ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಾಕ್ಯವನ್ನು ಧೈರ್ಯದಿಂದ ಸಾರಿದರು!

ದೇವರ ವಾಕ್ಯವನ್ನು ಧೈರ್ಯದಿಂದ ಸಾರಿದರು!

ದೇವರ ವಾಕ್ಯವನ್ನು ಧೈರ್ಯದಿಂದ ಸಾರಿದರು!

ಧೈರ್ಯ! ಎದೆಗಾರಿಕೆ! ಇವು ವಿರೋಧವನ್ನು ಎದುರಿಸುವಾಗ ಇರಬೇಕಾದ ಅವಶ್ಯ ಗುಣಗಳು. ನಿಜ ಕ್ರೈಸ್ತರು ಈ ಗುಣಗಳನ್ನು ತೋರಿಸಿದ್ದಾರೆಂದು ‘ದೇವರ ರಾಜ್ಯದ ಕುರಿತು ಕೂಲಂಕಷ ಸಾಕ್ಷಿನೀಡಿ’ (ಇಂಗ್ಲಿಷ್‌) ಮತ್ತು ‘ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು’ (ಇಂಗ್ಲಿಷ್‌) ಎಂಬ ಪುಸ್ತಕಗಳು ವಿವರಿಸುತ್ತವೆ. ಒಂದನೇ ಶತಮಾನದ ನಮ್ಮ ಜೊತೆವಿಶ್ವಾಸಿಗಳಂತೆ ನಾವು ಸಹ ಯೆಹೋವ ದೇವರ ವಾಕ್ಯವನ್ನು ಸಾರಲು ಧೈರ್ಯಕ್ಕಾಗಿ ಮತ್ತು ಪವಿತ್ರಾತ್ಮಕ್ಕಾಗಿ ಆತನಲ್ಲಿ ಮೊರೆಯಿಡಬೇಕು.—ಅ. ಕಾ. 4:23-31.

ಒಂದನೇ ಮಹಾಯುದ್ಧದ ಸಮಯದಲ್ಲಿ ನಮ್ಮ ಸಾರುವ ಕೆಲಸದ ಮುನ್ನಡೆಯ ಬಗ್ಗೆ ಒಬ್ಬ ಸಹೋದರರು ಹೀಗೆ ವಿವರಣೆ ಕೊಟ್ಟರು: “ದೇವರ ಸೇವಕರು ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ ಪುಸ್ತಕದ ಏಳನೆಯ ಸಂಪುಟವಾದ ದ ಫಿನಿಷ್ಡ್‌ ಮಿಸ್ಟರಿ ಅನ್ನು ತುಂಬಾ ಉತ್ಸಾಹದಿಂದ ವಿತರಿಸಿದರು. ಬೈಬಲನ್ನು ಬಿಟ್ಟರೆ ಅಷ್ಟರ ವರೆಗೆ ಬೇರೆ ಯಾವ ಪುಸ್ತಕವೂ ಈ ರೀತಿಯ ವಿತರಣೆಯನ್ನು ಕಂಡಿರಲಿಲ್ಲ. 1918ನೇ ವರ್ಷದಲ್ಲಿ ರಾಜ್ಯ ವಾರ್ತೆ ನಂ. 1 ಬಿಡುಗಡೆ ಕಂಡಿತು. ಅದರ ಹಿಂದೆಯೇ ರಾಜ್ಯ ವಾರ್ತೆ ನಂ. 2 ಬಿಡುಗಡೆ ಆಗಿ ದ ಫಿನಿಷ್ಡ್‌ ಮಿಸ್ಟರಿ ಅನ್ನು ಸರಕಾರ ಏಕೆ ಮುಟ್ಟುಗೋಲು ಹಾಕಿತು ಎಂಬ ಕಾರಣವನ್ನು ಬಹಿರಂಗಪಡಿಸಿತು. ಸ್ವಲ್ಪದರಲ್ಲೇ ರಾಜ್ಯ ವಾರ್ತೆ ನಂ. 3 ಸಹ ಪ್ರಕಟಗೊಂಡಿತು. ಅಭಿಷಿಕ್ತ ವರ್ಗದವರು ಈ ಎಲ್ಲಾ ಪ್ರಕಾಶನಗಳನ್ನು ಎಲ್ಲ ಕಡೆ ವಿತರಿಸಿದರು. ರಾಜ್ಯ ವಾರ್ತೆ ಅನ್ನು ವಿತರಿಸಲು ತುಂಬಾ ನಂಬಿಕೆ ಮತ್ತು ಧೈರ್ಯ ಬೇಕಿತ್ತು.”

ಇಂದು ಹೊಸ ರಾಜ್ಯ ಪ್ರಚಾರಕರಿಗೆ ಸಾರುವುದು ಹೇಗೆಂದು ತರಬೇತಿ ಕೊಡಲಾಗುತ್ತದೆ. ಆದರೆ ಹಿಂದಿನ ಕಾಲದಲ್ಲಿ ಹಾಗೆ ಇರಲಿಲ್ಲ. ಅಮೆರಿಕಾದಲ್ಲಿ ವಾಸವಿದ್ದ ಪೋಲಿಷ್‌ ಭಾಷೆಯ ಸಹೋದರರೊಬ್ಬರು ತಾವು 1922ರಲ್ಲಿ ಮೊದಲ ಬಾರಿ ಸೇವೆಗೆ ಹೋದ ಅನುಭವವನ್ನು ಹೀಗೆ ಹಂಚಿಕೊಂಡರು: “ನಾನೊಬ್ಬನೇ ಸೇವೆಗೆ ಹೋಗಿದ್ದೆ. ಸಾಹಿತ್ಯವನ್ನು ಹೇಗೆ ವಿತರಿಸಬೇಕು ಎನ್ನುವ ಜ್ಞಾನವೇ ನನಗಿರಲಿಲ್ಲ. ಇಂಗ್ಲಿಷ್‌ ಮಾತಾಡಲು ಅಷ್ಟಾಗಿ ಬರುತ್ತಿರಲಿಲ್ಲ. ಮೊದಲು ಒಬ್ಬ ಡಾಕ್ಟರರ ಆಫೀಸ್‌ನ ಬಾಗಿಲು ತಟ್ಟಿದೆ. ಆಗ ಒಬ್ಬಾಕೆ ನರ್ಸ್‌ ಹೊರಬಂದರು. ನನ್ನ ನಡುಕ ಹೆದರಿಕೆ ಈಗಲೂ ನೆನಪಿದೆ. ಥಟ್ಟನೆ ಬ್ಯಾಗ್‌ನಿಂದ ಪುಸ್ತಕ ತೆಗೆಯಲು ಹೋಗಿ ಒಳಗಿದ್ದ ಎಲ್ಲಾ ಪುಸ್ತಕಗಳನ್ನು ನರ್ಸ್‌ ಕಾಲ ಮೇಲೆ ಹಾಕಿಬಿಟ್ಟೆ. ಏನೋ ಹೇಳಿ ಹೇಗೋ ಒಂದು ಪ್ರಕಾಶನವನ್ನು ಆಕೆಗೆ ನೀಡಿದೆ. ಆದರೆ ಅಲ್ಲಿಂದ ಹೊರಡುವಷ್ಟರಲ್ಲಿ ನನ್ನ ಭಯ ಹೋಗಿತ್ತು. ಅದು ಯೆಹೋವ ದೇವರ ಆಶೀರ್ವಾದವಲ್ಲದೆ ಬೇರೇನೂ ಅಲ್ಲ. ಆ ದಿನ ವ್ಯಾಪಾರ ಮಳಿಗೆಗಳಿದ್ದ ಬೀದಿಯಲ್ಲಿ ಅನೇಕ ಪುಸ್ತಿಕೆಗಳನ್ನು ವಿತರಿಸಿದೆ.”

“1933ರ ಸಮಯದಲ್ಲಿ ರಾಜ್ಯ ಸಂದೇಶವನ್ನು ತಿಳಿಸಲು ಅನೇಕ ಸಹೋದರರು ಸೌಂಡ್‌ ಕಾರುಗಳನ್ನು ಬಳಸುತ್ತಿದ್ದರು.” ಈ ಮಾತನ್ನು ಹೇಳಿದ ಸಹೋದರಿ ಅಮೆರಿಕಾದ ಕ್ಯಾಲಿಫೋರ್ನಿಯಾದ ಪರ್ವತ ಪ್ರದೇಶದಲ್ಲಿ ಸಾಕ್ಷಿ ದಂಪತಿಯೊಂದಿಗೆ ತಾವು ಮಾಡಿದ ಸಾರುವ ಕಾರ್ಯದ ನೆನಪನ್ನು ಹೀಗೆ ಬಿಚ್ಚಿಟ್ಟರು: “ಆ ಸಹೋದರ ಸೌಂಡ್‌ ಕಾರನ್ನು ದೊಡ್ಡ ಬೆಟ್ಟದ ಮೇಲಕ್ಕೆ ತೆಗೆದುಕೊಂಡು ಹೋದರು. ನಾವು ಕೆಳಗೆ ಉಳಿದುಕೊಂಡೆವು. ರೆಕಾರ್ಡ್‌ ಹಾಕಿದಾಗ ಸ್ವರ್ಗದಿಂದ ಸಂದೇಶ ಬಂದಂತೆ ಭಾಸವಾಯಿತು. ಪಟ್ಟಣದ ಜನರು ಶಬ್ದ ಎಲ್ಲಿಂದ ಬರುತ್ತಿದೆ ಎಂದು ಹುಡುಕಿದರು. ಅವರಿಗೆ ಗೊತ್ತಾಗಲಿಲ್ಲ. ರೆಕಾರ್ಡ್‌ ಮುಕ್ತಾಯವಾದಾಗ ನಾವು ಜನರನ್ನು ಭೇಟಿಯಾಗಿ ಸುವಾರ್ತೆ ತಿಳಿಸಿದೆವು. ಈ ರೀತಿ ಸೌಂಡ್‌ ಕಾರ್‌ ಇದ್ದ ಬೇರೆ ಇಬ್ಬರು ಸಹೋದರರೊಂದಿಗೆ ಸಹ ನಾನು ಸೇವೆ ಮಾಡಿದ್ದೇನೆ. ಹೆಚ್ಚಿನ ಜನರಿಗೆ ಸಂದೇಶ ಕೇಳಲು ಇಷ್ಟವಿರುತ್ತಿರಲಿಲ್ಲ. ಹಾಗೆಂದ ಮಾತ್ರಕ್ಕೆ ಸೌಂಡ್‌ ಕಾರ್‌ನಿಂದ ಹೊರಟು ಬರುತ್ತಿದ್ದ ಭಾಷಣ ಅವರ ಕಿವಿಯೊಳಗೆ ಹೋಗದಿರುತ್ತಾ? ಅದು ಅವರ ಮನೆಗಳ ಮೂಲೆಮೂಲೆಗೂ ಕೇಳಿಸುತ್ತಿತ್ತು. ಯೆಹೋವ ದೇವರು ಆಯಾ ಸಮಯಕ್ಕೆ ತಕ್ಕ ವಿಧಾನ ಬಳಸುವಂತೆ ಮಾರ್ಗದರ್ಶಿಸುತ್ತಾನೆ ಎನ್ನುವುದನ್ನು ನಾವು ಗಮನಿಸಿದ್ದೆವು. ಆ ವಿಧಾನವನ್ನು ಉಪಯೋಗಿಸುವುದು ಸುಲಭವಾಗಿರದಿದ್ದರೂ ಧೈರ್ಯ ತೋರಿಸುವಾಗ ಯಾವಾಗಲೂ ಅದರ ಉದ್ದೇಶ ಈಡೇರುತ್ತಿತ್ತು. ಯೆಹೋವ ದೇವರ ನಾಮ ಮಹಿಮೆಗೊಳ್ಳುತ್ತಿತ್ತು.”

1930ರಿಂದ ಸುಮಾರು 1944ರ ವರೆಗೆ ಶುಶ್ರೂಷೆಯಲ್ಲಿ ಫೋನೋಗ್ರಾಫ್‌ ಮತ್ತು ಬೈಬಲ್‌ ಉಪನ್ಯಾಸಗಳ ರೆಕಾರ್ಡುಗಳನ್ನು ಬಳಸಲಾಯಿತು. ಕ್ರೈಸ್ತಳೊಬ್ಬಳು ತನ್ನ ನೆನಪನ್ನು ಹಂಚಿಕೊಳ್ಳುವುದನ್ನು ಕೇಳಿ: “ಒಬ್ಬ ಕ್ರೈಸ್ತ ಯುವತಿ ಫೋನೋಗ್ರಾಫ್‌ನೊಂದಿಗೆ ಮನೆಮನೆ ಸೇವೆ ಮಾಡುತ್ತಿದ್ದಳು. ಒಂದು ಮನೆಯಲ್ಲಿ ಫೋನೋಗ್ರಾಫ್‌ ನುಡಿಸಿದಾಗ ಮನೆಯವನಿಗೆ ಎಷ್ಟು ಸಿಟ್ಟು ಬಂತೆಂದರೆ ಅದನ್ನು ಝಾಡಿಸಿ ಒದ್ದು ಬಿಟ್ಟ. ಅದು ಅಂಗಳದಾಚೆ ಅಷ್ಟು ದೂರದಲ್ಲಿ ಉರುಳಿಬಿತ್ತು. ಆಶ್ಚರ್ಯವೆಂದರೆ ಒಂದೇ ಒಂದು ರೆಕಾರ್ಡ್‌ಗೂ ಹಾನಿಯಾಗಿರಲಿಲ್ಲ. ದೂರದಲ್ಲಿ ಟ್ರಕ್‌ ನಿಲ್ಲಿಸಿ ಊಟಮಾಡುತ್ತಿದ್ದ ಮೂವರು ಗಂಡಸರು ಇದನ್ನೆಲ್ಲಾ ಗಮನಿಸುತ್ತಿದ್ದರು. ಅವರು ಸಹೋದರಿಯನ್ನು ಕರೆದು ರೆಕಾರ್ಡ್‌ ನುಡಿಸುವಂತೆ ವಿನಂತಿಸಿಕೊಂಡರು. ಸಾಹಿತ್ಯವನ್ನೂ ತೆಗೆದುಕೊಂಡರು. ಈ ಖುಷಿ ಆ ಮನೆಯವನ ವರ್ತನೆ ತಂದ ದುಃಖವನ್ನು ಮರೆಸಿತು.” ಹೌದು ವಿರೋಧವನ್ನು ಎದುರಿಸಲು ಧೈರ್ಯ ಬೇಕಿತ್ತು.

ಆ ಸಹೋದರಿ ನೆನಪಿನಾಳದಿಂದ ಮತ್ತೊಂದು ವಿಷಯವನ್ನು ಹೊರತೆಗೆದರು: “1940ರಲ್ಲಿ ಬೀದಿಗಳಲ್ಲಿ ಪತ್ರಿಕೆ ನೀಡುವ ಕೆಲಸ ಆರಂಭಗೊಂಡದ್ದು ನನಗೆ ಇನ್ನೂ ನೆನಪಿದೆ. ಆದರೆ ಮುಂಚೆ ನಾವು ಬೇರೊಂದು ರೀತಿಯ ಸಾಕ್ಷಿಕಾರ್ಯದಲ್ಲಿ ತೊಡಗಿದೆವು. ಒಂದು ಸಾಲಿನಲ್ಲಿ ಒಬ್ಬರ ಹಿಂದೆ ಒಬ್ಬರು ಫಲಕಗಳನ್ನು ಹಿಡಿದುಕೊಂಡು ರಸ್ತೆ ಬದಿಯಲ್ಲಿ ನಡೆಯುತ್ತಿದ್ದೆವು. ಫಲಕಗಳ ಮೇಲೆ ‘ಧರ್ಮವು ಒಂದು ಪಾಶ ಮತ್ತು ವಂಚನೆ’ ‘ದೇವರ ಮತ್ತು ರಾಜನಾದ ಕ್ರಿಸ್ತನ ಸೇವೆ ಮಾಡಿರಿ’ ಎಂದು ಬರೆದಿರುತ್ತಿತ್ತು. ಹಾಗೆ ಹೋಗುತ್ತಿರುವಾಗ ಜನರಿಗೆ ಕರಪತ್ರಗಳನ್ನು ಉಚಿತವಾಗಿ ಹಂಚುತ್ತಿದ್ದೆವು. ಈ ರೀತಿಯ ಸಾಕ್ಷಿಕಾರ್ಯದಲ್ಲಿ ತೊಡಗಲು ತುಂಬ ಧೈರ್ಯ ಬೇಕಿತ್ತು. ಇದು ದೇವರ ಹೆಸರನ್ನು, ದೇವಜನರು ಯಾರೆಂಬುದನ್ನು ಜನರ ಗಮನಕ್ಕೆ ತರುತ್ತಿತ್ತು.”

ಇನ್ನೊಬ್ಬ ಸಹೋದರಿ ಹೀಗನ್ನುತ್ತಾರೆ: “ರಸ್ತೆಯ ಬದಿಯಲ್ಲಿ ನಿಂತು ಪತ್ರಿಕೆಗಳನ್ನು ಜನರಿಗೆ ಕೊಡುವುದು ಹಳ್ಳಿಗಳಲ್ಲಿ ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲೂ ಆಗ ಯೆಹೋವನ ಸಾಕ್ಷಿಗಳಿಗೆ ತುಂಬ ವಿರೋಧವಿತ್ತು. . . . ಕೈಯಲ್ಲಿ ಪತ್ರಿಕೆಗಳನ್ನು ಹಿಡಿದು ಜನರಿಗೆ ತೋರಿಸುತ್ತಾ ಅವರಿಗೆ ಕೇಳುವಂತೆ ಜೋರಾಗಿ ಕೂಗಿ ಹೇಳಬೇಕಾದರೆ ಧೈರ್ಯ ಬೇಕಿತ್ತು. ಆದರೂ ಒಂದೇ ಒಂದು ಶನಿವಾರ ನಾವು ತಪ್ಪಿಸಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ಜನರು ನಮಗೆ ಚೆನ್ನಾಗಿ ಕಿವಿಗೊಡುತ್ತಿದ್ದರು. ಇನ್ನು ಕೆಲವೊಮ್ಮೆ ವಿರೋಧಿಗಳು ನಮ್ಮ ಸುತ್ತಲೂ ಗುಂಪುಗಟ್ಟುತ್ತಿದ್ದರು. ಅವರು ಕೇಡು ಮಾಡುವ ಮುಂಚೆ ನಾವು ಅಲ್ಲಿಂದ ಜಾಗ ಖಾಲಿಮಾಡುತ್ತಿದ್ದೆವು.”

ಎರಡನೇ ಮಹಾ ಯುದ್ಧದ ಸಮಯದಲ್ಲಿ ತೀವ್ರ ಹಿಂಸೆಯ ಹೊರತಾಗಿಯೂ ಯೆಹೋವನ ಸಾಕ್ಷಿಗಳು ಶುಶ್ರೂಷೆಯನ್ನು ಧೈರ್ಯದಿಂದ ಮುಂದುವರಿಸಿದರು. 1940 ಡಿಸೆಂಬರ್‌ 1ರಿಂದ 1941 ಜನವರಿ 12ರ ವರೆಗೆ 43 ದಿನಗಳ ಅಭಿಯಾನದ ಸಮಯದಲ್ಲಿ ಅಮೆರಿಕದಲ್ಲಿ ಸುಮಾರು 50,000 ಪ್ರಚಾರಕರು 80 ಲಕ್ಷ ಪುಸ್ತಿಕೆಗಳನ್ನು ವಿತರಿಸಿದರು. ಆ ಸಮಯಾವಧಿಯನ್ನು “ಧೈರ್ಯ” ಪ್ರದರ್ಶನಾ ಸಮಯ ಎಂದು ಕರೆಯಲಾಗುತ್ತಿತ್ತು.

ದೇವರ ಸಂಘಟನೆಯಲ್ಲಿರುವ ಅನೇಕ ವೃದ್ಧರಿಗೆ ಅವರು ಧೈರ್ಯದಿಂದ ಸುವಾರ್ತೆ ಸಾರಿದ್ದು ಇಂದಿಗೂ ಚೆನ್ನಾಗಿ ನೆನಪಿದೆ. ಅಂದಿನ ಕ್ರೈಸ್ತರು ಆಗಾಗ, ‘ಅಂತ್ಯ ಬರುವ ವರೆಗೂ ಹುರುಪಿನಿಂದ ಸಾರುತ್ತಿರೋಣ!’ ಎಂಬ ಮಾತನ್ನು ಹೇಳುತ್ತಲೇ ಇರುತ್ತಿದ್ದರು. ಇದು ಅವರಲ್ಲಿ ಎಷ್ಟು ಹುರುಪು ಮತ್ತು ಧೈರ್ಯವಿತ್ತೆಂದು ತೋರಿಸುತ್ತಿತ್ತು. ಸೈತಾನನ ಈ ದುಷ್ಟ ಲೋಕವು ನಾಶವಾಗುವ ಮೊದಲು ನಮ್ಮ ಸಾರುವ ವಿಧಾನದಲ್ಲಿ ಯಾವ ಬದಲಾವಣೆ ಆಗುವುದೆಂದು ನಮಗೆ ತಿಳಿದಿಲ್ಲ. ಆದರೆ ಏನೇ ಆಗಲಿ ಯೆಹೋವನ ಸಹಾಯದೊಂದಿಗೆ ಆತನ ವಾಕ್ಯವನ್ನು ನಾವು ನಂಬಿಕೆ ಹಾಗೂ ಧೈರ್ಯದಿಂದ ಪ್ರಚುರಪಡಿಸುವೆವು.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

ಸುವಾರ್ತೆ ಸಾರಲು ಯಾವಾಗಲೂ ಧೈರ್ಯದ ಅಗತ್ಯವಿತ್ತು