ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೆಳೆತನಕ್ಕೆ 60 ವಯಸ್ಸು ಆದರೂ ಇನ್ನೂ ಹೊಸತು

ಗೆಳೆತನಕ್ಕೆ 60 ವಯಸ್ಸು ಆದರೂ ಇನ್ನೂ ಹೊಸತು

ಜೀವನ ಕ

ಗೆಳೆತನಕ್ಕೆ 60 ವಯಸ್ಸು ಆದರೂ ಇನ್ನೂ ಹೊಸತು

1951ರ ಬೇಸಿಗೆಯ ಒಂದು ಸಂಜೆ. ಅಮೆರಿಕದ ನ್ಯೂಯಾರ್ಕ್‌ನ ಇಥಕ ಎಂಬಲ್ಲಿ 20ರ ಹರೆಯದಲ್ಲಿದ್ದ ನಾಲ್ಕು ತರುಣರು ಸಾಲಾಗಿ ಇದ್ದ ಟೆಲಿಫೋನ್‌ ಬೂತ್‌ಗಳಿಗೆ ಓಡಿದರು. ಎಂದೂ ಇಲ್ಲದ ಸಂತೋಷ ಸಂಭ್ರಮ ಅವರಲ್ಲಿ. ಮಿಶಿಗನ್‌, ಐವ, ಕ್ಯಾಲಿಫೋರ್ನಿಯ ಹೀಗೆ ದೂರದೂರದ ಸ್ಥಳಗಳಿಗೆ ಫೋನಾಯಿಸಿದರು. ಮನೆಯವರಿಗೆ ಸಿಹಿ ಸುದ್ದಿ ಹೇಳುವ ತವಕ ಅವರಿಗೆ!

ಅದೇ ವರ್ಷದ ಫೆಬ್ರವರಿಯಲ್ಲಿ 122 ಪಯನೀಯರರು 17ನೇ ಗಿಲ್ಯಡ್‌ ಶಾಲೆಯನ್ನು ಹಾಜರಾಗಲು ನ್ಯೂಯಾರ್ಕ್‌ನ ಸೌತ್‌ ಲಾನ್ಸಿಂಗ್‌ಗೆ ಬಂದಿಳಿದರು. ಈ ಭಾವೀ ಮಿಷನರಿಗಳಲ್ಲಿ ಲೋವಲ್‌ ಟರ್ನರ್‌, ವಿಲಿಯಂ (ಬಿಲ್‌) ಕ್ಯಾಸ್ಟನ್‌, ರಿಚರ್ಡ್‌ ಕೆಲ್ಸೀ ಮತ್ತು ರೇಮನ್‌ ಟೆಂಪಲ್ಟನ್‌ ಇದ್ದರು. ಲೋವಲ್‌ ಮತ್ತು ಬಿಲ್‌ ಬಂದದ್ದು ಮಿಶಿಗನ್‌ನಿಂದ, ರಿಚರ್ಡ್‌ ಬಂದದ್ದು ಐವದಿಂದ, ರೇಮನ್‌ ಬಂದದ್ದು ಕ್ಯಾಲಿಫೋರ್ನಿಯದಿಂದ. ಬೇಗನೆ ಇವರೆಲ್ಲರೂ ಒಳ್ಳೇ ಸ್ನೇಹಿತರಾದರು.

ಐದು ತಿಂಗಳ ನಂತರ ಮುಖ್ಯ ಕಾರ್ಯಾಲಯದಿಂದ ಸಹೋದರ ನೇತನ್‌ ನಾರ್‌ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಲಿದ್ದಾರೆ ಎಂದು ಪ್ರಕಟಿಸಲಾಯಿತು. ಎಲ್ಲರೂ ಸಂತೋಷದಿಂದ ಪುಳಕಿತರಾದರು. ಆ ನಾಲ್ವರು ಸಹೋದರರು ಅವಕಾಶ ಸಿಕ್ಕರೆ ಒಟ್ಟಿಗೆ ಒಂದೇ ಕಡೆ ಸೇವೆ ಮಾಡುವ ಮನದಿಚ್ಛೆಯನ್ನು ಮುಂಚೆಯೇ ವ್ಯಕ್ತಪಡಿಸಿದ್ದರು. ಯಾವ ದೇಶದಲ್ಲಿ ಮಿಷನರಿ ನೇಮಕ ಸಿಗುತ್ತದೆಂದು ಗೊತ್ತಾಗುವ ಕ್ಷಣ ಈಗ ಬಂದಿತ್ತು!

ಸಹೋದರ ನಾರ್‌ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡುತ್ತಾ ವಿದೇಶೀ ನೇಮಕಗಳನ್ನು ಪ್ರಕಟಿಸಲು ಆರಂಭಿಸಿದರು. ಎಲ್ಲರ ಕುತೂಹಲ ತಾರಕಕ್ಕೇರಿತು. ಮೊದಲು ಈ ನಾಲ್ವರನ್ನು ವೇದಿಕೆಗೆ ಕರೆದಾಗ ಅವರಲ್ಲಿ ತಳಮಳ. ಆದರೆ ಒಂದೇ ಸ್ಥಳಕ್ಕೆ ಅವರನ್ನು ನೇಮಿಸಲಾಗಿದೆಯೆಂದು ಪ್ರಕಟಿಸಿದಾಗ ನೆಮ್ಮದಿಯ ನಿಟ್ಟುಸಿರು. ನೇಮಕ ಎಲ್ಲಿಗೆ? ಜರ್ಮನಿಗೆ! ಬೆರಗಾದ ಸಹಪಾಠಿಗಳು ಜೋರಾಗಿ ಚಪ್ಪಾಳೆ ತಟ್ಟಿದರು. ಎಷ್ಟೋ ಹೊತ್ತು ಅದು ನಿಲ್ಲಲೇ ಇಲ್ಲ.

1933ರಿಂದ ಜರ್ಮನಿಯಲ್ಲಿ ಹಿಟ್ಲರನ ಆಡಳಿತದ ಕೆಳಗೆ ಸಹೋದರರು ನಂಬಿಗಸ್ತರಾಗಿ ಉಳಿದದ್ದು ಜಗತ್ತಿನಾದ್ಯಂತ ಯೆಹೋವನ ಸಾಕ್ಷಿಗಳೆಲ್ಲರಿಗೆ ಅಚ್ಚರಿಯ ವಿಷಯವಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಹಾನಿಗೊಳಗಾದ ಯೂರೋಪಿನ ಸಹೋದರರಿಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಸಹಾಯ ಮಾಡಿದ್ದನ್ನು ಬಹುತೇಕ ವಿದ್ಯಾರ್ಥಿಗಳು ನೆನಪಿಸಿಕೊಂಡರು. ಜರ್ಮನಿಯಲ್ಲಿನ ದೇವಜನರು ಬಲವಾದ ನಂಬಿಕೆಗೆ, ದೃಢಸಂಕಲ್ಪಕ್ಕೆ, ಎದೆಗಾರಿಕೆಗೆ ಮತ್ತು ಯೆಹೋವನ ಮೇಲಿನ ಭರವಸೆಗೆ ಆದರ್ಶರಾಗಿದ್ದರು. ‘ಆ ಪ್ರಿಯ ಸಹೋದರ ಸಹೋದರಿಯರನ್ನು ಮುಖಾಮುಖಿಯಾಗಿ ನೋಡಿ ತಿಳಿದುಕೊಳ್ಳುವ ಅವಕಾಶ ನಮಗಿದೆ’ ಎಂದು ಖುಷಿಪಟ್ಟದ್ದಾಗಿ ಲೋವಲ್‌ ನೆನಪಿಸಿಕೊಳ್ಳುತ್ತಾರೆ. ಆ ಸಂಜೆ ನಾಲ್ವರು ಸಡಗರದಿಂದ ಫೋನ್‌ ಕಾಲ್‌ಗಳನ್ನು ಮಾಡುತ್ತಿದ್ದದ್ದು ಈ ಸಿಹಿಸುದ್ದಿಯನ್ನು ಹಂಚಿಕೊಳ್ಳಲಿಕ್ಕಾಗಿಯೇ!

ಜರ್ಮನಿಯತ್ತ ಪಯಣ

ಈ ನಾಲ್ವರು ಸ್ನೇಹಿತರು ಜರ್ಮನಿಗೆ 11 ದಿನಗಳ ಹಡಗಿನ ಪ್ರಯಾಣ ಕೈಗೊಂಡರು. ಅವರಿದ್ದ ‘ಹೋಮ್‌ಲ್ಯಾಂಡ್‌’ ಎಂಬ ಹಡಗು ನ್ಯೂಯಾರ್ಕ್‌ನ ಈಸ್ಟ್‌ ರಿವರ್‌ ಬಂದರಿನಿಂದ ಹೊರಟದ್ದು 1951ರ ಜುಲೈ 27ರಂದು. ಗಿಲ್ಯಡ್‌ ಶಾಲೆಯ ಶಿಕ್ಷಕರಲ್ಲಿ ಒಬ್ಬರಾದ (ನಂತರ ಆಡಳಿತ ಮಂಡಳಿಯ ಸದಸ್ಯರಾದ) ಆಲ್ಬರ್ಟ್‌ಶ್ರೋಡರ್‌ ಜರ್ಮನ್‌ ಭಾಷೆಯಲ್ಲಿ ಒಂದೆರಡು ಮಾತುಗಳನ್ನು ಅವರಿಗೆ ಕಲಿಸಿದ್ದರು. ಹಡಗಿನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಜರ್ಮನ್ನರಾಗಿದ್ದರು. ಭಾಷೆ ಕಲಿಯಲು ಇದೊಂದು ಒಳ್ಳೇ ಅವಕಾಶವೆಂದು ನಾಲ್ವರಿಗೂ ಅನಿಸಿತು. ಆದರೆ ಪ್ರಯಾಣಿಕರು ಜರ್ಮನ್‌ ಭಾಷೆಯನ್ನು ಮಾತಾಡುತ್ತಿದ್ದರಾದರೂ ಶೈಲಿ ಭಿನ್ನಭಿನ್ನವಾಗಿತ್ತು. ಇದು ಆ ಮಿತ್ರರನ್ನು ಇನ್ನಷ್ಟು ತಬ್ಬಿಬ್ಬುಗೊಳಿಸಿತು!

ಸಮುದ್ರಯಾನದಲ್ಲಾಗುವ ತಲೆಸುತ್ತು ವಾಕರಿಕೆಯನ್ನು ಸಹಿಸಿಕೊಂಡು ಹೇಗೂ ಆಗಸ್ಟ್‌ 7ರ ಮಂಗಳವಾರ ಬೆಳಗ್ಗೆ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಕಾಲಿಟ್ಟರು. ಎತ್ತ ನೋಡಿದರೂ ಅವರ ಕಣ್ಣಿಗೆ ಬಿದ್ದದ್ದು 6 ವರ್ಷಗಳ ಹಿಂದೆ ಕೊನೆಗೊಂಡ ಎರಡನೇ ಮಹಾಯುದ್ಧದ ಕುರುಹುಗಳು. ಅದನ್ನು ನೋಡಿ ಅವರು ಮನನೊಂದರು. ಅನಂತರ ಅಲ್ಲಿಂದ ಬ್ರಾಂಚ್‌ ಆಫೀಸ್‌ ಇದ್ದ ವೀಸ್‌ಬಾಡನ್‌ಗೆ ರೈಲಿನಲ್ಲಿ ರಾತ್ರಿ ಪ್ರಯಾಣ ಕೈಗೊಂಡರು.

ಬುಧವಾರ ಬೆಳ್ಳಂಬೆಳಗ್ಗೆ ವೀಸ್‌ಬಾಡನ್‌ ತಲುಪಿದರು. ಅವರನ್ನ ಕರಕೊಂಡು ಹೋಗಲು ಪಕ್ಕಾ ಜರ್ಮನ್‌ ಹೆಸರಿನ ಸಹೋದರ ಹಾನ್ಸ್‌ ರೈಲ್ವೆ ಸ್ಟೇಷನ್‌ಗೆ ಬಂದಿದ್ದರು. ಜರ್ಮನಿಗೆ ಬಂದ ಮೇಲೆ ಆ ಸ್ನೇಹಿತರು ಭೇಟಿಯಾದ ಮೊದಲ ಸಾಕ್ಷಿ ಇವರೇ. ಬೆತೆಲ್‌ಗೆ ಕರಕೊಂಡು ಬಂದು ವೃದ್ಧ ಸಹೋದರಿಯೊಬ್ಬರನ್ನು ಪರಿಚಯಿಸಿ ಹೋಗಿ ಬಿಟ್ಟರು. ಆ ಸಹೋದರಿ ದೃಢ ಸ್ವಭಾವದವರು. ಇಂಗ್ಲಿಷ್‌ ಬರುತ್ತಿರಲಿಲ್ಲ. ಜೋರಾಗಿ ಮಾತಾಡಿದರೆ ತಾನು ಹೇಳೋದು ಅವರಿಗೆ ಅರ್ಥವಾಗುತ್ತದೆ ಎಂದು ಆ ಸಹೋದರಿ ಅಂದುಕೊಂಡಿದ್ದಿರಬೇಕು. ಆಕೆ ಸ್ವರವನ್ನು ಜಾಸ್ತಿ ಮಾಡುತ್ತಾ ಹೋದಂತೆ ಆಕೆಗೂ ಆ ನಾಲ್ವರಿಗೂ ಕಸಿವಿಸಿ. ಕೊನೆಗೆ ಬ್ರಾಂಚ್‌ ಸೇವಕರಾದ ಸಹೋದರ ಎರಿಕ್‌ ಅಲ್ಲಿ ಬಂದು ಇವರನ್ನು ಇಂಗ್ಲಿಷ್‌ನಲ್ಲಿ ಹಾರ್ದಿಕವಾಗಿ ಸ್ವಾಗತಿಸಿದರು. ಅಲ್ಲಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸತೊಡಗಿತು.

ಜರ್ಮನಿಯಲ್ಲಿ ಆ ನಾಲ್ವರು “ಶುಭ್ರ ಆರಾಧನೆ” ಎಂಬ ಅಧಿವೇಶನಕ್ಕೆ ಹಾಜರಾದರು. ಇದು ಅವರ ಜರ್ಮನ್‌ ಭಾಷೆಯ ಪ್ರಪ್ರಥಮ ಅಧಿವೇಶನ. ಆಗಸ್ಟ್‌ ತಿಂಗಳ ಕೊನೆಯಲ್ಲಿ ನಡೆದ ಆ ಅಧಿವೇಶನಕ್ಕೆ 47,432 ಮಂದಿ ಹಾಜರಾಗಿದ್ದರು. ದೀಕ್ಷಾಸ್ನಾನ ಪಡೆದವರು 2,373 ಮಂದಿ. ಇದನ್ನು ನೋಡಿದ ಆ ನಾಲ್ಕು ಸ್ನೇಹಿತರಿಗೆ ಮಿಷನರಿ ಸೇವೆ ಮಾಡುವ ಹುಮ್ಮಸ್ಸು ಹೆಚ್ಚಾಯಿತು. ಆದರೆ ಕೆಲವೇ ದಿನಗಳಲ್ಲಿ ಆಗಿದ್ದೆ ಬೇರೆ. ಬೆತೆಲಿನಲ್ಲಿಯೇ ಇದ್ದು ಕೆಲಸ ಮಾಡುವಂತೆ ನೇಮಿಸಲಾಗಿದೆ ಎಂದು ಅವರಿಗೆ ಸಹೋದರ ನಾರ್‌ ತಿಳಿಸಿದರು.

ಸಹೋದರ ರೇಮನ್‌ಗೆ ಈ ಮುಂಚೆ ಅಮೆರಿಕದ ಬೆತೆಲ್‌ನಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿದ್ದರೂ ಅವರ ಮನಸ್ಸು ಮಿಷನರಿ ಸೇವೆಯ ಮೇಲಿದ್ದದರಿಂದ ಅದನ್ನು ಕೈಬಿಟ್ಟಿದ್ದರು. ರಿಚರ್ಡ್‌ ಆಗಲಿ ಬಿಲ್‌ ಆಗಲಿ ಬೆತೆಲ್‌ ಸೇವೆಯನ್ನು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಆದರೂ ಎಲ್ಲರು ಬೆತೆಲ್‌ ಸೇವೆಯನ್ನು ಸ್ವೀಕರಿಸಿದರು. ತಮ್ಮ ತಮ್ಮ ನೇಮಕಗಳಲ್ಲಿ ಪಡೆದ ಆನಂದ ‘ನಮಗೆ ಯಾವುದು ಒಳ್ಳೇದೆಂದು ಯೆಹೋವನಿಗೆ ಗೊತ್ತು’ ಎಂದು ಅವರಿಗೆ ಮನವರಿಕೆ ಮಾಡಿಸಿತು. ಸ್ವಂತ ಇಷ್ಟದ ಪ್ರಕಾರವೇ ನಡೆಯುವುದಕ್ಕಿಂತ ಯೆಹೋವನು ಮಾರ್ಗದರ್ಶಿಸುವಂತೆಯೇ ನಡೆಯುವುದು ವಿವೇಕಯುತ. ಈ ಸತ್ಯವನ್ನು ಯಾರು ಅರಿತಿರುತ್ತಾರೋ ಅವರು ಯೆಹೋವನು ಕೊಡುವ ನೇಮಕ ಯಾವುದೇ ಆಗಿರಲಿ ಎಲ್ಲಿಗೇ ಆಗಿರಲಿ ಅದನ್ನು ಸಂತೋಷದಿಂದ ಮಾಡುವರು.

ಫರ್ಬೋಟನ್‌!

ಅಮೆರಿಕದವರು ತಮ್ಮೊಟ್ಟಿಗೆ ಇರುವುದರಿಂದ ಜರ್ಮನಿಯ ಬೆತೆಲ್‌ ಕುಟುಂಬದವರಿಗೆ ತುಂಬ ಖುಷಿಯಾಯಿತು. ತಾವು ಇಂಗ್ಲಿಷ್‌ ಮಾತಾಡುವ ಅಭ್ಯಾಸ ಮಾಡಿಕೊಳ್ಳಬಹುದು ಎಂದು ಲೆಕ್ಕಹಾಕಿದರು. ಆದರೆ ಒಂದಿನ ಅವರ ಆಸೆ ನುಚ್ಚು ನೂರಾಯಿತು. ಊಟದ ಹಾಲ್‌ನಲ್ಲಿ ಸಹೋದರ ಫ್ರಾಸ್ಟ್‌ ಉತ್ಸಾಹದಿಂದ ಗಟ್ಟಿಸ್ವರದಲ್ಲಿ ಜರ್ಮನ್‌ ಭಾಷೆಯಲ್ಲಿ ಏನೋ ಮಾತಾಡಲು ಶುರುಮಾಡಿದರು. ಅದು ಗಂಭೀರ ವಿಷಯ ಎಂಬಂತೆ ಕಂಡಿತು. ಯಾರೂ ತುಟಿಕ್‌ಪಿಟಿಕ್‌ ಅನ್ನಲಿಲ್ಲ, ತಲೆ ಮೇಲೆತ್ತಲಿಲ್ಲ. ಈ ನಾಲ್ವರಿಗೆ ಮಾತ್ರ ಒಂದು ಮಾತೂ ಅರ್ಥವಾಗದಿದ್ದರೂ ತಮ್ಮ ಬಗ್ಗೆಯೇ ಏನೋ ಹೇಳುತ್ತಿದ್ದಾರೆ ಎಂದು ಗೊತ್ತಾಯಿತು. “ಫರ್ಬೋಟನ್‌!” (“ನಿಷೇಧಿಸಲಾಗಿದೆ!”) ಎಂದು ಸಹೋದರ ಫ್ರಾಸ್ಟ್‌ ಪುನಃ ಪುನಃ ಗುಡುಗಿದಾಗ ಈ ಸ್ನೇಹಿತರಲ್ಲಿ ಒಳಗೊಳಗೆ ತಳಮಳ. ಇವರು ಅಂಥದ್ದೇನು ಮಾಡಿದ್ದರು?

ಊಟ ಮುಗಿದ ನಂತರ ಎಲ್ಲರೂ ತಮ್ಮ ತಮ್ಮ ರೂಮಿಗೆ ದೌಡಾಯಿಸಿದರು. ಅನಂತರ ಒಬ್ಬ ಸಹೋದರ “ನೀವು ನಮಗೆ ಸಹಾಯ ಮಾಡಬೇಕಾದರೆ ಜರ್ಮನ್‌ ಭಾಷೆ ಮಾತಾಡಲು ಕಲೀಬೇಕು. ಅದಕ್ಕಾಗಿಯೇ ನೀವು ಭಾಷೆ ಕಲಿಯೋ ವರೆಗೂ ನಿಮ್ಮೊಟ್ಟಿಗೆ ಇಂಗ್ಲಿಷ್‌ ಮಾತಾಡುವುದು ಫರ್ಬೋಟನ್‌ ಎಂದು ಸಹೋದರ ಫ್ರಾಸ್ಟ್‌ ಹೇಳಿದರು” ಎಂದು ವಿವರಿಸಿದರು.

ಕೂಡಲೇ ಎಲ್ಲರೂ ಇದಕ್ಕೆ ವಿಧೇಯರಾದರು. ಹೀಗೆ ಮಾಡಿದ್ದರಿಂದ ಈ ನಾಲ್ವರು ಜರ್ಮನ್‌ ಮಾತಾಡಲು ಕಲಿತರು. ಮಾತ್ರವಲ್ಲ ಸಹೋದರರು ಕೊಡುವ ಪ್ರೀತಿಪರ ಸಲಹೆ ಅನ್ವಯಿಸಲಿಕ್ಕೆ ಕಷ್ಟವಾದರೂ ಅದನ್ನು ಅನ್ವಯಿಸುವುದರಿಂದ ತಮಗೇ ಒಳಿತೆಂದು ಕಲಿತುಕೊಂಡರು. ಸಹೋದರ ಫ್ರಾಸ್ಟ್‌ರವರಿಗೆ ಯೆಹೋವನ ಸಂಘಟನೆಯ ಕುರಿತು ಹಿತಚಿಂತನೆ ಮತ್ತು ಸಹೋದರರ ಮೇಲೆ ಪ್ರೀತಿ ಇದೆ ಎಂದು ಅವರ ಸಲಹೆ ತೋರಿಸಿತು. * ನಂತರ ನಾಲ್ಕೂ ಸ್ನೇಹಿತರಿಗೆ ಆ ಸಹೋದರನ ಮೇಲೆ ಪ್ರೀತಿ ಹೆಚ್ಚಾಯಿತು.

ಸ್ನೇಹಿತರ ಸದ್ಗುಣಗಳು

ದೇವಭಯವುಳ್ಳ ಸ್ನೇಹಿತರಿಂದ ಅಮೂಲ್ಯ ಪಾಠಗಳನ್ನು ಕಲಿಯಬಹುದು. ಈ ಮೂಲಕ ಯೆಹೋವನ ಒಳ್ಳೇ ಗೆಳೆಯರಾಗಬಹುದು. ಜರ್ಮನಿಯ ಅನೇಕ ನಂಬಿಗಸ್ತ ಸಹೋದರ ಸಹೋದರಿಯರಿಂದ ಈ ಸ್ನೇಹಿತರು ಅನೇಕ ವಿಷಯಗಳನ್ನು ಕಲಿತರು. ಮಾತ್ರವಲ್ಲ ಈ ನಾಲ್ವರು ಪರಸ್ಪರರಿಂದ ಕೂಡ ಕಲಿಯಲು ಸಾಧ್ಯವಾಯಿತು. “ಜರ್ಮನ್‌ ಭಾಷೆಯ ಬಗ್ಗೆ ಲೋವಲ್‌ಗೆ ಒಂದಿಷ್ಟು ತಿಳಿದಿತ್ತು. ಆದ್ದರಿಂದ ಅವನಿಗೆ ಅಷ್ಟೇನೂ ಕಷ್ಟವಾಗಲಿಲ್ಲ. ನಾವು ಮಾತ್ರ ಚಡಪಡಿಸುತ್ತಿದ್ದೆವು. ಅವನೇ ನಮ್ಮೆಲ್ಲರಿಗಿಂತ ದೊಡ್ಡವನಾಗಿದ್ದರಿಂದ ಭಾಷೆಯ ವಿಷಯದಲ್ಲಾಗಲಿ ಮುಂದಾಳತ್ವಕ್ಕಾಗಲಿ ಅವನ ಕಡೆಗೆ ನೋಡುತ್ತಿದ್ವಿ” ಎಂದು ರಿಚರ್ಡ್‌ ವಿವರಿಸುತ್ತಾರೆ. ರೇಮನ್‌ ಕೂಡ ಹೀಗೆ ನೆನಪಿಸಿಕೊಳ್ಳುತ್ತಾರೆ: “ಜರ್ಮನಿಗೆ ಬಂದು ಒಂದು ವರ್ಷದ ನಂತರ ಮೊದಲ ಸಲ ರಜೆಯಲ್ಲಿ ಸ್ವಿಟ್ಜರ್ಲೆಂಡ್‌ಗೆ ಹೋಗಿದ್ವಿ. ಒಬ್ಬ ಸಹೋದರರು ಅಲ್ಲಿದ್ದ ತಮ್ಮ ಮನೆಯನ್ನು ಉಪಯೋಗಿಸಲು ಹೇಳಿದಾಗ ನನಗೆ ಎಲ್ಲಿಲ್ಲದ ಖುಷಿ! ಎರಡು ವಾರ ನೆಮ್ಮದಿ. ಜರ್ಮನ್‌ ಭಾಷೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ನೆನಸಿದೆ! ಲೋವಲ್‌ ಕೂಡ ಹೀಗೆಯೇ ನೆನಸಿರಬಹುದೆಂದು ಅಂದುಕೊಂಡಿದ್ದೆ. ಆದರೆ ಲೋವಲ್‌ ಪ್ರತಿನಿತ್ಯ ದಿನದ ವಚನವನ್ನು ಜರ್ಮನ್‌ ಭಾಷೆಯಲ್ಲಿಯೇ ಓದಿ ಚರ್ಚಿಸೋಣ ಎಂದು ಹೇಳಿದಾಗ ನನಗೆ ತುಂಬ ನಿರಾಶೆಯಾಯಿತು. ಆದರೂ ಲೋವಲ್‌ ಮಾತ್ರ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ಇದರಿಂದ ನಾವೆಲ್ಲರು ಒಳ್ಳೆಯ ಪಾಠವನ್ನು ಕಲಿತೆವು. ನಿಮ್ಮ ಬಗ್ಗೆ ಯಾರಿಗೆ ಕಳಕಳಿಯಿದೆಯೋ ಅವರು ಹೇಳೋದನ್ನ ಕೇಳಿ. ಅದು ನಿಮಗಿಷ್ಟವಿಲ್ಲದಿದ್ದರೂ ಕೂಡ. ವರ್ಷಗಳಿಂದಲೂ ನಾವು ಇದೇ ಮನೋಭಾವವನ್ನು ಇಟ್ಟುಕೊಂಡಿದ್ದರಿಂದ ನಮಗೆ ತುಂಬ ಪ್ರಯೋಜನವಾಗಿದೆ. ದೈವಿಕ ಮಾರ್ಗದರ್ಶನೆಗೆ ಅಧೀನರಾಗಿರಲು ಸಹ ಸುಲಭವಾಗಿದೆ.”

“ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ” ಎಂದು ಫಿಲಿಪ್ಪಿ 2:3 ಹೇಳುವಂತೆ ಈ ನಾಲ್ವರು ಪರಸ್ಪರರ ಒಳ್ಳೇ ಗುಣಗಳನ್ನು ಪ್ರಶಂಸಿಸಲು ಕಲಿತರು. ಕೆಲವು ವಿಷಯಗಳನ್ನು ಬಿಲ್‌ ಉಳಿದ ಮೂವರಿಗಿಂತ ಉತ್ತಮವಾಗಿ ನಿರ್ವಹಿಸಲು ಸಮರ್ಥನಾಗಿದ್ದ. ಆದ್ದರಿಂದ ಅಂಥ ವಿಷಯಗಳನ್ನು ಅವನಿಗೇ ವಹಿಸುತ್ತಿದ್ದರು. ಲೋವಲ್‌ ತಮ್ಮ ನೆನಪಿನ ಬುತ್ತಿಯನ್ನು ಹೀಗೆ ಬಿಚ್ಚಿಟ್ಟರು: “ಜಟಿಲವಾದ ಸಮಸ್ಯೆ ಎದುರಾದರೆ ನಾವು ಬಿಲ್‌ ಹತ್ತಿರ ಹೋಗುತ್ತಿದ್ವಿ. ಅದನ್ನು ನಿಭಾಯಿಸುವ ‘ನ್ಯಾಕ್‌’ ಅವನಿಗಿತ್ತು. ನಾವೆಲ್ಲರು ಮಾತಾಡಿ ಒಂದು ತೀರ್ಮಾನಕ್ಕೆ ಬಂದರೂ ಅದನ್ನು ಕಾರ್ಯರೂಪಕ್ಕೆ ಹಾಕಲು ಧೈರ್ಯ, ಸಾಮರ್ಥ್ಯ ನಮ್ಮೂವರಿಗೆ ಇರಲಿಲ್ಲ.”

ಸಂತೋಷದ ವಿವಾಹಗಳು

ಒಬ್ಬೊಬ್ಬರಾಗಿ ನಾಲ್ಕೂ ಮಿತ್ರರು ಮದುವೆಯಾಗಲು ನಿರ್ಧರಿಸಿದರು. ಅವರ ಮಿತ್ರತ್ವ ಯೆಹೋವನ ಮೇಲಿನ ಪ್ರೀತಿ ಮತ್ತು ಪೂರ್ಣಸಮಯದ ಸೇವೆಯ ಮೇಲೆ ಬೇರೂರಿತ್ತು. ಹಾಗಾಗಿ ಯೆಹೋವನನ್ನು ತಮ್ಮ ಜೀವನದಲ್ಲಿ ಅತೀ ಪ್ರಾಮುಖ್ಯ ವ್ಯಕ್ತಿಯನ್ನಾಗಿ ಪರಿಗಣಿಸುವ ಸಂಗಾತಿಗಳನ್ನೇ ಹುಡುಕಿದರು. ತೆಗೆದುಕೊಳ್ಳುವುದಕ್ಕಿಂತ ಕೊಡುವುದು ಹೆಚ್ಚು ಆಶೀರ್ವಾದಗಳನ್ನು ತರುತ್ತದೆಂದು ಪೂರ್ಣಸಮಯದ ಸೇವೆ ಅವರಿಗೆ ಕಲಿಸಿತ್ತು. ಮಾತ್ರವಲ್ಲ ಸ್ವಂತ ಇಚ್ಛೆಗಳಿಗಿಂತ ದೇವರ ಸೇವೆಗೆ ಪ್ರಥಮ ಸ್ಥಾನ ಕೊಡಬೇಕೆಂದು ಕಲಿಸಿತ್ತು. ಆದ್ದರಿಂದ ಸ್ವಇಚ್ಛೆಯಿಂದ ಪೂರ್ಣಸಮಯದ ಸೇವೆಯನ್ನು ಸ್ವೀಕರಿಸಿದ್ದ ಸಹೋದರಿಯರನ್ನು ಆರಿಸಿಕೊಂಡರು. ಫಲಿತಾಂಶವಾಗಿ ನಾಲ್ವರೂ ಯಶಸ್ವೀ ಹಾಗೂ ಸಂತೋಷದ ದಾಂಪತ್ಯ ಜೀವನವನ್ನು ಆನಂದಿಸಿದರು.

ಗೆಳೆತನವಾಗಲಿ ಮದುವೆಯಾಗಲಿ ಯಶಸ್ವಿಯಾಗಬೇಕಾದರೆ ಯೆಹೋವನು ಅವರ ಮಧ್ಯೆ ಇರುವಂತೆ ನೋಡಿಕೊಳ್ಳಬೇಕು. (ಪ್ರಸಂ. 4:12) ಬಿಲ್‌ ಮತ್ತು ರೇಮನ್‌ ಕಾಲಾನಂತರ ಸಂಗಾತಿಯನ್ನು ಕಳೆದುಕೊಂಡರೂ ಅಷ್ಟರವರೆಗೆ ತಮ್ಮ ನಂಬಿಗಸ್ತ ಪತ್ನಿಯರಿಂದ ಪ್ರೀತಿ ಬೆಂಬಲವನ್ನು ಪಡೆದಿದ್ದರು. ಲೋವಲ್‌ ಮತ್ತು ರಿಚರ್ಡ್‌ ಈಗಲೂ ತಮ್ಮ ನಂಬಿಗಸ್ತ ಪತ್ನಿಯರಿಂದ ಬೆಂಬಲ ಪಡೆಯುತ್ತಿದ್ದಾರೆ. ಬಿಲ್‌ ಮರುಮದುವೆಯಾದರು. ಸಂಗಾತಿಯ ವಿಷಯದಲ್ಲಿ ಅವರು ಮಾಡಿದ ವಿವೇಕಯುತ ಆಯ್ಕೆ ಪೂರ್ಣಸಮಯದ ಸೇವೆಯಲ್ಲಿ ಮುಂದುವರಿಯಲು ಸಹಾಯಮಾಡಿತು.

ತದನಂತರದ ವರ್ಷಗಳಲ್ಲಿ ತಮಗೆ ಸಿಕ್ಕಿದ ನೇಮಕಗಳಿಂದಾಗಿ ಬೇರೆ ಬೇರೆ ದೇಶಗಳಿಗೆ ಹೋದರು. ಹೆಚ್ಚಾಗಿ ಜರ್ಮನಿ, ಆಸ್ಟ್ರಿಯ, ಲಕ್ಸೆಂಬರ್ಗ್‌, ಕೆನಡ ಮತ್ತು ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆ ಸಮಯದಲ್ಲಿ ನಾಲ್ಕು ಸ್ನೇಹಿತರು ಬಯಸಿದಂತೆಲ್ಲ ಜೊತೆಯಾಗಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ದೂರದೂರದಲ್ಲಿದ್ದರೂ ಅವರು ಸಂಪರ್ಕದಲ್ಲಿದ್ದರು. ಪರಸ್ಪರರಿಗೆ ಸಿಕ್ಕ ಆಶೀರ್ವಾದಗಳಲ್ಲಿ ಸಂತೋಷಿಸುತ್ತಿದ್ದರು. ದುಃಖವನ್ನು ಹಂಚಿಕೊಂಡು ಸಂತೈಸುತ್ತಿದ್ದರು. (ರೋಮ. 12:15) ಆ ರೀತಿಯ ಗೆಳೆಯರು ನಿಜಕ್ಕೂ ಅಮೂಲ್ಯರು. ಅಂಥ ಗೆಳೆಯರು ನಮಗಿರುವುದಕ್ಕಾಗಿ ಕೃತಜ್ಞರಾಗಿರಬೇಕು. ಯೆಹೋವನ ಅತ್ಯಮೂಲ್ಯ ಕೊಡುಗೆ ಅವರು. (ಜ್ಞಾನೋ. 17:17) ಇಂದಿನ ಲೋಕದಲ್ಲಿ ಇಂಥ ನಿಜ ಸ್ನೇಹಿತರು ಅಪರೂಪವೇ ಸರಿ! ಆದರೆ ಪ್ರತಿಯೊಬ್ಬ ನಿಜ ಕ್ರೈಸ್ತನಿಗೆ ಅಂಥ ಸ್ನೇಹಿತರ ಬರವಿಲ್ಲ. ಯೆಹೋವನ ಸಾಕ್ಷಿಯಾಗಿರುವ ನಾವು ಪ್ರಪಂಚದಾದ್ಯಂತ ಇರುವ ನಮ್ಮ ನಂಬಿಗಸ್ತ ಸಾಕ್ಷಿಗಳೊಂದಿಗೆ ಗೆಳೆತನದಲ್ಲಿ ಆನಂದಿಸುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವ ದೇವರೊಂದಿಗೆ ಮತ್ತು ಯೇಸು ಕ್ರಿಸ್ತನೊಂದಿಗೆ ಸ್ನೇಹ ಬೆಳೆಸುವ ಸೌಭಾಗ್ಯ ನಮಗಿದೆ.

ಎಲ್ಲರಂತೆ ಈ ನಾಲ್ವರ ಬಾಳಹಾದಿಯಲ್ಲೂ ಕೆಲವೊಮ್ಮೆ ಕಲ್ಲು ಮುಳ್ಳುಗಳಿದ್ದವು. ಪತ್ನಿಯನ್ನು ಕಳೆದುಕೊಂಡ ದುಃಖ, ಗಂಭೀರ ಕಾಯಿಲೆಯಿಂದ ಬಳಲುವಾಗ ಆಗುವ ಮಾನಸಿಕ ಒತ್ತಡ, ವೃದ್ಧ ತಂದೆ-ತಾಯಿಯ ಕಾಳಜಿ ವಹಿಸುವುದು, ಪೂರ್ಣ ಸಮಯದ ಸೇವೆಯಲ್ಲಿದ್ದುಕೊಂಡು ಮಗುವನ್ನು ಬೆಳೆಸುವ ಪರಿಪಾಟು, ಹೊಸ ನೇಮಕಗಳನ್ನು ಸ್ವೀಕರಿಸುವಾಗ ಉಂಟಾಗುವ ಅಳುಕು ಮತ್ತು ಈಗ ವೃದ್ಯಾಪ್ಯದಲ್ಲಿ ಹೆಚ್ಚುತ್ತಿರುವ ಕಷ್ಟಕಾರ್ಪಣ್ಯಗಳು. ಆದರೆ ಅವರು ಸ್ವಂತ ಅನುಭವದಿಂದ ಕಲಿತ ವಿಷಯವೇನೆಂದರೆ ಯೆಹೋವನನ್ನು ಪ್ರೀತಿಸುವವರಿಗೆ ಯಾವುದೇ ಸಮಸ್ಯೆ ಬರಲಿ ಅದನ್ನು ನಿಭಾಯಿಸಲು ಸ್ನೇಹಿತರ ಸಹಾಯಹಸ್ತ ಇದ್ದೇ ಇರುತ್ತದೆ. ಆ ಸ್ನೇಹಿತರು ಕಣ್ಣೆದುರೆ ಇರಬಹುದು, ದೂರದೂರದಲ್ಲಿ ಇರಬಹುದು ಅಥವಾ ಅದೃಶ್ಯರಾಗಿರುವ ಯೆಹೋವ ಮತ್ತು ಯೇಸುವಾಗಿರಬಹುದು.

ಚಿರಕಾಲದ ಗೆಳೆತನ

ಲೋವಲ್‌ 18ನೇ ವಯಸ್ಸಿನಲ್ಲಿ, ರೇಮನ್‌ 12ರಲ್ಲಿ, ಬಿಲ್‌ 11ರಲ್ಲಿ ಮತ್ತು ರಿಚರ್ಡ್‌ 10ನೇ ವಯಸ್ಸಿನಲ್ಲಿ ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡರು. 17ರಿಂದ 21ರ ಪ್ರಾಯದಲ್ಲಿ ಪೂರ್ಣಸಮಯದ ಸೇವೆಯನ್ನು ಆರಂಭಿಸಿದರು. ಪ್ರಸಂಗಿ 12:1ರಲ್ಲಿ ಹೇಳಿರುವ “ಯೌವನದಲ್ಲಿಯೇ ನಿನ್ನ [ಮಹಾನ್‌] ಸೃಷ್ಟಿಕರ್ತನನ್ನು ಸ್ಮರಿಸು” ಎಂಬ ಮಾತಿನಂತೆಯೇ ನಡೆದದ್ದು ಎಷ್ಟೊಂದು ಮನಸ್ಪರ್ಶಿ.

ನೀವೊಬ್ಬ ಯುವ ಸಹೋದರನಾಗಿದ್ದರೆ ಮತ್ತು ಪರಿಸ್ಥಿತಿ ಅನುಮತಿಸುವುದಾದರೆ ಪೂರ್ಣಸಮಯದ ಸೇವೆ ಮಾಡಲು ಯೆಹೋವನು ಕೊಡುವ ಆಮಂತ್ರಣಕ್ಕೆ ಓಗೊಡಿ. ಯೆಹೋವನ ಅಪಾತ್ರ ದಯೆಯಿಂದ ನೀವು ಕೂಡ ಆತನ ಸೇವೆಯಲ್ಲಿ ಈ ನಾಲ್ವರು ಸ್ನೇಹಿತರಂತೆ ಸಂತೋಷವನ್ನು ಅನುಭವಿಸುವಿರಿ. ಈ ಗೆಳೆಯರು ಸರ್ಕಿಟ್‌, ಡಿಸ್ಟ್ರಿಕ್ಟ್‌ ಮತ್ತು ಜೋನ್‌ ಮೇಲ್ವಿಚಾರಕರಾಗಿ, ಬೆತೆಲ್‌ನಲ್ಲಿ, ಬ್ರಾಂಚ್‌ ಕಮಿಟಿಯ ಸದಸ್ಯರಾಗಿ, ರಾಜ್ಯ ಶುಶ್ರೂಷಾ ಶಾಲೆ ಮತ್ತು ಪಯನೀಯರ್‌ ಸೇವಾ ಶಾಲೆಯಲ್ಲಿ ಬೋಧಕರಾಗಿ ಸೇವೆಸಲ್ಲಿಸಿದರು. ಚಿಕ್ಕ ದೊಡ್ಡ ಅಧಿವೇಶನಗಳಲ್ಲಿ ಭಾಷಣ ನೀಡುವ ಸುಯೋಗ ಅವರಿಗಿತ್ತು. ತಮ್ಮ ಈ ಸೇವೆಯಿಂದ ಸಹಸ್ರಾರು ಜನರು ಪ್ರಯೋಜನ ಪಡೆದಿದ್ದಾರೆಂದು ತಿಳಿದ ಅವರ ಸಂತೋಷಕ್ಕೆ ಪಾರವೇ ಇಲ್ಲ. ಇದೆಲ್ಲಾ ಸಾಧ್ಯವಾಗಿದ್ದು ಪೂರ್ಣ ಹೃದಯದಿಂದ ಸೇವೆಮಾಡಲು ಯೆಹೋವನು ನೀಡಿದ ಆಮಂತ್ರಣವನ್ನು ಯೌವನದಲ್ಲೇ ಸ್ವೀಕರಿಸಿದ್ದರಿಂದ.​—⁠ಕೊಲೊ. 3:⁠23.

ಲೋವಲ್‌, ರಿಚರ್ಡ್‌ ಮತ್ತು ರೇಮನ್‌ ಪುನಃವೊಮ್ಮೆ ಒಟ್ಟಾಗಿ ಈಗ ಸೆಲ್ಟರ್ಸ್‌ನಲ್ಲಿರುವ ಜರ್ಮನಿ ಬ್ರಾಂಚ್‌ ಆಫೀಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದುಃಖದ ಸಂಗತಿ ಏನೆಂದರೆ ಅಮೆರಿಕದಲ್ಲಿ ವಿಶೇಷ ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದ ಬಿಲ್‌ 2010ರಲ್ಲಿ ತೀರಿಕೊಂಡರು. ನಾಲ್ವರ ಈ ವಿಶೇಷವಾದ 60 ಸಂವತ್ಸರಗಳ ಗೆಳೆತನಕ್ಕೆ ಮರಣ ತಡೆಯೊಡ್ಡಿತು. ಆದರೆ ನಮ್ಮ ದೇವರಾದ ಯೆಹೋವನು ತನ್ನ ಸ್ನೇಹಿತರನ್ನು ಎಂದಿಗೂ ಮರೆಯಲ್ಲ. ಮರಣದಿಂದ ತಾತ್ಕಾಲಿಕವಾಗಿ ಮುರಿದುಹೋಗಿರುವ ಸ್ನೇಹ ದೇವರ ರಾಜ್ಯದ ಆಳ್ವಿಕೆಯ ಕೆಳಗೆ ಪುನಃ ಬೆಸೆದುಕೊಳ್ಳುವುದು ಎನ್ನುವುದರಲ್ಲಿ ಸಂಶಯವೇ ಇಲ್ಲ.

ಸಾಯುವ ಸ್ವಲ್ಪ ಸಮಯದ ಮುಂಚೆ ಬಿಲ್‌ ಹೀಗೆ ಬರೆದರು: “ನಮ್ಮ 60 ವರ್ಷಗಳ ಗೆಳೆತನದಲ್ಲಿ ಒಂದೇ ಒಂದು ಅಹಿತಕರ ಘಟನೆ ನಡೆದದ್ದಿಲ್ಲ. ನಮ್ಮ ಈ ಸ್ನೇಹ ಯಾವಾಗಲೂ ನನಗೆ ಅತಿ ವಿಶೇಷವಾಗಿತ್ತು.” ಇನ್ನುಳಿದ ಗೆಳೆಯರು ಹೊಸಲೋಕದಲ್ಲಿ ಚಿರಕಾಲ ಉಳಿಯುವ ನಾಲ್ವರ ಗೆಳೆತನವನ್ನು ನೆನಸಿ ತಕ್ಷಣ ಹೀಗೆ ಪ್ರತಿಕ್ರಿಯಿಸಿದರು: “ನಮ್ಮ ಸ್ನೇಹ ಇನ್ನೂ ಹೊಸತು.”

[ಪಾದಟಿಪ್ಪಣಿ]

^ ಪ್ಯಾರ. 17 ಸಹೋದರ ಫ್ರಾಸ್ಟ್‌ರವರ ಆಸಕ್ತಿಕರ ಜೀವನ ಕಥೆ 1961 ಏಪ್ರಿಲ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪುಟ 244-249ರಲ್ಲಿದೆ.

[ಪುಟ 18ರಲ್ಲಿರುವ ಸಂಕ್ಷಿಪ್ತ ವಿವರಣೆ]

ತಮ್ಮ ತಮ್ಮ ನೇಮಕಗಳಲ್ಲಿ ಪಡೆದ ಆನಂದ ‘ನಮಗೆ ಯಾವುದು ಒಳ್ಳೇದೆಂದು ಯೆಹೋವನಿಗೆ ಗೊತ್ತು’ ಎಂದು ಅವರಿಗೆ ಮನವರಿಕೆ ಮಾಡಿಸಿತು

[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಮ್ಮ 60 ವರ್ಷಗಳ ಗೆಳೆತನದಲ್ಲಿ ಒಂದೇ ಒಂದು ಅಹಿತಕರ ಘಟನೆ ನಡೆದದ್ದಿಲ್ಲ”

[ಪುಟ 17ರಲ್ಲಿರುವ ಚಿತ್ರ]

ಎಡದಿಂದ ಬಲ: ಗಿಲ್ಯಡ್‌ನಲ್ಲಿ ಸ್ನೇಹಿತರಾದ ರಿಚರ್ಡ್‌, ಲೋವಲ್‌, ರೇಮನ್‌, ಬಿಲ್‌

[ಪುಟ 18ರಲ್ಲಿರುವ ಚಿತ್ರಗಳು]

ಮೇಲೆ: ರಾಜ್ಯ ಶುಶ್ರೂಷಾ ಶಾಲೆಯ ತರಗತಿಯನ್ನು ನಡೆಸುತ್ತಿರುವ ರೇಮನ್‌; ಬಲ: ವಿಳಾಸವನ್ನು ಮುದ್ರಿಸುವ ಯಂತ್ರದಲ್ಲಿ ರಿಚರ್ಡ್‌ ಕೆಲಸ ಮಾಡುತ್ತಿರುವುದು, ವೀಸ್‌ಬಾಡನ್‌ನ ಬೆತೆಲ್‌

[ಪುಟ 19ರಲ್ಲಿರುವ ಚಿತ್ರಗಳು]

ಮೇಲೆ: ಸಹೋದರ ಫ್ರಾಸ್ಟ್‌ (ಬಲ) ಮತ್ತು ಇನ್ನಿತರರು ಸಹೋದರ ನಾರ್‌ರವರನ್ನು (ಎಡ) ಭೇಟಿಯಾದಾಗ; ಬಲ: ರಜೆಯಲ್ಲಿ ಸ್ವಿಟ್ಜರ್ಲೆಂಡ್‌ಗೆ ಹೋದಾಗ (1952)

[ಪುಟ 20ರಲ್ಲಿರುವ ಚಿತ್ರ]

ಎಡದಿಂದ ಬಲ: ಸೆಲ್ಟರ್ಸ್‌ನಲ್ಲಿ ಹೊಸ ಬ್ರಾಂಚ್‌ ಕಟ್ಟಡಗಳ ಸಮರ್ಪಣೆಗೆ ರಿಚರ್ಡ್‌, ಬಿಲ್‌, ಲೋವಲ್‌, ರೇಮನ್‌ ಒಟ್ಟುಸೇರಿದಾಗ (1984)

[ಪುಟ 21ರಲ್ಲಿರುವ ಚಿತ್ರ]

ಎಡದಿಂದ ಬಲ: ರೇಮನ್‌, ರಿಚರ್ಡ್‌, ಲೋವಲ್‌