ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಾನು ನಿಮ್ಮ ಸಂಗಡ ಇರುತ್ತೇನೆ’

‘ನಾನು ನಿಮ್ಮ ಸಂಗಡ ಇರುತ್ತೇನೆ’

‘ನಾನು ನಿಮ್ಮ ಸಂಗಡ ಇರುತ್ತೇನೆ’

“ಬಹು ಜನರು ಅತ್ತಿತ್ತ ತಿರುಗುವರು, [ನಿಜವಾದ ಜ್ಞಾನ] ಹೆಚ್ಚುವದು.”​—⁠ದಾನಿ. 12:⁠4.

ಉತ್ತರಿಸುವಿರಾ?

ಆಧುನಿಕ ಸಮಯದಲ್ಲಿ “ನಿಜವಾದ ಜ್ಞಾನ” ಹೇಗೆ ಸಿಕ್ಕಿತು?

“ಬಹು ಜನರು” ಸತ್ಯವನ್ನು ಸ್ವೀಕರಿಸಲು ಹೇಗೆ ಸಾಧ್ಯವಾಯಿತು?

ಯಾವ ವಿಧಗಳಲ್ಲಿ ನಿಷ್ಕೃಷ್ಟ ಜ್ಞಾನ ಹೆಚ್ಚಾಯಿತು?

1, 2. (1) ಯೇಸು ಇಂದು ನಮ್ಮೊಂದಿಗಿದ್ದಾನೆ, ಮುಂದೆಯೂ ಇರುವನು ಎನ್ನುವುದು ನಮಗೆ ಹೇಗೆ ಗೊತ್ತು? (2) ದಾನಿಯೇಲ 12:4ಕ್ಕನುಸಾರ ಬೈಬಲಿನ ಜಾಗರೂಕ ಅಧ್ಯಯನದ ಫಲಿತಾಂಶ ಏನಾಗಿರುವುದು?

ನೀವು ಪರದೈಸಿನಲ್ಲಿ ಇದ್ದೀರೆಂದು ಭಾವಿಸಿ. ಪ್ರತಿದಿನ ಬೆಳಗ್ಗೆ ಎದ್ದೇಳುವಾಗ ಮೈಮನವೆಲ್ಲ ಹಗುರ. ನವಚೈತನ್ಯ ಚಿಮ್ಮುತ್ತಿರುತ್ತದೆ. ನೋವು-ದುಃಖ ಇಲ್ಲವೇ ಇಲ್ಲ. ಹಿಂದಿದ್ದ ದೇಹದೌರ್ಬಲ್ಯಗಳೂ ಇನ್ನಿಲ್ಲ. ದೃಷ್ಟಿ ಸ್ಪಷ್ಟವಾಗಿದೆ. ಕಿವಿ ಚೆನ್ನಾಗಿ ಕೇಳುತ್ತಿದೆ. ಆಘ್ರಾಣಿಸುವುದರಲ್ಲಿ, ಸ್ಪರ್ಶದಲ್ಲಿ, ರುಚಿ ನೋಡುವುದರಲ್ಲಿ ಯಾವುದೇ ತೊಂದರೆಯಿಲ್ಲ. ಅದಮ್ಯ ಶಕ್ತಿ ಕೂಡ ನಿಮಗಿದೆ. ಸಂತೃಪ್ತಿಯ ಕೆಲಸ. ಸುತ್ತಮುತ್ತ ಸ್ನೇಹಿತರು. ನಿಮ್ಮೆಲ್ಲಾ ಚಿಂತೆ ಮಾಯ. ಹೌದು, ಇದೆಲ್ಲವನ್ನು ದೇವರ ರಾಜ್ಯವು ಭೂಮಿಯ ಮೇಲೆ ಆಳ್ವಿಕೆ ನಡೆಸುವಾಗ ನೀವು ಅನುಭವಿಸುವಿರಿ. ಆ ರಾಜ್ಯದ ಅರಸನಾದ ಯೇಸು ಕ್ರಿಸ್ತ ಆ ಆಶೀರ್ವಾದಗಳನ್ನು ಮಾನವಕುಲಕ್ಕೆ ಕೊಡುವನು. ಜೊತೆಗೆ ಯೆಹೋವನ ಕುರಿತು ಎಲ್ಲರೂ ಜ್ಞಾನವನ್ನು ಪಡೆಯುವಂತೆ ನೋಡಿಕೊಳ್ಳುವನು.

2 ಆ ಶಿಕ್ಷಣ ಕಾರ್ಯದಲ್ಲಿ ದೇವರ ನಿಷ್ಠಾವಂತ ಸೇವಕರು ಭಾಗವಹಿಸುವರು. ಅವರಿಗೆ ಸ್ವತಃ ಯೆಹೋವ ದೇವರು ಮತ್ತು ಯೇಸು ಕ್ರಿಸ್ತ ಸಹಾಯ ಮಾಡುವರು. ಅವರಿಬ್ಬರು ಈಗಲೂ ನಂಬಿಗಸ್ತ ಸೇವಕರಿಗೆ ಶಿಕ್ಷಣ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ. ಯೇಸು ಸ್ವರ್ಗಕ್ಕೆ ಹೋಗುವ ಮುಂಚೆ ತನ್ನ ನಿಷ್ಠಾವಂತ ಶಿಷ್ಯರಿಗೆ, “ನಾನು . . . ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು. (ಮತ್ತಾಯ 28:​19, 20 ಓದಿ.) ಅವನ ಮಾತಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸಲು ದಾನಿಯೇಲನು ಬರೆದ ಪ್ರವಾದನೆ ಸಹಾಯ ಮಾಡುತ್ತದೆ. ಇದರಲ್ಲಿ ನಮ್ಮ ದಿನಗಳ ಕುರಿತು 2,500 ವರ್ಷಗಳ ಹಿಂದೆ ಅವನು ತಿಳಿಸಿದ್ದೇನೆಂದರೆ, “ಬಹು ಜನರು ಅತ್ತಿತ್ತ ತಿರುಗುವರು, ತಿಳುವಳಿಕೆಯು [ನಿಜವಾದ ಜ್ಞಾನ, NW] ಹೆಚ್ಚುವದು.” (ದಾನಿ. 12:⁠4) ಈ ವಚನದಲ್ಲಿ “ಅತ್ತಿತ್ತ ತಿರುಗು” ಎಂಬದಕ್ಕಿರುವ ಹೀಬ್ರು ಕ್ರಿಯಾಪದದ ಅರ್ಥ ಜಾಗ್ರತೆಯಿಂದ ಅಧ್ಯಯನ ಮಾಡು ಎಂದಾಗಿದೆ. ಹೀಗೆ ಶ್ರದ್ಧೆಯಿಂದ ಅಧ್ಯಯನ ಮಾಡುವವರು ದೇವರ ವಾಕ್ಯದ ನಿಜವಾದ ಅಂದರೆ ನಿಷ್ಕೃಷ್ಟವಾದ ಜ್ಞಾನ ಪಡೆದುಕೊಳ್ಳುವರೆಂದು ಆ ಪ್ರವಾದನೆ ತೋರಿಸುತ್ತದೆ. ಮಾತ್ರವಲ್ಲ “ನಿಜವಾದ ಜ್ಞಾನ ಹೆಚ್ಚುವುದು” ಎಂದು ಪ್ರವಾದನೆ ಹೇಳುತ್ತದೆ. ಅಂದರೆ ಅನೇಕಾನೇಕ ಮಂದಿ ಆ ಜ್ಞಾನವನ್ನು ಪಡೆದು ಇತರರಿಗೆ ಕಲಿಸುವರು, ಹೀಗೆ ಅದು ಎಲ್ಲೆಡೆ ಪಸರಿಸುವುದು. ಈ ಪ್ರವಾದನೆ ಹೇಗೆ ನೆರವೇರುತ್ತಿದೆ ಎಂದು ನಾವೀಗ ಪರಿಶೀಲಿಸೋಣ. ಇದು, ತಾನು ಹೇಳಿದಂತೆ ಯೇಸು ಇಂದಿಗೂ ತನ್ನ ಶಿಷ್ಯರೊಂದಿಗೆ ಇದ್ದಾನೆ ಮತ್ತು ಯೆಹೋವನು ತನ್ನೆಲ್ಲ ವಾಗ್ದಾನಗಳನ್ನು ಪೂರೈಸಲು ಪೂರ್ಣಶಕ್ತನು ಎನ್ನುವುದನ್ನು ಮನಗಾಣಿಸುತ್ತದೆ.

ಯಥಾರ್ಥ ಕ್ರೈಸ್ತರು “ನಿಜವಾದ ಜ್ಞಾನ”ವನ್ನು ಕಂಡುಕೊಂಡರು

3. ಅಪೊಸ್ತಲರ ಮರಣಾನಂತರ ಏನು ಸಂಭವಿಸಿತು?

3 ಮುಂತಿಳಿಸಲಾದಂತೆ ಅಪೊಸ್ತಲರ ಮರಣಾನಂತರ ತಲೆಯೆತ್ತಿದ ಧರ್ಮಭ್ರಷ್ಟತೆ ಕಾಡ್ಗಿಚ್ಚಿನಂತೆ ಹರಡಿತು. (ಅ. ಕಾ. 20:​28-30; 2 ಥೆಸ. 2:​1-3) ಶತಮಾನಗಳ ವರೆಗೆ “ನಿಜವಾದ ಜ್ಞಾನ” ಬೈಬಲನ್ನು ತಿಳಿಯದವರ ಮಧ್ಯೆ ಮಾತ್ರವಲ್ಲ ಕ್ರೈಸ್ತರೆಂದು ಹೇಳಿಕೊಳ್ಳುವವರಲ್ಲೂ ಇರಲಿಲ್ಲ. ಕ್ರೈಸ್ತ ಪ್ರಪಂಚದ ಮುಖಂಡರು ಬೈಬಲನ್ನು ನಂಬುತ್ತೇವೆಂದು ಹೇಳಿಕೊಂಡರಷ್ಟೆ. ಆದರೆ ಜನರಿಗೆ ಕಲಿಸಿದ್ದು ಮಾತ್ರ ‘ದೆವ್ವಗಳ ಬೋಧನೆಗಳನ್ನು,’ ದೇವರಿಗೆ ಅಗೌರವ ತರುವ ಸುಳ್ಳು ಬೋಧನೆಗಳನ್ನು. (1 ತಿಮೊ. 4:⁠1) ಹಾಗಾಗಿ ಬಹುತೇಕ ಮಂದಿ ಆಧ್ಯಾತ್ಮಿಕ ಅಜ್ಞಾನದಲ್ಲಿದ್ದರು. ತ್ರಯೈಕ್ಯ ದೇವರು, ಅಮರ ಆತ್ಮ, ನಿತ್ಯ ಯಾತನೆಯ ನರಕವನ್ನು ನಂಬಿದರು.

4. ಯಥಾರ್ಥ ಕ್ರೈಸ್ತರ ಗುಂಪೊಂದು 1870ರ ದಶಕದಲ್ಲಿ “ನಿಜವಾದ ಜ್ಞಾನ”ಕ್ಕಾಗಿ ಹೇಗೆ ಹುಡುಕಲು ಆರಂಭಿಸಿತು?

4 ಆದರೆ 1870ರ ದಶಕದಲ್ಲಿ ಅಂದರೆ ‘ಕಡೇ ದಿವಸಗಳು’ ಆರಂಭವಾಗುವುದಕ್ಕೆ ಸುಮಾರು ನಲ್ವತ್ತು ವರ್ಷಗಳ ಮುಂಚೆ ಅಮೆರಿಕದ ಪೆನ್ಸಿಲ್ವೇನಿಯದಲ್ಲಿ ಕೆಲವು ಯಥಾರ್ಥ ಕ್ರೈಸ್ತರು “ನಿಜವಾದ ಜ್ಞಾನ”ಕ್ಕಾಗಿ ಹುಡುಕಿದರು. ಅವರೆಲ್ಲರೂ ಒಂದು ಗುಂಪಾಗಿ ಬೈಬಲನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿದರು. (2 ತಿಮೊ. 3:⁠1) ತಮ್ಮನ್ನು ‘ಬೈಬಲ್‌ ವಿದ್ಯಾರ್ಥಿಗಳು’ ಎಂದು ಕರೆದುಕೊಂಡರು. ದೇವರ ಚಿತ್ತವನ್ನು ಮಾಡಲು ಯಥಾರ್ಥ ಮನಸ್ಸಿಂದ ಬಯಸಿದ ಅವರು ದೀನ ಜನರಾಗಿದ್ದರು. ಯಾರಿಂದ ನಿಜವಾದ ಜ್ಞಾನ ಮರೆಯಾಗಿರುವುದೆಂದು ಯೇಸು ಹೇಳಿದನೋ ಅಂಥ ‘ವಿವೇಕಿಗಳೂ ಜ್ಞಾನಿಗಳೂ’ ಅವರಾಗಿರಲಿಲ್ಲ. (ಮತ್ತಾ. 11:25) ಅವರು ಬೈಬಲನ್ನು ಜಾಗ್ರತೆಯಿಂದ ಓದಿ ಚರ್ಚಿಸಿ ಧ್ಯಾನಿಸಿದರು. ದೇವರ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿದರು. ಬೈಬಲ್‌ ವಚನಗಳನ್ನು ಒಂದಕ್ಕೊಂದು ಹೋಲಿಸಿ ನೋಡಿದರು. ಬೈಬಲ್‌ ಸತ್ಯಕ್ಕಾಗಿ ಶೋಧಿಸಿದವರ ಬರಹಗಳನ್ನು ಪರಿಶೀಲಿಸಿದರು. ಹೀಗೆ ನೂರಾರು ವರ್ಷಗಳಿಂದ ಮರೆಯಾಗಿದ್ದ ಸತ್ಯಗಳನ್ನು ಬೈಬಲ್‌ ವಿದ್ಯಾರ್ಥಿಗಳು ಸ್ವಲ್ಪ ಸ್ವಲ್ಪವಾಗಿ ಗ್ರಹಿಸಲು ಆರಂಭಿಸಿದರು.

5. ದಿ ಓಲ್ಡ್‌ ಥಿಯಾಲಜಿ ಕರಪತ್ರಗಳನ್ನು ಹೊರತಂದ ಉದ್ದೇಶ ಏನಾಗಿತ್ತು?

5 ತಾವು ಕಲಿಯುತ್ತಿದ್ದ ವಿಷಯಗಳಿಂದ ಬೈಬಲ್‌ ವಿದ್ಯಾರ್ಥಿಗಳು ಪುಳಕಿತರಾದರು. ಆದರೆ ಹೊಸದೇನನ್ನೋ ತಾವು ಕಂಡುಹಿಡಿದಿದ್ದೇವೆಂದು ಹಮ್ಮಿನಿಂದ ಬೀಗಲಿಲ್ಲ. (1 ಕೊರಿಂ. 8:⁠1) ದಿ ಓಲ್ಡ್‌ ಥಿಯಾಲಜಿ ಎಂಬ ಶೀರ್ಷಿಕೆಯುಳ್ಳ ಕರಪತ್ರಗಳನ್ನು ಸರಣಿಯಾಗಿ ಹೊರತಂದರು. ಅದರ ಗುರಿ ಈಗಾಗಲೇ ಬೈಬಲಿನಲ್ಲಿ ದಾಖಲಾಗಿದ್ದ ಸತ್ಯವನ್ನು ಜನರು ತಿಳಿಯಬೇಕೆಂಬುದೇ. ಜನರು ಬೈಬಲನ್ನು ಅಧ್ಯಯನ ಮಾಡಿ “ಮಾನವರ ಎಲ್ಲ ಸುಳ್ಳು ಸಂಪ್ರದಾಯಗಳನ್ನು” ತೊರೆಯಲು ಮೊತ್ತಮೊದಲ ಕರಪತ್ರ ಸಹಾಯ ಮಾಡಿತು. ಮಾತ್ರವಲ್ಲ “ಮೂಲ ಸಿದ್ಧಾಂತ” ಅಂದರೆ ಯೇಸು, ಅಪೊಸ್ತಲರು ಕಲಿಸಿದ ಸತ್ಯ ಬೋಧನೆಗಳನ್ನು ಸ್ವೀಕರಿಸಲು ನೆರವಾಯಿತು.​—⁠ದಿ ಓಲ್ಡ್‌ ಥಿಯಾಲಜಿ ನಂ. 1, ಏಪ್ರಿಲ್‌ 1889, ಪುಟ 32.

6, 7. (1) ನಾವು 1870ರ ದಶಕದಿಂದ ಯಾವ ಸತ್ಯಗಳನ್ನು ಕಲಿತಿದ್ದೇವೆ? (2) ಮುಖ್ಯವಾಗಿ ಯಾವ ಸತ್ಯವನ್ನು ಕಲಿತದ್ದಕ್ಕಾಗಿ ನೀವು ಕೃತಜ್ಞರಾಗಿದ್ದೀರಿ?

6 ಇಸವಿ 1870ರ ದಶಕದಿಂದ ಹಿಡಿದು ಯೆಹೋವನ ಸಾಕ್ಷಿಗಳು ಅನೇಕಾನೇಕ ರೋಚಕ ಸತ್ಯಗಳನ್ನು ಕಲಿತರು. * ಆ ಸತ್ಯಗಳು ಕೇವಲ ವಾಸ್ತವಾಂಶಗಳಲ್ಲ. ಬಿಡುಗಡೆ ತರುವ ರೋಮಾಂಚಕ ವಿಷಯಗಳು. ಬಾಳಿಗೊಂದು ಅರ್ಥಕೊಟ್ಟು ಸಂತೋಷ ತರುತ್ತವೆ. ನಿರೀಕ್ಷೆಯ ಹೊಂಗಿರಣವಾಗಿವೆ. ಯೆಹೋವ ದೇವರ ವ್ಯಕ್ತಿತ್ವ, ಉದ್ದೇಶವನ್ನು ತಿಳಿಯಲು ಸಹಾಯ ಮಾಡಿವೆ. ಯೇಸು ಯಾರು, ಆತ ಭೂಮಿಗೆ ಬಂದು ಮರಣ ಹೊಂದಿದ್ದರ ಉದ್ದೇಶವೇನು, ಈಗ ಆತ ಏನು ಮಾಡುತ್ತಿದ್ದಾನೆ ಎಂಬ ವಿಷಯಗಳನ್ನು ಸ್ಪಷ್ಟೀಕರಿಸುತ್ತವೆ. ದೇವರು ದುಷ್ಟತನವನ್ನು ಏಕೆ ಹಾಗೆ ಬಿಟ್ಟಿದ್ದಾನೆ, ನಾವೇಕೆ ಸಾಯುತ್ತೇವೆ, ಪ್ರಾರ್ಥಿಸುವುದು ಹೇಗೆ, ನಿಜವಾಗಿ ಸಂತೋಷದಿಂದ ಇರಲು ನಾವೇನು ಮಾಡಬೇಕು ಎಂಬ ವಿಷಯಗಳನ್ನೂ ನಮ್ಮ ಮುಂದೆ ಎಳೆ ಎಳೆಯಾಗಿ ಬಿಡಿಸಿಡುತ್ತವೆ.

7 ಅನೇಕಾನೇಕ ವರ್ಷಗಳಿಂದ “ಮುಚ್ಚಲ್ಪಟ್ಟು” ಈಗ ಅಂತ್ಯಕಾಲದಲ್ಲಿ ನೆರವೇರುತ್ತಿರುವ ಪ್ರವಾದನೆಗಳ ಅರ್ಥವನ್ನು ತಿಳಿಯಲು ನಾವು ಶಕ್ತರಾಗಿದ್ದೇವೆ. (ದಾನಿ. 12:⁠9) ಇಂದು ನೆರವೇರುತ್ತಿರುವ ಹೆಚ್ಚಿನ ಪ್ರವಾದನೆಗಳು ಬೈಬಲಿನ ಸುವಾರ್ತಾ ಪುಸ್ತಕಗಳಲ್ಲಿ ಮತ್ತು ಪ್ರಕಟಣೆ ಪುಸ್ತಕದಲ್ಲಿ ಇವೆ. ಅಷ್ಟೇ ಅಲ್ಲ ನಾವು ನೋಡಲು ಅಸಾಧ್ಯವಾದ ಘಟನೆಗಳ ಅರ್ಥವನ್ನು ತಿಳಿಯಲು ಸಹ ಯೆಹೋವ ದೇವರು ಸಹಾಯ ಮಾಡಿದ್ದಾನೆ. ಉದಾಹರಣೆಗೆ ಯೇಸು ರಾಜನಾದದ್ದು, ಸ್ವರ್ಗದಲ್ಲಿ ನಡೆದ ಯುದ್ಧ, ಸೈತಾನನು ಭೂಮಿಗೆ ದೊಬ್ಬಲ್ಪಟ್ಟ ವಿಷಯಗಳನ್ನು ನಾವು ಗ್ರಹಿಸಿದ್ದೇವೆ. (ಪ್ರಕ. 12:​7-12) ನಮ್ಮ ಕಣ್ಮುಂದೆ ನಡೆಯುತ್ತಿರುವ ಘಟನೆಗಳ ಅರ್ಥವನ್ನೂ ನಾವು ತಿಳಿದಿದ್ದೇವೆ. ಉದಾಹರಣೆಗೆ ಯುದ್ಧ, ಭೂಕಂಪ, ಅಂಟುರೋಗಗಳು, ಆಹಾರದ ಅಭಾವ, “ನಿಭಾಯಿಸಲು ಕಷ್ಟಕರ”ವಾದ ದಿನಗಳು ಏಕಿವೆ ಮತ್ತು ಜನರು ಕೆಟ್ಟ ಕೃತ್ಯಗಳನ್ನು ಮಾಡುವುದೇಕೆ ಎನ್ನುವುದನ್ನು ದೇವರ ಸಹಾಯದಿಂದ ತಿಳಿಯಲು ಶಕ್ತರಾಗಿದ್ದೇವೆ.​—⁠2 ತಿಮೊ. 3:​1-5; ಲೂಕ 21:​10, 11.

8. ನಾವು ಸತ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿರುವುದಕ್ಕೆ ಕೀರ್ತಿ ಯಾರಿಗೆ ಸಲ್ಲುತ್ತದೆ?

8 ಯೇಸು ತನ್ನ ಶಿಷ್ಯರಿಗೆ ಹೀಗಂದನು: “ನೀವು ನೋಡುತ್ತಿರುವ ವಿಷಯಗಳನ್ನು ನೋಡುವವರು ಸಂತೋಷಿತರು. ಏಕೆಂದರೆ ಅನೇಕ ಪ್ರವಾದಿಗಳೂ ಅರಸರೂ ನೀವು ನೋಡುತ್ತಿರುವ ಸಂಗತಿಗಳನ್ನು ನೋಡಲು ಬಯಸಿದರು, ಆದರೆ ಅವುಗಳನ್ನು ನೋಡಲಿಲ್ಲ. ನೀವು ಕೇಳಿಸಿಕೊಳ್ಳುತ್ತಿರುವ ಸಂಗತಿಗಳನ್ನು ಕೇಳಿಸಿಕೊಳ್ಳಲು ಬಯಸಿದರು, ಆದರೆ ಅವುಗಳನ್ನು ಕೇಳಿಸಿಕೊಳ್ಳಲಿಲ್ಲ ಎಂದು ನಿಮಗೆ ಹೇಳುತ್ತೇನೆ.” (ಲೂಕ 10:​23, 24) ಇಂದು ನಾವು ಆ ಸಂಗತಿಗಳನ್ನು ನೋಡುತ್ತಿರುವುದಕ್ಕಾಗಿ, ಕೇಳುತ್ತಿರುವುದಕ್ಕಾಗಿ ಅಂದರೆ ಅರ್ಥಮಾಡಿಕೊಳ್ಳುತ್ತಿರುವುದಕ್ಕಾಗಿ ಸಂತೋಷಿತರು. ಇದರ ಕೀರ್ತಿ ಯೆಹೋವನಿಗೆ ಸಲ್ಲುತ್ತದೆ. “ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವಂತೆ” ಯೇಸುವಿನ ಹಿಂಬಾಲಕರನ್ನು ಮಾರ್ಗದರ್ಶಿಸಲು ದೇವರು ತನ್ನ ಪವಿತ್ರಾತ್ಮದ ಸಹಾಯ ಕೊಟ್ಟಿರುವುದಕ್ಕೆ ನಾವೆಷ್ಟೋ ಧನ್ಯರು! (ಯೋಹಾನ 16:​7, 13 ಓದಿ.) ಈ “ನಿಜವಾದ ಜ್ಞಾನ”ವನ್ನು ನಾವು ಸದಾ ನಿಧಿಯಂತೆ ಅಮೂಲ್ಯವಾಗಿ ಕಾಣೋಣ. ನಿಸ್ವಾರ್ಥಭಾವದಿಂದ ಇತರರಿಗೂ ತಿಳಿಸೋಣ.

‘ಬಹು ಜನರು ನಿಜವಾದ ಜ್ಞಾನವನ್ನು’ ಪಡೆಯುವರು

9. ಇಸವಿ 1881ರ ಒಂದು ಕಾವಲಿನ ಬುರುಜುವಿನಲ್ಲಿ ಯಾವ ಕರೆ ನೀಡಲಾಯಿತು?

9 ಕಾವಲಿನ ಬುರುಜು ಪತ್ರಿಕೆ ಆರಂಭಗೊಂಡು ಎರಡು ವರ್ಷದೊಳಗಾಗಿ ಅಂದರೆ 1881ರ ಏಪ್ರಿಲ್‌ ಸಂಚಿಕೆಯು “1,000 ಸುವಾರ್ತಿಕರು ಬೇಕಾಗಿದ್ದಾರೆ” ಎಂದು ಕರೆಕೊಟ್ಟಿತು. ಕರ್ತನ ಕೆಲಸದಲ್ಲಿ ದಿನಕ್ಕೆ ಕೆಲವು ತಾಸು ಅಥವಾ ಹೆಚ್ಚು ತಾಸು ಕೊಡಸಾಧ್ಯವಿರುವವರು ಕಾಲ್ಪೋರ್ಟರ್‌ ಅಥವಾ ಪಯನೀಯರ್‌ ಸೇವೆ ಮಾಡಲು ಮುಂದೆ ಬರುವಂತೆ ಆಮಂತ್ರಣ ಕೊಡಲಾಯಿತು. ದೇವರ ಮೇಲೆ ಪ್ರೀತಿಯಿದ್ದ ಆದರೆ ನಿಷ್ಕೃಷ್ಟ ಜ್ಞಾನವಿಲ್ಲದ ಯಥಾರ್ಥ ಕ್ರೈಸ್ತರಿಗಾಗಿ ಎಲ್ಲೆಡೆ ಹೋಗಿ ಹುಡುಕುವಂತೆ ಪ್ರೋತ್ಸಾಹಿಸಲಾಯಿತು. ಇಂಥ ಜನರನ್ನು ಕಂಡುಕೊಂಡಾಗ ಅವರಿಗೆ ದೇವರ ಮತ್ತು ಬೈಬಲಿನ ಸತ್ಯವನ್ನು ಕಲಿಸುವಂತೆ ಉತ್ತೇಜಿಸಲಾಯಿತು.

10. ಪೂರ್ಣ ಸಮಯದ ಸೇವೆಗೆ ಕೊಡಲಾದ ಕರೆಗೆ ಯಾವ ಪ್ರತಿಕ್ರಿಯೆ ಸಿಕ್ಕಿತು?

10 ಸುವಾರ್ತೆ ಸಾರುವುದು ನಿಜ ಕ್ರೈಸ್ತರ ಅತಿ ಪ್ರಮುಖ ಕೆಲಸ. ಇದನ್ನು ಬೈಬಲ್‌ ವಿದ್ಯಾರ್ಥಿಗಳು ಮನಗಂಡಿದ್ದಾರೆ ಎಂದು ಪತ್ರಿಕೆಯಲ್ಲಿ ಕೊಡಲಾದ ಆ ಕರೆ ತೋರಿಸಿಕೊಟ್ಟಿತು. ಆಗ ಬೈಬಲ್‌ ವಿದ್ಯಾರ್ಥಿಗಳ ಕೂಟಗಳಿಗೆ ಕೆಲವೇ ನೂರು ಮಂದಿ ಹಾಜರಾಗುತ್ತಿದ್ದರಿಂದ ನಿರೀಕ್ಷಿಸಿದಷ್ಟು ಮಂದಿ ಆ ಕರೆಗೆ ಓಗೊಡಲಿಲ್ಲ. ಆದರೆ ಕರಪತ್ರ ಅಥವಾ ಪತ್ರಿಕೆಯನ್ನು ಓದಿದ ಅನೇಕ ಜನರು ಸತ್ಯವನ್ನು ಮನಗಂಡು ಇತರರಿಗೆ ಸಾರಲು ಉತ್ಸುಕರಾಗಿದ್ದರು. ಉದಾಹರಣೆಗೆ 1882ರಲ್ಲಿ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಕಾವಲಿನ ಬುರುಜು ಮತ್ತು ಒಂದು ಕಿರುಪುಸ್ತಿಕೆಯನ್ನು ಓದಿದ ಒಬ್ಬ ವ್ಯಕ್ತಿ ಹೀಗೆ ಬರೆದರು: “ಹೇಗೆ ಸಾರಬೇಕು, ಏನು ಸಾರಬೇಕು ಎನ್ನುವುದನ್ನು ದಯವಿಟ್ಟು ನನಗೆ ತಿಳಿಸಿ. ದೇವರ ಚಿತ್ತವನ್ನು ಮಾಡಲು ನಾನು ಸಿದ್ಧನಿದ್ದೇನೆ.”

11, 12. (1) ಕಾಲ್ಪೋರ್ಟರರಂತೆ ನಮ್ಮ ಗುರಿ ಏನಾಗಿದೆ? (2) ಕಾಲ್ಪೋರ್ಟರರು “ಕ್ಲಾಸಸ್‌” ಅಂದರೆ ಸಭೆಗಳನ್ನು ಸ್ಥಾಪಿಸಿದ್ದು ಹೇಗೆ?

11 ಇಸವಿ 1885ರಷ್ಟಕ್ಕೆ ಸುಮಾರು 300 ಬೈಬಲ್‌ ವಿದ್ಯಾರ್ಥಿಗಳು ಕಾಲ್ಪೋರ್ಟರ್‌ ಸೇವೆಯಲ್ಲಿ ಪಾಲ್ಗೊಂಡರು. ಅವರ ಗುರಿ ಈಗ ನಮಗಿರುವಂತೆ ಜನರನ್ನು ಯೇಸು ಕ್ರಿಸ್ತನ ಶಿಷ್ಯರನ್ನಾಗಿ ಮಾಡುವುದೇ ಆಗಿತ್ತು. ಆದರೆ ಸಾರುವ ವಿಧಾನ ಬೇರೆಯಾಗಿತ್ತು. ಇಂದು ನಾವು ಒಬ್ಬ ವ್ಯಕ್ತಿಯೊಂದಿಗೆ ಅಧ್ಯಯನ ಮಾಡಿ ಅವರಿಗೆ ಬೇಕಾದ ಸಹಾಯ ನೀಡುತ್ತೇವೆ. ಬಳಿಕ ಅವರನ್ನು ಈಗಾಗಲೇ ಸ್ಥಾಪಿತವಾಗಿರುವ ಸಭೆಗೆ ಆಮಂತ್ರಿಸುತ್ತೇವೆ. ಆದರೆ ಹಿಂದೆ ಹಾಗಿರಲಿಲ್ಲ. ಕಾಲ್ಪೋರ್ಟರ್‌ಗಳು ಮೊದಲು ಪುಸ್ತಕಗಳನ್ನು ಜನರಿಗೆ ವಿತರಿಸುತ್ತಿದ್ದರು. ಅನಂತರ ಆಸಕ್ತ ಜನರನ್ನು ಒಂದೆಡೆ ಒಟ್ಟುಗೂಡಿಸಿ ಬೈಬಲನ್ನು ಕಲಿಸುತ್ತಿದ್ದರು. ಹೀಗೆ ಸಭೆಗಳನ್ನು ಆರಂಭಿಸಿದರು. ಸಭೆಗಳನ್ನು “ಕ್ಲಾಸಸ್‌” ಎಂದು ಕರೆಯಲಾಗುತ್ತಿತ್ತು.

12 ಉದಾಹರಣೆಗೆ 1907ರಲ್ಲಿ ಕಾಲ್ಪೋರ್ಟರರ ಗುಂಪು ಒಂದು ನಗರಕ್ಕೆ ಹೋಗಿ ಮಿಲೇನಿಯಲ್‌ ಡಾನ್‌ (ಇನ್ನೊಂದು ಹೆಸರು ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌) ಪುಸ್ತಕ ಹೊಂದಿದ್ದ ಜನರನ್ನು ಹುಡುಕಿದರು. ಇದರ ಬಗ್ಗೆ ವಾಚ್‌ ಟವರ್‌ ಪತ್ರಿಕೆ ಹೀಗೆ ವರದಿಸಿತು: “ಈ [ಆಸಕ್ತ ಜನರನ್ನು] ಕಾಲ್ಪೋರ್ಟರ್‌ಗಳು ಭಾನುವಾರ ಕೂಟಕ್ಕಾಗಿ ಆಮಂತ್ರಿಸಿದರು. ಆಸಕ್ತ ವ್ಯಕ್ತಿಯೊಬ್ಬರ ಮನೆಯಲ್ಲಿ ನಡೆಸಲಾದ ಆ ಕೂಟದಲ್ಲಿ ಒಬ್ಬ ಕಾಲ್ಪೋರ್ಟರ್‌ ಭಾಷಣ ನೀಡಿದರು. ಮಾನವಕುಲಕ್ಕಾಗಿರುವ ದೇವರ ಉದ್ದೇಶದ ಕುರಿತು ಇಡೀ ದಿನ ಮಾತಾಡಿದರು. ಬಳಿಕ ಅಲ್ಲಿದ್ದವರಿಗೆ ಇದೇ ರೀತಿ ಕೂಟವನ್ನು ನಿಯತವಾಗಿ ನಡೆಸುವಂತೆ ಪ್ರೋತ್ಸಾಹಿಸಿದರು.” 1911ರಲ್ಲಿ ಸಹೋದರರು ಸಾರುವ ವಿಧಾನವನ್ನು ಬದಲಾಯಿಸಿದರು. ಐವತ್ತೆಂಟು ಸಹೋದರರು ಅಮೆರಿಕ ಮತ್ತು ಕೆನಡದಾದ್ಯಂತ ಪ್ರಯಾಣಿಸಿ ಸಾರ್ವಜನಿಕ ಭಾಷಣಗಳನ್ನು ಕೊಟ್ಟರು. ಬಳಿಕ ಭಾಷಣವನ್ನು ಕೇಳಿಸಿಕೊಂಡ ಆಸಕ್ತ ಜನರ ಹೆಸರು, ವಿಳಾಸಗಳನ್ನು ಪಡೆದುಕೊಂಡರು. ನಂತರ ಅವರನ್ನು ಚಿಕ್ಕ ಚಿಕ್ಕ ಗುಂಪುಗಳಾಗಿ ವಿಂಗಡಿಸಿ ಯಾರಾದರೊಬ್ಬರ ಮನೆಯಲ್ಲಿ ಕೂಡಿಬರುವಂತೆ ಏರ್ಪಾಡು ಮಾಡಿದರು. ಹೀಗೆ ಹೊಸ ಸಭೆಗಳನ್ನು ರೂಪಿಸಿದರು. 1914ರೊಳಗೆ ಲೋಕವ್ಯಾಪಕವಾಗಿ ಬೈಬಲ್‌ ವಿದ್ಯಾರ್ಥಿಗಳ ಸಭೆಗಳ ಸಂಖ್ಯೆ 1,200ಕ್ಕೆ ಏರಿತು.

13. ಇಂದು ಸಾರುವ ಕೆಲಸದ ವಿಷಯದಲ್ಲಿ ನಿಮ್ಮ ಮನಸ್ಪರ್ಶಿಸುವ ಅಂಶ ಯಾವುದು?

13 ಇಂದು ಲೋಕವ್ಯಾಪಕವಾಗಿ ಸುಮಾರು 1,09,400 ಸಭೆಗಳಿವೆ. ಸರಿಸುಮಾರು 8,95,800 ಸಹೋದರ ಸಹೋದರಿಯರು ಪಯನೀಯರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹತ್ತಿರತ್ತಿರ ಎಂಭತ್ತು ಲಕ್ಷ ಮಂದಿ “ನಿಜವಾದ ಜ್ಞಾನ” ಸ್ವೀಕರಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. (ಯೆಶಾಯ 60:22 ಓದಿ.) * ಎಂಥಾ ನಿಬ್ಬೆರಗಾಗಿಸುವ ಪ್ರಗತಿ! ತನ್ನ ಹೆಸರಿನ ನಿಮಿತ್ತ ಶಿಷ್ಯರು “ಎಲ್ಲ ಜನರ ದ್ವೇಷಕ್ಕೆ” ಗುರಿಯಾಗುವರು, ಹಿಂಸೆ ಎದುರಿಸುವರು, ಸೆರೆಗೆ ಹಾಕಲ್ಪಡುವರು ಮತ್ತು ಕೊಲೆಯಾಗುವರು ಎಂದು ಯೇಸು ಹೇಳಿದ್ದನು. (ಲೂಕ 21:​12-17) ಸೈತಾನ, ಅವನ ದೆವ್ವಗಳು ಹಾಗೂ ಮಾನವರು ಅಂಥ ವಿರೋಧವನ್ನು ತಂದರೂ ಸಾರುವ ಕಾರ್ಯದಲ್ಲಿ ಅತ್ಯುತ್ತಮ ಫಲಿತಾಂಶಗಳು ಸಿಗುತ್ತಿವೆ. ಇಂದು ಯೆಹೋವನ ಜನರು ಕೊರೆಯುವ ಚಳಿಯಿರುವ ಸ್ಥಳದಿಂದ ಹಿಡಿದು ಸುಡು ಬಿಸಿಲಿರುವ ಪ್ರದೇಶಗಳಲ್ಲಿ, ಬೆಟ್ಟಗಳಲ್ಲಿ, ಮರುಭೂಮಿಗಳಲ್ಲಿ, ನಗರಗಳಲ್ಲಿ, ಒಳನಾಡು ಪ್ರದೇಶಗಳಲ್ಲಿ ಹೀಗೆ “ನಿವಾಸಿತ ಭೂಮಿಯಾದ್ಯಂತ” ಸುವಾರ್ತೆ ಸಾರುತ್ತಿದ್ದಾರೆ. (ಮತ್ತಾ. 24:14) ಯೆಹೋವನ ಸಹಾಯದಿಂದಲೇ ಇದು ಸಾಧ್ಯವಾಗಿದೆ.

“ನಿಜವಾದ ಜ್ಞಾನ” ಹೆಚ್ಚಾಗಿದೆ

14. ಪ್ರಕಾಶನಗಳ ಮೂಲಕ “ನಿಜವಾದ ಜ್ಞಾನ” ಹೇಗೆ ವ್ಯಾಪಕವಾಗಿ ಹರಡುತ್ತಿದೆ?

14 ಅನೇಕಾನೇಕ ಮಂದಿ ಸುವಾರ್ತೆಯನ್ನು ಸಾರುತ್ತಿರುವುದರಿಂದ “ನಿಜವಾದ ಜ್ಞಾನ” ಹೆಚ್ಚಾಗುತ್ತಿದೆ. ಪ್ರಕಾಶನಗಳ ಮೂಲಕವೂ ನಿಜವಾದ ಜ್ಞಾನ ಎಲ್ಲೆಡೆ ಪಸರಿಸುತ್ತಿದೆ. 1879ರ ಜುಲೈ ತಿಂಗಳಿನಲ್ಲಿ ಬೈಬಲ್‌ ವಿದ್ಯಾರ್ಥಿಗಳು ಕಾವಲಿನಬುರುಜುವಿನ ಮೊತ್ತಮೊದಲ ಸಂಚಿಕೆಯನ್ನು ಝಯನ್ಸ್‌ ವಾಚ್‌ ಟವರ್‌ ಆ್ಯಂಡ್‌ ಹೆರಾಲ್ಡ್‌ ಆಫ್‌ ಕ್ರೈಸ್ಟ್ಸ್‌ ಪ್ರೆಸೆನ್ಸ್‌ ಎಂಬ ಹೆಸರಿನಲ್ಲಿ ಹೊರತಂದರು. ಇಂಗ್ಲಿಷ್‌ನಲ್ಲಿ ಪ್ರಕಟಗೊಂಡ ಈ ಸಂಚಿಕೆಯ 6,000 ಪ್ರತಿಗಳನ್ನು ಹೊರಗಿನ ಮುದ್ರಣಾಲಯದಲ್ಲಿ ಮುದ್ರಿಸಲಾಯಿತು. 27 ವರ್ಷ ಪ್ರಾಯದ ಚಾರ್ಲ್ಸ್‌ ಟೇಸ್‌ ರಸಲ್‌ರನ್ನು ಸಂಪಾದಕರಾಗಿ ಆರಿಸಲಾಯಿತು. ಅವರೊಂದಿಗೆ ಐದು ಮಂದಿ ಪ್ರೌಢ ಸಹೋದರರು ನಿಯತವಾಗಿ ಲೇಖನಗಳನ್ನು ಬರೆದರು. ಇಂದು ಕಾವಲಿನಬುರುಜುವಿನ ಪ್ರತಿ ಸಂಚಿಕೆಯು 195 ಭಾಷೆಗಳಲ್ಲಿ ಒಟ್ಟು 4,21,82,000 ಪ್ರತಿಗಳು ಮುದ್ರಣವಾಗುತ್ತಿವೆ. ಜಗತ್ತಿನಲ್ಲಿ ಅತಿ ವ್ಯಾಪಕವಾಗಿ ವಿತರಣೆಗೊಳ್ಳುತ್ತಿರುವ ಪತ್ರಿಕೆ ಇದಾಗಿದೆ. ಎರಡನೇ ಸ್ಥಾನ ಪಡೆದಿರುವುದು ಎಚ್ಚರ! ಪತ್ರಿಕೆ. ಇದರ ಪ್ರತಿ ಸಂಚಿಕೆಯು 84 ಭಾಷೆಗಳಲ್ಲಿ ಒಟ್ಟು 4,10,42,000 ಪ್ರತಿಗಳು ಮುದ್ರಣವಾಗುತ್ತಿವೆ. ಇದಲ್ಲದೆ ಪ್ರತಿ ವರ್ಷ ಮುದ್ರಣವಾಗುತ್ತಿರುವ ಪುಸ್ತಕಗಳು, ಬೈಬಲ್‌ಗಳು ಸುಮಾರು ಹತ್ತು ಕೋಟಿ!

15. ಪ್ರಕಾಶನಗಳನ್ನು ಮುದ್ರಿಸಲು ನಮಗೆ ಹಣ ಎಲ್ಲಿಂದ ಸಿಗುತ್ತದೆ?

15 ಈ ಅಸಾಧಾರಣ ಕೆಲಸಕ್ಕೆ ಹಣ ಎಲ್ಲಿಂದ ಸಿಗುತ್ತದೆ? ಸ್ವಯಂಪ್ರೇರಿತ ದಾನಗಳಿಂದ. (ಮತ್ತಾಯ 10:8 ಓದಿ.) ಮುದ್ರಣಯಂತ್ರ, ಕಾಗದ, ಶಾಯಿ, ಇತರ ಸಾಮಗ್ರಿಗಳು ದುಬಾರಿಯಾದ್ದರಿಂದ ನಮ್ಮ ಪ್ರಕಾಶನಗಳ ಮುದ್ರಣದ ಖರ್ಚುವೆಚ್ಚಗಳು ಕೇವಲ ದಾನಗಳಿಂದ ನಡೆಯುತ್ತಿರುವುದನ್ನು ಕಂಡು ಮುದ್ರಣ ಉದ್ಯಮಿಗಳು ಬೆಕ್ಕಸಬೆರಗಾಗಿದ್ದಾರೆ. ಬೆತೆಲ್‌ ಮುದ್ರಣಾಲಯಕ್ಕೆ ಸಾಮಗ್ರಿಗಳನ್ನು ಖರೀದಿಸುವ ಸಹೋದರರೊಬ್ಬರು ಹೀಗಂದರು: “ನಮ್ಮ ಮುದ್ರಣಾಲಯಕ್ಕೆ ಭೇಟಿ ನೀಡಿದ ವಾಣಿಜ್ಯೋದ್ಯಮಿಗಳು ನಾವು ಅತ್ಯಾಧುನಿಕ ತ್ರಂತ್ರಜ್ಞಾನವನ್ನು ಬಳಸಿ ಅತಿ ಹೆಚ್ಚು ಪ್ರಮಾಣದಲ್ಲಿ ಪ್ರಕಾಶನಗಳನ್ನು ಮುದ್ರಿಸುತ್ತಿರುವುದನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಮಾತ್ರವಲ್ಲ ಬೆತೆಲಿನಲ್ಲಿ ಯುವಜನರು ನಗುಮುಖದಿಂದ ಕೆಲಸ ಮಾಡುವುದನ್ನು ನೋಡಿ ಆಶ್ಚರ್ಯಚಕಿತರಾದರು.”

ದೇವರ ಜ್ಞಾನ ಭೂಮಿಯಲ್ಲಿ ತುಂಬಿರುವುದು

16. ಯೆಹೋವನು “ನಿಜವಾದ ಜ್ಞಾನ”ವನ್ನು ಹೆಚ್ಚಿಸಿದ್ದರ ಉದ್ದೇಶವೇನು?

16 ಯೆಹೋವ ದೇವರು ಯಾವ ಉದ್ದೇಶಕ್ಕಾಗಿ “ನಿಜವಾದ ಜ್ಞಾನ” ಹೆಚ್ಚಾಗುವಂತೆ ಮಾಡಿದ್ದಾನೆ? “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬ” ಉದ್ದೇಶದಿಂದಲೇ. (1 ತಿಮೊ. 2:​3, 4) ಜನರು ಸತ್ಯವನ್ನು ತಿಳಿದು ತನ್ನನ್ನು ಯೋಗ್ಯ ರೀತಿಯಲ್ಲಿ ಆರಾಧಿಸಿ ಆಶೀರ್ವಾದಗಳನ್ನು ಪಡೆಯಬೇಕೆಂಬುದು ಯೆಹೋವನ ಅಪೇಕ್ಷೆ. ಆತನು “ನಿಜವಾದ ಜ್ಞಾನ”ವನ್ನು ಎಲ್ಲೆಡೆ ಹರಡಿಸುವ ಮೂಲಕ ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಲ್ಲಿ ಉಳಿದವರನ್ನು ಒಟ್ಟುಗೂಡಿಸಿದ್ದಾನೆ. ಮಾತ್ರವಲ್ಲ “ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ” “ಮಹಾ ಸಮೂಹ”ವನ್ನು ಒಟ್ಟುಗೂಡಿಸುತ್ತಿದ್ದಾನೆ. ಭೂಮಿಯ ಮೇಲೆ ಶಾಶ್ವತವಾಗಿ ಜೀವಿಸುವ ನಿರೀಕ್ಷೆ ಈ ಸಮೂಹಕ್ಕಿದೆ.​—⁠ಪ್ರಕ. 7:⁠9.

17. ಸತ್ಯಾರಾಧನೆಯಲ್ಲಿ ಆಗುತ್ತಿರುವ ವೃದ್ಧಿ ಏನನ್ನು ತೋರಿಸಿಕೊಡುತ್ತದೆ?

17 ಕಳೆದ 130 ವರ್ಷಗಳಿಂದ ಭೂಮಿಯೆಲ್ಲೆಡೆ ಸತ್ಯಾರಾಧಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ. ಯೆಹೋವನು ಮತ್ತು ಆತನು ನೇಮಿಸಿರುವ ರಾಜ ಯೇಸು ಕ್ರಿಸ್ತನು ಇಂದು ದೇವಜನರೊಂದಿಗೆ ಇದ್ದು ಅವರನ್ನು ಮಾರ್ಗದರ್ಶಿಸಿ, ಸಂರಕ್ಷಿಸಿ, ಸಂಘಟಿಸಿ, ಶಿಕ್ಷಣವನ್ನು ನೀಡುತ್ತಾ ಇದ್ದಾರೆಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. ಮಾತ್ರವಲ್ಲ ಯೆಹೋವನು ಭವಿಷ್ಯಕ್ಕಾಗಿ ಮಾಡಿರುವ ವಾಗ್ದಾನಗಳೆಲ್ಲವೂ ಖಂಡಿತ ನೆರವೇರುವವು ಎನ್ನುವುದಕ್ಕೆ ಸಾಕ್ಷ್ಯವಾಗಿದೆ. “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾ. 11:⁠9) ಮಾನವಕುಲದ ಮುಂದೆ ಎಂಥ ರೋಮಾಂಚಕ ಪ್ರತೀಕ್ಷೆ!

[ಪಾದಟಿಪ್ಪಣಿಗಳು]

^ ಪ್ಯಾರ. 6 ಯೆಹೋವನ ಸಾಕ್ಷಿಗಳು ಮತ್ತವರ ಸಜೀವ ನಂಬಿಕೆ​—⁠ಭಾಗ 1: ಕತ್ತಲೆಯಿಂದ ಬೆಳಕಿಗೆ ಹಾಗೂ ಭಾಗ 2: ಬೆಳಕು ಪ್ರಕಾಶಿಸಲಿ ಎಂಬ ಎರಡು ಡಿವಿಡಿಗಳನ್ನು ವೀಕ್ಷಿಸುವಲ್ಲಿ ಹೆಚ್ಚು ಪ್ರಯೋಜನ ಪಡೆಯುವಿರಿ.

^ ಪ್ಯಾರ. 13 ಯೆಶಾಯನ ಪ್ರವಾದನೆ​—⁠ಸಕಲ ಮಾನವಕುಲಕ್ಕೆ ಬೆಳಕು II , ಪುಟ 320 ನೋಡಿ.

[ಅಧ್ಯಯನ ಪ್ರಶ್ನೆಗಳು]

[ಪುಟ 6ರಲ್ಲಿರುವ ಚಿತ್ರ]

ದೀನರಾಗಿದ್ದ ಬೈಬಲ್‌ ವಿದ್ಯಾರ್ಥಿಗಳಿಗೆ ದೇವರ ಚಿತ್ತವನ್ನು ಮಾಡುವ ಕಡು ಬಯಕೆಯಿತ್ತು

[ಪುಟ 7ರಲ್ಲಿರುವ ಚಿತ್ರ]

“ನಿಜವಾದ ಜ್ಞಾನ”ವನ್ನು ಹಬ್ಬಿಸುವುದರಲ್ಲಿ ನೀವು ಪಡುವ ಶ್ರಮವನ್ನು ಯೆಹೋವನು ಗಣ್ಯಮಾಡುತ್ತಾನೆ