ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಹಿಂದಿನ ವಿಷಯಗಳನ್ನು’ ತಿರುಗಿ ನೋಡದಿರಿ

‘ಹಿಂದಿನ ವಿಷಯಗಳನ್ನು’ ತಿರುಗಿ ನೋಡದಿರಿ

‘ಹಿಂದಿನ ವಿಷಯಗಳನ್ನು’ ತಿರುಗಿ ನೋಡದಿರಿ

“ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದೆ ಇರುವ ವಿಷಯಗಳನ್ನು ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ.”—ಲೂಕ 9:62.

ಉತ್ತರಿಸುವಿರಾ?

ನಾವು ಏಕೆ “ಲೋಟನ ಹೆಂಡತಿಯನ್ನು ಜ್ಞಾಪಕ” ಮಾಡಿಕೊಳ್ಳಬೇಕು?

ಸದಾ ಯೋಚಿಸುತ್ತಾ ಚಿಂತೆಯಲ್ಲಿ ಮುಳುಗಿರಬಾರದಾದ ಮೂರು ಸಂಗತಿಗಳು ಯಾವುವು?

ಯೆಹೋವನ ಸಂಘಟನೆಯೊಂದಿಗೆ ನಾವು ಹೇಗೆ ಮುಂದೆ ಸಾಗಬಲ್ಲೆವು?

1. (1) ಯೇಸು ಯಾವ ಎಚ್ಚರಿಕೆ ಕೊಟ್ಟನು? (2) ನಮಗೆ ಯಾವ ಪ್ರಶ್ನೆ ಏಳುತ್ತದೆ?

“ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ.” (ಲೂಕ 17:32) ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತ ಕೊಟ್ಟ ಈ ಪ್ರಬಲ ಎಚ್ಚರಿಕೆ ಹಿಂದೆಂದಿಗಿಂತಲೂ ಇಂದು ತುಂಬ ಮಹತ್ವದ್ದಾಗಿದೆ. ಯೇಸು ಆ ಎಚ್ಚರಿಕೆ ಕೊಟ್ಟದ್ದೇಕೆ? ಅವನ ಮಾತುಗಳನ್ನು ಕೇಳುತ್ತಿದ್ದ ಯೆಹೂದ್ಯರಿಗೆ ಯೇಸು ಹೆಚ್ಚಿನ ವಿವರಣೆ ಕೊಡಬೇಕಿರಲಿಲ್ಲ. ಏಕೆಂದರೆ ಲೋಟನ ಹೆಂಡತಿಗೆ ಏನಾಯಿತೆಂದು ಅವರಿಗೆ ಗೊತ್ತಿತ್ತು. ಗಂಡ-ಮಕ್ಕಳೊಂದಿಗೆ ಸೊದೋಮ್‌ ಪಟ್ಟಣದಿಂದ ಹೊರಗೆ ಓಡಿಬರುತ್ತಿರುವಾಗ ಆಕೆ ದೇವರ ಮಾತಿಗೆ ಅವಿಧೇಯಳಾಗಿ ಹಿಂದೆ ನೋಡಿದ್ದರಿಂದ ಉಪ್ಪಿನ ಕಂಬವಾದಳು.ಆದಿಕಾಂಡ 19:17, 26 ಓದಿ.

2. (1) ಲೋಟನ ಹೆಂಡತಿ ಏಕೆ ಹಿಂದೆ ನೋಡಿದ್ದಿರಬಹುದು? (2) ಅವಿಧೇಯತೆ ತೋರಿಸಿದ್ದರಿಂದ ಆಕೆಗೆ ಏನಾಯಿತು?

2 ಲೋಟನ ಹೆಂಡತಿ ಹಿಂದೆ ನೋಡಿದ್ದೇಕೆ? ಏನು ಸಂಭವಿಸುತ್ತಿದೆ ಎಂದು ನೋಡುವ ಕುತೂಹಲ ಆಕೆಗಿತ್ತೇ? ಪಟ್ಟಣ ನಾಶವಾಗುತ್ತಿದೆಯೆಂದು ಆಕೆ ನಂಬಲಿಲ್ಲವೇ? ದೇವರಲ್ಲಿ ಆಕೆಗೆ ನಂಬಿಕೆಯ ಕೊರತೆಯಿತ್ತೇ? ಅಥವಾ ಸೊದೋಮ್‌ನಲ್ಲಿ ಸ್ವತ್ತುಗಳನ್ನು ಬಿಟ್ಟು ಬಂದದ್ದಕ್ಕೆ ಅವಳ ಮನಸ್ಸು ಚಡಪಡಿಸುತ್ತಿತ್ತೇ? (ಲೂಕ 17:31) ಕಾರಣ ಏನೇ ಆಗಿರಲಿ ಆಕೆ ಅವಿಧೇಯತೆ ತೋರಿಸಿ ತನ್ನ ಜೀವವನ್ನೇ ಕಳಕೊಂಡಳು. ಅದೂ ಎಂಥ ರೀತಿಯ ಮರಣ ಯೋಚಿಸಿ. ಸೊದೋಮ್‌ ಗೊಮೋರ ಪಟ್ಟಣಗಳ ವಿಕೃತಕಾಮಿಗಳು ಸತ್ತ ಅದೇ ದಿನ ಆಕೆಯೂ ಸತ್ತಳು! “ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ” ಎಂದು ಯೇಸು ಹೇಳಿದ್ದೇಕೆಂದು ಈಗ ತಿಳಿಯಿತೇ?

3. ಸಾಂಕೇತಿಕ ಅರ್ಥದಲ್ಲಿ ನಾವು ಹಿಂದೆ ತಿರುಗಿ ನೋಡಬಾರದು ಎಂಬುದನ್ನು ಯೇಸು ಹೇಗೆ ಒತ್ತಿಹೇಳಿದನು?

3 ನಮ್ಮೀ ಸಮಯದಲ್ಲಿ ಕೂಡ ಸಾಂಕೇತಿಕ ಅರ್ಥದಲ್ಲಿ ನಾವು ಹಿಂದೆ ತಿರುಗಿ ನೋಡದೆ ಇರುವುದು ಮಹತ್ವದ್ದಾಗಿದೆ. ಯೇಸು ಈ ಅಂಶವನ್ನು ಒತ್ತಿಹೇಳಿದನು. ಒಮ್ಮೆ ಒಬ್ಬ ವ್ಯಕ್ತಿ ಶಿಷ್ಯನಾಗುವುದಕ್ಕೆ ಮುಂಚೆ ಮನೆಗೆ ಹೋಗಿ ವಿದಾಯ ಹೇಳಿ ಬರಲು ಅನುಮತಿ ಕೇಳಿದಾಗ ಯೇಸು ಹೀಗಂದನು: “ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದೆ ಇರುವ ವಿಷಯಗಳನ್ನು ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ.” (ಲೂಕ 9:62) ಯೇಸು ಹಾಗೆ ಉತ್ತರಿಸಿದ್ದು ನ್ಯಾಯವಲ್ಲ ಒರಟಾಗಿತ್ತೆಂದು ನಿಮಗನಿಸುತ್ತಾ? ಆದರೆ ಹಾಗಲ್ಲ. ಏಕೆಂದರೆ ಆ ವ್ಯಕ್ತಿ ಶಿಷ್ಯನಾಗುವ ಜವಾಬ್ದಾರಿಯಿಂದ ಜಾರಿಕೊಳ್ಳಲು ಕುಂಟು ನೆವ ಕೊಡುತ್ತಿದ್ದಾನೆಂದು ಯೇಸುವಿಗೆ ಗೊತ್ತಿತ್ತು. ಹೀಗೆ ವಿಳಂಬಿಸುವುದು “ಹಿಂದೆ ಇರುವ ವಿಷಯಗಳನ್ನು” ನೋಡುವುದಕ್ಕೆ ಸಮವೆಂದು ಯೇಸು ಹೇಳಿದನು. ರೈತನು ಉಳುವಾಗ ಸ್ವಲ್ಪ ಹಿಂದೆ ನೋಡಿದರೂ, ನೇಗಿಲನ್ನು ಕೆಳಗಿಟ್ಟು ಹಿಂದೆ ನೋಡಿದರೂ ಪರಿಣಾಮ ಒಂದೇ. ಎರಡು ಸಂದರ್ಭದಲ್ಲೂ ಅವನ ಗಮನ ಬೇರೆಡೆಗೆ ತಿರುಗಿದ್ದರಿಂದ ಅವನು ಮಾಡುತ್ತಿದ್ದ ಕೆಲಸ ಹಾಳಾಯಿತು.

4. ನಮ್ಮ ಕಣ್ಣುಗಳನ್ನು ಯಾವುದರ ಮೇಲೆ ನೆಡಬೇಕು?

4 ನಾವು ಕೂಡ ನಮ್ಮ ಕಣ್ಣುಗಳನ್ನು ಹಿಂದಿನ ವಿಷಯಗಳ ಮೇಲಲ್ಲ ಭವಿಷ್ಯತ್ತಿನೆಡೆಗೆ ನೆಡುವುದು ಪ್ರಾಮುಖ್ಯ. ಈ ವಿಷಯವನ್ನು ಜ್ಞಾನೋಕ್ತಿ 4:25 ಸ್ಪಷ್ಟವಾಗಿ ತಿಳಿಸುತ್ತದೆ: “ನೆಟ್ಟಗೆ ದೃಷ್ಟಿಸು; ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ.”

5. ಯಾವ ಕಾರಣಕ್ಕಾಗಿ ನಾವು ಹಿಂದಿನ ವಿಷಯಗಳನ್ನು ತಿರುಗಿ ನೋಡಬಾರದು?

5 ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವುದರಿಂದ ಹಿಂದಿನ ವಿಷಯಗಳನ್ನು ತಿರುಗಿ ನೋಡುವ ಸಮಯ ಇದಲ್ಲ. (2 ತಿಮೊ. 3:1) ಲೋಟನ ಸಮಯದಲ್ಲಿ ದೇವರು ಎರಡು ದುಷ್ಟ ಪಟ್ಟಣಗಳನ್ನು ನಾಶಮಾಡಿದನು. ಆದರೆ ಈಗ ಆತನು ಇಡೀ ಭೂಮಿಯಿಂದ ದುಷ್ಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಮಾಡಲಿದ್ದಾನೆ. ಹಾಗಾಗಿ ಲೋಟನ ಹೆಂಡತಿ ಮಾಡಿದ ತಪ್ಪನ್ನು ನಾವು ಮಾಡದಿರೋಣ. ಈ ನಿಟ್ಟಿನಲ್ಲಿ ನಮಗೆ ಯಾವುದು ಸಹಾಯ ಮಾಡುತ್ತದೆ? ಹಿಂತಿರುಗಿ ನೋಡುವಂತೆ ನಮ್ಮನ್ನು ಪ್ರಲೋಭಿಸುವ ವಿಷಯಗಳನ್ನು ನಾವು ಮೊದಲು ಗುರುತಿಸಬೇಕು. (2 ಕೊರಿಂ. 2:11) ಆ ವಿಷಯಗಳು ಯಾವುವು? ಅವುಗಳ ಮೇಲೆ ದೃಷ್ಟಿ ನೆಡದಿರಲು ಏನು ಮಾಡಬೇಕು? ಈಗ ನೋಡೋಣ.

ಆ ದಿನಗಳು ಎಷ್ಟೊಂದು ಚೆನ್ನಾಗಿದ್ದವು!

6. ನಮ್ಮ ನೆನಪು ಯಾವಾಗಲೂ ನೆಚ್ಚತಕ್ಕದ್ದಲ್ಲ ಏಕೆ?

6 ಇಂದಿಗಿಂತ ಹಿಂದಿನ ಜೀವನ ಎಷ್ಟೋ ಚೆನ್ನಾಗಿತ್ತೆಂದು ಯೋಚಿಸುವುದು ನಮಗೇ ಅಪಾಯಕರ. ಕೆಲವೊಮ್ಮೆ ನಮ್ಮ ನೆನಪಿನ ಶಕ್ತಿಯನ್ನು ಪೂರ್ಣವಾಗಿ ನೆಚ್ಚಲಾಗದು. ಏಕೆಂದರೆ ಆಗ ಇದ್ದ ನಿಜವಾದ ಸನ್ನಿವೇಶವನ್ನು ನಾವು ಮರೆತುಬಿಟ್ಟಿರಬಹುದು. ಆಗಿನ ಸಮಸ್ಯೆಗಳನ್ನು ಏನೂ ಅಲ್ಲವೆಂಬಂತೆ ಯೋಚಿಸಿ, ಅಲ್ಪಸ್ವಲ್ಪ ಖುಷಿಯನ್ನು ಬೆಟ್ಟದಷ್ಟು ಮಾಡಿ ಅದರ ಗುಂಗಿನಲ್ಲಿ ಮನಸ್ಸು ತೇಲಬಹುದು. ಹೀಗೆ ಹಿಂದಿನವುಗಳನ್ನೇ ಮತ್ತೆ ಮತ್ತೆ ನೆನಪಿಸುವಾಗ ಅದಕ್ಕಾಗಿ ಮನಸ್ಸು ಹಾತೊರೆಯುವುದು. ಆದರೆ ಬೈಬಲಿನ ಎಚ್ಚರಿಕೆಗೆ ಗಮನಕೊಡಿ: “ಹಿಂದಿನ ಕಾಲವು ಈ ಕಾಲಕ್ಕಿಂತ ಮೇಲಾದದ್ದಕ್ಕೆ ಕಾರಣವೇನು ಅನ್ನಬೇಡ; ನೀನು ಈ ವಿಷಯದಲ್ಲಿ ವಿಚಾರಿಸುವದು ಜ್ಞಾನಕಾರ್ಯವಲ್ಲ.” (ಪ್ರಸಂ. 7:10) ಇಂಥ ರೀತಿಯ ಯೋಚನೆಯಿಂದ ಯಾವ ಅಪಾಯವಿದೆ?

7-9. (1) ಈಜಿಪ್ಟ್‌ನಲ್ಲಿ ಇಸ್ರಾಯೇಲ್ಯರನ್ನು ಹೇಗೆ ಉಪಚರಿಸಲಾಯಿತು? (2) ಯಾವ ಕಾರಣಗಳಿಗಾಗಿ ಇಸ್ರಾಯೇಲ್ಯರು ಹರ್ಷಿಸಿದರು? (3) ಯಾವುದಕ್ಕಾಗಿ ಇಸ್ರಾಯೇಲ್ಯರು ಗೊಣಗುಟ್ಟಲಾರಂಭಿಸಿದರು?

7 ಮೋಶೆಯ ಸಮಯದಲ್ಲಿದ್ದ ಇಸ್ರಾಯೇಲ್ಯರ ಉದಾಹರಣೆಯನ್ನು ಪರಿಗಣಿಸಿ. ಮೊದಮೊದಲು ಅವರು ಈಜಿಪ್ಟ್‌ಗೆ ಬಂದಾಗ ಅಲ್ಲಿ ಅವರನ್ನು ಅತಿಥಿಗಳಂತೆ ಉಪಚರಿಸಲಾಯಿತು. ಆದರೆ ಯೋಸೇಫನು ಗತಿಸಿದ ಬಳಿಕ ಈಜಿಪ್ಟಿನವರು “ಇಸ್ರಾಯೇಲ್ಯರನ್ನು ಬಿಟ್ಟೀಕೆಲಸದಿಂದ ಉಪದ್ರವಪಡಿಸುವದಕ್ಕಾಗಿ ಬಿಟ್ಟೀಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ” ಇಟ್ಟರು. (ವಿಮೋ. 1:11) ಅವರ ಸಂಖ್ಯೆ ದೇಶದಲ್ಲಿ ಹೆಚ್ಚದಂತೆ ಫರೋಹನು ಗಂಡುಕೂಸುಗಳನ್ನು ಹುಟ್ಟಿದಾಕ್ಷಣ ಕೊಲ್ಲುವಂತೆ ಆಜ್ಞೆ ಕೊಟ್ಟನು. (ವಿಮೋ. 1:15, 16, 22) ಹಾಗಾಗಿ ಯೆಹೋವನು ಮೋಶೆಗೆ ಹೀಗಂದನು: “ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ. ಬಿಟ್ಟೀಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು.”—ವಿಮೋ. 3:7.

8 ಯೆಹೋವನು ತನ್ನ ಜನರನ್ನು ಆ ದೇಶದಿಂದ ಬಿಡುಗಡೆಗೊಳಿಸುವ ಸಲುವಾಗಿ ಗರ್ವಿಷ್ಠ ಫರೋಹನ ಮೇಲೂ ಅವನ ಜನರ ಮೇಲೂ ಹತ್ತು ಬಾಧೆಗಳನ್ನು ಬರಮಾಡಿದನು. ಆಗ ಆತನ ಮಹಾ ಶಕ್ತಿಯನ್ನು ಇಸ್ರಾಯೇಲ್ಯರು ಅದ್ಭುತ ರೀತಿಯಲ್ಲಿ ಕಂಡರು. (ವಿಮೋಚನಕಾಂಡ 6:1, 6, 7 ಓದಿ.) ಕೊನೆಗೆ ಈಜಿಪ್ಟಿನವರು ಇಸ್ರಾಯೇಲ್ಯರನ್ನು ಅಲ್ಲಿಂದ ಹೋಗುವಂತೆ ಬಿಟ್ಟದ್ದಷ್ಟೇ ಅಲ್ಲ ತಮ್ಮ ಬಳಿಯಿದ್ದ ಬೆಳ್ಳಿಬಂಗಾರಗಳನ್ನು ಕೊಟ್ಟು ಬೇಗನೆ ಹೊರಡಲು ಒತ್ತಾಯಿಸಿದರು. ಇದು ದೇವಜನರು “ಐಗುಪ್ತ್ಯರ ಸೊತ್ತನ್ನು ಸುಲುಕೊಂಡ” ಹಾಗಿತ್ತು. (ವಿಮೋ. 12:33-36) ದಾಸತ್ವದಿಂದ ಬಿಡುಗಡೆ ಹೊಂದಿ ಆ ದೇಶದಿಂದ ಹೊರನಡೆದಾಗ ಇಸ್ರಾಯೇಲ್ಯರಿಗಾದ ಆನಂದ ಎಷ್ಟೆಂದು ಊಹಿಸಿನೋಡಿ. ಕೆಂಪು ಸಮುದ್ರದಲ್ಲಿ ಫರೋಹನು ತನ್ನ ಮಿಲಿಟರಿ ಸೈನ್ಯದೊಂದಿಗೆ ಜಲಸಮಾಧಿಯಾದಾಗಲಂತೂ ಇಸ್ರಾಯೇಲ್ಯರ ಹರ್ಷದ ಹೊನಲು ಉಕ್ಕೇರಿತು. (ವಿಮೋ. 14:30, 31) ಇಂಥೆಲ್ಲ ರೋಮಾಂಚಕ ದೃಶ್ಯಗಳನ್ನು ಕಣ್ಣಾರೆಕಂಡ ಇಸ್ರಾಯೇಲ್ಯರ ನಂಬಿಕೆ ಬಲಗೊಂಡಿರಬೇಕು.

9 ಆದರೆ ಮುಂದೆ ನಡೆದ ಸಂಗತಿ ನಮಗೆ ನಂಬಲು ಕಷ್ಟವಾಗುತ್ತದೆ. ಅಷ್ಟು ಅದ್ಭುತಕರವಾಗಿ ಯೆಹೋವನು ಅವರನ್ನು ಬಿಡುಗಡೆ ಮಾಡಿದ ಸ್ವಲ್ಪದರಲ್ಲೇ ಆ ಜನರು ಗೊಣಗುಟ್ಟಲಾರಂಭಿಸಿದರು. ಯಾವುದಕ್ಕಾಗಿ? ಕೇವಲ ಊಟಕ್ಕಾಗಿ! ಯೆಹೋವನು ಒದಗಿಸಿದ ವಿಷಯಗಳಿಂದ ತೃಪ್ತರಾಗದೆ ಅವರು ಹೀಗೆ ದೂರಿಟ್ಟರು: “ಐಗುಪ್ತದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸವತೆಕಾಯಿ, ಕರ್‌ಬೂಜು, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವು ನೆನಪಿಗೆ ಬರುತ್ತವಲ್ಲಾ; ಇಲ್ಲಿಯಾದರೋ ನಮ್ಮ ಜೀವ ಬತ್ತಿಹೋಯಿತು; ಈ ಮನ್ನವೇ ಹೊರತು ನಮಗೆ ಇನ್ನೇನೂ ಸಿಕ್ಕಲಿಕ್ಕಿಲ್ಲ.” (ಅರ. 11:5, 6) ಗಮನಿಸಿದಿರಾ, ಹಿಂದೆ ಸನ್ನಿವೇಶ ನಿಜವಾಗಿ ಹೇಗಿತ್ತು ಎನ್ನುವುದನ್ನು ಅವರು ಮರೆತುಬಿಟ್ಟರು. ಎಷ್ಟರ ಮಟ್ಟಿಗೆಂದರೆ ದಾಸರಾಗಿದ್ದ ದೇಶಕ್ಕೆ ಹಿಂದೆ ಹೋಗಲು ತುದಿಗಾಲಲ್ಲಿ ನಿಂತರು. (ಅರ. 14:2-4) ಹಿಂದಿನ ವಿಷಯಗಳನ್ನು ತಿರುಗಿ ನೋಡಿ ಯೆಹೋವನ ಅನುಗ್ರಹವನ್ನು ಕಳಕೊಂಡರು.—ಅರ. 11:10.

10. ಇಸ್ರಾಯೇಲ್ಯರ ಉದಾಹರಣೆಯಿಂದ ನಾವು ಯಾವ ಪಾಠ ಕಲಿಯುತ್ತೇವೆ?

10 ಈ ಉದಾಹರಣೆಯಿಂದ ನಾವು ಕಲಿಯುವ ಪಾಠವೇನು? ಕಷ್ಟಸಮಸ್ಯೆಗಳನ್ನು ಎದುರಿಸುತ್ತಿರುವಾಗ ಹಿಂದೆ ಇದ್ದ ಪರಿಸ್ಥಿತಿ, ಪ್ರಾಯಶಃ ಸತ್ಯ ಕಲಿಯುವ ಮುಂಚೆ ಇದ್ದ ಪರಿಸ್ಥಿತಿ ಎಷ್ಟೋ ಚೆನ್ನಾಗಿತ್ತೆಂದು ಊಹಿಸಿ ಕೊರಗದಿರೋಣ. ಹಿಂದಿನ ಅನುಭವಗಳಿಂದ ಪಾಠ ಕಲಿಯುವುದು ಅಥವಾ ಹಿಂದಿನ ಸವಿನೆನಪುಗಳನ್ನು ಮೆಲುಕುಹಾಕುವುದು ತಪ್ಪಲ್ಲ. ಆದರೂ ಆ ವಿಷಯದಲ್ಲಿ ಸಮತೂಕವುಳ್ಳವರೂ ವಾಸ್ತವ ನೋಟವುಳ್ಳವರೂ ಆಗಿರಬೇಕು. ಇಲ್ಲವಾದರೆ ಸದ್ಯದ ಸನ್ನಿವೇಶವನ್ನು ಹಿಂದಿನದಕ್ಕೆ ಹೋಲಿಸುತ್ತಾ ಅಸಂತೃಪ್ತ ಭಾವನೆಯ ಸುಳಿಯಲ್ಲಿ ಮುಳುಗಿಹೋದೇವು. ಗತ ಜೀವನರೀತಿಗೆ ಹೆಜ್ಜೆಯಿಡುವ ಪ್ರಲೋಭನೆಗೆ ತುತ್ತಾಗುವೆವು.2 ಪೇತ್ರ 2:20-22 ಓದಿ.

ಹಿಂದೆ ಮಾಡಿದ ತ್ಯಾಗಗಳು

11. ಹಿಂದೆ ಮಾಡಿದ ತ್ಯಾಗಗಳ ಕುರಿತು ಕೆಲವರ ಅನಿಸಿಕೆ ಏನು?

11 ದುಃಖಕರ ವಿಷಯವೇನೆಂದರೆ ಕೆಲವರು ಹಿಂದೆ ತಾವು ಮಾಡಿದ ತ್ಯಾಗಗಳನ್ನು ನೆನಸಿ ವಿಷಾದಿಸುತ್ತಾರೆ. ಸುವರ್ಣಾವಕಾಶ ಕೈಜಾರಿ ಹೋಗುವಂತೆ ಬಿಟ್ಟೆವಲ್ಲಾ ಎಂದು ಹಲುಬುತ್ತಾರೆ. ಪ್ರಾಯಶಃ ನಿಮಗೆ ಉನ್ನತ ಶಿಕ್ಷಣ ಪಡೆಯುವ, ಹಣ ಮತ್ತು ಖ್ಯಾತಿ ಗಳಿಸುವ ಅವಕಾಶಗಳು ಸಿಕ್ಕಿದ್ದಿರಬಹುದು. ಅನೇಕ ಸಹೋದರ ಸಹೋದರಿಯರು ವ್ಯಾಪಾರ, ಮನೋರಂಜನೆ, ಶಿಕ್ಷಣ, ಕ್ರಿಡಾ ಜಗತ್ತಿನಲ್ಲಿ ತಮಗಿದ್ದ ದೊಡ್ಡ ದೊಡ್ಡ ಹುದ್ದೆಗಳನ್ನು ಬೇಡವೆಂದು ಬಿಟ್ಟು ಬಂದಿದ್ದಾರೆ. ಈಗ ವರ್ಷಗಳು ಉರುಳಿವೆ. ಇನ್ನೂ ಅಂತ್ಯ ಬರಲಿಲ್ಲ. ಅಂಥ ತ್ಯಾಗಗಳನ್ನು ಮಾಡಿದ್ದಕ್ಕೆ ನೀವು ಪರಿತಪಿಸುತ್ತಾ, ಹಾಗೆ ಮಾಡಿರದಿದ್ದರೆ ಜೀವನ ಎಷ್ಟೊಂದು ಚೆನ್ನಾಗಿರುತ್ತಿತ್ತೆಂದು ಕನಸು ಕಾಣುತ್ತೀರಾ?

12. ಪೌಲನಿಗೆ ತಾನು ಬಿಟ್ಟು ಬಂದ ವಿಷಯಗಳ ಕುರಿತು ಹೇಗನಿಸಿತು?

12 ಅಪೊಸ್ತಲ ಪೌಲ ಕ್ರಿಸ್ತನ ಹಿಂಬಾಲಕನಾಗಲು ಬಹಳ ತ್ಯಾಗಮಾಡಿದನು. (ಫಿಲಿ. 3:4-6) ತಾನು ಬಿಟ್ಟು ಬಂದ ವಿಷಯಗಳ ಕುರಿತು ಅವನಿಗೆ ಹೇಗನಿಸಿತು? ಅವನ ಮಾತುಗಳನ್ನೇ ಕೇಳಿ: “ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ.” ಅವನು ಏಕೆ ಹೀಗೆ ಹೇಳಿದನು? ಕಾರಣವನ್ನು ಅವನೇ ವಿವರಿಸುತ್ತಾನೆ: “ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.” * (ಫಿಲಿ. 3:7, 8) ಕಸ ಅಥವಾ ಕಚಡವನ್ನು ಹೊರಗೆಸದ ಬಳಿಕ ‘ಅಯ್ಯೋ ಎಸೆದುಬಿಟ್ಟೆನಲ್ಲಾ’ ಎಂದು ಯಾರು ತಾನೇ ತಲೆ ಮೇಲೆ ಕೈಯಿಟ್ಟು ಚಿಂತಿಸುತ್ತಾರೆ? ಅಂತೆಯೇ ಪೌಲ ಈ ಜಗತ್ತಿನಲ್ಲಿ ಯಶಸ್ಸಿನ ಶಿಖರವನ್ನೇರಲು ತನಗೆ ಸಿಕ್ಕಿದ ಅವಕಾಶಗಳನ್ನು ಕೈಬಿಟ್ಟದ್ದಕ್ಕಾಗಿ ಎಂದಿಗೂ ಒಂದಿನಿತೂ ವಿಷಾದಿಸಲಿಲ್ಲ. ಅವು ಅಮೂಲ್ಯವೆಂದೂ ಅವನಿಗೆ ಅನಿಸಲಿಲ್ಲ.

13, 14. ಪೌಲನ ಮಾದರಿಯನ್ನು ನಾವು ಹೇಗೆ ಅನುಕರಿಸಬೇಕು?

13 ತೊರೆದ ಅವಕಾಶಗಳನ್ನು ನೆನಸಿ ಚಿಂತಿಸುತ್ತಿರುವಲ್ಲಿ ಈಗೇನು ಮಾಡಬೇಕು? ಪೌಲನ ಮಾದರಿಯನ್ನು ಅನುಕರಿಸಿರಿ. ಹೇಗೆ ಅಂತೀರಾ? ಈಗ ನಿಮಗೆ ಎಷ್ಟು ಅಮೂಲ್ಯವಾದ ಸುಯೋಗವಿದೆ ಎಂದು ಯೋಚಿಸಿ. ಯೆಹೋವನೊಂದಿಗೆ ಸ್ನೇಹಸಂಬಂಧ ನಿಮಗಿದೆ. ನಂಬಿಗಸ್ತಿಕೆಯಿಂದ ಸೇವೆ ಮಾಡಿ ಆತನ ಬಳಿ ಒಳ್ಳೇ ಹೆಸರನ್ನು ಮಾಡಿದ್ದೀರಿ. ಬೆಲೆಕಟ್ಟಲಾಗದ ವಿಷಯಗಳಿವು. (ಇಬ್ರಿ. 6:10) ಈ ಲೋಕವು ಕೊಡುವ ಸುಖಸವಲತ್ತುಗಳೆಲ್ಲವು ಯೆಹೋವನು ನಮಗೆ ಇಂದು ಕೊಡುತ್ತಿರುವ ಮತ್ತು ಮುಂದೆ ಕೊಡಲಿರುವ ಆಧ್ಯಾತ್ಮಿಕ ಆಶೀರ್ವಾದಗಳ ಮುಂದೆ ಕ್ಷುಲ್ಲಕ.ಮಾರ್ಕ 10:28-30 ಓದಿ.

14 ಪೌಲನು ಮುಂದೆ ಹೇಳಿದ ಮಾತುಗಳನ್ನು ಗಮನಿಸಿ. ಅವು ನಮಗೆ ಯೆಹೋವನ ಸೇವೆಯಲ್ಲಿ ನಂಬಿಗಸ್ತಿಕೆಯಿಂದ ಮುಂದುವರಿಯಲು ಸ್ಫೂರ್ತಿ ನೀಡುತ್ತವೆ. ತಾನು “ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನ ವಿಷಯಗಳ ಕಡೆಗೆ ಮುಂದೊತ್ತುತ್ತಾ” ಇದ್ದೇನೆ ಎಂದನು ಅವನು. (ಫಿಲಿ. 3:13) ಇಲ್ಲಿ ಪೌಲನು ಎರಡು ಪ್ರಾಮುಖ್ಯ ಹೆಜ್ಜೆಗಳ ಕುರಿತು ತಿಳಿಸುತ್ತಾನೆ. ಮೊದಲಾಗಿ, ನಾವು ಬಿಟ್ಟು ಬಂದ ವಿಷಯಗಳನ್ನು ಮರೆತುಬಿಡಬೇಕು. ಅವುಗಳ ಕುರಿತು ಅತಿಯಾಗಿ ಯೋಚಿಸುತ್ತಾ ಅಮೂಲ್ಯವಾದ ಶಕ್ತಿ, ಸಮಯವನ್ನು ವ್ಯರ್ಥ ಮಾಡಬಾರದು. ಎರಡನೆಯದಾಗಿ, ಅಂತಿಮ ರೇಖೆಗೆ ಹತ್ತಿರವಾಗುತ್ತಿರುವ ಓಟಗಾರನಂತೆ ನಾವು ಮುಂದೊತ್ತುತ್ತಾ ಇರಬೇಕು. ಮುಂದಿರುವ ವಿಷಯಗಳ ಮೇಲೆ ಗಮನ ನೆಡಬೇಕು.

15. ದೇವರ ನಂಬಿಗಸ್ತ ಸೇವಕರ ಮಾದರಿಗಳನ್ನು ಧ್ಯಾನಿಸುವುದರಿಂದ ನಮಗೆ ಯಾವ ಪ್ರಯೋಜನವಿದೆ?

15 ಪ್ರಾಚೀನ ಹಾಗೂ ಇಂದಿರುವ ನಂಬಿಗಸ್ತ ದೇವಸೇವಕರ ಮಾದರಿಗಳು ನಾವು ಹಿಂದಿನ ವಿಷಯಗಳನ್ನು ತಿರುಗಿ ನೋಡದೆ ಮುಂದೊತ್ತಲು ಚಾಲಕಶಕ್ತಿಯಾಗಿವೆ. ಹಾಗಾಗಿ ಅವರ ಮಾದರಿಗಳನ್ನು ಧ್ಯಾನಿಸೋಣ. ಅಬ್ರಹಾಮ ಮತ್ತು ಸಾರಳು ತಾವು ಬಿಟ್ಟು ಬಂದ ಊರ್‌ ಪಟ್ಟಣವನ್ನು ನೆನಪಿಸಿಕೊಳ್ಳುತ್ತಾ ಇರುತ್ತಿದ್ದಲ್ಲಿ “ಅಲ್ಲಿಗೆ ಹಿಂದಿರುಗಲು ಅವಕಾಶವಿರುತ್ತಿತ್ತು.” (ಇಬ್ರಿ. 11:13-15) ಆದರೆ ಅವರು ಹಾಗೆ ಮಾಡಲಿಲ್ಲ. ಮೋಶೆ ಮೊದಲ ಸಲ ಈಜಿಪ್ಟ್‌ನಿಂದ ಹೋದಾಗ ಏನನ್ನು ಬಿಟ್ಟು ಹೋದನೋ ಅದು ತದನಂತರ ಈಜಿಪ್ಟ್‌ನಿಂದ ತೆರಳಿದ ಇಸ್ರಾಯೇಲ್ಯರು ಬಿಟ್ಟು ಬಂದ ವಿಷಯಕ್ಕಿಂತ ಎಷ್ಟೋ ಅಪಾರವಾಗಿತ್ತು. ಹಾಗಿದ್ದರೂ ಮೋಶೆ ಯಾವತ್ತೂ ಹಿಂದಿನ ವಿಷಯಗಳಿಗಾಗಿ ತವಕಪಡಲಿಲ್ಲ. ಬದಲಾಗಿ ಬೈಬಲ್‌ ಹೇಳುವಂತೆ ಅವನು “ಈಜಿಪ್ಟ್‌ ದೇಶದ ನಿಕ್ಷೇಪಗಳಿಗಿಂತ ಕ್ರಿಸ್ತನ ನಿಮಿತ್ತ ಅನುಭವಿಸುವ ನಿಂದೆಯನ್ನು ಎಷ್ಟೋ ಶ್ರೇಷ್ಠವಾದ ಐಶ್ವರ್ಯವೆಂದೆಣಿಸಿದನು; ಏಕೆಂದರೆ ಅವನು ತೀವ್ರಾಸಕ್ತಿಯಿಂದ ಬಹುಮಾನದ ನೀಡುವಿಕೆಯ ಕಡೆಗೆ ದೃಷ್ಟಿನೆಟ್ಟವನಾಗಿದ್ದನು.”—ಇಬ್ರಿ. 11:26.

ಹಿಂದಿನ ಕಹಿ ಅನುಭವಗಳು

16. ಹಿಂದಿನ ಅನುಭವಗಳು ನಮ್ಮನ್ನು ಹೇಗೆ ಕಾಡಬಹುದು?

16 ಹಿಂದೆ ನಮಗೆ ಕೆಲವು ಕಹಿ ಅನುಭವಗಳು ಆಗಿದ್ದಿರಬಹುದು. ನಾವು ಮಾಡಿದ ಪಾಪಗಳು ಅಥವಾ ತಪ್ಪುಗಳು ಇಂದು ನಮ್ಮನ್ನು ಕುಟುಕುತ್ತಿರಬಹುದು. ಆ ನೋವು ನಮ್ಮನ್ನು ಕಿತ್ತು ತಿನ್ನುತ್ತಿರಬಹುದು. (ಕೀರ್ತ. 51:3) ಅಥವಾ ನಮಗೆ ಸಿಕ್ಕಿದ ಗಂಭೀರ ಸಲಹೆಯ ನೆನಪು ನಮ್ಮನ್ನು ಇನ್ನೂ ಇರಿಯುತ್ತಿರಬಹುದು. (ಇಬ್ರಿ. 12:11) ಇಲ್ಲವೆ ನಮಗಾದ ಅನ್ಯಾಯವನ್ನು ನೆನಸಿ ಮನಸ್ಸು ಕೊರಗುತ್ತಿರಬಹುದು. ಕೆಲವೊಮ್ಮೆ ಅನ್ಯಾಯವಾಗಿದೆ ಎನ್ನುವುದು ನಮ್ಮ ಊಹೆಯಾಗಿರಬಹುದಾದರೂ ನೋವಾಗುತ್ತಿರಬಹುದು. (ಕೀರ್ತ. 55:2, 3ಎ) ನಾವು ಹಿಂದೆ ತಿರುಗಿ ಅವುಗಳ ಕುರಿತೇ ಯೋಚಿಸುವುದನ್ನು ತಡೆಯಲು ಏನು ಮಾಡಬೇಕು? ಅದನ್ನು ಈಗ ನೋಡೋಣ.

17. (1) ತಾನು “ಪವಿತ್ರ ಜನರೆಲ್ಲರಲ್ಲಿ ಅತ್ಯಲ್ಪ”ನೆಂದು ಪೌಲ ಹೇಳಿದ್ದೇಕೆ? (2) ನಕಾರಾತ್ಮಕ ಯೋಚನೆಗಳು ಯೆಹೋವನ ಸೇವೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಪೌಲನಿಗೆ ಯಾವುದು ಸಹಾಯ ಮಾಡಿತು?

17ಹಿಂದೆ ಮಾಡಿದ ತಪ್ಪುಗಳು. ಅಪೊಸ್ತಲ ಪೌಲ ತಾನು “ಪವಿತ್ರ ಜನರೆಲ್ಲರಲ್ಲಿ ಅತ್ಯಲ್ಪ”ನೆಂದು ತಿಳಿಸಿದನು. (ಎಫೆ. 3:8) ಅವನಿಗೇಕೆ ಹಾಗೆ ಅನಿಸಿತು? “ನಾನು ದೇವರ ಸಭೆಯವರನ್ನು ಹಿಂಸೆಪಡಿಸಿದ್ದರಿಂದ” ಎನ್ನುವುದು ಅವನ ಉತ್ತರ. (1 ಕೊರಿಂ. 15:9) ಹಿಂದೊಮ್ಮೆ ತಾನು ಹಿಂಸೆಪಡಿಸಿದ ಸಹೋದರ ಸಹೋದರಿಯರನ್ನು ಭೇಟಿಯಾದಾಗ ದೋಷಿಭಾವನೆ ಅವನನ್ನು ಕಾಡಿರಬೇಕು. ಹಾಗಿದ್ದರೂ ಅವನು ಈ ನಕಾರಾತ್ಮಕ ಭಾವನೆಯಲ್ಲೇ ಮುಳುಗಿ ಹೋಗದೆ ದೇವರು ತನಗೆ ತೋರಿಸಿದ ಅಪಾತ್ರ ದಯೆಯ ಮೇಲೆ ಗಮನ ನೆಟ್ಟನು. (1 ತಿಮೊ. 1:12-16) ಇದರಿಂದ ಹೊರಹೊಮ್ಮಿದ ಕೃತಜ್ಞತಾಭಾವವು ಸೇವೆಯಲ್ಲಿ ಮುಂದೊತ್ತುವಂತೆ ಅವನನ್ನು ಪ್ರಚೋದಿಸಿತು. ಅವನು ಮರೆತುಬಿಡಲು ನಿಶ್ಚಯಿಸಿದ ವಿಷಯಗಳಲ್ಲಿ ಅವನು ಮಾಡಿದ ಪಾಪಕೃತ್ಯಗಳೂ ಒಳಗೂಡಿದ್ದವು. ಪೌಲನಂತೆ ನಾವು ಕೂಡ ದೇವರು ನಮಗೆ ತೋರಿಸಿರುವ ಕರುಣೆಯನ್ನು ನೆನಪಿಸಿಕೊಳ್ಳಬೇಕು. ಕಳೆದುಹೋದ ಕಾಲವನ್ನು ನಮ್ಮಿಂದ ಬದಲಾಯಿಸಲು ಅಸಾಧ್ಯ ತಾನೇ? ಹೀಗಿರುವಾಗ ಹಿಂದೆ ಮಾಡಿದ ಪಾಪಗಳ ಬಗ್ಗೆ ಪದೇ ಪದೇ ಯೋಚಿಸುವುದರಲ್ಲಿ ಪ್ರಯೋಜನವಿಲ್ಲ. ಅದು ನಮ್ಮ ಶಕ್ತಿಯನ್ನು ಇಂಗಿಸಿಬಿಡುವುದಷ್ಟೇ. ಹಾಗಾಗಿ ಅದನ್ನು ಬಿಟ್ಟು ಆ ಶಕ್ತಿಯನ್ನು ಈಗ ನಾವು ಆನಂದಿಸುತ್ತಿರುವ ಯೆಹೋವನ ಸೇವೆಯಲ್ಲಿ ಉಪಯೋಗಿಸೋಣ.

18. (1) ನಮಗೆ ಸಿಕ್ಕಿದ ಗಂಭೀರ ಸಲಹೆಯ ಕುರಿತು ಕಹಿಮನಸ್ಸಿನಿಂದ ಹಿಂದೆ ನೋಡುವಲ್ಲಿ ಏನಾಗಬಹುದು? (2) ಸಲಹೆಯನ್ನು ಸ್ವೀಕರಿಸುವ ಕುರಿತು ಸೊಲೊಮೋನ ಹೇಳಿದ ಮಾತನ್ನು ನಾವು ಹೇಗೆ ಪಾಲಿಸಬಹುದು?

18ಗಂಭೀರ ಸಲಹೆ. ಹಿಂದೆ ನಮಗೆ ಸಿಕ್ಕಿದ ಗಂಭೀರ ಸಲಹೆಯ ನೆನಪು ಮನದಲ್ಲಿ ಮರುಕಳಿಸುತ್ತಾ ನಮ್ಮನ್ನು ಇರಿಯುತ್ತಿರುವಲ್ಲಿ ಆಗೇನು? ಇದು ನಮಗೆ ನೋವನ್ನು ಉಂಟುಮಾಡುತ್ತದೆ, ಬಲವನ್ನು ಉಡುಗಿಸಿಬಿಡುತ್ತದೆ. ‘ಬಿದ್ದುಹೋಗುವಂತೆ’ ಸಹ ಮಾಡಬಲ್ಲದು. (ಇಬ್ರಿ. 12:5) ಸಿಕ್ಕಿದ ಸಲಹೆಯನ್ನು ನಾವು ಒಂದುವೇಳೆ “ತಾತ್ಸಾರ” ಮಾಡಿರಲಿ ಅಥವಾ ಮೊದಲು ಸ್ವೀಕರಿಸಿ ನಂತರ ತಳ್ಳಿಬಿಟ್ಟಿರಲಿ ಪರಿಣಾಮ ಒಂದೇ. ಸಲಹೆಯಿಂದ ಪ್ರಯೋಜನ ಹೊಂದಲು ಅಥವಾ ಅದು ನಮ್ಮನ್ನು ಪರಿಷ್ಕರಿಸಲು ನಾವು ಬಿಟ್ಟುಕೊಟ್ಟಿಲ್ಲ. “ಸದುಪದೇಶವನ್ನು ಹಿಡಿ, ಸಡಿಲಬಿಡಬೇಡ; ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು” ಎಂದನು ಸೊಲೊಮೋನ. ಈ ಹಿತನುಡಿಯನ್ನು ಪಾಲಿಸುವುದು ನಮಗೇ ಹಿತಕರ! (ಜ್ಞಾನೋ. 4:13) ವಾಹನ ಚಾಲಕನು ರೋಡ್‌ ಸಿಗ್ನಲ್‌ಗಳಿಗೆ ವಿಧೇಯನಾಗಿ ಹೇಗೆ ಮುಂದೆ ಸಾಗುತ್ತಾ ಇರುತ್ತಾನೋ ಹಾಗೆಯೇ ನಾವು ಸಲಹೆಯನ್ನು ಸ್ವೀಕರಿಸಿ, ಅನ್ವಯಿಸಿ, ಮುಂದೆ ಹೋಗುತ್ತಾ ಇರೋಣ.—ಜ್ಞಾನೋ. 4:26, 27; ಇಬ್ರಿಯ 12:12, 13 ಓದಿ.

19. ಹಬಕ್ಕೂಕ ಮತ್ತು ಯೆರೆಮೀಯನಿಗಿದ್ದ ನಂಬಿಕೆಯನ್ನು ನಾವು ಹೇಗೆ ಅನುಕರಿಸಬಲ್ಲೆವು?

19ಅನ್ಯಾಯ—ನಿಜ ಅಥವಾ ಊಹೆ. ಪ್ರವಾದಿ ಹಬಕ್ಕೂಕ ತನ್ನ ಕಣ್ಣೆದುರಿಗೆ ನಡೆಯುತ್ತಿದ್ದ ಅನ್ಯಾಯವನ್ನು ಕಂಡು ಏಕೆ ಹೀಗಾಗುತ್ತಿದೆ ಎಂದು ಅರಿಯದೆ ಯೆಹೋವನಿಗೆ ಗೋಳಿಟ್ಟನು. ಹೀಗಾಗುವಂತೆ ಏಕೆ ಬಿಟ್ಟಿದ್ದಿ ಎಂದು ಕೂಗಿಕೇಳಿದನು. (ಹಬ. 1:2, 3) ನಾವು ಸಹ ಕೆಲವೊಮ್ಮೆ ಹಬಕ್ಕೂಕನಿದ್ದ ಪರಿಸ್ಥಿತಿಯಲ್ಲಿ ಇರಬಹುದು. ಅಂಥ ಸಮಯದಲ್ಲಿ ಆ ಪ್ರವಾದಿಯ ನಂಬಿಕೆಯನ್ನು ಅನುಕರಿಸುವುದು ಪ್ರಾಮುಖ್ಯ. “ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು” ಎಂದನು ಅವನು. (ಹಬ. 3:18) ‘ಯೆಹೋವನನ್ನು ನಿರೀಕ್ಷಿಸುವೆನು’ ಎಂದು ಹೇಳಿ ಆತನು ಕ್ರಮಕೈಗೊಳ್ಳುವ ವರೆಗೂ ಕಾಯುತ್ತಿದ್ದ ಯೆರೆಮೀಯನ ಉತ್ತಮ ಮಾದರಿ ಕೂಡ ನಮಗಿದೆ. ಅವನಂತೆ ನಾವು ನ್ಯಾಯವಂತನಾದ ಯೆಹೋವ ದೇವರಲ್ಲಿ ಪೂರ್ಣ ನಂಬಿಕೆಯನ್ನಿಟ್ಟು ಆತನು ಕ್ರಮಕೈಗೊಳ್ಳುವ ವರೆಗೆ ಕಾಯಬೇಕು. ಸರಿಯಾದ ಸಮಯದಲ್ಲಿ ಯೆಹೋವನು ಎಲ್ಲ ವಿಷಯಗಳನ್ನು ಸರಿಪಡಿಸುವನು ಎಂಬ ಭರವಸೆ ನಮಗಿರಲಿ.—ಪ್ರಲಾ. 3:19-24.

20. “ಲೋಟನ ಹೆಂಡತಿಯನ್ನು ಜ್ಞಾಪಕಮಾಡಿ”ಕೊಳ್ಳುತ್ತಿದ್ದೇವೆ ಎಂದು ನಾವು ಹೇಗೆ ತೋರಿಸಬಲ್ಲೆವು?

20 ನಾವಿಂದು ರೋಮಾಂಚಕ ಸಮಯದಲ್ಲಿದ್ದೇವೆ. ಬೆರಗುಗೊಳಿಸುವ ಸಂಗತಿಗಳು ಇಂದು ಸಂಭವಿಸುತ್ತಿವೆ, ಮುಂದೆ ಸಂಭವಿಸಲಿವೆ. ಹಾಗಾಗಿ ನಮ್ಮಲ್ಲಿ ಪ್ರತಿಯೊಬ್ಬರು ಮುನ್ನಡೆಯುತ್ತಿರುವ ಯೆಹೋವನ ಸಂಘಟನೆಗೆ ಸಮನಾಗಿ ಹೆಜ್ಜೆಯಿಡೋಣ. ಹಿಂದಿನ ವಿಷಯಗಳನ್ನು ತಿರುಗಿ ನೋಡದೆ ಮುಂದೆ ನೋಡುವಂತೆ ಬೈಬಲ್‌ ಕೊಡುವ ಸಲಹೆಯನ್ನು ಪಾಲಿಸೋಣ. ಆಗ ಖಂಡಿತ ನಾವು “ಲೋಟನ ಹೆಂಡತಿಯನ್ನು ಜ್ಞಾಪಕಮಾಡಿ”ಕೊಳ್ಳುತ್ತಿದ್ದೇವೆ ಎಂದು ತೋರಿಸಿಕೊಡುವೆವು!

[ಪಾದಟಿಪ್ಪಣಿ]

^ ಪ್ಯಾರ. 12 “ಕಸ” ಎಂಬುದಕ್ಕೆ ಮೂಲ ಭಾಷೆಯಲ್ಲಿ ಬಳಸಿರುವ ಪದವು “ನಾಯಿಗಳಿಗೆ ಬಿಸಾಡಿರುವ ಪದಾರ್ಥ” “ಸಗಣಿ” “ಮಲ” ಎಂಬ ಅರ್ಥವನ್ನು ಕೂಡ ಕೊಡುತ್ತದೆ. ಪೌಲನು ಈ ಪದವನ್ನು ಬಳಸಿದ್ದು “ನಿಷ್ಪ್ರಯೋಜಕವಾದ ಮತ್ತು ಹೇಸಿಗೆ ಹುಟ್ಟಿಸುವ ಕೊಳಕಿನಿಂದ ಮುಖ ತಿರುಗಿಸುವುದು, ಹಿಂದೆ ತಿರುಗಿ ನೋಡದಿರುವುದು” ಎಂಬ ಅರ್ಥದಲ್ಲಿ ಎಂದು ಬೈಬಲ್‌ ವಿದ್ವಾಂಸರೊಬ್ಬರು ಹೇಳುತ್ತಾರೆ.

[ಅಧ್ಯಯನ ಪ್ರಶ್ನೆಗಳು]