ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನ ಜನರನ್ನು ಹೇಗೆ ಪಾರು ಮಾಡಬೇಕೆಂದು ಬಲ್ಲನು

ಯೆಹೋವನು ತನ್ನ ಜನರನ್ನು ಹೇಗೆ ಪಾರು ಮಾಡಬೇಕೆಂದು ಬಲ್ಲನು

ಯೆಹೋವನು ತನ್ನ ಜನರನ್ನು ಹೇಗೆ ಪಾರು ಮಾಡಬೇಕೆಂದು ಬಲ್ಲನು

‘ಯೆಹೋವನು ದೇವಭಕ್ತಿಯುಳ್ಳ ಜನರನ್ನು ಪರೀಕ್ಷೆಯಿಂದ ತಪ್ಪಿಸಲು ತಿಳಿದವನಾಗಿದ್ದಾನೆ.’—2 ಪೇತ್ರ 2:9.

ಈ ಕೆಳಗಿನ ವಿಷಯಗಳಲ್ಲಿ ನಾವೇಕೆ ಭರವಸೆಯಿಂದಿರಬಲ್ಲೆವು?

ತನ್ನ ಉದ್ದೇಶವನ್ನು ಪೂರೈಸುವ ಸಲುವಾಗಿ ಯಾವ ಯಾವ ಸಮಯದಲ್ಲಿ ಘಟನೆಗಳು ಸಂಭವಿಸಬೇಕೆಂದು ಯೆಹೋವನು ನಿರ್ಧರಿಸುತ್ತಾನೆ.

ಯೆಹೋವನು ತನ್ನ ಜನರನ್ನು ರಕ್ಷಿಸಲು ತನ್ನ ಶಕ್ತಿಯನ್ನು ಉಪಯೋಗಿಸುವನು.

ಮಹಾ ಸಂಕಟದ ಸಮಯದಲ್ಲಿ ಸಂಭವಿಸಲಿರುವ ಘಟನೆಗಳು ಯೆಹೋವನಿಗೆ ತಿಳಿದಿವೆ.

1. ‘ಮಹಾ ಸಂಕಟದ’ ಸಮಯದಲ್ಲಿ ಪರಿಸ್ಥಿತಿ ಹೇಗಿರುವುದು?

ಸೈತಾನನ ಲೋಕದ ಮೇಲೆ ದೇವರ ನ್ಯಾಯತೀರ್ಪು ಥಟ್ಟನೆ ಜಾರಿಗೊಳ್ಳುವುದು. (1 ಥೆಸ. 5:2, 3) “ಯೆಹೋವನ ಮಹಾದಿನ” ಬರುವಾಗ ಭೂಸಮಾಜ ದಿಕ್ಕೆಟ್ಟು ಕಂಗಾಲಾಗುವುದು. (ಚೆಫ. 1:14-17) ದೈನಂದಿನ ಜೀವನದಲ್ಲಿ ಕೊರತೆ ಮತ್ತು ಸಂಕಷ್ಟಗಳೇ ತುಂಬಿಕೊಂಡಿರುವವು. “ಲೋಕದ ಆರಂಭದಿಂದ ಇಂದಿನ ವರೆಗೆ” ಸಂಭವಿಸಿರದ ರೀತಿಯ ಸಂಕಟ ಅದಾಗಿರುವುದು.—ಮತ್ತಾಯ 24:21, 22 ಓದಿ.

2, 3. (1) ‘ಮಹಾ ಸಂಕಟದ’ ಸಮಯದಲ್ಲಿ ದೇವಜನರು ಏನನ್ನು ಎದುರಿಸುವರು? (2) ಭವಿಷ್ಯತ್ತಿನಲ್ಲಿ ಸಂಭವಿಸಲಿರುವ ವಿಷಯಗಳನ್ನು ಎದುರಿಸಲು ನಮ್ಮನ್ನು ಯಾವುದು ಬಲಪಡಿಸಬಲ್ಲದು?

2 “ಮಹಾ ಸಂಕಟ” ಕೊನೆಗೊಳ್ಳುವ ಸ್ವಲ್ಪ ಮುಂಚೆ ‘ಮಾಗೋಗ್‌ ದೇಶದ ಗೋಗನು’ ತನ್ನ ಶಕ್ತಿಯನ್ನೆಲ್ಲ ಬಳಸಿ ದೇವಜನರ ಮೇಲೆ ಆಕ್ರಮಣ ಮಾಡುವನು. ಆ ಸಮಯದಲ್ಲಿ ಅವನ ‘ಮಹಾಸೈನ್ಯವು’ ‘ಕಾರ್ಮುಗಿಲು ದೇಶವನ್ನು ಮುಚ್ಚಿಬಿಡುವಂತೆ’ ದೇವಜನರ ಮೇಲೆ ಆಕ್ರಮಣ ಮಾಡುವುದು. (ಯೆಹೆ. 38:2, 14-16) ಯೆಹೋವನ ಜನರನ್ನು ರಕ್ಷಿಸಲು ಯಾವ ಮಾನವ ಸಂಘಟನೆಯೂ ಬರದು. ದೇವರಿಂದ ಮಾತ್ರ ರಕ್ಷಣೆ ಬರಸಾಧ್ಯ. ನಾಶನ ಅವರನ್ನು ಎವೆಯಿಕ್ಕದೆ ನೋಡುತ್ತಿರುವಾಗ ಅವರ ಪ್ರತಿಕ್ರಿಯೆ ಏನಾಗಿರುವುದು?

3 ಬರಲಿರುವ ಮಹಾಸಂಕಟದಿಂದ ಯೆಹೋವನು ತನ್ನ ಜನರನ್ನು ಜೀವಂತವಾಗಿ ಪಾರಾಗಿಸುವನೆಂಬ ನಂಬಿಕೆ ನಿಮಗಿದೆಯೇ? “ಯೆಹೋವನು ದೇವಭಕ್ತಿಯುಳ್ಳ ಜನರನ್ನು ಪರೀಕ್ಷೆಯಿಂದ ತಪ್ಪಿಸುವುದಕ್ಕೂ ಅನೀತಿವಂತರನ್ನು ತೆಗೆದುಹಾಕಲಿಕ್ಕಾಗಿ ನ್ಯಾಯತೀರ್ಪಿನ ದಿನದ ತನಕ ಅವರನ್ನು ಕಾದಿರಿಸುವದಕ್ಕೂ ತಿಳಿದವನಾಗಿದ್ದಾನೆ” ಎಂದು ಅಪೊಸ್ತಲ ಪೇತ್ರ ತಿಳಿಸಿದ್ದಾನೆ. (2 ಪೇತ್ರ 2:9) ಗತಕಾಲದಲ್ಲಿ ಯೆಹೋವನು ತನ್ನ ಜನರನ್ನು ಪಾರುಮಾಡಿದ ನೈಜ ಘಟನೆಗಳನ್ನು ನಾವು ಧ್ಯಾನಿಸುವಾಗ ಭವಿಷ್ಯತ್ತಿನಲ್ಲಿ ಸಂಭವಿಸಲಿರುವ ವಿಷಯಗಳನ್ನು ಎದುರಿಸಲು ನಮಗೆ ಬಲ ಸಿಗುವುದು. ತನ್ನ ಜನರನ್ನು ರಕ್ಷಿಸಲು ಯೆಹೋವನಿಗಿರುವ ಸಾಮರ್ಥ್ಯದಲ್ಲಿ ನಮ್ಮ ಭರವಸೆಯನ್ನು ಹೆಚ್ಚಿಸುವ ಮೂರು ಉದಾಹರಣೆಗಳನ್ನು ನಾವೀಗ ನೋಡೋಣ.

ಭೌಗೋಳಿಕ ಜಲಪ್ರಳಯದಿಂದ ಪಾರಾದರು

4. ಜಲಪ್ರಳಯ ಬರುವ ಮುಂಚೆ ಏನೆಲ್ಲಾ ಮಾಡಲಿಕ್ಕಿತ್ತು?

4 ನೋಹನ ದಿನದಲ್ಲಿ ಬಂದ ಜಲಪ್ರಳಯದ ವೃತ್ತಾಂತವನ್ನು ಮೊದಲು ಪರಿಗಣಿಸೋಣ. ಜಲಪ್ರಳಯ ಬರುವ ಮುಂಚೆ ಎಷ್ಟೋ ಕೆಲಸಗಳನ್ನು ಮಾಡಲಿಕ್ಕಿತ್ತು. ಅದಕ್ಕೆ ಸಮಯ ಬೇಕಿತ್ತು. ದೊಡ್ಡ ಹಡಗು ಕಟ್ಟಬೇಕಿತ್ತು. ಪ್ರಾಣಿಗಳನ್ನು ಅದರೊಳಗೆ ಸುರಕ್ಷಿತವಾಗಿ ಸೇರಿಸಬೇಕಿತ್ತು. ನೋಹನು ಹಡಗನ್ನು ಕಟ್ಟಿಯಾದ ಮೇಲೆ ದೇವರು ಜಲಪ್ರಳಯದ ದಿನಾಂಕವನ್ನು ನಿಶ್ಚಯಪಡಿಸಿದನೆಂದು ಆದಿಕಾಂಡ ಪುಸ್ತಕ ಹೇಳುವುದಿಲ್ಲ. ನೋಹನು ಹಡಗು ಕಟ್ಟಲು ಎಲ್ಲಿ ತಡಮಾಡುವನೋ, ಜಲಪ್ರಳಯವನ್ನು ಮುಂದೂಡುವ ಅಗತ್ಯ ಬಂದೀತೋ ಎಂದು ಚಿಂತಿಸುವ ಅಗತ್ಯವೂ ಆತನಿಗಿರಲಿಲ್ಲ. ಹಡಗು ಕಟ್ಟಬೇಕೆಂದು ನೋಹನಿಗೆ ಹೇಳುವುದಕ್ಕೆ ಎಷ್ಟೋ ಮೊದಲು ಜಲಪ್ರಳಯ ಶುರುವಾಗುವ ಸಮಯವನ್ನು ದೇವರು ನಿಶ್ಚಯಿಸಿದ್ದನು. ಅದನ್ನು ನಾವು ಹೇಗೆ ಹೇಳಬಲ್ಲೆವು?

5. (1) ಆದಿಕಾಂಡ 6:3ರಲ್ಲಿ ತಿಳಿಸುವಂತೆ ಯೆಹೋವನು ಯಾವ ತೀರ್ಮಾನವನ್ನು ಪ್ರಕಟಿಸಿದನು? (2) ಇದನ್ನು ಯಾವಾಗ ಪ್ರಕಟಿಸಿದನು?

5 ಯೆಹೋವನು ತನ್ನ ಆ ತೀರ್ಮಾನವನ್ನು ಸ್ವರ್ಗದಲ್ಲಿ ಪ್ರಕಟಿಸಿದನೆಂದು ಬೈಬಲ್‌ ಹೇಳುತ್ತದೆ. ಆದಿಕಾಂಡ 6:3 ಕ್ಕನುಸಾರ ದೇವರು, “ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿರುವದಿಲ್ಲ; ಅವರು ಭ್ರಷ್ಟರಾದದರಿಂದ ಮರ್ತರೇ. ಅವರ ಆಯುಷ್ಯವು ನೂರ ಇಪ್ಪತ್ತು ವರುಷವಾಗಿರಲಿ” ಎಂದು ಹೇಳಿದನು. ಇಲ್ಲಿ ಯೆಹೋವನು ಮನುಷ್ಯನ ಸರಾಸರಿ ಆಯಸ್ಸಿನ ಬಗ್ಗೆ ಹೇಳುತ್ತಿರಲಿಲ್ಲ. ತಾನು ಭೂಮಿಯ ಮೇಲಿಂದ ದುಷ್ಟತನವನ್ನು ಯಾವಾಗ ನಿರ್ಮೂಲಗೊಳಿಸುವೆನೆಂದು ದೇವರು ನ್ಯಾಯತೀರ್ಪು ವಿಧಿಸುತ್ತಿದ್ದನು. * ಜಲಪ್ರಳಯ ಪ್ರಾರಂಭವಾದುದು ಕ್ರಿ.ಪೂ. 2370ರಲ್ಲಿ. ಆದುದರಿಂದ ದೇವರು ಈ ತೀರ್ಪನ್ನು ಕೊಟ್ಟದ್ದು ಕ್ರಿ.ಪೂ. 2490ರಲ್ಲಿ ಎಂದು ನಮಗೆ ತಿಳಿಯುತ್ತದೆ. ಆಗ ನೋಹನಿಗೆ 480 ವರುಷವಾಗಿತ್ತು. (ಆದಿ. 7:6) ಸುಮಾರು 20 ವರುಷಗಳು ಕಳೆದ ಮೇಲೆ ಅಂದರೆ ಕ್ರಿ.ಪೂ. 2470ರಲ್ಲಿ ಮತ್ತು ಅದರ ನಂತರದ ವರ್ಷಗಳಲ್ಲಿ ನೋಹನಿಗೆ ಮೂವರು ಪುತ್ರರು ಹುಟ್ಟಿದರು. (ಆದಿ. 5:32) ಆಗ ಜಲಪ್ರಳಯ ಪ್ರಾರಂಭವಾಗಲು ಹೆಚ್ಚುಕಡಿಮೆ ನೂರು ವರ್ಷಗಳು ಉಳಿದಿದ್ದವು. ಆಗಲೂ ಯೆಹೋವನು ಮಾನವ ಕುಟುಂಬದ ರಕ್ಷಣೆಯಲ್ಲಿ ನೋಹ ವಹಿಸಲಿದ್ದ ವಿಶೇಷ ಪಾತ್ರವನ್ನು ಅವನಿಗೆ ತಿಳಿಸಿರಲಿಲ್ಲ. ಅದನ್ನು ನೋಹನಿಗೆ ಯಾವಾಗ ಹೇಳಲಿದ್ದನು?

6. ಹಡಗು ಕಟ್ಟುವಂತೆ ಯೆಹೋವನು ನೋಹನಿಗೆ ಯಾವಾಗ ಆಜ್ಞೆ ಕೊಟ್ಟನು?

6 ತಾನೇನು ಮಾಡಲಿದ್ದೇನೆಂದು ನೋಹನಿಗೆ ತಿಳಿಸುವ ಮೊದಲು ದೇವರು ಅನೇಕ ದಶಕಗಳ ವರೆಗೆ ಕಾದನೆಂಬುದು ಸ್ಪಷ್ಟ. ಹಾಗೆ ಹೇಳಲು ನಮಗೆ ಯಾವ ಆಧಾರವಿದೆ? ದೇವರು ನೋಹನಿಗೆ ಹಡಗು ಕಟ್ಟಲು ಆಜ್ಞಾಪಿಸಿದಾಗ ನೋಹನ ಮಕ್ಕಳು ಬೆಳೆದು ದೊಡ್ಡವರಾಗಿ ಅವರಿಗೆ ಮದುವೆಯಾಗಿತ್ತೆಂದು ವೃತ್ತಾಂತ ತಿಳಿಸುತ್ತದೆ. ಯೆಹೋವನು ನೋಹನಿಗೆ “ನಿನ್ನ ಕೂಡ ನನ್ನ ನಿಬಂಧನೆಯನ್ನು ಮಾಡುತ್ತೇನೆ. ನೀನು ಹೆಂಡತಿ ಮಕ್ಕಳು ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಬೇಕು” ಎಂದು ಹೇಳಿದನು. (ಆದಿ. 6:9-18) ಈ ಕಾರಣದಿಂದ, ನೋಹನಿಗೆ ನಾವೆ ಕಟ್ಟುವಂತೆ ದೇವರು ಆಜ್ಞೆ ನೀಡಿದಾಗ ಜಲಪ್ರಳಯ ಪ್ರಾರಂಭವಾಗಲು ಕೇವಲ 40 ಅಥವಾ 50 ವರುಷಗಳು ಉಳಿದಿದ್ದವು ಎಂದು ಹೇಳಸಾಧ್ಯ.

7. (1) ನೋಹನೂ ಅವನ ಕುಟುಂಬವೂ ನಂಬಿಕೆಯನ್ನು ತೋರಿಸಿದ್ದು ಹೇಗೆ? (2) ಜಲಪ್ರಳಯ ಆರಂಭವಾಗುವ ಸಮಯವನ್ನು ದೇವರು ನೋಹನಿಗೆ ಯಾವಾಗ ತಿಳಿಸಿದನು?

7 ನೋಹನೂ ಅವನ ಕುಟುಂಬವೂ ಹಡಗು ಕಟ್ಟುವ ಕೆಲಸವನ್ನು ಮುಂದುವರಿಸಿದಂತೆ ಜಲಪ್ರಳಯವನ್ನು ದೇವರು ಹೇಗೆ ಮತ್ತು ಯಾವಾಗ ತರುವನೆಂದು ತಿಳಿಯಲು ಬಯಸಿದ್ದಿರಬೇಕು. ಅದರ ಕುರಿತು ಸ್ವಲ್ಪವೂ ತಿಳಿದಿರದಿದ್ದರೂ ಅವರು ಕಟ್ಟುವ ಕೆಲಸವನ್ನು ನಿಲ್ಲಿಸಿಬಿಡಲಿಲ್ಲ. “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು” ಎನ್ನುತ್ತದೆ ಬೈಬಲ್‌ ದಾಖಲೆ. (ಆದಿ. 6:22) ಅಂತಿಮವಾಗಿ ಜಲಪ್ರಳಯ ಏಳು ದಿನಗಳ ನಂತರ ಆರಂಭವಾಗುವುದೆಂದು ಯೆಹೋವನು ನೋಹನಿಗೆ ನಿಷ್ಕೃಷ್ಟವಾಗಿ ಹೇಳಿದನು. ನೋಹನಿಗೂ ಅವನ ಕುಟುಂಬಕ್ಕೂ ಪ್ರಾಣಿಗಳನ್ನು ನಾವೆಯೊಳಗೆ ಕರೆದೊಯ್ಯಲು ಆ ಏಳು ದಿನಗಳು ಸಾಕಾಗಿದ್ದವು. “ನೋಹನ ಜೀವಮಾನದ ಆರುನೂರನೆಯ ವರುಷದ ಎರಡನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ” ಆಕಾಶದ ತೂಬುಗಳು ತೆರೆದು ಮಳೆಯು ಧಾರಾಕಾರವಾಗಿ ಸುರಿಯಲು ಆರಂಭಿಸುವುದರೊಳಗೆ ಎಲ್ಲ ಕೆಲಸ ಮುಗಿದಿತ್ತು.—ಆದಿ. 7:1-5, 11.

8. ತನ್ನ ಜನರನ್ನು ರಕ್ಷಿಸುವ ಸಮಯವನ್ನು ಯೆಹೋವನು ಬಲ್ಲನೆಂದು ಜಲಪ್ರಳಯದ ವೃತ್ತಾಂತವು ನಮ್ಮಲ್ಲಿ ಹೇಗೆ ಭರವಸೆ ತುಂಬುತ್ತದೆ?

8 ತನ್ನ ಜನರನ್ನು ಕಾಪಾಡಲು ಯಾವ ಸಮಯ ಸೂಕ್ತ, ಯಾವ ವಿಧ ಅತ್ಯುತ್ತಮ ಎಂದು ಯೆಹೋವನು ತಿಳಿದವನಾಗಿದ್ದಾನೆ ಎನ್ನುವುದಕ್ಕೆ ಜಲಪ್ರಳಯದ ವೃತ್ತಾಂತ ಸಾಕ್ಷ್ಯವಾಗಿದೆ. ಆದಕಾರಣ ಈಗಿರುವ ಕೆಟ್ಟ ವ್ಯವಸ್ಥೆಯ ಅಂತ್ಯ ಸಮೀಪಿಸುತ್ತಿರುವಾಗ ಯೆಹೋವನು ಉದ್ದೇಶಿಸಿದ್ದೆಲ್ಲವೂ ಆತನ ನೇಮಿತ ಕಾಲದಲ್ಲಿ, ಅದೇ “ದಿನ ಮತ್ತು ಗಳಿಗೆ”ಯಲ್ಲಿ ನೆರವೇರುವುದೆಂಬ ಖಾತ್ರಿ ನಮಗಿರಬಲ್ಲದು.—ಮತ್ತಾ. 24:36; ಹಬಕ್ಕೂಕ 2:3 ಓದಿ.

ಕೆಂಪು ಸಮುದ್ರದಿಂದ ಪಾರಾದರು

9, 10. ಈಜಿಪ್ಟಿನ ಸೈನ್ಯವನ್ನು ಸಿಕ್ಕಿಸಿಹಾಕಲು ಯೆಹೋವನು ತನ್ನ ಜನರನ್ನು ಉಪಯೋಗಿಸಿದ್ದು ಹೇಗೆ?

9 ಯೆಹೋವನು ತನ್ನ ಉದ್ದೇಶವನ್ನು ಪೂರೈಸುವ ಸಲುವಾಗಿ ಯಾವ ಯಾವ ಸಮಯದಲ್ಲಿ ಘಟನೆಗಳು ಸಂಭವಿಸಬೇಕೆಂದು ನಿರ್ಧರಿಸಲು ಶಕ್ತನಾಗಿದ್ದಾನೆ ಎಂದು ನಾವು ಜಲಪ್ರಳಯದ ವೃತ್ತಾಂತದಿಂದ ಕಲಿತೆವು. ನಾವೀಗ ಪರಿಗಣಿಸುವ ಎರಡನೆಯ ಉದಾಹರಣೆ ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲು ತನ್ನ ಅಪರಿಮಿತ ಶಕ್ತಿಯನ್ನು ಉಪಯೋಗಿಸುವನು ಎಂದು ತೋರಿಸುತ್ತದೆ. ಯೆಹೋವನು ತನ್ನ ಜನರನ್ನು ರಕ್ಷಿಸುವನು ಎಂದು ಭರವಸೆಯಿಡಲು ಇದು ನಮಗೆ ಇನ್ನೊಂದು ಕಾರಣ ಕೊಡುತ್ತದೆ. ಯೆಹೋವನಿಗೆ ಎಂಥ ಸಾಮರ್ಥ್ಯವಿದೆಯೆಂದರೆ ತನ್ನ ಸ್ವಂತ ಜನರಿಗೆ ರಕ್ಷಕರೇ ಇಲ್ಲ ಎಂಬಂತೆ ಬಿಂಬಿಸಿ ವೈರಿಗಳನ್ನು ಮಟ್ಟಹಾಕಿದ್ದಾನೆ. ಈಜಿಪ್ಟ್‌ನ ದಾಸತ್ವದಲ್ಲಿದ್ದ ಇಸ್ರಾಯೇಲ್ಯರನ್ನು ಯೆಹೋವನು ಬಿಡಿಸಿದಾಗ ಹಾಗೆಯೇ ಸಂಭವಿಸಿತು.

10 ಈಜಿಪ್ಟನ್ನು ಬಿಟ್ಟುಬಂದ ಇಸ್ರಾಯೇಲ್ಯರ ಸಂಖ್ಯೆ ಸುಮಾರು ಮೂವತ್ತು ಲಕ್ಷ ಇದ್ದಿರಬಹುದು. ಯೆಹೋವನು ಮೋಶೆಯ ಮೂಲಕ ಅವರನ್ನು ಬೇರೊಂದು ದಾರಿಯಲ್ಲಿ ನಡೆಸಿಕೊಂಡು ಬಂದ ವಿಧವು ಫರೋಹನಿಗೆ ಅವರು ದಾರಿತಪ್ಪಿ ಅಲೆದಾಡುತ್ತಿದ್ದಾರೆಂದು ಭಾವಿಸುವಂತೆ ಮಾಡಿತು. (ವಿಮೋಚನಕಾಂಡ 14:1-4 ಓದಿ.) ಆದ್ದರಿಂದ ಫರೋಹನು ತನ್ನ ಸೈನ್ಯದೊಂದಿಗೆ ಹೋಗಿ ಅವರನ್ನು ಬೆನ್ನಟ್ಟಿದನು. ಅವನ ಸೈನ್ಯವು ಕೆಂಪು ಸಮುದ್ರದ ಹತ್ತಿರ ಬರುತ್ತಿದ್ದಂತೆ ಇಸ್ರಾಯೇಲ್ಯರಿಗೆ ತಪ್ಪಿಸಿಕೊಳ್ಳಲು ಮಾರ್ಗವೇ ಇಲ್ಲವೆಂಬಂತೆ ತೋರಿತು. (ವಿಮೋ. 14:5-10) ಆದರೆ ಇಸ್ರಾಯೇಲ್ಯರು ಅಪಾಯಕ್ಕೊಳಗಾಗಿರಲಿಲ್ಲ. ಏಕೆ? ಏಕೆಂದರೆ ಯೆಹೋವನು ಅವರನ್ನು ರಕ್ಷಿಸಲಿದ್ದನು.

11, 12. (1) ಯೆಹೋವನು ತನ್ನ ಜನರನ್ನು ಹೇಗೆ ರಕ್ಷಿಸಿದನು? (2) ಯೆಹೋವನು ಹಸ್ತಕ್ಷೇಪ ಮಾಡಿದ್ದರಿಂದ ಪರಿಣಾಮವೇನಾಯಿತು? (3) ಇದು ಯೆಹೋವನ ಬಗ್ಗೆ ನಮಗೇನು ಕಲಿಸುತ್ತದೆ?

11 ಇಸ್ರಾಯೇಲ್ಯರ ಮುಂದೆ ಹೋಗುತ್ತಿದ್ದ “ಮೇಘಸ್ತಂಭ” ಅವರ ಹಿಂಬದಿಗೆ ಸರಿದು ಫರೋಹನ ಸೈನ್ಯವನ್ನು ತಡೆಗಟ್ಟಿ ಕತ್ತಲೆಯಲ್ಲಿ ಮುಳುಗಿಸಿತು. ಆದರೆ ಇಸ್ರಾಯೇಲ್ಯರಿಗೊ ಆ ಸ್ತಂಭ ಅದ್ಭುತವಾಗಿ ಬೆಳಕನ್ನು ಕೊಟ್ಟಿತು. (ವಿಮೋಚನಕಾಂಡ 14:19, 20 ಓದಿ.) ಬಳಿಕ ಯೆಹೋವನು ಪೂರ್ವದಿಂದ ಬಲವಾದ ಬಿರುಗಾಳಿ ಬೀಸುವಂತೆ ಮಾಡಿ ಸಮುದ್ರವನ್ನು ವಿಭಾಗಿಸಿ “ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು.” ಇಷ್ಟೆಲ್ಲ ಆಗುವಾಗ ತುಂಬ ಸಮಯ ಕಳೆದಿದ್ದಿರಬೇಕು. ಏಕೆಂದರೆ ವೃತ್ತಾಂತ ತಿಳಿಸುವ ಪ್ರಕಾರ ಬಿರುಗಾಳಿಯು “ಆ ರಾತ್ರಿಯೆಲ್ಲಾ” ಬೀಸುತ್ತಿತ್ತು. ಬಳಿಕ “ಇಸ್ರಾಯೇಲ್ಯರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೇ ದಾಟಿಹೋದರು.” ರಥಗಳಲ್ಲಿ ಬರುತ್ತಿದ್ದ ಫರೋಹನ ಸೈನ್ಯದ ವೇಗಕ್ಕೆ ಹೋಲಿಸುವಾಗ ಇಸ್ರಾಯೇಲ್ಯರ ನಡಿಗೆ ತುಂಬ ನಿಧಾನವಾಗಿತ್ತು. ಆದರೂ ಇವರನ್ನು ಹಿಂದೆ ಬೀಳಿಸಲು ಈಜಿಪ್ಟ್‌ನವರಿಗೆ ಸಾಧ್ಯವೇ ಆಗಲಿಲ್ಲ. ಏಕೆಂದರೆ ಯೆಹೋವನೇ ಇಸ್ರಾಯೇಲ್ಯರ ಪರವಾಗಿ ಹೋರಾಡುತ್ತಿದ್ದನು. ಯೆಹೋವನು ಐಗುಪ್ತ್ಯರ ಸೈನ್ಯವನ್ನು “ಗಲಿಬಿಲಿಮಾಡಿದನು. ಆತನು ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಬಹುಕಷ್ಟದಿಂದ ಹೊಡಕೊಂಡುಹೋದರು.”—ವಿಮೋ. 14:21-25.

12 ಇಸ್ರಾಯೇಲ್ಯರೆಲ್ಲರೂ ಸುರಕ್ಷಿತವಾಗಿ ಆಚೆ ತೀರವನ್ನು ಸೇರಿದಾಗ ಯೆಹೋವನು ಮೋಶೆಗೆ, “ಸಮುದ್ರದ ಮೇಲೆ ನಿನ್ನ ಕೈ ಚಾಚು; ಆಗ ಅದರ ನೀರು ಮೊದಲಿನಂತೆ ಬಂದು ಐಗುಪ್ತ್ಯರನ್ನೂ ಅವರ ರಥಗಳನ್ನೂ ರಾಹುತರನ್ನೂ ಮುಣುಗಿಸುವದೆಂದು” ಹೇಳಿದನು. ರಭಸವಾಗಿ ಮುನ್ನುಗ್ಗುತ್ತಿದ್ದ ನೀರಿನಿಂದ ತಪ್ಪಿಸಿಕೊಂಡು ಓಡಿಹೋಗಲು ಸೈನಿಕರು ಪ್ರಯತ್ನಿಸಿದರೂ, “ಯೆಹೋವನು [ಅವರನ್ನು] ಸಮುದ್ರದೊಳಗೆ ಕೆಡವಿಬಿಟ್ಟನು.” ತಪ್ಪಿಸಿಕೊಳ್ಳಲು ಮಾರ್ಗವೇ ಇರಲಿಲ್ಲ. “ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ.” (ವಿಮೋ. 14:26-28) ಹೀಗೆ, ತನ್ನ ಜನರನ್ನು ಯಾವುದೇ ಸನ್ನಿವೇಶದಿಂದ ರಕ್ಷಿಸುವ ಶಕ್ತಿ ತನಗಿದೆಯೆಂದು ಯೆಹೋವನು ತೋರಿಸಿಕೊಟ್ಟನು.

ಯೆರೂಸಲೇಮಿನ ವಿನಾಶದಿಂದ ಸಂರಕ್ಷಣೆ

13. (1) ಯೇಸು ಯಾವ ಸೂಚನೆಯನ್ನು ಕೊಟ್ಟನು? (2) ಅವನ ಶಿಷ್ಯರ ಮನಸ್ಸಿನಲ್ಲಿ ಯಾವ ಪ್ರಶ್ನೆ ಬಂದಿದ್ದಿರಬಹುದು?

13 ಯಾವ ಯಾವ ಘಟನೆಗಳು ಹೇಗೇಗೆ ಸಂಭವಿಸಿ ತನ್ನ ಉದ್ದೇಶವನ್ನು ನೆರವೇರಿಸಲಿವೆ ಎಂದು ಯೆಹೋವನಿಗೆ ಚೆನ್ನಾಗಿ ಗೊತ್ತಿದೆ. ನಾವೀಗ ನೋಡಲಿರುವ ಮೂರನೆಯ ಉದಾಹರಣೆ ಈ ಅಂಶವನ್ನು ಎತ್ತಿ ತೋರಿಸುತ್ತದೆ. ಅದು ಒಂದನೇ ಶತಮಾನದಲ್ಲಿ ರೋಮನ್‌ ಸೈನ್ಯವು ಯೆರೂಸಲೇಮನ್ನು ಮುತ್ತಿಗೆ ಹಾಕಿದಾಗ ನಡೆದ ಘಟನೆ. ಯೆಹೋವನು ಯೇಸುವಿನ ಮೂಲಕ ಯೂದಾಯ ಮತ್ತು ಯೆರೂಸಲೇಮಿನಲ್ಲಿದ್ದ ಕ್ರೈಸ್ತರಿಗೆ ಯೆರೂಸಲೇಮಿನ ನಾಶನದ ಕುರಿತು ಎಚ್ಚರಿಸಿದ್ದನು. ಅವರು ನಾಶನದಿಂದ ಪಾರಾಗಲು ಏನು ಮಾಡಬೇಕೆಂದು ಯೇಸು ತಿಳಿಸಿದ್ದನು. “ಪ್ರವಾದಿಯಾದ ದಾನಿಯೇಲನ ಮೂಲಕ ತಿಳಿಸಲ್ಪಟ್ಟಿರುವ ಹಾಳುಮಾಡುವ ಅಸಹ್ಯ ವಸ್ತುವು ಪವಿತ್ರ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಾಗ . . . ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗತೊಡಗಲಿ.” (ಮತ್ತಾ. 24:15, 16) ಆದರೆ ಯೇಸು ಹೇಳಿದ ಈ ಪ್ರವಾದನೆ ನೆರವೇರುವಾಗ ಅದನ್ನು ಅವನ ಶಿಷ್ಯರು ಹೇಗೆ ಗುರುತಿಸಲಿದ್ದರು?

14. ಯಾವ ಘಟನೆಗಳು ಸಂಭವಿಸಿದಾಗ ಯೇಸು ಕೊಟ್ಟ ಸೂಚನೆಯ ಅರ್ಥ ಸ್ಪಷ್ಟವಾಯಿತು?

14 ಸಂಭವಿಸುತ್ತಿದ್ದ ಒಂದೊಂದು ಘಟನೆಯನ್ನೂ ಗಮನಿಸುತ್ತಿದ್ದಾಗ ಯೇಸುವಿನ ಮಾತುಗಳ ಅರ್ಥ ಸ್ಪಷ್ಟವಾಯಿತು. ಕ್ರಿ.ಶ. 66ರಲ್ಲಿ ಯೆಹೂದಿ ದಂಗೆಯನ್ನು ಅಡಗಿಸಲು ಸೆಸ್ಟಿಯಸ್‌ ಗ್ಯಾಲಸ್‌ ರೋಮನ್‌ ಸೈನ್ಯದೊಂದಿಗೆ ಯೆರೂಸಲೇಮಿಗೆ ಬಂದನು. ಯೆಹೂದಿ ದಂಗೆಕೋರರು (ಝೆಲೆಟ್ಸ್‌) ಆಗ ದೇವಾಲಯದೊಳಗೆ ಆಶ್ರಯ ಪಡೆದುಕೊಂಡರು. ಇದನ್ನು ತಿಳಿದ ರೋಮನ್‌ ಸೈನಿಕರು ದೇವಾಲಯದ ಗೋಡೆಯನ್ನು ಕೆಡವಲಾರಂಭಿಸಿದರು. ಎಚ್ಚರಿಕೆಯಿಂದಿದ್ದ ಕ್ರೈಸ್ತರಿಗೆ ಇದರ ಅರ್ಥ ಸ್ಪಷ್ಟವಾಗಿ ತಿಳಿದುಬಂತು. ಏನೆಂದರೆ ವಿಧರ್ಮಿ ಸೈನ್ಯ ಅದರ ವಿಗ್ರಹಾರಾಧಕ ಧ್ವಜಗಳೊಂದಿಗೆ (ಅಸಹ್ಯ ವಸ್ತು) ದೇವಾಲಯದ ಗೋಡೆಯ ವರೆಗೆ ಬಂದು (ಪವಿತ್ರ ಸ್ಥಳ) ನಿಂತುಕೊಂಡಿದೆ, ಯೇಸುವಿನ ಹಿಂಬಾಲಕರು ‘ಬೆಟ್ಟಗಳಿಗೆ ಓಡಿಹೋಗತೊಡಗುವ’ ಸಮಯ ಅದಾಗಿದೆ ಎಂಬದೇ. ಆದರೆ ಮುತ್ತಿಗೆ ಹಾಕಲಾಗಿದ್ದ ನಗರದಿಂದ ಅವರು ಹೇಗೆ ಓಡಿಹೋಗಲು ಸಾಧ್ಯವಿತ್ತು? ಅನಿರೀಕ್ಷಿತ ಘಟನೆಯೊಂದು ಸಂಭವಿಸಲಿತ್ತು.

15, 16. (1) ಯೇಸು ಯಾವ ಸ್ಪಷ್ಟ ಸೂಚನೆಯನ್ನು ಕೊಟ್ಟನು? (2) ಅವನ ಹಿಂಬಾಲಕರು ಅದಕ್ಕೆ ವಿಧೇಯರಾಗುವುದು ಏಕೆ ಅತಿ ಪ್ರಾಮುಖ್ಯವಾಗಿತ್ತು? (3) ರಕ್ಷಣೆ ಹೊಂದಲು ನಾವೇನು ಮಾಡಬೇಕು?

15 ಆಶ್ಚರ್ಯಕರವಾಗಿ ಸೆಸ್ಟಿಯಸ್‌ ಗ್ಯಾಲಸ್‌ ಮತ್ತು ಅವನ ಸೈನ್ಯ ವಾಪಸ್ಸು ಹೋಗತೊಡಗಿದರು. ಯೆಹೂದಿ ದಂಗೆಕೋರರು ಅವರ ಬೆನ್ನಟ್ಟಿದರು. ರೋಮನ್ನರು ಹಾಗೂ ಯೆಹೂದಿ ದಂಗೆಕೋರರು ನಗರದಲ್ಲಿಲ್ಲದ ಕಾರಣ ಯೇಸುವಿನ ಹಿಂಬಾಲಕರಿಗೆ ಅಲ್ಲಿಂದ ಒಡನೆ ಓಡಿಹೋಗುವ ಸಂದರ್ಭ ದೊರೆಯಿತು. ಸ್ವತ್ತುಗಳನ್ನು ಅಲ್ಲೇ ಬಿಟ್ಟು ತಡಮಾಡದೆ ಅಲ್ಲಿಂದ ಹೋಗಬೇಕೆಂದು ಯೇಸು ಸ್ಪಷ್ಟವಾಗಿ ಅವರಿಗೆ ಹೇಳಿದ್ದನು. (ಮತ್ತಾಯ 24:17, 18 ಓದಿ.) ವಿಳಂಬ ಮಾಡದೆ ಅಲ್ಲಿಂದ ಹೊರಡುವುದು ನಿಜವಾಗಿಯೂ ಅಗತ್ಯವಾಗಿತ್ತಾ? ಹೌದು. ಏಕೆಂದರೆ ಕೆಲವೇ ದಿನಗಳಲ್ಲಿ ಯೆಹೂದಿ ದಂಗೆಕೋರರು ಹಿಂದಿರುಗಿ ಬಂದರು. ಯೆರೂಸಲೇಮ್‌ ಮತ್ತು ಯೆಹೂದದ ನಿವಾಸಿಗಳನ್ನು ತಮ್ಮ ದಂಗೆಯಲ್ಲಿ ಜೊತೆಗೂಡಬೇಕೆಂದು ಒತ್ತಾಯಿಸಿದರು. ನಗರದ ಮೇಲೆ ಪ್ರಭುತ್ವ ಸಾಧಿಸಲು ಯೆಹೂದಿ ಪಂಗಡಗಳು ತಮ್ಮತಮ್ಮೊಳಗೆ ಕಾದಾಡಿದಾಗ ನಗರದ ಪರಿಸ್ಥಿತಿ ತೀವ್ರ ಹದಗೆಟ್ಟಿತು. ಇದರಿಂದಾಗಿ ಪಲಾಯನ ಮಾಡುವುದು ಹೆಚ್ಚೆಚ್ಚು ಕಷ್ಟಕರವಾಯಿತು. ರೋಮನ್ನರು ಕ್ರಿ.ಶ. 70ರಲ್ಲಿ ಹಿಂದಿರುಗಿ ಬಂದಾಗಲಂತೂ ಯೆರೂಸಲೇಮಿನಿಂದ ಯಾರೊಬ್ಬರೂ ಹೊರಬರುವುದು ಅಸಾಧ್ಯವಾಯಿತು. (ಲೂಕ 19:43) ಪಲಾಯನಮಾಡಲು ಯಾರು ತಡಮಾಡಿದರೋ ಅವರು ಸಿಕ್ಕಿಬಿದ್ದರು! ಆದರೆ ಯೇಸು ಕೊಟ್ಟ ಸೂಚನೆಯನ್ನು ಪಾಲಿಸಿ ಒಡನೆ ಬೆಟ್ಟಗಳಿಗೆ ಓಡಿಹೋಗಿದ್ದ ಕ್ರೈಸ್ತರು ಜೀವ ಉಳಿಸಿಕೊಂಡರು. ಹೀಗೆ, ತನ್ನ ಜನರನ್ನು ಹೇಗೆ ಪಾರು ಮಾಡಬೇಕೆಂದು ಯೆಹೋವನು ತಿಳಿದಿದ್ದಾನೆ ಎಂಬುದನ್ನು ಅವರು ಸ್ವಂತ ಅನುಭವದಿಂದ ಮನಗಂಡರು. ಇದರಿಂದ ನಾವು ಕಲಿಯುವ ಪಾಠ?

16 ಮಹಾ ಸಂಕಟದ ಸಮಯದಲ್ಲಿ ಕ್ರೈಸ್ತರು ದೇವರ ವಾಕ್ಯದಲ್ಲಿರುವ ಮತ್ತು ಸಂಘಟನೆಯಿಂದ ಬರುವ ಸಲಹೆಗಳಿಗನುಸಾರ ಕ್ರಿಯೆಗೈಯುವುದು ಅಗತ್ಯ. ಉದಾಹರಣೆಗೆ, ‘ಬೆಟ್ಟಗಳಿಗೆ ಓಡಿಹೋಗತೊಡಗುವಂತೆ’ ಯೇಸುವಿತ್ತ ಆಜ್ಞೆ ನಮಗೂ ಅನ್ವಯಿಸುತ್ತದೆ. ನಮ್ಮ ಪಲಾಯನ ಯಾವ ರೀತಿಯದ್ದಾಗಿರುವುದು ಎಂಬುದು ಮುಂದೆ ಗೊತ್ತಾಗಲಿರುವ ಸಂಗತಿ. * ಆದರೂ ಯೇಸು ಕೊಟ್ಟ ಆ ಆಜ್ಞೆಯನ್ನು ನಾವು ಹೇಗೆ ಪಾಲಿಸಬೇಕೆಂದು ಯೆಹೋವನು ಸರಿಯಾದ ಸಮಯದಲ್ಲಿ ಸ್ಪಷ್ಟಪಡಿಸುವನೆಂದು ನಾವು ಖಾತ್ರಿಯಿಂದಿರಬಲ್ಲೆವು. ಆ ಸಮಯದಲ್ಲಿ ನಮಗೆ ಸಿಕ್ಕುವ ಸೂಚನೆಗಳಿಗೆ ವಿಧೇಯರಾದಲ್ಲಿ ಮಾತ್ರ ರಕ್ಷಿಸಲ್ಪಡುವೆವು. ಆದ್ದರಿಂದ ನಾವು ಹೀಗೆ ಕೇಳಿಕೊಳ್ಳೋಣ: ‘ಯೆಹೋವನು ಈಗ ತನ್ನ ಜನರಿಗೆ ಕೊಡುತ್ತಿರುವ ಸಲಹೆಗಳಿಗೆ ನಾನು ಹೇಗೆ ಪ್ರತಿವರ್ತಿಸುತ್ತೇನೆ? ಒಡನೆ ವಿಧೇಯನಾಗುತ್ತೇನಾ? ಇಲ್ಲವೆ ವಿಧೇಯನಾಗಲು ಹಿಂಜರಿಯುತ್ತೇನಾ?’—ಯಾಕೋ. 3:17.

ಈಗಲೇ ಬಲಗೊಳ್ಳಿರಿ

17. ದೇವಜನರ ಮೇಲೆ ಬರಲಿರುವ ಆಕ್ರಮಣದ ಬಗ್ಗೆ ಹಬಕ್ಕೂಕನ ಪ್ರವಾದನೆ ಏನನ್ನು ತಿಳಿಯಪಡಿಸುತ್ತದೆ?

17 ಆರಂಭದಲ್ಲಿ ಹೇಳಲಾದ ಗೋಗನ ಆಕ್ರಮಣದ ಕುರಿತು ಈಗ ಚರ್ಚೆ ಮುಂದುವರಿಸೋಣ. ಇದಕ್ಕೆ ಸಂಬಂಧಿಸಿದ ಪ್ರವಾದನೆಯಲ್ಲಿ ಹಬಕ್ಕೂಕನು ಹೇಳಿದ್ದು: “ಅದು ನನಗೆ ಕೇಳಿಸಲು ನನ್ನ ಹೊಟ್ಟೆಯು ತಳಮಳಗೊಂಡಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು. ವಿಪತ್ಕಾಲವು ಜನರನ್ನು ಎದುರಾಯಿಸಿ ಅವರ ಮೇಲೆ ಬೀಳುವಾಗ ನಾನು ಅದನ್ನು ತಾಳ್ಮೆಯಿಂದ ಕಾದಿರಬೇಕೆಂದು ನನಗೆ ತಿಳಿಯಲು ಕ್ಷಯವು ನನ್ನ ಎಲುಬುಗಳಲ್ಲಿ ಸೇರಿತು, ನಾನು ನಿಂತ ಹಾಗೆಯೇ ನಡುಗಿದೆನು.” (ಹಬ. 3:16) ದೇವಜನರ ಮೇಲೆ ಬರಲಿರುವ ಆಕ್ರಮಣದ ವರದಿಯನ್ನು ಕೇಳಿದ ಮಾತ್ರಕ್ಕೆ ಪ್ರವಾದಿಯ ಹೊಟ್ಟೆ ತಳಮಳಗೊಂಡಿತು, ತುಟಿಗಳು ನಡುಗಿದವು, ಬಲ ಕುಂದಿತು. ಹಬಕ್ಕೂಕನ ಈ ಪ್ರತಿಕ್ರಿಯೆ, ಗೋಗನ ಸೈನ್ಯ ನಮ್ಮ ಮೇಲೆ ಎರಗಿ ಬರುವಾಗ ಪರಿಸ್ಥಿತಿ ಎಷ್ಟೊಂದು ಸಂಕಟಕರವಾಗಿರಬಹುದು ಎಂದು ಸೂಚಿಸುತ್ತದೆ. ಆದರೂ, ಆ ಪ್ರವಾದಿ ಯೆಹೋವನ ಮಹಾ ದಿನಕ್ಕಾಗಿ ತಾಳ್ಮೆಯಿಂದ ಕಾಯಲು ಇಷ್ಟಪಟ್ಟನು. ಯೆಹೋವನು ತನ್ನ ಜನರನ್ನು ರಕ್ಷಿಸುವನೆಂಬ ದೃಢಭರವಸೆ ಅವನಲ್ಲಿತ್ತು. ನಮ್ಮಲ್ಲೂ ಅದೇ ಭರವಸೆ ಇರಲಿ.—ಹಬ. 3:18, 19.

18. (1) ಬರಲಿರುವ ಆಕ್ರಮಣದ ವಿಷಯದಲ್ಲಿ ನಾವು ಭಯಪಡಲು ಕಾರಣವಿಲ್ಲವೇಕೆ? (2) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಿದ್ದೇವೆ?

18 ಯೆಹೋವನಿಗೆ ತನ್ನ ಜನರನ್ನು ರಕ್ಷಿಸುವುದು ಹೇಗೆಂದು ತಿಳಿದಿದೆ ಎನ್ನುವುದನ್ನು ನಾವು ಪರಿಗಣಿಸಿದ ಮೂರು ಉದಾಹರಣೆಗಳು ಸುಸ್ಪಷ್ಟವಾಗಿ ತೋರಿಸುತ್ತವೆ. ಆತನ ಉದ್ದೇಶ ವಿಫಲವಾಗದು! ವಿಜಯವು ಖಚಿತ! ಆದರೆ ಆ ಭವ್ಯ ವಿಜಯದಲ್ಲಿ ಪಾಲಿಗರಾಗಬೇಕಾದರೆ ನಾವು ಕೊನೆಯ ತನಕ ನಂಬಿಗಸ್ತರಾಗಿ ಉಳಿಯಬೇಕು. ಸಮಗ್ರತೆಯನ್ನು ಕಾಪಾಡಿಕೊಳ್ಳಲು ಯೆಹೋವನು ನಮಗೀಗ ಹೇಗೆ ಸಹಾಯ ಮಾಡುತ್ತಾನೆ? ಅದೇ ಮುಂದಿನ ಲೇಖನದ ಮುಖ್ಯ ವಿಷಯವಾಗಿದೆ.

[ಪಾದಟಿಪ್ಪಣಿಗಳು]

^ ಪ್ಯಾರ. 5 2010, ಡಿಸೆಂಬರ್‌ 15ರ ಕಾವಲಿನಬುರುಜು ಪುಟ 30-31 ನೋಡಿ.

^ ಪ್ಯಾರ. 16 1999, ಮೇ 1ರ ಕಾವಲಿನಬುರುಜು, ಪುಟ 19 ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 24ರಲ್ಲಿರುವ ಚಿತ್ರ]

ಫರೋಹನ ಸೈನ್ಯಕ್ಕೆ ಇಸ್ರಾಯೇಲ್ಯರು ಹೆದರಬೇಕಿತ್ತಾ?