ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕಕ್ಕೆ ಅಂತ್ಯ ಹೇಗೆ ಬರಲಿದೆ?

ಲೋಕಕ್ಕೆ ಅಂತ್ಯ ಹೇಗೆ ಬರಲಿದೆ?

ಲೋಕಕ್ಕೆ ಅಂತ್ಯ ಹೇಗೆ ಬರಲಿದೆ?

“ಆ ದಿನವು ಕಳ್ಳರ ಮೇಲೆ ಬರುವಂತೆ ನಿಮ್ಮ ಮೇಲೆ ಫಕ್ಕನೆ ಬರಬಾರದು, ಏಕೆಂದರೆ ನೀವು ಕತ್ತಲೆಯಲ್ಲಿಲ್ಲ.”​—⁠1 ಥೆಸ. 5:⁠4.

ವಿವರಿಸಿ. . .

ಕಾಣದಿರುವಂಥ ಯಾವ ಸಂಗತಿಗಳ ಕುರಿತು ಕೆಳಗಿನ ವಚನಗಳು ತಿಳಿಸುತ್ತವೆ?

1 ಥೆಸಲೊನೀಕ 5:3

ಪ್ರಕಟನೆ 17:⁠16

ದಾನಿಯೇಲ 2:⁠44

1. ಸದಾ ಎಚ್ಚರದಿಂದಿರಲು ಮತ್ತು ಸಂಕಷ್ಟಗಳನ್ನು ತಾಳಿಕೊಳ್ಳಲು ನಮಗೆ ಯಾವುದು ಸಹಾಯ ಮಾಡುತ್ತದೆ?

ಅತಿ ಶೀಘ್ರದಲ್ಲಿ ಭೂಮಿಯ ಮೇಲೆ ಎದೆನಡುಗಿಸುವ ಘಟನೆಗಳು ಸಂಭವಿಸಲಿವೆ. ಇದು ಸತ್ಯವೆಂದು ಬೈಬಲ್‌ ಪ್ರವಾದನೆಗಳ ನೆರವೇರಿಕೆಯು ರುಜುಪಡಿಸುತ್ತದೆ. ಹಾಗಾಗಿ ನಾವು ಸದಾ ಎಚ್ಚರದಿಂದಿರಬೇಕು. ಎಚ್ಚರದಿಂದಿರಲು ನಮಗೆ ಯಾವುದು ಸಹಾಯ ಮಾಡುವುದು? ಪೌಲ ಹೇಳಿದಂತೆ ‘ನಮ್ಮ ಕಣ್ಣುಗಳನ್ನು ಕಾಣದಿರುವಂಥ ಸಂಗತಿಗಳ ಮೇಲೆ’ ಇಡುವುದೇ. ಹೌದು, ಮುಂದೆ ನಮಗೆ ಶಾಶ್ವತ ಜೀವನವೆಂಬ ಉಡುಗೊರೆ ಸಿಗಲಿದೆ ಎನ್ನುವುದನ್ನು ನಾವು ಯಾವಾಗಲೂ ಮನಸ್ಸಿನಲ್ಲಿಡಬೇಕು. ಅದು ಅಭಿಷಿಕ್ತರಿಗಾದರೆ ಸ್ವರ್ಗದಲ್ಲಿ, ಮಹಾ ಸಮೂಹದವರಿಗಾದರೆ ಭೂಮಿಯಲ್ಲಿ. ಪೌಲನ ಆ ಮಾತುಗಳ ಪೂರ್ವಾಪರ ನೋಡುವಾಗ ಅವನು ಹಾಗೆ ಉತ್ತೇಜನ ಕೊಡಲು ಕಾರಣವೇನೆಂದು ತಿಳಿಯುತ್ತೇವೆ. ಅವನ ಜೊತೆ ವಿಶ್ವಾಸಿಗಳು ಕಷ್ಟ, ಹಿಂಸೆಗಳನ್ನು ಎದುರಿಸುತ್ತಿದ್ದರು. ಅಂಥ ಸಂದರ್ಭದಲ್ಲೂ ದೇವರಿಗೆ ನಂಬಿಗಸ್ತರಾಗಿ ಉಳಿಯಬೇಕಾದರೆ ತಮಗೆ ಮುಂದೆ ಸಿಗಲಿದ್ದ ಬಹುಮಾನದ ಮೇಲೆ ಗಮನ ನೆಡಬೇಕಿತ್ತು. ಇದು ತಾಳಿಕೊಳ್ಳಲು ಅವರಿಗೆ ಬಲ ಕೊಡಲಿತ್ತು.​—⁠2 ಕೊರಿಂ. 4:​8, 9, 16-18; 5:⁠7.

2. (1) ನಮ್ಮ ನಿರೀಕ್ಷೆಯನ್ನು ಹಚ್ಚಹಸುರಾಗಿಡಲು ನಾವೇನು ಮಾಡಬೇಕು? (2) ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ನಾವೇನನ್ನು ಪರಿಗಣಿಸಲಿದ್ದೇವೆ?

2 ಪೌಲ ಕೊಟ್ಟ ಉತ್ತೇಜನದಲ್ಲಿ ಒಂದು ಪ್ರಮುಖ ಪಾಠ ಅಡಗಿದೆ. ಅದೇನೆಂದರೆ, ನಮ್ಮ ನಿರೀಕ್ಷೆಯನ್ನು ಹಚ್ಚಹಸುರಾಗಿಡಲು ನಾವು ಮುಂದೆ ಸಂಭವಿಸಲಿರುವ ಕಣ್ಣಿಗೆ ಕಾಣದ ಘಟನೆಗಳ ಮೇಲೆ ಗಮನ ನೆಡಬೇಕು. (ಇಬ್ರಿ. 11:1; 12:​1, 2) ಆದ್ದರಿಂದ ಭವಿಷ್ಯದಲ್ಲಿ ಸಂಭವಿಸಲಿರುವ ಹತ್ತು ಘಟನೆಗಳನ್ನು ಈ ಲೇಖನ ಮತ್ತು ಮುಂದಿನ ಲೇಖನದಲ್ಲಿ ಪರಿಗಣಿಸೋಣ. ಅವು ನಮ್ಮ ನಿತ್ಯಜೀವದ ನಿರೀಕ್ಷೆಗೆ ನಿಕಟವಾಗಿ ಸಂಬಂಧಿಸಿವೆ.

ಅಂತ್ಯಕ್ಕೆ ಸ್ವಲ್ಪ ಮುಂಚೆ ಏನು ಸಂಭವಿಸಲಿದೆ?

3. (1) ಮುಂದೆ ನಡೆಯಲಿರುವ ಯಾವ ವಿಷಯವನ್ನು 1 ಥೆಸಲೊನೀಕ 5:​2, 3 ತಿಳಿಸುತ್ತದೆ? (2) ರಾಜಕೀಯ ಧುರೀಣರು ಏನು ಮಾಡುವರು? (3) ಅವರನ್ನು ಯಾರು ಜೊತೆಸೇರುವರು?

3 ಅಂತ್ಯಕ್ಕೆ ಮುಂಚೆ ಸಂಭವಿಸಲಿರುವ ಒಂದು ವಿಷಯದ ಕುರಿತು ಪೌಲ ಥೆಸಲೊನೀಕದವರಿಗೆ ಬರೆದ ಪತ್ರದಲ್ಲಿ ತಿಳಿಸುತ್ತಾನೆ. (1 ಥೆಸಲೊನೀಕ 5:​2, 3 ಓದಿ.) ಅದು “ಯೆಹೋವನ ದಿನ.” ಈ ದಿನ ಆರಂಭವಾಗುವುದು ಸುಳ್ಳು ಧರ್ಮ ನಾಶವಾಗುವಾಗ. ಕೊನೆಗೊಳ್ಳುವುದು ಅರ್ಮಗೆದೋನ್‌ ಯುದ್ಧದ ಅಂತ್ಯದಲ್ಲಿ. ಯೆಹೋವನ ದಿನ ಆರಂಭವಾಗುವುದಕ್ಕೆ ಸ್ವಲ್ಪ ಮುಂಚೆ ಲೋಕದ ಧುರೀಣರು “ಶಾಂತಿ ಮತ್ತು ಭದ್ರತೆ” ತಂದಿದ್ದೇವೆ ಎಂದು ಘೋಷಿಸುವುದನ್ನು ನಾವು ಕೇಳಿಸಿಕೊಳ್ಳುವೆವು. ಈ ಘೋಷಣೆಯನ್ನು ಅವರು ಒಮ್ಮೆ ಮಾಡಬಹುದು ಅಥವಾ ಹಲವಾರು ಬಾರಿ ಮಾಡಬಹುದು. ಕೆಲವು ಜಟಿಲ ಸಮಸ್ಯೆಗಳನ್ನು ತಾವಿನ್ನೇನು ಬಗೆಹರಿಸಲಿದ್ದೇವೆ ಎಂದು ಅವರು ನೆನಸಬಹುದು. ಧರ್ಮಗುರುಗಳು ಆಗ ಏನು ಮಾಡುವರು? ಈಗಾಗಲೇ ಲೋಕದ ಭಾಗವಾಗಿರುವ ಅವರು ರಾಜಕೀಯ ಧುರೀಣರೊಂದಿಗೆ ಕೈಜೋಡಿಸಬಹುದು. (ಪ್ರಕ. 17:​1, 2) ಹೀಗೆ ಧರ್ಮಗುರುಗಳು ಪ್ರಾಚೀನ ಯೆಹೂದದ ಸುಳ್ಳು ಪ್ರವಾದಿಗಳಂತೆ ಶಾಂತಿಯಿಲ್ಲದಿದ್ದರೂ “ಶಾಂತಿಯಿದೆ, ಶಾಂತಿಯಿದೆ” ಎಂದು ಹೇಳುತ್ತಿರುವರು.​—⁠ಯೆರೆ. 6:​14, NW; 23:​16, 17.

4. ಹೆಚ್ಚಿನ ಜನರು ತಿಳಿಯದಿರುವ ಯಾವ ವಿಷಯವನ್ನು ನಾವು ಗ್ರಹಿಸಿದ್ದೇವೆ?

4 “ಶಾಂತಿ ಮತ್ತು ಭದ್ರತೆ” ಎಂದು ಯಾರೇ ಘೋಷಿಸಲಿ ಒಟ್ಟಿನಲ್ಲಿ ಅದು ಯೆಹೋವನ ದಿನದ ಆರಂಭಕ್ಕೆ ಕೈತೋರಿಸುವುದು. ಆದ್ದರಿಂದಲೇ ಪೌಲ ಹೇಳಿದ್ದು: ‘ಸಹೋದರರೇ, ಆ ದಿನವು ಕಳ್ಳರ ಮೇಲೆ ಬರುವಂತೆ ನಿಮ್ಮ ಮೇಲೆ ಫಕ್ಕನೆ ಬರಬಾರದು, ಏಕೆಂದರೆ ನೀವು ಕತ್ತಲೆಯಲ್ಲಿಲ್ಲ. ನೀವೆಲ್ಲರೂ ಬೆಳಕಿನ ಪುತ್ರರಾಗಿದ್ದೀರಿ.’ (1 ಥೆಸ. 5:​4, 5) ಇಂದು ನಡೆಯುತ್ತಿರುವ ಲೋಕ ಘಟನೆಗಳಿಗೆ ಕಾರಣ ತಿಳಿಯದೆ ಜನ ಕಂಗಾಲಾಗಿದ್ದಾರೆ. ನಾವಾದರೋ ಬೈಬಲಿನ ಸಹಾಯದಿಂದ ಅದನ್ನು ಗ್ರಹಿಸಿದ್ದೇವೆ. “ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆಯ ಕುರಿತ ಪ್ರವಾದನೆ ನಿಖರವಾಗಿ ಹೇಗೆ ನೆರವೇರುವುದು? ನಾವದನ್ನು ಕಾದು ನೋಡಬೇಕಷ್ಟೆ. ಆದ್ದರಿಂದ ನಾವು “ಎಚ್ಚರವಾಗಿಯೂ ಸ್ವಸ್ಥಚಿತ್ತರಾಗಿಯೂ” ಉಳಿಯೋಣ.​—⁠1 ಥೆಸ. 5:6; ಚೆಫ. 3:⁠8.

ತಪ್ಪು ಲೆಕ್ಕಹಾಕಿದ “ರಾಣಿ”

5. (1) “ಮಹಾ ಸಂಕಟ” ಹೇಗೆ ಆರಂಭವಾಗುವುದು? (2) ತಪ್ಪು ಲೆಕ್ಕಾಚಾರ ಹಾಕುವ “ರಾಣಿ” ಯಾರು?

5 ಮುಂದೇನಾಗುತ್ತದೆ? “ ‘ಶಾಂತಿ ಮತ್ತು ಭದ್ರತೆ’ ಎಂದು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು . . . ಫಕ್ಕನೆ ಬರುವುದು” ಎಂದು ಪೌಲ ಹೇಳಿದನು. ‘ಫಕ್ಕನೆ ಬರಲಿರುವ’ ಆ ನಾಶನದ ಮೊದಲ ಹಂತದಲ್ಲಿ ಕ್ರೈಸ್ತಪ್ರಪಂಚ ಸೇರಿದಂತೆ ಎಲ್ಲ ಸುಳ್ಳು ಧರ್ಮಗಳ ಮೇಲೆ ಆಕ್ರಮಣವಾಗುವುದು. ಈ ಸುಳ್ಳು ಧರ್ಮಗಳನ್ನು “ಮಹಾ ಬಾಬೆಲ್‌” ಮತ್ತು “ವೇಶ್ಯೆ” ಎಂದು ಬೈಬಲ್‌ ಕರೆಯುತ್ತದೆ. (ಪ್ರಕ. 17:​5, 6, 15) ಈ ಆಕ್ರಮಣವೇ ‘ಮಹಾ ಸಂಕಟದ’ ಆರಂಭವಾಗಿದೆ. (ಮತ್ತಾ. 24:21; 2 ಥೆಸ. 2:⁠8) ಈ ಆಕ್ರಮಣ ಅನೇಕರನ್ನು ತಬ್ಬಿಬ್ಬುಗೊಳಿಸುವುದು. ಏಕೆ? ಏಕೆಂದರೆ ಅಲ್ಲಿಯ ವರೆಗೆ ‘ರಾಣಿಯಂತೆ’ ಮೆರೆದಿದ್ದ ಆ ವೇಶ್ಯೆ ತಾನು “ಶೋಕವನ್ನು . . . ಕಾಣುವುದೇ ಇಲ್ಲ” ಎಂದು ನೆನಸಿರುವಳು. ಆದರೆ ಅವಳ ಲೆಕ್ಕಾಚಾರ ತಪ್ಪಾಗುವುದು. ಅವಳಿಗೆ ಬದುಕುಳಿಯುವ ಅವಕಾಶವೇ ಇರುವುದಿಲ್ಲ. “ಒಂದೇ ದಿನ”ದಲ್ಲೋ ಎಂಬಂತೆ ಬೇಗನೆ ಅಳಿದು ಹೋಗುವಳು.​—⁠ಪ್ರಕ. 18:​7, 8.

6. ಸುಳ್ಳು ಧರ್ಮ ಯಾರಿಂದ ನಾಶವಾಗುವುದು?

6 ಆ ವೇಶ್ಯೆಯ ಮೇಲೆ ಆಕ್ರಮಣ ಮಾಡುವುದು ಯಾರು? ‘ಹತ್ತು ಕೊಂಬುಗಳಿರುವ’ “ಕಾಡುಮೃಗ” ಎನ್ನುತ್ತದೆ ಬೈಬಲ್‌. ಈ ಕಾಡುಮೃಗವು ವಿಶ್ವ ಸಂಸ್ಥೆಯಾಗಿದೆ ಎಂದು ಪ್ರಕಟನೆ ಪುಸ್ತಕದ ಅಧ್ಯಯನದಿಂದ ತಿಳಿಯುತ್ತೇವೆ. ‘ಹತ್ತು ಕೊಂಬುಗಳು’ ಆ ‘ಕಡುಗೆಂಪು ಬಣ್ಣದ ಕಾಡುಮೃಗಕ್ಕೆ’ ಈಗ ಬೆಂಬಲ ಕೊಡುವ ಎಲ್ಲ ಸರ್ಕಾರಗಳನ್ನು ಸೂಚಿಸುತ್ತವೆ. * (ಪ್ರಕ. 17:​3, 5, 11, 12) ಆ ಆಕ್ರಮಣ ಎಷ್ಟು ವಿಧ್ವಂಸಕರವಾಗಿ ಇರುವುದು? ವಿಶ್ವ ಸಂಸ್ಥೆಗೆ ಸೇರಿರುವ ರಾಷ್ಟ್ರಗಳೆಲ್ಲವು ವೇಶ್ಯೆಯ ಸಕಲ ಸಂಪತ್ತನ್ನು ಸೂರೆಮಾಡಿ ಅವಳ ನೀಚತನವನ್ನು ಬಯಲಿಗೆ ಎಳೆಯುವವು. ಅವಳನ್ನು ತಿಂದುಬಿಡುವವು. “ಬೆಂಕಿಯಿಂದ ಪೂರ್ಣವಾಗಿ ಸುಟ್ಟು” ಬಿಡುವವು. ಹೌದು, ಗುರುತೇ ಉಳಿಯದಂತೆ ನಾಶವಾಗುವಳು.​—⁠ಪ್ರಕಟನೆ 17:16 ಓದಿ.

7. “ಕಾಡು ಮೃಗವು” ವೇಶ್ಯೆಯ ಮೇಲೆ ಮಾಡುವ ಆಕ್ರಮಣ ಹೇಗೆ ಆರಂಭವಾಗುವುದು?

7 ಈ ಆಕ್ರಮಣ ಹೇಗೆ ಆರಂಭವಾಗುವುದೆಂದು ಕೂಡ ಬೈಬಲ್‌ ಪ್ರವಾದನೆ ತೋರಿಸುತ್ತದೆ. ಯೆಹೋವನು “ತನ್ನ ಯೋಚನೆಯನ್ನು” ಹೇಗೋ ರಾಜಕೀಯ ಮುಖಂಡರ ಹೃದಯದಲ್ಲಿ ಹಾಕುವನು. ಅಂದರೆ ವೇಶ್ಯೆಯನ್ನು ನಾಶಪಡಿಸುವಂತೆ ಮಾಡುವನು. (ಪ್ರಕ. 17:17) ಧರ್ಮವು ಯುದ್ಧ ಚಿತಾಯಿಸುತ್ತಾ ನಾನಾ ಸಮಸ್ಯೆಗಳನ್ನು ಹುಟ್ಟುಹಾಕುತ್ತಿರುತ್ತದೆ. ಹಾಗಾಗಿ ರಾಷ್ಟ್ರದ ಹಿತದೃಷ್ಟಿಯಲ್ಲಿ ಆ ವೇಶ್ಯೆಯನ್ನು ನಾಶಮಾಡುವುದೇ ಸರಿಯೆಂದು ರಾಜಕೀಯ ಮುಖಂಡರು ನೆನಸುವರು. ಹೀಗೆ ತಾವು ತಮ್ಮ “ಏಕ ಯೋಚನೆಯನ್ನು” ಕಾರ್ಯರೂಪಕ್ಕೆ ಹಾಕುತ್ತಿದ್ದೇವೆಂದು ನೆನಸುವರು. ಆದರೆ ವಾಸ್ತವದಲ್ಲಿ ಅವರು ಸುಳ್ಳು ಧರ್ಮಗಳನ್ನು ನಾಶಗೊಳಿಸಲು ದೇವರ ಕೈಯಲ್ಲಿ ಸಾಧನವಾಗಿರುವರು. ಸೈತಾನನ ಲೋಕದ ಒಂದು ಭಾಗವು ಇನ್ನೊಂದರ ಮೇಲೆ ಆಕ್ರಮಣ ಮಾಡುವುದು. ಇದನ್ನು ತಡೆಯಲು ಸೈತಾನನು ಎಷ್ಟೇ ಪ್ರಯತ್ನಿಸಿದರೂ ಅದು ಸಾಗದು.​—⁠ಮತ್ತಾ. 12:​25, 26.

ದೇವಜನರ ಮೇಲೆ ಆಕ್ರಮಣ

8. ‘ಮಾಗೋಗ್‌ ದೇಶದ ಗೋಗನ’ ಆಕ್ರಮಣ ಎಂದರೇನು?

8 ಸುಳ್ಳು ಧರ್ಮ ನಾಶವಾಗಿ ಹೋದರೂ ದೇವಜನರು “ನಿರ್ಭಯವಾಗಿ” ಇರುವರು. “ಗೋಡೆಗಳಿಲ್ಲದೆ” ವಾಸಿಸುತ್ತಿರುವರು. (ಯೆಹೆ. 38:​11, 14) ಯಾವ ಸಂರಕ್ಷಣೆಯೂ ಇಲ್ಲದಂತೆ ಕಾಣುವ ಇವರಿಗೆ ಏನಾಗುವುದು? ‘ಬಹುಜನಾಂಗಗಳಿಂದ’ ಅವರು ಒಮ್ಮೆಲೆ ಆಕ್ರಮಣಕ್ಕೆ ತುತ್ತಾಗುವರೇನೋ ಎಂಬಂತೆ ಕಾಣುವುದು. ಈ ಸನ್ನಿವೇಶವನ್ನು ‘ಮಾಗೋಗ್‌ ದೇಶದ ಗೋಗನು’ ಮಾಡುವ ಆಕ್ರಮಣ ಎಂದು ದೇವರ ವಾಕ್ಯ ವರ್ಣಿಸುತ್ತದೆ. (ಯೆಹೆಜ್ಕೇಲ 38:​2, 15, 16 ಓದಿ.) ಆ ಆಕ್ರಮಣಕ್ಕೆ ನಾವು ಹೆದರಬೇಕೋ?

9. (1) ಕ್ರೈಸ್ತರಾದ ನಮ್ಮ ಆದ್ಯ ಚಿಂತೆ ಏನಾಗಿದೆ? (2) ನಂಬಿಕೆ ಬಲಪಡಿಸಲು ಈಗ ನಾವೇನು ಮಾಡಬೇಕು?

9 ದೇವಜನರ ಮೇಲಾಗುವ ಆಕ್ರಮಣದ ಬಗ್ಗೆ ಮುಂದಾಗಿಯೇ ತಿಳಿದಿರುವ ನಾವು ಆಗ ಏನಾಗುವುದೋ ಎಂಬ ಚಿಂತೆಯಲ್ಲಿ ಮುಳುಗಿ ಹೋಗುವುದಿಲ್ಲ. ಏಕೆಂದರೆ ನಮ್ಮ ರಕ್ಷಣೆಯೇ ನಮ್ಮ ಆದ್ಯ ಚಿಂತೆಯಲ್ಲ. ಯೆಹೋವನ ನಾಮದ ಪವಿತ್ರೀಕರಣ, ಆತನ ಪರಮಾಧಿಕಾರದ ನಿರ್ದೋಷೀಕರಣವೇ ನಮಗೆ ಮಹತ್ವದ್ದು. “ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು” ಎಂದು ಯೆಹೋವನೇ 60ಕ್ಕಿಂತಲೂ ಹೆಚ್ಚು ಬಾರಿ ಹೇಳಿದ್ದಾನೆ. (ಯೆಹೆ. 6:⁠7) ಆದ್ದರಿಂದ ನಾವು ಯೆಹೆಜ್ಕೇಲನ ಪ್ರವಾದನೆಯ ಈ ಭಾಗ ನೆರವೇರುವುದನ್ನು ನೋಡಲು ತುಂಬ ಕಾತರದಿಂದಿದ್ದೇವೆ. ಜೊತೆಗೆ ‘ಯೆಹೋವನು ದೇವಭಕ್ತಿಯುಳ್ಳ ಜನರನ್ನು ಪರೀಕ್ಷೆಯಿಂದ ತಪ್ಪಿಸುವುದಕ್ಕೆ ತಿಳಿದವನಾಗಿದ್ದಾನೆ’ ಎಂಬ ಪೂರ್ಣ ಭರವಸೆ ನಮಗಿದೆ. (2 ಪೇತ್ರ 2:⁠9) ಅಲ್ಲಿಯ ವರೆಗೆ ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಶ್ರಮಪಡಬೇಕು. ಆಗ ಮಾತ್ರ ಏನೇ ಕಷ್ಟ ಬಂದರೂ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶಕ್ತರಾಗಿರುವೆವು. ನಂಬಿಕೆ ಬಲಪಡಿಸಲು ನಾವೇನು ಮಾಡಬೇಕು? ಪ್ರಾರ್ಥಿಸಬೇಕು. ದೇವರ ವಾಕ್ಯವನ್ನು ಅಧ್ಯಯನ ಮಾಡಿ ಧ್ಯಾನಿಸಬೇಕು. ದೇವರ ರಾಜ್ಯದ ಸುವಾರ್ತೆಯನ್ನು ಸಾರಬೇಕು. ಹೀಗೆ ಮಾಡುವಾಗ ನಿತ್ಯಜೀವದ ನಿರೀಕ್ಷೆ ‘ಲಂಗರದಂತೆ’ ದೃಢವಾಗಿರಬಲ್ಲದು.​—⁠ಇಬ್ರಿ. 6:19; ಕೀರ್ತ. 25:⁠21.

ಯೆಹೋವನೇ ದೇವರೆಂದು ಜನಾಂಗಗಳು ಒಪ್ಪಿಕೊಳ್ಳಬೇಕು

10, 11. (1) ಯಾವುದು ಅರ್ಮಗೆದೋನ್‌ ಯುದ್ಧದ ಆರಂಭವನ್ನು ಸೂಚಿಸುವುದು? (2) ಆ ಸಮಯದಲ್ಲಿ ಏನು ಸಂಭವಿಸುವುದು?

10 ಯೆಹೋವನ ಸೇವಕರ ಮೇಲೆ ಆಕ್ರಮಣವಾಗುವಾಗ ಏನು ಸಂಭವಿಸುವುದು? ದಿಗಿಲು ಹುಟ್ಟಿಸುವ ಘಟನೆಯೊಂದು ಸಂಭವಿಸುವುದು. ಯೇಸು ಮತ್ತು ಸ್ವರ್ಗೀಯ ಸೈನ್ಯದ ಮೂಲಕ ಯೆಹೋವನು ತನ್ನ ಜನರ ಪರವಾಗಿ ಯುದ್ಧ ಮಾಡುವನು. (ಪ್ರಕ. 19:​11-16) ಅದೇ “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ಅಂದರೆ ಅರ್ಮಗೆದೋನ್‌ ಯುದ್ಧ.​—⁠ಪ್ರಕ. 16:​14, 16.

11 ಆ ಯುದ್ಧದ ಕುರಿತು ಯೆಹೆಜ್ಕೇಲನ ಮೂಲಕ ಯೆಹೋವನು ಹೀಗಂದನು: “ಖಡ್ಗವು ನನ್ನ ಪರ್ವತಗಳಲ್ಲೆಲ್ಲಾ ಗೋಗನವರನ್ನು ಸಂಹರಿಸಲಿ ಎಂದು ಅಪ್ಪಣೆಕೊಡುವೆನು; ಒಬ್ಬರಿಂದೊಬ್ಬರು ಹತರಾಗುವರು.” ಸೈತಾನನ ಪಕ್ಷದವರ ಮೇಲೆ ಭಯ ಕವಿದಿರುವುದು. ದಿಗ್ಭ್ರಾಂತರಾದ ಅವರು ತಮ್ಮತಮ್ಮವರನ್ನೇ ಪರಸ್ಪರ ಹತಿಸಲು ಆರಂಭಿಸುವರು. ತದನಂತರ ಅವರ ಮೇಲೆ ವಿನಾಶದ ಬರಸಿಡಿಲು ಅಪ್ಪಳಿಸುವುದು. ಯೆಹೋವನು ಅನ್ನುವುದು: “ನಾನು ಗೋಗನ . . . ಮೇಲೂ ಅವನ [ದಂಡುಗಳ] ಮೇಲೂ ಅವನೊಂದಿಗಿರುವ ಬಹು ಜನಾಂಗಗಳ ಮೇಲೂ . . . ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು.” (ಯೆಹೆ. 38:​21, 22) ಫಲಿತಾಂಶ ಏನಾಗುವುದು?

12. ಜನಾಂಗಗಳು ಏನನ್ನು ಒಪ್ಪಿಕೊಳ್ಳಲೇಬೇಕಾಗುವುದು?

12 ತಾವು ನಾಶವಾಗುತ್ತಿರುವುದು ಯೆಹೋವನು ಅಪ್ಪಣೆ ಕೊಟ್ಟದ್ದರಿಂದಲೇ ಎಂದು ಜನಾಂಗಗಳು ಒಪ್ಪಿಕೊಳ್ಳಲೇಬೇಕಾಗುವುದು. ಇಸ್ರಾಯೇಲ್ಯರನ್ನು ಕೆಂಪು ಸಮುದ್ರದಲ್ಲಿ ಹಿಂದಟ್ಟಿದ ಪ್ರಾಚೀನ ಈಜಿಪ್ಟ್‌ ಸೈನ್ಯವು ನಾಶಕ್ಕೆ ತುತ್ತಾಯಿತು. ಆಗ ಆ ಸೈನ್ಯವು, “ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಾನೆ” ಎಂದು ನಿಸ್ಸಹಾಯಕತೆಯಿಂದ ಕೂಗಿಕೊಂಡಿತು. (ವಿಮೋ. 14:25) ಅರ್ಮಗೆದೋನ್‌ ಯುದ್ಧದಲ್ಲಿ ಸೈತಾನನ ಪಕ್ಷದವರು ಕೂಡ ಹಾಗೆಯೇ ಕೂಗಿಕೊಳ್ಳಬೇಕಾಗುವುದು. ಹೌದು, ಯೆಹೋವನೇ ದೇವರೆಂದು ಎಲ್ಲ ಜನಾಂಗಗಳು ಒಪ್ಪಿಕೊಳ್ಳಲೇಬೇಕಾಗುವುದು. (ಯೆಹೆಜ್ಕೇಲ 38:23 ಓದಿ.) ಈ ಸರಣಿ ಘಟನೆಗಳು ಸಂಭವಿಸುವುದಕ್ಕೆ ಇನ್ನೆಷ್ಟು ಸಮಯವಿದೆ?

ಬೇರೆ ಯಾವ ಲೋಕಶಕ್ತಿಯೂ ಉದಯಿಸುವುದಿಲ್ಲ

13. ದಾನಿಯೇಲ ವರ್ಣಿಸಿದ ಪ್ರತಿಮೆಯ ಐದನೇ ಭಾಗದ ಕುರಿತು ನಮಗೇನು ತಿಳಿದಿದೆ?

13 ಕಾಲಘಟ್ಟದಲ್ಲಿ ನಾವು ಎಲ್ಲಿದ್ದೇವೆಂದು ಅರ್ಥಮಾಡಿಕೊಳ್ಳಲು ದಾನಿಯೇಲ ಪುಸ್ತಕದಲ್ಲಿರುವ ಒಂದು ಪ್ರವಾದನೆ ನಮಗೆ ಸಹಾಯ ಮಾಡುತ್ತದೆ. ಆ ಪ್ರವಾದನೆಯಲ್ಲಿ ಮನುಷ್ಯ ರೂಪದ ಒಂದು ಪ್ರತಿಮೆಯನ್ನು ದಾನಿಯೇಲ ವರ್ಣಿಸುತ್ತಾನೆ. ಅದು ಬೇರೆ ಬೇರೆ ಲೋಹದಿಂದ ಕೂಡಿದೆ. (ದಾನಿ. 2:​28, 31-33) ಆ ಪ್ರತಿಮೆ ಪ್ರಾಚೀನಕಾಲದಿಂದ ಇಂದಿನ ವರೆಗೂ ದೇವಜನರ ಮೇಲೆ ನೇರವಾಗಿ ದ್ವೇಷಕಾರಿದ ಬೇರೆ ಬೇರೆ ಲೋಕಶಕ್ತಿಗಳನ್ನು ಸೂಚಿಸುತ್ತದೆ. ಅವುಗಳೆಂದರೆ ಬಾಬೆಲ್‌, ಮೇದ್ಯ-ಪಾರಸೀಯ, ಗ್ರೀಸ್‌, ರೋಮ್‌ ಮತ್ತು ಕೊನೆಯದ್ದು ನಮ್ಮ ಸಮಯದಲ್ಲಿರುವ ಲೋಕಶಕ್ತಿ. ಪ್ರತಿಮೆಯ ಹೆಜ್ಜೆಗಳು ಮತ್ತು ಕಾಲ್ಬೆರಳುಗಳು ಈ ಕೊನೆಯ ಲೋಕಶಕ್ತಿಯನ್ನು ಸೂಚಿಸುತ್ತವೆಂದು ದಾನಿಯೇಲ ಪ್ರವಾದನೆಯ ಅಧ್ಯಯನ ತೋರಿಸುತ್ತದೆ. ಒಂದನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್‌ ಮತ್ತು ಅಮೆರಿಕ ಜೊತೆಗೂಡಿ ಪ್ರಬಲ ರೀತಿಯಲ್ಲಿ ಕಾರ್ಯವೆಸಗಿದವು. ಹೀಗೆ ಕೊನೆಯ ಲೋಕಶಕ್ತಿಯಾಗಿ ಆಂಗ್ಲೋ-ಅಮೆರಿಕ ಉದಯವಾಯಿತು. ಇದುವೇ ದಾನಿಯೇಲ ತಿಳಿಸಿದ ಪ್ರತಿಮೆಯ ಐದನೇ ಭಾಗವಾಗಿದೆ. ಪ್ರತಿಮೆಯಲ್ಲಿ ಕೊನೇ ಭಾಗ ಹೆಜ್ಜೆಗಳಾಗಿರುವುದರಿಂದ ಮುಂದೆ ಬೇರೆ ಯಾವ ಲೋಕಶಕ್ತಿಯೂ ಉದಯಿಸುವುದಿಲ್ಲ ಎನ್ನುವುದು ಸ್ಪಷ್ಟ. ಪ್ರತಿಮೆಯ ಹೆಜ್ಜೆಗಳಲ್ಲಿ ಕಬ್ಬಿಣದೊಂದಿಗೆ ಮಣ್ಣು ಮಿಶ್ರಿತವಾಗಿದೆ. ಇದು ಆಂಗ್ಲೋ-ಅಮೆರಿಕನ್‌ ಲೋಕಶಕ್ತಿಯ ದುರ್ಬಲ ಸ್ಥಿತಿಯನ್ನು ಸೂಚಿಸುತ್ತದೆ.

14. ಅರ್ಮಗೆದೋನ್‌ ಯುದ್ಧ ಆರಂಭವಾಗುವಾಗ ಯಾವ ಲೋಕಶಕ್ತಿ ಆಳ್ವಿಕೆ ನಡೆಸುತ್ತಿರುವುದು?

14 ಅದೇ ಪ್ರವಾದನೆ ಲೋಹದ ಪ್ರತಿಮೆ ಹೇಗೆ ನುಚ್ಚುನೂರಾಗುವುದು ಎಂದು ತಿಳಿಸುತ್ತದೆ. ದೇವರ ರಾಜ್ಯವನ್ನು ಚಿತ್ರಿಸುವ ದೊಡ್ಡ ಗುಂಡು ಬಂಡೆಯು 1914ರಲ್ಲಿ ಯೆಹೋವನ ಪರಮಾಧಿಕಾರವೆಂಬ ಬೆಟ್ಟದೊಳಗಿಂದ ಒಡೆದು ಬಂತು. ಅದು ಪ್ರತಿಮೆಯ ಹೆಜ್ಜೆಗಳಿಗೆ ಬಡಿಯಲು ವೇಗವಾಗಿ ಮುನ್ನುಗ್ಗಿ ಬರುತ್ತಿದೆ. ಆ ಬಂಡೆ ಅರ್ಮಗೆದೋನ್‌ ಯುದ್ಧದಲ್ಲಿ ಪ್ರತಿಮೆಯ ಹೆಜ್ಜೆಗೆ ಬಡಿದು ಇಡೀ ಪ್ರತಿಮೆಯನ್ನು ಪುಡಿಪುಡಿ ಮಾಡುತ್ತದೆ. (ದಾನಿಯೇಲ 2:​44, 45 ಓದಿ.) ಹೀಗೆ ಅರ್ಮಗೆದೋನ್‌ ಆರಂಭವಾಗುವಾಗ ಆಂಗ್ಲೋ-ಅಮೆರಿಕನ್‌ ಲೋಕಶಕ್ತಿಯೇ ಆಳ್ವಿಕೆ ನಡೆಸುತ್ತಿರುವುದು. ಈ ಪ್ರವಾದನೆ ಸಂಪೂರ್ಣವಾಗಿ ನೆರವೇರುವಾಗ ನಾವದಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಿರುವುದು ಎಂಥ ರೋಮಾಂಚಕ ಅನುಭವ! * ಯೆಹೋವನು ಸೈತಾನನಿಗೆ ಏನು ಮಾಡುವನು?

ದೇವರ ಪ್ರಧಾನ ವೈರಿಗೆ ಏನಾಗುವುದು?

15. ಅರ್ಮಗೆದೋನ್‌ನ ಬಳಿಕ ಸೈತಾನನಿಗೂ ಅವನ ದೆವ್ವಗಳಿಗೂ ಏನಾಗುವುದು?

15 ಸೈತಾನನು ತನ್ನ ಕಣ್ಮುಂದೆಯೇ ತನ್ನ ಸಂಘಟನೆ ಪೂರ್ತಿಯಾಗಿ ನಾಶವಾಗುವುದನ್ನು ನೋಡುವನು. ಅನಂತರ ಯೆಹೋವನ ಗುರಿ ಸೈತಾನನ ಕಡೆಗೆ. ಅವನಿಗೆ ಏನಾಗುತ್ತದೆಂದು ಅಪೊಸ್ತಲ ಯೋಹಾನ ತಿಳಿಸುತ್ತಾನೆ. (ಪ್ರಕಟನೆ 20:​1-3 ಓದಿ.) ‘ಅಗಾಧ ಸ್ಥಳದ ಬೀಗದ ಕೈಯನ್ನು’ ಹೊಂದಿರುವ ಯೇಸು ಕ್ರಿಸ್ತನು ಸೈತಾನನನ್ನೂ ಅವನ ದೆವ್ವಗಳನ್ನೂ ಒಂದು ಸಾವಿರ ವರ್ಷಗಳ ವರೆಗೆ ಬಂಧನದಲ್ಲಿಡುವನು. (ಲೂಕ 8:​30, 31; 1 ಯೋಹಾ. 3:⁠8) ಈ ಕಾರ್ಯವು ಸರ್ಪನ ತಲೆಯನ್ನು ಜಜ್ಜುವುದರ ಆರಂಭದ ಹಂತವಾಗಿದೆ. *​—⁠ಆದಿ. 3:⁠15.

16. ಸೈತಾನನು ‘ಅಗಾಧ ಸ್ಥಳದಲ್ಲಿ’ ಇರುವುದರ ಅರ್ಥವೇನು?

16 ಸೈತಾನನೂ ಅವನ ದೆವ್ವಗಳೂ ದೊಬ್ಬಲ್ಪಡುವ ಆ “ಅಗಾಧ ಸ್ಥಳ” ಏನಾಗಿದೆ? “ಅಗಾಧ ಸ್ಥಳ” ಎನ್ನುವುದಕ್ಕೆ ಯೋಹಾನ ಉಪಯೋಗಿಸಿದ ಆವೀಸಾಸ್‌ ಎಂಬ ಗ್ರೀಕ್‌ ಪದ “ತುಂಬ ಅಥವಾ ಅತೀ ಆಳ” ಎಂಬರ್ಥ ಕೊಡುತ್ತದೆ. ಆ ಗ್ರೀಕ್‌ ಪದವನ್ನು “ಊಹಿಸಲಸಾಧ್ಯವಾದ, ಕೊನೆಯಿಲ್ಲದ” ಮತ್ತು “ಮಹಾಕೂಪ” ಎಂದು ಕೂಡ ಅನುವಾದಿಸಲಾಗಿದೆ. ಆದ್ದರಿಂದ ಆ ಸ್ಥಳಕ್ಕೆ ಯೆಹೋವನು ಮತ್ತು ‘ಅಗಾಧ ಸ್ಥಳದ ಬೀಗದ ಕೈಯನ್ನು’ ಹೊಂದಿರುವ ನೇಮಿತ ದೇವದೂತನನ್ನು ಬಿಟ್ಟರೆ ಬೇರೆ ಯಾರಿಂದಲೂ ಹೋಗಲು ಸಾಧ್ಯವಿಲ್ಲ. ಮರಣ ಹೊಂದಿದಾಗ ಹೇಗೋ ಹಾಗೆ ಸೈತಾನನು ಅಲ್ಲಿ ನಿಷ್ಕ್ರಿಯನಾಗಿ ಬಿದ್ದಿರುವನು. ‘ಜನಾಂಗಗಳನ್ನು ಮರುಳುಗೊಳಿಸಲು’ ಅವನಿಂದ ಇನ್ನೆಂದೂ ಆಗದು. ಈಗ “ಗರ್ಜಿಸುವ ಸಿಂಹ” ಆಗ ತೆಪ್ಪಗಾಗುವುದು.​—⁠1 ಪೇತ್ರ 5:⁠8.

ಶಾಂತಿಯುತ ಸಮಯಾವಧಿಗೆ ನಡೆಸುವ ಘಟನೆಗಳು

17, 18. (1) ಮುಂದೆ ಸಂಭವಿಸಲಿರುವ ಯಾವ ಘಟನೆಗಳ ಕುರಿತು ನಾವು ಈ ವರೆಗೆ ಚರ್ಚಿಸಿದೆವು? (2) ಆ ಘಟನೆಗಳ ಬಳಿಕ ಯಾವ ಸಮಯಾವಧಿ ಆರಂಭಗೊಳ್ಳುವುದು?

17 ಭೂಮಿಯನ್ನೇ ಅದುರಿಸುವ ಮಹತ್ವಪೂರ್ಣ ಘಟನೆಗಳು ಮುಂದೆ ಸಂಭವಿಸಲಿವೆ. ನಾವೀಗ ಮುನ್ನೋಡುತ್ತಿರುವುದು “ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆ ಹೇಗೆ ಬರಲಿದೆ ಎಂದು. ಬಳಿಕ ಮಹಾ ಬಾಬೆಲ್‌ನ ನಾಶನ, ಮಾಗೋಗ್‌ ದೇಶದ ಗೋಗನ ಆಕ್ರಮಣ, ಅರ್ಮಗೆದೋನ್‌ ಯುದ್ಧ ಇವೆಲ್ಲದ್ದಕ್ಕೆ ನಾವು ಸಾಕ್ಷಿಗಳಾಗುವೆವು. ಆಮೇಲೆ ಸೈತಾನ, ಅವನ ದೆವ್ವಗಳು ಅಗಾಧ ಸ್ಥಳಕ್ಕೆ ದೊಬ್ಬಲ್ಪಡುವವು. ಈ ಎಲ್ಲ ಘಟನೆಗಳ ನಂತರ ದುಷ್ಟತನ ಸಂಪೂರ್ಣವಾಗಿ ಭೂಮಿಯಿಂದ ತೊಲಗಿರುವುದು. ಬಳಿಕ ನಮ್ಮ ಬದುಕಿನಲ್ಲಿ ಒಂದು ಹೊಸ ಅಧ್ಯಾಯ ಶುರುವಾಗುವುದು. ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆ ಕೆಳಗೆ ನಾವು “ಬಹಳ ಸಮಾಧಾನದಲ್ಲಿ” ಜೀವಿಸುತ್ತಾ ಹರ್ಷಾನಂದದಲ್ಲಿ ತೇಲುತ್ತಿರುವೆವು.​—⁠ಕೀರ್ತ. 37:​10, 11.

18 ‘ಕಾಣದಿರುವಂಥ ಸಂಗತಿಗಳಲ್ಲಿ’ ಅಂದರೆ ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳಲ್ಲಿ ಐದನ್ನು ಈ ವರೆಗೆ ನಾವು ಪರಿಗಣಿಸಿದೆವು. ಕಾಣದಿರುವಂಥ ಇನ್ನೂ ಕೆಲವು ಸಂಗತಿಗಳಿವೆ. ಅವುಗಳ ಮೇಲೂ ನಾವು ಗಮನ ನೆಡಬೇಕು. ಅವನ್ನು ಮುಂದಿನ ಲೇಖನ ಚರ್ಚಿಸುತ್ತದೆ.

[ಪಾದಟಿಪ್ಪಣಿಗಳು]

^ ಪ್ಯಾರ. 6 ಪ್ರಕಟನೆ​—⁠ಅದರ ಮಹಾ ಪರಮಾವಧಿಯು ಹತ್ತಿರ! ಪುಟ 251-258 ನೋಡಿ.

^ ಪ್ಯಾರ. 14 ಆ ರಾಜ್ಯಗಳನ್ನೆಲ್ಲಾ ನಿರ್ನಾಮಮಾಡುವುದು’ ಎಂದು ದಾನಿಯೇಲ 2:44 ಹೇಳುವಾಗ ಅದು ಪ್ರತಿಮೆಯ ಅಂಗಗಳಿಂದ ಸೂಚಿತವಾದ ರಾಜ್ಯಗಳನ್ನು ಅಂದರೆ ಲೋಕಶಕ್ತಿಗಳನ್ನು ಸೂಚಿಸುತ್ತದೆ. ದಾನಿಯೇಲನ ಪ್ರವಾದನೆಗೆ ಸರಿಹೋಲುವ ಇನ್ನೊಂದು ಪ್ರವಾದನೆಯು ‘ಸರ್ವಶಕ್ತನಾದ ದೇವರ ಮಹಾ ದಿನದಲ್ಲಿ ಇಡೀ ನಿವಾಸಿತ ಭೂಮಿಯ ರಾಜರು ಯೆಹೋವನ ವಿರುದ್ಧ ಒಟ್ಟುಗೂಡಿಸಲ್ಪಡುವರು ಎಂದು ತಿಳಿಸುತ್ತದೆ. (ಪ್ರಕ. 16:14; 19:​19-21) ಆದ್ದರಿಂದ ಅರ್ಮಗೆದೋನ್‌ ಯುದ್ಧದಲ್ಲಿ ಪ್ರತಿಮೆಯಿಂದ ಸೂಚಿತವಾದ ರಾಜ್ಯಗಳು ಮಾತ್ರವಲ್ಲ ಈ ಲೋಕದ ಎಲ್ಲ ಸರ್ಕಾರಗಳು ನಾಶವಾಗುವವು.

^ ಪ್ಯಾರ. 15 ಒಂದು ಸಾವಿರ ವರ್ಷಗಳ ಬಳಿಕ ಸೈತಾನನನ್ನೂ ಅವನ ದೆವ್ವಗಳನ್ನೂ “ಬೆಂಕಿಗಂಧಕಗಳ ಕೆರೆಗೆ” ದೊಬ್ಬುವಾಗ ಸರ್ಪದ ತಲೆಯನ್ನು ಪೂರ್ಣವಾಗಿ ಜಜ್ಜಿದಂತಾಗುವುದು.​—⁠ಪ್ರಕ. 20:​7-10; ಮತ್ತಾ. 25:⁠41.

[ಅಧ್ಯಯನ ಪ್ರಶ್ನೆಗಳು]

[ಪುಟ 4, 5ರಲ್ಲಿರುವ ಚೌಕ/ಚಿತ್ರಗಳು]

ಮುಂದೆ ನಡೆಯಲಿರುವ ಐದು ಘಟನೆಗಳು:

1 “ಶಾಂತಿ ಮತ್ತು ಭದ್ರತೆ” ಎಂಬ ಘೋಷಣೆ

2 “ಮಹಾ ಬಾಬೆಲ್‌” ಮೇಲೆ ಸರ್ಕಾರಗಳ ಆಕ್ರಮಣ ಮತ್ತು ಮಹಾ ಬಾಬೆಲ್‌ನ ನಾಶನ

3 ಯೆಹೋವನ ಜನರ ಮೇಲೆ ಆಕ್ರಮಣ

4 ಅರ್ಮಗೆದೋನ್‌ ಯುದ್ಧ

5 ಸೈತಾನ ಮತ್ತು ಅವನ ದೆವ್ವಗಳು ಅಗಾಧ ಸ್ಥಳಕ್ಕೆ