ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಕ್ಷಣೆ ಹೊಂದುವಂತೆ ಯೆಹೋವನು ನಮ್ಮನ್ನು ಕಾಪಾಡುತ್ತಾನೆ

ರಕ್ಷಣೆ ಹೊಂದುವಂತೆ ಯೆಹೋವನು ನಮ್ಮನ್ನು ಕಾಪಾಡುತ್ತಾನೆ

ರಕ್ಷಣೆ ಹೊಂದುವಂತೆ ಯೆಹೋವನು ನಮ್ಮನ್ನು ಕಾಪಾಡುತ್ತಾನೆ

“ಕೊನೆಯ ಕಾಲಾವಧಿಯಲ್ಲಿ ಪ್ರಕಟಿಸಲ್ಪಡಲು ಸಿದ್ಧವಾಗಿರುವ ರಕ್ಷಣೆಗಾಗಿ ದೇವರು ನಿಮ್ಮನ್ನು ನಂಬಿಕೆಯ ಮೂಲಕ ತನ್ನ ಶಕ್ತಿಯಿಂದ ಕಾಪಾಡುತ್ತಿದ್ದಾನೆ.” —1 ಪೇತ್ರ 1:5.

ಉತ್ತರಿಸುವಿರಾ?

ಯೆಹೋವನು ನಮ್ಮನ್ನು ಸತ್ಯಾರಾಧನೆಗೆ ಹೇಗೆ ಸೆಳೆದನು?

ಯೆಹೋವನು ನಮ್ಮನ್ನು ಮಾರ್ಗದರ್ಶಿಸುವಂತೆ ಹೇಗೆ ಬಿಡಬಲ್ಲೆವು?

ಯೆಹೋವನು ನಮಗೆ ಉತ್ತೇಜನವನ್ನು ಹೇಗೆ ಒದಗಿಸುತ್ತಾನೆ?

1, 2. (1) ಸಮಗ್ರತೆ ಕಾಪಾಡಿಕೊಳ್ಳಲು ಯೆಹೋವನು ಸಹಾಯ ಮಾಡುತ್ತಾನೆಂದು ಯಾವುದು ಆಶ್ವಾಸನೆ ಕೊಡುತ್ತದೆ? (2) ಯೆಹೋವನು ನಮ್ಮಲ್ಲಿ ಒಬ್ಬೊಬ್ಬರನ್ನೂ ಎಷ್ಟು ಚೆನ್ನಾಗಿ ಬಲ್ಲನು?

“ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು.” (ಮತ್ತಾ. 24:13) ಯೇಸುವಿನ ಈ ಮಾತಿನಲ್ಲಿ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೇನೆಂದರೆ, ಸೈತಾನನ ಲೋಕದ ಮೇಲೆ ದೇವರು ತರಲಿರುವ ನಾಶನದಿಂದ ನಾವು ಪಾರಾಗಬೇಕಾದರೆ ಕೊನೆಯ ತನಕ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು. ಆದರೆ ನಮ್ಮ ಸ್ವಂತ ವಿವೇಕ ಅಥವಾ ಬಲದಿಂದ ನಾವು ತಾಳಿಕೊಳ್ಳಬೇಕೆಂದು ಯೆಹೋವನು ಅಪೇಕ್ಷಿಸುವುದಿಲ್ಲ. ಬೈಬಲ್‌ ನಮಗೆ ಈ ಆಶ್ವಾಸನೆ ಕೊಡುತ್ತದೆ: “ದೇವರು ನಂಬಿಗಸ್ತನು; ನೀವು ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಪ್ರಲೋಭಿಸಲ್ಪಡುವಂತೆ ಆತನು ಅನುಮತಿಸುವುದಿಲ್ಲ; ನೀವು ತಾಳಿಕೊಳ್ಳಲು ಶಕ್ತರಾಗುವಂತೆ ಪ್ರಲೋಭನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಆತನು ಸಿದ್ಧಪಡಿಸುವನು.” (1 ಕೊರಿಂ. 10:13) ಈ ಮಾತುಗಳಿಂದ ನಾವೇನು ಕಲಿಯುತ್ತೇವೆ?

2 ನಾವು ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಪ್ರಲೋಭಿಸಲ್ಪಡುವಂತೆ ಯೆಹೋವನು ಅನುಮತಿಸುವುದಿಲ್ಲ ಎಂಬ ವಿಷಯ ಆತನಿಗೆ ನಮ್ಮ ಕುರಿತ ಪ್ರತಿಯೊಂದು ವಿವರ ತಿಳಿದಿದೆ ಎಂದು ತೋರಿಸುತ್ತದೆ. ಯಾವ ಸವಾಲುಗಳನ್ನು ಎದುರಿಸುತ್ತಿದ್ದೇವೆ, ನಮ್ಮ ವ್ಯಕ್ತಿತ್ವ ಎಂಥದ್ದು, ಎಷ್ಟನ್ನು ಮಾತ್ರ ತಾಳಿಕೊಳ್ಳಬಲ್ಲೆವು—ಇದೆಲ್ಲವನ್ನು ಆತನು ಬಲ್ಲನು. ದೇವರು ನಮ್ಮನ್ನು ನಿಜವಾಗಿಯೂ ಅಷ್ಟು ಸಂಪೂರ್ಣವಾಗಿ ತಿಳಿದಿರುತ್ತಾನೊ? ಹೌದು. ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬನನ್ನು ವೈಯಕ್ತಿಕವಾಗಿ ತಿಳಿದಿದ್ದಾನೆ ಎಂದು ಬೈಬಲ್‌ ಹೇಳುತ್ತದೆ. ನಮ್ಮ ದೈನಂದಿನ ಚಟುವಟಿಕೆಗಳು ಮತ್ತು ರೂಢಿಗಳ ಪರಿಚಯ ಆತನಿಗಿದೆ. ಅಷ್ಟೇ ಅಲ್ಲ, ಆತನು ನಮ್ಮ ಯೋಚನೆಗಳನ್ನೂ ಹೃದಯದ ಇಂಗಿತಗಳನ್ನೂ ಬಲ್ಲನು.—ಕೀರ್ತನೆ 139:1-6 ಓದಿ.

3, 4. (1) ಯೆಹೋವನು ನಮ್ಮಲ್ಲಿ ಒಬ್ಬೊಬ್ಬರನ್ನೂ ಗಮನಿಸುತ್ತಾನೆ ಎನ್ನುವುದನ್ನು ದಾವೀದನ ಅನುಭವ ಹೇಗೆ ತೋರಿಸುತ್ತದೆ? (2) ಯೆಹೋವನು ಇಂದು ಯಾವ ಗಮನಾರ್ಹ ಕೆಲಸವನ್ನು ಪೂರೈಸುತ್ತಿದ್ದಾನೆ?

3 ಅಲ್ಪ ಮಾನವರಾದ ನಮ್ಮಲ್ಲಿ ದೇವರು ಇಷ್ಟೊಂದು ಆಸಕ್ತಿ ವಹಿಸುವುದು ಅಸಹಜವಾಗಿ ತೋರುತ್ತದೆಯೇ? ಕೀರ್ತನೆಗಾರ ದಾವೀದನ ಮನದಲ್ಲೂ ಇದೇ ಪ್ರಶ್ನೆಯಿತ್ತು. ಅವನು ಯೆಹೋವನಿಗೆ, “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ— ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು?” ಎಂದು ಕೇಳಿದನು. (ಕೀರ್ತ. 8:3, 4) ಯೆಹೋವನು ದಾವೀದನಲ್ಲಿ ವಹಿಸಿದ ಆಸಕ್ತಿಯೇ ಈ ಪ್ರಶ್ನೆ ಕೇಳುವಂತೆ ಅವನನ್ನು ಪ್ರಚೋದಿಸಿದ್ದಿರಬೇಕು. ಯೆಹೋವನು ಅವನನ್ನು “ತನಗೆ ಒಪ್ಪುವ . . . ಪುರುಷ” ಎಂದು ಹೇಳಿದ್ದನು. “ಕುರಿಗಳ ಹಿಂದೆ ಹೋಗುತ್ತಿದ್ದ” ಅವನನ್ನು ಯೆಹೋವನು ತನ್ನ “ಪ್ರಜೆಗಳಾದ ಇಸ್ರಾಯೇಲ್ಯರ ಮೇಲೆ ನಾಯಕನನ್ನಾಗಿ” ನೇಮಿಸಿದ್ದನು. (1 ಸಮು. 13:14; 2 ಸಮು. 7:8) ಇಷಯನ ಕೊನೆಯ ಮಗನಾದ ದಾವೀದ ಕುರಿಕಾಯುವ ಸಾಧಾರಣ ಹುಡುಗನಾಗಿದ್ದರೂ ವಿಶ್ವದ ಸೃಷ್ಟಿಕರ್ತನಾದ ಯೆಹೋವನು ಅವನ ಹೃದಯದ ಧ್ಯಾನಕ್ಕೂ ಆಲೋಚನೆಗಳಿಗೂ ಗಮನಕೊಟ್ಟನು. ಇದನ್ನು ಗ್ರಹಿಸಿದಾಗ ದಾವೀದನಿಗೆ ಹೇಗನಿಸಿದ್ದಿರಬೇಕೆಂದು ಸ್ವಲ್ಪ ಯೋಚಿಸಿ.

4 ಯೆಹೋವನು ಇಂದು ನಮ್ಮಲ್ಲಿ ತೋರಿಸುವ ವೈಯಕ್ತಿಕ ಆಸಕ್ತಿ ಸಹ ಅಷ್ಟಿಷ್ಟಲ್ಲ. ಆತನು ‘ಸಮಸ್ತಜನಾಂಗಗಳ ಇಷ್ಟವಸ್ತುಗಳನ್ನು’ ಸತ್ಯಾರಾಧನೆಯಲ್ಲಿ ಒಟ್ಟುಗೂಡಿಸುತ್ತಿದ್ದಾನೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅವರಿಗೆ ಸಹಾಯ ಮಾಡುತ್ತಿದ್ದಾನೆ. (ಹಗ್ಗಾ. 2:7) ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ಯೆಹೋವನು ಹೇಗೆ ಸಹಾಯ ಮಾಡುತ್ತಾನೆ? ಇದನ್ನು ಅರ್ಥಮಾಡಿಕೊಳ್ಳಲು ಆತನು ಜನರನ್ನು ಸತ್ಯಾರಾಧನೆಗೆ ಹೇಗೆ ಸೆಳೆಯುತ್ತಾನೆ ಎನ್ನುವುದನ್ನು ಮೊದಲು ಪರಿಗಣಿಸೋಣ.

ದೇವರು ನಮ್ಮನ್ನು ಸೆಳೆದಿದ್ದಾನೆ

5. ಯೆಹೋವನು ಜನರನ್ನು ತನ್ನ ಮಗನ ಬಳಿಗೆ ಹೇಗೆ ಸೆಳೆಯುತ್ತಾನೆ? ಉದಾಹರಣೆ ಕೊಡಿ.

5 “ನನ್ನನ್ನು ಕಳುಹಿಸಿದ ತಂದೆಯು ಸೆಳೆದ ಹೊರತು ಯಾರೊಬ್ಬನೂ ನನ್ನ ಬಳಿಗೆ ಬರಲಾರನು” ಎಂದು ಯೇಸು ಹೇಳಿದನು. (ಯೋಹಾ. 6:44) ಹಾಗಾದರೆ ಕ್ರಿಸ್ತನ ಶಿಷ್ಯರಾಗಲು ದೇವರ ಸಹಾಯ ಬೇಕೇಬೇಕೆಂದು ಈ ಮಾತುಗಳು ಸೂಚಿಸುತ್ತವೆ. ಯೆಹೋವನು ವಿನಮ್ರ ಜನರನ್ನು ತನ್ನ ಮಗನ ಕಡೆಗೆ ಸೆಳೆಯುವುದು ಹೇಗೆ? ಸುವಾರ್ತೆ ಸಾರುವ ಕೆಲಸದ ಮೂಲಕ ಮತ್ತು ಪವಿತ್ರಾತ್ಮದ ಮೂಲಕವೇ. ಈ ಸಂಬಂಧದಲ್ಲಿ ಒಂದು ಉದಾಹರಣೆಯನ್ನು ಪರಿಗಣಿಸಿ. ಪೌಲನೂ ಅವನ ಮಿಷನರಿ ಸಂಗಡಿಗರೂ ಫಿಲಿಪ್ಪಿಯಲ್ಲಿದ್ದಾಗ ಲುದ್ಯಳೆಂಬ ಸ್ತ್ರೀಗೆ ಸುವಾರ್ತೆ ಸಾರಿದರು. “ಪೌಲನು ಹೇಳುತ್ತಿದ್ದ ಮಾತುಗಳಿಗೆ ನಿಕಟವಾಗಿ ಗಮನಕೊಡುವಂತೆ ಯೆಹೋವನು ಅವಳ ಹೃದಯವನ್ನು ವಿಶಾಲವಾಗಿ ತೆರೆದನು” ಎಂದು ಬೈಬಲ್‌ ಹೇಳುತ್ತದೆ. ಹೌದು, ಸಂದೇಶದ ಅರ್ಥವನ್ನು ಗ್ರಹಿಸುವಂತೆ ಲುದ್ಯಳಿಗೆ ದೇವರು ತನ್ನ ಪವಿತ್ರಾತ್ಮದ ಸಹಾಯವನ್ನು ನೀಡಿದನು. ಪರಿಣಾಮ? ಆಕೆಯೂ ಆಕೆಯ ಮನೆಯವರೂ ದೀಕ್ಷಾಸ್ನಾನ ಹೊಂದಿದರು.—ಅ.ಕಾ. 16:13-15.

6. ನಮ್ಮೆಲ್ಲರನ್ನು ಯೆಹೋವನು ಸತ್ಯಾರಾಧನೆಗೆ ಹೇಗೆ ಸೆಳೆದನು?

6 ಯೆಹೋವನು ತನ್ನ ಪುತ್ರನೆಡೆಗೆ ಸೆಳೆದದ್ದು ಲುದ್ಯಳನ್ನು ಮಾತ್ರವೋ? ಅಲ್ಲ. ನೀವು ಒಬ್ಬ ಸಮರ್ಪಿತ ಕ್ರೈಸ್ತರಾಗಿದ್ದರೆ ನಿಮ್ಮನ್ನು ಸಹ ದೇವರು ಸತ್ಯಾರಾಧನೆಗೆ ಸೆಳೆದಿದ್ದಾನೆ ಎಂದರ್ಥ. ನಮ್ಮ ತಂದೆಯಾದ ಯೆಹೋವನು ಲುದ್ಯಳ ಹೃದಯದಲ್ಲಿ ಒಳ್ಳೇದೇನನ್ನೋ ನೋಡಿದಂತೆ ನಿಮ್ಮಲ್ಲಿಯೂ ಏನೋ ಒಳ್ಳೆಯದನ್ನು ನೋಡಿದ್ದಾನೆ. ನೀವು ಸುವಾರ್ತೆಯನ್ನು ಕೇಳಿದಾಗ ಯೆಹೋವನು ನಿಮಗೆ ಪವಿತ್ರಾತ್ಮವನ್ನು ಕೊಡುವ ಮೂಲಕ ನೀವದನ್ನು ಅರ್ಥಮಾಡಿಕೊಂಡು ಸ್ವೀಕರಿಸುವಂತೆ ಸಹಾಯ ಮಾಡಿದನು. (1 ಕೊರಿಂ. 2:11, 12) ನೀವು ದೇವರ ಚಿತ್ತವನ್ನು ಕಲಿತು ಅದಕ್ಕೆ ಹೊಂದಿಕೆಯಲ್ಲಿ ಜೀವಿಸಲು ಪ್ರಯತ್ನಿಸಿದಾಗ ನಿಮ್ಮ ಪ್ರಯತ್ನಗಳನ್ನು ಆತನು ಆಶೀರ್ವದಿಸಿದನು. ನಿಮ್ಮ ಜೀವನವನ್ನು ಆತನಿಗೆ ಸಮರ್ಪಿಸಿದಾಗ ಆತನ ಹೃದಯ ಉಲ್ಲಾಸಿಸಿತು. ಹೌದು, ನೀವು ಜೀವದ ಮಾರ್ಗದಲ್ಲಿ ನಡೆಯಲು ಆರಂಭಿಸಿದಂದಿನಿಂದ ಪ್ರತಿಯೊಂದು ಹೆಜ್ಜೆಯನ್ನಿಡುವಾಗಲೂ ಯೆಹೋವನು ನಿಮ್ಮೊಂದಿಗಿದ್ದನು.

7. ನಾವು ನಂಬಿಗಸ್ತರಾಗಿ ಉಳಿಯಲು ದೇವರು ಸಹಾಯ ಮಾಡುವನೆಂದು ನಮಗೆ ಹೇಗೆ ಗೊತ್ತು?

7 ಜೀವದ ಮಾರ್ಗದಲ್ಲಿ ಹೆಜ್ಜೆಯಿಡಲು ನಮಗೆ ಸಹಾಯ ಮಾಡಿದಾತನು ನಾವು ನಂಬಿಗಸ್ತರಾಗಿ ಮುಂದುವರಿಯಲು ಈಗ ಸಹಾಯ ನೀಡದೆ ನಮ್ಮಷ್ಟಕ್ಕೆ ಬಿಟ್ಟುಬಿಡುವನೇ? ಖಂಡಿತ ಇಲ್ಲ. ನಾವು ಸ್ವಪ್ರಯತ್ನದಿಂದ ಹೇಗೆ ಸತ್ಯಕ್ಕೆ ಬರಲಿಲ್ಲವೋ ಹಾಗೆಯೇ ಸತ್ಯದಲ್ಲಿ ನಿಲ್ಲಲು ನಮ್ಮ ಸ್ವಂತ ಪ್ರಯತ್ನದಿಂದ ಸಾಧ್ಯವಿಲ್ಲವೆಂದು ಯೆಹೋವನಿಗೆ ಗೊತ್ತು. ಅಪೊಸ್ತಲ ಪೇತ್ರನು ಅಭಿಷಿಕ್ತ ಕ್ರೈಸ್ತರಿಗೆ ಹೀಗೆ ಬರೆದನು: “ಕೊನೆಯ ಕಾಲಾವಧಿಯಲ್ಲಿ ಪ್ರಕಟಿಸಲ್ಪಡಲು ಸಿದ್ಧವಾಗಿರುವ ರಕ್ಷಣೆಗಾಗಿ ದೇವರು ನಿಮ್ಮನ್ನು ನಂಬಿಕೆಯ ಮೂಲಕ ತನ್ನ ಶಕ್ತಿಯಿಂದ ಕಾಪಾಡುತ್ತಿದ್ದಾನೆ.” (1 ಪೇತ್ರ 1:5) ಈ ಮಾತುಗಳು ಎಲ್ಲ ಕ್ರೈಸ್ತರಿಗೆ ಅನ್ವಯಿಸುತ್ತವೆ. ಇಂದು ಯೆಹೋವನು ನಮ್ಮನ್ನು ಹೇಗೆ ಕಾಪಾಡುತ್ತಿದ್ದಾನೆ? ಈ ಪ್ರಶ್ನೆಗೆ ನಾವೆಲ್ಲರೂ ಉತ್ತರವನ್ನು ತಿಳಿದುಕೊಳ್ಳಬೇಕು. ಏಕೆಂದರೆ ದೇವರಿಗೆ ನಂಬಿಗಸ್ತರಾಗಿ ಉಳಿಯಲು ನಮ್ಮೆಲ್ಲರಿಗೂ ಆತನ ಸಹಾಯ ಅಗತ್ಯ.

ತಪ್ಪು ಹೆಜ್ಜೆಯನ್ನಿಡದಂತೆ ಸಹಾಯ

8. ನಾವು ತಪ್ಪು ಹೆಜ್ಜೆಯನ್ನಿಡುವ ಅಪಾಯಕ್ಕೆ ಏಕೆ ಒಳಗಾಗಸಾಧ್ಯ?

8 ಜೀವನದ ಒತ್ತಡಗಳು ಮತ್ತು ನಮ್ಮ ಸ್ವಂತ ಅಪರಿಪೂರ್ಣತೆಗಳು ನಮ್ಮ ಗಮನವನ್ನು ಆಧ್ಯಾತ್ಮಿಕ ವಿಷಯಗಳಿಂದ ಬೇರೆಡೆಗೆ ತಿರುಗಿಸಬಲ್ಲವು. ಆಗ ನಮಗರಿವಿಲ್ಲದೆ ತಪ್ಪು ಹೆಜ್ಜೆಯನ್ನಿಡುವ ಅಪಾಯಕ್ಕೆ ಒಳಗಾಗಬಹುದು. (ಗಲಾತ್ಯ 6:1 ಓದಿ.) ಇಂಥದ್ದೇ ಅನುಭವ ದಾವೀದನಿಗಾಯಿತು.

9, 10. (1) ದಾವೀದನು ತಪ್ಪು ಹೆಜ್ಜೆಯನ್ನಿಡದಂತೆ ಯೆಹೋವನು ಹೇಗೆ ತಡೆದನು? (2) ದೇವರು ಇಂದು ನಮಗೆ ಹೇಗೆ ಸಹಾಯ ಮಾಡುತ್ತಾನೆ?

9 ರಾಜ ಸೌಲನು ದಾವೀದನನ್ನು ಕೊಲ್ಲಲು ಬೆನ್ನಟ್ಟುತ್ತಿದ್ದಾಗ ಅವನ ಮೇಲೆ ಸೇಡು ತೀರಿಸಿಕೊಳ್ಳಲು ದಾವೀದನಿಗೆ ಅವಕಾಶ ಸಿಕ್ಕಿತು. ಆದರೆ ಅವನು ಸ್ವನಿಯಂತ್ರಣ ತೋರಿಸಿದನು. (1 ಸಮು. 24:2-7) ಅದಾಗಿ ಸ್ವಲ್ಪದರಲ್ಲಿ ದಾವೀದನ ಅಪರಿಪೂರ್ಣ ಪ್ರವೃತ್ತಿ ಅವನ ಮೇಲೆ ಜಯ ಸಾಧಿಸಿತು. ಒಮ್ಮೆ ತನಗೂ ತನ್ನ ಸೇವಕರಿಗೂ ಆಹಾರ ಬೇಕಾದಾಗ ನಾಬಾಲನೆಂಬ ಜೊತೆ ಇಸ್ರಾಯೇಲ್ಯನ ಬಳಿ ಗೌರವಪೂರ್ವಕವಾಗಿ ಆಹಾರಕ್ಕಾಗಿ ಕೇಳಿಕೊಂಡನು. ಆದರೆ ನಾಬಾಲನು ಅವನನ್ನು ತುಚ್ಛೀಕರಿಸಿ ಮಾತಾಡಿದಾಗ ದಾವೀದನು ಕೋಪೋದ್ರಿಕ್ತನಾಗಿ ನಾಬಾಲನ ಇಡೀ ಕುಟುಂಬದ ಮೇಲೆ ಸೇಡು ತೀರಿಸಲು ಹೊರಟನು. ನಿರಪರಾಧಿಗಳನ್ನು ಕೊಲ್ಲುವಲ್ಲಿ ತಾನು ದೇವರ ಮುಂದೆ ರಕ್ತಾಪರಾಧಿಯಾಗುತ್ತೇನೆ ಎಂಬುದನ್ನು ಅವನು ಗ್ರಹಿಸಲಿಲ್ಲ. ನಾಬಾಲನ ಹೆಂಡತಿ ಅಬೀಗೈಲಳು ಸರಿಯಾದ ಸಮಯಕ್ಕೆ ಮಧ್ಯೆ ಪ್ರವೇಶಿಸಿದ್ದರಿಂದ ದಾವೀದನು ಆ ಘೋರ ಪಾಪ ಮಾಡಲಿಲ್ಲ. ಇದರಲ್ಲಿ ಯೆಹೋವನ ಹಸ್ತವಿದೆ ಎಂಬುದನ್ನು ಗುರುತಿಸುತ್ತ ದಾವೀದನು ಆಕೆಗೆ ಹೇಳಿದ್ದು: “ಈಹೊತ್ತು ನನ್ನನ್ನು ಎದುರುಗೊಳ್ಳುವದಕ್ಕಾಗಿ ನಿನ್ನನ್ನು ಕಳುಹಿಸಿದ ಇಸ್ರಾಯೇಲ್‌ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಸ್ವಹಸ್ತದಿಂದ ಮುಯ್ಯಿ ತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ ನಿನ್ನ ಬುದ್ಧಿಯೂ ಸ್ತೋತ್ರಾರ್ಹವೇ ಸರಿ.”—1 ಸಮು. 25:9-13, 21, 22, 32, 33.

10 ಈ ಘಟನೆಯಿಂದ ನಮಗಿರುವ ಪಾಠ? ದಾವೀದನು ತಪ್ಪು ಹೆಜ್ಜೆಯಿಡುವುದನ್ನು ತಡೆಯಲು ಯೆಹೋವನು ಅಬೀಗೈಲಳನ್ನು ಉಪಯೋಗಿಸಿದನು. ಇಂದು ಸಹ ಯೆಹೋವನು ಹೆಚ್ಚುಕಡಿಮೆ ಅದೇ ರೀತಿಯಲ್ಲಿ ನಮಗೆ ಸಹಾಯಮಾಡುತ್ತಾನೆ. ಆದರೆ ನಾವು ಇನ್ನೇನು ತಪ್ಪು ಮಾಡಲಿದ್ದೇವೆ ಎನ್ನುವಾಗ ದೇವರು ಯಾರನ್ನಾದರೂ ಕಳುಹಿಸಿ ನಮ್ಮನ್ನು ತಡೆಯುತ್ತಾನೆಂದು ನಾವು ನಿರೀಕ್ಷಿಸಬಾರದು. ಯಾವುದೇ ಒಂದು ಸನ್ನಿವೇಶದಲ್ಲಿ ದೇವರು ಹೀಗೆಯೇ ಕ್ರಿಯೆಗೈಯುವನು ಎಂದು ಸಹ ನಾವು ಊಹಿಸಲು ಸಾಧ್ಯವಿಲ್ಲ. ಆತನು ತನ್ನ ಉದ್ದೇಶವನ್ನು ನೆರವೇರಿಸುವ ಸಲುವಾಗಿ ಏನನ್ನು ಅನುಮತಿಸುವನು ಎನ್ನುವದನ್ನು ಸಹ ನಾವು ತಿಳಿಯಲಾರೆವು. (ಪ್ರಸಂ. 11:5) ಹಾಗಿದ್ದರೂ ನಮ್ಮ ಸನ್ನಿವೇಶವನ್ನು ಯೆಹೋವನು ಯಾವಾಗಲೂ ಬಲ್ಲವನಾಗಿದ್ದಾನೆ ಮತ್ತು ನಾವಾತನಿಗೆ ನಂಬಿಗಸ್ತರಾಗಿ ಉಳಿಯಲು ಸಹಾಯ ನೀಡುತ್ತಾನೆ ಎಂದು ನಾವು ಭರವಸೆಯಿಂದಿರಬಲ್ಲೆವು. ಏಕೆಂದರೆ “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು” ಎಂದು ಆತನು ನಮಗೆ ಮಾತುಕೊಟ್ಟಿದ್ದಾನೆ. (ಕೀರ್ತ. 32:8) ಯೆಹೋವನು ನಮಗೆ ಹೇಗೆ ಆಲೋಚನೆ ಹೇಳುತ್ತಾನೆ? ಅದರಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು? ಇಂದು ಸಹ ಯೆಹೋವನು ತನ್ನ ಜನರನ್ನು ನಡೆಸುತ್ತಿದ್ದಾನೆ ಎನ್ನುವುದಕ್ಕೆ ನಮಗೆ ಯಾವ ಖಾತ್ರಿಯಿದೆ? ಈ ಪ್ರಶ್ನೆಗಳಿಗೆ ಪ್ರಕಟನೆ ಪುಸ್ತಕವು ಹೇಗೆ ಉತ್ತರ ನೀಡುತ್ತದೆಂದು ಗಮನಿಸಿ.

ಸಲಹೆಯಿಂದ ಸಂರಕ್ಷಣೆ

11. ಯೆಹೋವನಿಗೆ ತನ್ನ ಜನರ ಸಭೆಗಳಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ಎಷ್ಟರಮಟ್ಟಿಗೆ ತಿಳಿದಿದೆ?

11 ಮಹಿಮೆಗೇರಿಸಲ್ಪಟ್ಟ ಯೇಸು ಕ್ರಿಸ್ತನು ಏಷ್ಯಾ ಮೈನರ್‌ನ ಏಳು ಸಭೆಗಳನ್ನು ಪರಿಶೀಲಿಸುವ ದರ್ಶನ ಪ್ರಕಟನೆ 2 ಮತ್ತು 3ನೆಯ ಅಧ್ಯಾಯಗಳಲ್ಲಿ ದಾಖಲೆಯಾಗಿದೆ. ಕ್ರಿಸ್ತನು ಸಭೆಯ ಸಾಮಾನ್ಯ ಆಗುಹೋಗುಗಳನ್ನು ಮಾತ್ರವಲ್ಲ ನಿರ್ದಿಷ್ಟ ಸನ್ನಿವೇಶವನ್ನೂ ನೋಡುತ್ತಾನೆಂದು ಆ ದರ್ಶನ ತಿಳಿಸುತ್ತದೆ. ಅವನು ಸಭೆಗಳಿಗೆ ಪ್ರಶಂಸೆಯನ್ನೂ ಅಗತ್ಯವಿದ್ದಾಗ ಸಲಹೆಯನ್ನೂ ಕೊಟ್ಟನು. ಕೆಲವು ಬಾರಿ ಸಭೆಯಲ್ಲಿದ್ದ ವ್ಯಕ್ತಿಗಳ ಕುರಿತೂ ಮಾತಾಡಿದನು. ಇದೇನನ್ನು ಸೂಚಿಸುತ್ತದೆ? ಆ ಏಳು ಸಭೆಗಳು 1914ರ ನಂತರದ ಅಭಿಷಿಕ್ತ ಕ್ರೈಸ್ತರನ್ನು ಸೂಚಿಸುತ್ತವೆ. ಕ್ರಿಸ್ತನು ಆ ಸಲಹೆಯನ್ನು ಮುಖ್ಯವಾಗಿ ಅಭಿಷಿಕ್ತರಿಗೆ ಕೊಟ್ಟಿರುವುದಾದರೂ ಇಂದು ಭೂವ್ಯಾಪಕವಾಗಿರುವ ದೇವಜನರ ಎಲ್ಲ ಸಭೆಗಳು ಅದರಿಂದ ಪ್ರಯೋಜನ ಪಡೆಯಬಲ್ಲವು. ಹಾಗಿರುವುದರಿಂದ ಯೆಹೋವನು ಇಂದು ತನ್ನ ಪುತ್ರನ ಮೂಲಕ ತನ್ನ ಜನರನ್ನು ಕ್ರಿಯಾಶೀಲವಾಗಿ ಮುನ್ನಡೆಸುತ್ತಿದ್ದಾನೆ ಎಂದು ಹೇಳಸಾಧ್ಯವಿದೆ. ಆ ಮಾರ್ಗದರ್ಶನದಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?

12. ಯೆಹೋವನು ನಮ್ಮ ಕೈಹಿಡಿದು ನಡೆಸುವಂತೆ ನಾವು ಹೇಗೆ ಬಿಡಬಲ್ಲೆವು?

12 ವೈಯಕ್ತಿಕ ಅಧ್ಯಯನವು ನಾವು ಯೆಹೋವನ ಪ್ರೀತಿಯ ಮಾರ್ಗದರ್ಶನದಿಂದ ಪ್ರಯೋಜನ ಪಡೆಯಬಲ್ಲ ಒಂದು ವಿಧವಾಗಿದೆ. ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ವರ್ಗ ಒದಗಿಸುವ ಪ್ರಕಾಶನಗಳ ಮೂಲಕ ಯೆಹೋವನು ಬೈಬಲ್‌ ಸಲಹೆಯ ಭಂಡಾರವನ್ನೇ ದಯಪಾಲಿಸಿದ್ದಾನೆ. (ಮತ್ತಾ. 24:45) ಇದರಿಂದ ಪ್ರಯೋಜನ ಪಡೆಯಬೇಕಾದರೆ ನಾವು ಸಮಯ ತಕ್ಕೊಂಡು ಅಧ್ಯಯನ ಮಾಡಿ ಕಲಿತದ್ದನ್ನು ಅನ್ವಯಿಸಿಕೊಳ್ಳಬೇಕು. ನಾವು ವೈಯಕ್ತಿಕ ಅಧ್ಯಯನ ಮಾಡುವಾಗ ಯೆಹೋವನು ನಮ್ಮನ್ನು ಮಾರ್ಗದರ್ಶಿಸುವಂತೆ ಬಿಟ್ಟುಕೊಡುತ್ತೇವೆ. ಇದು ‘ಎಡವಿಬೀಳುವುದರಿಂದ ನಮ್ಮನ್ನು ಕಾಪಾಡುತ್ತದೆ.’ (ಯೂದ 24) ನಮ್ಮ ಸಾಹಿತ್ಯದಲ್ಲಿ ಬಂದಿರುವ ಯಾವುದಾದರೂ ಲೇಖನವನ್ನು ಓದಿದಾಗ ‘ಇದು ನನಗಾಗಿಯೇ ಬರೆದ ಹಾಗಿದೆ’ ಎಂದು ನಿಮಗೆ ಅನಿಸಿದೆಯಾ? ಹಾಗಾದರೆ ಅದರಲ್ಲಿ ಕೊಡಲಾಗಿರುವ ತಿದ್ದುಪಾಟು ಯೆಹೋವನಿಂದಲೇ ಬಂದಿದೆಯೆಂದು ತಿಳಿದು ಅದನ್ನು ಅಂಗೀಕರಿಸಿರಿ. ನಿಮ್ಮ ಸ್ನೇಹಿತನು ನಿಮ್ಮನ್ನು ತಟ್ಟಿ ಒಂದು ವಿಚಾರವನ್ನು ನಿಮ್ಮ ಗಮನಕ್ಕೆ ತರುವಂತೆಯೇ ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ನಿಮ್ಮ ನಡತೆ ಅಥವಾ ಸ್ವಭಾವದಲ್ಲಿ ಯಾವ ಪ್ರಗತಿ ಮಾಡಬೇಕು ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತಾನೆ. ಪವಿತ್ರಾತ್ಮ ನಮಗೆ ಮಾರ್ಗದರ್ಶನೆ ನೀಡುವಾಗ ಶೀಘ್ರವಾಗಿ ಸ್ಪಂದಿಸುವಲ್ಲಿ ಯೆಹೋವನು ನಮ್ಮನ್ನು ಕೈಹಿಡಿದು ನಡೆಸುವಂತೆ ನಾವು ಬಿಡುತ್ತಿರುವೆವು. (ಕೀರ್ತನೆ 139:23, 24 ಓದಿ.) ಹಾಗಾಗಿ ನಮ್ಮ ಅಧ್ಯಯನ ರೂಢಿ ಹೇಗಿದೆ ಎಂದು ಪರೀಕ್ಷಿಸಿಕೊಳ್ಳೋಣ.

13. ನಮ್ಮ ಅಧ್ಯಯನದ ರೂಢಿಗಳನ್ನು ಪರೀಕ್ಷಿಸುವುದು ವಿವೇಕಯುತವೇಕೆ?

13 ಮನೋರಂಜನೆಯಲ್ಲಿ ಮಿತಿಮೀರಿ ಸಮಯ ಕಳೆಯುವಲ್ಲಿ ವೈಯಕ್ತಿಕ ಅಧ್ಯಯನಕ್ಕೆ ಸಾಕಷ್ಟು ಸಮಯ ಸಿಗದೇ ಹೋಗಬಹುದು. ಒಬ್ಬ ಸಹೋದರನು ಏನನ್ನುತ್ತಾನೆ ಕೇಳಿ: “ವೈಯಕ್ತಿಕ ಅಧ್ಯಯನಕ್ಕೆ ಸಮಯ ಮಾಡಿಕೊಳ್ಳುವುದು ಕಷ್ಟ. ಏಕೆಂದರೆ ಮನೋರಂಜನೆ ಇಂದು ಹಿಂದೆಂದಿಗಿಂತಲೂ ಹೆಚ್ಚು ಲಭ್ಯವಿದೆ. ಮಾತ್ರವಲ್ಲ ಹೆಚ್ಚು ಅಗ್ಗವೂ ಆಗಿದೆ. ಅದಕ್ಕಾಗಿ ಹೆಚ್ಚು ದೂರ ಹೋಗಬೇಕೆಂದಿಲ್ಲ. ಟಿವಿ, ಕಂಪ್ಯೂಟರ್‌, ಮೊಬೈಲ್‌ನಲ್ಲಿಯೂ ಲಭ್ಯ. ಎಲ್ಲೆಲ್ಲಿಯೂ ಅದೇ ರಾರಾಜಿಸುತ್ತದೆ.” ನಾವು ಜಾಗರೂಕರಾಗಿ ಇರದಿದ್ದಲ್ಲಿ ಆಳವಾದ ವೈಯಕ್ತಿಕ ಅಧ್ಯಯನಕ್ಕೆ ಕೊಡಬೇಕಾದ ಸಮಯವು ಕಡಿಮೆಯಾಗುತ್ತಾ ಕೊನೆಗೆ ಅಧ್ಯಯನಕ್ಕಾಗಿ ಸಮಯವೇ ಇಲ್ಲದಂತಾಗುವುದು. (ಎಫೆ. 5:15-17) ಆದುದರಿಂದ ನಾವು ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳೋಣ: ‘ದೇವರ ವಾಕ್ಯವನ್ನು ಹೆಚ್ಚು ಆಳವಾಗಿ ಅಧ್ಯಯನ ಮಾಡಲು ನಾನು ಎಷ್ಟು ಬಾರಿ ಸಮಯ ತಕ್ಕೊಳ್ಳುತ್ತೇನೆ? ಭಾಷಣ ಅಥವಾ ಕೂಟದ ಭಾಗವನ್ನು ತಯಾರಿಸುವಾಗ ಮಾತ್ರನಾ?’ ಬೈಬಲಿನಲ್ಲಿರುವ ಯೆಹೋವನ ವಿವೇಕವನ್ನು ನಿಕ್ಷೇಪದಂತೆ ಆಳವಾಗಿ ಹುಡುಕಲು ಕುಟುಂಬ ಆರಾಧನೆ ಅಥವಾ ವೈಯಕ್ತಿಕ ಅಧ್ಯಯನದ ಸಮಯವನ್ನು ಸದುಪಯೋಗಿಸೋಣ. ಈ ವಿವೇಕವು ನಮ್ಮನ್ನು ಕಾಪಾಡುತ್ತಾ ಕೊನೆಯ ವರೆಗೆ ನಂಬಿಗಸ್ತರಾಗಿ ಉಳಿಯಲು ಸಹಾಯ ಮಾಡುತ್ತದೆ.—ಜ್ಞಾನೋ. 2:1-5.

ಉತ್ತೇಜನದ ಮೂಲಕ ಬಲ

14. ಯೆಹೋವನು ನಮ್ಮ ಅನಿಸಿಕೆಗಳಿಗೆ ಗಮನ ಕೊಡುತ್ತಾನೆಂದು ಬೈಬಲ್‌ ಹೇಗೆ ತೋರಿಸುತ್ತದೆ?

14 ದಾವೀದನು ತನ್ನ ಜೀವಿತದಲ್ಲಿ ಅನೇಕ ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದನು. (1 ಸಮು. 30:3-6) ಆ ಸಮಯದಲ್ಲಿ ಅವನಿಗಾದ ಅನಿಸಿಕೆಯನ್ನು ಯೆಹೋವ ದೇವರು ತಿಳಿದಿದ್ದನೆಂದು ದಾವೀದನ ಪ್ರೇರಿತ ಮಾತುಗಳು ತೋರಿಸುತ್ತವೆ. (ಕೀರ್ತನೆ 34:18; 56:8 ಓದಿ.) ನಾವು ‘ಮುರಿದ ಮನಸ್ಸುಳ್ಳವರೂ’ ‘ಕುಗ್ಗಿಹೋದವರೂ’ ಆಗಿರುವಾಗ ನಮಗಾಗುವ ಅನಿಸಿಕೆಗಳನ್ನು ಸಹ ಯೆಹೋವನು ತಿಳಿದಿರುತ್ತಾನೆ. ಇದು ನಮಗೆ ಸಾಂತ್ವನ ನೀಡುತ್ತದೆ. ಆ ರೀತಿಯ ಸಾಂತ್ವನ ಪಡೆದ ದಾವೀದನು ಹೀಗೆ ಹಾಡಿದನು: “ನಿನ್ನ ಕೃಪೆಯಲ್ಲಿ ಸಂತೋಷಿಸಿ ಉಲ್ಲಾಸದಿಂದಿರುವೆನು; ನಾನು ಕುಗ್ಗಿಹೋಗಿರುವದನ್ನು ನೋಡಿ ನನ್ನ ಬಾಧೆಗಳನ್ನು ನೀನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ.” (ಕೀರ್ತ. 31:7) ಆದರೆ ಯೆಹೋವನು ನಮ್ಮ ವೇದನೆಯನ್ನು ಗಮನಿಸುವುದಷ್ಟೇ ಅಲ್ಲ, ನಮಗೆ ಸಾಂತ್ವನ, ಉತ್ತೇಜನ ಕೊಟ್ಟು ಬಲಪಡಿಸುತ್ತಾನೆ. ಇದನ್ನು ಆತನು ಮಾಡುವ ಒಂದು ವಿಧ ಕ್ರೈಸ್ತ ಕೂಟಗಳ ಮೂಲಕವೇ.

15. ಆಸಾಫನ ಅನುಭವದಿಂದ ನಾವು ಯಾವ ಪಾಠ ಕಲಿಯುತ್ತೇವೆ?

15 ಕೂಟಗಳಲ್ಲಿ ಉಪಸ್ಥಿತರಾಗಿರುವುದರಿಂದ ಸಿಗುವ ಒಂದು ಪ್ರಯೋಜನವನ್ನು ಕೀರ್ತನೆಗಾರ ಆಸಾಫನ ಅನುಭವದಿಂದ ತಿಳಿಯಬಹುದು. ದುಷ್ಟರು ಅನ್ಯಾಯಗಳನ್ನು ಮಾಡಿದರೂ ಏಳಿಗೆ ಹೊಂದುತ್ತಿರುವುದರ ಬಗ್ಗೆ ಯೋಚಿಸುತ್ತಾ ಆಸಾಫನು ನಿರುತ್ತೇಜನ ಹೊಂದಿದನು. ದೇವರನ್ನು ಸೇವಿಸುವುದರಿಂದ ಏನೂ ಪ್ರಯೋಜನವಿಲ್ಲವೆಂದು ಅವನಿಗೆ ಅನಿಸತೊಡಗಿತು. “ನನ್ನ ಮನಸ್ಸು ನೊಂದುಹೋಗಿತ್ತು; ಆಂತರ್ಯದಲ್ಲಿ ಅಲುಗು ನೆಟ್ಟಂತಿತ್ತು” ಎಂದು ತನ್ನ ಭಾವನೆಗಳನ್ನು ಅವನು ಹೊರಗೆಡವಿದನು. ಇದರ ಪರಿಣಾಮವಾಗಿ ಅವನು ಯೆಹೋವನ ಸೇವೆಯನ್ನೇ ಬಿಟ್ಟುಬಿಡುವುದರಲ್ಲಿದ್ದನು. ಈ ಆಲೋಚನೆಯನ್ನು ಸರಿಪಡಿಸಿಕೊಳ್ಳಲು ಆಸಾಫನಿಗೆ ಯಾವುದು ಸಹಾಯ ಮಾಡಿತು? ಅವನು “ದೇವಾಲಯಕ್ಕೆ” ಹೋಗಿದ್ದೇ. ಅಲ್ಲಿ ಯೆಹೋವನ ಆರಾಧಕರೊಂದಿಗೆ ಸಹವಾಸಿಸಿದಾಗ ಅವನು ಯೋಗ್ಯ ದೃಷ್ಟಿಕೋನವನ್ನು ಮರಳಿ ಪಡೆದನು. ದುಷ್ಟರ ಯಶಸ್ಸು ತಾತ್ಕಾಲಿಕವೆಂದೂ ಯೆಹೋವನು ವಿಷಯಗಳನ್ನು ಸರಿಪಡಿಸುವುದು ನಿಸ್ಸಂದೇಹವೆಂದೂ ಅವನು ತಿಳಿದುಕೊಂಡನು. (ಕೀರ್ತ. 73:2, 13-22) ಇದು ನಮ್ಮ ವಿಷಯದಲ್ಲಿಯೂ ನಿಜ. ಸೈತಾನನ ಲೋಕದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ನೋಡುವಾಗ ನಾವು ಒತ್ತಡಕ್ಕೆ ಒಳಗಾಗಿ ಕುಂದಿಹೋಗಬಹುದು. ಆದರೆ ನಮ್ಮ ಸಹೋದರರೊಂದಿಗೆ ಕೂಟಗಳಲ್ಲಿ ಕೂಡಿಬರುವುದು ನಮ್ಮನ್ನು ಚೈತನ್ಯಗೊಳಿಸಿ ಸಂತೋಷದಿಂದ ಯೆಹೋವನ ಸೇವೆಯನ್ನು ಮುಂದುವರಿಸುವಂತೆ ಸಹಾಯ ಮಾಡುವುದು.

16. ಹನ್ನಳ ಮಾದರಿಯಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?

16 ಸಭೆಯಲ್ಲಿರುವ ಒಂದು ಸಂಗತಿಯಿಂದ ಬೇಸತ್ತು ಕೂಟಕ್ಕೆ ಹಾಜರಾಗಲು ನಿಮಗೆ ಮನಸ್ಸು ಬರದಿದ್ದರೆ ಆಗೇನು? ಬಹುಶಃ ಸೇವಾಸುಯೋಗವನ್ನು ಬಿಡಬೇಕಾಗಿ ಬಂದದ್ದರಿಂದ ಕೂಟಗಳಿಗೆ ಹೋಗಲು ನಿಮಗೆ ಮುಜುಗರವಾಗುತ್ತಿರಬಹುದು. ಇಲ್ಲವೆ ಒಬ್ಬ ಸಹೋದರನೊಂದಿಗೋ ಸಹೋದರಿಯೊಂದಿಗೋ ಮನಸ್ತಾಪ ಉಂಟಾಗಿರಬಹುದು. ಹಾಗಿರುವಲ್ಲಿ ಎಲ್ಕಾನನ ಪತ್ನಿ ಹನ್ನಳ ಉದಾಹರಣೆ ನಿಮಗೆ ಸಹಾಯ ಮಾಡಬಲ್ಲದು. (1 ಸಮುವೇಲ 1:4-8 ಓದಿ.) ಎಲ್ಕಾನನ ಇನ್ನೊಬ್ಬ ಪತ್ನಿ ಪೆನಿನ್ನಳು ಹನ್ನಳಿಗೆ ತೀವ್ರ ಬೇಸರವನ್ನು ಉಂಟುಮಾಡುತ್ತಿದ್ದಳು. ಕುಟುಂಬವು ಪ್ರತಿ ವರುಷ ಯಜ್ಞಾರ್ಪಿಸಲಿಕ್ಕಾಗಿ ಶೀಲೋವಿಗೆ ಹೋಗುತ್ತಿದ್ದಾಗಲಂತೂ ಹನ್ನಳ ಸನ್ನಿವೇಶ ಇನ್ನೂ ಕಷ್ಟಕರವಾಗಿರುತ್ತಿತ್ತು. ಹನ್ನಳಿಗೆ ಎಷ್ಟು ವ್ಯಥೆಯಾಗುತ್ತಿತ್ತೆಂದರೆ “ಉಣ್ಣಲೊಲ್ಲದೆ ಅಳುತ್ತಾ” ಇದ್ದಳು. ಆದರೂ ಯೆಹೋವನನ್ನು ಆರಾಧಿಸಲಿಕ್ಕಾಗಿ ಶೀಲೋವಿಗೆ ಹೋಗುವುದನ್ನು ಆಕೆ ನಿಲ್ಲಿಸಿಬಿಡಲಿಲ್ಲ. ಯೆಹೋವನು ಆಕೆಯ ನಂಬಿಗಸ್ತಿಕೆಯನ್ನು ಗಮನಿಸಿದನು ಮತ್ತು ಆಶೀರ್ವದಿಸಿದನು.—1 ಸಮು. 1:11, 20.

17, 18. (1) ಸಭಾ ಕೂಟಗಳಲ್ಲಿ ನಾವು ಯಾವ ವಿಧಗಳಲ್ಲಿ ಪ್ರೋತ್ಸಾಹವನ್ನು ಪಡೆಯುತ್ತೇವೆ? (2) ನಾವು ತಾಳಿಕೊಳ್ಳುವಂತೆ ಯೆಹೋವನು ಕೊಡುವ ಕೋಮಲ ಆರೈಕೆಯ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ?

17 ಇಂದಿರುವ ಕ್ರೈಸ್ತರು ಕೂಟಗಳಿಗೆ ತಪ್ಪದೆ ಹಾಜರಾಗುವ ಮೂಲಕ ಹನ್ನಳ ಮಾದರಿಯನ್ನು ಅನುಕರಿಸಬೇಕು. ಕೂಟಗಳು ನಮಗೆ ಅತ್ಯಗತ್ಯವಾದ ಪ್ರೋತ್ಸಾಹವನ್ನು ನೀಡುತ್ತವೆ. ಈ ವಿಷಯವನ್ನು ನಾವ್ಯಾರೂ ಅಲ್ಲಗಳೆಯುವುದಿಲ್ಲ. (ಇಬ್ರಿ. 10:24, 25) ಕ್ರೈಸ್ತ ಸ್ನೇಹಸೌಹಾರ್ದತೆ ನಮಗೆ ಸಾಂತ್ವನ ನೀಡುತ್ತದೆ. ಭಾಷಣದಲ್ಲಿ ಹೇಳಲಾದ ಒಂದು ಅಂಶ ಇಲ್ಲವೆ ಸಹೋದರರು ಕೊಡುವ ಹೇಳಿಕೆ ನಮ್ಮ ಹೃದಯವನ್ನು ಸ್ಪರ್ಶಿಸಬಹುದು. ಕೂಟಕ್ಕೆ ಮುಂಚೆ ಅಥವಾ ನಂತರ ಒಬ್ಬ ಜೊತೆವಿಶ್ವಾಸಿ ನಮಗೆ ಕಿವಿಗೊಟ್ಟು ಸಂತೈಸುವ ಮಾತುಗಳನ್ನಾಡಬಹುದು. (ಜ್ಞಾನೋ. 15:23; 17:17) ಯೆಹೋವನಿಗೆ ಹೃದಯಾಳದಿಂದ ಸ್ವರವೆತ್ತಿ ಹಾಡುವಾಗ ನಮ್ಮಲ್ಲಿ ಸ್ಫೂರ್ತಿ ಹೆಚ್ಚುತ್ತದೆ. “ಅನೇಕ ಚಿಂತೆಗಳಿರುವಾಗ”ಲಂತೂ ಕೂಟಗಳಲ್ಲಿ ದೊರೆಯುವ ಪ್ರೋತ್ಸಾಹ ನಮಗೆ ಅತ್ಯಗತ್ಯ. ಅಲ್ಲಿ ಯೆಹೋವನು ತನ್ನ “ಸಂತೈಸುವಿಕೆಯಿಂದ” ನಮ್ಮಲ್ಲಿ ಬಲತುಂಬಿ, ನಂಬಿಗಸ್ತರಾಗಿ ಉಳಿಯಲು ನೆರವು ನೀಡುವನು.—ಕೀರ್ತ. 94:18, 19.

18 ಯೆಹೋವ ದೇವರ ಕೋಮಲ ಆರೈಕೆಯಲ್ಲಿ ಸುರಕ್ಷಿತರಾಗಿರುವ ನಮಗೆ ಕೀರ್ತನೆಗಾರ ಆಸಾಫನಂತೆ ಅನಿಸುತ್ತದೆ. ‘ನೀನು ನನ್ನ ಬಲಗೈಯನ್ನು ಹಿಡಿದು ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿದ್ದಿ.’ (ಕೀರ್ತ. 73:23, 24) ನಾವು ಕಡೆ ವರೆಗೆ ತಾಳಿಕೊಳ್ಳಲು ಯೆಹೋವನು ಸಹಾಯ ಮಾಡುತ್ತಿರುವುದಕ್ಕಾಗಿ ಮತ್ತು ನಮ್ಮನ್ನು ಕಾಪಾಡುತ್ತಿರುವುದಕ್ಕಾಗಿ ನಾವಾತನಿಗೆ ತುಂಬ ಕೃತಜ್ಞರು.

[ಅಧ್ಯಯನ ಪ್ರಶ್ನೆಗಳು]

[ಪುಟ 28ರಲ್ಲಿರುವ ಚಿತ್ರ]

ನಿಮ್ಮನ್ನು ಕೂಡ ಯೆಹೋವನು ಸೆಳೆದಿದ್ದಾನೆ

[ಪುಟ 30ರಲ್ಲಿರುವ ಚಿತ್ರ]

ದೇವರು ಕೊಡುವ ಸಲಹೆಯನ್ನು ಅನ್ವಯಿಸಿಕೊಳ್ಳುವಲ್ಲಿ ಅದು ನಮಗೆ ಸಂರಕ್ಷಣೆಯಾಗಿದೆ

[ಪುಟ 31ರಲ್ಲಿರುವ ಚಿತ್ರ]

ಪ್ರೋತ್ಸಾಹ ನಮ್ಮಲ್ಲಿ ಬಲ ತುಂಬುತ್ತದೆ