ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನ ಕುಟುಂಬವನ್ನು ಒಂದುಗೂಡಿಸುತ್ತಾನೆ

ಯೆಹೋವನು ತನ್ನ ಕುಟುಂಬವನ್ನು ಒಂದುಗೂಡಿಸುತ್ತಾನೆ

ಯೆಹೋವನು ತನ್ನ ಕುಟುಂಬವನ್ನು ಒಂದುಗೂಡಿಸುತ್ತಾನೆ

‘ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇನೆ.’—ಎಫೆ. 4:1, 3.

ವಿವರಿಸುವಿರಾ?

ದೇವರ ಆಡಳಿತದ ಉದ್ದೇಶವೇನು?

‘ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದುವುದು’ ಹೇಗೆ?

‘ಒಬ್ಬರಿಗೊಬ್ಬರು ದಯೆಯುಳ್ಳವರಾಗಿರಲು’ ಯಾವುದು ಸಹಾಯಮಾಡುತ್ತದೆ?

1, 2. ಭೂಮಿ ಮತ್ತು ಮಾನವರಿಗಾಗಿ ಯೆಹೋವನು ಏನನ್ನು ಉದ್ದೇಶಿಸಿದ್ದಾನೆ?

ಕುಟುಂಬ ಎಂದ ಕೂಡಲೆ ನಿಮ್ಮ ಮನಸ್ಸಲ್ಲಿ ಯಾವ ಚಿತ್ರಣ ಮೂಡುತ್ತೆ? ಸುಖ ಸಂತೋಷ ಸಾಮರಸ್ಯದಿಂದಿರುವ ದೃಶ್ಯ ಕಣ್ಣ ಮುಂದೆ ಬರುತ್ತದೋ? ಆಟ ಪಾಠ ಹೊಂದಾಣಿಕೆಗಳು ಮನಃಪಟಲದಲ್ಲಿ ಸುಳಿಯುತ್ತವೋ? ಪ್ರೀತಿ ತುಂಬಿದ ಕುಟುಂಬದ ದೃಶ್ಯ ಹೆಚ್ಚುಕಡಿಮೆ ಹೀಗೇ ಇರುತ್ತೆ. ಕುಟುಂಬ ಏರ್ಪಾಡಿಗೆ ಮೂಲನಾದ ಯೆಹೋವನು ಕುಟುಂಬಗಳು ಹೀಗೇ ಇರಬೇಕೆಂದು ಬಯಸುತ್ತಾನೆ. (ಎಫೆ. 3:14, 15) ಸ್ವರ್ಗದಲ್ಲೂ ಭೂಮಿಯಲ್ಲೂ ಇರುವ ಸಕಲ ಜೀವಿಗಳು ಸುಭದ್ರ ಜೀವನ ನಡೆಸಬೇಕು, ಒಬ್ಬರನ್ನೊಬ್ಬರು ನಂಬಬೇಕು, ಐಕ್ಯದಿಂದಿರಬೇಕೆಂಬುದೇ ಆತನ ಉದ್ದೇಶವಾಗಿತ್ತು.

2 ಪಾಪವೆಂಬ ಕೂಪದಲ್ಲಿ ಮಾನವನು ಬಿದ್ದಾಗ ದೇವರ ವಿಶ್ವವ್ಯಾಪಿ ಕುಟುಂಬದ ಭಾಗವಾಗಿರುವ ಅರ್ಹತೆ ಕಳಕೊಂಡನು. ಆದರೆ ತನ್ನ ಉದ್ದೇಶ ನೀರುಪಾಲಾಯಿತಲ್ಲಾ ಎಂದು ಯೆಹೋವನು ಕೈಚೆಲ್ಲಿ ಕೂರಲಿಲ್ಲ. ಭೂಮಿಯು ಪರದೈಸಾಗಿ ಆದಾಮಹವ್ವರ ಸಂತತಿಯಿಂದ ತುಂಬುವುದು ಖಂಡಿತ. (ಆದಿ. 1:28; ಯೆಶಾ. 45:18) ಏಕೆಂದರೆ ಯೆಹೋವನು ಇದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿದ್ದಾನೆ. ಐಕ್ಯತೆಯನ್ನು ಕೇಂದ್ರಬಿಂದುವಾಗಿಟ್ಟು ಬರೆಯಲಾದ ಎಫೆಸ ಪುಸ್ತಕದಲ್ಲಿ ಇಂಥ ಅನೇಕ ಏರ್ಪಾಡುಗಳ ಉದ್ಧರಣೆಯಿದೆ. ಈ ಪುಸ್ತಕದಿಂದ ಕೆಲವು ವಚನಗಳನ್ನು ಪರಿಗಣಿಸೋಣ. ತನ್ನ ಸೃಷ್ಟಿಯನ್ನು ಒಟ್ಟುಮಾಡುವ ಯೆಹೋವನ ಉದ್ದೇಶಕ್ಕೆ ನಾವು ಹೇಗೆ ಕೈಜೋಡಿಸಬಹುದು ಎಂಬುದಕ್ಕೆ ವಿಶೇಷ ಗಮನ ಕೊಡೋಣ.

ಒಂದು ಆಡಳಿತ ಮತ್ತು ಅದರ ಕೆಲಸ

3. (1) ಎಫೆಸ 1:10ರಲ್ಲಿ ತಿಳಿಸಲಾಗಿರುವ ಆಡಳಿತ ಏನಾಗಿದೆ? (2) ಅದರ ಮೊದಲ ಹಂತ ಯಾವಾಗ ಶುರುವಾಯಿತು?

3 “ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು” ಎಂದು ಮೋಶೆ ಇಸ್ರಾಯೇಲ್ಯರಿಗೆ ತಿಳಿಸಿದನು. (ಧರ್ಮೋ. 6:4) ಆ ಒಬ್ಬನೇ ದೇವರು ಮಾಡುವುದೆಲ್ಲವೂ ಒಂದಲ್ಲ ಒಂದು ವಿಧದಲ್ಲಿ ಆತನ ಉದ್ದೇಶವನ್ನು ಪೂರೈಸುತ್ತದೆ. ಬುದ್ಧಿಜೀವಿಗಳನ್ನೆಲ್ಲಾ ಒಂದುಮಾಡುವ ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ “ನೇಮಿತ ಕಾಲದ ಪರಿಮಿತಿಯು ಪೂರ್ಣಗೊಂಡಾಗ” ದೇವರು ಒಂದು ಏರ್ಪಾಡು ಮಾಡಿದನು. ಎಫೆಸ 1:10 ಅದನ್ನು “ಒಂದು ಆಡಳಿತ” ಎಂದು ಕರೆಯುತ್ತದೆ. (ಎಫೆಸ 1:8-10 ಓದಿ.) ಈ ಆಡಳಿತದ ಉದ್ದೇಶ ಎರಡು ಹಂತಗಳಲ್ಲಿ ನೆರವೇರುವುದು. ಮೊದಲನೇ ಹಂತದಲ್ಲಿ ದೇವರು ಅಭಿಷಿಕ್ತರನ್ನು ಸ್ವರ್ಗಜೀವನಕ್ಕಾಗಿ ಸಿದ್ಧಗೊಳಿಸುತ್ತಾನೆ. ಅಲ್ಲಿ ಯೇಸು ಕ್ರಿಸ್ತನು ಅವರ ಆಧ್ಯಾತ್ಮಿಕ ಶಿರಸ್ಸಾಗಿರುವನು. ಈ ಹಂತ ಶುರುವಾದದ್ದು ಕ್ರಿ.ಶ. 33ರ ಪಂಚಾಶತ್ತಮದಂದು. ಆಗ ಯೆಹೋವನು ಕ್ರಿಸ್ತನೊಂದಿಗೆ ಸ್ವರ್ಗದಿಂದ ಆಳುವ ವ್ಯಕ್ತಿಗಳನ್ನು ಒಟ್ಟುಗೂಡಿಸಲು ಆರಂಭಿಸಿದನು. (ಅ. ಕಾ. 2:1-4) ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದ ಆಧಾರದಲ್ಲಿ ದೇವರು ಅಭಿಷಿಕ್ತರನ್ನು ನೀತಿವಂತರೆಂದು ನಿರ್ಣಯಿಸಿ ಅವರಿಗೆ ಜೀವವರವನ್ನು ಕೊಡುತ್ತಾನೆ. ಆದ್ದರಿಂದ ಅವರು, “ನಾವು ದೇವರ ಮಕ್ಕಳಾಗಿದ್ದೇವೆ” ಎಂದು ಸಂತೋಷದಿಂದ ಹೇಳುತ್ತಾರೆ.—ರೋಮ. 3:23, 24; 5:1; 8:15-17.

4, 5. ದೇವರ ಆಡಳಿತದ ಎರಡನೇ ಹಂತದಲ್ಲಿ ಏನಾಗುತ್ತದೆ?

4 ಎರಡನೇ ಹಂತದಲ್ಲಿ ದೇವರು ಭೂಮಿಯ ಮೇಲೆ ಪರದೈಸಿನಲ್ಲಿ ಜೀವಿಸುವವರನ್ನು ಸಿದ್ಧಗೊಳಿಸುತ್ತಾನೆ. ಇವರು ಕ್ರಿಸ್ತನ ಮೆಸ್ಸೀಯ ರಾಜ್ಯದಡಿ ಪ್ರಜೆಗಳಾಗಿರುವರು. ಮೊದಲಿಗೆ “ಮಹಾ ಸಮೂಹ” ಈ ಸುಯೋಗ ಪಡೆಯುತ್ತದೆ. (ಪ್ರಕ. 7:9, 13-17; 21:1-5) ಅನಂತರ ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಪುನರುತ್ಥಾನ ಹೊಂದುವ ಲಕ್ಷಾಂತರ ಮಂದಿ ಮಹಾ ಸಮೂಹದೊಂದಿಗೆ ಜೊತೆಗೂಡುತ್ತಾರೆ. (ಪ್ರಕ. 20:12, 13) ಬೇರೆ ಬೇರೆ ಹಿನ್ನೆಲೆಯ, ಸಮಯಾವಧಿಯ, ಸಂಸ್ಕೃತಿಯ ಜನರು ಮಹಾ ಸಮೂಹದೊಂದಿಗೆ ಒಂದಾಗಿ ಜೀವಿಸುವಾಗ ಅದೆಷ್ಟು ಮನಮೋಹಕವಾಗಿರುವುದು! ‘ಭೂಮಿಯಲ್ಲಿರುವ ವಿಷಯಗಳೆಂದು’ ಸೂಚಿಸಲಾಗಿರುವ ಈ ಜನರೆಲ್ಲರೂ ಸಾವಿರ ವರ್ಷದ ಕೊನೆಯಲ್ಲಿ ಒಂದು ಅಂತಿಮ ಪರೀಕ್ಷೆಯನ್ನು ಎದುರಿಸುವರು. ಈ ಪರೀಕ್ಷೆಯಲ್ಲಿ ನಂಬಿಗಸ್ತರಾಗಿ ಉಳಿಯುವವರನ್ನು ಯೆಹೋವನು ಭೂಮಿಯ ಮೇಲಿನ ‘ತನ್ನ ಮಕ್ಕಳಾಗಿ’ ಸ್ವೀಕರಿಸುತ್ತಾನೆ.—ರೋಮ. 8:21; ಪ್ರಕ. 20:7, 8.

5 ಈಗ ದೇವರ ಆಡಳಿತದ ಎರಡೂ ಹಂತಗಳು ಏಕಕಾಲದಲ್ಲಿ ನೆರವೇರುತ್ತಾ ಇವೆ. ಆದರೆ ನಾವು ವೈಯಕ್ತಿಕವಾಗಿ ಈ ಆಡಳಿತಕ್ಕೆ ನಮ್ಮ ಸಹಕಾರವನ್ನು ಹೇಗೆ ಕೊಡುತ್ತಿದ್ದೇವೆ ಅನ್ನೋದೇ ಪ್ರಶ್ನೆ.

‘ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಿರಿ’

6. ಕ್ರೈಸ್ತರು ಒಟ್ಟುಗೂಡಿ ಬರಬೇಕೆಂದು ಬೈಬಲಿನಲ್ಲಿ ಎಲ್ಲಿ ತಿಳಿಸಲಾಗಿದೆ?

6 ಕ್ರೈಸ್ತರು ಒಟ್ಟುಗೂಡಿ ಬರಬೇಕೆಂದು ಬೈಬಲ್‌ ಪ್ರೋತ್ಸಾಹಿಸುತ್ತದೆ. (1 ಕೊರಿಂ. 14:23; ಇಬ್ರಿ. 10:24, 25) ಇದೇನು ಒಂದು ಮಾರುಕಟ್ಟೆಯಲ್ಲೋ ಕ್ರೀಡಾಂಗಣದಲ್ಲೋ ಜನ ಒಂದೇ ಕಡೆ ಒಟ್ಟುಸೇರುತ್ತಾರಲ್ಲ ಆ ರೀತಿ ಅಲ್ಲ. ನಾವು ನಿಜಕ್ಕೂ ಐಕ್ಯರಾಗಿರಬೇಕು. ಯೆಹೋವನಿಂದ ಪಡೆಯುವ ಉಪದೇಶವನ್ನು ಅನ್ವಯಿಸಿಕೊಳ್ಳುವಾಗ ಮತ್ತು ಪವಿತ್ರಾತ್ಮದ ಮಾರ್ಗದರ್ಶನದಂತೆ ನಡೆಯುವಾಗ ನಾವು ಇಂಥ ಅಪರೂಪವಾದ ಐಕ್ಯವನ್ನು ಪಡೆಯಸಾಧ್ಯ.

7. ‘ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಿರಿ’ ಎಂಬುದರ ಅರ್ಥವೇನು?

7 ಯೆಹೋವನು ಅಭಿಷಿಕ್ತರನ್ನು ತನ್ನ ನೀತಿವಂತ ಮಕ್ಕಳೆಂದು, ಬೇರೆ ಕುರಿ ವರ್ಗದವರನ್ನು ತನ್ನ ನೀತಿವಂತ ಸ್ನೇಹಿತರೆಂದು ಸ್ವೀಕರಿಸಿರುವುದು ಸಂತೋಷದ ಸಂಗತಿ. ಆದರೆ ನಾವು ಅಪರಿಪೂರ್ಣರಾಗಿರುವ ಕಾರಣ ನಮ್ಮನಮ್ಮ ಮಧ್ಯೆ ಮನಸ್ತಾಪಗಳು ಏಳುವುದು ಸಹಜ. (ರೋಮ. 5:9; ಯಾಕೋ. 2:23) ಇಲ್ಲವಾದರೆ “ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ” ಎಂದು ಬೈಬಲ್‌ ಹೇಳುತ್ತಿರಲಿಲ್ಲ. ಹಾಗಾದರೆ ನಮ್ಮ ಸಹೋದರ ಸಹೋದರಿಯರೊಂದಿಗೆ ನಾವು ಹೇಗೆ ಐಕ್ಯದಿಂದಿರುವುದು? ಮೊದಲಿಗೆ ನಾವು ‘ಪೂರ್ಣ ದೀನಮನಸ್ಸನ್ನೂ ಸೌಮ್ಯಭಾವವನ್ನೂ’ ಬೆಳೆಸಿಕೊಳ್ಳಬೇಕು. ಮತ್ತು ‘ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲು’ ಶ್ರಮಿಸಬೇಕೆಂದು ಪೌಲನು ಉತ್ತೇಜಿಸುತ್ತಾನೆ. (ಎಫೆಸ 4:1-3 ಓದಿ.) ನಾವು ಈ ಬುದ್ಧಿವಾದವನ್ನು ಅನ್ವಯಿಸಲು ಬಯಸುವಲ್ಲಿ ಪವಿತ್ರಾತ್ಮದ ಮಾರ್ಗದರ್ಶನದಂತೆ ನಡೆಯಬೇಕು, ಅದರ ಫಲವನ್ನು ಜೀವನದಲ್ಲಿ ತೋರಿಸಲು ಪ್ರಯತ್ನಿಸಬೇಕು. ಈ ಫಲ ಮುರಿದ ಮನಸ್ಸುಗಳನ್ನು ಜೋಡಿಸಿ ಶಾಂತಿಸಂಬಂಧ ತರುತ್ತದೆ. ಶರೀರಭಾವದ ಕಾರ್ಯಗಳೋ ನಮ್ಮನ್ನು ಛಿದ್ರಮಾಡುತ್ತವೆ.

8. ಶರೀರಭಾವದ ಕಾರ್ಯಗಳು ಐಕ್ಯತೆಗೆ ಹೇಗೆ ಚೂರಿಹಾಕುತ್ತವೆ?

8 “ಶರೀರಭಾವದ ಕಾರ್ಯಗಳು” ಐಕ್ಯತೆಗೆ ಹೇಗೆ ಚೂರಿಹಾಕುತ್ತವೆಂದು ನೋಡೋಣ. (ಗಲಾತ್ಯ 5:19-21 ಓದಿ.) ಜಾರತ್ವವು ಒಬ್ಬ ವ್ಯಕ್ತಿಯನ್ನು ಯೆಹೋವನಿಂದ ಮತ್ತು ಸಭೆಯಿಂದ ದೂರ ಮಾಡುತ್ತದೆ. ವ್ಯಭಿಚಾರವು ಕುಟುಂಬಕ್ಕೆ ಮಹಾ ಮಾರಿಯಂತಿದ್ದು ಮಕ್ಕಳನ್ನು ಹೆತ್ತವರಿಂದ ದೂರ ಮಾಡುತ್ತದೆ, ಜೀವನ ಸಂಗಾತಿಗಳನ್ನು ಅಗಲಿಸುತ್ತದೆ. ಅಶುದ್ಧತೆ ಒಬ್ಬ ವ್ಯಕ್ತಿಗೆ ದೇವರೊಂದಿಗಿರುವ ಮತ್ತು ತನ್ನನ್ನು ಪ್ರೀತಿಸುವವರೊಂದಿಗಿರುವ ಐಕ್ಯವನ್ನು ಕೆಡಿಸುತ್ತದೆ. ಯಾವುದೇ ಎರಡು ವಸ್ತುಗಳನ್ನು ಅಂಟಿಸಬೇಕಾದರೆ ಅವೆರಡೂ ಶುದ್ಧವಾಗಿರಬೇಕೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭಂಡತನದ ನಡತೆಯಲ್ಲಿ ತೊಡಗುವವರು ದೇವರ ನೀತಿಯ ಮಟ್ಟಗಳನ್ನು ಸಂಪೂರ್ಣವಾಗಿ ತಾತ್ಸಾರಮಾಡುತ್ತಾರೆ. ಹೀಗೆ ಶರೀರಭಾವದ ಯಾವುದೇ ಕಾರ್ಯವನ್ನು ತೆಗೆದುಕೊಳ್ಳಿ, ಅದು ಜನರನ್ನು ಬೇರೆ ಮಾಡುತ್ತದೆ, ನಮ್ಮನ್ನು ದೇವರಿಂದಲೂ ದೂರ ಮಾಡುತ್ತದೆ. ಯೆಹೋವನ ವ್ಯಕ್ತಿತ್ವಕ್ಕೂ ಶರೀರಭಾವದ ಕರ್ಮಕ್ಕೂ ಅಜಗಜಾಂತರ!

9. “ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲಿಕ್ಕಾಗಿ” ನಾವು ಪ್ರಯತ್ನಿಸುತ್ತಿದ್ದೇವೋ ಇಲ್ಲವೋ ಎಂಬುದನ್ನು ತಿಳಿಯಲು ಯಾವ ಸ್ವಪರೀಕ್ಷೆ ಮಾಡಿಕೊಳ್ಳಬೇಕು?

9 ಆದ್ದರಿಂದ ಈ ಸ್ವಪರೀಕ್ಷೆ ಮಾಡಿಕೊಳ್ಳುವುದು ಒಳ್ಳೇದು: ‘“ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲಿಕ್ಕಾಗಿ” ನಾನೆಷ್ಟು ಪ್ರಯತ್ನ ಹಾಕುತ್ತೇನೆ? ಯಾರೊಟ್ಟಿಗಾದರೂ ಮನಸ್ತಾಪ ಆದಾಗ ನಾನು ಹೇಗೆ ಪ್ರತಿಕ್ರಿಯಿಸುತ್ತೇನೆ? ಬೇರೆಯವರ ಮುಂದೆ ಗೋಳಿಡುತ್ತಾ ಅವರ ಅನುತಾಪ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತೇನಾ? ಪುನಃ ಶಾಂತಿಸಂಬಂಧ ಸ್ಥಾಪಿಸಲು ಪ್ರಯತ್ನಿಸದೆ ಹಿರಿಯರು ಮಧ್ಯೆ ಬಂದು ಸಮಸ್ಯೆ ಇತ್ಯರ್ಥಮಾಡಬೇಕೆಂದು ನೆನಸುತ್ತೇನಾ? ನನ್ನಿಂದಾಗಿ ಯಾರಿಗೋ ಬೇಸರ ಆಗಿರುವಲ್ಲಿ ಅದನ್ನು ಇತ್ಯರ್ಥಮಾಡಲು ಅವಕಾಶ ಕೊಡದೆ ಮುಖ ತಿರುಗಿಸಿಕೊಂಡು ಹೋಗ್ತೇನಾ?’ ಹೀಗೆ ಮಾಡುತ್ತಾ ಇದ್ದರೆ ಸಮಸ್ತವನ್ನು ಕ್ರಿಸ್ತನಲ್ಲಿ ಪುನಃ ಒಂದುಗೂಡಿಸುವ ಯೆಹೋವನ ಉದ್ದೇಶಕ್ಕೆ ತಕ್ಕ ಹಾಗೆ ನಾವು ವರ್ತಿಸುತ್ತಾ ಇದ್ದೇವೆ ಎಂದಾಗುತ್ತದಾ?

10, 11. (1) ನಮ್ಮ ಸಹೋದರರೊಂದಿಗೆ ಸಮಾಧಾನದಿಂದ ಇರುವುದು ಎಷ್ಟು ಮುಖ್ಯ? (2) ಸಮಾಧಾನದಿಂದಿದ್ದು ಯೆಹೋವನ ಆಶೀರ್ವಾದ ಪಡೆಯಲು ನಾವೇನು ಮಾಡಬೇಕು?

10 “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಮುಂದೆ ತರುತ್ತಿರುವಾಗ, ನಿನ್ನ ಸಹೋದರನಿಗೆ ನಿನ್ನ ವಿರುದ್ಧ ಏನೋ ಅಸಮಾಧಾನವಿದೆ ಎಂದು ನಿನಗೆ ಅಲ್ಲಿ ನೆನಪಾದರೆ ನಿನ್ನ ಕಾಣಿಕೆಯನ್ನು ಅಲ್ಲಿ ಯಜ್ಞವೇದಿಯ ಮುಂದೆ ಬಿಟ್ಟುಹೋಗಿ, ಮೊದಲು ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊ; ಹಿಂದಿರುಗಿ ಬಂದ ಬಳಿಕ ನಿನ್ನ ಕಾಣಿಕೆಯನ್ನು ಅರ್ಪಿಸು. . . . ಬೇಗನೆ ವಿಷಯಗಳನ್ನು ಇತ್ಯರ್ಥಮಾಡಿಕೊ” ಎಂದು ಯೇಸು ಹೇಳಿದನು. (ಮತ್ತಾ. 5:23-25) ಯಾಕೋಬನು ಅದೇ ವಿಚಾರದ ಬಗ್ಗೆ ಮಾತಾಡುತ್ತಾ, “ನೀತಿಯ ಫಲದ ಬೀಜವು ಶಾಂತ ಪರಿಸ್ಥಿತಿಗಳಲ್ಲಿ ಶಾಂತಿಕರ್ತರಿಗಾಗಿ ಬಿತ್ತಲ್ಪಡುತ್ತದೆ” ಎಂದಿದ್ದಾನೆ. (ಯಾಕೋ. 3:17, 18) ಬೇರೆಯವರೊಂದಿಗೆ ಶಾಂತಿ-ಸಮಾಧಾನದಿಂದ ಇರದೆ ನಾವು ಯೆಹೋವನ ಮೆಚ್ಚಿಕೆಯನ್ನು ಪಡೆಯಸಾಧ್ಯವಿಲ್ಲ ಎಂಬುದೇ ಇದರ ತಾತ್ಪರ್ಯ.

11 ಇದನ್ನು ಹೀಗೆ ದೃಷ್ಟಾಂತಿಸಬಹುದು: ಯುದ್ಧದಿಂದಾಗಿ ಛಿದ್ರಗೊಂಡ ಕೆಲವು ದೇಶಗಳಲ್ಲಿ 35 ಪ್ರತಿಶತ ಕೃಷಿ ಭೂಮಿ ಪಾಳುಬಿದ್ದಿದೆ. ನೆಲಬಾಂಬ್‌ಗಳಿರುವ ಭೀತಿಯಿಂದ ರೈತರು ಅಲ್ಲಿ ಹೋಗಿ ಕೆಲಸಮಾಡಲು ಹೆದರುತ್ತಾರೆ. ಒಂದುವೇಳೆ ಅಲ್ಲೆಲ್ಲೋ ಇರುವ ಒಂದು ನೆಲಬಾಂಬ್‌ ಸ್ಫೋಟಗೊಂಡರೆ ರೈತರು ಆ ಇಡೀ ಹೊಲದಲ್ಲಿ ವ್ಯವಸಾಯ ಮಾಡುವುದನ್ನು ಬಿಟ್ಟುಬಿಡುತ್ತಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಜನರಿಗೆ ದುಡಿಮೆ ಇರುವುದಿಲ್ಲ. ನಗರಗಳಲ್ಲಿ ಆಹಾರ ಪದಾರ್ಥಗಳ ಅಭಾವ ಉಂಟಾಗುತ್ತದೆ. ಅದೇ ರೀತಿ ನಮ್ಮ ವ್ಯಕ್ತಿತ್ವದಲ್ಲಿರುವ ಕೆಲವು ಲೋಪದೋಷಗಳಿಂದ ನಾವು ಬೇರೆಯವರೊಂದಿಗೆ ಸಮಾಧಾನದಿಂದ ಇರುವುದು ಕಷ್ಟವಾದರೆ ಇದು ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಮುಳುವಾಗುತ್ತದೆ. ಆದರೆ ಬೇರೆಯವರ ತಪ್ಪನ್ನು ಕ್ಷಮಿಸಲು ಸಿದ್ಧರಾಗಿದ್ದರೆ ಮತ್ತು ಅವರ ಒಳಿತು ಬಯಸಿ ವಿಷಯಗಳನ್ನು ಮಾಡುವುದಾದರೆ ನಮ್ಮನಮ್ಮಲ್ಲಿ ಸಮಾಧಾನ ಇರುತ್ತದೆ, ಯೆಹೋವನ ಆಶೀರ್ವಾದವೂ ಖಂಡಿತ ಸಿಗುತ್ತದೆ.

12. ಐಕ್ಯತೆ ಕಾಪಾಡಿಕೊಳ್ಳಲು ಹಿರಿಯರು ಹೇಗೆ ಸಹಾಯಮಾಡಬಲ್ಲರು?

12 ‘ನಂಬಿಕೆಯಲ್ಲಿ ಏಕತೆಯನ್ನು ಹೊಂದಿ’ ಐಕ್ಯತೆ ಕಾಪಾಡಿಕೊಳ್ಳಲು ‘ಮನುಷ್ಯರಲ್ಲಿ ದಾನಗಳಾಗಿರುವ’ ಹಿರಿಯರು ಸಹಾಯಮಾಡಬಲ್ಲರು. (ಎಫೆ. 4:8, 13) ಅವರು ನಮ್ಮೊಂದಿಗೆ ಸೇರಿ ಪವಿತ್ರ ಸೇವೆ ಸಲ್ಲಿಸುವುದು ಮಾತ್ರವಲ್ಲ ದೇವರ ವಾಕ್ಯದಿಂದ ಕೆಲವು ಸಲಹೆ ಸೂಚನೆಗಳನ್ನೂ ಕೊಡುತ್ತಾರೆ. ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ನಮಗೆ ಸಹಾಯಮಾಡುತ್ತಾರೆ. (ಎಫೆ. 4:22-24) ಹಿರಿಯರ ಮೂಲಕ ಯೆಹೋವನು ನಿಮ್ಮನ್ನು ಹೊಸ ಲೋಕಕ್ಕಾಗಿ ತಯಾರು ಮಾಡುತ್ತಿರುವುದು ನಿಮ್ಮ ಕಣ್ಣಿಗೆ ಕಾಣುತ್ತದೋ? ಹಿರಿಯರೇ, ಬೇರೆಯವರಿಗೆ ಬುದ್ಧಿ ಉಪದೇಶ ಕೊಡುವಾಗ ಇದು ನಿಮ್ಮ ಮನಸ್ಸಿನಲ್ಲಿರಲಿ.—ಗಲಾ. 6:1.

‘ಒಬ್ಬರಿಗೊಬ್ಬರು ದಯೆಯುಳ್ಳವರಾಗಿರಿ’

13. ಎಫೆಸ 4:25-32ರಲ್ಲಿ ಕಂಡುಬರುವ ಬುದ್ಧಿವಾದಕ್ಕೆ ಕಿವಿಗೊಡದೆ ಹೋದರೆ ಏನಾಗುತ್ತದೆ?

13 ನಾವು ಮಾಡಲೇ ಬಾರದ ವಿಷಯಗಳನ್ನು ಎಫೆಸ 4:25-29 ಪಟ್ಟಿಮಾಡುತ್ತದೆ. ಅದರಲ್ಲಿ ಸುಳ್ಳು ಹೇಳುವುದು, ಕೋಪಗೊಳ್ಳುವುದು, ಸೋಮಾರಿಗಳಾಗಿರುವುದು, ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನಾಡದೆ ಹೊಲಸು ಮಾತನ್ನಾಡುವುದು ಸೇರಿದೆ. ನಾವು ಈ ಬುದ್ಧಿವಾದಕ್ಕೆ ಕಿವಿಗೊಡಲಿಲ್ಲವಾದರೆ ದೇವರಾತ್ಮವನ್ನು ದುಃಖಪಡಿಸುತ್ತೇವೆ. ಏಕೆಂದರೆ ಎಲ್ಲರನ್ನು ಐಕ್ಯಗೊಳಿಸುವ ಪವಿತ್ರಾತ್ಮಕ್ಕೆ ವಿರುದ್ಧವಾಗಿ ಕ್ರಿಯೆಗೈಯುತ್ತಿದ್ದೇವೆ. (ಎಫೆ. 4:30) ಶಾಂತಿ ಐಕ್ಯ ಕಾಪಾಡಿಕೊಳ್ಳಲು ನಾವು ಪೌಲನು ಮುಂದೆ ಹೇಳುವ ವಿಷಯವನ್ನೂ ಅನ್ವಯಿಸಿಕೊಳ್ಳುವುದು ಮುಖ್ಯ. “ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು ಸಕಲ ವಿಧವಾದ ಕೆಟ್ಟತನದೊಂದಿಗೆ ನಿಮ್ಮಿಂದ ತೆಗೆದುಹಾಕಿರಿ. ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ ದೇವರು ಕ್ರಿಸ್ತನ ಮೂಲಕ ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ ಇರಿ” ಎಂದನು ಪೌಲ.—ಎಫೆ. 4:31, 32.

14. (1) ‘ದಯೆಯುಳ್ಳವರಾಗಿ ಇರಿ’ ಎಂದು ಪೌಲನು ಏಕೆ ಹೇಳಿದನು? (2) ದಯೆಯುಳ್ಳವರಾಗಿರಲು ನಮಗೆ ಯಾವುದು ಸಹಾಯ ಮಾಡುತ್ತದೆ?

14 ‘ದಯೆಯುಳ್ಳವರಾಗಿ ಇರಿ’ ಎಂದು ಪೌಲನು ಹೇಳುವುದನ್ನು ಗಮನಿಸಿದಿರಾ? ಇದರರ್ಥ ನಾವು ಕೆಲವೊಮ್ಮೆ ದಯೆಯಿಂದ ವರ್ತಿಸುವುದಿಲ್ಲ ಎಂದಾಯಿತು. ದಯೆ ತೋರಿಸಲು ಸ್ವಲ್ಪ ಹೆಚ್ಚು ಶ್ರಮ ಹಾಕಬೇಕು. ಏನಾದರೂ ಮನಸ್ತಾಪ ಆದಾಗ ಅದರಿಂದ ನನಗಾಗಿರೋ ಕಷ್ಟಾನೇ ದೊಡ್ಡದು ಅಂತಿರದೆ ಬೇರೆಯವರಿಗೆ ಹೇಗೆ ನೋವಾಗಿರಬಹುದು ಎಂದು ಆಲೋಚಿಸುವುದು ಒಳ್ಳೇದು. (ಫಿಲಿ. 2:4) ಕೆಲವೊಮ್ಮೆ ಏನೋ ತಮಾಷೆ ಮಾಡುವುದು ತಪ್ಪಲ್ಲ. ಆದರೆ ಇದರಿಂದ ಯಾರಿಗಾದರೂ ನೋವಾಗಬಹುದಾ ಎಂದು ಯೋಚಿಸುವುದು ನಾವು ‘ದಯೆಯುಳ್ಳವರಾಗಿ ಇದ್ದೇವೆ’ ಎಂದು ತೋರಿಸುತ್ತದೆ. ಆದ್ದರಿಂದ ಯೋಚಿಸಿ ಮಾತಾಡೋದು ಮುಖ್ಯ.

ಕುಟುಂಬದಲ್ಲಿ ಪ್ರೀತಿ, ಗೌರವ ತೋರಿಸಲು ಕಲಿಯಿರಿ

15. ಎಫೆಸ 5:28ರಲ್ಲಿ ಕ್ರಿಸ್ತನು ಸಭೆಯೊಂದಿಗೆ ಹೊಂದಿರುವ ಸಂಬಂಧವನ್ನು ಪೌಲನು ಯಾವುದಕ್ಕೆ ಹೋಲಿಸಿ ಮಾತಾಡುತ್ತಾನೆ?

15 ಗಂಡ ಹೆಂಡತಿಯ ಮಧ್ಯೆ ಕ್ರಿಸ್ತನು ಸಭೆಯೊಂದಿಗೆ ಹೊಂದಿರುವಂಥ ಸಂಬಂಧ ಇರಬೇಕೆಂದು ಬೈಬಲ್‌ ತಿಳಿಸುತ್ತದೆ. ಗಂಡನು ತನ್ನ ಹೆಂಡತಿಯನ್ನು ಪ್ರೀತಿಸಿ, ಪರಾಮರಿಸಿ, ಮಾರ್ಗದರ್ಶಿಸುವುದು ಹೇಗೆಂದು ಕ್ರಿಸ್ತನ ಮಾದರಿಯಿಂದ ಕಲಿಯುತ್ತಾನೆ. ಹಾಗೆಯೇ ಹೆಂಡತಿ ಹೇಗೆ ತನ್ನ ಗಂಡನಿಗೆ ಅಧೀನಳಾಗಿರಬೇಕೆಂದು ಈ ಹೋಲಿಕೆಯಿಂದ ತಿಳಿಯುತ್ತಾಳೆ. (ಎಫೆ. 5:22-33) “ಇದೇ ರೀತಿಯಲ್ಲಿ ಗಂಡಂದಿರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನಲ್ಲಿದ್ದಾರೆ” ಎಂದು ಪೌಲ ಬರೆದನು. ಯಾವ “ರೀತಿ” ಕುರಿತು ಪೌಲ ಮಾತಾಡುತ್ತಿದ್ದನು? (ಎಫೆ. 5:28) ಹಿಂದಿನ ವಚನಗಳಲ್ಲಿ ‘ಕ್ರಿಸ್ತನು ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟದ್ದರ’ ಕುರಿತು ಪೌಲನು ಮಾತಾಡುತ್ತಾನೆ. ಕ್ರಿಸ್ತನು ‘ಸಭೆಯನ್ನು ವಾಕ್ಯದ ಮೂಲಕ ಜಲಸ್ನಾನದಿಂದ ಶುದ್ಧೀಕರಿಸಿದನೆಂದು’ ತಿಳಿಸುತ್ತಾನೆ. ಅದೇ ರೀತಿ ಗಂಡನು ತನ್ನ ಕುಟುಂಬಕ್ಕೆ ಆಧ್ಯಾತ್ಮಿಕ ಪೋಷಣೆ ಒದಗಿಸಬೇಕು. ಆಗಲೇ ಅವನು ಸಮಸ್ತವನ್ನು ಕ್ರಿಸ್ತನಲ್ಲಿ ಪುನಃ ಒಂದುಗೂಡಿಸುವ ಯೆಹೋವನ ಉದ್ದೇಶಕ್ಕೆ ಹೊಂದಿಕೆಯಲ್ಲಿ ವರ್ತಿಸುತ್ತಿದ್ದಾನೆಂದು ಆಗುತ್ತದೆ.

16. ಹೆತ್ತವರು ಯೆಹೋವನಿಂದ ಪಡೆದಿರುವ ಜವಾಬ್ದಾರಿಯನ್ನು ಒಳ್ಳೇ ರೀತಿಯಲ್ಲಿ ನಿರ್ವಹಿಸುವಾಗ ಯಾವ ಫಲಿತಾಂಶ ಸಿಗುತ್ತದೆ?

16 ಹೆತ್ತವರು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಯೆಹೋವನಿಂದ ಪಡೆದಿದ್ದಾರೆ ಎನ್ನುವುದನ್ನು ಮರೆಯಬಾರದು. ಆದರೆ ಇಂದು ಅನೇಕರಲ್ಲಿ ‘ಸ್ವಾಭಾವಿಕ ಮಮತೆಯೇ’ ಇರುವುದಿಲ್ಲ. (2 ತಿಮೊ. 3:1, 3) ಎಷ್ಟೋ ತಂದೆಯಂದಿರು ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಾರೆ. ಇದು ಮಕ್ಕಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿ ಅವರನ್ನು ದುಃಖಪಡಿಸಿದೆ. ಆದರೆ ಪೌಲನು ಕ್ರೈಸ್ತ ತಂದೆಗಳಿಗೆ ಕೊಟ್ಟಿರುವ ಉಪದೇಶ ಏನೆಂದರೆ, “ನಿಮ್ಮ ಮಕ್ಕಳಿಗೆ ಕಿರಿಕಿರಿ ಉಂಟುಮಾಡುವವರಾಗಿರದೆ, ಅವರನ್ನು ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಬೆಳೆಸುತ್ತಾ ಬನ್ನಿರಿ.” (ಎಫೆ. 6:4) ಪ್ರೀತಿ ಅಂದರೇನು, ಅಧಿಕಾರಕ್ಕೆ ಅಧೀನರಾಗುವುದು ಎಂದರೇನು ಎಂಬುದನ್ನೆಲ್ಲಾ ಮಕ್ಕಳು ಮೊದಲು ಕಲಿಯುವುದು ಮನೆಯಲ್ಲೇ. ಇದನ್ನೆಲ್ಲಾ ತಮ್ಮ ಮಕ್ಕಳಿಗೆ ಒಳ್ಳೇ ರೀತಿಯಲ್ಲಿ ಕಲಿಸಿಕೊಟ್ಟಿರುವ ತಂದೆ-ತಾಯಿ ಯೆಹೋವನ ಆಡಳಿತದ ಉದ್ದೇಶಕ್ಕನುಸಾರ ಕ್ರಿಯೆಗೈದಿದ್ದಾರೆ. ಹೆತ್ತವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದು ತೋರಿಸಬೇಕು. ತಮ್ಮ ಕೋಪವನ್ನು ಹತೋಟಿಯಲ್ಲಿಡಬೇಕು, ಮಕ್ಕಳ ಮೇಲೆ ಕಿರಿಚಾಡಬಾರದು, ಬಾಯಿಗೆ ಬಂದ ಹಾಗೆ ಬಯ್ಯಬಾರದು. ಹೀಗೆ ಪ್ರೀತಿ ಅಂದರೇನು, ಅಧಿಕಾರಕ್ಕೆ ಗೌರವ ತೋರಿಸುವುದು ಅಂದರೆ ಏನೆಂದು ಅವರು ತಮ್ಮ ಮಕ್ಕಳಿಗೆ ಕಲಿಸಿಕೊಡುತ್ತಾರೆ. ಈ ಎಲ್ಲಾ ತರಬೇತಿ ಮಕ್ಕಳನ್ನು ದೇವರ ರಾಜ್ಯಕ್ಕಾಗಿ ಸಿದ್ಧಪಡಿಸುತ್ತದೆ.

17. ಪಿಶಾಚನನ್ನು ಪ್ರತಿರೋಧಿಸಲು ನಮಗೆ ಯಾವುದರ ಅಗತ್ಯವಿದೆ?

17 ಇಡೀ ವಿಶ್ವದ ಶಾಂತಿಗೆ ಕಲ್ಲುಹಾಕಿದ ಒಬ್ಬನಿದ್ದಾನೆ. ಅವನೇ ಪಿಶಾಚನು. ಅವನು ದೇವರ ಚಿತ್ತ ಮಾಡಲು ಬಿಡಲ್ಲ. ಲೋಕದೆಲ್ಲೆಡೆ ಜನ ವಿವಾಹ ವಿಚ್ಛೇದನ ಪಡೆಯುವಾಗ, ವಿವಾಹವಾಗದೆ ಒಟ್ಟಿಗೆ ಜೀವಿಸುವಾಗ, ಸಲಿಂಗಿಗಳು ಮದುವೆ ಮಾಡಿಕೊಳ್ಳುವಾಗ ಅವನಿಗೆ ಎಲ್ಲಿಲ್ಲದ ಖುಷಿ. ಆದರೆ ಕ್ರೈಸ್ತರಾದ ನಾವು ಇಂಥ ವಿಷಯಗಳನ್ನು ಮಾಡುವುದಿಲ್ಲ. ಕ್ರಿಸ್ತನನ್ನು ಮಾದರಿಯಾಗಿಟ್ಟು ಜೀವನ ನಡೆಸುತ್ತೇವೆ. (ಎಫೆ. 4:17-21) ಪಿಶಾಚ ಮತ್ತು ದೆವ್ವಗಳು ನಮ್ಮ ಹತ್ತಿರವೂ ಸುಳಿಯದಂತೆ “ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ” ಎಂದು ಬೈಬಲ್‌ ನಮ್ಮನ್ನು ಪ್ರೋತ್ಸಾಹಿಸುತ್ತದೆ.—ಎಫೆಸ 6:10-13 ಓದಿ.

“ಪ್ರೀತಿಯಲ್ಲಿ ನಡೆಯುತ್ತಾ ಇರಿ”

18. ನಮ್ಮ ಐಕ್ಯತೆಗೆ ಯಾವುದು ಆಧಾರಸ್ತಂಭ?

18 ನಮ್ಮ ಐಕ್ಯತೆಗೆ ಪ್ರೀತಿಯೇ ಆಧಾರಸ್ತಂಭ. ನಮಗೆ ನಮ್ಮ ‘ಒಬ್ಬನೇ ಕರ್ತನ’ ಮೇಲೆ, ‘ಒಬ್ಬನೇ ದೇವರ’ ಮೇಲೆ, ಸಹೋದರ ಸಹೋದರಿಯರ ಮೇಲೆ ತುಂಬ ಪ್ರೀತಿಯಿದೆ. ಆದ್ದರಿಂದ ನಾವು ‘ಶಾಂತಿಯ ಐಕ್ಯಗೊಳಿಸುವ ಬಂಧದಲ್ಲಿ ಪವಿತ್ರಾತ್ಮದ ಮೂಲಕ ಏಕತೆಯನ್ನು ಹೊಂದಲು’ ದೃಢಮನಸ್ಸು ಮಾಡಿದ್ದೇವೆ. (ಎಫೆ. 4:3-6) ಇಂಥ ಪ್ರೀತಿಯ ಕುರಿತು ಒಮ್ಮೆ ಯೇಸು ಪ್ರಾರ್ಥಿಸುತ್ತಾ, “ನಾನು ಇವರಿಗಾಗಿ ಮಾತ್ರವಲ್ಲದೆ ಇವರ ಮಾತುಗಳನ್ನು ಕೇಳಿ ನನ್ನಲ್ಲಿ ನಂಬಿಕೆಯನ್ನಿಡುವವರಿಗೋಸ್ಕರವೂ ಕೇಳಿಕೊಳ್ಳುತ್ತೇನೆ; . . . ಇವರೆಲ್ಲರೂ ಒಂದಾಗಿರಬೇಕೆಂದೂ ನೀನು ನನ್ನೊಂದಿಗೆ ಮತ್ತು ನಾನು ನಿನ್ನೊಂದಿಗೆ ಐಕ್ಯವಾಗಿರುವಂತೆ ಇವರು ಸಹ ನಮ್ಮೊಂದಿಗೆ ಐಕ್ಯವಾಗಿರಬೇಕೆಂದೂ ಕೇಳಿಕೊಳ್ಳುತ್ತೇನೆ. ನೀನು ನನಗೆ ತೋರಿಸಿದ ಪ್ರೀತಿಯು ಇವರಲ್ಲಿ ಇರಬೇಕೆಂದೂ ನಾನು ಇವರಲ್ಲಿ ಐಕ್ಯವಾಗಿರಬೇಕೆಂದೂ ನಾನು ಇವರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ ಮತ್ತು ಇನ್ನೂ ತಿಳಿಯಪಡಿಸುವೆನು” ಎಂದನು.—ಯೋಹಾ. 17:20, 21, 26.

19. ನೀವು ಯಾವ ದೃಢತೀರ್ಮಾನ ಮಾಡಿದ್ದೀರಿ?

19 ನಮ್ಮ ಅಪರಿಪೂರ್ಣತೆಯ ಕಾರಣ ನಮ್ಮಿಂದ ಇಷ್ಟನ್ನೆಲ್ಲಾ ಮಾಡಲಿಕ್ಕಾಗಲ್ಲ ಎಂದನಿಸುವಲ್ಲಿ ಕೀರ್ತನೆಗಾರನಂತೆ ಪ್ರಾರ್ಥಿಸಲು ಪ್ರೀತಿ ಪ್ರಚೋದಿಸಲಿ. “ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು” ಎಂದು ಬೇಡೋಣ. (ಕೀರ್ತ. 86:11) ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯಿಂದ ಮತ್ತು ಆತನ ಜನರಿಂದ ನಮ್ಮನ್ನು ದೂರ ಮಾಡುವ ಪಿಶಾಚನ ಪ್ರಯತ್ನಗಳನ್ನು ನೀರುಪಾಲು ಮಾಡಲು ದೃಢಮನಸ್ಸು ಮಾಡೋಣ. ‘ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಲು’ ಶತಪ್ರಯತ್ನ ಹಾಕೋಣ. ನಮ್ಮ ಕುಟುಂಬದಲ್ಲಿ, ಕ್ಷೇತ್ರಸೇವೆಯಲ್ಲಿ, ಸಭೆಯಲ್ಲಿ ‘ಪ್ರೀತಿಯಿಂದ ನಡೆಯುತ್ತಾ ಇರೋಣ!’—ಎಫೆ. 5:1, 2.

[ಅಧ್ಯಯನ ಪ್ರಶ್ನೆಗಳು]

[ಪುಟ 29ರಲ್ಲಿರುವ ಚಿತ್ರ]

ಅವನು ತನ್ನ ಕಾಣಿಕೆಯನ್ನು ಯಜ್ಞವೇದಿಯ ಬಳಿಯಲ್ಲೇ ಬಿಟ್ಟು ಸಹೋದರನೊಂದಿಗೆ ಸಮಾಧಾನ ಮಾಡಿಕೊಳ್ಳಲು ಹೋಗುತ್ತಾನೆ

[ಪುಟ 31ರಲ್ಲಿರುವ ಚಿತ್ರ]

ಹೆತ್ತವರೇ, ಗೌರವ ತೋರಿಸುವುದನ್ನು ಮಕ್ಕಳಿಗೆ ಕಲಿಸಿ