ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿನ್ನ ಬಲಗೈಯಲ್ಲಿ ಶಾಶ್ವತ ಆನಂದವಿದೆ”

“ನಿನ್ನ ಬಲಗೈಯಲ್ಲಿ ಶಾಶ್ವತ ಆನಂದವಿದೆ”

ಜೀವನ ಕಥೆ

“ನಿನ್ನ ಬಲಗೈಯಲ್ಲಿ ಶಾಶ್ವತ ಆನಂದವಿದೆ”

ಲೋವಿಸ್‌ ಡೀಡರ್‌ ಹೇಳಿದಂತೆ

‘ನಾನು ಅಂಥ ನಿರ್ಣಯ ಮಾಡಬಾರದಾಗಿತ್ತು’ ಎಂದು ನೀವು ಜೀವನದಲ್ಲಿ ಎಷ್ಟೋ ಬಾರಿ ವಿಷಾದಿಸಿರಬಹುದು. ಆದರೆ ನಾನು ಪೂರ್ಣ ಸಮಯದ ಸೇವೆಯಲ್ಲಿ 50 ವರುಷಗಳನ್ನು ಕಳೆದರೂ ಒಂದೇ ಒಂದು ಬಾರಿಯೂ ಆ ನಿರ್ಣಯಕ್ಕಾಗಿ ವಿಷಾದಿಸಿಲ್ಲ. ಏಕೆಂದು ನಾನೀಗ ನಿಮಗೆ ತಿಳಿಸುತ್ತೇನೆ.

ಇಸವಿ 1939ರಲ್ಲಿ ನಾನು ಹುಟ್ಟಿದೆ. ಬೆಳೆದದ್ದು ಕೆನಡದ ಸಸ್ಕ್ಯಾಚುವಾನ್‌ ಪ್ರಾಂತದಲ್ಲಿ. ಹೊಲಗದ್ದೆಗಳ ಆ ಪ್ರದೇಶದಲ್ಲಿ ನಮ್ಮ ಜೀವನ ಆನಂದಮಯವಾಗಿತ್ತು. ನನ್ನ ಒಡಹುಟ್ಟಿದವರು ಐದು ಮಂದಿ. ನಾಲ್ಕು ಸಹೋದರಿಯರು, ಒಬ್ಬ ತಮ್ಮ. ಒಂದು ದಿನ ಯೆಹೋವನ ಸಾಕ್ಷಿಗಳು ನಮ್ಮ ಮನೆಗೆ ಭೇಟಿನೀಡಿ ನನ್ನ ತಂದೆಯೊಂದಿಗೆ ಮಾತಾಡಿದರು. ‘ದೇವರಿಗೆ ಹೆಸರಿದೆಯಾ?’ ಎಂದು ನಾನವರನ್ನು ಕೇಳಿದೆ. ಅವರು ಕೀರ್ತನೆ 83:18 ಅನ್ನು ತೆರೆದು ದೇವರ ಹೆಸರು ‘ಯೆಹೋವ’ ಎಂದು ತೋರಿಸಿದರು. ಇದು ದೇವರ ಕುರಿತೂ ಆತನ ವಾಕ್ಯದ ಕುರಿತೂ ಮತ್ತಷ್ಟು ಕಲಿಯಬೇಕೆಂಬ ಆಸೆಯನ್ನು ನನ್ನಲ್ಲಿ ಚಿಗುರಿಸಿತು.

ಆ ದಿನಗಳಲ್ಲಿ ಹಳ್ಳಿಯಲ್ಲಿ ಒಂದೇ ಕೊಠಡಿಯಿರುವ ಶಾಲೆಗಳಿದ್ದವು. ಒಂದರಿಂದ ಎಂಟನೇ ತರಗತಿಯ ಮಕ್ಕಳು ಅದೇ ಕೊಠಡಿಯಲ್ಲಿ ಕುಳಿತು ಕಲಿಯುತ್ತಿದ್ದರು. ಅನೇಕ ಮೈಲು ದೂರದಲ್ಲಿದ್ದ ಅಂಥ ಶಾಲೆಗಳಿಗೆ ಕುದುರೆ ಮೇಲೆಯೋ ಕಾಲ್ನಡಿಗೆಯಲ್ಲಿಯೋ ಹೋಗಬೇಕಾಗಿತ್ತು. ಆ ಶಾಲೆಯಲ್ಲಿ ಇರುತ್ತಿದ್ದ ಅಧ್ಯಾಪಕರು ಒಬ್ಬರೇ. ಅವರನ್ನು ಆ ಹಳ್ಳಿಯಲ್ಲಿರುವ ಬೇರೆ ಬೇರೆ ಕುಟುಂಬಗಳು ನೋಡಿಕೊಳ್ಳುತ್ತಿದ್ದವು. ಹೀಗೆ ಒಂದು ವರ್ಷ ನನ್ನ ಕುಟುಂಬದ ಸರದಿ ಬಂತು. ಜಾನ್‌ ಡೀಡರ್‌ ಎಂಬ ಹೊಸ ಅಧ್ಯಾಪಕರು ನಮ್ಮ ಮನೆಗೆ ಬಂದು ತಂಗಿದರು.

ಈ ಯುವಕನಿಗೂ ದೇವರ ವಾಕ್ಯದಲ್ಲಿ ಆಸಕ್ತಿಯಿತ್ತೆಂದು ನನಗೆ ತಿಳಿದಿರಲಿಲ್ಲ. ನನ್ನ ಅಪ್ಪ ಕಮ್ಯುನಿಸಮ್‌ ಹಾಗೂ ಸಮಾಜವಾದವನ್ನು ಬೆಂಬಲಿಸುತ್ತಿದ್ದರು. ಒಮ್ಮೆ ನಾನು ಆ ಗುಂಪನ್ನು ಹೊಗಳಿ ಮಾತಾಡುತ್ತಿದ್ದಾಗ, “ಯಾವ ಮನುಷ್ಯನಿಗೂ ಇನ್ನೊಬ್ಬ ಮನುಷ್ಯನ ಮೇಲೆ ಆಳ್ವಿಕೆ ನಡೆಸುವ ಅಧಿಕಾರವಿಲ್ಲ. ಆ ಅಧಿಕಾರ ದೇವರಿಗೆ ಮಾತ್ರ ಇದೆ” ಎಂದು ಜಾನ್‌ ಸೌಮ್ಯವಾಗಿ ನುಡಿದರು. ಆ ಹೇಳಿಕೆಯು ಅನೇಕ ಆಸಕ್ತಿಕರ ಸಂಭಾಷಣೆಗಳಿಗೆ ದಾರಿಮಾಡಿತು.

ಜಾನ್‌ 1931ರಲ್ಲಿ ಹುಟ್ಟಿದ ಕಾರಣ ಯುದ್ಧದಿಂದಾಗುವ ಕಷ್ಟನಷ್ಟಗಳ ಕುರಿತು ಬಹಳಷ್ಟನ್ನು ಕೇಳಿಸಿಕೊಂಡಿದ್ದರು. ಹಾಗಾಗಿ 1950ರಲ್ಲಿ ಕೊರಿಯನ್‌ ಯುದ್ಧ ಆರಂಭಗೊಂಡಾಗ, ‘ಕ್ರೈಸ್ತರು ಯುದ್ಧದಲ್ಲಿ ಭಾಗವಹಿಸುವುದು ಸರಿಯಾ?’ ಎಂದು ಅನೇಕ ಪಾದ್ರಿಗಳನ್ನು ಅವರು ಕೇಳಿದರು. ಅದಕ್ಕೆ ಎಲ್ಲರೂ ಒಂದೇ ಉತ್ತರ ನೀಡಿದರು. ‘ಕ್ರೈಸ್ತರು ಯುದ್ಧದಲ್ಲಿ ಭಾಗವಹಿಸಬಹುದು. ಅದರಲ್ಲಿ ತಪ್ಪೇನಿಲ್ಲ.’ ಅದೇ ಪ್ರಶ್ನೆಯನ್ನು ಒಮ್ಮೆ ಯೆಹೋವನ ಸಾಕ್ಷಿಗಳ ಬಳಿ ಕೇಳಿದರು. ಕ್ರೈಸ್ತರು ತೆಗೆದುಕೊಳ್ಳಬೇಕಾದ ನಿಲುವು ಏನು ಮತ್ತು ಆದಿ ಕ್ರೈಸ್ತರು ಯಾವ ನಿಲುವನ್ನು ತೆಗೆದುಕೊಂಡರು ಎಂಬುದನ್ನು ಸಾಕ್ಷಿಗಳು ಬೈಬಲಿನ ಮೂಲಕ ವಿವರಿಸಿದರು. ಇದರಿಂದ ಬಹಳ ಪ್ರಭಾವಿತರಾದ ಜಾನ್‌ 1955ರಲ್ಲಿ ದೀಕ್ಷಾಸ್ನಾನ ಪಡೆದರು. ಮರುವರುಷ ನಾನೂ ದೀಕ್ಷಾಸ್ನಾನ ಪಡೆದೆ. ಬದುಕಿರುವಷ್ಟು ಕಾಲ ನಮ್ಮ ಸಂಪೂರ್ಣ ಶಕ್ತಿಯನ್ನು ಯೆಹೋವನ ಸೇವೆಯಲ್ಲಿ ವ್ಯಯಿಸಬೇಕೆಂಬುದೇ ನಮ್ಮಿಬ್ಬರ ಬಯಕೆಯಾಗಿತ್ತು. (ಕೀರ್ತ. 37:3, 4) ಇಸವಿ 1957ರ ಜುಲೈ ತಿಂಗಳಿನಲ್ಲಿ ನಾವು ಮದುವೆಯಾದೆವು.

ಅನೇಕ ಬಾರಿ ನಮ್ಮ ವಿವಾಹ ವಾರ್ಷಿಕೋತ್ಸವದಂದು ನಾವು ಅಧಿವೇಶನಗಳಲ್ಲಿ ಇರುತ್ತಿದ್ದೆವು. ವಿವಾಹದ ಏರ್ಪಾಡನ್ನು ಗೌರವಿಸುವ ಸಾವಿರಾರು ಜನರ ಮಧ್ಯೆ ಇರಲು ನಾವು ಸಂತೋಷಿಸಿದೆವು. 1958ರಲ್ಲಿ ನ್ಯೂ ಯಾರ್ಕ್‌ನಲ್ಲಿ ನಾವು ಮೊತ್ತಮೊದಲ ಬಾರಿ ಅಂತಾರಾಷ್ಟ್ರೀಯ ಅಧಿವೇಶನವನ್ನು ಹಾಜರಾದೆವು. ಆ ಅಧಿವೇಶನಕ್ಕೆ ಐದು ಮಂದಿ ಒಟ್ಟಾಗಿ ಸಸ್ಕ್ಯಾಚುವಾನ್‌ನಿಂದ ನ್ಯೂ ಯಾರ್ಕ್‌ಗೆ ಕಾರಿನಲ್ಲಿ ಪ್ರಯಾಣಿಸಿದೆವು. ಅದು ಒಂದು ವಾರದಷ್ಟು ದೀರ್ಘ ಪ್ರಯಾಣವಾಗಿತ್ತು. ಹಗಲಿಡೀ ಕಾರ್‌ ಓಡಿಸಿ, ರಾತ್ರಿ ಡೇರೆ ಹಾಕಿ ವಿಶ್ರಮಿಸುತ್ತಿದ್ದೆವು. ಪೆನ್ಸಿಲ್ವೇನಿಯದ ಬೆತ್ಲೆಹೇಮಿಗೆ ಬಂದಾಗ ನಾವು ಭೇಟಿಯಾದ ಸಹೋದರರೊಬ್ಬರು ಆ ರಾತ್ರಿ ತಮ್ಮ ಮನೆಯಲ್ಲಿ ತಂಗುವಂತೆ ಆಮಂತ್ರಿಸಿದರು. ಅವರ ಈ ದಯಾಭರಿತ ಕ್ರಿಯೆಯಿಂದಾಗಿ ಅಧಿವೇಶನದ ಸ್ಥಳಕ್ಕೆ ನಾವು ಶುದ್ಧವಾಗಿ ಅಚ್ಚುಕಟ್ಟಾಗಿ ಹೋಗಸಾಧ್ಯವಾಯಿತು. “ನಿನ್ನ ಬಲಗೈಯಲ್ಲಿ ಶಾಶ್ವತಭಾಗ್ಯವಿದೆ [ಆನಂದವಿದೆ, NW]” ಎಂಬ ಕೀರ್ತನೆಗಾರನ ಮಾತುಗಳಂತೆ, ಯೆಹೋವನ ಸೇವೆ ಎಣೆಯಿಲ್ಲದ ಆನಂದವನ್ನು ತರುತ್ತದೆ ಎನ್ನುವುದನ್ನು ಆ ದೊಡ್ಡ ಅಧಿವೇಶನ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಸಿತು.—ಕೀರ್ತ. 16:11.

ಪಯನೀಯರ್‌ ಸೇವೆ

ಮರುವರುಷ ಅಂದರೆ 1959ರಲ್ಲಿ ನಾವು ಪಯನೀಯರ್‌ ಸೇವೆ ಆರಂಭಿಸಿದೆವು. ಸಸ್ಕ್ಯಾಚುವಾನ್‌ನ ಎತ್ತರ ಪ್ರದೇಶದ ಹುಲ್ಲುಗಾಡಿನಲ್ಲಿ ಒಂದು ಚಿಕ್ಕ ಮೋಟಾರುಮನೆಯಲ್ಲಿ ವಾಸಿಸುತ್ತಿದ್ದೆವು. ಆ ಎತ್ತರ ಪ್ರದೇಶದಿಂದ ಮೈಲುಗಟ್ಟಲೆ ನೋಡಸಾಧ್ಯವಿತ್ತು. ಅದರಲ್ಲಿ ಹೆಚ್ಚಿನದ್ದು ನಮ್ಮ ಸಾರುವ ಕ್ಷೇತ್ರವಾಗಿತ್ತು.

ಒಂದು ದಿನ ಬ್ರಾಂಚ್‌ ಆಫೀಸಿನಿಂದ ಆಸಕ್ತಿಕರ ಪತ್ರವೊಂದು ಬಂತು. ನಾನು ಅದನ್ನು ತೆಗೆದುಕೊಂಡು ಟ್ರ್ಯಾಕ್ಟರನ್ನು ರಿಪೇರಿ ಮಾಡುತ್ತಿದ್ದ ಜಾನ್‌ ಬಳಿ ಓಡಿದೆ. ನಮಗೆ ಹೊಸ ನೇಮಕ ಸಿಕ್ಕಿತ್ತು. ಆಂಟೇರಿಯೋದ ರೆಡ್‌ ಲೇಕ್‌ ಪಟ್ಟಣದಲ್ಲಿ ವಿಶೇಷ ಪಯನೀಯರರಾಗಿ ಸೇವೆಸಲ್ಲಿಸಲು ನಾವು ನೇಮಕಗೊಂಡಿದ್ದೆವು. ಅದೆಲ್ಲಿದೆ ಎಂದು ತಿಳಿದಿಲ್ಲದ ಕಾರಣ ಕೂಡಲೆ ನಕ್ಷೆಯನ್ನು ತೆಗೆದುಕೊಂಡು ನೋಡಿದೆವು.

ಈಗ ನಾವು ಬಂದು ತಲಪಿದ ಸ್ಥಳಕ್ಕೂ ಈ ಮುಂಚೆ ನಾವಿದ್ದ ಹೊಲಗದ್ದೆಗಳ ಪ್ರದೇಶಕ್ಕೂ ಅಜಗಜಾಂತರ! ಇದು ಕಾಡುಪ್ರದೇಶ, ದೊಡ್ಡ ದೊಡ್ಡ ಮರಗಳು ತುಂಬಿದ್ದ ಪ್ರದೇಶ. ಚಿನ್ನದ ಗಣಿಗಳಿದ್ದವು. ಸಮೀಪದಲ್ಲಿ ಚಿಕ್ಕ ಚಿಕ್ಕ ಊರುಗಳಿದ್ದವು. ಮೊದಲ ದಿನ ನಾವು ತಂಗಲು ಮನೆಗಾಗಿ ಹುಡುಕುತ್ತಾ ಒಬ್ಬಾಕೆ ಸ್ತ್ರೀಯನ್ನು ವಿಚಾರಿಸಿದೆವು. ಆ ಸ್ತ್ರೀಯ ಪಕ್ಕದ ಮನೆಯ ಚಿಕ್ಕ ಹುಡುಗಿಯೊಬ್ಬಳು ನಮ್ಮ ಮಾತುಕತೆಯನ್ನು ಆಲಿಸಿ, ಓಡಿಹೋಗಿ ತನ್ನ ತಾಯಿಗೆ ತಿಳಿಸಿದಳು. ಅವರು ಆ ರಾತ್ರಿ ನಮಗೆ ತಂಗಲು ತಮ್ಮ ಮನೆಯಲ್ಲಿ ಸ್ಥಳಕೊಟ್ಟರು. ನೆಲಮಾಳಿಗೆಯಲ್ಲಿ ಮಲಗಲು ವ್ಯವಸ್ಥೆ ಮಾಡಲಾಯಿತು. ಆ ಸ್ಥಳವು ಸುಸ್ಥಿತಿಯಲ್ಲಿಲ್ಲದಿದ್ದರೂ ಆ ರಾತ್ರಿ ಅಲ್ಲೇ ಕಳೆದೆವು. ಮರುದಿನ ನಮಗೆ ಮರದ ದಿಮ್ಮಿಗಳಿಂದ ಮಾಡಿದ ಎರಡು ಕೋಣೆಗಳಿರುವ ಮನೆಯೊಂದು ಸಿಕ್ಕಿತು. ಆ ಮನೆಯಲ್ಲಿ ಕೊಳಾಯಿ ವ್ಯವಸ್ಥೆಯಾಗಲಿ ಯಾವುದೇ ಪೀಠೋಪಕರಣಗಳಾಗಲಿ ಇರಲಿಲ್ಲ. ಕೇವಲ ಒಂದು ಒಲೆಯಿತ್ತು. ಅಗತ್ಯವಿರುವ ಕೆಲವು ವಸ್ತುಗಳನ್ನು ಸೆಕೆಂಡ್‌ ಹ್ಯಾಂಡ್‌ ಅಂಗಡಿಯಿಂದ ಖರೀದಿಸಿದೆವು. ಹೀಗೆ ಸಿಕ್ಕಿದ್ದರಲ್ಲೇ ತೃಪ್ತರಾದೆವು.

ಆ ಸ್ಥಳದಲ್ಲಿ 209 ಕಿಲೋಮೀಟರ್‌ ದೂರದ ವರೆಗೆ ಯಾವುದೇ ಸಭೆ ಇರಲಿಲ್ಲ. ಅಲ್ಲಿನ ಚಿನ್ನದ ಗಣಿಗಳಲ್ಲಿ ಕೆಲಸಮಾಡುತ್ತಿದ್ದ ಹೆಚ್ಚಿನವರು ಯೂರೋಪಿನಿಂದ ಬಂದವರು. ಅವರು ತಮ್ಮ ಭಾಷೆಯ ಬೈಬಲನ್ನು ತಂದು ಕೊಡುವಂತೆ ನಮ್ಮನ್ನು ಕೇಳಿಕೊಂಡರು. ಸ್ವಲ್ಪ ಸಮಯದೊಳಗೆ ನಮಗೆ 30 ಅತ್ಯುತ್ತಮ ಬೈಬಲ್‌ ಅಧ್ಯಯನಗಳು ದೊರಕಿದವು. ಆರು ತಿಂಗಳೊಳಗೆ ಅಲ್ಲಿ ಒಂದು ಚಿಕ್ಕ ಸಭೆ ಆರಂಭವಾಯಿತು.

ನಾವು ಒಬ್ಬಾಕೆ ಸ್ತ್ರೀಯೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದೆವು. ಒಂದು ದಿನ ಆಕೆಯ ಪತಿ ಪಾದ್ರಿಗೆ ಫೋನ್‌ ಮಾಡಿ, ಬಂದು ತನ್ನ ಹೆಂಡತಿಗೆ ಬುದ್ಧಿಹೇಳುವಂತೆ ತಿಳಿಸಿದನು. ಪಾದ್ರಿ ಬಂದು ನಮ್ಮೊಂದಿಗೆ ಮಾತಾಡುತ್ತಿದ್ದಾಗ ಇತರ ವಿಷಯಗಳೊಂದಿಗೆ ತ್ರಯೈಕ್ಯವನ್ನು ಸಹ ನಾವು ಕಲಿಸಬೇಕೆಂದು ಹೇಳಿದರು. ಆಗ ಆ ಸ್ತ್ರೀ ಕ್ಯಾಥೊಲಿಕ್‌ ಬೈಬಲ್‌ ತಂದು ಅವರ ಕೈಗೆ ಕೊಟ್ಟು, ‘ತ್ರಯೈಕ್ಯ ಬೋಧನೆ ಸತ್ಯವಾಗಿದ್ದರೆ ಬೈಬಲಿನಿಂದ ರುಜುಪಡಿಸಿ’ ಎಂದು ಹೇಳಿದಳು. ಕುಪಿತರಾದ ಪಾದ್ರಿ ಬೈಬಲನ್ನು ಮೇಜಿನಿಂದಾಚೆ ಎಸೆದು ಏನನ್ನೂ ರುಜುಪಡಿಸುವ ಅಗತ್ಯ ತನಗಿಲ್ಲ ಎಂದು ಹೇಳಿ ಹೊರನಡೆದರು. ಹೋಗುವಾಗ, ‘ಅವರನ್ನು ಮನೆಯಿಂದ ಹೊರಗೋಡಿಸಿ, ಮುಂದೆಂದೂ ಮನೆಯೊಳಗೆ ಕಾಲಿಡಲಿಕ್ಕೆ ಬಿಡಬೇಡಿ’ ಎಂದು ಯುಕ್ರೇನ್ಯನ್‌ ಭಾಷೆಯಲ್ಲಿ ಗುಡುಗಿದರು. ಜಾನ್‌ಗೆ ಯುಕ್ರೇನ್ಯನ್‌ ಭಾಷೆ ಅರ್ಥವಾಗುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ.

ಇದಾದ ಸ್ವಲ್ಪ ಸಮಯದಲ್ಲಿ ಸರ್ಕಿಟ್‌ ಕೆಲಸಕ್ಕೆ ತರಬೇತು ಪಡೆಯಲು ಜಾನ್‌ಗೆ ಕರೆಬಂತು. ಹಾಗಾಗಿ ನಾವು ರೆಡ್‌ ಲೇಕ್‌ ಪಟ್ಟಣವನ್ನು ಬಿಟ್ಟುಬರಬೇಕಾಯಿತು. ಸುಮಾರು ಒಂದು ವರ್ಷ ನಂತರ ಜಿಲ್ಲಾ ಅಧಿವೇಶನವೊಂದರಲ್ಲಿ ಜಾನ್‌ ದೀಕ್ಷಾಸ್ನಾನದ ಭಾಷಣ ನೀಡುತ್ತಿದ್ದಾಗ ಆ ಪತಿಯೂ ದೀಕ್ಷಾಸ್ನಾನದ ಅಭ್ಯರ್ಥಿಗಳ ಸಾಲಲ್ಲಿ ಕುಳಿತಿದ್ದನು. ಅಂದು ಪಾದ್ರಿ ಆಡಿದ ಮಾತು, ನಡೆದುಕೊಂಡ ರೀತಿ ಎಲ್ಲವೂ ಬೈಬಲನ್ನು ಸ್ವತಃ ಪರೀಕ್ಷಿಸಿ ನೋಡುವಂತೆ ಅವನನ್ನು ಪ್ರೇರೇಪಿಸಿತ್ತು.

ಸಂಚರಣ ಕೆಲಸದಲ್ಲಿ ಕಾರ್ಯಮಗ್ನ

ಸರ್ಕಿಟ್‌ ಕೆಲಸದಲ್ಲಿದ್ದಾಗ ಅನೇಕ ಕುಟುಂಬಗಳೊಂದಿಗೆ ಉಳುಕೊಳ್ಳುವ ಆನಂದ ನಮಗೆ ದೊರಕಿತು. ತಮ್ಮ ಮನೆ-ಮನದಲ್ಲಿ ಸ್ಥಳಕೊಟ್ಟವರೊಂದಿಗೆ ನಾವು ಆಪ್ತರಾದೆವು. ಒಮ್ಮೆ ನಾವೊಬ್ಬರ ಮನೆಯ ಮಾಳಿಗೆಯ ಮೇಲಿದ್ದ ಕೋಣೆಯಲ್ಲಿ ತಂಗಿದ್ದೆವು. ಅದು ಚಳಿಗಾಲ. ಅಲ್ಲಿ ಚಳಿಕಾಯಿಸಿಕೊಳ್ಳುವ ಯಾವುದೇ ವ್ಯವಸ್ಥೆ ಇರಲಿಲ್ಲ. ಆ ಮನೆಯಲ್ಲಿದ್ದ ಪ್ರಾಯಸ್ಥ ಸಹೋದರಿ ಮುಂಜಾನೆ ಸದ್ದುಮಾಡದೆ ನಮ್ಮ ಕೋಣೆಗೆ ಬಂದು ಚಿಕ್ಕ ಸ್ಟೋವನ್ನು ಉರಿಸಿ ಕೋಣೆಯನ್ನು ಬೆಚ್ಚಗೆ ಮಾಡುತ್ತಿದ್ದರು. ಮಾತ್ರವಲ್ಲ, ಪುನಃ ಕೆಳಗೆ ಹೋಗಿ ನಮಗಾಗಿ ಬಿಸಿ ನೀರನ್ನು ತಂದುಕೊಡುತ್ತಿದ್ದರು. ಇದರಿಂದ ನಾವು ಎದ್ದು ಸೇವೆಗೆ ಸಿದ್ಧರಾಗಲು ಸಹಾಯವಾಗುತ್ತಿತ್ತು. ಈ ಸಹೋದರಿ ಮೌನವಾಗಿ ತೋರಿಸಿದ ದಯಾಭರಿತ ಕ್ರಿಯೆಯಿಂದ ನಾನು ಬಹಳಷ್ಟನ್ನು ಕಲಿತುಕೊಂಡೆ.

ಸಂಚರಣ ಕೆಲಸದಿಂದ ನಾನು ಯೆಹೋವನಿಗೆ ಇನ್ನಷ್ಟು ಆಪ್ತಳಾದೆ. ಆಲ್ಬರ್ಟಾ ಪ್ರಾಂತ್ಯದ ಸರ್ಕಿಟ್‌ ಒಂದರಲ್ಲಿ ತೀರಾ ಉತ್ತರಕ್ಕೆ ಒಂದು ಗಣಿಗಾರಿಕೆಯ ಪಟ್ಟಣವಿತ್ತು. ಅಲ್ಲಿ ಒಬ್ಬರೇ ಸಹೋದರಿ ಇದ್ದರು. ಯೆಹೋವನ ಸಂಘಟನೆ ಅವರನ್ನು ಅಲಕ್ಷಿಸಿತಾ? ಇಲ್ಲ, ಪ್ರತಿ ಆರು ತಿಂಗಳಿಗೊಮ್ಮೆ ನಾವು ಅಲ್ಲಿಗೆ ವಿಮಾನದಲ್ಲಿ ಪ್ರಯಾಣಿಸಿ ದೊಡ್ಡ ಸಭೆಯೊಂದಿಗೆ ಹೇಗೋ ಹಾಗೆಯೇ ಒಂದು ವಾರ ಆಕೆಯೊಂದಿಗಿದ್ದು ಕೂಟಗಳನ್ನು ನಡೆಸುತ್ತಿದ್ದೆವು, ಕ್ಷೇತ್ರ ಸೇವೆಗೆ ಹೋಗುತ್ತಿದ್ದೆವು. ಯೆಹೋವನಿಗೆ ತನ್ನ ಒಂದೊಂದು ಕುರಿಯ ಬಗ್ಗೆ ಎಷ್ಟೊಂದು ಕಾಳಜಿಯಿದೆ ಎನ್ನುವುದನ್ನು ನಾನು ಇದರಿಂದ ಗ್ರಹಿಸಿದೆ.

ನಮಗೆ ವಸತಿ ಒದಗಿಸಿದ ಅನೇಕರೊಂದಿಗೆ ನಾವು ಸಂಪರ್ಕ ಇಟ್ಟುಕೊಂಡೆವು. ಇದನ್ನು ಹೇಳುವಾಗ ನನಗೆ ಜಾನ್‌ ಮೊದಮೊದಲು ನೀಡಿದ ಉಡುಗೊರೆಗಳಲ್ಲೊಂದು ನೆನಪಿಗೆ ಬರುತ್ತದೆ. ಅದು ಪತ್ರ ಬರೆಯುವ ಹಾಳೆಗಳಿಂದ ತುಂಬಿದ್ದ ಒಂದು ವರ್ಣರಂಜಿತ ಬಾಕ್ಸ್‌. ಆ ಹಾಳೆಗಳಲ್ಲಿ ನಾವು ಸ್ನೇಹಿತರಿಗೆ ಪತ್ರ ಬರೆಯುತ್ತಿದ್ದೆವು. ಅದು ನಮಗೆ ತುಂಬ ಆನಂದ ನೀಡುತ್ತಿತ್ತು. ಈಗಲೂ ಆ ಬಾಕ್ಸನ್ನು ನಾನು ತುಂಬ ಜೋಪಾನವಾಗಿಟ್ಟಿದ್ದೇನೆ.

ಟೊರಾಂಟೊದಲ್ಲಿ ನಾವು ಸರ್ಕಿಟ್‌ ಕೆಲಸದಲ್ಲಿದ್ದಾಗ ಕೆನಡ ಬೆತೆಲಿನಿಂದ ಒಬ್ಬ ಸಹೋದರರು ನಮಗೆ ಫೋನ್‌ ಮಾಡಿ ಬೆತೆಲ್‌ಗೆ ಬರಲು ಮನಸ್ಸಿದೆಯಾ ಎಂದು ಕೇಳಿದರು. ಅವರಿಗೆ ಮರುದಿನ ಉತ್ತರ ಬೇಕಿತ್ತು. ನಾವು ಆ ಆಮಂತ್ರಣವನ್ನು ಸ್ವೀಕರಿಸಿದೆವು.

ಬೆತೆಲ್‌ ಸೇವೆ

ನಮಗೆ ಸಿಕ್ಕಿದ ಪ್ರತಿಯೊಂದು ನೇಮಕವು ಯೆಹೋವನ ಕೈಯಿಂದ ದೊರಕುವ ಆನಂದದ ವಿವಿಧ ಬಗೆಯನ್ನು ಸವಿದು ನೋಡಲು ಸಾಧ್ಯಮಾಡಿತು. 1977ರಲ್ಲಿ ಬೆತೆಲ್‌ ಸೇವೆಯನ್ನು ಆರಂಭಿಸಿದಾಗ ಇನ್ನೊಂದು ರೀತಿಯ ಆನಂದವನ್ನು ಅನುಭವಿಸಿದೆವು. ಅಭಿಷಿಕ್ತರಲ್ಲಿ ಕೆಲವರೊಂದಿಗೆ ಸಹವಾಸಿಸುವ ಸುಯೋಗ ದೊರೆಯಿತು. ಅವರ ವಿಭಿನ್ನ ವ್ಯಕ್ತಿತ್ವಗಳನ್ನು ಮಾತ್ರವಲ್ಲ ಅವರು ದೇವರ ವಾಕ್ಯವನ್ನು ಎಷ್ಟೊಂದು ಅಮೂಲ್ಯವಾಗಿ ಕಾಣುತ್ತಾರೆಂದು ತಿಳಿಯಲು ಸಾಧ್ಯಮಾಡಿತು.

ಬೆತೆಲ್‌ನಲ್ಲಿ ನಮ್ಮ ಹೊಸ ದಿನಚರಿ ತುಂಬಾ ಚೆನ್ನಾಗಿತ್ತು. ಮುಂಚೆ ನಾವು ನಮ್ಮ ಬಟ್ಟೆಬರೆಗಳ ಪೆಟ್ಟಿಗೆಯನ್ನು ಹೊತ್ತುಕೊಂಡು ಒಂದು ಸಭೆಯಿಂದ ಇನ್ನೊಂದು ಸಭೆಗೆ ಹೋಗುತ್ತಿದ್ದೆವು. ಆದರೆ ಬೆತೆಲ್‌ನಲ್ಲಿ ನಮ್ಮ ಬಟ್ಟೆಗಳನ್ನು ಡ್ರಾಯರ್‌ನಲ್ಲಿ ಇಡುತ್ತಿದ್ದೆವು. ಮಾತ್ರವಲ್ಲ ಪ್ರತಿವಾರ ನಾವು ಒಂದೇ ಸಭೆಗೆ ಹೋಗುತ್ತಿದ್ದೆವು. ನನ್ನ ಕೆಲಸದ ನೇಮಕದ ಜೊತೆಗೆ ಬೆತೆಲ್‌ಗೆ ಭೇಟಿಯಿತ್ತವರನ್ನು ಟೂರ್‌ಗೆ ಕರೆದುಕೊಂಡು ಹೋಗುವುದರಲ್ಲಿ ಬಹಳ ಆನಂದಿಸುತ್ತಿದ್ದೆ. ಅವರಿಗೆ ಬೆತೆಲಿನಲ್ಲಿ ನಡೆಯುವ ಕೆಲಸಗಳನ್ನು ವಿವರಿಸಿ, ಅವರ ಹೇಳಿಕೆಗಳನ್ನು ಕೇಳಿ, ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೆ.

ನೋಡನೋಡುತ್ತಿದ್ದಂತೆ ವರುಷಗಳು ಉರುಳಿದವು. 1997ರಲ್ಲಿ ನ್ಯೂಯಾರ್ಕ್‌ನ ಪ್ಯಾಟರ್‌ಸನ್‌ನಲ್ಲಿ ಬ್ರಾಂಚ್‌ ಕಮಿಟಿ ಸದಸ್ಯರಿಗಾಗಿರುವ ಶಾಲೆಗೆ ಹಾಜರಾಗಲು ಜಾನ್‌ಗೆ ಆಮಂತ್ರಣ ಸಿಕ್ಕಿತು. ಅದರ ನಂತರ ಯುಕ್ರೇನಿಗೆ ಹೋಗುವಂತೆ ನಮ್ಮನ್ನು ಕೇಳಿಕೊಳ್ಳಲಾಯಿತು. ಆ ಬಗ್ಗೆ ಪ್ರಾರ್ಥನಾಪೂರ್ವಕವಾಗಿ ಆಲೋಚಿಸುವಂತೆ ಉತ್ತೇಜಿಸಲಾಯಿತು. ಆ ದಿನದ ಕೊನೆಯಷ್ಟಕ್ಕೆ ನಾವು ಆ ನೇಮಕವನ್ನು ಸ್ವೀಕರಿಸಲು ನಿರ್ಧರಿಸಿದೆವು.

ಯುಕ್ರೇನ್‌ನಲ್ಲಿ ಸೇವೆ

ಈ ಹಿಂದೆ ನಾವು 1992ರಲ್ಲಿ ರಷ್ಯದ ಪೀಟರ್ಸ್‌ಬರ್ಗ್‌ನಲ್ಲಿ ನಂತರ 1993ರಲ್ಲಿ ಯುಕ್ರೇನ್‌ನ ಕೀಎವ್‌ನಲ್ಲಿ ದೊಡ್ಡ ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಹಾಜರಾಗಿದ್ದೆವು. ಅವು ಪೂರ್ವ ಯೂರೋಪಿನ ಸಹೋದರರೊಂದಿಗೆ ಪ್ರೀತಿಯ ಬಂಧವನ್ನು ಬೆಸೆಯಲು ಅವಕಾಶ ಮಾಡಿಕೊಟ್ಟಿದ್ದವು. ಯುಕ್ರೇನ್‌ನಲ್ಲಿ ನಾವು ಉಳುಕೊಂಡ ಸ್ಥಳ ಲವೀಫ್‌ ನಗರ. ಒಂದು ಹಳೇ ಮನೆಯ ಎರಡನೇ ಮಹಡಿಯಲ್ಲಿ ನಮ್ಮ ಮನೆಯಿತ್ತು. ಮನೆಯ ಕಿಟಕಿಯಿಂದ ನೋಡುವಾಗ ಒಂದು ಚಿಕ್ಕ ಹೂದೋಟ, ಕೆಂಪು ಬಣ್ಣದ ಒಂದು ದೊಡ್ಡ ಹುಂಜ ಮತ್ತು ಹೇಂಟೆಗಳು ಕಾಣಿಸುತ್ತಿದ್ದವು. ಇದು ನನ್ನ ಹುಟ್ಟೂರಾದ ಸಸ್ಕ್ಯಾಚುವಾನ್‌ ಅನ್ನು ನೆನಪಿಗೆ ತರುತ್ತಿತ್ತು. ಈ ಮನೆಯಲ್ಲಿ ಒಟ್ಟು ಹನ್ನೆರಡು ಮಂದಿ ವಾಸಿಸುತ್ತಿದ್ದೆವು. ಪ್ರತಿದಿನ ಬೆಳಗ್ಗೆ ಬೆತೆಲಿನಲ್ಲಿ ಕೆಲಸಮಾಡಲು ವಾಹನದಲ್ಲಿ ಪ್ರಯಾಣಿಸುತ್ತಿದ್ದೆವು.

ಯುಕ್ರೇನ್‌ನಲ್ಲಿ ನಮ್ಮ ಜೀವನ ಆನಂದಮಯವಾಗಿತ್ತು. ಅನೇಕ ಕಷ್ಟಗಳನ್ನು ಅನುಭವಿಸಿದ್ದ ನಿಷೇಧಗಳನ್ನೂ ಸೆರೆವಾಸವನ್ನೂ ಎದುರಿಸಿದ್ದ ಸಹೋದರರ ಪರಿಚಯ ನಮಗಾಯಿತು. ಆ ಕಷ್ಟದ ಹೊರತಾಗಿಯೂ ಅವರು ನಂಬಿಕೆಯಲ್ಲಿ ಸ್ಥಿರರಾಗಿದ್ದರು. ಅವರು ದೀನ ವ್ಯಕ್ತಿಗಳಾಗಿದ್ದರು. ಯೆಹೋವನು ತಮ್ಮೊಂದಿಗಿದ್ದಾನೆ ಎಂಬ ಭರವಸೆ ಅವರಲ್ಲಿ ಹಚ್ಚಹಸುರಾಗಿತ್ತು. ಅವರನ್ನು ಶ್ಲಾಘಿಸಿದಾಗ “ನಾವು ಯೆಹೋವನಿಗಾಗಿ ಸಹಿಸಿಕೊಂಡೆವು” ಎನ್ನುತ್ತಿದ್ದರು. ಅವರೊಂದಿಗೆ ಸಹವಾಸಿಸುವುದು ನಮ್ಮಲ್ಲಿ ಇನ್ನಷ್ಟು ದೀನತೆಯನ್ನು ಬೆಳೆಸಿತು. ಈಗಲೂ ಸಹ ನಾವು ಅವರು ಮಾಡುವ ಸಹಾಯಕ್ಕೆ ಧನ್ಯವಾದ ತಿಳಿಸಿದರೆ “ಯೆಹೋವನಿಗೆ ಧನ್ಯವಾದ ಹೇಳಿ” ಎಂದು ಹೇಳುತ್ತಾರೆ. ಹೀಗೆ ಎಲ್ಲ ಒಳ್ಳೆ ದಾನಗಳ ಮೂಲನು ಯೆಹೋವನು ಎಂದು ಅಂಗೀಕರಿಸುತ್ತಾರೆ.

ಯುಕ್ರೇನಿನಲ್ಲಿ ಅನೇಕರು ಕೂಟಗಳಿಗೆ ನಡೆದೇ ಬರುತ್ತಾರೆ. ಒಂದು ತಾಸು ಅಥವಾ ಅದಕ್ಕಿಂತ ಹೆಚ್ಚು ನಡೆಯಬೇಕಾಗುತ್ತದೆ. ಹೀಗೆ ಬರುವಾಗ ಮಾತಾಡುತ್ತಾ ಒಬ್ಬರನ್ನೊಬ್ಬರು ಉತ್ತೇಜಿಸಲು ಸಾಕಷ್ಟು ಸಮಯ ಸಿಗುತ್ತದೆ. ಲವೀಫ್‌ನಲ್ಲಿ 50ಕ್ಕಿಂತ ಹೆಚ್ಚು ಸಭೆಗಳಿವೆ. ಅವುಗಳಲ್ಲಿ 21 ಸಭೆಗಳು, ಅನೇಕ ರಾಜ್ಯ ಸಭಾಗೃಹಗಳಿರುವ ಒಂದು ದೊಡ್ಡ ಕಟ್ಟಡವನ್ನು ಉಪಯೋಗಿಸುತ್ತವೆ. ಭಾನುವಾರದಂದು ಸಹೋದರರು ಸಾಲು ಸಾಲಾಗಿ ಕೂಟಗಳಿಗೆ ಬರುತ್ತಾ ಇರುವುದನ್ನು ನೋಡುವುದು ಕಣ್ಣಿಗೆ ಹಬ್ಬ.

ಸ್ವಲ್ಪ ಸಮಯದಲ್ಲೇ ನಾವು ಅಲ್ಲಿನ ಸಹೋದರ ಸಹೋದರಿಯರೊಂದಿಗೆ ಹೊಂದಿಕೊಂಡೆವು. ಅವರು ಸೌಜನ್ಯವುಳ್ಳವರು, ಇತರರ ಕಡೆಗೆ ಕಾಳಜಿಯುಳ್ಳವರು. ನನಗೆ ಅವರ ಭಾಷೆ ಅರ್ಥಮಾಡಿಕೊಳ್ಳಲು ಕಷ್ಟವಾದಾಗ ಅವರು ಅತಿ ತಾಳ್ಮೆಯಿಂದ ಪುನಃ ಪುನಃ ಹೇಳುತ್ತಿದ್ದರು. ಈಗಲೂ ನನಗೆ ಆ ಭಾಷೆ ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಹೆಚ್ಚಾಗಿ ಅವರ ಕಣ್ಣುಗಳು ಅವರ ಭಾವನೆಗಳನ್ನು ವ್ಯಕ್ತಪಡಿಸುತ್ತವೆ.

ಸಹೋದರರಿಗೆ ದೇವರ ಮೇಲೆ ಎಷ್ಟು ಭರವಸೆ ಇದೆ ಎಂಬುದು 2003ರಲ್ಲಿ ಕೀಎವ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನದ ಸಮಯದಲ್ಲಿ ನನಗೆ ಇನ್ನಷ್ಟು ಸ್ಪಷ್ಟವಾಯಿತು. ನಾವು ಮೆಟ್ರೋ ನೆಲಮಾಳಿಗೆಯಲ್ಲಿ ಜನಸಂದಣಿ ಮಧ್ಯೆ ನಡೆಯುತ್ತಿದ್ದೆವು. ನಮ್ಮ ಬ್ಯಾಜ್‌ ನೋಡಿ ನಮ್ಮನ್ನು ಯೆಹೋವನ ಸಾಕ್ಷಿಗಳೆಂದು ಗುರುತಿಸಿದ ಚಿಕ್ಕ ಹುಡುಗಿಯೊಬ್ಬಳು ನಮ್ಮ ಬಳಿಗೆ ಬಂದು, “ನನ್ನ ಅಜ್ಜಿ ಎಲ್ಲಿದ್ದಾರೆಂದು ಗೊತ್ತಿಲ್ಲ. ನಾನು ತಪ್ಪಿಹೋಗಿದ್ದೇನೆ” ಎಂದು ಶಾಂತವಾಗಿ ಹೇಳಿದಳು. ಅವಳು ಸ್ವಲ್ಪವೂ ಭಯಪಟ್ಟಿರಲಿಲ್ಲ, ಅಳುತ್ತಿರಲಿಲ್ಲ. ಅಷ್ಟು ಜನಜಂಗುಳಿ ಇದ್ದರೂ ಅವಳು ಯೆಹೋವನ ಜನರನ್ನು ಹುಡುಕಿ ಬಂದಳು. ಅವಳಿಗೆ ಯೆಹೋವನ ಮೇಲೆ ಅಷ್ಟೊಂದು ಭರವಸೆ ಇತ್ತು! ನಮ್ಮೊಂದಿಗಿದ್ದ ಸರ್ಕಿಟ್‌ ಮೇಲ್ವಿಚಾರಕರ ಪತ್ನಿ ಅವಳನ್ನು ಅಧಿವೇಶನದ ಸ್ಟೇಡಿಯಂಗೆ ಕರೆದೊಯ್ದು ‘ಲಾಸ್ಟ್‌ ಆ್ಯಂಡ್‌ ಫೌಂಡ್‌’ ಇಲಾಖೆಗೆ ಒಪ್ಪಿಸಿದರು. ಅಜ್ಜಿ ಮೊಮ್ಮಗಳ ಪುನರ್ಮಿಲನವಾಯಿತು. ಸಾವಿರಾರು ಜನರ ಮಧ್ಯೆ ಇದ್ದರೂ ಯೆಹೋವನ ಮೇಲೆ ಆ ಹುಡುಗಿಗಿದ್ದ ಭರವಸೆ ನನ್ನ ಮನಸ್ಪರ್ಶಿಸಿತು.

ಇಸವಿ 2001ರ ಮೇ ತಿಂಗಳಲ್ಲಿ ಯುಕ್ರೇನಿನಲ್ಲಿ ಹೊಸ ಬ್ರಾಂಚ್‌ ಸೌಕರ್ಯಗಳ ಸಮರ್ಪಣೆಗಾಗಿ ದೇಶವಿದೇಶಗಳಿಂದ ಸಹೋದರರು ನೆರೆದುಬಂದರು. ಭಾನುವಾರ ಬೆಳಗ್ಗೆ ಸಮೀಪದ ಸ್ಟೇಡಿಯಂನಲ್ಲಿ ವಿಶೇಷ ಭಾಷಣ ಮುಗಿದ ನಂತರ ಸಹೋದರರು ಗುಂಪು ಗುಂಪಾಗಿ ನಡೆಯುತ್ತಾ ಹೊಸ ಬೆತೆಲ್‌ ಸೌಕರ್ಯಗಳನ್ನು ನೋಡಲು ಬಂದರು. ಅದು ನಿಜಕ್ಕೂ ಅವಿಸ್ಮರಣೀಯ ದೃಶ್ಯ! ಸುವ್ಯವಸ್ಥಾಪಿತ ಮತ್ತು ಶಾಂತ ರೀತಿಯಲ್ಲಿ ಬರುತ್ತಿದ್ದ ಸಹೋದರರನ್ನು ನೋಡುವುದೇ ಸಂತೋಷ! ಇದು ಯೆಹೋವನ ಸೇವೆಯಲ್ಲಿ ನನ್ನ ಆನಂದವನ್ನು ಇನ್ನಷ್ಟು ಹೆಚ್ಚಿಸಿತು.

ಅನಿರೀಕ್ಷಿತ ತಿರುವು

ದುಃಖಕರವಾಗಿ, ಇಸವಿ 2004ರಲ್ಲಿ ಜಾನ್‌ಗೆ ಕ್ಯಾನ್ಸರ್‌ ಇದೆ ಎಂದು ತಿಳಿದುಬಂತು. ಅವರ ಚಿಕಿತ್ಸೆಗಾಗಿ ನಾವು ಕೆನಡಕ್ಕೆ ಹೋದೆವು. ಮೊದಲ ಕಿಮತೆರಪಿ ಚಿಕಿತ್ಸೆಯನ್ನು ಸಹ ಅವರಿಗೆ ಸಹಿಸಲಾಗಲಿಲ್ಲ. ಅವರನ್ನು ಕೆಲವು ವಾರಗಳ ವರೆಗೆ ಐಸಿಯೂನಲ್ಲಿ ಇಡಲಾಯಿತು. ಆಮೇಲೆ ಅವರಿಗೆ ಪ್ರಜ್ಞೆ ಬಂತು. ಅವರಿಗೆ ಮಾತಾಡಲು ಆಗದಿದ್ದರೂ ಭೇಟಿಮಾಡಲು ಬಂದವರ ಕಡೆಗೆ ಗಣ್ಯತೆ ಸದಾ ಅವರ ಕಣ್ಣಲ್ಲಿ ತೋರಿಬರುತ್ತಿತ್ತು.

ಆದರೆ ಅವರು ಗುಣಮುಖರಾಗಲಿಲ್ಲ. ಅದೇ ವರ್ಷದ ನವೆಂಬರ್‌ ತಿಂಗಳಿನಲ್ಲಿ ತೀರಿಕೊಂಡರು. ಅದರಿಂದ ನನಗಾದ ನಷ್ಟವನ್ನು ಮಾತುಗಳಿಂದ ವಿವರಿಸಲು ಸಾಧ್ಯವೇ ಇಲ್ಲ. ಅವರೊಂದಿಗೆ ಕೂಡಿ ಯೆಹೋವನನ್ನು ಸೇವಿಸುವುದು ನಿಜಕ್ಕೂ ಆನಂದದಾಯಕವಾಗಿತ್ತು. ಮುಂದೇನು ಮಾಡಲಿ ಎಂಬ ಯೋಚನೆ ಮನವನ್ನು ಕಾಡಿತು. ಕೊನೆಗೆ ಯುಕ್ರೇನಿಗೇ ಹಿಂದಿರುಗಲು ನಿರ್ಧರಿಸಿದೆ. ಬೆತೆಲ್‌ ಕುಟುಂಬದವರೂ ಸಭೆಯವರೂ ತೋರಿಸುವ ಹೃತ್ಪೂರ್ವಕ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ.

ಜಾನ್‌ ಹಾಗೂ ನಾನು ಮಾಡಿದ ಆಯ್ಕೆಗಳಿಗಾಗಿ ಜೀವನದಲ್ಲಿ ನಾವೆಂದೂ ವಿಷಾದಿಸಲಿಲ್ಲ. ಅದು ನಿಜಕ್ಕೂ ಆನಂದಕರ ಜೀವನವಾಗಿತ್ತು. ಅತ್ಯುತ್ತಮ ಸಹವಾಸದಲ್ಲಿ ಆನಂದಿಸಿದೆವು. ಯೆಹೋವನ ಒಳ್ಳೇತನದ ಕುರಿತು ಕಲಿಯಲು ಇನ್ನೂ ಬಹಳಷ್ಟಿದೆ ಎಂದು ನನಗೆ ಗೊತ್ತು. ಆತನ ಸೇವೆಯಲ್ಲಿ ಸದಾ ಮುಂದುವರಿಯುವುದೇ ನನ್ನ ಮನದಾಸೆ. ಏಕೆಂದರೆ ‘ಯೆಹೋವನ ಬಲಗೈಯಲ್ಲಿ ಶಾಶ್ವತ ಆನಂದವಿದೆ’ ಎಂಬುದನ್ನು ನಾನು ಅನುಭವದಿಂದ ಸವಿದಿದ್ದೇನೆ.

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರ]

“ಜಾನ್‌ ಹಾಗೂ ನಾನು ಮಾಡಿದ ಆಯ್ಕೆಗಳಿಗಾಗಿ ಜೀವನದಲ್ಲಿ ನಾವೆಂದೂ ವಿಷಾದಿಸಲಿಲ್ಲ”

[ಪುಟ 3ರಲ್ಲಿರುವ ಚಿತ್ರ]

ನಮ್ಮ ಮದುವೆ ಫೋಟೋ

[ಪುಟ 4ರಲ್ಲಿರುವ ಚಿತ್ರ]

ಆಂಟೇರಿಯೋದ ರೆಡ್‌ ಲೇಕ್‌ನಲ್ಲಿ ವಿಶೇಷ ಪಯನೀಯರಳಾಗಿದ್ದಾಗ

[ಪುಟ 5ರಲ್ಲಿರುವ ಚಿತ್ರ]

ಇಸವಿ 2002ರಲ್ಲಿ ಯುಕ್ರೇನಿನಲ್ಲಿ ಜಾನ್‌ನೊಂದಿಗೆ