ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಕೈಹಿಡಿದು ನಿಜ ಸ್ವಾತಂತ್ರ್ಯಕ್ಕೆ ನಡೆಯಿರಿ

ಯೆಹೋವನ ಕೈಹಿಡಿದು ನಿಜ ಸ್ವಾತಂತ್ರ್ಯಕ್ಕೆ ನಡೆಯಿರಿ

ಯೆಹೋವನ ಕೈಹಿಡಿದು ನಿಜ ಸ್ವಾತಂತ್ರ್ಯಕ್ಕೆ ನಡೆಯಿರಿ

“[ಸ್ವಾತಂತ್ರ್ಯಕ್ಕೆ] ಸೇರಿರುವ ಪರಿಪೂರ್ಣ ನಿಯಮದೊಳಕ್ಕೆ ಇಣಿಕಿ ನೋಡಿ.”—ಯಾಕೋ. 1:25.

ವಿವರಿಸುವಿರಾ?

ಯಾವ ನಿಯಮ ನಿಜ ಸ್ವಾತಂತ್ರ್ಯ ಕೊಡುತ್ತದೆ? ಆ ನಿಯಮದಿಂದ ಯಾರಿಗೆ ಪ್ರಯೋಜನ?

ನಿಜ ಸ್ವಾತಂತ್ರ್ಯ ಗಳಿಸಲು ನಾವೇನು ಮಾಡಬೇಕು?

ಜೀವದ ಮಾರ್ಗದಲ್ಲಿ ಸದಾ ನಡೆಯುವವರಿಗೆ ಭವಿಷ್ಯತ್ತಿನಲ್ಲಿ ಯಾವ ಸ್ವಾತಂತ್ರ್ಯ ಸಿಗುತ್ತದೆ?

1, 2. (1) ಇಂದು ಜನರ ಸ್ವಾತಂತ್ರ್ಯಕ್ಕೆ ಏನಾಗಿದೆ? (2) ಏಕೆ? (3) ಯೆಹೋವನ ಸೇವಕರಿಗೆ ಎಂಥ ಅದ್ಭುತ ಸ್ವಾತಂತ್ರ್ಯ ಸಿಗಲಿದೆ?

ದುರಾಶೆ, ಅನ್ಯಾಯ, ಹಿಂಸೆ ತುಂಬಿರುವ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. (2 ತಿಮೊ. 3:1-5) ಇದನ್ನು ಹತ್ತಿಕ್ಕಲು ಸರ್ಕಾರ ನೂರೆಂಟು ಕಾನೂನು-ಕಾಯಿದೆಗಳನ್ನು ಜಾರಿಗೊಳಿಸುತ್ತದೆ. ಪೊಲೀಸ್‌ ಪಡೆಯನ್ನು ಹೆಚ್ಚು ಮಾಡುತ್ತದೆ. ಎಲ್ಲಂದರಲ್ಲಿ ಕ್ಯಾಮರಾಗಳನ್ನು ಸಿಕ್ಕಿಸಿಡುತ್ತದೆ. ಜನರು ಸಹ ತಮ್ಮ ಸುರಕ್ಷೆಯ ಬಗ್ಗೆ ತುಂಬ ಚಿಂತಿತರಾಗಿದ್ದಾರೆ. ಹಾಗಾಗಿ ಅಪಾಯವನ್ನು ಸೂಚಿಸುವ ಅಲಾರಮ್‌ಗಳನ್ನು ತಮ್ಮ ಮನೆಗೆ ಅಳವಡಿಸುತ್ತಾರೆ. ಬಾಗಿಲಿಗೆ ಎರಡು-ಮೂರು ಬೀಗಗಳನ್ನು ಜಡಿಯುತ್ತಾರೆ. ಮನೆ ಸುತ್ತ ವಿದ್ಯುತ್‌ಚ್ಚಾಲಿತ ಬೇಲಿಯನ್ನೂ ಹಾಕುವುದಿದೆ. ಎಷ್ಟೋ ಜನ ಹೊತ್ತು ಮುಳುಗಿದ ಮೇಲೆ ಮನೆ ಹೊರಗೆ ಕಾಲಿಡುವುದೇ ಇಲ್ಲ. ಮಕ್ಕಳು ಹೊರಗೆ ಆಡಲಿಕ್ಕೆ ಹೋದರೂ ಅವರ ಮೇಲೆ ಒಂದು ಕಣ್ಣಿಡುತ್ತಾರೆ. ಎಲ್ಲಿದೆ ಸ್ವಾತಂತ್ರ್ಯ?! ಪರಿಸ್ಥಿತಿ ಸುಧಾರಣೆಗೊಳ್ಳುವ ಲಕ್ಷಣಗಳೂ ತೋರುತ್ತಿಲ್ಲ.

2 ಹಾಗಾದರೆ ಹಿಂದೆ ಏದೆನ್‌ ತೋಟದಲ್ಲಿ ಸೈತಾನ ಹೇಳಿದ್ದು ಎಷ್ಟು ದೊಡ್ಡ ಸುಳ್ಳಾಗಿತ್ತಲ್ಲವೆ? ನಾವು ಯೆಹೋವನಿಂದ ದೂರವಾದರೆ ನಮಗೆ ನಿಜ ಸ್ವಾತಂತ್ರ್ಯ ಸಿಗುತ್ತೆ ಎಂದಿದ್ದ ಆ ಸುಳ್ಳುಬುರುಕ. ಆದರೆ ಜನರು ಮನಸ್ಸೋ ಇಚ್ಛೆಯಂತೆ ವರ್ತಿಸಿ ದೇವರಿಂದ ಎಷ್ಟು ದೂರ ಹೋಗುತ್ತಾರೋ ಅಷ್ಟೇ ಕಷ್ಟ-ದುಃಖದಲ್ಲಿ ಸಿಕ್ಕಿ ನರಳುವಂತಾಗಿದೆ. ಈ ಫಜೀತಿಯಲ್ಲಿ ನಾವೂ ಸಿಕ್ಕಿಕೊಂಡಿದ್ದೇವೆ. ಆದರೆ ನಮಗೊಂದು ನಿರೀಕ್ಷೆ ಇದೆ. ನಾವು ಪಾಪದ ಬಿಗಿಮುಷ್ಠಿಯಿಂದ ಬಿಡುಗಡೆಯಾಗಿ “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು” ಹೊಂದಲಿದ್ದೇವೆ. (ರೋಮ. 8:21) ಆ ಸ್ವಾತಂತ್ರ್ಯವನ್ನು ಸವಿಯುವಂತಾಗಲು ಯೆಹೋವನು ತನ್ನ ಜನರನ್ನು ಈಗಲೇ ಸಿದ್ಧಗೊಳಿಸುತ್ತಿದ್ದಾನೆ. ಹೇಗೆ?

3. (1) ಯೆಹೋವನು ಕ್ರಿಸ್ತನ ಅನುಯಾಯಿಗಳಿಗೆ ಯಾವ ನಿಯಮ ಕೊಟ್ಟಿದ್ದಾನೆ? (2) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

3 ಮುಂದೆ ಸಿಗಲಿರುವ ಆ ಸ್ವಾತಂತ್ರ್ಯಕ್ಕಾಗಿ ನಮ್ಮನ್ನು ಸಿದ್ಧಗೊಳಿಸಲು ಯೆಹೋವನು ನಮಗೆ ‘[ಸ್ವಾತಂತ್ರ್ಯಕ್ಕೆ] ಸೇರಿರುವ ಪರಿಪೂರ್ಣ ನಿಯಮವನ್ನು’ ಕೊಟ್ಟಿದ್ದಾನೆಂದು ಬೈಬಲ್‌ ಲೇಖಕರಲ್ಲಿ ಒಬ್ಬನಾದ ಯಾಕೋಬನು ತಿಳಿಸುತ್ತಾನೆ. (ಯಾಕೋಬ 1:25 ಓದಿ.) ಬೇರೆ ಬೈಬಲ್‌ ಭಾಷಾಂತರಗಳು ಇದನ್ನು “ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣ” (ಸತ್ಯವೇದ) ಮತ್ತು “ಜನರನ್ನು ಬಿಡುಗಡೆ ಮಾಡುವ ದೇವರ ಪರಿಪೂರ್ಣ ನಿಯಮ” (ಪರಿಶುದ್ಧ ಬೈಬಲ್‌) ಎಂದು ಕರೆಯುತ್ತವೆ. ಸಾಮಾನ್ಯವಾಗಿ ನಿಯಮ ಎಂದ ಕೂಡಲೆ ಮನಸ್ಸಿಗೆ ಬರುವುದು ಕಟ್ಟುಪಾಡು. ಸ್ವಾತಂತ್ರ್ಯ ಅಲ್ಲ. ಹಾಗಾದರೆ “[ಸ್ವಾತಂತ್ರ್ಯಕ್ಕೆ] ಸೇರಿರುವ ಪರಿಪೂರ್ಣ ನಿಯಮ” ಏನಾಗಿದೆ? ಆ ನಿಯಮ ನಮ್ಮನ್ನು ಹೇಗೆ ಬಿಡುಗಡೆ ಮಾಡುತ್ತದೆ?

ಬಿಡುಗಡೆ ಮಾಡುವ ನಿಯಮ

4. (1) “[ಸ್ವಾತಂತ್ರ್ಯಕ್ಕೆ] ಸೇರಿರುವ ಪರಿಪೂರ್ಣ ನಿಯಮ” ಏನಾಗಿದೆ? (2) ಅದರಿಂದ ಯಾರು ಪ್ರಯೋಜನ ಪಡೆಯುತ್ತಾರೆ?

4 “[ಸ್ವಾತಂತ್ರ್ಯಕ್ಕೆ] ಸೇರಿರುವ ಪರಿಪೂರ್ಣ ನಿಯಮ” ಮೋಶೆಯ ಧರ್ಮಶಾಸ್ತ್ರವಲ್ಲ. ಏಕೆಂದರೆ ಜನ ಪಾಪಿಗಳೆಂದಷ್ಟೇ ಅದು ತೋರಿಸಿಕೊಟ್ಟಿತು. ಧರ್ಮಶಾಸ್ತ್ರದಲ್ಲಿ ಮುಂತಿಳಿಸಲಾಗಿದ್ದ ಎಲ್ಲ ವಿಷಯಗಳನ್ನು ಕ್ರಿಸ್ತನು ನೆರವೇರಿಸಿದನು. (ಮತ್ತಾ. 5:17; ಗಲಾ. 3:19) ಹಾಗಾದರೆ ಯಾಕೋಬನು ಯಾವ ನಿಯಮದ ಕುರಿತು ಮಾತಾಡಿದನು? ಅವನು “ಕ್ರಿಸ್ತನ ನಿಯಮ” “ನಂಬಿಕೆಯ ನಿಯಮ” ‘ಸ್ವತಂತ್ರ ಜನರ ನಿಯಮದ’ ಕುರಿತು ಮಾತಾಡಿದನು. (ಗಲಾ. 6:2; ರೋಮ. 3:27; ಯಾಕೋ. 2:12) ಹಾಗಾದರೆ ಈ ‘ಪರಿಪೂರ್ಣ ನಿಯಮದಲ್ಲಿ’ ಯೆಹೋವನು ನಮ್ಮಿಂದ ಅವಶ್ಯಪಡಿಸುವ ಎಲ್ಲ ವಿಷಯಗಳೂ ಒಳಗೂಡಿದೆ. ಅಭಿಷಿಕ್ತ ಕ್ರೈಸ್ತರೂ “ಬೇರೆ ಕುರಿಗಳೂ” ಇದರಿಂದ ಪ್ರಯೋಜನ ಪಡೆಯುತ್ತಾರೆ.—ಯೋಹಾ. 10:16.

5. ಸ್ವಾತಂತ್ರ್ಯಕ್ಕೆ ಸೇರಿರುವ ನಿಯಮವನ್ನು ಪಾಲಿಸುವುದು ಏಕೆ ಕಷ್ಟವಲ್ಲ?

5 ದೇಶದ ಕಾನೂನಿಗೂ ದೇವರ ನಿಯಮಕ್ಕೂ ತುಂಬ ವ್ಯತ್ಯಾಸವಿದೆ. ಈ ‘ಪರಿಪೂರ್ಣ ನಿಯಮವನ್ನು’ ಅರ್ಥಮಾಡಿಕೊಳ್ಳುವುದು ಸುಲಭ, ಪಾಲಿಸುವುದು ಕಷ್ಟವಲ್ಲ. ಏಕೆಂದರೆ ಅದರಲ್ಲಿ ಸರಳವಾದ ಕಟ್ಟಳೆಗಳೂ ಮೂಲತತ್ತ್ವಗಳೂ ಇವೆ. (1 ಯೋಹಾ. 5:3) ಯೇಸು ಕೂಡ ಅದರ ಬಗ್ಗೆ ಮಾತಾಡುತ್ತಾ “ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ” ಎಂದನು. (ಮತ್ತಾ. 11:29, 30) ಈ ‘ಪರಿಪೂರ್ಣ ನಿಯಮದೊಂದಿಗೆ’ ರೀತಿನೀತಿಗಳ ಉದ್ದ ಪಟ್ಟಿ ಕೊಡಲಾಗಿಲ್ಲ. ಏಕೆಂದರೆ ಈ ನಿಯಮವು ಪ್ರೀತಿಯ ಮೇಲೆ ತಳವೂರಿದೆ. ಇದನ್ನು ಕಲ್ಲಿನ ಹಲಗೆಗಳ ಮೇಲಲ್ಲ, ಹೃದಮನಗಳ ಮೇಲೆ ಬರೆಯಲಾಗಿದೆ. ಇಬ್ರಿಯ 8:6, 10 ಓದಿ.

ಪರಿಪೂರ್ಣ ನಿಯಮ” ನಮ್ಮನ್ನು ಹೇಗೆ ಬಿಡಿಸುತ್ತದೆ?

6, 7. (1) ಯೆಹೋವನ ಮಟ್ಟಗಳ ಬಗ್ಗೆ ನಿಮಗೆ ಏನನಿಸುತ್ತದೆ? (2) ಸ್ವಾತಂತ್ರ್ಯಕ್ಕೆ ಸೇರಿರುವ ನಿಯಮ ಬಿಡುಗಡೆಯನ್ನು ಉಂಟುಮಾಡುತ್ತದೆ ಎಂದು ಏಕೆ ಹೇಳಬಹುದು?

6 ಯೆಹೋವ ದೇವರು ಮನುಷ್ಯರಿಗೆ ಮೇರೆಗಳನ್ನು ಇಟ್ಟಿದ್ದಾನೆ. ಅವು ಅವರ ಒಳಿತಿಗಾಗಿಯೂ ಸಂರಕ್ಷಣೆಗಾಗಿಯೂ ಇವೆ. ಭೌತನಿಯಮಗಳನ್ನೇ ತೆಗೆದುಕೊಳ್ಳಿ. ಇವು ಗುರುತ್ವಾಕರ್ಷಣೆಯಂಥ ನೈಸರ್ಗಿಕ ಶಕ್ತಿಗಳನ್ನು ನಿಯಂತ್ರಿಸುತ್ತವೆ. ಆದರೆ ಯಾವ ಮನುಷ್ಯನೂ ಈ ನಿಯಮಗಳಿಂದ ತೊಂದರೆಯಾಗುತ್ತಿದೆ ಎಂದು ದೂರುವುದಿಲ್ಲ. ಅವು ಇರುವುದರಿಂದಲೇ ಬದುಕಲು ಸಾಧ್ಯವಾಗುತ್ತಿದೆ ಎಂದು ಗಣ್ಯಮಾಡುತ್ತಾನೆ. ಕ್ರಿಸ್ತನ “ಪರಿಪೂರ್ಣ ನಿಯಮ” ಕೂಡ ಹಾಗೆಯೇ. ಅದು ಒಂದು ಹೊರೆಯಲ್ಲ. ಅದರಲ್ಲಿರುವ ನೈತಿಕ, ಆಧ್ಯಾತ್ಮಿಕ ಮಟ್ಟಗಳು ನಮ್ಮ ಒಳಿತಿಗಾಗಿಯೇ ಇವೆ.

7 ಕ್ರಿಸ್ತನ “ಪರಿಪೂರ್ಣ ನಿಯಮ” ನಮಗೆ ಸಂರಕ್ಷಣೆಯನ್ನೂ ಕೊಡುತ್ತದೆ. ಅದರೊಂದಿಗೆ ನಮ್ಮ ಎಲ್ಲ ಯೋಗ್ಯ ಇಚ್ಛೆಗಳನ್ನು ಈಡೇರಿಸಲು ಅನುವು ಮಾಡಿಕೊಡುತ್ತದೆ. ಅದೇ ಸಮಯದಲ್ಲಿ ಇತರರ ಹಕ್ಕು, ಸ್ವಾತಂತ್ರ್ಯವನ್ನು ಅತಿಕ್ರಮಿಸದಂತೆ ಸಹಾಯಮಾಡುತ್ತದೆ. ಹಾಗಾದರೆ ನಿಜ ಸ್ವಾತಂತ್ರ್ಯ ಬೇಕಾದರೆ ನಮ್ಮ ಇಚ್ಛೆಗಳು ಯೋಗ್ಯವಾಗಿರಬೇಕು. ಯೆಹೋವನ ಮಟ್ಟಗಳಿಗೆ ಅನುಸಾರವಾಗಿರಬೇಕು. ಆತನ ಗುಣಗಳು ನಮ್ಮಲ್ಲಿ ವ್ಯಕ್ತವಾಗಬೇಕು. ಸರಳವಾಗಿ ಹೇಳುವುದಾದರೆ ಯೆಹೋವನು ಏನನ್ನು ಪ್ರೀತಿಸುತ್ತಾನೋ ಅದನ್ನು ಪ್ರೀತಿಸಬೇಕು. ಏನನ್ನು ದ್ವೇಷಿಸುತ್ತಾನೋ ಅದನ್ನು ದ್ವೇಷಿಸಬೇಕು. ಇದನ್ನು ಮಾಡಲು ಸ್ವಾತಂತ್ರ್ಯವನ್ನು ತರುವ ನಿಯಮ ಸಹಾಯಮಾಡುತ್ತದೆ.—ಆಮೋ. 5:15.

8, 9. ಸ್ವಾತಂತ್ರ್ಯಕ್ಕೆ ಸೇರಿರುವ ನಿಯಮಕ್ಕೆ ಅನುಸಾರ ನಡೆದರೆ ಯಾವ ಪ್ರಯೋಜನವಿದೆ? ಉದಾಹರಣೆ ಕೊಡಿ.

8 ನಮ್ಮಲ್ಲಿರುವ ಅಪರಿಪೂರ್ಣತೆಯಿಂದಾಗಿ ಕೆಟ್ಟ ಇಚ್ಛೆಗಳನ್ನು ಮೆಟ್ಟಿನಿಲ್ಲುವುದು ಸುಲಭವಲ್ಲ. ಆದರೂ ಸ್ವಾತಂತ್ರ್ಯಕ್ಕೆ ಸೇರಿರುವ ನಿಯಮಕ್ಕೆ ಅನುಸಾರವಾಗಿ ನಡೆಯುವುದಾದರೆ ಕೆಟ್ಟ ಇಚ್ಛೆಗಳನ್ನು ಅದುಮಿಹಾಕಿ ಬಿಡುಗಡೆಯನ್ನು ಅನುಭವಿಸುವೆವು. ಉದಾಹರಣೆಗೆ ಜೇ ಎಂಬವನ ಅನುಭವ ನೋಡೋಣ. ಅವನಿಗೆ ತಂಬಾಕು ಸೇವನೆಯ ಚಟವಿತ್ತು. ಬೈಬಲ್‌ ಅಧ್ಯಯನ ಮಾಡುತ್ತಿದ್ದಾಗ ದೇವರು ತಂಬಾಕು ಸೇವನೆಯನ್ನು ಇಷ್ಟಪಡುವುದಿಲ್ಲ ಎಂದು ತಿಳಿದು ಬಂತು. ಈಗ ಏನು ಮಾಡುವನು? ತನ್ನ ಶರೀರದ ಇಚ್ಛೆಗನುಸಾರ ನಡೆಯುವನೇ ಅಥವಾ ಯೆಹೋವನಿಗೆ ವಿಧೇಯನಾಗುವನೇ? ಅವನು ಯೆಹೋವನನ್ನು ಮೆಚ್ಚಿಸುವ ಆಯ್ಕೆಮಾಡಿದನು. ಆದರೆ ಅದು ಸುಲಭವಾಗಿರಲಿಲ್ಲ, ಶತಪ್ರಯತ್ನ ಮಾಡಬೇಕಾಯಿತು. ಆದರೂ ಆ ದುಶ್ಚಟವನ್ನು ಕೈಬಿಟ್ಟನು. ಅದರ ನಂತರ ಅವನಿಗೆ ಹೇಗನಿಸಿತು ಗೊತ್ತೆ? “ದೊಡ್ಡ ಬಿಡುಗಡೆ ಸಿಕ್ಕಿದಂತೆ ಅನಿಸಿತು. ನನಗಾದ ಸಂತೋಷವನ್ನು ಹೇಳತೀರದು” ಎಂದನು.

9 ಈ ಲೋಕ ಕೊಡುವ ಸ್ವಾತಂತ್ರ್ಯ ‘ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವಂತೆ’ ಮಾಡಿ ಪಾಪದ ದಾಸತ್ವಕ್ಕೆ ನೂಕುತ್ತದೆ ಎಂದು ಜೇ ತಿಳಿದ. ಆದರೆ ಯೆಹೋವನು ಕೊಡುವ ಸ್ವಾತಂತ್ರ್ಯವೇ ನಿಜ ಸ್ವಾತಂತ್ರ್ಯ. ಅದು ‘ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವಂತೆ’ ಮಾಡಿ ‘ಜೀವ ಮತ್ತು ಶಾಂತಿಯನ್ನು’ ಪ್ರತಿಫಲವಾಗಿ ಕೊಡುತ್ತದೆ ಎಂದು ಅವನಿಗೆ ಅರ್ಥವಾಯಿತು. (ರೋಮ. 8:5, 6) ಈ ದುಶ್ಚಟವನ್ನು ಬಿಟ್ಟುಬಿಡಲು ಅವನಿಗೆ ಹೇಗೆ ಸಾಧ್ಯವಾಯಿತು? ಸ್ವಂತ ಶಕ್ತಿಯಿಂದಲ್ಲ, ಯೆಹೋವನ ಬಲದಿಂದ. ಹೇಗೆಂದು ವಿವರಿಸುತ್ತಾನೆ ಕೇಳಿ: “ಬೈಬಲನ್ನು ಪ್ರತಿದಿನ ಅಧ್ಯಯನ ಮಾಡಿದೆ. ಪವಿತ್ರಾತ್ಮದ ಸಹಾಯ ಕೊಡುವಂತೆ ದೇವರಲ್ಲಿ ಬೇಡಿದೆ. ಸಭೆಯಲ್ಲಿರುವವರು ಕೂಡ ನನಗೆ ಸಹಾಯ ಮಾಡಿದರು.” ಈ ಎಲ್ಲ ವಿಷಯಗಳು ನಿಜ ಸ್ವಾತಂತ್ರ್ಯ ಪಡೆಯಲು ನಮಗೂ ಸಹಾಯ ಮಾಡಬಲ್ಲವು. ಹೇಗೆಂದು ನೋಡೋಣ.

ದೇವರ ವಾಕ್ಯದಲ್ಲಿ ಇಣಿಕಿ ನೋಡಿ

10. ದೇವರ ನಿಯಮದಲ್ಲಿ ಇಣಿಕಿ ನೋಡುವುದರ ಅರ್ಥವೇನು?

10ಯಾಕೋಬ 1:15 ಹೀಗನ್ನುತ್ತದೆ: “ವಿಮೋಚನೆಗೆ ಸೇರಿರುವ ಪರಿಪೂರ್ಣ ನಿಯಮದೊಳಕ್ಕೆ ಇಣಿಕಿ ನೋಡಿ, ಅದರಲ್ಲಿ ಪಟ್ಟುಹಿಡಿಯುವವನು . . . ಅದನ್ನು ಮಾಡುವುದರಲ್ಲಿ ಸಂತೋಷಿತನಾಗಿರುವನು.” ಇಲ್ಲಿ ಕೊಡಲಾಗಿರುವ “ಇಣಿಕಿ ನೋಡಿ” ಎಂಬುದರ ಮೂಲ ಗ್ರೀಕ್‌ ಪದ ಏಕಾಗ್ರತೆಯ ಪ್ರಯತ್ನವನ್ನು ಸೂಚಿಸುತ್ತದೆ. ಹಾಗಾದರೆ ಸ್ವಾತಂತ್ರ್ಯಕ್ಕೆ ಸೇರಿರುವ ನಿಯಮವು ನಮ್ಮ ಹೃದಮನದ ಮೇಲೆ ಪ್ರಭಾವ ಬೀರಬೇಕಾದರೆ ನಾವು ಪ್ರಯತ್ನ ಮಾಡಬೇಕು. ಬೈಬಲನ್ನು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಅನಂತರ ಪ್ರಾರ್ಥಿಸಿ ಕಲಿತ ವಿಷಯಗಳ ಕುರಿತು ಧ್ಯಾನಿಸಬೇಕು.—1 ತಿಮೊ. 4:15.

11, 12. (1) ಸತ್ಯವನ್ನು ಜೀವನದ ಎಲ್ಲ ಕ್ಷೇತ್ರಗಳಲ್ಲಿ ಅನ್ವಯಿಸಿಕೊಳ್ಳಬೇಕು ಎಂಬುದನ್ನು ಯೇಸು ಹೇಗೆ ಒತ್ತಿಹೇಳಿದನು? (2) ಪ್ಯಾರದಲ್ಲಿರುವ ಅನುಭವವು ಹೇಳುವಂತೆ ಯುವಜನರು ಯಾವ ಅಪಾಯದಲ್ಲಿ ಸಿಕ್ಕಿಕೊಳ್ಳದಂತೆ ಜಾಗ್ರತೆ ವಹಿಸಬೇಕು?

11 ಬೈಬಲಿನಿಂದ ಕಲಿತ ವಿಷಯಗಳನ್ನು ಅನ್ವಯಿಸಿಕೊಳ್ಳಲು ‘ಪಟ್ಟುಹಿಡಿಯಬೇಕು.’ ಆಗ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಬೈಬಲ್‌ ಸತ್ಯಕ್ಕೆ ಹೊಂದಿಕೆಯಲ್ಲೇ ನಡೆಯುವೆವು. ಯೇಸು ತನ್ನಲ್ಲಿ ನಂಬಿಕೆಯಿಟ್ಟ ಜನರಿಗೆ ಇದೇ ವಿಷಯವನ್ನು ಹೇಳಿದನು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿರುವುದಾದರೆ ನಿಜವಾಗಿಯೂ ನನ್ನ ಶಿಷ್ಯರಾಗಿರುವಿರಿ; ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು.” (ಯೋಹಾ. 8:31, 32) ಇಲ್ಲಿ ಕೊಡಲಾಗಿರುವ “ತಿಳಿದುಕೊಳ್ಳು” ಎಂಬುದಕ್ಕೆ ಗಣ್ಯತೆ ಹೊಂದಿರು ಎಂಬ ಅರ್ಥವೂ ಇದೆ. ಏಕೆಂದರೆ “ಒಬ್ಬ ವ್ಯಕ್ತಿ ಒಂದು ವಿಷಯವನ್ನು ‘ತಿಳಿದುಕೊಂಡ’ ಮೇಲೆ ಅದರ ಮಹತ್ವ ಅಥವಾ ಮೌಲ್ಯ ಕೂಡ ಅವನಿಗೆ ಗೊತ್ತಾಗುತ್ತದೆ” ಎನ್ನುತ್ತದೆ ಒಂದು ಪರಾಮರ್ಶನ ಕೃತಿ. ನಾವು ಜೀವನದ ಎಲ್ಲ ಕ್ಷೇತ್ರಗಳಲ್ಲಿ ಬೈಬಲ್‌ ಸತ್ಯಕ್ಕೆ ಹೊಂದಿಕೆಯಲ್ಲಿ ನಡೆದರೆ ಮಾತ್ರ ಸತ್ಯವನ್ನು ಪೂರ್ಣವಾಗಿ ‘ತಿಳಿದುಕೊಂಡಿದ್ದೇವೆ’ ಎಂದರ್ಥ. “ದೇವರ ವಾಕ್ಯ” ನಮ್ಮಲ್ಲಿ “ಕಾರ್ಯನಡಿಸುತ್ತಿದೆ” ಎಂದು ಹೇಳಸಾಧ್ಯ. ನಮ್ಮ ತಂದೆಯಾದ ಯೆಹೋವನ ಗುಣಗಳನ್ನು ಹೆಚ್ಚು ಉತ್ತಮವಾಗಿ ಪ್ರತಿಬಿಂಬಿಸಲು ಸಾಧ್ಯವಾಗುವಂತೆ ದೇವರ ವಾಕ್ಯ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತಿದೆ ಎಂಬುದು ಸ್ಪಷ್ಟ.—1 ಥೆಸ. 2:13.

12 ಹೀಗೆ ಕೇಳಿಕೊಳ್ಳಿ: ‘ನಾನು ನಿಜವಾಗಿಯೂ ಸತ್ಯವನ್ನು ತಿಳಿದುಕೊಂಡಿದ್ದೇನಾ? ಜೀವನದ ಎಲ್ಲ ಕ್ಷೇತ್ರಗಳಲ್ಲಿ ಅದನ್ನು ಅನ್ವಯಿಸಿಕೊಳ್ತಾ ಇದ್ದೇನಾ? ಅಥವಾ ಲೋಕ ಕೊಡುವ ಸ್ವಾತಂತ್ರ್ಯಕ್ಕಾಗಿ ಆಸೆಪಡುತ್ತೇನಾ?’ ಚಿಕ್ಕಂದಿನಿಂದಲೇ ಸತ್ಯವನ್ನು ಕಲಿತಿದ್ದ ಒಬ್ಬ ಸಹೋದರಿ ತನ್ನ ಯೌವನದ ದಿನಗಳನ್ನು ನೆನಪಿಸಿಕೊಳ್ಳುತ್ತಾ: “ಚಿಕ್ಕಂದಿನಿಂದಲೇ ಸತ್ಯವನ್ನು ಕಲಿತವರಿಗೆ ಯೆಹೋವ ದೇವರ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ. ಆದರೆ ನನ್ನ ಕಥೆಯೇ ಬೇರೆ. ನಾನು ದೇವರನ್ನು ನಿಜವಾಗಿ ತಿಳಿದುಕೊಳ್ಳಲೇ ಇಲ್ಲ. ದೇವರು ದ್ವೇಷಿಸುವ ವಿಷಯಗಳನ್ನು ದ್ವೇಷಿಸಲು ಕಲಿಯಲಿಲ್ಲ. ನಾನು ಮಾಡೋ ಪ್ರತಿಯೊಂದು ವಿಷಯವನ್ನು ದೇವರು ನೋಡ್ತಿದ್ದಾನೆ ಎಂದು ನಂಬಲೂ ಇಲ್ಲ. ಸಮಸ್ಯೆಯಲ್ಲಿದ್ದಾಗ ಪ್ರಾರ್ಥನೆ ಕೂಡ ಮಾಡ್ತಿರಲಿಲ್ಲ. ನನಗೆ ಏನು ಸರಿ ಅನ್ಸುತ್ತೋ ಅದನ್ನೇ ಮಾಡ್ತಿದ್ದೆ. ಈಗ ನೆನಸಿಕೊಂಡ್ರೆ ಶುದ್ಧ ಮೂರ್ಖತನ ಅನ್ಸುತ್ತೆ. ಏಕೆಂದರೆ ಸರಿ ಯಾವುದು ಅಂತ ನನಗೆ ತಿಳಿದಿರಲೇ ಇಲ್ಲ” ಎನ್ನುತ್ತಾಳೆ. ಸಂತೋಷದ ಸಂಗತಿಯೆಂದರೆ ಈ ಸಹೋದರಿ ತಾನು ಮಾಡುತ್ತಿರುವುದು ತಪ್ಪೆಂದು ಅರಿತು ತನ್ನ ಜೀವನದಲ್ಲಿ ಬದಲಾವಣೆ ಮಾಡಿಕೊಂಡಳು. ಈಗ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡುತ್ತಿದ್ದಾಳೆ.

ಪವಿತ್ರಾತ್ಮದ ಸಹಾಯದಿಂದ ಸ್ವಾತಂತ್ರ್ಯ

13. ನಾವು ಸ್ವಾತಂತ್ರ್ಯ ಅನುಭವಿಸಲು ಪವಿತ್ರಾತ್ಮ ಹೇಗೆ ಸಹಾಯ ಮಾಡುತ್ತದೆ?

13 “ಎಲ್ಲಿ ಯೆಹೋವನ ಆತ್ಮವಿದೆಯೋ ಅಲ್ಲಿ ಸ್ವಾತಂತ್ರ್ಯವಿದೆ” ಎಂದು 2 ಕೊರಿಂಥ 3:17ರಲ್ಲಿ ಹೇಳಲಾಗಿದೆ. ನಾವು ಸ್ವಾತಂತ್ರ್ಯ ಅನುಭವಿಸಲು ಪವಿತ್ರಾತ್ಮ ಹೇಗೆ ಸಹಾಯ ಮಾಡುತ್ತದೆ? ಸ್ವಾತಂತ್ರ್ಯ ಅನುಭವಿಸಲು ಅತ್ಯಾವಶ್ಯಕವಾದ “ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣ” ಎಂಬ ಗುಣಗಳನ್ನು ಪವಿತ್ರಾತ್ಮ ನಮ್ಮಲ್ಲಿ ಬೆಳೆಸುತ್ತದೆ. (ಗಲಾ. 5:22, 23) ಈ ಗುಣಗಳಿಲ್ಲದಿದ್ದರೆ, ಅದರಲ್ಲೂ ಪ್ರೀತಿ ಇಲ್ಲದಿದ್ದರೆ ನಿಜ ಸ್ವಾತಂತ್ರ್ಯ ಸಿಗಸಾಧ್ಯವಿಲ್ಲ. ಇಂದಿರುವ ಲೋಕದ ಪರಿಸ್ಥಿತಿ ಇದಕ್ಕೆ ಸಾಕ್ಷಿ. ಪವಿತ್ರಾತ್ಮದಿಂದ ಉಂಟಾಗುವ ಗುಣಗಳನ್ನು ಪಟ್ಟಿಮಾಡಿದ ನಂತರ ಅಪೊಸ್ತಲ ಪೌಲ “ಇವುಗಳನ್ನು ಯಾವ ಧರ್ಮಶಾಸ್ತ್ರವೂ ವಿರೋಧಿಸುವುದಿಲ್ಲ” ಎಂದು ಬರೆದದ್ದು ಆಸಕ್ತಿಕರ. ಇದರ ಅರ್ಥವೇನು? ಯಾವ ನಿಯಮವೂ ಪವಿತ್ರಾತ್ಮ ಉಂಟುಮಾಡುವ ಗುಣಗಳನ್ನು ನಿರ್ಬಂಧಿಸುವುದಿಲ್ಲ. ಆ ಗುಣಗಳನ್ನು ಬೆಳೆಸಿಕೊಳ್ಳಬಾರದೆಂದು ಯಾರ ಮೇಲೂ ಒತ್ತಡ ಹೇರುವುದಿಲ್ಲ. (ಗಲಾ. 5:18) ಅಂಥದೊಂದು ನಿಯಮ ಇದ್ದರೂ ಅದರಿಂದ ಏನಾದರೂ ಪ್ರಯೋಜನ ಇದೆಯಾ ಹೇಳಿ? ಹಾಗಾಗಿ ನಾವು ಕ್ರಿಸ್ತನಲ್ಲಿದ್ದಂಥ ಗುಣಗಳನ್ನು ಬೆಳೆಸಿಕೊಳ್ಳುತ್ತಾ ಯಾವುದೇ ನಿರ್ಬಂಧವಿಲ್ಲದೆ ನಿರಂತರವೂ ಆ ಗುಣಗಳನ್ನು ತೋರಿಸಬೇಕೆಂಬುದೇ ದೇವರ ಇಚ್ಛೆ.

14. ಲೋಕದ ಮನೋಭಾವವನ್ನು ಇಷ್ಟಪಡುವವರು ಹೇಗೆ ಅದರ ದಾಸರಾಗುತ್ತಾರೆ?

14 ಲೋಕದ ಮನೋಭಾವವನ್ನು ಇಷ್ಟಪಡುವ ಜನರು ಮನಸ್ಸೋ ಇಚ್ಛೆಯಂತೆ ವರ್ತಿಸುವುದೇ ನಿಜವಾದ ಸ್ವಾತಂತ್ರ್ಯ ಎಂದು ನೆನಸುತ್ತಾರೆ. (2 ಪೇತ್ರ 2:18, 19 ಓದಿ.) ಅದು ಅವರ ಭ್ರಮೆಯಷ್ಟೆ. ಅವರಲ್ಲಿರುವ ದುರಾಶೆಗಳಿಗೆ, ಕೆಟ್ಟ ನಡತೆಗೆ ಕಡಿವಾಣಹಾಕಲು ಸರ್ಕಾರ ನೂರೆಂಟು ಕಾನೂನು-ಕಾಯಿದೆಗಳನ್ನು ಜಾರಿಗೆ ತರಬೇಕು. ಪೌಲ ಸಹ “[ನಿಯಮವು] ನೀತಿವಂತನಿಗೋಸ್ಕರ ಅಲ್ಲ, ಅಧರ್ಮಿಗಳಿಗೆ, ಸ್ವಚ್ಛಂದವಾಗಿ ವರ್ತಿಸುವವರಿಗೆ” ಎಂದು ಬರೆದಿದ್ದಾನೆ. (1 ತಿಮೊ. 1:9, 10) ಇಂಥ ಜನರು ಪಾಪವೆಂಬ ಕ್ರೂರ ಒಡೆಯನಿಗೆ ದಾಸರಾಗಿದ್ದಾರೆ. ‘ಶರೀರ ಬಯಸುವಂಥ ವಿಷಯಗಳ’ ಹಿಂದೆ ಹೋಗುವಂತೆ ಪಾಪವು ಅವರನ್ನು ಪ್ರೇರಿಸುತ್ತದೆ. (ಎಫೆ. 2:1-3) ಅಂಥವರು ತಮ್ಮ ದುರಾಶೆಗಳನ್ನು ಪೂರೈಸುವ ಆತುರದಲ್ಲಿ ತೊಂದರೆಯಲ್ಲಿ ಸಿಕ್ಕಿಬೀಳುತ್ತಾರೆ. ಜೇನು ತುಪ್ಪದ ಬಟ್ಟಲಿಗಿಳಿದು ಸಿಕ್ಕಿಕೊಳ್ಳುವ ಇರುವೆಗಳಂತೆ.—ಯಾಕೋ. 1:14, 15.

ಕ್ರೈಸ್ತ ಸಭೆಯಲ್ಲಿ ಸಿಗುವ ಸ್ವಾತಂತ್ರ್ಯ

15, 16. (1) ಸಭೆಯೊಂದಿಗೆ ಸಹವಾಸ ಮಾಡುವುದು ಎಷ್ಟು ಪ್ರಾಮುಖ್ಯ? (2) ಅಲ್ಲಿ ನಾವು ಎಂಥ ಸ್ವಾತಂತ್ರ್ಯ ಅನುಭವಿಸುತ್ತೇವೆ?

15 ನೀವು ಯಾವ ಕಾರಣಕ್ಕಾಗಿ ಕ್ರೈಸ್ತ ಸಭೆಗೆ ಬರಲಾರಂಭಿಸಿದಿರಿ? ಇದೊಂದು ಕ್ಲಬ್‌ ಎಂದುಕೊಂಡು ಬಂದಿರಾ? ಇಲ್ಲ. ಯೆಹೋವ ದೇವರು ನಿಮ್ಮನ್ನು ಸೆಳೆದದ್ದರಿಂದಲೇ ಬಂದಿರಿ. (ಯೋಹಾ. 6:44) ದೇವರು ನಿಮ್ಮನ್ನು ಯಾಕೆ ಸೆಳೆದನು? ನೀವು ತುಂಬ ನೀತಿವಂತರು, ಪರಮ ಭಕ್ತರೆಂದುಕೊಂಡಾ? ಖಂಡಿತ ಇಲ್ಲ. ಹಾಗಾದರೆ ನಿಮ್ಮನ್ನು ಸೆಳೆಯಲು ಕಾರಣವೇನು? ಬಿಡುಗಡೆಯನ್ನು ತರುವ ಆತನ ನಿಯಮವನ್ನು ಸ್ವೀಕರಿಸುವ, ಆತನ ಮಾರ್ಗದರ್ಶನೆಯನ್ನು ಪಾಲಿಸುವ ಒಳ್ಳೇ ಹೃದಯ ನಿಮ್ಮಲ್ಲಿರುವುದನ್ನು ಆತನು ಕಂಡನು. ಸಭೆಯ ಮೂಲಕ ನಿಮ್ಮನ್ನು ಆಧ್ಯಾತ್ಮಿಕವಾಗಿ ಪೋಷಿಸುತ್ತಾ ಧಾರ್ಮಿಕ ಸುಳ್ಳುಗಳು, ಮೂಢನಂಬಿಕೆಗಳಿಂದ ಸ್ವತಂತ್ರಗೊಳಿಸಿ ಕ್ರಿಸ್ತನಲ್ಲಿದ್ದಂಥ ಗುಣಗಳನ್ನು ಬೆಳೆಸಿಕೊಳ್ಳಲು ಆತನು ಸಹಾಯ ಮಾಡಿದ್ದಾನೆ. (ಎಫೆಸ 4:22-24 ಓದಿ.) ಹೀಗಾಗಿ ‘ಸ್ವತಂತ್ರ ಜನರು’ ಎಂದು ಕರೆಯಲ್ಪಡುವ ಏಕಮಾತ್ರ ಗುಂಪಿನಲ್ಲಿ ಒಬ್ಬರಾಗುವ ಮಹಾ ಸುಯೋಗ ನಮಗೆ ಸಿಕ್ಕಿದೆ!—ಯಾಕೋ. 2:12.

16 ಈ ಸನ್ನಿವೇಶ ತೆಗೆದುಕೊಳ್ಳಿ: ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸುವ ಜನರೊಂದಿಗೆ ಇರುವಾಗ ನಿಮಗೆ ಭಯವಾಗುತ್ತದಾ? ರಾಜ್ಯ ಸಭಾಗೃಹದಲ್ಲಿ ಸಹೋದರ ಸಹೋದರಿಯರೊಂದಿಗೆ ಮಾತಾಡುತ್ತಿರುವಾಗ ನಿಮ್ಮ ಬ್ಯಾಗು, ವಸ್ತುಗಳು ಎಲ್ಲಿ ಕಾಣೆಯಾಗುತ್ತವೋ ಎಂದು ಕೈಯಲ್ಲೇ ಹಿಡಿದುಕೊಂಡಿರುತ್ತೀರಾ? ಇಲ್ಲ ಅಲ್ಲವೆ? ಅದೇ ನಮಗಿರುವ ಸ್ವಾತಂತ್ರ್ಯ. ಲೋಕದ ಜನರ ಯಾವುದಾದರೂ ಸಮಾರಂಭಕ್ಕೆ ಹೋದರೆ ಇದೇ ಸ್ವಾತಂತ್ರ್ಯ ಸಿಗುತ್ತದಾ ಹೇಳಿ? ಇಲ್ಲ. ಆದರೆ ದೇವಜನರೊಂದಿಗೆ ಇರುವಾಗ ನಾವೆಷ್ಟು ಹಾಯಾಗಿರುತ್ತೇವೆ! ಇದು ಮುಂದೆ ಅನುಭವಿಸಲಿರುವ ಸ್ವಾತಂತ್ರ್ಯದ ತುಣುಕಷ್ಟೇ. ಇದನ್ನು ಹೊಸ ಲೋಕದಲ್ಲಿ ಭರಪೂರವಾಗಿ ಅನುಭವಿಸಲಿದ್ದೇವೆ!

ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯ”

17. ಮಾನವಕುಲ ಸ್ವಾತಂತ್ರ್ಯ ಅನುಭವಿಸುವುದಕ್ಕೂ ‘ದೇವರ ಪುತ್ರರು ಪ್ರಕಟವಾಗುವುದಕ್ಕೂ’ ಏನು ಸಂಬಂಧ?

17 ಭವಿಷ್ಯತ್ತಿನಲ್ಲಿ ಯೆಹೋವನು ತನ್ನ ಜನರಿಗೆ ಕೊಡಲಿರುವ ಸ್ವಾತಂತ್ರ್ಯದ ಬಗ್ಗೆ ಪೌಲನು ಹೀಗೆ ಬರೆದನು: “ದೇವರ ಪುತ್ರರು ಪ್ರಕಟವಾಗುವುದಕ್ಕಾಗಿ ಸೃಷ್ಟಿಯು ಬಹಳ ತವಕದಿಂದ ಎದುರುನೋಡುತ್ತಿದೆ.” ಮುಂದುವರಿಸುತ್ತಾ “ಸೃಷ್ಟಿಯು ಸಹ ನಾಶದ ದಾಸತ್ವದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು” ಹೊಂದುವುದು ಎಂದು ಹೇಳಿದನು. (ರೋಮ. 8:19-21) ಇಲ್ಲಿ ಹೇಳಲಾಗಿರುವ “ಸೃಷ್ಟಿ” ಭೂಮಿ ಮೇಲೆ ಸದಾ ಜೀವಿಸುವ ನಿರೀಕ್ಷೆಯಿರುವ ಮಾನವರಾಗಿದ್ದಾರೆ. ಅವರು ದೇವರ ಆತ್ಮಾಭಿಷಿಕ್ತ ಪುತ್ರರು ‘ಪ್ರಕಟವಾಗುವುದರಿಂದ’ ಪ್ರಯೋಜನ ಪಡೆಯುತ್ತಾರೆ. ಹಾಗಾದರೆ ದೇವರ ಪುತ್ರರ ಪ್ರಕಟಗೊಳ್ಳುವಿಕೆ ಯಾವಾಗ ಆರಂಭವಾಗುವುದು? ಸ್ವರ್ಗದಲ್ಲಿರುವ ಈ ಪುತ್ರರು ಭೂಮಿಯಿಂದ ದುಷ್ಟತನವನ್ನು ನಿರ್ಮೂಲಮಾಡಲು ಮತ್ತು ‘ಮಹಾ ಸಮೂಹವನ್ನು’ ಹೊಸ ಲೋಕಕ್ಕೆ ಸೇರಿಸಲು ಕ್ರಿಸ್ತನಿಗೆ ಸಹಾಯಮಾಡುವಾಗ ಇದು ಆರಂಭವಾಗುತ್ತದೆ.—ಪ್ರಕ. 7:9, 14.

18. (1) ಮಾನವರು ಹೆಚ್ಚು ಸ್ವಾತಂತ್ರ್ಯವನ್ನು ಹೇಗೆ ಪಡೆಯುವರು? (2) ಅಂತಿಮವಾಗಿ ಅವರು ಯಾವ ಸ್ವಾತಂತ್ರ್ಯ ಅನುಭವಿಸುವರು?

18 ನೂತನ ಲೋಕವನ್ನು ಪ್ರವೇಶಿಸಿದ ನಂತರ ಮಾನವರು ಸೈತಾನನ, ದೆವ್ವಗಳ ಪ್ರಭಾವದಿಂದ ಮುಕ್ತರಾಗುವರು! (ಪ್ರಕ. 20:1-3) ಹಿಂದೆಂದೂ ಅನುಭವಿಸಿಲ್ಲದ ಆ ಸ್ವಾತಂತ್ರ್ಯ ಸಿಗುವಾಗ ನಮಗೆಷ್ಟು ನಿರಾಳ ಅನಿಸುವುದು! ಅದರ ನಂತರ ಕ್ರಿಸ್ತನು ಮತ್ತು ಅವನೊಂದಿಗೆ ಯಾಜಕರಾಗಿಯೂ ರಾಜರಾಗಿಯೂ ಆಳುವ 1,44,000 ಮಂದಿ ವಿಮೋಚನಾ ಮೌಲ್ಯ ಯಜ್ಞದಿಂದ ಭೂಮಿಯಲ್ಲಿರುವ ಮಾನವರು ಸಂಪೂರ್ಣ ಪ್ರಯೋಜನ ಹೊಂದುವಂತೆ ಸಹಾಯಮಾಡುವರು. ನಮ್ಮನ್ನು ಹಂತ ಹಂತವಾಗಿ ಪರಿಪೂರ್ಣತೆಗೆ ಕೊಂಡೊಯ್ಯುವರು. ಕೊನೆಗೆ ಮನುಷ್ಯರು ಪಾಪ ಮತ್ತು ಅಪರಿಪೂರ್ಣತೆಯಿಂದ ಸಂಪೂರ್ಣ ಮುಕ್ತರಾಗುವರು. (ಪ್ರಕ. 5:9, 10) ಪರೀಕ್ಷೆಗಳ ಎದುರಿನಲ್ಲೂ ನಂಬಿಗಸ್ತರಾಗಿ ಉಳಿದಿದ್ದ ಈ ಮಾನವರು ಯೆಹೋವನು ಅವರಿಗಾಗಿ ಕಾದಿರಿಸಿದ್ದ ಪರಿಪೂರ್ಣತೆಯೆಂಬ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವರು. ಅದೇ “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯ”!! ಆಗ ನಾವು ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಲು ನಮ್ಮ ಅಪರಿಪೂರ್ಣ ಪ್ರವೃತ್ತಿಯ ವಿರುದ್ಧ ಹೋರಾಡಬೇಕಿಲ್ಲ. ಏಕೆಂದರೆ ನಮ್ಮ ತನುಮನವೆಲ್ಲ ಪರಿಪೂರ್ಣವಾಗಿರುವುದು. ನಮ್ಮ ವ್ಯಕ್ತಿತ್ವವು ಸಂಪೂರ್ಣವಾಗಿ ದೇವಸ್ವರೂಪಕ್ಕೆ ತಕ್ಕಂತೆ ಇರುವುದು.

19. “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು” ಪಡೆಯಲು ಈಗ ನಾವೇನು ಮಾಡಬೇಕು?

19 “ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು” ಪಡೆಯಲು ನಿಮ್ಮ ಮನಸ್ಸು ತವಕಿಸುತ್ತಿದೆಯಲ್ಲವೆ? ಹಾಗಿದ್ದಲ್ಲಿ “[ಸ್ವಾತಂತ್ರ್ಯಕ್ಕೆ] ಸೇರಿರುವ ಪರಿಪೂರ್ಣ ನಿಯಮ” ನಿಮ್ಮ ಹೃದಮನವನ್ನು ಪ್ರಭಾವಿಸುವಂತೆ ಬಿಟ್ಟುಕೊಡಿ. ಅದಕ್ಕಾಗಿ ಬೈಬಲನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿ. ನೀವು ಸತ್ಯದಲ್ಲಿರುವುದು ಮಾತ್ರವಲ್ಲ, ಸತ್ಯ ನಿಮ್ಮಲ್ಲಿದೆ ಎಂದು ಖಚಿತಮಾಡಿಕೊಳ್ಳಿ. ಪವಿತ್ರಾತ್ಮ ಶಕ್ತಿ ಕೊಡುವಂತೆ ದೇವರಲ್ಲಿ ಬೇಡಿರಿ. ಯೆಹೋವನು ಕೊಡುತ್ತಿರುವ ಆಧ್ಯಾತ್ಮಿಕ ಆಹಾರದಿಂದ, ಕ್ರೈಸ್ತ ಕೂಟಗಳಿಂದ ಪ್ರಯೋಜನ ಪಡೆಯಿರಿ. ಯೆಹೋವನ ನಿಯಮಗಳು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತವೆ ಎಂದು ನೆನಸಿ ಮೋಸಹೋಗಬೇಡಿ. ಹವ್ವಳನ್ನು ಕೂಡ ಸೈತಾನನು ಹೀಗೆ ನೆನಸುವಂತೆ ಮಾಡಿ ವಂಚಿಸಿದ್ದನು. ಈಗಲೂ ಸೈತಾನನೇನು ಕೈಕಟ್ಟಿ ಕುಳಿತಿಲ್ಲ. ತನ್ನ ಚಾಣಾಕ್ಷ್ಯತೆಯನ್ನು ತೋರಿಸುತ್ತಿದ್ದಾನೆ. ಆದರೆ “ನಾವು ಸೈತಾನನ ವಶಕ್ಕೆ” ಒಳಗಾಗಬೇಕೆಂದಿಲ್ಲ. “ಏಕೆಂದರೆ ಅವನ ಕುತಂತ್ರಗಳ ವಿಷಯದಲ್ಲಿ ನಾವು ಅಜ್ಞಾನಿಗಳಾಗಿರುವುದಿಲ್ಲ.” ಮುಂದಿನ ಲೇಖನದಲ್ಲಿ ಈ ವಿಷಯವನ್ನೇ ಚರ್ಚಿಸುವೆವು.—2 ಕೊರಿಂ. 2:11.

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರಗಳು]

ಈ ಲೋಕ ಕೊಡುವ ಸ್ವಾತಂತ್ರ್ಯ ನನ್ನನ್ನು ಸೆಳೆಯುತ್ತಿದೆಯಾ?

[ಪುಟ 9ರಲ್ಲಿರುವ ಚಿತ್ರ]

ಜೀವನದ ಎಲ್ಲ ಕ್ಷೇತ್ರಗಳಲ್ಲಿ ಸತ್ಯಕ್ಕೆ ಹೊಂದಿಕೆಯಲ್ಲಿ ನಡೆಯುತ್ತಿದ್ದೇನಾ?