ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹಾ ಸಮಯಪಾಲಕನಾದ ಯೆಹೋವನನ್ನು ನಂಬಿರಿ

ಮಹಾ ಸಮಯಪಾಲಕನಾದ ಯೆಹೋವನನ್ನು ನಂಬಿರಿ

ಮಹಾ ಸಮಯಪಾಲಕನಾದ ಯೆಹೋವನನ್ನು ನಂಬಿರಿ

“ಕಾಲಸಮಯಗಳನ್ನು ಮಾರ್ಪಡಿಸುತ್ತಾನೆ, ರಾಜರನ್ನು ತಳ್ಳುತ್ತಾನೆ, ನಿಲ್ಲಿಸುತ್ತಾನೆ.”—ದಾನಿ. 2:21.

ಉತ್ತರಿಸುವಿರಾ?

ಯೆಹೋವನು ಮಹಾ ಸಮಯಪಾಲಕನೆಂದು ಸೃಷ್ಟಿವಸ್ತುಗಳು ಹಾಗೂ ಬೈಬಲ್‌ ಪ್ರವಾದನೆಗಳು ಹೇಗೆ ಪುರಾವೆ ನೀಡುತ್ತವೆ?

“ಕಾಲಸಮಯ” ಯೆಹೋವನ ಹತೋಟಿಯಲ್ಲಿದೆ ಎನ್ನುವ ವಿಚಾರ ಏನು ಮಾಡುವಂತೆ ನಮಗೆ ಸ್ಫೂರ್ತಿ ನೀಡಬೇಕು?

ಜಗತ್ತಿನ ಆಗುಹೋಗುಗಳಾಗಲಿ ಮನುಷ್ಯರ ಕಾರ್ಯಯೋಜನೆಗಳಾಗಲಿ ಯೆಹೋವನ ವೇಳಾಪಟ್ಟಿಯನ್ನು ಏಕೆ ಬದಲಾಯಿಸಲಾರವು?

1, 2. ಸಮಯದ ಕುರಿತ ಎಲ್ಲಾ ವಿವರಗಳನ್ನು ಯೆಹೋವನು ಬಲ್ಲನೆಂದು ಹೇಗೆ ಹೇಳಸಾಧ್ಯ?

ಯೆಹೋವ ದೇವರು ಮಾನವರನ್ನು ಸೃಷ್ಟಿಸುವ ಎಷ್ಟೋ ಮುಂಚೆಯೇ ಕಾಲಸೂಚಕಗಳನ್ನು ಉಂಟುಮಾಡಿದನು. ಸೃಷ್ಟಿಕಾರ್ಯದ ನಾಲ್ಕನೇ ದಿನದಲ್ಲಿ ಆತನು ಹೀಗೆ ಹೇಳಿದನು, “ಆಕಾಶಮಂಡಲದಲ್ಲಿ ಬೆಳಕುಗಳು ಉಂಟಾಗಲಿ; ಅವು ಹಗಲಿರುಳುಗಳನ್ನು ಬೇರೆ ಬೇರೆ ಮಾಡಲಿ; ಇದಲ್ಲದೆ ಅವು ಗುರುತುಗಳಾಗಿದ್ದು ಸಮಯಗಳನ್ನೂ ದಿನಸಂವತ್ಸರಗಳನ್ನೂ ತೋರಿಸಲಿ.” (ಆದಿ. 1:14, 19, 26) ಯೆಹೋವ ದೇವರು ಹೇಳಿದಂತೆಯೇ ಆಯಿತು.

2 ಸಮಯದ ಕುರಿತು ವಿಜ್ಞಾನಿಗಳ ಮಧ್ಯೆ ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. ಒಂದು ವಿಶ್ವಕೋಶ ಹೇಳುವಂತೆ “ಸಮಯ ಎಂದರೆ ಏನೆಂದು ಯಾರೊಬ್ಬರು ವಿವರಿಸಲಾರರು.” ಆದರೆ ಯೆಹೋವ ದೇವರಿಗೆ ಅದು ಅಸಾಧ್ಯವಲ್ಲ. ಸಮಯದ ಕುರಿತ ಎಲ್ಲಾ ವಿವರಗಳನ್ನು ಆತನು ಬಲ್ಲನು. ಏಕೆಂದರೆ, ಆತನೇ “ಆಕಾಶಮಂಡಲವನ್ನು ಸೃಷ್ಟಿಸಿ . . . ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು.” ಅಷ್ಟೇ ಅಲ್ಲ, “ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿ . . . ಇನ್ನೂ ನಡೆಯದಿರುವ ಕಾರ್ಯಗಳನ್ನು” ಮುಂಚಿತವಾಗಿಯೇ ತಿಳಿಸುವ ಮಹಾ ಸಾಮರ್ಥ್ಯ ಆತನಿಗಿದೆ. (ಯೆಶಾ. 45:18; 46:10) ಆತನು ಮಹಾ ಸಮಯಪಾಲಕ ಎನ್ನುವುದನ್ನು ನಮ್ಮ ಸುತ್ತಲಿನ ಜಗತ್ತು ಹಾಗೂ ನೆರವೇರಿದ ಬೈಬಲ್‌ ಪ್ರವಾದನೆಗಳು ಹೇಗೆ ತೋರಿಸಿಕೊಡುತ್ತವೆ ಎಂದು ನಾವೀಗ ನೋಡೋಣ. ಇದು ಆತನಲ್ಲಿ ಹಾಗೂ ಆತನ ವಾಕ್ಯವಾದ ಬೈಬಲಿನಲ್ಲಿ ನಮ್ಮ ನಂಬಿಕೆಯನ್ನು ಹೆಚ್ಚಿಸುತ್ತದೆ.

ಯೆಹೋವನ ಸೃಷ್ಟಿಗಳು

3. ಸಮಯಪಾಲನೆಯಲ್ಲಿ ನಿಖರವಾಗಿರುವ ಒಂದೆರಡು ಸೃಷ್ಟಿವಸ್ತುಗಳನ್ನು ಉದಾಹರಿಸಿ.

3 ಯೆಹೋವ ದೇವರ ಸೃಷ್ಟಿಗಳು ಅವು ಸೂಕ್ಷ್ಮ ಅಣುಗಳಾಗಿರಲಿ ಬೃಹದಾಕಾರದ ನಕ್ಷತ್ರಗಳಾಗಿರಲಿ ನಿಖರವಾಗಿ ಸಮಯಪಾಲನೆ ಮಾಡುತ್ತವೆ. ಉದಾಹರಣೆಗೆ ಪರಮಾಣು ಕಂಪಿಸುವ ವೇಗ ಒಂದೇ ತೆರನಾಗಿರುತ್ತದೆ. ಅದರ ಆಧಾರದ ಮೇರೆಗೆ ತಯಾರಿಸಿದ ಪರಮಾಣು ಗಡಿಯಾರ ಎಷ್ಟು ನಿಖರವಾಗಿ ಸಮಯವನ್ನು ತೋರಿಸುತ್ತದೆಂದರೆ 8 ಕೋಟಿ ವರ್ಷಗಳ ನಂತರ ಸಹ ಒಂದು ಸೆಕೆಂಡೂ ಹೆಚ್ಚುಕಡಿಮೆ ಆಗಿರುವುದಿಲ್ಲ. ಆಕಾಶದ ನಕ್ಷತ್ರ ಹಾಗೂ ಗ್ರಹಗಳ ಚಲನೆ ಕೂಡ ಬಹಳ ನಿಖರವಾಗಿದೆ. ಎಷ್ಟೆಂದರೆ, ಅವುಗಳ ಸ್ಥಾನವನ್ನಾಧರಿಸಿ ಋತುಗಳನ್ನು ಗುರುತಿಸಬಹುದು, ನಾವಿಕರು ಸರಿಯಾದ ದಿಕ್ಕಿಗೆ ಪಯಣಿಸಬಹುದು. ಈ “ಸಮಯಸೂಚಕಗಳ” ನಿರ್ಮಾಣಿಕನಾದ ಯೆಹೋವ ದೇವರು ನಿಜಕ್ಕೂ “ಅತಿ ಬಲಾಢ್ಯನೂ ಮಹಾಶಕ್ತನೂ” ಆಗಿದ್ದಾನೆ. ಈ ಕುರಿತು ಯೋಚಿಸುವಾಗ ಆತನನ್ನು ಘನಪಡಿಸಿ ಸ್ತುತಿಸಬೇಕೆಂದು ಅನಿಸುವುದಿಲ್ಲವೇ?—ಯೆಶಾಯ 40:26 ಓದಿ.

4. ಜೀವಜಗತ್ತಿನಲ್ಲಿರುವ ಜೈವಿಕ ಗಡಿಯಾರ ದೇವರ ಅಪಾರ ವಿವೇಕವನ್ನು ಹೇಗೆ ಹಾಡಿಹೊಗಳುತ್ತದೆ?

4 ಜೀವಜಗತ್ತಿನಲ್ಲೂ ಸಮಯದ ನಿಖರತೆ ಎದ್ದುಕಾಣುತ್ತದೆ. ವಿವಿಧ ಪ್ರಾಣಿಪಕ್ಷಿ, ಮರಗಿಡಗಳಲ್ಲಿ ಒಂದು ವಿಶೇಷ ರೀತಿಯ ಜೈವಿಕ ಗಡಿಯಾರವಿದೆ. ಹಾಗಾಗಿಯೇ ವಲಸೆ ಹೋಗುವ ಹಕ್ಕಿಗಳು ತಮ್ಮ ಪ್ರಯಾಣವನ್ನು ಯಾವ ಕಾಲದಲ್ಲಿ ಆರಂಭಿಸಬೇಕು ಎನ್ನುವುದನ್ನು ನಿಖರವಾಗಿ ಅರಿತಿರುತ್ತವೆ. (ಯೆರೆ. 8:7) ಮಾನವರಾದ ನಮ್ಮಲ್ಲಿಯೂ ಈ ಜೈವಿಕ ಗಡಿಯಾರವಿದೆ. ಉದಾಹರಣೆಗೆ ರಾತ್ರಿ ಯಾವುದು ಹಗಲು ಯಾವುದು ಎನ್ನುವುದನ್ನು ನಮ್ಮ ದೇಹ ಸ್ವತಃ ಗುರುತಿಸುತ್ತದೆ. ಒಬ್ಬ ಮನುಷ್ಯ ವಿಮಾನದಲ್ಲಿ ಪ್ರಯಾಣಿಸಿ ಭೂಗೋಳದ ಇನ್ನೊಂದು ಬದಿಯ ದೇಶವನ್ನು ತಲಪುವುದಾದರೆ ಹೊಸ ಸಮಯಕ್ಕೆ ಹೊಂದಿಕೊಳ್ಳಲು ಅವನಿಗೆ ಕೆಲವು ದಿನ ಬೇಕಾಗುತ್ತದೆ. ಹೀಗೆ ವಿಶ್ವದಲ್ಲಿರುವ ಅನೇಕಾನೇಕ ಸೃಷ್ಟಿಗಳು ನಿರ್ಮಾಣಿಕನಾದ ಯೆಹೋವನು “ಕಾಲಸಮಯಗಳನ್ನು” ಹತೋಟಿಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನುವುದಕ್ಕೆ ಸ್ಪಷ್ಟ ಪುರಾವೆ ನೀಡುತ್ತವೆ. ಮಾತ್ರವಲ್ಲ, ಅವು ಆತನ ಅಪಾರ ಜ್ಞಾನ ಹಾಗೂ ಸಾಮರ್ಥ್ಯವನ್ನು ಹಾಡಿಹೊಗಳುತ್ತವೆ. (ಕೀರ್ತನೆ 104:24 ಓದಿ.) ಹೌದು, ಮಹಾ ಸಮಯಪಾಲಕನಾದ ಯೆಹೋವ ದೇವರಲ್ಲಿ ಅಪರಿಮಿತ ಶಕ್ತಿ ವಿವೇಕವಿದೆ. ತಾನು ಸಂಕಲ್ಪಿಸಿದ್ದನ್ನು ಆತನು ಚಾಚೂತಪ್ಪದೆ ಈಡೇರಿಸುವನು ಎಂದು ನಾವು ಕಣ್ಮುಚ್ಚಿ ನಂಬಬಹುದು.

ಸರಿಯಾದ ಸಮಯಕ್ಕೆ ಈಡೇರಿದ ಭವಿಷ್ಯವಾಣಿಗಳು

5. (1) ಮಾನವಕುಲದ ಭವಿಷ್ಯವೇನು ಎಂಬ ಪ್ರಶ್ನೆಗೆ ಎಲ್ಲಿ ಮಾತ್ರ ಉತ್ತರವಿದೆ? (2) ಭವಿಷ್ಯತ್ತಿನಲ್ಲಿ ಯಾವ ಸಮಯದಲ್ಲಿ ಏನಾಗುತ್ತದೆ ಎನ್ನುವುದನ್ನು ಯೆಹೋವನು ಮಾತ್ರ ತಿಳಿಸಬಲ್ಲನು ಏಕೆ?

5 ಯೆಹೋವನ “ಅದೃಶ್ಯ ಗುಣಗಳು” ಸುತ್ತಲಿನ ಜಗತ್ತಿನಲ್ಲಿ ಸ್ಫಟಿಕ ಸ್ಪಷ್ಟ. ಆದರೆ ಮಾನವಕುಲದ ಭವಿಷ್ಯವೇನು ಎಂಬ ಪ್ರಶ್ನೆಗೆ ಸೃಷ್ಟಿಗಳು ಉತ್ತರ ನೀಡಲಾರವು. (ರೋಮ. 1:20) ಉತ್ತರ ಬೇಕಾದರೆ ನಾವು ದೇವರ ವಾಕ್ಯವಾದ ಬೈಬಲಿನ ಪುಟಗಳನ್ನು ತಿರುವಿಹಾಕಬೇಕು. ಅದರಲ್ಲಿ ದೇವರ ಅನೇಕಾನೇಕ ಭವಿಷ್ಯವಾಣಿಗಳು ಸರಿಯಾದ ಸಮಯದಲ್ಲಿ ಈಡೇರಿರುವ ಸಾಕಷ್ಟು ಉದಾಹರಣೆಗಳಿವೆ. ಭವಿಷ್ಯವನ್ನು ಮುನ್ನೋಡುವ ಸಾಮರ್ಥ್ಯ ತನಗಿರುವುದರಿಂದ ಮುಂದೇನಾಗುತ್ತದೆ ಎನ್ನುವುದನ್ನು ಯೆಹೋವನು ನಿಖರವಾಗಿ ತಿಳಿಸಬಲ್ಲನು. ಬೈಬಲಿನಲ್ಲಿ ದಾಖಲಾಗಿರುವ ಭವಿಷ್ಯವಾಣಿಗಳು ಸರಿಯಾದ ಸಮಯದಲ್ಲಿ ನೆರವೇರುತ್ತವೆ. ಏಕೆಂದರೆ, ತಾನು ನುಡಿದದ್ದು ತಕ್ಕ ಸಮಯದಲ್ಲಿ ಈಡೇರುವಂತೆ ನೋಡಿಕೊಳ್ಳುವ ಅಪಾರ ಸಾಮರ್ಥ್ಯ ದೇವರಿಗಿದೆ.

6. ಬೈಬಲ್‌ ಪ್ರವಾದನೆಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕೆಂಬುದು ದೇವರ ಇಷ್ಟವೆಂದು ಯಾವುದು ತೋರಿಸುತ್ತದೆ?

6 ಬೈಬಲ್‌ ಪ್ರವಾದನೆಗಳನ್ನು ಅರ್ಥಮಾಡಿಕೊಂಡು ನಾವು ಪ್ರಯೋಜನ ಹೊಂದುವುದು ದೇವರ ಇಷ್ಟ. ಸಮಯವನ್ನು ನಾವು ವೀಕ್ಷಿಸುವುದಕ್ಕೂ ದೇವರು ವೀಕ್ಷಿಸುವುದಕ್ಕೂ ವ್ಯತ್ಯಾಸವಿದೆ. ಹಾಗಿದ್ದರೂ ಒಂದು ಪ್ರವಾದನೆ ಯಾವಾಗ ನೆರವೇರುವುದು ಎಂಬ ನಿಖರ ಕಾಲವನ್ನು ದೇವರು ಬೈಬಲಿನಲ್ಲಿ ಸೂಚಿಸುವಾಗ ನಮಗೆ ಅರ್ಥವಾಗುವಂಥ ರೀತಿಯಲ್ಲಿ ವಿವರಣೆ ನೀಡಿದ್ದಾನೆ. (ಕೀರ್ತನೆ 90:4 ಓದಿ.) ಉದಾಹರಣೆಗೆ, ನಾಲ್ಕು ಮಂದಿ ದೇವದೂತರು ಮೂರನೆಯ ಒಂದು ಭಾಗದಷ್ಟು ಜನರನ್ನು ಕೊಲ್ಲುವ “ಗಳಿಗೆ, ದಿನ, ತಿಂಗಳು ಮತ್ತು ವರ್ಷಕ್ಕಾಗಿ” ಸಿದ್ಧಗೊಳಿಸಲ್ಪಟ್ಟಿದ್ದರೆಂದು ಪ್ರಕಟನೆ ಪುಸ್ತಕ ಹೇಳುತ್ತದೆ. (ಪ್ರಕ. 9:14, 15) ಇಲ್ಲಿ ತಿಳಿಸುವ ಕಾಲಮಾಪನೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ. ಬೈಬಲಿನಲ್ಲಿರುವ ಭವಿಷ್ಯವಾಣಿಗಳು ಚಾಚೂತಪ್ಪದೆ ಸಮಯಕ್ಕೆ ಸರಿಯಾಗಿ ಈಡೇರಿವೆ ಎನ್ನುವುದನ್ನು ಮನಗಾಣುವಾಗ ಮಹಾ ಸಮಯಪಾಲಕನಾದ ಯೆಹೋವನಲ್ಲಿ ನಮ್ಮ ನಂಬಿಕೆ ದ್ವಿಗುಣಗೊಳ್ಳುತ್ತದೆ. ಮಾತ್ರವಲ್ಲ ಆತನ ವಾಕ್ಯವಾದ ಬೈಬಲಿನ ಮೇಲೂ ನಂಬಿಕೆ ಹೆಚ್ಚಾಗುತ್ತದೆ. ನಾವೀಗ ಒಂದೆರಡು ಉದಾಹರಣೆಗಳನ್ನು ನೋಡೋಣ.

7. ಯೆರೂಸಲೇಮ್‌ ಹಾಗೂ ಯೆಹೂದದ ಕುರಿತು ಯೆರೆಮೀಯನು ನುಡಿದ ಭವಿಷ್ಯವಾಣಿ ಯೆಹೋವನು ಮಹಾ ಸಮಯಪಾಲಕ ಎನ್ನುವುದಕ್ಕೆ ಯಾವ ಪುರಾವೆ ನೀಡುತ್ತದೆ?

7 ಮೊದಲು, ಕ್ರಿ.ಪೂ. ಏಳನೇ ಶತಮಾನದಲ್ಲಿ ಏನಾಯಿತೆಂದು ನೋಡೋಣ. “ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳಿಕೆಯ ನಾಲ್ಕನೆಯ ವರುಷದಲ್ಲಿ” ಮಹಾ ಸಮಯಪಾಲಕ ಯೆಹೋವನು ಯೆಹೂದ್ಯರ ವಿಷಯವಾಗಿ ಯೆರೆಮೀಯನಿಗೆ ಒಂದು ದೈವೋಕ್ತಿ ಕೊಟ್ಟನು. (ಯೆರೆ. 25:1) ಬಾಬೆಲ್‌ ದೇಶದವರು ಯೆರೂಸಲೇಮ್‌ ಪಟ್ಟಣವನ್ನು ನಾಶಮಾಡಿ ಯೆಹೂದ್ಯರನ್ನು ಸೆರೆ ಒಯ್ಯುವರೆಂದು ಆ ದೈವೋಕ್ತಿ ತಿಳಿಸಿತು. ಯೆಹೂದ್ಯರು “ಎಪ್ಪತ್ತು ವರುಷ ಬಾಬೆಲಿನ ಅರಸನ ಅಡಿಯಾಳಾಗಿ” ಬಿದ್ದಿರುವರೆಂದೂ ತಿಳಿಸಿತು. ನುಡಿದಂತೆಯೇ ಬಾಬೆಲಿನ ಪಡೆ ಕ್ರಿ.ಪೂ. 607ರಲ್ಲಿ ಯೆರೂಸಲೇಮನ್ನು ವಶಪಡಿಸಿಕೊಂಡಿತು. ಯೆಹೂದ್ಯರೆಲ್ಲರು ಸೆರೆಯಾಳಾಗಿ ಒಯ್ಯಲ್ಪಟ್ಟರು. 70 ವರ್ಷಗಳ ನಂತರ ಅವರಿಗೇನಾಗಲಿತ್ತು? ಯೆರೆಮೀಯನ ಮೂಲಕ ದೇವರು ನೀಡಿದ ಪ್ರವಾದನೆ ಗಮನಿಸಿ. “ಯೆಹೋವನು ಇಂತೆನ್ನುತ್ತಾನೆ—ಬಾಬೆಲ್‌ ರಾಜ್ಯವು ಎಪ್ಪತ್ತು ವರುಷ ಪ್ರಬಲಿಸಿದ ಮೇಲೆ ನಾನು ನಿಮ್ಮನ್ನು ಕಟಾಕ್ಷಿಸಿ ಈ ಸ್ಥಳಕ್ಕೆ ತಿರಿಗಿ ಬರಮಾಡುವೆನೆಂಬ ನನ್ನ ಶುಭವಾಕ್ಯವನ್ನು ನಿಮಗಾಗಿ ನೆರವೇರಿಸುವೆನು.” (ಯೆರೆ. 25:11, 12; 29:10) ಈ ಪ್ರವಾದನೆ ಸರಿಯಾಗಿ 70 ವರ್ಷಗಳ ನಂತರ ಅಂದರೆ ಕ್ರಿ.ಪೂ. 537ರಲ್ಲಿ ಮೇದ್ಯ ಮತ್ತು ಪಾರಸಿಯರು ಯೆಹೂದ್ಯರನ್ನು ಬಾಬೆಲಿನಿಂದ ಬಿಡುಗಡೆ ಮಾಡಿದಾಗ ನೆರವೇರಿತು.

8, 9. ದಾನಿಯೇಲ ನುಡಿದ ಭವಿಷ್ಯವಾಣಿಗಳು ಯೆಹೋವನು “ಕಾಲಸಮಯಗಳನ್ನು” ಹತೋಟಿಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನುವುದನ್ನು ಹೇಗೆ ರುಜುಪಡಿಸುತ್ತವೆ?

8 ಪ್ರಾಚೀನ ದೇವಜನರು ಒಳಗೂಡಿದ್ದ ಇನ್ನೊಂದು ಭವಿಷ್ಯವಾಣಿ ಕುರಿತು ನೋಡೋಣ. ಯೆಹೂದ್ಯರು ಬಾಬೆಲಿನಿಂದ ಹಿಂತಿರುಗುವ ಎರಡು ವರ್ಷಗಳ ಮುಂಚೆ ದೇವರು ದಾನಿಯೇಲನ ಮೂಲಕ ಈ ಪ್ರವಾದನೆ ನೀಡಿದನು. ಯೆರೂಸಲೇಮ್‌ ಕಟ್ಟಲ್ಪಡಲಿ ಎಂಬ ರಾಜಾಜ್ಞೆ ಹೊರಟು 483 ವರ್ಷಗಳ ನಂತರ ಮೆಸ್ಸೀಯನು ಆಗಮಿಸುವನೆಂದು ಪ್ರವಾದನೆ ತಿಳಿಸಿತು. ಮೇದ್ಯಪಾರಸಿಯದ ರಾಜನು ಆ ಆಜ್ಞೆಯನ್ನು ಕ್ರಿ.ಪೂ. 455ರಲ್ಲಿ ನೀಡಿದನು. ಅಲ್ಲಿಂದ ಸರಿಯಾಗಿ 483 ವರ್ಷಗಳ ನಂತರ ಅಂದರೆ ಕ್ರಿ.ಶ. 29ರಲ್ಲಿ ನಜರೇತಿನ ಯೇಸು ದೀಕ್ಷಾಸ್ನಾನ ಪಡೆದು ಪವಿತ್ರಾತ್ಮದಿಂದ ಅಭಿಷೇಕಗೊಂಡು ಮೆಸ್ಸೀಯನಾದನು. *ನೆಹೆ. 2:1, 5-8; ದಾನಿ. 9:24, 25; ಲೂಕ 3:1, 2, 21, 22.

9 ಮೆಸ್ಸೀಯ ರಾಜ್ಯದ ಬಗ್ಗೆ ತಿಳಿಸಲಾದ ಭವಿಷ್ಯವಾಣಿಗಳನ್ನು ಈಗ ತುಸು ಗಮನಿಸಿ. ದೇವರ ರಾಜ್ಯ ಇಸವಿ 1914ರಲ್ಲಿ ಸ್ವರ್ಗದಲ್ಲಿ ಸ್ಥಾಪನೆಯಾಗುವುದು ಎಂದು ಬೈಬಲ್‌ ಸೂಚಿಸಿತು. ಉದಾಹರಣೆಗೆ ಯೇಸುವಿನ ಸಾನ್ನಿಧ್ಯದ “ಸೂಚನೆ” ನೀಡುತ್ತಾ ಸೈತಾನನನ್ನು ಸ್ವರ್ಗದಿಂದ ತಳ್ಳಿಬಿಡಲಾಗುತ್ತದೆ, ಅದರ ಪರಿಣಾಮವಾಗಿ ಆ ಸಮಯದಲ್ಲಿ ಭೂಮಿಯಲ್ಲಿ ಸಂಕಷ್ಟಗಳು ತುಂಬಿರುತ್ತವೆ ಎಂದು ಬೈಬಲ್‌ ಸೂಚಿಸಿತು. (ಮತ್ತಾ. 24:3-14; ಪ್ರಕ. 12:9, 12) ಇತರ ಪ್ರವಾದನೆಗಳು, “ಅನ್ಯಜನಾಂಗಗಳ ನೇಮಿತ ಕಾಲಗಳು” ಸರಿಯಾಗಿ ಇಸವಿ 1914ರಲ್ಲಿ ಕೊನೆಗೊಂಡು ದೇವರ ಸರಕಾರವು ಸ್ವರ್ಗದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸುವುದೆಂದು ಸೂಚಿಸಿದವು.—ಲೂಕ 21:24; ದಾನಿ. 4:10-17. *

10. ಭವಿಷ್ಯದಲ್ಲಿ ಯಾವ ಸಂಗತಿಗಳು ನಿಗದಿತ ಸಮಯಕ್ಕೆ ನೆರವೇರಲಿರುವವು?

10 ಯೇಸು ತಿಳಿಸಿದ “ಮಹಾ ಸಂಕಟ” ಶೀಘ್ರದಲ್ಲೇ ಆರಂಭವಾಗಲಿದೆ. ಅನಂತರ ಯೇಸು ಸಾವಿರ ವರ್ಷ ರಾಜ್ಯಭಾರ ಮಾಡುವನು. ಈ ಸಂಗತಿಗಳು ನಿಗದಿತ ಸಮಯದಲ್ಲಿ ನೆರವೇರುತ್ತವೆಯೇ ಎನ್ನುವ ಸಂಶಯ ಬೇಡ. ಯೇಸು ಭೂಮಿಯಲ್ಲಿ ಜೀವಿಸುವಾಗ ಯೆಹೋವನು ಈಗಾಗಲೇ ಆ ಸಂಗತಿಗಳು ಸಂಭವಿಸುವ “ದಿನ ಮತ್ತು ಗಳಿಗೆ”ಯನ್ನು ನಿಗದಿಪಡಿಸಿಯಾಗಿತ್ತು.—ಮತ್ತಾ. 24:21, 36; ಪ್ರಕ. 20:6.

“ಸುಸಮಯವನ್ನು ಖರೀದಿಸಿ”

11. ಇದು ಅಂತ್ಯಕಾಲವೆಂದು ಅರಿತ ನಾವು ಏನು ಮಾಡಬೇಕು?

11 ಇದು “ಅಂತ್ಯಕಾಲ” ಆಗಿರುವ ಕಾರಣ ಹಾಗೂ ದೇವರ ಸರಕಾರದ ಆಧಿಪತ್ಯ ಆರಂಭವಾಗಿರುವ ಕಾರಣ ನಮ್ಮ ಜೀವನರೀತಿ ಹೇಗಿರಬೇಕು? (ದಾನಿ. 12:4) ಸುತ್ತಮುತ್ತ ರಾಶಿರಾಶಿ ಸಮಸ್ಯೆಗಳು ತುಂಬಿ ಜನಜೀವನ ಅಸ್ತವ್ಯಸ್ತವಾಗಿರುವುದು ಕಣ್ಣ ಮುಂದೆ ಇದ್ದರೂ ಅನೇಕರು ಬೈಬಲ್‌ ತಿಳಿಸಿದ ಅಂತ್ಯಕಾಲ ಇದಾಗಿದೆ ಎಂದು ನಂಬುವುದಿಲ್ಲ. ಇವೆಲ್ಲಾ ಒಂದು ದಿನ ಮುಗಿಲುಮುಟ್ಟಿ ಭೂಮಿಯಲ್ಲಿ ಯಾರೂ ಬದುಕಲಾಗದ ಸ್ಥಿತಿ ಬರಬಹುದು ಎಂದು ಕೆಲವರು ಭಾವಿಸಿದರೆ ಮತ್ತೆ ಕೆಲವರು ಇಂದಲ್ಲ ನಾಳೆ ಮನುಷ್ಯನೇ “ಶಾಂತಿ ಮತ್ತು ಭದ್ರತೆ” ತರುವನು ಎಂದು ಕನವರಿಸುತ್ತಾರೆ. (1 ಥೆಸ. 5:3) ನಾವು ಅವರಂತೆ ಇದ್ದೇವಾ? ಇವು ಕಡೇ ದಿವಸಗಳಾಗಿವೆ, ಸೈತಾನನ ಈ ದುಷ್ಟಲೋಕದ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ ಎನ್ನುವ ನಂಬಿಕೆ ನಮಗಿದೆಯಾ? ಇರುವಲ್ಲಿ ಮಹಾ ಸಮಯಪಾಲಕ ದೇವರಾದ ಯೆಹೋವನ ಸೇವೆಮಾಡಲು ಮತ್ತು ಆತನ ಕುರಿತು ಜನರಿಗೆ ತಿಳಿಸಲು ಉಳಿದಿರುವ ಸಮಯವನ್ನು ಸದುಪಯೋಗಿಸಲು ಪ್ರಯತ್ನಿಸುತ್ತೇವೆ. (2 ತಿಮೊ. 3:1) ಹೌದು, ಸಮಯವನ್ನು ವಿನಿಯೋಗಿಸುವ ವಿಷಯದಲ್ಲಿ ಜ್ಞಾನಿಗಳಾಗಿರೋಣ.—ಎಫೆಸ 5:15-17 ಓದಿ.

12. ನೋಹನ ದಿನಗಳ ಕುರಿತು ಯೇಸು ಹೇಳಿದ ಮಾತಿನಲ್ಲಿ ನಮಗೆ ಯಾವ ಪಾಠವಿದೆ?

12 ಸಮಯ ಕಬಳಿಸುವ ವಿಷಯಗಳೇ ತುಂಬಿರುವ ಈ ಪ್ರಪಂಚದಲ್ಲಿ “ಸುಸಮಯ” ಖರೀದಿಸುವುದು ಅಷ್ಟು ಸುಲಭವಲ್ಲ. ಯೇಸು ನೀಡಿದ ಎಚ್ಚರಿಕೆ ನಿಮಗೆ ನೆನಪಿರಬಹುದು. “ನೋಹನ ದಿನಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಸಾನ್ನಿಧ್ಯವೂ ಇರುವುದು” ಎಂದವನು ಹೇಳಿದನು. ನೋಹನ ದಿನಗಳು ಹೇಗಿದ್ದವು? ಅಂದಿನ ಲೋಕ ನಾಶವಾಗುತ್ತದೆ ಎಂದು ದೇವರು ತಿಳಿಸಿದನು. ಜಲಪ್ರಳಯ ಇಡೀ ಲೋಕವನ್ನೇ ಮುಳುಗಿಸಿ ದುಷ್ಟ ಮಾನವರನ್ನು ನಾಶಮಾಡಲಿತ್ತು. “ನೀತಿಯನ್ನು ಸಾರುವವನಾಗಿದ್ದ ನೋಹ” ಈ ಸಂದೇಶವನ್ನು ಅಂದಿನ ಜನರಿಗೆ ಸಾರಿತಿಳಿಸಿದನು. (ಮತ್ತಾ. 24:37; 2 ಪೇತ್ರ 2:5) ಆದರೆ ಆ ಜನರು “ಊಟಮಾಡುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಸ್ತ್ರೀಯರನ್ನು ಮದುವೆಮಾಡಿಕೊಡುತ್ತಾ ಇದ್ದರು; ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ.” ಆ ಕಾರಣಕ್ಕಾಗಿಯೇ ಯೇಸು ತನ್ನ ಅನುಯಾಯಿಗಳಿಗೆ ಎಚ್ಚರಿಕೆ ನೀಡಿ, “ನಿಮ್ಮನ್ನು ಸಿದ್ಧರಾಗಿಟ್ಟುಕೊಳ್ಳಿರಿ, ಏಕೆಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ” ಎಂದು ಹೇಳಿದನು. (ಮತ್ತಾ. 24:38, 39, 44) ಲಕ್ಷ್ಯಕೊಡದ ಆ ಜನರಂತೆ ನಾವಿರದೆ ನೋಹನಂತೆ ಸಿದ್ಧರಾಗಿರಬೇಕು. ಆ ನಿಟ್ಟಿನಲ್ಲಿ ಯಾವುದು ನಮಗೆ ನೆರವಾಗುವುದು?

13, 14. ಮನುಷ್ಯಕುಮಾರನ ಆಗಮನಕ್ಕಾಗಿ ಕಾಯುತ್ತಿರುವಾಗ ಯೆಹೋವನ ಕುರಿತು ಏನನ್ನು ಮನಸ್ಸಿನಲ್ಲಿಡುವುದು ನಿಷ್ಠೆಯಿಂದ ಸೇವೆ ಮಾಡಲು ನಮಗೆ ನೆರವಾಗುವುದು?

13 ಮನುಷ್ಯಕುಮಾರನು ನಾವು ನೆನಸದ ಗಳಿಗೆಯಲ್ಲಿ ಬರುತ್ತಾನೆ ಎಂಬುದೇನೋ ನಿಜ. ಆದರೆ ಮಹಾ ಸಮಯಪಾಲಕ ಯೆಹೋವನು ತನ್ನ ಉದ್ದೇಶವನ್ನು ನಿಗದಿತ ಸಮಯದಲ್ಲಿ ಖಂಡಿತ ಈಡೇರಿಸುತ್ತಾನೆ ಎನ್ನುವುದನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಜಗತ್ತಿನ ಆಗುಹೋಗುಗಳಾಗಲಿ ಮನುಷ್ಯರ ಕಾರ್ಯಯೋಜನೆಗಳಾಗಲಿ ಬದಲಾಯಿಸುವುದು ಅಸಾಧ್ಯ. ತನ್ನ ಸಂಕಲ್ಪ ನೆರವೇರಲಿಕ್ಕಾಗಿ ಯಾವ ಕಾಲದಲ್ಲಿ ಯಾವ ಘಟನೆ ಯಾವ ಫಲಿತಾಂಶದೊಂದಿಗೆ ಜರಗಬೇಕೆಂದು ಯೆಹೋವನು ನಿಯಂತ್ರಿಸಶಕ್ತನು. (ದಾನಿಯೇಲ 2:21 ಓದಿ.) ದೇವರ ಈ ಸಾಮರ್ಥ್ಯವನ್ನು ಜ್ಞಾನೋಕ್ತಿ 21:1 ಹೀಗೆ ಬಣ್ಣಿಸುತ್ತದೆ, “ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ನೀರಿನ ಕಾಲಿವೆಗಳಂತೆ ಇವೆ; ತನಗೆ ಬೇಕಾದ ಕಡೆಗೆ ತಿರುಗಿಸುತ್ತಾನೆ.”

14 ತನ್ನ ಮನೋಇಚ್ಛೆಯ ಪ್ರಕಾರ ಘಟನೆಗಳು ನಿಗದಿತ ಸಮಯಕ್ಕೆ ಸರಿಯಾಗಿ ನಡೆಯುವಂತೆ ಯೆಹೋವನು ನೋಡಿಕೊಳ್ಳಬಲ್ಲನು. ಈ ಪ್ರಪಂಚದಲ್ಲಿ ದಿಢೀರೆಂದು ನಡೆಯುವ ಅನೇಕ ಘಟನೆಗಳು ದೇವರ ರಾಜ್ಯದ ಸಂದೇಶವು ಲೋಕದ ಕಟ್ಟಕಡೆಯವರೆಗೆ ಸಾರಲ್ಪಡುವುದು ಎಂಬ ಪ್ರವಾದನೆಯನ್ನು ನೆರವೇರಿಸುತ್ತಿವೆ. ಉದಾಹರಣೆಗೆ ಸೋವಿಯಟ್‌ ಯೂನಿಯನ್‌ ಪತನದ ಕುರಿತು ಯೋಚಿಸಿ. ಅಷ್ಟು ದೊಡ್ಡ ರಾಜಕೀಯ ಬದಲಾವಣೆ ಆಗುತ್ತದೆಂದು ಯಾರೂ ಕನಸುಮನಸ್ಸಿನಲ್ಲೂ ನೆನಸಿರಲಿಲ್ಲ. ಆದರೆ ಆ ಬದಲಾವಣೆಯ ಪರಿಣಾಮ ಒಳ್ಳೇದಾಯಿತು. ಈ ಮುಂಚೆ ನಮ್ಮ ಕೆಲಸಕ್ಕೆ ನಿಷೇಧವಿದ್ದ ಅನೇಕ ರಾಷ್ಟ್ರಗಳಲ್ಲಿ ಸುವಾರ್ತೆ ಸಾರಲು ಅವಕಾಶವಾಯಿತು. ಆದ್ದರಿಂದ “ಕಾಲಸಮಯಗಳನ್ನು” ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ದೇವರಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಲಿಕ್ಕಾಗಿ ನಿಮ್ಮ ಸಮಯವನ್ನು ಉಪಯೋಗಿಸುತ್ತಿದ್ದೀರಿ ಎಂದು ಖಚಿತ ಮಾಡಿಕೊಳ್ಳಿ.

ಯೆಹೋವನ ವೇಳಾಪಟ್ಟಿಯಲ್ಲಿ ನಂಬಿಕೆಯಿಡಿ

15. ಯೆಹೋವನ ವೇಳಾಪಟ್ಟಿಯಲ್ಲಿ ನಮಗೆ ನಂಬಿಕೆಯಿದೆ ಎಂದು ತೋರಿಸಲು ಏನು ಮಾಡಬೇಕು?

15 ಈ ಕಡೇ ದಿವಸಗಳಲ್ಲಿ ದೇವರ ರಾಜ್ಯದ ಕುರಿತು ಸುವಾರ್ತೆ ಸಾರುತ್ತಾ ಇರಬೇಕಾದರೆ ಯೆಹೋವನ ವೇಳಾಪಟ್ಟಿಯಲ್ಲಿ ನಂಬಿಕೆಯಿಡುವುದು ಪ್ರಾಮುಖ್ಯ. ಪ್ರಪಂಚದಲ್ಲಿ ಆಗಾಗ ಬದಲಾವಣೆಗಳು ಆಗುತ್ತಿರುವಾಗ ನಾವು ಸಹ ಸಾರುವ ವಿಧಾನದಲ್ಲಿ ಕೆಲವು ಬದಲಾವಣೆ ಮಾಡಬೇಕಾಗಬಹುದು. ಸಾರುವ ವಿಧಾನ ಪರಿಣಾಮಕಾರಿಯಾಗಿರಲು ಕೆಲವೊಂದು ಬದಲಾವಣೆ ಮಾಡಿಕೊಳ್ಳುವಂತೆ ಯೆಹೋವನ ಸಂಘಟನೆ ನಮಗೆ ಸೂಚಿಸಬಹುದು. ಅಂಥ ಹೊಂದಾಣಿಕೆಗಳಿಗೆ ನಮ್ಮ ಪೂರ್ಣ ಸಹಕಾರವು ಮಹಾ ಸಮಯಪಾಲಕ ಯೆಹೋವನಲ್ಲಿ ನಮಗೆ ನಂಬಿಕೆಯಿದೆ ಎಂದು ತೋರಿಸುತ್ತದೆ. ಮಾತ್ರವಲ್ಲ ಸಭೆಯ “ಶಿರಸ್ಸಾಗಿರುವ” ಯೇಸುವಿನ ಕೈಕೆಳಗೆ ನಿಷ್ಠೆಯಿಂದ ಸೇವೆ ಸಲ್ಲಿಸಲು ನಮಗೆ ಇಷ್ಟವಿದೆಯೆಂದು ತೋರಿಸುತ್ತದೆ.—ಎಫೆ. 5:23.

16. ಯೆಹೋವನು ತಕ್ಕ ಸಮಯದಲ್ಲಿ ಸಹಾಯ ಕೊಡುವನೆಂದು ನಾವೇಕೆ ನಂಬಬಹುದು?

16 ಯೆಹೋವನಿಗೆ ನಾವು ಪ್ರಾರ್ಥಿಸುವಾಗ ಆತನು “ತಕ್ಕ ಸಮಯದಲ್ಲಿ ಸಹಾಯ” ಮಾಡುವನೆಂಬ ಪೂರ್ಣ ನಂಬಿಕೆಯಿಂದ ಮುಕ್ತವಾಗಿ ಪ್ರಾರ್ಥಿಸಬೇಕೆಂದು ಆತನು ಇಷ್ಟಪಡುತ್ತಾನೆ. (ಇಬ್ರಿ. 4:16, ಪವಿತ್ರ ಗ್ರಂಥ ಭಾಷಾಂತರ) ಆತನು ನಮ್ಮನ್ನು ತುಂಬಾ ಗಾಢವಾಗಿ ಪ್ರೀತಿಸುತ್ತಾನೆ, ನಮ್ಮ ಬಗ್ಗೆ ಅತೀವ ಕಾಳಜಿಯಿದೆ ಎನ್ನುವುದಕ್ಕೆ ಇದು ಪುರಾವೆ. (ಮತ್ತಾ. 6:8; 10:29-31) ಅದೇ ರೀತಿ ನಾವು ಸಹ ದೇವರಲ್ಲಿ ನಂಬಿಕೆ ಇಡಬೇಕು. ಯಾವಾಗಲೂ ಆತನ ಸಹಾಯಕ್ಕಾಗಿ ಮೊರೆಯಿಟ್ಟು ಆತನ ಮಾರ್ಗದರ್ಶನೆಗೆ ಅನುಸಾರ ಕ್ರಿಯೆಗೈಯಬೇಕು. ನಮ್ಮ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸಲೂ ಮರೆಯಬಾರದು.

17, 18. (1) ಶೀಘ್ರದಲ್ಲೇ ಯೆಹೋವನು ತನ್ನ ವೈರಿಗಳ ವಿರುದ್ಧ ಯಾವ ಕ್ರಮ ಜರುಗಿಸುವನು? (2) ಯಾವ ಅನಾಹುತಕ್ಕೆ ನಾವು ಆಹ್ವಾನ ಕೊಡಬಾರದು?

17 “ನಂಬಿಕೆಯ ಕೊರತೆಯನ್ನು ತೋರಿಸಿ ವಿಚಲಿತ”ರಾಗುವ ಸಮಯ ಇದಲ್ಲ. ನಂಬಿಕೆಯಲ್ಲಿ ಪ್ರಬಲರಾಗುವ ಸಮಯ ಇದಾಗಿದೆ. (ರೋಮ. 4:20) ಯೇಸು ನಮಗೆ ಒಪ್ಪಿಸಿರುವ ಕೆಲಸವನ್ನು ನಾವು ಮಾಡದಂತೆ ಸೈತಾನ ಹಾಗೂ ಆತನ ಅಡಿಯಾಳುಗಳು ಭಾರಿ ತಡೆಯೊಡ್ಡಲು ಪ್ರಯತ್ನಿಸುತ್ತಿದ್ದಾರೆ. (ಮತ್ತಾ. 28:19, 20) ಪಿಶಾಚನು ಎಷ್ಟೇ ಪ್ರಯತ್ನಿಸಲಿ, “ಭಕ್ತಿಯುಳ್ಳ ಜನರನ್ನು ಪರೀಕ್ಷೆಯಿಂದ” ತಪ್ಪಿಸಿ ಕಾಪಾಡಲು ಯೆಹೋವನು ತಿಳಿದವನಾಗಿದ್ದಾನೆ. ಏಕೆಂದರೆ ಆತನು “ಎಲ್ಲ ರೀತಿಯ ಮನುಷ್ಯರ, ಮುಖ್ಯವಾಗಿ ನಂಬಿಗಸ್ತರ ರಕ್ಷಕನಾಗಿರುವ ಜೀವವುಳ್ಳ” ದೇವರು.—1 ತಿಮೊ. 4:10; 2 ಪೇತ್ರ 2:9.

18 ಇನ್ನೇನು ಸ್ವಲ್ಪ ಸಮಯ, ಯೆಹೋವನು ಈ ದುಷ್ಟ ಲೋಕವನ್ನು ನಾಶಮಾಡುವನು. ಅದನ್ನು ಯಾವಾಗ ಮಾಡುವನು ಎಂಬ ನಿಖರ ತಾರೀಖು ಮುಂತಾದ ವಿವರ ನಮಗೆ ತಿಳಿದಿಲ್ಲ ನಿಜ. ಆದರೆ ನಿಗದಿತ ಸಮಯದಲ್ಲಿ ಯೇಸು ವೈರಿಗಳಿಗೆ ಗತಿಕಾಣಿಸಿ ಯೆಹೋವನ ಪರಮಾಧಿಕಾರದ ಮೇಲೆ ಬಂದಿರುವ ಅಪವಾದವನ್ನು ತೆಗೆದುಹಾಕುವನು. ಅಂದ ಮೇಲೆ ನಾವು ಜೀವಿಸುತ್ತಿರುವ “ಕಾಲಸಮಯಗಳ” ಮಹತ್ವಕ್ಕೆ ಬೆಲೆಕೊಡದಿದ್ದರೆ ಅನಾಹುತಕ್ಕೆ ಆಹ್ವಾನ ನೀಡಿದಂತೆ. ಹಾಗಾಗಿ “ಎಲ್ಲವೂ ಸೃಷ್ಟಿಯ ಆರಂಭದಿಂದಿದ್ದ ಹಾಗೆಯೇ ಮುಂದುವರಿಯುತ್ತಿದೆಯಲ್ಲಾ” ಎಂಬ ಯೋಚನೆ ನಮ್ಮಲ್ಲಿ ಮೊಳಕೆಯೊಡೆಯದಂತೆ ನೋಡಿಕೊಳ್ಳೋಣ.—1 ಥೆಸ. 5:1; 2 ಪೇತ್ರ 3:3, 4.

ತಾಳ್ಮೆ ಕಳಕೊಳ್ಳಬೇಡಿ

19, 20. ತಾಳ್ಮೆಗೆಡದೆ ಯೆಹೋವನನ್ನು ನಿರೀಕ್ಷಿಸಬೇಕು ಏಕೆ?

19 ಮಾನವರು ಶಾಶ್ವತವಾಗಿ ಬದುಕುತ್ತಾ ದೇವರ ಮತ್ತು ಆತನ ಸೃಷ್ಟಿಯ ಕುರಿತ ಜ್ಞಾನವನ್ನು ನಿತ್ಯನಿರಂತರವಾಗಿ ಸಂಪಾದಿಸುತ್ತಾ ಇರಬೇಕು ಎನ್ನುವುದು ದೇವರ ಉದ್ದೇಶವಾಗಿತ್ತು. ಪ್ರಸಂಗಿ 3:11 ಹೇಳುವಂತೆ, “[ಯೆಹೋವನು] ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ; ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ.”

20 ಯೆಹೋವನು ತನ್ನ ಈ ಉದ್ದೇಶವನ್ನು ಬದಲಾಯಿಸದೇ ಇರುವುದು ನಮ್ಮ ಭಾಗ್ಯವಲ್ಲವೇ? (ಮಲಾ. 3:6) “ಆತನಲ್ಲಿ ನೆರಳಿನ ಓಲಿನಷ್ಟೂ ವ್ಯತ್ಯಾಸ ಸೂಚನೆ ಇಲ್ಲ.” (ಯಾಕೋ. 1:17) ಭೂಮಿ ತಿರುಗಿದಂತೆ ನೆರಳಿನ ಸ್ಥಾನ ಬದಲಾಗುತ್ತದೆ. ಆದರೆ ಯೆಹೋವ ದೇವರು ಹಾಗಲ್ಲ. ಆತನ ವೇಳಾಪಟ್ಟಿ ಎಂದಿಗೂ ಬದಲಾಗಲ್ಲ. ಏಕೆಂದರೆ ಆತ “ಸರ್ವಯುಗಗಳ ಅರಸ.” (1 ತಿಮೊ. 1:17, ಸತ್ಯವೇದವು ಬೈಬಲ್‌) ಆದ್ದರಿಂದ, ತಾಳ್ಮೆಗೆಡದೆ ‘ನಮ್ಮ ರಕ್ಷಕನಾದ ದೇವರನ್ನು ಕಾದುಕೊಳ್ಳೋಣ.’ (ಮೀಕ 7:7) “ಯೆಹೋವನನ್ನು ನಿರೀಕ್ಷಿಸುವವರೇ, ದೃಢವಾಗಿರ್ರಿ; ನಿಮ್ಮ ಹೃದಯವು ಧೈರ್ಯದಿಂದಿರಲಿ.”—ಕೀರ್ತ. 31:24.

[ಪಾದಟಿಪ್ಪಣಿಗಳು]

^ ಪ್ಯಾರ. 8 ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕದ 186-195 ಪುಟಗಳನ್ನು ನೋಡಿ.

^ ಪ್ಯಾರ. 9 ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕದ 93-97 ಪುಟಗಳನ್ನು ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 19ರಲ್ಲಿರುವ ಚಿತ್ರ]

ದೇವರು ನುಡಿದ ಭವಿಷ್ಯವಾಣಿ ಈಡೇರುವುದೆಂಬ ನಂಬಿಕೆ ದಾನಿಯೇಲನಿಗಿತ್ತು

[ಪುಟ 21ರಲ್ಲಿರುವ ಚಿತ್ರ]

ನಿಮ್ಮ ಸಮಯವನ್ನು ಯೆಹೋವ ದೇವರ ಸೇವೆ ಮಾಡಲು ಸದುಪಯೋಗಿಸುತ್ತಿದ್ದೀರಾ?