ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೈತಾನನ ಪಾಶಗಳಿವೆ ಎಚ್ಚರ!

ಸೈತಾನನ ಪಾಶಗಳಿವೆ ಎಚ್ಚರ!

ಸೈತಾನನ ಪಾಶಗಳಿವೆ ಎಚ್ಚರ!

“[ಪಿಶಾಚನ] ಉರ್ಲಿನಿಂದ . . . ಹಿಂದಿರುಗಿ.” ​—⁠2 ತಿಮೊ. 2:⁠26.

ಉತ್ತರಿಸುವಿರಾ?

ಬೇರೆಯವರನ್ನು ಟೀಕಿಸುವ ಅಭ್ಯಾಸ ನಮಗಿರುವುದಾದರೆ ಯಾವ ಸ್ವಪರೀಕ್ಷೆ ಮಾಡಿಕೊಳ್ಳಬೇಕು?

ಭಯ, ಒತ್ತಡಕ್ಕೆ ಮಣಿಯುವುದರ ಅಪಾಯದ ಕುರಿತು ಪಿಲಾತ ಹಾಗೂ ಪೇತ್ರನಿಂದ ಯಾವ ಪಾಠ ಕಲಿಯುತ್ತೇವೆ?

ವಿಪರೀತ ದೋಷಿಭಾವನೆಯನ್ನು ಹೇಗೆ ತೊಲಗಿಸಬಹುದು?

1, 2. ಪಿಶಾಚನು ಬಳಸುವ ಯಾವ ಪಾಶಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ?

ಪಿಶಾಚನು ಯೆಹೋವನ ಸೇವಕರನ್ನು ಬೇಟೆಯಾಡಲು ಹೊಂಚುಹಾಕುತ್ತಾನೆ. ಬೇಟೆಗಾರ ತಾನು ಹಿಡಿದ ಬೇಟೆಯನ್ನು ಕೊಲ್ಲುತ್ತಾನೆ. ಆದರೆ ಸೈತಾನನು ಯಾವಾಗಲೂ ಹಾಗೆ ಮಾಡಲ್ಲ. ಬೇಟೆಯನ್ನು ಜೀವಂತವಾಗಿ ಹಿಡಿದು ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದೇ ಅವನ ಬಯಕೆ.​2 ತಿಮೊಥೆಯ 2:​24-26 ಓದಿ.

2 ಪ್ರಾಣಿಯನ್ನು ಜೀವಂತವಾಗಿ ಹಿಡಿಯಲು ಬೇಟೆಗಾರ ಯಾವುದಾದರೂ ಒಂದು ರೀತಿಯ ಪಾಶವನ್ನು ಬಳಸುತ್ತಾನೆ. ಗುಹೆ, ಪೊದೆಯಿಂದ ಪ್ರಾಣಿ ಹೊರಗೆ ಬರುವಂತೆ ಮಾಡಿ ನಂತರ ಉರ್ಲಿಗೆ ಸಿಕ್ಕಿಬೀಳುವಂತೆ ಮಾಡುತ್ತಾನೆ. ಕೆಲವು ಪಾಶಗಳು ಇರುವುದಂತೂ ಪ್ರಾಣಿಗಳಿಗೆ ಗೊತ್ತೇ ಆಗುವುದಿಲ್ಲ. ಸಿಕ್ಕಿಬಿದ್ದ ನಂತರವೇ ಅವಕ್ಕೆ ಅರಿವಾಗುತ್ತದೆ. ಸೈತಾನನು ದೇವರ ಸೇವಕರನ್ನು ಜೀವಂತವಾಗಿ ಹಿಡಿಯಲು ಬಳಸುವ ಪಾಶಗಳೂ ಈ ರೀತಿಯದ್ದೇ. ಅವನ ಪಾಶಗಳಿಗೆ ನಾವು ಸಿಕ್ಕಿಬೀಳದಿರಲು ಯೆಹೋವನು ಕೊಡುವ ಎಚ್ಚರಿಕೆಗಳಿಗೆ ಗಮನಕೊಡುತ್ತಾ ಇರಬೇಕು. ಎಲ್ಲೆಲ್ಲ ನಾವು ಸಿಕ್ಕಿಬೀಳುವ ಸಾಧ್ಯತೆಗಳಿವೆ ಎಂದು ಎಚ್ಚರಿಸುವಾಗ ತಕ್ಷಣ ಕ್ರಿಯೆಗೈಯಬೇಕು. ಪಿಶಾಚನು ಬಳಸುವ ಮೂರು ಪಾಶಗಳ ಕುರಿತು ಈ ಲೇಖನದಲ್ಲಿ ಚರ್ಚಿಸೋಣ. ಅವು ಯಾವುವೆಂದರೆ (1) ಲಂಗುಲಗಾಮಿಲ್ಲದ ಮಾತು, (2) ಭಯ ಮತ್ತು ಒತ್ತಡ, (3) ವಿಪರೀತ ದೋಷಿಭಾವನೆ. ಪಿಶಾಚನಿಗೆ ಸ್ವಲ್ಪಮಟ್ಟಿಗಿನ ಯಶಸ್ಸನ್ನು ತಂದುಕೊಟ್ಟಿರುವ ಈ ಪಾಶಗಳಿಗೆ ನಾವು ಬಲಿಯಾಗದಿರಲು ಏನು ಮಾಡಬೇಕೆಂದು ಸಹ ನೋಡೋಣ. ಮುಂದಿನ ಲೇಖನದಲ್ಲಿ ಇನ್ನೂ ಎರಡು ಪಾಶಗಳ ಬಗ್ಗೆ ಚರ್ಚಿಸಲಿದ್ದೇವೆ.

ಬೆಂಕಿಯಂತಿರುವ ಲಂಗುಲಗಾಮಿಲ್ಲದ ಮಾತನ್ನು ನಂದಿಸಿ

3, 4. ನಮ್ಮ ನಾಲಿಗೆಗೆ ಕಡಿವಾಣ ಹಾಕದಿದ್ದರೆ ಏನಾಗಬಹುದು? ಉದಾಹರಿಸಿ.

3 ಪ್ರಾಣಿಗಳು ಅಡಗಿರುವ ಸ್ಥಳದಿಂದ ಹೊರಬರುವಂತೆ ಮಾಡಲು ಬೇಟೆಗಾರನು ಹತ್ತಿರದಲ್ಲಿ ಬೆಂಕಿ ಹಾಕುತ್ತಾನೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಪ್ರಾಣಿಗಳು ಹೊರಬಂದು ಓಡುವಾಗ ಬೇಟೆಗಾರನು ಸುಲಭವಾಗಿ ಅವುಗಳನ್ನು ಹಿಡಿಯುತ್ತಾನೆ. ಇದೇ ವಿಧಾನವನ್ನು ಪಿಶಾಚನು ಸಹ ಬಳಸುತ್ತಾನೆ. ಒಂದರ್ಥದಲ್ಲಿ ಅವನು ಸಭೆಯಲ್ಲಿ ಬೆಂಕಿ ಹಚ್ಚಲು ಪ್ರಯತ್ನಿಸುತ್ತಾನೆ. ಆಗ ಸಭೆಯೆಂಬ ಸುರಕ್ಷಾ ತಾಣವನ್ನು ಬಿಟ್ಟು ಹೊರಬರುವವರನ್ನು ಸುಲಭವಾಗಿ ಹಿಡಿಯುತ್ತಾನೆ. ನಾವು ಸಹ ಕೆಲವೊಮ್ಮೆ ಗೊತ್ತಿಲ್ಲದೆ ಪಿಶಾಚನಿಗೆ ಸಹಾಯ ಮಾಡುತ್ತಿರುತ್ತೇವೆ. ಇದರರ್ಥ ನಾವು ಅವನ ಪಾಶಕ್ಕೆ ಬಲಿಬಿದ್ದಿದ್ದೇವೆ. ಅದು ಹೇಗೆ?

4 ಶಿಷ್ಯ ಯಾಕೋಬನು ನಾಲಿಗೆಯನ್ನು ಬೆಂಕಿಗೆ ಹೋಲಿಸಿದನು. (ಯಾಕೋಬ 3:​6-8 ಓದಿ.) ನಮ್ಮ ನಾಲಿಗೆಗೆ ಕಡಿವಾಣ ಹಾಕದೆ ಹೋದರೆ ನಾವೇ ಸಭೆಯಲ್ಲಿ ಕಾಡ್ಗಿಚ್ಚು ಹೊತ್ತಿಸುವವರಾಗುತ್ತೇವೆ. ಈ ಸನ್ನಿವೇಶವನ್ನು ಊಹಿಸಿಕೊಳ್ಳಿ: ಸಹೋದರಿಯೊಬ್ಬಳನ್ನು ರೆಗ್ಯುಲರ್‌ ಪಯನೀಯರಳಾಗಿ ನೇಮಿಸಲಾಗಿದೆ ಎಂದು ಕೂಟದಲ್ಲಿ ಪ್ರಕಟನೆ ಮಾಡಲಾಗುತ್ತದೆ. ಕೂಟದ ನಂತರ ಇಬ್ಬರು ಸಹೋದರಿಯರು ಇದರ ಬಗ್ಗೆ ಮಾತಾಡುತ್ತಿದ್ದಾರೆ. ಒಬ್ಬ ಸಹೋದರಿ ಇದರ ಬಗ್ಗೆ ಸಂತೋಷ ವ್ಯಕ್ತಪಡಿಸಿ ಪಯನೀಯರ್‌ ಸಹೋದರಿಗೆ ಯಶಸ್ಸನ್ನು ಹಾರೈಸುತ್ತಾಳೆ. ಇನ್ನೊಬ್ಬ ಸಹೋದರಿ ಹೊಸ ಪಯನೀಯರಳ ಹೇತು ಸರಿಯಿಲ್ಲ ಎಂದು ದೂರುತ್ತಾ ಸಭೆಯಲ್ಲಿ ಮಿಂಚೋದೇ ಅವಳಾಸೆ ಎಂದು ಟೀಕಿಸುತ್ತಾಳೆ. ಈ ಇಬ್ಬರಲ್ಲಿ ಯಾರನ್ನು ನಿಮ್ಮ ಸ್ನೇಹಿತೆಯಾಗಿ ಮಾಡಿಕೊಳ್ಳುತ್ತೀರಿ? ಸಭೆಯಲ್ಲಿ ಬೆಂಕಿ ಹಚ್ಚುವಂಥ ಮಾತುಗಳನ್ನು ಆಡುತ್ತಿರುವ ಸಹೋದರಿಯನ್ನಂತೂ ಅಲ್ಲ, ಅಲ್ಲವೆ?

5. ಬೆಂಕಿಯಂತಿರುವ ಲಂಗುಲಗಾಮಿಲ್ಲದ ಮಾತನ್ನು ನಂದಿಸಲು ಯಾವ ಸ್ವಪರೀಕ್ಷೆ ಮಾಡಿಕೊಳ್ಳಬೇಕು?

5 ಹಾಗಾದರೆ ಬೆಂಕಿಯಂತಿರುವ ಲಂಗುಲಗಾಮಿಲ್ಲದ ಮಾತನ್ನು ನಂದಿಸುವುದು ಹೇಗೆ? “ಹೃದಯದಲ್ಲಿ ತುಂಬಿರುವುದನ್ನೇ ಬಾಯಿ ಮಾತಾಡುತ್ತದೆ” ಎಂದನು ಯೇಸು. (ಮತ್ತಾ. 12:34) ಅಂದ ಮೇಲೆ ಮೊದಲು ನಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಬೇಕು. ನಮ್ಮಲ್ಲಿ ಕೆಟ್ಟ ಭಾವನೆಗಳಿರುವುದಾದರೆ ಕೆಟ್ಟ ಮಾತುಗಳು ಸಹಜವಾಗಿ ಬರುತ್ತವೆ. ಅಂಥ ಭಾವನೆಗಳನ್ನು ನಾವು ಮಟ್ಟಹಾಕಬೇಕು. ಒಬ್ಬ ಸಹೋದರ ಹೆಚ್ಚಿನ ಸೇವಾ ಸುಯೋಗಗಳಿಗೆ ಅರ್ಹನಾಗಲು ಪ್ರಯತ್ನಿಸುತ್ತಿದ್ದಾನೆ ಎಂದೆಣಿಸಿ. ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಅವನದನ್ನು ಒಳ್ಳೇ ಉದ್ದೇಶದಿಂದ ಮಾಡುತ್ತಿದ್ದಾನೆ ಎಂದು ನೆನಸುತ್ತೇವಾ? ಅಥವಾ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದು ಭಾವಿಸುತ್ತೇವಾ? ಇತರರ ಹೇತುಗಳ ಕುರಿತು ಸಂಶಯಪಡುವ ಅಭ್ಯಾಸ ನಮಗಿರುವಲ್ಲಿ ಒಂದು ವಿಷಯವನ್ನು ನಾವು ಮರೆಯಬಾರದು. ಏನೆಂದರೆ ಪಿಶಾಚನು ಸಹ ದೇವಭಕ್ತ ಯೋಬನ ಹೇತುವನ್ನು ಸಂಶಯಿಸಿದನು. (ಯೋಬ 1:​9-11) ಸುಮ್ಮಸುಮ್ಮನೆ ಇತರರ ಬಗ್ಗೆ ಕೆಟ್ಟದ್ದನ್ನು ಯೋಚಿಸುವ ಬದಲು ನಮಗೇಕೆ ಹಾಗನಿಸುತ್ತದೆಂದು ಆಲೋಚಿಸಬೇಕು. ಆ ಸಹೋದರನ ಬಗ್ಗೆ ಹಾಗೆ ನೆನಸಲು ನಿಜವಾದ ಕಾರಣವಿದೆಯಾ? ಅಥವಾ ಈ ಕಡೇ ದಿವಸಗಳಲ್ಲಿ ಲೋಕದ ಜನರ ಪ್ರೀತಿ ಬತ್ತಿಹೋಗುತ್ತಿರುವಂತೆ ಸಹೋದರರ ಮೇಲಿನ ನಮ್ಮ ಪ್ರೀತಿಯೂ ಬತ್ತಿಹೋಗುತ್ತಿದೆಯಾ? ಎಂದು ಯೋಚಿಸಬೇಕು.​—⁠2 ತಿಮೊ. 3:​1-4.

6, 7. (1) ಇತರರನ್ನು ಟೀಕಿಸುವುದರ ಹಿಂದೆ ಯಾವೆಲ್ಲ ಕಾರಣಗಳಿರಬಹುದು? (2) ನಮಗೆ ನೋವಾಗುವಂತೆ ಇತರರು ಮಾತಾಡುವಾಗ ನಾವೇನು ಮಾಡಬೇಕು?

6 ಬೇರೆಯವರನ್ನು ಟೀಕಿಸುವುದರ ಹಿಂದೆ ಇನ್ನೂ ಕೆಲವು ಕಾರಣಗಳಿರಬಹುದು. ನಮ್ಮ ಕೆಲಸಗಳನ್ನು ಎಲ್ಲರು ನೋಡಿ ಮೆಚ್ಚಬೇಕೆಂಬ ಬಯಕೆ ನಮ್ಮಲ್ಲಿರಬಹುದು. ಅದಕ್ಕಾಗಿ ಇತರರನ್ನು ಕೆಳಕ್ಕೆ ದೂಡಿ ನಾವು ಮೇಲೆ ಬರಲು ಪ್ರಯತ್ನಿಸಬಹುದು. ಅಥವಾ ಅರ್ಹತೆ ಬೆಳೆಸಿಕೊಳ್ಳಲು ಮಾಡಬೇಕಾದದ್ದನ್ನು ಮಾಡದೆ ಬೇರೆಯವರು ಮೇಲೆ ಬರುವುದನ್ನು ನೋಡಿ ಆಡಿಕೊಳ್ಳುತ್ತಿರಬಹುದು. ಹೆಮ್ಮೆ, ಹೊಟ್ಟೆಕಿಚ್ಚು, ಅಸಮರ್ಥ ಭಾವನೆ ಅಥವಾ ಬೇರೆ ಯಾವುದೇ ಕಾರಣದಿಂದ ನಾವು ಇತರರನ್ನು ಟೀಕಿಸುತ್ತಿರಲಿ ಪರಿಣಾಮ ವಿನಾಶಕಾರಿ.

7 ಕೆಲವೊಮ್ಮೆ ಒಬ್ಬರ ಬಗ್ಗೆ ಕೆಟ್ಟದಾಗಿ ಮಾತಾಡುವುದು ಸರಿಯೆಂದು ನಮಗನಿಸಬಹುದು. ಏಕೆಂದರೆ ಅವರು ಲಗಾಮಿಲ್ಲದೆ ಮಾತಾಡಿ ನಮ್ಮನ್ನು ನೋಯಿಸಿರಬಹುದು. ಹಾಗಂತ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತೇನೆ ಎಂದು ಹೋಗುವುದು ಸರಿಯಲ್ಲ. ಆಗ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಹಾಗೆ ಮಾಡುವಲ್ಲಿ ನಾವು ದೇವರ ಚಿತ್ತದಂತಲ್ಲ, ಪಿಶಾಚನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೇವೆ. (2 ತಿಮೊ. 2:26) ಇಂಥದ್ದೇ ಸನ್ನಿವೇಶದಲ್ಲಿ ಯೇಸು ಏನು ಮಾಡಿದನೆಂದು ಗಮನಿಸಿ. ಅವನು ಬೈಯುವವರನ್ನು “ಪ್ರತಿಯಾಗಿ ಬೈಯಲಿಲ್ಲ.” ಬದಲಿಗೆ “ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.” (1 ಪೇತ್ರ 2:​21-23, ಸತ್ಯವೇದ ಭಾಷಾಂತರ) ಯೆಹೋವನು ತಕ್ಕ ಸಮಯದಲ್ಲಿ ತನ್ನದೇ ವಿಧದಲ್ಲಿ ವಿಷಯಗಳನ್ನು ಸರಿಪಡಿಸುವನೆಂಬ ಭರವಸೆ ಅವನಿಗಿತ್ತು. ನಮಗೂ ಆ ಭರವಸೆ ಇರಬೇಕು. ನಮ್ಮ ಮಾತು ಇತರರನ್ನು ನೋಯಿಸದೆ ಯಾವಾಗಲೂ ಚೈತನ್ಯ ಕೊಡುವಂತಿರಬೇಕು. ಆಗ ನಾವು ಸಭೆಯ ‘ಶಾಂತಿಯ ಐಕ್ಯಗೊಳಿಸುವ ಬಂಧವನ್ನು’ ಇನ್ನಷ್ಟು ಬಲಗೊಳಿಸುವೆವು.​ಎಫೆಸ 4:​1-3 ಓದಿ.

ಭಯ ಮತ್ತು ಒತ್ತಡ ಎಂಬ ಉರ್ಲಿನಿಂದ ತಪ್ಪಿಸಿಕೊಳ್ಳಿ

8, 9. ಪಿಲಾತನು ಯೇಸುವಿಗೆ ಮರಣ ಶಿಕ್ಷೆ ವಿಧಿಸಿದ್ದೇಕೆ?

8 ಒಂದು ಪ್ರಾಣಿ ಪಾಶಕ್ಕೆ ಸಿಲುಕಿತೆಂದರೆ ಅದರ ಕಥೆ ಅಷ್ಟೇ. ಇಷ್ಟಬಂದ ಕಡೆ ಓಡಾಡಲು ಅದಕ್ಕೆ ಆಗುವುದಿಲ್ಲ. ಅದೇ ರೀತಿ ಭಯ ಹಾಗೂ ಒತ್ತಡಕ್ಕೆ ಮಣಿಯುವವರು ಬೇರೆಯವರ ಕೈಗೊಂಬೆಯಾಗುತ್ತಾರೆ. (ಜ್ಞಾನೋಕ್ತಿ 29:25 ಓದಿ.) ಇದು ಹೇಗೆಂದು ತಿಳಿಯಲು ಒತ್ತಡ ಹಾಗೂ ಭಯದ ಪ್ರಭಾವಕ್ಕೆ ಒಳಗಾದ ಇಬ್ಬರ ಉದಾಹರಣೆಗಳನ್ನು ನೋಡೋಣ. ಅವರಿಂದ ಯಾವ ಪಾಠ ಕಲಿಯಬಹುದೆಂದು ಪರೀಕ್ಷಿಸೋಣ.

9 ಅವರಲ್ಲಿ ಒಬ್ಬ ರೋಮನ್‌ ರಾಜ್ಯಪಾಲ ಪೊಂತ್ಯ ಪಿಲಾತ. ಯೇಸು ನಿರಪರಾಧಿಯೆಂದು ತಿಳಿದಿದ್ದ ಅವನಿಗೆ ಯೇಸುವನ್ನು ಶಿಕ್ಷಿಸಲು ಇಷ್ಟವಿರಲಿಲ್ಲ. “ಇವನು ಮರಣಕ್ಕೆ ಯೋಗ್ಯವಾದದ್ದೇನನ್ನೂ ಮಾಡಿಲ್ಲ” ಎಂದು ಸಹ ಬಾಯಿಬಿಟ್ಟು ಹೇಳಿದನು. ಆದರೆ ನಂತರ ಪಿಲಾತನೇ ಯೇಸುವನ್ನು ಮರಣದಂಡನೆಗೆ ಒಪ್ಪಿಸಿದನು. ಯಾಕೆ? ಯಾಕೆಂದರೆ ಅವನು ಜನರ ಒತ್ತಡಕ್ಕೆ ಮಣಿದನು. (ಲೂಕ 23:​15, 21-25) “ಈ ಮನುಷ್ಯನನ್ನು ಬಿಡುಗಡೆಮಾಡಿದರೆ ನೀನು ಕೈಸರನಿಗೆ ಮಿತ್ರನಲ್ಲ” ಎಂದು ಹೇಳುತ್ತಾ ಜನರು ತಮ್ಮ ಪರವಾಗಿ ತೀರ್ಪು ನೀಡಲು ಪಿಲಾತನ ಮೇಲೆ ಒತ್ತಡ ಹೇರಿದರು. (ಯೋಹಾ. 19:12) ಇದರಿಂದ ಪಿಲಾತನಿಗೆ ತಾನು ಕ್ರಿಸ್ತನ ಪರವಹಿಸಿದರೆ ತನ್ನ ಸ್ಥಾನಕ್ಕೆ ಏನಾಗುತ್ತದೋ, ಜೀವವನ್ನೇ ಕಳಕೊಳ್ಳಬೇಕಾಗುತ್ತದೋ ಎಂಬ ಭಯಹುಟ್ಟಿತು. ಹಾಗಾಗಿ ಪಿಶಾಚನ ಇಚ್ಛೆಗೆ ಅನುಸಾರವಾಗಿ ಕೆಲಸಮಾಡಿದನು.

10. ಯೇಸು ಯಾರೆಂದು ತನಗೆ ಗೊತ್ತೇ ಇಲ್ಲ ಎಂದು ಪೇತ್ರ ಹೇಳಿದ್ದೇಕೆ?

10 ಈಗ ನಾವು ಯೇಸುವಿನ ಅತ್ಯಾಪ್ತ ಶಿಷ್ಯರಲ್ಲಿ ಒಬ್ಬನಾದ ಪೇತ್ರನ ಕುರಿತು ನೋಡೋಣ. ಇವನು ಅನೇಕ ಬಾರಿ ಧೈರ್ಯ ತೋರಿಸಿದ್ದನು. ಯೇಸುವೇ ಮೆಸ್ಸೀಯನು ಎಂದು ಘಂಟಾಘೋಷವಾಗಿ ಹೇಳಿದ್ದನು. (ಮತ್ತಾ. 16:16) ಒಮ್ಮೆ ಯೇಸು ಹೇಳಿದ ಒಂದು ವಿಷಯವನ್ನು ಅನೇಕ ಶಿಷ್ಯರು ತಪ್ಪರ್ಥಮಾಡಿಕೊಂಡು ಅವನನ್ನು ಬಿಟ್ಟುಹೋದಾಗ ಪೇತ್ರನಾದರೋ ನಿಷ್ಠೆಯಿಂದ ಉಳಿದನು. (ಯೋಹಾ. 6:​66-69) ಯೇಸುವನ್ನು ವೈರಿಗಳು ದಸ್ತಗಿರಿ ಮಾಡಲು ಬಂದಾಗಲಂತೂ ಪೇತ್ರನು ಕತ್ತಿಯಿಂದ ಒಬ್ಬನಿಗೆ ಹೊಡೆದು ಯೇಸುವನ್ನು ರಕ್ಷಿಸಲು ಮುಂದೆ ಬಂದಿದ್ದನು. (ಯೋಹಾ. 18:​10, 11) ಆದರೆ ನಂತರ ಅವನೇ ತನಗೆ ಯೇಸು ಯಾರೆಂದು ಗೊತ್ತೇ ಇಲ್ಲ ಎಂದು ಹೇಳಿದನು. ಯಾಕೆ ಹೀಗೆ ಮಾಡಿದನು? ಏಕೆಂದರೆ ಅವನು ಮನುಷ್ಯರಿಗೆ ಹೆದರಿ ಧೈರ್ಯ ಕಳಕೊಂಡನು.​—⁠ಮತ್ತಾ. 26:​74, 75.

11. ನಾವು ಯಾವ ಒತ್ತಡಗಳನ್ನು ಎದುರಿಸಬೇಕಾಗಬಹುದು?

11 ದೇವರ ಮನಸ್ಸಿಗೆ ನೋವು ತರುವಂಥ ವಿಷಯಗಳನ್ನು ಮಾಡುವಂತೆ ಒತ್ತಡ ಬರುವಾಗ ಕ್ರೈಸ್ತರಾದ ನಾವು ಮಣಿಯಬಾರದು. ಮೋಸ ಮಾಡುವಂತೆ, ಲೈಂಗಿಕ ಅನೈತಿಕತೆಯಲ್ಲಿ ಒಳಗೂಡುವಂತೆ ಕೆಲಸದ ಸ್ಥಳದಲ್ಲಿರುವ ಧಣಿ ಅಥವಾ ಬೇರೆಯವರಿಂದ ಒತ್ತಡ ಬರಬಹುದು. ಶಾಲೆಯಲ್ಲಾದರೆ ಶಿಕ್ಷಕರ ಕಣ್ತಪ್ಪಿಸಿ ಪರೀಕ್ಷೆಯಲ್ಲಿ ಮೋಸಮಾಡುವಂತೆ, ಅಶ್ಲೀಲ ಚಿತ್ರಗಳನ್ನು ನೋಡುವಂತೆ, ಸಿಗರೇಟ್‌ ಸೇದುವಂತೆ, ಅಮಲೌಷಧ ಸೇವಿಸುವಂತೆ, ಮದ್ಯಪಾನ ಮಾಡುವಂತೆ, ಅನೈತಿಕ ಕೃತ್ಯಗಳಲ್ಲಿ ತೊಡಗುವಂತೆ ಸಹಪಾಠಿಗಳಿಂದ ಒತ್ತಡ ಬರಬಹುದು. ಈ ರೀತಿಯ ಒತ್ತಡ ಮತ್ತು ಮನುಷ್ಯ ಭಯ ಪಿಶಾಚನು ಬಳಸುವ ಪಾಶ. ಅದರಿಂದ ತಪ್ಪಿಸಿಕೊಳ್ಳಲು ಯಾವುದು ಸಹಾಯ ಮಾಡುತ್ತದೆ?

12. ಪಿಲಾತ ಮತ್ತು ಪೇತ್ರ ಭಯ ಮತ್ತು ಒತ್ತಡಕ್ಕೆ ಮಣಿಯಲು ಕಾರಣವೇನು?

12 ಪಿಲಾತ ಮತ್ತು ಪೇತ್ರ ಏಕೆ ಭಯ ಮತ್ತು ಒತ್ತಡಕ್ಕೆ ಮಣಿದರೆಂದು ನಾವೀಗ ನೋಡೋಣ. ಪಿಲಾತನಿಗೆ ಕ್ರಿಸ್ತನ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ಆದರೂ ಯೇಸು ನಿರಪರಾಧಿ, ಅವನೊಬ್ಬ ಸಾಮಾನ್ಯ ಮನುಷ್ಯನಲ್ಲ ಎಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಪಿಲಾತನಲ್ಲಿ ದೀನತೆಯಿರಲಿಲ್ಲ. ಸತ್ಯ ದೇವರ ಮೇಲೆ ಪ್ರೀತಿಯೂ ಇರಲಿಲ್ಲ. ಹಾಗಾಗಿ ಪಿಶಾಚನು ಅವನನ್ನು ಜೀವಂತವಾಗಿ ಹಿಡಿದು ತನ್ನ ಸಾಧನವಾಗಿ ಬಳಸಿಕೊಂಡನು. ಇನ್ನೊಂದು ಕಡೆ ಪೇತ್ರನಿಗೆ ದೇವರ ಮತ್ತು ಕ್ರಿಸ್ತನ ಕುರಿತು ಸರಿಯಾದ ಜ್ಞಾನವೂ ಇತ್ತು, ದೇವರ ಮೇಲೆ ಪ್ರೀತಿಯೂ ಇತ್ತು. ಆದರೆ ಅವನು ತನ್ನ ಇತಿಮಿತಿಗಳನ್ನು ಅರಿತುಕೊಳ್ಳಲಿಲ್ಲ. ಯೇಸುವನ್ನು ದಸ್ತಗಿರಿ ಮಾಡುವ ಸ್ವಲ್ಪ ಮುಂಚೆ ಪೇತ್ರನು, “ಬೇರೆಲ್ಲರೂ ಎಡವಲ್ಪಟ್ಟರೂ ನನಗೆ ಹಾಗಾಗುವುದಿಲ್ಲ” ಎಂದು ಕೊಚ್ಚಿಕೊಂಡನು. (ಮಾರ್ಕ 14:29) ಆದರೆ ನಂತರ ಅವನೇ ಭಯಪಟ್ಟು ಒತ್ತಡಕ್ಕೆ ಮಣಿದನು. ಅವನು ಕೀರ್ತನೆಗಾರನಂತೆ “ಯೆಹೋವನು ನನಗಿದ್ದಾನೆ; ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು?” ಎಂದು ಯೆಹೋವನ ಮೇಲೆ ಭರವಸೆಯಿಟ್ಟಿದ್ದರೆ ಮುಂದೆ ಬಂದ ಪರೀಕ್ಷೆಗಳನ್ನು ಎದುರಿಸಲು ಶಕ್ತನಾಗಿರುತ್ತಿದ್ದನು. (ಕೀರ್ತ. 118:⁠6) ಯೇಸುವಿನ ಜೀವಿತದ ಕೊನೆ ರಾತ್ರಿ ಏನಾಯಿತೆಂದು ಗಮನಿಸಿ. ಪೇತ್ರ ಹಾಗೂ ಇನ್ನಿಬ್ಬರು ಅಪೊಸ್ತಲರೊಂದಿಗೆ ಯೇಸು ಗೆತ್ಸೇಮನೆ ತೋಟಕ್ಕೆ ಬಂದಿದ್ದನು. ಆ ಸಮಯದಲ್ಲಿ ಪೇತ್ರನೂ ಇನ್ನಿಬ್ಬರೂ ಎಚ್ಚರವಾಗಿರದೆ ನಿದ್ರೆಹೋದರು. ಯೇಸು ಅವರನ್ನು ಎಬ್ಬಿಸಿ “ನೀವು ಪ್ರಲೋಭನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸುತ್ತಿರಿ” ಎಂದು ಹೇಳಿದನು. (ಮಾರ್ಕ 14:38) ಆದರೂ ಪೇತ್ರ ಪುನಃ ನಿದ್ರೆ ಮಾಡಿದನು. ಅವನು ಎಚ್ಚರವಾಗಿದ್ದು ಪ್ರಾರ್ಥಿಸದ ಕಾರಣ ನಂತರ ಹೆದರಿ ಒತ್ತಡಕ್ಕೆ ಮಣಿದನು.

13. ಒತ್ತಡವನ್ನು ಎದುರಿಸಲು ನಾವೇನು ಮಾಡಬಹುದು?

13 ಪಿಲಾತ ಮತ್ತು ಪೇತ್ರನಿಂದ ನಾವು ಯಾವ ಪಾಠ ಕಲಿಯುತ್ತೇವೆ? ಒತ್ತಡಕ್ಕೆ ಮಣಿಯದಿರಲು ನಮ್ಮಲ್ಲಿ ನಿಷ್ಕೃಷ್ಟ ಜ್ಞಾನ, ದೀನತೆ, ಇತಿಮಿತಿಗಳ ಅರಿವು, ದೇವರ ಮೇಲೆ ಪ್ರೀತಿ, ದೇವಭಯ ಇರಬೇಕು. ನಾವು ನಂಬುವ ವಿಷಯಗಳ ಕುರಿತು ನಿಷ್ಕೃಷ್ಟ ಜ್ಞಾನವಿದ್ದರೆ ಅದರ ಕುರಿತು ನಿಶ್ಚಿತಾಭಿಪ್ರಾಯದಿಂದಲೂ ಧೈರ್ಯದಿಂದಲೂ ಮಾತಾಡಸಾಧ್ಯ. ಇದು ಮನುಷ್ಯರ ಭಯ ಮತ್ತು ಒತ್ತಡಕ್ಕೆ ಮಣಿಯದಿರಲು ಸಹಾಯ ಮಾಡುತ್ತದೆ. ಆದರೆ ಇದರರ್ಥ ನಮ್ಮ ಸಾಮರ್ಥ್ಯದ ಬಗ್ಗೆ ಅತಿಯಾದ ಆತ್ಮವಿಶ್ವಾಸ ಇಟ್ಟುಕೊಳ್ಳಬೇಕೆಂದಲ್ಲ. ನಮ್ಮಲ್ಲಿ ದೀನತೆಯಿರಬೇಕು. ಒತ್ತಡವನ್ನು ಎದುರಿಸಲು ದೇವರ ಸಹಾಯ ಬೇಕು ಎಂದು ಮನಗಾಣಬೇಕು. ಪವಿತ್ರಾತ್ಮ ಶಕ್ತಿ ಕೊಡುವಂತೆ ಬೇಡಿಕೊಳ್ಳಬೇಕು. ದೇವರ ಮೇಲೆ ನಮಗಿರುವ ಪ್ರೀತಿ ಆತನ ನಾಮಕ್ಕೆ ಮಹಿಮೆ ತರುವಂಥ ಕೆಲಸ ಮಾಡಲು, ಆತನ ಮಟ್ಟಗಳನ್ನು ಪಾಲಿಸಲು ಪ್ರಚೋದಿಸಬೇಕು. ಮಾತ್ರವಲ್ಲ, ಒತ್ತಡ ಬರುವ ಮುಂಚೆಯೇ ಅದನ್ನು ಎದುರಿಸಲು ಸಿದ್ಧರಾಗಿರಬೇಕು. ಮಕ್ಕಳಿಗೂ ಶಾಲೆಯಲ್ಲಿ ಒತ್ತಡ ಬರುತ್ತದೆ. ಹಾಗಾಗಿ ಕೆಟ್ಟದ್ದನ್ನು ಮಾಡಲು ಸಹಪಾಠಿಗಳು ಒತ್ತಡ ಹೇರುವಾಗ ಹೇಗೆ ಪ್ರತಿಕ್ರಿಯಿಸಬಹುದೆಂದು ಹೆತ್ತವರು ಕಲಿಸಿ ಮೊದಲೇ ಅವರನ್ನು ಸಿದ್ಧಗೊಳಿಸಬೇಕು. ಅವರೊಂದಿಗೆ ಕೂಡಿ ಪ್ರಾರ್ಥಿಸಬೇಕು. ಇದರಿಂದ ಅವರು ಒತ್ತಡಕ್ಕೆ ಮಣಿಯದೆ ಕೆಟ್ಟ ಕೆಲಸದಿಂದ ದೂರವಿರುತ್ತಾರೆ.​—⁠2 ಕೊರಿಂ. 13:⁠7 *

ವಿಪರೀತ ದೋಷಿಭಾವನೆ ಎಂಬ ಜಜ್ಜಿಹಾಕುವ ಪಾಶದಿಂದ ತಪ್ಪಿಸಿಕೊಳ್ಳಿ

14. ನಾವು ಹಿಂದೆ ಮಾಡಿರುವ ತಪ್ಪಿನಿಂದಾಗಿ ನಮ್ಮಲ್ಲಿ ಯಾವ ಯೋಚನೆ ಬರಬೇಕೆಂದು ಪಿಶಾಚನು ಬಯಸುತ್ತಾನೆ?

14 ಪ್ರಾಣಿಗಳನ್ನು ಹಿಡಿಯಲು ಇನ್ನೊಂದು ರೀತಿಯ ಪಾಶವನ್ನೂ ಬಳಸುತ್ತಾರೆ. ಪ್ರಾಣಿ ಅಡ್ಡಾಡುವ ದಾರಿಯಲ್ಲಿ ಭಾರವಾದ ಮರದ ದಿಮ್ಮಿ ಅಥವಾ ಕಲ್ಲನ್ನು ನೇತುಹಾಕುತ್ತಾರೆ. ಕೆಳಗೆ ದಾರಿಗಡ್ಡವಾಗಿ ದಾರವನ್ನು ಕಟ್ಟಿರುತ್ತಾರೆ. ಅಜಾಗರೂಕ ಪ್ರಾಣಿ ದಾರವನ್ನು ತುಳಿದಾಗ ಮೇಲಿಂದ ದಿಮ್ಮಿ ಅಥವಾ ಕಲ್ಲು ಪ್ರಾಣಿಯ ಮೇಲೆ ಬಿದ್ದು ಅದನ್ನು ಜಜ್ಜಿಹಾಕುತ್ತದೆ. ಒಂದರ್ಥದಲ್ಲಿ ನಮಗೂ ಹೀಗಾಗಬಹುದು. ಈ ಹಿಂದೆ ಮಾಡಿರುವ ತಪ್ಪನ್ನು ನೆನಸುವಾಗ ‘ಬಹಳ ಮನಗುಂದಿದವರಾಗಬಹುದು,’ ಜಜ್ಜಲ್ಪಟ್ಟ ಅನಿಸಿಕೆಯಾಗಬಹುದು. (ಕೀರ್ತನೆ 38:​3-5, 8 ಓದಿ.) ಇನ್ನು ನಮಗೆ ಯೆಹೋವನ ಕರುಣೆ ದೊರಕುವುದಿಲ್ಲ, ಆತನು ಬಯಸುವಂಥ ರೀತಿಯಲ್ಲಿ ಜೀವಿಸಲು ಸಾಧ್ಯವೇ ಇಲ್ಲ ಎಂದು ನಾವು ನೆನಸಬಹುದು. ಸೈತಾನನಿಗೆ ಇದೇ ಬೇಕು.

15, 16. ವಿಪರೀತ ದೋಷಿಭಾವನೆಯ ಪಾಶದಿಂದ ಹೇಗೆ ತಪ್ಪಿಸಿಕೊಳ್ಳಬಹುದು?

15 ಜಜ್ಜಿಹಾಕುವ ಈ ಪಾಶದಿಂದ ನಾವು ಹೇಗೆ ತಪ್ಪಿಸಿಕೊಳ್ಳಬಹುದು? ನೀವು ಗಂಭೀರ ತಪ್ಪನ್ನು ಮಾಡಿರುವಲ್ಲಿ ಯೆಹೋವನೊಂದಿಗಿನ ನಿಮ್ಮ ಸಂಬಂಧವನ್ನು ಸರಿಪಡಿಸಿಕೊಳ್ಳಲು ಬೇಕಾದ ಕ್ರಮ ತೆಗೆದುಕೊಳ್ಳಿ. ಹಿರಿಯರ ಸಹಾಯ ಪಡೆದುಕೊಳ್ಳಿ. (ಯಾಕೋ. 5:​14-16) ಆದ ತಪ್ಪನ್ನು ಸರಿಪಡಿಸಿಕೊಳ್ಳಲು ಸಾಧ್ಯವಿರುವುದನ್ನೆಲ್ಲ ಮಾಡಿ. (2 ಕೊರಿಂ. 7:11) ನಿಮಗೆ ಶಿಸ್ತು ಸಿಗುವುದಾದರೆ ನೊಂದುಕೊಳ್ಳಬೇಡಿ. ಯಾರ ಮೇಲೆ ಯೆಹೋವನಿಗೆ ಪ್ರೀತಿ ಇದೆಯೋ ಅವರನ್ನೇ ಆತನು ಶಿಸ್ತುಗೊಳಿಸುತ್ತಾನೆ. (ಇಬ್ರಿ. 12:⁠6) ತಪ್ಪಿಗೆ ನಡೆಸಿದ ಹಾದಿಯನ್ನು ಪುನಃ ತುಳಿಯಲ್ಲ ಎಂದು ಶಪಥ ಮಾಡಿ. ಪಶ್ಚಾತ್ತಾಪಪಟ್ಟು ತಪ್ಪನ್ನು ತಿದ್ದಿಕೊಂಡ ಮೇಲೆ ಕ್ರಿಸ್ತನ ಯಜ್ಞದ ಆಧಾರದಲ್ಲಿ ನಿಮ್ಮ ಪಾಪ ಕ್ಷಮಿಸಲ್ಪಟ್ಟಿದೆ ಎಂಬ ನಂಬಿಕೆ ನಿಮಗಿರಲಿ.​—⁠1 ಯೋಹಾ. 4:​9, 14.

16 ಮಾಡಿದ ತಪ್ಪಿಗೆ ಕ್ಷಮೆ ಸಿಕ್ಕಿದ ನಂತರವೂ ಕೆಲವರು ‘ತಪ್ಪು ಮಾಡಿಬಿಟ್ಟೆನಲ್ಲಾ’ ಎಂದು ಕೊರಗುತ್ತಾ ಇರುತ್ತಾರೆ. ಇಂಥ ದೋಷಿಭಾವನೆ ನಿಮ್ಮನ್ನು ಸವೆಸುತ್ತಿರುವಲ್ಲಿ ಈ ವಿಷಯವನ್ನು ನೆನಪಿಸಿಕೊಳ್ಳಿ: ತನ್ನ ಪ್ರಿಯ ಪುತ್ರನನ್ನು ಕೊನೇ ಗಳಿಗೆಯಲ್ಲಿ ಬಿಟ್ಟುಹೋದ ಪೇತ್ರ ಹಾಗೂ ಇತರ ಅಪೊಸ್ತಲರನ್ನೇ ಯೆಹೋವನು ಕ್ಷಮಿಸಿದ್ದಾನೆ. ಹೀನಾಯವಾದ ಅನೈತಿಕತೆಯನ್ನು ಮಾಡಿ ಕೊರಿಂಥ ಸಭೆಯಿಂದ ಬಹಿಷ್ಕಾರಗೊಂಡ ವ್ಯಕ್ತಿ ಪಶ್ಚಾತ್ತಾಪಪಟ್ಟಾಗಲೂ ಯೆಹೋವನು ಕ್ಷಮಿಸಿದನು. (1 ಕೊರಿಂ. 5:​1-5; 2 ಕೊರಿಂ. 2:​6-8) ಗಂಭೀರ ತಪ್ಪು ಮಾಡಿದ್ದರೂ ಪಶ್ಚಾತ್ತಾಪಪಟ್ಟಾಗ ಯೆಹೋವನಿಂದ ಕ್ಷಮೆ ಪಡೆದುಕೊಂಡ ಇಂಥ ಎಷ್ಟೋ ವ್ಯಕ್ತಿಗಳ ಉದಾಹರಣೆ ಬೈಬಲ್‌ನಲ್ಲಿದೆ.​—⁠2 ಪೂರ್ವ. 33:​2, 10-13; 1 ಕೊರಿಂ. 6:​9-11.

17. ವಿಮೋಚನಾ ಯಜ್ಞದಿಂದ ನಮಗೇನು ಪ್ರಯೋಜನ?

17 ನೀವು ನಿಜವಾಗಿ ಪಶ್ಚಾತ್ತಾಪಪಟ್ಟು ಯೆಹೋವನ ಸಹಾಯವನ್ನು ಸ್ವೀಕರಿಸುವಲ್ಲಿ ಆತನು ನಿಮ್ಮ ತಪ್ಪನ್ನು ಮನ್ನಿಸುತ್ತಾನೆ ಮಾತ್ರವಲ್ಲ ಮರೆತುಬಿಡುತ್ತಾನೆ ಕೂಡ. ಯೇಸುವಿನ ಯಜ್ಞದಿಂದ ಕ್ಷಮಿಸಲು ಸಾಧ್ಯವಿಲ್ಲದ ತಪ್ಪನ್ನು ನೀವು ಮಾಡಿದ್ದೀರೆಂದು ನೆನಸಬೇಡಿ. ಒಂದು ವೇಳೆ ನೀವು ಹಾಗೆ ನೆನಸಿದರೆ ಅದರಿಂದ ಸೈತಾನನಿಗೇ ಜಯ. ಆದರೆ ನೀವು ಎಂಥದ್ದೇ ತಪ್ಪು ಮಾಡಿರಲಿ ಪಶ್ಚಾತ್ತಾಪಪಟ್ಟರೆ ಕ್ರಿಸ್ತನ ಯಜ್ಞದ ಮೂಲಕ ಕ್ಷಮೆ ಖಂಡಿತ ಸಿಗುತ್ತದೆ. (ಜ್ಞಾನೋ. 24:16) ಈ ಯಜ್ಞದಲ್ಲಿ ನಂಬಿಕೆಯಿಟ್ಟರೆ ವಿಪರೀತ ದೋಷಿಭಾವನೆ ನಿಮ್ಮಿಂದ ತೊಲಗಬಲ್ಲದು. ನಿಮ್ಮ ಹೆಗಲ ಮೇಲಿಂದ ಒಂದು ದೊಡ್ಡ ಭಾರವನ್ನು ಕೆಳಗಿಳಿಸಿದಂತಿರುವುದು. ಸಂಪೂರ್ಣ ಹೃದಯ, ಮನಸ್ಸು, ಪ್ರಾಣದಿಂದ ಯೆಹೋವನ ಸೇವೆ ಮಾಡುತ್ತಾ ಮುಂದುವರಿಯಲು ನಿಮಗೆ ಬಲ ಸಿಗಬಲ್ಲದು.​—⁠ಮತ್ತಾ. 22:⁠37.

ಸೈತಾನನ ಕುತಂತ್ರಗಳೇನೆಂದು ನಮಗೆ ಚೆನ್ನಾಗಿ ಗೊತ್ತುಂಟು

18. ಪಿಶಾಚನ ಪಾಶಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?

18 ನಮ್ಮನ್ನು ಬೇಟೆಪ್ರಾಣಿಯಂತೆ ಹಿಡಿಯುವುದೇ ಸೈತಾನನ ಗುರಿ. ಅದಕ್ಕಾಗಿ ಅವನು ಎಂಥ ಪಾಶವನ್ನು ಬೇಕಾದರೂ ಉಪಯೋಗಿಸುತ್ತಾನೆ. ಆದರೂ ಅವನಿಂದ ನಾವು ತಪ್ಪಿಸಿಕೊಳ್ಳಸಾಧ್ಯ. ಏಕೆಂದರೆ ಸೈತಾನನ ಕುತಂತ್ರಗಳೇನೆಂದು ನಮಗೆ ಚೆನ್ನಾಗಿ ತಿಳಿದಿದೆ. (2 ಕೊರಿಂ. 2:​10, 11) ಸಮಸ್ಯೆಗಳು, ಪರೀಕ್ಷೆಗಳು ಬಂದಾಗ ನಿಭಾಯಿಸಲು ವಿವೇಕಕ್ಕಾಗಿ ದೇವರಿಗೆ ಮೊರೆಯಿಡುವುದಾದರೆ ನಾವು ಪಾಶಗಳಿಗೆ ಸಿಕ್ಕಿಬೀಳಲ್ಲ. ಯಾಕೋಬ ಹೇಳಿದಂತೆ, “ನಿಮ್ಮಲ್ಲಿ ಯಾವನಿಗಾದರೂ ವಿವೇಕದ ಕೊರತೆಯಿರುವಲ್ಲಿ ಅವನು ದೇವರನ್ನು ಕೇಳಿಕೊಳ್ಳುತ್ತಾ ಇರಲಿ, ಆಗ ಅದು ಅವನಿಗೆ ಕೊಡಲ್ಪಡುವುದು; ಏಕೆಂದರೆ ದೇವರು ಎಲ್ಲರಿಗೆ ಉದಾರವಾಗಿಯೂ ಹಂಗಿಸದೆಯೂ ಕೊಡುವವನಾಗಿದ್ದಾನೆ.” (ಯಾಕೋ. 1:⁠5) ವಿವೇಕ ಕೊಡೆಂದು ಕೇಳಿಕೊಳ್ಳುವುದು ಮಾತ್ರವಲ್ಲ ಅದಕ್ಕೆ ತಕ್ಕಂತೆ ನಿಯತವಾಗಿ ವೈಯಕ್ತಿಕ ಅಧ್ಯಯನ ಮಾಡಿ ಬೈಬಲಿನಿಂದ ಸಿಗುವ ಸಲಹೆಯನ್ನು ಅನ್ವಯಿಸಿಕೊಳ್ಳಬೇಕು. ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ವರ್ಗವು ಪ್ರಕಾಶನಗಳ ಮೂಲಕವೂ ಪಿಶಾಚನ ಪಾಶಗಳನ್ನು ತೋರಿಸಿಕೊಟ್ಟು ಅದರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ.

19, 20. ನಾವು ಕೆಟ್ಟದ್ದನ್ನು ಏಕೆ ದ್ವೇಷಿಸಬೇಕು?

19 ಪ್ರಾರ್ಥನೆ, ಬೈಬಲ್‌ ಅಧ್ಯಯನ ಮಾಡುವುದರಿಂದ ನಾವು ಒಳ್ಳೇದನ್ನು ಪ್ರೀತಿಸಲು ಕಲಿಯುತ್ತೇವೆ. ಅದರೊಂದಿಗೆ ಕೆಟ್ಟದ್ದನ್ನು ದ್ವೇಷಿಸಲೂ ಕಲಿಯಬೇಕು. (ಕೀರ್ತ. 97:10) ಸ್ವಾರ್ಥ ಬಯಕೆಗಳನ್ನು ಈಡೇರಿಸಲು ಹೋದಾಗ ಯಾವೆಲ್ಲ ದುಷ್ಪರಿಣಾಮ ಆಗುತ್ತದೆ ಎಂದು ಮುಂಚೆಯೇ ಯೋಚಿಸಿದರೆ ನಾವಂಥ ಬಯಕೆಗಳನ್ನು ಬಿಟ್ಟುಬಿಡುತ್ತೇವೆ. (ಯಾಕೋ. 1:​14, 15) ಹೀಗೆ ಕೆಟ್ಟದ್ದನ್ನು ದ್ವೇಷಿಸಿ ಒಳ್ಳೇದನ್ನು ಪ್ರೀತಿಸತೊಡಗಿದಾಗ ಸೈತಾನನು ಒಡ್ಡುವ ಆಮಿಷಗಳು ಆಕರ್ಷಕವಾಗಿ ಕಾಣುವುದಿಲ್ಲ, ಅವನ್ನು ನೋಡಿದಾಕ್ಷಣ ಹೇವರಿಕೆ ಹುಟ್ಟುತ್ತದೆ.

20 ಸೈತಾನನ ಪಾಶಕ್ಕೆ ಸಿಕ್ಕಿಬೀಳದಿರಲು ಯೆಹೋವನು ನಮಗೆ ಸಹಾಯ ಮಾಡುತ್ತಾನೆ. ನಾವದಕ್ಕೆ ತುಂಬ ಆಭಾರಿ! ಪವಿತ್ರಾತ್ಮ ಶಕ್ತಿ, ಬೈಬಲ್‌ ಮತ್ತು ಸಂಘಟನೆಯ ಮೂಲಕ ಸಹಾಯ ಕೊಟ್ಟು ‘ಕೆಡುಕನಿಂದ ನಮ್ಮನ್ನು ತಪ್ಪಿಸುತ್ತಾನೆ.’ (ಮತ್ತಾ. 6:13) ಪಿಶಾಚನು ದೇವಸೇವಕರನ್ನು ಜೀವಸಹಿತ ಹಿಡಿಯಲು ಬಳಸುವ ಇನ್ನೆರಡು ಪ್ರಬಲ ಪಾಶಗಳಿಂದ ತಪ್ಪಿಸಿಕೊಳ್ಳುವುದು ಹೇಗೆಂದು ಮುಂದಿನ ಲೇಖನದಲ್ಲಿ ಚರ್ಚಿಸೋಣ.

[ಪಾದಟಿಪ್ಪಣಿ]

^ ಪ್ಯಾರ. 13 ಹೆತ್ತವರು ತಮ್ಮ ಮಕ್ಕಳೊಂದಿಗೆ 2010, ಜನವರಿ 15ರ ಕಾವಲಿನಬುರುಜು ಪುಟ 16-20ರಲ್ಲಿರುವ “ಸವಾಲುಗಳನ್ನು ಎದುರಿಸಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ” ಎಂಬ ಲೇಖನವನ್ನು ಕುಟುಂಬ ಆರಾಧನೆಯಲ್ಲಿ ಚರ್ಚಿಸಬಹುದು.

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರ]

ಲಂಗುಲಗಾಮಿಲ್ಲದ ಮಾತು ಸಭೆಯಲ್ಲಿ ಕಿಚ್ಚನ್ನು ಹೊತ್ತಿಸುತ್ತದೆ

[ಪುಟ 24ರಲ್ಲಿರುವ ಚಿತ್ರ]

ವಿಪರೀತ ದೋಷಿಭಾವನೆಯೆಂಬ ಜಜ್ಜಿಹಾಕುವ ಭಾರವನ್ನು ಕಿತ್ತೆಸೆಯಲು ಸಾಧ್ಯ