ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ವಿವಾಹ ಬಂಧವನ್ನು ಬಲಗೊಳಿಸಲು ಶ್ರಮಿಸಿರಿ

ನಿಮ್ಮ ವಿವಾಹ ಬಂಧವನ್ನು ಬಲಗೊಳಿಸಲು ಶ್ರಮಿಸಿರಿ

ನಿಮ್ಮ ವಿವಾಹ ಬಂಧವನ್ನು ಬಲಗೊಳಿಸಲು ಶ್ರಮಿಸಿರಿ

“ವಿವಾಹಿತರಿಗೆ ನಾನು, ವಾಸ್ತವದಲ್ಲಿ ನಾನಲ್ಲ, ಕರ್ತನು ಸಲಹೆ ನೀಡುವುದೇನೆಂದರೆ. . .”—1 ಕೊರಿಂ. 7:10.

ವಿವರಿಸಬಲ್ಲಿರಾ?

ಪತಿಪತ್ನಿಯನ್ನು ವಿವಾಹ ಬಂಧದಲ್ಲಿ ದೇವರೇ ಒಟ್ಟುಗೂಡಿಸಿದ್ದಾನೆ ಎಂದು ಹೇಳಲು ಕಾರಣವೇನು?

ದಾಂಪತ್ಯ ಸಮಸ್ಯೆ ಎದುರಿಸುತ್ತಿರುವ ಕ್ರೈಸ್ತರಿಗೆ ಹಿರಿಯರು ಹೇಗೆ ನೆರವು ನೀಡುವರು?

ವಿವಾಹದ ಬಗ್ಗೆ ನಮಗೆ ಯಾವ ನೋಟವಿರಬೇಕು?

1. (1) ಕ್ರೈಸ್ತರು ವಿವಾಹವನ್ನು ಹೇಗೆ ವೀಕ್ಷಿಸಬೇಕು? (2) ಏಕೆ?

ಕ್ರೈಸ್ತರು ವಿವಾಹವಾಗುವಾಗ ದೇವರ ಮುಂದೆ ಪ್ರತಿಜ್ಞೆ ಮಾಡುತ್ತಾರೆ. ಆ ಮೂಲಕ ವಹಿಸಿಕೊಳ್ಳುವ ಜವಾಬ್ದಾರಿಯನ್ನು ಅವರೆಂದೂ ಕ್ಷುಲ್ಲಕವಾಗಿ ಎಣಿಸಬಾರದು. (ಪ್ರಸಂ. 5:4-6) ವಿವಾಹದ ನಿರ್ಮಾಪಕನು ಯೆಹೋವನಾದ ಕಾರಣ ಗಂಡುಹೆಣ್ಣನ್ನು ವಿವಾಹ ಬಂಧದಲ್ಲಿ ‘ಒಟ್ಟುಗೂಡಿಸುವುದು’ ಆತನೇ. (ಮಾರ್ಕ 10:9) ವಿವಾಹದ ಕುರಿತ ಕಾನೂನಿನ ನಿಯಮ ಏನೇ ಹೇಳಲಿ ಪತಿಪತ್ನಿ ವಿವಾಹದ ಕುರಿತು ದೇವರ ದೃಷ್ಟಿಕೋನವನ್ನು ಹೊಂದಿರಬೇಕು. ಯೆಹೋವನ ಸೇವಕರು ತಮ್ಮ ವಿವಾಹದ ಸಮಯದಲ್ಲಿ ಸತ್ಯದಲ್ಲಿ ಇದ್ದಿರಲಿ ಇಲ್ಲದಿರಲಿ ವಿವಾಹವನ್ನು ಅತ್ಯಾಪ್ತ ಬಂಧವಾಗಿ ವೀಕ್ಷಿಸಬೇಕು.

2. ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಚರ್ಚಿಸಲಾಗುವುದು?

2 ಯಶಸ್ವೀ ವೈವಾಹಿಕ ಜೀವನ ಸುಖಕರ ಪಯಣವಾಗಿರುತ್ತದೆ. ಆದರೆ ವೈವಾಹಿಕ ಬಂಧದಲ್ಲಿ ಬಿರುಕುಂಟಾದಲ್ಲಿ ನಾವೇನು ಮಾಡಬೇಕು? ಆ ಬಿರುಕನ್ನು ಸರಿಪಡಿಸಿ ಬಂಧವನ್ನು ಮತ್ತೆ ಬಲಗೊಳಿಸಲು ಸಾಧ್ಯವೇ? ದಾಂಪತ್ಯದಲ್ಲಿ ಸಂತೋಷ ಕಣ್ಮರೆಯಾಗುತ್ತಿರುವಲ್ಲಿ ಅದನ್ನು ಪುನಃ ತಂದುಕೊಳ್ಳಲು ದಂಪತಿಗಳಿಗೆ ಯಾವ ಸಹಾಯವಿದೆ?

ನೋವು? ನಲಿವು? ಆಯ್ಕೆ ನಿಮ್ಮದು

3, 4. ಬಾಳಸಂಗಾತಿಯನ್ನು ಆಯ್ಕೆ ಮಾಡುವಾಗ ಬುದ್ಧಿಹೀನ ನಿರ್ಣಯ ಮಾಡುವಲ್ಲಿ ಏನಾಗಬಹುದು?

3 ದಾಂಪತ್ಯ ಜೀವನ ಯಶಸ್ಸು ಹೊಂದುವಲ್ಲಿ ಪತಿಪತ್ನಿಗೆ ನಲಿವು, ಯೆಹೋವ ದೇವರಿಗೆ ಮಹಿಮೆ. ಯಶಸ್ಸು ಹೊಂದದಿದ್ದಲ್ಲಿ ಅಪಾರ ನೋವು. ವಿವಾಹವಾಗಲು ಯೋಚಿಸುತ್ತಿರುವ ಕ್ರೈಸ್ತರು ಬಾಳಸಂಗಾತಿಯನ್ನು ಆರಿಸುವಾಗ ದೇವರ ಮಾರ್ಗದರ್ಶನವನ್ನು ಪಾಲಿಸುವಲ್ಲಿ ತಮ್ಮ ವೈವಾಹಿಕ ಜೀವನವನ್ನು ಒಳ್ಳೇ ರೀತಿಯಲ್ಲಿ ಆರಂಭಿಸಬಲ್ಲರು. ಒಂದುವೇಳೆ ಅದನ್ನು ಕಡೆಗಣಿಸಿ ಬುದ್ಧಿಹೀನ ನಿರ್ಣಯ ಮಾಡುವಲ್ಲಿ ಕರಕರೆ, ದುಃಖವನ್ನು ಅನುಭವಿಸಬಹುದು. ಉದಾಹರಣೆಗೆ, ಕೆಲವು ಯುವಕ ಯುವತಿಯರು ವೈವಾಹಿಕ ಜೀವನದ ಜವಾಬ್ದಾರಿಗಳನ್ನು ಹೊರಲು ತಾವಿನ್ನೂ ಸಿದ್ಧರಿರದಿದ್ದರೂ ಪ್ರಣಯ, ಪ್ರೇಮ ಎಂದು ಶುರುಹಚ್ಚಿಕೊಳ್ಳುತ್ತಾರೆ. ಇನ್ನು ಕೆಲವರು ಇಂಟರ್‌ನೆಟ್‌ ಮೂಲಕ ಮೋಹಕ ಗಂಡು ಅಥವಾ ಹೆಣ್ಣನ್ನು ಹುಡುಕಿಕೊಂಡು ಆವೇಶದಲ್ಲಿ ವೈವಾಹಿಕ ಜೀವನಕ್ಕೆ ಧುಮುಕುತ್ತಾರೆ. ಮುಂದೆ ಹೇಳಬೇಕಾಗಿಲ್ಲ. ಕೆಲವೇ ದಿನಗಳಲ್ಲಿ ಅಸಂತೋಷದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾರೆ. ಕೆಲವು ಪ್ರೇಮಿಗಳು ಗಂಭೀರ ಪಾಪವನ್ನು ಗೈದು ನಂತರ ಹೇಗೂ ಮದುವೆಗೆ ಕಟ್ಟುಬೀಳುತ್ತಾರೆ. ಇಂಥವರು ಪರಸ್ಪರರ ಮೇಲೆ ಗೌರವ ಕಳಕೊಳ್ಳುತ್ತಾರೆ. ಹೀಗೆ ಅವರು ತಮ್ಮ ದಾಂಪತ್ಯವನ್ನು ದುರ್ಬಲವಾದ ಅಸ್ತಿವಾರದ ಮೇಲೆ ಕಟ್ಟುತ್ತಾರೆ.

4 ಕೆಲವು ಕ್ರೈಸ್ತರು ‘ಕರ್ತನಲ್ಲಿರುವವರನ್ನು ಮಾತ್ರ’ ವಿವಾಹವಾಗಬೇಕೆಂಬ ಆಜ್ಞೆಯನ್ನು ಮೀರಿ ಧಾರ್ಮಿಕವಾಗಿ ವಿಭಜಿತವಾದ ಕುಟುಂಬದಲ್ಲಿ ನೋವುಣ್ಣುತ್ತಾರೆ. (1 ಕೊರಿಂ. 7:39) ಈ ಪರಿಸ್ಥಿತಿಯಲ್ಲಿ ನೀವಿರುವಲ್ಲಿ ಕ್ಷಮೆಗಾಗಿ ಮತ್ತು ಸಹಾಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿರಿ. ತಪ್ಪುಹೆಜ್ಜೆಯ ಪರಿಣಾಮಗಳನ್ನು ಆತನು ತೆಗೆದು ಹಾಕುವುದಿಲ್ಲವಾದರೂ ಪಶ್ಚಾತ್ತಾಪಪಡುವವರಿಗೆ ಸಂಕಷ್ಟಗಳನ್ನು ನಿಭಾಯಿಸಲು ಸಹಾಯ ಮಾಡುವನು. (ಕೀರ್ತ. 130:1-4) ಆತನನ್ನು ಮೆಚ್ಚಿಸಲು ನಿಮ್ಮಿಂದಾದ ಸಕಲ ಪ್ರಯತ್ನವನ್ನು ಮಾಡಿರಿ. ಖಂಡಿತ ‘ಯೆಹೋವನ ಆನಂದವೇ ನಿಮ್ಮ ಆಶ್ರಯವಾಗಿರುವುದು.’—ನೆಹೆ. 8:10.

ವಿವಾಹ ಬಂಧ ಸಡಿಲಗೊಂಡಾಗ

5. ದಾಂಪತ್ಯದಲ್ಲಿ ಅಸಂತೋಷವಿರುವಲ್ಲಿ ಯಾವ ರೀತಿಯ ಯೋಚನೆಯನ್ನು ತೊರೆಯಬೇಕು?

5 ದಾಂಪತ್ಯದಲ್ಲಿ ಅಸಂತೋಷ ಅನುಭವಿಸುತ್ತಿರುವವರು, ‘ಈ ದುಃಖದ ಬಾಳ್ವೆಯನ್ನು ಹೀಗೆ ಮುಂದುವರಿಸಿಕೊಂಡು ಜೀವಿಸಬೇಕಾ? ಇನ್ನೊಬ್ಬರನ್ನು ಮದುವೆಯಾಗಿ ಸಂತೋಷವಾಗಿ ಇರಬಹುದಲ್ಲಾ?’ ಎಂದು ಯೋಚಿಸಬಹುದು. ‘ಈ ಸಂಬಂಧದಿಂದ ಕಳಚಿಕೊಂಡರೆ ಸಾಕು, ಮತ್ತೆ ನಾನು ಸ್ವತಂತ್ರ ಹಕ್ಕಿ. ವಿಚ್ಛೇದನ ಕೊಟ್ಟು ಕೈತೊಳೆದುಕೊಳ್ಳುತ್ತೇನೆ. ಬೈಬಲಾಧಾರವಾಗಿ ವಿಚ್ಛೇದನ ಕೊಡಲು ಸಾಧ್ಯವಿಲ್ಲದಿದ್ದರೆ ಏನಂತೆ, ಇಬ್ಬರು ಪ್ರತ್ಯೇಕವಾದರೆ ಆಯಿತು. ಜೀವನದಲ್ಲಿ ಪುನಃ ಸಂತೋಷ ಪಡೆಯಬಹುದು’ ಎಂದೆಲ್ಲ ಕನಸು ಕಾಣಬಹುದು. ಆದರೆ ಕ್ರೈಸ್ತರು ಆ ರೀತಿಯ ಯೋಚನೆ ಮಾಡುವುದು ತರವಲ್ಲ. ಅವರು ಈಗಿರುವ ಪರಿಸ್ಥಿತಿಯನ್ನು ಉತ್ತಮಗೊಳಿಸಲು ದೇವರ ಮಾರ್ಗದರ್ಶನವನ್ನು ಕೋರಿ ಅದನ್ನು ಪಾಲಿಸಬೇಕು.

6. ಮತ್ತಾಯ 19:9ರಲ್ಲಿರುವ ಯೇಸುವಿನ ಮಾತುಗಳ ಅರ್ಥವೇನು?

6 ಕ್ರೈಸ್ತ ಪತಿ ಅಥವಾ ಪತ್ನಿ ಬೈಬಲ್‌ ಕೊಡುವ ಒಂದೇ ಕಾರಣದ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರೆ ಮಾತ್ರ ಪುನರ್ವಿವಾಹವಾಗಬಹುದು. ಏಕೆಂದರೆ ಯೇಸು ಹೀಗೆ ಹೇಳಿದ್ದಾನೆ: “ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.” (ಮತ್ತಾ. 19:9) ಇಲ್ಲಿ ಸೂಚಿಸಲಾಗಿರುವ “ಹಾದರ”ದಲ್ಲಿ ವ್ಯಭಿಚಾರ ಮತ್ತು ಲೈಂಗಿಕತೆಗೆ ಸಂಬಂಧಿಸಿದ ಇತರ ಗಂಭೀರ ಪಾಪಗಳು ಸೇರಿವೆ. ದಂಪತಿಯ ಮಧ್ಯೆ ಹಾದರದ ಪ್ರಶ್ನೆಯೇ ಬಂದಿರದಿದ್ದರೂ ಅವರು ವಿಚ್ಛೇದನ ಪಡೆದುಕೊಳ್ಳಲು ನೆನಸುತ್ತಿರುವುದಾದರೆ ತಮ್ಮ ಆಲೋಚನೆಯನ್ನು ಸರಿಪಡಿಸಿಕೊಳ್ಳಲು ಮಾರ್ಗದರ್ಶನೆಗಾಗಿ ಯೆಹೋವ ದೇವರಲ್ಲಿ ಪ್ರಾರ್ಥಿಸುವುದು ಅತ್ಯಗತ್ಯ.

7. ಕ್ರೈಸ್ತನೊಬ್ಬನ ವಿವಾಹ ಮುರಿದುಬೀಳುವಲ್ಲಿ ಜನರು ಏನು ನೆನಸುವರು?

7 ಮದುವೆ ಬಂಧ ಮುರಿದುಬೀಳುವುದು ದಂಪತಿಯ ಆಧ್ಯಾತ್ಮಿಕ ಸ್ಥಿತಿ ಚೆನ್ನಾಗಿಲ್ಲವೆಂದು ತೋರಿಸುತ್ತದೆ. ಈ ನಿಟ್ಟಿನಲ್ಲಿ ಅಪೊಸ್ತಲ ಪೌಲ ಕೇಳಿದ ಗಂಭೀರ ಪ್ರಶ್ನೆಯನ್ನು ಗಮನಿಸಿ: “ತನ್ನ ಸ್ವಂತ ಮನೆವಾರ್ತೆಯನ್ನು ಹೇಗೆ ಮೇಲ್ವಿಚಾರಣೆಮಾಡಬೇಕೆಂದು ತಿಳಿಯದವನು ದೇವರ ಸಭೆಯನ್ನು ಹೇಗೆ ತಾನೇ ನೋಡಿಕೊಳ್ಳುವನು?” (1 ತಿಮೊ. 3:5) ಕ್ರೈಸ್ತರೆಂದು ಹೇಳಿಕೊಳ್ಳುವ ದಂಪತಿಯ ಮದುವೆ ಮುರಿದುಬೀಳುವಲ್ಲಿ ಜನರು ಏನು ನೆನೆಸುವರು? ‘ಹೇಳೋದೊಂದು ಮಾಡೋದೊಂದು’ ಎಂದಲ್ಲವೇ?—ರೋಮ. 2:21-24.

8. ಪ್ರತ್ಯೇಕಗೊಳ್ಳಲು ಅಥವಾ ವಿಚ್ಛೇದನ ಪಡೆಯಲು ನಿರ್ಧರಿಸುವ ಕ್ರೈಸ್ತ ದಂಪತಿಯಲ್ಲಿ ಯಾವ ಸಮಸ್ಯೆ ಇರಬಹುದು?

8 ದೀಕ್ಷಾಸ್ನಾನ ಪಡೆದಿರುವ ದಂಪತಿಯು ಬೈಬಲ್‌ ಆಧಾರವಿಲ್ಲದೆ ಪ್ರತ್ಯೇಕವಾಗಲು ಅಥವಾ ವಿಚ್ಛೇದನ ಪಡೆದುಕೊಳ್ಳಲು ಯೋಚಿಸುವುದಾದರೆ ಯೆಹೋವನೊಂದಿಗಿನ ಅವರ ಸಂಬಂಧ ಅಷ್ಟು ಒಳ್ಳೇದಿಲ್ಲ ಎಂದರ್ಥ. ಅವರಲ್ಲಿ ಒಬ್ಬರು ಅಥವಾ ಇಬ್ಬರೂ ಬೈಬಲಿನ ಮೂಲತತ್ವಗಳನ್ನು ಅನ್ವಯಿಸದೇ ಇರಬಹುದು. ಅವರು ನಿಜವಾಗಿಯೂ ‘ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸೆಯಿಡುವಲ್ಲಿ’ ತಮ್ಮ ವಿವಾಹವನ್ನು ಉಳಿಸುವುದು ಅವರಿಗೆ ಅಸಾಧ್ಯವಲ್ಲ.—ಜ್ಞಾನೋಕ್ತಿ 3:5, 6 ಓದಿ.

9. ದಾಂಪತ್ಯದಲ್ಲಿ ಸಮಸ್ಯೆಯಿದ್ದರೂ ಸಹನೆ ತೋರಿಸಿದ್ದರಿಂದ ಕೆಲವರು ಯಾವ ಆಶೀರ್ವಾದ ಪಡೆದಿದ್ದಾರೆ?

9 ಇನ್ನೇನು ಮುರಿದುಬಿತ್ತು ಎಂಬ ಹಂತ ತಲಪಿದ ಎಷ್ಟೋ ಮದುವೆಗಳು ಆಮೇಲೆ ಯಶಸ್ಸು ಕಂಡಿವೆ. ಸಮಸ್ಯೆಯಿದ್ದರೂ ವಿವಾಹ ಬಂಧ ಮುರಿಯಲು ಅವಕಾಶ ಕೊಡದೆ ಸಹನೆ ತೋರಿಸಿದವರು ಹೆಚ್ಚಾಗಿ ಆಶೀರ್ವಾದವನ್ನೇ ಪಡೆದಿದ್ದಾರೆ. ಉದಾಹರಣೆಗೆ ಗಂಡ ಸತ್ಯದಲ್ಲಿಲ್ಲದ ಕುಟುಂಬದಲ್ಲಿ ಹೆಂಡತಿಯ ಸದ್ವರ್ತನೆಯಿಂದ ಏನಾಗಬಹುದೆಂದು ಯೋಚಿಸಿ. ಅಪೊಸ್ತಲ ಪೇತ್ರನ ಮಾತುಗಳು ಅದನ್ನು ತಿಳಿಸುತ್ತವೆ. “ಅದೇ ರೀತಿಯಲ್ಲಿ ಹೆಂಡತಿಯರೇ, ನೀವು ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಹೀಗೆ ಮಾಡುವಲ್ಲಿ, ಅವರಲ್ಲಿ ಯಾರಾದರೂ ವಾಕ್ಯಕ್ಕೆ ವಿಧೇಯರಾಗದಿರುವಲ್ಲಿ ಅವರು ತಮ್ಮ ಹೆಂಡತಿಯರ ನಡತೆ ಮತ್ತು ಆಳವಾದ ಗೌರವದ ಮೂಲಕ ವಾಕ್ಯೋಪದೇಶವಿಲ್ಲದೆ ಜಯಿಸಲ್ಪಟ್ಟಾರು.” (1 ಪೇತ್ರ 3:1, 2) ಹೌದು, ಹೆಂಡತಿಯ ಉತ್ತಮ ನಡತೆ ಗಂಡನನ್ನು ಸತ್ಯದೆಡೆಗೆ ಆಕರ್ಷಿಸಬಲ್ಲದು. ವಿವಾಹ ಬಂಧ ಮುರಿದುಬೀಳದಂತೆ ನೋಡಿಕೊಳ್ಳುವವರು ದೇವರಿಗೆ ಮಹಿಮೆ ತರುತ್ತಾರೆ. ಮಾತ್ರವಲ್ಲ ಇಡೀ ಕುಟುಂಬ ದೇವರ ಆಶೀರ್ವಾದದಲ್ಲಿ ಆನಂದಿಸುತ್ತದೆ.

10, 11. (1) ದಾಂಪತ್ಯದಲ್ಲಿ ಯಾವ ಅನಿರೀಕ್ಷಿತ ಸಮಸ್ಯೆ ಎದುರಾಗಬಹುದು? (2) ಅಂಥ ಪರಿಸ್ಥಿತಿಯಲ್ಲಿ ಕ್ರೈಸ್ತನೊಬ್ಬನಿಗೆ ಯಾವ ಸಹಾಯ ಸಿಗುತ್ತದೆ?

10 ಹೆಚ್ಚಿನ ಅವಿವಾಹಿತ ಕ್ರೈಸ್ತರು ಯೆಹೋವ ದೇವರ ಮನಸ್ಸನ್ನು ಸಂತಸ ಪಡಿಸಲಿಕ್ಕಾಗಿ ಸತ್ಯದಲ್ಲಿರುವವರನ್ನೇ ಮದುವೆಯಾಗುತ್ತಾರೆ. ಹಾಗಿದ್ದರೂ ದಾಂಪತ್ಯದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಸಮಸ್ಯೆ ಎದುರಾಗಬಹುದು. ಪತಿ ಅಥವಾ ಪತ್ನಿ ಅತೀವ ಭಾವನಾತ್ಮಕ ಸಮಸ್ಯೆಗೆ ತುತ್ತಾಗಬಹುದು. ಇಲ್ಲವೇ ವಿವಾಹವಾಗಿ ಕೆಲವು ವರ್ಷಗಳ ನಂತರ ಅವರಲ್ಲೊಬ್ಬರು ನಿಷ್ಕ್ರಿಯ ಪ್ರಚಾರಕರಾಗಿಬಿಡಬಹುದು. ಲಿಂಡ * ಎಂಬ ಹುರುಪಿನ ಸಹೋದರಿಯ ಬದುಕಿನಲ್ಲಿ ಇಂಥದ್ದೇ ವಿಷಯ ನಡೆಯಿತು. ದೀಕ್ಷಾಸ್ನಾನವಾಗಿದ್ದ ತನ್ನ ಪತಿ ತಪ್ಪು ನಡತೆಯನ್ನು ರೂಢಿಸಿಕೊಂಡಾಗ ಆಕೆ ನಿಸ್ಸಹಾಯಕಳಾಗಿದ್ದಳು. ಪಶ್ಚಾತ್ತಾಪ ಪಡದ ಕಾರಣ ಆತನನ್ನು ಬಹಿಷ್ಕರಿಸಲಾಯಿತು. ಈ ರೀತಿಯಲ್ಲಿ ತಮ್ಮ ದಾಂಪತ್ಯ ಜೀವನ ನಿರೀಕ್ಷಾಹೀನವಾಗಿ ಕಾಣುವಾಗ ಕ್ರೈಸ್ತರು ಏನು ಮಾಡಬೇಕು?

11 ‘ಇಷ್ಟೆಲ್ಲಾ ಆಗಿದೆ, ಆಗಲೂ ನಾನು ವಿವಾಹವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಾ?’ ಎಂದು ನೀವು ಕೇಳಬಹುದು. ಆ ನಿರ್ಣಯವನ್ನು ನೀವೇ ಮಾಡಬೇಕು. ಬೇರೆಯವರು ನಿಮಗೋಸ್ಕರ ಮಾಡಸಾಧ್ಯವಿಲ್ಲ, ಮಾಡಲೂಬಾರದು. ಆದರೂ, ವಿವಾಹ ಬಂಧ ಸಡಿಲಗೊಳ್ಳದಂತೆ ನೋಡಿಕೊಳ್ಳಲು ಸಕಾರಣಗಳಿವೆ. ಮನಸ್ಸಾಕ್ಷಿ ಒಪ್ಪದ ಕಾರಣ ಸಂಗಾತಿಯಿಂದ ದೂರವಾಗದೆ ದಾಂಪತ್ಯದಲ್ಲಿನ ದುಃಖಕರ ವಿಷಯಗಳನ್ನು ಸಹಿಸಿಕೊಳ್ಳುವ ಭಕ್ತರು ದೇವರಿಗೆ ಅತ್ಯಮೂಲ್ಯರಾಗಿದ್ದಾರೆ. (1 ಪೇತ್ರ 2:19, 20 ಓದಿ.) ಸಡಿಲಗೊಳ್ಳುತ್ತಿರುವ ವಿವಾಹ ಬಂಧವನ್ನು ಬಲಪಡಿಸಲು ಬಹಳವಾಗಿ ಶ್ರಮಿಸುತ್ತಿರುವವರಿಗೆ ಯೆಹೋವ ದೇವರು ತನ್ನ ವಾಕ್ಯ ಹಾಗೂ ಪವಿತ್ರಾತ್ಮದ ಮೂಲಕ ನೆರವಾಗುವನು.

ನೆರವು ನೀಡಲು ಸಿದ್ಧರು

12. ಹಿರಿಯರ ಬಳಿ ಸಹಾಯ ಕೇಳುವಾಗ ನಮ್ಮನ್ನವರು ಹೇಗೆ ವೀಕ್ಷಿಸುತ್ತಾರೆ?

12 ವಿವಾಹದಲ್ಲಿ ಸಮಸ್ಯೆ ತಲೆದೋರುವಲ್ಲಿ ಪ್ರೌಢ ಕ್ರೈಸ್ತರ ನೆರವು ಯಾಚಿಸಲು ಹಿಂಜರಿಯಬೇಡಿ. ಸಭೆಯನ್ನು ಪರಿಪಾಲಿಸುವ ಜವಾಬ್ದಾರಿ ಹೊತ್ತಿರುವ ಹಿರಿಯರು ಬೈಬಲಿನಿಂದ ದೇವರ ಸಲಹೆಗಳನ್ನು ತಿಳಿಸಲು ಸದಾ ಸಿದ್ಧರಿರುತ್ತಾರೆ. (ಅ. ಕಾ. 20:28; ಯಾಕೋ. 5:14, 15) ದಾಂಪತ್ಯ ಜೀವನದ ಗಂಭೀರ ಸಮಸ್ಯೆಯನ್ನು ಹೇಳಿ ಆಧ್ಯಾತ್ಮಿಕ ನೆರವನ್ನು ಕೋರುವಲ್ಲಿ ಹಿರಿಯರ ಮುಂದೆ ನಿಮ್ಮ ಗೌರವ ಕುಂದುವುದೆಂದು ನೆನೆಸಬೇಡಿ. ಅವರೆಂದೂ ನಿಮ್ಮನ್ನು ಕೀಳಾಗಿ ವೀಕ್ಷಿಸುವುದಿಲ್ಲ. ದೇವರನ್ನು ಮೆಚ್ಚಿಸಲು ಶ್ರಮಹಾಕುತ್ತಿರುವ ನಿಮ್ಮ ಮೇಲೆ ಅವರಿಗೆ ಪ್ರೀತಿ, ಗೌರವ ಹೆಚ್ಚಾಗುವುದು.

13. ಒಂದನೇ ಕೊರಿಂಥ 7:10-16ರಲ್ಲಿ ಯಾವ ಬುದ್ಧಿಮಾತಿದೆ?

13 ಧಾರ್ಮಿಕವಾಗಿ ವಿಭಜಿತವಾದ ಕುಟುಂಬದಲ್ಲಿರುವ ಪತಿ ಅಥವಾ ಪತ್ನಿ ಸಹಾಯ ಕೋರುವಾಗ ಹಿರಿಯರು ಪೌಲನ ಬುದ್ಧಿವಾದವನ್ನು ಉಪಯೋಗಿಸಬಹುದು. ಅವನು ಹೀಗೆ ಹೇಳಿದನು: “ವಿವಾಹಿತರಿಗೆ ನಾನು, ವಾಸ್ತವದಲ್ಲಿ ನಾನಲ್ಲ, ಕರ್ತನು ಸಲಹೆ ನೀಡುವುದೇನೆಂದರೆ ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಅಗಲಬಾರದು. ಒಂದುವೇಳೆ ಅಗಲಬೇಕಾದರೂ ಅವಳು ಮದುವೆಯಾಗದೇ ಉಳಿಯಲಿ ಅಥವಾ ತನ್ನ ಗಂಡನೊಂದಿಗೆ ಪುನಃ ಸಮಾಧಾನಮಾಡಿಕೊಳ್ಳಲಿ; ಮತ್ತು ಗಂಡನು ತನ್ನ ಹೆಂಡತಿಯನ್ನು ಬಿಡಬಾರದು. . . . ಹೆಂಡತಿಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಎಂಬುದು ನಿನಗೆ ಹೇಗೆ ಗೊತ್ತು? ಗಂಡನೇ, ನಿನ್ನ ಹೆಂಡತಿಯನ್ನು ರಕ್ಷಿಸುವಿಯೋ ಎಂಬುದು ನಿನಗೆ ಹೇಗೆ ಗೊತ್ತು?” (1 ಕೊರಿಂ. 7:10-16) ಸಂಗಾತಿ ಸತ್ಯಕ್ಕೆ ಬರುವಲ್ಲಿ ಅದೆಷ್ಟು ದೊಡ್ಡ ಆಶೀರ್ವಾದ!

14, 15. (1) ಯಾವ ಕಾರಣಗಳಿಗಾಗಿ ಕ್ರೈಸ್ತ ಪತ್ನಿ ಗಂಡನಿಂದ ‘ಒಂದುವೇಳೆ ಅಗಲಬಹುದು?’ (2) ನಿರ್ಧಾರಕ್ಕೆ ಮುನ್ನ ಏಕೆ ದೇವರ ಮಾರ್ಗದರ್ಶನೆ ಕೋರಬೇಕು ಮತ್ತು ಪ್ರಾಮಾಣಿಕವಾಗಿ ತನ್ನನ್ನು ಪರಿಶೀಲಿಸಿಕೊಳ್ಳಬೇಕು?

14 ಯಾವ ಕಾರಣಗಳಿಗಾಗಿ ಕ್ರೈಸ್ತ ಹೆಂಡತಿ ಗಂಡನಿಂದ ‘ಒಂದುವೇಳೆ ಅಗಲಬಹುದು?’ ಬೇಕುಬೇಕೆಂದು ಕುಟುಂಬವನ್ನು ನೋಡಿಕೊಳ್ಳಲು ನಿರಾಕರಿಸಿದ್ದರಿಂದ ಕೆಲವರು ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಾಣಾಪಾಯ ಉಂಟುಮಾಡುವಂಥ ಶಾರೀರಿಕ ದೌರ್ಜನ್ಯದ ಕಾರಣ ಅಥವಾ ಸತ್ಯರಾಧನೆಗೆ ಪೂರ್ಣ ಅಡ್ಡಿ ಇದ್ದ ಕಾರಣ ಇನ್ನು ಕೆಲವರು ಪ್ರತ್ಯೇಕವಾಗಿದ್ದಾರೆ.

15 ಬೇರೆಯಾಗಬೇಕೋ ಬೇಡವೋ ಎನ್ನುವುದು ಅವರವರ ನಿರ್ಧಾರ. ಹಾಗಿದ್ದರೂ, ದೀಕ್ಷಾಸ್ನಾನ ಪಡೆದ ಸಂಗಾತಿಯು ನಿರ್ಧಾರ ತೆಗೆದುಕೊಳ್ಳುವ ಮುನ್ನ ದೇವರ ಮಾರ್ಗದರ್ಶನೆ ಕೋರಬೇಕು ಮತ್ತು ಪ್ರಾಮಾಣಿಕವಾಗಿ ತನ್ನನ್ನು ಪರಿಶೀಲಿಸಿಕೊಳ್ಳಬೇಕು. ಉದಾಹರಣೆಗೆ, ಸತ್ಯರಾಧನೆಗೆ ನಿಜವಾಗಿಯೂ ಅಡ್ಡಿಪಡಿಸುತ್ತಿರುವುದು ಸತ್ಯದಲ್ಲಿ ಇಲ್ಲದ ಸಂಗಾತಿ ಮಾತ್ರವೋ? ಅಥವಾ ಬೈಬಲ್‌ ವಾಚನ, ಕೂಟ, ಕ್ಷೇತ್ರಸೇವೆಯನ್ನು ತಾನು ಕಡೆಗಣಿಸುತ್ತಿದ್ದೇನೋ?

16. ವಿಚ್ಛೇದನ ಪಡೆಯುವ ವಿಷಯದಲ್ಲಿ ಕ್ರೈಸ್ತರು ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದು ಏಕೆ?

16 ದೇವರೊಂದಿಗಿರುವ ಸಂಬಂಧ ನಮಗೆ ಅತ್ಯಮೂಲ್ಯವಾಗಿ ಇರುವುದರಿಂದ ಮತ್ತು ಆತನ ಕೊಡುಗೆಯಾದ ವಿವಾಹಕ್ಕೆ ಗೌರವ ತೋರಿಸುವುದರಿಂದ ದಾಂಪತ್ಯದಲ್ಲಿ ಸಮಸ್ಯೆಗಳು ತಲೆದೋರುವಾಗ ನಾವು ದುಡುಕಿ ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಯೆಹೋವನ ಸೇವಕರಾಗಿರುವ ನಮಗೆ ಆತನ ನಾಮದ ಪವಿತ್ರೀಕರಣ ಪರಮೋಚ್ಛ ಸಂಗತಿಯಾಗಿದೆ. ಹಾಗಾಗಿ ಹೃದಯದಲ್ಲಿ ಇನ್ನೊಂದು ಮದುವೆಯ ಗುಪ್ತ ಯೋಚನೆ ಇಟ್ಟುಕೊಂಡು ಸಂಗಾತಿಯಿಂದ ಬೇರ್ಪಡಲು ಸಂಚು ಹೂಡಬಾರದು.—ಯೆರೆ. 17:9; ಮಲಾ. 2:13-16.

17. “ದೇವರು ನಿಮ್ಮನ್ನು ಶಾಂತಿಗೆ ಕರೆದಿದ್ದಾನೆ” ಎಂದು ಯಾವಾಗ ಮಾತ್ರ ಹೇಳಸಾಧ್ಯ?

17 ಸಂಗಾತಿ ಸತ್ಯದಲ್ಲಿಲ್ಲದ ಕ್ರೈಸ್ತರು ತಮ್ಮ ದಾಂಪತ್ಯ ಬಂಧವನ್ನು ಬಿಗಿಗೊಳಿಸಲು ಶ್ರಮಿಸಬೇಕು. ಸರ್ವ ಪ್ರಯತ್ನದ ನಂತರವೂ ಸತ್ಯದಲ್ಲಿಲ್ಲದ ಸಂಗಾತಿ ವಿವಾಹದಿಂದ ಹೊರನಡೆದು ದಾಂಪತ್ಯ ಮುರಿದುಬಿದ್ದಲ್ಲಿ ಅದಕ್ಕೆ ತಮ್ಮನ್ನೇ ದೂಷಿಸಿಕೊಳ್ಳುವ ಅಗತ್ಯವಿಲ್ಲ. “ಒಂದುವೇಳೆ ಅವಿಶ್ವಾಸಿಯು ಅಗಲಿಹೋಗಬೇಕೆಂದಿದ್ದರೆ ಅಗಲಿಹೋಗಲಿ” ಎಂದು ಪೌಲ ಬರೆದಿದ್ದಾನೆ. “ಅಂಥ ಸನ್ನಿವೇಶದಲ್ಲಿ ಒಬ್ಬ ಸಹೋದರನಾಗಲಿ ಸಹೋದರಿಯಾಗಲಿ ಅಧೀನತೆಗೆ ಬದ್ಧರಲ್ಲ. ದೇವರು ನಿಮ್ಮನ್ನು ಶಾಂತಿಗೆ ಕರೆದಿದ್ದಾನೆ.”—1 ಕೊರಿಂ. 7:15. *

ಯೆಹೋವ ದೇವರನ್ನು ನಂಬಿ

18. ಕಠಿಣ ಪರಿಶ್ರಮದಿಂದ ವಿವಾಹವನ್ನು ಉಳಿಸಿಕೊಳ್ಳಲು ಆಗದಿದ್ದರೂ ಬೇರೆ ಯಾವ ಒಳ್ಳೇ ಫಲಿತಾಂಶ ಸಿಗಬಲ್ಲದು?

18 ದಾಂಪತ್ಯದಲ್ಲಿ ಕಾರ್ಮೋಡ ಕವಿದಾಗ ಧೈರ್ಯ ನೀಡುವಂತೆ ಯೆಹೋವನಲ್ಲಿ ನಂಬಿಕೆಯಿಟ್ಟು ಪ್ರಾರ್ಥಿಸಿ. (ಕೀರ್ತನೆ 27:14 ಓದಿ.) ಈ ಲೇಖನದಲ್ಲಿ ಲಿಂಡ ಬಗ್ಗೆ ಪ್ರಸ್ತಾಪಿಸಿದ್ದು ನಿಮಗೆ ನೆನಪಿರಬಹುದು. ಅನೇಕ ವರ್ಷಗಳ ಕಠಿಣ ಪ್ರಯತ್ನದ ಹೊರತೂ ಆಕೆಯ ದಾಂಪತ್ಯವು ವಿಚ್ಛೇದನದಲ್ಲಿ ಅಂತ್ಯ ಕಂಡಿತು. ತನ್ನ ಸಮಯ ಶ್ರಮ ಎಲ್ಲವೂ ವ್ಯರ್ಥವೆಂದು ಆಕೆಗನಿಸಿತಾ? “ಇಲ್ಲವೇ ಇಲ್ಲ” ಎನ್ನುತ್ತಾಳೆ ಆಕೆ. “ನಾ ಪಟ್ಟ ಶ್ರಮ ಇತರರಿಗೆ ಉತ್ತಮ ಸಾಕ್ಷಿ ನೀಡಿತು. ನಾನು ಒಳ್ಳೇ ಮನಸ್ಸಾಕ್ಷಿ ಹೊಂದಿದ್ದೇನೆ. ನನ್ನ ಶ್ರಮಕ್ಕೆ ಫಲ ಸಿಕ್ಕಿದೆ. ಆ ವರ್ಷಗಳಲ್ಲಿ ನನ್ನ ಮಗಳು ಸತ್ಯದಲ್ಲಿ ಸ್ಥಿರವಾಗಿ ನೆಲೆಯೂರಿದಳು. ಅವಳು ಯೆಹೋವ ದೇವರಿಗೆ ಸಮರ್ಪಣೆ ಮಾಡಿಕೊಂಡು ಹುರುಪಿನಿಂದ ಸೇವೆ ಸಲ್ಲಿಸುತ್ತಿದ್ದಾಳೆ.”

19. ದಾಂಪತ್ಯವನ್ನು ಉಳಿಸಲು ಪ್ರಯತ್ನ ಪಡುವಲ್ಲಿ ಯಾವ ಫಲಿತಾಂಶ ಸಿಗುವುದು?

19 ಮೆರ್ಲಿನ್‌ ಎಂಬ ಸಹೋದರಿ ತಾನು ದೇವರಲ್ಲಿ ನಂಬಿಕೆಯಿಟ್ಟು ವಿವಾಹ ಬಂಧವನ್ನು ಬಿಗಿಗೊಳಿಸಲು ಹೆಚ್ಚಿನ ಶ್ರಮ ಹಾಕಿದ್ದನ್ನು ನೆನಸಿ ಖುಷಿಪಡುತ್ತಾರೆ. “ನನ್ನ ಯಜಮಾನ್ರು ಮನೆ ನೋಡಿಕೊಳ್ಳುತ್ತಿರಲಿಲ್ಲ. ಖರ್ಚಿಗೆ ಒಂದುಕಾಸೂ ಕೊಡುತ್ತಿರಲಿಲ್ಲ. ಕೂಟಕ್ಕಾಗಲಿ ಸೇವೆಗಾಗಲಿ ಬಿಡ್ತಾನೆ ಇರಲಿಲ್ಲ. ಇವ್ರ ಜೊತೆ ಇನ್ನು ಜೀವನ ಮಾಡಲಿಕ್ಕಾಗಲ್ಲ ಅಂತ ಎಷ್ಟೋ ಸಾರಿ ಅನಿಸಿತು” ಎಂದು ಆಕೆ ಹೇಳಿದರು. ಈ ಮೊದಲು ಸಭಾ ಹಿರಿಯರಾಗಿದ್ದ ಆಕೆಯ ಪತಿ ಅವಿವೇಕದಿಂದ ಯಾವುದೋ ವ್ಯಾಪಾರದಲ್ಲಿ ಒಳಗೂಡಿ ಕ್ರಮೇಣ ಕೂಟಗಳಿಗೆ ಹೋಗುವುದನ್ನು ನಿಲ್ಲಿಸಿದ್ದರು. ಪತಿ-ಪತ್ನಿಯ ನಡುವಿನ ಮಾತುಕತೆಯೂ ನಿಂತಿತ್ತು. ನಗರದಲ್ಲಿ ನಡೆದ ಉಗ್ರವಾದಿಗಳ ವಿದ್ವಂಸಕ ಕೃತ್ಯವೊಂದು ಆಕೆಯ ಯೋಚನಾಧಾಟಿಯನ್ನು ಬದಲಾಯಿಸಿತು. ತಮ್ಮಿಬ್ಬರ ನಡುವೆ ಮಾತುಕತೆ ನಿಂತಿದ್ದರಲ್ಲಿ ತನ್ನದೂ ತಪ್ಪಿದೆ ಎಂದು ಆಕೆಗೆ ಮನವರಿಕೆಯಾಯಿತು. ಅವರಿಬ್ಬರ ಮಧ್ಯೆ ಮಾತುಕತೆ ಮತ್ತೆ ಆರಂಭವಾಯಿತು. ಕುಟುಂಬ ಅಧ್ಯಯನ ಮಾಡತೊಡಗಿದರು. ತಪ್ಪದೆ ಕೂಟಗಳಿಗೆ ಹಾಜರಾದರು. ಹಿರಿಯರು ತೋರಿಸಿದ ಪ್ರೀತಿ ಇನ್ನಷ್ಟು ನೆರವು ನೀಡಿ ದಾಂಪತ್ಯದಲ್ಲಿ ಸಂತಸದ ಅಲೆ ಮತ್ತೆ ಬೀಸತೊಡಗಿತು. ಕಾಲಾನಂತರ ಗಂಡನಿಗೆ ಸಭೆಯಲ್ಲಿ ಸೇವಾ ಸುಯೋಗವೂ ದೊರೆಯಿತು. ಅಹಿತಕರ ಅನುಭವದಿಂದ ಅವರು ಪಾಠ ಕಲಿತರಾದರೂ ಸಂತೋಷದ ಫಲಿತಾಂಶ ಹೊರಹೊಮ್ಮಿತು.

20, 21. ವಿವಾಹದ ವಿಚಾರದಲ್ಲಿ ನಾವು ಯಾವ ದೃಢ ನಿಲುವು ಹೊಂದಿರಬೇಕು?

20 ಮದುವೆಯಾಗಿರಲಿ ಇಲ್ಲದಿರಲಿ ನಾವೆಲ್ಲರೂ ಧೈರ್ಯವಂತರಾಗಿರಬೇಕು. ಯೆಹೋವ ದೇವರಲ್ಲಿ ನಂಬಿಕೆಯಿಡಬೇಕು. ದಂಪತಿಗಳು ತಮ್ಮ ವಿವಾಹದಲ್ಲಿ ಸಮಸ್ಯೆಗಳು ತಲೆದೋರುವಾಗ ಕೂಡಲೇ ಅವನ್ನು ನಿಭಾಯಿಸಲು ಪ್ರಯತ್ನಿಸಬೇಕು. ಪತಿ-ಪತ್ನಿ “ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ” ಎನ್ನುವುದನ್ನು ಎಂದಿಗೂ ಮರೆಯಬಾರದು. (ಮತ್ತಾ. 19:6) ಸಂಗಾತಿ ಸತ್ಯದಲ್ಲಿ ಇಲ್ಲದೆ ದಾಂಪತ್ಯದಲ್ಲಿ ಘರ್ಷಣೆಗಳನ್ನು ನೀವು ಎದುರಿಸುತ್ತಿರುವಲ್ಲಿ ಸಹನೆಯಿಂದಿರಿ. ಮುಂದೊಂದು ದಿನ ಅವರನ್ನು ಯೆಹೋವನ ಸತ್ಯಾರಾಧಕರನ್ನಾಗಿ ನೋಡುವ ಸಂತೋಷ ನಿಮ್ಮದಾಗಬಹುದು.

21 ನಮ್ಮ ಸನ್ನಿವೇಶ ಏನೇ ಆಗಿದ್ದರೂ ನಾವು ನಡಕೊಳ್ಳುವ ರೀತಿ ಜನರಿಗೆ ಉತ್ತಮ ಸಾಕ್ಷಿ ಕೊಡುವಂತಿರಬೇಕು. ನಮ್ಮ ವಿವಾಹ ಬಂಧದ ಕೊಂಡಿ ಕಳಚಿಕೊಳ್ಳುತ್ತಿದೆ ಎಂದಾದರೆ ಮಾರ್ಗದರ್ಶನೆಗಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸೋಣ. ನಮ್ಮ ಯೋಚನೆ-ಹೇತುಗಳನ್ನು ಪರಿಶೀಲಿಸೋಣ. ಬೈಬಲ್‌ ಸಲಹೆಯನ್ನು ಜಾಗ್ರತೆಯಿಂದ ಪರಿಶೀಲಿಸೋಣ. ಹಿರಿಯರ ನೆರವನ್ನು ಕೋರೋಣ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮೆಲ್ಲ ಕಾರ್ಯಗಳಲ್ಲಿ ಯೆಹೋವ ದೇವರ ಮನಸ್ಸನ್ನು ಸಂತೋಷಪಡಿಸಲು ನಿಶ್ಚಯದಿಂದಿರೋಣ. ಹೀಗೆ ಆತನ ಪ್ರೀತಿಯ ಕೊಡುಗೆಯಾದ ವಿವಾಹವನ್ನು ಗೌರವಿಸೋಣ.

[ಪಾದಟಿಪ್ಪಣಿಗಳು]

^ ಪ್ಯಾರ. 10 ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 17 “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ ಪುಟ 251-253; ಕಾವಲಿನಬುರುಜು (ಇಂಗ್ಲಿಷ್‌) 1988, ನವೆಂಬರ್‌ 1ರ ಪುಟ 26-27 ಮತ್ತು 1975, ಸೆಪ್ಟೆಂಬರ್‌ 15ರ ಪುಟ 575 ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಸಂಕ್ಷಿಪ್ತ ವಿವರಣೆ]

ಸಮಸ್ಯೆಯಿದ್ದರೂ ವಿವಾಹ ಬಂಧ ಮುರಿಯಲು ಅವಕಾಶ ಕೊಡದೆ ಸಹನೆ ತೋರಿಸಿದವರು ಹೆಚ್ಚಾಗಿ ಆಶೀರ್ವಾದವನ್ನೇ ಪಡೆದಿದ್ದಾರೆ

[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೆಹೋವನಲ್ಲಿ ನಂಬಿಕೆಯಿಟ್ಟು ಧೈರ್ಯ ತಂದುಕೊಳ್ಳಿ

[ಪುಟ 9ರಲ್ಲಿರುವ ಚಿತ್ರ]

ವಿವಾಹ ಬಂಧವನ್ನು ಬಿಗಿಗೊಳಿಸಲು ಶ್ರಮಹಾಕುವ ಕ್ರೈಸ್ತ ದಂಪತಿಯನ್ನು ಯೆಹೋವನು ಆಶೀರ್ವದಿಸುವನು

[ಪುಟ 11ರಲ್ಲಿರುವ ಚಿತ್ರ]

ಕ್ರೈಸ್ತ ಸಭೆ ಸಾಂತ್ವನದ ಚಿಲುಮೆ, ಆಧ್ಯಾತ್ಮಿಕ ನೆರವಿನ ತಾಣ