ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ಮತ್ತು ಯೇಸುವಿನಂತೆ ತಾಳ್ಮೆಯಿಂದಿರಿ

ಯೆಹೋವ ಮತ್ತು ಯೇಸುವಿನಂತೆ ತಾಳ್ಮೆಯಿಂದಿರಿ

ಯೆಹೋವ ಮತ್ತು ಯೇಸುವಿನಂತೆ ತಾಳ್ಮೆಯಿಂದಿರಿ

“ನಮ್ಮ ಕರ್ತನ ತಾಳ್ಮೆಯನ್ನು ರಕ್ಷಣೆಯಾಗಿ ಎಣಿಸಿಕೊಳ್ಳಿರಿ.”​—⁠2 ಪೇತ್ರ 3:⁠15.

ಉತ್ತರಿಸುವಿರಾ?

ಯೆಹೋವನು ಹೇಗೆ ತಾಳ್ಮೆ ತೋರಿಸಿದ್ದಾನೆ?

ಯೇಸು ದೀರ್ಘ ಸಮಯ ತಾಳ್ಮೆಯಿಂದ ಕಾಯಬೇಕಿತ್ತು ಏಕೆ?

ಯೆಹೋವನಂತೆ ತಾಳ್ಮೆಯಿಂದ ಇರಲು ನಾವು ಏನು ಮಾಡಬೇಕು?

1. ಕೆಲವು ನಂಬಿಗಸ್ತ ಸೇವಕರು ಏನೆಂದು ಕೇಳುತ್ತಾರೆ?

“ನಾನು ಸಾಯೋದಕ್ಕೆ ಮುಂಚೆ ಅಂತ್ಯ ಬರುತ್ತದಾ?” ಹೀಗೆ ಕೇಳಿದರು ದೀರ್ಘ ಸಮಯದಿಂದ ನಾನಾ ಕಷ್ಟಗಳನ್ನು ತಾಳಿಕೊಂಡ ನಂಬಿಗಸ್ತ ಸಹೋದರಿ. ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡಿರುವವರಲ್ಲಿ ಕೆಲವರು ಸಹ ಅದೇ ರೀತಿ ಕೇಳುತ್ತಾರೆ. ಈಗಿರುವ ಸಮಸ್ಯೆಗಳನ್ನೆಲ್ಲ ದೇವರು ನಿರ್ಮೂಲಮಾಡಿ ಎಲ್ಲವನ್ನು ಹೊಸದು ಮಾಡುವ ದಿನಕ್ಕಾಗಿ ನಾವೆಲ್ಲರೂ ಹಾತೊರೆಯುತ್ತಿದ್ದೇವೆ. (ಪ್ರಕ. 21:⁠5) ಸೈತಾನನ ಲೋಕಕ್ಕೆ ಅಂತ್ಯ ಅತಿ ಸಮೀಪವಿದೆ ಎಂದು ನಂಬಲು ಹೇರಳ ಕಾರಣಗಳಿವೆಯಾದರೂ ಅಲ್ಲಿಯ ವರೆಗೆ ತಾಳ್ಮೆಯಿಂದ ಕಾಯುವುದು ಅಷ್ಟು ಸುಲಭವಲ್ಲ.

2. ತಾಳ್ಮೆಯ ಕುರಿತ ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

2 ಆದರೂ ನಮಗೆ ತಾಳ್ಮೆ ಇರಲೇಬೇಕೆಂದು ಬೈಬಲ್‌ ತೋರಿಸುತ್ತದೆ. ದೇವರು ವಾಗ್ದಾನ ಮಾಡಿರುವ ಎಲ್ಲ ಆಶೀರ್ವಾದಗಳನ್ನು ಪಡೆಯಬೇಕಾದರೆ ಗತಕಾಲದ ದೇವಸೇವಕರಂತೆ ನಮ್ಮಲ್ಲಿ ಬಲವಾದ ನಂಬಿಕೆ ಇರಬೇಕು. ಮಾತ್ರವಲ್ಲ ಆ ವಾಗ್ದಾನ ನೆರವೇರುವ ಸಮಯದ ವರೆಗೆ ತಾಳ್ಮೆಯಿಂದ ಕಾಯಬೇಕು. (ಇಬ್ರಿಯ 6:​11, 12 ಓದಿ.) ಸ್ವತಃ ಯೆಹೋವನೇ ತಾಳ್ಮೆಯಿಂದ ಕಾಯುತ್ತಿದ್ದಾನೆ. ಬೇಕಿದ್ದರೆ ಆತನು ಯಾವಾಗಲೋ ದುಷ್ಟತನವನ್ನು ಕೊನೆಗಾಣಿಸಬಹುದಿತ್ತು. ಆದರೆ ಆತನು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾನೆ. (ರೋಮ. 9:​20-24) ಆತನು ಏಕೆ ಅಷ್ಟು ತಾಳ್ಮೆಯಿಂದ ಇದ್ದಾನೆ? ಯೇಸು ಹೇಗೆ ತನ್ನ ತಂದೆಯಂತೆ ತಾಳ್ಮೆಯನ್ನು ತೋರಿಸಿದನು? ನಮಗೆ ಯಾವ ಮಾದರಿಯನ್ನಿಟ್ಟನು? ಯೆಹೋವನಂತೆ ನಾವು ತಾಳ್ಮೆಯಿಂದ ಕಾಯುವುದರಿಂದ ಯಾವ ಪ್ರಯೋಜನಗಳಿವೆ? ಉತ್ತರ ತಿಳಿಯೋಣ. ಇದು, ಯೆಹೋವನು ತಡಮಾಡುತ್ತಿದ್ದಾನೆಂದು ನಮಗನಿಸಿದರೂ ತಾಳ್ಮೆ ಮತ್ತು ದೃಢ ನಂಬಿಕೆ ಹೊಂದಿರಲು ಸಹಾಯ ಮಾಡುತ್ತದೆ.

ಯೆಹೋವನು ತಾಳ್ಮೆಯಿಂದಿರಲು ಕಾರಣ

3, 4. (1) ಯೆಹೋವನು ಏಕೆ ತಾಳ್ಮೆಯಿಂದಿದ್ದಾನೆ? (2) ಏದೆನಿನಲ್ಲಿ ಎದ್ದ ದಂಗೆಗೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?

3 ಇಡೀ ವಿಶ್ವದಲ್ಲಿ ಯೆಹೋವನೊಬ್ಬನಿಗೆ ಸರ್ವೋತ್ಕೃಷ್ಟ ಅಧಿಕಾರವಿದೆ. ಹೀಗಿರುವಾಗ ಎಲ್ಲ ಸಮಸ್ಯೆಗಳಿಗೆ ಪೂರ್ಣ ವಿರಾಮ ಹಾಕಲು ಆತನು ಕಾಯಬೇಕಿಲ್ಲ. ಆದರೂ ಆತನು ತಾಳ್ಮೆ ತೋರಿಸುವುದಕ್ಕೆ ಸಕಾರಣವಿದೆ. ಏದೆನಿನಲ್ಲಾದ ದಂಗೆಯಿಂದ ಕೆಲವು ಪ್ರಾಮುಖ್ಯ ಪ್ರಶ್ನೆಗಳು ಎದ್ದವು. ಇವುಗಳಿಗೆ ನಿಖರವಾದ ಉತ್ತರ ಕೊಡಲು ಸಮಯ ತಗಲುತ್ತದೆಂದು ಯೆಹೋವನಿಗೆ ತಿಳಿದಿರುವುದರಿಂದ ತಾಳ್ಮೆಯಿಂದಿದ್ದಾನೆ. ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿರುವ ಪ್ರತಿಯೊಬ್ಬರ ಕ್ರಿಯೆ, ಯೋಚನೆ ಕುರಿತು ಅಣು ಅಣುವಾಗಿ ತಿಳಿದಿರುವ ಆತನು ನಿಶ್ಚಯವಾಗಿಯೂ ನಮ್ಮ ಒಳಿತಿಗಾಗಿ ಹೀಗೆ ಕಾಯುತ್ತಿದ್ದಾನೆ.​—⁠ಇಬ್ರಿ. 4:⁠13.

4 ಆದಾಮಹವ್ವರ ಸಂತತಿಯವರು ಭೂಮಿಯಲ್ಲಿ ತುಂಬಿಕೊಳ್ಳಬೇಕು ಎನ್ನುವುದು ಯೆಹೋವನ ಉದ್ದೇಶವಾಗಿತ್ತು. ಆದರೆ ಸೈತಾನನು ಹವ್ವಳನ್ನು ವಂಚಿಸಿದಾಗ ಮತ್ತು ನಂತರ ಆದಾಮನು ಅವಿಧೇಯನಾದಾಗ ಯೆಹೋವನು ತನ್ನ ಉದ್ದೇಶವನ್ನು ಅಲ್ಲಿಗೆ ಕೈಬಿಡಲಿಲ್ಲ. ಏನು ಮಾಡುವುದೆಂದು ತೋಚದೆ ಕಂಗಾಲಾಗಲಿಲ್ಲ. ದುಡುಕಿ ಏನೋ ಒಂದು ನಿರ್ಣಯಕ್ಕೆ ಬಂದುಬಿಡಲಿಲ್ಲ. ಈ ಮನುಷ್ಯರಿಗೆ ಎಷ್ಟು ಮಾಡಿದರೂ ಅಷ್ಟೇ ಎಂದು ತಳ್ಳಿಬಿಡಲಿಲ್ಲ. ಬದಲಿಗೆ ಭೂಮಿ ಹಾಗೂ ಮಾನವರನ್ನು ಸೃಷ್ಟಿಸಿದ್ದರ ಮೂಲ ಉದ್ದೇಶವನ್ನು ಕೈಗೂಡಿಸಲು ಏನು ಮಾಡಬೇಕೆಂದು ಕೂಡಲೆ ನಿರ್ಣಯಿಸಿದನು. (ಯೆಶಾ. 55:11) ತನ್ನ ಉದ್ದೇಶವನ್ನು ಈಡೇರಿಸಲು ಮತ್ತು ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸಲು ಯೆಹೋವನು ತೋರಿಸಿದ ಸ್ವನಿಯಂತ್ರಣ, ತಾಳ್ಮೆ ಅಪಾರ! ಎಷ್ಟೆಂದರೆ ತನ್ನ ಉದ್ದೇಶಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅತ್ಯುತ್ತಮ ವಿಧದಲ್ಲಿ ನೆರವೇರಿಸಲು ಸಾವಿರಾರು ವರ್ಷಗಳೇ ಕಾದಿದ್ದಾನೆ.

5. ಯೆಹೋವನು ತಾಳ್ಮೆ ತೋರಿಸುತ್ತಿರುವುದರಿಂದ ನಮಗೆ ಯಾವ ಆಶೀರ್ವಾದಗಳು ಸಿಗುತ್ತವೆ?

5 ಯೆಹೋವನು ತಾಳ್ಮೆಯಿಂದ ಕಾಯಲು ಇನ್ನೊಂದು ಕಾರಣ ಹೆಚ್ಚೆಚ್ಚು ಮಂದಿ ನಿತ್ಯಜೀವವನ್ನು ಪಡೆಯಬೇಕೆಂದೇ. ಈಗಲೇ ಆತನು “ಮಹಾ ಸಮೂಹ”ವನ್ನು ರಕ್ಷಿಸಲು ಬೇಕಾದ ಸಿದ್ಧತೆಗಳನ್ನು ಮಾಡುತ್ತಿದ್ದಾನೆ. (ಪ್ರಕ. 7:​9, 14; 14:⁠6) ನಮ್ಮ ಸಾರುವ ಕಾರ್ಯದ ಮೂಲಕ ಯೆಹೋವನು ತನ್ನ ರಾಜ್ಯದ ಕುರಿತು, ನೀತಿಯ ನಿಯಮಗಳ ಕುರಿತು ಜನರು ಕಲಿಯುವಂತೆ ಆಮಂತ್ರಣ ನೀಡುತ್ತಿದ್ದಾನೆ. ದೇವರ ರಾಜ್ಯದ ಸಂದೇಶವೊಂದೇ ಮಾನವಕುಲಕ್ಕೆ ಅತ್ಯುತ್ತಮ “ಸುವಾರ್ತೆ” ಆಗಿದೆ. (ಮತ್ತಾ. 24:14) ಯೆಹೋವನು ತನ್ನೆಡೆಗೆ ಸೆಳೆದ ಪ್ರತಿಯೊಬ್ಬರು ನೀತಿಯನ್ನು ಪ್ರೀತಿಸುವ ನಿಜ ಸ್ನೇಹಿತರ ಲೋಕವ್ಯಾಪಕ ಸಭೆಯ ಭಾಗವಾಗುತ್ತಾರೆ. (ಯೋಹಾ. 6:​44-47) ನಮ್ಮ ಪ್ರೀತಿಯ ದೇವರು ಇಷ್ಟೆಲ್ಲಾ ಮಾಡುತ್ತಿರುವುದು ಜನರು ತನ್ನ ಮೆಚ್ಚುಗೆಯನ್ನು ಪಡೆಯುವಂತೆ ನೆರವಾಗಲಿಕ್ಕಾಗಿಯೇ. ಮಾತ್ರವಲ್ಲ ಕೆಲವರನ್ನು ತನ್ನ ಸ್ವರ್ಗೀಯ ಸರಕಾರದ ಭಾವೀ ಸದಸ್ಯರಾಗಲು ಸಹ ಆತನು ಆಯ್ಕೆಮಾಡುತ್ತಿದ್ದಾನೆ. ಇವರು ಸ್ವರ್ಗಕ್ಕೆ ಹೋದ ಬಳಿಕ ಭೂಮಿಯ ಮೇಲಿರುವ ಮಾನವರು ಪರಿಪೂರ್ಣರಾಗಲು ಮತ್ತು ಶಾಶ್ವತ ಜೀವನವನ್ನು ಪಡೆಯಲು ಸಹಾಯ ಮಾಡುವರು. ಹೌದು, ಯೆಹೋವನು ತಾಳ್ಮೆಯಿಂದ ಕಾಯುತ್ತಿರುವುದಾದರೂ ತನ್ನ ಉದ್ದೇಶವನ್ನು ಈಡೇರಿಸಲು ಕೆಲಸ ಮಾಡುತ್ತಲೇ ಇದ್ದಾನೆ. ಇದೆಲ್ಲವನ್ನು ಆತನು ಮಾಡುತ್ತಿರುವುದು ನಮ್ಮ ಒಳ್ಳೇದಕ್ಕಾಗಿಯೇ.

6. (1) ನೋಹನ ದಿನದಲ್ಲಿ ಯೆಹೋವನು ಹೇಗೆ ತಾಳ್ಮೆಯಿಂದ ಇದ್ದನು? (2) ನಮ್ಮ ದಿನದಲ್ಲಿ ಯೆಹೋವನು ಹೇಗೆ ತಾಳ್ಮೆ ತೋರಿಸುತ್ತಿದ್ದಾನೆ?

6 ಜನರು ಯೆಹೋವನನ್ನು ತೀವ್ರವಾಗಿ ಕೆರಳಿಸುವಂಥ ವಿಷಯಗಳನ್ನು ಮಾಡುತ್ತಿರುವುದಾದರೂ ಆತನು ತುಂಬ ತಾಳ್ಮೆಯಿಂದಿದ್ದಾನೆ. ಉದಾಹರಣೆಗೆ ಜಲಪ್ರಳಯಕ್ಕೆ ಮುಂಚೆ ದುಷ್ಟತನ ತುಂಬಿತುಳುಕುತ್ತಿದ್ದಾಗ ಆತನು ಹೇಗೆ ಪ್ರತಿಕ್ರಿಯಿಸಿದನೆಂದು ಯೋಚಿಸಿ. ಆಗ ಅನೈತಿಕತೆ, ಹಿಂಸೆ ಎಷ್ಟು ಜಾಸ್ತಿಯಾಗಿತ್ತೆಂದರೆ ಆ ದುಃಸ್ಥಿತಿ ನೋಡಿ ಯೆಹೋವನು “ತನ್ನ ಹೃದಯದಲ್ಲಿ ನೊಂದುಕೊಂಡನು.” (ಆದಿ. 6:​2-8) ಆ ಪರಿಸ್ಥಿತಿ ಹಾಗೇ ಮುಂದುವರಿಯುವಂತೆ ಆತನು ಬಿಡಲಿಲ್ಲ. ಬದಲಾಗಿ ಅವಿಧೇಯ ಜನರನ್ನು ನಾಶಮಾಡಲಿಕ್ಕಾಗಿ ಜಲಪ್ರಳಯ ತರಲು ನಿರ್ಣಯಿಸಿದನು. ನೋಹನ ದಿನಗಳಲ್ಲಿ ಯೆಹೋವನು “ತಾಳ್ಮೆಯಿಂದ ಕಾದುಕೊಂಡಿದ್ದ ಸಮಯದಲ್ಲಿ” ನೋಹ ಮತ್ತು ಅವನ ಕುಟುಂಬವನ್ನು ಸಂರಕ್ಷಿಸಲು ಸಿದ್ಧತೆಗಳನ್ನೂ ಮಾಡಿದನು. (1 ಪೇತ್ರ 3:20) ತಕ್ಕ ಸಮಯದಲ್ಲಿ ಆತನು ತನ್ನ ನಿರ್ಣಯವನ್ನು ನೋಹನಿಗೆ ತಿಳಿಸಿ ನಾವೆಯನ್ನು ಕಟ್ಟುವಂತೆ ಹೇಳಿದನು. (ಆದಿ. 6:​14-22) ಜೊತೆಗೆ ಬೇಗನೆ ಬರಲಿದ್ದ ಆ ನಾಶನದ ಕುರಿತು ನೋಹ ಜನರನ್ನು ಎಚ್ಚರಿಸಬೇಕೆಂಬುದು ಯೆಹೋವನ ಅಪೇಕ್ಷೆಯಾಗಿತ್ತು. ಅಂತೆಯೇ ನೋಹ ‘ನೀತಿಯನ್ನು ಸಾರುವವನಾಗಿದ್ದನು’ ಎಂದು ಬೈಬಲ್‌ ಹೇಳುತ್ತದೆ. (2 ಪೇತ್ರ 2:⁠5) ನಮ್ಮ ದಿನಗಳು ನೋಹನ ದಿನಗಳಂತೆ ಇರುತ್ತವೆಂದು ಯೇಸು ಹೇಳಿದನು. ನೋಹನ ದಿನದಲ್ಲಿ ಮಾಡಿದಂತೆ ಯೆಹೋವನು ಇಂದಿನ ದುಷ್ಟ ಲೋಕಕ್ಕೆ ಯಾವಾಗ ಅಂತ್ಯ ತರಬೇಕೆಂದು ಈಗಾಗಲೇ ನಿರ್ಣಯಿಸಿದ್ದಾನೆ. “ಆ ದಿನ ಮತ್ತು ಗಳಿಗೆ” ಯಾವಾಗ ಎಂದು ಯಾವ ಮಾನವನಿಗೂ ತಿಳಿದಿಲ್ಲ. (ಮತ್ತಾ. 24:36) ಅಷ್ಟರವರೆಗೆ ನಮಗೊಂದು ದೇವದತ್ತ ಕೆಲಸವನ್ನು ಮಾಡಲಿಕ್ಕಿದೆ. ಜನರಿಗೆ ಎಚ್ಚರಿಸುವ ಹಾಗೂ ರಕ್ಷಣೆ ಹೊಂದುವುದು ಹೇಗೆಂದು ಸಾರಿ ಹೇಳುವ ಕೆಲಸ ಅದಾಗಿದೆ.

7. ಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸಲು ತಡಮಾಡುತ್ತಿದ್ದಾನೆಯೇ? ವಿವರಿಸಿ.

7 ಯೆಹೋವನು ತಾಳ್ಮೆಯಿಂದಿದ್ದಾನೆ ಎನ್ನುವಾಗ ತಾನು ನಿಶ್ಚಯಿಸಿದ ಸಮಯ ಬರುವ ವರೆಗೆ ಸುಮ್ಮನೆ ಕಾಯುತ್ತಾ ಕುಳಿತಿದ್ದಾನೆಂದು ಅರ್ಥವಲ್ಲ. ಹಾಗಾಗಿ ದೇವರು ನಮ್ಮ ಕಡೆ ಗಮನ ಕೊಡುತ್ತಿಲ್ಲ, ನಮ್ಮ ಬಗ್ಗೆ ಚಿಂತೆಯಿಲ್ಲವೆಂದು ಎಂದಿಗೂ ನೆನಸಬಾರದು. ಆದರೂ ನಮಗೆ ವಯಸ್ಸಾಗುತ್ತಾ ಹೋದಂತೆ ಇಲ್ಲವೆ ಈ ದುಷ್ಟ ಲೋಕದಲ್ಲಿ ಕಷ್ಟದಿಂದ ನೊಂದುಬೆಂದಾಗ ಅಂಥ ಯೋಚನೆ ಮನಸ್ಸಿಗೆ ಬಂದುಬಿಡಬಹುದು. ಆಗ ನಾವು ಹತಾಶರಾಗಬಹುದು ಅಥವಾ ದೇವರು ತನ್ನ ವಾಗ್ದಾನಗಳನ್ನು ನೆರವೇರಿಸಲು ತಡಮಾಡುತ್ತಿದ್ದಾನೆಂದು ನೆನಸಬಹುದು. (ಇಬ್ರಿ. 10:36) ಇಂಥ ಯೋಚನೆ ನಿಮಗೆ ಬಂದಲ್ಲಿ? ಒಳ್ಳೇ ಕಾರಣಗಳಿಂದಾಗಿಯೇ ದೇವರು ತಾಳ್ಮೆಯಿಂದಿದ್ದಾನೆ ಎಂದು ನೆನಪಿಸಿಕೊಳ್ಳಿ. ಈ ಸಮಯವನ್ನು ತನ್ನ ನಿಷ್ಠಾವಂತ ಸೇವಕರಿಗೆ ಒಳ್ಳೇದನ್ನು ಮಾಡಲಿಕ್ಕಾಗಿಯೇ ಬಳಸುತ್ತಿದ್ದಾನೆ ಎನ್ನುವುದನ್ನು ಮರೆಯದಿರಿ. (2 ಪೇತ್ರ 2:3; 3:⁠9) ಈಗ ನಾವು ಹೇಗೆ ಯೇಸು ತನ್ನ ತಂದೆಯಂತೆ ತಾಳ್ಮೆ ತೋರಿಸಿದನೆಂದು ನೋಡೋಣ.

ತಾಳ್ಮೆ ತೋರಿಸುವುದರಲ್ಲಿ ಯೇಸುವಿಟ್ಟ ಉತ್ತಮ ಮಾದರಿ

8. ಯಾವ ಸಂದರ್ಭಗಳಲ್ಲಿ ಯೇಸು ತಾಳ್ಮೆ ತೋರಿಸಿದನು?

8 ಯೇಸು ಸಾವಿರಾರು ವರ್ಷಗಳಿಂದ ದೇವರ ಚಿತ್ತವನ್ನು ಸಂತೋಷದಿಂದ ಮಾಡುತ್ತಿದ್ದಾನೆ. ಸೈತಾನನು ದಂಗೆ ಎದ್ದಾಗ ಯೆಹೋವನು ತನ್ನ ಏಕೈಕಜಾತ ಪುತ್ರನನ್ನು ಭೂಮಿಗೆ ಕಳುಹಿಸಲು ಮತ್ತು ಮೆಸ್ಸೀಯನನ್ನಾಗಿ ಮಾಡಲು ನಿರ್ಣಯಿಸಿದನು. ಆ ಸಮಯ ಬರುವ ವರೆಗೆ ಯೇಸು ಸಾವಿರಾರು ವರ್ಷ ಕಾಯುತ್ತಿದ್ದಾಗ ಎಷ್ಟು ತಾಳ್ಮೆ ತೋರಿಸಿದನೆಂದು ಯೋಚಿಸಿ. (ಗಲಾತ್ಯ 4:4 ಓದಿ.) ಅಷ್ಟು ವರ್ಷ ಅವನು ಏನನ್ನೂ ಮಾಡದೆ ಸುಮ್ಮನೆ ಕುಳಿತಿರಲಿಲ್ಲ. ತಂದೆ ನೇಮಿಸಿದ ಕೆಲಸಗಳನ್ನು ಮಾಡುತ್ತಾ ಕಾರ್ಯನಿರತನಾಗಿದ್ದನು. ಸಮಯಾನಂತರ ಅವನು ಭೂಮಿಗೆ ಬಂದನು. ಪ್ರವಾದನೆಗಳು ತಿಳಿಸುವಂತೆ ತಾನು ಸೈತಾನನ ಕೈಯಿಂದ ಸಾಯಲಿಕ್ಕಿದ್ದೇನೆ ಎಂದು ಅವನಿಗೆ ತಿಳಿದಿತ್ತು. (ಆದಿ. 3:15; ಮತ್ತಾ. 16:21) ತಾಳ್ಮೆಯಿಂದ ತೀವ್ರ ಕಷ್ಟನೋವನ್ನು ಸಹಿಸಿಕೊಂಡನು. ಏಕೆಂದರೆ ತಾನು ಸಾಯಬೇಕೆನ್ನುವುದು ದೇವರ ಚಿತ್ತವಾಗಿದೆ ಎಂದವನಿಗೆ ಗೊತ್ತಿತ್ತು. ಉತ್ಕೃಷ್ಟ ವಿಧದಲ್ಲಿ ನಿಷ್ಠೆ ತೋರಿಸಿದನು. ತನ್ನ ಮೇಲಾಗಲಿ ತನ್ನ ಸ್ಥಾನಮಾನಕ್ಕಾಗಲಿ ಗಮನ ಕೊಡಲಿಲ್ಲ. ಅವನ ಮಾದರಿಯಿಂದ ನಾವು ಹೆಚ್ಚು ಪ್ರಯೋಜನ ಪಡೆಯಬಲ್ಲೆವು.​—⁠ಇಬ್ರಿ. 5:​8, 9.

9, 10. (1) ಯೆಹೋವನ ಸಮಯಕ್ಕಾಗಿ ಕಾಯುತ್ತಿರುವಾಗ ಯೇಸು ಏನು ಮಾಡುತ್ತಿದ್ದಾನೆ? (2) ಯೆಹೋವನ ಕಾಲತಖ್ತೆಯನ್ನು ನಾವು ಹೇಗೆ ವೀಕ್ಷಿಸಬೇಕು?

9 ಯೇಸು ಪುನರುತ್ಥಾನ ಹೊಂದಿದ ಮೇಲೆ ಸ್ವರ್ಗದಲ್ಲಿಯೂ ಭೂಮಿಯ ಮೇಲೆಯೂ ಅಧಿಕಾರ ಪಡೆದುಕೊಂಡನು. (ಮತ್ತಾ. 28:18) ಅವನು ಆ ಅಧಿಕಾರವನ್ನು ಯಾವಾಗಲೂ ಯೆಹೋವನ ಉದ್ದೇಶವನ್ನು ನೆರವೇರಿಸಲು ಉಪಯೋಗಿಸುತ್ತಾನೆ. ಅದನ್ನು ಕೂಡ ಯೆಹೋವನು ನಿಗದಿಪಡಿಸಿದ ಸಮಯದಲ್ಲೇ ಮಾಡುತ್ತಾನೆ. ಉದಾಹರಣೆಗೆ, ದೇವರು ವಿರೋಧಿಗಳನ್ನು ಯೇಸುವಿನ ಪಾದಪೀಠವಾಗಿ ಮಾಡುವ ತನಕ ಅಂದರೆ 1914ರ ತನಕ ಯೇಸು ತಾಳ್ಮೆಯಿಂದ ಕಾದನು. (ಕೀರ್ತ. 110:​1, 2; ಇಬ್ರಿ. 10:​12, 13) ಶೀಘ್ರದಲ್ಲೇ ಯೇಸು ಸೈತಾನನ ಲೋಕವನ್ನು ನಾಶ ಮಾಡಲಿದ್ದಾನೆ. ಆ ಸಮಯಕ್ಕಾಗಿ ಅವನು ಕಾಯುತ್ತಿರುವಾಗ ಜನರು ದೇವರ ಮೆಚ್ಚಿಕೆಯನ್ನು ಪಡೆಯುವಂತೆ ಸಹಾಯ ಮಾಡುತ್ತಿದ್ದಾನೆ ಮತ್ತು ಅವರನ್ನು “ಜೀವಜಲದ” ಬಳಿಗೆ ನಡೆಸುತ್ತಿದ್ದಾನೆ.​—⁠ಪ್ರಕ. 7:⁠17.

10 ಯೆಹೋವನ ಕಾಲತಖ್ತೆಯನ್ನು ನಾವು ಹೇಗೆ ವೀಕ್ಷಿಸಬೇಕೆಂದು ಯೇಸುವಿನ ಮಾದರಿಯಲ್ಲಿ ಗಮನಿಸಿದಿರಾ? ತಂದೆ ಹೇಳಿದ್ದೆಲ್ಲವನ್ನೂ ಮಾಡುವ ಉತ್ಸಾಹ ನಿಸ್ಸಂಶಯವಾಗಿ ಯೇಸುವಿನಲ್ಲಿತ್ತು. ಆದರೂ ದೇವರು ನಿಗದಿಪಡಿಸಿದ ಸಮಯಕ್ಕಾಗಿ ಯೇಸು ಮನಃಪೂರ್ವಕವಾಗಿ ಕಾದನು. ಸೈತಾನನ ಲೋಕದ ಅಂತ್ಯಕ್ಕಾಗಿ ಕಾಯುತ್ತಿರುವ ನಮ್ಮೆಲ್ಲರಲ್ಲೂ ಅಂಥ ತಾಳ್ಮೆ ಇರಬೇಕು. ದೇವರು ಕ್ರಿಯೆ ಕೈಗೊಳ್ಳುವ ವರೆಗೆ ಕಾಯಬೇಕು. ನಿರಾಶರಾದಾಗ ತಾಳ್ಮೆಗೆಡಬಾರದು. ಹಾಗಾದರೆ ಯೆಹೋವನಂತೆ ನಾವು ತಾಳ್ಮೆಯಿಂದಿರಲು ಏನು ಮಾಡಬೇಕು?

ದೇವರಲ್ಲಿರುವಂಥ ತಾಳ್ಮೆಯನ್ನು ನಾನು ಬೆಳೆಸಿಕೊಳ್ಳುವುದು ಹೇಗೆ?

11. (1) ನಂಬಿಕೆ ಮತ್ತು ತಾಳ್ಮೆ ಹೇಗೆ ಒಂದಕ್ಕೊಂದು ಸಂಬಂಧಿಸಿದೆ? (2) ದೃಢ ನಂಬಿಕೆ ಹೊಂದಿರಲು ಯಾವ ಬಲವಾದ ಕಾರಣಗಳಿವೆ?

11 ಯೇಸು ಭೂಮಿಗೆ ಬರುವುದಕ್ಕೆ ಮುಂಚೆ ಪ್ರವಾದಿಗಳು ಮತ್ತು ಇತರ ನಂಬಿಗಸ್ತ ಸೇವಕರು ತಾಳ್ಮೆಯ ವಿಷಯದಲ್ಲಿ ಅತ್ಯುತ್ತಮ ಮಾದರಿಯನ್ನಿಟ್ಟರು. ಇದು ಅಪರಿಪೂರ್ಣರಾದ ಮಾನವರು ಸಹ ತಾಳ್ಮೆಯಿಂದ ಕಾಯಲು ಸಾಧ್ಯವೆಂದು ತೋರಿಸುತ್ತದೆ. ಅವರಲ್ಲಿದ್ದ ನಂಬಿಕೆಯು ತಾಳಿಕೊಳ್ಳಲು ಶಕ್ತರನ್ನಾಗಿ ಮಾಡಿತು. (ಯಾಕೋಬ 5:​10, 11 ಓದಿ.) ಯೆಹೋವನು ನುಡಿದ ಮಾತುಗಳಲ್ಲಿ ಅವರಿಗೆ ನಂಬಿಕೆ ಇರದಿದ್ದರೆ ಅವು ನೆರವೇರುವ ಸಮಯದ ವರೆಗೆ ತಾಳ್ಮೆಯಿಂದ ಕಾಯಲು ಆಗುತ್ತಿರಲಿಲ್ಲ. ಯೆಹೋವನು ತಾನು ನುಡಿದದ್ದನ್ನು ನೆರವೇರಿಸಿಯೇ ತೀರುವನೆಂಬ ನಂಬಿಕೆ ಇದ್ದದರಿಂದ ಅವರು ಅನೇಕ ಬಾರಿ ಭೀಕರ ಸಂಕಷ್ಟಗಳನ್ನು ತಾಳಿಕೊಂಡರು. (ಇಬ್ರಿ. 11:​13, 35-40) ಇಂದು ನಮಗೆ ದೃಢ ನಂಬಿಕೆಯನ್ನು ಹೊಂದಿರಲು ಅವರಿಗಿಂತಲೂ ಹೆಚ್ಚಿನ ಕಾರಣಗಳಿವೆ. ಏಕೆ? ಏಕೆಂದರೆ ಯೇಸು ‘ನಮ್ಮ ನಂಬಿಕೆಯ ಪರಿಪೂರ್ಣಕನು.’ (ಇಬ್ರಿ. 12:⁠2) ಅಂದರೆ ಅನೇಕಾನೇಕ ಪ್ರವಾದನೆಗಳನ್ನು ಯೇಸು ನೆರವೇರಿಸಿದ್ದಾನೆ ಮತ್ತು ದೇವರ ಉದ್ದೇಶವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಿದ್ದಾನೆ. ಇದು ದೃಢ ನಂಬಿಕೆ ಹೊಂದಿರಲು ಆಧಾರವಾಗಿದೆ.

12. ನಮ್ಮ ನಂಬಿಕೆಯನ್ನು ಬಲಪಡಿಸಲು ಏನು ಮಾಡಬೇಕು?

12 ನಮ್ಮ ನಂಬಿಕೆ ಹೆಚ್ಚು ದೃಢವಾಗಿದ್ದಷ್ಟು ಹೆಚ್ಚು ತಾಳ್ಮೆಯಿಂದಿರಲು ಸಾಧ್ಯ. ಹಾಗಾದರೆ ನಂಬಿಕೆಯನ್ನು ಬಲಪಡಿಸಲು ಏನು ಮಾಡಬೇಕು? ದೇವರು ಕೊಡುವ ಸಲಹೆಯನ್ನು ಪಾಲಿಸಬೇಕು. ಉದಾಹರಣೆಗೆ ದೇವರ ರಾಜ್ಯಕ್ಕೆ ನಿಮ್ಮ ಜೀವನದಲ್ಲಿ ಪ್ರಥಮ ಸ್ಥಾನ ಕೊಡುವಂತೆ ಮತ್ತಾಯ 6:33 ಸಲಹೆ ನೀಡುತ್ತದೆ. ಈ ಸಲಹೆಯನ್ನು ನೀವು ಏಕೆ ಪಾಲಿಸಬೇಕೆಂದು ಯೋಚಿಸಿ ನೋಡಿ. . . ಅದನ್ನು ಪಾಲಿಸಲಿಕ್ಕಾಗಿ ನೀವು ಹೆಚ್ಚು ಶ್ರಮ ಹಾಕಬಲ್ಲಿರೋ? ಅದಕ್ಕಾಗಿ ನೀವು ಕ್ಷೇತ್ರಸೇವೆಯಲ್ಲಿ ಹೆಚ್ಚು ಸಮಯ ಕೊಡಬೇಕಾಗಬಹುದು. ಅಥವಾ ನಿಮ್ಮ ಬದುಕನ್ನು ಸರಳವಾಗಿ ಇಡಬೇಕಾಗಬಹುದು. ಯೆಹೋವನ ನಿರ್ದೇಶನಗಳನ್ನು ನೀವು ಪಾಲಿಸಿದ್ದಕ್ಕಾಗಿ ಆತನು ಈಗಾಗಲೇ ನಿಮ್ಮನ್ನು ಆಶೀರ್ವದಿಸಿದ್ದಾನೆಂದು ಮರೆಯಬೇಡಿ. ಒಂದುವೇಳೆ ಹೊಸ ಬೈಬಲ್‌ ಅಧ್ಯಯನವನ್ನು ಕೊಟ್ಟಿರಬಹುದು ಅಥವಾ ‘ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯನ್ನು’ ಅನುಗ್ರಹಿಸಿರಬಹುದು. (ಫಿಲಿಪ್ಪಿ 4:7 ಓದಿ.) ಇಂಥ ಆಶೀರ್ವಾದಗಳ ಕುರಿತು ಧ್ಯಾನಿಸುವುದರಿಂದ ನೀವು ತಾಳ್ಮೆಯಿಂದಿರುವುದು ನಿಜಕ್ಕೂ ಪ್ರಯೋಜನವೆಂದು ಮನಗಾಣುವಿರಿ.​—⁠ಕೀರ್ತ. 34:⁠8.

13. ನಂಬಿಕೆಯು ಹೆಚ್ಚು ತಾಳ್ಮೆಯಿಂದಿರಲು ಸಹಾಯ ಮಾಡುತ್ತದೆ ಎಂಬುದಕ್ಕೆ ಯಾವ ದೃಷ್ಟಾಂತ ಕೊಡಬಹುದು?

13 ದೃಢ ನಂಬಿಕೆ ಹೆಚ್ಚೆಚ್ಚು ತಾಳ್ಮೆಯಿಂದಿರಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ರೈತನ ದೃಷ್ಟಾಂತವನ್ನು ನೋಡೋಣ. ರೈತ ಬೀಜ ಬಿತ್ತಿ, ಕೃಷಿ ಮಾಡಿ ನಂತರ ಫಸಲನ್ನು ಕೊಯ್ಯುತ್ತಾನೆ. ಪ್ರತಿ ಸಲ ಅವನು ಬಂಪರ್‌ ಫಸಲನ್ನು ಕೊಯ್ದಂತೆ ಮುಂದಿನ ಸಲ ದೃಢ ಭರವಸೆಯಿಂದ ಬಿತ್ತನೆ ಮಾಡುತ್ತಾನೆ. ಮುಂಚೆಗಿಂತಲೂ ಅಧಿಕವಾಗಿ ಬಿತ್ತನೆ ಮಾಡಲಿಕ್ಕೂ ಅವನು ಹಿಂಜರಿಯುವುದಿಲ್ಲ. ಕೊಯ್ಲಿನ ಸಮಯದ ವರೆಗೆ ತಾನು ತಾಳ್ಮೆಯಿಂದ ಕಾಯಬೇಕೆಂದು ಗೊತ್ತಿದ್ದರೂ ಅವನು ನಿರಾಶನಾಗುವುದಿಲ್ಲ. ಒಳ್ಳೇ ಫಸಲು ಸಿಕ್ಕೇ ಸಿಗುತ್ತದೆಂಬ ಅಚಲ ಭರವಸೆ ಅವನಿಗಿರುತ್ತದೆ. ಅದೇ ರೀತಿ ನಾವು ಯೆಹೋವನು ಕೊಡುವ ಸಲಹೆಯನ್ನು ಕಲಿತು, ಅನ್ವಯಿಸಿ, ಪ್ರತಿ ಬಾರಿ ಒಳ್ಳೇ ಫಲಿತಾಂಶಗಳನ್ನು ಪಡೆದಾಗ ಆತನಲ್ಲಿ ನಮ್ಮ ನಂಬಿಕೆ, ಭರವಸೆ ಇನ್ನು ದೃಢವಾಗುತ್ತಾ ಹೋಗುತ್ತದೆ. ಆಗ ತಾಳ್ಮೆಯಿಂದಿರಲು ನಾವು ಬೇಸರಪಡುವುದಿಲ್ಲ. ಮುಂದೆ ನಿಶ್ಚಯವಾಗಿ ಪಡೆಯಲಿರುವ ಆಶೀರ್ವಾದಗಳಿಗಾಗಿ ಕಾಯಲು ಸೋತುಹೋಗುವುದಿಲ್ಲ.​—⁠ಯಾಕೋಬ 5:​7, 8 ಓದಿ.

14, 15. ಮಾನವರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ನಮಗೆ ಯಾವ ದೃಷ್ಟಿಕೋನವಿರಬೇಕು?

14 ಹೆಚ್ಚು ತಾಳ್ಮೆಯುಳ್ಳವರಾಗಿರಲು ನಾವು ಇನ್ನೊಂದು ವಿಷಯವನ್ನು ಮಾಡಬೇಕು. ಈ ಲೋಕ ಮತ್ತು ನಮ್ಮ ಪರಿಸ್ಥಿತಿಯ ಕುರಿತು ಯೆಹೋವನಿಗಿರುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಉದಾಹರಣೆಗೆ, ಮಾನವರು ಸಂಕಷ್ಟಗಳನ್ನು ಅನುಭವಿಸುತ್ತಿರುವಾಗ ಯೆಹೋವನಿಗೆ ಹೇಗನಿಸುತ್ತದೆಂದು ಯೋಚಿಸಿ. ಅನೇಕಾನೇಕ ವರ್ಷಗಳಿಂದ ಜನರ ನೋವುನರಳಾಟವನ್ನು ನೋಡಿ ಯೆಹೋವನು ನೊಂದಿದ್ದಾನೆ. ಆದರೆ ಒಳ್ಳೆದೇನನ್ನೂ ಮಾಡಲಾಗದಷ್ಟು ಆ ನೋವಿನಲ್ಲಿ ಮುಳುಗಿಹೋಗಿಲ್ಲ. “ಪಿಶಾಚನ ಕೆಲಸಗಳನ್ನು ಭಂಗಗೊಳಿಸಲಿಕ್ಕಾಗಿ” ಮತ್ತು ಸೈತಾನನು ಮಾನವರಿಗೆ ತಂದ ಸಂಕಷ್ಟಗಳನ್ನು ನಿರ್ಮೂಲ ಮಾಡಲು ತನ್ನ ಒಬ್ಬನೇ ಮಗನನ್ನು ಕಳುಹಿಸಿಕೊಟ್ಟನು. (1 ಯೋಹಾ. 3:⁠8) ಹೌದು ಈಗ ನಾವು ಅನುಭವಿಸುತ್ತಿರುವ ಸಂಕಷ್ಟಗಳು ತಾತ್ಕಾಲಿಕ, ದೇವರು ತರುವ ಪರಿಹಾರ ಶಾಶ್ವತ. ಹಾಗಾಗಿ ಸೈತಾನನ ಆಳ್ವಿಕೆಯಲ್ಲಿರುವ ದುಷ್ಟತನವನ್ನು ನೋಡಿ ಕುಂದಿಹೋಗದಿರೋಣ. ಇನ್ನೂ ಅಂತ್ಯ ಬರಲಿಲ್ಲವಲ್ಲಾ ಎಂದು ತಾಳ್ಮೆಗೆಡದಿರೋಣ. ಭವಿಷ್ಯತ್ತಿನಲ್ಲಿ ನಿತ್ಯನಿರಂತರಕ್ಕೂ ಪಡೆಯಲಿರುವ ಆಶೀರ್ವಾದಗಳ ಮೇಲೆ ಭರವಸೆಯಿಡೋಣ. ದುಷ್ಟತನಕ್ಕೆ ಅಂತ್ಯ ತರುವ ಸಮಯವನ್ನು ಯೆಹೋವನು ಈಗಾಗಲೇ ನಿರ್ಧರಿಸಿದ್ದಾನೆ. ನಿಗದಿ ಮಾಡಿರುವ ಅದೇ ಸಮಯದಲ್ಲಿ ಆತನು ಕ್ರಿಯೆಗೈಯುವನು ಎಂಬುದು ಸತ್ಯ.​—⁠ಯೆಶಾ. 46:13; ನಹೂ. 1:⁠9.

15 ಈ ಕಡೇ ದಿವಸಗಳ ಕಠಿಣ ಕಾಲದಲ್ಲಿ ನಮ್ಮ ನಂಬಿಕೆಯನ್ನು ಅಲುಗಾಡಿಸುವಂಥ ಕಷ್ಟತೊಂದರೆಗಳನ್ನು ನಾವು ಎದುರಿಸಬಹುದು. ಒಂದುವೇಳೆ ನಾವು ಹಿಂಸಾಚಾರಕ್ಕೆ ಬಲಿಯಾಗಬಹುದು ಅಥವಾ ನಮ್ಮ ಆಪ್ತರು ತುಂಬ ಸಂಕಷ್ಟಕ್ಕೆ ಒಳಗಾಗಬಹುದು. ಅಂಥ ಸಂದರ್ಭದಲ್ಲಿ ಸಿಡಿದೇಳದೆ ಯೆಹೋವನ ಮೇಲೆ ಸಂಪೂರ್ಣವಾಗಿ ಭರವಸೆಯಿಡಲು ಗಟ್ಟಿಮನಸ್ಸು ಮಾಡಬೇಕು. ಅಪರಿಪೂರ್ಣರಾದ ನಮಗೆ ಹಾಗೆ ಮಾಡುವುದು ಸುಲಭವಲ್ಲ. ಆದರೂ ಯೇಸು ತೀರ ಸಂಕಷ್ಟದಲ್ಲಿದ್ದಾಗ ಏನು ಮಾಡಿದನೆಂದು ಮತ್ತಾಯ 26:39ರಲ್ಲಿ (ಓದಿ.) ಹೇಳಿರುವ ವಿಷಯವನ್ನು ನೆನಪಿಸಿಕೊಳ್ಳಬೇಕು.

16. ಅಂತ್ಯಕ್ಕಾಗಿ ಕಾಯುತ್ತಿರುವಾಗ ನಾವು ಏನನ್ನು ಮಾಡದಿರೋಣ?

16 ಅಂತ್ಯ ತುಂಬ ಸಮೀಪದಲ್ಲಿದೆ ಎನ್ನುವುದನ್ನು ಸಂಶಯಿಸುವ ವ್ಯಕ್ತಿ ತಪ್ಪಾದ ಮನೋಭಾವವನ್ನು ಬೆಳೆಸಿಕೊಳ್ಳುವ ಸಾಧ್ಯತೆಯಿದೆ. ಒಂದುವೇಳೆ ಯೆಹೋವನು ಹೇಳಿದ್ದು ನೆರವೇರದೆ ಹೋದರೆ ನಾನು ಬದುಕಲಿಕ್ಕೆ ಏನಾದರೂ ದಾರಿ ನೋಡಿಕೊಳ್ಳಬೇಕಲ್ಲಾ ಎಂದು ಯೋಚಿಸಬಹುದು. ಮಾತ್ರವಲ್ಲ ‘ಯೆಹೋವನು ತಾನು ಹೇಳಿದಂತೆ ಮಾಡುತ್ತಾನಾ ಇಲ್ಲವಾ ನೋಡೋಣ’ ಎಂದವನು ಪ್ರಾಯಶಃ ಯೋಚಿಸಬಹುದು. ಇಂಥ ಯೋಚನೆಗಳಿದ್ದರೆ ತಾಳ್ಮೆಯಿಂದ ಕಾಯಲು ಕಷ್ಟಾನೇ. ಅವನು ದೇವರ ರಾಜ್ಯಕ್ಕೆ ಪ್ರಥಮ ಸ್ಥಾನ ಕೊಡುವ ಬದಲು ಈ ಲೋಕದಲ್ಲಿ ಹೆಸರು ಮಾಡಲು, ಸಿರಿಸಂಪತ್ತನ್ನು ಕೂಡಿಸಲು ಪ್ರಯತ್ನಿಸಬಹುದು ಅಥವಾ ಐಷಾರಾಮದ ಜೀವನಕ್ಕಾಗಿ ಉನ್ನತ ಶಿಕ್ಷಣದಲ್ಲಿ ಭರವಸೆಯಿಡಬಹುದು. ಇದು ಆ ವ್ಯಕ್ತಿಗೆ ದೇವರಲ್ಲಿ ನಂಬಿಕೆಯ ಕೊರತೆಯಿದೆಯೆಂದು ತೋರಿಸುತ್ತದಲ್ಲವೇ? “ನಂಬಿಕೆ ಮತ್ತು ತಾಳ್ಮೆಯ ಮೂಲಕ” ಯೆಹೋವನಿಂದ ವಾಗ್ದಾನಗಳನ್ನು ಪಡೆದ ನಂಬಿಗಸ್ತರನ್ನು ಅನುಕರಿಸಿರಿ ಎಂದು ಪೌಲ ಹೇಳಿದನಲ್ಲಾ. (ಇಬ್ರಿ. 6:12) ಯೆಹೋವನು ಈ ದುಷ್ಟ ವ್ಯವಸ್ಥೆಯನ್ನು ಯಾವಾಗ ಕೊನೆಗೊಳಿಸಬೇಕೆಂದು ಈಗಾಗಲೇ ಸಮಯ ನಿರ್ಧರಿಸಿದ್ದಾನೆ. ಅರೆಕ್ಷಣವೂ ಆತನು ತಡಮಾಡುವುದಿಲ್ಲ. (ಹಬ. 2:⁠3) ಆದ್ದರಿಂದ ನಾವು ಕಾಟಾಚಾರಕ್ಕಾಗಿ ಯೆಹೋವನ ಸೇವೆಯನ್ನು ಮಾಡಬಾರದು. ಎಚ್ಚರದಿಂದಿದ್ದು ಶ್ರದ್ಧೆಯಿಂದ ಸುವಾರ್ತೆಯನ್ನು ಸಾರಬೇಕು. ಸಾರುವ ಕೆಲಸವು ಈಗಲೂ ಮಹಾ ಆನಂದ ಸಂತೃಪ್ತಿಯನ್ನು ಕೊಡುತ್ತದೆ.​—⁠ಲೂಕ 21:⁠36.

ತಾಳ್ಮೆಯ ಪ್ರತಿಫಲ

17, 18. (1) ತಾಳ್ಮೆಯಿಂದ ಕಾಯುತ್ತಿರುವ ಈ ಸಮಯದಲ್ಲಿ ನಮಗೆ ಯಾವ ಅವಕಾಶ ಕೊಡಲಾಗಿದೆ? (2) ಈಗ ತಾಳ್ಮೆ ತೋರಿಸುವುದರಿಂದ ಯಾವ ಆಶೀರ್ವಾದಗಳು ಸಿಗುತ್ತವೆ?

17 ದೇವರ ಸೇವೆಯನ್ನು ನಾವು ಕೆಲವೇ ತಿಂಗಳುಗಳಿಂದ ಮಾಡುತ್ತಿರಲಿ ಅಥವಾ ದಶಕಗಳಿಂದ ಮಾಡುತ್ತಿರಲಿ ನಮ್ಮ ಮನದಾಸೆ ಅನಂತಕಾಲಕ್ಕೂ ಆತನ ಸೇವೆ ಮಾಡುವುದೇ. ನಾವು ರಕ್ಷಣೆ ಹೊಂದಲು ಇನ್ನೆಷ್ಟೇ ಸಮಯವಿರಲಿ ಅಲ್ಲಿಯ ವರೆಗೆ ಕಾಯಲು ತಾಳ್ಮೆ ನಮಗೆ ಸಹಾಯ ಮಾಡುತ್ತದೆ. ಹೀಗೆ ಕಾಯುವುದು, ಯೆಹೋವನು ಮಾಡುವ ನಿರ್ಣಯಗಳಲ್ಲಿ ನಮಗೆ ಸಂಪೂರ್ಣ ಭರವಸೆಯಿದೆ ಎನ್ನುವುದನ್ನು ತೋರಿಸಿಕೊಡಲು ಆತನು ಕೊಟ್ಟಿರುವ ಅವಕಾಶವಾಗಿದೆ. ಆತನ ನಾಮದ ನಿಮಿತ್ತ ಕಷ್ಟವನ್ನು ಅನುಭವಿಸಲಿಕ್ಕೂ ನಾವು ಸಿದ್ಧರಾಗಿದ್ದೇವೆ. (1 ಪೇತ್ರ 4:​13, 14) ತಾಳ್ಮೆಯನ್ನು ಬೆಳೆಸಿಕೊಳ್ಳಲು ಬೇಕಾದ ತರಬೇತಿಯನ್ನೂ ದೇವರು ನಮಗೆ ಕೊಡುತ್ತಿದ್ದಾನೆ. ಇದು ರಕ್ಷಣೆ ಪಡೆಯಲು ಸಹಾಯ ಮಾಡುತ್ತದೆ.​—⁠1 ಪೇತ್ರ 5:⁠10.

18 ಯೇಸುವಿಗೆ ಸ್ವರ್ಗದಲ್ಲಿಯೂ ಭೂಮಿಯ ಮೇಲೂ ಎಲ್ಲ ಅಧಿಕಾರವಿದೆ. ಆತನ ಸಂರಕ್ಷಣಾ ಹಸ್ತದಿಂದ ನಿಮ್ಮನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. (ಯೋಹಾ. 10:​28, 29) ಮುಂದೆ ಏನಾಗುವುದೋ ಎಂದು ಹೆದರುವ ಅಗತ್ಯವಿಲ್ಲ. ಮರಣಕ್ಕೂ ಕೂಡ. ಕಡೇ ವರೆಗೆ ತಾಳುವವರು ರಕ್ಷಣೆ ಹೊಂದುವರು. ಆದ್ದರಿಂದ ಈ ಲೋಕ ನಮ್ಮನ್ನು ವಂಚಿಸುವಂತೆ ಅಥವಾ ಯೆಹೋವನಲ್ಲಿ ಭರವಸೆ ಕಳಕೊಳ್ಳುವಂತೆ ಮಾಡಲು ನಾವು ಬಿಡಬಾರದು. ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸಲು ಮತ್ತು ದೇವರು ತಾಳ್ಮೆಯಿಂದಿರುವ ಈ ಸಮಯವನ್ನು ವಿವೇಚನೆಯಿಂದ ಉಪಯೋಗಿಸಲು ದೃಢಸಂಕಲ್ಪ ಮಾಡೋಣ.​—⁠ಮತ್ತಾ. 24:13; 2 ಪೇತ್ರ 3:​17, 18 ಓದಿ.

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರ]

ದೇವರ ಸೇವೆಯ ಮೇಲೆ, ಆಶೀರ್ವಾದಗಳ ಮೇಲೆ ಗಮನ ನೆಡಲು ತಾಳ್ಮೆ ಸಹಾಯ ಮಾಡುತ್ತದೆ