ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗ್ರತೆಯಿಂದಿರಿ’

‘ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗ್ರತೆಯಿಂದಿರಿ’

‘ಫರಿಸಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗ್ರತೆಯಿಂದಿರಿ’

“ಫರಿಸಾಯರ ಕಪಟಾಚಾರವೆಂಬ ಹುಳಿಹಿಟ್ಟಿನ ವಿಷಯದಲ್ಲಿ ಜಾಗ್ರತೆಯಿಂದಿರಿ” ಎಂದು ಯೇಸು ಶಿಷ್ಯರಿಗೆ ಎಚ್ಚರಿಕೆ ಕೊಟ್ಟನು. (ಲೂಕ 12:1) ಇಲ್ಲಿ ಯೇಸು ಯಾವ ವಿಷಯದ ಕುರಿತು ಮಾತಾಡುತ್ತಿದ್ದನು? ಫರಿಸಾಯರ “ಬೋಧನೆಯ ವಿಷಯದಲ್ಲಿ” ಎಚ್ಚರಿಸುತ್ತಿದ್ದನೆಂದು ಮತ್ತಾಯ ತಿಳಿಸುತ್ತಾನೆ.—ಮತ್ತಾ. 16:12.

ಬೈಬಲ್‌ನಲ್ಲಿ ಕೆಲವೊಮ್ಮೆ “ಹುಳಿ” ಎಂಬ ಪದವನ್ನು ಭ್ರಷ್ಟತೆಗೆ ಸೂಚಿಸಲು ಬಳಸಲಾಗಿದೆ. ಫರಿಸಾಯರ ಬೋಧನೆಗಳೂ ಪ್ರವೃತ್ತಿಗಳೂ ಜನರ ಮನಸ್ಸನ್ನು ಭ್ರಷ್ಟಗೊಳಿಸುವಷ್ಟು ಪ್ರಬಲವಾಗಿದ್ದವು. ಫರಿಸಾಯರ ಬೋಧನೆಗಳಿಂದ ಯಾವ ಅಪಾಯವಿತ್ತು?

1 ಫರಿಸಾಯರು ತಾವೇ ನೀತಿವಂತರೆಂಬ ಅಹಂನಿಂದಾಗಿ ಸಾಮಾನ್ಯ ಜನರನ್ನು ಕೀಳಾಗಿ ನೋಡುತ್ತಿದ್ದರು.

ಫರಿಸಾಯರ ಈ ಕೆಟ್ಟ ಪ್ರವೃತ್ತಿಯನ್ನು ಯೇಸು ಒಂದು ಕಥೆಯಲ್ಲಿ ಹೀಗೆ ನಿರೂಪಿಸಿದ್ದಾನೆ: “ಫರಿಸಾಯನು ನಿಂತುಕೊಂಡು, ‘ದೇವರೇ, ಸುಲುಕೊಳ್ಳುವವರೂ ಅನೀತಿವಂತರೂ ವ್ಯಭಿಚಾರಿಗಳೂ ಆಗಿರುವ ಉಳಿದ ಜನರಂತೆ ನಾನಲ್ಲ ಅಥವಾ ಈ ತೆರಿಗೆ ವಸೂಲಿಗಾರನಂತೆಯೂ ಅಲ್ಲದಿರುವುದರಿಂದ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ವಾರಕ್ಕೆ ಎರಡಾವರ್ತಿ ಉಪವಾಸಮಾಡುತ್ತೇನೆ; ನಾನು ಗಳಿಸುವ ಎಲ್ಲದರಲ್ಲಿ ಹತ್ತರಲ್ಲೊಂದು ಭಾಗವನ್ನು ಕೊಡುತ್ತೇನೆ’ ಎಂದು ತನ್ನೊಳಗೆ ಪ್ರಾರ್ಥಿಸತೊಡಗಿದನು. ಆದರೆ ತೆರಿಗೆ ವಸೂಲಿಗಾರನು ದೂರದಲ್ಲಿ ನಿಂತುಕೊಂಡು ಆಕಾಶದ ಕಡೆಗೆ ಕಣ್ಣೆತ್ತಿ ನೋಡಲೂ ಇಷ್ಟಪಡದೆ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ, ‘ದೇವರೇ, ಪಾಪಿಯಾದ ನನಗೆ ಕರುಣೆ ತೋರಿಸು’ ಎಂದು ಹೇಳಿದನು.”—ಲೂಕ 18:11-13.

ಈ ಕಥೆಯಲ್ಲಿನ ತೆರಿಗೆ ವಸೂಲಿಗಾರನ ದೀನಭಾವವನ್ನು ಯೇಸು ಮೆಚ್ಚಿ, “ಈ ಮನುಷ್ಯನು ಆ [ಫರಿಸಾಯನಿಗಿಂತ] ಹೆಚ್ಚು ನೀತಿವಂತನೆಂದು ರುಜುಪಡಿಸುತ್ತಾ ತನ್ನ ಮನೆಗೆ ಹಿಂದಿರುಗಿ ಹೋದನೆಂದು ನಿಮಗೆ ಹೇಳುತ್ತೇನೆ; ಏಕೆಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಎಂದನು. (ಲೂಕ 18:14) ತೆರಿಗೆ ವಸೂಲಿಗಾರರನ್ನು ಜನರು ಅಪ್ರಾಮಾಣಿಕರೆಂದು ಅಗೌರವಿಸುತ್ತಿದ್ದರೂ ಯೇಸು ಹಾಗೆ ವೀಕ್ಷಿಸಲಿಲ್ಲ. ತೆರಿಗೆ ವಸೂಲಿಗಾರರಲ್ಲಿ ಯಾರು ತನ್ನ ಬೋಧನೆಗಳನ್ನು ಇಷ್ಟಪಟ್ಟರೋ ಅವರಿಗೆ ನೆರವು ನೀಡಿದನು. ಕಡಿಮೆಪಕ್ಷ ಮತ್ತಾಯ, ಜಕ್ಕಾಯ ಎಂಬ ಇಬ್ಬರು ತೆರಿಗೆ ವಸೂಲಿಗಾರರು ಅವನ ಅನುಯಾಯಿಗಳಾದರು.

ನಮಗೆ ಹುಟ್ಟಿನಿಂದಲೇ ಕೆಲವು ಸಾಮರ್ಥ್ಯಗಳಿರಬಹುದು. ದೇವರು ನಮಗೆ ಕೆಲವು ಸುಯೋಗಗಳನ್ನು ಕೊಟ್ಟಿರಬಹುದು. ಇತರರ ಲೋಪದೋಷ ಬಲಹೀನತೆಗಳು ಫಕ್ಕನೆ ನಮ್ಮ ಕಣ್ಣಿಗೆ ಬೀಳಬಹುದು. ಹಾಗಾಗಿ ಇತರರಿಗಿಂತ ನಾವು ಶ್ರೇಷ್ಠರು ಎಂಬ ಭಾವನೆ ನಮ್ಮಲ್ಲಿ ಚಿಗುರುವಲ್ಲಿ ಏನು ಮಾಡಬೇಕು? ಅಂಥ ಆಲೋಚನೆ ಚಿಗುರದಂತೆ ಕೂಡಲೇ ಚಿವುಟಿ ಹಾಕಬೇಕು. ಏಕೆಂದರೆ “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಜಂಬಕೊಚ್ಚಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ, ಅಸಭ್ಯವಾಗಿ ವರ್ತಿಸುವುದಿಲ್ಲ, ಸ್ವಹಿತವನ್ನು ಹುಡುಕುವುದಿಲ್ಲ, ಸಿಟ್ಟುಗೊಳ್ಳುವುದಿಲ್ಲ. ಅದು ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ. ಅದು ಅನೀತಿಯನ್ನು ಕಂಡು ಹರ್ಷಿಸುವುದಿಲ್ಲ, ಆದರೆ ಸತ್ಯದಲ್ಲಿ ಹರ್ಷಿಸುತ್ತದೆ” ಎನ್ನುತ್ತದೆ ಬೈಬಲ್‌.—1 ಕೊರಿಂ. 13:4-6.

ಅಪೊಸ್ತಲ ಪೌಲ ಒಮ್ಮೆ ಹೀಗಂದನು, “ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು.” ಅನಂತರ “ಆ ಪಾಪಿಗಳಲ್ಲಿ ನಾನೇ ಅಗ್ರಗಣ್ಯ” ಎಂದು ಹೇಳಿದ್ದನ್ನು ಗಮನಿಸಿ. (1 ತಿಮೊ. 1:15) ಅದೇ ರೀತಿಯ ಮನೋಭಾವವನ್ನು ನಾವೂ ಬೆಳೆಸಿಕೊಳ್ಳಬೇಕು.

ಸ್ವಪರಿಶೀಲನೆಗಾಗಿ ಪ್ರಶ್ನೆಗಳು

ನಾನು ಪಾಪಿ, ನನ್ನ ರಕ್ಷಣೆ ದೇವರ ಅಪಾತ್ರ ದಯೆಯ ಮೇಲೆ ಹೊಂದಿಕೊಂಡಿದೆ ಎಂದು ನಾನು ಒಪ್ಪಿಕೊಳ್ಳುತ್ತೇನಾ? ಅಥವಾ ತುಂಬಾ ವರ್ಷಗಳಿಂದ ದೇವರ ಸೇವೆ ಮಾಡಿದ್ದೇನೆ, ಎಷ್ಟೋ ಸುಯೋಗ ನನಗಿದೆ, ಅಪಾರ ಸಾಮರ್ಥ್ಯ ನನಗಿದೆ, ಹಾಗಾಗಿ ಇತರರಿಗಿಂತ ನಾನೇ ಶ್ರೇಷ್ಠನೆಂಬ ಮನೋಭಾವ ನನ್ನಲ್ಲಿದೆಯಾ?

2 ಫರಿಸಾಯರು ಜನರ ಮುಂದೆ ನೀತಿವಂತರೆಂಬ ಡಂಭಪ್ರದರ್ಶನ ಮಾಡುತ್ತಾ ಹೊಗಳಿಕೆಯ ಸ್ಥಾನಮಾನ, ಬಿರುದುಗಳನ್ನು ಆಶಿಸುತ್ತಿದ್ದರು.

ಆದರೆ ಯೇಸುವಿನ ಎಚ್ಚರಿಕೆ ಹೀಗಿತ್ತು, “ಅವರು ತಾವು ಮಾಡುವ ಪ್ರತಿಯೊಂದು ಕೆಲಸವನ್ನು ಜನರು ನೋಡಬೇಕೆಂದು ಮಾಡುತ್ತಾರೆ; ಸಂರಕ್ಷಣೆಗಾಗಿ ಕಟ್ಟಿಕೊಳ್ಳುವ ಶಾಸ್ತ್ರವಚನಗಳುಳ್ಳ ಡಬ್ಬಿಗಳನ್ನು ಅವರು ಅಗಲವಾಗಿಸುತ್ತಾರೆ ಮತ್ತು ತಮ್ಮ ಉಡುಪಿನ ಅಂಚುಗಳನ್ನು ವಿಶಾಲಗೊಳಿಸುತ್ತಾರೆ. ಅವರು ಸಂಧ್ಯಾ ಭೋಜನಗಳಲ್ಲಿ ಅತಿ ಶ್ರೇಷ್ಠ ಸ್ಥಾನವನ್ನೂ ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳನ್ನೂ ಮಾರುಕಟ್ಟೆಗಳಲ್ಲಿ ವಂದನೆಗಳನ್ನೂ ಜನರಿಂದ ರಬ್ಬಿಗಳು ಎನಿಸಿಕೊಳ್ಳುವುದನ್ನೂ ಇಷ್ಟಪಡುತ್ತಾರೆ.” (ಮತ್ತಾ. 23:5-7) ಫರಿಸಾಯರ ಮನೋಭಾವಕ್ಕೂ ಯೇಸುವಿನ ಮನೋಭಾವಕ್ಕೂ ಅಜಗಜಾಂತರ. ದೇವಪುತ್ರನೂ ಪರಿಪೂರ್ಣ ಮನುಷ್ಯನೂ ಆಗಿದ್ದ ಯೇಸು ವಿನಯಶೀಲನಾಗಿದ್ದನು. ಒಮ್ಮೆ ಯೇಸುವನ್ನು ಒಬ್ಬ ಮನುಷ್ಯ “ಒಳ್ಳೆಯವನೆಂದು” ಕರೆದನು. ಅದಕ್ಕೆ ಯೇಸು “ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಬೇರೆ ಯಾವನೂ ಒಳ್ಳೆಯವನಲ್ಲ” ಎಂದನು. (ಮಾರ್ಕ 10:18) ಇನ್ನೊಂದು ಸಂದರ್ಭದಲ್ಲಿ ಯೇಸು ಶಿಷ್ಯರ ಪಾದಗಳನ್ನು ತೊಳೆದು ತನ್ನ ಅನುಯಾಯಿಗಳಿಗೆ ನಮ್ರತೆಯ ಉತ್ತಮ ಮಾದರಿಯಿಟ್ಟನು.—ಯೋಹಾ. 13:1-15.

ಕ್ರಿಸ್ತನನ್ನು ನಿಜವಾಗಿ ಹಿಂಬಾಲಿಸುವವರು ಸಹೋದರ ಸಹೋದರಿಯರ ಸೇವೆ ಮಾಡುತ್ತಾರೆ. (ಗಲಾ. 5:13) ಮೇಲ್ವಿಚಾರಕರಾಗಲು ಬಯಸುವವರಂತೂ ಈ ವಿಷಯಕ್ಕೆ ಮುಖ್ಯತ್ವ ನೀಡುತ್ತಾರೆ. “ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಲ್ಲಿ” ಅದು ಒಳ್ಳೇದು. ಆದರೆ ಆ ಬಯಕೆ ಇತರರ ಸೇವೆ ಮಾಡಬೇಕೆಂಬ ಸದುದ್ದೇಶದಿಂದ ಮೂಡಿಬರಬೇಕು. “ಮೇಲ್ವಿಚಾರಕನ ಕೆಲಸ” ಎನ್ನುವುದು ಅಧಿಕಾರ ಅಂತಸ್ತು ಅಲ್ಲವೇ ಅಲ್ಲ. ಹಾಗಾಗಿ ಆ ಜವಾಬ್ದಾರಿ ಹೊತ್ತಿರುವವರಲ್ಲಿ ಯೇಸುವಿಗಿದ್ದಂತೆ “ದೀನಹೃದಯ” ಇರಬೇಕು.—1 ತಿಮೊ. 3:1, 6; ಮತ್ತಾ. 11:29.

ಸ್ವಪರಿಶೀಲನೆಗಾಗಿ ಪ್ರಶ್ನೆಗಳು

ಜವಾಬ್ದಾರಿಯ ಸ್ಥಾನದಲ್ಲಿರುವ ಸಹೋದರರನ್ನು ಹೇಗಾದರೂ ಮೆಚ್ಚಿಸಿ ಸೇವಾ ಸುಯೋಗ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತೇನಾ? ಬೇರೆಯವರ ಮುಂದೆ ಮಿಂಚಬೇಕೆಂಬ ಅಭಿಲಾಷೆಯಿಂದ ಇತರರು ನನ್ನನ್ನು ಗುರುತಿಸಿ ಪ್ರಶಂಸಿಸುವ ವಿಷಯಗಳನ್ನಷ್ಟೇ ಮಾಡಲಿಚ್ಛಿಸುತ್ತೇನಾ?

3 ಫರಿಸಾಯರು ಧರ್ಮಶಾಸ್ತ್ರಕ್ಕೆ ತಮ್ಮದೇ ನೀತಿನಿಯಮಗಳನ್ನು ತುರುಕಿಸಿದ್ದರಿಂದ ಜನಸಾಮಾನ್ಯರಿಗೆ ಅದನ್ನು ಪಾಲಿಸಲು ತುಂಬ ಕಷ್ಟವಾಯಿತು.

ಯೆಹೋವನನ್ನು ಹೇಗೆ ಆರಾಧಿಸಬೇಕೆಂಬ ಮೂಲಭೂತ ವಿಷಯಗಳನ್ನು ಮೋಶೆಯ ಧರ್ಮಶಾಸ್ತ್ರ ತಿಳಿಸಿತು. ಆದರೆ ಚಿಕ್ಕಪುಟ್ಟ ವಿವರಗಳೆಲ್ಲಾ ಅದರಲ್ಲಿರಲಿಲ್ಲ. ಉದಾಹರಣೆಗೆ, ಸಬ್ಬತ್‌ ದಿನದಂದು ಕೆಲಸ ಮಾಡಬಾರದೆಂಬ ನಿಯಮ ಇತ್ತಾದರೂ ಯಾವ ಯಾವ ರೀತಿಯ ಕೆಲಸ ಅದರಲ್ಲಿ ಒಳಗೂಡಿದೆ ಎಂದು ಪಟ್ಟಿ ಮಾಡಲಿಲ್ಲ. (ವಿಮೋ. 20:10) ಆದರೆ ಫರಿಸಾಯರು ತಮ್ಮದೇ ಆದ ಸೂಕ್ಷ್ಮಾತಿಸೂಕ್ಷ್ಮ ನೀತಿನಿಯಮಗಳ ಉದ್ದ ಪಟ್ಟಿಯನ್ನೇ ಸಿದ್ಧಪಡಿಸಿದರು. ಯೇಸು ಫರಿಸಾಯರ ನಿಯಮಗಳಿಗೆ ಸೊಪ್ಪುಹಾಕದಿದ್ದರೂ ಧರ್ಮಶಾಸ್ತ್ರವನ್ನು ಅತಿ ಗೌರವದಿಂದ ಪಾಲಿಸಿದನು. (ಮತ್ತಾ. 5:17, 18; 23:23) ಏಕೆಂದರೆ, ಅವನು ಧರ್ಮಶಾಸ್ತ್ರದ ನಿಯಮಗಳನ್ನಷ್ಟೇ ನೋಡಲಿಲ್ಲ. ಅದರ ಹಿಂದಿದ್ದ ಆಶಯವನ್ನು ಅರ್ಥಮಾಡಿಕೊಂಡು ದೇವರ ಕರುಣೆ, ಅನುಭೂತಿಯನ್ನು ನೋಡಿದನು. ಶಿಷ್ಯರಿಂದ ತನಗೆ ನಿರಾಶೆಯಾದಾಗ ಗದರಿಸಲಿಲ್ಲ, ಅವರನ್ನು ಅರ್ಥಮಾಡಿಕೊಂಡನು. ಅವನನ್ನು ದಸ್ತಗಿರಿ ಮಾಡಿದ ರಾತ್ರಿ ನಡೆದ ಘಟನೆಯನ್ನೇ ತೆಗೆದುಕೊಳ್ಳಿ. ದಸ್ತಗಿರಿಗೆ ಮುಂಚೆ ಶಿಷ್ಯರಿಗೆ ಕಳಕಳಿಯಿಂದ ಮನವಿ ಮಾಡುತ್ತಾ ನಿದ್ರೆಗೆ ಜಾರದೆ ಎಚ್ಚರವಾಗಿರುವಂತೆ ಮೂರು ಬಾರಿ ಕೇಳಿಕೊಂಡನು. ಪ್ರತಿ ಬಾರಿ ಶಿಷ್ಯರು ನಿದ್ರೆಹೋದರು. ಯೇಸು ತಾಳ್ಮೆಗೆಟ್ಟನೋ? ಇಲ್ಲ. “ಹೃದಯವು ಸಿದ್ಧವಾಗಿದೆ ನಿಜ, ಆದರೆ ದೇಹಕ್ಕೆ ಬಲ ಸಾಲದು” ಎಂದು ಅನುಕಂಪ ತೋರಿಸಿದನು.—ಮಾರ್ಕ 14:34-42.

ಸ್ವಪರಿಶೀಲನೆಗಾಗಿ ಪ್ರಶ್ನೆಗಳು

ಕಟ್ಟುನಿಟ್ಟಿನ ನಿಯಮ ಹೇರಿ ಇತರರು ಅದನ್ನು ಪಾಲಿಸಲೇಬೇಕೆಂದು ನಾನು ಹಠ ಸಾಧಿಸುತ್ತೇನಾ? ನಾನು ನೆನಸುವುದೇ ಸರಿ ಇತರರು ಅದಕ್ಕೆ ತಲೆಬಾಗಲೇಬೇಕು ಅನ್ನೋ ಮನೋಭಾವ ನನ್ನಲ್ಲಿ ಮನೆಮಾಡಿದೆಯಾ? ಇತರರು ತಮ್ಮ ಶಕ್ತಿಸಾಮರ್ಥ್ಯಕ್ಕೆ ಮೀರಿದ್ದನ್ನು ಮಾಡಬೇಕೆಂದು ನಿರೀಕ್ಷಿಸುತ್ತೇನಾ?

ಯೇಸುವಿನ ಬೋಧನೆ ಫರಿಸಾಯರ ಬೋಧನೆಗಿಂತ ಎಷ್ಟೊಂದು ಭಿನ್ನವಾಗಿತ್ತು ಅಲ್ಲವೇ? ಯೇಸುವಿನ ಮನೋಭಾವವನ್ನು ಬೆಳೆಸಿಕೊಳ್ಳಲು ನೀವೇನಾದರೂ ಮಾಡಬೇಕಾಗಿದೆಯಾ? ಇಂದೇ ಕ್ರಿಯೆಗೈಯಿರಿ.

[ಪುಟ 28ರಲ್ಲಿರುವ ಚಿತ್ರ]

ಫರಿಸಾಯರು ಹಣೆಯ ಮೇಲೆ ಕಟ್ಟಿಕೊಳ್ಳುತ್ತಿದ್ದ ಶಾಸ್ತ್ರವಚನಗಳುಳ್ಳ ಡಬ್ಬಿಗಳು.—ಮತ್ತಾ. 23:2, 5

[ಪುಟ 29ರಲ್ಲಿರುವ ಚಿತ್ರಗಳು]

ನಮ್ರಭಾವದ ಸಭಾ ಹಿರಿಯರು ದರ್ಪದ ಫರಿಸಾಯರಂತಿರದೆ ಇತರರ ಸೇವೆ ಮಾಡುತ್ತಾರೆ

[ಪುಟ 30ರಲ್ಲಿರುವ ಚಿತ್ರ]

ನೀವು ಇತರರಿಂದ ಅವರ ಸಾಮರ್ಥ್ಯಕ್ಕೆ ಮೀರಿದ್ದನ್ನು ನಿರೀಕ್ಷಿಸುತ್ತೀರಾ? ಯೇಸುವಿನಂತೆ ಅನುಕಂಪ ತೋರಿಸುತ್ತೀರಾ?