ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತುರ್ತುಪ್ರಜ್ಞೆಯಿಂದ ಸೇವೆಮಾಡಿ

ತುರ್ತುಪ್ರಜ್ಞೆಯಿಂದ ಸೇವೆಮಾಡಿ

ತುರ್ತುಪ್ರಜ್ಞೆಯಿಂದ ಸೇವೆಮಾಡಿ

“ವಾಕ್ಯವನ್ನು ಸಾರು; . . . ತುರ್ತಿನಿಂದ ಅದರಲ್ಲಿ ತಲ್ಲೀನನಾಗಿರು.”—2 ತಿಮೊ. 4:2.

ವಿವರಿಸುವಿರಾ?

ಒಂದನೇ ಶತಮಾನದ ಕ್ರೈಸ್ತರು ತುರ್ತುಪ್ರಜ್ಞೆಯಿಂದ ಸಾರಿದ್ದೇಕೆ?

ತುರ್ತುಪ್ರಜ್ಞೆಯನ್ನು ನಾವು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?

ದೇವರ ರಾಜ್ಯದ ಕುರಿತು ಸಾರುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ತುರ್ತಿನದ್ದಾಗಿದೆ ಏಕೆ?

1, 2. ‘ತುರ್ತಿನಿಂದ ಸಾರುವುದರಲ್ಲಿ ತಲ್ಲೀನನಾಗಿರು’ ಎಂಬ ಆಜ್ಞೆಯ ಕುರಿತು ಯಾವ ಪ್ರಶ್ನೆಗಳು ಏಳುತ್ತವೆ?

ಜನರ ಜೀವಗಳನ್ನು ಅಪಾಯದಿಂದ ಸಂರಕ್ಷಿಸುವ ಕೆಲಸಮಾಡುವವರು ತುರ್ತಿನಿಂದ ಕ್ರಿಯೆಗೈಯುತ್ತಾರೆ. ಅಗ್ನಿಶಾಮಕ ದಳದವರನ್ನೇ ತೆಗೆದುಕೊಳ್ಳಿ. ಬೆಂಕಿ ಅನಾಹುತ ಆಗಿದೆ ಎಂದು ತಿಳಿದೊಡನೆ ಕ್ಷಿಪ್ರವಾಗಿ ಕ್ರಿಯೆಗೈಯುತ್ತಾ ಅವರು ಆ ಸ್ಥಳಕ್ಕೆ ಧಾವಿಸುತ್ತಾರೆ. ಕಾರಣ, ಜನರ ಜೀವಗಳು ಅಪಾಯದಲ್ಲಿವೆ.

2 ಜನರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಸಹಾಯಮಾಡುವುದೇ ಯೆಹೋವನ ಸಾಕ್ಷಿಗಳಾದ ನಮ್ಮ ಬಯಕೆ. ಆದ್ದರಿಂದಲೇ ದೇವರ ರಾಜ್ಯದ ಸುವಾರ್ತೆ ಸಾರುವ ನಮ್ಮ ನೇಮಕವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ನಾವು ಭಾವೋದ್ರೇಕಗೊಂಡು ಧಾವಿಸುವುದಿಲ್ಲ. ಹಾಗಿದ್ದರೆ “ವಾಕ್ಯವನ್ನು ಸಾರು; . . . ತುರ್ತಿನಿಂದ ಅದರಲ್ಲಿ ತಲ್ಲೀನನಾಗಿರು” ಎಂದು ಪೌಲ ಹೇಳಿದ್ದರ ಅರ್ಥವೇನು? (2 ತಿಮೊ. 4:2) ನಾವು ತುರ್ತಿನಿಂದ ಸಾರುವುದು ಹೇಗೆ? ಸಾರುವ ಕೆಲಸ ಏಕೆ ಅಷ್ಟೊಂದು ತುರ್ತಿನದ್ದಾಗಿದೆ?

ಸಾರುವ ಕೆಲಸ ಏಕೆ ತುರ್ತಿನದ್ದು?

3. ಜನರು ರಾಜ್ಯದ ಸಂದೇಶಕ್ಕೆ ಕಿವಿಗೊಡುವುದರಿಂದ ಮತ್ತು ಕಿವಿಗೊಡದಿರುವುದರಿಂದ ಯಾವ ಫಲಿತಾಂಶ ಉಂಟಾಗುತ್ತದೆ?

3 ಸಾರುವ ಕೆಲಸ ಜನರ ಜೀವಗಳನ್ನು ರಕ್ಷಿಸಸಾಧ್ಯವಿದೆ ಎನ್ನುವುದರ ಕುರಿತು ಯೋಚಿಸುವಾಗ ನಮ್ಮ ಈ ಕೆಲಸ ಎಷ್ಟು ತುರ್ತಿನದ್ದು ಎನ್ನುವುದು ತಿಳಿಯುತ್ತದೆ. (ರೋಮ. 10:13, 14) ದೇವರ ವಾಕ್ಯ ಏನನ್ನುತ್ತದೆ ನೋಡಿ: “ನಾನು ದುಷ್ಟನಿಗೆ—ನೀನು ಸತ್ತೇ ಸಾಯುವಿ ಎಂದು ಹೇಳಲು ಅವನು ತನ್ನ ಪಾಪವನ್ನು ಬಿಟ್ಟು ನೀತಿನ್ಯಾಯಗಳನ್ನು ನಡಿಸುವ ಪಕ್ಷದಲ್ಲಿ, . . . ಸಾಯನು, ಬಾಳೇ ಬಾಳುವನು. ಅವನು ಮಾಡಿದ ಯಾವ ಪಾಪವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು.” (ಯೆಹೆ. 33:14-16) ಹೌದು, ರಾಜ್ಯದ ಸಂದೇಶವನ್ನು ಸಾರುವವರು ‘ತಮ್ಮನ್ನೂ ತಮಗೆ ಕಿವಿಗೊಡುವವರನ್ನೂ ರಕ್ಷಿಸುವರು’ ಎನ್ನುತ್ತದೆ ಬೈಬಲ್‌.—1 ತಿಮೊ. 4:16; ಯೆಹೆ. 3:17-21.

4. ತಿಮೊಥೆಯನು ತುರ್ತುಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು ಏಕೆ ಅಗತ್ಯವಾಗಿತ್ತು?

4 ತುರ್ತುಪ್ರಜ್ಞೆಯನ್ನು ಕಾಪಾಡಿಕೊಳ್ಳುವಂತೆ ಪೌಲ ತಿಮೊಥೆಯನಿಗೆ ಪ್ರೋತ್ಸಾಹಿಸಿದ್ದು ಏಕೆಂದು ತಿಳಿಯಲು ಲೇಖನದ ಮುಖ್ಯ ವಚನದ ಪೂರ್ವಾಪರವನ್ನು ಪರೀಕ್ಷಿಸೋಣ. ಅಲ್ಲಿ ಹೀಗೆ ಹೇಳಲಾಗಿದೆ: “ವಾಕ್ಯವನ್ನು ಸಾರು; ಅನುಕೂಲವಾದ ಸಮಯದಲ್ಲಿಯೂ ತೊಂದರೆಯ ಸಮಯದಲ್ಲಿಯೂ ತುರ್ತಿನಿಂದ ಅದರಲ್ಲಿ ತಲ್ಲೀನನಾಗಿರು. ಪೂರ್ಣ ದೀರ್ಘ ಸಹನೆಯಿಂದಲೂ ಬೋಧಿಸುವ ಕಲೆಯಿಂದಲೂ ಖಂಡಿಸು, ಗದರಿಸು ಮತ್ತು ಬುದ್ಧಿಹೇಳು. ಏಕೆಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸಿಕೊಳ್ಳದಿರುವಂಥ ಸಮಯಾವಧಿಯು ಬರುತ್ತದೆ; ಆ ಸಮಯದಲ್ಲಿ ಜನರು ತಮ್ಮ ಸ್ವಂತ ಇಚ್ಛೆಗಳಿಗನುಸಾರ ತಮ್ಮ ಕಿವಿಗಳನ್ನು ಪುಳಕಗೊಳಿಸುವ ವಿಷಯಗಳನ್ನು ಕೇಳಿಸಿಕೊಳ್ಳಲು ತಮಗಾಗಿ ಬೋಧಕರನ್ನು ಕೂಡಿಸಿಕೊಳ್ಳುವರು. ಅವರು ಸತ್ಯದಿಂದ ತಮ್ಮ ಕಿವಿಗಳನ್ನು” ತಿರುಗಿಸಿಕೊಳ್ಳುವರು. (2 ತಿಮೊ. 4:2-4) ಹೌದು, ಧರ್ಮಭ್ರಷ್ಟತೆ ಒಳನುಸುಳಲಿದೆ ಎಂದು ಯೇಸು ಮೊದಲೇ ತಿಳಿಸಿದ್ದನು. (ಮತ್ತಾ. 13:24, 25, 38) ಅದು ಬೇಗನೆ ಸಂಭವಿಸಲಿದ್ದ ಕಾರಣ ತಿಮೊಥೆಯನು ತುರ್ತಿನಿಂದ ಸಭೆಯೊಳಗಿರುವ ಕ್ರೈಸ್ತರಿಗೆ ಸಹ ‘ವಾಕ್ಯವನ್ನು ಸಾರಬೇಕಿತ್ತು.’ ಹೀಗೆ ಮಾಡುವ ಮೂಲಕ ಸುಳ್ಳುಬೋಧನೆಗಳ ಮೋಸಕರ ಆಕರ್ಷಣೆಯಿಂದಾಗಿ ಅವರು ತಪ್ಪುದಾರಿಗೆ ಹೋಗದಂತೆ ಕಾಪಾಡಸಾಧ್ಯವಿತ್ತು. ಜನರ ಜೀವಗಳು ಆಗ ಅಪಾಯದಲ್ಲಿದ್ದವು! ನಮ್ಮ ದಿನಗಳ ಕುರಿತೇನು?

5, 6. ಕ್ಷೇತ್ರದಲ್ಲಿ ನಾವು ಭೇಟಿಯಾಗುವ ಜನರಲ್ಲಿ ಹೆಚ್ಚಾಗಿ ಯಾವ ನಂಬಿಕೆಗಳಿರಬಹುದು?

5 ಇಂದು ಧರ್ಮಭ್ರಷ್ಟತೆ ತುಂಬ ಬೆಳೆದು ಎಲ್ಲ ಕಡೆಗೆ ಹಬ್ಬಿದೆ. (2 ಥೆಸ. 2:3, 8) ಯಾವ ಸುಳ್ಳು ಬೋಧನೆಗಳು ಜನರ ಕಿವಿಗಳನ್ನು ಪುಳಕಗೊಳಿಸುತ್ತಿವೆ? ಒಂದು ಯಾವುದೆಂದರೆ ವಿಕಾಸವಾದ. ಅನೇಕ ಕಡೆಗಳಲ್ಲಿ ಅದಕ್ಕೆ ಧರ್ಮದಷ್ಟೇ ಪ್ರಮುಖತೆ ಕೊಟ್ಟು ಹುರುಪಿನಿಂದ ಕಲಿಸಲಾಗುತ್ತಿದೆ. ವಿಕಾಸವಾದವನ್ನು ವೈಜ್ಞಾನಿಕವಾಗಿ ವಿವರಿಸುವುದಾದರೂ ಅದು ಇಂದು ಧರ್ಮದಂತೇ ಆಗಿಬಿಟ್ಟಿದೆ. ಆದರೆ ಅದು ದೇವರ ಕುರಿತು ಜನರಿಗಿರುವ ಅಭಿಪ್ರಾಯವನ್ನೇ ಬುಡಮೇಲು ಮಾಡಿದೆ. ಇನ್ನೊಂದು ಜನಪ್ರಿಯ ಬೋಧನೆಯೆಂದರೆ ದೇವರಿಗೆ ನಮ್ಮ ಬಗ್ಗೆ ಚಿಂತೆಯೇ ಇಲ್ಲ, ಹಾಗಾಗಿ ದೇವರ ಬಗ್ಗೆ ನಾವು ಕಲಿಯುವ ಅಗತ್ಯವೂ ಇಲ್ಲ ಎಂಬದೇ. ಈ ಬೋಧನೆಗಳು ಲಕ್ಷಗಟ್ಟಲೆ ಜನರು ಆಧ್ಯಾತ್ಮಿಕವಾಗಿ ನಿದ್ರಿಸುವಂತೆ ಜೋಗುಳ ಹಾಡುತ್ತಿವೆ. ಅವುಗಳೆಡೆಗೆ ಜನರು ಏಕೆ ಅಷ್ಟೊಂದು ಆಕರ್ಷಿತರಾಗುತ್ತಾರೆ? ಏಕೆಂದರೆ ‘ನಿಮ್ಮ ಕೃತ್ಯಗಳಿಗೆ ನೀವು ಯಾರಿಗೂ ಲೆಕ್ಕ ಕೊಡಬೇಕಾಗಿಲ್ಲ. ನಿಮಗಿಷ್ಟ ಬಂದಂತೆ ಜೀವಿಸಿ’ ಎನ್ನುವುದೇ ಈ ಎರಡೂ ಬೋಧನೆಗಳ ಹಿಂದಿರುವ ತತ್ವ. ಇದು ಅನೇಕ ಜನರ ಕಿವಿಗಳನ್ನು ಪುಳಕಗೊಳಿಸುತ್ತದೆ.ಕೀರ್ತನೆ 10:4 ಓದಿ.

6 ಜನರ ಕಿವಿಗಳನ್ನು ಪುಳಕಗೊಳಿಸುವ ಇನ್ನು ಬೇರೆ ವಿಷಯಗಳಿವೆ. ಚರ್ಚ್‌ಗೆ ಹೋಗುವ ಅನೇಕರಿಗೆ, ‘ನೀವೇನು ಮಾಡಿದರೂ ದೇವರು ನಿಮ್ಮನ್ನು ಪ್ರೀತಿಸುತ್ತಾನೆ’ ಎಂದು ಹೇಳುವ ಬೋಧಕರೇ ಇಷ್ಟ. ವಿಧಿಸಂಸ್ಕಾರ, ದಿವ್ಯ ಪೂಜೆ, ಹಬ್ಬಗಳ ಆಚರಣೆ ಮತ್ತು ಪ್ರತಿಮೆಗಳನ್ನು ಪೂಜಿಸುವುದು ದೇವರ ಆಶೀರ್ವಾದ ತರುತ್ತದೆಂದು ಹೇಳಿ ಧಾರ್ಮಿಕ ಬೋಧಕರು ಜನರ ಕಿವಿಗಳನ್ನು ಪುಳಕಗೊಳಿಸುತ್ತಾರೆ. ಚರ್ಚಿಗೆ ಹೋಗುವ ಈ ಜನರಿಗಾದರೋ ತಾವೆಷ್ಟು ಅಪಾಯದಲ್ಲಿದ್ದೇವೆ ಎನ್ನುವುದರ ಅರಿವೇ ಇಲ್ಲ. (ಕೀರ್ತ. 115:4-8) ಹಾಗಾಗಿ ಅವರು ಆಧ್ಯಾತ್ಮಿಕವಾಗಿ ಎಚ್ಚತ್ತುಕೊಂಡು ಬೈಬಲ್‌ ಸತ್ಯವನ್ನು ಅರ್ಥಮಾಡಿಕೊಳ್ಳುವಂತೆ ನಾವು ಅವರಿಗೆ ಸಹಾಯ ಮಾಡುವಲ್ಲಿ ದೇವರ ರಾಜ್ಯ ತರಲಿರುವ ಪ್ರಯೋಜನಗಳನ್ನು ಅವರು ಪಡೆದುಕೊಳ್ಳಲು ಸಾಧ್ಯವಾಗುವುದು.

ತುರ್ತಿನಿಂದ ಸಾರುವುದರ ಅರ್ಥವೇನು?

7. ನಮ್ಮಲ್ಲಿ ತುರ್ತುಪ್ರಜ್ಞೆ ಇದೆಯೆಂದು ಹೇಗೆ ತೋರಿಸಬಲ್ಲೆವು?

7 ಒಬ್ಬ ನುರಿತ ವೈದ್ಯನು ಶಸ್ತ್ರಚಿಕಿತ್ಸೆ ಮಾಡುವಾಗ ತನ್ನ ಗಮನವನ್ನು ಪೂರ್ಣವಾಗಿ ತನ್ನ ಕೆಲಸದ ಮೇಲೆ ನೆಟ್ಟಿರುತ್ತಾನೆ. ಏಕೆಂದರೆ ರೋಗಿಯ ಜೀವ ಅಪಾಯದಲ್ಲಿದೆ. ಅದೇ ರೀತಿ ನಮ್ಮಲ್ಲಿ ತುರ್ತುಪ್ರಜ್ಞೆ ಇರುವಲ್ಲಿ ನಾವು ಗಮನ ಕೇಂದ್ರೀಕರಿಸಿ ಸೇವೆ ಮಾಡುತ್ತೇವೆ. ಅಂದರೆ ಕ್ಷೇತ್ರದಲ್ಲಿರುವ ಜನರೊಂದಿಗೆ ಯಾವ ಸಮಸ್ಯೆ ಅಥವಾ ಮಾಹಿತಿಗಳ ಬಗ್ಗೆ ಮಾತಾಡಿದರೆ, ಯಾವ ಪ್ರಶ್ನೆಗಳನ್ನು ಕೇಳಿದರೆ ಆಸಕ್ತಿ ಹುಟ್ಟುತ್ತದೆ ಎಂಬ ವಿಷಯದಲ್ಲಿ ಯೋಚಿಸುತ್ತಿರುತ್ತೇವೆ. ಮಾತ್ರವಲ್ಲ ಜನರು ನಮ್ಮ ಸಂದೇಶಕ್ಕೆ ಕಿವಿಗೊಡಲು ಹೆಚ್ಚು ಇಷ್ಟವುಳ್ಳವರಾಗಿರುವ ಸಮಯದಲ್ಲಿ ಸೇವೆಯಲ್ಲಿ ತೊಡಗಲು ಯೋಜಿಸುವ ಮೂಲಕ ನಮ್ಮಲ್ಲಿ ತುರ್ತುಪ್ರಜ್ಞೆಯಿದೆ ಎಂದು ತೋರಿಸುತ್ತೇವೆ.—ರೋಮ. 1:15, 16; 1 ತಿಮೊ. 4:16.

8. ತುರ್ತುಪ್ರಜ್ಞೆಯಿದ್ದರೆ ನಾವು ಏನು ಮಾಡುವೆವು?

8 ತುರ್ತುಪ್ರಜ್ಞೆಯಿರುವಲ್ಲಿ ನಾವು ಮಹತ್ವದ ಕೆಲಸಕ್ಕೆ ಆದ್ಯತೆ ಕೊಡುತ್ತೇವೆ. (ಆದಿ. 19:15) ಉದಾಹರಣೆಗೆ, ನೀವು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು ಫಲಿತಾಂಶ ನಿಮ್ಮ ಕೈಗೆ ಸಿಕ್ಕಿದೆ ಎಂದು ನೆನಸಿ. ವೈದ್ಯರು ನಿಮ್ಮನ್ನು ಕರೆದು, ‘ನೋಡಿ, ನಿಮ್ಮ ಪರಿಸ್ಥಿತಿ ತುಂಬ ಗಂಭೀರವಾಗಿದೆ. ಒಂದು ತಿಂಗಳ ಒಳಗೆ ನೀವು ಚಿಕಿತ್ಸೆ ಪಡೆದುಕೊಳ್ಳಲೇಬೇಕು. ಇಲ್ಲವಾದರೆ ನಿಮ್ಮ ಜೀವಕ್ಕೆ ಅಪಾಯ’ ಎಂದು ಹೇಳುತ್ತಾರೆ. ನೀವೇನು ಮಾಡುವಿರಿ? ಅಗ್ನಿಶಾಮಕ ದಳದವರಂತೆ ಅಲ್ಲಿಂದ ಧಾವಿಸುವಿರಾ? ಇಲ್ಲ. ವೈದ್ಯರು ಶಿಫಾರಸ್ಸು ಮಾಡುವುದನ್ನು ಗಮನಕೊಟ್ಟು ಕೇಳಿ, ಮನೆಗೆ ಹೋಗಿ ನೀವೀಗ ಮೊದಲು ಮಾಡಲಿಕ್ಕಿರುವುದು ಏನೆಂದು ಗಂಭೀರವಾಗಿ ಯೋಚಿಸುತ್ತೀರಲ್ಲವೆ?

9. ಪೌಲ ಎಫೆಸದಲ್ಲಿದ್ದಾಗ ತುರ್ತಿನಿಂದ ಸುವಾರ್ತೆ ಸಾರಿದನು ಎಂದು ಹೇಗೆ ತಿಳಿಯುತ್ತದೆ?

9 ಪೌಲನು ಏಷ್ಯಾ ಪ್ರಾಂತದಲ್ಲಿ ತುರ್ತಿನಿಂದ ಸುವಾರ್ತೆ ಸಾರಿದನು. ಆ ಬಗ್ಗೆ ಅವನು ಸ್ವತಃ ಎಫೆಸದ ಹಿರಿಯರಿಗೆ ಹೇಳಿದ ಮಾತುಗಳನ್ನು ಗಮನಿಸಿ. (ಅಪೊಸ್ತಲರ ಕಾರ್ಯಗಳು 20:18-21 ಓದಿ.) ಎಫೆಸಕ್ಕೆ ಬಂದು ತಲಪಿದ ಮೊದಲ ದಿನದಿಂದಲೇ ಮನೆಮನೆ ಸಾಕ್ಷಿಕಾರ್ಯದಲ್ಲಿ ಅವನು ಕಾರ್ಯಮಗ್ನನಾದನು. ಮಾತ್ರವಲ್ಲ ಎರಡು ವರ್ಷಗಳ ವರೆಗೆ ನಿಯತವಾಗಿ “ತುರನ್ನನ ಶಾಲೆಯ ಸಭಾಂಗಣದಲ್ಲಿ ಪ್ರತಿದಿನ ಭಾಷಣ” ನೀಡಿದನು. (ಅ. ಕಾ. 19:1, 8-10) ಅವನಲ್ಲಿದ್ದ ತುರ್ತುಪ್ರಜ್ಞೆ ಅವನ ದಿನಚರಿಯಲ್ಲಿ ತೋರಿಬರುತ್ತಿತ್ತು. ‘ತುರ್ತಿನಿಂದ ಶುಶ್ರೂಷೆಯಲ್ಲಿ ತಲ್ಲೀನನಾಗಿರು’ ಎಂದು ಹೇಳಿರುವುದು ನಮ್ಮಲ್ಲಿ ಭಯಹುಟ್ಟಿಸಲಿಕ್ಕಾಗಿ ಅಲ್ಲ. ಬದಲಿಗೆ ಸುವಾರ್ತೆ ಸಾರುವ ಕೆಲಸಕ್ಕೆ ನಾವು ನಮ್ಮ ಜೀವನದಲ್ಲಿ ಆದ್ಯತೆ ಕೊಡಬೇಕೆಂದು ತೋರಿಸಲಿಕ್ಕಾಗಿಯೇ.

10. ಸುಮಾರು ನೂರು ವರ್ಷಗಳ ಹಿಂದೆ ಕ್ರೈಸ್ತರು ತುರ್ತಿನಿಂದ ಕ್ರಿಯೆಗೈದದ್ದಕ್ಕಾಗಿ ನಾವಿಂದು ಸಂತೋಷಿತರು ಏಕೆ?

10 ಇಸವಿ 1914ಕ್ಕೆ ಮುಂಚೆ ಇದ್ದ ಬೈಬಲ್‌ ವಿದ್ಯಾರ್ಥಿಗಳ ಚಿಕ್ಕ ಗುಂಪು ಸುವಾರ್ತೆ ಸಾರಲು ತೊಡಗಿತು. ಇವರ ಮಾದರಿಯು ತುರ್ತುಪ್ರಜ್ಞೆಯ ಅರ್ಥವನ್ನು ನಮಗೆ ತಿಳಿಸಿಕೊಡುತ್ತದೆ. ಕೆಲವೇ ಸಾವಿರ ಮಂದಿ ಇದ್ದರೂ ಅವರು ತಾವು ಜೀವಿಸುತ್ತಿದ್ದ ಕಾಲ ಎಷ್ಟು ತುರ್ತಿನದ್ದೆಂದು ಅರಿತು ಹುರುಪಿನಿಂದ ರಾಜ್ಯದ ಸುವಾರ್ತೆಯನ್ನು ಸಾರಿದರು. 2,000ಕ್ಕಿಂತ ಹೆಚ್ಚು ವಾರ್ತಾಪತ್ರಿಕೆಗಳಲ್ಲಿ ಬೈಬಲ್‌ ಉಪನ್ಯಾಸಗಳನ್ನು ಪ್ರಕಟಿಸಿದರು. “ಫೋಟೋ-ಡ್ರಾಮಾ ಆಫ್‌ ಕ್ರಿಯೇಷನ್‌” ಎಂಬ ವರ್ಣರಂಜಿತ ಸ್ಲೈಡ್‌ಗಳು ಹಾಗೂ ಚಲನಚಿತ್ರಗಳನ್ನು ತೋರಿಸಿದರು. ಹೀಗೆ ಅವರು ಲಕ್ಷಾಂತರ ಜನರಿಗೆ ಸುವಾರ್ತೆಯನ್ನು ತಲಪಿಸಿದರು. ಅವರಿಗೆ ತುರ್ತುಪ್ರಜ್ಞೆ ಇದ್ದ ಕಾರಣ ನಮ್ಮಲ್ಲಿ ಅನೇಕರಿಗೆ ರಾಜ್ಯದ ಸಂದೇಶವನ್ನು ಕೇಳಿಸಿಕೊಳ್ಳುವ ಸದವಕಾಶ ಸಿಕ್ಕಿತು.ಕೀರ್ತನೆ 119:60 ಓದಿ.

ತುರ್ತುಪ್ರಜ್ಞೆಯನ್ನು ಕಳಕೊಳ್ಳದಂತೆ ಜಾಗ್ರತೆವಹಿಸಿ

11. ಕೆಲವರು ತುರ್ತುಪ್ರಜ್ಞೆ ಕಳೆದುಕೊಳ್ಳಲು ಕಾರಣವೇನು?

11 ಸೈತಾನನ ಲೋಕವು ನಾವು ನಮ್ಮ ಆಶೆಆಕಾಂಕ್ಷೆಗಳನ್ನು ಈಡೇರಿಸಲು ಶ್ರಮಿಸುವಂತೆ ಮತ್ತು ಅನಗತ್ಯ ವಿಷಯಗಳ ಹಿಂದೆ ಹೋಗುವಂತೆ ಪ್ರಚೋದಿಸುತ್ತದೆ. (1 ಪೇತ್ರ 5:8; 1 ಯೋಹಾ. 2:15-17) ಇಂಥ ವಿಷಯಗಳಿಂದ ಅಪಕರ್ಷಿತರಾದರೆ ಸುವಾರ್ತೆ ಸಾರುವುದರ ಮಹತ್ವವನ್ನು ನಾವು ಮರೆತುಬಿಡಸಾಧ್ಯವಿದೆ. ಯೆಹೋವನ ಸೇವೆಗೆ ಪ್ರಥಮ ಸ್ಥಾನ ಕೊಟ್ಟ ಕೆಲವರು ಕಾಲಕ್ರಮೇಣ ತುರ್ತುಪ್ರಜ್ಞೆಯನ್ನು ಕಳಕೊಂಡ ನಿದರ್ಶನಗಳು ಇವೆ. ದೇಮನ ಉದಾಹರಣೆ ಗಮನಿಸಿ. ಅವನು ಪೌಲನ ‘ಜೊತೆ ಕೆಲಸಗಾರನಾಗಿದ್ದನು.’ ಆದರೆ ಅವನು ಅಪಕರ್ಷಿತನಾಗಿ ಭಕ್ತಿಹೀನ ಲೋಕವನ್ನು ಪ್ರೀತಿಸತೊಡಗಿದನು. ಕಷ್ಟದ ಸಮಯದಲ್ಲಿ ಪೌಲನ ಜೊತೆಗಿದ್ದು ಅವನನ್ನು ಬಲಪಡಿಸುವ ಬದಲು ದೇಮನು ಪೌಲನನ್ನು ಬಿಟ್ಟುಹೋದನು.—ಫಿಲೆ. 23, 24; 2 ತಿಮೊ. 4:10.

12. (1) ಈಗ ನಮಗೆ ಯಾವ ಅವಕಾಶವಿದೆ? (2) ಮುಂದೆ ನಿತ್ಯನಿರಂತರಕ್ಕೂ ಯಾವ ಅವಕಾಶಗಳು ನಮಗಿರುವವು?

12 ನಾವು ತುರ್ತುಪ್ರಜ್ಞೆ ಕಳೆದುಕೊಳ್ಳಬಾರದಾದರೆ ಜೀವನದಲ್ಲಿ ಎಲ್ಲ ಮೋಜನ್ನು ಅನುಭವಿಸಬೇಕೆಂದು ಬಯಸಬಾರದು. ಬದಲಿಗೆ “ವಾಸ್ತವವಾದ ಜೀವನವನ್ನು ಭದ್ರವಾಗಿ” ಹಿಡಿಯಲು ಶ್ರಮಪಡಬೇಕು. (1 ತಿಮೊ. 6:18, 19) ಮುಂದೆ ದೇವರ ರಾಜ್ಯದಡಿಯಲ್ಲಿ ಶಾಶ್ವತವಾಗಿ ಜೀವಿಸುವಾಗ ಎಷ್ಟೋ ಸ್ವಾರಸ್ಯಕರ ವಿಷಯಗಳಲ್ಲಿ ಉಲ್ಲಾಸಿಸಲು ಎಣೆಯಿಲ್ಲದಷ್ಟು ಅವಕಾಶಗಳು ನಮಗಿರುವವು. ಆದರೆ ಈಗ ಜನರು ಅರ್ಮಗೆದೋನನ್ನು ಪಾರಾಗುವಂತೆ ಸಹಾಯ ಮಾಡುವುದೇ ನಮ್ಮ ಮುಖ್ಯ ಕೆಲಸವಾಗಿರಬೇಕು.

13. ತುರ್ತುಪ್ರಜ್ಞೆಯನ್ನು ಕಳೆದುಕೊಳ್ಳದಂತೆ ಯಾವುದು ನಮಗೆ ಸಹಾಯ ಮಾಡಬಲ್ಲದು?

13 ನಮ್ಮ ಸುತ್ತಲಿರುವ ಹೆಚ್ಚಿನ ಜನರು ಆಧ್ಯಾತ್ಮಿಕವಾಗಿ ನಿದ್ರಿಸುತ್ತಿರುವಾಗ ನಾವು ತುರ್ತುಪ್ರಜ್ಞೆಯನ್ನು ಕಳೆದುಕೊಳ್ಳದಿರಲು ಏನು ಮಾಡಬೇಕು? ಹಿಂದೊಮ್ಮೆ ನಾವು ಆಧ್ಯಾತ್ಮಿಕ ಕತ್ತಲೆಯಲ್ಲಿದ್ದು ನಿದ್ರಿಸುತ್ತಿದ್ದೆವು. ಆದರೆ ನಮ್ಮನ್ನು ಎಚ್ಚರಗೊಳಿಸಲಾಯಿತು. ಪೌಲ ಹೇಳಿದಂತೆ ಕ್ರಿಸ್ತನು ನಮ್ಮ ಮೇಲೆ ಪ್ರಕಾಶಿಸಿದನು. ಈ ವಿಷಯಗಳ ಕುರಿತು ಧ್ಯಾನಿಸುವುದು ತುರ್ತುಪ್ರಜ್ಞೆ ಕಳಕೊಳ್ಳದಿರಲು ಸಹಾಯ ಮಾಡುತ್ತದೆ. (ಎಫೆಸ 5:14 ಓದಿ.) ಪೌಲನ ಈ ಸಲಹೆಯನ್ನೂ ಪಾಲಿಸಬೇಕು: “ನೀವು ನಡೆದುಕೊಳ್ಳುವ ರೀತಿಯನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳಿರಿ. ಅವಿವೇಕಿಗಳಂತೆ ನಡೆದುಕೊಳ್ಳದೆ ವಿವೇಕಿಗಳಂತೆ ನಡೆದುಕೊಳ್ಳಿರಿ. ದಿನಗಳು ಕೆಟ್ಟವುಗಳಾಗಿರುವುದರಿಂದ ನಿಮಗೋಸ್ಕರ ಸುಸಮಯವನ್ನು ಖರೀದಿಸಿಕೊಳ್ಳಿರಿ.” (ಎಫೆ. 5:15, 16) ಹೌದು, ಈ ದುಷ್ಟ ಲೋಕದಲ್ಲಿ ಜೀವಿಸುತ್ತಿರುವುದಾದರೂ ನಾವು ಆಧ್ಯಾತ್ಮಿಕವಾಗಿ ಎಚ್ಚರದಿಂದ ಉಳಿಯಲು ಸಹಾಯ ಮಾಡುವ ಚಟುವಟಿಕೆಗಳಿಗಾಗಿ ‘ಸಮಯವನ್ನು ಖರೀದಿಸಿಕೊಳ್ಳೋಣ.’

ಇದು ಮಹತ್ವಪೂರ್ಣ ಸಮಯ

14-16. ದೇವರ ರಾಜ್ಯದ ಕುರಿತು ಸಾರುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ತುರ್ತಿನದ್ದಾಗಿದೆ ಏಕೆ?

14 ಸುವಾರ್ತೆ ಸಾರುವ ಕೆಲಸ ಯಾವಾಗಲೂ ತುರ್ತಿನದ್ದಾಗಿತ್ತು. ಈಗ ಅದು ಇನ್ನೂ ಹೆಚ್ಚು ತುರ್ತಿನದ್ದಾಗಿದೆ. ದೇವರ ವಾಕ್ಯದಲ್ಲಿ ಮುಂತಿಳಿಸಿದ ಅನೇಕ ಘಟನೆಗಳು 1914ರಿಂದ ಹೆಚ್ಚು ಸ್ಪಷ್ಟವಾಗಿ ನೆರವೇರುತ್ತಿವೆ. (ಮತ್ತಾ. 24:3-51) ಇಡೀ ಮಾನವಕುಲ ಹಿಂದೆಂದಿಗಿಂತಲೂ ಹೆಚ್ಚು ಅಪಾಯದಲ್ಲಿದೆ! ಬಲಾಢ್ಯ ರಾಷ್ಟ್ರಗಳು ಶಾಂತಿಯ ಒಪ್ಪಂದ ಮಾಡಿಕೊಂಡಿವೆಯಾದರೂ ಸುಮಾರು 2,000 ನ್ಯೂಕ್ಲಿಯರ್‌ ಅಸ್ತ್ರಗಳನ್ನು ಇಟ್ಟುಕೊಂಡಿವೆ. ಯಾವ ಸಮಯದಲ್ಲೂ ಅವುಗಳನ್ನು ಪ್ರಯೋಗಿಸಸಾಧ್ಯ. ಅಧಿಕಾರಿಗಳ ವರದಿಗನುಸಾರ ನೂರಾರು ಬಾರಿ ಈ ಅಸ್ತ್ರಗಳು ಕಳವಾಗಿವೆ. ಯಾರು ಇವುಗಳನ್ನು ತೆಗೆದುಕೊಂಡಿದ್ದಾರೆ? ಭಯೋತ್ಪಾದಕರೋ? ಒಬ್ಬ ಭಯೋತ್ಪಾದಕ ಯುದ್ಧಕ್ಕಿಳಿದರೆ ಇಡೀ ಮಾನವಕುಲವೇ ಸರ್ವನಾಶವಾಗಬಲ್ಲದು ಎನ್ನುವುದು ಅನೇಕರ ಅಭಿಪ್ರಾಯ. ಮಾನವಕುಲಕ್ಕಿರುವ ಅಪಾಯ ಇದೊಂದೇ ಅಲ್ಲ!

15 “21ನೇ ಶತಮಾನದಲ್ಲಿ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಆರೋಗ್ಯಕ್ಕೆ ಮಹಾಹಾನಿ ತರುತ್ತಿದೆ” ಎನ್ನುತ್ತದೆ ದಿ ಲಾನ್ಸೆಟ್‌ ಮತ್ತು ಲಂಡನ್‌ನ ಯುನಿವರ್ಸಿಟಿ ಕಾಲೇಜ್‌ನ 2009ರ ವರದಿ. ಮುಂದುವರಿಸಿ ಈ ವರದಿ ಹೀಗನ್ನುತ್ತದೆ: “ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಮುಂಬರುವ ದಶಕಗಳಲ್ಲಿ ಹೆಚ್ಚು ಜನರ ಆರೋಗ್ಯವನ್ನು ಬಾಧಿಸಲಿದೆ. ಕೋಟಿಗಟ್ಟಲೆ ಜನರ ಆರೋಗ್ಯ ಮತ್ತು ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.” ಸಮುದ್ರ ಮಟ್ಟದ ಏರಿಕೆ ಉಂಟಾಗಿ ಅನೇಕ ಊರುಗಳೇ ಕಣ್ಮರೆಯಾಗಿ ಹೋಗಬಹುದು. ಇಷ್ಟೇ ಅಲ್ಲ ಕ್ಷಾಮ, ನೆರೆಹಾವಳಿ, ಸಾಂಕ್ರಾಮಿಕ ರೋಗಗಳು, ಚಂಡಮಾರುತಗಳು ಹಾಗೂ ಸಂಪನ್ಮೂಲಕ್ಕೋಸ್ಕರ ಆಗುವ ಯುದ್ಧಗಳಿಂದಾಗಿ ಎಲ್ಲೆಲ್ಲಿಯೂ ಜನರು ಜೀವ ಕಳಕೊಳ್ಳಬಹುದು. ಹೀಗೆ ಯುದ್ಧಗಳು ಹಾಗೂ ವಿಪತ್ತುಗಳು ಮಾನವಕುಲದ ಬುಡವನ್ನೇ ಅಲುಗಾಡಿಸಲಿವೆ.

16 ನ್ಯೂಕ್ಲಿಯರ್‌ ಯುದ್ಧ ನಡೆದರೆ ಯೇಸು ಕ್ರಿಸ್ತನು ಹೇಳಿದಂಥ ಅಂತ್ಯಕಾಲದ ‘ಸೂಚನೆಯು’ ನೆರವೇರಲು ಆರಂಭಿಸುತ್ತದೆ ಎಂದು ಕೆಲವರು ಎಣಿಸುತ್ತಾರೆ. ಅಂಥವರು ಯೇಸು ತಿಳಿಸಿದ ಸೂಚನೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ನಿಜ ಸಂಗತಿಯೇನೆಂದರೆ ಈಗಾಗಲೇ ಅನೇಕ ದಶಕಗಳಿಂದ ಸೂಚನೆಯು ಸ್ಪಷ್ಟವಾಗಿ ತೋರಿಬರುತ್ತಿದೆ. ಇದು ಕ್ರಿಸ್ತನ ಸಾನ್ನಿಧ್ಯ ಆರಂಭವಾಗಿದೆ ಮತ್ತು ಈ ದುಷ್ಟ ಲೋಕ ಇನ್ನೇನು ಸ್ವಲ್ಪದರಲ್ಲೇ ಅಂತ್ಯ ಕಾಣಲಿದೆ ಎಂದು ತೋರಿಸಿಕೊಡುತ್ತದೆ. (ಮತ್ತಾ. 24:3) ಯೇಸು ಪ್ರವಾದಿಸಿದ ಎಲ್ಲ ಘಟನೆಗಳು ಒಮ್ಮೆಲೆ ಇಷ್ಟು ಸ್ಪಷ್ಟವಾಗಿ ಈ ಮುಂಚೆ ಎಂದೂ ನೆರವೇರಿದ್ದಿಲ್ಲ. ಆದರೆ ಈಗ ಅದು ನೆರವೇರಿದೆ. ಹಾಗಾಗಿ ಜನರು ಆಧ್ಯಾತ್ಮಿಕ ನಿದ್ರೆಯಿಂದ ಎಚ್ಚತ್ತುಕೊಳ್ಳಬೇಕಾದ ಸಮಯ ಇದೇ. ನಮ್ಮ ಸಾರುವ ಕೆಲಸವು ಎಚ್ಚತ್ತುಕೊಳ್ಳಲು ಅವರಿಗೆ ಸಹಾಯ ಮಾಡುವುದು.

17, 18. (1) ನಾವು “ಜೀವಿಸುತ್ತಿರುವ ಕಾಲ” ನಮ್ಮ ಮೇಲೆ ಯಾವ ಪರಿಣಾಮ ಬೀರುತ್ತದೆ? (2) ಯಾವ ಸಂಗತಿಗಳು ಜನರು ದೇವರ ರಾಜ್ಯದ ಸಂದೇಶದಲ್ಲಿ ಆಸಕ್ತಿ ತೋರಿಸುವಂತೆ ಮಾಡಬಲ್ಲವು?

17 ಯೆಹೋವ ದೇವರ ಮೇಲೆ ನಮಗಿರುವ ಪ್ರೀತಿಯನ್ನು ರುಜುಪಡಿಸಲು ಹಾಗೂ ಈ ಕಡೇ ದಿವಸಗಳಲ್ಲಿ ನಮಗಿರುವ ಸಾರುವ ನೇಮಕವನ್ನು ಪೂರೈಸಲು ಉಳಿದಿರುವ ಸಮಯ ತೀರ ಕೊಂಚ! ಪೌಲನು ರೋಮ್‌ ಸಭೆಯವರಿಗೆ ಬರೆದ ವಿಷಯ ನಮಗಿಂದು ಹೆಚ್ಚು ಅನ್ವಯವಾಗುತ್ತದೆ. “ನೀವು ಜೀವಿಸುತ್ತಿರುವ ಕಾಲದ ಕುರಿತು ನಿಮಗೆ ತಿಳಿದಿರುವುದರಿಂದಲೂ ಇದನ್ನು ಮಾಡಿರಿ; ನಿದ್ರೆಯಿಂದ ಎಚ್ಚತ್ತುಕೊಳ್ಳುವ ಗಳಿಗೆಯು ಈಗಲೇ ಬಂದಿರುತ್ತದೆ. ಏಕೆಂದರೆ ನಮ್ಮ ರಕ್ಷಣೆಯು ನಾವು ವಿಶ್ವಾಸಿಗಳಾದಾಗಿನ ಸಮಯಕ್ಕಿಂತ ಈಗ ಹೆಚ್ಚು ಹತ್ತಿರವಾಗಿದೆ.”—ರೋಮ. 13:11.

18 ಕಡೇ ದಿವಸಗಳ ಕುರಿತಾದ ಪ್ರವಾದನೆ ಇಂದು ನೆರವೇರುತ್ತಿರುವುದನ್ನು ಅರಿತು ಅನೇಕರು ಆಧ್ಯಾತ್ಮಿಕತೆಗೆ ಗಮನಕೊಡಲು ಬಯಸಬಹುದು. ಇನ್ನು ಕೆಲವರು ಆರ್ಥಿಕ ಕುಸಿತ, ನ್ಯೂಕ್ಲಿಯರ್‌ ಅಪಾಯಗಳು, ಹಿಂಸಾಕೃತ್ಯಗಳು, ಪರಿಸರ ನಾಶ ಇವನ್ನೆಲ್ಲ ಬಗೆಹರಿಸಲು ಸರಕಾರಗಳು ವಿಫಲಗೊಂಡಿರುವುದನ್ನು ನೋಡಿ ಮಾನವನಿಗೆ ಸಹಾಯದ ಅಗತ್ಯವಿದೆ ಎಂದು ಮನಗಾಣಬಹುದು. ಇನ್ನಿತರರು ತಮ್ಮ ಕುಟುಂಬದಲ್ಲಿ ತಲೆದೋರಿರುವ ಆರೋಗ್ಯ ಸಮಸ್ಯೆ, ವಿವಾಹ ವಿಚ್ಛೇದನ, ಪ್ರಿಯರ ಸಾವು ಮುಂತಾದವುಗಳಿಂದಾಗಿ ತಮ್ಮ ಆಧ್ಯಾತ್ಮಿಕತೆಯ ಅಗತ್ಯವನ್ನು ಮನಗಾಣಬಹುದು. ನಾವು ಸೇವೆಯಲ್ಲಿ ತೊಡಗುವಾಗ ಇಂಥ ಎಲ್ಲ ಜನರಿಗೆ ಸಹಾಯ ಮಾಡಲು ನಮ್ಮನ್ನು ನೀಡಿಕೊಳ್ಳುತ್ತೇವೆ.

ತುರ್ತುಪ್ರಜ್ಞೆಯಿಂದ ಪ್ರಚೋದಿತರಾದವರು

19, 20. ಜೀವನಶೈಲಿ ಬದಲಾಯಿಸುವಂತೆ ತುರ್ತುಪ್ರಜ್ಞೆ ಹೇಗೆ ಅನೇಕರನ್ನು ಪ್ರೇರೇಪಿಸಿದೆ?

19 ತುರ್ತುಪ್ರಜ್ಞೆ ಅನೇಕರಿಗೆ ಸೇವೆಯನ್ನು ಹೆಚ್ಚಿಸುವಂತೆ ಪ್ರಚೋದಿಸಿದೆ. ಎಕ್ವಡಾರ್‌ನ ಯುವ ದಂಪತಿಯ ಅನುಭವವನ್ನು ಗಮನಿಸಿ. “ನಿಮ್ಮ ಕಣ್ಣು ನೆಟ್ಟಗಿರಲಿ” ಎಂಬ 2006ರ ವಿಶೇಷ ಸಮ್ಮೇಳನವನ್ನು ಹಾಜರಾದ ಬಳಿಕ ಅವರು ತಮ್ಮ ಜೀವನವನ್ನು ಸರಳೀಕರಿಸಲು ನಿರ್ಧರಿಸಿದರು. ಅವರದನ್ನು ಹೇಗೆ ಮಾಡಿದರು? ತಮ್ಮಲ್ಲಿದ್ದ ವಸ್ತುಗಳಲ್ಲಿ ಯಾವುದೆಲ್ಲ ಅಗತ್ಯವಿಲ್ಲ ಎಂದು ಒಂದು ಪಟ್ಟಿಮಾಡಿದರು. ಮೂರು ಬೆಡ್‌ರೂಮ್‌ಗಳಿದ್ದ ಮನೆಯಿಂದ ಒಂದು ಬೆಡ್‌ರೂಮ್‌ ಇರುವ ಮನೆಗೆ ಮೂರು ತಿಂಗಳಲ್ಲಿ ವಾಸ ಬದಲಾಯಿಸಿದರು. ಕೆಲವು ವಸ್ತುಗಳನ್ನು ಮಾರಿದರು. ಸಾಲ ತೀರಿಸಿದರು. ಆಕ್ಸಿಲಿಯರಿ ಪಯನೀಯರ್‌ ಸೇವೆ ಆರಂಭಿಸಿದ ಅವರು ತದನಂತರ ಸಂಚರಣ ಮೇಲ್ವಿಚಾರಕರ ಉತ್ತೇಜನದಂತೆ ಹೆಚ್ಚು ಅಗತ್ಯವಿರುವ ಸಭೆಗೆ ಹೋಗಿ ಸೇವೆ ಮಾಡಲು ಪ್ರಾರಂಭಿಸಿದರು.

20 ಉತ್ತರ ಅಮೆರಿಕದ ಸಹೋದರರೊಬ್ಬರು ತಮ್ಮ ಅನುಭವವನ್ನು ಹೀಗೆ ಹಂಚಿಕೊಳ್ಳುತ್ತಾರೆ: “2006ರಲ್ಲಿ ಒಂದು ಸಮ್ಮೇಳನಕ್ಕೆ ಹಾಜರಾಗಿದ್ದಾಗ ನಾನು ಮತ್ತು ನನ್ನ ಪತ್ನಿ ದೀಕ್ಷಾಸ್ನಾನ ಹೊಂದಿ 30 ವರ್ಷಗಳು ಕಳೆದಿದ್ದವು. ಮನೆಗೆ ಹಿಂತಿರುಗುವಾಗ ನಾವಿಬ್ಬರು ಕಾರ್ಯಕ್ರಮದ ಕುರಿತು ಚರ್ಚಿಸಿದೆವು. ಅಲ್ಲಿ ಕಲಿತಂತೆ ನಮ್ಮ ಜೀವನವನ್ನು ಹೇಗೆ ಸರಳೀಕರಿಸಬಹುದೆಂದು ಮಾತಾಡಿದೆವು. (ಮತ್ತಾ. 6:19-22) ನಮ್ಮ ಬಳಿ ಮೂರು ಮನೆ, ಜಮೀನು, ದುಬಾರಿ ಕಾರುಗಳು, ಮೋಟಾರು ದೋಣಿ, ಮೋಟಾರು ಮನೆ ಇತ್ತು. ಇಷ್ಟು ದಿನ ನಾವೆಷ್ಟು ಮೂರ್ಖರಂತೆ ಜೀವಿಸಿದೆವು ಎಂದನಿಸಿತು ನಮಗೆ. ಪೂರ್ಣ ಸಮಯದ ಸೇವೆ ಮಾಡುವ ಗುರಿಯಿಟ್ಟೆವು. 2008ರಲ್ಲಿ ಪಯನೀಯರ್‌ ಸೇವೆ ಮಾಡುವುದರಲ್ಲಿ ನಮ್ಮ ಮಗಳನ್ನು ಜೊತೆಗೂಡಿದೆವು. ಈ ರೀತಿ ಸಹೋದರರೊಂದಿಗೆ ಜೊತೆಸೇರಿ ಯೆಹೋವನ ಸೇವೆ ಮಾಡುವುದು ಬಹು ಆಹ್ಲಾದಕರ! ಹೆಚ್ಚು ಅಗತ್ಯವಿರುವ ಕ್ಷೇತ್ರಗಳಲ್ಲಿ ನಾವು ಸೇವೆ ಮಾಡಲು ಶಕ್ತರಾದೆವು. ಯೆಹೋವನ ಸೇವೆಯನ್ನು ಹೆಚ್ಚೆಚ್ಚು ಮಾಡುವುದು ನಮ್ಮನ್ನು ಆತನಿಗೆ ತುಂಬ ಆಪ್ತರನ್ನಾಗಿ ಮಾಡಿದೆ. ಅದರಲ್ಲೂ ಜನರು ದೇವರ ವಾಕ್ಯದಲ್ಲಿರುವ ಸತ್ಯವನ್ನು ಕೇಳಿ ಅರ್ಥಮಾಡಿಕೊಂಡಾಗ ಅವರ ಕಣ್ಣುಗಳು ಹೊಳೆಯುವುದನ್ನು ನೋಡಿ ಹೃದಯ ತುಂಬಿಬರುತ್ತದೆ.”

21. ಯಾವ ಜ್ಞಾನ ನಮ್ಮನ್ನು ಕ್ರಿಯೆಗೈಯುವಂತೆ ಪ್ರಚೋದಿಸುತ್ತದೆ?

21 ಬೇಗನೆ ಈ ದುಷ್ಟ ಲೋಕದ ಮೇಲೆ “ನ್ಯಾಯತೀರ್ಪಿನ ದಿನ” ಬಂದೆರಗಲಿದೆ. ದೇವಭಕ್ತಿಯಿಲ್ಲದ ಜನರು “ನಾಶ”ವಾಗಲಿದ್ದಾರೆ. (2 ಪೇತ್ರ 3:7) ದೇವರ ವಾಕ್ಯದಿಂದ ನಾವು ಪಡೆದಿರುವ ಈ ಜ್ಞಾನವು ಬರಲಿರುವ ಮಹಾ ಸಂಕಟ ಹಾಗೂ ಹೊಸ ಲೋಕದ ಕುರಿತು ಹುರುಪಿನಿಂದ ಸಾರುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಹಾಗಾಗಿ ನಾವು ಜನರಿಗೆ ಭವ್ಯ ನಿರೀಕ್ಷೆಯ ಕುರಿತು ತುರ್ತಿನಿಂದ ಸಾರುತ್ತಾ ಇರೋಣ. ಈ ತುರ್ತಿನ ಕೆಲಸದಲ್ಲಿ ಪೂರ್ಣವಾಗಿ ತೊಡಗುವ ಮೂಲಕ ದೇವರ ಮೇಲೆ ಹಾಗೂ ಜೊತೆ ಮಾನವರ ಮೇಲೆ ನಮಗಿರುವ ನಿಜ ಪ್ರೀತಿಯನ್ನು ರುಜುಪಡಿಸೋಣ!

[ಅಧ್ಯಯನ ಪ್ರಶ್ನೆಗಳು]