ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಕ್ರೈಸ್ತನೊಬ್ಬನು ಅಶ್ಲೀಲ ಸಾಹಿತ್ಯ ನೋಡುವ ರೂಢಿಮಾಡಿಕೊಂಡರೆ ಸಭೆಯಿಂದ ಹೊರಹಾಕಲ್ಪಡುವ ಸಾಧ್ಯತೆ ಇದೆಯಾ?

▪ ಹೌದು, ಸಾಧ್ಯವಿದೆ! ಹಾಗಾಗಿ ಎಲ್ಲಾ ರೀತಿಯ ಅಶ್ಲೀಲ ಸಾಹಿತ್ಯವನ್ನು ತ್ಯಜಿಸಲೇಬೇಕು. ಪತ್ರಿಕೆ, ಚಲನಚಿತ್ರ, ವಿಡಿಯೋ ಮತ್ತು ಇಂಟರ್‌ನೆಟ್‌ನಲ್ಲಿ ಅಶ್ಲೀಲ ಸಾಹಿತ್ಯ ನೋಡುವುದಾಗಲಿ ಓದುವುದಾಗಲಿ ತಪ್ಪಾಗಿದೆ.

ಇಂದು ಅಶ್ಲೀಲ ಸಾಹಿತ್ಯ ಸರ್ವಸಾಮಾನ್ಯವಾಗಿದೆ. ಇಂಟರ್‌ನೆಟ್‌ನ ಕಾರಣ ಅಶ್ಲೀಲ ಸಾಹಿತ್ಯ ಹಿಂದೆಂದಿಗಿಂತಲೂ ಇಂದು ಸುಲಭವಾಗಿ ಜನರ ಕೈಗೆಟಕುತ್ತದೆ. ಹೆಚ್ಚಿನ ಜನರು ಈ ಚಾಳಿಗೆ ಬಲಿಯಾಗಿದ್ದಾರೆ. ಹಿರಿಕಿರಿಯರಲ್ಲಿ ಕೆಲವರು ತಿಳಿಯದೇ ಇಂಥ ವೆಬ್‌ ಸೈಟ್‌ಗಳನ್ನು ನೋಡುತ್ತಾರೆ. ಇನ್ನಿತರರು ತಾವಾಗಿಯೇ ಅದನ್ನು ನೋಡಲು ಹೋಗುತ್ತಾರೆ. ಅದರಲ್ಲೂ ಈಗ ಯಾವುದೇ ಭಯವಿಲ್ಲದೆ ಯಾರಿಗೂ ತಿಳಿಯದಂತೆ ಮನೆಯಲ್ಲೋ ಆಫೀಸ್‌ನಲ್ಲೋ ಕುಳಿತು ನೋಡಬಹುದಾದ ಕಾರಣ ಅವರಿಗೆ ಯಾವುದೇ ತಡೆಯಿರುವುದಿಲ್ಲ. ಆದರೆ ಕ್ರೈಸ್ತರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಏಕೆ?

ಮುಖ್ಯ ಕಾರಣ ಯೇಸುವಿನ ಈ ಎಚ್ಚರಿಕೆಯ ಮಾತಿನಲ್ಲಿದೆ: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.” (ಮತ್ತಾ. 5:28) ವಿವಾಹದ ಏರ್ಪಾಡಿನೊಳಗೆ ಲೈಂಗಿಕ ಸಂಬಂಧವು ಸೂಕ್ತವೂ ಸಂತೋಷಕರವೂ ಆಗಿದೆ ಎಂಬುದು ನಿಜ. (ಜ್ಞಾನೋ. 5:15-19; 1 ಕೊರಿಂ. 7:2-5) ಆದರೆ ಅಶ್ಲೀಲ ಸಾಹಿತ್ಯ ನಿಷಿದ್ಧ ಲೈಂಗಿಕ ಸಂಬಂಧವನ್ನು ತೋರಿಸಿ ಯೇಸು ಖಂಡಿಸಿದಂಥದ್ದೇ ಅನೈತಿಕ ಆಲೋಚನೆಗಳನ್ನು ಜನರ ಮನಸ್ಸಿನಲ್ಲಿ ಹುಟ್ಟಿಸುತ್ತದೆ. ಅಶ್ಲೀಲ ಸಾಹಿತ್ಯ ನೋಡುವುದಾಗಲಿ ಓದುವುದಾಗಲಿ ದೇವರ ಮಾರ್ಗದರ್ಶನಕ್ಕೆ ವಿರುದ್ಧವಾಗಿದೆ. ದೇವರ ವಾಕ್ಯ ಹೀಗನ್ನುತ್ತದೆ: “ಜಾರತ್ವ, ಅಶುದ್ಧತೆ, ಕಾಮಾಭಿಲಾಷೆ, ಹಾನಿಕಾರಕ ಆಶೆ ಮತ್ತು ವಿಗ್ರಹಾರಾಧನೆಯಾಗಿರುವ ಲೋಭ ಇವುಗಳಿಗೆ ಸಂಬಂಧಿಸಿದ ಭೂಸಂಬಂಧವಾದ ನಿಮ್ಮ ದೈಹಿಕ ಅಂಗಗಳನ್ನು ಸಾಯಿಸಿರಿ.”—ಕೊಲೊ. 3:5.

ಕ್ರೈಸ್ತನೊಬ್ಬನು ಒಂದೆರಡು ಸಂದರ್ಭದಲ್ಲಿ ಅಶ್ಲೀಲ ಸಾಹಿತ್ಯ ವೀಕ್ಷಿಸಿರುವಲ್ಲಿ ಆಗೇನು? ಅವನು ಒಂದರ್ಥದಲ್ಲಿ ಒಮ್ಮೆ ಆಸಾಫನಿದ್ದ ಸ್ಥಿತಿಯಲ್ಲಿರುತ್ತಾನೆ. ಆಸಾಫನು ಒಮ್ಮೆ ಅಪಾಯಕರ ಸ್ಥಿತಿಯಲ್ಲಿದ್ದನು. ಅವನಂದದ್ದು: “ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ.” ನಗ್ನ ಸ್ತ್ರೀಯರ ಇಲ್ಲವೆ ಪುರುಷರ ಅಥವಾ ವ್ಯಭಿಚಾರಗೈಯುವ ಜೋಡಿಯ ಅಶ್ಲೀಲ ಚಿತ್ರವನ್ನು ವೀಕ್ಷಿಸುವ ಕೈಸ್ತನಿಗೆ ಶುದ್ಧ ಮನಸ್ಸಾಕ್ಷಿ ಹೇಗೆ ತಾನೇ ಇರಸಾಧ್ಯ? ಅಂಥವನು ದೇವರೊಂದಿಗೆ ಶಾಂತಿ ಸಂಬಂಧದಲ್ಲಿ ಇರಬಲ್ಲನೋ? ಆಸಾಫನು ಸಹ ಮನಶ್ಶಾಂತಿಯನ್ನು ಕಳೆದುಕೊಂಡಿದ್ದನು. “ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ.”—ಕೀರ್ತ. 73:2, 3, 14.

ಅಶ್ಲೀಲ ಸಾಹಿತ್ಯ ವೀಕ್ಷಿಸುವ ಚಟವಿರುವ ಕ್ರೈಸ್ತನು ಎಚ್ಚತ್ತುಕೊಂಡು ಆಧ್ಯಾತ್ಮಿಕ ಸಹಾಯ ಪಡೆಯಬೇಕು. ಅವನಿಗೆ ಆ ಸಹಾಯ ಕ್ರೈಸ್ತ ಸಭೆಯಲ್ಲಿ ಸಿಗುತ್ತದೆ. “ಒಬ್ಬ ಮನುಷ್ಯನು ತನಗೆ ಅರಿವಿಲ್ಲದೆಯೇ ಯಾವುದೋ ತಪ್ಪುಹೆಜ್ಜೆಯನ್ನು ಇಡುವುದಾದರೆ, ಆಧ್ಯಾತ್ಮಿಕ ಅರ್ಹತೆಗಳಿರುವವರಾದ ನೀವು ಅಂಥ ವ್ಯಕ್ತಿಯನ್ನು ಸೌಮ್ಯಭಾವದಿಂದ ಸರಿಹೊಂದಿಸಲು ಪ್ರಯತ್ನಿಸಿರಿ. ಅದೇ ಸಮಯದಲ್ಲಿ ನೀನು ಸಹ ಪ್ರಲೋಭಿಸಲ್ಪಡಬಹುದೆಂಬ ಭಯದಿಂದ ನಿನ್ನ ವಿಷಯದಲ್ಲಿ ಎಚ್ಚರಿಕೆಯಿಂದಿರು.” (ಗಲಾ. 6:1) ಸಭೆಯ ಒಬ್ಬರೊ ಇಬ್ಬರೊ ಹಿರಿಯರು ಅವನಿಗೆ ಸಹಾಯ ನೀಡಬಲ್ಲರು. ಅವನಿಗಾಗಿ ಪ್ರಾರ್ಥಿಸಬಲ್ಲರು. ಏಕೆಂದರೆ ‘ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಅಸ್ವಸ್ಥನನ್ನು ಗುಣಪಡಿಸುವುದು. ಅವನ ಪಾಪ ಕ್ಷಮಿಸಲ್ಪಡುವುದು.’ (ಯಾಕೋ. 5:13-15) ಅಶ್ಲೀಲ ಸಾಹಿತ್ಯ ನೋಡುವ ಕೆಟ್ಟ ಚಟದಿಂದ ತಮ್ಮನ್ನು ಶುದ್ಧಪಡಿಸಿಕೊಳ್ಳಲು ಸಹಾಯವನ್ನು ಯಾಚಿಸಿರುವವರು ಪುನಃ ಯೆಹೋವನಿಗೆ ಆಪ್ತರಾಗಿದ್ದಾರೆ. ಆಸಾಫನಂತೆ ದೇವರ ಸಾನ್ನಿಧ್ಯವೇ ಭಾಗ್ಯ ಎಂಬುದನ್ನು ಕಂಡುಕೊಂಡಿದ್ದಾರೆ.—ಕೀರ್ತ. 73:28.

ಆದರೆ “ತಾವು ಅಭ್ಯಾಸಿಸುತ್ತಿದ್ದ ಅಶುದ್ಧತೆ, ಹಾದರ ಮತ್ತು ಸಡಿಲು ನಡತೆಯ” * ವಿಷಯದಲ್ಲಿ ಕೆಲವರು ಪಶ್ಚಾತ್ತಾಪಪಡಲಿಲ್ಲವೆಂದು ಅಪೊಸ್ತಲ ಪೌಲ ಹೇಳಿದನು. (2 ಕೊರಿಂ. 12:21) ಇಲ್ಲಿ ಉಪಯೋಗಿಸಿರುವ “ಅಶುದ್ಧತೆ” ಎಂಬುದಕ್ಕಿರುವ ಮೂಲ ಗ್ರೀಕ್‌ ಪದವು “ಲೈಂಗಿಕ ಅನೈತಿಕತೆಗೆ ಸಂಬಂಧಿಸಿದ ಅಪವಿತ್ರತೆಯನ್ನು” ಸೂಚಿಸುತ್ತದೆ ಎಂದು ಪ್ರೊಫೆಸರ್‌ ಮಾರ್ವನ್‌ ಆರ್‌. ವಿನ್ಸೆಂಟ್‌ ಹೇಳಿದರು. ದುಃಖದ ಸಂಗತಿಯೇನೆಂದರೆ ಕೆಲವು ಅಶ್ಲೀಲ ಸಾಹಿತ್ಯವಂತೂ ತೀರಾ ಕೆಟ್ಟದ್ದಾಗಿದೆ. ನಗ್ನ ಚಿತ್ರ ಅಥವಾ ವ್ಯಭಿಚಾರಗೈಯುವ ಸ್ತ್ರೀಪುರುಷರ ಅಶ್ಲೀಲ ಚಿತ್ರಗಳಿಗಿಂತಲೂ ಇನ್ನೂ ಅಸಹ್ಯವಾಗಿರುತ್ತದೆ. ಅದರಲ್ಲಿ ಸಲಿಂಗಕಾಮ (ಒಂದೇ ಲಿಂಗದವರ ಮಧ್ಯೆ ಸಂಭೋಗ), ಸಾಮೂಹಿಕ ಸಂಭೋಗ, ಪಶುಗಮನ, ಮಕ್ಕಳ ಅಶ್ಲೀಲ ಚಿತ್ರಗಳು, ಸಾಮೂಹಿಕ ಅತ್ಯಾಚಾರ, ಸ್ತ್ರೀಯರ ದೌರ್ಜನ್ಯ, ಕಟ್ಟಿಹಾಕಿ ಮಾಡುವ ಸಂಭೋಗ ಅಥವಾ ಕ್ರೌರ್ಯ ರತಿ ಸೇರಿರುತ್ತದೆ. ಪೌಲನ ದಿನಗಳಲ್ಲಿ ‘ಮಾನಸಿಕವಾಗಿ ಕತ್ತಲೆಯಲ್ಲಿದ್ದ’ ಕೆಲವರು “ಸಂಪೂರ್ಣ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡವರಾಗಿ ಪ್ರತಿಯೊಂದು ರೀತಿಯ ಅಶುದ್ಧತೆಯನ್ನು ಅತ್ಯಾಶೆಯಿಂದ ನಡಿಸಲಿಕ್ಕಾಗಿ ತಮ್ಮನ್ನು ತಾವೇ ಸಡಿಲು ನಡತೆಗೆ ಒಪ್ಪಿಸಿಕೊಟ್ಟರು.”—ಎಫೆ. 4:18, 19.

ಗಲಾತ್ಯ 5:19 ರಲ್ಲಿ ಸಹ “ಅಶುದ್ಧತೆ” ಎಂಬ ಪದವನ್ನು ಪೌಲನು ಬಳಸಿದ್ದಾನೆ. ಇಲ್ಲಿ ಅದು “ಮುಖ್ಯವಾಗಿ ಎಲ್ಲ ರೀತಿಯ ಅಸ್ವಾಭಾವಿಕ ಕಾಮುಕತೆಯನ್ನು [ಸೂಚಿಸಬಹುದು]” ಎಂದು ಒಬ್ಬ ಬ್ರಿಟಿಷ್‌ ವಿದ್ವಾಂಸರು ತಿಳಿಸುತ್ತಾರೆ. ಮೇಲೆ ತಿಳಿಸಿದಂಥ ತುಚ್ಛ ಲೈಂಗಿಕ ಕೃತ್ಯಗಳನ್ನು ಪ್ರದರ್ಶಿಸುವ ಅಶ್ಲೀಲ ಸಾಹಿತ್ಯವು ನಿಜಕ್ಕೂ “ಅಸ್ವಾಭಾವಿಕ ಕಾಮುಕತೆ” ಎಂದು ಕ್ರೈಸ್ತರೆಲ್ಲರೂ ಖಂಡಿತ ಒಪ್ಪುತ್ತಾರೆ. ಇಂಥ ಅಶುದ್ಧ ಕೃತ್ಯಗಳನ್ನು “ನಡೆಸುತ್ತಿರುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ” ಎಂದು ಪೌಲನು ಗಲಾತ್ಯ 5:19-21 ರಲ್ಲಿ ಹೇಳಿದನು. ಅಶುದ್ಧವಾದ, ಹೇಯವಾದ ಅಶ್ಲೀಲ ಸಾಹಿತ್ಯವನ್ನು ವೀಕ್ಷಿಸುವ ಚಾಳಿಗೆ ಒಬ್ಬ ಕ್ರೈಸ್ತನು ದಾಸನಾಗಿರುವುದಾದರೆ ಮತ್ತು ಪಶ್ಚಾತ್ತಾಪಪಡದೆ ಅದನ್ನು ಮಾಡುತ್ತಾ ಮುಂದುವರಿಯುವುದಾದರೆ ಅಂಥವನು ಕ್ರೈಸ್ತ ಸಭೆಯಲ್ಲಿರಲು ಸಾಧ್ಯವಿಲ್ಲ. ಸಭೆಯನ್ನು ಶುದ್ಧವಾಗಿಡುವ ಮತ್ತು ಸಂರಕ್ಷಿಸುವ ಸಲುವಾಗಿ ಅಂಥ ವ್ಯಕ್ತಿಯನ್ನು ಬಹಿಷ್ಕರಿಸಬೇಕು.—1 ಕೊರಿಂ. 5:5, 11.

ಹೇಯವಾದ ಅಶ್ಲೀಲ ಸಾಹಿತ್ಯ ನೋಡುವ ಚಾಳಿಯಿದ್ದ ಕೆಲವರು ಖುದ್ದಾಗಿ ಹಿರಿಯರ ಬಳಿಗೆ ಹೋಗಿ ತಮ್ಮ ತಪ್ಪನ್ನು ಒಪ್ಪಿಕೊಂಡು ಅವರಿಂದ ಆಧ್ಯಾತ್ಮಿಕ ಸಹಾಯ ಪಡೆದುಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ಮಾಡಿದ್ದಾರೆ. ಪುರಾತನ ಸಾರ್ದಿಸ್‌ ಸಭೆಯಲ್ಲಿದ್ದ ಕ್ರೈಸ್ತರಿಗೆ ಮನವಿ ಮಾಡುತ್ತಾ ಯೇಸು ಹೀಗೆ ಹೇಳಿದನು: “ಸಾಯಲು ಸಿದ್ಧವಾಗಿದ್ದ ಉಳಿದಿರುವ ಸಂಗತಿಗಳನ್ನು ಬಲಪಡಿಸು, . . . ನೀನು ಹೇಗೆ ಪಡೆದುಕೊಂಡಿದ್ದೀ, ಹೇಗೆ ಕೇಳಿಸಿಕೊಂಡಿದ್ದೀ ಎಂಬುದನ್ನು ನೆನಪಿಗೆ ತಂದುಕೊಳ್ಳುತ್ತಾ ಅದನ್ನು ಅನುಸರಿಸುತ್ತಾ ಇರು ಮತ್ತು ಪಶ್ಚಾತ್ತಾಪಪಡು. ನಿಶ್ಚಯವಾಗಿಯೂ ನೀನು ಎಚ್ಚರಗೊಳ್ಳದಿದ್ದರೆ . . . ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಅದು ನಿನಗೆ ಗೊತ್ತಾಗುವುದೇ ಇಲ್ಲ.” (ಪ್ರಕ. 3:2, 3) ಇಂಥ ಕೃತ್ಯದಲ್ಲಿ ಒಳಗೂಡಿದವರು ಸಹ ಪಶ್ಚಾತ್ತಾಪಪಡಸಾಧ್ಯವಿದೆ. ಬೆಂಕಿಯಿಂದ ಹೊರಗೆಳೆಯಲ್ಪಟ್ಟವರೊ ಎಂಬಂತೆ ಈ ದುಶ್ಚಟದಿಂದ ಖಂಡಿತ ಹೊರಬರಸಾಧ್ಯವಿದೆ.—ಯೂದ 22, 23.

ಇಂಥ ಅಪಾಯಕಾರಿ ವಿಷಯದ ಹತ್ತಿರವೂ ಸುಳಿಯದಿರುವುದು ಎಷ್ಟೋ ಉತ್ತಮ. ಹೌದು, ನಾವು ಎಲ್ಲಾ ರೀತಿಯ ಅಶ್ಲೀಲ ಸಾಹಿತ್ಯದಿಂದ ದೂರವಿರಲು ದೃಢನಿರ್ಧಾರ ಮಾಡಬೇಕು.

[ಪಾದಟಿಪ್ಪಣಿ]

^ ಪ್ಯಾರ. 8ಅಶುದ್ಧತೆ, ಹಾದರ ಮತ್ತು ಸಡಿಲು ನಡತೆ” ಇವುಗಳ ಮಧ್ಯೆಯಿರುವ ವ್ಯತ್ಯಾಸವನ್ನು ತಿಳಿಯಲು ಅಕ್ಟೋಬರ್‌ 1, 2009ರ ಕಾವಲಿನಬುರುಜು ಪುಟ 18-20 ನೋಡಿ.

[ಪುಟ 30ರಲ್ಲಿರುವ ಸಂಕ್ಷಿಪ್ತ ವಿವರಣೆ]

ಅಶ್ಲೀಲ ಸಾಹಿತ್ಯ ವೀಕ್ಷಿಸುವ ಚಟವಿರುವ ಕ್ರೈಸ್ತನು ಎಚ್ಚತ್ತುಕೊಂಡು ಆಧ್ಯಾತ್ಮಿಕ ಸಹಾಯ ಪಡೆಯಬೇಕು