ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನ ಹರ್ಷಭರಿತ ಜನರನ್ನು ಒಟ್ಟುಗೂಡಿಸುತ್ತಾನೆ

ಯೆಹೋವನು ತನ್ನ ಹರ್ಷಭರಿತ ಜನರನ್ನು ಒಟ್ಟುಗೂಡಿಸುತ್ತಾನೆ

ಯೆಹೋವನು  ತನ್ನ ಹರ್ಷಭರಿತ ಜನರನ್ನು ಒಟ್ಟುಗೂಡಿಸುತ್ತಾನೆ

“ಸ್ತ್ರೀಪುರುಷರನ್ನೂ ಮಕ್ಕಳನ್ನೂ ನಿಮ್ಮ ಊರುಗಳಲ್ಲಿರುವ ಅನ್ಯರನ್ನೂ ಕೂಡಿಸಬೇಕು.”​—ಧರ್ಮೋ. 31:⁠12.

ಉತ್ತರಿಸುವಿರಾ?

ಯೆಹೋವನ ಜನರ ಇತಿಹಾಸದುದ್ದಕ್ಕೂ ಅಧಿವೇಶನಗಳು ಏಕೆ ಅತಿ ಮಹತ್ವದ್ದಾಗಿವೆ?

ಹಬ್ಬಗಳನ್ನು ಆಚರಿಸಲು ಯೆರೂಸಲೇಮಿಗೆ ಹೋಗಲಿಕ್ಕಾಗಿ ಪ್ರಾಚೀನ ಇಸ್ರಾಯೇಲ್ಯರು ಎಷ್ಟು ಶ್ರಮಪಡಬೇಕಿತ್ತು?

ಒಂದೂ ಅಧಿವೇಶನವನ್ನು ತಪ್ಪಿಸಿಕೊಳ್ಳಬಾರದು ಏಕೆ?

1, 2. ಅಧಿವೇಶನಗಳ ಕುರಿತು ಈ ಲೇಖನದಲ್ಲಿ ನಾವೇನು ಕಲಿಯಲಿದ್ದೇವೆ?

ಅಂತಾರಾಷ್ಟ್ರೀಯ ಮತ್ತು ಜಿಲ್ಲಾ ಅಧಿವೇಶನಗಳು ಯೆಹೋವನ ಸಾಕ್ಷಿಗಳ ಆಧುನಿಕ ಇತಿಹಾಸದ ಕಣ್ಸೆಳೆಯುವ ವೈಶಿಷ್ಟ್ಯ. ನಮ್ಮಲ್ಲಿ ಬಹು ಮಂದಿ ಅನೇಕ ಬಾರಿ ಅಂಥ ಹರ್ಷಭರಿತ ಅಧಿವೇಶನಗಳಿಗೆ ಹಾಜರಾಗಿದ್ದೇವೆ. ಪ್ರಾಯಶಃ ದಶಕಗಳಿಂದ ಲೆಕ್ಕವಿಲ್ಲದಷ್ಟು ಅಧಿವೇಶನಗಳನ್ನು ಆನಂದಿಸಿದ್ದೇವೆ.

2 ಸಾವಿರಾರು ವರ್ಷಗಳ ಹಿಂದೆ ಕೂಡ ದೇವಜನರು ಅಧಿವೇಶನಗಳಿಗೆ ಸೇರಿಬರುತ್ತಿದ್ದರು. ನಾವೀಗ ಬೈಬಲಿನಲ್ಲಿ ತಿಳಿಸಲಾಗಿರುವ ಆ ಅಧಿವೇಶನಗಳ ನಸುನೋಟ ಪಡೆಯೋಣ. ಅವು ನಮ್ಮೀ ದಿನಗಳ ಅಧಿವೇಶನಗಳನ್ನು ಹೇಗೆ ಹೋಲುತ್ತವೆಂದು ಗಮನಿಸೋಣ. ಈಗಿನ ಅಧಿವೇಶನಗಳಿಗೆ ಹಾಜರಾಗುವುದರಿಂದ ನಮಗೇನು ಪ್ರಯೋಜನ ಎನ್ನುವುದನ್ನು ಸಹ ಕಲಿಯೋಣ.​—⁠ಕೀರ್ತ. 44:1; ರೋಮ. 15:⁠4.

ಮಹತ್ವಪೂರ್ಣ ಅಧಿವೇಶನಗಳು ಅಂದು-ಇಂದು

3. (1) ಯೆಹೋವನ ಜನರ ಮೊತ್ತಮೊದಲ ಅಧಿವೇಶನದಲ್ಲಿ ಏನು ನಡೆಯಿತು? (2) ಯಾವಾಗ ಒಟ್ಟುಗೂಡಬೇಕೆಂದು ಇಸ್ರಾಯೇಲ್ಯರಿಗೆ ಹೇಗೆ ಗೊತ್ತಾಗುತ್ತಿತ್ತು?

3 ಬೈಬಲಿನಲ್ಲಿ ತಿಳಿಸಲಾಗಿರುವ ಮೊತ್ತಮೊದಲ ಅತಿ ದೊಡ್ಡ ಅಧಿವೇಶನವೆಂದರೆ ದೇವಜನರು ಸೀನಾಯಿಬೆಟ್ಟದ ಬುಡದಲ್ಲಿ ಯೆಹೋವನ ಮಾರ್ಗದರ್ಶನ ಪಡೆಯಲು ಸೇರಿಬಂದದ್ದು. ಸತ್ಯಾರಾಧನೆಯ ಇತಿಹಾಸದಲ್ಲಿ ಅದು ನಿಜಕ್ಕೂ ಒಂದು ಮೈಲಿಗಲ್ಲಾಗಿತ್ತು. ಅದೊಂದು ರೋಮಾಂಚಕ ದಿನ. ನೆರೆದು ಬಂದಿದ್ದವರ ಮನದಲ್ಲಿ ಎಂದಿಗೂ ಮಾಸದೆ ಉಳಿದ ದಿನ. ಏಕೆಂದರೆ ಅಂದು ಯೆಹೋವನು ಇಸ್ರಾಯೇಲ್ಯರಿಗೆ ತನ್ನ ಮಹಾ ಶಕ್ತಿಯನ್ನು ತೋರ್ಪಡಿಸಿದನು ಮತ್ತು ಧರ್ಮಶಾಸ್ತ್ರವನ್ನು ಕೊಟ್ಟನು. (ವಿಮೋ. 19:​2-9, 16-19; ವಿಮೋಚನಕಾಂಡ 20:18; ಧರ್ಮೋಪದೇಶಕಾಂಡ 4:​9, 10 ಓದಿ.) ಆ ದಿನದಿಂದ ಇಸ್ರಾಯೇಲ್ಯರೊಂದಿಗೆ ದೇವರು ವ್ಯವಹರಿಸಿದ ರೀತಿಯಲ್ಲಿ ಬದಲಾವಣೆಯಾಯಿತು. ಸ್ವಲ್ಪವೇ ಸಮಯದ ಬಳಿಕ ಯೆಹೋವನು ಮೋಶೆಗೆ ಜನರನ್ನು ಹೇಗೆ ಒಟ್ಟುಗೂಡಿಸಬೇಕೆಂದು ತಿಳಿಸಿದನು. ಎರಡು ಬೆಳ್ಳಿ ತುತೂರಿಗಳನ್ನು ಮಾಡುವಂತೆ ಆಜ್ಞಾಪಿಸಿದನು. ಈ ತುತೂರಿಗಳನ್ನು ಊದಿದಾಗ “ಜನಸಮೂಹದವರೆಲ್ಲರೂ . . . ದೇವದರ್ಶನದ ಗುಡಾರದ ಬಾಗಲಿಗೆ ಕೂಡಿಬರ”ಬೇಕಿತ್ತು. (ಅರ. 10:​1-4) ಎಂಥ ಸಂತೋಷ ಸಂಭ್ರಮದ ಸಮಯ ಅದಾಗಿತ್ತೆಂದು ಚಿತ್ರಿಸಿಕೊಳ್ಳಿ!

4, 5. ಮೋಶೆ ಮತ್ತು ಯೆಹೋಶುವ ಏರ್ಪಡಿಸಿದ ಅಧಿವೇಶನಗಳು ಏಕೆ ಗಮನಾರ್ಹವಾಗಿದ್ದವು?

4 ಇಸ್ರಾಯೇಲ್ಯರ 40 ವರ್ಷಗಳ ಅರಣ್ಯ ಪ್ರಯಾಣದ ಕೊನೆಯಲ್ಲಿ ಮೋಶೆ ಇಡೀ ಜನಾಂಗಕ್ಕಾಗಿ ಒಂದು ಅಧಿವೇಶನ ಏರ್ಪಡಿಸಿದನು. ಆ ಜನಾಂಗದ ಇತಿಹಾಸದಲ್ಲಿ ಅದು ಮಹತ್ವಪೂರ್ಣ ಸಮಯವಾಗಿತ್ತು. ಇನ್ನೇನು ಅವರು ವಾಗ್ದತ್ತ ದೇಶದೊಳಗೆ ಕಾಲಿಡಲಿದ್ದರು. ಆದ್ದರಿಂದ ಯೆಹೋವನು ಹಿಂದೆ ಅವರಿಗಾಗಿ ಮಾಡಿದ್ದ ವಿಷಯಗಳನ್ನು ನೆನಪಿಸಲು ಮತ್ತು ಮುಂದೆ ಮಾಡಲಿರುವುದನ್ನು ತಿಳಿಸಲು ಮೋಶೆಗೆ ಇದು ಸರಿಯಾದ ಸಮಯವಾಗಿತ್ತು.​—⁠ಧರ್ಮೋ. 29:​1-15; 30:​15-20; 31:⁠30.

5 ಬಹುಶಃ ಆ ಸಂದರ್ಭದಲ್ಲೇ ದೇವಜನರೆಲ್ಲರೂ ಇನ್ನು ಮುಂದೆ ನಿಯತವಾಗಿ ಒಂದೆಡೆ ಕೂಡಿ ಉಪದೇಶ ಪಡೆಯುವರು ಎಂದು ಮೋಶೆ ಹೇಳಿದ್ದಿರಬೇಕು. ಪ್ರತಿ ಸಬ್ಬತ್‌ ವರ್ಷದಲ್ಲಿ ಪರ್ಣಶಾಲೆಗಳ ಜಾತ್ರೆ ಮಾಡುವಾಗ ಯೆಹೋವನು ಆದುಕೊಂಡ ಸ್ಥಳದಲ್ಲಿ ಸ್ತ್ರೀಪುರುಷರು, ಮಕ್ಕಳು, ಇಸ್ರಾಯೇಲ್‌ನಲ್ಲಿ ವಾಸಿಸುತ್ತಿದ್ದ ಅನ್ಯಜನರು ಕೂಡಿಬರಬೇಕೆಂದು ಮೋಶೆ ಹೇಳಿದನು. ಏಕೆ? ಅವರೆಲ್ಲರೂ ಧರ್ಮಶಾಸ್ತ್ರದ ನಿಯಮಗಳನ್ನು “ಕೇಳಿ” ‘ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಆ ನಿಯಮಗಳನ್ನು ಅನುಸರಿಸಿ ನಡೆಯಲಿಕ್ಕಾಗಿಯೇ.’ (ಧರ್ಮೋಪದೇಶಕಾಂಡ 31:​1, 10-12 ಓದಿ.) ಹೀಗೆ ಯೆಹೋವನು ತನ್ನ ಜನರೆಲ್ಲರೂ ಆಗಾಗ್ಗೆ ಒಟ್ಟುಸೇರಿ ಬರಬೇಕೆಂಬ ತನ್ನ ಇಚ್ಛೆಯನ್ನು ಆರಂಭದಲ್ಲೇ ಸ್ಪಷ್ಟಪಡಿಸಿದನು. ಮುಂದೆ ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ವಶಪಡಿಸಿಕೊಂಡ ಬಳಿಕ ಯೆಹೋಶುವನು ಅವರನ್ನು ಒಟ್ಟಿಗೆ ಕೂಡಿಬರುವಂತೆ ಹೇಳಿದನು. ಉದ್ದೇಶ? ಇಸ್ರಾಯೇಲ್ಯರು ವಿಧರ್ಮಿ ಜನರ ಮಧ್ಯೆ ವಾಸಿಸುತ್ತಿದ್ದ ಕಾರಣ ಯೆಹೋವನಿಗೆ ನಿಷ್ಠರಾಗಿ ಉಳಿಯುವ ಇಚ್ಛೆಯನ್ನು ಇನ್ನಷ್ಟೂ ಬಲಗೊಳಿಸಲಿಕ್ಕಾಗಿಯೇ. ಅಂದು ಜನರು ಯೆಹೋಶುವನ ಮಾತುಗಳಿಗೆ ಒಳ್ಳೇ ಪ್ರತಿಕ್ರಿಯೆ ತೋರಿಸಿ ಯೆಹೋವನನ್ನೇ ಆರಾಧಿಸುವೆವು ಎಂದು ಪ್ರತಿಜ್ಞೆ ಮಾಡಿದರು.​—⁠ಯೆಹೋ. 23:​1, 2; 24:​1, 15, 21-24.

6, 7. ಯೆಹೋವನ ಜನರ ಆಧುನಿಕ ದಿನದ ಅಧಿವೇಶನಗಳು ಹೇಗೆ ಪ್ರಮುಖ ಮೈಲಿಗಲ್ಲುಗಳಾಗಿವೆ?

6 ಯೆಹೋವನ ಜನರ ಆಧುನಿಕ ಇತಿಹಾಸದಲ್ಲೂ ಇಂಥ ಮಹತ್ವಪೂರ್ಣ ಅಧಿವೇಶನಗಳು ನಡೆದಿವೆ. ಸಂಘಟನೆಯಲ್ಲಾದ ಪ್ರಮುಖ ಬೆಳವಣಿಗೆ ಅಥವಾ ಬೈಬಲ್‌ ವಚನಗಳ ತಿಳಿವಳಿಕೆಯಲ್ಲಾದ ಪ್ರಗತಿಯ ಕುರಿತು ಅವುಗಳಲ್ಲಿ ಪ್ರಕಟಿಸಲಾಯಿತು. (ಜ್ಞಾನೋ. 4:18) ಒಂದನೇ ಮಹಾಯುದ್ಧದ ನಂತರ 1919ರಲ್ಲಿ ಬೈಬಲ್‌ ವಿದ್ಯಾರ್ಥಿಗಳ ಮೊದಲ ಅತಿ ದೊಡ್ಡ ಅಧಿವೇಶನ ಜರುಗಿತು. ಅಮೆರಿಕಾದ ಓಹಾಯೋವಿನ ಸೀಡರ್‌ ಪಾಯಿಂಟ್‌ನಲ್ಲಿ ನಡೆದ ಆ ಅಧಿವೇಶನದಲ್ಲಿ ಹೆಚ್ಚುಕಡಿಮೆ 7,000 ಮಂದಿ ಹಾಜರಿದ್ದರು. ಅದೊಂದು ವಿಶೇಷ ಅಧಿವೇಶನ ಎಂದೇ ಹೇಳಬಹುದು. ಏಕೆಂದರೆ ಲೋಕವ್ಯಾಪಕ ಸಾರುವ ಕೆಲಸ ಆರಂಭಿಸುವಂತೆ ಉತ್ತೇಜನ ನೀಡಲಾದದ್ದು ಅಲ್ಲೇ. 1922ರಲ್ಲಿ ಅದೇ ಸ್ಥಳದಲ್ಲಿ ಒಂಬತ್ತು ದಿನಗಳ ಅಧಿವೇಶನ ನಡೆಯಿತು. ಜೋಸೆಫ್‌ ಎಫ್‌. ರದರ್‌ಫರ್ಡ್‌ ಸಾರುವ ಕೆಲಸಕ್ಕೆ ಅತ್ಯಧಿಕ ಒತ್ತು ಕೊಟ್ಟು ಹೀಗಂದರು: “ಕರ್ತನಿಗೆ ನಂಬಿಗಸ್ತರಾಗಿರ್ರಿ ಮತ್ತು ನಿಜ ಸಾಕ್ಷಿಗಳಾಗಿರ್ರಿ. ಬಾಬೆಲ್‌ ಸಂಪೂರ್ಣವಾಗಿ ನಾಶಗೊಳ್ಳುವ ತನಕ ಹೋರಾಟದಲ್ಲಿ ಮುಂದುವರಿಯಿರಿ. ಭೂಮಿಯ ಉದ್ದಗಲಕ್ಕೂ ಸಂದೇಶವನ್ನು ಸಾರಿರಿ. ಯೆಹೋವನು ದೇವರೆಂದೂ ಯೇಸು ಕ್ರಿಸ್ತನು ರಾಜಾಧಿರಾಜನೂ ಕರ್ತರ ಕರ್ತನೂ ಆಗಿದ್ದಾನೆಂದು ಲೋಕವು ತಿಳಿಯಬೇಕು. ಇದು ಅತ್ಯದ್ಭುತವಾದ ದಿನ. ನೋಡಿ, ರಾಜನು ಆಳುತ್ತಾನೆ! ಅವನ ಬಗ್ಗೆ ಪ್ರಚುರಪಡಿಸುವ ಪ್ರತಿನಿಧಿಗಳು ನೀವು. ಆದಕಾರಣ ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ.” ಈ ಉತ್ತೇಜನಕ್ಕೆ ಅಲ್ಲಿ ನೆರೆದು ಬಂದಿದ್ದವರು ಮಾತ್ರವಲ್ಲ ಲೋಕವ್ಯಾಪಕವಾಗಿದ್ದ ಎಲ್ಲ ದೇವಜನರು ಹರ್ಷದಿಂದ ಸ್ಪಂದಿಸಿದರು.

7 ಇಸವಿ 1931ರಲ್ಲಿ ಒಹಾಯೋದ ಕೊಲಂಬಸ್‌ನಲ್ಲಿ ನಡೆದ ಅಧಿವೇಶನದಲ್ಲಿ ಬೈಬಲ್‌ ವಿದ್ಯಾರ್ಥಿಗಳು ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಪಡೆದಾಗ ಅವರಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. 1935ರಲ್ಲಿ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ನಡೆದ ಅಧಿವೇಶನವೂ ಅವಿಸ್ಮರಣೀಯ. ಪ್ರಕಟನೆ ಪುಸ್ತಕದಲ್ಲಿ ತಿಳಿಸಲಾಗಿರುವಂಥ “ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವ” “ಮಹಾ ಸಮೂಹವು” ಯಾರೆಂದು ಸಹೋದರ ರದರ್‌ಫರ್ಡ್‌ ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ವಿವರಿಸಿದರು. (ಪ್ರಕ. 7:​9-17) ಎರಡನೇ ಮಹಾಯುದ್ಧದ ಸಮಯದ ಮಧ್ಯದಷ್ಟಕ್ಕೆ ಅಂದರೆ 1942ರ ಅಧಿವೇಶನದಲ್ಲಿ ಸಹೋದರ ನೇತನ್‌ ಎಚ್‌. ನಾರ್‌ರವರು “ಶಾಂತಿ​—⁠ಬಾಳುವುದೊ?” ಎಂಬ ಭಾಷಣ ನೀಡಿದರು. ಮೈನವಿರೇಳಿಸಿದ ಆ ಭಾಷಣದಲ್ಲಿ ಪ್ರಕಟನೆ 17ನೇ ಅಧ್ಯಾಯದಲ್ಲಿ ತಿಳಿಸಲಾದ “ಕಡುಗೆಂಪು ಬಣ್ಣದ ಕಾಡುಮೃಗ” ಯಾವುದೆಂದು ವಿವರಿಸಿದರು. ಯುದ್ಧದ ನಂತರ ಸಾರುವ ಕೆಲಸವನ್ನು ಭರಪೂರವಾಗಿ ಮಾಡಲಿಕ್ಕಿದೆ ಎಂದೂ ತಿಳಿಸಿದರು.

8, 9. ಕೆಲವು ಅಧಿವೇಶನಗಳು ಮನಸ್ಪರ್ಶಿಸುವಂತಿದ್ದವು ಏಕೆ?

8 ಇಸವಿ 1946. “ಹರ್ಷಭರಿತ ಜನಾಂಗಗಳು” ಎಂಬ ಅಧಿವೇಶನಕ್ಕಾಗಿ ವಿವಿಧ ಕಡೆಗಳಿಂದ ಜನಸಮೂಹ ಒಹಾಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ನೆರೆದುಬಂದಿತ್ತು. ಸಹೋದರ ನಾರ್‌ರವರು ಕೊಟ್ಟ “ಪುನರ್‌ನಿರ್ಮಾಣ ಮತ್ತು ವಿಸ್ತರಣಾ ಕಾರ್ಯದ ಸವಾಲುಗಳು” ಎಂಬ ಭಾಷಣ ಹಾಜರಿದ್ದವರೆಲ್ಲರ ಗಮನವನ್ನು ಸೆರೆಹಿಡಿಯಿತು. ಭಾಷಣದ ಸಮಯದಲ್ಲಿ ಸಭಿಕರು ತೋರಿಸಿದ ಪ್ರತಿಕ್ರಿಯೆಯ ಕುರಿತು ಸಹೋದರರೊಬ್ಬರು ಹೀಗೆ ಬರೆದರು: “ಆ ಸಂಜೆ ವೇದಿಕೆಯ ಮೇಲೆ ಸಹೋದರ ನಾರ್‌ರವರ ಹಿಂದೆ ನಿಲ್ಲುವ ಭಾಗ್ಯ ನನಗಿತ್ತು. ಇನ್ನೂ ಮಾಡಬೇಕಾಗಿದ್ದ ಸಾರುವ ಕಾರ್ಯದ ಬಗ್ಗೆ, ಬ್ರೂಕ್ಲಿನ್‌ ಬೆತೆಲ್‌ ಗೃಹ ಮತ್ತು ಮುದ್ರಣಾಲಯದ ವಿಸ್ತರಣಾ ಕಾರ್ಯದ ಬಗ್ಗೆ ವಿವರಿಸಿದಾಗ ನೆರೆದು ಬಂದಿದ್ದ ಜನಸ್ತೋಮದ ಕರತಾಡನ ಮುಗಿಲುಮುಟ್ಟುವಂತಿತ್ತು. ಅವರಿಗಾದ ಸಂತೋಷ ಮತ್ತೆ ಮತ್ತೆ ಚಪ್ಪಾಳೆಯ ಮೂಲಕ ಹೊರಹೊಮ್ಮುತ್ತಿತ್ತು. ವೇದಿಕೆಯಿಂದ ಎಲ್ಲರ ಮುಖಗಳು ಸ್ಪಷ್ಟವಾಗಿ ಕಾಣದಿದ್ದರೂ ಅವರಿಗಾದ ಸಂತೋಷ ಸುವ್ಯಕ್ತವಾಗಿತ್ತು.” ಅಧಿವೇಶನದ ಹಾದಿಯಲ್ಲಿ ಇನ್ನೊಂದು ಮೈಲಿಗಲ್ಲು 1950ರಲ್ಲಿ ನ್ಯೂ ಯಾರ್ಕ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನ. ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಕ್ರಿಶ್ಚಿಯನ್‌ ಗ್ರೀಕ್‌ ಸ್ಕ್ರಿಪ್ಚರ್ಸ್‌ ಕೈಗೆ ಸಿಕ್ಕಾಗ ಸಭಿಕರು ಆನಂದದಿಂದ ಪುಳಕಿತರಾದರು. ಸರಳ ಇಂಗ್ಲಿಷ್‌ ಭಾಷೆಯಲ್ಲಿ ಪ್ರಕಟವಾದ ಆ ಪ್ರಪ್ರಥಮ ಬೈಬಲಿನ ಭಾಗದಲ್ಲಿ ಎಲ್ಲೆಲ್ಲ ದೇವರ ಹೆಸರು ಇರಬೇಕಿತ್ತೋ ಅಲ್ಲೆಲ್ಲ ಆ ಹೆಸರಿತ್ತು.​—⁠ಯೆರೆ. 16:⁠21.

9 ಕೆಲವು ದೇಶಗಳಲ್ಲಿ ಯೆಹೋವನ ಸಾಕ್ಷಿಗಳ ಮೇಲಿದ್ದ ನಿಷೇಧ ಅಥವಾ ಹಿಂಸೆ ಕೊನೆಗೊಂಡ ಬಳಿಕ ಯೆಹೋವನು ತನ್ನ ನಂಬಿಗಸ್ತ ಸಾಕ್ಷಿಗಳನ್ನು ಅಧಿವೇಶನಗಳಲ್ಲಿ ಒಟ್ಟುಸೇರಿಸಿದ್ದು ಮನಸ್ಪರ್ಶಿಸುವಂಥದ್ದು. ಜರ್ಮನಿಯಿಂದ ಯೆಹೋವನ ಸಾಕ್ಷಿಗಳನ್ನು ಹೇಳಹೆಸರಿಲ್ಲದಂತೆ ನಿರ್ನಾಮ ಮಾಡುತ್ತೇನೆಂದು ಅಡಾಲ್ಫ್‌ ಹಿಟ್ಲರ್‌ ಶಪಥ ಮಾಡಿದ್ದ. ಆದರೆ ಅವನು ಮತ್ತು ಅವನ ಸೈನಿಕರು ಕೂಡಿಬರುತ್ತಿದ್ದ ಅದೇ ನ್ಯೂರೆಂಬರ್ಗ್‌ನಲ್ಲಿ 1955ರಲ್ಲಿ 1,07,000 ಯೆಹೋವನ ಸಾಕ್ಷಿಗಳು ಅಧಿವೇಶನಕ್ಕಾಗಿ ಕೂಡಿಬಂದರು! ಅನೇಕರಿಗೆ ಎಷ್ಟು ಸಂತೋಷವಾಯಿತೆಂದರೆ ಅವರ ಕಣ್ಣಾಲಿಗಳು ತುಂಬಿ ಬಂದವು. 1989ರಲ್ಲಿ ಪೋಲೆಂಡ್‌ನಲ್ಲಿ ನಡೆದ “ದೈವಭಕ್ತಿ” ಎಂಬ ಶೀರ್ಷಿಕೆಯ ಮೂರು ಅಧಿವೇಶನಗಳಲ್ಲಿ 1,66,518 ಮಂದಿ ಹಾಜರಿದ್ದರು. ಸೋವಿಯಟ್‌ ಯೂನಿಯನ್‌ ಮತ್ತು ಜೆಕೊಸ್ಲೊವಾಕಿಯ ಎಂದು ಆಗ ಕರೆಯಲಾಗುತ್ತಿದ್ದ ಸ್ಥಳದಿಂದ ಮಾತ್ರವಲ್ಲ ಪೂರ್ವ ಯೂರೋಪ್‌ನ ಇತರ ಸ್ಥಳಗಳಿಂದ ಜನಪ್ರವಾಹವೇ ಪೋಲೆಂಡ್‌ಗೆ ಹರಿದುಬಂತು. ಕೆಲವರು ಅಂಥ ದೊಡ್ಡ ಅಧಿವೇಶನಕ್ಕೆ ಹಾಜರಾದದ್ದು ಅದೇ ಪ್ರಥಮ ಬಾರಿ. ಅದು ವರೆಗೆ 15 ಅಥವಾ 20 ಮಂದಿ ಕೂಡಿಬರುತ್ತಿದ್ದ ಕೂಟಗಳನ್ನಷ್ಟೇ ಅವರು ನೋಡಿದ್ದರು. 1993ರಲ್ಲಿ “ದೈವಿಕ ಬೋಧನೆ” ಎಂಬ ಅಂತಾರಾಷ್ಟ್ರೀಯ ಅಧಿವೇಶನ ಯುಕ್ರೇನ್‌ನ ಕೀಯೇವ್‌ನಲ್ಲಿ ಜರುಗಿದಾಗ ದೀಕ್ಷಾಸ್ನಾನ ಪಡೆದವರ ಸಂಖ್ಯೆ 7,402! ಇದರಿಂದ ಸಭಿಕರಲ್ಲಿ ಸಂತೋಷದ ಕಾರಂಜಿ ಚಿಮ್ಮುತ್ತಿತ್ತು. ಒಂದೇ ದಿನದಲ್ಲಿ ದೀಕ್ಷಾಸ್ನಾನ ಪಡೆದ ದಾಖಲೆ ಸಂಖ್ಯೆ ಇದಾಗಿದೆ.​—⁠ಯೆಶಾ. 60:22; ಹಗ್ಗಾ. 2:⁠7.

10. (1) ನಿಮ್ಮಿಂದ ಎಂದೂ ಮರೆಯಲಾಗದ ಅಧಿವೇಶನಗಳು ಯಾವುವು? (2) ಏಕೆ?

10 ಕೆಲವು ಜಿಲ್ಲಾ ಅಥವಾ ಅಂತಾರಾಷ್ಟ್ರೀಯ ಅಧಿವೇಶನಗಳು ನಿಮ್ಮ ಮನಸ್ಸಿನಲ್ಲೂ ಅಚ್ಚಳಿಯದೆ ಉಳಿದಿರಬಹುದು. ನೀವು ಹಾಜರಾದ ಮೊತ್ತಮೊದಲ ಅಧಿವೇಶನ ನೆನಪಿದೆಯೇ? ನೀವು ದೀಕ್ಷಾಸ್ನಾನ ಪಡೆದ ಅಧಿವೇಶನ ಯಾವುದೆಂದು ನೆನಪಿದೆಯೇ? ಎಂದೂ ಮರೆಯಬಾರದಾದ ಪ್ರಮುಖ ಸಂದರ್ಭಗಳವು. ಆ ಸವಿ ನೆನಪುಗಳನ್ನು ಅಮೂಲ್ಯವೆಂದೆಣಿಸಿ.​—⁠ಕೀರ್ತ. 42:⁠4.

ಹರ್ಷಕ್ಕಾಗಿ ವಿಶೇಷ ಸಂದರ್ಭಗಳು

11. ಪ್ರಾಚೀನ ಇಸ್ರಾಯೇಲ್ಯರು ಯಾವ ಮೂರು ಹಬ್ಬಗಳಿಗೆ ಹಾಜರಾಗಬೇಕೆಂದು ದೇವರು ಆಜ್ಞಾಪಿಸಿದ್ದನು?

11 ಇಸ್ರಾಯೇಲ್ಯರೆಲ್ಲರೂ ಪ್ರತಿ ವರ್ಷ ಮೂರು ಹಬ್ಬಗಳನ್ನು ಆಚರಿಸಲು ಯೆರೂಸಲೇಮಿಗೆ ಕೂಡಿಬರಬೇಕೆಂದು ಯೆಹೋವನು ಆಜ್ಞಾಪಿಸಿದ್ದನು. ಆ ಹಬ್ಬಗಳು ಯಾವುದೆಂದರೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಜಾತ್ರೆ, ವಾರಗಳ ಹಬ್ಬ (ನಂತರ ಪಂಚಾಶತ್ತಮ ಹಬ್ಬ ಎಂದು ಕರೆಯಲಾಯಿತು), ಪರ್ಣಶಾಲೆಗಳ ಹಬ್ಬ. ಈ ಸಂದರ್ಭಗಳ ಕುರಿತು ದೇವರು ಹೀಗೆ ಆಜ್ಞಾಪಿಸಿದ್ದನು: “ವರುಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರು ಕರ್ತನಾದ ಯೆಹೋವನ ಸನ್ನಿಧಿಗೆ ಬರಬೇಕು.” (ವಿಮೋ. 23:​14-17) ದೇವಾರಾಧನೆಯಲ್ಲಿ ಆ ಹಬ್ಬಗಳ ಪ್ರಮುಖತೆಯನ್ನು ಮನಗಂಡ ಅನೇಕ ಕುಟುಂಬಗಳ ಶಿರಸ್ಸುಗಳು ಮನೆಮಂದಿಯೆಲ್ಲರನ್ನೂ ಯೆರೂಸಲೇಮಿಗೆ ಕರೆತರುತ್ತಿದ್ದರು.​—⁠1 ಸಮು. 1:​1-7; ಲೂಕ 2:​41, 42.

12, 13. ಇಸ್ರಾಯೇಲ್ಯರು ಪ್ರತಿ ವರ್ಷ ಹಬ್ಬಗಳನ್ನು ಆಚರಿಸಲಿಕ್ಕಾಗಿ ಏನೆಲ್ಲಾ ಮಾಡಬೇಕಿತ್ತು?

12 ಇಸ್ರಾಯೇಲ್ಯ ಕುಟುಂಬವೊಂದು ಯೆರೂಸಲೇಮಿಗೆ ಪ್ರಯಾಣಿಸಲು ಏನೆಲ್ಲಾ ಮಾಡಬೇಕಿತ್ತೆಂದು ಯೋಚಿಸಿ ನೋಡಿ. ಉದಾಹರಣೆಗೆ, ಯೋಸೇಫ ಮತ್ತು ಮರಿಯ ನಜರೇತಿನಿಂದ ಯೆರೂಸಲೇಮಿಗೆ ಹೋಗಲು ಸುಮಾರು 100ಕಿ.ಮೀ. ಪ್ರಯಾಣಿಸಬೇಕಿತ್ತು. ಚಿಕ್ಕ ಮಕ್ಕಳನ್ನು ಕರಕೊಂಡು ಅಷ್ಟು ದೂರ ನಡೆದು ಹೋಗಲು ಎಷ್ಟು ಸಮಯ ಹಿಡಿಯಬಹುದೆಂದು ಯೋಚಿಸಿ. ಯೇಸು ಚಿಕ್ಕ ಹುಡುಗನಾಗಿದ್ದಾಗ ಯೆರೂಸಲೇಮಿಗೆ ಹೋದ ಬಗ್ಗೆ ತಿಳಿಸುವ ವೃತ್ತಾಂತ ನಿಮಗೆ ನೆನಪಿರಬಹುದು. ಸಾಮಾನ್ಯವಾಗಿ ಬಂಧುಮಿತ್ರರೆಲ್ಲ ಒಟ್ಟಿಗೆ ಗುಂಪಾಗಿ ಪ್ರಯಾಣಿಸುತ್ತಿದ್ದರೆಂದು ಅದು ತೋರಿಸುತ್ತದೆ. ಅದೊಂದು ವಿಶೇಷ ಅನುಭವ. ಒಟ್ಟಿಗೆ ಪ್ರಯಾಣ ಮಾಡಬೇಕಿತ್ತು, ಎಲ್ಲರು ಸೇರಿ ಅಡಿಗೆ ಮಾಡಬೇಕಿತ್ತು, ಅಪರಿಚಿತ ಸ್ಥಳದಲ್ಲಿ ಮಲಗಲು ಸೂಕ್ತ ವ್ಯವಸ್ಥೆ ಮಾಡಬೇಕಿತ್ತು. ಹಾಗಿದ್ದರೂ ಪ್ರಯಾಣ ಸುರಕ್ಷಿತವಾಗಿತ್ತು. ಏಕೆಂದರೆ ಯೋಸೇಫ ಮತ್ತು ಮರಿಯ ಕೇವಲ 12 ವರ್ಷದ ಬಾಲಕನಾದ ಯೇಸುವಿಗೆ ಆಚೀಚೆ ಓಡಾಡಲು ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯ ಕೊಟ್ಟಿದ್ದರು. ಆ ಹಬ್ಬಗಳು ಅವಿಸ್ಮರಣೀಯವಾಗಿದ್ದವು. ವಿಶೇಷವಾಗಿ ಮಕ್ಕಳಿಗೆ ಮರೆಯಲಾಗದ ಸವಿನೆನಪುಗಳು!​—⁠ಲೂಕ 2:​44-46.

13 ಸಮಯಾನಂತರ ಇಸ್ರಾಯೇಲ್ಯರು ವಿವಿಧ ದೇಶಗಳಿಗೆ ಚೆದರಿ ಹೋದರು. ಆದರೂ ಹಬ್ಬಗಳಿಗೆಂದು ಅವರು ಯೆರೂಸಲೇಮಿಗೆ ಬರುತ್ತಿದ್ದರು. ಉದಾಹರಣೆಗೆ, ಕ್ರಿ.ಶ. 33ರ ಪಂಚಾಶತ್ತಮದಲ್ಲಿ ಇಟಲಿ, ಲಿಬ್ಯ, ಕ್ರೇತ, ಏಷ್ಯಾ ಮೈನರ್‌, ಮೆಸೊಪೊತಾಮ್ಯ ಹೀಗೆ ಹಲವು ಕಡೆಗಳಿಂದ ಯೆಹೂದ್ಯರೂ ಯೆಹೂದಿ ಮತಾವಲಂಬಿಗಳೂ ಯೆರೂಸಲೇಮಿಗೆ ಬಂದಿದ್ದರು. ಆ ಹಬ್ಬಗಳಿಗಾಗಿ ಗಣ್ಯತೆ ಅವರಿಗಿತ್ತು.​—⁠ಅ. ಕಾ. 2:​5-11; 20:⁠16.

14. ವಾರ್ಷಿಕ ಹಬ್ಬಗಳಿಗೆ ಹಾಜರಾದ ಇಸ್ರಾಯೇಲ್ಯರು ಹೇಗೆ ಪ್ರಯೋಜನ ಪಡೆದರು?

14 ದೇವಭಕ್ತ ಇಸ್ರಾಯೇಲ್ಯರು ಅಷ್ಟು ದೂರ ಪ್ರಯಾಣ ಮಾಡಿದ್ದರ ಮುಖ್ಯ ಉದ್ದೇಶ ಯೆಹೋವನನ್ನು ಪ್ರೀತಿಸುವ ಸಾವಿರಾರು ಜನರೊಂದಿಗೆ ಸೇರಿ ಆತನನ್ನು ಆರಾಧಿಸುವುದೇ. ಹಬ್ಬಗಳು ಹಾಜರಾದವರ ಮೇಲೆ ಯಾವ ಪ್ರಭಾವ ಬೀರಿದವು? ಪರ್ಣಶಾಲೆಗಳ ಹಬ್ಬದ ಕುರಿತು ಯೆಹೋವನು ಹೀಗೆ ಹೇಳಿದಾಗ ಉತ್ತರ ವ್ಯಕ್ತ: “ನೀವೂ ನಿಮ್ಮ ಗಂಡು ಹೆಣ್ಣು ಮಕ್ಕಳೂ ದಾಸದಾಸಿಯರೂ ನಿಮ್ಮ ಊರಲ್ಲಿರುವ ಲೇವಿಯರೂ ಪರದೇಶದವರೂ ತಾಯಿತಂದೆಯಿಲ್ಲದವರೂ ವಿಧವೆಯರೂ ಸಂಭ್ರಮದಿಂದಿರಬೇಕು. ನಿಮ್ಮ ದೇವರಾದ ಯೆಹೋವನು ಆದುಕೊಳ್ಳುವ ಸ್ಥಳದಲ್ಲಿ ನೀವು ಏಳು ದಿನವೂ ಆ ಜಾತ್ರೆಯನ್ನು ಆಚರಿಸಬೇಕು. ನಿಮ್ಮ ವ್ಯವಸಾಯವನ್ನೂ ಬೇರೆ ಎಲ್ಲಾ ಕೆಲಸಗಳನ್ನೂ ಆತನು ಸಫಲವಾಗಿ ಮಾಡಿದ್ದರಿಂದ ನೀವು ಬಹಳ ಆನಂದದಿಂದಿರಬೇಕು.”​—⁠ಧರ್ಮೋ. 16:​14, 15; ಮತ್ತಾಯ 5:3 ಓದಿ.

ಇಂದಿನ ಅಧಿವೇಶನಗಳನ್ನು ಗಣ್ಯಮಾಡಬೇಕು ಏಕೆ?

15, 16. (1) ಅಧಿವೇಶನಗಳನ್ನು ಹಾಜರಾಗಲು ನೀವು ಯಾವ ತ್ಯಾಗಗಳನ್ನು ಮಾಡಬೇಕಾಯಿತು? (2) ನಿಮ್ಮ ಪ್ರಯತ್ನ ಸಾರ್ಥಕವೇಕೆ?

15 ಆ ಪ್ರಾಚೀನ ಹಬ್ಬಗಳು ಇಂದಿನ ದೇವಜನರಿಗೆ ಅತ್ಯುತ್ತಮ ಮಾದರಿಯಾಗಿವೆ. ಅಧಿವೇಶನಗಳ ಸಂಬಂಧದಲ್ಲಿ ಶತಮಾನಗಳಿಂದ ಅನೇಕ ವಿಷಯಗಳು ಬದಲಾಗಿವೆಯಾದರೂ ಕೆಲವು ವಿಷಯಗಳು ಬದಲಾಗಿಲ್ಲ. ಉದಾಹರಣೆಗೆ ಪ್ರಾಚೀನ ಇಸ್ರಾಯೇಲ್ಯರಂತೆ ಅಧಿವೇಶನಗಳನ್ನು ಹಾಜರಾಗಲು ನಾವು ಅನೇಕ ತ್ಯಾಗಗಳನ್ನು ಮಾಡಬೇಕಾಗುತ್ತದೆ. ಆದರೆ ಅವುಗಳಿಂದ ಪಡೆಯುವ ಎಣೆಯಿಲ್ಲದ ಪ್ರಯೋಜನಗಳನ್ನು ನೋಡುವಾಗ ನಮ್ಮ ಶ್ರಮ ಸಾರ್ಥಕ. ಅಧಿವೇಶನಗಳು ಇಂದಿಗೂ ಯೆಹೋವನ ಆರಾಧನೆಯ ಅತಿ ಪ್ರಮುಖ ಭಾಗವಾಗಿವೆ. ಯೆಹೋವನೊಂದಿಗಿನ ಆಪ್ತ ಸಂಬಂಧ ಕಾಪಾಡಿಕೊಳ್ಳಲು ಅತ್ಯಾವಶ್ಯಕವಾದ ಮಾಹಿತಿಯ ಭಂಡಾರವನ್ನು, ತಿಳಿವಳಿಕೆಯನ್ನು ನೀಡುತ್ತವೆ. ಕಲಿತ ವಿಷಯಗಳನ್ನು ಅಳವಡಿಸಿಕೊಂಡು ನಡೆಯಲು ಸ್ಫೂರ್ತಿ ನೀಡುತ್ತವೆ. ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಿರಲು ಎಚ್ಚರಿಕೆ ಕೊಡುತ್ತವೆ. ಚಿಂತೆ-ಕಳವಳದ ಸುಳಿಯಲ್ಲಿ ಸಿಕ್ಕಿಸುವ ವಿಷಯಗಳನ್ನು ದೂರಮಾಡಿ, ಮನಸ್ಸಿಗೆ ಮುದನೀಡುವ ವಿಷಯಗಳನ್ನು ಮಾಡುವಂತೆ ಪ್ರೋತ್ಸಾಹ ನೀಡುತ್ತದೆ.​—⁠ಕೀರ್ತ. 122:​1-4.

16 ಪ್ರತಿ ಅಧಿವೇಶನದಲ್ಲಿ ಹಾಜರಾದವರೆಲ್ಲರ ಸಂತೋಷ ಸಂಭ್ರಮವು ಮರುಕಳಿಸುತ್ತದೆ. 1946ರಲ್ಲಿ ನಡೆದ ದೊಡ್ಡ ಅಧಿವೇಶನದ ಕುರಿತ ವರದಿ ಹೀಗನ್ನುತ್ತದೆ: “ಒಂದೆಡೆ ಸೇರಿರುವ ಸಾವಿರಾರು ಸಾಕ್ಷಿಗಳ ನಗುಮೊಗಗಳನ್ನು ನೋಡುವುದೇ ಒಂದು ರೋಮಾಂಚಕ ದೃಶ್ಯ. ದೊಡ್ಡ ಆರ್ಕೇಸ್ಟ್ರಾದ ಸಂಗೀತದೊಂದಿಗೆ ಸಭಿಕರು ಮಧುರ ರಾಜ್ಯ ಗೀತೆಗಳನ್ನು ಹಾಡುವುದನ್ನು ಕೇಳುವಾಗ ಮೈಮೇಲಿನ ರೋಮಗಳೆಲ್ಲ ನಿಮಿರಿ ನಿಲ್ಲುತ್ತವೆ.” ಆ ವರದಿ ಮುಂದುವರಿಸಿದ್ದು, “ಬಹು ಮಂದಿ ಬೇರೆ ಬೇರೆ ಇಲಾಖೆಗಳಲ್ಲಿ ಸೇವೆಮಾಡಲು ಮುಂದೆಬಂದರು. ಜೊತೆ ಸಾಕ್ಷಿಗಳ ಸೇವೆ ಮಾಡುವ ಮೂಲಕ ಹೆಚ್ಚಿನ ಸಂತೋಷ ಪಡೆದುಕೊಂಡರು.” ಇದೇ ರೀತಿಯ ಸಂತೋಷವನ್ನು ನೀವು ಕೂಡ ಜಿಲ್ಲಾ ಅಧಿವೇಶನ ಅಥವಾ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ಅನುಭವಿಸಿದ್ದೀರಾ?​—⁠ಕೀರ್ತ. 110:3; ಯೆಶಾ. 42:​10-12.

17. ಇತ್ತೀಚಿನ ಸಮಯಗಳಲ್ಲಿ ಅಧಿವೇಶನಗಳನ್ನು ಏರ್ಪಡಿಸುವ ರೀತಿಯಲ್ಲಿ ಯಾವ ಬದಲಾವಣೆಗಳಾಗಿವೆ?

17 ಅಧಿವೇಶನಗಳನ್ನು ವ್ಯವಸ್ಥಾಪಿಸುವ ರೀತಿಯಲ್ಲೂ ಕೆಲವು ಬದಲಾವಣೆಗಳಾಗಿವೆ. ಮೊದಲೆಲ್ಲ ಅಧಿವೇಶನಗಳು ಎಂಟು ದಿನ ನಡೆಯುತ್ತಿದ್ದವು. ಕೆಲವರಿಗೆ ಇಂಥ ಅಧಿವೇಶನಗಳಿಗೆ ಹಾಜರಾದದ್ದು ನೆನಪಿರಬಹುದು. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಸೆಷನ್‌ಗಳಿದ್ದವು. ಅಧಿವೇಶನದ ಕಾರ್ಯಕ್ರಮದಲ್ಲಿ ಯಾವಾಗಲೂ ಕ್ಷೇತ್ರ ಸೇವೆಗೆ ಹೋಗುವ ಏರ್ಪಾಡೂ ಒಳಗೂಡಿತ್ತು. ಕಾರ್ಯಕ್ರಮದ ಕೆಲವು ಭಾಗಗಳು ಬೆಳಿಗ್ಗೆ 9 ಗಂಟೆಯಷ್ಟಕ್ಕೆ ಆರಂಭವಾಗಿ ಕೆಲವೊಮ್ಮೆ ರಾತ್ರಿ 9 ಗಂಟೆಗೆ ಮುಗಿದದ್ದುಂಟು. ಹಾಜರಾದವರಿಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಗಳನ್ನು ತಯಾರಿಸಲು ಸ್ವಯಂಸೇವಕರು ಹಗಲು ರಾತ್ರಿಯೆನ್ನದೆ ಶ್ರಮಪಡುತ್ತಿದ್ದರು. ಆದರೆ ಈಗ ಅಧಿವೇಶನಗಳು ಅಷ್ಟು ದೀರ್ಘವಾಗಿಲ್ಲ. ಮಾತ್ರವಲ್ಲ ಹಾಜರಾಗುವವರು ತಾವೇ ಊಟ ತರುವುದರಿಂದ ಆಧ್ಯಾತ್ಮಿಕವಾಗಿ ಉಣಿಸುವ ಕಾರ್ಯಕ್ರಮಕ್ಕೆ ಹೆಚ್ಚು ಗಮನಕೊಡಲು ಸಾಧ್ಯವಾಗಿದೆ.

18, 19. (1) ಅಧಿವೇಶನದಲ್ಲಿ ಯಾವ ಅಂಶವನ್ನು ನೀವು ಕುತೂಹಲದಿಂದ ಎದುರುನೋಡುತ್ತೀರಿ? (2) ಏಕೆ?

18 ಅಧಿವೇಶನ ಕಾರ್ಯಕ್ರಮದಲ್ಲಿ ಸದಾ ಕುತೂಹಲದಿಂದ ಎದುರುನೋಡುವ ವಿಷಯಗಳಿರುತ್ತವೆ. ಇವು ಅನೇಕಾನೇಕ ವರ್ಷಗಳಿಂದ ಅಧಿವೇಶನಗಳ ವೈಶಿಷ್ಟ್ಯಗಳಾಗಿವೆ. ಉದಾಹರಣೆಗೆ “ತಕ್ಕ ಸಮಯಕ್ಕೆ” ಬೇಕಾದ ಆಧ್ಯಾತ್ಮಿಕ “ಆಹಾರ” ಭಾಷಣಗಳ ರೂಪದಲ್ಲಿ ಮಾತ್ರವಲ್ಲ ಬಿಡುಗಡೆಯಾಗುವ ಹೊಸ ಪ್ರಕಾಶನಗಳ ಮೂಲಕವೂ ಸಿಗುತ್ತದೆ. ಇವು ಬೈಬಲ್‌ ಬೋಧನೆಗಳನ್ನೂ ಪ್ರವಾದನೆಗಳನ್ನೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. (ಮತ್ತಾ. 24:45) ಜನರಿಗೆ ಬೈಬಲ್‌ ಸತ್ಯಗಳನ್ನು ಕಲಿಸಲು ಬಿಡುಗಡೆಯಾದ ಹೆಚ್ಚಿನ ಹೊಸ ಪ್ರಕಾಶನಗಳು ಬಹಳ ಉಪಯುಕ್ತ. ಬೈಬಲ್‌ ಆಧರಿತ ಡ್ರಾಮಗಳು ಹಿರಿಕಿರಿಯರೆಲ್ಲರೂ ತಮ್ಮ ಇರಾದೆಗಳನ್ನು ಪರಿಶೀಲಿಸಿ ಲೋಕದ ಭಕ್ತಿಹೀನ ಯೋಚನಾಧಾಟಿ ಸೋಂಕದಂತೆ ಜಾಗ್ರತೆವಹಿಸಲು ಪ್ರೋತ್ಸಾಹಿಸುತ್ತವೆ. ಮಾತ್ರವಲ್ಲ ದೀಕ್ಷಾಸ್ನಾನದ ಭಾಷಣವು ನಮ್ಮ ಆದ್ಯತೆಗಳನ್ನು ಪರೀಕ್ಷಿಸಲು ಮತ್ತು ಇತರರು ತಾವು ಯೆಹೋವನಿಗೆ ಸಮರ್ಪಿಸಿಕೊಂಡಿದ್ದೇವೆಂದು ಬಹಿರಂಗಪಡಿಸುವುದನ್ನು ನೋಡಿ ಸಂತೋಷಿಸಲು ಅವಕಾಶ ಕೊಡುತ್ತದೆ.

19 ಹೌದು, ದೀರ್ಘ ಸಮಯದಿಂದ ಅಧಿವೇಶನಗಳು ಶುದ್ಧ ಆರಾಧನೆಯ ಭಾಗವಾಗಿವೆ. ಆನಂದದಿಂದ ಇರಲು ಮತ್ತು ಕಷ್ಟಗಳ ಮಧ್ಯೆಯೂ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲು ಸಹಾಯ ಮಾಡುತ್ತವೆ. ದೇವರ ಸೇವೆಯನ್ನು ಹೆಚ್ಚು ಮಾಡಲು ಸ್ಫೂರ್ತಿ ತುಂಬುತ್ತವೆ. ಹೊಸ ಹೊಸ ಮಿತ್ರರನ್ನು ಕಂಡುಕೊಳ್ಳಲು, ಅಂತಾರಾಷ್ಟ್ರೀಯ ಸಹೋದರ ಬಳಗದ ಭಾಗವಾಗಿರುವುದರ ಅರ್ಥವನ್ನು ಮನಗಾಣಲು ಅನುವು ಮಾಡುತ್ತವೆ. ಯೆಹೋವನು ತನ್ನ ಜನರನ್ನು ಆಶೀರ್ವದಿಸುವುದು, ಆರೈಕೆ ಮಾಡುವುದು ಮುಖ್ಯವಾಗಿ ಅಧಿವೇಶನಗಳ ಮೂಲಕವೇ. ಹಾಗಾಗಿ ಪ್ರತಿ ಅಧಿವೇಶನದ ಪ್ರತಿ ಸೆಷನ್‌ಗೆ ಹಾಜರಾಗಲು ಮತ್ತು ಪ್ರಯೋಜನ ಪಡೆಯಲು ನಾವು ಒಬ್ಬೊಬ್ಬರೂ ಸರ್ವ ಪ್ರಯತ್ನ ಮಾಡಬೇಕು.​—⁠ಜ್ಞಾನೋ. 10:⁠22.

[ಅಧ್ಯಯನ ಪ್ರಶ್ನೆಗಳು]

[ಪುಟ 30ರಲ್ಲಿರುವ ಚಿತ್ರ]

1950, ನ್ಯೂಯಾರ್ಕ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನ

[ಪುಟ 32ರಲ್ಲಿರುವ ಚಿತ್ರ]

ಮೊಜಾಂಬಿಕ್‌

[ಪುಟ 32ರಲ್ಲಿರುವ ಚಿತ್ರ]

ದಕ್ಷಿಣ ಕೊರಿಯ