ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಮಹಿಮೆಯನ್ನು ಪ್ರತಿಫಲಿಸಿರಿ

ಯೆಹೋವನ ಮಹಿಮೆಯನ್ನು ಪ್ರತಿಫಲಿಸಿರಿ

ಯೆಹೋವನ ಮಹಿಮೆಯನ್ನು ಪ್ರತಿಫಲಿಸಿರಿ

“ನಾವೆಲ್ಲರೂ . . . ದರ್ಪಣಗಳಂತೆ ಯೆಹೋವನ ಮಹಿಮೆಯನ್ನು . . . ಪ್ರತಿಬಿಂಬಿಸುತ್ತೇವೆ.”—2 ಕೊರಿಂ. 3:18.

ಉತ್ತರಿಸುವಿರಾ?

ಪಾಪಿಗಳಾಗಿರುವ ನಾವು ಹೇಗೆ ಯೆಹೋವನ ಮಹಿಮೆಯನ್ನು ಪ್ರತಿಫಲಿಸಸಾಧ್ಯವಿದೆ?

ಯೆಹೋವನ ಮಹಿಮೆಯನ್ನು ಪ್ರತಿಫಲಿಸಲು ಪ್ರಾರ್ಥನೆ ಹಾಗೂ ಕೂಟಗಳು ಹೇಗೆ ಸಹಾಯ ಮಾಡುತ್ತವೆ?

ನಿತ್ಯನಿರಂತರಕ್ಕೂ ಯೆಹೋವನನ್ನು ಮಹಿಮೆಪಡಿಸಲು ಯಾವುದು ಸಹಾಯ ಮಾಡುತ್ತದೆ?

1, 2. ಯೆಹೋವನ ಗುಣಗಳನ್ನು ಪ್ರತಿಫಲಿಸಲು ನಮ್ಮಿಂದ ಸಾಧ್ಯವೇಕೆ?

ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಹೆತ್ತವರನ್ನು ಹೋಲುತ್ತೇವೆ. ‘ನೀನು ನಿನ್ನ ಅಪ್ಪನ ಥರಾನೇ ಇದ್ದೀಯ,’ ‘ನಿನ್ನನ್ನು ನೋಡಿದರೆ ನಿನ್ನಮ್ಮನನ್ನು ನೋಡಿದ ಹಾಗೇ ಆಗುತ್ತೆ’ ಎಂದು ಜನರು ಮಕ್ಕಳಿಗೆ ಹೇಳುವುದು ಅದಕ್ಕಾಗಿಯೇ. ಮಕ್ಕಳೂ ಅಷ್ಟೇ, ಅಪ್ಪ ಅಮ್ಮನನ್ನು ನೋಡಿ ಅವರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಮಕ್ಕಳಂತೆ ನಾವೂ ನಮ್ಮ ತಂದೆಯಾದ ಯೆಹೋವ ದೇವರನ್ನು ಅನುಕರಿಸಲು ಸಾಧ್ಯವೇ? ನಾವಾತನನ್ನು ನೋಡಲು ಸಾಧ್ಯವಿಲ್ಲ ನಿಜ. ಆದರೆ ಆತನ ಸುಂದರವಾದ ಗುಣಗಳನ್ನು ನಮ್ಮ ಸುತ್ತಮುತ್ತಲಿನ ಸೃಷ್ಟಿಯಲ್ಲಿ ಕಾಣಬಹುದು. ಮಾತ್ರವಲ್ಲ ಬೈಬಲನ್ನು ಓದಿ ಧ್ಯಾನಿಸುವ ಮೂಲಕ, ಅದರಲ್ಲೂ ದೇವರ ಮಗನಾದ ಯೇಸು ಕ್ರಿಸ್ತನ ನಡೆನುಡಿಗಳ ಬಗ್ಗೆ ಧ್ಯಾನಿಸುವ ಮೂಲಕ ತಿಳಿದುಕೊಳ್ಳಬಹುದು. (ಯೋಹಾ. 1:18; ರೋಮ. 1:20) ಹೀಗೆ ದೇವರನ್ನು ತಿಳಿದು ಆತನ ಮಹಿಮೆಯನ್ನು ಪ್ರತಿಫಲಿಸಲು ನಮ್ಮಿಂದ ಸಾಧ್ಯ.

2 ಮಾನವರಿಂದ ಇದು ಸಾಧ್ಯ ಎಂಬ ಭರವಸೆ ಆದಾಮ ಹವ್ವರನ್ನು ಸೃಷ್ಟಿಮಾಡುವ ಮೊದಲೇ ಯೆಹೋವನಿಗಿತ್ತು. ತನ್ನ ಚಿತ್ತವನ್ನು ಮಾಡುವ, ತನ್ನ ಗುಣಗಳನ್ನು ಪ್ರತಿಫಲಿಸಿ ತನಗೆ ಮಹಿಮೆ ಸಲ್ಲಿಸುವ ಸಾಮರ್ಥ್ಯವನ್ನು ಆತನು ಮಾನವರಿಗೆ ಕೊಟ್ಟಿದ್ದನು. (ಆದಿಕಾಂಡ 1:26, 27 ಓದಿ.) ಹಾಗಾಗಿ ನಮ್ಮ ಸೃಷ್ಟಿಕರ್ತನ ಗುಣಗಳನ್ನು ನಾವು ಜೀವನದಲ್ಲಿ ಪ್ರತಿಫಲಿಸಬೇಕು. ನಮ್ಮ ವಿದ್ಯಾಭ್ಯಾಸ, ಸಂಸ್ಕೃತಿ, ಜನಾಂಗೀಯ ಹಿನ್ನೆಲೆ ಏನೇ ಆಗಿರಲಿ ನಾವಿದನ್ನು ಮಾಡಸಾಧ್ಯ. ಏಕೆಂದರೆ “ದೇವರು ಪಕ್ಷಪಾತಿಯಲ್ಲ. . . . ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ.”—ಅ. ಕಾ. 10:34, 35.

3. ಯೆಹೋವನ ಸೇವೆ ಮಾಡುವಾಗ ನಮಗೆ ಹೇಗನಿಸುತ್ತದೆ?

3 ಅಭಿಷಿಕ್ತ ಕ್ರೈಸ್ತರು ಯೆಹೋವನ ಮಹಿಮೆಯನ್ನು ಪ್ರತಿಫಲಿಸುತ್ತಾರೆ. ಅವರಲ್ಲಿ ಒಬ್ಬನಾದ ಪೌಲ ಹೀಗೆ ಬರೆದನು: “ನಾವೆಲ್ಲರೂ ಮುಸುಕಿಲ್ಲದ ಮುಖಗಳೊಂದಿಗೆ ದರ್ಪಣಗಳಂತೆ ಯೆಹೋವನ ಮಹಿಮೆಯನ್ನು ಪ್ರತಿಬಿಂಬಿಸುವಾಗ ಅದೇ ಸ್ವರೂಪಕ್ಕೆ ಮಾರ್ಪಟ್ಟು . . . ಮಹಿಮೆಯಿಂದ ಮತ್ತಷ್ಟು ಮಹಿಮೆಯನ್ನು ಪ್ರತಿಬಿಂಬಿಸುತ್ತೇವೆ.” (2 ಕೊರಿಂ. 3:18) ಮೋಶೆ ಸೀನಾಯಿಬೆಟ್ಟದಿಂದ ದಶಾಜ್ಞೆಗಳಿದ್ದ ಕಲ್ಲಿನ ಹಲಗೆಗಳನ್ನು ಹಿಡಿದುಕೊಂಡು ಇಳಿದುಬಂದಾಗ ಅವನ ಮುಖ ಪ್ರಕಾಶಮಾನವಾಗಿತ್ತು. ಏಕೆಂದರೆ ಅವನು ಬೆಟ್ಟದಲ್ಲಿ ಯೆಹೋವನೊಂದಿಗೆ ಮಾತಾಡಿದ್ದನು. (ವಿಮೋ. 34:29, 30) ಅಂಥ ಅನುಭವ ಕ್ರೈಸ್ತರಿಗೆ ಆಗಿಲ್ಲವಾದ್ದರಿಂದ ಇಂದು ಅವರ ಮುಖ ಪ್ರಕಾಶ ಬೀರುವುದಿಲ್ಲ. ಆದರೆ ಯೆಹೋವನ ಕುರಿತು, ಆತನ ಗುಣಗಳ, ಉದ್ದೇಶಗಳ ಕುರಿತು ಜನರೊಂದಿಗೆ ಮಾತಾಡುವಾಗ ಅವರ ಮುಖದಲ್ಲಿ ಆನಂದದ ಕಾಂತಿ ಪ್ರಜ್ವಲಿಸುತ್ತದೆ. ಉಜ್ಜಿ ಮೆರುಗುಕೊಟ್ಟ ಲೋಹದ ದರ್ಪಣ ಬೆಳಕನ್ನು ಪ್ರತಿಫಲಿಸುತ್ತದೆ. ಅದೇ ರೀತಿ ಅಭಿಷಿಕ್ತರು ಹಾಗೂ ಸಂಗಡಿಗರಾದ ಮಹಾ ಸಮೂಹದವರು ತಮ್ಮ ಜೀವನರೀತಿ ಹಾಗೂ ಶುಶ್ರೂಷೆಯ ಮೂಲಕ ಯೆಹೋವನ ಮಹಿಮೆಯನ್ನು ಪ್ರತಿಫಲಿಸುತ್ತಾರೆ. (2 ಕೊರಿಂ. 4:1) ದೇವರು ಮೆಚ್ಚುವಂಥ ರೀತಿಯಲ್ಲಿ ಜೀವಿಸುತ್ತಾ ಸುವಾರ್ತೆ ಸಾರುವುದರಲ್ಲಿ ನಿರತರಾಗಿರುವ ಮೂಲಕ ನೀವು ದೇವರ ಮಹಿಮೆಯನ್ನು ಪ್ರತಿಫಲಿಸುತ್ತಿದ್ದೀರಾ?

ದೇವರ ಮಹಿಮೆಯನ್ನು ಪ್ರತಿಫಲಿಸಲು ನಮ್ಮಿಂದ ಸಾಧ್ಯ

4, 5. (1) ಪೌಲನಿಗಿದ್ದಂತೆ ನಮಗೆ ಯಾವ ಹೋರಾಟವಿದೆ? (2) ನಮ್ಮ ಮೇಲೆ ಪಾಪ ಹೇಗೆ ಅಧಿಕಾರ ನಡೆಸುತ್ತಿದೆ?

4 ನಾವೇನೇ ಮಾಡಲಿ ಅದು ಯೆಹೋವ ದೇವರಿಗೆ ಗೌರವ ಮಹಿಮೆ ತರುವಂಥ ರೀತಿಯಲ್ಲಿ ಇರಬೇಕೆಂದು ಬಯಸುತ್ತೇವೆ. ಆದರೂ ಎಷ್ಟೋ ಸಾರಿ ತಪ್ಪುತ್ತೇವೆ. ಪೌಲನಿಗೂ ಹಾಗಾಗುತ್ತಿತ್ತು. ಸರಿಯಾದದ್ದನ್ನು ಮಾಡಲು ಅವನು ಹೋರಾಟ ಮಾಡಬೇಕಿತ್ತು. (ರೋಮನ್ನರಿಗೆ 7:21-25 ಓದಿ.) ಅದಕ್ಕೆ ಕಾರಣ ಏನೆಂದು ಅವನೇ ಹೇಳಿದ್ದಾನೆ: “ಎಲ್ಲರೂ ಪಾಪಮಾಡಿದ್ದಾರೆ ಮತ್ತು ದೇವರ ಮಹಿಮೆಯನ್ನು ಹೊಂದಲು ತಪ್ಪಿಹೋಗಿದ್ದಾರೆ.” (ರೋಮ. 3:23) ಹೌದು, ನಾವೆಲ್ಲರೂ ಆದಾಮನ ಸಂತತಿ ಆಗಿರುವುದರಿಂದ “ಪಾಪ” ನಮ್ಮೆಲ್ಲರ ಮೇಲೆ “ಅರಸನಂತೆ” ಕ್ರೂರ ದಬ್ಬಾಳಿಕೆ ಮಾಡುತ್ತಿದೆ.—ರೋಮ. 5:12; 6:12.

5 ಪಾಪ ಅಂದರೇನು? ಯೆಹೋವನ ಚಿತ್ತ, ಗುಣ, ಮಾರ್ಗ, ಮಟ್ಟಗಳಿಗೆ ವಿರುದ್ಧವಾಗಿ ನಾವು ಮಾಡುವುದೆಲ್ಲವೂ ಪಾಪವೇ. ನಾವು ದೇವರೊಂದಿಗೆ ಸ್ನೇಹ ಬೆಳೆಸಲು ಪಾಪ ತಡೆಯಾಗಿದೆ. ಏಕಾಗ್ರತೆಯಿಂದ ಗುರಿಯಿಟ್ಟು ಹೊಡೆದರೂ ಬಾಣ ಎಲ್ಲೋ ಹೋಗಿ ಬೀಳುವಂತೆ ನಾವು ದೇವರ ಮಹಿಮೆಯನ್ನು ಪ್ರತಿಫಲಿಸಲು ಎಷ್ಟೇ ಪ್ರಯತ್ನಿಸಿದರೂ ನಮ್ಮಲ್ಲಿರುವ ಪಾಪವು ಗುರಿತಪ್ಪುವಂತೆ ಮಾಡುತ್ತದೆ. ಕೆಲವೊಮ್ಮೆ ಗೊತ್ತಿದ್ದೇ ಪಾಪ ಮಾಡುತ್ತೇವೆ. ಇನ್ನು ಕೆಲವೊಮ್ಮೆ ಗೊತ್ತಿಲ್ಲದೆ ಪಾಪ ಮಾಡುತ್ತೇವೆ. (ಅರ. 15:27-31) ಪಾಪವು ಮನುಷ್ಯರಲ್ಲಿ ಎಷ್ಟು ಬೇರೂರಿಬಿಟ್ಟಿದೆಯೆಂದರೆ ಅದು ಅವರ ಹಾಗೂ ಸೃಷ್ಟಿಕರ್ತನ ಮಧ್ಯೆ ದೊಡ್ಡ ಕಂದರವನ್ನೇ ನಿರ್ಮಿಸಿದೆ. (ಕೀರ್ತ. 51:5; ಯೆಶಾ. 59:2; ಕೊಲೊ. 1:21) ಹಾಗಾಗಿ ಮಾನವಕುಲ ಯೆಹೋವನಿಂದ ದೂರವಾಗಿ ಆತನ ಮಹಿಮೆಯನ್ನು ಪ್ರತಿಫಲಿಸುವ ಸದವಕಾಶವನ್ನು ಕಳೆದುಕೊಂಡಿದೆ. ಇಡೀ ಮಾನವಕುಲವನ್ನು ಪಾಪ ತೀವ್ರವಾಗಿ ಬಾಧಿಸುತ್ತಿದೆ.

6. ಪಾಪಿಗಳಾಗಿದ್ದರೂ ದೇವರ ಮಹಿಮೆಯನ್ನು ಪ್ರತಿಫಲಿಸಲು ನಮ್ಮಿಂದ ಹೇಗೆ ಸಾಧ್ಯ?

6 ಪಾಪದ ಬಿಗಿಮುಷ್ಠಿಯಲ್ಲಿ ನಾವು ನಲುಗುತ್ತಿದ್ದರೂ ಯೆಹೋವನು ನಮಗೆ “ನಿರೀಕ್ಷೆಯನ್ನು” ಒದಗಿಸಿದ್ದಾನೆ. (ರೋಮ. 15:13) ಪಾಪವನ್ನು ಸಂಪೂರ್ಣವಾಗಿ ಅಳಿಸಿ ಹಾಕಲು ಯೇಸು ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞವನ್ನು ಪ್ರೀತಿಯಿಂದ ಒದಗಿಸಿದ್ದಾನೆ. ಆ ಯಜ್ಞದಲ್ಲಿ ನಂಬಿಕೆಯಿಡುವುದಾದರೆ ನಾವು “ಪಾಪಕ್ಕೆ ದಾಸರಾಗಿ” ಇರುವುದಿಲ್ಲ. ಯೆಹೋವನ ಮಹಿಮೆಯನ್ನು ಪ್ರತಿಫಲಿಸಲು ಶಕ್ತರಾಗುತ್ತೇವೆ. (ರೋಮ. 5:19; 6:6; ಯೋಹಾ. 3:16) ನಾವು ಆತನ ಮಹಿಮೆಯನ್ನು ಪ್ರತಿಫಲಿಸುವಾಗ ಆತನ ಆಶೀರ್ವಾದ ನಮ್ಮ ಮೇಲಿರುವುದು. ಭವಿಷ್ಯದಲ್ಲಿ ಪರಿಪೂರ್ಣತೆಯನ್ನು ಪಡೆದು ಶಾಶ್ವತವಾಗಿ ಜೀವಿಸುವೆವು. ಪಾಪಿಗಳಾಗಿದ್ದರೂ ದೇವರು ನಮ್ಮನ್ನು ಕಡೆಗಣಿಸದೆ ತನ್ನ ಮಹಿಮೆಯನ್ನು ಪ್ರತಿಫಲಿಸಲು ಯೋಗ್ಯರು ಎಂದು ಪರಿಗಣಿಸಿರುವುದು ದೊಡ್ಡ ಆಶೀರ್ವಾದವಲ್ಲವೇ?

ಪ್ರತಿಫಲಿಸಲು ನೆರವು

7. ದೇವರ ಮಹಿಮೆಯನ್ನು ಪ್ರತಿಫಲಿಸಬೇಕಾದರೆ ಏನನ್ನು ಅರಿತುಕೊಳ್ಳುವುದು ಪ್ರಾಮುಖ್ಯ?

7 ದೇವರ ಮಹಿಮೆಯನ್ನು ಪ್ರತಿಫಲಿಸಲು ನಾವು ಮೊದಲು ನಮ್ಮಲ್ಲಿ ಪಾಪಪೂರ್ಣ ಪ್ರವೃತ್ತಿ ಇದೆಯೆಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. (2 ಪೂರ್ವ. 6:36) ಅವು ನಮ್ಮಲ್ಲಿವೆ ಎಂದು ಒಪ್ಪಿಕೊಂಡು ಹೋಗಲಾಡಿಸಲು ಶ್ರಮಿಸಬೇಕು. ಆಗ ಮಾತ್ರ ದೇವರ ಮಹಿಮೆಯನ್ನು ನಿಜವಾಗಿಯೂ ಪ್ರತಿಫಲಿಸಲು ಸಾಧ್ಯ. ಉದಾಹರಣೆಗೆ, ಅಶ್ಲೀಲ ಚಿತ್ರಗಳನ್ನು ನೋಡುವ ಚಾಳಿ ಇರುವುದಾದರೆ ಬಿಟ್ಟುಬಿಡಲು ಸಭಾ ಹಿರಿಯರ ನೆರವನ್ನು ಕೇಳಬೇಕು. (ಯಾಕೋ. 5:14, 15) ದೇವರನ್ನು ಮಹಿಮೆಪಡಿಸುವ ಅಪೇಕ್ಷೆ ಇರುವಲ್ಲಿ ನಾವು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆ ಇದಾಗಿದೆ. ನಮ್ಮ ಜೀವನ ರೀತಿ ಯೆಹೋವನು ಇಷ್ಟಪಡುವಂಥ ರೀತಿಯಲ್ಲಿ ಇದೆ ಎನ್ನುವುದನ್ನು ನಾವು ಪ್ರತಿದಿನವೂ ಪರೀಕ್ಷಿಸಿ ಖಚಿತಪಡಿಸಿಕೊಳ್ಳಬೇಕು. (ಜ್ಞಾನೋ. 28:18; 1 ಕೊರಿಂ. 10:12) ನಮ್ಮಲ್ಲಿ ಯಾವುದೇ ರೀತಿಯ ಬಲಹೀನತೆಯಿರಲಿ ಅದನ್ನು ತೊರೆಯಲು ಶ್ರಮಿಸಬೇಕು. ಹೀಗೆ ದೇವರ ಮಹಿಮೆಯನ್ನು ಪ್ರತಿಫಲಿಸಲು ಪ್ರಯತ್ನಿಸುತ್ತಾ ಇರಬೇಕು.

8. ಪರಿಪೂರ್ಣರಲ್ಲದಿದ್ದರೂ ನಾವು ಏನು ಮಾಡಬೇಕು?

8 ದೇವರು ಇಷ್ಟಪಡುವ ವಿಷಯಗಳನ್ನೇ ಮಾಡಿ ಆತನ ಮಹಿಮೆಯನ್ನು ಪರಿಪೂರ್ಣವಾಗಿ ಪ್ರತಿಫಲಿಸಿದ ಒಬ್ಬನೇ ಮಾನವನೆಂದರೆ ಯೇಸು. ಅವನಂತೆ ನಾವು ಪರಿಪೂರ್ಣರಲ್ಲದಿದ್ದರೂ ಅವನ ಮಾದರಿಯನ್ನು ಅನುಕರಿಸಲು ಪ್ರಯತ್ನಿಸಬೇಕು. (1 ಪೇತ್ರ 2:21) ಯೆಹೋವನು ನಮ್ಮ ಪ್ರಗತಿಯನ್ನಷ್ಟೇ ನೋಡುವುದಿಲ್ಲ. ಆತನನ್ನು ಮಹಿಮೆಪಡಿಸಲು ನಾವು ಮಾಡುತ್ತಿರುವ ಪ್ರತಿಯೊಂದು ಪ್ರಯತ್ನವನ್ನೂ ನೋಡುತ್ತಾನೆ. ಅದು ಸಫಲವಾಗುವಂತೆ ಆಶೀರ್ವದಿಸುತ್ತಾನೆ.

9. ದೇವರ ಮಹಿಮೆಯನ್ನು ಉಜ್ವಲವಾಗಿ ಪ್ರತಿಫಲಿಸಲು ಬೈಬಲ್‌ ಹೇಗೆ ನೆರವಾಗುತ್ತದೆ?

9 ದೇವರ ಮಹಿಮೆಯನ್ನು ಪ್ರತಿಫಲಿಸುವುದರಲ್ಲಿ ಇನ್ನಷ್ಟು ಪ್ರಗತಿ ಹೊಂದಲು ಬೈಬಲ್‌ ನೆರವಾಗುತ್ತದೆ. ಹಾಗಾಗಿ ಶಾಸ್ತ್ರವಚನಗಳನ್ನು ಆಳವಾಗಿ ಅಧ್ಯಯನ ಮಾಡಿ ಧ್ಯಾನಿಸುವುದು ಅತ್ಯಗತ್ಯ. (ಕೀರ್ತ. 1:1-3) ಬೈಬಲನ್ನು ತಪ್ಪದೆ ಪ್ರತಿದಿನ ಓದುವುದಾದರೆ ಪ್ರಗತಿಯ ಮೆಟ್ಟಿಲೇರುವುದು ಸುಲಭ. (ಯಾಕೋಬ 1:22-25 ಓದಿ.) ಬೈಬಲ್‌ ಜ್ಞಾನವನ್ನು ಪಡೆದುಕೊಳ್ಳುತ್ತಾ ಹೋದಂತೆ ನಮ್ಮ ನಂಬಿಕೆ ಬಲವಾಗುತ್ತದೆ. ಗಂಭೀರ ಪಾಪಗಳನ್ನು ಮಾಡಬಾರದೆಂಬ ನಮ್ಮ ದೃಢತೀರ್ಮಾನ ಬಲವಾಗುತ್ತಾ ಯೆಹೋವನನ್ನು ಸದಾ ಮೆಚ್ಚಿಸಲು ಮನಸ್ಸು ಅಪೇಕ್ಷಿಸುತ್ತದೆ.—ಕೀರ್ತ. 119:11, 47, 48.

10. ಯೆಹೋವನ ಸೇವೆಯನ್ನು ಹೆಚ್ಚಿಸಲು ಪ್ರಾರ್ಥನೆ ಹೇಗೆ ನೆರವಾಗುತ್ತದೆ?

10 ದೇವರ ಮಹಿಮೆಯನ್ನು ಪ್ರತಿಫಲಿಸಲು ನಾವು ಇನ್ನೊಂದು ವಿಷಯ ಮಾಡಬೇಕು. ‘ಪಟ್ಟುಹಿಡಿದು ಪ್ರಾರ್ಥಿಸಬೇಕು.’ (ರೋಮ. 12:12) ಆತನ ಮನಮೆಚ್ಚುವ ರೀತಿಯಲ್ಲಿ ಸೇವೆ ಸಲ್ಲಿಸಲಿಕ್ಕಾಗಿ ನೆರವನ್ನು ಯಾಚಿಸಬೇಕು. ನಂಬಿಕೆಯನ್ನು ಹೆಚ್ಚಿಸಲು, ಪ್ರಲೋಭನೆಗಳನ್ನು ಮಟ್ಟಹಾಕಲು ಹಾಗೂ “ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ” ನಿರ್ವಹಿಸಲು ಪವಿತ್ರಾತ್ಮವನ್ನು ನೀಡುವಂತೆ ನಾವು ದೇವರಲ್ಲಿ ಕೇಳಿಕೊಳ್ಳಬೇಕು. (2 ತಿಮೊ. 2:15; ಮತ್ತಾ. 6:13; ಲೂಕ 11:13; 17:5) ಚಿಕ್ಕ ಮಗು ತನ್ನ ತಂದೆಯ ಕೈಯನ್ನು ಬಿಗಿಯಾಗಿ ಹಿಡಿದುಕೊಳ್ಳುವಂತೆ ನಾವು ಯೆಹೋವ ದೇವರನ್ನು ಪೂರ್ಣವಾಗಿ ಆಶ್ರಯಿಸಬೇಕು. ಹೆಚ್ಚು ಸೇವೆ ಮಾಡಲು ಸಹಾಯಕ್ಕಾಗಿ ಬೇಡುವಾಗ ಆತನದನ್ನು ಕೊಟ್ಟೇಕೊಡುತ್ತಾನೆ. ಪದೇ ಪದೇ ಪ್ರಾರ್ಥಿಸಿದರೆ ದೇವರಿಗೆ ಕಿರಿಕಿರಿ ಆಗುತ್ತದೆ ಎಂಬ ಭಾವನೆ ಬೇಡ. ಪ್ರಾರ್ಥನೆಯಲ್ಲಿ ಆತನನ್ನು ಸ್ತುತಿಸಿ ಕೃತಜ್ಞತೆ ಸಲ್ಲಿಸೋಣ. ಎಲ್ಲ ಸಮಯಗಳಲ್ಲಿ ವಿಶೇಷವಾಗಿ ತೊಂದರೆ ಎದುರಾದಾಗ ಮಾರ್ಗದರ್ಶನ ಕೋರೋಣ. ಆತನ ಪವಿತ್ರ ನಾಮಕ್ಕೆ ಘನಮಹಿಮೆ ಉಂಟಾಗುವಂಥ ರೀತಿಯಲ್ಲಿ ಸೇವೆಸಲ್ಲಿಸಲು ಸಹಾಯ ಬೇಡೋಣ.—ಕೀರ್ತ. 86:12; ಯಾಕೋ. 1:5-7.

11. ದೇವರ ಮಹಿಮೆಯನ್ನು ಪ್ರತಿಫಲಿಸಲು ಕೂಟಗಳು ನಮಗೆ ಹೇಗೆ ಸಹಾಯ ಮಾಡುತ್ತವೆ?

11 ಕುರಿಗಳಂತಿರುವ ತನ್ನ ಪ್ರಿಯ ಜನರನ್ನು ಪರಿಪಾಲಿಸುವ ಜವಾಬ್ದಾರಿಯನ್ನು ದೇವರು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿಗೆ’ ವಹಿಸಿದ್ದಾನೆ. (ಮತ್ತಾ. 24:45-47; ಕೀರ್ತ. 100:3) ಆ ಆಳು ವರ್ಗವು ನಾವೆಲ್ಲರೂ ಯೆಹೋವ ದೇವರ ಮಹಿಮೆಯನ್ನು ಪ್ರತಿಫಲಿಸುವಂತೆ ಬಹಳ ಆಸಕ್ತಿಯಿಂದ ಸಹಾಯ ಮಾಡುತ್ತದೆ. ನಮ್ಮ ಜೀವನದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತೆ, ಕ್ರೈಸ್ತ ಗುಣಗಳನ್ನು ಹೆಚ್ಚೆಚ್ಚು ಬೆಳೆಸಿಕೊಳ್ಳುವಂತೆ ಕೂಟಗಳ ಮೂಲಕ ನಮಗೆ ನೆರವನ್ನು ನೀಡುತ್ತದೆ. ನಾವು ಅಂದವಾಗಿ ಕಾಣುವಂತೆ ಟೈಲರ್‌ ಹೇಗೆ ಅಂಗಿಯನ್ನು ನಮಗೆ ಹೊಂದುವಂಥ ರೀತಿಯಲ್ಲಿ ಸರಿಪಡಿಸುತ್ತಾನೋ ಹಾಗೆಯೇ ಕೂಟಗಳು ನಮ್ಮ ಕ್ರೈಸ್ತ ಜೀವಿತವನ್ನು ತಿದ್ದಿತೀಡಿ ಅಂದಗೊಳಿಸುತ್ತವೆ. (ಇಬ್ರಿ. 10:24, 25) ಆದ್ದರಿಂದ ನಾವು ಕೂಟಗಳಿಗೆ ಸಮಯಕ್ಕೆ ಸರಿಯಾಗಿ ಬರೋಣ. ತಡವಾಗಿ ಬರುವುದು ನಮ್ಮ ರೂಢಿಯಾಗಿರುವಲ್ಲಿ ದೇವರ ಸೇವಕರಾಗಿ ನಮ್ಮ ಆಧ್ಯಾತ್ಮಿಕ ತೋರಿಕೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಕೆಲವು ಅವಕಾಶಗಳು ತಪ್ಪಿಹೋಗುವವು.

ದೇವರನ್ನು ಅನುಕರಿಸೋಣ

12. ನಾವು ದೇವರನ್ನು ಅನುಕರಿಸಬೇಕಾದರೆ ಏನು ಮಾಡಬೇಕು?

12 ದೇವರ ಮಹಿಮೆಯನ್ನು ಪ್ರತಿಫಲಿಸಬೇಕಾದರೆ ನಾವು “ದೇವರನ್ನು ಅನುಕರಿಸುವ” ಜನರಾಗಿರಬೇಕು. (ಎಫೆ. 5:1) ಇದನ್ನು ಮಾಡುವ ಒಂದು ವಿಧ ಪ್ರತಿಯೊಂದು ವಿಷಯವನ್ನು ಆತನ ದೃಷ್ಟಿಕೋನದಲ್ಲೇ ನೋಡುವುದು. ಅದನ್ನು ಸ್ವಲ್ಪವಾದರೂ ಅಲಕ್ಷಿಸುವುದಾದರೆ ಆತನಿಗೆ ಅಗೌರವ ತರುವ ಕೆಲಸಗಳನ್ನು ನಾವು ಮಾಡುತ್ತಿರುವೆವು. ಅದು ನಮ್ಮ ಆಧ್ಯಾತ್ಮಿಕತೆಗೂ ಹಾನಿಯನ್ನು ತರುವುದು. ಈ ಲೋಕ ಪಿಶಾಚನಾದ ಸೈತಾನನ ಕೈವಶದಲ್ಲಿರುವುದರಿಂದ ದೇವರು ಹಗೆಮಾಡುವುದನ್ನು ನಾವು ಹಗೆಮಾಡುತ್ತಾ ಆತನು ಪ್ರೀತಿಸುವುದನ್ನು ಪ್ರೀತಿಸುವುದು ಸುಲಭವೇನಲ್ಲ. (ಕೀರ್ತ. 97:10; 1 ಯೋಹಾ. 5:19) ಆದರೆ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡುವುದೇ ಸರಿಯಾದ ವಿಷಯ ಎಂಬ ದೃಢನಿಶ್ಚಯ ನಮಗಿರುವುದಾದರೆ ನಾವದನ್ನು ಮಾಡಬಲ್ಲೆವು.—1 ಕೊರಿಂಥ 10:31 ಓದಿ.

13. (1) ಪಾಪಕೃತ್ಯವನ್ನು ಏಕೆ ಹಗೆಮಾಡಬೇಕು? (2) ಪಾಪವನ್ನು ಹಗೆ ಮಾಡುವುದಾದರೆ ನಾವೇನು ಮಾಡುತ್ತೇವೆ?

13 ಯೆಹೋವನು ಪಾಪಕೃತ್ಯವನ್ನು ಹಗೆಮಾಡುತ್ತಾನೆ. ನಾವು ಸಹ ಹಗೆಮಾಡಬೇಕು. ಪಾಪಕೃತ್ಯದಿಂದ ಆದಷ್ಟು ದೂರ ಇರಬೇಕೇ ಹೊರತು ಏನೂ ಆಗಲ್ಲ ಎಂಬ ಮೊಂಡು ಧೈರ್ಯ ತೋರಿಸಿ ಆ ಸನ್ನಿವೇಶಕ್ಕೆ ಒಡ್ಡಿಕೊಳ್ಳಬಾರದು. ಉದಾಹರಣೆಗೆ, ಧರ್ಮಭ್ರಷ್ಟತೆ ಒಂದು ಮಹಾಪಾಪ. ನಾವು ಅದರ ಹತ್ತಿರವೂ ಸುಳಿಯಬಾರದು. ಏಕೆಂದರೆ ನಾವು ಧರ್ಮಭ್ರಷ್ಟರಾಗುವಲ್ಲಿ ಯೆಹೋವನ ಮಹಿಮೆಯನ್ನು ಪ್ರತಿಫಲಿಸಲು ಸಾಧ್ಯವಿಲ್ಲ. (ಧರ್ಮೋ. 13:6-9) ಆದ್ದರಿಂದ ಧರ್ಮಭ್ರಷ್ಟರ ಸಹವಾಸವೇ ಬೇಡ. ಸಹೋದರನೆಂದು ಹೇಳಿಕೊಳ್ಳುತ್ತಾ ದೇವರಿಗೆ ಅಗೌರವ ತರುವ ವ್ಯಕ್ತಿಗಳಿಂದ ನಾವು ದೂರವಿರೋಣ. ಅಂಥವರು ನಮ್ಮ ಕುಟುಂಬ ಸದಸ್ಯರೇ ಆಗಿದ್ದರೂ ನಮ್ಮ ನಿಲುವನ್ನು ಸಡಿಲಿಸದಿರೋಣ. (1 ಕೊರಿಂ. 5:11) ಧರ್ಮಭ್ರಷ್ಟರು ಅಥವಾ ಟೀಕಾಕಾರರು ಯೆಹೋವನ ಸಂಘಟನೆಯ ಮೇಲೆ ಹೊರಿಸುವ ಆರೋಪಗಳನ್ನು ಸುಳ್ಳೆಂದು ನಾವು ನಿರೂಪಿಸಲು ಪ್ರಯತ್ನಿಸುವುದು ನಮಗೇ ಹಾನಿಕರ. ಆದ್ದರಿಂದ ಇಂಟರ್‌ನೆಟ್‌ನಲ್ಲಾಗಲಿ ಬೇರೆ ಯಾವುದೇ ರೂಪದಲ್ಲಾಗಲಿ ಅವರು ಹಬ್ಬಿಸುವ ಮಾಹಿತಿಯನ್ನು ಓದುವುದು ಅಪಾಯಕಾರಿಯಾಗಿದೆ.—ಯೆಶಾಯ 5:20; ಮತ್ತಾಯ 7:6 ಓದಿ.

14. (1) ದೇವರ ಮಹಿಮೆಯನ್ನು ಪ್ರತಿಫಲಿಸಲು ಯಾವ ಗುಣ ಅಗತ್ಯ? (2) ಅದು ನಮ್ಮಲ್ಲಿರುವುದು ಏಕೆ ಪ್ರಾಮುಖ್ಯ?

14 ನಮ್ಮ ತಂದೆಯಾದ ಯೆಹೋವನನ್ನು ಅನುಕರಿಸುವ ಉತ್ತಮ ವಿಧವೆಂದರೆ ಇತರರಿಗೆ ಪ್ರೀತಿ ತೋರಿಸುವುದೇ. ಯೆಹೋವನು ಪ್ರೀತಿಯ ದೇವರಾಗಿರುವ ಕಾರಣ ನಮ್ಮಲ್ಲೂ ಪ್ರೀತಿಯಿರಬೇಕು. (1 ಯೋಹಾ. 4:16-19) ನಮ್ಮ ಮಧ್ಯೆ ಪ್ರೀತಿ ಇದ್ದರೆ ಮಾತ್ರ ಯೇಸುವಿನ ಶಿಷ್ಯರೆಂದು ಗುರುತಿಸಲ್ಪಡುತ್ತೇವೆ. (ಯೋಹಾ. 13:34, 35) ಪ್ರೀತಿ ತೋರಿಸದಂತೆ ನಮ್ಮಲ್ಲಿರುವ ಪಾಪಪ್ರವೃತ್ತಿ ಕೆಲವೊಮ್ಮೆ ಅಡ್ಡ ಬರಬಹುದು. ಹಾಗಿದ್ದರೂ ನಾವದನ್ನು ಮೆಟ್ಟಿನಿಂತು ಯಾವಾಗಲೂ ಪ್ರೀತಿಪರರಾಗಿರಬೇಕು. ಪ್ರೀತಿ ಹಾಗೂ ಇತರ ಸದ್ಗುಣಗಳನ್ನು ಬೆಳೆಸಿಕೊಳ್ಳುವುದು ಅನ್ಯಾಯ ಮಾಡದಂತೆ ಹಾಗೂ ಪಾಪ ಮಾಡದಂತೆ ತಡೆಯುತ್ತದೆ.—2 ಪೇತ್ರ 1:5-7.

15. ಪ್ರೀತಿಯಿರುವಲ್ಲಿ ಇತರರನ್ನು ಹೇಗೆ ಉಪಚರಿಸುತ್ತೇವೆ?

15 ನಮ್ಮಲ್ಲಿ ಪ್ರೀತಿ ಇದ್ದರೆ ಪರರಿಗೆ ಒಳಿತನ್ನೇ ಮಾಡುತ್ತೇವೆ. (ರೋಮ. 13:8-10) ಹೇಗೆಂದರೆ, ಪರಸ್ಪರ ಪ್ರೀತಿಯಿರುವ ಪತಿಪತ್ನಿ ಯಾವಾಗಲೂ ದಾಂಪತ್ಯನಿಷ್ಠೆ ತೋರಿಸುತ್ತಾರೆ. ದ್ರೋಹ ಬಗೆಯುವುದಿಲ್ಲ. ಸಭಾಹಿರಿಯರ ಮೇಲೆ ಗೌರವದ ಜೊತೆಗೆ ಪ್ರೀತಿಯೂ ಇದ್ದರೆ ಅವರಿಗೆ ನಾವು ವಿಧೇಯರಾಗುತ್ತೇವೆ. ಅವರ ಮಾರ್ಗದರ್ಶನೆಗೆ ಅಧೀನರಾಗುತ್ತೇವೆ. ಹೆತ್ತವರನ್ನು ಪ್ರೀತಿಸುವ ಮಕ್ಕಳು ವಿಧೇಯತೆ, ಗೌರವ ತೋರಿಸುತ್ತಾರೆ ವಿನಃ ಅವರ ಬಗ್ಗೆ ಕೆಟ್ಟದಾಗಿ ಮಾತಾಡುವುದಿಲ್ಲ. ಪರರ ಮೇಲೆ ಪ್ರೀತಿಯಿರುವಲ್ಲಿ ನಾವು ಯಾರನ್ನೂ ಕೀಳಾಗಿ ನೋಡುವುದಿಲ್ಲ. ಅವರ ಬಗ್ಗೆ ಕೆಟ್ಟದಾಗಿ ಮಾತಾಡುವುದೂ ಇಲ್ಲ. (ಯಾಕೋ. 3:9) ದೇವರ ಮಂದೆಯನ್ನು ಪ್ರೀತಿಸುವ ಹಿರಿಯರು ಹೆಚ್ಚು ಕೋಮಲವಾಗಿ ಆರೈಕೆಮಾಡುತ್ತಾರೆ.—ಅ. ಕಾ. 20:28, 29.

16. ಸುವಾರ್ತೆ ಸಾರಲು ಪ್ರೀತಿ ಸ್ಫೂರ್ತಿಯಾಗಿದೆ ಹೇಗೆ?

16 ಸುವಾರ್ತೆ ಸಾರಲು ಪ್ರೀತಿಯೇ ಸ್ಫೂರ್ತಿ. ಸುವಾರ್ತೆ ಸಾರುವಾಗ ಕೆಲವೊಮ್ಮೆ ಜನರು ನಿರಾಸಕ್ತಿ, ವಿರೋಧ ತೋರಿಸಬಹುದು. ಆದರೂ ನಮಗೆ ಯೆಹೋವ ದೇವರ ಮೇಲೆ ಅಪಾರ ಪ್ರೀತಿಯಿರುವುದರಿಂದ ಸಾರುವ ಸ್ಫೂರ್ತಿಯನ್ನು ಕಳೆದುಕೊಳ್ಳುವುದಿಲ್ಲ. ಒಳ್ಳೇ ತಯಾರಿ ಮಾಡಿ ಜನರ ಮನಮುಟ್ಟುವಂಥ ರೀತಿಯಲ್ಲಿ ಸಾರಲು ಪ್ರಯತ್ನಿಸುವೆವು. ನಾವು ದೇವರನ್ನೂ ಜನರನ್ನೂ ಪ್ರೀತಿಸುವುದಾದರೆ ಸಾರುವ ಕೆಲಸವನ್ನು ಬರೀ ಒಂದು ಕರ್ತವ್ಯವಾಗಿ ನೆನಸುವುದಿಲ್ಲ. ಅದನ್ನು ಅಮೂಲ್ಯ ಸುಯೋಗವೆಂದು ಪರಿಗಣಿಸಿ ಆ ಕೆಲಸ ಮಾಡಲು ಸಂತೋಷಿಸುವೆವು.—ಮತ್ತಾ. 10:7.

ಯೆಹೋವನನ್ನು ಮಹಿಮೆಪಡಿಸುತ್ತಾ ಇರೋಣ

17. ಪಾಪಿಗಳೆಂದು ಒಪ್ಪಿಕೊಳ್ಳುವುದರಿಂದ ಯಾವ ಪ್ರಯೋಜನವಿದೆ?

17 ಹೆಚ್ಚಿನ ಜನರಿಗೆ ತಾವು ಪಾಪಿಗಳೆಂಬ ಅರಿವೇ ಇಲ್ಲ. ಆದರೆ ನಮಗೆ ಪಾಪದ ಭೀಕರತೆ ಏನೆಂದು ಗೊತ್ತಿದೆ. ಹಾಗಾಗಿ ಪಾಪಪ್ರವೃತ್ತಿಗಳ ವಿರುದ್ಧ ಹೋರಾಡುವುದು ಅತ್ಯಗತ್ಯವೆಂದೂ ಗೊತ್ತಿದೆ. ನಾವು ಪಾಪಿಗಳೆಂದು ಒಪ್ಪಿಕೊಂಡರೆ ನಮ್ಮ ಮನಸ್ಸಾಕ್ಷಿಯನ್ನು ಸರಿಯಾದ ರೀತಿಯಲ್ಲಿ ತರಬೇತುಗೊಳಿಸುತ್ತೇವೆ. ಹೀಗೆ ತರಬೇತುಗೊಳಿಸಿದ ಮನಸ್ಸಾಕ್ಷಿಯು ನಮ್ಮಲ್ಲಿ ಪಾಪ ಮಾಡುವ ಆಲೋಚನೆ ಬಂದಾಕ್ಷಣವೇ ಅದನ್ನು ಕಿತ್ತೊಗೆದು ಸರಿಯಾದದ್ದನ್ನು ಮಾಡಲು ನೆರವಾಗುತ್ತದೆ. (ರೋಮ. 7:22, 23) ಪಾಪಿಗಳಾದ ನಾವು ಬಲಹೀನರಾದರೂ ಯೆಹೋವನು ನಮಗೆ ಬಲವನ್ನು ಕೊಡುವನು. ಯಾವುದೇ ಸನ್ನಿವೇಶವಿರಲಿ ಆ ಬಲದಿಂದ ನಾವು ಸರಿಯಾದದ್ದನ್ನೇ ಮಾಡಶಕ್ತರಾಗುವೆವು.—2 ಕೊರಿಂ. 12:10.

18, 19. (1) ಸೈತಾನನು ಹಾಗೂ ದೆವ್ವಗಳ ವಿರುದ್ಧ ಜಯಗಳಿಸಲು ಯಾವುದು ಸಹಾಯ ಮಾಡುವುದು? (2) ನಮ್ಮ ಸಂಕಲ್ಪ ಏನಾಗಿರಬೇಕು?

18 ನಾವು ಯೆಹೋವನನ್ನು ಮಹಿಮೆಪಡಿಸಬೇಕಾದರೆ ಸೈತಾನನ ಹಾಗೂ ದೆವ್ವಗಳ ವಿರುದ್ಧ ಹೋರಾಡಬೇಕು. ಯೆಹೋವನು ನಮಗೆ ಕೊಟ್ಟಿರುವ ಆಧ್ಯಾತ್ಮಿಕ ರಕ್ಷಾಕವಚವು ಆ ಹೋರಾಟದಲ್ಲಿ ಜಯಸಾಧಿಸಲು ಸಹಾಯ ಮಾಡುತ್ತದೆ. (ಎಫೆ. 6:11-13) ಯೆಹೋವನಿಗೆ ಮಾತ್ರ ಸಲ್ಲಬೇಕಾದ ಮಹಿಮೆಯನ್ನು ಕಸಿದುಕೊಳ್ಳಲು ಸೈತಾನನು ಅವಿರತ ಶ್ರಮ ಹಾಕುತ್ತಿದ್ದಾನೆ. ದೇವರೊಂದಿಗಿರುವ ನಮ್ಮ ಸ್ನೇಹಕ್ಕೂ ಕಲ್ಲುಹಾಕಲು ಸರ್ವಪ್ರಯತ್ನ ಮಾಡುತ್ತಿದ್ದಾನೆ. ಆದರೆ ಅಪರಿಪೂರ್ಣ ಸ್ತ್ರೀಪುರುಷರು, ಮಕ್ಕಳು ಯೆಹೋವ ದೇವರಿಗೆ ನಿಷ್ಠೆ ತೋರಿಸುತ್ತಾ ಮಹಿಮೆ ಸಲ್ಲಿಸುವಾಗ ಸೈತಾನನ ಪ್ರಯತ್ನ ಮಣ್ಣುಮುಕ್ಕುತ್ತದೆ. ಆದ್ದರಿಂದ ಸ್ವರ್ಗೀಯ ಜೀವಿಗಳಂತೆ ನಾವೆಲ್ಲರೂ ಯೆಹೋವನನ್ನು ಸದಾ ಹೀಗೆ ಸ್ತುತಿಸೋಣ: “ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ ಮತ್ತು ನಿನ್ನ ಚಿತ್ತದಿಂದಲೇ ಅವು ಅಸ್ತಿತ್ವಕ್ಕೆ ಬಂದವು ಹಾಗೂ ಸೃಷ್ಟಿಸಲ್ಪಟ್ಟವು.”—ಪ್ರಕ. 4:11.

19 ನಾವೆಲ್ಲರೂ ಯೆಹೋವನಿಗೆ ಮಹಿಮೆ ಸಲ್ಲಿಸುತ್ತಾ ಇರುವ ದೃಢಸಂಕಲ್ಪ ಮಾಡೋಣ. ಲಕ್ಷಾಂತರ ಮಂದಿ ತನ್ನನ್ನು ಅನುಕರಿಸುತ್ತಾ ತನ್ನ ಮಹಿಮೆಯನ್ನು ಪ್ರತಿಫಲಿಸುವುದನ್ನು ನೋಡುವಾಗ ಆತನ ಹೃದಯ ಸಂತೋಷದಿಂದ ಹಿಗ್ಗುತ್ತದೆ. (ಜ್ಞಾನೋ. 27:11) ದಾವೀದನ ಈ ಹಾಡಿನಂತೆ ನಮ್ಮ ಭಾವನೆಗಳೂ ಹೊರಹೊಮ್ಮಲಿ: “ಕರ್ತನೇ, ನನ್ನ ದೇವರೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು; ಎಂದೆಂದಿಗೂ ನಿನ್ನ ನಾಮವನ್ನು ಘನಪಡಿಸುವೆನು.” (ಕೀರ್ತ. 86:12) ನಾವೆಲ್ಲರೂ ಯೆಹೋವನ ಮಹಿಮೆಯನ್ನು ಪರಿಪೂರ್ಣವಾಗಿ ಪ್ರತಿಫಲಿಸುತ್ತಾ ಆತನನ್ನು ಸದಾಕಾಲ ಸ್ತುತಿಸುವ ಸಮಯಕ್ಕಾಗಿ ಕಾಯುತ್ತಿದ್ದೇವೆ. ಆ ಹರ್ಷಾನಂದದ ಭವಿಷ್ಯ ಮಾನವಕುಲದ ಮುಂದಿದೆ. ನೀವು ಈಗ ಯೆಹೋವ ದೇವರ ಮಹಿಮೆಯನ್ನು ಪ್ರತಿಫಲಿಸುತ್ತಿದ್ದೀರಾ? ಅದನ್ನು ನಿತ್ಯನಿರಂತರಕ್ಕೂ ಮಾಡುವ ಸುಯೋಗ ನಿಮ್ಮದಾಗುವುದು.

[ಅಧ್ಯಯನ ಪ್ರಶ್ನೆಗಳು]

[ಪುಟ 27ರಲ್ಲಿರುವ ಚಿತ್ರಗಳು]

ಈ ವಿಧಗಳಲ್ಲಿ ಯೆಹೋವನ ಮಹಿಮೆಯನ್ನು ಪ್ರತಿಫಲಿಸುತ್ತಿದ್ದೀರಾ?