ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಮ್ಮ ಪ್ರಯತ್ನಕ್ಕೆ ಫಲತಪ್ಪದು”

“ನಿಮ್ಮ ಪ್ರಯತ್ನಕ್ಕೆ ಫಲತಪ್ಪದು”

“ನಿಮ್ಮ ಪ್ರಯತ್ನಕ್ಕೆ ಫಲತಪ್ಪದು”

ರಾಜ ಆಸನು ತನ್ನ ಸೈನ್ಯದೊಂದಿಗೆ ಹೊರಟಿದ್ದಾನೆ. ಯೂದಾಯದಿಂದ ಘಟ್ಟ ಇಳಿದು ಕಣಿವೆ ಮಾರ್ಗವಾಗಿ ಕರಾವಳಿ ಪ್ರದೇಶದತ್ತ ವೇಗವಾಗಿ ಸಾಗುತ್ತಿದ್ದಾನೆ. ಕರಾವಳಿ ಪ್ರದೇಶಕ್ಕೆ ಬಂದಾಗ ಅವನು ದಂಗಾಗಿ ನಿಂತುಬಿಟ್ಟನು. ಎದುರಿಗೆ ಬಹುದೊಡ್ಡ ಶತ್ರುಸೈನ್ಯ! ಕೂಷ್ಯರ ಆ ಸೈನ್ಯದಲ್ಲಿ ಹತ್ತು ಲಕ್ಷ ಸೈನಿಕರಿದ್ದರು. ಆದರೆ ಆಸನ ಸೈನ್ಯದಲ್ಲಿ ಐದು ಲಕ್ಷ ಎಂಭತ್ತು ಸಾವಿರ ಮಂದಿ ಇದ್ದರಷ್ಟೆ.

ಇನ್ನೇನು ಯುದ್ಧ ಆರಂಭವಾಗುವುದರಲ್ಲಿತ್ತು. ಆಗ ಆಸನು ಏನು ಮಾಡಿದನು? ಸೈನ್ಯದ ಸೇನಾಪತಿಗಳಿಗೆ ಅಪ್ಪಣೆ ಕೊಡುತ್ತಾ ನಿಂತಿದ್ದನಾ? ಸೈನ್ಯವನ್ನು ಹುರಿದುಂಬಿಸುತ್ತಿದ್ದನಾ? ಅಥವಾ ತನ್ನ ಕುಟುಂಬದ ಬಗ್ಗೆ ಯೋಚಿಸುತ್ತಾ ಪತ್ರ ಬರೆಯಲು ಕುಳಿತುಕೊಂಡನಾ? ಇದ್ಯಾವುದನ್ನೂ ಮಾಡಲಿಲ್ಲ! ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆಸನು ದೇವರಲ್ಲಿ ಪ್ರಾರ್ಥಿಸಿದನು.

ಆಸನು ಏನೆಂದು ಪ್ರಾರ್ಥಿಸಿದನು? ನಂತರ ಏನಾಯಿತು? ಇದನ್ನು ತಿಳಿಯುವ ಮೊದಲು ಅವನ ವ್ಯಕ್ತಿತ್ವದ ಕುರಿತು ತಿಳಿದುಕೊಳ್ಳೋಣ. ಆ ಸಂದರ್ಭದಲ್ಲಿ ಪ್ರಾರ್ಥಿಸುವಂತೆ ಅವನನ್ನು ಯಾವುದು ಪ್ರಚೋದಿಸಿತು? ದೇವರು ತನಗೆ ಸಹಾಯ ಮಾಡುವನೆಂದು ನಂಬಲು ಅವನಿಗೆ ಕಾರಣಗಳಿತ್ತಾ? ಆಸನ ಚರಿತ್ರೆಯ ಕುರಿತು ಕಲಿಯುವುದು, ಯೆಹೋವನು ತನ್ನ ಸೇವಕರ ಪ್ರಯತ್ನಗಳಿಗೆ ಪ್ರತಿಫಲ ಕೊಡುತ್ತಾನೆ ಎಂಬುದನ್ನು ಕಲಿಸುತ್ತದೆ. ಹೇಗೆಂದು ನೋಡೋಣ.

ರಾಜ ಆಸನ ಚರಿತ್ರೆ

ಇಸ್ರಾಯೇಲ್‌ ಎರಡು ರಾಜ್ಯಗಳಾಗಿ ವಿಂಗಡನೆಯಾದ ನಂತರದ 20 ವರ್ಷಗಳಲ್ಲಿ ಯೆಹೂದವು ವಿಧರ್ಮಿ ಆಚರಣೆಗಳಿಂದ ತುಂಬಿಹೋಗಿತ್ತು. ಕ್ರಿ.ಪೂ. 977ರಲ್ಲಿ ಆಸನು ರಾಜನಾದಾಗ ಅಲ್ಲಿನ ಆಸ್ಥಾನದಲ್ಲಿ ಕೂಡ ಕಾನಾನ್ಯರ ಫಲವಂತಿಕೆಯ ದೇವರ ಆರಾಧನೆ ತುಂಬಿತ್ತು. ಆದರೆ ದೇವಪ್ರೇರಣೆಯಿಂದ ಬರೆಯಲಾದ ಆಸನ ಆಳ್ವಿಕೆಯ ಚರಿತ್ರೆ ಹೇಳುವುದು: “ಆಸನು ತನ್ನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿಯೂ ನೀತಿವಂತನಾಗಿಯೂ ನಡೆದನು. ಇವನು ಅನ್ಯದೇವತೆಗಳ ಯಜ್ಞವೇದಿಗಳನ್ನೂ ಪೂಜಾಸ್ಥಳಗಳನ್ನೂ ತೆಗೆದುಹಾಕಿ ಕಲ್ಲುಕಂಬಗಳನ್ನು ಒಡಿಸಿ ಅಶೇರವಿಗ್ರಹಸ್ತಂಭಗಳನ್ನು’’ ಕಡಿಸಿಬಿಟ್ಟನು. (2 ಪೂರ್ವ. 14:​2, 3) ಮಾತ್ರವಲ್ಲ ಧರ್ಮದ ಹೆಸರಿನಲ್ಲಿ ಅನೈತಿಕತೆಯನ್ನು ನಡೆಸುತ್ತಿದ್ದ “ಪುರಷವಿಟರನ್ನು” (ಪವಿತ್ರ ಗ್ರಂಥ ಭಾಷಾಂತರ) ಯೆಹೂದ ರಾಜ್ಯದಿಂದ ಹೊರಗಟ್ಟಿದನು. ಅವನು ಇಷ್ಟಕ್ಕೆ ಸುಮ್ಮನಾಗಲಿಲ್ಲ. “ನೀವು ನಿಮ್ಮ ಪಿತೃಗಳ ದೇವರಾದ ಯೆಹೋವನನ್ನೇ ಆಶ್ರಯಿಸಿಕೊಂಡು” ಆತನ “ಧರ್ಮಶಾಸ್ತ್ರವಿಧಿಗಳನ್ನು ಕೈಕೊಳ್ಳಿರಿ” ಎಂದು ಜನರನ್ನು ಪ್ರೋತ್ಸಾಹಿಸಿದನು.​—⁠1 ಅರ. 15:​12, 13; 2 ಪೂರ್ವ. 14:⁠4.

ರಾಜ ಆಸನು ಸತ್ಯಾರಾಧನೆಗೆ ತೋರಿಸಿದ ಹುರುಪನ್ನು ಯೆಹೋವನು ಮೆಚ್ಚಿ ಅವನ ಆಳ್ವಿಕೆಯ ಅನೇಕ ವರ್ಷಗಳಲ್ಲಿ ಸಮಾಧಾನವನ್ನು ಅನುಗ್ರಹಿಸಿದನು. ಆದ್ದರಿಂದ ರಾಜನು ಹೀಗೆ ಹೇಳಶಕ್ತನಾದನು: “ನಾವು ನಮ್ಮ ದೇವರಾದ ಯೆಹೋವನನ್ನು ಆಶ್ರಯಿಸಿಕೊಂಡ ಕಾರಣ ಆತನ ಅನುಗ್ರಹದಿಂದ ಸುತ್ತಣ ವೈರಿಗಳ ಭಯ ತಪ್ಪಿ ದೇಶವು ಇನ್ನೂ ನಿರಾತಂಕವಾಗಿರುತ್ತದೆ.” ಜನರು ಈ ಪರಿಸ್ಥಿತಿಯನ್ನು ಸದುಪಯೋಗಿಸಿಕೊಂಡು ಯೆಹೂದದ ನಗರಗಳಿಗೆ ಸುತ್ತಣಗೋಡೆ ಕಟ್ಟಿ ಭದ್ರಪಡಿಸತೊಡಗಿದರು. “ಅವರು ಅವುಗಳನ್ನು ಚೆನ್ನಾಗಿ ಕಟ್ಟಿ ತೀರಿಸಿದರು” ಎಂದು ಬೈಬಲ್‌ ವೃತ್ತಾಂತ ತಿಳಿಸುತ್ತದೆ.​—⁠2 ಪೂರ್ವ. 14:​1, 6, 7.

ರಣರಂಗದಲ್ಲಿ. . .

ಆಸನ ಮುಂದೆ ಕೂಡಿದ್ದ ಶತ್ರುಸೈನ್ಯ ಬೈಬಲಿನಲ್ಲಿ ತಿಳಿಸಲಾದ ಮಾನವ ಸೈನ್ಯಗಳಲ್ಲೇ ಅತಿ ದೊಡ್ಡದು. ಇದನ್ನು ನೋಡಿ ಆಸನು ಕಾಲುಕೀಳಲಿಲ್ಲ. ಯೆಹೋವನ ಮೇಲೆ ಅಪಾರ ಭಕ್ತಿಯಿಟ್ಟಿದ್ದ ಆಸನು ಸಹಾಯಕ್ಕಾಗಿ ಆತನ ಮೊರೆಹೋದನು. ದೇವರು ತನ್ನಲ್ಲಿ ನಂಬಿಕೆ ಇಟ್ಟವರಿಗೆ ಪ್ರತಿಫಲ ಕೊಟ್ಟೇ ಕೊಡುತ್ತಾನೆಂಬ ಅಚಲ ನಂಬಿಕೆಯೂ ಇತ್ತವನಿಗೆ. ದೇವರ ಸಹಾಯದಿಂದ ಈ ಅತಿ ದೊಡ್ಡ ಸೈನ್ಯವನ್ನೂ ತಾನು ಧೂಳಿಪಟ ಮಾಡಬಲ್ಲನೆಂದು ನಂಬಿದನು. ಈ ಸೆಣಸಾಟದಲ್ಲಿ ಯೆಹೋವನ ಹೆಸರು ಕೂಡ ಸೇರಿದ್ದರಿಂದ ಆಸನು ಪ್ರಾರ್ಥಿಸಿದ್ದು: “ನಮ್ಮ ದೇವರಾದ ಯೆಹೋವನೇ, ನಮ್ಮನ್ನು ರಕ್ಷಿಸು, ನಿನ್ನಲ್ಲಿ ಭರವಸವಿಟ್ಟು ನಿನ್ನ ಹೆಸರಿನಲ್ಲಿ ಈ ಮಹಾಸಮೂಹಕ್ಕೆ ವಿರೋಧವಾಗಿ ಯುದ್ಧಕ್ಕೆ ಬಂದೆವಲ್ಲಾ. ಯೆಹೋವನೇ, ನಮ್ಮ ದೇವರು ನೀನು. ನರರು ನಿನ್ನನ್ನು ಎದುರಿಸಿ ಗೆಲ್ಲಬಾರದು.” (2 ಪೂರ್ವ. 14:11) ಆಸನು ಒಂದರ್ಥದಲ್ಲಿ ಹೀಗೆ ಹೇಳುವಂತಿತ್ತು ‘ಯೆಹೋವನೇ ಕೂಷ್ಯರು ನಿನ್ನ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ನಿನ್ನ ನಾಮವನ್ನು ಧರಿಸಿರುವ ಜನರನ್ನು ನಾಶಮಾಡಲು ಬಿಡಬೇಡ. ಬಲಹೀನ ಮಾನವರು ನಿನ್ನ ನಾಮಕ್ಕೆ ಕಳಂಕ ತರುವಂತೆ ಅನುಮತಿಸಬೇಡ.’ ಈ ಪ್ರಾರ್ಥನೆಗೆ ಪ್ರತ್ಯುತ್ತರವಾಗಿ “ಯೆಹೋವನು ಕೂಷ್ಯರನ್ನು ಆಸನಿಂದಲೂ ಯೆಹೂದ್ಯರಿಂದಲೂ ಅಪಜಯಪಡಿಸಿದನು.”​—⁠2 ಪೂರ್ವ. 14:⁠12.

ಯೆಹೋವನ ಜನರಾಗಿರುವ ನಾವು ಕೂಡ ಅನೇಕ ಶಕ್ತಿಶಾಲಿ ವಿರೋಧಿಗಳನ್ನು ಎದುರಿಸುತ್ತೇವೆ. ಸೈನಿಕರಂತೆ ನಾವು ಆಯುಧಗಳನ್ನು ಕೈಗೆತ್ತಿಕೊಂಡು ಹೋರಾಡುವುದಿಲ್ಲ ನಿಜ. ನಮ್ಮದು ಆಧ್ಯಾತ್ಮಿಕ ಹೋರಾಟ. ಯೆಹೋವನ ಹೆಸರಿಗಾಗಿ ಮಾಡುವ ಹೋರಾಟ. ಈ ಹೋರಾಟದಲ್ಲಿ ತೊಡಗಿರುವ ಎಲ್ಲಾ ನಂಬಿಗಸ್ತರಿಗೆ ಯೆಹೋವನು ಜಯವೆಂಬ ಬಹುಮಾನವನ್ನು ಕೊಟ್ಟು ಆಶೀರ್ವದಿಸುವನು ಎಂಬುದು ಖಂಡಿತ. ಈ ಹೋರಾಟವನ್ನು ಸಲೀಸಾಗಿ ಮಾಡಬಹುದೆಂದು ನೆನಸಬೇಡಿ. ಏಕೆ? ನಮ್ಮ ಸುತ್ತಲೂ ಅನೈತಿಕತೆ ಸೋಂಕಿನಂತೆ ಹರಡುತ್ತಿದೆ. ನಮ್ಮ ಸ್ವಂತ ಬಲಹೀನತೆಯ ವಿರುದ್ಧವೂ ಹೋರಾಡಬೇಕಾಗಿದೆ. ನಮ್ಮ ಕುಟುಂಬವನ್ನೂ ಲೋಕದ ಹಾನಿಕರ ಪ್ರಭಾವದಿಂದ ಸಂರಕ್ಷಿಸಬೇಕಿದೆ. ಏನೇ ಕಷ್ಟ ಬಂದರೂ ನಾವು ಗಾಬರಿಗೊಳ್ಳುವ ಆವಶ್ಯಕತೆಯಿಲ್ಲ ಎಂದು ಆಸನ ಪ್ರಾರ್ಥನೆಯಿಂದ ಕಲಿಯುತ್ತೇವೆ. ದೇವರ ಸಹಾಯದಿಂದ ಆಸನಿಗೆ ದಕ್ಕಿದ ಜಯ ಯೆಹೋವನ ಜಯ. ಇದು ಏನು ತೋರಿಸುತ್ತದೆ? ಯಾರೆಲ್ಲಾ ಯೆಹೋವನ ಮೇಲೆ ಆತುಕೊಳ್ಳುತ್ತಾರೋ ಅವರಿಗೆ ಆತನು ಜಯವನ್ನು ಕೊಡುತ್ತಾನೆ. ಏಕೆಂದರೆ ಯೆಹೋವನನ್ನು ಎದುರಿಸಿ ಗೆಲ್ಲಲು ಯಾವ ಮಾನವನಿಗೂ ಸಾಧ್ಯವಿಲ್ಲ.

ಉತ್ತೇಜನ ಮತ್ತು ಎಚ್ಚರಿಕೆ

ಆಸನು ಯುದ್ಧದಿಂದ ಹಿಂದಿರುಗುವಾಗ ಪ್ರವಾದಿಯಾದ ಅಜರ್ಯ ಅವನನ್ನು ಎದುರುಗೊಂಡನು. ಪ್ರವಾದಿಯು ಆಸನಿಗೆ ಉತ್ತೇಜನ ಮತ್ತು ಎಚ್ಚರಿಕೆಯನ್ನು ಕೊಡುತ್ತಾ ಹೀಗಂದನು: “ಆಸನೇ, ಎಲ್ಲಾ ಯೆಹೂದ ಬೆನ್ಯಾಮೀನ್‌ ಕುಲಗಳವರೇ, ಕಿವಿಗೊಡಿರಿ. ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು; ನೀವು ಆತನನ್ನು ಹುಡುಕಿದರೆ ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು . . . [ಧೈರ್ಯದಿಂದಿರಿ]; ನಿಮ್ಮ ಕೈಗಳು ಜೋಲುಬೀಳದಿರಲಿ. ನಿಮ್ಮ ಪ್ರಯತ್ನಕ್ಕೆ ಫಲತಪ್ಪದು.”​—⁠2 ಪೂರ್ವ. 15:​1, 2, 7.

ಈ ಮಾತುಗಳು ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆ. ಎಲ್ಲಿಯ ವರೆಗೆ ನಾವು ಯೆಹೋವನಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತೇವೋ ಅಲ್ಲಿಯ ವರೆಗೆ ಆತನು ನಮ್ಮೊಂದಿಗೆ ಇರುತ್ತಾನೆ ಎನ್ನುವುದನ್ನು ಈ ಮಾತುಗಳು ಧೃಡಪಡಿಸುತ್ತವೆ. ನಾವು ಸಹಾಯಕ್ಕಾಗಿ ಮೊರೆಯಿಡುವಾಗೆಲ್ಲ ಆತನು ಖಂಡಿತ ಕೇಳುತ್ತಾನೆಂಬ ಭರವಸೆಯನ್ನು ಇವು ಕೊಡುತ್ತವೆ. “ಧೈರ್ಯದಿಂದಿರಿ” ಎಂದನು ಅಜರ್ಯ. ಹೌದು, ಸರಿಯಾದುದನ್ನು ಮಾಡಲು ಖಂಡಿತ ತುಂಬ ಧೈರ್ಯ ಬೇಕು. ಯೆಹೋವನ ಸಹಾಯದಿಂದ ನಾವದನ್ನು ಮಾಡಸಾಧ್ಯ.

ಸರಿಯಾದದ್ದನ್ನು ಮಾಡಲು ರಾಜ ಆಸನಿಗೂ ಧೈರ್ಯದ ಅಗತ್ಯವಿತ್ತು. ಏಕೆಂದರೆ ಅವನ ಅಜ್ಜಿ ಮಾಕಳು “ಅಶೇರದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು” ಮಾಡಿಸಿದ್ದಳು. ಆದರೂ ಆಸನು ಹಿಂಜರಿಯದೆ ಆಕೆಯನ್ನು “ಗದ್ದುಗೆ”ಯಿಂದ ತಳ್ಳಿ ಮೂರ್ತಿಯನ್ನು ಕಡಿದು ಸುಟ್ಟುಹಾಕಿಸಿದನು. (1 ಅರ. 15:13) ಆಸನು ನೆನಸಿದ್ದನ್ನು ಧೈರ್ಯದಿಂದ ಮಾಡಿದ ಕಾರಣ ಯೆಹೋವನು ಅವನನ್ನು ಬಹಳವಾಗಿ ಆಶೀರ್ವದಿಸಿದನು. ನಮಗಿರುವ ಪಾಠ? ನಮ್ಮ ಸಂಬಂಧಿಕರು ಯೆಹೋವನಿಗೆ ನಿಷ್ಠರಾಗಿರಲಿ ಇಲ್ಲದಿರಲಿ ಆಸನಂತೆ ನಾವು ಯೆಹೋವನಿಗೂ ಆತನ ನೀತಿಯ ಮಟ್ಟಗಳಿಗೂ ಅಂಟಿಕೊಂಡು ನಡೆಯಬೇಕು. ಹಾಗೆ ನಡೆಯುವಲ್ಲಿ ನಮ್ಮ ನಂಬಿಗಸ್ತಿಕೆಗಾಗಿ ಯೆಹೋವನು ಖಂಡಿತ ಪ್ರತಿಫಲ ಕೊಡುವನು.

ಆಸನಿಗೆ ಸಿಕ್ಕ ಪ್ರತಿಫಲಗಳಲ್ಲಿ ಒಂದು ಯಾವುದೆಂದರೆ, ಯೆಹೋವನು ಆಸನೊಂದಿಗೆ ಇರುವುದನ್ನು ನೋಡಿ ಅನೇಕ ಇಸ್ರಾಯೇಲ್ಯರು ಧರ್ಮಭ್ರಷ್ಟ ಉತ್ತರ ರಾಜ್ಯದಿಂದ ಯೆಹೂದಕ್ಕೆ ಬಂದು ನೆಲೆಸಿದ್ದು. ಅವರು ಸತ್ಯಾರಾಧನೆಯನ್ನು ಎಷ್ಟೊಂದು ಗಣ್ಯಮಾಡಿದರೆಂದರೆ ಯೆಹೋವನ ಸೇವಕರೊಂದಿಗೆ ಜೀವಿಸಲು ತಮ್ಮ ತಮ್ಮ ಮನೆಗಳನ್ನು ಬಿಟ್ಟುಬಂದರು. ಆಸನು ಮತ್ತು ಎಲ್ಲಾ ಯೆಹೂದ್ಯರು ಸಂತೋಷದಿಂದ ‘ತಾವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಯೆಹೋವನ ಭಕ್ತರಾಗಿರುವೆವೆಂದು ಪ್ರಮಾಣ ಮಾಡಿದರು.’ ಫಲಿತಾಂಶ? ಯೆಹೋವನು “ಅವರಿಗೆ ಪ್ರಸನ್ನನಾಗಿ ಎಲ್ಲಾ ಕಡೆಗಳಲ್ಲಿಯೂ ಸಮಾಧಾನವನ್ನನುಗ್ರಹಿಸಿದನು.” (2ಪೂರ್ವ 15:​9-15) ನೀತಿಯನ್ನು ಪ್ರೀತಿಸುವವರು ಸತ್ಯಾರಾಧನೆಯನ್ನು ಸ್ವೀಕರಿಸುವಾಗ ನಮಗಾಗುವ ಹರ್ಷಕ್ಕೆ ಎಲ್ಲೆಯೇ ಇಲ್ಲ!

ಪ್ರವಾದಿ ಅಜರ್ಯನು ಆಸನಿಗೆ ಹೇಳಿದ ಮಾತುಗಳಲ್ಲಿ ಎಚ್ಚರಿಕೆಯೂ ಅಡಗಿತ್ತು. “[ಯೆಹೋವನನ್ನು] ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.” ಯಾವುದೇ ಸಂಕಷ್ಟ ತೊಂದರೆ ಬಂದರೂ ನಾವು ಯೆಹೋವನನ್ನು ಬಿಟ್ಟುಬಿಡದಿರೋಣ. ಏಕೆಂದರೆ ಪರಿಣಾಮ ವಿಪತ್ಕಾರಕ! (2 ಪೇತ್ರ 2:​20-22) ಆಸನಿಗೆ ಯಾಕೆ ದೇವರು ಆ ಎಚ್ಚರಿಕೆ ಕೊಟ್ಟನು ಎಂಬದನ್ನು ಬೈಬಲ್‌ ತಿಳಿಸುವುದಿಲ್ಲ. ಒಂದಂತೂ ಖಂಡಿತ, ಆಸನು ಎಚ್ಚರಿಕೆಗೆ ಕಿವಿಗೊಡಲಿಲ್ಲ.

‘ನೀನು ಬುದ್ಧಿಹೀನನಾಗಿ ನಡೆದುಕೊಂಡಿದ್ದೀ’

ಆಸನ ಆಳಿಕೆಯ ಮೂವತ್ತಾರನೆಯ ವರುಷದಲ್ಲಿ ಇಸ್ರಾಯೇಲಿನ ರಾಜನಾದ ಬಾಷನು ಯೆಹೂದದೊಂದಿಗಿನ ಸಂಪರ್ಕ ಕಡಿಯಲು ಕೆಲವು ಕ್ರಮಗಳನ್ನು ತೆಗೆದುಕೊಂಡನು. ತನ್ನ ಪ್ರಜೆಗಳು ಆಸನ ಬಳಿಗೂ ಸತ್ಯಾರಾಧನೆಗೆಂದು ಯೆಹೂದಕ್ಕೂ ಹೋಗುವುದನ್ನು ಅವನು ಇಷ್ಟಪಡಲಿಲ್ಲ. ಆದ್ದರಿಂದ ಯೆರೂಸಲೇಮಿನ ಉತ್ತರಕ್ಕೆ ಎಂಟು ಕಿ.ಮೀ. ದೂರದಲ್ಲಿರುವ ರಾಮದಲ್ಲಿ ಕೋಟೆಯನ್ನು ಕಟ್ಟಿಸಲು ಆರಂಭಿಸಿದನು. ಈ ಸಂದರ್ಭದಲ್ಲಿ ಆಸನು ಏನು ಮಾಡಿದನು? ಅವನು ಕೂಷ್ಯರ ವಿರುದ್ಧ ಹೋರಾಡಿದಾಗ ದೇವರ ಸಹಾಯವನ್ನು ಯಾಚಿಸಿದಂತೆ ಈಗ ಮಾಡಲಿಲ್ಲ. ಮಾನವರ ಸಹಾಯವನ್ನು ಕೋರಿದನು. ಅರಾಮ್ಯರ ರಾಜನಿಗೆ ಬಹುಮಾನಗಳನ್ನು ಕೊಟ್ಟುಕಳುಹಿಸಿ ಇಸ್ರಾಯೇಲಿನ ಉತ್ತರ ರಾಜ್ಯದ ಮೇಲೆ ಆಕ್ರಮಣ ಮಾಡುವಂತೆ ಕೇಳಿಕೊಂಡನು. ಅದರಂತೆ ಅರಾಮ್ಯರು ಆಕ್ರಮಣ ಮಾಡಿದಾಗ ಬಾಷನು ರಾಮದಲ್ಲಿ ಕೋಟೆ ಕಟ್ಟಿಸುವ ಕೆಲಸವನ್ನು ನಿಲ್ಲಿಸಿಬಿಟ್ಟನು.​—⁠2 ಪೂರ್ವ. 16:​1-5.

ಆಸನು ಮಾನವರ ಸಹಾಯ ಕೋರಿದ್ದನ್ನು ಯೆಹೋವನು ಮೆಚ್ಚಲಿಲ್ಲ. ಹಿಂದೆ ಕೂಷ್ಯರನ್ನು ಸೋಲಿಸಲು ದೇವರು ಸಹಾಯ ಮಾಡಿದ್ದನ್ನು ಆಸನು ಕಣ್ಣಾರೆ ಕಂಡಿದ್ದನು. ಇದರಿಂದ “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಎನ್ನುವುದನ್ನು ಆಸನು ತಿಳಿಯಬೇಕಿತ್ತು. ಆದರೆ ಯಾರ ಮಾತು ಕೇಳಿ ಹೀಗೆ ಮಾಡಿದನೋ ಏನೋ. ಕೂಷ್ಯರ ದೊಡ್ಡ ಸೈನ್ಯವನ್ನೇ ಸೋಲಿಸಿದ ನನಗೆ ಈ ಬಾಷನ ಸೈನ್ಯ ಯಾವ ಲೆಕ್ಕ ಎಂದು ನೆನಸಿದನೋ ಗೊತ್ತಿಲ್ಲ. ಆದರೆ ಅವನು ಯೆಹೋವನ ಮೇಲಂತೂ ಭರವಸೆ ಇಡಲಿಲ್ಲ. ಮಾನವನನ್ನು ನೆಚ್ಚಿಕೊಂಡನು. ಇದು ಯೆಹೋವನಿಗೆ ಇಷ್ಟವಾಗಲಿಲ್ಲ. “ನೀನು ಈ ಕಾರ್ಯದಲ್ಲಿ ಬುದ್ಧಿಹೀನನಾಗಿ ನಡೆದುಕೊಂಡಿದ್ದೀ; ಇಂದಿನಿಂದ ನಿನಗೆ ಯುದ್ಧಗಳು ಇದ್ದೇ ಇರುವವು” ಎಂದು ಪ್ರವಾದಿಯಾದ ಹನಾನಿಯ ಮೂಲಕ ಹೇಳಿ ಕಳುಹಿಸಿದನು.​—⁠2 ಪೂರ್ವ. 16:​7-9.

ಇದಕ್ಕೆ ಆಸನು ಹೇಗೆ ಪ್ರತಿಕ್ರಿಯಿಸಿದನು? ರೊಚ್ಚಿಗೆದ್ದು ಪ್ರವಾದಿಯನ್ನು ಸೆರೆಮನೆಗೆ ಹಾಕಿಸಿದನು. (2 ಪೂರ್ವ. 16:10) ‘ಅನೇಕ ವರ್ಷದಿಂದ ದೇವರ ಸೇವೆ ಮಾಡಿರೋ ನನಗೆ ಎಲ್ಲಾ ಗೊತ್ತಿದೆ, ನನಗ್ಯಾರೂ ಬುದ್ಧಿ ಹೇಳಬೇಕಾಗಿಲ್ಲ’ ಎಂದು ನೆನಸಿದನೋ? ವೃದ್ಧಾಪ್ಯದ ಅರಳು ಮರುಳಿನಲ್ಲಿ ತನ್ನ ಯೋಚನಾಶಕ್ತಿಯನ್ನು ಕಳೆದುಕೊಂಡಿದ್ದನೇ? ಬೈಬಲ್‌ ಈ ಬಗ್ಗೆ ಏನೂ ಹೇಳುವುದಿಲ್ಲ.

ಆಸನ ಆಳಿಕೆಯ 39ನೆಯ ವರ್ಷದಲ್ಲಿ ಅವನ ಕಾಲುಗಳಲ್ಲಿ ಬಹುಕಠಿನವಾದ ರೋಗವುಂಟಾಯಿತು. “ಈ ರೋಗದಲ್ಲಿಯೂ ಅವನು ಯೆಹೋವನ ಸಹಾಯವನ್ನು ಕೋರದೆ ವೈದ್ಯರ ಸಹಾಯವನ್ನೇ ಕೋರಿದನು” ಎನ್ನುತ್ತದೆ ವೃತ್ತಾಂತ. ಆಸನು ತನ್ನ ಆಧ್ಯಾತ್ಮಿಕ ಆರೋಗ್ಯಕ್ಕೆ ಗಮನ ಕೊಡಲಿಲ್ಲವೆಂದು ಇದೆಲ್ಲಾ ತೋರಿಸುತ್ತದೆ. ಕೊನೆಯ ತನಕ ಅವನ ಶಾರೀರಿಕ ಅಥವಾ ಆಧ್ಯಾತ್ಮಿಕ ಸ್ಥಿತಿಯಲ್ಲಿ ಸುಧಾರಣೆಯಾದಂತೆ ತೋರುವುದಿಲ್ಲ. ತನ್ನ ಆಳಿಕೆಯ 41ನೆಯ ವರ್ಷದಲ್ಲಿ ಕೊನೆಯುಸಿರೆಳೆದನು.​—⁠2 ಪೂರ್ವ. 16:​12-14.

ಆಸನು ಮಾಡಿದ ತಪ್ಪುಗಳಿಗಿಂತ ಆತನಲ್ಲಿದ್ದ ಸದ್ಗುಣಗಳು ಮತ್ತು ಸತ್ಯಾರಾಧನೆಗೆ ಅವನು ತೋರಿಸಿದ ಹುರುಪು ಹೆಚ್ಚಾಗಿತ್ತು. ಅವನು ಯೆಹೋವನಿಗೆ ಸೇವೆ ಸಲ್ಲಿಸುವುದನ್ನು ಎಂದಿಗೂ ಬಿಟ್ಟುಬಿಡಲಿಲ್ಲ. (1 ಅರ. 15:14) ಈ ದೃಷ್ಟಿಕೋನದಿಂದ ಆಸನ ಚರಿತ್ರೆ ನಮಗೆ ಯಾವ ಪಾಠವನ್ನು ಕಲಿಸುತ್ತದೆ? ಯೆಹೋವನು ಈ ಹಿಂದೆ ನಮಗೆ ಹೇಗೆ ಸಹಾಯ ಮಾಡಿದನು ಎಂಬುದನ್ನು ಧ್ಯಾನಿಸುವ ಅಗತ್ಯವನ್ನು ಎತ್ತಿತೋರಿಸುತ್ತದೆ. ಇಂತಹ ಅಮೂಲ್ಯ ನೆನಪುಗಳು ಏನೇ ಸಂಕಷ್ಟ ಬಂದರೂ ಸಹಾಯಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸುವಂತೆ ಪ್ರೇರಿಸುತ್ತವೆ. ನಾನು ಎಷ್ಟೋ ವರ್ಷದಿಂದ ದೇವರ ಸೇವೆ ಮಾಡಿದ್ದೇನೆ, ನನಗೆಲ್ಲಾ ಗೊತ್ತಿದೆ ಎಂದು ನಾವು ಭಾವಿಸಬಾರದು. ನಮಗೆಲ್ಲರಿಗೂ ಬೈಬಲಿನ ಬುದ್ಧಿಮಾತು ಬೇಕೇಬೇಕು. ನಾವೆಷ್ಟೇ ನಂಬಿಗಸ್ತ ಸೇವೆ ಸಲ್ಲಿಸಿದ್ದರೂ ತಪ್ಪು ಮಾಡಿದರೆ ಯೆಹೋವನು ನಮ್ಮನ್ನು ಖಂಡಿತ ತಿದ್ದುತ್ತಾನೆ. ಅಂತಹ ತಿದ್ದುಪಾಟುಗಳನ್ನು ನಾವು ದೀನತೆಯಿಂದ ಅಂಗೀಕರಿಸಬೇಕು. ಅದು ನಮಗೆ ಪ್ರಯೋಜನಕರ. ಇದೆಲ್ಲದಕ್ಕಿಂತ ಮುಖ್ಯವಾಗಿ, ಎಲ್ಲಿಯವರೆಗೆ ನಾವು ಯೆಹೋವನೊಂದಿಗೆ ಇರುತ್ತೇವೋ ಅಲ್ಲಿಯವರೆಗೆ ಆತನು ನಮ್ಮೊಂದಿಗೆ ಇರುವನು ಎನ್ನುವುದನ್ನು ಮರೆಯಬಾರದು. ತನಗೆ ನಂಬಿಗಸ್ತರಾಗಿ ನಡೆಯುತ್ತಿರುವವರನ್ನು ಹುಡುಕುತ್ತಾ ಭೂಲೋಕದ ಎಲ್ಲ ಕಡೆಗಳಲ್ಲಿ ಆತನು ದೃಷ್ಟಿಯನ್ನು ಪ್ರಸರಿಸುತ್ತಿದ್ದಾನೆ. ಅವರ ರಕ್ಷಣೆಗಾಗಿ ತನ್ನ ಶಕ್ತಿಯನ್ನು ತೋರ್ಪಡಿಸುವ ಮೂಲಕ ಅವರಿಗೆ ಪ್ರತಿಫಲ ನೀಡುತ್ತಾನೆ. ಯೆಹೋವನು ಆಸನಿಗೆ ಪ್ರತಿಫಲ ನೀಡಿದನು. ನಮಗೂ ಖಂಡಿತ ಪ್ರತಿಫಲ ನೀಡುವನು.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರ]

ಆಧ್ಯಾತ್ಮಿಕ ಹೋರಾಟ ಮಾಡುವ ನಂಬಿಗಸ್ತರಿಗೆ ಯೆಹೋವನು ಪ್ರತಿಫಲ ಕೊಡುತ್ತಾನೆ

[ಪುಟ 10ರಲ್ಲಿರುವ ಸಂಕ್ಷಿಪ್ತ ವಿವರ]

ಯೆಹೋವನ ದೃಷ್ಟಿಯಲ್ಲಿ ಸರಿಯಾಗಿರುವುದನ್ನು ಮಾಡಲು ಧೈರ್ಯ ಬೇಕು