“ನನ್ನನ್ನೇ ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿದ್ದರು”
ನಮ್ಮ ಸಂಗ್ರಹಾಲಯ
“ನನ್ನನ್ನೇ ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿದ್ದರು”
ಪೂರ್ಣ ಸಮಯದ ಸೌವಾರ್ತಿಕಳಾದ ಸಹೋದರಿ ಶಾರ್ಲೆಟ್ ವೈಟ್ ಅಮೆರಿಕದ ಕೆಂಟಕಿಯಲ್ಲಿರುವ ಲೂಯಿವಿಲ್ ನಗರಕ್ಕೆ ಬಂದಾಗ ಎಲ್ಲರ ದೃಷ್ಟಿ ಅತ್ತ ಹೊರಳಿತು. ಕಾರಣ ಚಕ್ರಗಳ ಮೇಲೆ ವಿಜೃಂಭಿಸುತ್ತಿದ್ದ ಆಕೆಯ ಸೂಟ್‌ಕೇಸ್!! ಹೊರುವ ಬದಲು ಆಕೆ ಸಲೀಸಾಗಿ ಎಳೆದುಕೊಂಡು ಹೋಗುತ್ತಿದ್ದಳು!
ಅದು ಇಸವಿ 1908ರಲ್ಲಿ ನಡೆದ ಘಟನೆ. ಪಟ್ಟಣದ ಜನರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದ ಆ ಹೊಸ ಆವಿಷ್ಕಾರವೇ ‘ಅರುಣೋದಯ ಬಂಡಿ.’ ಜನರ ಕೌತುಕವನ್ನು ಸಹೋದರಿ ವೈಟ್ ಹೀಗೆ ಬಣ್ಣಿಸಿದರು: “ಜನರ ಬಾಯಲ್ಲಿ ಬಂಡಿಯದೇ ಸುದ್ದಿ. ನನ್ನನ್ನೇ ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿದ್ದರು.”
ಆ ಸಮಯದಲ್ಲಿ ಬೈಬಲ್ ವಿದ್ಯಾರ್ಥಿಗಳೆಂದು ಹೆಸರುವಾಸಿಯಾಗಿದ್ದ ಯೆಹೋವನ ಸಾಕ್ಷಿಗಳು ತಾವು ಬೈಬಲ್ ಅಧ್ಯಯನದಿಂದ ಕಲಿತ ಸತ್ಯವನ್ನು ಇತರರಿಗೂ ತಿಳಿಸುವುದು ಪ್ರಾಮುಖ್ಯವೆಂದು ಮನಗಂಡರು. ಈ ಜ್ಞಾನ ಪಡೆಯಲು ಹೆಚ್ಚಿನವರಿಗೆ ಸಹಾಯಮಾಡಿದ್ದು ‘ಮಿಲೇನಿಯಲ್ ಡಾನ್’ (ಸಹಸ್ರ ವರ್ಷದ ಅರುಣೋದಯ) ಎಂಬ ಪುಸ್ತಕ ಸಂಪುಟಗಳು. ಇಂಗ್ಲಿಷ್ ಭಾಷೆಯಲ್ಲಿ ಅನೇಕ ಸಂಪುಟಗಳಲ್ಲಿ ಪ್ರಕಟವಾದ ಈ ಪುಸ್ತಕ ನಂತರ ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಎಂಬ ಹೆಸರು ಪಡೆಯಿತು. “ಬೈಬಲ್ ವಿದ್ಯಾರ್ಥಿಗಳ ಸಹಾಯ ಸಾಧನ” ಎಂದೇ ಖ್ಯಾತವಾಗಿದ್ದ ಈ ಸಂಪುಟಗಳನ್ನು ದೂರ ದೂರದ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಹೊತ್ತೊಯ್ದು ಆಸಕ್ತರ ಕೈಗೆ ತಲಪಿಸಲು ಹುಮ್ಮಸ್ಸಿನ ಕ್ರೈಸ್ತರು ಸಿದ್ಧರಿದ್ದರು.
ಇಸವಿ 1908ರಲ್ಲಿ ಸಹೋದರಿ ವೈಟ್ ಹಾಗೂ ಇತರ ಉತ್ಸಾಹೀ ರಾಜ್ಯ ಘೋಷಕರು ಈ ಪುಸ್ತಕದ ಆರು ಸಂಪುಟಗಳಿಗೆ ಜನರಿಂದ ಪಡೆಯುತ್ತಿದ್ದ ಬೆಲೆ 1.65 ಅಮೆರಿಕನ್ ಡಾಲರ್. ಆದರೆ ಬಟ್ಟೆರಟ್ಟಿನ ಈ ಸಂಪುಟಗಳನ್ನು ಪ್ರಥಮ ಭೇಟಿಯಲ್ಲಿ ನೀಡುತ್ತಿರಲಿಲ್ಲ. ಜನರಿಂದ ಪುಸ್ತಕದ ವಿನಂತಿಗಳನ್ನು ಪಡೆದು ನಂತರ ಇನ್ನೊಂದು ದಿನ ಪುಸ್ತಕಗಳನ್ನು ಕೊಟ್ಟು ಬರುತ್ತಿದ್ದರು. ಹೆಚ್ಚಾಗಿ ಜನರ ಸಂಬಳದ ದಿನ ಹೋಗಿ ಕೊಡುತ್ತಿದ್ದರು. ಬೆಲೆ ನ್ಯಾಯೋಚಿತವಾಗಿತ್ತು. ಒಬ್ಬ ವಿರೋಧಿಯಂತೂ ಪುಸ್ತಕಗಳ ಬೆಲೆ ಅಗ್ಗವಿರುವುದನ್ನೇ ನೆಪಮಾಡಿಕೊಂಡು ಆಕ್ಷೇಪವೆತ್ತಿದನು!
ಸಹೋದರಿ ಮಲಿಂಡ ಕೀಫರ್ ಆ ದಿನಗಳ ತಮ್ಮ ಸೇವೆಯನ್ನು ಮೆಲುಕುಹಾಕುತ್ತಾ, ವಾರಕ್ಕೆ 200ರಿಂದ 300 ಪುಸ್ತಕಗಳ ಆರ್ಡರ್ ಸಿಗುತ್ತಿತ್ತು ಎನ್ನುತ್ತಾರೆ. ಇಷ್ಟು ಜನರಿಗೆ ಪುಸ್ತಕಗಳನ್ನು ವಿತರಿಸುವುದು ಆ ಕ್ರೈಸ್ತರಿಗೆ ದುಸ್ತರವಾಯಿತು. ಕಾರಣವಿಷ್ಟೆ. ಪುಸ್ತಕಗಳ ಭಾರ! ಆರನೇ
ಸಂಪುಟ ಒಂದರಲ್ಲೇ 740 ಪುಟಗಳಿದ್ದವು. “50 ಪುಸ್ತಕಗಳ ತೂಕ 40 ಪೌಂಡ್ [18 ಕಿಲೋ]” ಎಂದು ಕಾವಲಿನ ಬುರುಜು ಪತ್ರಿಕೆ ವರದಿಸಿತು. ಜನರ ಕೈಗೆ ಈ ಪುಸ್ತಕಗಳನ್ನು ತಲಪಿಸುವುದು ಎಷ್ಟು ಕಷ್ಟವೆಂದು ಈಗ ನೀವೇ ಊಹಿಸಬಹುದು. ಸಹೋದರಿಯರಿಗಂತೂ ತುಂಬ ತ್ರಾಸದಾಯಕವಾಗಿತ್ತು.ಈ ಸಮಸ್ಯೆಯಿಂದ ಪಾರಾಗಲು ಸಹೋದರ ಜೇಮ್ಸ್ ಕೋಲ್ ಒಂದು ಉಪಾಯ ಕಂಡುಹಿಡಿದರು. ಸೂಟ್‌ಕೇಸ್‌ಗೆ ಜೋಡಿಸಬಹುದಾದ ದ್ವಿಚಕ್ರ ಗಾಡಿಯನ್ನು ಆವಿಷ್ಕರಿಸಿದರು. ಇದನ್ನು ಬೇಕಾದಾಗ ಮಡಚಿಡಬಹುದಿತ್ತು. ಪುಸ್ತಕಗಳು ತುಂಬಿದ್ದ ಭಾರವಾದ ರಟ್ಟಿನ ಬಾಕ್ಸ್‌ಗಳನ್ನು ಹೊರುವುದರಿಂದ ತಮ್ಮ ಈ ಹೊಸ ಆವಿಷ್ಕಾರ ವಿಮುಕ್ತಿ ಕೊಟ್ಟ ಸಂತೋಷದಲ್ಲಿ ಆ ಸಹೋದರರು ಹೀಗಂದರು: “ಇನ್ನು ಮುಂದೆ ರಟ್ಟೆ ಮುರಿಯುವುದು ತಪ್ಪಿತು.” ಈ ಬಂಡಿಯನ್ನು ಅವರು 1908ರಲ್ಲಿ ಒಹಾಯೋದ ಸಿನ್‌ಸಿನ್ನಾಟಿಯಲ್ಲಿ ನಡೆದ ಅಧಿವೇಶನದಲ್ಲಿ ಪರಿಚಯಿಸಿದರು. ಗಾಡಿಯ ಕ್ರಾಸ್ ಬಾರ್‌ನ ಎರಡು ಕೊನೆಗಳಲ್ಲಿರುವ ಬಟನ್‌ಗಳಲ್ಲಿ “ಡಾನ್-ಮೊಬೈಲ್” (ಅರುಣೋದಯ ಬಂಡಿ) ಎಂದು ಕೆತ್ತಲಾಗಿತ್ತು. ಸಹಸ್ರ ವರ್ಷದ ಅರುಣೋದಯ ಸಂಪುಟಗಳನ್ನು ಕೊಂಡೊಯ್ಯುವ ಉದ್ದೇಶಕ್ಕಾಗಿ ಇದನ್ನು ತಯಾರಿಸಿದ್ದರಿಂದ ಈ ಹೆಸರು ಸೂಕ್ತವಾಗಿತ್ತು. ಬಂಡಿಯ ಉಪಯೋಗ ಕಷ್ಟವಾಗಿರಲಿಲ್ಲ. ಸ್ವಲ್ಪ ಅಭ್ಯಾಸ ಮಾಡಿಕೊಂಡರೆ ಪುಸ್ತಕಗಳು ತುಂಬಿದ ಈ ಬಂಡಿಯನ್ನು ಒಂದೇ ಕೈಯಲ್ಲಿ ಎಳೆದೊಯ್ಯಬಹುದಿತ್ತು. ವ್ಯಕ್ತಿಯ ಎತ್ತರಕ್ಕೆ ತಕ್ಕಂತೆ ಬಂಡಿಯನ್ನು ಹೊಂದಿಸಿಕೊಳ್ಳಲು ಸಾಧ್ಯವಿತ್ತು. ಒರಟಾದ ದಾರಿಗಳಲ್ಲೂ ಈ ಬಂಡಿ ಸಲೀಸಾಗಿ ಓಡುತ್ತಿತ್ತು. ಪುಸ್ತಕಗಳನ್ನೆಲ್ಲ ಖಾಲಿಮಾಡಿ ಮನೆಗೆ ಹಿಂತೆರಳುವಾಗ ರಬ್ಬರ್ ಚಕ್ರಗಳನ್ನು ಮೇಲಕ್ಕೆ ಮಡಚಿ ಸೂಟ್‌ಕೇಸನ್ನು ಕೈಯಲ್ಲಿ ಹಿಡಿದುಕೊಂಡು ಬರಬಹುದಿತ್ತು.
ಈ ಅರುಣೋದಯ ಬಂಡಿ ಪೂರ್ಣ ಸಮಯದ ಸೇವೆ ಮಾಡುತ್ತಿದ್ದ ಸಹೋದರಿಯರಿಗೆ ಉಚಿತವಾಗಿತ್ತು. ಬೇರೆಯವರು 2.50 ಅಮೆರಿಕನ್ ಡಾಲರ್ ಬೆಲೆ ತೆರಬೇಕಿತ್ತು. ಸಹೋದರಿ ಕೀಫರ್ (ಚಿತ್ರದಲ್ಲಿರುವವರು) ಈ ಬಂಡಿಯನ್ನು ಉಪಯೋಗಿಸುವುದರಲ್ಲಿ ಎಷ್ಟು ನಿಸ್ಸೀಮರಾದರೆಂದರೆ ಒಂದು ಕೈಯಲ್ಲಿ ಬಂಡಿ ಹಿಡಿದು ಇನ್ನೊಂದು ಕೈಯಲ್ಲಿ ಪುಸ್ತಕ ತುಂಬಿದ ಬ್ಯಾಗನ್ನು ಒಯ್ಯುತ್ತಿದ್ದರು. ಅಮೆರಿಕದ ಪೆನ್ಸಿಲ್ವೇನಿಯದ ಒಂದು ಗಣಿಗಾರಿಕೆಯ ಪಟ್ಟಣದಲ್ಲಿ ಆಸಕ್ತರಿಗೆ ಆರ್ಡರ್‌ಗಳನ್ನು ತಲಪಿಸಲು ದಿನಕ್ಕೆ ಮೂರು ನಾಲ್ಕು ಬಾರಿ ಅರುಣೋದಯ ಬಂಡಿಯೊಂದಿಗೆ ಸೇತುವೆ ದಾಟಿ ಹೋಗಿಬರುತ್ತಿದ್ದರು.
ಇಂದು ವಿಮಾನ ನಿಲ್ದಾಣ, ನಗರದ ಮುಖ್ಯ ಬೀದಿಗಳಲ್ಲಿ ಎಲ್ಲೆಂದರಲ್ಲಿ ಚಕ್ರಗಳಿರುವ (ಟ್ರಾಲಿ) ಸೂಟ್‌ಕೇಸ್ ಹರಿದಾಡುವ ದೃಶ್ಯ ಸರ್ವೇಸಾಮಾನ್ಯ. ಇದರ ಆವಿಷ್ಕಾರ ಆಗಿದ್ದು ಇಸವಿ 1987ರಲ್ಲಿ ಒಬ್ಬ ವಿಮಾನ ಚಾಲಕನಿಂದ. ಆದರೆ ಸುಮಾರು 100 ವರ್ಷಗಳ ಹಿಂದೆಯೇ ಹುರುಪಿನ ಬೈಬಲ್ ವಿದ್ಯಾರ್ಥಿಗಳು ಇದನ್ನು ಕಂಡುಹಿಡಿದು ಉಪಯೋಗಿಸಿದ್ದರು. ಜನರು ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿದ್ದಾಗ ಖುಷಿಪಟ್ಟರು. ಏಕೆಂದರೆ ಅರುಣೋದಯ ಬಂಡಿ ಬೈಬಲ್ ಸತ್ಯವನ್ನು ಎಲ್ಲೆಡೆಯೂ ಹೊತ್ತೊಯ್ದು ಪಸರಿಸುತ್ತಿತ್ತು.
[ಪುಟ 32ರಲ್ಲಿರುವ ಸಂಕ್ಷಿಪ್ತ ವಿವರಣೆ]
ಸಹೋದರಿ ಕೀಫರ್ ಆಸಕ್ತರಿಗೆ ಆರ್ಡರ್‌ಗಳನ್ನು ತಲಪಿಸಲು ದಿನಕ್ಕೆ ಮೂರು ನಾಲ್ಕು ಬಾರಿ ಅರುಣೋದಯ ಬಂಡಿಯೊಂದಿಗೆ ಸೇತುವೆ ದಾಟಿ ಹೋಗಿಬರುತ್ತಿದ್ದರು
[ಪುಟ 32ರಲ್ಲಿರುವ ಸಂಕ್ಷಿಪ್ತ ವಿವರಣೆ]
ಡಾನ್ ಸಂಪುಟಗಳನ್ನು ಸಾಗಿಸುವ ಸಮಸ್ಯೆ ಬಗೆಹರಿಯಿತು