ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಿರಿಯವರ ಸ್ನೇಹದಿಂದ ಸಿರಿಯಾದ ಬಾಳು

ಹಿರಿಯವರ ಸ್ನೇಹದಿಂದ ಸಿರಿಯಾದ ಬಾಳು

ಜೀವನ ಕಥೆ

ಹಿರಿಯವರ ಸ್ನೇಹದಿಂದ ಸಿರಿಯಾದ ಬಾಳು

ಎಲ್ವ ಜರ್ಡೀ ಹೇಳಿದಂತೆ

ಅದೊಂದು ಮಹತ್ವಪೂರ್ಣ ದಿನ. ಮನೆಗೆ ಬಂದಿದ್ದ ವ್ಯಕ್ತಿಯೊಬ್ಬರು ತಂದೆಗೆ ಹೇಳಿದ ಮಾತಿನಿಂದ ನನ್ನ ಬದುಕಿನ ದಿಸೆಯೇ ಬದಲಾಯಿತು. ಅಲ್ಲಿಂದ ಹಿಡಿದು ಕಳೆದ ಸುಮಾರು ಎಪ್ಪತ್ತು ವರ್ಷಗಳಲ್ಲಿ ಅನೇಕ ಮಂದಿ ನನ್ನ ಬಾಳಿಗೆ ಹೊಸ ತಿರುವು ಕೊಟ್ಟರು. ಅದಲ್ಲದೆ ನಾನು ಪಡೆದ ಇನ್ನೊಂದು ಸ್ನೇಹ ಅತ್ಯಮೂಲ್ಯವಾದದ್ದು. ಆ ಕಥೆಯನ್ನು ನಿಮ್ಮ ಮುಂದೆ ತೆರೆದಿಡುವೆ.

ನನ್ನ ಜನನ 1932ರಲ್ಲಿ ಆಸ್ಟ್ರೇಲಿಯದ ಸಿಡ್ನಿಯಲ್ಲಾಯಿತು. ಅಪ್ಪಅಮ್ಮನಿಗೆ ದೇವರಲ್ಲಿ ನಂಬಿಕೆ ಇತ್ತಾದರೂ ಚರ್ಚಿಗೆ ಹೋಗುತ್ತಿರಲಿಲ್ಲ. ದೇವರು ಸದಾ ನಿನ್ನ ಮೇಲೆ ಕಣ್ಣಿಟ್ಟಿರುತ್ತಾನೆ, ತುಂಟಾಟ ಪೋಕರಿ ಮಾಡಿದರೆ ದಂಡಿಸುತ್ತಾನೆ ಎಂದು ಅಮ್ಮ ನನಗೆ ಹೇಳುತ್ತಿದ್ದರು. ಹಾಗಾಗಿ ದೇವರೆಂದರೆ ನನಗೆ ಭಯವಿತ್ತು. ಆದರೂ ಬೈಬಲ್‌ ಎಂದರೆ ಭಕ್ತಿ ಗೌರವ ಇತ್ತು. ವಾರಾಂತ್ಯಗಳಲ್ಲಿ ನಮ್ಮ ಮನೆಗೆ ಬರುತ್ತಿದ್ದ ನನ್ನ ದೊಡ್ಡಮ್ಮ ಬೈಬಲ್‌ ಕಥೆಗಳನ್ನು ಹೇಳುತ್ತಿದ್ದರು. ಆ ಕಥೆಗಳನ್ನು ನಾನೆಷ್ಟು ಇಷ್ಟ ಪಡುತ್ತಿದ್ದೆನೆಂದರೆ ಮತ್ತೆ ಅವರು ಮನೆಗೆ ಯಾವಾಗ ಬರುತ್ತಾರೋ ಎಂದು ದಾರಿ ಕಾಯುತ್ತಿದ್ದೆ.

ಯೆಹೋವನ ಸಾಕ್ಷಿಯಾಗಿದ್ದ ವೃದ್ಧ ಮಹಿಳೆಯೊಬ್ಬರು ಅಮ್ಮನಿಗೆ ಕೆಲವು ಪುಸ್ತಕಗಳನ್ನು ನೀಡಿದ್ದರು. ನನಗಾಗ ಹದಿವಯಸ್ಸು. ಆ ಪುಸ್ತಕಗಳನ್ನು ಅಪ್ಪ ಆಸಕ್ತಿಯಿಂದ ಓದಿದರು. ಅದರಲ್ಲಿದ್ದ ವಿಷಯ ಅವರಿಗೆ ಬಹಳ ಹಿಡಿಸಿದ್ದರಿಂದ ಸಾಕ್ಷಿಗಳಿಂದ ಬೈಬಲ್‌ ಕಲಿಯಲು ಆರಂಭಿಸಿದರು. ಒಂದು ಸಂಜೆ ನಡೆದ ಸಂಗತಿಯನ್ನು ನಾನೆಂದೂ ಮರೆಯಲಾರೆ. ಸಾಕ್ಷಿಯು ಅಪ್ಪನಿಗೆ ಬೈಬಲ್‌ ಕಲಿಸುತ್ತಿದ್ದರು. ನಾನದನ್ನು ಕದ್ದುಮುಚ್ಚಿ ಕೇಳುತ್ತಿದ್ದೆ. ನನ್ನನ್ನು ನೋಡಿಬಿಟ್ಟ ಅಪ್ಪ ಮಲಗುವಂತೆ ಹೇಳಿದರು. ಕೂಡಲೆ ಆ ಸಾಕ್ಷಿ “ನಿಮ್ಮ ಮಗಳು ಕೂಡ ನಿಮ್ಮೊಂದಿಗೆ ಬೈಬಲ್‌ ಕಲಿಯಲು ಕೂತುಕೊಳ್ಳಬಹುದಲ್ಲಾ” ಎಂದರು. ಆ ಮಾತು ಹೊಸ ಜೀವನರೀತಿಗೆ ನಾಂದಿಯಾಯಿತು. ಸತ್ಯ ದೇವರಾದ ಯೆಹೋವನೊಂದಿಗೆ ನನ್ನ ಸ್ನೇಹ ಶುರುವಾದದ್ದು ಆಗಲೇ.

ಸ್ವಲ್ಪವೇ ಸಮಯದಲ್ಲಿ ಅಪ್ಪ ಮತ್ತು ನಾನು ಕ್ರೈಸ್ತ ಕೂಟಗಳಿಗೆ ಹಾಜರಾಗಲು ತೊಡಗಿದೆವು. ಅಪ್ಪ ವಿಷಯಗಳನ್ನು ಕಲಿತಂತೆ ಅವುಗಳನ್ನು ಅನ್ವಯಿಸಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡರು. ತಮ್ಮ ಕೋಪಕ್ಕೆ ಕಡಿವಾಣ ಹಾಕಿದರು. ಈ ಬದಲಾವಣೆ ಗಮನಿಸಿದ ಅಮ್ಮ ಮತ್ತು ಅಣ್ಣ ಕೂಟಗಳಿಗೆ ಬರತೊಡಗಿದರು. * ನಾವು ನಾಲ್ವರೂ ಒಳ್ಳೇ ಪ್ರಗತಿ ಮಾಡುತ್ತಾ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಾದೆವು. ಅಂದಿನಿಂದ ನನ್ನ ಬಾಳಿನ ನಾನಾ ಘಟ್ಟಗಳಲ್ಲಿ ಅನೇಕ ಹಿರಿವಯಸ್ಸಿನವರು ಧನಾತ್ಮಕ ಪ್ರಭಾವ ಬೀರಿದ್ದಾರೆ.

ಜೀವನವೃತ್ತಿಯನ್ನು ಆರಿಸಿಕೊಳ್ಳುವಾಗ. . .

ಹದಿವಯಸ್ಸಿನ ನನಗೆ ಸಭೆಯಲ್ಲಿ ಹಿರಿವಯಸ್ಸಿನ ಸ್ನೇಹಿತರಿದ್ದರು. ಆಲಿಸ್‌ ಪ್ಲೇಸ್‌ ಅವರಲ್ಲೊಬ್ಬರು. ನಮ್ಮ ಕುಟುಂಬಕ್ಕೆ ಸುವಾರ್ತೆಯನ್ನು ಮೊದಲು ಪರಿಚಯಿಸಿದ್ದು ಇವರೇ. ಅವರು ನನಗೆ ಅಜ್ಜಿಯಂತಿದ್ದರು. ಸಾರುವ ಕೆಲಸದಲ್ಲಿ ನನಗೆ ಒಳ್ಳೇ ತರಬೇತಿ ನೀಡಿ ದೀಕ್ಷಾಸ್ನಾನ ಪಡೆಯುವ ಗುರಿಯಿಡುವಂತೆ ಪ್ರೋತ್ಸಾಹಿಸಿದರು. 15ನೇ ವಯಸ್ಸಿನಲ್ಲಿ ನಾನು ಆ ಗುರಿ ಮುಟ್ಟಿದೆ.

ಪರ್ಸಿ ಮತ್ತು ಅವರ ಹೆಂಡತಿ ಮ್ಯಾಜ್‌ [ಮಾರ್ಗರೆಟ್‌] ಡನಮ್‌ ಎಂಬವರು ಸಹ ನನಗೆ ಹತ್ತಿರವಾಗಿದ್ದರು. ಈ ವೃದ್ಧ ದಂಪತಿಯೊಂದಿಗಿನ ಸ್ನೇಹ ನನ್ನ ಭವಿಷ್ಯದ ಮೇಲೆ ದೊಡ್ಡ ಪ್ರಭಾವ ಬೀರಿತು. ಗಣಿತವೆಂದರೆ ನನಗೆ ತುಂಬ ಇಷ್ಟ. ಗಣಿತದ ಶಿಕ್ಷಕಿ ಆಗಬೇಕೆಂಬುದು ಬಹುದಿನಗಳ ಕನಸಾಗಿತ್ತು. ಪರ್ಸಿ ಮತ್ತು ಮ್ಯಾಜ್‌ರ ಮಾದರಿ ನನ್ನ ಬಾಳಿನ ಪ್ರಮುಖ ಘಟ್ಟದಲ್ಲಿ ಜೀವನವೃತ್ತಿಯ ಬಗ್ಗೆ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಸಹಾಯ ಮಾಡಿತು. ಅವರು 1930ರ ದಶಕದಲ್ಲಿ ಲಾಟ್ವಿಯದಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸಿದ್ದರು. ಯೂರೋಪ್‌ನಲ್ಲಿ ಎರಡನೇ ಮಹಾಯುದ್ಧ ಸ್ಫೋಟಿಸಿದಾಗ ಆಸ್ಟ್ರೇಲಿಯದ ಸಿಡ್ನಿಯಲ್ಲಿದ್ದ ಬೆತೆಲಿನಲ್ಲಿ ಸೇವೆ ಮಾಡುವಂತೆ ಅವರನ್ನು ಆಮಂತ್ರಿಸಲಾಯಿತು. ಈ ವೃದ್ಧ ದಂಪತಿ ನನ್ನಲ್ಲಿ ನಿಜವಾದ ಆಸ್ಥೆ ವಹಿಸಿದರು. ತಮ್ಮ ಮಿಷನರಿ ಸೇವೆಯ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡರು. ಗಣಿತದ ಶಿಕ್ಷಕಿಯಾಗುವುದಕ್ಕಿಂತ ಬೈಬಲ್‌ ಶಿಕ್ಷಕಿಯಾಗುವುದೇ ನನಗೆ ಸಂತೃಪ್ತಿ ಸಂತೋಷ ತರುತ್ತದೆ ಎನ್ನುವುದನ್ನು ಅದು ಮನಸ್ಸಿನಲ್ಲಿ ಅಚ್ಚೊತ್ತಿಸಿತು. ಹಾಗಾಗಿ ನಾನು ಮಿಷನರಿ ಆಗಬೇಕೆಂದು ನಿರ್ಣಯಿಸಿದೆ.

ಆ ಗುರಿ ಮುಟ್ಟುವ ಸಲುವಾಗಿ ಪಯನೀಯರ್‌ ಸೇವೆ ಆರಂಭಿಸುವಂತೆ ಅವರಿಬ್ಬರು ಉತ್ತೇಜನ ನೀಡಿದರು. ಹಾಗಾಗಿ 16ನೇ ವಯಸ್ಸಿನಲ್ಲಿ ಅಂದರೆ 1948ರಲ್ಲಿ ಪಯನೀಯರ್‌ ಸೇವೆ ಆರಂಭಿಸಿದೆ. ನಮ್ಮ ಸಭೆಯಲ್ಲಿ ಈಗಾಗಲೇ ಹತ್ತು ಮಂದಿ ಯುವ ಪಯನೀಯರರು ಸಂತೋಷದಿಂದ ಸೇವೆ ಸಲ್ಲಿಸುತ್ತಿದ್ದರು.

ಮುಂದಿನ ನಾಲ್ಕು ವರ್ಷಗಳಲ್ಲಿ ನಾನು ನ್ಯೂ ಸೌತ್‌ ವೇಲ್ಸ್‌ ಮತ್ತು ಕ್ವೀನ್ಸ್‌ಲ್ಯಾಂಡ್‌ನ ನಾಲ್ಕು ನಗರಗಳಲ್ಲಿ ಸೇವೆ ಮಾಡಿದೆ. ನನ್ನ ಮೊದಲ ಬೈಬಲ್‌ ವಿದ್ಯಾರ್ಥಿನಿ ಬೆಟೀ ಲಾ (ಈಗ ಬೆಟೀ ರೆಮ್ನಂಟ್‌). ನನಗಿಂತ ಎರಡು ವರ್ಷ ದೊಡ್ಡವಳು. ಸ್ನೇಹಮಯಿ ಸ್ವಭಾವದ ಅವಳು ನನ್ನ ಪಯನೀಯರ್‌ ಜೊತೆಗಾರ್ತಿಯಾದಳು. ಸಿಡ್ನಿಯಿಂದ ಪಶ್ಚಿಮಕ್ಕೆ ಸುಮಾರು 230 ಕಿ.ಮೀ. ದೂರದ ಕೌವ್ರ ಎಂಬಲ್ಲಿ ನಾವಿಬ್ಬರು ಸೇವೆ ಮಾಡಿದೆವು. ಹೆಚ್ಚು ಸಮಯ ಜೊತೆಯಾಗಿ ಸೇವೆ ಮಾಡದಿದ್ದರೂ ಇಂದಿಗೂ ನಾವಿಬ್ಬರು ಒಳ್ಳೇ ಸ್ನೇಹಿತರು.

ಬಳಿಕ ಕೌವ್ರ ನಗರದ ನೈರುತ್ಯಕ್ಕೆ 220 ಕಿ.ಮೀ. ದೂರದಲ್ಲಿದ್ದ ನರ್ಯಾಂಡ್ರ ಪಟ್ಟಣದಲ್ಲಿ ನಾನು ಸ್ಪೆಷಲ್‌ ಪಯನೀಯರಳಾಗಿ ಸೇವೆ ಮಾಡಿದೆ. ಆಗ ಜಾಯ್‌ ಲೆನಕ್ಸ್‌ (ಈಗ ಜಾಯ್‌ ಹಂಟರ್‌) ನನ್ನ ಜೊತೆಗಾರ್ತಿಯಾದಳು. ಹುರುಪಿನ ಪಯನೀಯರಳಾಗಿದ್ದ ಅವಳು ಕೂಡ ವಯಸ್ಸಲ್ಲಿ ನನಗಿಂತ ಎರಡು ವರ್ಷ ದೊಡ್ಡವಳು. ಆ ಪಟ್ಟಣದಲ್ಲಿದ್ದ ಸಾಕ್ಷಿಗಳೆಂದರೆ ನಾವಿಬ್ಬರೇ. ನಾವಿಬ್ಬರು ರೇ ಮತ್ತು ಅವರ ಪತ್ನಿ ಎಸ್ತೇರ್‌ ಐಯನ್ಸ್‌ ಎಂಬವರ ಮನೆಯಲ್ಲಿ ಬಾಡಿಗೆಗೆ ತಂಗಿದ್ದೆವು. ಒಬ್ಬ ಮಗ, ಮೂವರು ಹೆಣ್ಣುಮಕ್ಕಳಿದ್ದ ಈ ಕುಟುಂಬಕ್ಕೆ ಸತ್ಯದಲ್ಲಿ ತುಂಬ ಆಸಕ್ತಿಯಿತ್ತು. ರೇ ಮತ್ತು ಅವರ ಮಗ ವಾರದ ದಿನಗಳಲ್ಲಿ ಪಟ್ಟಣದ ಹೊರಗೆ ಕುರಿ ಸಾಕಣೆಯ ಫಾರ್ಮ್‌ನಲ್ಲಿ ಮತ್ತು ಗೋಧಿ ಹೊಲದಲ್ಲಿ ದುಡಿಯುತ್ತಿದ್ದರು. ಎಸ್ತೇರ್‌ ಮತ್ತು ಹೆಣ್ಣುಮಕ್ಕಳು ಪಟ್ಟಣದಲ್ಲಿ ಒಂದು ವಸತಿಗೃಹವನ್ನು ನಡೆಸುತ್ತಿದ್ದರು. ಪ್ರತಿ ಭಾನುವಾರ ನಾನು ಮತ್ತು ಜಾಯ್‌ ಸೇರಿ ರೇ ಕುಟುಂಬಕ್ಕೆ ಹಾಗೂ ಅವರ ವಸತಿಗೃಹದಲ್ಲಿ ತಂಗಿದ್ದ ಸುಮಾರು 12 ಮಂದಿ ರೈಲ್ವೆ ಕಾರ್ಮಿಕರಿಗೆ ಅಡುಗೆ ಮಾಡಿ ಕೊಡುತ್ತಿದ್ದೆವು. ನಮ್ಮ ಈ ಸೇವೆಗೆ ಬದಲಾಗಿ ರೇ ಕುಟುಂಬ ಬಾಡಿಗೆಯನ್ನು ಕಡಿಮೆ ಮಾಡುತ್ತಿತ್ತು. ಊಟವಾದ ಬಳಿಕ ಎಲ್ಲವನ್ನು ಶುಚಿಗೊಳಿಸಿದ ಮೇಲೆ ನಾವು ರೇ ಕುಟುಂಬಕ್ಕೆ ರುಚಿಕರವಾದ ಆಧ್ಯಾತ್ಮಿಕ ಆಹಾರ ಬಡಿಸುತ್ತಿದ್ದೆವು. ಅದುವೇ ವಾರದ ಕಾವಲಿನಬುರುಜು ಅಧ್ಯಯನ. ಈ ಇಡೀ ಕುಟುಂಬ ಸತ್ಯಕ್ಕೆ ಬಂದು ನರ್ಯಾಂಡ್ರ ಸಭೆಯ ಮೊದಲ ಸದಸ್ಯರಾದರು.

ಇಸವಿ 1951ರಲ್ಲಿ ಸಿಡ್ನಿಯಲ್ಲಿ ನಡೆದ ಅಧಿವೇಶನದಲ್ಲಿ ಮಿಷನರಿ ಸೇವೆ ಮಾಡಲು ಇಚ್ಛಿಸುವವರಿಗಾಗಿದ್ದ ವಿಶೇಷ ಕೂಟಕ್ಕೆ ಹಾಜರಾದೆ. ಆ ಕೂಟಕ್ಕೆ 300ಕ್ಕೂ ಹೆಚ್ಚು ಮಂದಿ ಹಾಜರಿದ್ದರು. ಬ್ರೂಕ್ಲಿನ್‌ ಬೆತೆಲ್‌ನಿಂದ ಬಂದಿದ್ದ ನೇತನ್‌ ನಾರ್‌ ನೆರೆದು ಬಂದಿದ್ದವರನ್ನು ಸಂಬೋಧಿಸಿ ಮಾತಾಡಿದರು. ಭೂಮಿಯ ಮೂಲೆ ಮೂಲೆಗೂ ಸುವಾರ್ತೆಯನ್ನು ಪಸರಿಸುವುದು ಎಷ್ಟೊಂದು ತುರ್ತಿನದ್ದು ಎಂದು ಒತ್ತಿಹೇಳಿದರು. ಅವರು ಹೇಳಿದ ಒಂದೊಂದು ಪದವೂ ನಮ್ಮ ಮನಸ್ಪರ್ಶಿಸಿತು. ಅಲ್ಲಿದ್ದ ಅನೇಕ ಪಯನೀಯರರು ದಕ್ಷಿಣ ಪೆಸಿಫಿಕ್‌ ಮತ್ತು ಇತರೆಡೆಗಳಲ್ಲಿ ಸುವಾರ್ತೆಯನ್ನು ಕೊಂಡೊಯ್ದರು. 1952ರಲ್ಲಿ ಗಿಲ್ಯಡ್‌ ಶಾಲೆಯ 19ನೇ ತರಗತಿಗಾಗಿ ಆಸ್ಟ್ರೇಲಿಯದಿಂದ 17 ಮಂದಿಯನ್ನು ಆಮಂತ್ರಿಸಲಾಯಿತು. ಅವರಲ್ಲಿ ನಾನೂ ಒಬ್ಬಳೆಂದು ತಿಳಿದಾಗ ಪುಳಕಿತಳಾದೆ! ಮಿಷನರಿ ಆಗಬೇಕೆಂಬ ನನ್ನ ಕನಸು 20ನೇ ವಯಸ್ಸಿನಲ್ಲೇ ನನಸಾಯಿತು!

ಹೊಂದಾಣಿಕೆ ಅಗತ್ಯವಿದ್ದಾಗ. . .

ಗಿಲ್ಯಡ್‌ ಶಾಲೆಯಲ್ಲಿ ಪಡೆದ ಉಪದೇಶ, ಮಾಡಿದ ಒಡನಾಟ ನನ್ನ ಬೈಬಲ್‌ ಜ್ಞಾನವನ್ನು, ದೇವರಲ್ಲಿದ್ದ ನಂಬಿಕೆಯನ್ನು ಹೆಚ್ಚಿಸಿತು. ಜೊತೆಗೆ ನನ್ನ ವ್ಯಕ್ತಿತ್ವವನ್ನು ತಿದ್ದಿತೀಡಿ ಅಂದಗೊಳಿಸಿತು. ನಾನು ತುಂಬ ಆದರ್ಶವಾದಿ ಯುವತಿಯಾಗಿದ್ದೆ. ನಾನಾಗಲಿ ಇತರರಾಗಲಿ ಒಂಚೂರು ತಪ್ಪು ಮಾಡಬಾರದೆಂದು ಪರಿಪೂರ್ಣತೆಯನ್ನು ನಿರೀಕ್ಷಿಸುತ್ತಿದ್ದೆ. ಕೆಲವೊಂದು ವಿಷಯಗಳ ಬಗ್ಗೆ ತೀರ ಕಟ್ಟುನಿಟ್ಟಾದ ಅಭಿಪ್ರಾಯ ಹೊಂದಿದ್ದೆ. ಉದಾಹರಣೆಗೆ, ಒಮ್ಮೆ ಬೆತೆಲಿನ ಕೆಲವು ಯೌವನಸ್ಥರೊಂದಿಗೆ ಸಹೋದರ ನಾರ್‌ರವರು ಚೆಂಡಾಟ ಆಡುತ್ತಿರುವುದನ್ನು ನೋಡಿದಾಗ ನನಗೆ ಆಘಾತವಾಯಿತು.

ಗಿಲ್ಯಡ್‌ನಲ್ಲಿ ಬೋಧಕರಾಗಿದ್ದ ವಿವೇಚನೆಯುಳ್ಳ ಅನುಭವಸ್ಥ ಸಹೋದರರಿಗೆ ನನ್ನ ತೊಳಲಾಟ ಅರ್ಥವಾಗಿದ್ದಿರಬೇಕು. ನನ್ನ ಆಲೋಚನಾಧಾಟಿಯನ್ನು ಹೊಂದಿಸಿಕೊಳ್ಳುವಂತೆ ಕಳಕಳಿಯಿಂದ ಸಹಾಯ ಮಾಡಲು ಅವರು ಮುಂದಾದರು. ಯೆಹೋವನು ಪ್ರೀತಿಪೂರ್ಣನಾದ, ಗಣ್ಯತೆ ತೋರಿಸುವ ದೇವರೆಂದೂ ತೀರ ಕಟ್ಟುನಿಟ್ಟಿನಿಂದ ತಾಕೀತು ಮಾಡುವ ದೇವರಲ್ಲವೆಂದೂ ಕ್ರಮೇಣ ಅರಿತುಕೊಂಡೆ. ಜೊತೆಯಲ್ಲಿದ್ದ ವಿದ್ಯಾರ್ಥಿಗಳು ಕೂಡ ಸಹಾಯ ಹಸ್ತ ಚಾಚಿದರು. ಒಬ್ಬಾಕೆ ಹೇಳಿದ ಮಾತು ನನಗಿನ್ನೂ ನೆನಪಿದೆ. “ಎಲ್ವ, ತುಂಬ ಕಟ್ಟುನಿಟ್ಟಿನ ವ್ಯಕ್ತಿಯಾಗಿರಬೇಡ. ಎಲ್ಲವನ್ನೂ ಹೀಗೀಗೆ ಮಾಡಬೇಕೆಂದು ಯೆಹೋವನೇನೂ ಬೆತ್ತ ಹಿಡಿದು ಗದರಿಸುವುದಿಲ್ಲ.” ಮುಚ್ಚುಮರೆಯಿಲ್ಲದೆ ಅವಳಾಡಿದ ಮಾತು ನನ್ನ ಮನಮುಟ್ಟಿತು.

ಗಿಲ್ಯಡ್‌ ತರಬೇತಿಯ ನಂತರ ಇತರ ನಾಲ್ಕು ಮಂದಿಯೊಂದಿಗೆ ಆಫ್ರಿಕದ ನಮೀಬಿಯಕ್ಕೆ ಹೋಗುವ ನೇಮಕ ಸಿಕ್ಕಿತು. ಅಲ್ಲಿಗೆ ಹೋದ ಸ್ವಲ್ಪದರಲ್ಲೇ ನಾವೆಲ್ಲರೂ ಒಟ್ಟು 80 ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೆವು. ಹೊಸ ಜಾಗ ಹೊಸ ನೇಮಕ ತುಂಬ ಇಷ್ಟವಾಯಿತು. ಆದರೆ ಒಂದು ವರ್ಷದ ಬಳಿಕ ನಾನು ಅಲ್ಲಿಂದ ಸ್ವಿಟ್ಸರ್ಲೆಂಡ್‌ಗೆ ಹೋಗಬೇಕಾಯಿತು. ಏಕೆಂದರೆ ನನ್ನೊಂದಿಗೆ ಗಿಲ್ಯಡ್‌ ತರಬೇತಿ ಪಡೆದ ಸಹೋದರರೊಬ್ಬರು ಸ್ವಿಟ್ಸರ್ಲೆಂಡ್‌ನಲ್ಲಿ ಸೇವೆ ಮಾಡುತ್ತಿದ್ದರು. ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೆವು. ವಿವಾಹವಾದ ಬಳಿಕ ನಾವಿಬ್ಬರು ಸರ್ಕಿಟ್‌ ಕೆಲಸದಲ್ಲಿ ಮುಂದುವರಿದೆವು.

ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ. . .

ಸರ್ಕಿಟ್‌ ಕೆಲಸದಲ್ಲಿ ಐದು ವರ್ಷಗಳು ಕಳೆದದ್ದೇ ಗೊತ್ತಾಗಲಿಲ್ಲ. ತುಂಬ ಆನಂದಿಸಿದೆವು. ಅನಂತರ ಸ್ವಿಟ್ಸರ್ಲೆಂಡ್‌ ಬೆತೆಲಿನಲ್ಲಿ ಸೇವೆ ಸಲ್ಲಿಸುವಂತೆ ಆಮಂತ್ರಣ ಸಿಕ್ಕಿತು. ಆಧ್ಯಾತ್ಮಿಕವಾಗಿ ಪ್ರೌಢರಾದ ಹಿರಿವಯಸ್ಸಿನ ಸಹೋದರ ಸಹೋದರಿಯರೊಂದಿಗೆ ಬೆತೆಲಿನಲ್ಲಿ ಸೇವೆ ಸಲ್ಲಿಸುವುದು ತುಂಬ ಪ್ರೋತ್ಸಾಹಕರವಾಗಿತ್ತು.

ಆದರೆ ಆ ಸಂತೋಷ ತುಂಬ ದಿನ ಇರಲಿಲ್ಲ. ಸ್ವಲ್ಪ ಸಮಯದಲ್ಲೇ ನನ್ನ ಗಂಡ ನನಗೂ ಯೆಹೋವನಿಗೂ ದ್ರೋಹ ಬಗೆದಿದ್ದಾರೆಂದು ತಿಳಿದುಬಂತು. ಅವರು ನನ್ನನ್ನು ಬಿಟ್ಟು ಹೋದಾಗ ನಿಂತ ನೆಲವೇ ಕುಸಿದಂತಾಯಿತು! ಬೆತೆಲಿನಲ್ಲಿದ್ದ ಹಿರಿವಯಸ್ಸಿನ ಸ್ನೇಹಿತರ ಪ್ರೀತಿ, ಆಶ್ವಾಸನೆ ಸಿಗದಿದ್ದರೆ ಆ ಸಂದಿಗ್ಧ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದೇನೋ ನನಗೇ ಗೊತ್ತಿಲ್ಲ. ನಾನು ಮಾತಾಡಿದಾಗ ಅವರು ಸಹನೆಯಿಂದ ಆಲಿಸಿದರು, ಬೇಕಾದಾಗ ವಿಶ್ರಾಂತಿ ತಕ್ಕೊಳ್ಳಲು ಅನುವು ಮಾಡಿದರು. ದುಃಖದಿಂದ ಬೆಂದು ನೊಂದಿದ್ದಾಗ ಸಾಂತ್ವನ ಹೇಳಿ ಪ್ರೀತಿ ತೋರಿಸಿದರು. ಇವೆಲ್ಲ ಯೆಹೋವನಿಗೆ ಇನ್ನಷ್ಟು ಹತ್ತಿರವಾಗಲು ನನಗೆ ಸಹಾಯ ಮಾಡಿತು.

ಬದುಕಿನಲ್ಲಿ ಅನೇಕ ಕಷ್ಟಸಂಕಷ್ಟಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಹಿರಿವಯಸ್ಸಿನವರ ಬುದ್ಧಿಮಾತುಗಳನ್ನು ಸಹ ನಾನು ನೆನಪಿಸಿಕೊಂಡೆ. ಸಹೋದರಿ ಮ್ಯಾಜ್‌ ಡನಮ್‌ ಹೇಳಿದ ಮಾತೊಂದನ್ನು ಇಂದಿಗೂ ಮರೆಯಲಾರೆ. “ಯೆಹೋವನ ಸೇವೆ ಮಾಡುವಾಗ ನಮಗೆ ಅನೇಕ ಸಂಕಷ್ಟಗಳು ಎದುರಾಗುತ್ತವೆ ಎಲ್ವ. ನಮಗೆ ಆಪ್ತರಾಗಿ ಇರುವವರಿಂದಲೇ ಕೆಲವೊಮ್ಮೆ ಘೋರ ಪರೀಕ್ಷೆಗಳು ಎದುರಾಗಬಹುದು. ಅಂಥ ಸಮಯದಲ್ಲಿ ನೀನು ಯೆಹೋವ ದೇವರಿಗೆ ಆಪ್ತಳಾಗಿರಬೇಕು. ನೀನು ಸೇವೆ ಮಾಡುವುದು ಅಪರಿಪೂರ್ಣ ಮಾನವರಿಗಲ್ಲ ಯೆಹೋವನಿಗೆ ಎನ್ನುವುದನ್ನು ಮರೆಯಬೇಡ.” ಈ ಬುದ್ಧಿಮಾತು ನನ್ನ ಬಾಳ ಕಾರ್ಗತ್ತಲಿನ ಸಮಯಗಳಲ್ಲಿ ದಾರಿದೀಪವಾಗಿ ಮಾರ್ಗದರ್ಶಿಸಿತು. ನನ್ನ ಗಂಡನ ತಪ್ಪಿನಿಂದಾಗಿ ನಾನೆಂದೂ ಯೆಹೋವನಿಂದ ಅಗಲಬಾರದೆಂದು ಗಟ್ಟಿಮನಸ್ಸು ಮಾಡಿದೆ.

ಬಳಿಕ ನಾನು ನನ್ನ ಕುಟುಂಬಕ್ಕೆ ಹತ್ತಿರವೇ ಇದ್ದು ಪಯನೀಯರ್‌ ಸೇವೆ ಮುಂದುವರಿಸಲು ನಿರ್ಣಯಿಸಿ ಆಸ್ಟ್ರೇಲಿಯಕ್ಕೆ ಹಿಂದಿರುಗಿದೆ. ಹಡಗಿನಲ್ಲಿ ದೀರ್ಘ ಪ್ರಯಾಣ ಮಾಡುವಾಗ ಪ್ರಯಾಣಿಕರ ಒಂದು ಗುಂಪಿನೊಂದಿಗೆ ಹಲವಾರು ಬಾರಿ ಬೈಬಲಿನ ಆಸಕ್ತಿಕರ ಸಂಭಾಷಣೆ ನಡೆಸಿದ್ದು ತುಂಬ ಖುಷಿ ಕೊಟ್ಟಿತು. ಆ ಗುಂಪಿನಲ್ಲಿ ನಾರ್ವೇ ದೇಶದ ಆರ್ನ್‌ ಜರ್ಡೀ ಎಂಬ ಸೌಮ್ಯಭಾವದ ವ್ಯಕ್ತಿಯಿದ್ದರು. ಆತ ಬೈಬಲ್‌ ಸತ್ಯವನ್ನು ತುಂಬ ಇಷ್ಟಪಟ್ಟರು. ಒಮ್ಮೆ ಅವರು ಸಿಡ್ನಿಗೆ ಬಂದು ನನ್ನನ್ನೂ ನನ್ನ ಕುಟುಂಬವನ್ನೂ ಭೇಟಿಮಾಡಿದರು. ಆಧ್ಯಾತ್ಮಿಕವಾಗಿ ಪ್ರಗತಿ ಮಾಡಿ ದೀಕ್ಷಾಸ್ನಾನ ಹೊಂದಿದರು. 1963ರಲ್ಲಿ ನಾವಿಬ್ಬರು ಮದುವೆಯಾದೆವು. ಎರಡು ವರ್ಷಗಳ ನಂತರ ನಮ್ಮ ಮಗ ಗ್ಯಾರೀ ಹುಟ್ಟಿದ.

ಮತ್ತೊಂದು ಸಂಕಷ್ಟದ ಅಲೆ ಅಪ್ಪಳಿಸಿದಾಗ. . .

ಸಂತೃಪ್ತವಾದ ಸುಖೀ ಸಂಸಾರದಲ್ಲಿ ನಾನು, ನನ್ನ ಗಂಡ, ಮಗ ಆನಂದದಿಂದ ಇದ್ದೆವು. ನನ್ನ ಅಪ್ಪಅಮ್ಮನನ್ನು ಕೂಡ ನಮ್ಮೊಂದಿಗೆ ಇರಿಸಿಕೊಳ್ಳಲು ಬಯಸಿ ನನ್ನವರು ಮನೆಯನ್ನು ವಿಸ್ತರಿಸಿದರು. ಆರು ವರ್ಷಗಳ ನಂತರ ಇನ್ನೊಂದು ಸಂಕಷ್ಟದ ಅಲೆ ಅಪ್ಪಳಿಸಿತು. ಯಜಮಾನರಿಗೆ ಮಿದುಳು ಕ್ಯಾನ್ಸರ್‌ ಇರುವುದಾಗಿ ಗೊತ್ತಾಯಿತು. ರೇಡಿಯೇಶನ್‌ ಥೆರಪಿಗಾಗಿ ಅವರು ದೀರ್ಘ ಸಮಯ ಆಸ್ಪತ್ರೆಯಲ್ಲಿದ್ದರು. ನಾನು ಅವರನ್ನು ನೋಡಿಕೊಳ್ಳಲು ಪ್ರತಿದಿನ ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮನೆಗೆ ಓಡಾಡಬೇಕಾಯಿತು. ಸ್ವಲ್ಪ ಚೇತರಿಸಿಕೊಂಡರಾದರೂ ಲಕ್ವ ಹೊಡೆದದ್ದರಿಂದ ಮತ್ತೆ ಅವರ ಸ್ಥಿತಿ ಹದಗೆಟ್ಟಿತು. ಅವರಿನ್ನು ಉಳಿಯುವುದು ಕೆಲವೇ ವಾರ ಎಂದು ವೈದ್ಯರು ಗಡುವು ನೀಡಿದರು. ಸಂತೋಷದ ವಿಷಯವೆಂದರೆ ಆರೋಗ್ಯ ಸುಧಾರಿಸಿ ಅವರು ಮನೆಗೆ ಬಂದರು. ನಾನವರ ಆರೈಕೆ ಮಾಡಿದೆ. ಅವರ ಲವಲವಿಕೆ, ಹಾಸ್ಯಪ್ರಜ್ಞೆ ಚೇತರಿಕೆಗೆ ಸಹಾಯ ಮಾಡಿದ್ದಲ್ಲದೆ ನಿತ್ಯ ಅವರನ್ನು ನೋಡಿಕೊಳ್ಳುವುದನ್ನು ಸುಲಭ ಮಾಡಿತು. ಸ್ವಲ್ಪ ಸಮಯದ ಬಳಿಕ ನನ್ನವರು ನಡೆಯಲು ಶಕ್ತರಾದರು. ಮಾತ್ರವಲ್ಲ ಸಭೆಯಲ್ಲಿ ಮತ್ತೆ ಹಿರಿಯರಾಗಿ ಸೇವೆ ಮಾಡಿದರು.

1986ರಲ್ಲಿ ಮತ್ತೆ ಅವರ ಆರೋಗ್ಯ ಕೆಟ್ಟಿತು. ನನ್ನ ಹೆತ್ತವರು ತೀರಿಹೋಗಿದ್ದ ಕಾರಣ ಸಿಡ್ನಿಯ ಹೊರವಲಯದಲ್ಲಿದ್ದ ಸುಂದರ ನೀಲಿ ಬೆಟ್ಟಗಳಿರುವ ಪ್ರದೇಶಕ್ಕೆ ವಾಸ ಬದಲಾಯಿಸಿದೆವು. ನಮ್ಮ ಅನೇಕ ಸ್ನೇಹಿತರು ಅಲ್ಲಿದ್ದರು. ಬಳಿಕ ಮಗ ಗ್ಯಾರೀಯ ವಿವಾಹವಾಯಿತು. ಪ್ರೀತಿಯ ಸೊಸೆ ಕ್ಯಾರನ್‌ ಆಧ್ಯಾತ್ಮಿಕ ಮನೋಭಾವದವಳು. ನಾಲ್ವರೂ ಒಟ್ಟಿಗೆ ಇರೋಣವೆಂದು ಮಗ ಸೊಸೆ ಒತ್ತಾಯಿಸಿದ್ದರಿಂದ ಕೆಲವೇ ತಿಂಗಳಲ್ಲಿ ಸ್ವಲ್ಪ ದೂರಕ್ಕೆ ಮನೆ ಬದಲಾಯಿಸಿ ಎಲ್ಲರು ಒಟ್ಟಿಗೆ ಇದ್ದೆವು.

ನನ್ನ ಯಜಮಾನರು ಜೀವಿತದ ಕೊನೆಯ 18 ತಿಂಗಳು ಹಾಸಿಗೆಯಲ್ಲೇ ಕಳೆಯಬೇಕಾಯಿತು. ಅವರ ಜೊತೆಯಲ್ಲೇ ಇದ್ದು ನೋಡಿಕೊಂಡೆ. ಮನೆಯಲ್ಲೇ ಇರಬೇಕಾದ ಕಾರಣ ಪ್ರತಿದಿನ ಸುಮಾರು ಎರಡು ತಾಸು ಬೈಬಲ್‌ ಮತ್ತು ಬೈಬಲ್‌ ಪ್ರಕಾಶನಗಳನ್ನು ಓದುತ್ತಿದ್ದೆ. ನನ್ನ ಸನ್ನಿವೇಶವನ್ನು ನಿಭಾಯಿಸಲು ವಿವೇಕಯುತ ಸಲಹೆಗಳನ್ನು ಪಡೆದುಕೊಳ್ಳುವಂತೆ ಇದು ಸಹಾಯ ಮಾಡಿತು. ಸಭೆಯಲ್ಲಿದ್ದ ಹಿರಿ ಸಹೋದರ ಸಹೋದರಿಯರು ಕೊಟ್ಟ ಭೇಟಿ ನಮ್ಮಲ್ಲಿ ನವಚೈತನ್ಯ ತುಂಬಿತು. ಕೆಲವರು ನಮ್ಮಂಥ ಪರಿಸ್ಥಿತಿಯನ್ನು ತಾಳಿಕೊಂಡವರಾಗಿದ್ದರು. ಅವರ ಭೇಟಿ ನನ್ನನ್ನು ಬಲಪಡಿಸಿತು. 2003ರ ಏಪ್ರಿಲ್‌ನಲ್ಲಿ ನನ್ನವರು ತೀರಿಕೊಂಡರು. ಪುನರುತ್ಥಾನದ ನಿರೀಕ್ಷೆ ಸದಾ ಅವರಲ್ಲಿ ಹಚ್ಚಹಸುರಾಗಿತ್ತು.

ನನಗಿರುವ ಅತಿ ದೊಡ್ಡ ಬೆಂಬಲ

ಯುವತಿಯಾಗಿದ್ದಾಗ ನಾನು ತುಂಬ ಆದರ್ಶವಾದಿಯಾಗಿದ್ದೆ. ಎಲ್ಲವೂ ಪಕ್ಕಾ ಇರಬೇಕೆಂದು ನೆನಸುತ್ತಿದ್ದೆ. ಆದರೆ ನಾವೆಣಿಸಿದಂತೆ ಆಗದೆ ಜೀವನದಲ್ಲಿ ಅನೇಕ ಅನಿರೀಕ್ಷಿತ ತಿರುವುಗಳಿರುತ್ತವೆಂದು ಅನುಭವ ತೋರಿಸಿಕೊಟ್ಟಿತು. ಬದುಕಿನ ದಾರಿಯಲ್ಲಿ ಆಶೀರ್ವಾದಗಳ ಅನೇಕ ಮೈಲುಗಲ್ಲುಗಳನ್ನು ಸಂತೋಷದಿಂದ ದಾಟಿದೆ. ಎರಡು ದೊಡ್ಡ ಆಘಾತಗಳನ್ನೂ ತಾಳಿಕೊಂಡೆ. ಬಾಳಸಂಗಾತಿಯಲ್ಲಿ ಒಬ್ಬರು ದ್ರೋಹಬಗೆದು ದೂರವಾದರು. ಇನ್ನೊಬ್ಬರನ್ನು ಅಸ್ವಸ್ಥತೆ ಕಿತ್ತುಕೊಂಡಿತು. ಅನೇಕ ರೀತಿಯಲ್ಲಿ ಸಿಕ್ಕಿದ ಮಾರ್ಗದರ್ಶನೆ, ಸಾಂತ್ವನ ಮುಂದೆ ಸಾಗಲು ಬಲನೀಡಿತು. ನನಗಿರುವ ಅತಿ ದೊಡ್ಡ ಬೆಂಬಲವೆಂದರೆ “ಮಹಾವೃದ್ಧ”ನಾದ ಯೆಹೋವ ದೇವರೇ. (ದಾನಿ. 7:9) ಆತನ ಸಲಹೆ ಬುದ್ಧಿವಾದಗಳು ನನ್ನ ವ್ಯಕ್ತಿತ್ವಕ್ಕೆ ಸಾಣೆ ಕೊಟ್ಟವು. ಇದರಿಂದಾಗಿ ಮಿಷನರಿ ಸೇವೆಯಲ್ಲಿ ಅನೇಕ ಆನಂದಮಯ ಅನುಭವಗಳೂ ನನ್ನದಾದವು. ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದಾಗ ಯೆಹೋವನ “ಕೃಪೆಯು ನನಗೆ ಆಧಾರವಾಯಿತು . . . [ಆತನ] ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷ” ಉಂಟಾಯಿತು. (ಕೀರ್ತ. 94:18, 19) ಆಪತ್ತಿನ ಸಮಯದಲ್ಲಿ ನನ್ನ ಕುಟುಂಬದವರು, ಮಿತ್ರರು ನಿರಂತರ ಪ್ರೀತಿ ತೋರಿಸಿ ಬೆಂಬಲ ಕೊಟ್ಟು ಸಹಾಯ ಹಸ್ತ ನೀಡಿದರು. (ಜ್ಞಾನೋ. 17:17) ಅವರಲ್ಲಿ ಹೆಚ್ಚಿನವರು ಹಿರಿವಯಸ್ಸಿನವರು.

“ಮುದುಕರಲ್ಲಿ ಜ್ಞಾನವು ಇರುವುದಿಲ್ಲವೋ? ಜೀವನವು ತಿಳುವಳಿಕೆಯನ್ನು ತರುವುದಿಲ್ಲವೋ?” (ಯೋಬ 12:12, ಪವಿತ್ರ ಗ್ರಂಥ ಭಾಷಾಂತರ) ಪೂರ್ವಿಕನಾದ ಯೋಬ ಕೇಳಿದ ಈ ಪ್ರಶ್ನೆಗೆ “ಹೌದು” ಎನ್ನುವುದು ನನ್ನ ಉತ್ತರ. ಬದುಕಿನ ಹಾದಿಯನ್ನು ಹಿಂತಿರುಗಿ ನೋಡುವಾಗ ಅದರಲ್ಲಿ ಒಂದಿನಿತೂ ಸಂಶಯವಿಲ್ಲ. ಹಿರಿವಯಸ್ಸಿನವರು ಕೊಟ್ಟ ಜ್ಞಾನಯುತ ಸಲಹೆ ನನಗೆ ಸಹಾಯ ಮಾಡಿದೆ. ಅವರು ನೀಡಿದ ಸಾಂತ್ವನ ಊರುಗೋಲಾಗಿದ್ದು ಬೆಂಬಲಿಸಿದೆ. ಅವರ ಗೆಳೆತನ ನನ್ನ ಬಾಳನ್ನು ಹಸನಾಗಿಸಿದೆ. ಅವರ ಸ್ನೇಹ ಸಿಕ್ಕಿದ್ದಕ್ಕಾಗಿ ನಾನು ಚಿರಋಣಿ.

ನನಗೀಗ 80 ವರ್ಷ. ನನ್ನ ಸ್ವಂತ ಅನುಭವ ಇತರ ವಯೋವೃದ್ಧರ ಅಗತ್ಯಗಳಿಗೆ ಕೂಡಲೆ ಮಿಡಿಯುವಂತೆ ಪ್ರೇರೇಪಿಸುತ್ತದೆ. ಅವರನ್ನು ಭೇಟಿ ನೀಡಿ ಸಹಾಯ ಮಾಡದಿದ್ದರೆ ಮನಸ್ಸು ಕೇಳುವುದಿಲ್ಲ. ಯೌವನಸ್ಥ ಮಕ್ಕಳ ಒಡನಾಟವೂ ನನಗಿಷ್ಟ. ಅವರಲ್ಲಿ ಪುಟಿಯುವ ಜೀವನೋತ್ಸಾಹ, ಸಾಮರ್ಥ್ಯ ನನ್ನಲ್ಲಿ ಹೊಸ ಹುರುಪನ್ನು ಹೊಮ್ಮಿಸುತ್ತದೆ. ಸಹಾಯ, ಸಲಹೆಗಾಗಿ ಅವರು ನನ್ನ ಬಳಿ ಬಂದಾಗ ಕೂಡಲೆ ಮುಂದಾಗುತ್ತೇನೆ. ಇದು ಒಂದು ಆಶೀರ್ವಾದವೇ.

[ಪಾದಟಿಪ್ಪಣಿ]

^ ಪ್ಯಾರ. 7 ಸಹೋದರಿ ಎಲ್ವ ಅವರ ಅಣ್ಣ ಫ್ರ್ಯಾಂಕ್‌ ಎಂಬ್ರಟ್‌ ಹುರುಪಿನ ಪಯನೀಯರರಾದರು. ಆಸ್ಟ್ರೇಲಿಯದ ಒಳನಾಡು ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು. 1983ರ ವರ್ಷಪುಸ್ತಕ (ಇಂಗ್ಲಿಷ್‌) ಪುಟ 110-112ರಲ್ಲಿ ಅವರ ಸಾರುವ ಕೆಲಸದ ರೋಮಾಂಚಕ ವರದಿಯಿದೆ.

[ಪುಟ 14ರಲ್ಲಿರುವ ಚಿತ್ರ]

ಜಾಯ್‌ ಲೆನಕ್ಸ್‌ಳೊಂದಿಗೆ ನರ್ಯಾಂಡ್ರ ಪಟ್ಟಣದಲ್ಲಿ ಪಯನೀಯರ್‌ ಸೇವೆ ಮಾಡುವಾಗ

[ಪುಟ 15ರಲ್ಲಿರುವ ಚಿತ್ರ]

1960ರಲ್ಲಿ ಸ್ವಿಟ್ಸರ್ಲೆಂಡ್‌ನ ಬೆತೆಲ್‌ ಕುಟುಂಬದವರೊಂದಿಗೆ

[ಪುಟ 16ರಲ್ಲಿರುವ ಚಿತ್ರ]

ಪತಿ ಆರ್ನ್‌ ಅವರನ್ನು ಆರೈಕೆ ಮಾಡುವಾಗ