“ನಮ್ಮ ಫೋಟೋ ತೆಗೆಯುತ್ತೀರಾ?”
“ನಮ್ಮ ಫೋಟೋ ತೆಗೆಯುತ್ತೀರಾ?”
ಮೆಕ್ಸಿಕೊ ಬೆತೆಲಿನಲ್ಲಿ ಸೇವೆಸಲ್ಲಿಸುವ ಹೋಸ್ವೇ ಎಂಬವರು ಕೇರಟಾರೋ ಪಟ್ಟಣದಲ್ಲಿ ನಡೆದ ಅಧಿವೇಶನಕ್ಕೆ ಹಾಜರಾಗಿದ್ದರು. ಎರಡನೇ ದಿನದ ಕಾರ್ಯಕ್ರಮದ ಬಳಿಕ ಆ ಪಟ್ಟಣವನ್ನು ಸುತ್ತಿನೋಡಲು ಹೋದರು. ಕೊಲಂಬಿಯದಿಂದ ಪ್ರವಾಸಕ್ಕೆಂದು ಬಂದಿದ್ದ ಜೇವಿಯರ್ ಮತ್ತು ಮಾರೂ ಎಂಬ ದಂಪತಿ ಹೋಸ್ವೇ ಬಳಿ ತಮ್ಮ ಫೋಟೋ ತೆಗೆಯುವಂತೆ ವಿನಂತಿಸಿದರು. ಹೋಸ್ವೇ ಮತ್ತು ಅವನೊಂದಿಗಿದ್ದ ಇತರ ಸಾಕ್ಷಿಗಳು ನೀಟಾಗಿ ಉಡುಪು ತೊಟ್ಟು ಅಧಿವೇಶನದ ಬ್ಯಾಡ್ಜ್ ಧರಿಸಿರುವುದನ್ನು ಆ ದಂಪತಿ ಗಮನಿಸಿದರು. ಅವರು ಪದವಿ ಪಡೆದು ಅಥವಾ ಯಾವುದೋ ವಿಶೇಷ ಸಮಾರಂಭವನ್ನು ಹಾಜರಾಗಿ ಬಂದಿದ್ದಾರೋ ಎಂದು ವಿಚಾರಿಸಿದರು. ಆಗ ಹೋಸ್ವೇ ಅವರಿಗೆ ಅಧಿವೇಶನದ ಬಗ್ಗೆ ತಿಳಿಸಿ ಭಾನುವಾರದ ಕಾರ್ಯಕ್ರಮಕ್ಕೆ ಆಮಂತ್ರಿಸಿದರು.
ಅಂಥ ಸಮಾರಂಭಕ್ಕೆ ಹಾಜರಾಗಲು ಅವರ ಬಳಿ ಯೋಗ್ಯ ಉಡುಪಿಲ್ಲದ ಕಾರಣ ಆ ದಂಪತಿ ಆಮಂತ್ರಣವನ್ನು ಸ್ವೀಕರಿಸಲು ಹಿಂದೆಮುಂದೆ ನೋಡಿದರು. ಹಾಗಿದ್ದರೂ ಹೋಸ್ವೇ ಆಮಂತ್ರಣವನ್ನು ನೀಡಿ, ತನ್ನ ಹೆಸರು ಮತ್ತು ತಾನು ಸೇವೆಸಲ್ಲಿಸುತ್ತಿದ್ದ ಬ್ರಾಂಚ್ ಆಫೀಸ್‌ನ ಟೆಲಿಫೋನ್ ನಂಬರ್ ಕೊಟ್ಟು ಹೋದರು.
ನಾಲ್ಕು ತಿಂಗಳ ನಂತರ ಹೋಸ್ವೇಗೆ ಒಂದು ಆಶ್ಚರ್ಯ ಕಾದಿತ್ತು. ಜೇವಿಯರ್ ಫೋನ್ ಮಾಡಿ ತಾನು ತನ್ನ ಹೆಂಡತಿಯೊಂದಿಗೆ ಅಧಿವೇಶನಕ್ಕೆ ಅಂದು ಹಾಜರಾದೆನೆಂದೂ ಈಗ ಮೆಕ್ಸಿಕೊ ನಗರಕ್ಕೆ ಸ್ಥಳಾಂತರಿಸಿರುವ ತಮಗೆ ಬೈಬಲ್ ಅಧ್ಯಯನ ಬೇಕೆಂದೂ ತಿಳಿಸಿದನು. ಬೇಗನೆ ಅದಕ್ಕೆ ಏರ್ಪಾಡು ಮಾಡಲಾಯಿತು. ಅವರು ಕೂಟಗಳಿಗೂ ಹಾಜರಾಗತೊಡಗಿದರು. ಹತ್ತು ತಿಂಗಳ ನಂತರ ಪ್ರಚಾರಕರಾದರು. ಬಳಿಕ ಅವರು ಕೆನಡದ ಟೊರಾಂಟೊಗೆ ಸ್ಥಳಾಂತರಿಸಬೇಕಾಗಿ ಬಂದರೂ ಅಲ್ಲಿಯೂ ಆಧ್ಯಾತ್ಮಿಕ ಪ್ರಗತಿ ಮಾಡುತ್ತಾ ಮುಂದುವರಿದರು. ಅನಂತರ ದೀಕ್ಷಾಸ್ನಾನ ಪಡೆದರು.
ಒಂದು ದಿನ ಹೋಸ್ವೇಗೆ ಜೇವಿಯರ್‌ನಿಂದ ಒಂದು ಪತ್ರ ಬಂತು. ತಾವು ಸತ್ಯವನ್ನು ಸ್ವೀಕರಿಸುವಂತೆ ಯಾವುದು ಪ್ರೇರೇಪಿಸಿತು ಎಂದು ಅದರಲ್ಲಿ ಅವರು ಬರೆದಿದ್ದರು. “ಅಂದು ಅಧಿವೇಶನಕ್ಕೆ ಹಾಜರಾಗುವ ಮುನ್ನ ನಾನೂ ನನ್ನ ಪತ್ನಿ ಆಧ್ಯಾತ್ಮಿಕ ಮಾರ್ಗದರ್ಶನ ನಮಗೆಷ್ಟು ಅಗತ್ಯವೆಂದು ಮಾತಾಡಿಕೊಂಡೆವು. ನೀಟಾದ ಉಡುಪನ್ನು ಧರಿಸಿದ್ದ ನೀವು ನಮಗೆ ಆಮಂತ್ರಣ ಕೊಟ್ಟಾಗ ಅದು ನಿಜಕ್ಕೂ ಒಂದು ವಿಶೇಷ ಕೂಟವಾಗಿರಬೇಕೆಂದು ನಮಗನಿಸಿತು. ಅಧಿವೇಶನಕ್ಕೆ ಬಂದಾಗ ನಮ್ಮನ್ನು ಆದರದಿಂದ ಬರಮಾಡಿ ಕುಳಿತುಕೊಳ್ಳಲು ಆಸನವನ್ನು ತೋರಿಸಲಾಯಿತು. ಪಕ್ಕದಲ್ಲಿ ಕುಳಿತವರು ತಮ್ಮ ಬೈಬಲನ್ನು ತೆರೆದು ತೋರಿಸಿದರು. ಅಲ್ಲಿದ್ದವರ ನಡತೆ, ಪ್ರೀತಿ ನಮ್ಮ ಮನಮುಟ್ಟಿತು. ನಾವು ತೊಟ್ಟಿದ್ದ ಬಟ್ಟೆ ಅವರ ಪ್ರೀತಿಗೆ ತಡೆಯಾಗಿರಲಿಲ್ಲ.”
ವಿವೇಕಿ ರಾಜ ಸೊಲೊಮೋನನ ಮಾತಿನ ಸತ್ಯವನ್ನು ಹೋಸ್ವೇ ಸವಿದುನೋಡಿದನು. “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.” (ಪ್ರಸಂ. 11:6) ಅವಕಾಶ ಸಿಕ್ಕಾಗಲೆಲ್ಲಾ ಮುಂಬರಲಿರುವ ಅಧಿವೇಶನ ಇಲ್ಲವೆ ಸಾರ್ವಜನಿಕ ಭಾಷಣದ ಕುರಿತು ಇತರರಿಗೆ ಹೇಳುವ ಮೂಲಕ ನೀವು ಸತ್ಯದ ಬೀಜವನ್ನು ಬಿತ್ತುವಿರಾ? ಜೇವಿಯರ್ ಮತ್ತು ಮಾರೂ ದಂಪತಿಯಂತೆ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಹಸಿದು ಬಾಯಾರಿರುವ ಜನರನ್ನು ತನ್ನತ್ತ ಸೆಳೆಯಲು ಯೆಹೋವ ದೇವರು ನಿಮ್ಮನ್ನು ಉಪಯೋಗಿಸಬಹುದು.—ಯೆಶಾ. 55:1.
[ಪುಟ 32ರಲ್ಲಿರುವ ಚಿತ್ರ]
ಎಡದಿಂದ ಬಲಕ್ಕೆ: ಅಲೆಹಾಂಡ್ರೊ ವೋಗಲಿನ್, ಮಾರೂ ಪಿನೆಡ, ಅಲೆಹಾಂಡ್ರೋ ಪಿನೆಡ, ಜೇವಿಯರ್ ಪಿನೆಡ ಮತ್ತು ಹೋಸ್ವೇ ರಮೆರ್ಸ್. ಮೆಕ್ಸಿಕೊ ಬ್ರಾಂಚ್‌ನಲ್ಲಿ.