ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು ಬ್ರೆಜಿಲ್‌ನಲ್ಲಿ
ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು ಬ್ರೆಜಿಲ್‌ನಲ್ಲಿ
ಕೆಲವು ವರ್ಷಗಳ ಹಿಂದೆ ರೂಬ್ಯಾ (1) ಎಂಬ ಸಹೋದರಿ (ಈಗ 30 ವರ್ಷ) ದಕ್ಷಿಣ ಬ್ರೆಜಿಲ್‌ನಲ್ಲಿದ್ದ ಸಾಂಡ್ರಾಳನ್ನು (2) ನೋಡಲು ಹೋದಳು. ಸಾಂಡ್ರಾ ಅಲ್ಲಿನ ಒಂದು ಚಿಕ್ಕ ಸಭೆಯಲ್ಲಿ ಪಯನೀಯರ್. ಬ್ರೆಜಿಲ್‌ನಲ್ಲಿದ್ದಾಗ ರೂಬ್ಯಾಳನ್ನು ಯಾವುದೋ ಒಂದು ವಿಷಯ ತುಂಬ ಪ್ರಭಾವಿಸಿತು. ಅದು ಅವಳ ಬದುಕಿನ ದಿಕ್ಕನ್ನೇ ತಿರುಗಿಸಿತು. ಆ ವಿಷಯ ಏನಾಗಿತ್ತು? ಆಕೆಯ ಮಾತುಗಳಿಂದಲೇ ಕೇಳೋಣ.
“ನನ್ನ ಕಿವಿನ ನಾನೇ ನಂಬಕ್ಕಾಗ್ಲಿಲ್ಲ”
“ಒಂದು ದಿನ ಸಾಂಡ್ರಾ ನನ್ನನ್ನು ಬೈಬಲ್ ಅಧ್ಯಯನವೊಂದಕ್ಕೆ ಕರಕೊಂಡು ಹೋದಳು. ಬೈಬಲ್ ಕಲಿಯುತ್ತಿದ್ದ ಸ್ತ್ರೀ ಅಧ್ಯಯನದ ಸಮಯದಲ್ಲಿ ಹೇಳಿದರು, ‘ಸಾಂಡ್ರಾ, ನನ್ನ ಕೆಲಸದ ಸ್ಥಳದಲ್ಲಿ ಮೂವರು ಹುಡುಗಿಯರಿಗೆ ಬೈಬಲ್ ಕಲಿಯಲು ತುಂಬ ಇಷ್ಟ ಇದೆಯಂತೆ. ಆದರೆ ನಾನ್ ಅವರಿಗೆ ಹೇಳಿದೆ ಅದಕ್ಕಾಗಿ ನೀವು ನಿಮ್ಮ ಸರದಿ ಬರುವ ವರೆಗೆ ಕಾಯಬೇಕಾಗತ್ತೆ ಅಂತ. ನಂಗೊತ್ತು ಬೈಬಲ್ ಅಧ್ಯಯನಗಳು ಈ ವರ್ಷಪೂರ್ತಿ ಬುಕ್ ಆಗಿವೆ ಅಂತ.’ ಅದನ್ನು
ಅವರು ಮಾಮೂಲೆಂಬಂತೆ ಹೇಳಿಬಿಟ್ಟರು. ಆದರೆ ನನಗೆ ಅದನ್ನ ಕೇಳಿದಾಗ ನನ್ನ ಕಿವಿನ ನಾನೇ ನಂಬಕ್ಕಾಗ್ಲಿಲ್ಲ. ಯೆಹೋವನ ಬಗ್ಗೆ ಕಲಿಯಲು ಇಷ್ಟಪಡುವ ಜನರು ವೈಟಿಂಗ್ ಲಿಸ್ಟ್‌ನಲ್ಲಿ ಇರಬೇಕಾ!! ನಾನಿದ್ದ ಸ್ಥಳದಲ್ಲಾದರೆ ಒಂದು ಬೈಬಲ್ ಅಧ್ಯಯನ ಸಿಗಬೇಕಾದ್ರೂ ಪರದಾಡಬೇಕಿತ್ತು. ಆ ಸ್ತ್ರೀಯ ಮನೆಯಲ್ಲಿದ್ದಾಗಲೇ ನನ್ನಲ್ಲಿ ಒಂದು ಬಲವಾದ ಆಸೆ ಚಿಗುರೊಡೆಯಿತು. ಈ ಚಿಕ್ಕ ಊರಿನಲ್ಲಿರೋ ಜನರಿಗೆ ಸಹಾಯ ಮಾಡಬೇಕೆಂದು ಮನಸ್ಸಾಯಿತು. ಸ್ವಲ್ಪ ಸಮಯದಲ್ಲೇ ನಾನಿದ್ದ ದೊಡ್ಡ ನಗರ ಬಿಟ್ಟು ಸಾಂಡ್ರಾ ಪಯನೀಯರ್ ಸೇವೆ ಮಾಡುತ್ತಿದ್ದ ಈ ಚಿಕ್ಕ ಊರಿಗೆ ಬಂದೆ.”ಮುಂದೇನಾಯಿತು? “ಇಲ್ಲಿಗೆ ಬಂದ ಎರಡು ತಿಂಗಳಲ್ಲೇ 15 ಬೈಬಲ್ ಅಧ್ಯಯನ ಮಾಡುತ್ತಿದ್ದೆ. ನಂಬ್ತೀರೋ ಇಲ್ವೋ ಸ್ವಲ್ಪ ಸಮಯದಲ್ಲೇ ಸಾಂಡ್ರಾಳಂತೆ ನನ್ನ ಹತ್ತಿರವೂ ಒಂದು ವೈಟಿಂಗ್ ಲಿಸ್ಟ್ ಇತ್ತು” ಎನ್ನುತ್ತಾಳೆ ರೂಬ್ಯಾ.
ತನ್ನ ಸೇವೆಯನ್ನು ಮರುಪರಿಶೀಲಿಸಲು ಪ್ರೇರಣೆ
20ರ ಹರೆಯದಲ್ಲಿರುವ ಡ್ಯೇಗೋ (3) ಎಂಬ ಸಹೋದರ ದಕ್ಷಿಣ ಬ್ರೆಜಿಲ್‌ನ ಪ್ರೂಡೆಂಟಾಪೂಲೀಸ್ ಎಂಬ ಚಿಕ್ಕ ಊರಿನಲ್ಲಿದ್ದ ಕೆಲವು ಪಯನೀಯರರನ್ನು ಭೇಟಿಯಾದನು. ಈ ಭೇಟಿ ಅವನ ಮೇಲೆ ಗಾಢವಾದ ಪ್ರಭಾವ ಬೀರಿತು. ತನ್ನ ಸೇವೆಯನ್ನು ಮರುಪರಿಶೀಲಿಸಲು ಅವನನ್ನು ಪ್ರೇರಿಸಿತು. ಅವನು ಹೀಗನ್ನುತ್ತಾನೆ: “ಏನೋ ಸಭೆಯವರೆಲ್ಲಾ ಸೇವೆಗೆ ಹೋಗ್ತಿದ್ರು ಅಂತ ನಾನೂ ಹೋಗ್ತಿದ್ದೆ. ತಿಂಗಳಿಗೆ ಅಷ್ಟೋ ಇಷ್ಟೋ ತಾಸು ಹಾಕುತ್ತಿದ್ದೆ. ಆದರೆ ನಾನು ಆ ಪಯನೀಯರರನ್ನು ಭೇಟಿಮಾಡಿದ ಮೇಲೆ, ಅವರ ಅನುಭವಗಳನ್ನು ಕೇಳಿದ ಮೇಲೆ ನನ್ನ ಕಣ್ತೆರೆಯಿತು. ನನ್ನನ್ನು ಅವರೊಂದಿಗೆ ಹೋಲಿಸಿನೋಡಿದೆ. ಸೇವೆಯಲ್ಲಿ ಅವರು ಪಡುತ್ತಿದ್ದ ಆನಂದವೆಲ್ಲಿ, ನಾನು ತೋರಿಸುತ್ತಿದ್ದ ಅಸಡ್ಡೆ ಎಲ್ಲಿ. ಅವರ ಸಂತೋಷ ಉತ್ಸಾಹ ನೋಡಿ ನನ್ನ ಬದುಕು ಕೂಡ ಅವರಂತೆ ಅರ್ಥಭರಿತವಾಗಬೇಕು ಎಂದು ಹಾತೊರೆದೆ.” ಆ ಭೇಟಿಯ ನಂತರ ಡ್ಯೇಗೋ ಪಯನೀಯರ್ ಸೇವೆ ಆರಂಭಿಸಿದ.
ಡ್ಯೇಗೋನಂತೆ ನೀವು ಕೂಡ ಒಬ್ಬ ಯುವಸಾಕ್ಷಿಯಾಗಿದ್ದೀರಾ? ನೀವು ಸೇವೆ, ಕೂಟಗಳಿಗೆ ಹೋಗುತ್ತಿರಬಹುದು. ಆದರೆ ಸೇವೆ ಅನ್ನೋದು ಸ್ವಲ್ಪ ಯಾಂತ್ರಿಕವಾಗಿಬಿಟ್ಟಿದೆ, ಬೋರುಬೋರಾಗಿದೆ ಏನೂ ಖುಷಿ ಸಿಕ್ತಿಲ್ಲ ಎಂದು ಅನಿಸುತ್ತಿದೆಯಾ? ಹಾಗಿದ್ದಲ್ಲಿ ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಹೆಚ್ಚು ಪ್ರಚಾರಕರ ಅಗತ್ಯವಿರುವಲ್ಲಿಗೆ ಹೋಗಿ ಯಾಕೆ ಸೇವೆ ಮಾಡಬಾರದು? ಅದರಿಂದ ಎಷ್ಟೊಂದು ಆನಂದ ಸಿಗುತ್ತದೆ ಎಂದು ನೀವೇ ಸವಿದು ನೋಡಿ. ‘ಇಲ್ಲಿರೋ ಅನುಕೂಲವನ್ನೆಲ್ಲಾ ಬಿಟ್ಟು ಬೇರೆ ಕಡೆ ಹೋದರೆ ಅಲ್ಲಿನ ಪರಿಸ್ಥಿತಿ ಹೇಗಿರುತ್ತದೋ’ ಎಂಬ ಭಯ ಸಹಜ. ಆದರೂ ಅನೇಕ ಯುವಜನರು ಅಗತ್ಯವಿರುವಲ್ಲಿಗೆ ಹೋಗಿ ಸೇವೆ ಮಾಡಲು ಮುಂದೆ ಬಂದಿದ್ದಾರೆ. ಯೆಹೋವನ ಸೇವೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ತಮ್ಮ ವೈಯಕ್ತಿಕ ಗುರಿಗಳನ್ನು, ಆಸೆಆಕಾಂಕ್ಷೆಗಳನ್ನು ಹೊಂದಿಸಿಕೊಳ್ಳುವ ಎದೆಗಾರಿಕೆ ತೋರಿಸಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಬ್ರೂನೋ.
ಸಂಗೀತವೋ? ಸಾರುವಿಕೆಯೋ?
ಕೆಲವು ವರ್ಷಗಳ ಹಿಂದೆ ಬ್ರೂನೋ (4) ಎಂಬ ಸಹೋದರ (ಈಗ 28 ವರ್ಷ) ಪ್ರಸಿದ್ಧ ಸಂಗೀತ ಶಾಲೆಯಲ್ಲಿ ಕಲಿತನು. ಆರ್ಕೆಸ್ಟ್ರಾ ನಿರ್ದೇಶಕನಾಗಬೇಕೆಂಬ
ಗುರಿ ಅವನಲ್ಲಿತ್ತು. ಸಂಗೀತ ಕಲೆಯನ್ನು ಅವನು ಎಷ್ಟು ಚೆನ್ನಾಗಿ ಕರಗತ ಮಾಡಿಕೊಂಡನೆಂದರೆ ವಿದ್ಯಾರ್ಥಿಯಾಗಿದ್ದಾಗಲೇ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುವ ಅವಕಾಶಗಳು ಅವನನ್ನು ಹುಡುಕಿಕೊಂಡು ಬಂದವು. ಸಂಗೀತ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯತ್ತು ಅವನಿಗಿತ್ತು. ಆದರೆ. . . ? “ಜೀವನದಲ್ಲಿ ನಾನೇನೋ ಕಳಕೊಳ್ಳುತ್ತಾ ಇದ್ದೀನಿ ಅಂತ ಅನಿಸ್ತಿತ್ತು. ನಾನು ಯೆಹೋವನಿಗೆ ಸಮರ್ಪಿಸಿಕೊಂಡಿದ್ದರೂ ಆತನ ಸೇವೆಯನ್ನು ಸಂಪೂರ್ಣವಾಗಿ ಮಾಡುತ್ತಾ ಇಲ್ವಲ್ಲಾ ಎನ್ನುವ ಚಿಂತೆ ಕಾಡುತ್ತಾ ಇತ್ತು. ನನ್ನ ಭಾವನೆಗಳನ್ನು ಯೆಹೋವನಲ್ಲಿ ತೋಡಿಕೊಂಡೆ. ಸಭೆಯಲ್ಲಿದ್ದ ಅನುಭವಸ್ಥ ಸಹೋದರರ ಬಳಿ ಮಾತಾಡಿದೆ. ಈ ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ. ಸಂಗೀತಕ್ಕಿಂತ ಸೇವೆಗೆ ಹೆಚ್ಚು ಮಹತ್ವ ಕೊಟ್ಟೆ. ಸಂಗೀತ ಶಾಲೆಯನ್ನು ಬಿಟ್ಟು ಹೆಚ್ಚು ಪ್ರಚಾರಕರ ಅಗತ್ಯವಿದ್ದಲ್ಲಿಗೆ ಹೋಗಿ ಸೇವೆ ಮಾಡುವ ಸವಾಲನ್ನು ಸ್ವೀಕರಿಸಿದೆ.” ಬ್ರೂನೋ ಮಾಡಿದ ಈ ನಿರ್ಧಾರದ ಫಲಿತಾಂಶ?ಗ್ವಾಪೀಯಾರ ಎಂಬ ಪಟ್ಟಣಕ್ಕೆ ಬ್ರೂನೋ ಸ್ಥಳಾಂತರಿಸಿದ. ಸಾವ್ ಪೌಲೂ ನಗರದಿಂದ ಸುಮಾರು 260 ಕಿ.ಮೀ. ದೂರದಲ್ಲಿರುವ ಆ ಪಟ್ಟಣದ ಜನಸಂಖ್ಯೆ ಏಳು ಸಾವಿರದಷ್ಟು. ಇದು ಅವನಿಗೆ ದೊಡ್ಡ ಬದಲಾವಣೆಯಾಗಿತ್ತು. ಅವನಂದದ್ದು “ನಾನು ಒಂದು ಚಿಕ್ಕ ಮನೆಯಲ್ಲಿ ವಾಸಿಸತೊಡಗಿದೆ. ಫ್ರಿಜ್, ಟಿವಿ, ಇಂಟರ್‌ನೆಟ್ ಏನೂ ಇರಲಿಲ್ಲ. ಆದರೆ ತರಕಾರಿ ತೋಟ, ಹಣ್ಣಿನ ಮರಗಳ ತೋಪು ಇತ್ತು! ನಗರದಲ್ಲಿರೋ ನಮ್ಮ ಮನೆಲಿ ಇದ್ಯಾವುದೂ ಇರಲಿಲ್ಲ.” ಬ್ರೂನೋ ಒಂದು ಚಿಕ್ಕ ಸಭೆಯಲ್ಲಿ ಸೇವೆಮಾಡುತ್ತಿದ್ದ. ವಾರದಲ್ಲೊಂದು ದಿನ ಊಟ ನೀರು ಸಾಹಿತ್ಯವನ್ನು ತೆಗೆದುಕೊಂಡು ಹಳ್ಳಿಗಳಲ್ಲಿ ಸಾರಲು ಬೈಕ್‌ನಲ್ಲಿ ಹೋಗುತ್ತಿದ್ದನು. ಆ ಹಳ್ಳಿಗಳಲ್ಲಿ ಅನೇಕರು ಇದುವರೆಗೂ ಸುವಾರ್ತೆಯನ್ನು ಕೇಳಿಸಿಕೊಂಡಿರಲಿಲ್ಲ. “ನಾನು 18 ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದೆ! ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳುವುದನ್ನು ನೋಡುವಾಗ ಎಲ್ಲಿಲ್ಲದ ಸಂತೋಷ ಆಗುತ್ತಿತ್ತು. ಮೊದಲು ಏನು ಕಳಕೊಂಡಿದ್ದೆನೋ ಅದೀಗ ನನಗೆ ಸಿಕ್ಕಿತು. ದೇವರ ಸೇವೆಯನ್ನು ಪ್ರಥಮವಾಗಿ ಇಟ್ಟದ್ದರಿಂದ ನನ್ನಲ್ಲಿ ಆತ್ಮತೃಪ್ತಿಯಿತ್ತು.” ಅವನೇ ಹೇಳುವಂತೆ, ಸಂಗೀತದಲ್ಲೇ ಸಾಧನೆ ಮಾಡಬೇಕೆಂದು ಹೊರಟಿದ್ದರೆ ಈ ಸಂತೋಷ ಎಂದೂ ಅವನದ್ದಾಗುತ್ತಿರಲಿಲ್ಲ. ಗ್ವಾಪೀಯಾರದಲ್ಲಿ ಹಣಕಾಸಿಗೆ ಏನು ಮಾಡುತ್ತಿದ್ದೆ ಎಂದು ಕೇಳಿದರೆ ಮುಗುಳ್ನಗುತ್ತಾ “ಗಿಟಾರ್ ಕಲಿಸುತ್ತಿದ್ದೆ” ಎನ್ನುತ್ತಾನೆ. ಹೀಗೆ ಬ್ರೂನೋ ಒಂದು ರೀತಿಯಲ್ಲಿ ಸಂಗೀತ ಗುರುವೂ ಆದ.
“ನಾನು ಅಲ್ಲೇ ಉಳಿಯಬೇಕಾಯಿತು”
28ರ ಆಸುಪಾಸಿನಲ್ಲಿರುವ ಮಾರೀಯಾನ (5) ಕೂಡ ಬ್ರೂನೋ ಇದ್ದಂಥದ್ದೇ ಸನ್ನಿವೇಶದಲ್ಲಿದ್ದಳು. ವಕೀಲೆಯಾಗಿ ಕೈತುಂಬ ಸಂಪಾದನೆಯೇನೋ ಇತ್ತು. ಆದರೆ ಮನಃತೃಪ್ತಿ ಇರಲಿಲ್ಲ. “ನಾನು ‘ಗಾಳಿಯನ್ನು ಹಿಂದಟ್ಟುತ್ತಿದ್ದೇನೆ’ ಎಂದನಿಸಿತು” ಎಂದಳವಳು. (ಪ್ರಸಂ. 1:17) ಪಯನೀಯರ್ ಸೇವೆ ಮಾಡುವ ಕುರಿತು ಯೋಚಿಸುವಂತೆ ಅನೇಕ ಸಹೋದರ ಸಹೋದರಿಯರು ಅವಳನ್ನು ಪ್ರೋತ್ಸಾಹಿಸಿದರು. ಇದರ ಕುರಿತು ಯೋಚಿಸಿದ ನಂತರ ಮಾರೀಯಾನ ತನ್ನ ಗೆಳತಿಯರಾದ ಬೀಯಾಂಕ (6), ಕಾರೋಲೀನ್ (7), ಜೂಲೀಯಾನ (8) ಜೊತೆಗೂಡಿ ಬಾರ-ಡೂ-ಬೂಗ್ರೆಸ್‌ನ ಒಂದು ಸಭೆಗೆ ಹೋಗಿ ಸಹಾಯಮಾಡಲು ನಿರ್ಧರಿಸಿದಳು. ಇದು ಅವರ ಮನೆಯಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದ ಬೊಲಿವಿಯದ ಸಮೀಪದ ಒಂದು ಪ್ರತ್ಯೇಕ ಪಟ್ಟಣವಾಗಿತ್ತು. ಮುಂದೇನಾಯಿತು?
ಮಾರೀಯಾನ ಏನನ್ನುತ್ತಾಳೆ ಕೇಳಿ: “ಕೇವಲ ಮೂರು ತಿಂಗಳು ಅಲ್ಲಿದ್ದು ಬರೋಣ ಅಂತ ಯೋಚಿಸಿದ್ದೆ. ಆದರೆ ಮೂರು ತಿಂಗಳ ಕೊನೆಯಷ್ಟಕ್ಕೆ ನನಗೆ 15 ಬೈಬಲ್ ಅಧ್ಯಯನಗಳಿದ್ದವು! ಆ ವಿದ್ಯಾರ್ಥಿಗಳಿಗೆ ಪ್ರಗತಿ ಮಾಡಲು ಇನ್ನೂ ಸಹಾಯ ನೀಡಬೇಕಿತ್ತು. ಹಾಗಾಗಿ ವಾಪಸ್ ಹೋಗುತ್ತಿದ್ದೇನೆ ಎಂದು ಹೇಳಲು ಧೈರ್ಯ ಬರಲಿಲ್ಲ. ನಾನು ಅಲ್ಲೇ ಉಳಿಯಬೇಕಾಯಿತು.” ಆಕೆಯೊಟ್ಟಿಗೆ ಹೋಗಿದ್ದ ಮೂವರು ಸಹೋದರಿಯರು ಅದೇ ಕಾರಣಕ್ಕಾಗಿ ಅಲ್ಲೇ ಉಳಿದರು. ಮಾರೀಯಾನಳ ಬದುಕು ಈಗ ಹೆಚ್ಚು ಅರ್ಥಪೂರ್ಣವಾಗಿತ್ತು. “ಜನರು ತಮ್ಮ ಜೀವನಗಳಲ್ಲಿ ಬದಲಾವಣೆ ಮಾಡಿ ಒಳ್ಳೇ ದಾರಿಯಲ್ಲಿ ನಡೆಯಲು ನೆರವಾಗುವಂತೆ ನನ್ನನ್ನು ಯೆಹೋವನು ಉಪಯೋಗಿಸಿದ್ದಕ್ಕಾಗಿ ಸಂತೋಷ ಉಕ್ಕಿಬರುತ್ತದೆ. ಇದು ನನಗೊಂದು ಆಶೀರ್ವಾದವೇ ಸರಿ. ನನ್ನ ಸಮಯ ಶಕ್ತಿಯನ್ನು ಈ ಕೆಲಸಕ್ಕಾಗಿ ಉಪಯೋಗಿಸುತ್ತಿರುವುದು ಸಾರ್ಥಕವಾಗಿದೆ” ಎನ್ನುತ್ತಾಳೆ ಅವಳು. ನಾಲ್ವರು ಸಹೋದರಿಯರ ಭಾವನೆಗಳನ್ನು ಕಾರೋಲೀನ್‌ನ ಮಾತಿನಲ್ಲಿ ಕಾಣಬಹುದು: “ಯೆಹೋವನ ಸೇವೆಗಾಗಿ ನನ್ನನ್ನೇ ನೀಡಿಕೊಂಡಿರುವುದರಿಂದ ರಾತ್ರಿ ಮಲಗುವಾಗ ನನಗೆ ಸಂಪೂರ್ಣ ಮನಃಸಂತೃಪ್ತಿಯಿರುತ್ತದೆ. ಯಾವಾಗಲೂ ನನ್ನ ಯೋಚನೆಯೆಲ್ಲ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದರ ಬಗ್ಗೆಯೇ. ಅವರು ಪ್ರಗತಿ ಮಾಡುವುದನ್ನು ನೋಡುವುದೇ ರೋಮಾಂಚಕ. ‘ಯೆಹೋವನು ಸರ್ವೋತ್ತಮನೆಂದು’ ನಾನು ನನ್ನ ಸ್ವಂತ ‘ಅನುಭವದಿಂದ ಸವಿದು ನೋಡುತ್ತಿದ್ದೇನೆ.’”—ಕೀರ್ತ. 34:8.
ಸುವಾರ್ತೆಯನ್ನು ದೂರದೂರದ ಸ್ಥಳಗಳಿಗೆ ಹಬ್ಬಿಸಲು “ತಾವಾಗಿಯೇ” ಮುಂದೆ ಬರುವ ಯುವ ಸಹೋದರ ಸಹೋದರಿಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ನೋಡುವಾಗ ಯೆಹೋವನು ಎಷ್ಟೊಂದು ಹರ್ಷಿಸುತ್ತಿರಬಹುದು. (ಕೀರ್ತ. 110:3; ಜ್ಞಾನೋ. 27:11) ಹೀಗೆ ತಮ್ಮನ್ನೇ ಮನಃಪೂರ್ವಕವಾಗಿ ನೀಡಿಕೊಳ್ಳುವ ಎಲ್ಲರನ್ನು ಯೆಹೋವನು ಅಪಾರವಾಗಿ ಆಶೀರ್ವದಿಸುತ್ತಾನೆ.—ಜ್ಞಾನೋ. 10:22.
[ಪುಟ 5ರಲ್ಲಿರುವ ಚೌಕ/ಚಿತ್ರ]
“ನಮಗೆ ಯಾವುದಕ್ಕೂ ಕೊರತೆಯಾಗಲಿಲ್ಲ”
ಹೆಚ್ಚಿನ ಅಗತ್ಯವಿರುವ ಕಡೆ ಹೋಗಿ ಸೇವೆ ಮಾಡುವ ಇಂಗಿತವನ್ನು ಜ್ವಾವು ಪೌಲೂ ಮತ್ತು ಆತನ ಪತ್ನಿ ನೊಯೆಮೀ ವ್ಯಕ್ತಪಡಿಸಿದಾಗ ಬೇರೆಯವರಿಂದ ಕೆಲವು ನಿರುತ್ತೇಜಕ ಮಾತುಗಳನ್ನು ಕೇಳಿಸಿಕೊಳ್ಳಬೇಕಾಯಿತು. ಸಭೆಯಲ್ಲಿದ್ದ ಕೆಲವರು “ನೀವು ಚಿಕ್ಕ ಪಟ್ಟಣಕ್ಕೆ ಹೋಗುವುದರಿಂದ ಸುಮ್ನೆ ಹಣಕಾಸಿನ ತೊಂದರೆಯನ್ನು ಮೈಮೇಲೆ ಎಳೆದುಕೊಳ್ಳುತ್ತೀರಿ. ನಮ್ಮ ಸಭೆಯಲ್ಲೇ ಮಾಡಲಿಕ್ಕೆ ಬೇಕಾದಷ್ಟಿರುವಾಗ ಬೇರೆಕಡೆ ಯಾಕೆ ಹೋಗ್ಬೇಕು?” ಎಂದು ಹೇಳಿದರು. ಪೌಲೂ ಹೇಳುವುದು: “ಅವರು ಒಳ್ಳೇ ಉದ್ದೇಶದಿಂದ ಹೇಳಿದರೂ ಆ ಮಾತುಗಳು ನಮ್ಮನ್ನು ಎದೆಗುಂದಿಸುತ್ತಿದ್ದವು.” ಆದರೆ ಈಗ ಅಗತ್ಯವಿರುವಲ್ಲಿ ವರ್ಷಗಳಿಂದ ಸೇವೆ ಮಾಡುತ್ತಿರುವ ಅವರಿಬ್ಬರೂ ಆವತ್ತು ತಮ್ಮ ನಿರ್ಧಾರವನ್ನು ಕೈಬಿಡದೆ ಇದ್ದದ್ದಕ್ಕಾಗಿ ಸಂತೋಷಿಸುತ್ತಾರೆ. ಆ ಸಂತೋಷವನ್ನು ಪೌಲೂ ಹೀಗೆ ಹಂಚಿಕೊಳ್ಳುತ್ತಾನೆ: “ಇಲ್ಲಿಗೆ ಬಂದಾಗಿಂದಲೂ ನಮಗೆ ಯಾವುದಕ್ಕೂ ಕೊರತೆಯಾಗಲಿಲ್ಲ. ಅಗತ್ಯವಾಗಿ ನಮಗೆ ಏನು ಬೇಕೋ ಅದು ನಮ್ಮ ಹತ್ತಿರ ಇದೆ, ಮುಂಚಿಗಿಂತ ಜಾಸ್ತಿನೇ ಇದೆ ಅಂತ ಹೇಳಬಹುದು.” ಇದಕ್ಕೆ ನೊಯೆಮೀ ಕೂಡಿಸಿ ಹೇಳಿದ್ದು: “ನಮ್ಮ ಪ್ರಯತ್ನ ಸಾರ್ಥಕವಾಯಿತು.”
ಚಿಕ್ಕ ಊರುಗಳಿಗೆ ಹೋಗಿ ಜೀವನ ನಡೆಸುವುದು ಒಂದು ಸವಾಲೇ ಸರಿ. ಅಂಥ ಊರುಗಳಿಗೆ ಹೋದವರು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ದುಡ್ಡಿಗೆ ಏನು ಮಾಡುತ್ತಾರೆ? ತಮ್ಮಲ್ಲಿರುವ ಕೌಶಲಗಳನ್ನು ಉಪಯೋಗಿಸುತ್ತಾರೆ. ಕೆಲವರು ಇಂಗ್ಲಿಷ್ ಅಥವಾ ಬೇರೆ ಭಾಷೆಗಳನ್ನು ಕಲಿಸುತ್ತಾರೆ. ಶಾಲಾ ಮಕ್ಕಳಿಗೆ ಟ್ಯೂಷನ್ ಮಾಡುತ್ತಾರೆ. ಹೊಲಿಗೆ, ಪೈಂಟಿಂಗ್ ಅಥವಾ ಯಾವುದೇ ಅರೆಕಾಲಿಕ ಕೆಲಸ ಮಾಡುತ್ತಾರೆ. ಅಗತ್ಯವಿರುವ ಸ್ಥಳಗಳಲ್ಲಿ ಸೇವೆ ಮಾಡಿದವರ ಅಭಿಪ್ರಾಯ ಏನಾಗಿದೆ? ಪಡೆದ ಆಶೀರ್ವಾದಗಳಿಗೆ ಹೋಲಿಸಿದರೆ ಎದುರಿಸಿದ ಸಮಸ್ಯೆಗಳು ಏನೂ ಅಲ್ಲ!
[ಪುಟ 6ರಲ್ಲಿರುವ ಚೌಕ/ಚಿತ್ರ]
ಮನೆನೆನಪು ಕಾಡುತ್ತಿತ್ತು
ಟೀಯಾಗೂ ಎಂಬ ಸಹೋದರ ಹೀಗೆ ಹೇಳುತ್ತಾರೆ: “ಹೊಸ ಸಭೆಗೆ ಬಂದ ಸ್ವಲ್ಪ ಸಮಯದಲ್ಲೇ ನನ್ನಲ್ಲಿ ನಿರುತ್ಸಾಹ ಮನೆಮಾಡಿತು. ಅಲ್ಲಿ ಕೆಲವೇ ಪ್ರಚಾರಕರಿದ್ದರು. ಮನರಂಜನೆಗಾಗಿ ಏನೂ ಇರಲಿಲ್ಲ. ಮನೆನೆನಪು ಕಾಡತೊಡಗಿತು. ಆಗ ನಿರುತ್ಸಾಹದಿಂದ ಹೊರಬರಲು ಏನಾದರೂ ಮಾಡಲೇಬೇಕೆನಿಸಿತು. ಆದ್ದರಿಂದ ಸಭೆಯಲ್ಲಿದ್ದ ಸಹೋದರ ಸಹೋದರಿಯರ ಸುಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿದೆ. ಇದರಿಂದ ನಾನು ಗೆಲುವಾದೆ! ಹೊಸ ಗೆಳೆಯರನ್ನು ಮಾಡಿಕೊಂಡೆ. ಸ್ವಲ್ಪ ಸಮಯದಲ್ಲೇ ನನ್ನಲ್ಲಿ ನವೋಲ್ಲಾಸ ಮೂಡಿತು. ಮನೆಯಿಂದ ದೂರ ಇದ್ದೇನೆಂದು ಅನಿಸಲೇ ಇಲ್ಲ.”
[ಪುಟ 3ರಲ್ಲಿರುವ ಚಿತ್ರ]
ಸಾಂಟಾ ಕ್ಯಾಟರೀನದ ಅಸ್ಕುರಾದಲ್ಲಿ ಜ್ವಾವು ಪೌಲೂ ಪತ್ನಿ ನೊಯೆಮೀಯೊಂದಿಗೆ