ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೃಢರಾಗಿ ನಿಂತು ಸೈತಾನನ ಪಾಶಗಳಿಂದ ತಪ್ಪಿಸಿಕೊಳ್ಳಿ!

ದೃಢರಾಗಿ ನಿಂತು ಸೈತಾನನ ಪಾಶಗಳಿಂದ ತಪ್ಪಿಸಿಕೊಳ್ಳಿ!

ದೃಢರಾಗಿ ನಿಂತು ಸೈತಾನನ ಪಾಶಗಳಿಂದ ತಪ್ಪಿಸಿಕೊಳ್ಳಿ!

‘ಪಿಶಾಚನ ತಂತ್ರೋಪಾಯಗಳ ವಿರುದ್ಧ ದೃಢರಾಗಿ ನಿಲ್ಲಿ.’ ​—⁠ಎಫೆ. 6:⁠11.

ನಿಮ್ಮ ಉತ್ತರವೇನು?

ಪ್ರಾಪಂಚಿಕತೆಯ ಪಾಶದಲ್ಲಿ ಸಿಕ್ಕಿಕೊಳ್ಳದಿರಲು ಒಬ್ಬ ಕ್ರೈಸ್ತನು ಏನು ಮಾಡಬೇಕು?

ವ್ಯಭಿಚಾರದ ಹೊಂಡಕ್ಕೆ ಬೀಳದಿರಲು ಒಬ್ಬ ವಿವಾಹಿತ ಕ್ರೈಸ್ತನಿಗೆ ಯಾವುದು ಸಹಾಯಮಾಡಬಲ್ಲದು?

ಪ್ರಾಪಂಚಿಕತೆ ಮತ್ತು ಲೈಂಗಿಕ ಅನೈತಿಕತೆಯ ವಿರುದ್ಧ ದೃಢವಾಗಿ ನಿಲ್ಲುವುದರಿಂದ ನಮಗೇ ಪ್ರಯೋಜನ ಎಂದು ನೀವೇಕೆ ನೆನಸುತ್ತೀರಿ?

1, 2. (1) ಸೈತಾನನಿಗೆ ಅಭಿಷಿಕ್ತರ ಹಾಗೂ ‘ಬೇರೆ ಕುರಿಗಳ’ ಮೇಲೆ ಒಂಚೂರೂ ಕರುಣೆಯಿಲ್ಲವೇಕೆ? (2) ಸೈತಾನನ ಯಾವ ಪಾಶಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ?

ಸೈತಾನ ಎಂಥ ಕಟುಕ! ಮನುಷ್ಯರ ಮೇಲೆ ಒಂಚೂರೂ ಕರುಣೆಯಿಲ್ಲ ಅವನಿಗೆ. ಯೆಹೋವನ ಸೇವಕರ ಮೇಲಂತೂ ಕೆಂಡ ಕಾರುತ್ತಿದ್ದಾನೆ. ಅಭಿಷಿಕ್ತರ ವಿರುದ್ಧ ಸಮರ ಸಾರಿದ್ದಾನೆ. (ಪ್ರಕ. 12:17) ಆದರೆ ಇವರು ಧೀರರು, ರಾಜ್ಯದ ಸುವಾರ್ತೆ ಸಾರುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಲೋಕದ ದುಷ್ಟ ಅಧಿಪತಿ ಸೈತಾನನೆಂದು ಜಗಜ್ಜಾಹೀರುಗೊಳಿಸುತ್ತಿದ್ದಾರೆ. ಅಭಿಷಿಕ್ತರನ್ನು ಬೆಂಬಲಿಸುವ ‘ಬೇರೆ ಕುರಿಗಳ’ ಮೇಲೂ ಸೈತಾನ ರೊಚ್ಚಿಗೆದ್ದಿದ್ದಾನೆ. (ಯೋಹಾ. 10:16) ಅವರಿಗಿರುವ ನಿತ್ಯಜೀವದ ಪ್ರತೀಕ್ಷೆ ತನಗಿಲ್ಲವಲ್ಲಾ ಎಂದು ರೋಷಗೊಂಡಿದ್ದಾನೆ. ನಾವು ಅಭಿಷಿಕ್ತರಾಗಿರಲಿ, ಬೇರೆ ಕುರಿಗಳಾಗಿರಲಿ ಸೈತಾನನು ನಮ್ಮ ಒಳಿತನ್ನೆಂದೂ ಬಯಸುವವನಲ್ಲ ಎನ್ನುವುದನ್ನು ಮರೆಯದಿರೋಣ. ನಾವು ಅವನ ಬಲಿಪಶುಗಳಾಗಬೇಕು ಎನ್ನುವುದೊಂದೇ ಅವನ ಗುರಿ.​—⁠1 ಪೇತ್ರ 5:⁠8.

2 ಅದಕ್ಕಾಗಿ ಸೈತಾನನು ಅನೇಕ ಪಾಶಗಳನ್ನು ಬಳಸುತ್ತಾನೆ. ಅವನು ಅವಿಶ್ವಾಸಿಗಳ ಮನಸ್ಸನ್ನು ಕುರುಡುಮಾಡಿದ್ದಾನೆ. ಆದ್ದರಿಂದ ಅವರು ಸುವಾರ್ತೆಗೆ ಕಿವಿಗೊಡುವುದಿಲ್ಲ, ಸೈತಾನನು ಯಾವ ಗುಂಡಿ ತೋಡಿಟ್ಟಿದ್ದಾನೆಂದೂ ನೋಡಲಾಗದೆ ಸೀದಾ ಅದರಲ್ಲಿ ಹೋಗಿ ಬೀಳುತ್ತಾರೆ. ಅವರನ್ನಷ್ಟೇ ಅಲ್ಲ ಸುವಾರ್ತೆಯನ್ನು ಸ್ವೀಕರಿಸಿದ ಕೆಲವರಿಗೂ ಗುಂಡಿಯ ಆಳ ತೋರಿಸಿದ್ದಾನೆ. (2 ಕೊರಿಂ. 4:​3, 4) ಹಿಂದಿನ ಲೇಖನದಲ್ಲಿ ಲಂಗುಲಗಾಮಿಲ್ಲದ ಮಾತು, ಭಯ ಹಾಗೂ ಒತ್ತಡ, ವಿಪರೀತ ದೋಷಿಭಾವನೆ ಎಂಬ ಮೂರು ಪಾಶಗಳಿಂದ ನಾವು ಹೇಗೆ ತಪ್ಪಿಸಿಕೊಳ್ಳಬಹುದೆಂದು ಕಲಿತೆವು. ಪ್ರಾಪಂಚಿಕತೆ ಹಾಗೂ ವ್ಯಭಿಚಾರ ಎಂಬ ಇನ್ನೆರಡು ಪಾಶಗಳಲ್ಲಿ ಸಿಕ್ಕಿಬೀಳದಿರಲು ಏನು ಮಾಡಬೇಕೆಂದು ಈ ಲೇಖನದಲ್ಲಿ ನೋಡೋಣ.

ಉಸಿರುಕಟ್ಟಿಸುವ ಪಾಶ​—⁠ಪ್ರಾಪಂಚಿಕತೆ

3, 4. ಈ ವಿಷಯಗಳ ವ್ಯವಸ್ಥೆಯ ಚಿಂತೆ ಹೇಗೆ ಪ್ರಾಪಂಚಿಕತೆಗೆ ನಡೆಸಬಹುದು?

3 ಯೇಸು ಒಂದು ದೃಷ್ಟಾಂತದಲ್ಲಿ ಮುಳ್ಳುಗಳ ಮಧ್ಯೆ ಬೀಳುವ ಬೀಜದ ಕುರಿತು ಮಾತಾಡಿದನು. ಆ ದೃಷ್ಟಾಂತವನ್ನು ಯೇಸು ಹೀಗೆ ವಿವರಿಸಿದನು. ಒಬ್ಬ ವ್ಯಕ್ತಿ ವಾಕ್ಯವನ್ನು ಕೇಳಬಹುದು. “ಆದರೆ ಈ ವಿಷಯಗಳ ವ್ಯವಸ್ಥೆಯ ಚಿಂತೆಯೂ ಐಶ್ವರ್ಯದ ಮೋಸಕರವಾದ ಪ್ರಭಾವವೂ ವಾಕ್ಯವನ್ನು ಅದುಮಿಬಿಡುವುದರಿಂದ ಅವನು ಫಲವನ್ನು ಕೊಡದೆ ಹೋಗುತ್ತಾನೆ.” (ಮತ್ತಾ. 13:22) ಹೌದು, ನಮ್ಮ ವೈರಿ ಸೈತಾನ ಬಳಸುವ ಪಾಶಗಳಲ್ಲಿ ಪ್ರಾಪಂಚಿಕತೆಯೂ ಒಂದು ಎಂಬುದು ಇದರಿಂದ ಸ್ಫುಟ.

4 ಎರಡು ವಿಷಯಗಳು ಒಟ್ಟು ಸೇರಿ ವಾಕ್ಯವನ್ನು ಅದುಮಿಬಿಡುತ್ತವೆ ಎಂದು ಯೇಸು ಹೇಳಿದನು. ಅದರಲ್ಲಿ ಒಂದು “ಈ ವಿಷಯಗಳ ವ್ಯವಸ್ಥೆಯ ಚಿಂತೆ.” ‘ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳಲ್ಲಿ’ ನಾವಿರುವುದರಿಂದ ಬಾಳನೌಕೆಯನ್ನು ಮುನ್ನಡೆಸುವುದು ಕಷ್ಟವೇ. (2 ತಿಮೊ. 3:⁠1) ಒಂದುಬದಿ ಬೆಲೆಯೇರಿಕೆ ತಾಂಡವವಾಡುತ್ತಿದ್ದರೆ ಮತ್ತೊಂದು ಬದಿ ನೌಕರಿ ಸಿಗದೆ ಒದ್ದಾಡಬೇಕಾಗುತ್ತದೆ. ಮುಂದೆ ಏನಾಗಲಿದೆಯೋ ಎಂಬ ಚಿಂತೆ ಕೆಲವರಿಗೆ. ‘ನಿವೃತ್ತಿಯ ಬಳಿಕ ಜೀವನಕ್ಕೆ ಏನು ಮಾಡೋದು?’ ಎಂಬ ಕಳವಳ. ಇಂತೆಲ್ಲಾ ಚಿಂತೆ ದುಡ್ಡಿನ ಕಂತೆಯ ಹಿಂದೆ ಬೀಳುವಂತೆ ಮಾಡಿದೆ. ದುಡ್ಡೇ ದೊಡ್ಡಪ್ಪ ಎಂದು ನೆನಸುವಂತೆ ಮಾಡಿದೆ.

5. ‘ಐಶ್ವರ್ಯದ ಪ್ರಭಾವ’ ಹೇಗೆ ಮೋಸಮಾಡುತ್ತದೆಂದು ತಿಳಿಸಿ.

5 ವಾಕ್ಯವನ್ನು ಅದುಮಿಬಿಡುವ ಇನ್ನೊಂದು ವಿಷಯವೆಂದರೆ ‘ಐಶ್ವರ್ಯದ ಮೋಸಕರ ಪ್ರಭಾವ.’ ಇದು ಚಿಂತೆಯೊಂದಿಗೆ ಸೇರಿ ವಾಕ್ಯವನ್ನು ಹೊಸಕಿಹಾಕುತ್ತದೆ. ‘ಧನವು ಆಶ್ರಯ’ ಎಂದು ಬೈಬಲ್‌ ಹೇಳುವುದು ನಿಜ. (ಪ್ರಸಂ. 7:12) ಆದರೆ ಅದರ ಹಿಂದೆ ಬೀಳುವುದು ಮೂರ್ಖ ಕೆಲಸ. ಏಕೆಂದರೆ ಇದು ಸ್ವಲ್ಪಸ್ವಲ್ಪವಾಗಿ ಪ್ರಾಪಂಚಿಕತೆಯ ಬೋನಿಗೆ ಸಿಕ್ಕಿಕೊಳ್ಳುವಂತೆ ಮಾಡುತ್ತದೆ ಎಂಬುದು ಅನೇಕರ ಸ್ವಂತ ಅನುಭವ. ಕೆಲವರಿಗಂತೂ ಹಣ ಸಂಪಾದನೆಯೇ ಸರ್ವಸ್ವವಾಗಿಬಿಟ್ಟಿದೆ.​—⁠ಮತ್ತಾ. 6:⁠24.

6, 7. (1) ಕೆಲಸದ ಸ್ಥಳದಲ್ಲಿ ಹಣದಾಸೆಗೆ ಹೇಗೆ ಬಲಿಬೀಳುವ ಸಾಧ್ಯತೆಯಿದೆ? (2) ಓವರ್‌ಟೈಮ್‌ ಕೆಲಸ ಮಾಡಬೇಕೆಂದು ಧಣಿ ಹೇಳುವಾಗ ಕ್ರೈಸ್ತನೊಬ್ಬನು ಯಾವ ವಿಷಯಗಳನ್ನು ಪರಿಗಣಿಸಬೇಕು?

6 ಈ ಹಣದಾಸೆ ಗಿಡವಾಗಿ ಹುಟ್ಟಿ ಮರವಾಗಿ ಬೆಳೆಯುತ್ತದೆ. ಉದಾಹರಣೆಗೆ ಈ ಸನ್ನಿವೇಶ ತೆಗೆದುಕೊಳ್ಳಿ. ನಿಮ್ಮ ಧಣಿ ನಿಮ್ಮ ಬಳಿ ಬಂದು, “ಒಂದು ಸಂತೋಷದ ಸುದ್ದಿ ರೀ. ನಮ್ಮ ಕಂಪನಿಗೆ ಒಂದು ದೊಡ್ಡ ಕಾಂಟ್ರ್ಯಾಕ್ಟ್‌ ಸಿಕ್ಕಿದೆ. ಮುಂದಿನ ಕೆಲವು ತಿಂಗಳು ತುಂಬ ಓವರ್‌ಟೈಮ್‌ ಮಾಡಲಿಕ್ಕಿರುತ್ತೆ. ಕೈತುಂಬ ಹಣ ಸಿಗೋದು ಗ್ಯಾರಂಟಿ” ಎನ್ನುತ್ತಾರೆ. ಇಂಥ ಸನ್ನಿವೇಶದಲ್ಲಿ ನೀವೇನು ಮಾಡುವಿರಿ? ಹೊಟ್ಟೆಪಾಡಿಗಾಗಿ ದುಡಿಯುವುದು ಮುಖ್ಯಾನೇ. ಆದರೆ ಹಗಲುರಾತ್ರಿ ದುಡಿಯುವುದೇ ನಮ್ಮ ಜೀವನದ ಧ್ಯೇಯ ಆಗಬಾರದು. (1 ತಿಮೊ. 5:⁠8) ನಮಗೆ ಬೇರೆ ಕರ್ತವ್ಯಗಳೂ ಇವೆ. ಆದ್ದರಿಂದ ಹೀಗೆ ಕೇಳಿಕೊಳ್ಳುವುದು ಯುಕ್ತ: ‘ಎಷ್ಟು ಓವರ್‌ಟೈಮ್‌ ಮಾಡಬೇಕಾಗುತ್ತೆ? ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸಮಯ ಇರುತ್ತಾ? ಕೂಟಗಳಿಗೆ ಹೋಗಲಿಕ್ಕಾಗುತ್ತಾ? ಕುಟುಂಬ ಆರಾಧನೆ . . . ?’

7 ನೀವು ಯಾವ ತೀರ್ಮಾನ ಮಾಡುವಿರಿ? ಜೀವನದಲ್ಲಿ ನೀವು ಯಾವುದಕ್ಕೆ ಹೆಚ್ಚು ಮಹತ್ವ ಕೊಡುತ್ತೀರಿ ಅನ್ನುವುದರ ಮೇಲೆ ಇದು ಹೊಂದಿಕೊಂಡಿದೆ. ನಿಮಗೆ ಕೈತುಂಬ ಹಣ ಸಿಗೋದು ಮುಖ್ಯನಾ, ಯೆಹೋವನೊಂದಿಗಿನ ಸಂಬಂಧ ಮುಖ್ಯನಾ? ಹೆಚ್ಚು ಹಣ ಸಂಪಾದಿಸುವ ಆಸೆಯಿಂದ ರಾಜ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಬದಿಗೊತ್ತುವಿರಾ? ನಿಮ್ಮ ಮತ್ತು ನಿಮ್ಮ ಕುಟುಂಬದ ಆಧ್ಯಾತ್ಮಿಕತೆಯನ್ನು ಅಲಕ್ಷಿಸಿದರೆ ನೀವು ಪ್ರಾಪಂಚಿಕತೆಯ ಗುಂಡಿಗೆ ಬೀಳುವುದು ಖಂಡಿತ. ನೀವೀಗ ಒಂದುವೇಳೆ ಆಧ್ಯಾತ್ಮಿಕತೆಯನ್ನು ಅಲಕ್ಷಿಸುತ್ತಿದ್ದಿರಿ ಎಂದಾದರೆ ಪ್ರಾಪಂಚಿಕತೆಯ ಬಿಗಿಹಿಡಿತದಿಂದ ಬಿಡಿಸಿಕೊಂಡು ಹೇಗೆ ಸ್ಥಿರವಾಗಿ ನಿಲ್ಲಬಲ್ಲಿರಿ?​—⁠1 ತಿಮೊಥೆಯ 6:​9, 10 ಓದಿ.

 8. ನಮ್ಮ ಜೀವನರೀತಿಯನ್ನು ಪರೀಕ್ಷಿಸಿಕೊಳ್ಳಲು ಬೈಬಲಿನ ಯಾವ ಉದಾಹರಣೆಗಳು ಸಹಾಯಮಾಡುತ್ತವೆ?

8 ಪ್ರಾಪಂಚಿಕತೆ ನಿಮ್ಮನ್ನು ಉಸಿರುಕಟ್ಟಿಸಿ ಕೊಲ್ಲುವ ಮುಂಚೆ ಎಚ್ಚೆತ್ತುಕೊಳ್ಳಿ. ಆಗಾಗ ನಿಮ್ಮ ಜೀವನರೀತಿ ಹೇಗಿದೆಯೆಂದು ಪರೀಕ್ಷಿಸಿಕೊಳ್ಳಿ. ನೀವು ಏಸಾವನಂತೆ ಆಗಲು ಬಯಸುವುದಿಲ್ಲ ಅಲ್ಲವೆ? ಆಧ್ಯಾತ್ಮಿಕ ವಿಷಯಗಳ ಮೇಲೆ ಅವನಿಗೆ ಬಿಡಿಗಾಸು ಮೌಲ್ಯವಿರಲಿಲ್ಲ ಎಂದು ತನ್ನ ಕ್ರಿಯೆಗಳ ಮೂಲಕ ತೋರಿಸಿದನು. (ಆದಿ. 25:34; ಇಬ್ರಿ. 12:16) ನಾವು ಯೇಸುವಿನ ಬಳಿ ಬಂದ ಐಶ್ವರ್ಯವಂತನಂತೆ ಇರುವುದೂ ಬೇಡ. ತನ್ನ ಸ್ವತ್ತನ್ನು ಮಾರಿ, ಬಡವರಿಗೆ ಕೊಟ್ಟು, ತನ್ನ ಹಿಂಬಾಲಕನಾಗುವಂತೆ ಯೇಸು ತಿಳಿಸಿದ ಮಾತು ಅವನಿಗೆ ನುಂಗಲಾರದ ತುತ್ತಾಯಿತು. ಅವನ “ಬಳಿ ಬಹಳ ಆಸ್ತಿಯಿದ್ದ ಕಾರಣ ಅವನು ಈ ಮಾತನ್ನು ಕೇಳಿ ದುಃಖದಿಂದ ಹೊರಟುಹೋದನು.” (ಮತ್ತಾ. 19:​21, 22) ಐಶ್ವರ್ಯಗಳ ಮೋಸಕರ ಪ್ರಭಾವಕ್ಕೆ ಇವನೆಷ್ಟು ಮಾರುಹೋಗಿದ್ದನೆಂದರೆ ಲೋಕದಲ್ಲಿ ಜೀವಿಸಿದ ಅತ್ಯಂತ ಮಹಾನ್‌ ಪುರುಷನ ಹಿಂಬಾಲಕನಾಗುವುದೂ ಅವನಿಗೆ ದೊಡ್ಡ ವಿಷಯವಾಗಿ ತೋರಲಿಲ್ಲ. ಯೇಸು ಕ್ರಿಸ್ತನ ಶಿಷ್ಯರಾಗಿರುವ ಮಹಾ ಸುಯೋಗವನ್ನು ನಾವೆಂದೂ ಬಿಟ್ಟುಕೊಡದಿರೋಣ.

9, 10. ಪ್ರಾಪಂಚಿಕ ವಿಷಯಗಳ ಬಗ್ಗೆ ಬೈಬಲ್‌ ತಿಳಿಸುವ ಬುದ್ಧಿಮಾತಿನಿಂದ ನಮಗೇನು ತಿಳಿಯುತ್ತದೆ?

9 ಪ್ರಾಪಂಚಿಕ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಯೇಸು ಹೇಳಿದ್ದಾನೆ. ಆತನ ಕಿವಿಮಾತು ಹೀಗಿತ್ತು: “ಏನು ಊಟಮಾಡಬೇಕು ಏನು ಕುಡಿಯಬೇಕು ಏನು ಧರಿಸಬೇಕೆಂದು ಎಂದಿಗೂ ಚಿಂತೆಮಾಡಬೇಡಿ. ಏಕೆಂದರೆ ಅನ್ಯಜನಾಂಗಗಳವರು ಇವುಗಳನ್ನು ತವಕದಿಂದ ಬೆನ್ನಟ್ಟುತ್ತಾರೆ. ಇವು ನಿಮಗೆ ಬೇಕಾಗಿವೆ ಎಂಬುದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ.”​—⁠ಮತ್ತಾ. 6:​31, 32; ಲೂಕ 21:​34, 35.

10 ಐಶ್ವರ್ಯಗಳ ಮೋಸಕರ ಪ್ರಭಾವಕ್ಕೆ ಒಳಗಾಗದಿರಲು ಬೈಬಲ್‌ ಲೇಖಕ ಆಗೂರನ ದೃಷ್ಟಿಕೋನ ಇಟ್ಟುಕೊಳ್ಳೋಣ. “ನನ್ನನ್ನು ತುಂಬ ಐಶ್ವರ್ಯವಂತನನ್ನಾಗಿಯೂ ಮಾಡಬೇಡ; ತುಂಬ ಬಡವನನ್ನಾಗಿಯೂ ಮಾಡಬೇಡ; ಅನುದಿನಕ್ಕೆ ಬೇಕಾದವುಗಳನ್ನು ಮಾತ್ರ ಕೊಡು” ಎಂದನವನು. (ಜ್ಞಾನೋ. 30:​8, ಪರಿಶುದ್ಧ ಬೈಬಲ್‌ ಭಾಷಾಂತರ) * ಹಣದಿಂದ ಪ್ರಯೋಜನವಿದೆ, ಹಾನಿಯೂ ಇದೆ ಎಂಬುದು ಆಗೂರನಿಗೆ ಚೆನ್ನಾಗಿ ತಿಳಿದಿತ್ತು. ಈ ವಿಷಯಗಳ ವ್ಯವಸ್ಥೆಯ ಚಿಂತೆ ಮತ್ತು ಐಶ್ವರ್ಯಗಳ ಮೋಸಕರ ಪ್ರಭಾವ ನಮ್ಮ ಆಧ್ಯಾತ್ಮಿಕತೆಯನ್ನು ಹೊಸಕಿಹಾಕಬಲ್ಲದು ಎಂಬುದನ್ನು ನೆನಪಿಡಿ. ಪ್ರಾಪಂಚಿಕ ವಿಷಯಗಳ ಚಿಂತೆಯೇ ನಮ್ಮ ತಲೆಯಲ್ಲಿ ತುಂಬಿದ್ದರೆ ಅದು ನಮ್ಮ ಸಮಯ ಶಕ್ತಿಯನ್ನೆಲ್ಲ ಹೀರಿಕೊಳ್ಳುತ್ತದೆ. ಆಮೇಲೆ ರಾಜ್ಯ ಅಭಿರುಚಿಗಳ ಕಡೆ ಗಮನ ಕೊಡಲು ಸಮಯವೂ ಇರಲ್ಲ, ಮನಸ್ಸೂ ಇರಲ್ಲ. ಆದ್ದರಿಂದ ಪ್ರಾಪಂಚಿಕತೆಯೆಂಬ ಸೈತಾನನ ಪಾಶಕ್ಕೆ ನಾನೆಂದೂ ಬಲಿಬೀಳಲ್ಲ ಎಂಬ ದೃಢತೀರ್ಮಾನ ಮಾಡಿ!​—⁠ಇಬ್ರಿಯ 13:5 ಓದಿ.

ಕಣ್ಣಿಗೆ ಮರೆಯಾಗಿರುವ ಹೊಂಡ​—⁠ವ್ಯಭಿಚಾರ

11, 12. ಒಬ್ಬ ಕ್ರೈಸ್ತನು/ಳು ಸಹೋದ್ಯೋಗಿಯೊಂದಿಗೆ ವ್ಯಭಿಚಾರಗೈಯುವ ಹಂತಕ್ಕೆ ಹೇಗೆ ಹೋಗಬಹುದು?

11 ಒಂದು ಬಲಿಷ್ಠ ಪ್ರಾಣಿಯನ್ನು ಹಿಡಿಯಬೇಕಾದರೆ ಅದು ಹೋಗುವ ದಾರಿಯಲ್ಲಿ ಒಂದು ಹೊಂಡವನ್ನು ತೋಡಿಡುತ್ತಾರೆ. ಹೊಂಡ ಕಾಣದಂತೆ ಅದನ್ನು ಕಡ್ಡಿ, ಮಣ್ಣು ಹಾಕಿ ಮುಚ್ಚಿರುತ್ತಾರೆ. ಇಂಥದ್ದೇ ಪಾಶವನ್ನು ಸೈತಾನನು ತುಂಬ ಯಶಸ್ವಿಕರವಾಗಿ ಬಳಸಿದ್ದಾನೆ. ಅದೇ ಅನೈತಿಕತೆ. (ಜ್ಞಾನೋ. 22:14; 23:27) ಎಷ್ಟೋ ಕ್ರೈಸ್ತರು ಪ್ರಲೋಭನೆಯಲ್ಲಿ ಸುಲಭವಾಗಿ ಸಿಕ್ಕಿಕೊಳ್ಳುವ ಸನ್ನಿವೇಶಗಳಿಗೆ ತಮ್ಮನ್ನು ಒಡ್ಡಿದ ಕಾರಣ ಈ ಗುಂಡಿಗೆ ಬಿದ್ದಿದ್ದಾರೆ. ಕೆಲವು ವಿವಾಹಿತ ಸಹೋದರ ಸಹೋದರಿಯರು ತಮ್ಮ ಸಂಗಾತಿಯಲ್ಲದವರೊಂದಿಗೆ ಪ್ರಣಯಾತ್ಮಕ ಸಂಬಂಧ ಬೆಳೆಸಿಕೊಂಡದ್ದರಿಂದ ವ್ಯಭಿಚಾರ ಮಾಡಿದ್ದಾರೆ.

12 ಇಂಥ ಅಯೋಗ್ಯ ಪ್ರಣಯಾತ್ಮಕ ಸಂಬಂಧ ಕೆಲಸದ ಸ್ಥಳದಲ್ಲಿ ಹುಟ್ಟಿಕೊಳ್ಳುವ ಸಾಧ್ಯತೆಯಿದೆ. ಒಂದು ವರದಿಯ ಪ್ರಕಾರ ವ್ಯಭಿಚಾರಗೈದ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ಹಾಗೂ ಪುರುಷರಲ್ಲಿ ಮುಕ್ಕಾಲು ಭಾಗದಷ್ಟು ಮಂದಿ ಸಹೋದ್ಯೋಗಿಯೊಂದಿಗೆ ಅಯೋಗ್ಯ ಸಂಬಂಧ ಹೊಂದಿದ್ದರು. ನಿಮ್ಮ ಕೆಲಸದ ಸ್ಥಳದ ಸನ್ನಿವೇಶ ಹೇಗಿದೆ? ವಿರುದ್ಧ ಲಿಂಗದವರೊಂದಿಗೆ ಕೆಲಸ ಮಾಡಬೇಕಾಗುತ್ತದಾ? ಹಾಗಿದ್ದಲ್ಲಿ ಅವರೊಂದಿಗೆ ಎಂಥ ಸಂಬಂಧ ನಿಮಗಿದೆ? ಅವರೊಂದಿಗಿನ ಒಡನಾಟವನ್ನು ಕೆಲಸದ ವಿಷಯಕ್ಕೆ ಮಾತ್ರ ಸೀಮಿತವಾಗಿಟ್ಟಿದ್ದೀರಾ? ಆ ಪರಿಧಿಯನ್ನು ದಾಟಿ ಹೋಗುವಲ್ಲಿ ಏನಾಗಬಹುದು? ಈ ಸನ್ನಿವೇಶಗಳನ್ನು ತೆಗೆದುಕೊಳ್ಳಿ. ಒಬ್ಬ ಸಹೋದರಿ ತನ್ನೊಟ್ಟಿಗೆ ಕೆಲಸ ಮಾಡುವವನೊಂದಿಗೆ ಅನಾವಶ್ಯಕವಾಗಿ ಮಾತಾಡುತ್ತಾ ಇರುತ್ತಾಳೆ. ಸಮಯ ಸಂದಂತೆ ಅವನಿಗೆ ತನ್ನ ವೈಯಕ್ತಿಕ ವಿಷಯಗಳನ್ನೂ ಹೇಳಿಕೊಳ್ಳಲು ಆರಂಭಿಸುತ್ತಾಳೆ. ಗಂಡನೊಟ್ಟಿಗಿರುವ ಸಮಸ್ಯೆಗಳನ್ನೂ ಹೇಳಿಕೊಳ್ಳುವ ಮಟ್ಟಕ್ಕೆ ಹೋಗಬಹುದು. ಒಬ್ಬ ಸಹೋದರನು ಉದ್ಯೋಗದ ಸ್ಥಳದಲ್ಲಿರುವ ಸ್ತ್ರೀಯೊಂದಿಗೆ ಆಪ್ತತೆ ಬೆಳೆಸಿಕೊಳ್ಳುವಲ್ಲಿ ಆಕೆಯ ಕುರಿತು ಹೀಗೆ ಯೋಚಿಸಬಹುದು: “ಅವಳು ನನ್ನ ಮಾತಿಗೆ ಎಷ್ಟು ಬೆಲೆ ಕೊಡ್ತಾಳೆ! ನಾನು ಮಾತಾಡುವಾಗ ತಾಳ್ಮೆಯಿಂದ ಕೇಳ್ತಾಳೆ. ನನ್ನ ಮೇಲೆ ಅವಳಿಗೆ ತುಂಬ ಗೌರವ ಇದೆ. ನನ್ನ ಹೆಂಡ್ತೀನೂ ಇದ್ದಾಳಲ್ಲ . . . !” ಇಂಥ ಭಾವನೆಗಳನ್ನು ಬೆಳೆಸಿಕೊಂಡ ಕ್ರೈಸ್ತನು ವ್ಯಭಿಚಾರಗೈಯುವ ಅಪಾಯ ಹೆಚ್ಚು!

13. ಸಭೆಯೊಳಗೆ ಅಯೋಗ್ಯವಾದ ಪ್ರಣಯಾತ್ಮಕ ಸಂಬಂಧಗಳು ಉಂಟಾಗಲ್ಲ ಎಂದು ನೆನಸುತ್ತೀರಾ? ವಿವರಿಸಿ.

13 ಸಭೆಯೊಳಗೆ ಇಂಥ ಅಯೋಗ್ಯವಾದ ಪ್ರಣಯಾತ್ಮಕ ಸಂಬಂಧಗಳು ಉಂಟಾಗಲ್ಲ ಎಂದು ಹೇಳಸಾಧ್ಯವಿಲ್ಲ. ಈ ನಿಜ ಜೀವನ ಅನುಭವವನ್ನು ತೆಗೆದುಕೊಳ್ಳಿ. ಡಾನಿಯೆಲ್‌ ಮತ್ತು ಸಾರಾ * ದಂಪತಿ ರೆಗ್ಯುಲರ್‌ ಪಯನೀಯರರಾಗಿ ಸೇವೆ ಮಾಡುತ್ತಿದ್ದರು. ಹಿರಿಯರಾಗಿಯೂ ಸೇವೆ ಸಲ್ಲಿಸುತ್ತಿದ್ದ ಡಾನಿಯೆಲ್‌ ಯಾವುದೇ ನೇಮಕ ಕೊಟ್ಟರೂ ಇಲ್ಲ ಎನ್ನುತ್ತಿರಲಿಲ್ಲ. ಐವರು ಯುವಕರೊಂದಿಗೆ ಬೈಬಲ್‌ ಅಧ್ಯಯನ ಕೂಡ ನಡೆಸುತ್ತಿದ್ದರು. ಈ ಐವರಲ್ಲಿ ಮೂವರು ದೀಕ್ಷಾಸ್ನಾನ ಪಡೆದರು. ಹೊಸದಾಗಿ ದೀಕ್ಷಾಸ್ನಾನ ಪಡೆದ ಈ ಸಹೋದರರಿಗೆ ತುಂಬ ವಿಷಯಗಳಲ್ಲಿ ಸಹಾಯದ ಅಗತ್ಯವಿತ್ತು. ಈ ಸಹಾಯವನ್ನು ಸಾರಾ ಕೊಡಬೇಕಾಯಿತು. ಏಕೆಂದರೆ ಡಾನಿಯೆಲ್‌ ಸಭೆಯಲ್ಲಿ ತನಗಿದ್ದ ನಾನಾ ಜವಾಬ್ದಾರಿಗಳಿಂದ ತುಂಬ ಬ್ಯುಸಿ ಇದ್ದರು. ಆ ಸಹೋದರರಿಗೆ ಪ್ರೋತ್ಸಾಹ ಬೇಕಾಗಿದ್ದಾಗಲೂ ಸಾರಾಳ ಹತ್ತಿರವೇ ಬರಬೇಕಾಯಿತು. ಸಾರಾಗೆ ಭಾವನಾತ್ಮಕ ನೆರವು ಬೇಕಾದಾಗ ಇದನ್ನು ಡಾನಿಯೆಲ್‌ರ ಬೈಬಲ್‌ ವಿದ್ಯಾರ್ಥಿಗಳು ಕೊಟ್ಟರು. ಇದು ಸಾರಾಳನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿತು. ಡಾನಿಯೆಲ್‌ ಹೇಳುವುದು: “ಸುಮಾರು ಸಮಯದ ವರೆಗೆ ಇತರರಿಗೆ ಸಹಾಯಮಾಡಿ ಸಾರಾ ಆಧ್ಯಾತ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ಬಳಲಿದ್ದಳು. ನನ್ನ ಕಣ್ಣ ಮುಂದೆಯೇ ಅವಳು ಆಧ್ಯಾತ್ಮಿಕವಾಗಿ ತುಂಬ ಬಲಹೀನಳಾಗಿದ್ದಳು. ಆದರೆ ಅದನ್ನು ನೋಡಲಾರದಷ್ಟು ನಾನು ಸಭಾ ಜವಾಬ್ದಾರಿಗಳಲ್ಲಿ ಮುಳುಗಿಹೋಗಿದ್ದೆ. ನಾನು ಅವಳಿಗೆ ಹೆಚ್ಚು ಗಮನಕೊಡಲಿಲ್ಲ. ಇದರಿಂದ ದೊಡ್ಡ ತಪ್ಪೇ ನಡೆದುಹೋಯಿತು. ಸಾರಾ ನನ್ನ ಒಬ್ಬ ಬೈಬಲ್‌ ವಿದ್ಯಾರ್ಥಿಯೊಂದಿಗೆ ವ್ಯಭಿಚಾರ ಮಾಡಿಬಿಟ್ಟಳು.” ಇಂಥ ಶೋಚನೀಯ ಸ್ಥಿತಿ ನಿಮಗೆ ಬಾರದಿರಲು ಏನು ಮಾಡಬಲ್ಲಿರಿ?

14, 15. ವ್ಯಭಿಚಾರವೆಂಬ ಗುಂಡಿಗೆ ಬೀಳದಂತೆ ವಿವಾಹಿತ ಕ್ರೈಸ್ತರಿಗೆ ಯಾವುದು ಸಹಾಯಮಾಡಬಲ್ಲದು?

14 ವ್ಯಭಿಚಾರದ ಗುಂಡಿಗೆ ಬೀಳಬಾರದಾದರೆ, ನೀವು ವಿವಾಹದ ಸಮಯದಲ್ಲಿ ಮಾಡಿದ ಪ್ರತಿಜ್ಞೆಯ ಅರ್ಥದ ಕುರಿತು ಯೋಚಿಸಿ. “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ” ಎಂದು ಯೇಸು ಹೇಳಿದ್ದಾನೆ. (ಮತ್ತಾ. 19:⁠6) ಹಾಗಾದರೆ ಸಭಾ ಸುಯೋಗಗಳು ನಿಮ್ಮ ಸಂಗಾತಿಗಿಂತ ಮುಖ್ಯವಲ್ಲ. ಒಂದುವೇಳೆ ನೀವು ಆಗಾಗ ಅನಗತ್ಯ ಕೆಲಸಗಳಿಗೋಸ್ಕರ ನಿಮ್ಮ ಸಂಗಾತಿಯಿಂದ ದೂರವಿದ್ದರೆ ನಿಮ್ಮ ದಾಂಪತ್ಯಬಂಧ ಸಡಿಲಗೊಳ್ಳುತ್ತಿದೆ ಎಂದರ್ಥ. ಇಂಥ ಸನ್ನಿವೇಶದಿಂದಾಗಿ ಸಂಗಾತಿಯೊಬ್ಬರು ಪ್ರಲೋಭನೆಗೆ ಬಲಿಬಿದ್ದು ಗಂಭೀರ ಪಾಪವನ್ನೂ ಮಾಡುವ ಅಪಾಯವಿದೆ.

15 ನೀವೊಬ್ಬ ಹಿರಿಯರಾಗಿದ್ದಲ್ಲಿ ಆಗೇನು? ಸಭೆಯ ಜವಾಬ್ದಾರಿಗಳ ಕಡೆಗೆ ಗಮನಕೊಡಬೇಕಾಗಿಲ್ಲವಾ? “ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ; ನಿರ್ಬಂಧದಿಂದಲ್ಲ, ಇಚ್ಛಾಪೂರ್ವಕವಾಗಿ ಮಾಡಿರಿ; ಅಪ್ರಾಮಾಣಿಕ ಲಾಭದ ಮೇಲಣ ಪ್ರೀತಿಯಿಂದಲ್ಲ, ಸಿದ್ಧಮನಸ್ಸಿನಿಂದ ಮಾಡಿರಿ” ಎಂಬುದು ಪೇತ್ರನ ಸಲಹೆ. (1 ಪೇತ್ರ 5:⁠2) ಅಂದರೆ ಸಭೆಯ ಸದಸ್ಯರನ್ನು ನಿರ್ಲಕ್ಷಿಸಬಾರದು. ಆದರೆ ಗಂಡನಾಗಿ ನೀವು ಮಾಡಬೇಕಾಗಿರುವ ವಿಷಯಗಳನ್ನು ಬಿಟ್ಟುಬಿಟ್ಟು ಹಿರಿಯನಾಗಿ ಮಾಡಬೇಕಾಗಿರುವ ವಿಷಯಗಳಲ್ಲೇ ಮುಳುಗಿರಬಾರದು. ಸಭೆಯಲ್ಲಿರುವವರನ್ನು ಆಧ್ಯಾತ್ಮಿಕವಾಗಿ ಪರಾಮರಿಸುತ್ತಾ ನಿಮ್ಮ ಹೆಂಡತಿಯನ್ನು ಆಧ್ಯಾತ್ಮಿಕವಾಗಿ ಪೋಷಿಸದೆ ಬಿಡುವುದರಲ್ಲಿ ಅರ್ಥವೇನಿದೆ? ಇದು ಅಪಾಯಕಾರಿ ಕೂಡ. “ಕುಟುಂಬಕ್ಕೆ ಬೇಕಾದದ್ದನ್ನು ಮಾಡದೆ ಸಭೆಯ ಜವಾಬ್ದಾರಿಗಳನ್ನು ಪೂರೈಸುವುದರಲ್ಲೇ ತಲ್ಲೀನರಾಗಿರುವುದು ಸರಿಯಲ್ಲ” ಎನ್ನುತ್ತಾರೆ ಡಾನಿಯೆಲ್‌.

16, 17. (1) ಪ್ರಣಯಾತ್ಮಕ ಸಂಬಂಧ ಬೆಳೆಸಿಕೊಳ್ಳಲು ಇಷ್ಟವಿಲ್ಲ ಎಂದು ವಿವಾಹಿತ ಕ್ರೈಸ್ತರು ಕೆಲಸದ ಸ್ಥಳದಲ್ಲಿ ಹೇಗೆ ತೋರಿಸಸಾಧ್ಯ? (2) ವ್ಯಭಿಚಾರದಿಂದ ದೂರವಿರಲು ಸಹಾಯಮಾಡುವ ಲೇಖನದ ಒಂದು ಉದಾಹರಣೆ ಕೊಡಿ.

16 ವ್ಯಭಿಚಾರದ ಪಾಶಕ್ಕೆ ಬಲಿಬೀಳದಿರಲು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಎಷ್ಟೋ ಉತ್ತಮ ಸಲಹೆಗಳನ್ನು ಕೊಟ್ಟಿವೆ. 2006 ಅಕ್ಟೋಬರ್‌ 1ರ ಕಾವಲಿನಬುರುಜುವಿನಲ್ಲಿ ಈ ಸಲಹೆಯಿತ್ತು: “ಉದ್ಯೋಗದ ಸ್ಥಳದಲ್ಲಿ ಮತ್ತು ಬೇರೆ ಕಡೆಗಳಲ್ಲಿ, ಆಪ್ತತೆ ಬೆಳೆಯುವಂತೆ ಮಾಡಬಲ್ಲ ಸನ್ನಿವೇಶಗಳ ಕುರಿತು ಎಚ್ಚರದಿಂದಿರಿ. ಉದಾಹರಣೆಗೆ, ಕೆಲಸದ ಸಮಯಾನಂತರ ವಿರುದ್ಧ ಲಿಂಗದ ಒಬ್ಬ ವ್ಯಕ್ತಿಯೊಂದಿಗೆ ನಿಕಟವಾಗಿ ಕೆಲಸಮಾಡುತ್ತಾ ಹೆಚ್ಚು ತಾಸುಗಳನ್ನು ಕಳೆಯುವುದು ಪ್ರಲೋಭನೆಗೆ ನಡೆಸಬಲ್ಲದು. ವಿವಾಹಿತ ಪುರುಷ ಅಥವಾ ಸ್ತ್ರೀಯಾಗಿರುವ ನೀವು, ಯಾವುದೇ ಪ್ರಣಯಾತ್ಮಕ ಸಂಬಂಧಕ್ಕಾಗಿ ಲಭ್ಯವಿಲ್ಲವೆಂಬುದನ್ನು ನಿಮ್ಮ ಮಾತು ಹಾಗೂ ನಡವಳಿಕೆಯಿಂದ ಸ್ಪಷ್ಟಪಡಿಸಬೇಕು. ಒಬ್ಬ ದೇವಭಕ್ತ ವ್ಯಕ್ತಿಯಾಗಿರುವ ನೀವು ಖಂಡಿತವಾಗಿಯೂ, ಚೆಲ್ಲಾಟದ ಮೂಲಕವಾಗಲಿ ಅಸಭ್ಯ ಉಡುಪು ಕೇಶಾಲಂಕಾರದ ಮೂಲಕವಾಗಲಿ ಅನುಚಿತ ಗಮನವನ್ನು ಸೆಳೆಯುವವರಾಗಿರಬಾರದು. . . . ನಿಮ್ಮ ಕೆಲಸದ ಸ್ಥಳದಲ್ಲಿ, ನಿಮ್ಮ ವಿವಾಹ ಸಂಗಾತಿ ಮತ್ತು ಮಕ್ಕಳ ಚಿತ್ರಗಳನ್ನಿಡುವುದು, ನಿಮ್ಮ ಕುಟುಂಬವು ನಿಮ್ಮ ಆದ್ಯತೆಯಾಗಿದೆಯೆಂದು ನಿಮಗೂ ಇತರರಿಗೂ ದೃಶ್ಯ ಜ್ಞಾಪಕವಾಗಿರುವುದು. ಇನ್ನೊಬ್ಬ ವ್ಯಕ್ತಿಯ ಯಾವುದೇ ಪ್ರಣಯಾತ್ಮಕ ಪ್ರಸ್ತಾಪಗಳನ್ನೆಂದೂ ಉತ್ತೇಜಿಸಲೂಬೇಡಿ ಸಹಿಸಿಕೊಂಡು ಸುಮ್ಮನಿರಲೂ ಬೇಡಿ.”

17 ಇಸವಿ 2009ರ ಜುಲೈ-ಸೆಪ್ಟೆಂಬರ್‌ ಎಚ್ಚರ! ಪತ್ರಿಕೆಯಲ್ಲಿ ಬಂದ “ದಾಂಪತ್ಯ ನಿಷ್ಠೆ​—⁠ನಿಜಾರ್ಥವೇನು?” ಎಂಬ ಲೇಖನದಲ್ಲಿ ಒಂದು ಎಚ್ಚರಿಕೆಯ ಮಾತಿತ್ತು. ನಿಮ್ಮ ಗಂಡ ಅಥವಾ ಹೆಂಡತಿ ಅಲ್ಲದ ವ್ಯಕ್ತಿಯೊಂದಿಗೆ ಲೈಂಗಿಕವಾಗಿ ಆಪ್ತವಾಗಿರುವ ರೀತಿಯ ಕನಸು ಕಾಣುವುದು ತಪ್ಪು. ಏಕೆಂದರೆ ಇದು ವ್ಯಭಿಚಾರ ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅದು ಹೇಳಿತು. (ಯಾಕೋ. 1:​14, 15) ನಿಮಗೆ ವಿವಾಹವಾಗಿರುವಲ್ಲಿ ನಿಮ್ಮ ಸಂಗಾತಿಯೊಂದಿಗೆ ಇಂಥ ಮಾಹಿತಿಯನ್ನು ಆಗಾಗ ಪರಿಶೀಲಿಸುವುದು ಒಳ್ಳೇದು. ವಿವಾಹ ಯೆಹೋವನ ಏರ್ಪಾಡು. ಅದು ಪವಿತ್ರ ಬಂಧವಾಗಿದೆ. ನಿಮ್ಮ ವೈವಾಹಿಕ ಜೀವನದ ಕುರಿತು ನಿಮ್ಮ ಸಂಗಾತಿಯೊಂದಿಗೆ ಮಾತಾಡಲು ಸಮಯ ಮಾಡಿಕೊಳ್ಳಿ. ಹೀಗೆ ದೇವರ ದೃಷ್ಟಿಯಲ್ಲಿ ಪವಿತ್ರವಾಗಿರುವ ವಿವಾಹದ ಏರ್ಪಾಡನ್ನು ನೀವು ಗಣ್ಯಮಾಡುತ್ತೀರಿ ಎಂದು ತೋರಿಸಿಕೊಡಿ.​—⁠ಆದಿ. 2:​21-24.

18, 19. (1) ವ್ಯಭಿಚಾರದಿಂದ ಯಾವೆಲ್ಲಾ ಅನಾಹುತ ಆಗುತ್ತದೆ? (2) ದಾಂಪತ್ಯ ನಿಷ್ಠೆಯಿಂದ ಸಿಗುವ ಪ್ರಯೋಜನಗಳು ಯಾವುವು?

18 ಅಯೋಗ್ಯವಾದ ಪ್ರಣಯಾತ್ಮಕ ಸಂಬಂಧ ಬೆಳೆಸಿಕೊಳ್ಳುವ ಪ್ರಲೋಭನೆ ನಿಮಗೆ ಆಗುತ್ತಿರುವಲ್ಲಿ ಹಾದರ ಮತ್ತು ವ್ಯಭಿಚಾರದಿಂದಾಗುವ ಅನಾಹುತಗಳ ಕುರಿತು ಯೋಚಿಸಿ. (ಜ್ಞಾನೋ. 7:​22, 23; ಗಲಾ. 6:⁠7) ಅನೈತಿಕತೆಯಲ್ಲಿ ತೊಡಗುವವರು ಯೆಹೋವನಿಗೆ ನೋವು ತರುತ್ತಾರೆ. ತಮ್ಮ ಸಂಗಾತಿಯ ಮನಸ್ಸನ್ನು ಘಾಸಿಗೊಳಿಸುತ್ತಾರಲ್ಲದೆ ಸ್ವತಃ ನೋವು ತಿನ್ನುತ್ತಾರೆ. (ಮಲಾಕಿಯ 2:​13, 14 ಓದಿ.) ಸಭ್ಯ ನಡತೆಯನ್ನು ಕಾಪಾಡಿಕೊಳ್ಳುವುದರಿಂದ ಸಿಗುವ ಪ್ರಯೋಜನಗಳ ಕುರಿತೂ ಯೋಚಿಸಿ. ಇದರಿಂದ ಒಳ್ಳೇ ಮನಸ್ಸಾಕ್ಷಿಯೊಂದಿಗೆ ಕೂಡಿದ ಸಂತೋಷಭರಿತ ಜೀವನ ನಡೆಸಲು ಸಾಧ್ಯವಾಗುತ್ತದೆ. ನಿತ್ಯಜೀವದ ನಿರೀಕ್ಷೆಯೂ ಸಿಗುತ್ತದೆ.​—⁠ಜ್ಞಾನೋಕ್ತಿ 3:​1, 2 ಓದಿ.

19 “[ದೇವರ] ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುತ್ತದೆ; ಅಂಥವರಿಗೆ ವಿಘ್ನಕರವಾದದ್ದೇನೂ ಇರುವದಿಲ್ಲ” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತ. 119:165) ಆದ್ದರಿಂದ ಸತ್ಯವನ್ನು ಪ್ರೀತಿಸಿರಿ. ಕೆಟ್ಟತನ ತುಂಬಿರುವ ಈ ಸಮಯದಲ್ಲಿ “ನೀವು ನಡೆದುಕೊಳ್ಳುವ ರೀತಿಯನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳಿರಿ. ಅವಿವೇಕಿಗಳಂತೆ ನಡೆದುಕೊಳ್ಳದೆ ವಿವೇಕಿಗಳಂತೆ ನಡೆದುಕೊಳ್ಳಿರಿ.” (ಎಫೆ. 5:​15, 16) ಸತ್ಯಾರಾಧಕರಾದ ನಮ್ಮನ್ನು ಹಿಡಿಯಲು ಸೈತಾನನು ದಾರಿಯುದ್ದಕ್ಕೂ ಅನೇಕ ಪಾಶಗಳನ್ನು ಇಟ್ಟಿದ್ದಾನೆ. ಇವುಗಳಿಂದ ತಪ್ಪಿಸಿಕೊಳ್ಳಲು ಬೇಕಾದ ಸಲಹೆ-ಸೂಚನೆಗಳು ನಮಗೆ ಈಗಾಗಲೇ ಸಿಕ್ಕಿವೆ. “ದೃಢರಾಗಿ ನಿಲ್ಲಲು” ನಮಗೇನು ಬೇಕೋ ಅದನ್ನು ಯೆಹೋವನು ಕೊಟ್ಟಿದ್ದಾನೆ. ಅದರಿಂದ ನಾವು “ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸಲು” ಶಕ್ತರಾಗುವೆವು.​—⁠ಎಫೆ. 6:​11, 16.

[ಪಾದಟಿಪ್ಪಣಿಗಳು]

^ ಪ್ಯಾರ. 10 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 13 ಹೆಸರುಗಳನ್ನು ಬದಲಾಯಿಸಲಾಗಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 26ರಲ್ಲಿರುವ ಚಿತ್ರ]

ಪ್ರಾಪಂಚಿಕತೆ ಒಬ್ಬನನ್ನು ಆಧ್ಯಾತ್ಮಿಕವಾಗಿ ಉಸಿರುಕಟ್ಟಿಸಿ ಕೊಲ್ಲಬಹುದು. ಈ ಅವಸ್ಥೆ ನಿಮಗೆ ಬರದಿರಲಿ

[ಪುಟ 29ರಲ್ಲಿರುವ ಚಿತ್ರ]

ಚೆಲ್ಲಾಟವಾಡುವುದು ಯಾ ಅದಕ್ಕೆ ಪ್ರತಿಕ್ರಿಯಿಸುವುದು ವ್ಯಭಿಚಾರಕ್ಕೆ ನಡೆಸಬಲ್ಲದು