ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೂದ್ಯನೊಬ್ಬನ ಸೆರಗನ್ನು ಎಪ್ಪತ್ತು ವರ್ಷಗಳಿಂದ ಹಿಡಿದುಕೊಂಡೇ ಇದ್ದೇನೆ

ಯೆಹೂದ್ಯನೊಬ್ಬನ ಸೆರಗನ್ನು ಎಪ್ಪತ್ತು ವರ್ಷಗಳಿಂದ ಹಿಡಿದುಕೊಂಡೇ ಇದ್ದೇನೆ

ಜೀವನ ಕಥೆ

ಯೆಹೂದ್ಯನೊಬ್ಬನ ಸೆರಗನ್ನು ಎಪ್ಪತ್ತು ವರ್ಷಗಳಿಂದ ಹಿಡಿದುಕೊಂಡೇ ಇದ್ದೇನೆ

ಲೆನ್ನಾರ್ಡ್‌ ಸ್ಮಿತ್‌ ಹೇಳಿದಂತೆ

ಹದಿವಯಸ್ಸಿನ ಆರಂಭದಿಂದಲೇ ಬೈಬಲಿನ ಎರಡು ವಚನಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದವು. ಒಂದು ಜೆಕರ್ಯ 8:23, “ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” 70 ವರ್ಷಗಳ ಹಿಂದೆ ನಾನು ಈ ವಚನದ ಅರ್ಥವನ್ನು ಗ್ರಹಿಸಿಕೊಂಡಾಗ ನನಗಾದ ಸಂತೋಷವನ್ನು ನಾನಿನ್ನೂ ಮರೆಯಲಾರೆ.

‘ಯೆಹೂದ್ಯನು’ ಅಭಿಷಿಕ್ತ ಕ್ರೈಸ್ತರನ್ನು ಸೂಚಿಸುತ್ತಾನೆ. ಆ “ಹತ್ತು ಜನರು” “ಬೇರೆ ಕುರಿಗಳನ್ನು” ಸೂಚಿಸುತ್ತಾರೆ. ಹಿಂದೆ ಅವರನ್ನು ‘ಯೋನಾದಾಬ ವರ್ಗದವರು’ ಎಂದು ಕರೆಯಲಾಗುತ್ತಿತ್ತು. * (ಯೋಹಾ. 10:16) ಯಾವಾಗ ನನಗೆ ಈ ವಚನದ ಅರ್ಥ ಸ್ಪಷ್ಟವಾಯಿತೋ ಆಗ ಇನ್ನೊಂದು ವಿಷಯ ಕೂಡ ನನಗೆ ಸ್ಪಷ್ಟವಾಯಿತು. ಅದೇನೆಂದರೆ, ನಾನು ಭೂಮಿಯ ಮೇಲೆ ನಿತ್ಯಜೀವವನ್ನು ಹೊಂದಬೇಕಾದರೆ ಅಭಿಷಿಕ್ತ ವರ್ಗದವರನ್ನು ನಿಷ್ಠೆಯಿಂದ ಬೆಂಬಲಿಸುವುದು ಬಹಳ ಪ್ರಾಮುಖ್ಯ ಎಂಬುದೇ.

ನನ್ನನ್ನು ಬಹಳ ಪ್ರಭಾವಿಸಿದ ಇನ್ನೊಂದು ವಚನ ಮತ್ತಾಯ 25:31-46. ಅಲ್ಲಿ ಯೇಸು ತಿಳಿಸಿದ ‘ಕುರಿಗಳ’ ಮತ್ತು ‘ಆಡುಗಳ’ ದೃಷ್ಟಾಂತವಿದೆ. ಅಂತ್ಯಕಾಲದಲ್ಲಿ ಒಳ್ಳೇ ತೀರ್ಪನ್ನು ಹೊಂದಲಿರುವವರನ್ನು ‘ಕುರಿಗಳಿಗೆ’ ಸೂಚಿಸಲಾಗಿದೆ. ಅವರು ಭೂಮಿಯಲ್ಲಿರುವ ಕ್ರಿಸ್ತನ ಅಭಿಷಿಕ್ತ ಸಹೋದರರಿಗೆ ಒಳ್ಳೇದನ್ನು ಮಾಡಿದ ಕಾರಣ ಒಳ್ಳೇ ತೀರ್ಪನ್ನು ಹೊಂದುವರು. ಯೋನಾದಾಬ ವರ್ಗಕ್ಕೆ ಸೇರಿದ ನಾನು ನನ್ನನ್ನೇ ಹೀಗೆ ಹೇಳಿಕೊಂಡೆ: ‘ಲೆನ್‌, ಕ್ರಿಸ್ತನು ನಿನ್ನನ್ನು ತನ್ನ ಕುರಿಯಾಗಿ ವೀಕ್ಷಿಸಬೇಕಾದರೆ ನೀನು ಅವನ ಅಭಿಷಿಕ್ತ ಸಹೋದರರಿಗೆ ಸಹಾಯ ಮಾಡಲೇಬೇಕು. ದೇವರು ಅವರೊಂದಿಗಿರುವ ಕಾರಣ ಅವರ ಮುಂದಾಳತ್ವಕ್ಕೆ ಅಧೀನನಾಗಿರಬೇಕು.’ ತರುಣನಾಗಿದ್ದಾಗ ನಾನು ಅರಿತುಕೊಂಡ ಈ ಸತ್ಯ ಕಳೆದ ಎಪ್ಪತ್ತಕ್ಕಿಂತಲೂ ಹೆಚ್ಚು ವರ್ಷಗಳಿಂದ ನನ್ನನ್ನು ಮಾರ್ಗದರ್ಶಿಸುತ್ತಾ ಬಂದಿದೆ.

‘ನನ್ನ ಸ್ಥಾನವೆಲ್ಲಿ?’

ನನ್ನ ಅಮ್ಮ ಇಸವಿ 1925ರಲ್ಲಿ ಬೆತೆಲಿನ ಸಭಾಗೃಹದಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು. ಆ ಸಭಾಗೃಹವನ್ನು ಲಂಡನ್‌ ಟ್ಯಾಬರ್‌ನೆಕಲ್‌ ಎಂದು ಕರೆಯಲಾಗುತ್ತಿತ್ತು. ಲಂಡನಿನಾದ್ಯಂತ ಇದ್ದ ಸಹೋದರರು ಅದೇ ಸಭಾಗೃಹವನ್ನು ಉಪಯೋಗಿಸುತ್ತಿದ್ದರು. 1926, ಅಕ್ಟೋಬರ್‌ 15ರಂದು ನಾನು ಹುಟ್ಟಿದೆ. 1940ರ ಮಾರ್ಚ್‌ ತಿಂಗಳಲ್ಲಿ ಇಂಗ್ಲೆಂಡಿನ ಕರಾವಳಿ ತೀರದಲ್ಲಿರುವ ಡೋವರ್‌ ಎಂಬ ಸ್ಥಳದಲ್ಲಿ ನಡೆದ ಸಮ್ಮೇಳನದಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ. ನಾನು ಬೈಬಲ್‌ ಸತ್ಯಗಳನ್ನು ಹೆಚ್ಚೆಚ್ಚಾಗಿ ಪ್ರೀತಿಸತೊಡಗಿದೆ. ನನ್ನ ಅಮ್ಮ ಅಭಿಷಿಕ್ತ ಕ್ರೈಸ್ತರಾಗಿದ್ದ ಕಾರಣ ನಾನು ಸೆರಗನ್ನು ಹಿಡಿದ ಮೊದಲ “ಯೆಹೂದ್ಯ” ನನ್ನ ತಾಯಿಯೇ ಆಗಿದ್ದರು. ಆಗ ನನ್ನ ತಂದೆ ಹಾಗೂ ಅಕ್ಕ ಯೆಹೋವನ ಆರಾಧಕರಾಗಿರಲಿಲ್ಲ. ನಾವು ಇಂಗ್ಲೆಂಡಿನ ಆಗ್ನೇಯ ದಿಕ್ಕಿನಲ್ಲಿದ್ದ ಗಿಲಿಂಗಮ್‌ ಸಭೆಯ ಭಾಗವಾಗಿದ್ದೆವು. ಆ ಸಭೆಯಲ್ಲಿದ್ದ ಹೆಚ್ಚಿನ ಸಹೋದರರು ಅಭಿಷಿಕ್ತ ಕ್ರೈಸ್ತರಾಗಿದ್ದರು. ಹುರುಪಿನಿಂದ ಸಾರುವುದರಲ್ಲಿ ಅಮ್ಮ ಅತ್ಯುತ್ತಮ ಮಾದರಿಯನ್ನಿಟ್ಟಿದ್ದರು.

ಇಸವಿ 1941ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಲೆಸ್ಟರ್‌ ನಗರದಲ್ಲಿ ಒಂದು ಅಧಿವೇಶನ ನಡೆಯಿತು. ಆ ಅಧಿವೇಶನದಲ್ಲಿ “ಸಮಗ್ರತೆ” ಎಂಬ ಶೀರ್ಷಿಕೆಯುಳ್ಳ ಭಾಷಣದಲ್ಲಿ ವಿಶ್ವ ಪ್ರಭುತ್ವದ ವಿವಾದಾಂಶದ ಕುರಿತು ವಿವರಿಸಿ ಹೇಳಲಾಯಿತು. ಯೆಹೋವನ ಮತ್ತು ಸೈತಾನನ ಮಧ್ಯೆ ಎದ್ದಿರುವ ವಿವಾದದಲ್ಲಿ ನಾವೂ ಒಳಗೂಡಿದ್ದೇವೆ; ಹಾಗಾಗಿ ನಾವು ವಿಶ್ವ ಪರಮಾಧಿಕಾರಿ ಆಗಿರುವ ಯೆಹೋವನ ಪಕ್ಷದಲ್ಲಿ ನಿಂತು ಆತನಿಗೆ ನಮ್ಮ ಸಮಗ್ರತೆ ಕಾಪಾಡಿಕೊಳ್ಳಬೇಕು ಎಂಬುದು ಆಗ ನನಗೆ ಮೊತ್ತಮೊದಲ ಬಾರಿ ಅರ್ಥವಾಯಿತು.

ಆ ಅಧಿವೇಶನದಲ್ಲಿ ಪಯನೀಯರ್‌ ಸೇವೆಗೆ ಹೆಚ್ಚು ಒತ್ತನ್ನು ಕೊಡಲಾಯಿತು. ಯುವ ಜನರು ಪಯನೀಯರ್‌ ಸೇವೆಯನ್ನು ತಮ್ಮ ಗುರಿಯಾಗಿ ಇಡುವಂತೆ ಉತ್ತೇಜನ ನೀಡಲಾಯಿತು. “ಸಂಘಟನೆಯಲ್ಲಿ ಪಯನೀಯರರ ಸ್ಥಾನ” ಎಂಬ ಭಾಷಣ ಕೇಳಿದ ಮೇಲೆ ‘ನನ್ನ ಸ್ಥಾನವೆಲ್ಲಿ?’ ಎಂದು ಗಂಭೀರವಾಗಿ ಯೋಚಿಸಿದೆ. ಸಾರುವ ಕೆಲಸದಲ್ಲಿ ನನ್ನಿಂದಾದಷ್ಟು ಪೂರ್ಣವಾಗಿ ಅಭಿಷಿಕ್ತ ವರ್ಗದವರಿಗೆ ಬೆಂಬಲ ನೀಡುವುದು ಯೋನಾದಾಬ ವರ್ಗಕ್ಕೆ ಸೇರಿದ ನನ್ನ ಕರ್ತವ್ಯವೆಂದು ಆ ಅಧಿವೇಶನ ಮನಗಾಣಿಸಿತು. ಅಧಿವೇಶನದಲ್ಲಿದ್ದಾಗಲೇ ನಾನು ಪಯನೀಯರ್‌ ಸೇವೆಗಾಗಿ ಅರ್ಜಿ ಭರ್ತಿಮಾಡಿ ಕೊಟ್ಟೆ.

ಯುದ್ಧದ ಸಮಯದಲ್ಲಿ ಪಯನೀಯರ್‌ ಸೇವೆ

ಇಸವಿ 1941, ಡಿಸೆಂಬರ್‌ 1ರಂದು ನಾನು ವಿಶೇಷ ಪಯನೀಯರನಾಗಿ ನೇಮಕಗೊಂಡೆ. ಆಗ ನನಗೆ 15 ವರ್ಷ ಪ್ರಾಯ. ಅಮ್ಮನೇ ನನ್ನ ಮೊದಲ ಪಯನೀಯರ್‌ ಜೊತೆಗಾರ್ತಿ. ಸುಮಾರು ಒಂದು ವರುಷದ ಬಳಿಕ ಆರೋಗ್ಯ ಸಮಸ್ಯೆಯ ಕಾರಣ ಅವರು ಪಯನೀಯರ್‌ ಸೇವೆ ನಿಲ್ಲಿಸಬೇಕಾಯಿತು. ಹಾಗಾಗಿ ನನ್ನೊಂದಿಗೆ ಸೇವೆಮಾಡಲು ರಾನ್‌ ಪಾರ್ಕನ್‌ ಎಂಬ ಸಹೋದರರನ್ನು ಲಂಡನ್‌ ಬ್ರಾಂಚ್‌ ನೇಮಿಸಿತು. ಅವರೀಗ ಪೋರ್ಟರಿಕೊ ಬ್ರಾಂಚ್‌ನಲ್ಲಿ ಕಮಿಟಿ ಸದಸ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ.

ಕೆಂಟ್‌ ಪ್ರಾಂತದ ಬ್ರಾಡ್‌ಸ್ಟ್ಯಾರ್ಸ್‌ ಮತ್ತು ರಾಮ್ಸ್‌ಗೇಟ್‌ ನಗರಗಳ ಕರಾವಳಿ ಪ್ರದೇಶಗಳಿಗೆ ನಮ್ಮನ್ನು ಕಳುಹಿಸಲಾಯಿತು. ಅಲ್ಲಿ ನಾವೊಂದು ಬಾಡಿಗೆ ಮನೆ ಮಾಡಿಕೊಂಡೆವು. ಆಗ ವಿಶೇಷ ಪಯನೀಯರರಿಗೆ ತಿಂಗಳಿಗೆ ಕೊಡಲಾಗುತ್ತಿದ್ದ ಹಣ 40 ಷಿಲಿಂಗ್‌ (ಆಗ ಅದು ಅಮೆರಿಕದ ಹೆಚ್ಚುಕಡಿಮೆ 8 ಡಾಲರ್‌). ಹಾಗಾಗಿ ಮನೆ ಬಾಡಿಗೆ ಕೊಟ್ಟ ನಂತರ ನಮ್ಮ ಕೈಯಲ್ಲಿ ಉಳಿಯುತ್ತಿದ್ದ ಹಣ ತೀರಾ ಸ್ವಲ್ಪ. ಅನೇಕವೇಳೆ ಊಟಕ್ಕೆ ಏನು ಮಾಡುವುದೆಂದು ತಿಳಿಯುತ್ತಿರಲಿಲ್ಲ. ಆದರೆ ಒಂದಲ್ಲ ಒಂದು ವಿಧದಲ್ಲಿ ಯೆಹೋವನು ನಮ್ಮ ಅಗತ್ಯಗಳನ್ನು ಪೂರೈಸುತ್ತಿದ್ದನು.

ನಾವು ಹೆಚ್ಚಾಗಿ ಸೈಕಲ್‌ನಲ್ಲಿ ಹೋಗುತ್ತಿದ್ದೆವು. ನಮ್ಮೆಲ್ಲಾ ವಸ್ತುಗಳನ್ನು ಅದರಲ್ಲಿಟ್ಟು ಉತ್ತರ ಸಮುದ್ರದಿಂದ ಎದುರುಮುಖವಾಗಿ ಬೀಸುತ್ತಿದ್ದ ಗಾಳಿಗೆ ವಿರುದ್ಧವಾಗಿ ಸೈಕಲ್‌ ತುಳಿಯುತ್ತಾ ಹೋಗುವುದು ಬಹಳ ಕಷ್ಟವಾಗಿತ್ತು. ಮಾತ್ರವಲ್ಲ ಇನ್ನಿತರ ಭಯಾನಕ ಪರಿಸ್ಥಿತಿಗಳನ್ನು ಎದುರಿಸಬೇಕಿತ್ತು. ಲಂಡನ್‌ ಮೇಲೆ ಬಾಂಬ್‌ ದಾಳಿ ಮಾಡುವ ಉದ್ದೇಶದಿಂದ ಕೆಂಟ್‌ ಪ್ರಾಂತದಲ್ಲಿ ವಿಮಾನದಾಳಿಗಳು ಸಂಭವಿಸುತ್ತಿದ್ದವು. ತೀರ ತಗ್ಗಿನಲ್ಲಿ ಜರ್ಮನ್‌ ವಿ-1 ಕ್ಷಿಪಣಿಗಳು ಹಾರಿ ಬರುತ್ತಿದ್ದವು. ಒಂದು ದಿನ ನಾನು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಒಂದು ಬಾಂಬ್‌ ನನ್ನ ತಲೆಯ ಮೇಲೆಯೇ ಬೀಳುವಂತೆ ಬಂತು. ತಪ್ಪಿಸಿಕೊಳ್ಳಲು ನಾನು ಕೂಡಲೆ ಸೈಕಲ್‌ನಿಂದ ಅಲ್ಲೇ ಪಕ್ಕದಲ್ಲಿದ್ದ ಹೊಂಡಕ್ಕೆ ಹಾರಿದೆ. ಆ ಬಾಂಬ್‌ ಸಮೀಪದ ಒಂದು ಹೊಲಕ್ಕೆ ಬಿದ್ದು ಸ್ಫೋಟಿಸಿತು. ಇಷ್ಟೆಲ್ಲಾ ಕಷ್ಟಗಳಿದ್ದರೂ ಕೆಂಟ್‌ನಲ್ಲಿ ನಾವು ಪಯನೀಯರ್‌ ಸೇವೆಯನ್ನು ಬಹಳ ಆನಂದಿಸಿದೆವು.

“ಬೆತೆಲ್‌ ಹುಡುಗ”

ಅಮ್ಮ ಯಾವಾಗಲೂ ಬೆತೆಲ್‌ ಬಗ್ಗೆ ಹೊಗಳುತ್ತಿದ್ದಳು. “ನೀನು ಬೆತೆಲ್‌ ಹುಡುಗನಾಗಬೇಕು. ಅದೇ ನನ್ನ ಆಸೆ” ಎಂದು ಹೇಳುತ್ತಿದ್ದಳು. 1946ರ ಜನವರಿಯಲ್ಲಿ ಲಂಡನ್‌ ಬೆತೆಲಿನಲ್ಲಿ ಮೂರು ವಾರ ಕೆಲಸಮಾಡುವಂತೆ ನನಗೆ ಆಮಂತ್ರಣ ಸಿಕ್ಕಿದಾಗ ನನಗಾದ ಆನಂದ, ಆಶ್ಚರ್ಯವನ್ನು ಪದಗಳಲ್ಲಿ ವಿವರಿಸಲಸಾಧ್ಯ. ಮೂರು ವಾರಗಳ ಕೊನೆಯಲ್ಲಿ ಬ್ರಾಂಚ್‌ ಮೇಲ್ವಿಚಾರಕರಾಗಿದ್ದ ಪ್ರೈಸ್‌ ಹ್ಯೂಸ್‌ ನಾನು ಬೆತೆಲಿನಲ್ಲೇ ಉಳುಕೊಳ್ಳುವಂತೆ ಹೇಳಿದರು. ಅಲ್ಲಿ ದೊರೆತ ತರಬೇತಿ ನನ್ನನ್ನು ರೂಪಿಸಿ ನನ್ನ ಜೀವನದುದ್ದಕ್ಕೂ ಪ್ರಯೋಜನ ತಂದಿತು.

ಆಗ ಲಂಡನ್‌ ಬೆತೆಲಿನಲ್ಲಿ ಇದ್ದದ್ದು ಸುಮಾರು 30 ಸದಸ್ಯರಷ್ಟೆ. ಹೆಚ್ಚಿನವರು ಅವಿವಾಹಿತ ಯುವಕರು. ಅನೇಕ ಅಭಿಷಿಕ್ತ ಸಹೋದರರೂ ಇದ್ದರು. ಅವರಲ್ಲಿ ಪ್ರೈಸ್‌ ಹ್ಯೂಸ್‌, ಎಡ್ಗರ್‌ ಕ್ಲೇ ಹಾಗೂ ಮುಂದೆ ಆಡಳಿತ ಮಂಡಲಿಯ ಸದಸ್ಯರಾದ ಜ್ಯಾಕ್‌ ಬಾರ್‌ ಇದ್ದರು. ಯುವ ಪ್ರಾಯದಿಂದಲೇ ಇಂಥ ‘ಸ್ತಂಭಗಳ’ ಆಧ್ಯಾತ್ಮಿಕ ಮಾರ್ಗದರ್ಶನದ ಕೆಳಗೆ ಕೆಲಸಮಾಡುತ್ತಾ ಕ್ರಿಸ್ತನ ಸಹೋದರರಿಗೆ ಬೆಂಬಲ ನೀಡುವುದು ನಿಜಕ್ಕೂ ದೊಡ್ಡ ಸುಯೋಗ!—ಗಲಾ. 2:9.

ಒಮ್ಮೆ ನಾನು ಕೆಲಸಮಾಡುತ್ತಿದ್ದಾಗ ಸಹೋದರರೊಬ್ಬರು ಬಂದು, ‘ಒಬ್ಬರು ಸಹೋದರಿ ನಿಮ್ಮನ್ನು ನೋಡಲು ಬಂದಿದ್ದಾರೆ. ರಿಸೆಪ್ಷನ್‌ ಬಳಿ ನಿಂತಿದ್ದಾರೆ’ ಎಂದು ಹೇಳಿದರು. ಹೋಗಿ ನೋಡಿದಾಗ ಅದು ಬೇರಾರೂ ಅಲ್ಲ ನನ್ನ ಅಮ್ಮ. ಅವರು ಕಂಕುಳಿನಲ್ಲಿ ಒಂದು ಪಾರ್ಸೆಲ್‌ ಹಿಡಿದು ನಿಂತಿದ್ದರು. ತಾನು ಒಳಗೆ ಬಂದು ಕೆಲಸಕ್ಕೆ ತೊಂದರೆ ಮಾಡಲು ಬಯಸುವುದಿಲ್ಲ ಎಂದು ಹೇಳಿ ಆ ಪಾರ್ಸೆಲ್‌ ಕೊಟ್ಟು ಹೋದರು. ತೆರೆದು ನೋಡಿದಾಗ ಅದರಲ್ಲಿ ಚಳಿಗೆ ಧರಿಸುವ ಒಂದು ಅಂಗಿ ಇತ್ತು. ಅದನ್ನು ನೋಡಿದಾಗ ನನಗೆ ಹನ್ನಳ ನೆನಪಾಯಿತು. ತನ್ನ ಪುಟ್ಟ ಮಗ ಸಮುವೇಲನು ದೇವದರ್ಶನ ಗುಡಾರದಲ್ಲಿ ಸೇವೆಸಲ್ಲಿಸುತ್ತಿದ್ದಾಗ ಆಕೆ ಅವನಿಗೆ ಅಂಗಿಯನ್ನು ಹೊಲಿದು ತರುತ್ತಿದ್ದಳು. ಹನ್ನಳಂತೆ ನನ್ನ ಅಮ್ಮ ತೋರಿಸಿದ ಪ್ರೀತಿ ನನ್ನ ಮನಸ್ಪರ್ಶಿಸಿತು.—1 ಸಮು. 2:18, 19.

ಗಿಲ್ಯಡ್‌ಅವಿಸ್ಮರಣೀಯ ಅನುಭವ

ಇಸವಿ 1947ರಲ್ಲಿ ಬೆತೆಲಿನಲ್ಲಿ ಸೇವೆಸಲ್ಲಿಸುತ್ತಿದ್ದ ಐದು ಸಹೋದರರಿಗೆ ಅಮೆರಿಕದಲ್ಲಿ ನಡೆಯಲಿದ್ದ ಗಿಲ್ಯಡ್‌ ಶಾಲೆಗೆ ಹಾಜರಾಗಲು ಆಮಂತ್ರಣ ಸಿಕ್ಕಿತು. ಅವರಲ್ಲಿ ನಾನೂ ಒಬ್ಬ. ಮರುವರ್ಷ ನಾವು ಗಿಲ್ಯಡ್‌ನ 11ನೇ ತರಗತಿಯನ್ನು ಹಾಜರಾದೆವು. ನಮ್ಮ ಶಾಲೆಯಿದ್ದ ನ್ಯೂಯಾರ್ಕಿನ ಉತ್ತರ ಭಾಗದಲ್ಲಿ ಆಗ ಮೈಕೊರೆಯುವಷ್ಟು ಚಳಿಯಿತ್ತು. ಅಮ್ಮ ನನಗೆ ಚಳಿಗೆ ಧರಿಸುವ ಅಂಗಿಯನ್ನು ಕೊಟ್ಟದ್ದಕ್ಕಾಗಿ ನಾನು ತುಂಬ ಸಂತೋಷಪಟ್ಟೆ.

ಗಿಲ್ಯಡ್‌ನಲ್ಲಿ ನಾನು ಕಳೆದ ಆರು ತಿಂಗಳು ಅವಿಸ್ಮರಣೀಯ. 16 ದೇಶಗಳಿಂದ ಬಂದಿದ್ದ ವಿದ್ಯಾರ್ಥಿಗಳೊಂದಿಗಿನ ಸಹವಾಸದಿಂದ ನನ್ನ ಯೋಚನಾಧಾಟಿ ವಿಶಾಲಗೊಂಡಿತು. ಶಾಲೆ ನನ್ನನ್ನು ಆಧ್ಯಾತ್ಮಿಕವಾಗಿ ಪುಷ್ಟಿಗೊಳಿಸಿದ್ದಲ್ಲದೆ, ಪ್ರೌಢ ಸಹೋದರರೊಂದಿಗಿನ ಸಹವಾಸದಿಂದ ಪ್ರಯೋಜನ ಹೊಂದುವಂತೆಯೂ ಸಾಧ್ಯಗೊಳಿಸಿತು. ನನ್ನ ಜೊತೆ-ವಿದ್ಯಾರ್ಥಿಯಾದ ಲಾಯಿಡ್‌ ಬ್ಯಾರಿ, ಬೋಧಕರಾದ ಆಲ್ಬರ್ಟ್‌ ಶ್ರೋಡರ್‌, ಕಿಂಗ್‌ಡಂ ಫಾರ್ಮ್‌ (ಗಿಲ್ಯಡ್‌ ಶಾಲೆ ಇದ್ದಂಥ ಸ್ಥಳ) ನೋಡಿಕೊಳ್ಳುತ್ತಿದ್ದ ಜಾನ್‌ ಬೂತ್‌ ನಂತರ ಆಡಳಿತ ಮಂಡಲಿಯ ಸದಸ್ಯರಾದರು. ಈ ಸಹೋದರರು ನನಗೆ ನೀಡಿದ ಪ್ರೀತಿಯ ಸಲಹೆಯನ್ನು, ಯೆಹೋವನಿಗೂ ಆತನ ಸಂಘಟನೆಗೂ ಅವರು ತೋರಿಸುವ ನಿಷ್ಠೆಯ ಅತ್ಯುತ್ತಮ ಮಾದರಿಯನ್ನು ನಾನು ಅಮೂಲ್ಯವೆಂದೆಣಿಸುತ್ತೇನೆ.

ಸಂಚರಣ ಕೆಲಸ, ನಂತರ ಪುನಃ ಬೆತೆಲಿಗೆ

ಗಿಲ್ಯಡ್‌ ತರಬೇತಿ ಮುಗಿಸಿದ ನಂತರ ಅಮೆರಿಕದ ಒಹಾಯೋ ರಾಜ್ಯದಲ್ಲಿ ನನ್ನನ್ನು ಸಂಚರಣ ಕೆಲಸಕ್ಕೆ ನೇಮಿಸಲಾಯಿತು. ನನಗಾಗ ಕೇವಲ 21 ವರ್ಷ. ಆದರೂ ಯೌವನ ಪ್ರಾಯದಲ್ಲಿ ನಾನು ತೋರಿಸುತ್ತಿದ್ದ ಉತ್ಸಾಹವನ್ನು ಅಲ್ಲಿನ ಸಹೋದರರು ಪ್ರೀತಿಯಿಂದ ಮಾನ್ಯಮಾಡುತ್ತಿದ್ದರು. ಆ ಸರ್ಕಿಟ್‌ನಲ್ಲಿದ್ದ ಅನುಭವಸ್ಥ ವೃದ್ಧ ಸಹೋದರರಿಂದ ನಾನು ಬಹಳಷ್ಟನ್ನು ಕಲಿತುಕೊಂಡೆ.

ಕೆಲವು ತಿಂಗಳುಗಳ ಬಳಿಕ ಹೆಚ್ಚಿನ ತರಬೇತಿಗಾಗಿ ಪುನಃ ಬ್ರೂಕ್ಲಿನ್‌ ಬೆತೆಲಿಗೆ ನನ್ನನ್ನು ಆಮಂತ್ರಿಸಲಾಯಿತು. ಆಧ್ಯಾತ್ಮಿಕ ಸ್ತಂಭಗಳಂತಿದ್ದ ಸಹೋದರರಾದ ಮಿಲ್ಟನ್‌ ಹೆನ್ಶೆಲ್‌, ಕಾರ್ಲ್‌ ಕ್ಲಿನ್‌, ನೇತನ್‌ ನಾರ್‌, ಟಿ. ಜೆ. ( ಬಡ್‌) ಸಲಿವನ್‌ ಮತ್ತು ಲೀಮನ್‌ ಸ್ವಿಂಗಲ್‌ ಮುಂತಾದವರ ಪರಿಚಯ ಆಗ ನನಗಾಯಿತು. ಇವರೆಲ್ಲರೂ ಆಡಳಿತ ಮಂಡಲಿಯ ಸದಸ್ಯರಾಗಿ ಸೇವೆಮಾಡಿದರು. ಅವರು ಕೆಲಸ ಮಾಡುತ್ತಿರುವುದನ್ನು ನೋಡುವುದು, ಅವರ ಕ್ರೈಸ್ತ ನಡವಳಿಯನ್ನು ಗಮನಿಸುವುದು ನಿಜಕ್ಕೂ ಭಕ್ತಿವೃದ್ಧಿಗೊಳಿಸುವ ಅನುಭವ. ಯೆಹೋವನ ಸಂಘಟನೆಯ ಮೇಲಿನ ನನ್ನ ಭರವಸೆ ನೂರುಪಟ್ಟು ಹೆಚ್ಚಾಯಿತು. ಅನಂತರ ಸೇವೆಯನ್ನು ಮುಂದುವರಿಸುವಂತೆ ನನ್ನನ್ನು ಪುನಃ ಯೂರೋಪಿಗೆ ಕಳುಹಿಸಲಾಯಿತು.

ಇಸವಿ 1950ರ ಫೆಬ್ರವರಿಯಲ್ಲಿ ಅಮ್ಮ ಮೃತಪಟ್ಟರು. ಅವರ ಶವಸಂಸ್ಕಾರದ ಬಳಿಕ ಅಪ್ಪ ಹಾಗೂ ಅಕ್ಕ ಡೋರಾಳೊಂದಿಗೆ ಯಾವುದೇ ಮುಚ್ಚುಮರೆಯಿಲ್ಲದೆ ಸತ್ಯದ ಕುರಿತು ಅವರ ಅಭಿಪ್ರಾಯವೇನು ಎಂದು ಕೇಳಿದೆ. ‘ಈಗ ಅಮ್ಮನೂ ಇಲ್ಲ, ನಾನೂ ಮನೆಯಲ್ಲಿಲ್ಲ. ನೀವು ಸತ್ಯದ ಕುರಿತು ಯಾವ ತೀರ್ಮಾನವನ್ನು ತೆಗೆದುಕೊಳ್ಳುತ್ತೀರಿ?’ ಎಂದು ಕೇಳಿದೆ. ಅವರಿಗೆ ವೃದ್ಧ ಅಭಿಷಿಕ್ತ ಸಹೋದರರಾದ ಹ್ಯಾರಿ ಬ್ರೋವಿಂಗ್‌ರ ಪರಿಚಯವಿತ್ತು. ಅವರನ್ನು ಗೌರವದಿಂದ ಕಾಣುತ್ತಿದ್ದರು ಸಹ. ಅವರೊಂದಿಗೆ ಸತ್ಯದ ಕುರಿತು ಚರ್ಚಿಸಲು ಒಪ್ಪಿದರು. ಒಂದು ವರ್ಷದೊಳಗಾಗಿ ಅಪ್ಪ ಹಾಗೂ ಡೋರಾ ದೀಕ್ಷಾಸ್ನಾನ ಪಡೆದುಕೊಂಡರು. ಅನಂತರ ಅಪ್ಪ ಗಿಲಿಂಗೆಮ್‌ ಸಭೆಯಲ್ಲಿ ಸಭಾಸೇವಕರಾಗಿ ನೇಮಕಗೊಂಡರು. ಅಪ್ಪ ಮೃತಪಟ್ಟ ಬಳಿಕ ಡೋರಾ ನಂಬಿಗಸ್ತ ಸಹೋದರರೂ ಸಭಾ ಹಿರಿಯರೂ ಆದ ರಾಯ್‌ ಮೋರ್ಟನ್‌ರನ್ನು ವಿವಾಹವಾದಳು. 2010ರಲ್ಲಿ ಡೋರಾ ಮೃತಪಟ್ಟಳು. ಅಲ್ಲಿಯವರೆಗೂ ಅವಳು ಯೆಹೋವನನ್ನು ನಿಷ್ಠೆಯಿಂದ ಸೇವಿಸಿದ್ದಳು.

ಫ್ರಾನ್ಸ್‌ನಲ್ಲಿ ಸೇವೆ

ಚಿಕ್ಕಂದಿನಲ್ಲಿ ನಾನು ಶಾಲೆಯಲ್ಲಿ ಫ್ರೆಂಚ್‌, ಜರ್ಮನ್‌ ಮತ್ತು ಲ್ಯಾಟಿನ್‌ ಭಾಷೆಯನ್ನು ಕಲಿತಿದ್ದೆ. ಅದರಲ್ಲಿ ಫ್ರೆಂಚ್‌ ಭಾಷೆ ನನಗೆ ತುಂಬ ಕಷ್ಟ. ಹಾಗಾಗಿ ಫ್ರಾನ್ಸ್‌ ದೇಶದ ಪ್ಯಾರಿಸ್‌ನಲ್ಲಿರುವ ಬೆತೆಲ್‌ಗೆ ಹೋಗುವಂತೆ ಕೇಳಿಕೊಂಡಾಗ ನನ್ನಲ್ಲಿ ಒಂದು ರೀತಿಯ ಮಿಶ್ರಭಾವನೆ. ಅಲ್ಲಿ ವೃದ್ಧ ಅಭಿಷಿಕ್ತ ಸಹೋದರರಾದ ಆನ್‌ರೀ ಜಜೇಯವರೊಂದಿಗೆ ಕೆಲಸಮಾಡುವ ಸುಯೋಗ ಸಿಕ್ಕಿತು. ಅವರು ಬ್ರಾಂಚ್‌ ಸೇವಕರಾಗಿ ಕೆಲಸಮಾಡುತ್ತಿದ್ದರು. ನನ್ನ ಕೆಲಸ ಸುಲಭವಾಗಿರಲಿಲ್ಲ. ಅನೇಕ ತಪ್ಪುಗಳನ್ನು ನಾನು ಮಾಡುತ್ತಿದ್ದೆ. ಆದರೆ ಜನರೊಂದಿಗೆ ಹೊಂದಿಕೊಂಡು ಕೆಲಸಮಾಡುವುದು ಹೇಗೆಂದು ಕಲಿತೆ.

ಇಸವಿ 1951ರಲ್ಲಿ ಪ್ಯಾರಿಸ್‌ನಲ್ಲಿ ಒಂದು ಅಂತಾರಾಷ್ಟ್ರೀಯ ಸಮಾವೇಶ ಯೋಜಿಸಲಾಯಿತು. ಯುದ್ಧದ ನಂತರ ಇದು ಮೊದಲ ಸಮಾವೇಶ. ಇದನ್ನು ವ್ಯವಸ್ಥಾಪಿಸುವ ಕೆಲಸದಲ್ಲಿ ನಾನೂ ಒಳಗೂಡಿದ್ದೆ. ಯುವ ಸಂಚರಣಾ ಮೇಲ್ವಿಚಾರಕರಾದ ಲೇಅಪಾಲ್‌ ಜಾಂಟೆಸ್‌ ನನಗೆ ಸಹಾಯ ಮಾಡಲೆಂದು ಬೆತೆಲಿಗೆ ಬಂದರು. ಸಮಯಾನಂತರ ಅವರು ಬ್ರಾಂಚ್‌ ಮೇಲ್ವಿಚಾರಕರಾಗಿ ನೇಮಕಗೊಂಡರು. ಐಫಲ್‌ ಟವರ್‌ ಸಮೀಪದ ಪಾಲೇ ಡಿ ಸ್ಪಾರ್‌ ಎಂಬ ಸ್ಥಳದಲ್ಲಿ ಸಮಾವೇಶ ಜರುಗಿತು. 28 ದೇಶಗಳಿಂದ ಸಾಕ್ಷಿಗಳು ಬಂದಿದ್ದರು. ಫ್ರಾನ್ಸ್‌ ದೇಶದಲ್ಲಿ 6,000 ಸಾಕ್ಷಿಗಳು ಮಾತ್ರ ಇದ್ದರೂ ಆ ಅಧಿವೇಶನದ ಕೊನೆಯ ದಿನ ಹಾಜರಾಗಿದ್ದವರ ಸಂಖ್ಯೆ 10,456. ಇದನ್ನು ನೋಡಿ ಫ್ರೆಂಚ್‌ ಸಾಕ್ಷಿಗಳು ಆನಂದದಿಂದ ಪುಳಕಿತರಾದರು.

ಫ್ರಾನ್ಸ್‌ಗೆ ಬಂದಾಗ ನನಗೆ ಅಷ್ಟಾಗಿ ಫ್ರೆಂಚ್‌ ಭಾಷೆ ಬರುತ್ತಿರಲಿಲ್ಲ. ಮೊದಮೊದಲು ಎಲ್ಲಿ ತಪ್ಪಾಗುತ್ತದೋ ಎಂಬ ಭಯದಿಂದ ನನಗೆ ಸರಿಯಾಗಿ ತಿಳಿದಿದ್ದರೆ ಮಾತ್ರ ಆ ಭಾಷೆಯಲ್ಲಿ ಮಾತಾಡುತ್ತಿದ್ದೆ. ಅದೇ ನಾನು ಮಾಡಿದ ತಪ್ಪು. ಭಾಷೆಯನ್ನು ಕಲಿಯಬೇಕಾದರೆ ತಪ್ಪಾದರೂ ಸರಿ, ಮಾತಾಡಬೇಕು. ಆಗ ಮಾತ್ರ ಬೇರೆಯವರು ನಮ್ಮನ್ನು ತಿದ್ದುತ್ತಾರೆ. ನಾವು ಬೇಗನೆ ಭಾಷೆ ಕಲಿಯುತ್ತೇವೆ.

ನನ್ನ ಭಾಷಾ ಸಮಸ್ಯೆ ಬಗೆಹರಿಸಲು ನಾನು ಫ್ರೆಂಚ್‌ ಭಾಷೆಯನ್ನು ಕಲಿಸುವ ಶಾಲೆಗೆ ಸೇರಿದೆ. ಕೂಟಗಳಿಲ್ಲದ ಸಂಜೆ ನಾನು ಆ ಕ್ಲಾಸ್‌ಗಳಿಗೆ ಹಾಜರಾಗುತ್ತಿದ್ದೆ. ಕಲಿಯುತ್ತಾ ಕಲಿಯುತ್ತಾ ಫ್ರೆಂಚ್‌ ಭಾಷೆಯನ್ನು ಇಷ್ಟಪಡಲಾರಂಭಿಸಿದೆ. ವರುಷಗಳು ದಾಟಿದಂತೆ ನಾನು ಅದರಲ್ಲಿ ಪರಿಣತನಾದೆ. ಇದು ನಿಜಕ್ಕೂ ಉಪಯುಕ್ತವಾಯಿತು ಏಕೆಂದರೆ ಮುಂದೆ ಫ್ರಾನ್ಸ್‌ ಬ್ರಾಂಚ್‌ನಲ್ಲಿ ಭಾಷಾಂತರ ಕೆಲಸದಲ್ಲಿ ಸಹಾಯಮಾಡಲು ಶಕ್ತನಾದೆ. ಸಮಯಾನಂತರ ನಾನೇ ಒಬ್ಬ ಭಾಷಾಂತರಕಾರನಾದೆ. ಇಂಗ್ಲಿಷ್‌ನಿಂದ ಫ್ರೆಂಚ್‌ ಭಾಷೆಗೆ ಭಾಷಾಂತರಿಸಲಾರಂಭಿಸಿದೆ. ಆಳು ವರ್ಗ ನೀಡುವ ಆಧ್ಯಾತ್ಮಿಕ ಆಹಾರ ಲೋಕಾದ್ಯಂತ ಇರುವ ಫ್ರೆಂಚ್‌ ಭಾಷೆಯ ಸಹೋದರರಿಗೆ ದೊರಕುವಂತೆ ಸಹಾಯ ಮಾಡುವುದು ದೊಡ್ಡ ಸುಯೋಗ.—ಮತ್ತಾ. 24:45-47.

ವಿವಾಹ ಹಾಗೂ ಇನ್ನಿತರ ಸುಯೋಗಗಳು

ಇಸವಿ 1956ರಲ್ಲಿ ನಾನು ಎಸ್ತೇರ್‌ಳನ್ನು ವಿವಾಹವಾದೆ. ಆಕೆ ಸ್ವಿಟ್ಸರ್ಲೆಂಡಿನ ಪಯನೀಯರಳಾಗಿದ್ದಳು. ಅವಳನ್ನು ಕೆಲವು ವರುಷಗಳ ಮುಂಚೆ ಭೇಟಿಯಾಗಿದ್ದೆ. ನಮ್ಮ ವಿವಾಹ ಲಂಡನ್‌ ಬೆತೆಲಿನ ಬಳಿಯಲ್ಲಿದ್ದ ರಾಜ್ಯ ಸಭಾಗೃಹದಲ್ಲಿ (ಲಂಡನ್‌ ಟ್ಯಾಬರ್‌ನೆಕಲ್‌, ನನ್ನ ತಾಯಿ ದೀಕ್ಷಾಸ್ನಾನ ಪಡೆದ ಸ್ಥಳ) ನಡೆಯಿತು. ವಿವಾಹ ಭಾಷಣವನ್ನು ಸಹೋದರ ಹ್ಯೂಸ್‌ ನೀಡಿದರು. ಹಾಜರಿದ್ದ ಎಸ್ತೇರಳ ತಾಯಿಗೂ ನನ್ನ ಅಮ್ಮನಂತೆ ಸ್ವರ್ಗೀಯ ನಿರೀಕ್ಷೆ ಇತ್ತು. ನನಗೆ ಮುದ್ದಾದ ನಿಷ್ಠಾವಂತ ಸಹಕಾರಿಣಿ ದೊರೆತಳು ಮಾತ್ರವಲ್ಲ, ಒಳ್ಳೆಯವರೂ ಆಧ್ಯಾತ್ಮಿಕ ವ್ಯಕ್ತಿಯೂ ಆಗಿದ್ದ ನನ್ನ ಅತ್ತೆಯೊಂದಿಗೆ ಸಹವಾಸದಲ್ಲಿ ಆನಂದಿಸುವ ಸುಯೋಗ ನನ್ನದಾಯಿತು. ಅವರು 2000 ಇಸವಿಯಲ್ಲಿ ತಮ್ಮ ಭೂಜೀವಿತವನ್ನು ಮುಗಿಸಿದರು.

ವಿವಾಹದ ನಂತರ ಎಸ್ತೇರ್‌ ಮತ್ತು ನಾನು ಬೆತೆಲ್‌ನ ಹೊರಗೆ ವಾಸಿಸಿದೆವು. ಆಗಲೂ ನಾನು ಬೆತೆಲ್‌ ಕೆಲಸವನ್ನು ಅಂದರೆ ಭಾಷಾಂತರ ಕೆಲಸವನ್ನು ಮಾಡುತ್ತಿದ್ದೆ. ಆದರೆ ಎಸ್ತೇರ್‌ ವಿಶೇಷ ಪಯನೀಯರಳಾಗಿ ಪ್ಯಾರಿಸ್‌ನ ಸುತ್ತಮುತ್ತಲ ಪ್ರದೇಶಗಳಲ್ಲಿ ಸೇವೆ ಮಾಡುತ್ತಿದ್ದಳು. ಯೆಹೋವನ ಸೇವಕರಾಗುವಂತೆ ಅನೇಕ ಜನರಿಗೆ ಅವಳು ಸಹಾಯ ಮಾಡಿದಳು. 1964ರಲ್ಲಿ ನಮ್ಮನ್ನು ಪುನಃ ಬೆತೆಲ್‌ಗೆ ಆಮಂತ್ರಿಸಲಾಯಿತು. ಬಳಿಕ 1976ರಲ್ಲಿ ಮೊತ್ತಮೊದಲಾಗಿ ಬ್ರಾಂಚ್‌ ಕಮಿಟಿ ಎಂಬ ಏರ್ಪಾಡನ್ನು ಮಾಡಿದಾಗ ನನ್ನನ್ನು ಕಮಿಟಿಯ ಸದಸ್ಯನಾಗಿ ನೇಮಿಸಲಾಯಿತು. ವರುಷಗಳಾದ್ಯಂತ ಎಸ್ತೇರ್‌ ಯಾವಾಗಲೂ ನನ್ನನ್ನು ಪ್ರೀತಿಯಿಂದ ಬೆಂಬಲಿಸುತ್ತಾ ಬಂದಿದ್ದಾಳೆ.

“ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ”

ಆಗಾಗ್ಗೆ ನ್ಯೂಯಾರ್ಕ್‌ನಲ್ಲಿನ ಮುಖ್ಯ ಕಾರ್ಯಾಲಯಕ್ಕೆ ಹೋಗುವ ಸುಯೋಗ ನನಗಿತ್ತು. ಆ ಭೇಟಿಯ ಸಮಯದಲ್ಲಿ ಆಡಳಿತ ಮಂಡಲಿಯ ಬೇರೆ ಬೇರೆ ಸದಸ್ಯರಿಂದ ನನಗೆ ಅಮೂಲ್ಯವಾದ ಸಲಹೆಗಳು ಸಿಗುತ್ತಿದ್ದವು. ಉದಾಹರಣೆಗೆ, ಒಮ್ಮೆ ನಾನೊಂದು ಕೆಲಸವನ್ನು ನಿರ್ದಿಷ್ಟ ತಾರೀಖಿಗೆ ಮುಗಿಸಬೇಕಿತ್ತು. ಆಗುತ್ತದೋ ಇಲ್ಲವೋ ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ಇದನ್ನು ನಾನು ಸಹೋದರ ನಾರ್‌ಗೆ ಹೇಳಿದೆ. ಅದಕ್ಕವರು ನಗುತ್ತಾ “ಚಿಂತೆ ಮಾಡಬೇಡ. ಕೆಲಸಮಾಡುತ್ತಾ ಇರು” ಎಂದು ಹೇಳಿದರು. ಅಂದಿನಿಂದ ಯಾವಾಗೆಲ್ಲ ಕೆಲಸ ರಾಶಿಬೀಳುತ್ತದೋ ಆಗೆಲ್ಲ ನನಗೆ ಅವರ ಮಾತು ನೆನಪಿಗೆ ಬರುತ್ತದೆ. ಭಯಪಡುವ ಬದಲು ನಾನು ಒಂದರ ನಂತರ ಇನ್ನೊಂದು ಕೆಲಸ ಮಾಡುತ್ತಾ ಹೋಗುತ್ತೇನೆ. ಹಾಗೆ ಮಾಡುವಾಗ ಕೆಲಸ ಸಮಯಕ್ಕೆ ಸರಿಯಾಗಿ ಮುಗಿದು ಹೋಗುತ್ತದೆ.

ಯೇಸು ತನ್ನ ಮರಣದ ಸ್ವಲ್ಪ ಮುಂಚೆ ಶಿಷ್ಯರಿಗೆ, “ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ” ಎಂದು ಹೇಳಿದನು. (ಮತ್ತಾ. 26:11) ಅಂತೆಯೇ ಯೇಸುವಿನ ಅಭಿಷಿಕ್ತ ಸಹೋದರರು ನಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ ಎಂದು ಬೇರೆ ಕುರಿಗಳಾದ ನಮಗೆ ತಿಳಿದಿದೆ. ಹಾಗಾಗಿ 70ಕ್ಕಿಂತಲೂ ಹೆಚ್ಚು ವರ್ಷಗಳಿಂದ ‘ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡಿರುವುದನ್ನು’ ಸುಯೋಗ ಎಂದೆಣಿಸುತ್ತೇನೆ. ಅಷ್ಟು ವರುಷಗಳಿಂದ ಅನೇಕ ಅಭಿಷಿಕ್ತ ಕ್ರೈಸ್ತರೊಂದಿಗೆ ನಿಕಟವಾಗಿ ಸಹವಾಸ ಮಾಡಿದ್ದಕ್ಕಾಗಿ ನಾನು ಬಹಳ ಸಂತೋಷಿತನು.

[ಪಾದಟಿಪ್ಪಣಿ]

^ ಪ್ಯಾರ. 5 “ಯೋನಾದಾಬ” ಎಂಬ ಪದದ ಅರ್ಥವನ್ನು ತಿಳಿಯಲು ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಪುಸ್ತಕದ ಪುಟ 83, 165, 166 ಮತ್ತು 2010, ಫೆಬ್ರವರಿ 15ರ ಕಾವಲಿನಬುರುಜು ಪುಟ 16-17, ಪ್ಯಾರ 8 ಮತ್ತು 10 ನೋಡಿ.

[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರಣೆ]

ಸಹೋದರ ನಾರ್‌ ನಗುತ್ತಾ “ಚಿಂತೆ ಮಾಡಬೇಡ. ಕೆಲಸಮಾಡುತ್ತಾ ಇರು” ಎಂದು ಹೇಳಿದರು

[ಪುಟ 19ರಲ್ಲಿರುವ ಚಿತ್ರಗಳು]

(ಎಡಬದಿ) ಅಪ್ಪಅಮ್ಮ

(ಬಲಬದಿ) ಅಮ್ಮ ಕೊಟ್ಟ ಬೆಚ್ಚಗಿನ ಅಂಗಿಯನ್ನು ಧರಿಸಿ ಗಿಲ್ಯಡ್‌ ಕ್ಯಾಂಪಸ್‌ನಲ್ಲಿ (1948)

[ಪುಟ 20ರಲ್ಲಿರುವ ಚಿತ್ರ]

ಫ್ರಾನ್ಸ್‌ ಬ್ರಾಂಚ್‌ ಸಮರ್ಪಣೆಯ ಸಮಯದಲ್ಲಿ ಸಹೋದರ ಲಾಯಿಡ್‌ ಬ್ಯಾರಿಯವರ ಭಾಷಣವನ್ನು ಅನುವಾದಿಸುತ್ತಿರುವುದು (1997)

[ಪುಟ 21ರಲ್ಲಿರುವ ಚಿತ್ರಗಳು]

(ಎಡಬದಿ) ನಮ್ಮ ಮದುವೆ ಫೋಟೋ

(ಬಲಬದಿ) ಜೊತೆಯಾಗಿ ಸುವಾರ್ತೆ ಸಾರುತ್ತಿರುವಾಗ