‘ನಿದ್ರೆಯಿಂದ ಎಚ್ಚತ್ತುಕೊಳ್ಳಲು’ ಜನರಿಗೆ ಸಹಾಯ ಮಾಡಿರಿ
‘ನಿದ್ರೆಯಿಂದ ಎಚ್ಚತ್ತುಕೊಳ್ಳಲು’ ಜನರಿಗೆ ಸಹಾಯ ಮಾಡಿರಿ
“ನೀವು ಜೀವಿಸುತ್ತಿರುವ ಕಾಲದ ಕುರಿತು ನಿಮಗೆ ತಿಳಿದಿರುವುದರಿಂದಲೂ ಇದನ್ನು ಮಾಡಿರಿ; ನಿದ್ರೆಯಿಂದ ಎಚ್ಚತ್ತುಕೊಳ್ಳುವ ಗಳಿಗೆಯು ಈಗಲೇ ಬಂದಿರುತ್ತದೆ.”—ರೋಮ. 13:11.
ವಿವರಿಸುವಿರಾ?
ಕ್ರೈಸ್ತರು ಆಧ್ಯಾತ್ಮಿಕವಾಗಿ ಎಚ್ಚತ್ತುಕೊಂಡಿರುವುದು ಬಹುಮುಖ್ಯವೇಕೆ?
ಎಚ್ಚರವಾಗಿರುವ ದೇವಸೇವಕರು ಆಲಿಸುವಂಥವರೂ ಗಮನಕೊಡುವವರೂ ಆಗಿರಬೇಕು ಏಕೆ?
ಸುವಾರ್ತೆ ಸಾರುವಾಗ ದಯಾಪರರಾಗಿರುವುದು ಹಾಗೂ ಸೌಮ್ಯಭಾವದವರಾಗಿರುವುದು ಎಷ್ಟು ಪ್ರಾಮುಖ್ಯ?
1, 2. ಯಾವ ರೀತಿಯ ನಿದ್ರೆಯಿಂದ ಅನೇಕರು ಎಚ್ಚತ್ತುಕೊಳ್ಳಬೇಕು?
ವಾಹನ ಚಲಾಯಿಸುವಾಗ ತೂಕಡಿಸಿದ ಕಾರಣ ಅಥವಾ ನಿದ್ರೆ ಮಾಡಿದ ಕಾರಣ ಪ್ರತಿವರ್ಷ ಸಾವಿರಾರು ಜನರು ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಇನ್ನು ಕೆಲವರು ಹೆಚ್ಚು ಹೊತ್ತು ನಿದ್ರೆ ಮಾಡಿ ಕೆಲಸಕ್ಕೆ ತಡವಾಗಿ ಹೋಗುವ ಕಾರಣದಿಂದ ಅಥವಾ ಕೆಲಸದ ಸ್ಥಳದಲ್ಲೇ ನಿದ್ದೆಹೋಗುವುದರಿಂದ ನೌಕರಿ ಕಳಕೊಂಡಿದ್ದಾರೆ. ನಿದ್ರೆಯಿಂದಾಗುವ ಪರಿಣಾಮ ಎಷ್ಟೊಂದು ಗಂಭೀರ! ಆದರೆ ಆಧ್ಯಾತ್ಮಿಕ ನಿದ್ರೆ ಇದಕ್ಕಿಂತ ಹೆಚ್ಚು ಅಪಾಯಕಾರಿ. ಆದುದರಿಂದ ಬೈಬಲ್ ಹೀಗನ್ನುತ್ತದೆ: ‘ಎಚ್ಚರವಾಗಿರುವವನು ಸಂತೋಷಿತನು.’—ಪ್ರಕ. 16:14-16.
2 ಯೆಹೋವನ ಮಹಾದಿನ ಹತ್ತಿರವಾಗುತ್ತಿದ್ದಂತೆ ಇಡೀ ಲೋಕ ಆಧ್ಯಾತ್ಮಿಕವಾಗಿ ನಿದ್ರಿಸುತ್ತಿದೆ. ಕ್ರೈಸ್ತಪ್ರಪಂಚದ ಕೆಲವು ಪಾದ್ರಿಗಳು ತಮ್ಮ ಚರ್ಚ್ ಸದಸ್ಯರು ನಿದ್ರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ಆಧ್ಯಾತ್ಮಿಕ ನಿದ್ರೆ ಅಂದರೆ ಏನು? ನಿಜ ಕ್ರೈಸ್ತರು ಆಧ್ಯಾತ್ಮಿಕವಾಗಿ ಎಚ್ಚರವಾಗಿರುವುದು ಏಕೆ ಪ್ರಾಮುಖ್ಯ? ಇತರರು ಆಧ್ಯಾತ್ಮಿಕ ನಿದ್ರೆಯಿಂದ ಎಚ್ಚೆತ್ತುಕೊಳ್ಳುವಂತೆ ನಾವು ಹೇಗೆ ಸಹಾಯ ಮಾಡಬಲ್ಲೆವು?
ಆಧ್ಯಾತ್ಮಿಕ ನಿದ್ರೆ ಎಂದರೇನು?
3. ಆಧ್ಯಾತ್ಮಿಕವಾಗಿ ನಿದ್ರೆ ಮಾಡುತ್ತಿರುವವರ ಸ್ಥಿತಿ ಹೇಗಿರುತ್ತದೆಂದು ವಿವರಿಸಿ.
3 ನಿದ್ರಿಸಿದಾಗ ನಾವು ಯಾವುದೇ ಚಟುವಟಿಕೆಯನ್ನು ಮಾಡುವುದಿಲ್ಲ. ಆದರೆ ಆಧ್ಯಾತ್ಮಿಕವಾಗಿ ನಿದ್ರೆಹೋದವರು ತುಂಬ ಕಾರ್ಯಮಗ್ನರಾಗಿರುತ್ತಾರೆ. ಆಧ್ಯಾತ್ಮಿಕ ವಿಷಯಗಳಲ್ಲಲ್ಲ, ಇತರ ವಿಷಯಗಳಲ್ಲಿ. ದಿನನಿತ್ಯದ ಕೆಲಸಕಾರ್ಯಗಳಲ್ಲಿ ಅಥವಾ ಮೋಜು ಮಾಡುವುದರಲ್ಲಿ, ಖ್ಯಾತಿ, ಹಣ, ಸಂಪತ್ತು ಗಳಿಸುವುದರಲ್ಲೇ ಮುಳುಗಿಹೋಗಿರುತ್ತಾರೆ. ತಮ್ಮ ಆಧ್ಯಾತ್ಮಿಕ ಅಗತ್ಯಗಳಿಗೆ ಗಮನಕೊಡಲು ಅವರಿಗೆ ಕೊಂಚವೂ ಸಮಯವಿಲ್ಲ. ಆದರೆ ಆಧ್ಯಾತ್ಮಿಕವಾಗಿ ಎಚ್ಚರವಾಗಿರುವವರು ತಾವೀಗ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಎಂಬುದನ್ನು ಅರಿತು ದೇವರ ಸೇವೆಯನ್ನು ಸಾಧ್ಯವಾದಷ್ಟು ಹೆಚ್ಚು ಮಾಡಲು ಶ್ರಮಿಸುತ್ತಾರೆ.—2 ಪೇತ್ರ 3:3, 4; ಲೂಕ 21:34-36.
4. “ಉಳಿದವರಂತೆ ನಾವು ನಿದ್ರೆಮಾಡದೆ . . . ಇರೋಣ” ಎಂದು ಪೌಲ ಏಕೆ ಹೇಳಿದನು?
4ಒಂದನೇ ಥೆಸಲೊನೀಕ 5:4-8 ಓದಿ. “ಉಳಿದವರಂತೆ ನಾವು ನಿದ್ರೆಮಾಡದೆ . . . ಇರೋಣ” ಎಂದು ಅಪೊಸ್ತಲ ಪೌಲ ಜೊತೆವಿಶ್ವಾಸಿಗಳಿಗೆ ಹೇಳಿದನು. ಅವನ ಮಾತಿನ ಅರ್ಥವೇನಾಗಿತ್ತು? ಯೆಹೋವನಿಟ್ಟಿರುವ ನೈತಿಕ ಮಟ್ಟಗಳನ್ನು ಅಸಡ್ಡೆ ಮಾಡಿದರೆ ನಾವು ಆಧ್ಯಾತ್ಮಿಕವಾಗಿ ನಿದ್ರಿಸುತ್ತಿದ್ದೇವೆ. ಯೆಹೋವನು ಭಕ್ತಿಹೀನ ಜನರನ್ನು ನಾಶಮಾಡುವ ಸಮಯ ಸನಿಹವಾಗುತ್ತಿದೆ ಎಂಬುದನ್ನು ನಿರ್ಲಕ್ಷಿಸುವುದು ಸಹ ನಾವು ನಿದ್ರಿಸುತ್ತಿದ್ದೇವೆಂದು ತೋರಿಸುತ್ತದೆ. ಹಾಗಾಗಿ ಭಕ್ತಿಹೀನ ಜನರ ಗುಣ, ಮನೋಭಾವಗಳು ನಮಗೆ ಅಂಟದಂತೆ ಜಾಗ್ರತೆ ವಹಿಸೋಣ.
5. ಆಧ್ಯಾತ್ಮಿಕವಾಗಿ ನಿದ್ರಿಸುವವರು ಯಾವ ಮನೋಭಾವ ಹೊಂದಿದ್ದಾರೆ?
5 ಕೆಲವು ಜನರಿಗೆ ‘ದೇವರೇ ಇಲ್ಲ, ನಾವು ಏನು ಬೇಕಾದರೂ ಮಾಡಬಹುದು, ಲೆಕ್ಕ ಒಪ್ಪಿಸುವ ಅಗತ್ಯವಿಲ್ಲ’ ಎಂದು ಭಾವಿಸುತ್ತಾರೆ. (ಕೀರ್ತ. 53:1) ಇನ್ನು ಕೆಲವರ ಊಹೆ ಏನೆಂದರೆ, ‘ದೇವರಿಗೆ ಮನುಷ್ಯರ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ, ಹಾಗಿರುವಾಗ ನಾವೇಕೆ ಆತನ ಬಗ್ಗೆ ತಿಳಿದುಕೊಳ್ಳಬೇಕು?’ ತಾವು ಚರ್ಚ್‌ನ ಸದಸ್ಯರಾದರೆ ದೇವರ ಸ್ನೇಹಿತರಾಗುತ್ತೇವೆ ಎನ್ನುವುದು ಇನ್ನಿತರರ ಕಲ್ಪನೆ. ಇವರೆಲ್ಲರೂ ಆಧ್ಯಾತ್ಮಿಕವಾಗಿ ನಿದ್ರಿಸುತ್ತಿದ್ದಾರೆ. ಅವರು ನಿದ್ರೆಯಿಂದ ಎಚ್ಚತ್ತುಕೊಳ್ಳಬೇಕು. ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು?
ನಾವು ಎಚ್ಚತ್ತುಕೊಂಡಿರಬೇಕು
6. ಕ್ರೈಸ್ತರು ಆಧ್ಯಾತ್ಮಿಕವಾಗಿ ಸದಾ ಎಚ್ಚರವಾಗಿರಲು ಶ್ರಮಿಸಬೇಕು ಏಕೆ?
6 ಇನ್ನೊಬ್ಬರನ್ನು ನಿದ್ರೆಯಿಂದ ಎಬ್ಬಿಸಬೇಕಾದರೆ ಮೊದಲು ನಾವು ಎಚ್ಚತ್ತುಕೊಂಡಿರಬೇಕು. ಅದಕ್ಕಾಗಿ ನಾವೇನು ಮಾಡಬೇಕು? ಆಧ್ಯಾತ್ಮಿಕವಾಗಿ ನಿದ್ರಿಸುತ್ತಿರುವವರು ಭಾರೀ ಮೋಜು, ಕುಡಿಕತನ, ನಿಷಿದ್ಧ ಸಂಭೋಗ, ಸಡಿಲು ನಡತೆ, ಜಗಳ, ಹೊಟ್ಟೆಕಿಚ್ಚು ಮುಂತಾದ “ಕತ್ತಲೆಗೆ ಸಂಬಂಧಿಸಿದ ಕೃತ್ಯಗಳನ್ನು” ಮಾಡುತ್ತಾರೆಂದು ಬೈಬಲ್ ಹೇಳುತ್ತದೆ. ಇಂಥ ಕೃತ್ಯಗಳಿಂದ ನಾವು ಖಂಡಿತವಾಗಿ ದೂರವಿರಬೇಕು. (ರೋಮನ್ನರಿಗೆ 13:11-14 ಓದಿ.) ಇದು ಸುಲಭವೇನಲ್ಲ. ಹಾಗಿದ್ದರೂ ನಾವು ಎಚ್ಚರದಿಂದಿರಲೇಬೇಕು. ಸ್ವಲ್ಪ ಯೋಚಿಸಿ, ವಾಹನ ಚಲಾಯಿಸುವಾಗ ನಿದ್ರೆಮಾಡಿದರೆ ತನಗೇನೂ ಆಗುವುದಿಲ್ಲ ಎಂದು ಚಾಲಕನು ನೆನಸುವಲ್ಲಿ ಏನಾಗಬಹುದು? ಅವನ ಜೀವಕ್ಕೇ ಅಪಾಯವಾಗಬಹುದು. ಆಧ್ಯಾತ್ಮಿಕವಾಗಿ ನಿದ್ರೆಮಾಡುವುದು ಇದಕ್ಕಿಂತಲೂ ಹೆಚ್ಚು ಅಪಾಯಕಾರಿ ಎನ್ನುವುದನ್ನು ನಾವು ಯಾವಾಗಲೂ ನೆನಪಿಟ್ಟುಕೊಳ್ಳಬೇಕು.
7. ಜನರ ಬಗ್ಗೆ ತಪ್ಪು ನಿರ್ಣಯ ಮಾಡುವಲ್ಲಿ ಅದು ನಮ್ಮ ಮೇಲೆ ಯಾವ ಪ್ರಭಾವ ಬೀರಬಲ್ಲದು?
7 ಉದಾಹರಣೆಗೆ, ‘ನನ್ನ ಟೆರಿಟ್ರಿಯಲ್ಲಿ ಆಸಕ್ತಿ ತೋರಿಸುವವರು ಒಬ್ಬರೂ ಇಲ್ಲ’ ಎಂದು ಕೈಸ್ತನೊಬ್ಬನು ನೆನಸಬಹುದು. (ಜ್ಞಾನೋ. 6:10, 11) ‘ಯಾರೂ ಕೇಳುವುದಿಲ್ಲ ಅಂದ ಮೇಲೆ ಸಾರಲು ಸುಮ್ಮನೆ ಯಾಕೆ ಅಷ್ಟು ಶ್ರಮಪಡಬೇಕು?’ ಎಂದು ಅವನು ತರ್ಕಿಸಬಹುದು. ಆದರೆ ನೆನಪಿಡಿ, ಅನೇಕ ಜನರು ಈಗ ಆಧ್ಯಾತ್ಮಿಕವಾಗಿ ನಿದ್ರಿಸುತ್ತಿದ್ದರೂ ಅವರ ಪರಿಸ್ಥಿತಿ, ಮನೋಭಾವ ಬದಲಾಗುವ ಸಾಧ್ಯತೆಯಿದೆ. ಆಗ ಅವರು ಎಚ್ಚತ್ತುಕೊಂಡು ಸುವಾರ್ತೆಗೆ ಕಿವಿಗೊಡಲು ಮನಸ್ಸು ಮಾಡಬಹುದು. ಆದರೆ ನಾವು ಆಧ್ಯಾತ್ಮಿಕವಾಗಿ ಎಚ್ಚರದಿಂದಿದ್ದರೆ ಮಾತ್ರ ಅವರಿಗೆ ಸಹಾಯ ಮಾಡಲು ಶಕ್ತರಾಗುವೆವು. ಅವರ ಮನಸ್ಪರ್ಶಿಸುವ ರೀತಿಯಲ್ಲಿ ಸುವಾರ್ತೆ ಸಾರಲು ಹೊಸ ಹೊಸ ವಿಧಾನಗಳನ್ನು ಬಳಸಲು ಪ್ರಯತ್ನಿಸುವೆವು. ಸುವಾರ್ತೆ ಸಾರುವ ಕೆಲಸ ಏಕೆ ಮಹತ್ವದ್ದು ಎನ್ನುವುದನ್ನು ಮನಸ್ಸಿನಲ್ಲಿಡುವುದು ಆಧ್ಯಾತ್ಮಿಕವಾಗಿ ಎಚ್ಚರದಿಂದಿರಲು ನಮಗೆ ನೆರವಾಗುತ್ತದೆ.
ಸುವಾರ್ತೆ ಸಾರುವುದು ಏಕೆ ಅತ್ಯಾವಶ್ಯಕ?
8. ಸಾರುವ ಕೆಲಸ ಅತ್ಯಗತ್ಯ ಏಕೆ?
8 ಸುವಾರ್ತೆಗೆ ಜನರು ಹೇಗೆಯೇ ಪ್ರತಿಕ್ರಿಯಿಸಲಿ ನಮ್ಮ ಸಾರುವ ಕೆಲಸವು ಯೆಹೋವ ದೇವರಿಗೆ ಮಹಿಮೆ ತರುತ್ತದೆ ಹಾಗೂ ಆತನ ಉದ್ದೇಶದ ನೆರವೇರಿಕೆಯಲ್ಲಿ ಪಾತ್ರವಹಿಸುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಸುವಾರ್ತೆಗೆ ವಿಧೇಯರಾಗದವರು ಶೀಘ್ರದಲ್ಲೇ ದಂಡನೆಯ ನ್ಯಾಯತೀರ್ಪನ್ನು ಅನುಭವಿಸುವರು. ಸುವಾರ್ತೆಗೆ ಜನರು ತೋರಿಸುವ ಪ್ರತಿಕ್ರಿಯೆಯ ಆಧಾರದ ಮೇಲೆ ದೇವರು ಅವರಿಗೆ ನ್ಯಾಯತೀರ್ಪು ಮಾಡುವನು. (2 ಥೆಸ. 1:8, 9) ಇನ್ನೊಂದು ರೀತಿಯ ತಪ್ಪು ಆಲೋಚನೆಯೂ ನಮ್ಮಲ್ಲಿ ಬರಬಹುದು. ‘ಸುವಾರ್ತೆ ಸಾರಲು ಶ್ರಮಪಡುವ ಅಗತ್ಯವೇನಿಲ್ಲ, ಹೇಗೂ “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನ” ಆಗುತ್ತದಲ್ಲಾ’ ಎಂದು ನಾವು ನೆನಸುವ ಸಾಧ್ಯತೆಯಿದೆ. (ಅ. ಕಾ. 24:15) ಆದರೆ ‘ಆಡುಗಳೆಂದು’ ತೀರ್ಪು ಹೊಂದುವವರು “ನಿತ್ಯಛೇದನಕ್ಕೆ” ಹೋಗುವರು ಎಂದು ಬೈಬಲ್ ಹೇಳುವುದನ್ನು ನೆನಪಿಸಿಕೊಳ್ಳಿ. ನಮ್ಮ ಸಾರುವ ಕೆಲಸದ ಮೂಲಕ ದೇವರ ಕರುಣೆ ವ್ಯಕ್ತವಾಗುತ್ತದೆ. ಜನರು ತಮ್ಮ ಜೀವಿತಗಳಲ್ಲಿ ಬದಲಾವಣೆ ಮಾಡಿಕೊಂಡು “ನಿತ್ಯಜೀವ” ಪಡೆಯಲು ಅವಕಾಶ ಕೊಡುತ್ತದೆ. (ಮತ್ತಾ. 25:32, 41, 46; ರೋಮ. 10:13-15) ಈಗ ನೀವೇ ಹೇಳಿ, ನಾವು ಸುವಾರ್ತೆ ಸಾರದಿದ್ದರೆ ಜನರಿಗೆ ಅದನ್ನು ಕೇಳಿ ನಿತ್ಯಜೀವ ಪಡೆದುಕೊಳ್ಳುವ ಅವಕಾಶ ಸಿಗುವುದಾದರೂ ಹೇಗೆ?
9. ಸುವಾರ್ತೆ ಸಾರುವುದರಿಂದ ನೀವು ಹಾಗೂ ಇತರರು ಪಡೆದ ಪ್ರಯೋಜನಗಳಾವುವು?
9 ಸುವಾರ್ತೆ ಸಾರುವುದರಿಂದ ನಮಗೂ ಪ್ರಯೋಜನವಿದೆ. (1 ತಿಮೊಥೆಯ 4:16 ಓದಿ.) ಯೆಹೋವ ದೇವರ ಕುರಿತು ಆತನ ರಾಜ್ಯದ ಕುರಿತು ಜನರೊಂದಿಗೆ ಮಾತಾಡುತ್ತಾ ಇದ್ದಂತೆ ಆತನ ಮೇಲಿರುವ ನಿಮ್ಮ ನಂಬಿಕೆ, ಪ್ರೀತಿ ಗಾಢವಾಗುತ್ತಾ ಹೋಗಿದೆ ಅಲ್ಲವೆ? ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳಲು ಅದು ನಿಮಗೆ ಸಹಾಯ ಮಾಡಿದೆಯಲ್ಲವೆ? ದೇವರ ಮೇಲೆ ನಿಮಗಿರುವ ಭಕ್ತಿಯನ್ನು ವ್ಯಕ್ತಪಡಿಸುವಾಗ ನಿಮ್ಮ ಸಂತೋಷ ಇಮ್ಮಡಿಯಾಗಿದೆಯಲ್ಲವೆ? ತಮ್ಮ ಬೈಬಲ್ ವಿದ್ಯಾರ್ಥಿಗಳು ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಲು ಪವಿತ್ರಾತ್ಮ ಸಹಾಯ ಮಾಡುವುದನ್ನು ಕ್ರೈಸ್ತರು ನೋಡುವಾಗ ಎಣೆಯಿಲ್ಲದ ಆನಂದವನ್ನು ಅನುಭವಿಸಿದ್ದಾರೆ.
ಗಮನಕೊಡುವವರಾಗಿರಿ
10, 11. (1) ಯೇಸು ಮತ್ತು ಪೌಲ ಜಾಗರೂಕವಾಗಿ ಗಮನಕೊಡುವವರಾಗಿದ್ದರು ಎಂದು ನಮಗೆ ಹೇಗೆ ಗೊತ್ತು? (2) ಜಾಗರೂಕವಾಗಿ ಗಮನಕೊಡುವವರಾಗಿ ಇರುವುದು ಶುಶ್ರೂಷೆಯಲ್ಲಿ ಪ್ರಗತಿಮಾಡಲು ಹೇಗೆ ಸಹಾಯ ಮಾಡುತ್ತದೆ? ಉದಾಹರಣೆ ಕೊಡಿ.
10 ರಾಜ್ಯದ ಸುವಾರ್ತೆಯಲ್ಲಿ ಜನರ ಆಸಕ್ತಿಯನ್ನು ಕೆರಳಿಸಲು ಬೇರೆ ಬೇರೆ ವಿಧಾನಗಳನ್ನು ಬಳಸಬಹುದು. ಅದಕ್ಕಾಗಿ ಸುವಾರ್ತೆ ಸಾರುವಾಗ ನಾವು ಗಮನಕೊಡುವವರಾಗಿ ಇರಬೇಕು. ಇದಕ್ಕೆ ಯೇಸು ಉತ್ತಮ ಮಾದರಿ. ಪರಿಪೂರ್ಣನಾಗಿದ್ದ ಅವನು ಜನರ ಮನಸ್ಸನ್ನು ಗ್ರಹಿಸಶಕ್ತನಾಗಿದ್ದನು. ಫರಿಸಾಯನು ಒಳಗೊಳಗೇ ಕೋಪಗೊಂಡಿದ್ದು, ಪಾಪಗೈದ ಸ್ತ್ರೀಯ ಯಥಾರ್ಥ ಪಶ್ಚಾತ್ತಾಪ, ವಿಧವೆಯ ಸ್ವತ್ಯಾಗದ ಮನೋಭಾವ ಇದನ್ನೆಲ್ಲ ಅವನು ಗ್ರಹಿಸಿದನು. (ಲೂಕ 7:37-50; 21:1-4) ಪ್ರತಿಯೊಬ್ಬನ ಆಧ್ಯಾತ್ಮಿಕ ಅಗತ್ಯವನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಸಹಾಯ ಮಾಡಿದನು. ಅದರರ್ಥ ನಾವು ಗಮನಕೊಡುವವರಾಗಿ ಇರಬೇಕಾದರೆ ಯೇಸುವಿನಂತೆ ಪರಿಪೂರ್ಣರಾಗಿರಬೇಕೆಂದಲ್ಲ. ಅಪೊಸ್ತಲ ಪೌಲ ಅಪರಿಪೂರ್ಣನಾಗಿದ್ದರೂ ಬೇರೆ ಬೇರೆ ಪಂಗಡಗಳ, ಮನೋಭಾವಗಳ ಜನರಿಗೆ ತಕ್ಕಂತೆ ತನ್ನ ಸಾರುವ ವಿಧಾನವನ್ನು ಹೊಂದಿಸಿಕೊಂಡನು.—ಅ. ಕಾ. 17:22, 23, 34; 1 ಕೊರಿಂ. 9:19-23.
11 ಯೇಸು ಹಾಗೂ ಪೌಲನಂತೆ ನಾವು ಜಾಗರೂಕವಾಗಿ ಗಮನಕೊಡುವವರಾಗಿ ಇರುವಲ್ಲಿ ಜನರ ಆಸಕ್ತಿಯನ್ನು ಕೆರಳಿಸುವ ಅತ್ಯುತ್ತಮ ವಿಧವನ್ನು ಗ್ರಹಿಸಶಕ್ತರಾಗುವೆವು. ಉದಾಹರಣೆಗೆ, ಜನರನ್ನು ಸಮೀಪಿಸುವಾಗ ಅವರ ಸಂಸ್ಕೃತಿ, ಆಸಕ್ತಿ, ಕುಟುಂಬದ ಬಗ್ಗೆ ಸುಳಿವೇನಾದರೂ ಸಿಗುತ್ತದಾ ಎಂದು ಗಮನಕೊಟ್ಟು ನೋಡಿ. ಅಥವಾ ಮನೆಯವರು ಏನು ಮಾಡುತ್ತಿದ್ದಾರೆಂದು ನೀವು ಗಮನಿಸುವಲ್ಲಿ ಅದರ ಕುರಿತು ವಿನಯದಿಂದ ಪ್ರಸ್ತಾಪವೆತ್ತುತ್ತಾ ಸಂಭಾಷಣೆ ಆರಂಭಿಸಿ.
12. ಶುಶ್ರೂಷೆಯಲ್ಲಿ ತೊಡಗಿರುವಾಗ ನಮ್ಮ ಸಂಭಾಷಣೆಯ ಕುರಿತು ನಾವೇಕೆ ಜಾಗ್ರತೆ ವಹಿಸಬೇಕು?
12 ನಾವು ಜಾಗರೂಕವಾಗಿ ಗಮನಕೊಡುವವರಾಗಿ ಇರುವಲ್ಲಿ ಯಾವುದರಿಂದಲೂ ಅಪಕರ್ಷಿಸಲ್ಪಡದಂತೆ ಎಚ್ಚರವಾಗಿರುತ್ತೇವೆ. ನಮ್ಮ ಜೊತೆಯಲ್ಲಿ ಸೇವೆ ಮಾಡುತ್ತಿರುವವರೊಂದಿಗೆ ಮಾತಾಡುವುದು ಪ್ರೋತ್ಸಾಹಕರ ನಿಜ. ಆದರೂ ನಾವು ಜನರಿಗೆ ಸುವಾರ್ತೆ ಸಾರಲು ಹೋಗಿದ್ದೇವೆ ಎನ್ನುವುದನ್ನು ಮರೆಯಬಾರದು. (ಪ್ರಸಂ. 3:1, 7) ಹಾಗಾಗಿ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವಾಗ ನಾವಾಡುವ ಮಾತು ನಮ್ಮ ಗಮನವನ್ನು ಶುಶ್ರೂಷೆಯಿಂದ ಬೇರೆಡೆಗೆ ತಿರುಗಿಸುವಂತಿರಬಾರದು. ಆಸಕ್ತರು ಸಿಕ್ಕುವಲ್ಲಿ ಅವರೊಂದಿಗೆ ಯಾವ ವಿಷಯ ಮಾತಾಡಬಹುದು ಎನ್ನುವುದನ್ನು ಚರ್ಚಿಸುವುದು ನಮ್ಮ ಮನಸ್ಸನ್ನು ಶುಶ್ರೂಷೆಯ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ನಾವು ಪರಿಣಾಮಕಾರಿಯಾಗಿ ಶುಶ್ರೂಷೆಯನ್ನು ಮಾಡಲು ಮೊಬೈಲ್ ಕೆಲವೊಮ್ಮೆ ನೆರವಾಗುತ್ತದಾದರೂ ಮನೆಯವರೊಂದಿಗಿನ ಸಂಭಾಷಣೆಗೆ ಅದರಿಂದ ತಡೆಯಾಗದಂತೆ ನೋಡಿಕೊಳ್ಳಬೇಕು.
ವೈಯಕ್ತಿಕ ಕಾಳಜಿ ತೋರಿಸಿ
13, 14. (1) ಮನೆಯವನಿಗೆ ಯಾವುದರ ಬಗ್ಗೆ ಆಸಕ್ತಿಯಿದೆ ಎಂದು ನಾವು ತಿಳಿದುಕೊಳ್ಳುವುದು ಹೇಗೆ? (2) ಆಧ್ಯಾತ್ಮಿಕ ವಿಷಯದಲ್ಲಿ ಮನೆಯವನಿಗೆ ಆಸಕ್ತಿ ಹುಟ್ಟಿಸಲು ನಾವೇನು ಮಾಡಬಹುದು?
13 ಎಚ್ಚರವಾಗಿದ್ದು ಗಮನಕೊಟ್ಟು ಸೇವೆಮಾಡುವವರು ಜನರು ಮಾತಾಡುವಾಗ ಕಿವಿಗೊಟ್ಟು ಆಲಿಸುತ್ತಾರೆ. ನಿಮ್ಮ ಸೇವಾಕ್ಷೇತ್ರದಲ್ಲಿರುವ ಜನರಿಗೆ ಯಾವ ಪ್ರಶ್ನೆಗಳನ್ನು ಕೇಳಿದರೆ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವರು? ಅವರು ಯಾವುದರ ಬಗ್ಗೆ ಚಿಂತಿತರಾಗಿದ್ದಾರೆ? ಅನೇಕ ಧರ್ಮಗಳಿರುವುದರ ಬಗ್ಗೆಯೋ? ಹಿಂಸಾಚಾರ ಹೆಚ್ಚುತ್ತಿರುವ ಬಗ್ಗೆಯೋ? ಅಥವಾ ಸರ್ಕಾರಗಳ ವಿಫಲತೆಯ ಬಗ್ಗೆಯೋ? ಜೀವಸಂಕುಲದ ಅದ್ಭುತ ವಿನ್ಯಾಸ ಅಥವಾ ಬೈಬಲಿನಲ್ಲಿರುವ ಸಲಹೆಯ ಪ್ರಯೋಜನದ ಕುರಿತು ಮಾತಾಡುವ ಮೂಲಕ ಜನರಲ್ಲಿ ಆಧ್ಯಾತ್ಮಿಕ ವಿಷಯದಲ್ಲಿ ಆಸಕ್ತಿ ಹುಟ್ಟಿಸಬಲ್ಲಿರಾ? ಪ್ರಾರ್ಥನೆಯ ಬಗ್ಗೆ ಹೆಚ್ಚಾಗಿ ಎಲ್ಲ ಹಿನ್ನೆಲೆಯ ಜನರು, ಕೆಲವು ನಾಸ್ತಿಕರು ಸಹ ಮಾತಾಡಲು ಇಷ್ಟಪಡುತ್ತಾರೆ. ದೇವರು ನಮ್ಮ ಪ್ರಾರ್ಥನೆಯನ್ನು ಕೇಳುತ್ತಾನೋ ಎಂಬ ಪ್ರಶ್ನೆ ಅನೇಕರಲ್ಲಿರುತ್ತದೆ. ದೇವರು ಎಲ್ಲ ಜನರ ಪ್ರಾರ್ಥನೆಯನ್ನು ಕೇಳುತ್ತಾನಾ? ಆತನು ನಮ್ಮ ಪ್ರಾರ್ಥನೆ ಕೇಳಬೇಕಾದರೆ ನಾವೇನು ಮಾಡಬೇಕು? ಎಂಬ ಪ್ರಶ್ನೆಗಳನ್ನು ಕೇಳುವ ಮೂಲಕ ಕೆಲವರಲ್ಲಿ ಆಸಕ್ತಿಯನ್ನು ಹುಟ್ಟಿಸಬಹುದು.
14 ಅನುಭವಸ್ಥ ಪ್ರಚಾರಕರನ್ನು ಗಮನಿಸುವ ಮೂಲಕ ಸಂಭಾಷಣೆ ಆರಂಭಿಸುವ ಕಲೆಯನ್ನು ನಾವು ಕಲಿಯಬಹುದು. ತಮ್ಮ ಸಂಭಾಷಣೆಯು ವಿಚಾರಣೆ ಮಾಡುವ ರೀತಿಯಲ್ಲಿ ಅಥವಾ ಖಾಸಗಿ ವಿಷಯದಲ್ಲಿ ತಲೆಹಾಕುವ ರೀತಿಯಲ್ಲಿ ಇರದಂತೆ ಅವರು ಹೇಗೆ ನೋಡಿಕೊಳ್ಳುತ್ತಾರೆ? ತಮ್ಮ ಸ್ವರ ಹಾಗೂ ಮುಖಭಾವದಿಂದ ತಮಗೆ ಮನೆಯವನ ಅನಿಸಿಕೆಗಳನ್ನು ಕೇಳಲು ಆಸಕ್ತಿಯಿದೆ ಎಂದು ಹೇಗೆ ತೋರಿಸಿಕೊಡುತ್ತಾರೆ? ಇದನ್ನು ಅವರೊಂದಿಗೆ ಸೇವೆಮಾಡುವಾಗ ಗಮನಿಸಿ.—ಜ್ಞಾನೋ. 15:13.
ದಯಾಪರರೂ ಜಾಣ್ಮೆಯುಳ್ಳವರೂ ಆಗಿರಿ
15. ಸಾರುವಾಗ ನಾವು ಏಕೆ ದಯಾಪರರಾಗಿರಬೇಕು?
15 ಗಾಢ ನಿದ್ರೆಯಲ್ಲಿರುವಾಗ ಯಾರಾದರೂ ನಿಮ್ಮನ್ನು ಎಬ್ಬಿಸುವಲ್ಲಿ ನಿಮಗೆ ಹೇಗನಿಸುತ್ತದೆ? ಅನೇಕರಿಗೆ ಯಾರಾದರೂ ತಟ್ಟನೆ ಜೋರಾಗಿ ಎಬ್ಬಿಸಿದರೆ ಸಿಟ್ಟುಬರಬಹುದು. ಸೌಮ್ಯವಾಗಿ ಎಬ್ಬಿಸಬೇಕೆಂದು ಎಲ್ಲರೂ ಬಯಸುತ್ತೇವೆ. ಜನರನ್ನು ಆಧ್ಯಾತ್ಮಿಕ ನಿದ್ರೆಯಿಂದ ಎಬ್ಬಿಸುವ ವಿಷಯದಲ್ಲೂ ಇದು ಸತ್ಯ. ಉದಾಹರಣೆಗೆ, ಸುವಾರ್ತೆ ಸಾರಲು ಹೋದಾಗ ಮನೆಯವನು ಕೋಪದಿಂದ ಬಯ್ಯುವಲ್ಲಿ ಏನು ಮಾಡುವುದು ಉತ್ತಮ? ಅವನ ಅನಿಸಿಕೆಗಳನ್ನು ಗೌರವಿಸಿ, ತನಗೆ ಅನಿಸಿದ್ದನ್ನು ನೇರವಾಗಿ ಹೇಳಿದ್ದಕ್ಕೆ ಧನ್ಯವಾದ ಹೇಳುತ್ತಾ ಸೌಮ್ಯವಾಗಿ ಅಲ್ಲಿಂದ ಬನ್ನಿ. (ಜ್ಞಾನೋ. 15:1; 17:14; 2 ತಿಮೊ. 2:24) ನೀವು ತೋರಿಸುವ ದಯಾಭಾವವು ಮುಂದಿನ ಬಾರಿ ಸಾಕ್ಷಿಯೊಬ್ಬರು ಭೇಟಿಮಾಡಿದಾಗ ಒಳ್ಳೇದಾಗಿ ಪ್ರತಿಕ್ರಿಯಿಸುವಂತೆ ಮನೆಯವನನ್ನು ಪ್ರಚೋದಿಸಬಲ್ಲದು.
16, 17. ಸುವಾರ್ತೆ ಸಾರುತ್ತಿರುವಾಗ ನಾವು ಹೇಗೆ ವಿವೇಚನೆ ಉಪಯೋಗಿಸಬಹುದು?
16 ಕೆಲವೊಮ್ಮೆ ಮನೆಯವನು ನಮ್ಮ ಸಂಭಾಷಣೆಯನ್ನು ನಿಲ್ಲಿಸಲು ನಕಾರಾತ್ಮಕ ಹೇಳಿಕೆಗಳನ್ನು ಮಾಡಬಹುದು. ಉದಾಹರಣೆಗೆ, “ನನಗೆ ನನ್ನದೇ ಧರ್ಮ ಇದೆ” ಅಥವಾ “ನನಗೆ ಆಸಕ್ತಿಯಿಲ್ಲ” ಎಂದು ಹೇಳಬಹುದು. ಆಗಲೂ ಪ್ರಯತ್ನ ಬಿಟ್ಟುಬಿಡದೆ ದಯೆಯಿಂದಲೂ ಜಾಣ್ಮೆಯಿಂದಲೂ ಕುತೂಹಲವನ್ನು ಕೆರಳಿಸುವ ಪ್ರಶ್ನೆಯೊಂದನ್ನು ನೀವು ಕೇಳುವ ಮೂಲಕ ಆಧ್ಯಾತ್ಮಿಕ ವಿಷಯದಲ್ಲಿ ಮನೆಯವನ ಆಸಕ್ತಿಯನ್ನು ಬಡಿದೆಬ್ಬಿಸಬಲ್ಲಿರಿ.—ಕೊಲೊಸ್ಸೆ 4:6 ಓದಿ.
17 ಕೆಲವೊಮ್ಮೆ ಮನೆಯವನು ತನಗೆ ಸ್ವಲ್ಪವೂ ಸಮಯವಿಲ್ಲ ಎಂದು ಹೇಳಬಹುದು. ಆಗ ಸನ್ನಿವೇಶ ಅರ್ಥಮಾಡಿಕೊಂಡು ನಾವಲ್ಲಿಂದ ಬಂದುಬಿಡುವುದು ಒಳ್ಳೇದು. ಆದರೆ ಪರಿಸ್ಥಿತಿ ಅನುಮತಿಸುವಲ್ಲಿ ಅಲ್ಲಿಂದ ಬರುವ ಮೊದಲು ಅವರನ್ನು ಯೋಚಿಸುವಂತೆ ಮಾಡುವ ಒಂದು ವಿಷಯವನ್ನು ಸಂಕ್ಷಿಪ್ತವಾಗಿ ಹೇಳಿಬನ್ನಿ. ಕೆಲವು ಸಹೋದರರು ಒಂದು ನಿಮಿಷದೊಳಗೆ ಬೈಬಲನ್ನು ತೆರೆದು ಯೋಚನಾಪ್ರೇರಕ ವಚನವೊಂದನ್ನು ಓದಿ ಮನೆಯವನಿಗೆ ಪ್ರಶ್ನೆ ಕೇಳುತ್ತಾರೆ. ಇದು ಕೆಲವರ ಆಸಕ್ತಿಯನ್ನು ಎಷ್ಟು ಕೆರಳಿಸಿದೆಯೆಂದರೆ ಆಗಲೇ ಸಂಕ್ಷಿಪ್ತ ಸಂಭಾಷಣೆಗೆ ಸಮಯ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಸನ್ನಿವೇಶ ತಕ್ಕದಾಗಿರುವಾಗ ನೀವು ಸಹ ಹೀಗೆ ಮಾಡಬಾರದೇಕೆ?
18. ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಪರಿಣಾಮಕಾರಿಯಾಗಿರಲು ನಾವೇನು ಮಾಡಸಾಧ್ಯವಿದೆ?
18 ನೀವು ಅನೌಪಚಾರಿಕ ಸಾಕ್ಷಿಕೊಡಲು ಸಿದ್ಧರಿರುವುದಾದರೆ ದಿನನಿತ್ಯದ ಕೆಲಸಗಳಲ್ಲಿ ತೊಡಗಿರುವಾಗ ಸಿಗುವ ಜನರಿಗೆ ಸುವಾರ್ತೆಯಲ್ಲಿ ಆಸಕ್ತಿ ಹುಟ್ಟಿಸಲು ಶಕ್ತರಾಗುವಿರಿ. ಅನೇಕ ಸಹೋದರ ಸಹೋದರಿಯರು ತಮ್ಮ ಜೇಬು ಅಥವಾ ಬ್ಯಾಗ್‌ನಲ್ಲಿ ಯಾವಾಗಲೂ ಸಾಹಿತ್ಯವನ್ನು ಇಟ್ಟುಕೊಂಡಿರುತ್ತಾರೆ. ಅವಕಾಶ ಸಿಗುವಲ್ಲಿ ಯಾವ ಬೈಬಲ್ ವಚನ ಹೇಳಬಹುದೆಂದು ಸಹ ಯೋಚಿಸಿರುತ್ತಾರೆ. ನೀವು ಅನೌಪಚಾರಿಕ ಸಾಕ್ಷಿ ಕೊಡಲು ಹೇಗೆ ಸಿದ್ಧರಾಗಿರಬಹುದೆಂದು ಸೇವಾ ಮೇಲ್ವಿಚಾರಕ ಅಥವಾ ಪಯನೀಯರರ ಹತ್ತಿರ ಕೇಳಿ ತಿಳಿದುಕೊಳ್ಳಿ.
ಸಂಬಂಧಿಕರನ್ನು ಸೌಮ್ಯವಾಗಿ ಎಚ್ಚರಗೊಳಿಸಿ
19. ಸಂಬಂಧಿಕರಿಗೆ ಸಾಕ್ಷಿಕೊಡಲು ಮಾಡುವ ಪ್ರಯತ್ನವನ್ನು ಬಿಟ್ಟುಬಿಡಬಾರದೇಕೆ?
19 ನಮ್ಮ ಸಂಬಂಧಿಕರು ಸತ್ಯ ಕಲಿಯಬೇಕೆಂದು ನಾವು ಬಯಸುವುದು ಸಹಜ. (ಯೆಹೋ. 2:13; ಅ. ಕಾ. 10:24, 48; 16:31, 32) ಸಾಕ್ಷಿಕೊಡುವ ನಮ್ಮ ಪ್ರಥಮ ಪ್ರಯತ್ನ ವಿಫಲಗೊಂಡಾಗ ನಮ್ಮ ಉತ್ಸಾಹಕ್ಕೆ ತಣ್ಣೀರೆರಚಿದಂತೆ ಆಗಬಹುದು. ಏನು ಹೇಳಿದರೂ ಏನು ಮಾಡಿದರೂ ಅವರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಾವು ಯೋಚಿಸಬಹುದು. ಆದರೆ ನೆನಪಿಡಿ, ಯಾವುದಾದರೂ ಘಟನೆ ಅವರ ಜೀವನವನ್ನು ಅಥವಾ ಮನಸ್ಸನ್ನು ಬದಲಾಯಿಸಸಾಧ್ಯವಿದೆ. ಇಲ್ಲವೆ ಸಮಯ ದಾಟಿದಂತೆ ನೀವು ಬೈಬಲ್ ಸತ್ಯವನ್ನು ವಿವರಿಸಲು ಹೆಚ್ಚು ಸಮರ್ಥರಾಗಿರಬಹುದು. ಹಾಗಾಗಿ ಈಗ ಅವರು ನಿಮ್ಮ ಸಂದೇಶಕ್ಕೆ ಕಿವಿಗೊಟ್ಟಾರು.
20. ಸತ್ಯದ ಕುರಿತು ಸಂಬಂಧಿಕರೊಂದಿಗೆ ಮಾತಾಡುವಾಗ ಕೌಶಲ್ಯ ಏಕೆ ಬೇಕು?
ರೋಮ. 2:4) ಕ್ಷೇತ್ರಸೇವೆಯಲ್ಲಿ ಜನರೊಂದಿಗೆ ದಯಾಭಾವದಿಂದ ಮಾತಾಡುವಂತೆಯೇ ಅವರೊಂದಿಗೂ ಮಾತಾಡಬೇಕಲ್ಲವೆ? ಸೌಮ್ಯಭಾವದಿಂದಲೂ ಗೌರವದಿಂದಲೂ ಮಾತಾಡಿ. ಉಪದೇಶ ಮಾಡಲು ಹೋಗಬೇಡಿ. ಸತ್ಯವು ನಿಮ್ಮ ಮೇಲೆ ಹೇಗೆ ಒಳ್ಳೇ ಪರಿಣಾಮ ಬೀರಿದೆ ಎನ್ನುವುದನ್ನು ಕ್ರಿಯೆಯ ಮೂಲಕ ತೋರಿಸಿಕೊಡಿ. (ಎಫೆ. 4:23, 24) ಯೆಹೋವನು ಹೇಗೆ ನಿಮಗೆ “ವೃದ್ಧಿಮಾರ್ಗವನ್ನು ಬೋಧಿಸಿ” ನಿಮ್ಮ ಬಾಳಲ್ಲಿ ಸಂತೋಷವನ್ನು ತುಂಬಿಸಿದ್ದಾನೆ ಎಂಬುದು ನಿಮ್ಮ ಜೀವನದಿಂದ ವ್ಯಕ್ತವಾಗಲಿ. (ಯೆಶಾ. 48:17) ಕ್ರೈಸ್ತರು ಹೇಗೆ ಜೀವಿಸಬೇಕೆಂದು ನಿಮ್ಮ ಮಾದರಿಯಿಂದ ತೋರಿಸಿಕೊಡಿ.
20 ನಮ್ಮ ಸಂಬಂಧಿಕರ ಭಾವನೆಗಳನ್ನು ಅಲಕ್ಷ್ಯ ಮಾಡಬಾರದು. (21, 22. ಸಂಬಂಧಿಕರಿಗೆ ಸತ್ಯ ಕಲಿಸಲು ಪ್ರಯತ್ನ ಬಿಟ್ಟುಬಿಡದಿರುವುದರ ಮೌಲ್ಯವನ್ನು ತೋರಿಸುವ ಒಂದು ಅನುಭವ ತಿಳಿಸಿ.
21 ಇತ್ತೀಚೆಗೆ ಸಹೋದರಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡದ್ದು ಹೀಗೆ: “ನನ್ನ ಅಣ್ಣ, ಅಕ್ಕ, ತಮ್ಮ, ತಂಗಿ ಒಟ್ಟು 13 ಮಂದಿಗೆ ನಾನು ನನ್ನ ನಡೆನುಡಿಯಿಂದ ಸಾಕ್ಷಿಕೊಡುವುದನ್ನು ಯಾವತ್ತೂ ಬಿಟ್ಟಿಲ್ಲ. ಪ್ರತಿವರ್ಷ ತಪ್ಪದೆ ಅವರೆಲ್ಲರಿಗೂ ಪತ್ರ ಬರೆಯುತ್ತೇನೆ. ಆದರೂ 30 ವರ್ಷಗಳ ವರೆಗೆ ಅವರಲ್ಲಿ ಯಾರೂ ಸತ್ಯಕ್ಕೆ ಬರಲಿಲ್ಲ.”
22 ಅನಂತರ ಏನಾಯಿತು? ಸಹೋದರಿ ಹೀಗೆ ಹೇಳುತ್ತಾರೆ: “ನೂರಾರು ಕಿ.ಮೀ. ದೂರದಲ್ಲಿ ವಾಸಿಸುವ ನನ್ನ ಅಕ್ಕನಿಗೆ ನಾನು ಒಂದು ದಿನ ಫೋನ್ ಮಾಡಿದೆ. ಅವಳು ಧರ್ಮಬೋಧಕನ ಬಳಿ ತನಗೆ ಬೈಬಲ್ ಕಲಿಸುವಂತೆ ಕೇಳಿಕೊಂಡಳಂತೆ. ಆದರೆ ಅವನು ಕಲಿಸಿಕೊಡಲಿಲ್ಲ ಎಂದು ನನಗೆ ಹೇಳಿದಳು. ‘ನಾನು ನಿನಗೆ ಬೈಬಲ್ ಕಲಿಸಲು ಸಿದ್ಧಳಿದ್ದೇನೆ’ ಎಂದು ಆಗ ನಾನವಳಿಗೆ ಹೇಳಿದೆ. ಅದಕ್ಕವಳು, ‘ಸರಿ, ನೀನು ನನಗೆ ಕಲಿಸು. ಆದರೆ ಒಂದು ಮಾತು ನಿಜ. ನಾನಂತೂ ಎಂದಿಗೂ ಯೆಹೋವನ ಸಾಕ್ಷಿ ಆಗುವುದಿಲ್ಲ’ ಎಂದು ಹೇಳಿದಳು. ನಂತರ ನಾನು ಅವಳಿಗೆ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ಅಂಚೆಯ ಮೂಲಕ ಕಳುಹಿಸಿಕೊಟ್ಟೆ. ಆಗಾಗ ಫೋನ್ ಮಾಡಿ ಮಾತಾಡುತ್ತಿದ್ದೆ. ಆದರೆ ಅವಳು ಪುಸ್ತಕವನ್ನು ಮುಟ್ಟಿಯೂ ನೋಡಿರಲಿಲ್ಲ. ಒಮ್ಮೆ ಫೋನ್ ಮಾಡಿದಾಗ ನಾನೇ ಅವಳಿಗೆ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಹೇಳಿ ಸುಮಾರು 15 ನಿಮಿಷ ಅದರಲ್ಲಿ ಉದ್ಧರಿಸಲಾಗಿರುವ ವಚನಗಳನ್ನು ಅವಳೊಂದಿಗೆ ಓದಿ ಚರ್ಚಿಸಿದೆ. ಹೀಗೆ ಕೆಲವು ಬಾರಿ ಮಾಡಿದ ನಂತರ 15 ನಿಮಿಷಕ್ಕಿಂತ ಹೆಚ್ಚು ಸಮಯ ಅಧ್ಯಯನ ಮಾಡುವಂತೆ ಅವಳು ಕೇಳಿಕೊಂಡಳು. ಸ್ವಲ್ಪ ಸಮಯದ ನಂತರ ಅಧ್ಯಯನ ಮಾಡಲು ಅವಳೇ ನನಗೆ ಫೋನ್ ಮಾಡುತ್ತಿದ್ದಳು. ಎಷ್ಟರ ಮಟ್ಟಿಗೆಂದರೆ ಕೆಲವೊಮ್ಮೆ ನಾನು ಬೆಳಗ್ಗೆ ಎದ್ದೇಳುವ ಮುಂಚೆಯೇ ಅವಳ ಕರೆ ಬರುತ್ತಿತ್ತು. ದಿನಕ್ಕೆ ಎರಡು ಬಾರಿ ಅಧ್ಯಯನ ಮಾಡಿದ್ದೂ ಉಂಟು. ಮರುವರ್ಷವೇ ಅವಳು ದೀಕ್ಷಾಸ್ನಾನ ಪಡೆದುಕೊಂಡಳು. ಅದರ ಮರುವರ್ಷ ಪಯನೀಯರ್ ಸೇವೆ ಆರಂಭಿಸಿದಳು.”
23. ಜನರನ್ನು ಆಧ್ಯಾತ್ಮಿಕ ನಿದ್ರೆಯಿಂದ ಎಬ್ಬಿಸುವ ಕೆಲಸದಲ್ಲಿ ನಾವು ಪ್ರಯತ್ನವನ್ನು ನಿಲ್ಲಿಸಬಾರದೇಕೆ?
23 ಜನರನ್ನು ಆಧ್ಯಾತ್ಮಿಕ ನಿದ್ರೆಯಿಂದ ಎಬ್ಬಿಸುವುದಕ್ಕೆ ಜಾಣ್ಮೆ ಬೇಕು. ಪಟ್ಟುಬಿಡದೆ ಪ್ರಯತ್ನಿಸಲೂಬೇಕು. ಅನೇಕ ದೀನ ಜನರು ಈಗಲೂ ಸುವಾರ್ತೆಗೆ ಕಿವಿಗೊಟ್ಟು ಆಧ್ಯಾತ್ಮಿಕ ನಿದ್ರೆಯಿಂದ ಎಚ್ಚತ್ತುಕೊಳ್ಳುತ್ತಿದ್ದಾರೆ. ಪ್ರತಿ ತಿಂಗಳು ಸರಾಸರಿ 20,000ಕ್ಕಿಂತ ಹೆಚ್ಚು ಮಂದಿ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಾಗುತ್ತಿದ್ದಾರೆ. ಆದುದರಿಂದ “ಕರ್ತನಲ್ಲಿ ನೀನು ಅಂಗೀಕರಿಸಿದ ಶುಶ್ರೂಷೆಯನ್ನು ಪೂರೈಸಲು ಎಚ್ಚರವಾಗಿರು” ಎಂದು ಪೌಲನು ಒಂದನೇ ಶತಮಾನದ ನಮ್ಮ ಸಹೋದರ ಅರ್ಖಿಪ್ಪನಿಗೆ ಹೇಳಿದ ಮಾತುಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳೋಣ. (ಕೊಲೊ. 4:17) ತುರ್ತಿನಿಂದ ಸಾರುವುದು ಎಂದರೇನು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಮುಂದಿನ ಲೇಖನವು ನಮಗೆ ಸಹಾಯ ಮಾಡುವುದು.
[ಅಧ್ಯಯನ ಪ್ರಶ್ನೆಗಳು]
[ಪುಟ 13ರಲ್ಲಿರುವ ಚೌಕ]
ನೀವು ಎಚ್ಚರದಿಂದಿರಲು...
▪ ದೇವರ ಚಿತ್ತ ಮಾಡುವುದರಲ್ಲಿ ಕಾರ್ಯನಿರತರಾಗಿರಿ
▪ ಕತ್ತಲೆಗೆ ಸಂಬಂಧಿಸಿದ ಕೃತ್ಯಗಳನ್ನು ಮಾಡದಿರಿ
▪ ಆಧ್ಯಾತ್ಮಿಕ ನಿದ್ರೆಯಿಂದಾಗುವ ಅಪಾಯಗಳ ಅರಿವಿರಲಿ
▪ ಕ್ಷೇತ್ರದಲ್ಲಿರುವ ಜನರ ಕಡೆಗೆ ಸಕಾರಾತ್ಮಕ ನೋಟವುಳ್ಳವರಾಗಿರಿ
▪ ಹೊಸ ವಿಧಾನಗಳನ್ನು ಉಪಯೋಗಿಸಿ ಸಾರಿರಿ
▪ ನಿಮ್ಮ ಸೇವೆಯ ಮಹತ್ವವನ್ನು ಮರೆಯದಿರಿ