕ ಆಹಾರವನ್ನು ಒದಗಿಸುವ ಮೂಲಕ ಅವರು ಆತನನ್ನು ಪ್ರತಿನಿಧಿಸುತ್ತಾರೆ. (ಮತ್ತಾ. 24:45; 1 ಪೇತ್ರ 2:4, 5) ಮರಣಹೊಂದಿ ಪುನರುತ್ಥಾನವಾದ ನಂತರ ಸ್ವರ್ಗದಲ್ಲಿ ಯೇಸುವಿನೊಂದಿಗೆ ಸೇವೆಸಲ್ಲಿಸುವರು. ಆಗ ಎರಡೂ ಸ್ಥಾನಗಳಲ್ಲಿ ಅಂದರೆ ರಾಜರಾಗಿಯೂ ಯಾಜಕರಾಗಿಯೂ ಸೇವೆಸಲ್ಲಿಸುವರು. (ಲೂಕ 22:29; 1 ಪೇತ್ರ 1:3-5; ಪ್ರಕ. 1:6) ಅಪೊಸ್ತಲ ಯೋಹಾನ ಇದನ್ನು ರುಜುಪಡಿಸುತ್ತಾನೆ. ಅವನು ಕಂಡ ಒಂದು ದರ್ಶನದಲ್ಲಿ ಸ್ವರ್ಗದಲ್ಲಿರುವ ಯೆಹೋವನ ಸಿಂಹಾಸನದ ಪಕ್ಕದಲ್ಲಿ ಅನೇಕ ಆತ್ಮಜೀವಿಗಳು ನಿಂತಿದ್ದರು. ಅವರು “ಕುರಿಮರಿಯ” ಕುರಿತು “ಹೊಸ ಹಾಡನ್ನು” ಹಾಡುತ್ತಿದ್ದರು: “ನೀನು ವಧಿಸಲ್ಪಟ್ಟು ನಿನ್ನ ರಕ್ತದಿಂದ ಪ್ರತಿ ಕುಲ, ಭಾಷೆ, ಪ್ರಜೆ, ಜನಾಂಗಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿ. ನೀನು ಅವರನ್ನು ನಮ್ಮ ದೇವರಿಗೆ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿ ಮತ್ತು ಅವರು ಭೂಮಿಯ ಮೇಲೆ ರಾಜರಾಗಿ ಆಳಲಿದ್ದಾರೆ.” (ಪ್ರಕ. 5:8-10) ಇನ್ನೊಂದು ದರ್ಶನದಲ್ಲಿ ಯೋಹಾನನು ಆ ರಾಜರ ಕುರಿತು ಹೀಗೆ ಹೇಳುತ್ತಾನೆ: “ಅವರು ದೇವರ ಮತ್ತು ಕ್ರಿಸ್ತನ ಯಾಜಕರಾಗಿರುವರು ಮತ್ತು ಅವನೊಂದಿಗೆ ಆ ಸಾವಿರ ವರ್ಷ ರಾಜರಾಗಿ ಆಳುವರು.” (ಪ್ರಕ. 20:6) ಯೇಸು ಹಾಗೂ ಆ ರಾಜರು ಒಟ್ಟಾಗಿ ಯಾಜಕರಾಜ್ಯ ಆಗುವರು ಮತ್ತು ಮಾನವಕುಲಕ್ಕೆ ದೈವಾಶೀರ್ವಾದ ತರುವರು.

15, 16. ಯಾಜಕರಾಜರು ಮಾನವಕುಲಕ್ಕೆ ಯಾವ ದೈವಾಶೀರ್ವಾದಗಳನ್ನು ತರುವರು?

15 ಭೂಮಿಯಲ್ಲಿ ಇರುವವರಿಗೆ 1,44,000 ಮಂದಿ ಯಾವ ಪ್ರಯೋಜನ ತರುವರು? ಪ್ರಕಟನೆ 21ನೇ ಅಧ್ಯಾಯದಲ್ಲಿ ಅವರನ್ನು ಸ್ವರ್ಗದ ನಗರ ಅಂದರೆ ಹೊಸ ಯೆರೂಸಲೇಮ್‌ ಎಂದು ಬಣ್ಣಿಸಲಾಗಿದೆ ಮತ್ತು “ಕುರಿಮರಿಯ ಪತ್ನಿ” ಎಂದೂ ಕರೆಯಲಾಗಿದೆ. (ಪ್ರಕ. 21:9) ವಚನ 2ರಿಂದ 4 ಹೀಗೆ ತಿಳಿಸುತ್ತದೆ: “ಇದಲ್ಲದೆ ಸ್ವರ್ಗದಿಂದ ದೇವರ ಬಳಿಯಿಂದ ಪವಿತ್ರ ನಗರವಾದ ಹೊಸ ಯೆರೂಸಲೇಮ್‌ ಸಹ ಇಳಿದುಬರುವುದನ್ನು ನಾನು ನೋಡಿದೆನು; ಅದು ತನ್ನ ಗಂಡನಿಗಾಗಿ ಅಲಂಕರಿಸಿಕೊಂಡ ವಧುವಿನಂತೆ ಸಿದ್ಧವಾಗಿತ್ತು. ಆಗ ಸಿಂಹಾಸನದಿಂದ ಬಂದ ಗಟ್ಟಿಯಾದ ಧ್ವನಿಯು, ‘ಇಗೋ, ದೇವರ ಗುಡಾರವು ಮಾನವಕುಲದೊಂದಿಗೆ ಇದೆ; ಆತನು ಅವರೊಂದಿಗೆ ವಾಸಮಾಡುವನು ಮತ್ತು ಅವರು ಆತನ ಜನರಾಗಿರುವರು. ದೇವರು ತಾನೇ ಅವರೊಂದಿಗಿರುವನು. ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ’ ಎಂದು ಹೇಳುವುದನ್ನು ನಾನು ಕೇಳಿಸಿಕೊಂಡೆನು.” ಇವು ಅತ್ಯದ್ಭುತ ಆಶೀರ್ವಾದಗಳೇ ಸರಿ! ಕಣ್ಣೀರು, ದುಃಖ, ಗೋಳಾಟ, ನೋವು ಮಾಯವಾಗಿರುವುದು. ಏಕೆಂದರೆ ಅದಕ್ಕೆ ಮುಖ್ಯ ಕಾರಣವಾಗಿರುವ ಮರಣ ನಿರ್ಮೂಲವಾಗಿರುವುದು. ಅನಂತರ ನಿಷ್ಠಾವಂತ ಮಾನವರು ಪರಿಪೂರ್ಣತೆಯನ್ನು ಹೊಂದಿ ದೇವರೊಂದಿಗೆ ಸಂಪೂರ್ಣ ಸಮಾಧಾನ ಸಂಬಂಧಕ್ಕೆ ಬರುವರು.

16 ಯಾಜಕರಾಜರು ತರುವ ಹೆಚ್ಚಿನ ಪ್ರಯೋಜನಗಳನ್ನು ಪ್ರಕಟನೆ 22:1, 2 ತಿಳಿಸುತ್ತದೆ: “ಅವನು ನನಗೆ ಸ್ಫಟಿಕದಂತೆ ಸ್ವಚ್ಛವಾಗಿರುವ ಜೀವಜಲದ ನದಿಯನ್ನು ತೋರಿಸಿದನು; ಅದು ದೇವರ ಮತ್ತು ಕುರಿಮರಿಯ ಸಿಂಹಾಸನದಿಂದ ಹೊರಟು [ಹೊಸ ಯೆರೂಸಲೇಮ್‌] ನಗರದ ವಿಶಾಲವಾದ ಮಾರ್ಗದ ಮಧ್ಯದಲ್ಲಿ ಹರಿಯುತ್ತಿತ್ತು. ನದಿಯ ಉಭಯ ಪಾರ್ಶ್ವಗಳಲ್ಲಿ ಜೀವವೃಕ್ಷಗಳಿದ್ದವು; ಅವು ಪ್ರತಿ ತಿಂಗಳು ಫಲವನ್ನು ಬಿಟ್ಟು, ಫಲದ ಹನ್ನೆರಡು ಬೆಳೆಗಳನ್ನು ಉತ್ಪಾದಿಸುತ್ತಿದ್ದವು. ಆ ಮರಗಳ ಎಲೆಗಳು ಜನಾಂಗಗಳನ್ನು ವಾಸಿಮಾಡುವುದಕ್ಕೋಸ್ಕರವಾಗಿದ್ದವು.” ಈ ದರ್ಶನವು ಜನಾಂಗಗಳು ಅಂದರೆ ಮಾನವ ಕುಟುಂಬವು ಬಾಧ್ಯತೆಯಾಗಿ ಪಡೆದುಕೊಂಡ ಅಪರಿಪೂರ್ಣತೆ ಎಂಬ ವ್ಯಾಧಿಯಿಂದ ಪೂರ್ತಿ ವಾಸಿಯಾಗುವುದು ಹೇಗೆ ಎಂದು ತೋರಿಸಿಕೊಡುತ್ತದೆ. “ಮೊದಲಿದ್ದ ಸಂಗತಿಗಳು” ಹೇಳಹೆಸರಿಲ್ಲದೆ ಗತಿಸಿಹೋಗುವವು.

ಯಾಜಕರಾಜರ ಕೆಲಸದ ಸಮಾಪ್ತಿ

17. ಯಾಜಕರಾಜರು ಏನನ್ನು ಸಾಧಿಸುವರು?

17 ಸಾವಿರ ವರ್ಷಗಳ ಅವಿರತ ಸೇವೆಯ ನಂತರ ಯಾಜಕರಾಜರು ಭೂಮಿಯ ಮೇಲಿನ ತಮ್ಮ ಪ್ರಜೆಗಳನ್ನು ಪರಿಪೂರ್ಣತೆಗೆ ನಡೆಸಿರುವರು. ಆಮೇಲೆ ಅರಸನಾಗಿರುವ ಮಹಾ ಯಾಜಕ ಯೇಸು ಪರಿಪೂರ್ಣ ಮಾನವ ಕುಟುಂಬವನ್ನು ಯೆಹೋವನಿಗೆ ಒಪ್ಪಿಸುವನು. (1 ಕೊರಿಂಥ 15:22-26 ಓದಿ.) ಯಾಜಕರಾಜ್ಯದ ಉದ್ದೇಶ ಅಲ್ಲಿಗೆ ಪೂರ್ಣಗೊಂಡಿರುವುದು.

18. ಯಾಜಕರಾಜ್ಯ ತನ್ನ ಉದ್ದೇಶವನ್ನು ಪೂರೈಸಿದ ನಂತರ ಯೆಹೋವನು ಅದರ ಸದಸ್ಯರನ್ನು ಹೇಗೆ ಉಪಯೋಗಿಸುವನು?

18 ಗೌರವಾನ್ವಿತ ಸುಯೋಗವನ್ನು ಹೊಂದಿದ ಕ್ರಿಸ್ತನ ಈ ಜೊತೆಗಾರರನ್ನು ಯೆಹೋವನು ನಂತರ ಹೇಗೆ ಉಪಯೋಗಿಸುವನು? ಪ್ರಕಟನೆ 22:5ರ ಪ್ರಕಾರ “ಅವರು ಸದಾಸರ್ವದಾ ರಾಜರಾಗಿ ಆಳುವರು.” ಯಾರ ಮೇಲೆ ಆಳ್ವಿಕೆ ನಡೆಸುವರು? ಬೈಬಲ್‌ ಉತ್ತರ ನೀಡುವುದಿಲ್ಲ. ಆದರೆ ಅಮರ ಜೀವನ ಹೊಂದಿರುವ ಅವರು ಯೆಹೋವನಿಗೆ ಅಮೂಲ್ಯರಾಗಿರುವರು. ಅಪರಿಪೂರ್ಣ ಮಾನವರಿಗೆ ಸಹಾಯ ಮಾಡಿದ್ದ ಅವರ ಅನುಭವದ ಕಾರಣ ಯೆಹೋವನ ಮುಂದಿನ ಉದ್ದೇಶಗಳಲ್ಲಿ ಸರ್ವಕಾಲಕ್ಕೂ ಉಪಯೋಗಿಸಲ್ಪಡಲು ಅವರು ಸಮರ್ಥರಾಗಿರುವರು.

19. ಯೇಸುವಿನ ಮರಣವನ್ನು ಸ್ಮರಿಸಲು ಕೂಡಿಬರುವವರಿಗೆ ಯಾವ ವಿಷಯ ನೆನಪಾಗುವುದು?

19 ಬೈಬಲಿನಿಂದ ಕಲಿತ ಈ ವಿಷಯಗಳನ್ನು 2012, ಏಪ್ರಿಲ್‌ 5ರ ಗುರುವಾರ ಯೇಸುವಿನ ಮರಣವನ್ನು ಸ್ಮರಿಸಲು ಕೂಡಿಬರುವಾಗ ನಾವು ನೆನಪಿಸಿಕೊಳ್ಳೋಣ. ಭೂಮಿಯಲ್ಲಿ ಇನ್ನೂ ಇರುವ ಅಭಿಷಿಕ್ತರ ಚಿಕ್ಕ ಗುಂಪು ತಾವು ಹೊಸ ಒಡಂಬಡಿಕೆಯ ಸಹಭಾಗಿಗಳು ಎನ್ನುವುದನ್ನು ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯ ತೆಗೆದುಕೊಳ್ಳುವ ಮೂಲಕ ತೋರಿಸುವರು. ದೇವರ ಉದ್ದೇಶದ ನೆರವೇರಿಕೆಯಲ್ಲಿ ತಮಗಿರುವ ಭಾರಿ ಸುಯೋಗ ಹಾಗೂ ಜವಾಬ್ದಾರಿಯನ್ನು ಅದು ಅವರಿಗೆ ನೆನಪಿಸುವುದು. ನಾವೆಲ್ಲರೂ ಆ ದಿನ ಕೂಡಿಬಂದು ಮಾನವಕುಲದ ಪ್ರಯೋಜನಕ್ಕೆಂದೇ ಯಾಜಕರಾಜರ ಏರ್ಪಾಡನ್ನು ಮಾಡಿದ ಯೆಹೋವ ದೇವರಿಗೆ ಮನದುಂಬಿ ಕೃತಜ್ಞತೆ ತೋರಿಸೋಣ.

[ಅಧ್ಯಯನ ಪ್ರಶ್ನೆಗಳು]

[ಪುಟ 29ರಲ್ಲಿರುವ ಚಿತ್ರ]

ಯಾಜಕರಾಜರು ಮಾನವಕುಲಕ್ಕೆ ದೇವರ ನಿತ್ಯಾಶೀರ್ವಾದಗಳನ್ನು ತರುವರು