ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ವಾತಂತ್ರ್ಯ ಕೊಡುವ ದೇವರಾದ ಯೆಹೋವನ ಸೇವೆಮಾಡಿ

ಸ್ವಾತಂತ್ರ್ಯ ಕೊಡುವ ದೇವರಾದ ಯೆಹೋವನ ಸೇವೆಮಾಡಿ

ಸ್ವಾತಂತ್ರ್ಯ ಕೊಡುವ ದೇವರಾದ ಯೆಹೋವನ ಸೇವೆಮಾಡಿ

“ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.” —1 ಯೋಹಾ. 5:3.

ಉತ್ತರಿಸಬಲ್ಲಿರಾ?

ದೇವರ ನಿಯಮಗಳು ಭಾರವಾದವುಗಳು ಎಂದು ನಾವು ನೆನಸುವಂತೆ ಮಾಡಲು ಸೈತಾನನು ಹೇಗೆ ಪ್ರಯತ್ನಿಸುತ್ತಾನೆ?

ನಾವು ಸ್ನೇಹಿತರನ್ನು ಜಾಗ್ರತೆಯಿಂದ ಆರಿಸಿಕೊಳ್ಳಬೇಕು ಏಕೆ?

ಸ್ವಾತಂತ್ರ್ಯ ಕೊಡುವ ದೇವರಾದ ಯೆಹೋವನಿಗೆ ನಿಷ್ಠರಾಗಿ ಉಳಿಯಲು ಯಾವುದು ಸಹಾಯ ಮಾಡುತ್ತದೆ?

1. (1) ಯೆಹೋವನು ತನಗಿರುವ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸುತ್ತಾನೆ? (2) ಆದಾಮ ಹವ್ವರಿಗೆ ಆತನು ಎಷ್ಟು ಸ್ವಾತಂತ್ರ್ಯ ಕೊಟ್ಟನು?

ಅಪರಿಮಿತ ಸ್ವಾತಂತ್ರ್ಯವಿರುವುದು ಯೆಹೋವ ದೇವರಿಗೆ ಮಾತ್ರ. ಹಾಗಂತ ಆತನು ಆ ಸ್ವಾತಂತ್ರ್ಯವನ್ನು ದುರುಪಯೋಗಿಸುವುದಿಲ್ಲ. ತನ್ನ ಸೇವಕರಿಗೆ ಹೆಜ್ಜೆ ಹೆಜ್ಜೆಗೂ ನಿಯಮಗಳ ಮೇರೆಯನ್ನೆಳೆದು ಅವರನ್ನು ನಿಯಂತ್ರಿಸುವುದಿಲ್ಲ. ಆತನು ಅವರಿಗೆ ಉದಾರವಾಗಿ ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದಾನೆ. ಏನನ್ನು ಹೇಗೆ ಮಾಡಬೇಕೆಂದು ಅವರೇ ಯೋಚಿಸಿ ನಿರ್ಧರಿಸುವಂತೆ ಹಾಗೂ ತಮ್ಮ ಯೋಗ್ಯ ಇಚ್ಛೆಗಳನ್ನು ಪೂರೈಸಿಕೊಳ್ಳುವಂತೆ ಆತನು ಬಿಟ್ಟಿದ್ದಾನೆ. ಆದಾಮ ಹವ್ವರ ಕುರಿತೇ ಯೋಚಿಸಿ. ದೇವರು ಅವರಿಗೆ ಮಾಡಬಾರದೆಂದು ಹೇಳಿದ್ದು ಒಂದೇ ಒಂದು ವಿಷಯವನ್ನು. ಅವರು “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು” ತಿನ್ನಬಾರದಿತ್ತು. (ಆದಿ. 2:17) ದೇವರ ಚಿತ್ತವನ್ನು ಮಾಡುತ್ತಾ ಮುಂದುವರಿಯುವಾಗ ಅವರು ಭರಪೂರ ಸ್ವಾತಂತ್ರ್ಯ ಅನುಭವಿಸಲಿದ್ದರು.

2. ದೇವರು ಕೊಟ್ಟಿದ್ದ ಸ್ವಾತಂತ್ರ್ಯವನ್ನು ನಮ್ಮ ಪ್ರಥಮ ಹೆತ್ತವರು ಹೇಗೆ ಕಳೆದುಕೊಂಡರು?

2 ದೇವರು ಅವರಿಗೆ ಅಷ್ಟೊಂದು ಸ್ವಾತಂತ್ರ್ಯ ಏಕೆ ಕೊಟ್ಟನು? ಆತನು ಅವರನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದ್ದನು ಮತ್ತು ಮನಸ್ಸಾಕ್ಷಿ ಕೊಟ್ಟಿದ್ದನು. ಹಾಗಾಗಿ ಅವರು ಸೃಷ್ಟಿಕರ್ತನಾದ ತನಗೆ ಪ್ರೀತಿ ತೋರಿಸಿ ತಾನು ಬಯಸುವ ಮಾರ್ಗದಲ್ಲೇ ನಡೆಯುತ್ತಾರೆ ಎಂದು ಯೆಹೋವನು ಎದುರುನೋಡಿದನು. (ಆದಿ. 1:27; ರೋಮ. 2:15) ಆದರೆ ಆದಾಮ ಹವ್ವ ಏನು ಮಾಡಿದರು? ದೇವರಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸಿದರು. ತಮಗೆ ಸ್ವಾತಂತ್ರ್ಯವನ್ನು ಕೊಟ್ಟ ಸೃಷ್ಟಿಕರ್ತನಿಗೆ ಕೃತಜ್ಞತೆ ತೋರಿಸಲಿಲ್ಲ. ಸೈತಾನನು ಅಯುಕ್ತವಾದ ಸ್ವಾತಂತ್ರ್ಯದ ಆಶೆ ತೋರಿಸಿದಾಗ ಅದರ ಹಿಂದೆ ಹೋದರು. ಸರಿ ಯಾವುದು ತಪ್ಪು ಯಾವುದು ಎಂದು ತಾವೇ ನಿರ್ಣಯಿಸಲು ಮುಂದಾದರು. ಇದರಿಂದ ಅವರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತಾ? ಇಲ್ಲ. ಸ್ವಾತಂತ್ರ್ಯದ ಬದಲಿಗೆ ಅವರು ಪಾಪದ ಅಡಿಯಾಳಾದರು. ತಮ್ಮ ಸಂತತಿಯೂ ಪಾಪಕ್ಕೆ ದಾಸರಾಗಿ ವಿಪತ್ಕಾರಕ ಪರಿಣಾಮಗಳನ್ನು ಅನುಭವಿಸುವಂತೆ ಮಾಡಿದರು.—ರೋಮ. 5:12.

3, 4. ದೇವರ ಮಟ್ಟಗಳ ಕುರಿತು ನಾವೇನು ನೆನಸುವಂತೆ ಸೈತಾನನು ಮಾಡುತ್ತಾನೆ?

3 ಸೈತಾನನು ಇಬ್ಬರು ಪರಿಪೂರ್ಣ ಮನುಷ್ಯರನ್ನು ಮತ್ತು ಅನೇಕ ದೇವದೂತರನ್ನೇ ವಂಚಿಸಿ ದೇವರ ಪರಮಾಧಿಕಾರಕ್ಕೆ ತಿರುಗಿಬೀಳುವಂತೆ ಮಾಡಿರಬೇಕಾದರೆ ನಮ್ಮನ್ನು ಬಿಟ್ಟಾನೇ? ಸೈತಾನನ ಕುತಂತ್ರ ಇಂದಿಗೂ ಬದಲಾಗಿಲ್ಲ. ದೇವರ ಮಟ್ಟಗಳು ಪಾಲಿಸಲು ಕಷ್ಟ, ಅದನ್ನು ಪಾಲಿಸುವುದಾದರೆ ಜೀವನ ಸಪ್ಪೆಯಾಗಿರುತ್ತದೆ ಎಂದು ನಾವು ನೆನಸುವಂತೆ ಮಾಡಲು ಪ್ರಯತ್ನಿಸುತ್ತಾನೆ. (1 ಯೋಹಾ. 5:3) ಇಂಥ ಆಲೋಚನೆಯಿರುವ ಜನರೊಂದಿಗೆ ನಾವು ಹೆಚ್ಚೆಚ್ಚು ಬೆರೆಯುವಾಗ ಆ ಯೋಚನೆ ನಮ್ಮಲ್ಲೂ ಬೇರೂರಬಲ್ಲದು. 24 ವರ್ಷದ ಸಹೋದರಿ ಹೇಳುವುದು: “ನಾನು ನನ್ನ ಫ್ರೆಂಡ್ಸ್‌ ಥರ ಇಲ್ಲಾಂದ್ರೆ ನನ್ನನ್ನೆಲ್ಲಿ ದೂರಮಾಡ್ತಾರೋ ಎಂಬ ಹೆದರಿಕೆ ನನಗಿತ್ತು. ಅವರ ಸಹವಾಸ ನನ್ನ ಮೇಲೆ ತುಂಬ ಪ್ರಭಾವ ಬೀರಿತು.” ಆ ಪ್ರಭಾವದ ಕಾರಣ ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿದಳು. ಇಂಥ ಒತ್ತಡ ನಿಮಗೂ ಬಂದಿರಬಹುದು ಅಲ್ಲವೆ?

4 ಇಂಥ ಕೆಟ್ಟ ಪ್ರಭಾವ ಸಭೆಯಲ್ಲಿರುವವರಿಂದಲೂ ಬರಬಹುದು. ಯುವ ಸಾಕ್ಷಿಯೊಬ್ಬಳಿಗೂ ಹೀಗಾಯಿತು. “ಸಭೆಯಲ್ಲಿರೋ ನನ್ನ ಕೆಲವು ಫ್ರೆಂಡ್ಸ್‌ ಹೊರಗಿನವರೊಟ್ಟಿಗೆ ಡೇಟಿಂಗ್‌ ಮಾಡ್ತಿದ್ದರು. ಅವರೊಂದಿಗೆ ಹೆಚ್ಚೆಚ್ಚು ಸಹವಾಸ ಮಾಡಿದ್ರಿಂದ ನಾನೂ ಅವರ ಹಾಗೇ ಆಗ್ತಿದ್ದೆ. ಆಧ್ಯಾತ್ಮಿಕ ವಿಷಯದಲ್ಲಿ ಹಿಂದೆಬಿದ್ದೆ. ಕೂಟಗಳು ಬೋರ್‌ ಅನಿಸುತ್ತಿದ್ದವು. ಸೇವೆಗಂತೂ ಸರಿಯಾಗಿ ಹೋಗ್ತಾನೇ ಇರ್ಲಿಲ್ಲ. ಇನ್ನು ಇವರೊಟ್ಟಿಗೆ ಫ್ರೆಂಡ್‌ಶಿಪ್‌ ಇಟ್ಟುಕೊಂಡರೆ ಅಪಾಯ ತಪ್ಪಿದ್ದಲ್ಲ ಅಂತ ಅವರಿಂದ ದೂರವಾದೆ” ಎನ್ನುತ್ತಾಳೆ ಅವಳು. ನಿಮ್ಮ ಕುರಿತೇನು? ನಿಮ್ಮ ಸ್ನೇಹಿತರು ನಿಮ್ಮ ಮೇಲೆ ಬೀರುವ ಪ್ರಭಾವ ಎಷ್ಟೆಂದು ಅರಿತಿದ್ದೀರಾ? ಇದನ್ನು ತಿಳಿಯಲು ಬೈಬಲ್‌ನಿಂದ ಒಂದು ಉದಾಹರಣೆ ನೋಡೋಣ.—ರೋಮ. 15:4.

ಅವರ ಮನಸ್ಸನ್ನು ತನ್ನೆಡೆಗೆ ತಿರುಗಿಸಿಕೊಂಡನು

5, 6. (1) ಅಬ್ಷಾಲೋಮನು ಹೇಗೆ ಜನರನ್ನು ವಂಚಿಸಿದನು? (2) ಅವನ ಸಂಚು ಸಫಲವಾಯಿತೇ?

5 ಇತರರ ಮೇಲೆ ಕೆಟ್ಟ ಪ್ರಭಾವ ಬೀರಿದ ಅನೇಕರ ಉದಾಹರಣೆಗಳು ಬೈಬಲ್‌ನಲ್ಲಿವೆ. ಅವರಲ್ಲೊಬ್ಬನು ರಾಜ ದಾವೀದನ ಮಗ ಅಬ್ಷಾಲೋಮ. ನೋಡಲು ಬಲು ಸುಂದರನಾಗಿದ್ದ ಇವನು ಸೈತಾನನಂತೆ ಹೆಬ್ಬಯಕೆಯನ್ನು ಬೆಳೆಸಿಕೊಂಡು ತನ್ನದಲ್ಲದ ಅಧಿಕಾರಕ್ಕಾಗಿ ಆಶಿಸತೊಡಗಿದನು. * ತಂದೆಯ ರಾಜತ್ವವನ್ನು ಕಿತ್ತುಕೊಳ್ಳಲು ಸಂಚುಹೂಡಿದನು. ಜನರನ್ನು ತನ್ನ ಕಡೆಗೆ ತಿರುಗಿಸಿಕೊಳ್ಳಲು ಅವರ ಕಷ್ಟಗಳಿಗೆ ಮರುಗುವವನಂತೆ ನಟಿಸಿದನು. ರಾಜ ದಾವೀದನಿಗೆ ಜನರ ಬಗ್ಗೆ ಕಳಕಳಿಯೇ ಇಲ್ಲ ಎಂಬಂತೆ ಬಿಂಬಿಸಿದನು. ಸೈತಾನನು ಏದೆನ್‌ ತೋಟದಲ್ಲಿ ಮಾಡಿದಂತೆ ಅಬ್ಷಾಲೋಮನು ಹಿತಚಿಂತಕನೆಂಬ ಸೋಗು ಹಾಕಿ ತಂದೆಯ ವಿರುದ್ಧ ಇಲ್ಲಸಲ್ಲದ ಸುಳ್ಳುಹೇಳಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದನು.—2 ಸಮು. 15:1-5.

6 ಅಬ್ಷಾಲೋಮ ಮಾಡಿದ ಸಂಚು ಸಫಲವಾಯಿತೇ? ಸ್ವಲ್ಪಮಟ್ಟಿಗೆ ಹೌದೆನ್ನಬಹುದು. ಏಕೆಂದರೆ “ಅಬ್ಷಾಲೋಮನು ಹೀಗೆಯೇ ಮಾಡಿ ಎಲ್ಲರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿಕೊಂಡನು” ಎಂದು ಬೈಬಲ್‌ ಹೇಳುತ್ತದೆ. (2 ಸಮು. 15:6) ಆದರೆ ಕೊನೆಗೆ ಅವನ ದುರಹಂಕಾರ ಅವನನ್ನು ಸರ್ವನಾಶ ಮಾಡಿತು. ಅವನಿಂದ ವಂಚಿಸಲ್ಪಟ್ಟು ಅವನ ಹಿಂದೆ ಹೋದ ಸಾವಿರಾರು ಜನರು ಸಹ ಪ್ರಾಣ ಕಳಕೊಂಡರು.—2 ಸಮು. 18:7, 14-17.

7. ಅಬ್ಷಾಲೋಮನ ಉದಾಹರಣೆಯಿಂದ ನಾವೇನು ಕಲಿಯುತ್ತೇವೆ? (ಪುಟ 14ರ ಚಿತ್ರ ನೋಡಿ.)

7 ಅಬ್ಷಾಲೋಮನು ವಂಚಿಸುತ್ತಿದ್ದಾನೆಂದು ಗ್ರಹಿಸದೆ ಇಸ್ರಾಯೇಲ್ಯರು ಅವನನ್ನು ನಂಬಲು ಕಾರಣವೇನು? ಅವನು ನೀಡಿದ ಆಶ್ವಾಸನೆಗಳಿಗೆ ಮರುಳಾದರೋ? ಹೊರತೋರಿಕೆಯನ್ನು ನೋಡಿ ಮೋಸಹೋದರೋ? ಅದೇನೇ ಆಗಿರಲಿ ದೇವರಿಗೆ ಮತ್ತು ಆತನು ನೇಮಿಸಿದ ರಾಜನಾದ ದಾವೀದನಿಗೆ ಅವರು ನಿಷ್ಠೆ ತೋರಿಸಲಿಲ್ಲ. ಇಂದು ಸೈತಾನನು ಅಬ್ಷಾಲೋಮರಂಥ ವ್ಯಕ್ತಿಗಳನ್ನು ಬಳಸಿ ಯೆಹೋವನ ಸೇವಕರ ಮನಸ್ಸನ್ನು ತನ್ನೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾನೆ. ‘ಯೆಹೋವನ ನಿಮಯಗಳು ತುಂಬ ಕಟ್ಟುನಿಟ್ಟು, ಹೊರಗಿನವರು ಎಷ್ಟು ಮಜಾ ಮಾಡ್ತಾರೆ, ನಾವು ಮಾತ್ರ ಜೈಲಲ್ಲಿರೋ ಥರ ಇದ್ದೇವೆ’ ಎಂದು ಅಂಥ ವ್ಯಕ್ತಿಗಳು ಹೇಳಬಹುದು. ಇಂಥ ಮಾತುಗಳಿಗೆ ನೀವು ಮರುಳಾಗುವಿರಾ? ಅಥವಾ ಇವು ಸೈತಾನನಿಂದ ಪ್ರೇರಿಸಲ್ಪಟ್ಟ ಹೇಯವಾದ ಸುಳ್ಳುಗಳೆಂದು ಗ್ರಹಿಸಿ ದೇವರಿಗೆ ನಿಷ್ಠರಾಗಿ ಉಳಿಯುತ್ತೀರಾ? ಯೆಹೋವನ “ಪರಿಪೂರ್ಣ ನಿಯಮ” ಅಂದರೆ ಕ್ರಿಸ್ತನ ನಿಯಮದಿಂದ ಮಾತ್ರವೇ ನಿಜ ಸ್ವಾತಂತ್ರ್ಯ ಸಿಗುತ್ತದೆ ಎಂದು ಸಂಪೂರ್ಣವಾಗಿ ನಂಬುತ್ತೀರಾ? (ಯಾಕೋ. 1:25) ಆ ನಂಬಿಕೆಯಿರುವಲ್ಲಿ ಯೆಹೋವನ ನಿಯಮವನ್ನು ಪ್ರೀತಿಸಿ ಪಾಲಿಸಿರಿ. ಅದರಿಂದ ಸಿಗುವ ಸ್ವಾತಂತ್ರ್ಯವನ್ನು ಎಂದಿಗೂ ದುರುಪಯೋಗಿಸಬೇಡಿ.1 ಪೇತ್ರ 2:16 ಓದಿ.

8. ಯೆಹೋವನ ಮಟ್ಟಗಳಿಗೆ ಅವಿಧೇಯರಾಗುವುದರಿಂದ ಸಂತೋಷ ಸಿಗುವುದಿಲ್ಲ ಎಂದು ಯಾವ ಅನುಭವಗಳು ತೋರಿಸುತ್ತವೆ?

8 ಯುವಜನರು ಸೈತಾನನ ಮುಖ್ಯಗುರಿಯಾಗಿದ್ದಾರೆ. ಈಗ 30ರ ಹರೆಯದಲ್ಲಿರುವ ಸಹೋದರನೊಬ್ಬ ತನ್ನ ಹದಿವಯಸ್ಸಿನ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾ ಹೀಗಂದನು: “ಯೆಹೋವನಿಟ್ಟ ನೈತಿಕ ನಿಯಮಗಳು ನನ್ನ ಸಂರಕ್ಷಣೆಗಾಗಿ ಇವೆ ಎಂದು ನೆನಸಲಿಲ್ಲ. ಅವು ನನ್ನ ಕೈಕಾಲು ಕಟ್ಟಿಹಾಕುತ್ತಿವೆ ಎಂಬಂತೆ ಭಾಸವಾಗುತ್ತಿತ್ತು.” ಇಂಥ ಯೋಚನೆಯಿಂದಾಗಿ ಅವನು ಲೈಂಗಿಕ ಅನೈತಿಕತೆಗೆ ಬಲಿಬಿದ್ದನು. ನೆನಸಿದಂತೆ ಇದರಿಂದ ಅವನಿಗೆ ಸಂತೋಷ ಸಿಗಲಿಲ್ಲ. “ಎಷ್ಟೋ ವರ್ಷಗಳ ವರೆಗೆ ಅಪರಾಧಿ ಭಾವ ನನ್ನಲ್ಲಿತ್ತು. ದುಃಖದಿಂದ ಹೃದಯ ಭಾರವಾಗಿತ್ತು” ಎನ್ನುತ್ತಾನವನು. ಇನ್ನೊಬ್ಬ ಸಹೋದರಿ ತನ್ನ ಹದಿವಯಸ್ಸಿನಲ್ಲಾದ ಘಟನೆ ಜ್ಞಾಪಿಸಿಕೊಳ್ಳುತ್ತಾ “ಅನೈತಿಕತೆಯಲ್ಲಿ ಒಳಗೂಡಿದ ಮೇಲೆ ಭಾವಶೂನ್ಯತೆ ಆವರಿಸಿತು. ಯಾವುದಕ್ಕೂ ನಾನು ಯೋಗ್ಯಳಲ್ಲ ಎಂಬ ಕೀಳರಿಮೆ ಮನೆಮಾಡಿತು. ಈಗ 19 ವರ್ಷಗಳ ನಂತರವೂ ಆ ಕಹಿನೆನಪುಗಳು ಮರುಕಳಿಸುತ್ತಿವೆ” ಎಂದು ಹೇಳಿದಳು. ಇನ್ನೊಬ್ಬ ಸಹೋದರಿ ಹೇಳಿದ್ದು: “ನನ್ನ ಕೆಟ್ಟ ನಡತೆಯಿಂದ ನನ್ನ ಆಪ್ತರು ಎಷ್ಟು ನೊಂದರು ಎಂಬುದನ್ನು ಯೋಚಿಸುವಾಗೆಲ್ಲ ಅದು ನನ್ನನ್ನು ಮಾನಸಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕವಾಗಿ ಛಿದ್ರಗೊಳಿಸಿತು. ಯೆಹೋವನ ಅನುಗ್ರಹವಿಲ್ಲದ ಬದುಕು ಹೀನಾಯವಾದ ಬದುಕು.” ಪಾಪದ ಇಂಥ ಪರಿಣಾಮಗಳ ಬಗ್ಗೆ ನಾವು ಯೋಚಿಸಬಾರದು ಅನ್ನೋದೇ ಸೈತಾನನ ಇಚ್ಛೆ.

9. (1) ಯೆಹೋವನ ಹಾಗೂ ಆತನ ನಿಯಮ, ಮೂಲತತ್ವಗಳ ಬಗ್ಗೆ ನಮಗೆ ಯಾವ ಭಾವನೆಯಿದೆ ಎಂದು ಪರೀಕ್ಷಿಸಲು ಯಾವ ಪ್ರಶ್ನೆಗಳು ಸಹಾಯ ಮಾಡುತ್ತವೆ? (2) ಯೆಹೋವನನ್ನು ನಾವು ಏಕೆ ಚೆನ್ನಾಗಿ ತಿಳಿದಿರಬೇಕು?

9 ಲೋಕ ಕೊಡುವ ಮೋಜು ಸಂತೋಷವನ್ನಲ್ಲ, ಅತೀವ ದುಃಖವನ್ನು ಕೊಡುತ್ತದೆ, ಅದು ಸೈತಾನನ ವಂಚನೆಯಾಗಿದೆ. ವಿಷಾದಕರವಾಗಿ ಈ ಸತ್ಯವನ್ನು ಅನೇಕ ಯುವಜನರೂ ದೊಡ್ಡವರೂ ಕಹಿ ಅನುಭವದಿಂದ ಕಲಿತುಕೊಂಡಿದ್ದಾರೆ. (ಗಲಾ. 6:7, 8) ನಾವು ವಂಚನೆಗೆ ಬಲಿಯಾಗದಿರಲು ಸ್ವಪರೀಕ್ಷೆ ಮಾಡಿಕೊಳ್ಳುತ್ತಿರೋಣ. ಹೀಗೆ ಕೇಳಿಕೊಳ್ಳಿ: ‘ಲೋಕದ ಮೋಜು ನನ್ನನ್ನು ಸೆಳೆಯುತ್ತಿರುವಾಗ ಅದರ ಹಿಂದೆ ಕ್ರೂರಿ ಸೈತಾನನ ಕೈವಾಡ ಇದೆಯೆಂದು ನಾನು ತಿಳಿದುಕೊಳ್ಳುತ್ತೇನಾ? ಯೆಹೋವನು ನನ್ನ ಅತ್ಯಾಪ್ತ ಮಿತ್ರನಾಗಿದ್ದಾನಾ? ಆತನು ಸತ್ಯಸಂಗತಿಯನ್ನೇ ತಿಳಿಸುತ್ತಾನೆ, ಆತನು ಹೇಳುವುದೆಲ್ಲ ನನ್ನ ಒಳಿತಿಗಾಗಿ ಎಂದು ನಂಬುತ್ತೇನಾ? ನನಗೆ ಒಳ್ಳೇದಾಗುವ, ನಾನು ಸಂತೋಷದಿಂದಿರಲು ಸಹಾಯಮಾಡುವ ವಿಷಯವಿದ್ದರೆ ಅದನ್ನವನು ನನಗೆ ಕೊಟ್ಟೇ ಕೊಡುತ್ತಾನೆ ಎಂಬ ನಂಬಿಕೆ ನನಗಿದೆಯಾ?’ (ಯೆಶಾಯ 48:17, 18 ಓದಿ.) “ಹೌದು” ಎಂದು ಮನದಾಳದಿಂದ ಹೇಳಬೇಕಾದರೆ ಯೆಹೋವನ ಬಗ್ಗೆ ಅಲ್ಪಸ್ವಲ್ಪ ಜ್ಞಾನವಿದ್ದರೆ ಸಾಲದು, ಆತನನ್ನು ಚೆನ್ನಾಗಿ ತಿಳಿದಿರಬೇಕು. ಆತನು ಬೈಬಲ್‌ನಲ್ಲಿ ನಿಯಮಗಳನ್ನು, ಮೂಲತತ್ವಗಳನ್ನು ಕೊಟ್ಟಿರುವುದು ನಮ್ಮ ಮೇಲಿನ ಪ್ರೀತಿಯಿಂದಾಗಿಯೇ ವಿನಃ ನಮ್ಮನ್ನು ಹದ್ದುಬಸ್ತಿನಲ್ಲಿಡಲಿಕ್ಕಾಗಿ ಅಲ್ಲ ಎಂದು ಮನವರಿಕೆಯಾಗಿರಬೇಕು.—ಕೀರ್ತ. 25:14.

ಜ್ಞಾನ ವಿವೇಕವನ್ನು ದಯಪಾಲಿಸು

10. ರಾಜ ಸೊಲೊಮೋನನ ಮಾದರಿಯನ್ನು ನಾವೇಕೆ ಅನುಕರಿಸಬೇಕು?

10 ಪಟ್ಟಕ್ಕೇರಿದಾಗ ಯುವಕನಾಗಿದ್ದ ಸೊಲೊಮೋನನು ಯೆಹೋವನಲ್ಲಿ ದೀನತೆಯಿಂದ “ನಾನು ಇನ್ನೂ ಚಿಕ್ಕವನು; ವ್ಯವಹಾರಜ್ಞಾನವಿಲ್ಲದವನು” ಎಂದು ಒಪ್ಪಿಕೊಳ್ಳುತ್ತಾ “ನನಗೆ ವಿವೇಕವನ್ನು ದಯಪಾಲಿಸು” ಎಂದು ಬೇಡಿಕೊಂಡನು. (1 ಅರ. 3:7-9, 12) ಅವನ ಮನಃಪೂರ್ವಕ ಬೇಡಿಕೆಯನ್ನು ಯೆಹೋವನು ಪೂರೈಸಿದನು. ಇಂದು ಕೂಡ ಚಿಕ್ಕವರೂ ದೊಡ್ಡವರೂ ವಿವೇಕಕ್ಕಾಗಿ ಬಿನ್ನಹಿಸುವಾಗ ಆತನು ಲಾಲಿಸುತ್ತಾನೆ. ಸೊಲೊಮೋನನಿಗೆ ಕೊಟ್ಟಂತೆ ಆತನು ನಮಗೆ ಅದ್ಭುತಕರವಾಗಿ ಜ್ಞಾನ, ವಿವೇಕವನ್ನು ಕೊಡುವುದಿಲ್ಲ ನಿಜ. ಆದರೆ ಬೈಬಲನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿ, ಪವಿತ್ರಾತ್ಮಕ್ಕಾಗಿ ಬೇಡಿ ಸಭೆಯಿಂದ ಸಿಗುವ ಎಲ್ಲ ಆಧ್ಯಾತ್ಮಿಕ ಏರ್ಪಾಡುಗಳ ಪೂರ್ಣ ಪ್ರಯೋಜನ ಪಡೆಯುವಾಗ ಆತನು ನಮಗೆ ವಿವೇಕವನ್ನು ದಯಪಾಲಿಸುತ್ತಾನೆ. (ಯಾಕೋ. 1:5) ಯೆಹೋವನ ಸಲಹೆಗಳನ್ನು ಪಾಲಿಸದ ಈ ಲೋಕದ ‘ವಿವೇಕಿಗಳು ಹಾಗೂ ಜ್ಞಾನಿಗಳಿಗಿಂತ’ ತನ್ನ ಯುವ ಸೇವಕರನ್ನು ಹೆಚ್ಚು ವಿವೇಕಿಗಳನ್ನಾಗಿ ಮಾಡುವನು.—ಲೂಕ 10:21; ಕೀರ್ತನೆ 119:98-100 ಓದಿ.

11-13. (1) ಕೀರ್ತನೆ 26:4, ಜ್ಞಾನೋಕ್ತಿ 13:20, 1 ಕೊರಿಂಥ 15:33ರಿಂದ ನಾವು ಯಾವ ಪ್ರಾಮುಖ್ಯ ಪಾಠ ಕಲಿಯುತ್ತೇವೆ? (2) ಈ ವಚನಗಳಲ್ಲಿರುವ ಮೂಲತತ್ವಗಳನ್ನು ನೀವು ಹೇಗೆ ಅನ್ವಯಿಸಿಕೊಳ್ಳುವಿರಿ?

11 ಯೆಹೋವನನ್ನು ಚೆನ್ನಾಗಿ ತಿಳಿದುಕೊಳ್ಳಲು ಬೈಬಲನ್ನು ಅಧ್ಯಯನ ಮಾಡಿ ಆ ವಿಷಯಗಳ ಕುರಿತು ಧ್ಯಾನಿಸಬೇಕು. ಅದು ಎಷ್ಟು ಪ್ರಾಮುಖ್ಯ ಎಂದು ತಿಳಿಯಲು ನಮ್ಮ ಸಹವಾಸದ ಕುರಿತಾದ ಮೂಲತತ್ವವಿರುವ ಈ ಮೂರು ವಚನಗಳನ್ನು ಗಮನಿಸಿ: “ನಾನು ಕುಟಿಲಸ್ವಭಾವಿಗಳ ಸಹವಾಸಮಾಡುವವನಲ್ಲ; ಕಪಟಿಗಳನ್ನು ಸೇರುವವನಲ್ಲ.” (ಕೀರ್ತ. 26:4) “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋ. 13:20) “ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ.”—1 ಕೊರಿಂ. 15:33.

12 ಈ ವಚನಗಳಿಂದ ನಮಗೇನು ತಿಳಿದುಬರುತ್ತದೆ? (1) ನಾವು ಜಾಗ್ರತೆಯಿಂದ ಸ್ನೇಹಿತರನ್ನು ಆರಿಸಬೇಕೆಂದು ಯೆಹೋವನು ಇಷ್ಟಪಡುತ್ತಾನೆ. ಏಕೆಂದರೆ ನಮ್ಮನ್ನು ನೈತಿಕವಾಗಿ, ಆಧ್ಯಾತ್ಮಿಕವಾಗಿ ಸಂರಕ್ಷಿಸಲು ಬಯಸುತ್ತಾನೆ. (2) ಒಳ್ಳೆಯವರ ಸ್ನೇಹದಿಂದ ನಾವು ಒಳ್ಳೆಯವರಾಗುತ್ತೇವೆ. ಕೆಟ್ಟವರ ಸ್ನೇಹದಿಂದ ಕೆಟ್ಟವರಾಗುತ್ತೇವೆ. ಇದು ಅಲ್ಲಗಳೆಯಲಾಗದ ಸತ್ಯ. ಆದರೆ ಈ ನಿಜತ್ವಗಳನ್ನು ಮೇಲಿನ ವಚನಗಳಲ್ಲಿ ಯೆಹೋವನು ಎಷ್ಟು ಒಳ್ಳೇದಾಗಿ ಪ್ರಸ್ತುತಪಡಿಸಿದ್ದಾನೆ ನೋಡಿ. ನಮ್ಮ ಮನಸ್ಪರ್ಶಿಸುವಂತೆ ಹೇಳಿದ್ದಾನೆ. ಅದನ್ನು ನಿಯಮದಂತೆ “ನೀವು ಹೀಗೆ ಮಾಡಬಾರದು, ಹಾಗೆ ಮಾಡಬಾರದು” ಎಂದು ಹೇಳಬಹುದಿತ್ತು. ಆದರೆ ಹಾಗೆ ಹೇಳದೆ ಜೀವನದ ನಿಜತ್ವಗಳನ್ನು ನಮ್ಮ ಮುಂದೆ ಬಿಡಿಸಿಟ್ಟಿದ್ದಾನೆ. ‘ನೋಡು, ಹೀಗೆ ಮಾಡಿದರೆ ಹೀಗಾಗುತ್ತೆ. ನೀನೇನು ಮಾಡ್ತೀಯಾ? ನಿನಗೇನು ಅನಿಸುತ್ತೆ?’ ಎಂದು ಯೆಹೋವನು ನಮಗೆ ಹೇಳುವಂತಿದೆ.

13 ಈ ಮೂರು ವಚನಗಳು ಜೀವನದ ಮೂಲಭೂತ ನಿಜತ್ವಗಳಾಗಿರುವುದರಿಂದ ಅವು ಎಲ್ಲ ಸಮಯದಲ್ಲೂ ಎಲ್ಲ ರೀತಿಯ ಜನರಿಗೂ ಅನ್ವಯಿಸುತ್ತವೆ. ಹೀಗೆ ಕೇಳಿಕೊಳ್ಳಿ: “ಕಪಟಿಗಳ” ಅಂದರೆ ತಮ್ಮ ನಿಜ ಸ್ವಭಾವವನ್ನು ಮರೆಮಾಚುವ ವ್ಯಕ್ತಿಗಳ ಸಹವಾಸ ಮಾಡದಿರಲು ನಾನೇನು ಮಾಡಬಲ್ಲೆ? ಅಂಥವರೊಂದಿಗೆ ಸಹವಾಸ ಮಾಡುವ ಸಂದರ್ಭ ಯಾವಾಗ ಎದುರಾಗಬಹುದು? (ಜ್ಞಾನೋ. 3:32; 6:12) ಯೆಹೋವನ ಬಯಕೆ ನಾನು “ಜ್ಞಾನಿಗಳ” ಸಹವಾಸ ಮಾಡಬೇಕೆಂದು. ಆ ‘ಜ್ಞಾನಿಗಳು’ ಯಾರು? ನಾನು ಒಡನಾಟ ಮಾಡಬಾರದಾದ ‘ಜ್ಞಾನಹೀನರು’ ಯಾರು? (ಕೀರ್ತ. 111:10; 112:1; ಜ್ಞಾನೋ. 1:7) ದುಸ್ಸಹವಾಸ ಮಾಡಿದರೆ ನನ್ನಲ್ಲಿರುವ ಯಾವ ‘ಸದಾಚಾರಗಳು’ ಹಾಳಾಗುತ್ತವೆ? ಕೆಟ್ಟ ಸಹವಾಸಿಗಳು ಸಭೆಯ ಹೊರಗೆ ಮಾತ್ರ ಇದ್ದಾರೋ? (2 ಪೇತ್ರ 2:1-3) ಈ ಪ್ರಶ್ನೆಗಳಿಗೆ ನಿಮ್ಮ ಉತ್ತರವೇನು?

14. ಕುಟುಂಬ ಆರಾಧನೆಯನ್ನು ಹೇಗೆ ಇನ್ನೂ ಹೆಚ್ಚು ಪ್ರಯೋಜನಕಾರಿಯಾಗಿ ಮಾಡಬಲ್ಲಿರಿ?

14 ಈ ಮೂರು ವಚನಗಳನ್ನು ಪರಿಶೀಲಿಸಿದಂತೆ ಇತರ ವಚನಗಳನ್ನೂ ನೀವು ಪರಿಶೀಲಿಸಿ. ಇದರಿಂದ ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ಪ್ರಭಾವಿಸುವ ವಿಷಯಗಳ ಕುರಿತು ದೇವರ ದೃಷ್ಟಿಕೋನವನ್ನು ತಿಳಿಯಸಾಧ್ಯವಾಗುವುದು. * ಹೆತ್ತವರೇ, ನೀವು ಇಂಥ ವಿಷಯಗಳನ್ನು ಕುಟುಂಬ ಆರಾಧನೆಯಲ್ಲಿ ಚರ್ಚಿಸಲು ಯೋಜಿಸಬಹುದಲ್ಲಾ? ನಿಮ್ಮ ಮುಖ್ಯ ಗುರಿ, ದೇವರು ನಿಯಮಗಳನ್ನೂ ಮೂಲತತ್ವಗಳನ್ನೂ ಕೊಡುವ ಮೂಲಕ ನಮ್ಮ ಮೇಲಿರುವ ಗಾಢ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆ ಎಂದು ಅರ್ಥಮಾಡಿಕೊಳ್ಳಲು ಕುಟುಂಬದಲ್ಲಿ ಪ್ರತಿಯೊಬ್ಬರಿಗೆ ಸಹಾಯಮಾಡುವುದೇ ಆಗಿರಲಿ. (ಕೀರ್ತ. 119:72) ಇಂಥ ಅಧ್ಯಯನದಿಂದ ನೀವೆಲ್ಲರೂ ಯೆಹೋವನಿಗೆ ಅತ್ಯಾಪ್ತರಾಗುವಿರಿ. ನಿಮ್ಮ ಕುಟುಂಬದಲ್ಲಿ ಆಪ್ತತೆ ಹೆಚ್ಚುವುದು.

15. ನೀವು ಜ್ಞಾನಿಗಳೂ ವಿವೇಕಿಗಳೂ ಆಗುತ್ತಿದ್ದೀರೋ ಎಂದು ಹೇಗೆ ಪರೀಕ್ಷಿಸಬಹುದು?

15 ನೀವು ಜ್ಞಾನಿಗಳೂ ವಿವೇಕಿಗಳೂ ಆಗುತ್ತಿದ್ದೀರೋ ಎಂದು ಹೇಗೆ ಪರೀಕ್ಷಿಸಬಹುದು? ನಿಮ್ಮ ಆಲೋಚನೆ ಪ್ರಾಚೀನ ಕಾಲದ ನಂಬಿಗಸ್ತ ಜನರ ಆಲೋಚನೆಯಂತೆ ಇದೆಯೇ ಎಂದು ಹೋಲಿಸಿನೋಡಬಹುದು. ಉದಾಹರಣೆಗೆ ದಾವೀದನು “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಎಂದನು. (ಕೀರ್ತ. 40:8) 119ನೇ ಕೀರ್ತನೆಯ ರಚಕನು “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ” ಎಂದು ಹಾಡಿದನು. (ಕೀರ್ತ. 119:97) ನಿಮ್ಮ ಆಲೋಚನೆಯು ಹೀಗೆ ಇದೆಯಾ? ದೇವರ ನಿಯಮಗಳಿಗಾಗಿ ಅಷ್ಟೊಂದು ಪ್ರೀತಿ ತನ್ನಿಂತಾನೆ ಬರುವುದಿಲ್ಲ. ಗಿಡವೊಂದು ಸ್ವಲ್ಪ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯಲಾರದು. ಸಾಕಷ್ಟು ಮಣ್ಣು, ಪೋಷಕಾಂಶ ಅಗತ್ಯ. ಹಾಗೆಯೇ ದೇವರ ನಿಯಮದ ಮೇಲೆ ಪ್ರೀತಿ ಬೆಳೆಯಬೇಕಾದರೆ ಆಳವಾದ ಅಧ್ಯಯನ, ಪ್ರಾರ್ಥನೆ, ಧ್ಯಾನ ಅಗತ್ಯ. ಅದರೊಂದಿಗೆ ದೇವರ ಮಟ್ಟಗಳಿಗೆ ಸರಿಯಾಗಿ ನಡೆಯುವುದರಿಂದ ಸಿಗುವ ಅಗಣಿತ ಆಶೀರ್ವಾದಗಳನ್ನು ಸ್ವತಃ ಅನುಭವಿಸಿ ನೋಡಿದಾಗಲೇ ಅಂಥ ಪ್ರೀತಿ ನಮ್ಮಲ್ಲೂ ಬೆಳೆಯುವುದು.—ಕೀರ್ತ. 34:8.

ನಿಮ್ಮ ಕ್ರೈಸ್ತ ಸ್ವಾತಂತ್ರ್ಯಕ್ಕಾಗಿ ಹೋರಾಡಿ!

16. ಸ್ವಾತಂತ್ರ್ಯಕ್ಕಾಗಿ ಮಾಡುವ ಹೋರಾಟದಲ್ಲಿ ಜಯಗಳಿಸಬೇಕಾದರೆ ಏನನ್ನು ನೆನಪಿನಲ್ಲಿಟ್ಟುಕೊಳ್ಳಬೇಕು?

16 ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಅನೇಕ ದೇಶಗಳು ಸ್ವಾತಂತ್ರ್ಯಕ್ಕಾಗಿ ಕ್ರೂರ ಯುದ್ಧಗಳನ್ನು ನಡೆಸಿರುವುದು ಕಂಡುಬರುತ್ತದೆ. ಆಧ್ಯಾತ್ಮಿಕ ಸ್ವಾತಂತ್ರ್ಯಕ್ಕಾಗಿ ನಾವು ಅದಕ್ಕಿಂತಲೂ ಹೆಚ್ಚು ಹೋರಾಟ ಮಾಡಬೇಕಲ್ಲವೆ? ನಾವು ಹೋರಾಡಬೇಕಿರುವುದು ಸೈತಾನ, ಈ ಲೋಕ, ವಿಷದಂತೆ ಪಸರಿಸಿರುವ ಲೋಕದ ಮನೋಭಾವದ ವಿರುದ್ಧ ಮಾತ್ರವಲ್ಲ, ಸ್ವಂತ ಅಪರಿಪೂರ್ಣತೆ ಹಾಗೂ ನಮ್ಮ ವಂಚಕ ಹೃದಯದ ವಿರುದ್ಧವೂ ಎಂದು ನೆನಪಿನಲ್ಲಿಡಬೇಕು. (ಯೆರೆ. 17:9; ಎಫೆ. 2:3) ಆದರೂ ಯೆಹೋವನ ಸಹಾಯ ನಮಗಿರುವುದರಿಂದ ಈ ಹೋರಾಟದಲ್ಲಿ ಜಯಗಳಿಸಬಲ್ಲೆವು! ನಾವು ಪ್ರತಿ ಬಾರಿ ಗಳಿಸುವ ಜಯ, ದೊಡ್ಡದಿರಲಿ ಚಿಕ್ಕದಿರಲಿ, ಅದು ಎರಡು ಒಳ್ಳೇ ಪರಿಣಾಮ ತರುತ್ತದೆ. ಒಂದು ನಾವು ಯೆಹೋವನ ಮನಸ್ಸನ್ನು ಸಂತೋಷಪಡಿಸುತ್ತೇವೆ. (ಜ್ಞಾನೋ. 27:11) ಎರಡನೇದಾಗಿ “[ಸ್ವಾತಂತ್ರ್ಯಕ್ಕೆ] ಸೇರಿರುವ ಪರಿಪೂರ್ಣ ನಿಯಮ” ಕೊಡುವ ಬಿಡುಗಡೆಯನ್ನು ಸ್ವತಃ ಅನುಭವಿಸುವಾಗ ‘ಇಕ್ಕಟ್ಟಾದ ದಾರಿಯಲ್ಲಿ’ ನಡೆಯುತ್ತಾ ಇರಲು ನಾವು ಹೆಚ್ಚು ದೃಢಮನಸ್ಸುಳ್ಳವರಾಗುವೆವು. ಅಷ್ಟೇಕೆ, ಯೆಹೋವನು ತನ್ನ ನಿಷ್ಠಾವಂತ ಸೇವಕರಿಗಾಗಿ ಇಟ್ಟಿರುವ ಸಂಪೂರ್ಣ ಸ್ವಾತಂತ್ರ್ಯವನ್ನು ಭವಿಷ್ಯತ್ತಿನಲ್ಲಿ ಆನಂದಿಸುವೆವು!—ಯಾಕೋ. 1:25; ಮತ್ತಾ. 7:13, 14.

17. (1) ಅಪರಿಪೂರ್ಣತೆಯಿಂದಾಗಿ ತಪ್ಪಿಬೀಳುವಾಗ ನಿರಾಶೆಯಲ್ಲಿ ಕುಗ್ಗಿಹೋಗಬಾರದೇಕೆ? (2) ಯೆಹೋವನು ನಮಗೆ ಯಾವ ಸಹಾಯ ಕೊಡುತ್ತಾನೆ?

17 ಅಪರಿಪೂರ್ಣರಾದ ನಾವೆಲ್ಲರು ಕೆಲವೊಮ್ಮೆ ತಪ್ಪಿಬೀಳುತ್ತೇವೆ. (ಪ್ರಸಂ. 7:20) ಒಂದುವೇಳೆ ನೀವು ಆ ರೀತಿ ತಪ್ಪಿಬಿದ್ದಿರುವಲ್ಲಿ ಆ ತಪ್ಪನ್ನು ನೆನಸಿ ಅಯೋಗ್ಯ ಭಾವನೆಯಿಂದ, ನಿರಾಶೆಯಿಂದ ಕುಗ್ಗಿಹೋಗಬೇಡಿ. ನಡೆಯುವಾಗ ಬಿದ್ದರೆ ಹೇಗೆ ಎದ್ದು ಮುಂದೆ ನಡೆಯುತ್ತೇವೋ ಹಾಗೆಯೇ ಧೈರ್ಯದಿಂದ ಮುನ್ನಡೆಯಿರಿ. ಸಭಾ ಹಿರಿಯರ ಸಹಾಯ ಕೋರಿ. ಏಕೆಂದರೆ ಯಾಕೋಬನು ಹೇಳಿದಂತೆ ಅವರು “ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಅಸ್ವಸ್ಥನನ್ನು ಗುಣಪಡಿಸುವುದು ಮತ್ತು ಯೆಹೋವನು ಅವನನ್ನು ಎಬ್ಬಿಸುವನು. ಇದಲ್ಲದೆ ಅವನು ಪಾಪಗಳನ್ನು ಮಾಡಿರುವುದಾದರೆ ಅವು ಅವನಿಗೆ ಕ್ಷಮಿಸಲ್ಪಡುವವು.” (ಯಾಕೋ. 5:15) ಯೆಹೋವನು ಕನಿಕರವುಳ್ಳ ದೇವರೆಂಬುದನ್ನು ಮರೆಯಬೇಡಿ. ನಿಮ್ಮಲ್ಲಿ ಒಳ್ಳೇದನ್ನು ನೋಡಿಯೇ ತನ್ನ ಸಭೆಗೆ ಸೆಳೆದಿದ್ದಾನೆ. (ಕೀರ್ತನೆ 103:8, 9 ಓದಿ.) ಹಾಗಾಗಿ ಎಷ್ಟರ ವರೆಗೆ ನೀವು ಸಂಪೂರ್ಣ ಹೃದಯದಿಂದ ಆತನ ಸೇವೆ ಮಾಡುತ್ತೀರೊ ಅಷ್ಟರ ವರೆಗೆ ಆತನು ನಿಮ್ಮ ಕೈಬಿಡನು.—1 ಪೂರ್ವ. 28:9.

18. ಯೆಹೋವನ ಸಂರಕ್ಷಣೆ ಪಡೆಯಲು ನಾವೇನು ಮಾಡಬೇಕು?

18 ಯೇಸು ಸಾಯುವ ಮುಂಚಿನ ರಾತ್ರಿಯಂದು ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರೊಂದಿಗೆ ಪ್ರಾರ್ಥಿಸುವಾಗ “ಇವರನ್ನು . . . ಕೆಡುಕನಿಂದ ಕಾಪಾಡುವಂತೆ ಕೇಳಿಕೊಳ್ಳುತ್ತೇನೆ” ಎಂದು ಬೇಡಿದನು. (ಯೋಹಾ. 17:15) ಅವನು ಪ್ರಾರ್ಥಿಸಿದ್ದು ಅಪೊಸ್ತಲರಿಗಾಗಿ ಮಾತ್ರವಲ್ಲ ತನ್ನ ಎಲ್ಲ ಹಿಂಬಾಲಕರಿಗಾಗಿ. ಹಾಗಾಗಿ ಯೆಹೋವ ದೇವರು ಯೇಸುವಿನ ಪ್ರಾರ್ಥನೆಗೆ ಉತ್ತರಿಸುತ್ತಾ ನಮ್ಮನ್ನು ಈ ಕಠಿನ ಕಾಲದಲ್ಲಿ ಕಾಪಾಡುತ್ತಾನೆ ಎಂದು ನಾವು ಭರವಸೆಯಿಂದಿರಬಲ್ಲೆವು. ಯೆಹೋವನು “ದೋಷವಿಲ್ಲದೆ ನಡೆಯುವವರಿಗೆ ಗುರಾಣಿಯಾಗಿದ್ದು . . . ತನ್ನ ಭಕ್ತರ ದಾರಿಯನ್ನು ನೋಡಿಕೊಳ್ಳುವನು.” (ಜ್ಞಾನೋ. 2:7, 8) ದೋಷವಿಲ್ಲದ ಅಂದರೆ ಸಮಗ್ರತೆಯ ದಾರಿಯಲ್ಲಿ ನಡೆಯುವಾಗ ಸವಾಲುಗಳು ಬರುತ್ತವೆ ನಿಜ. ಆದರೆ ನಿತ್ಯನಿರಂತರ ಜೀವನಕ್ಕೆ ಹಾಗೂ ನಿಜ ಸ್ವಾತಂತ್ರ್ಯಕ್ಕೆ ನಡೆಸುವ ದಾರಿ ಇದೊಂದೇ ಎನ್ನುವುದನ್ನು ಮರೆಯದಿರಿ. (ರೋಮ. 8:21) ಯಾರೂ ನಿಮ್ಮನ್ನು ಈ ದಾರಿಯಿಂದ ಬೇರೆಡೆಗೆ ಸೆಳೆಯದಂತೆ ನೋಡಿಕೊಳ್ಳಿ!

[ಪಾದಟಿಪ್ಪಣಿಗಳು]

^ ಪ್ಯಾರ. 5 ದಾವೀದನಿಗೆ ಹುಟ್ಟಲಿರುವ ಮಗನು ರಾಜ್ಯಾಧಿಕಾರ ಪಡೆದುಕೊಳ್ಳುವನು ಎಂದು ದೇವರು ವಾಗ್ದಾನ ಮಾಡುವಾಗ ಅಬ್ಷಾಲೋಮ ಈಗಾಗಲೇ ಹುಟ್ಟಿದ್ದನು. ಹಾಗಾಗಿ ರಾಜ್ಯಾಧಿಕಾರ ಪಡೆಯತಕ್ಕವನು ತಾನಲ್ಲ ಎಂದು ಅಬ್ಷಾಲೋಮ ಅರ್ಥಮಾಡಿಕೊಳ್ಳಬೇಕಿತ್ತು.—2 ಸಮು. 3:3; 7:12.

^ ಪ್ಯಾರ. 14 ಈ ವಚನಗಳನ್ನು ಪರಿಶೀಲಿಸಬಹುದು: ದೇವರ ಪ್ರೀತಿಯನ್ನು ಪೌಲ ವರ್ಣಿಸಿರುವ 1 ಕೊರಿಂಥ 13:4-8. ಯೆಹೋವನ ನಿಯಮಗಳಿಗೆ ವಿಧೇಯರಾಗುವುದರಿಂದ ಸಿಗುವ ಹೇರಳ ಆಶೀರ್ವಾದಗಳನ್ನು ವಿಶದವಾಗಿ ಹೇಳುವ ಕೀರ್ತನೆ 19:7-11.

[ಅಧ್ಯಯನ ಪ್ರಶ್ನೆಗಳು]

[ಪುಟ 14ರಲ್ಲಿರುವ ಚಿತ್ರಗಳು]

ಆಧುನಿಕ ದಿನದ ಅಬ್ಷಾಲೋಮನನ್ನು ಹೇಗೆ ಗುರುತಿಸಬಲ್ಲೆವು? ಹೇಗೆ ದೂರವಿರಬಲ್ಲೆವು?